ಕಣ್ಣಿಗೆ ಕಾಣಿಸುತ್ತಿರುವ ಐಸಾನ್ ಧೂಮಕೇತು

– ಅಹಮದ್ ಹಗರೆ

ಆಕಾಶದ ರಂಗಮಂಟಪದಲ್ಲಿ ನಕ್ಷತ್ರ, ಗ್ರಹ, ಚಂದ್ರ, ಗ್ರಹಣಗಳಿಗೆ ಹೊರತಾಗಿ ಇನ್ನೊಬ್ಬ ಹೊಸ ಅತಿಥಿ ಶ್ವೇತ ವರ್ಣದ ದೇಹ, ಕೂದಲರಾಶಿ ಹೊದ್ದುಕೊಂಡು ಮಂಗಳನನ್ನು ಸವರಿ ಸೂರ್ಯನಿಗೆ ಪ್ರದಕ್ಷಿಣೆ ಸಲ್ಲಿಸಲು ಪೂರ್ವದಂಚಿನಿಂದ ಬರುತ್ತಿದ್ದಾನೆ “ಐಸಾನ್” ಧೂಮಕೇತು.

ರಷ್ಯ ದೇಶದ ವಿಟಾಲಿ ಲೆವಸ್ಕಿ ಮತ್ತು ಅರ್‍ಟಿಯೋಂ ನೋವಿಚೋಂಕ್ ಎನ್ನುವ ಖಗೋಳತಜ್ಞರು ಸೆಪ್ಟೆಂಬರ್ 2012 ರಂದು CometISONNov15_m_1125ತಮ್ಮ ಟೆಲೆಸ್ಕೋಪನ್ನು ಆಕಾಶದತ್ತ ತಿರುಗಿಸಿದಾಗ ಅಕಸ್ಮಾತಾಗಿ ಸೆರೆಸಿಕ್ಕ ಆಕೃತಿಯ ಬೆನ್ನ ಹತ್ತಿ ಪತ್ತೆ ಹಚ್ಚಿದಾಗ ಪಕ್ಕದ ಓರ್‍ಟನ ಮೇಘದಿಂದ ಸೂರ್ಯನ ನೋಡಲು ಭೂಮಿಮಾರ್ಗವಾಗಿ ಓರ್ವ ಅತಿಥಿ ಬರುತ್ತಿದ್ದಾನೆ ಎಂದು ತಿಳಿಯಿತು ಈ ಪತ್ತೆ ಕಾರ್ಯ ಆ ಖಗೋಳತಜ್ಞರಿಗೆ ರಷ್ಯದ ಕಿಸ್ಲೊಡೋವಸ್ಕ್‌ನಲ್ಲಿರುವ ವೈಜ್ಞಾನಿಕ ವೀಕ್ಷಣಾ ಜಾಲ (International Scientific Optical Network) ದಲ್ಲಿ ಪತ್ತೆಯಾದುದರಿಂದ ಆ ಧೂಮಕೇತುವಿಗೆ ಆ ಜಾಲಾದ ಸಂಕ್ಷಿಪ್ತ ರೂಪ ಐಸಾನ್(ISON) ಎಂದು ಹೆಸರಿಸಿದರು. ಈ ಶತಮಾನದ ಅತ್ಯಂತ ಪ್ರಖರ ಹಾಗೂ ಮಹತ್ತರ ಧೂಮಕೇತು ಇದು ಎಂದು ವಿಜ್ಞಾನಿಗಳ ಲೆಕ್ಕಾಚಾರ. ಅಕ್ಟೋಬರ್ 1 ರಂದು ಮಂಗಳ ಕಕ್ಷೆ ಸವರಿಕೊಂಡು ನವೆಂಬರ್ ಮೊದಲ ವಾರ ಭೂ ಗಡಿಯನ್ನು ಪ್ರವೇಶಿಸಿದ ಇಸಾನ್ ಈಗ ಬರಿಗಣ್ಣಿಗೆ ಗೋಚರಿಸಲಾರಂಬಿಸಿದೆ. ಇಂದು (ನವೆಂಬರ್ 28) ಸೂರ್ಯನಿಗೆ ಅತಿ ಸನಿಹ ಬಂದು ಮುಂದಿನ ದಿನಗಳಲ್ಲಿ ಸ್ವಲ್ಪಸ್ವಲ್ಪವೇ ಮಂಕಾಗುತ್ತಾ 2014 ರ ಜನವರಿ 14 ಕ್ಕೆ ಕೊನೆ ದರ್ಶನ ನೀಡಿ ಕಣ್ಮರೆಯಾಗುವುದು. (ಅದಾದ ನಂತರ ದೂರದರ್ಶಕದಲ್ಲಿ ನೋಡಬಹುದು).

ಇತಿಹಾಸ, ಪುರಾಣಗಳಲ್ಲಿ ಧೂಮಕೇತು:

ಆಕಾಶದಲ್ಲೊಂದು ಕಾಯ ಅದರ ಸುತ್ತ ದಟ್ಟ ಧೂಮದ ಹೊದಿಕೆ, ಅದರ ಹಿಂದೆ ಕುಮದೆ ಜಳಕ ಮಾಡಿ ಹರಿಯ ಬಿಟ್ಟು ನವೀರಾದ ಕೂದಲಂತೆ ಕಂಡ ಅದಕ್ಕೆ ಗ್ರೀಕರು Comet ಎಂದರು. ಕಾಮೆಟ್ ಎಂದರೆ ಗ್ರೀಕ್ ಭಾಷೆಯಲ್ಲಿ ಕೂದಲು ಎಂದರ್ಥ. ಬೇರೆ ಬೇರೆ ದೇಶದ ಜನ ಅವರವರ ಕಲ್ಪನೆಯಂತೆ (ಸಾಂಸ್ಕೃತಿಕ ಶೈಲಿಯಲ್ಲಿ) ರೂಪಕೊಟ್ಟು ಹೆಸರಿಸಿದರು. ಜ಼ೈರೆಯವರು ಕೂದಲ ನಕ್ಷತ್ರವೆಂದು, ಚೀನಿಯರು ಪೊರಕೆ ಎಂದು, ಟೋಂಗೋ ಜನ ಧೂಳಿನ ನಕ್ಷತ್ರವೆಂದು, ಜೆರೂಸಲಂನವರು ಖಡ್ಗ ಹಾಗೆ ಜರ್ಮನ್ನರು ಸ್ವಸ್ತಿಕ್ ರೂಪದಲ್ಲಿ ಭಾರತೀಯರು ತ್ರಿಶೂಲದ ಆಕೃತಿಯಲ್ಲಿ ಕಲ್ಪಿಸಿ ದಾಖಲಿಸಿದರು.

ಧರ್ಮ ಮತ್ತು ವಿಜ್ಞಾನ ಸಮನಾಂತರವಾಗಿ ಬೆಳೆಯುತ್ತಿದ್ದ ಕಾಲವದು. ಕ್ರಿ.ಶ.6 ನೇ ಶತಮಾನದಿಂದ 12 ನೇ ಶತಮಾನದವರೆಗೆ ಖಗೋಳ ಮಂದಗತಿಯಲ್ಲಿ ಸಾಗಿ ಬಂದಿತು. (ಆರ್ಯಭಟ, ವಾರಹಮಿಹಿರ, ಬ್ರಹ್ಮಗುಪ್ತರು ಅಲ್ಲಲ್ಲಿ ಕಂಡರು.) 12 ನೇ ಶತಮಾನದಿಂದ 16 ನೇ ಶತಮಾನದವರೆಗೆ (ನಿಖೋಲಸ್ ಕೋಪರ್ನಿಕಸ್ ಹುಟ್ಟುವವರೆಗೂ) ಖಗೋಳ ವಿಜ್ಞಾನ ಸಂಪೂರ್ಣವಾಗಿ ನೆಲಕಚ್ಚಿಬಿಟ್ಟಿತು. ಆ ಸಂದರ್ಭದಲ್ಲಿ ಅವಕಾಶವಾದಿಗಳು ಖಗೋಳವನ್ನು ತಿರುಚಿ ಧೂಮಕೇತುವನ್ನು ಅನಿಷ್ಟವನ್ನಾಗಿಸಿ, ಗ್ರಹಣವನ್ನು ಭೀಕರವಾಗಿಸಿ ಮೂಢನಂಬಿಕೆಗಳನ್ನು ಬಿತ್ತಿದರು.

ಶೇಕ್ಸ್‌ಪಿಯರ್‌ನ ಜೂಲಿಯಸ್ ಸೀಸರ್ ನಾಟಕದಲ್ಲಿ ಸೀಸರ್ ಕೊಲೆಯಾಗುವ ಹಿಂದಿನ ರಾತ್ರಿ ಆಗಸದಲ್ಲಿ ಧೂಮಕೇತು ಕಾಣಿಸಿಕೊಂಡಿತ್ತಂತೆ.comet_halley ಹಾಗಾಗಿ ಸೀಸರ್ ಸತ್ತ ಎಂದು ವದಂತಿ ಹಬ್ಬುತ್ತವೆ. ಇದು ಕಥೆಯ ಹಂದರ. ಆದರೆ ಅದೇ ಕವಿ ಕೊನೆಯಲ್ಲಿ ಹೀಗೆ ವ್ಯಂಗ್ಯವಾಡಿದ್ದಾನೆ: “ಸಾಮ್ರಾಟರು ಸತ್ತರೆ ಧೂಮಕೇತು ಗೋಚರಿಸುತ್ತದೆ. ಆದರೆ ಭಿಕ್ಷುಕರು ಸಾಯುವಾಗ ಮೂಡುವುದೇ ಇಲ್ಲ ಅಲ್ಲವೆ?”

ಮೆಕ್ಷಿಕೊದ ರಾಜ ಧೂಮಕೇತುವನ್ನು ವೀಕ್ಷಿಸಿ ದೇವಲೋಕದಿಂದ ದೇವಧೂತ ನಮಗೆ ಶುಭ ಸಂದೇಶ ತಂದಿದ್ದಾನೆ, ಅದನ್ನು ಎಲ್ಲರೂ ನೋಡಬೇಕೆಂದು ಆಜ್ಞೆ ಹೊರಡಿಸಿದ, ಏಕೆಂದರೆ ಹಿಂದಿನ ದಿನ ಆತ ಯುದ್ದದಲ್ಲಿ ಜಯಶಾಲಿಯಾಗಿದ್ದ.

ಕ್ರೈಸ್ತರಿಗೆ ಧೂಮಕೇತು ಇಂದಿಗೂ ಶುಭದ ಸಂಕೇತ. ಏಸುಕ್ರಿಸ್ತ ಜನಿಸಿದಾಗ ಆಗಸದಲ್ಲಿ ಧೂಮಕೇತು ಎರಡು ಭಾಗಗಳಾಗಿ ಗೋಚರಿಸುತ್ತಿತ್ತಂತೆ. ಅದನ್ನು ಬೆತ್ಲೆಹ್ಯಾಮಿನ ಚರ್ಚಿನ ಗೋಡೆಯ ಮೇಲೆ ದಾಖಲಿಸಿದರು. ಧೂಮಕೇತುಗಳನ್ನು ಇಂದಿಗೂ ಬೆತ್ಲೆಹ್ಯಾಮಿನ ನಕ್ಷತ್ರಗಳೆಂದೇ ಪೂಜಿಸುತ್ತಾರೆ.

ಕ್ರಿ.ಶ.1528 ರಲ್ಲಿ ಅಂಬ್ರೋಸ್ ಪ್ಯೂರೆ ಎಂಬ ವೈದ್ಯ ಒಂದು ಧೂಮಕೇತುವನ್ನು ನೋಡಿ ಅದನ್ನು ಭೀಕರವಾಗಿ ವರ್ಣಿಸುತ್ತಾನೆ. ಅದನ್ನು ಓದಿದ ನೂರಾರು ಜನ ಹೆದರಿ ಆತ್ಮಹತೆ ಮಾಡಿಕೊಂಡರು, ಕೇವಲ ಹದಿನೈದು ವರ್ಷಗಳ ಹಿಂದೆ (1997) ಹೇಲ್‌-ಬಾಪ್ ಧೂಮಕೇತು ಕಾಣಿಸಿಕೊಂಡಾಗ ಅಮೇರಿಕಾದಲ್ಲಿ ನಡೆದ ಘಟನೆ ಇಡೀ ವಿಶ್ವವೇ ನಾಚುವಂತದ್ದು, ಅನ್ಯಗ್ರಹದಿಂದ ದೇವಧೂತರು ನಮ್ಮನ್ನು ಕರೆದೊಯ್ಯಲು ಹೇಲ್-ಬಾಪ್ ಜೊತೆಗೆ ಬರುತ್ತಿದ್ದಾರೆ ಎಂದು ಬಹಳ ಉನ್ಮತ್ತರಾಗಿ ಕ್ಯಾಲಿಫೊರ್ನಿಯಾದ ಸ್ಯಾನ್‌ಡಿಯಾಗೂ ಪಟ್ಟಣದಲ್ಲಿ 39 ಜನ ಮಾರ್ಚ್ 23 ರಿಂದ 25 ರ ಅವಧಿಯಲ್ಲಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡದ್ದು ಈ ವಿಜ್ಞಾನ ಯುಗದಲ್ಲೂ ಮಾನವ ಇತಿಹಾಸಕ್ಕೆ ಕಪ್ಪುಚುಕ್ಕೆ.

ಹ್ಯಾಲಿ 1910 ರಲ್ಲಿ ಭೂಮಿಗೆ ಹತ್ತಿರದಲ್ಲಿಯೇ ಹಾದು ಹೋಯಿತು, 1996 ರಲ್ಲಿ ಮೂಡಿದ್ದ ಹ್ಯಾಲಿಯ ದೂಳನ್ನು ಸಂಗ್ರಹ ಮಾಡಲಾಗಿದೆ. 1996 ರಲ್ಲಿ ಹಯಾಕುಟಾಕೆಯನ್ನು, 1997 ರಲ್ಲಿ ಹೇಲ್‌-ಬಾಪ್ ಅನ್ನೂ ನೋಡಿದ್ದೇವೆ. ಈಗ ಇಸಾನ್ ಅನ್ನು ನೋಡುತ್ತಿದ್ದೇವೆ.

ಭಾರತೀಯ ಪುರಾಣಗಳಲ್ಲಿ ಧೂಮಕೇತು:

ವೇದಕಾಲದಲ್ಲಿ: ಧೂಮಕೇತುವಿನ ಉಲ್ಲೇಖ ಕನಿಷ್ಟ ಒಂದು ಸಾವಿರ ಪುಸ್ತಕಗಳಲ್ಲಿ ಕಂಡು ಬಂದಿದೆ. ಅವುಗಳಲ್ಲಿ ಪ್ರಮುಖವಾದವು ಮಹಾಕಾವ್ಯ, ಪುರಾಣ, ತಂತ್ರ, ಜೈನಶಾಸ್ತ್ರ, ಅರ್ಥಶಾಸ್ತ್ರ, ಖಗೋಳಶಾಸ್ತ್ರ, ಜ್ಯೋತಿಶಾಸ್ತ್ರ, ಔಷಧಶಾಸ್ತ್ರ , ಕಾವ್ಯ, ನಾಟಕ, ಭಾಗವತ ಇನ್ನೂ ಮುಂತಾದ ಸಂಸ್ಕೃತ ಲೇಖನಗಳಲ್ಲಿ ಕಂಡು ಬಂದಿದೆ.
ಋಗ್ವೇದ 7.33 ರಲ್ಲಿ ಸೂರ್ಯನ ಕಣಗಳಿಂದ (ಧೂಳಿನ) ಧೂಮಕೇತು ಸೃಷ್ಟಿಯಾಗಿರುವುದನ್ನು ನಮೂದಿಸಲಾಗಿದೆ ಹಾಗೂ ಅದಕ್ಕೆ “ವಸಿಷ್ಟಪುತ್ರ”ನೆಂದು ಗುರುತಿಸಲಾಗಿದೆ, ಯಜುರ್ವೇದದಲ್ಲೂ ಹೀಗೆ ಉಲ್ಲೇಖಿತವಾಗಿದೆ. ಅಥರ್ವಣ ವೇದದಲ್ಲಿ ಧೂಮಕೇತುವನ್ನು “ಅರುಣ” ಎಂದು ಹೆಸರಿಸಲಾಗಿದೆ. ಅದರ ಉಲ್ಲೇಖ ಹೀಗಿದೆ: ಬಿಳಿಗೋಡೆ (ಅರುಣ)ಯ ಸುತ್ತ ಕೆಂಪು ಚೌಳಿ (ಜಡೆ). ಇದು ಬೀಳುವ ನಕ್ಷತ್ರ (ಉಲ್ಕೆ)ಗಳಿಗೆ ಡಿಕ್ಕಿ ಹೊಡೆಯುತ್ತಿತ್ತೆಂದು.
ರಾಮಾಯಣದಲ್ಲಿ: ರಾಮ-ರಾವಣರ ಯುದ್ಧ ನಡೆಯುವಾಗ ಮೂಲ ನಕ್ಷತ್ರ ಪುಂಜದಲ್ಲಿ ಧೂಮಕೇತು ಕಾಣುತಿತ್ತು ಎಂದು ದಾಖಲಿಸಿದ್ದಾನೆ ವಾಲ್ಮೀಕಿ.
ಮಹಾಭಾರತದಲ್ಲಿ: ದೇವತೆಗಳ ಒಡೆಯ ಇಂದ್ರ ತನ್ನ ವಜ್ರಾಯುಧದಿಂದ ಸ್ಕಂದನ ತಲೆಯನ್ನು 2 ಭಾಗವಾಗಿ ಕತ್ತರಿಸಿ ಬಿಸುಟ. ಅದು ಆಕಾಶದಲ್ಲಿ ಹೊಗೆಯುಗುಳುತ್ತ ತೇಲುತಿತ್ತು, ಜನ ಭಯಾಶ್ಚರ್ಯಗಳಿಂದ ನೋಡುತ್ತಿದ್ದರು ಎಂದು. ಭೀಷ್ಮಪರ್ವದಲ್ಲಿ ಧೂಮಕೇತು ಎರಡು ಸೀಳಾಗಿದ್ದನ್ನು ಹೇಳಲಾಗುತ್ತದೆ
ಬೃಹದ್ ಸಂಹಿತೆಯಲ್ಲಿ 108 ತರಹದ ಧೂಮಕೇತುವನ್ನು ವೈಜ್ಞಾನಿಕವಾಗಿ ಚಿತ್ರಿಸಲಾಗಿದೆ. ಅವುಗಳನ್ನು ನಕ್ಷತ್ರ ಸಂಜಾತ, ಗ್ರಹ ಸಂಜಾತ, ಭೂಕಕ್ಷು ಸಂಜಾತ ಎಂದು ಮೂರು ಭಾಗಗಳಾಗಿ ವಿಂಗಡಿಸಿದ್ದಾನೆ ಬ್ರಹ್ಮಗುಪ್ತ. ಆ ಕಾಲಘಟ್ಟಗಳಲ್ಲಿ ಕಂಡುಬಂದ ಧೂಮಕೇತುಗಳನ್ನು ಹೀಗೆ ಹೆಸರಿಸಿದ್ದಾರೆ: ರಿಷಿಕೇತು, ವಕ್ರಶಿಖ, ತ್ರಿಚುಲಾ, ತಾರಾಹ, ಶೂಲಾಗ್ರಹ ಮತ್ತು ಹರಿರಾಗೋಪಾಯ.
16 ನೇ ಶತಮಾನದಲ್ಲಿ ಏಕನಾಥ ತನ್ನ ಏಕನಾಥ ಭಾಗವತದಲ್ಲಿ ಒಂದೇ ಕಾಲದಲ್ಲಿ ಮೂರು ಧೂಮಕೇತುಗಳು ಗೋಚರಿಸಿದ್ದವು, ಅವುಗಳಲ್ಲೊಂದು ಹಗಲು ಹೊತ್ತಿನಲ್ಲೂ ಗೋಚರಿಸುತ್ತಿತ್ತು ಎನ್ನುತ್ತ, ಆ ಧೂಮಕೇತುಗಳಿಗೆ ಧೂಮಕೇತು, ದಂಡಕೇತು, ಶಿಖಾಕೇತು ಎಂದು ಹೆಸರಿಸಿ, ಶಿಕಾಕೇತುವಿಗೆ ಅದ್ಭುತವಾದ ಬಾಲವಿದ್ದು ಹಗಲಿನಲ್ಲೂ ಪ್ರಖರಿಸುತ್ತಿದ್ದ ಎಂದು ನಮೂದಿಸಿದ್ದಾನೆ.

ಧೂಮಕೇತುವಿಗೆ ಬಾಲವೇಕೆ?:

ಅನಂತ ದೂರದಲ್ಲಿರುವ ಧೂಮಕೇತುಗಳಿಗೆ ಸೂರ್ಯನ ಗುರುತ್ವ ಬಲ ಅತ್ಯಂತ ಕಡಿಮೆ, ಅದರ ಆಜುಬಾಜಿನಲ್ಲಿ ಯಾವುದೇ ನಕ್ಷತ್ರ ಹಾದು ಹೋದಾಗ ಸ್ವಲ್ಪ ಈ ಮೋಡಕ್ಕೆ ಗುರುತ್ವ ಕ್ಷೋಭೆ ಉಂಟಾಗುತ್ತದೆ. ನಿದ್ರಿಸುತ್ತಿದ್ದ ವ್ಯಕ್ತಿಗೆ ಬಸ್ ಬ್ರೇಕ್ ಹಾಕಿದಾಗ ಜೆರ್ಕ್ ಹೊಡೆದಾಗ ಡ್ರೈವರ್ ಮೇಲೆ ಸಿಟ್ಟುಗೊಂಡು ಹೌಹಾರುವಂತೆ ಮಲಗಿದ್ದ ಧೂಮಕೇತುವಿಗೆ ನಿದ್ರಾಭಂಗವಾದ ತಪ್ಪಿಗೆ ಸಮೀಪದ ನಕ್ಷತ್ರ(ಸೂರ್ಯ)ಕ್ಕೆ ಮುತ್ತಿಗೆ ಹಾಕಲು ಧಾವಿಸಿಬರುತ್ತದೆ. cometಬರುವ ಹಾದಿಯಲ್ಲಿ ಕೆಲವು ಅರ್ಧಕ್ಕೆ ನಾಶವಾಗುತ್ತವೆ. ಕೆಲವು ಸುಮ್ಮನೆ ಎಚ್ಚರವಾಗಿ ಮತ್ತೆ ಮಲಗುತ್ತವೆ. ಕೆಲವು ಪಟ್ಟು ಬಿಡದೆ ಧಾವಿಸಿಬರುತ್ತವೆ. ಆಗ ಅದೊಂದು ಪುಟ್ಟ ಗಾತ್ರದ ಹಿಮದ ಕಲ್ಲು. ಯಾವುದೇ ಕೋಮ ಬಾಲಗಳಾಗಲೀ ಇರುವುದಿಲ್ಲ. ಸ್ವಲ್ಪ ಸ್ವಲ್ಪ ಸನಿಹ ಸಮೀಪಿಸುತ್ತಿರುವಂತೆಯೇ ಗುರುತ್ವ ಬಲ ಹೆಚ್ಚಾಗಿ ವೇಗವಾಗಿ ಧಾವಿಸಿ ಬರಲಾರಂಭಿಸುತ್ತದೆ, ಶಾಖ ಹೆಚ್ಚಾಗಿ ಕರಗಲಾರಂಭಿಸುತ್ತದೆ. ಸುಮಾರು ಗುರುವಿನ ಕಕ್ಷೆಯಷ್ಟು ಸಮೀಪ ಬಂದಾಗ ಕರಗುತ್ತಿರುವ ಮಂಜು ಬಾಷ್ಪೀಕರಣಗೊಳ್ಳಲು ಪ್ರಾರಂಭಿಸುತ್ತದೆ. ಅನಿಲ ರೂಪದ ಮಂಜು ಮೂಲಧಾತುವಿನ ಸುತ್ತ ಕೋಮವಾಗಿ ರೂಪುಗೊಳ್ಳುತ್ತದೆ. ಅದರಲ್ಲಿ ನೀರು, ಇಂಗಾಲದ ಡೈಆಕ್ಸೈಡ್, ಇಂಗಾಲದ ಮಾನಾಕ್ಸೈಡ್ ಬೇರೆ ಬೇರೆ ಅನಿಲಗಳು ಘನೀಕೃತಗೊಂಡಿರುತ್ತದೆ. ಇದರ ಗರ್ಭದಲ್ಲಿ ಪುಟ್ಟ ಪುಟ್ಟ ಧೂಳಿನ ಕಣಗಳಿರುತ್ತವೆ. ಈ ಸಂದರ್ಬದಲ್ಲಿ ಧೂಮಕೇತು ಬರೇಗಣ್ಣಿಗೆ ಕಾಣಿಸುವುದಿಲ್ಲ. ಪ್ರಬಲ ದೂರದರ್ಶನಕ್ಕೆ ಮಾತ್ರ ಮಸುಕಾಗಿ ಕಾಣಿಸುತ್ತವೆ.

ಧೂಮಕೇತು ಸೂರ್ಯನಿಗೆ ಸುಮಾರು 30 ಕೋಟಿ ಕಿ.ಮೀ ನಷ್ಟು ಸಮೀಪ ಬಂದಾಗ ಹುರುಪಿನ ಹೋರಾಟ ಪ್ರಾರಂಭವಾಗುತ್ತದೆ. ಆಗ ವಿಜ್ಞಾನಿಗಳಿಗೆ ಹಬ್ಬ. ಧೂಮಕೇತುಗಳ ಮೇಲೆ ಸೂರ್ಯನ ಅತೀ ನೇರಳಾತೀತ ಕಿರಣಗಳ ಬಾಣ ಧೂಮಕೇತುವಿನ ಕೋಮದಲ್ಲಿರುವ ನೀರನ್ನು ಬಾಷ್ಪೀಕರಿಸಿ ಜಲಜನಕದ ಮೋಡವನ್ನಾಗಿ ಪರಿವರ್ತಿಸಲಾರಂಭಿಸುತ್ತದೆ. ಆ ಮೋಡ ಹೆದರಿ ಹಿಂಜರಿಯುವಂತೆ ಸೂರ್ಯನ ವಿರುದ್ಧ ದಿಕ್ಕಿಗೆ ಬಲವಾಗಿ ಓಡಲಾರಂಭಿಸುತ್ತದೆ. ಸೂರ್ಯನ ಇನ್ನೋಮ್ದು ಬಾಣವಾದ “ಸೌರಮಾರುತಗಳು” ಸೆಕೆಂಡಿಗೆ 400 ಕಿ.ಮೀ ವೇಗವಾಗಿ ಬೀಸುತ್ತಿರುತ್ತವೆ. ಅವಗೆಂಪು ಕಿರಣಗಳನ್ನು ತುಂಬಿಕೊಂಡ ಈ ಬಾಣ ಧೂಮಕೇತುವನ್ನು ಅಯಾನಿಕರಿಸಿ ಇನ್ನೊಂದು ಬಾಲ ಬೆಳೆಯಲಾರಂಭಿಸುತ್ತದೆ. ಇದಕ್ಕೆ ಅಯಾನುಬಾಲವೆಂದು ಹೆಸರು (ಅಯಾನೀಕರಣ ಎಂದರೆ, ಧೂಮಕೇತು ಮತ್ತು ಸೌರಮಾರುತಗಳ ನಡುವೆ ಅಯಾನುಗಳು (ಪ್ರೋಟಾನ್ ಮತ್ತು ಎಲೆಕ್ಟ್ರಾನುಗಳು)ಪಡೆದುಕೊಳ್ಳುವ ಕ್ರಿಯೆ).

ಪ್ರೋಟಾನ್ ಮತ್ತು ಎಲೆಕ್ಟ್ರಾನ್‌ಗಳ ಕಾಂತಕ್ಷೇತ್ರ (magnetic field)ದ ಬಲವರ್ಧನೆಗೆ ಸಿಲುಕೆ ತಿರುಗಲಾರಂಭಿಸುವಾಗ ಬಾಲ ಗಂಟುಗಂಟಾಗಿ ಒಡೆಯಲಾರಂಭಿಸಿ 1 -> 2 -> 4 -> 8…. ಆಗಿ ಆಕಾರಗಳು ಬರಲಾರಂಭಿಸುತ್ತದೆ.

ಸೂರ್ಯರಶ್ಮಿಗಳು ಧೂಮಕೇತುವಿನ ಬಾಲದ ಧೂಳು ಮತ್ತು ಅನಿಲದ ಕಣಗಳ ಮೇಲೆ ಬಿದ್ದಾಗ(ಸೂರ್ಯನ ಕಿರಣಕ್ಕೂ ತನ್ನದೇ ಆದ ತರಂಗ ದೂರವಿರುತ್ತದೆ. ಅಯಾನೀಕರಣವಾಗುವ ಸಂದರ್ಬದಲ್ಲಿ ತರಂಗ ಬದಲಾವಣೆಯಾಗುತ್ತದೆ) ಧೂಳಿನ ಕಣಗಳು ಸೂರ್ಯನ ರಶ್ಮಿಯನ್ನು ಪ್ರತಿಫಲಿಸಿ ಅದರ(ಧೂಮಕೇತುವಿನ) ಸ್ವಲ್ಪ ಬೆಳಕು ಹೊರಸೂಸುವುದು. ಈ ಕ್ರಿಯೆಗೆ ಪ್ಲೋರೋಸೆನ್ಸ್ ಎನ್ನುತ್ತಾರೆ. ಆ ಬೆಳಕೇ ನಮಗೆ ಧೂಮಕೇತುವಾಗಿ ಗೋಚರಿಸಿದಂತೆ ಕಾಣುತ್ತದೆ.

ರಾಜ್ಯದಲ್ಲಿ ಐಸಾನ್ ಧೂಮಕೇತು ವೀಕ್ಷಣೆ:

ಈಗ ಭೂಮಿಗೆ ಅತ್ಯಂತ ಸಮೀಪದಲ್ಲಿ Comet_ison_Dec1_17ಹಾದುಹೋಗುತಿರುವ ‘ಐಸಾನ್’ ಮಹಾಧೂಮಕೇತು ಡಿ. 10 ರಿಂದ 20 ರವರೆಗೆ ಬರಿಗಣ್ಣಿಗೆ ಗೋಚರಿಸಲಿದೆ. ಈ ಖಗೋಳ ವಿದ್ಯಮಾನವನ್ನು ಜನರ ಬಳಿಗೆ ಕೊಂಡೊಯ್ಯಲು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮತ್ತು ಭಾರತ ಜ್ಞಾನ ವಿಜ್ಞಾನ ಸಮಿತಿಯು ಜಂಟಿಯಾಗಿ ‘ಐ ಆನ್ ಐಸಾನ್ – ಧೂಮಕೇತು ವೀಕ್ಷಣೆ ಆಂದೋಲನ’ವನ್ನು ಆಯೋಜಿಸಿವೆ.

2 thoughts on “ಕಣ್ಣಿಗೆ ಕಾಣಿಸುತ್ತಿರುವ ಐಸಾನ್ ಧೂಮಕೇತು

  1. Nanjunda Raju

    ಮಾನ್ಯರೇ, ಇದು ಒಳ್ಳೆಯ ಮಾಹಿತಿ. ಆದರೆ, ಈ ದೂಮಕೇತು. ನಮ್ಮ ದೇಶದಲ್ಲಿ ಕಾಣುತ್ತದೆಯೇ? ಕಂಡರೂ ಯಾವ ಭಾಗದಲ್ಲಿ ಯಾವ ಸಮಯದಲ್ಲಿ ಕಾಣುತ್ತದೆ. ಅದರಲ್ಲೂ ಮುಖ್ಯವಾಗಿ ಬೆಂಗಳೂರು ನಗರದಲ್ಲಿ ಕಾಣುತ್ತದೆಯೇ? ಯಾವ ದಿಕ್ಕಿನಲ್ಲಿ ಕಾಣುತ್ತದೆ. ತಿಳಿಸುವಿರಾ? ಅದನ್ನು ಗುರುತಿಸುವುದು ಹೇಗೆ? ಈ ಮಾಹಿತಿಯು ಆಂಗ್ಲ ಭಾಷೆಯಲ್ಲಿ ದೊರಕುತ್ತದೆ. ಕನ್ನಡದಲ್ಲಿ ನಿಮ್ಮ ತಾಣದಲ್ಲಿ ಮಾತ್ರ ಲಭ್ಯವಿದೆ ಧನ್ಯವಾದಗಳು.

    Reply
  2. ಅಹಮದ್

    ಬಹಳೂಮಕೇತು ಇನ್ನು ಮುಂದೆ ಬರಿಗಣ್ಣಿಗೆ ಗೋಚರಿಸುವುದಿಲ್ಲ ಮಾತ್ರವಲ್ಲ ಯಾವುದೇ ಟೆಲೆಸ್ಕೋಪಿಗೂ ಕಾಣಿಸುವುದಿಲ್ಲ. ದಿನಾಂಕ 27 ರ ರಾತ್ರಿ ಸುಮಾರು 11,30ಕ್ಕೆ ಸೂರ್ಯನಿಗೆ ಸುಮಾರು 15ಲಕ್ಷ ಕಿ,ಮಿ ನಷ್ಟು ಸನಿಹ ಬಂದಾಗ ಸೂರ್ಯನ ಅಗಾಧ ಗುರುತ್ವಾಕರ್ಷಣ ಬಲಕ್ಕೆ ಅಸ್ತಿತ್ವ ುಳಿಸಿಕೊಳ್ಳಲಾರದೆ ಸ್ಪೋಟಿಸಿ ಸೇಕಡ 90 ಭಾಗ ಚಿದ್ರಗೊಂಡು ಅವಸಾನಗೊಂಡಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ
    ಹಾಗಾಗಿ ಧೂಮಕೇತು ಡಿಸೆಂಬರ್ ನಂತರ ಗೋಚರಿಸದು.

    Reply

Leave a Reply to Nanjunda Raju Cancel reply

Your email address will not be published. Required fields are marked *