ಹೆಚ್ಚುತ್ತಿರುವ ವರ್ತಮಾನ.ಕಾಮ್ ಓದುಗ ವಲಯ ಮತ್ತು ಪ್ರಸ್ತುತತೆ…

ಪ್ರಿಯ ವರ್ತಮಾನ.ಕಾಮ್‌ನ ಲೇಖಕರೆ ಮತ್ತು ಓದುಗರೇ,

ನಾನು ಭಾರತಕ್ಕೆ ಹಿಂದಿರುಗಿ ಮೂರು ವರ್ಷವಾಗುತ್ತ ಬಂತು. ಈ ಮೊದಲೆಲ್ಲ ಯಾವುದಾದರೂ ಸಾಹಿತ್ಯಕ ಕಾರ್ಯಕ್ರಮಗಳಿಗೆ ಹೋದಾಗ ಪರಿಚಯ ಮಾಡಿಕೊಳ್ಳುತ್ತಿದ್ದ ಅಪರಿಚಿತರು “ನೀವು ’ವಿಕ್ರಾಂತ ಕರ್ನಾಟಕ’ದ ರವಿಯವರಲ್ಲವೇ? ಅದರಲ್ಲಿ ನಿಮ್ಮ ’ಅಮೆರಿಕದಿಂದ ರವಿ’ ಅಂಕಣ ಓದುತ್ತಿದ್ದೆವು,” ಎನ್ನುತ್ತಿದ್ದರು. ಆದರೆ ಕಳೆದ ಮೂರ್ನಾಲ್ಕು ತಿಂಗಳಿನಿಂದ ನನಗೆ ಬೇರೆಯದೇ ಅನುಭವವಾಗುತ್ತಿದೆ. “ವಿಕ್ರಾಂತ ಕರ್ನಾಟಕ” ಓದುತ್ತಿದ್ದ ಜನ ಈಗಲೂ ಮರೆತಿಲ್ಲ. ಆದರೆ ಹೊಸ ತಲೆಮಾರಿನ ಮತ್ತು ಅಂತರ್ಜಾಲದಲ್ಲಿ ಸಕ್ರಿಯರಾಗಿರುವ ಅಪರಿಚಿತ ಓದುಗರು “ನೀವು ವರ್ತಮಾನ.ಕಾಮ್‌ನ ರವಿಯವರಲ್ಲವೇ?” ಎನ್ನುತ್ತಿದ್ದಾರೆ.

ವರ್ತಮಾನ.ಕಾಮ್ ದಿನದಿನಕ್ಕೂ ಹೊಸಹೊಸ ಓದುಗರನ್ನು ಪಡೆದುಕೊಳ್ಳುತ್ತಿದೆ. ಇಂದಿನ ಸಂದರ್ಭದಲ್ಲಿ ಅದು ನಿಜಕ್ಕೂ ಪ್ರಸ್ತುತವಾಗುವಲ್ಲಿ ಯಶಸ್ವಿಯಾಗಿದೆ. ಅದು ಸಾಧ್ಯವಾಗಿರುವುದು ನಮ್ಮ ಬಳಗದ ಎಲ್ಲಾ ಲೇಖಕರ ಮತ್ತು ಬೆಂಬಲಿಗರ ನಿರಂತರ ಬೆಂಬಲ ಮತ್ತು ಪ್ರಯತ್ನದಿಂದಾಗಿಯೇ. ಅಷ್ಟೇ ಅಲ್ಲ, ನಮ್ಮಲ್ಲಿ ಬರೆಯಲು ಆರಂಭಿಸಿದ ಹಲವು ಲೇಖಕರು ಇಂದು ಬೇರೆಬೇರೆ ವೇದಿಕೆ/ಪತ್ರಿಕೆಗಳಲ್ಲೂ ಬರೆಯಲಾರಂಭಿಸಿರುವುದು ಮತ್ತು ಹಲವು ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಆರಂಭಿಸಿರುವುದು ನಮಗೆಲ್ಲ ಖುಷಿಯ ವಿಷಯವಾಗಿದೆ. ವರ್ತಮಾನ.ಕಾಮ್ ಈ ಹಂತಕ್ಕೆ ಏರಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೆಂಬಲಿಸುತ್ತಿರುವ ಎಲ್ಲರಿಗೂ ನಾನು ಧನ್ಯವಾದ ಮತ್ತು ಕೃತಜ್ಞತೆ ಅರ್ಪಿಸುತ್ತೇನೆ. ವರ್ತಮಾನ ಬಳಗದ ಎಲ್ಲರಿಗೂ ಇದು ನಿಜಕ್ಕೂ ಸಂತೋಷದ ವಿಚಾರ.

ಒಂದು ಅಂಕಿಅಂಶವನ್ನು ಹೆಸರಿಸಬಹುದಾದರೆ, ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗಿರುವ ಹಲವಾರು ಲೇಖನಗಳು ನಾಲ್ಕೈದು ಸಾವಿರದಿಂದ ಹಿಡಿದು ಹದಿನೈದು ಸಾವಿರಕ್ಕೂ ಹೆಚ್ಚು ಸಲ ಓದಲ್ಪಟ್ಟಿವೆ. ನಮ್ಮಲ್ಲಿ ಪ್ರಕಟವಾಗುವ ರೀತಿಯದೇ ಲೇಖನಗಳು ಪ್ರಕಟವಾಗುವ ಕನ್ನಡದ ಕೆಲವು ವಾರಪತ್ರಿಕೆಗಳಲ್ಲೂ ಅಲ್ಲಿಯ ಪ್ರಮುಖ ಲೇಖನಗಳೂ ಇಷ್ಟು ಜನರಿಂದ ಓದಲ್ಪಡುವುದಿಲ್ಲ ಎಂದರೆ ಅದು ಉತ್ಪ್ರೇಕ್ಷೆಯ ಮಾತಲ್ಲ ಎನ್ನುವುದು ನಿಮ್ಮಲ್ಲಿ ಬಹುಜನರಿಗೆ ಗೊತ್ತು. ಜೊತೆಗೆ, ಇದು ಇಂತಹ ಗಂಭೀರ ಓದಿಗೆ ವಿಕಾಸವಾಗಿರುವ ಕನ್ನಡದ ವಿಸ್ತಾರ ಅಂತರ್ಜಾಲ ಪ್ರಪಂಚವನ್ನೂ ಮತ್ತು ಅಲ್ಲಿ ವರ್ತಮಾನ.ಕಾಮ್‌ನ ಪ್ರಸ್ತುತತೆಯನ್ನೂ ಬಿಂಬಿಸುತ್ತದೆ.

ಇದಿಷ್ಟೇ ಅಲ್ಲ, ನಾನು ಹಿಂದೊಮ್ಮೆ ಪ್ರಸ್ತಾಪಿಸಿದಂತೆ, ಕರ್ನಾಟಕದ ಅನೇಕ ಕಡೆಯ ಸ್ಥಳೀಯ ಪತ್ರಿಕೆಗಳು “ವರ್ತಮಾನ”ದಲ್ಲಿ ಪ್ರಕಟವಾಗುವ ಲೇಖನಗಳನ್ನು ಪ್ರಕಟಿಸುತ್ತವೆ. ಹಾಗಾಗಿ ಇಲ್ಲಿ ಪ್ರಕಟವಾಗುವ ಲೇಖನಗಳು ಕೇವಲ ಆನ್‌ಲೈನ್ ಓದುಗರಿಗೆ ಮಾತ್ರ ಮುಟ್ಟುತ್ತದೆ ಎನ್ನುವ ಹಾಗೆ ಇಲ್ಲ. ಮುದ್ರಣ ಮಾಧ್ಯಮದ ಮೂಲಕವೂ ವರ್ತಮಾನ.ಕಾಮ್‌ನ ಲೇಖನಗಳು ಕರ್ನಾಟಕದ ಸಾವಿರಾರು–ಕೆಲವೊಮ್ಮೆ ಲಕ್ಷಾಂತರ–ಓದುಗರನ್ನು ತಲುಪುತ್ತಿವೆ. ಹಾಗೆ ಪ್ರಕಟಿಸುವ ಅನೇಕ ಪತ್ರಕರ್ತರು ಹಾಗೊಮ್ಮೆ ಈಗೊಮ್ಮೆ ಆಕಸ್ಮಿಕವಾಗಿ ಸಿಕ್ಕಾಗ ತಮ್ಮಲ್ಲಿ ಪ್ರಕಟಮಾಡುವ ವಿಚಾರವನ್ನು ಪ್ರೀತಿಯಿಂದ ಹೇಳುತ್ತಾರೆ.

ಕಳೆದ ಎರಡು ವರ್ಷಗಳಿಂದ (ವರ್ತಮಾನ.ಕಾಮ್ ಆರಂಭಿಸಿದಾಗಿನಿಂದ) ನಾನು ಯಾವುದೇ ಪತ್ರಿಕೆಗಳಿಗೆ ಬರೆಯುತ್ತಿಲ್ಲ. ರಾಜ್ಯಮಟ್ಟದ ಒಂದೆರಡು ದಿನಪತ್ರಿಕೆಗಳಿಗೆ ಬರೆಯಲು ಕೆಲವು ಸಲ ಆಹ್ವಾನ ಬಂದರೂ ವರ್ತಮಾನ.ಕಾಮ್ ಬಿಟ್ಟು ಬೇರೆ ಕಡೆ ಬರೆಯಬಾರದು ಎಂಬ ಸ್ವಯಂನಿರ್ಧಾರದ ಕಾರಣಕ್ಕೆ ಬರೆಯಲಿಲ್ಲ. (ಒಂದೆರಡು ಪತ್ರಿಕೆಗಳ ವಿಶೇಷಾಂಕಗಳಿಗೆ ಲೇಖನ ಬರೆಯುತ್ತೇನೆ ಎಂದು ಒಪ್ಪಿಕೊಂಡಿದ್ದರೂ ಸಮಯ ಮತ್ತು ಸಂದರ್ಭ ಒದಗದೆ ಅದೂ ಆಗಲಿಲ್ಲ.) ಈ ತರಹದ ಸ್ವಯಂ‌ನಿಯಂತ್ರಣ ಹೇರಿಕೊಂಡಿದ್ದರೂ ವರ್ತಮಾನ.ಕಾಮ್‌ನಲ್ಲೂ ನಾನು ನಿಯಮಿತವಾಗಿ ಬರೆಯುತ್ತಿಲ್ಲ ಮತ್ತು ಇದರ ಬೆಳವಣಿಗೆಗೆ ಇನ್ನೂ ಹೆಚ್ಚಿನ ಕೆಲಸ ಮಾಡಬೇಕಿತ್ತು ಎನ್ನುವುದನ್ನೂ ನಾನು ನಿರಾಕರಿಸುತ್ತಿಲ್ಲ. ಬಹುಶಃ ನನ್ನ ಜಡತೆಗೆ ಕೆಲವೊಮ್ಮೆ ’ಅದು ತಾನಾಗಿಯೇ ವಿಕಾಸವಾಗಲಿ’ ಎಂಬ ಸಬೂಬನ್ನು ನೀಡುತ್ತೇನೆ ಎನ್ನಿಸುತ್ತದೆ. ಆದರೆ ಕೆಲವೊಮ್ಮೆ ಜೀವನದ ಬೇರೆಬೇರೆ ಸ್ತರಗಳಲ್ಲಿ ನಡೆಯುವ ಚಟುವಟಿಕೆಗಳೂ ಇಂತಹ ಕ್ರಿಯಾರಾಹಿತ್ಯ ಮತ್ತು ಕ್ರಿಯಾಶೀಲತೆಯನ್ನು ನಿರ್ದೇಶಿಸುತ್ತದೆ ಎನ್ನುವುದು ನಮಗೆಲ್ಲ ತಿಳಿದಿರುವುದೆ, ನನ್ನ ಉದ್ಯೋಗ, ವೈಯಕ್ತಿಕ ಬದುಕು, ಓಡಾಟ, ಓದು, ರಾಜಕೀಯ ಮತ್ತು ಸಾಮಾಜಿಕ ಚಟುವಟಿಕೆಗಳು ನನ್ನ ಅಶಿಸ್ತು ಮತ್ತು ಅನಿಯಮಿತತೆಗೆ ಕಾರಣವಾಗಿವೆ. ಆದರೆ ಅದಕ್ಕಾಗಿ ಅವ್ಯಾವುದನ್ನೂ ಹೊಣೆ ಮಾಡಲಾಗದು.

ಈ ನಿಟ್ಟಿನಲ್ಲಿ ನಮ್ಮ ಬಳಗವನ್ನೂ ವಿಸ್ತರಿಸಬೇಕಿದೆ. ನಾನು ಪ್ರವಾಸ ಕೈಗೊಂಡ ಸಂದರ್ಭಗಳಲ್ಲಿ ಮತ್ತು ನಮ್ಮ ಬಳಗದ ಇತರೆ ಸದಸ್ಯರೂ ಕಾರ್ಯನಿಮಿತ್ತ ಬ್ಯುಸಿಯಾಗಿರುವ ಸಂದರ್ಭಗಳಲ್ಲಿ ನಮಗೆ ಬರುವ ಲೇಖನಗಳು ನಿಯಮಿತವಾಗಿ ಅಪ್‌ಡೇಟ್ ಆಗುವಂತಹ ವ್ಯವಸ್ಥೆಯನ್ನು ರೂಪಿಸಬೇಕಿದೆ. ಹಾಗಾಗಿ ಇದಕ್ಕೆ ಸಹಕರಿಸಬಹುದಾದ ಜನರನ್ನು ಗುರುತಿಸುವ ಮತ್ತು ಸಹಾಯ ಮಾಡಲು ಕೋರುವ ಕೆಲಸವನ್ನು ಇಷ್ಟರಲ್ಲೇ ಕೈಗೊಳ್ಳಬೇಕಿದೆ.

ಇದೇ ಸಂದರ್ಭದಲ್ಲಿ ನಾನು ನಮ್ಮಲ್ಲಿ ಬರೆಯುತ್ತಿರುವ ಮತ್ತು ಬರೆಯುತ್ತಿದ್ದ ಎಲ್ಲಾ ಲೇಖಕರಿಗೂ ಕೃತಜ್ಞತೆಗಳನ್ನು ತಿಳಿಸುತ್ತಲೇ, ಒಂದು ಮನವಿ ಮಾಡಿಕೊಳ್ಳಬಯಸುತ್ತೇನೆ. ದಯವಿಟ್ಟು ಸಾಧ್ಯವಾದಾಗಲೆಲ್ಲ ಬರೆಯಿರಿ. ನೀವು ವಾರಕ್ಕೆ ಒಂದು ಲೇಖನವಾದರೂ ಬರೆದರೆ ವರ್ತಮಾನ.ಕಾಮ್‌ ಪ್ರತಿನಿತ್ಯ ಹೊಸಹೊಸ ವಿಚಾರಗಳಿಂದ ತುಂಬುತ್ತದೆ. ಇದರಿಂದಾಗಿ ಪ್ರತಿನಿತ್ಯವೂ ಭೇಟಿ ಕೊಡುವ ಓದುಗರ ಸಂಖ್ಯೆ ಹೆಚ್ಚಾಗುತ್ತದೆ. ಅದು ಹೆಚ್ಚಾದಂತೆಲ್ಲ ವರ್ತಮಾನ.ಕಾಮ್‍ನ ಹರವು ಮತ್ತು ವಿಸ್ತಾರ ಹೆಚ್ಚಾಗುತ್ತದೆ. ಆ ಮೂಲಕ ಇಲ್ಲಿ ನಾವು ಎತ್ತುವ ನಾಡಿನ ಅನೇಕ ಪ್ರಮುಖ ವಿಷಯಗಳು ಸಾರ್ವಜನಿಕವಾಗಿ ಮುನ್ನೆಲೆಗೆ ಬರುತ್ತವೆ. ನೀವೆ ನೋಡಿದ ಹಾಗೆ ಮತ್ತು ಸ್ವತಃ ನೀವೆ ಬರೆದಿರುವ ಅನೇಕ ಲೇಖನಗಳು ಮತ್ತು ಪ್ರಸ್ತಾಪಿಸಿರುವ ವಿಚಾರಗಳು ರಾಜ್ಯದ ಬೇರೆ ಯಾವುದೇ ಪತ್ರಿಕೆಗಳಲ್ಲಿ ಪ್ರಕಟವಾಗದವು ಮತ್ತು ಇಲ್ಲಿ ಪ್ರಕಟವಾದ ನಂತರವೇ ಬೇರೆ ಕಡೆ ಪ್ರಸ್ತಾಪವಾಗಿರುವಂತಹವು. ಅಂತಹ ಲೇಖನಗಳನ್ನು ಪ್ರಕಟಿಸುವ ಸ್ವಾತಂತ್ರ್ಯ ಮತ್ತು ದಿಟ್ಟ ನಿಲುವು ತೆಗೆದುಕೊಳ್ಳುವ ನಿರ್ಧಾರಗಳನ್ನು ವರ್ತಮಾನ.ಕಾಮ್ ಕಾಲಕಾಲಕ್ಕೆ ನಿರೂಪಿಸುತ್ತಲೇ ಬಂದಿದೆ. ನಾವು ಒಂದು ನಿರ್ದಿಷ್ಟ ಸೈದ್ಧಾಂತಿಕ ನಿಲುವು ಉಳ್ಳವರಾಗಿರಬಹುದು, ಆದರೆ ಯಾರನ್ನಾದರೂ ಕಾರಣವಿಲ್ಲದೇ ವಿಮರ್ಶಿಸುವುದಾಗಲಿ, ಹೊಗಳುವುದಾಗಲಿ, ಅಥವ ತುಷ್ಟೀಕರಣವಾಗಲಿ ಮಾಡುವುದಿಲ್ಲ ಎಂದು ತಮಗೆಲ್ಲ ತಿಳಿದಿದೆ. ಹಾಗೆಯೇ ಮಾಧ್ಯಮ ಲೋಕದ ಮತ್ತು ಸಾಹಿತ್ಯಕ-ಸಾಂಸ್ಕೃತಿಕ ಲೋಕದ ಪ್ರಗತಿಪರ ಮುಖಗಳಾಗಿದ್ದವರ ಮುಖವಾಡಗಳು ಕಳಚಿಬೀಳುತ್ತಿರುವ ಈ ಸಂದರ್ಭದಲ್ಲಿ ನಮ್ಮೆಲ್ಲರ ಜವಾಬ್ದಾರಿಗಳು, ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಪ್ರಾಮಾಣಿಕತೆ ಕಾಪಾಡಿಕೊಳ್ಳುವ ಹೊಣೆಗಾರಿಕೆ, ಮತ್ತು ಕ್ರಿಯಾಶೀಲರಾಗಬೇಕಾದ ಅಗತ್ಯತೆ ಇನ್ನೂ ಹೆಚ್ಚಾಗಿದೆ.

ಕೊನೆಯದಾಗಿ, ಇಲ್ಲಿಯತನಕ ಬರೆದವರು ಮಾತ್ರವಲ್ಲ, ಬರೆಯಬೇಕು ಎಂದುಕೊಂಡವರು ಮತ್ತು ಬರೆಯುತ್ತೇನೆ ಎಂದು ಹೇಳಿದವರೂ ಸಹ ಬರೆಯಲು ಆರಂಭಿಸಿದರೆ ಅಷ್ಟರಮಟ್ಟಿಗೆ ಹೊಸ ವಿಚಾರಗಳು ಮತ್ತು ಸಂವೇದನೆಗಳು ವರ್ತಮಾನ.ಕಾಮ್ ಅನ್ನು ಬೆಳೆಸುತ್ತವೆ. ದಯವಿಟ್ಟು ಬರೆಯಲು ಆರಂಭಿಸಿ. ಲೇಖನಗಳನ್ನು ಕಳುಹಿಸಬೇಕಾದ ಇಮೇಲ್ ವಿಳಾಸ : editor@vartamaana.com

ನಮಸ್ಕಾರ,
ರವಿ ಕೃಷ್ಣಾರೆಡ್ದಿ
ಸಂಪಾದಕ, ವರ್ತಮಾನ.ಕಾಮ್

3 thoughts on “ಹೆಚ್ಚುತ್ತಿರುವ ವರ್ತಮಾನ.ಕಾಮ್ ಓದುಗ ವಲಯ ಮತ್ತು ಪ್ರಸ್ತುತತೆ…

  1. natrajbommasandra

    nimmalli iruvanthaha kriyaasheelatheyannu nodi namagu saha spoorthy yagidhe,innu mundheyu neevu janaparavaadha pragathiparavaadha haagu prajaaprabuthvavaadhagala bagge bareyuthhiri……..natraj bommasandra

    Reply
  2. swalih

    vikrantha karnataka nammellarannu samskritikavagi, rajakiyavagai ondu reetiya echarikeyallittithu. adu ninthu hodaaga tumba besaravagithu. neevu varthamana .com arambisidaga sahajavagiye Kushiyagithe. innu adu mattastu vaividyamayavagi baruthadennuvaga bharisalagadstu khushiyaithu.gud luk……swalih moodabidri

    Reply

Leave a Reply

Your email address will not be published.