Monthly Archives: November 2013

ಹಿಜಡಾಗಳು: ಅವರೂ ಮನುಷ್ಯರು!


– ರೂಪ ಹಾಸನ


 

ಮಂಗಳ ಮುಖಿಯರು! ನಿಜ. ಇಷ್ಟು ಸುಂದರವಾದ ಹೆಸರನ್ನು ಇತ್ತೀಚೆಗೆ ಅವರಿಗೆ ಅದ್ಯಾರು ಇಟ್ಟಿದ್ದೋ? ಆದರೆ ಅವರ ಬದುಕು ಇಷ್ಟು ಸುಂದರವೂ ಅಲ್ಲ. ಮಂಗಳಕರವೂ ಅಲ್ಲದಿರುವುದು ವಾಸ್ತವದ ದುರಂತ. ಸಾಮಾನ್ಯವಾಗಿ ಹಿಜಡಾಗಳೆಂದು ನಾವು ಗುರುತಿಸುವ ಇವರ ಕೆಲವು ದುರ್ವರ್ತನೆಯ ಬಗ್ಗೆ ಆಗೀಗ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಆದರೆ ಅವರ ಇಂತಹ ಅಸಭ್ಯ ನಡವಳಿಕೆಗೆ ಕಾರಣವೇನು? ಎಂದು ಹುಡುಕುತ್ತ ಹೊರಟರೆ ಮನ ಕರಗಿಸುವಂತಾ ಸತ್ಯಗಳು ಹೊರಬೀಳುತ್ತವೆ.

ಪ್ರಕೃತಿ ಒಂದೊಂದು ಜೀವವನ್ನೂ ಒಂದೊಂದು ಭಿನ್ನ ಗುಣ, ಸ್ವಭಾವ, ರೂಪ, ಮನಸ್ಸುಗಳಿಂದ ಸೃಷ್ಟಿಸಿರುವುದು, Transexual, transgenders and Aravani gay men in Tamil Nadu, Indiaಅದರ ವೈವಿಧ್ಯತೆಗೆ ಸಾಕ್ಷಿಯಾಗಿರುವಂತೆ, ಪಕ್ಷಪಾತದ ಅಸಮತೆಯ ವೈರುಧ್ಯತೆಗೂ ಉದಾಹರಣೆಯಾಗಿದೆ. ಗಂಡು-ಹೆಣ್ಣು ಎಂಬ ಎರಡು ಲಿಂಗಗಳನ್ನು ಮಾತ್ರಾ ಒಪ್ಪಿಕೊಂಡು, ಅದರ ಆಧಾರದಿಂದ ಎಲ್ಲ ಬಗೆಯ ‘ವ್ಯವಸ್ಥೆ’ಯನ್ನೂ ರೂಪಿಸಿಕೊಂಡಿರುವ ನಮಗೆ ಈ ಗಂಡೂ ಅಲ್ಲದ, ಹೆಣ್ಣೂ ಅಲ್ಲದ ‘ಅಂತರ್‌ಲಿಂಗೀ’ಯರು, ಅಥವಾ ‘ಮೂರನೆ ಲಿಂಗ’ದವರ ಬದುಕಿನ ಕುರಿತು ತಿಳಿಯಲಾರಂಭಿಸಿದ್ದು ತೀರಾ ಇತ್ತೀಚೆಗಷ್ಟೇ. ಈ ಮೊದಲು ಅವರು ಇರಲಿಲ್ಲವೆಂದಲ್ಲ. ೪೦೦೦ ವರ್ಷಗಳ ಹಿಂದಿನ ಇತಿಹಾಸದಲ್ಲಿಯೇ ಅವರ ಕುರಿತು ದಾಖಲೆಗಳಿವೆ. ಆದರೆ ಅವರನ್ನು ಮನುಷ್ಯರೆಂದು ನಾವು ಪರಿಗಣಿಸಿಯೇ ಇಲ್ಲವಾದ್ದರಿಂದ, ಸಾಮಾನ್ಯ ಮನುಷ್ಯನಿಗಿರುವ ಹಕ್ಕುಗಳಿಂದ ಅವರು ವಂಚಿತರಾಗಿದ್ದಾರೆ. ಇದರ ಜೊತೆಗೆ ಅವರನ್ನು ಅಶ್ಲೀಲ, ಅಸಭ್ಯ ಪದಗಳಿಂದ ಗುರುತಿಸಿ ನೋಯಿಸುವ, ಹಿಂಸಿಸುವ ಪದ್ಧತಿ ಅನೂಚಾನವಾಗಿ ನಡೆದು ಬಂದಿದೆ. ಹೆಚ್ಚಾಗಿ ಗಂಡು ದೇಹದಲ್ಲಿರುವ ಹೆಣ್ಣು ಮನಸ್ಸಿನ, ಹೆಣ್ಣಿನ ಸಂವೇದನೆಯುಳ್ಳ ಈ ಹಿಜಡಾಗಳು[ಹೆಣ್ಣು ದೇಹದಲ್ಲಿ ಗಂಡು ಸಂವೇದನೆಯುಳ್ಳವರೂ ಇರುತ್ತಾರೆ] ಬುದ್ಧಿ ತಿಳಿದಾಗಿನಿಂದಲೂ ಕುಟುಂಬದಿಂದ, ಸಮಾಜದಿಂದ ಅನುಭವಿಸುವ ನೋವು, ತಾತ್ಸಾರ ಅವರ್ಣನೀಯವಾದುದು. ಈ ಹೆಚ್ಚಿನ ಹಿಜಡಾಗಳು ತಮ್ಮ ಬುದ್ಧಿ-ಭಾವಗಳು ಹೆಣ್ತನದ್ದೆಂದು, ತಾವು ಗಂಡು ದೇಹದಿಂದ ಮುಕ್ತಿ ಹೊಂದಿ ಹೆಣ್ಣಾಗಲು, ಸಹಜವಾಗಿ ಹೆಣ್ಣಿನಂತೆಯೇ ಬದುಕಲು ಪಡುವ ಯಾತನೆ, ಗಂಡು ಹೆಣ್ಣಿನ ನಡುವೆ ಇರುವ ದೈಹಿಕ, ಮಾನಸಿಕ, ಜೈವಿಕ ವ್ಯತ್ಯಾಸಗಳಿಗೆ ಜೀವಂತ ಸಾಕ್ಷಿಯಾಗಿ ನಮಗೆ ಕಾಣುತ್ತದೆ.

ಪ್ರಾಣಿ ಮೂಲದವರಾದ ನಮಗೆ ಎಲ್ಲ ಸ್ವರೂಪದ ದೈಹಿಕ ಹಸಿವು ಸಹಜವಾಗಿ ಅರ್ಥವಾಗುತ್ತದೆ. ಈ ಕುರಿತು ಅನೇಕ ಸಾಹಿತ್ಯ ಕೃತಿಗಳು, transgenders-indiaಚಲನಚಿತ್ರಗಳೂ ಬಂದಿವೆ. ಕೆಲವು ವೈಭವೀಕರಣಗಳೂ ಈ ಪಟ್ಟಿಗೆ ಸೇರುತ್ತವೆ. ಬೇರೆ ಬೇರೆ ಅಭಿವ್ಯಕ್ತಿ ಮಾಧ್ಯಮಗಳಲ್ಲೂ ಅದು ಹಲವೊಮ್ಮೆ ನೈಜವಾಗಿಯೂ ಮತ್ತೆ ಕೆಲವೊಮ್ಮೆ ಹಸಿ ಹಸಿಯಾಗಿಯೂ, ಕೃತಕವಾಗಿಯೂ ಮೂಡಿ ಬಂದಿವೆ. ಆದರೆ ಮನಸ್ಸಿನ ಅಥವಾ ಭಾವನಾತ್ಮಕ ಹಸಿವನ್ನು ಅರ್ಥೈಸಿಕೊಳ್ಳಲು ಸರಿಯಾದ ಪೂರ್ವಸಿದ್ಧತೆ ನಮಗಿನ್ನೂ ಆಗಿಯೇ ಇಲ್ಲ! ಮನುಷ್ಯರಾಗಿರುವುದರಿಂದಲೇ ಅದನ್ನು ಇನ್ನಾದರೂ ಪ್ರಯತ್ನಪೂರ್ವಕವಾಗಿಯಾದರೂ ಕಲಿಯಬೇಕಿದೆ. ಮನಸ್ಸನ್ನು ಆ ನಿಟ್ಟಿನಲ್ಲಿ ಪಳಗಿಸಿಕೊಳ್ಳಬೇಕಿದೆ. ದೇಹದ ಹಸಿವಿನ ಹಿಂಗುವಿಕೆಗೆ ನೀಡುವ ಪ್ರಾಮುಖ್ಯತೆಯನ್ನು ಭಾವನಾತ್ಮಕ ಹಸಿವಿನ ಪೂರೈಸುವಿಕೆಗೂ ನೀಡಿದ್ದರೆ, ಮನಸ್ಸಿನ ಆಧಾರಿತವಾಗಿ ವ್ಯಕ್ತಿಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನಗಳಾಗಿದ್ದರೆ ನಾವು ಕಟ್ಟಿಕೊಂಡಿರುವ ಈ ಸಮಾಜ ಇಷ್ಟು ಕ್ಷುದ್ರವೂ, ಅಸೂಕ್ಷ್ಮವೂ, ನಿರ್ಭಾವುಕವೂ ಆಗುತ್ತಿರಲಿಲ್ಲ. ಆಗ ಅದು ಹೆಚ್ಚು ಆರ್ದ್ರವೂ, ಆಪ್ತವೂ ಆಗಿರುತ್ತಿತ್ತು. ಪ್ರೀತಿ, ಅಕ್ಕರೆ, ಕಾಳಜಿ, ಗಮನಿಸುವಿಕೆಗಳಿಗಾಗಿ ಹಂಬಲಿಸುವ ಮನಸುಗಳಿಗೆ ಮತ್ತೆ ಮತ್ತೆ ನಿರ್ಲಕ್ಷ್ಯ, ಅವಮಾನ, ಅಸಮಾನತೆಯ ಘಾಸಿ ಮಾಡಿದರೆ ಅವು ಮತ್ತೆಂದೂ ಅರಳದಂತೆ ದಹಿಸಿಹೋಗುತ್ತವೆ. ಸಿಟ್ಟಿನಿಂದ ವ್ಯವಸ್ಥೆಯ ವಿರುದ್ಧ ತಿರುಗಿ ನಿಲ್ಲುತ್ತವೆ, ದಂಗೆ ಏಳುತ್ತವೆ, ಕೆಲವೊಮ್ಮೆ ಅಸಹಾಯಕತೆಯಿಂದ ಒರಟಾಗಿ, ಅಮಾನವೀಯವಾಗಿಯೂ ವರ್ತಿಸಬಹುದು. ಇದು ಯಾವುದೇ ಮನುಷ್ಯ ಜೀವಿಗೆ ಅನ್ವಯಿಸುವ ಮನೋವಿಜ್ಞಾನದ ಮೂಲ ಪಾಠ. ಹಿಜಡಾಗಳ ವರ್ತನೆಯ ಹಿಂದೆ ಕೆಲಸ ಮಾಡುವುದು ಇದೇ ಭಾವವಿಕಾರ.

ಹಾಸನದಲ್ಲಿ ಈಗ್ಗೆ ಮೂರು ವರ್ಷದ ಹಿಂದೆ ಈ ಮೂರನೆ ಲಿಂಗದವರ ಕುರಿತು ಕರ್ನಾಟಕದಲ್ಲಿಯೇ ಅದೇ ಮೊದಲ ಬಾರಿಗೆ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರ ಕುರಿತು, ಅವರ ಬದುಕು, ನೋವು-ನಲಿವು, ತಲ್ಲಣ-ಅವಮಾನಗಳ ಬಗ್ಗೆ, ಆ ಕ್ಷೇತ್ರದಲ್ಲಿ ಹೆಚ್ಚಿನ ಅಧ್ಯಯನ eunuch-beggingಹಾಗೂ ಕೆಲಸ ಮಾಡುತ್ತಿರುವವರಿಂದ ವಿವರವಾಗಿ ಅರಿಯುವ ಅವಕಾಶ ಲಭ್ಯವಾಗಿತ್ತು. ಇದರ ಜೊತೆಗೆ ಸ್ವತಹ ನಿರ್ದಿಷ್ಟ ಲಿಂಗ ಪರಿವರ್ತನೆ ಹೊಂದಿದ ಕೆಲವು ಅಂತರ್‌ಲಿಂಗೀಯರೇ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸಂವೇದನೆಗಳ ಬಗ್ಗೆ ಹೇಳಿಕೊಳ್ಳುವಾಗ, ಸಂವಾದದಲ್ಲಿ ನಮ್ಮ ಪ್ರಶ್ನೆಗಳಿಗೆ ಉತ್ತರಿಸುವಾಗ ಎಂಥಹ ಕಲ್ಲೆದೆಯೂ ಕರಗಿ ನೀರಾಗಿ ಹೋಗುವಂತಾ ಸನ್ನಿವೇಶ.

ಮುಖ್ಯವಾಗಿ ಹಿಜಡಾಗಳ ನಿರ್ದಿಷ್ಟ ಲಿಂಗ ನಿರ್ಧಾರವಾಗದ ಕಾರಣ ಅವರು ಬಾಲ್ಯದಿಂದಲೂ ಶಿಕ್ಷಣ, ಉದ್ಯೋಗ, ಆರೋಗ್ಯ, ಕಾನೂನು, ಸಾಮಾಜಿಕ ಸ್ಥಾನ-ಮಾನ ಎಲ್ಲದರಲ್ಲಿಯೂ ತಾರತಮ್ಯವನ್ನು ಅನುಭವಿಸುತ್ತಾರೆ. ಭಾರತೀಯ ಕಾನೂನು ಹಿಜಡಾಗಳಿಗಿರುವ ಹಕ್ಕುಗಳ ಬಗ್ಗೆ ಪ್ರಸ್ತಾಪಿಸಿಯೇ ಇಲ್ಲ! ಅವರಿಗೆ ಓಟಿನ ಹಕ್ಕಿಲ್ಲ, ಆಸ್ತಿಯ ಹಕ್ಕಿಲ್ಲ, ವಿವಾಹವಾಗುವ ಹಕ್ಕಿಲ್ಲ, ನಮ್ಮಂತೆ ಯಾವ ಬಗೆಯ ಗುರುತಿನ ಚೀಟಿಗಳನ್ನೂ ಹೊಂದುವ ಹಕ್ಕು ಇಲ್ಲ. [ಈಗ ಆ ಕುರಿತು ಜಾಗೃತಿ ಮೂಡಿ, ಪ್ರಯತ್ನಗಳು ಆಗುತ್ತಿವೆ.] ಎಲ್ಲಕ್ಕಿಂಥಾ ಪ್ರಮುಖವಾಗಿ ಕುಟುಂಬ ಹಾಗೂ ಸಮಾಜದ ಸಹಜ ಪ್ರೀತಿ ಇವರಿಗೆ ಸಿಗುವುದಿಲ್ಲ. ಇಷ್ಟೆಲ್ಲಾ ‘ಇಲ್ಲ’ಗಳಿರುವುದರಿಂದಲೇ ಬದುಕಲು ಭಿಕ್ಷಾಟನೆ ಮಾಡುವುದು, ಲೈಂಗಿಕ ಕಾರ್ಯಕರ್ತರಾಗುವುದು, ಅಥವಾ ಗುಂಪಾಗಿ, ಬಲವಂತದಿಂದ ಹಣ ವಸೂಲಿ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ.

ಲಿಂಗಪರಿವರ್ತನೆಯ ಶಸ್ತ್ರಚಿಕಿತ್ಸೆಗೆ ನಮ್ಮ ಕಾನೂನಿನಲ್ಲಿ ಅನುಮತಿ ಇಲ್ಲದಿರುವುದರಿಂದ ಅತ್ಯಂತ ಗೋಪ್ಯವಾಗಿ ಅವರ ಲಿಂಗಪರಿವರ್ತನೆಯ ಶಸ್ತ್ರಚಿಕಿತ್ಸೆಗಳು, ಕೆಲವೊಮ್ಮೆ ಅವೈಜ್ಞಾನಿಕ ರೀತಿಯಲ್ಲಿ ನಡೆಯುತ್ತವೆ. ತಮ್ಮದೊಂದು ಗುರುತಿಸುವಿಕೆ ಹಾಗೂ ಅಸ್ತಿತ್ವಕ್ಕಾಗಿ ಅವರು ನಿರ್ದಿಷ್ಟ ಲಿಂಗವನ್ನು ಹೊಂದುವುದು, ಅದಕ್ಕಾಗಿ ಈ ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಬಹಳ ಮುಖ್ಯವಾದರೂ ಇದಕ್ಕೆ ಬೇಕಾದ ಹಣ ಹೊಂದಿಸಲು ವಿವಿಧ ಅಡ್ಡ ಮಾರ್ಗಗಳನ್ನೂ ಇವರು ಹಿಡಿಯಬೇಕಾಗುತ್ತದೆ. ಬೇರೆ ರೀತಿಯ ಅಂಗವೈಕಲ್ಯ ಅಥವಾ ಮನೋವೈಕಲ್ಯತೆ ಇರುವ ಮಕ್ಕಳಿಗಾದರೂ ಕುಟುಂಬ, ಸಮಾಜ ಒಂದಿಷ್ಟು ಕಾಳಜಿ, ಅನುಕಂಪ ತೋರುತ್ತದೆ. ಸಾಕು ಪ್ರಾಣಿಗಳನ್ನೂ ಪ್ರೀತಿಯಿಂದ ನೋಡಿಕೊಳ್ಳಲಾಗುತ್ತದೆ. ಆದರೆ ಇವರನ್ನು ಮಾತ್ರ ಎಲ್ಲ ರೀತಿಯಿಂದಲೂ ಬಾಲ್ಯದಿಂದಲೇ ಅಸಡ್ಡೆಯಿಂದ ಕಾಣಲಾಗುತ್ತದೆ. ಉಳ್ಳವರ ಮನೆಯಲ್ಲಿ ಇಂತಹ ಮಕ್ಕಳು ಹುಟ್ಟಿದ್ದರೆ ಅದನ್ನು ಗೌಪ್ಯವಾಗಿಟ್ಟು ಇನ್ನೊಂದು ರೀತಿಯಲ್ಲಿ ಅವರ ಸಂವೇದನೆಗಳಿಗೆ ಅನ್ಯಾಯ ಮಾಡಲಾಗುತ್ತದೆ. ಅವರಿಗೆ ಮದುವೆಯನ್ನೂ ಮಾಡಿ ಇಬ್ಬರ ಬದುಕನ್ನೂ ಹಾಳುಮಾಡುವುದೂ ನಡೆದೇ ಇದೆ. living-smile-vidyaಆರ್ಥಿಕವಾಗಿ ಹಿಂದುಳಿದವರು ಮನೆ ಬಿಟ್ಟು, ನಗರ ಪ್ರದೇಶಗಳಲ್ಲಿ ತಮ್ಮಂತಹುದೇ ಸಮಸ್ಯೆ ಇರುವವರೊಂದಿಗೆ ಸೇರಿಕೊಳ್ಳುವುದು, ತನ್ಮೂಲಕ ಪರಸ್ಪರರಿಗೆ ಸಹಾಯಕರಾಗಿ ಬದುಕುತ್ತಿರುವುದನ್ನು ಕಾಣುತ್ತಿದ್ದೇವೆ.

ಮುಖ್ಯವಾಹಿನಿಯಿಂದ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಇವರು ಈಗ ಕೆಲಮಟ್ಟಿಗೆ ಸಂಘಟಿತರಾಗಿದ್ದಾರೆ. ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿರಿಸಿ ಗೌರವಯುತ, ಮನುಷ್ಯ ಸಹಜ ಬಾಳಿಗಾಗಿ ಹೋರಾಟವನ್ನೂ ನಡೆಸುತ್ತಿದ್ದಾರೆ. ಹೀಗೆ ಸಂಘಟಿತರಾಗದಿದ್ದರೆ ಅಲ್ಪಸಂಖ್ಯಾತರಾದ ಇವರು ಲೈಂಗಿಕ ಕಿರುಕುಳಕ್ಕೂ, ದೌರ್ಜನ್ಯಗಳಿಗೂ ಗುರಿಯಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಈಗಲೂ ಹಿಜಡಾ ಲೈಂಗಿಕ ಕಾರ್ಯಕರ್ತೆಯರು ಸಾರ್ವಜನಿಕವಾಗಿ, ಪೊಲೀಸ್ ಠಾಣೆ, ಸೆರೆಮನೆ ಮತ್ತು ತಮ್ಮ ಮನೆಗಳಲ್ಲಿಯೂ ಅತ್ಯಂತ ಅಮಾನುಷವಾಗಿ ಶೋಷಣೆಗೆ ಒಳಗಾಗುತ್ತಾರೆ. living-smile-vidya-kannadaಹಿಜಡಾ ಆಗಿದ್ದು ಈಗ ಹೆಣ್ಣಾಗಿ ಪರಿವರ್ತನೆ ಹೊಂದಿರುವ ತಮಿಳುನಾಡಿನ ಲಿವಿಂಗ್ ಸ್ಮೈಲ್ ವಿದ್ಯಾ ತನ್ನ ಆತ್ಮಕಥೆ “ನಾನು ಅವನಲ್ಲ ಅವಳು” ನಲ್ಲಿ ‘ಸ್ವರ್ಗ ಬೇಕೆಂದೇನೂ ನಾನು ಕೇಳುತ್ತಿಲ್ಲ, ನರಕ ಬೇಡ ಎಂದಷ್ಟೇ ನಾನು ಒದ್ದಾಡುತ್ತಿರುವುದು. ನನ್ನಂತೆಯೇ ಇರುವ ಇತರ ಹಿಜಡಾಗಳಿಗಾಗಿಯೂ’ ಎನ್ನುವ ಮಾತು ಅವರು ಮತ್ತು ಅವರಂತವರು ಅನುಭವಿಸುತ್ತಿರುವ ಹೃದಯವಿದ್ರಾವಕ ನೋವಿಗೆ ಹಿಡಿದ ಕನ್ನಡಿಯಾಗಿದೆ.

ಇಂದು ಹಲವು ಹಿಜಡಾಗಳ ಆತ್ಮಕಥೆಗಳು ಬೇರೆ ಬೇರೆ ಭಾಷೆಯಲ್ಲಿ ಹೊರಬರುತ್ತಿವೆ. ಈ ಕಥನಗಳು ಅವರ ಬದುಕಿನ ಅವಶ್ಯಕತೆ, ಸಾಮಾಜಿಕ ಹಕ್ಕಿಗಾಗಿ ಅವರ ಹೋರಾಟ, ಕೌಟುಂಬಿಕ ಸಂಘರ್ಷ, ಅವರ ಸಮುದಾಯದ ಧಾರ್ಮಿಕ ನಂಬಿಕೆಗಳು, ಜೀವನಕ್ರಮ, ಗಂಡು ದೇಹದಲ್ಲಿ ಹೆಣ್ಣು ಸಂವೇದನೆಯೊಂದಿಗೆ, ಅಥವಾ ಹೆಣ್ಣು ದೇಹದಲ್ಲಿ ಗಂಡು ಸಂವೇದನೆಯೊಂದಿಗೆ ಬದುಕಬೇಕಾದ ಮಾನಸಿಕ ತುಮುಲ, ಅದನ್ನು ಸಮುದಾಯಕ್ಕೆ ಅರ್ಥಮಾಡಿಸಲಾಗದ ಅಸಹಾಯಕತೆಯನ್ನು ಕಣ್ಣಿಗೆ ಕಟ್ಟುವಂತೆ ಹಿಡಿದಿಟ್ಟಿವೆ. ಜೊತೆಗೆ ಅವರ ಆತ್ಮಕಥೆಗಳ ತುಣುಕಿನಂತಿರುವ ಹಿಜಡಾ ಕಾವ್ಯ [ಅಂತರ್‌ಜಾಲದಲ್ಲಿ ಈ ತಾಣಗಳಿವೆ] ಅವರ ಪ್ರೀತಿಗಾಗಿನ ಅದಮ್ಯ ಹಂಬಲ, ಭಾವನಾತ್ಮಕ ಸಾಂಗತ್ಯಕ್ಕಾಗಿನ ತಹತಹಿಸುವಿಕೆ, ಸಾಮಾಜಿಕ ಅವಮಾನ-ನೋವನ್ನು ಸಮರ್ಥವಾಗಿ ಕಟ್ಟಿಕೊಡುತ್ತಾ ನಮ್ಮನ್ನು ಆರ್ದ್ರಗೊಳಿಸುತ್ತವೆ.

ಮುಂಬಯಿಯ ಸಮುದಾಯ ಆರೋಗ್ಯ ಸಂಸ್ಥೆಯಾದ ‘ದ ಹಮ್‌ಸಫರ್ ಟ್ರಸ್ಟ್’ ಭಾರತದಲ್ಲಿ ಸಧ್ಯ ಸುಮಾರು 5 ರಿಂದ 6 ದಶಲಕ್ಷ ಹಿಜಡಾಗಳಿದ್ದಾರೆಂದು ಅಂದಾಜಿಸಿದೆ. ಆದರೆ ಇವರಲ್ಲಿ ಕೇವಲ 8% ಹಿಜಡಾಗಳು ಮಾತ್ರ ನಿರ್ದಿಷ್ಟ ಲಿಂಗದ ಶಸ್ತ್ರಚಿಕಿತ್ಸೆಗೆ ಒಳಗಾಗಿ ತಮ್ಮ ನಿರ್ದಿಷ್ಟ [ಗಂಡು-ಹೆಣ್ಣು] ಗುರುತಿಸುವಿಕೆಯ ಅಸ್ತಿತ್ವವನ್ನು ಪಡೆದಿದ್ದಾರೆ. ಈ ಶಸ್ತ್ರಚಿಕಿತ್ಸೆಯನ್ನವರು ‘ನಿರ್ವಾಣ’ ಎಂದು ಕರೆಯುತ್ತಾರೆ. 2005 ರಿಂದ ಭಾರತೀಯ ಪಾಸ್‌ಪೋರ್ಟ್‌ಗಳಲ್ಲಿ ಮೂರನೇ ಲಿಂಗೀಯರನ್ನು ಗುರುತಿಸುವ ವ್ಯವಸ್ಥೆಯಾಗಿದೆ. ಜೊತೆಗೆ 2009 ರಲ್ಲಿ ಭಾರತ ಸರ್ಕಾರ ಇವರನ್ನು ಮೂರನೇ ಲಿಂಗದವರೆಂದು ಗುರುತಿಸಿ ಮತದಾನದಲ್ಲಿ, ಮತದಾನದ ಗುರುತಿನ ಚೀಟಿಯಲ್ಲಿ ನಮೂದಿಸಲು ತೀರ್ಮಾನಿಸಿದೆ. ಜೊತೆಗೆ 2011 ರಲ್ಲಿ ನಡೆದ ಜನಗಣತಿಯಲ್ಲಿ ಮೊದಲ ಬಾರಿಗೆ ಇವರನ್ನು ಪ್ರತ್ಯೇಕವಾಗಿ ಗುರುತಿಸುವ ಕ್ರಮವನ್ನೂ ಭಾರತ ಸರ್ಕಾರ ಕೈಗೊಂಡಿರುವುದು ಆಶಾದಾಯಕವಾದ ವಿಚಾರವಾಗಿದೆ. ತಮಿಳುನಾಡು ಸರ್ಕಾರ ಮೊದಲ ಬಾರಿಗೆ ಅವರನ್ನು ‘ಟಿ’ ಎಂಬ ಲಿಂಗ ಚಿಹ್ನೆಯ ಮುಖಾಂತರ ಗುರುತಿಸಲು ಈ ಹಿಂದೆಯೇ ಕ್ರಮ ಕೈಗೊಂಡಿತ್ತು.

ಆದರೆ ಹಿಜಡಾಗಳು ಇತರ ಗಂಡು-ಹೆಣ್ಣುಗಳಂತೆಯೇ ಸಮಾನವಾಗಿ ಬದುಕಲು, ನಮ್ಮ ಸರ್ಕಾರ ಹಾಗೂ ಸಮಾಜದಿಂದ ಇನ್ನೂ ಅನೇಕ ಸೂಕ್ತ ಬದಲಾವಣೆಗಳು ಆಗಬೇಕಿದೆ. ಅವರ ಮುಖ್ಯವಾದ ಬೇಡಿಕೆ ಎಂದರೆ ಲಿಂಗಪರಿವರ್ತನೆಯ ಶಸ್ತ್ರಚಿಕಿತ್ಸೆ ಕಾನೂನುಬದ್ಧವಾಗಬೇಕು ಎಂಬುದು. ಇದರೊಂದಿಗೆ, ಶಸ್ತ್ರಚಿಕಿತ್ಸೆಯ ನಂತರ ಹೆಣ್ಣಾಗಿ ಅಥವಾ ಗಂಡಾಗಿ ಬದಲಾಗಿದ್ದಕ್ಕೆ ಪ್ರಮಾಣಪತ್ರ ಸಿಗಬೇಕು. ರೇಷನ್‌ಕಾರ್ಡ್, ಪಾಸ್‌ಪೋರ್ಟ್, ವೀಸಾ, ಗುರುತಿನಚೀಟಿ ಯಾವುದೇ ತೊಡಕಿಲ್ಲದೇ ಸಿಗುವಂತಾಗಬೇಕು. ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂಬುದಾಗಿದೆ. ಪ್ರಜಾಪ್ರಭುತ್ವದ ಹಣೆಪಟ್ಟಿ ಕಟ್ಟಿಕೊಂಡಿರುವ ದೇಶವೊಂದು ತಾನಾಗಿಯೇ ಇದನ್ನೆಲ್ಲಾ ಮಾಡಬೇಕಾಗಿರುವುದು ಅದರ ಜವಾಬ್ದಾರಿ.

ಸಾಮಾಜಿಕವಾಗಿ, ಅವರ ಪ್ರಕೃತಿದತ್ತ ಸಮಸ್ಯೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಬಹಳ ಮುಖ್ಯವಾದ ಕೆಲಸ. ಶಾಲಾಪಠ್ಯಗಳಲ್ಲೂ ಈ ಮಾಹಿತಿಯನ್ನು ಅಳವಡಿಸಿದರೆ ಮುಂದಿನ ಪೀಳಿಗೆ ಇವರ ಕುರಿತು ಋಣಾತ್ಮಕ ಭಾವನೆಗಳನ್ನಿರಿಸಿಕೊಳ್ಳುವುದು ತಪ್ಪಬಹುದು. ಬರಹ, ಚಲನಚಿತ್ರ, ಸಾಕ್ಷ್ಯಚಿತ್ರ, ಧಾರಾವಾಹಿಗಳ ಮೂಲಕ ಹಿಜಡಾಗಳ ಬದುಕಿನ ನೋವು-ಸಂಘರ್ಷಗಳನ್ನು ಪರಿಚಯಿಸುವ ಕೆಲಸಗಳಾಗಬೇಕಿದೆ. ಮಾಧ್ಯಮಗಳಲ್ಲಿ ಅವರ ಕುರಿತು ಅಮಾನವೀಯವಾಗಿ ಚಿತ್ರಿಸುವ, ಸಾರ್ವಜನಿಕವಾಗಿ ಅವರನ್ನು ವಿನಾಕಾರಣ ಅಶ್ಲೀಲ, ಅವಾಚ್ಯ ಶಬ್ಧಗಳಿಂದ ಕೆಣಕುವ ಸಂದರ್ಭಗಳಲ್ಲಿ ಕಾನೂನಿನರೀತ್ಯ ಶಿಕ್ಷೆಯಾಗುವಂತಾ ಶಾಸನಗಳು ಜಾರಿಯಾಗಬೇಕು. ಮುಖ್ಯವಾಗಿ ಹಿಜಡಾಗಳ ಬದುಕು, ಸಮಸ್ಯೆಯ ಕುರಿತು ಮಾನವಶಾಸ್ತ್ರಜ್ಞರು, ಮನೋವಿಜ್ಞಾನಿಗಳು ಹಾಗೂ ಸಮಾಜವಿಜ್ಞಾನಿಗಳು ವೈಜ್ಞಾನಿಕ ನೆಲೆಗಳಲ್ಲಿ ಹೆಚ್ಚಿನ ಸಂಶೋಧನೆ, ಸಮೀಕ್ಷೆ ನಡೆಸಿ ಜನರಲ್ಲಿ ಅವರ ಕುರಿತು ಸಹಜ ಪ್ರೀತಿ, ಅಂತಃಕರಣಗಳನ್ನು ಮೂಡಿಸಲು ನೆರವಾಗಬೇಕಿದೆ.

ಒಟ್ಟಾರೆ ಹಿಜಡಾಗಳ ಕುರಿತು ಸಮಾಜದ ಧೋರಣೆ ಬದಲಾಗಬೇಕಿದೆ. ಅವರ ಪ್ರಕೃತಿದತ್ತವಾದ ಹುಟ್ಟನ್ನು ಸಹಾನುಭೂತಿಯಿಂದ ಕಂಡು ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಕೆಲಸಗಳ ಜೊತೆಗೆ, ನಮ್ಮಂತೆಯೇ ಸಾಮಾಜಿಕ-ನಾಗರಿಕ ಹಕ್ಕುಗಳನ್ನು ತುರ್ತಾಗಿ ನೀಡಬೇಕಿದೆ. ಮುಖ್ಯವಾಗಿ ಅವರು ಪ್ರಾಣಿಗಳಲ್ಲ ನಮ್ಮಂತೆಯೇ ಮನುಷ್ಯರು ಎಂದು ಒಪ್ಪಿಕೊಂಡರೆ, ಅವರ ನೋವು-ಸಂಕಟಗಳು ನಮಗೆ ಅರ್ಥವಾದರೆ, ನಾವೆಂದಿಗೂ ಅವರೊಂದಿಗೆ ಅಮಾನವೀಯವಾಗಿ ವರ್ತಿಸುವುದಿಲ್ಲ. ಅವರಿಗೂ ನಮ್ಮಿಂದ ಮನುಷ್ಯ ಸಹಜ ಪ್ರೀತಿ ಸಿಕ್ಕರೆ ಅವರ ವರ್ತನೆಯೂ ಖಂಡಿತಾ ಕೆಟ್ಟದಾಗಿರಲು ಸಾಧ್ಯವಿಲ್ಲ.

ಫ್ಯಾಸಿಸ್ಟರ ಕೈಯಲ್ಲಿ ಮಕ್ಕಳಾಟಿಕೆಯಂತಾಗಿರುವ ಇಂಡಿಯಾ

– ಬಿ.ಶ್ರೀಪಾದ ಭಟ್

15 ನೇ ಅಕ್ಟೋಬರ್ 2013 ರಂದು ’ದ ಹಿಂದೂ’ ದಿನಪತ್ರಿಕೆಯ ಸಹ ಸಂಪಾದಕಿ ’ವಿದ್ಯಾ ಬಾಲಸುಬ್ರಮಣ್ಯಂ’ ಅವರು ನವದೆಹಲಿಯ ಪೋಲಿಸ್ ಠಾಣೆಯಲ್ಲಿ ” ತಾವು ‘The forgotten promise of 1949′ ಲೇಖನವನ್ನು ಬರೆದ ನಂತರ ದಿನನಿತ್ಯ ನನ್ನ ಮೊಬೈಲ್‌ಗೆ ಬೆದರಿಕೆ ಕರೆಗಳು ಬರುತ್ತಿವೆ. 15 ಮತ್ತು 16 ನೇ ಅಕ್ಟೋಬರ್ 2013 ರಂದು ಸುಮಾರು 250 ಬೆದರಿಕೆ ಕರೆಗಳು ಬಂದಿವೆ. ಈ ಬೆದರಿಕೆ ಕರೆಗಳನ್ನು ಮಾಡುತ್ತಿರುವುವರು ತಾವು ಆರೆಸಸ್ ಮತ್ತು ವಿಎಚ್‌ಪಿ ಸಂಘಟನೆಗಳಿಗೆ ಸೇರಿದ್ದೇವೆ ಎಂದು ಬೆದರಿಸುತ್ತಿದ್ದಾರೆ,” ಎಂದು ದೂರು ದಾಖಲಿಸಿದ್ದಾರೆ. (ದ ಹಿಂದೂ, 1 ನವೆಂಬರ್, 2013)

ಪ್ರಜಾಪ್ರಭುತ್ವ ರಾಷ್ಟ್ರವೊಂದರಲ್ಲಿ, ಜನರಿಂದ ಚುನಾಯಿತರಾಗಿ ಅಧಿಕಾರಕ್ಕೆ ಬರುವ ಸರ್ಕಾರಗಳು ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮತ್ತು ಪತ್ರಿಕಾರಂಗಗಳೆಂಬ ಪ್ರಜಾಪ್ರಭುತ್ವದ ನಾಲ್ಕು ಸ್ತಂಭಗಳ ಆಧಾರದೊಂದಿಗೆ ಕಾರ್ಯ ನಿರ್ವಹಿಸುತ್ತವೆ ಮತ್ತು ಈ ಸರ್ಕಾರ ಹಾಗೂ ಈ ನಾಲ್ಕೂ ಸ್ತಂಭಗಳು ಭಾರತದ ಸಂವಿಧಾನಕ್ಕೆ ಬದ್ಧರಾಗಿ ಸಂವಿಧಾನದ ಆಶಯಗಳಿಗೆ ಅನುಗುಣವಾಗಿಯೇ ಕಾರ್ಯ ನಿರ್ವಹಿಸಬೇಕು. BJP-RSS-Gadkariಇಲ್ಲಿ ಯಾವುದೇ ಧರ್ಮಕ್ಕೂ ಮತ್ತು ಧರ್ಮಗ್ರಂಥಗಳಿಗೂ ಅಧಿಕೃತವಾಗಿ, ಸಾರ್ವಜನಿಕವಾಗಿ, ಕಾನೂನಿನ ಚೌಕಟ್ಟಿನಲ್ಲಿ ಮಾನ್ಯತೆ ಇಲ್ಲವೇ ಇಲ್ಲ. ಕಡೆಗೆ ಸಂವಿಧಾನವೇ ಅಂತಿಮ. ಇಂದು ಫ್ಯಾಸಿಸ್ಟ್ ಸಂಘಟನೆಯಾದ ಆರೆಸಸ್ ಮತ್ತು ಫ್ಯಾಸಿಸ್ಟ್ ನಾಯಕ ನರೇಂದ್ರ ಮೋದಿ ಭಾರತವನ್ನು ಕಬ್ಜಾ ಮಾಡಲು ದೇಶಾದ್ಯಾಂತ ದಂಡಯಾತ್ರೆಯನ್ನು ನಡೆಸುತ್ತಿದ್ದಾರೆ. ಹಾಗಿದ್ದಲ್ಲಿ ಪ್ರಜಾಪ್ರಭುತ್ವದ, ಸಂವಿಧಾನದ ವಿರೋಧಿಯಾದ ಈ ಫ್ಯಾಸಿಸಂನ ಗುಣಗಳೇನು?

ಚಿಂತಕ ಪಾರ್ಥ ಬ್ಯಾನರ್ಜಿಯವರ ಸಂಶೋಧನ ಲೇಖನದ ಸಾರಾಂಶ:

1920 ರ ದಶಕದಲ್ಲಿ ಯುರೋಪ್ ರಾಷ್ಟ್ರಗಳಲ್ಲಿ ಈ ಫ್ಯಾಸಿಸ್ಟ್ ಪದ ಮತ್ತು ಇದರ ವ್ಯವಸ್ಥೆ ಆಸ್ತಿತ್ವಕ್ಕೆ ಬಂತು. ಜರ್ಮನಿಯ ಗುಟೇನ್‌ಬರ್ಗ ಯೂನಿವರ್ಸಿಟಿಯಲ್ಲಿ ಫ್ರೊಫೆಸರ್ ಆಗಿರುವ ಡಾ. ಮಾರ್ಕ ಟ್ರಿಶ್ಚ್ ಅವರು ಫ್ಯಾಸಿಸಂ ಅನ್ನು ಈ ಕೆಳಗಿನಂತೆ ವಿವರಿಸುತ್ತಾರೆ

  • ಸಾವಿರಾರು ವರ್ಷಗಳ ಹಿಂದಿನ ಸಂಪ್ರದಾಯಗಳಿಗೆ ( ಭಾರತದ ಸಂದರ್ಭದಲ್ಲಿ ವರ್ಣಾಶ್ರಮದ ವ್ಯವಸ್ಥೆಗೆ) ಮರಳಬೇಕೆಂಬ ಸಿದ್ಧಾಂತ
  • ಶ್ರೇಣೀಕೃತ, ಮಿಲಿಟರಿ ಆಧಾರಿತ, ಕಾರ್ಪೋರೇಟ್ ಸಮಾಜದ ನಿರ್ಮಾಣವನ್ನು ಕಟ್ಟಬೇಕೆಂಬ ಸಿದ್ಧಾಂತ
  • ನಾಯಕತ್ವದ, ನಾಯಕನ ವೈಭವೀಕರಣ. ನಾಯಕನ ಮಾತೇ ಅಂತಿಮವೆನ್ನುವ ಸಿದ್ಧಾಂತ
  • ರಾಷ್ಟ್ರೀಯತೆಯನ್ನು ದೇಶಪ್ರೇಮದೊಂದಿಗೆ ಸಮೀಕರಿಸಿ ವೈಭವೀಕರಿಸುವುದು
  • ಈ ರಾಷ್ಟ್ರೀಯತೆಯ ಆಧಾರದ ಮೇಲೆಯೇ ವಿದೇಶಾಂಗ ನೀತಿಗಳನ್ನು ರೂಪಿಸುವುದು

ಹಾಗಾದರೆ ಆರೆಸಸ್ ಮತ್ತು ಅದರ ಅಂಗಪಕ್ಷಗಳಾದ ಬಿಜೆಪಿ, ವಿಎಚ್‌ಪಿ, ಬಜರಂಗದಳಗಳು ಫ್ಯಾಸಿಸಂನ ಮೇಲಿನ ಗುಣಲಕ್ಷಣಗಳನ್ನು ಹೊಂದಿವೆಯೇ? ಉತ್ತರ, ಹೌದು. ಈ ಸಂಘ ಪರಿವಾರದ ಎಲ್ಲಾ ನೀತಿನಿಯಮಗಳು ಮೇಲಿನ ಫ್ಯಾಸಿಸಂನ ಗುಣಲಕ್ಷಣಗಳನ್ನು ಹೊಂದಿವೆ.

ಆರೆಸಸ್ ಕಳೆದ ಎಂಬತ್ತು ವರ್ಷಗಳಿಂದ ಪ್ರತಿಪಾದಿಸುತ್ತಾ ಬಂದಿರುವ “ಭಾರತೀಯ ಸಂಸ್ಕೃತಿ, ಭಾರತೀಯ ಸಂಸ್ಕಾರ ಅಂದರೆ ಹಿಂದೂ ಸಂಸ್ಕೃತಿ ಮತ್ತು ಹಿಂದೂ ಸಂಸ್ಕಾರ.” ಇದು ಫ್ಯಾಸಿಸಂನ ಮೊದಲ ಸಿದ್ಧಾಂತ. ಅಂದರೆ ವೈವಿಧ್ಯತೆಯನ್ನೇ ನಿರಾಕರಿಸುವುದು. ಬಹುರೂಪಿ ಸಂಸ್ಕೃತಿಯನ್ನೇ ಧ್ವಂಸಗೊಳಿಸುವುದು. ತನ್ನ ದಿನನಿತ್ಯದ ಬೈಠಕ್‌ಗಳಲ್ಲಿ, ಶಾಖೆಗಳಲ್ಲಿ, ಸ್ವಯಂಸೇವಕರ ಸಮಾವೇಶಗಳಲ್ಲಿ ಬೋಧಿಸುವುದು ಮತ್ತು ಕಡ್ಡಾಯವಾಗಿ ಪಾಲಿಸಬೇಕೆಂದು ಒತ್ತಾಯಿಸುವುದು “ಪ್ರಾಚೀನ ಕಾಲದ ಭರತವರ್ಷ”ವನ್ನು. ಇದು ಭೂಖಂಡದಲ್ಲೇ ಅತ್ಯುತ್ತಮವಾದದ್ದೆಂದು ಬಣ್ಣಿಸುತ್ತದೆ savarkar-gowalkarಈ ಆರೆಸಸ್. ಮುಂದುವರೆದು ಇಂಥ ಶ್ರೇಷ್ಠ ಹಿಂದೂ ರಾಷ್ಟ್ರದ ಅವನತಿ ಪ್ರಾರಂಭವಾಗಿದ್ದು ಹಿಂದೂಗಳ ನಡುವಿನ ಒಡಕಿನಿಂದ (ಅದರೆ ಜಾತೀಯತೆ ಎನ್ನುವ ಪದವನ್ನು ಎಲ್ಲಿಯೂ ಬಳಸುವುದಿಲ್ಲ) ಮತ್ತು ಮುಸ್ಲಿಂ ದೊರೆಗಳ, ಬ್ರಿಟೀಷರ ಆಕ್ರಮಣದಿಂದ ನಮ್ಮ ದೇಶದ ಪಾವಿತ್ರ್ಯವೇ ನಾಶವಾಯಿತು ಎಂದು ಬ್ರೈನ್‌ವಾಶ್ ಮಾಡುತ್ತಾರೆ. ಮರಳಿ ಹಿಂದೂ ಧರ್ಮದ ಅಖಂಡ ಭಾರತವನ್ನು ಅಂದರೆ ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ, ಗಂಧಾರದಿಂದ ಭ್ರಹ್ಮದೇಶದವರೆಗೆ (ಉತ್ತರದ ಟಿಬೆಟ್‌ನಿಂದ ದಕ್ಷಿಣದ ತುದಿಯವರೆಗೆ ಮತ್ತು ಪಶ್ಚಿಮದ ಅಫಘಾನಿಸ್ತಾನದಿಂದ ಮಯನ್ಮಾರ್, ಥೈಲಾಂಡ್, ಕಾಂಬೋಡಿಯ, ಲ್ಹಾಸಾಗಳನ್ನೊಳಗೊಂಡ ವಾಯುವ್ಯ ಏಷ್ಯಾದವೆರೆಗೆ) ಕಟ್ಟಬೇಕೆಂಬುದೇ ತಮ್ಮ ಸಿದ್ಧಾಂತವೆಂದು ಇವರು ಪ್ರತಿಪಾದಿಸುತ್ತಾರೆ. ಇದು ಫ್ಯಾಸಿಸಂ ಮೊದನೇ ಗುಣಲಕ್ಷಣವನ್ನು ಸಂಪೂರ್ಣವಾಗಿ ಪ್ರತಿಪಾದಿಸುತ್ತದೆ. ಇದು ಉತ್ಪ್ರೇಕ್ಷೆಯಲ್ಲ. ಆರೆಸಸ್ ನಡೆಸುವ ಬೈಠಕ್‌ಗಳಿಗೆ, ಸಮಾವೇಶಗಳಿಗೆ ಒಮ್ಮೆ ಭೇಟಿ ಕೊಡಿ. ಅಲ್ಲಿ ಸ್ವಯಂಸೇವಕರು ಉಗುಳುವ ಬೆಂಕಿಯನ್ನು ದಯವಿಟ್ಟು ಆಲಿಸಿ. ಆರೆಸಸ್‌ನ ಸಂಸ್ಥಾಪಕ ನಾಯಕರಾದ ಗೋಳ್ವಲ್ಕರ್, ಸಾವರ್ಕರ್, ಶ್ಯಾಮ್ ಪ್ರಸಾದ್ ಮುಖರ್ಜಿ ಇವರು ಬರೆದ ಪುಸ್ತಕಗಳನ್ನು, ಲೇಖನಗಳನ್ನು ದಯವಿಟ್ಟು ಓದಿ. ಮೇಲೆ ಹೇಳಿದ ಎಲ್ಲಾ ಚಿಂತನೆಗಳು ಅಲ್ಲಿ ಇನ್ನೂ ಉಗ್ರ ಸ್ವರೂಪದಲ್ಲಿವೆ.

ಇದು ಹಳೆಯ ಕಾಲದ ಮಾತಾಯ್ತು ಎನ್ನುವಿರಾ? ಸಾಧ್ಯವೇ ಇಲ್ಲ. ಸಂಘ ಪರಿವಾರಕ್ಕೆ ಈ ನಾಯಕರು ಇಂದಿಗೂ ಆದರ್ಶಪ್ರಾಯರು. ಇಂದಿಗೂ ಇವರ ಚಿಂತನೆಗಳೇ ಸಂಘ ಪರಿವಾರಕ್ಕೆ ವೇದವಾಕ್ಯ.

ಆರೆಸಸ್ ಪಕ್ಷದ ಸಂವಿಧಾನವನ್ನು ಅದರ ಚೌಕಟ್ಟನ್ನು ವಿವರವಾಗಿ ಪರಿಶೀಲಿಸಿದಾಗ ಅದು ಮಿಲಿಟರಿಯ ರೆಜಿಮೆಂಟ್ ಮಾದರಿಯನ್ನು ಅಳವಡಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ. ಆರೆಸಸ್ ಮುಖ್ಯಸ್ಥನನ್ನು “ಸರಸಂಚಾಲಕ”ರೆಂದು ಕರೆಯುತ್ತಾರೆ. ಅಂದರೆ ಪರಮೋಚ್ಛ ನಾಯಕ. ಅಂದರೆ ಮಿಲಿಟರಿ ಮುಖ್ಯಸ್ಥನಂತೆ. ಈ ಸ್ವರ ಸಂಚಾಲಕರನ್ನು ಯಾವುದೇ ಅಂತರಿಕ ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿ ಚುನಾಯಿಸುವುದಿಲ್ಲ. ಅಲ್ಲಿ ಅಂತರಿಕ ಚುನಾವಣೆಯೇ ಇಲ್ಲ. ಆತನ ಪಾತ್ರ ಮತ್ತು ಹೊಣೆಗಾರಿಕೆಗಳು ಪರಮೋಚ್ಛ ನಾಯಕನ ಹೊಣೆಗಾರಿಕೆಗಳಿಗೆ ಸಮ. ಪ್ರತಿ ವರ್ಷ ವಿಜಯದಶಮಿ ದಿನದಂದು ನಾಗಪುರದ ಆರೆಸಸ್‌ನ ಕೇಂದ್ರ ಕಛೇರಿಯಲ್ಲಿ ಈ ಸ್ವರಸಂಚಾಲಕ ಮಾಡುವ ಭಾಷಣ ಮತ್ತು ನೀಡುವ ಸಂದೇಶವೇ ಸಂಘಪರಿವಾರಕ್ಕೆ ಮುಂದಿನ ಗುರಿಗಳ ಕುರಿತಾದ ಆಜ್ಞೆಯ ಸ್ವರೂಪ. ಆತನ ಮಾತೇ ಅಂತಿಮ. ಅವರು ಹೇಳಿದ್ದು ಲಕ್ಷ್ಮಣ ರೇಖೆ. ಹೆಗಡೇವಾರ್ ಮತ್ತು ಗೋಳ್ವಲ್ಕರ್ ಅವರನ್ನು ಇಂದಿಗೂ ದೇವತಾ ಸ್ವರೂಪಿಗಳಾಗಿಯೇ ಪೂಜಿಸುತ್ತಾರೆ. ಇವರಿಬ್ಬರಿಗೂ ಅವತಾರ ಪುರುಷರೆಂಬ ಪಟ್ಟವನ್ನು ಕಟ್ಟಲಾಗಿದೆ. ಇವರ ಕುರಿತಾಗಿ ದಂತಕತೆಗಳನ್ನು ದಿನನಿತ್ಯದ ಬೈಠಕ್‌ಗಳಲ್ಲಿ, ತಮ್ಮ ಶಾಖೆಗಳಲ್ಲಿ, ಸಮಾವೇಶಗಳಲ್ಲಿ ಭಕ್ತಿಯಿಂದ ಮಾತನಾಡುತ್ತಾರೆ. ಶಿವಸೇನೆಯ ಬಾಳಾ ಠಾಕ್ರೆಯನ್ನು ಮತ್ತೊಬ್ಬ ಸಾಮಂತ ರಾಜನಂತೆ ಗೌರವಿಸುತ್ತಾರೆ. ಈ ಅಂಶಗಳು ಫ್ಯಾಸಿಸಂನ ಎರಡನೇ ಮತ್ತು ಮೂರನೇ ಅಂಶಗಳನ್ನು ಧೃಡೀಕರಿಸುತ್ತದೆ.

(ಆಧಾರ : ಚಿಂತಕ ಪಾರ್ಥ ಬ್ಯಾನರ್ಜಿಯವರ ಸಂಶೋಧನ ಲೇಖನಗಳು.)

ರಾಷ್ಟ್ರೀಯ ಸ್ವಾವಲಂಬನೆಯನ್ನು ಸಾಧಿಸಲು ಸ್ವದೇಶಿ ಮಂತ್ರವನ್ನು ದೇಶಾದ್ಯಾಂತ ಹರಡಲು ಹುಟ್ಟಿಕೊಂಡಿದ್ದೇ “ಸ್ವದೇಶಿ ಜಾಗರಣ ಮಂಚ್” ಎನ್ನುವ ಸಂಘಟನೆ. ಇದೂ ಸಹ ಆರೆಸಸ್‌ನ ಅಂಗಪಕ್ಷ. ಈ ಸಂಘಟನೆಯು ಪಶ್ಚಿಮ ರಾಷ್ಟ್ರಗಳ ಪರಮೋಚ್ಛತೆಯನ್ನು ತೀವ್ರವಾಗಿ ಖಂಡಿಸುತ್ತದೆ. ಅದರಲ್ಲೂ ಅಮೇರಿಕಾದ ನೀತಿಗಳು ದೇಶಕ್ಕೇ ಮಾರಕವೆಂದೇ ಈ “ಸ್ವದೇಶಿ ಜಾಗರಣ ಮಂಚ್” ಸಾರುತ್ತಾ ಬಂದಿದೆ. ಇದನ್ನು ವಸಾಹತು ನೆಲೆಯಲ್ಲಿ, ಕಲೋನಿಯಲ್ ನೆಲೆಯಲ್ಲಿ ವಿಶ್ಲೇಷಿಸದೆ ಬದಲಾಗಿ “ಹಿಂದೂ ರಾಷ್ಟ್ರೀಯತೆ”ಯ ನೆಲೆಯಲ್ಲಿ ವಿರೋಧಿಸುತ್ತಿದೆ ಆರೆಸಸ್. Globalizationಅಂದರೆ ಈ ಪಶ್ಷಿಮ ರಾಷ್ಟ್ರಗಳಿಂದ ನಮ್ಮ ವೈವಿಧ್ಯಮಯವಾದ ಜೀವನಕ್ರಮ, ನಮ್ಮ ಗ್ರಾಮೀಣ ಬದುಕು ಅಳಿಸಿಹೋಗುತ್ತಿರುವುದು, ನಮ್ಮ ನೆಲದ ಜೀವತೋರಣಗಳು, ಈ ಮಣ್ಣಿನ ಅವೈದಿಕ ಸಂಸ್ಕೃತಿ ನಾಶವಾಗುತ್ತಿವೆ ಎನ್ನುವ ಮಾನವೀಯ, ಜೀವಪರ ನೆಲೆಯಿಂದ ಮಾತನಾಡುತ್ತಿಲ್ಲ. ಬದಲಾಗಿ ಇವರ ವಿರೋಧವಿರುವುದು ಈ ಪಶ್ಚಿಮ ರಾಷ್ಟ್ರಗಳ ಆಕ್ರಮಣತೆಯಿಂದ ಹಿಂದೂ ಸಂಸ್ಕೃತಿ ನಾಶವಾಗುತ್ತಿದೆ ಎಂಬುದಾಗಿ ಮಾತ್ರ. ಆದರೆ ಇವರ ನಾಯಕ ಮೋದಿ ಒಂದು ಕಡೆ ತಾನು ಹಿಂದೂ ರಾಷ್ಟ್ರೀಯವಾದಿ ಎಂದು ಎದೆ ತಟ್ಟಿ ಹೇಳುತ್ತಾನೆ. ಮತ್ತೊಂದು ಕಡೆ ವಿದೇಶಿ ಬಂಡವಾಳ ಹೂಡಿಕೆಯೇ ಬಾರತದ ಮುಂದಿನ ಭವಿಷ್ಯ ಎಂದು ಪಕ್ಕಾ ಕಾರ್ಪೋರೇಟ್ ಸಂಸ್ಕೃತಿಯಲ್ಲಿ ಕಂಡಲೆಲ್ಲಾ ಭಾಷಣ ಬಿಗಿಯುತ್ತಾನೆ.

ಇಂದು ಮಧ್ಯಮವರ್ಗ ಮತ್ತು ಕಾರ್ಪೋರೇಟ್ ವಲಯ ಈ ಮೋದಿಗೆ ಬೆಂಬಲಿಸುತ್ತಿರುವುದು ಈ ಆರ್ಥಿಕ ನೀತಿಗಾಗಿ ಮಾತ್ರ. ಈ ಮೋದಿಯ ಬಂಡವಾಳಶಾಹಿಗಳ, ಶ್ರೀಮಂತರ ಪರವಾದ ಆರ್ಥಿಕ ನೀತಿಗಳು ಈ ಮಧ್ಯಮವರ್ಗ ಮತ್ತು ಕಾರ್ಪೋರೇಟ್ ಗುಂಪನ್ನು ಪುಳಕಿತಗೊಳಿಸುತ್ತಿದೆ. ಅದನ್ನೇ ಈ ಗುಂಪು ಬದಲಾವಣೆಗಾಗಿ ಎಂದು ಅನೈತಿಕತೆಯಿಂದ ಸಮರ್ಥಿಸಿಕೊಳ್ಳುತ್ತಿವೆ. ಹಾಗಿದ್ದರೆ ಆರೆಸಸ್‌ನ ಮೂಲ ಸಿದ್ಧಾಂತ “ಸ್ವದೇಶಿ ಜಾಗರಣ ಮಂಚ್”ನ ಕತೆ ಏನು?? ಈ ಮೋದಿ ಸಮರ್ಥಕರಿಗೆ ಆರೆಸಸ್ ಮತ್ತು ಮೋದಿಯ ಈ ಎರಡಂಚಿನ ಕತ್ತಿಯ ನಡಿಗೆ ಪರಿಣಾಮ ಇನ್ನೂ ಅನುಭವಿಸಿದಂತಿಲ್ಲ. ಒಮ್ಮೆ ಕತ್ತಿಯ ಅಲುಗಿನ ಎರಡೂ ಕಡೆಯಿಂದ ಹೊಡೆತಕ್ಕೆ ಸಿಕ್ಕಾಗ ಮಾತ್ರ ಅದರ ಪರಿಣಾಮದ ತೀವ್ರತೆ ಅನುಭವಕ್ಕೆ ಬುರುವುದು. ಇದು ಫ್ಯಾಸಿಸಂನ ನಾಲ್ಕನೇ ಅಂಶವನ್ನು ಧೃಡೀಕರಿಸುತ್ತದೆ.

ಮತ್ತೊಂದು ಕಡೆ ಬಿಹಾರನ ಪಾಟ್ಣಾದಲ್ಲಿ ಭಾಷಣ ಮಾಡುತ್ತಾ ಮೋದಿ “ಯದುವಂಶದ ಮೂಲಪುರುಷ ಕೃಷ್ಣ ಪರಮಾತ್ಮನು ಗುಜರಾತನ ದ್ವಾರಕೆಯಿಂದ ಬಂದಿದ್ದಾನೆ. ಹೀಗಾಗಿ ಯಾದವರ ಮೂಲಸ್ಥಾನ ಗುಜರಾತ್” ಎಂದೆಲ್ಲ ಮಾತನಾಡಿದ್ದಾನೆ. ಅಂದು ರಾಮನನ್ನು ಬಳಸಿಕೊಂಡಿದ್ದಾಯಿತು. ಇಂದು ಕೃಷ್ಣನ ಸರದಿ. ಇದು ಯಾವ ಬಗೆಯ ಓಲೈಕೆ?? ಧರ್ಮ ಮತ್ತು ಧಾರ್ಮಿಕ ವ್ಯಕ್ತಿಗಳನ್ನು ಸಾರ್ವಜನಿಕವಾಗಿ ಬಳಸಿಕೊಳ್ಳುವುದು ಸಂವಿಧಾನಕ್ಕೆ ಮಾಡಿದ ಅಪಚಾರ. ಆದರೆ ಆರೆಸಸ್ ಮತ್ತು ಮೋದಿಗೆ ಸಂವಿಧಾನ ಕುರಿತಾಗಿ ಯಾವುದೇ ಬಗೆಯ ಗೌರವವಿಲ್ಲ. ಇದು ಪ್ರತಿ ದಿನ ಸಾಬೀತಾಗುತ್ತಿದೆ.

ಅಲ್ಲದೆ ಬಿಹಾರಿಗಳ ಮತವನ್ನು ಪಡೆಯಲು ಇತಿಹಾಸವನ್ನು ತಿರುಚಿ ಸುಳ್ಳುಗಳನ್ನು ಹೇಳಲೂ ನಾಚಲಿಲ್ಲ ಈ ಮೋದಿ. ಔಟ್‌ಲುಕ್, 11 ನೇ ನವೆಂಬರ್, 2013 ರ ವರದಿಯ ಪ್ರಕಾರ ಮೋದಿಯ ಪಾಟ್ಣಾ ಉವಾಚಗಳು:

ಅಲೆಕ್ಸಾಂಡರ್‌ನನ್ನು ಧೈರ್ಯಶಾಲಿ ಬಿಹಾರಿಗಳು ಗಂಗಾ ನದಿಯ ದಂಡೆಯ ಮೇಲೆ ಸೋಲಿಸಿದರು.” : (ವಾಸ್ತವದಲ್ಲಿ ಅಲೆಕ್ಸಾಂಡರ್‌ನನ್ನು ಪಂಜಾಬಿನಿಂದಲೇ ವಾಪಸ್ಸು ಕಳುಹಿಸಲಾಯಿತು.)

ತಕ್ಷಶಿಲಾ ಬಿಹಾರಿನಲ್ಲಿತ್ತು.” : (ವಾಸ್ತವವಾಗಿ Taksasilaತಕ್ಷಶಿಲಾ ಪಾಕಿಸ್ತಾನದಲ್ಲಿದೆ)

ಎನ್‌ಡಿಎ ಆಡಳಿತದಲ್ಲಿ ಭಾರತದ ಅಭಿವೃದ್ಧಿ ಸೂಚ್ಯಾಂಕ ಶೇಕಡ 8.4 ರಷ್ಟಿತ್ತು.” : (ವಾಸ್ತವವಾಗಿ ಎನ್‌ಡಿಎ ಆಡಳಿತದಲ್ಲಿ ಭಾರತದ ಅಭಿವೃದ್ಧಿ ಸೂಚ್ಯಾಂಕ ಶೇಕಡ 6 ಕ್ಕಿಂತಲೂ ಕಡಿಮೆ ಇತ್ತು.)

ನೆಹರೂ ಅವರು ಸರ್ದಾರ್ ಪಟೇಲರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿರಲಿಲ್ಲ. “: (ವಾಸ್ತವವಾಗಿ ಡಿಸೆಂಬರ್ 15, 1950 ರಂದು ಜರುಗಿದ ಅಂತ್ಯಕ್ರಿಯೆಯಲ್ಲಿ ಪ್ರಧಾನಮಂತ್ರಿ ನೆಹರೂ ಮತ್ತು ರಾಷ್ಟ್ರಪತಿ ರಾಜೇಂದ್ರಪ್ರಸಾದ್ ಭಾಗವಹಿಸಿದ್ದರು.)

ಮೋದಿಯು ಗುಜರಾತ್‌ನಲ್ಲಿ ಮುಸ್ಲಿಂ ಶಾಲೆಯ ವಿಧ್ಯಾರ್ಥಿ/ ವಿಧ್ಯಾರ್ಥಿನಿಯರಿಗೆ ಸ್ಕಾಲರ್‌ಶಿಪ್ ಅನ್ನು ನಿರಾಕರಿಸಿದ್ದಾನೆ. ಅಲ್ಲಿ ಅಂತರ್ಜಾತಿ ವಿವಾಹವಾಗಬೇಕಾದರೆ, ಮತಾಂತರಗೊಳ್ಳಬೇಕಾದರೆ ಕಠಿಣ ಕಾನೂನುಗಳನ್ನು ಪಾಲಿಸಬೇಕು. ಅಲ್ಲಿ ಮತಾಂತರಗೊಳ್ಳಬೇಕಾದರೆ ಮೊದಲು ಸರ್ಕಾರದ ಅನುಮತಿ ಪಡೆದಕೊಳ್ಳಬೇಕು.

— (ಕೃಪೆ : ಔಟ್‌ಲುಕ್, 11 ನೇ ನವೆಂಬರ್, 2013)

ಉತ್ತರಪ್ರದೇಶದಲ್ಲಿ ಮಾತನಾಡುತ್ತ ರಾಹುಲ್ ಗಾಂಧಿ “ಮುಝಫರ್ ನಗರದಲ್ಲಿ ಹತಾಶಗೊಂಡ ಮುಸ್ಲಿಂ ಯುವಕರನ್ನು ದುರ್ಬಳಕೆ ಮಾಡಿಕೊಳ್ಳಲು ಐಎಸ್‌ಐ ಸಂಚು ನಡೆಸಿದೆ” ಎಂದು ಹೇಳಿದಾಗ ಇದೇ ಮೋದಿ ರಾಹುಲ್ ಗಾಂಧಿಯ ವಿರುದ್ಧ ಹಿಗ್ಗಾಮುಗ್ಗಾ ದಾಳಿ ನಡೆಸಿ ಇದು ಅಲ್ಪಸಂಖ್ಯಾತರಿಗೆ ಮಾಡಿದ ಅವಮಾನ ಎಂದು ಕೂಗಾಡಿದ. ಇದು ಯಾವ ಬಗೆಯ ಓಲೈಕೆ?? ಇದು ಆರೆಸಸ್ ಅನ್ನು ಕೋಪಗೊಳಿಸಿತ್ತು ಸಹ. ನಂತರ ಮೋದಿ ಈ ವಿಷಯದ ಕುರಿತಾಗಿ ಬಾಯಿ ಬಿಚ್ಚಲಿಲ್ಲ.
ಮಂದಿರಕ್ಕಿಂತಲೂ ಶೌಚಾಲಯಗಳ ಅವಶ್ಯಕತೆ ಇದೆ ಎಂದು ಬಾಯಿತಪ್ಪಿ ಮೊದಲ ಬಾರಿಗೆ ನಿಜ ನುಡಿದ ನರೇಂದ್ರ ಮೋದಿಗೆ ಆರೆಸಸ್ ಚೆನ್ನಾಗಿಯೇ ತರಾಟೆಗೆ ತೆಗೆದುಕೊಂಡಿದೆ. ನಂತರ ಇದರ ಕುರಿತಾಗಿ ಮೋದಿ ಎಲ್ಲಿಯೂ ಮಾತನಾಡಿಲ್ಲ. ಮತ್ತೆ ಹಿಂದೂ ರಾಷ್ಟ್ರೀಯತೆಗೆ ಮರಳಿದ್ದಾನೆ.

ಕಳೆದ ತಿಂಗಳು ಬಿಜೆಪಿ ಪಕ್ಷದ ನಾಯಕರು ತಮ್ಮಲ್ಲೂ ಒಳಗೊಳ್ಳುವಿಕೆಯ ತತ್ವವಿದೆ ಎಂದು ಮಾರ್ಕೆಟಿಂಗ್ ಮಾಡಲು ರ್‍ಯಾಲಿಗಳಲ್ಲಿ ಮುಸ್ಲಿಂರನ್ನು ಕರೆದುತಂದು ಅವರಿಗೆ ಸ್ಕಲ್ ಟೋಪಿ ಮತ್ತು ಬುರ್ಖಾಗಳನ್ನು ಹಂಚಿದರು. ಇದು ಆರೆಸಸ್ ಅನ್ನು ಕೆಂಗಣ್ಣಾಗಿಸಿತು. ನಂತರ ಈ ಪ್ರಾಜೆಕ್ಟ್ ಅನ್ನೇ ಕೈಬಿಡಲಾಯಿತು. ಅಷ್ಟೇಕೆ ಮೊನ್ನೆ ಭೂಪಾಲ್‌ನಲ್ಲಿ ನಡೆದ ಸಮಾವೇಶದಲ್ಲಿ ಮುಸ್ಲಿಂರನ್ನು ಒಳಗೆ ಬಿಡಲೇ ಇಲ್ಲ. ಪ್ರವೇಶದ್ವಾರದಿಂಲೇ ಹಿಂದಕ್ಕೆ ಕಳುಹಿಸಲಾಯಿತು.

ಆರೆಸಸ್ ಮೋದಿಯನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಬಯಸಿದರೆ ಈ ಮೋದಿ ಬಂಡವಾಳ ಹೂಡಿಕೆಯ ಮಾರ್ಕೆಟ್ ತತ್ವ, ಕೇವಲ ಕೈಗಾರಕೋದ್ಯಮಿಗಳಿಗೆ ಮಾತ್ರ ರತ್ನಗಂಬಳಿ ಹಾಸುವ ಆರ್ಥಿಕ ತತ್ವ ಮತ್ತು ಹಿಂದುತ್ವ ಎನ್ನುವ ಎರಡು ಕುದುರೆಯನ್ನೇರಲು ಹೊರಟಿದ್ದಾನೆ. ಇನ್ನು ಬಿಜೆಪಿ ಎನ್ನುವ ರಾಜಕೀಯ ಪಕ್ಷದ ಸ್ಥಿತಿ ಕರಣಾಜನಕ. ಇಂದು ಅದು ರಾಜಕೀಯ ಪಕ್ಷವಾಗಿ ತನ್ನ ಇರುವಿಕೆಯೇ ಪ್ರಶ್ನಾರ್ಹವಾಗಿರುವುದು ನಿಜಕ್ಕೂ ಒಂದು ದುರಂತ.

ಇನ್ನೂ ಸಂಪೂರ್ಣವಾಗಿ ತನ್ನ ಸಿದ್ಧಾಂತಗಳ ಮೆಟ್ಟಿಲುಗಳ ಮೇಲೆ ಅಧಿಕಾರ ಹಿಡಿಯಲು ಆರೆಸಸ್ ವಿಫಲಗೊಂಡಿರುವುದರಿಂದ ಅದರ ವಿದೇಶಾಂಗ ನೀತಿಗಳ ಕುರಿತಾಗಿ ಇನ್ನೂ ಸ್ಪಷ್ಟ ಚಿತ್ರಣ ದೊರೆತಿಲ್ಲ. ಸದ್ಯಕ್ಕೆ ಅದು ಓಬಿರಾಯನ ಕಾಲದ ವಾಜಪೇಯಿಯವರ ಮುತ್ಸದ್ದಿತನದ ರಾಜಕಾರಣವನ್ನೇ ನೆಚ್ಚಿದಂತಿದೆ. ಆದರೆ ನೆರೆಯ ಮುಸ್ಲಿಂ ರಾಷ್ಟ್ರಗಳ ಕುರಿತಾಗಿ ಮಾತ್ರ ಇವರ ವಿದೇಶಾಂಗ ನೀತಿ ಸ್ಪಷ್ಟವಾಗಿದೆ. ಅದು ಹಿಂದಿನ ಕಾಲದ ರಾಜ್ಯಾಡಳಿತದ ಮಾದರಿ. ಅಂದರೆ ಮೋದಿ ಕ್ಷತ್ರಿಯ ರಾಜ. ಬಿಜೆಪಿ ಕ್ಷತ್ರಿಯ ವಂಶ. ವಿಎಚ್‌ಪಿ, ಭಜರಂಗದಳ ಈ ಕ್ಷತ್ರಿಯ ವಂಶದ ಸೇನಾಪಡೆಗಳು. bhagvat-gadkari-modiಸಾವಿರಾರು ವರ್ಷಗಳ ಹಿಂದಿನ ಕಾಲದಂತೆಯೆ ಈ ಕಾಲದಲ್ಲೂ ಕಾಲಾನುಕಾಲಕ್ಕೆ ಶತೃಗಳೊಂದಿಗೆ ಯುದ್ಧಗಳನ್ನು ನಡೆಸುತ್ತಾ ಅವರ ಸಾಮ್ರಾಜ್ಯಗಳನ್ನು ಕಬಳಿಸುತ್ತಾ “ಅಖಂಡ ಹಿಂದೂ ರಾಷ್ಟ್ರ”ದ ಸ್ಥಾಪಿಸುವುದು. ಶತೃರಾಷ್ಟ್ರಗಳನ್ನು ಸದಾಕಾಲ ಭೀತಿಯಲ್ಲಿಡಲು ನಿಯಮಿತವಾಗಿ ಅಣುಪರೀಕ್ಷೆಯನ್ನು ನಡೆಸುತ್ತಿರುವುದು ಮತ್ತೊಂದು ಮಹತ್ವದ ನೀತಿಯಾಗಿರುತ್ತದೆ.

ದೇಶದ ಭವಿಷ್ಯದ ನಾಯಕನೆಂದು ಅಭಿಮಾನಿಗಳಿಂದ ಹೊಗಳಿಸಿಕೊಳ್ಳುತ್ತಿರುವ ಮೋದಿಯ ಬಾಲಿಶ, ತರ್ಕರಹಿತ, ಅನಾಯಕತ್ವದ ಉದಾಹರಣೆಗಳ ನಿದರ್ಶನಕ್ಕಾಗಿ ಮೇಲಿನ ಘಟನೆಗಳನ್ನು ಬರೆಯಬೇಕಾಯಿತು.

ಮಾನವೀಯತೆ, ಸೆಕ್ಯುಲರಿಸಂ ಕುರಿತಾಗಿ ಬಿಟ್ಟುಬಿಡಿ, ಕನಿಷ್ಟ ಮಟ್ಟದ ಆದರ್ಶಗಳು, ದೂರದರ್ಶತ್ವ, ಕನಸುಗಳು ಇಲ್ಲದ ಈ ಮೋದಿಯೆಂಬ ರಾಜಕಾರಣಿಯ ದರ್ಪ ಮತ್ತು ಬಾಲಿಶತನ ಮುಂದೊಂದು ದಿನ ಆತನಿಗೇ ಮುಳುವಾಗಲಿದೆ. ಇದು ದೇಶವನ್ನಾಳ ಬಯಸುವ ಆರೆಸಸ್ ಮತ್ತು ಮೋದಿಯವರ ಡೇಂಜರಸ್ ಆದ ಹುಚ್ಚು ಅವತಾರಗಳು. ಈ ಫ್ಯಾಸಿಸ್ಟರು ದೇಶವನ್ನು ಒಂದು ಮಕ್ಕಳಾಟಿಕೆ ಎಂದು ಭಾವಿಸಿದಂತಿದೆ.

ಇವಕ್ಕೆಲ್ಲ ಮೋದಿಯ ಸಮರ್ಥಕರು ಬಳಿ ಉತ್ತರಗಳಿವೆಯೇ ??

ಆರೆಸಸ್ ಮೋದಿಯನ್ನು ಹೇಗೆ ತನ್ನ ಮುಷ್ಟಿಯೊಳಗೆ ಇಟ್ಟುಕೊಳ್ಳುತ್ತದೆ? ಕಡೆಗೆ ಈ ಮೋದಿ ಎರಡು ಧ್ರುವಗಳಂತಿರುವ ಆರೆಸಸ್ ಮತ್ತು ತನ್ನ ಜಾಗತೀಕರಣದ ಮಾರ್ಕೆಟ್ ಸಿದ್ಧಾಂತವನ್ನು ಹೇಗೆ ಬ್ಯಾಲೆನ್ಸ್ ಮಾಡುತ್ತಾನೆ?? ಕಡೆಗೆ ಪ್ರಜಾಪ್ರಭುತ್ವವನ್ನು ಗೌರವಿಸುತ್ತೇವೆ ಎಂದೇ ವಚನ ನೀಡಿ ಇಂಡಿಯಾದಲ್ಲಿ ರಾಜಕಾರಣ ಮಾಡುತ್ತಿರುವ ಈ ಬಿಜೆಪಿ ಪಕ್ಷ ಆರೆಸಸ್ ಮತ್ತು ಮೋದಿಯನ್ನು ಹೇಗೆ ನಿಭಾಯಿಸುತ್ತದೆ?? ಇದು ಯಕ್ಷಪ್ರಶ್ನೆ.

ಆದರೆ ದೇಶ ಈ ಫ್ಯಾಸಿಸ್ಟ್ ಗುಂಪನ್ನು ಹೇಗೆ ನಿಭಾಯಿಸುತ್ತದೆ ?? ನಾವೆಲ್ಲಾ ಬಿಜೆಪಿ ಮತ್ತು ಮೋದಿಯ ಗುಮ್ಮನನ್ನು ತೋರಿಸಿ ಸಧ್ಯಕ್ಕೆ ಕಾಂಗ್ರೆಸ್ ಮಾತ್ರ ಇವರಿಗೆ ಪರ್ಯಾಯವೆಂದುಕೊಳ್ಳುವ ಮನಸ್ಥಿತಿಯಿಂದ ಹೊರಬಂದು ಹೊಸ ನುಡಿಕಟ್ಟು, ಹೊಸ ಚಿಂತನೆಗಳನ್ನು, ಪರ್ಯಾಯ ಸಾಂಸ್ಕೃತಿಕ ಮಾದರಿಗಳನ್ನು ರೂಪಿಸಲು ಪ್ರಯತ್ನಿಸಿದರೆ ಇದು ಕ್ಲಿಷ್ಟಕರವೂ ಅಲ್ಲ. ಜಟಿಲವೂ ಅಲ್ಲ.

“ಮುಗಿಲ ಮಾಯೆಯ ಕರುಣೆ” – ಗಾಂಧಿ ಜಯಂತಿ ಕಥಾ ಸ್ಪರ್ಧೆ 2013 ರ ಬಹುಮಾನಿತ ಕತೆ

– ಪಿ. ಮಂಜುನಾಥ

ಅದು ಮುಂಗಾರಿನ ಹಗಲಾದರೂ ಸೈತ ಸೂರ್‍ಯ ಕರುಣೆಯಿಲ್ಲದಾಂವಾಗಿ ನೆತ್ತಿ ಮ್ಯಾಲ ಸುಡೊ ಕೆಂಡದ್ಹಂಗ ದುಮುಗುಡುತ್ತಿದ್ದ. ಜಿದ್ದಿಗಿ ಬಿದ್ದಂಗ ಗಾಳಿ ’ಭರ್ರೋ…’ ಅಂತ ಕತ್ತಿ ಬೀಸಿ, ಆಗಾಗ ಅಲ್ಲೊಂದು ಇಲ್ಲೊಂದು ಕಾಣಿಸೋ ಮೋಡದ ತುಣಕುಗಳನ್ನ ಚೂರು ಚೂರು ಮಾಡಿ ತೇಲಿಸಿ ಹಾಕುತ್ತಿತ್ತು. drought-in-our-land-4444-jessie-meierಗಾಳಿಯ ಹೊಡತಕ್ಕ ಸಿಕ್ಕ ಸಣ್ಸಣ್ಣ ಮೋಡೆಲ್ಲಾ ರೂಪಾ ಪಡೆಯೋ ಮೊದಲಽಽ ಇಲ್ಲವಾಗೋ ಭ್ರೂಣಗಳ ತರ ಮರೆಯಾಗಿ ಹೊಂಟಿದ್ದವು. ಊರು ಕೇರಿಯ ತುಂಬೆಲ್ಲ ಸುಡುಬಿಸಿಲ ಮತ್ತು ಬಾರದ ಮಳೆಯದ್ದೆ ಮಾತು-ಕತಿಗಳು ವ್ಯಾಪಿಸಿ ಜೀವಿಗಳ ಕಣ್ಣು, ತಲಿ ಮೊದಲಾಗಿ ಇಡೀ ದೇಹವೆಂಬೋ ದೇಹವೇ ಮುಗಿಲಿನ ಕಡಿಗಿ ದಿಗಿಲುಗೊಂಡು ದಿಟ್ಟಿಸೋ ಕಾಯಕದೊಳಗ ತೊಡಗಿದ್ಹಂಗಾಗಿತ್ತು. ಆ ಹೊತ್ತಿಗೆಲ್ಲ ಹತ್ತಾರು ಕಾರ್ಯಚಟುವಟಿಕೆಗಳ ಗದ್ದಲದಾಗ ಹುಗಿದು ನಿರತರಾಗಿರಬೇಕಾಗಿದ್ದ ಮಂದಿ ನೀರಿನ ಅಪರಂಪಾರ ವ್ಯಾಮೋಹಕ್ಕ ಈಡಾಗಿ ದಿಕ್ಕುಗಾಣದ ಹುಚ್ಚರಾಗಿದ್ದರು. ನೀರಽಽ ಒಂದು ಕನಸಾಗಿ ಅಥವ ಕನಸೆಲ್ಲ ನೀರಿನ್ಹಂಗಾಗಿ ಜೀವಜಲದ ತಪನವೊಂದು ಶಾಶ್ವತ ತೊಡಕಾಗಿಬಿಡೊ ಆತಂಕದೊಳಗ ಹೈರಾಣಾಗಿದ್ದರು. ಮಣ್ಣೆತ್ತಿನ ಅಮಾಸಿ ಸರದು ಏರಡನೇ ಗುಳ್ಳವ್ವ ಸಡಗರವಿಲ್ಲದ ಬಂದು ಕುಂತಿದ್ದಳು. ಮುಂಗಾರು ಬಂಗಾರದ್ಹಂಗ ತುಟ್ಟಿಯಾಗಿತ್ತು. ಮುಗಿಲ ಕಣ್ಣುಗಳು ರೆಪ್ಪಿ ಬಿಡಿಸಾಕ ಲೆಕ್ಕ ಹಾಕಿದ್ದವು. ಬೊಗಸೀಲೆ ಪ್ರೀತಿ ಸುರಿಸೊ ಮಿರಗಾ ಮಳಿಯ ಮೆರಗು ಸಿಗಲಾರದ ಭೂಮಿ ಲೂಟಿಯಾದ ಕ್ವಾಟಿಯ್ಹಂಗ ಭಣಭಣ ಅಂತಿತ್ತು. ನೆಲದವ್ವನ ಮಾರಿಮ್ಯಾಲ ಹಸಿರಿನ ನಗಿನವಿಲ ಕುಣಿತದ ಕನಸನ್ನ ಈ ಊರಿನ ಮಂದಿ ಮರತು ನೂರಾರು ವರ್ಷ ಕಳದ್ಹಂಗ ಕುಂತಿದ್ದರು. ಬೆಳಿಯೋ ಬೆಳಿಗಿ ನೀರಿಲ್ಲದಿದ್ದರೂ ನೆಡೆದೀತು ಆದರಽಽ ಹೇಲು, ಉಚ್ಚಿ, ಬೆವರು, ಪಿಸುರು, ಪಿಚ್ಚು, ಸಂಭೋಗ ಮೊದಲಾದ ದೇಹ ಜಂಜಡಗಳಿಂದ ಕೊಳಕಾಗೊ ಮೈಯನ್ನ ತೊಳೆಯೂತ ತಮ್ಮ ಮತ್ತು ದನಕರುಗಳ ದಾಹ ತೀರಿಸೊ ಈ ನೀರೆಂಬ ಸರಕನ್ನ ಎಲ್ಲಿಂದ ಹೆಂಗ ಶೋಧಿಸಿ ತರೋದು? ಎನ್ನೊ ಚಿಂತಿ ಇದಿಯಾಗಿ ಕಾಡಿ ಜಡಗೊಂಡಿದ್ದರು.

ಮಳಿ ಬರದಿದ್ದಾಗ ಪ್ರತಿಸಲ ಮಾಡುವಂಗ ಕತ್ತಿ ಮದುವಿ ಮಾಡಿ ಮೆರವಣಿಗಿ ಮಾಡಿದ್ದಾತು. ವಾರಾ ಹಿಡಿದು ವೃತ ಆಚರಿಸಾಕೂ ಸುರುವಾಗಿತ್ತು. ಸ್ವಾಮಾರಕ್ಕೊಮ್ಮೆ ಊರು-ಕೇರಿಯ ಎಲ್ಲ ಮನಿಯಾಗೂ ರೊಟ್ಟಿ ಬಡಿಯೋದು ನಿಲ್ಲಿಸಿ, ದಗದ-ಕೆಲಸಗಳಿಗಿ ಹೋಗದಽ ಪಾಲಿಸೋ ಕ್ರಿಯೆಯೊಳಗ ಬಿದ್ದು ಬಸವಣ್ಣ, ಅರಣ್ಯಸಿದ್ದ, ಲಗುಮವ್ವ, ಯಲ್ಲವ್ವ, ಕರೆವ್ವ ಮೊದಲಾದ ದೇವರ donkeys_wedding_rainsಗುಡಿಗಳೊಳಗ ದೈವದ ಚಾಕರಿಗಿ ನಿಂತರು.

ಹೀಂಗ ಎಲ್ಲಾ ಖಟಿಪಿಟಿಗೋಳು ಮುಗಿಲಿನ ಕರುಣಿಗಿ ದಕ್ಕದ ಇರೋ ಆ ಸುಡುಬಿಸಿಲ ಹಗಲೊಳಗ ’ನಿಜಗುಣಿ’ ಎಂಬಾಂವ ಮಳಿಗಿ ಕುಂಡತಾನ ಅಂಬೋ ಸುದ್ದಿ ಬೀಸೋ ಗಾಳಿಗೂಡಿ ಊರೆಲ್ಲ ಸುತ್ತಿ ಸುಳದಾಡಿತು. ಅದು ಓಣಿಗೊಂದು-ಕೇರಿಗೊಂದು, ಹಾದಿಗೊಂದು-ಬೀದಿಗೊಂದು ಕತಿಗಳಾಗಿ ಚಿಮ್ಮಿ ಅಗಸಿಕಟ್ಟಿ ಮ್ಯಾಲ ಕುಂಡಿಯೂರಿಕೊಂಡು ಕುಂತಾವರ ಕಿವಿ ಮುಟ್ಟೋ ವ್ಯಾಳ್ಯಾಕ್ಕ ’ಯಾವ ನಿಜಗುಣಿ?’ ಎಂಬೋದು ಗೊಂದಲಕ ಬಿದ್ದಾಂಗಾತು.

ಅಗಸಿಕಟ್ಟಿಯ ಬಸರಿಗಿಡದ ನೆಳ್ಳಿಗಿ ಕುಂತ ಹೂಗಾರ ರಾಮಜ್ಜ, ಸಿಂಗಳೇರ ನಿಂಗಪ್ಪಜ್ಜ ಮತ್ತು ತಳವಾರ ಭೀಮಪ್ಪಜ್ಜರಂತ ಹತ್ತಾರು ಹಿರೇರು ತಮ್ಮ ಕಾಲದಾಗಿನ ಮಳಿಯ ವರ್ಣನಿಯ ಕತಿಗಳನ್ನ ಬಿಚ್ಚಿ ಹರಿವಿಕೊಂಡ ಅವುಗಳ ರೆಕ್ಕಿಪಕ್ಕಗಳ ಮ್ಯಾಲ ಕುಂತು ಹಾರಾಟಕ್ಕಿಳಿದ್ಹಂಗ ಮಾತಾಡ್ತಿದ್ದರು. ಅಂದಿನ ಹಸಿರು, ಹರಿಯೊ ಮಡ್ಡಿಹಳ್ಳ, ಅದರಚಿಕಡಿಯ ಅಗಮ್ಯವೆನಿಸೋ ಸಂಪವ್ವನ ಮಾಳ, ಮಾಳದಾಗಿನ ಹಣ್ಣು ಹಂಪಲಗಳ ಮತ್ತು ತಮ್ಮ ಶ್ರಮದ ದಣಿವಿರದ ಕತಿಗಳನ್ನ ಮೆಲಕಾಡಿಸುತ ಹೊಸ ತೆಲೆಮಾರಿನ ಹುಡಗೋರಿಗಿ ದಾಟಿಸುತ್ತಿದ್ದರು. ಅವರು ಹೇಳಾಕ್ಹತ್ತಿದ್ದ ಸಂಗತಿಗೋಳು ಬಸರಿಗಿಡದ ನೆಳ್ಳಿನೊಳಗ ಕೂಡಿ ತಂಪೆನಿಸಿದ್ದವು. ಐನಾರ ರಾಚ, ದಡ್ಡ್ಯಾರ ರಾಯಪ್ಪ, ಬದನಿಕಾಯಿ ಬಾಳೂ ಮತ್ತು ದಗದಿಲ್ಲದ ಕುಂತಿದ್ದ ಊರುಕೇರಿಯ ಒಂದಿಷ್ಟು ಹುಡುಗೋರು ಹಿರೇರ ಕತಿ ಕೇಳತಾ ಗುಟಕಾ, ತಂಬಾಕು, ಬೀಡಿಗಳ ತಲುಬು ತೀರಿಸ್ಕೋಂತಿದ್ದರು. ಇದನ್ನೆಲ್ಲ ನೋಡತಾ ಅಗಸಿಕಟ್ಟಿಯ ಮೂಲಿಗಿ ಕುಂತಿದ್ದ ಹೊಟ್ಟಿ ಅಣ್ಣಪ್ಪ ಸ್ಟೈಲ್‌ಶೀರ್ ಸಿಗರೇಟ್ ಹಚ್ಚಿ ಸೇದಕೋಂತ, ಇತ್ತ ಇವರಕಡಿ ಕಿವಿಕೊಟ್ಟು ಅತ್ತ ಅಗಸಿಕಟ್ಟಿಗಿ ಹತ್ತಿಕೊಂಡಿದ್ದ ಹಾದಿಯಚಿಕಡಿಯ ಹೊಲಗೇರಿಯ ಕರೆವ್ವನ ಗುಡಿಯ ಬಾಜೂಕಿನ ಸಂದ್ಯಾಗ ಕಾಣತ್ತಿದ್ದ ಶೆರೇದ ಇಮಲವ್ವನ ಮನಿ ಕಡೇನ ದಿಟ್ಟಿಸೋದರೊಳಗ ಮಗ್ನ ಆಗಿದ್ದ.

ಅಂತಾ ಯೆಳೆದಾಗ ಮೋಡಕಾ ಸೈಕಲ್ಲನ್ನ ಧಢಾಡಿಸುತ್ತ ಬಂದ ಗಿಡ್ಡ ಮಾರೂತಿ ಗದ್ದ ಕೆರಕೋಂತ “ನಿಜಗುಣಿ ಮಳೀಗಿ ಕುಂಡರತಾನಂತರ್‍ಯೋ…” ಅಂದು ಹಲ್ಲು ಕಿಸಿದಿದ್ದ. ಅವನ ಸುದ್ದಿಗಿ ಅಗಸಿಕಟ್ಟಿ ಒಂಚಣ ಶಬುದ ಕಳಕೊಂಡಂಗ ನಿಂತು ಮರುಚಣದಾಗ ಕೌತುಕದ ಜತಿಗೂಡಿ ಚಲನಗೊಂಡಿತು.

ನಿಂಗಪ್ಪಜ್ಜ “ಯಾ ನಿಜಗುಣೀನೋ?” ಅಂತ ಮಾರಿ ಅಡಾಗಲ ಮಾಡಿ ಕೇಳಿದ್ದ.

ಮಾರೂತಿ ತನ್ನ ಹರಕು ಬರಕು ದನಿಯಾಗ “ನಿಜಗುಣಿ ಅಂದರ ನಿಜಗುಣೀನಽಽ…” ಅಂದು ಸೈಕಲ್ಹತ್ತಿ ಆವಾಜ್ ಮಾಡತ ಹೊಂಟ.

ಹೊಟ್ಟಿ ಅಣ್ಣಪ್ಪ “ಆ ಹಡಬಿಟ್ಟೀನಽ ಕೇಳ್ ಕಾಕಾ…! ಹುಲ್ಲಾಗ ನಾಯಿ ಹೇತಂಗ ಮಾತಾಡತಾನ” ಅಂದ. ಮಂದಿ ಗೊಳ್ಳೆಂದು ನಕ್ಕರು. ಸುಳಿದಾಡಿದ ನಗಿ ಮಳಿಗಿ ಕುಂಡರಾವನ ಗೂಢಾಚಾರದಾಗ ಕರಗಿತು.

ರಾಮಜ್ಜ “ಗೌನ್ನಾರ ನಿಜಗುಣಿಯಂತೂ ಕುಂದರೊ ಮನಸ್ಯಾ ಅಲ್ಲ. ಮನ್ನಿ ಅಂವ ಮಾಡಿದ ಕತೀನಽ ಹೆಚ್ಚಿನದೇತಿ…” ಅಂದ.

“ಅಂವಾ ಮೂಗಬಟ್ಟಿನ ನಾದಕ್ಕ ಬಿದ್ದಾಂವ, ಅಂವೇನ ಕುಂಡತಾನ ಖೋಡಿ. ಊರಿಗೆಲ್ಲ ಮೂಲಾದಾಂವ. ಅದ್ಯಾವಾಕಿ ಮ್ಯಾಲ ಮನಸ್ ಮಾಡ್ಯಾನ್ಯಾಂಬಲ್ಲ? ಆ ಟ್ಯಾಂಕರನ ಡ್ರೈವರ್ ಅಕೀನಽ ಯಾಕ್ ನೋಡಿದ್ನೋ? ಯಾಂಬಲ್ಲ…” ಎಂದ ಹುಚ್ಚ್ಯಾಗೋಳ ಬರಮಪ್ಪ ಗೌನ್ನಾರ ನಿಜಗುಣಿಯ ಮ್ಯಾಲ ಸಿಡಕ ಮಾಡಿದ್ದ.

ಮತ್ತ್ಯಾರೋ “ನೋಡಿರ ಏನಾತು? ಇಂವ್ಯಾಕ್ ಆ ಡ್ರೈವರ್‍ನ ದನಾ ಬಡದಂಗ ಬಡೀಬೇಕು? ನಾಕ್ ದಿವಸಕ್ಕೊಮ್ಮ್ಯರೆ ನೀರಿನ ಗಾಡಿ ಬರತಿತ್ತು. drought-kelly-stewart-sieckಬಡದದ್ದ ನೆವಾ ಆಗಿ ಈಗದೂ ಬರವಲ್ತು” ಅಂದರು.

ಹುಡುಗರು ಗೌನ್ನಾರ ನಿಜಗುಣಿಯ ಗಿರಾಕಿ ಚಂಪಿಯ ಕುರಿತೂ, ಟಾಕಿ ನೀರ ತುಂಬೋವಾಗ ಅಕೀನ ಮಳಮಳ ನೋಡಿ ನಿಜಗುಣಿಯಿಂದ ಖಡತಾ ತಿಂದ ಪಾಪದ ಡ್ರೈವರನ ಸಂಗತೀನೂ, ಅದರ ದೆಸಿಂದ ಸಂತಿಯೂರಿಂದ ನೀರಿನ ಗಾಡಿ ಬರೋದನ್ನ ನಿಲ್ಲಿಸಿದ ವಿಚಾರನೂ ಮಾತಾಡತಾ ಮುಳುಗಿದರು. ಹಿರಿತಲಿಗಳಂತೂ ಮಳೀಗಿ ಕುಂಡ್ರಾಂವನ ವಿಚಾರದಾಗಽ ಇದ್ದವು!

ಅಗಸಿಕಟ್ಟಿಯ ಇನ್ನೊಂದಂಡಿಗಿ ತೆರಕೊಂಡ ರಸ್ತಾ ಹೊಲಗೇರಿಯನ್ನು ಕೂಡುತ್ತಿತ್ತು. ಅದರ ಬಾಜೂಕಿನ ಮ್ಯಾಲಿನಕೇರಿಯ ಹಾದಿ ಹಿಡಿದು ಯಾರ ಜತಿಗೋ ಮೊಬಾಯಿಲಿನ್ಯಾಗ ಮಾತಾಡಿ ಮುಗಿಸುತ ಪಂಚಾಯ್ತಿ ಮೆಂಬರ್ ಅಕ್ಕ್ಯಾರ ಅಪ್ಸೂ ಸಾಹುಕಾರ ಬಂದು ಹಿರೇರು ಕುಂತಿದ್ದ ಜಾಗಕ್ಕ ಸನೇ ಮಾಡುತ್ತಿದ್ಹಂಗ ಭೀಮಪ್ಪಜ್ಜ ಮುದುಡಿ, “ನಮಸ್ಕಾರ್ರೀ…” ಅಂತ ಕೈಮುಗಿದ. ಸಾಹುಕಾರ ಎಲ್ಲಾರಿಗೂ ವಂದಿಸಿದ. ಹಿರೇರು ತುಸು ಸರದು ಅಂವಗ ಕುಂಡ್ರಾಕ ಜಾಗಾ ಮಾಡಿ ಕೊಟ್ಟರು. ಅಪ್ಸೂ ಸಾಹುಕಾರ ಇಜಾರ ಇಳಿಬಿಟ್ಟುಕೊಂಡು ಕುಂತು ನಿಂಗಪ್ಪಜ್ಜನಿಗೆ “ಕಾಕಾ ಸುದ್ದಿ ಗೊತ್ತಾತೇನ?” ಅಂತ ಕೇಳಿದ.

ನಿಂಗಜ್ಜ “ಯಾವುದಪಾ ತಮ್ಮ್ಯಾ?” ಅಂದ.

“ಅದಽ ಮಳೀಗಿ ಕುಂದ್ರಾಕ ನಿಜಗುಣಿ…” ಅಂತಿರುವಾಗ ಅಪ್ಸೂ ಸಾಹುಕಾರನ ಮಾತು ತಡದು,

“ಸುದ್ದಿ ಮುಟ್ಟೇತಿ. ಊರಾಗ ಮೂರ್ನಾಕ್ ಮಂದಿ ನಿಜಗುಣಿಗೋಳ ಅದಾರು. ಅದರಾಗ ಯಾ ನಿಜಗುಣಿ ಅನ್ನೋದಽಽ ಗೊತ್ತಾಗಲಿಲ್ಲ” ಅಂದು ನಿಂಗಪ್ಪಜ್ಜ ನಕ್ಕ.

“ತಳವಾರ್ರ ನಿಜಗುಣಿ!” ಅಂತ ಸಾಹುಕಾರ ಉಸುರಿದಾಗ ಅಗಸಿಕಟ್ಟಿಯ ಮಂದಿಗಿ ನಿಚ್ಚಳಾತು. ಅದಕ್ಕೆಲ್ಲಾರು ಗುಜುಗುಜು ಸುರುಮಾಡಿದರು. ಭೀಮಪ್ಪಜ್ಜ ಕೆಳಗ ತೆಲಿ ಮಾಡಿ ನೆಲ ನೋಡಾಕ ಹತ್ತಿದ. ಹೊಲಗೇರಿಯ ಮನಿಶ್ಯಾ ಮಳಿಗಿ ಕುಂಡ್ರೊ ವಿಷಯ ಮಂದಿಯ ಮಾತಿನ ಹೊಟ್ಟಿಗಿ ಅನ್ನ ಸಿಕ್ಕಂಗಾತು.

ಅಪ್ಸೂ ಸಾಹುಕಾರ “ನಾನೂ ಕುಂಡ್ರು ಛೊಲೋ ಆಗಲಿ ಅತ ಹೇಳೇನಿ. ನಮ್ಮ ಕೈಲೆ ಏನ್ ಯವಸ್ಥಾ ಆಕ್ಕೈತಿ ಮಾಡ್ತೇವು ಅಂದೇನಿ” ಅಂದ.

“ಛೊಲೋ ಆತು ಬಿಡ್…” ಅಂತಂದ ನಿಂಗಪ್ಪಜ್ಜನ ಮಾತು ಮುಗಿಯೋ ಮೊದಲಽ ರಾಮಜ್ಜ “ಒಂದ್ಮಾತು ಊರಾವರಾನೂ ಕೇಳೋದಿತ್ತು” ಅನ್ನುತ ಮಕ ಹಿಗ್ಗಿಸಿದ

ಇದಕ್ಕ ಪುಸುಲಾಯಿಸಿದಂಗ ಹೊಟ್ಟಿ ಅಣ್ಣಪ್ಪನೂ ಅಪ್ಸೂ ಸಾಹುಕಾರಗ “ಹೌಂದೋ ಮಾವ, ಒಂದ ಸಲಿ ದೈವದ ಮುಂದ ಇಡಬೇಕಿತ್ತಲ್ಲ” ಅಂದ. ಅಪ್ಸೂ ಸಾಹುಕಾರಗ ಸಿಟ್ಟು ಬಂತು. ಅದನ್ನ ಒಳಗಽ ನುಂಗಿ “ದೈವನ್ನ ಏನ ಕೇಳೋದು? ಅಂವೇನ ಊರಿಗಿ ಕೆಟ್ಟ ಮಾಡಾಕ ಹೊಂಟಾನ. ಊರಿಗಿ ಛೊಲೊ ಆಗೋದಾದರ ಕೆಳಗಿನ ಜಾತಿಯಾಂವೇನು? ಮ್ಯಾಲಿನ ಜಾತಿಯಾಂವೇನು?” ಎಂದು ಕೇಳಿದ.

ಈ ನಡುವ ಅಲ್ಲಿದ್ದ ಉಳದ ಮಂದಿ ಇವರನ ನೋಡತಾ ಮಾತಿನ ಅರ್ಥ ಹುಡುಕತಾ ಕುಂತರು. ಹ್ವಾದ ವಾರ ಅಣ್ಣಪ್ಪ ಕತ್ತಿ ಮದುವೀನ ಮುಂದ ನಿಂತು ಮಾಡಿಸಿದ್ದ. ಈಗ ಅಪ್ಸೂ ಸಾಹುಕಾರನಽಽ ನಿಜಗುಣೀನ ಎಬ್ಬಿಸಿ ಕುಂಡಿಸಿರಬೇಕು. ಅಣ್ಣಪ್ಪಗೂ ಅಪ್ಸೂಗೂ ಆಗಿ ಬರಂಗಿಲ್ಲ. ಊರಾಗ ಏನಾರ ನಡದ್ರರ ಇಬ್ಬರೂ ಜಿದ್ದಿಗಿ ಬಿದ್ದಾಂಗ ಮಾಡತಾರು. ಒಬ್ಬರ ಕೆಲಸಕ್ಕಿನ್ನೊಬ್ಬರು ಅಡ್ಡಗಾಲು ಹಾಕುತ್ತಿದ್ದರು.

ಹಿಂದಕ ಪಂಚಾಯತಿ ಎಲೆಕ್ಷನ್ನಿಗಿ ಅಪ್ಸೂ ಸಾಹುಕಾರ ನಿಂತಿದ್ದ. ಅವನ ಇದಿರಾಗಿ ಅಣ್ಣಪ್ಪನೂ ನಿಂತಿದ್ದ. ಬಾಜೂಕಿನ ಊರಿಲ್ಲಿನ ಮೂರು ವಾರ್ಡುಗಳನ್ನು ಬಿಟ್ಟರೆ ಈ ಊರಿಗಿದ್ದದ್ದು ಎರಡಽ ವಾರ್ಡಗಳು. ಒಂದ ವಾರ್ಡಿನ್ಯಾಗ ಸಾಹುಕಾರನ ಬಲಗೈಯ್ಹಂಗಿದ್ದ ದಡ್ಡ್ಯಾರ ಕೆಂಚಪ್ಪನಿದಿರಿಗ್ಯಾರೂ ಇಲ್ಲದ ಆಯ್ಕಿಯಾಗಿದ್ದ. ಇತ್ತ ಇನ್ನೊಂದು ಕಡೆ ಅಣ್ಣಪ್ಪ ಎಂಥಾ ಸರ್ಕಸ್ ಮಾಡಿದರೂ ಸುದ್ದಾ ಲಗಾಟಿ ಹೊಡೆದಿದ್ದ. ಇದರ ದೆಸಿಂದ ಈರ್ಷೇಕ ಬಿದ್ದು ಬಾರಾಭಾನಗಡಿ ನಡದು ಊರೊಳಗ ದೋಪಾರ್ಟಿ ಆಗಿತ್ತು.

ಅಪ್ಸೂ ಸಾಹುಕಾರ ಆರಿಸಿಬಂದ ಮ್ಯಾಲ ಅಣ್ಣಪ್ಪ ಇಟಕೊಂಡಿದ್ದ ಶೆರೇದ ಇಮಲವ್ವನ ಶೆರೆ ಮಾರೋ ದಂಧೆಕ್ಕ ಧಾಢಿ ಬಂತು. ತುಡುಗಿನಿಂದ ಶೆರೆ ಮಾರೋ ಆ ಹೆಂಗಸ್ಸನ್ನ ಸಾಹುಕಾರನಽ ಹಿಡಿಸಿಕೊಟ್ಟ ಅಂತ ಹುಟ್ಕೊಂಡ ಕತೀನೂ, ಸಾಹುಕಾರನ ಮಗಳು ಶಾಂತಾನ ಹಿಂದ ಬಿದ್ದ ಮುಸಲ್ಲರ ಗುಲ್ಲನಿಗಿ ಅಣ್ಣಪ್ಪ ಸಪೋರ್ಟ ಮಾಡೋ ಸುದ್ದೀನೂ ಮತ್ತ್ಯಾವವೋ ಕತಿಯುಪಕತಿಗಳ ಗದ್ದಲದಾಗ ಭಾಳೊತ್ತು ಸಿಕ್ಕ ಮಂದಿ ಎಲ್ಲಾನೂ ಮರೆತ್ಹಂಗಿತ್ತು. ಕೊನಿಗಿ ಅಪ್ಸೂ ಸಾಹುಕಾರ “ಆದ್ರ ಆತು ಹೊತ್ತು ಮುಣಗಿಸಿ ಮಂದೀನ ಕೂಡಿಸಿ ನಿಜಗುಣಿ ಮಳೀಗಿ ಕುಂಡ್ರೊ ವಿಷಯ ತಿಳಿಸಿದರಾತು” ಅಂದಾಗ ಮಂದಿ ನಿಶ್ಯಬ್ದದ ಪಾದಕ ಶರಣೆಂದರು.

***

ಗಡ್ಡ ಬಿಟಕೊಂಡ ನಿಜಗುಣಿ ಗೆದ್ದಲ್ಹತ್ತಿದ್ದ ಕಂಬಕ್ಕೊರಗಿ ನಿವಾಂತ ಕುಂತಿದ್ದ. ಅದನಿದನ ದಗದಾ ಮಾಡತಾ ವಟಾಡಸತಾ ಶಾಣವ್ವ ಆಗಾಗ ಗಂಡನ ಕಡಿ ನೋಡತಾ ನೂರೆಂಟು ಇಚಾರದಾಗ ಬಿದ್ದಿದ್ದಳು. ಮೈದುನ ಪರಸೂ ನಿಜಗುಣಿಯ ಲೋಕಕಲ್ಯಾಣದ ಸಂಗತೀನ ಪೋನ ಮಾಡಿ ತಿಳಿಸಿದ್ದ. ತವರೂರು ಕೊಟಬಾಗಿಗಿ ದನಗೋಳನೆಲ್ಲ ಬಿಟ್ಟು ಒಂದು ವಾರ ಇದ್ದು ಜಾತ್ರಿ ಮುಗಿಸ್ಕೊಂಡು ಬಂದರಾತು ಎಂದು ಹ್ವಾದಾಕಿ ಪರಸೂನ ಪೋನ್ ಬರೂತ್ಲೆ ನಿತ್ರಾಟಿಗೀಲೆ ನಿಂತ ಹೆಜ್ಜಿ ಮ್ಯಾಲ ಹೊಂಟ್ಟೆದ್ದು ಬಂದಿದ್ದಳು.

ಜಾತ್ರಿಗಿ ನಿಲ್ಲಲಾಗದ ಸಿಟ್ಟಿಗೋ, ಗಂಡ ಏನರೆ ಅಪರಾ-ತಪರಾ ಮಾಡಿಕೊಂಡಾನನ್ನೋ ಚಿಂತಿಗೋ ಆಯಾಸಾದ ಮನಸ್ಸಿನಿಂದ ಶಾಣವ್ವ ಗಂಡನಿಗಿ ಸೊಲ್ಪ ಸಿಡುಕಿಲೆ, “ಅಲ್ಲೋ ಮಾರಾಯನ ನೀನಽ ಮಳೀಗಿ ಕುಂಡ್ರಬೇಕಂತ ಏನೈತಿ? ಮುಂದಿನವಾರ ಪಂಚಮಿ ತಿಥಿ ಬಂದ ಕುಂತೈತಿ. ಮಗಳನ ಪಂಚಮಿಗಿ ಗಂಡನ ಮನಿಯಿಂದ ಕರಕೊಂಡ ಬರಬೇಕ. ಅಕೀಗಿ ಸೀರಿ ತರಬೇಕ. ಮೊಮ್ಮಕ್ಕಳ ಕೈಯಾಗ ಅಳ್ಳಾ ಉಂಡ್ಯೆರೆ ಬ್ಯಾಡ? ಅದಕ್ಕೆಲ್ಲಾ ರೊಕ್ಕಾ ಹೆಂಗ ಹೊಂದ್ಸೋದತ ನಾ ಕುಂತ್ಯಾನು. ನೀ ನೋಡಿರ ಬಾತಿಗಿ ಬಾರದ ದಗದಾ ಮಾಡಾಕ ಕುಂತಿ” ಅಂತ ಮಾತಿಗೆಳೆದಳು.

ಅಂವ ” ನಾನಽ ಯದಕ ಕುಂಡಬೇಕಂದರ ಈರ ಕನಸಿನ್ಯಾಗ ಬಂದು ಹೇಳಿದಾನು ಅದಕ” ಅಂದು ಸಣ್ಣಗ ನಕ್ಕ.

ನಿಜಗುಣಿಯ ಮ್ಯಯಾಗ ಈರ ಆಡುತ್ತಿದ್ದ. ಹೊಲಗೇರಿಯೊಳಗ ಯಾರ ಮನಿಯಾಗರೆ ಮದುವಿ ಕಾರ್‍ಯೆ ನಡೀತಂದರ ಈರಮಾಕನ ಅಟದಾಗ ಈರನಾಗಿ ಇಂವಾ ಇರಾಕಬೇಕು. ಸುತ್ತಾಗಿ ಬಡಗಿಗೋಳನ ಆಡೋ ಹುಡಗೋರ ಜತಿ ತಾಳಶೀರ್ ಬಾರ್‍ಸೊ ಹಲಗಿಯ ಗತ್ತಿಗಿ ತಕ್ಕಂಗ ಹೆಜ್ಜಿ ಹಾಕತಾ ಏಕದಂ ರಾವ್ ಅಗಿ ಕುಣೀತಿದ್ದ. ಸಂಭಾಳಿಸಾಕ ತಾಂಡ್ತಾಂಡ್ ಹುಡುಗೋರು ಬೇಕಾಗತ್ತಿದ್ದರು. ಕುಣೀತ ಕುಣೀತ ಮೈದುಂಬಿದ ಈರದ್ಯಾವರು ಸಮಾಧಾನ ಆಗೋದು ಬ್ಯಾಟಿ ಬಿದ್ದು ರಗತದ ಬಟ್ಟು ಹಚ್ಚಿದ ಮ್ಯಾಲನಽ.

ಮುಹೂರ್ತಗೋಳೆಲ್ಲ ಮುಗಿಯಾಕ ಬಂದಿದ್ದವು. ಮದುವಿ ನೇಮಿಸಿ ಪಾವಣೇರ-ಪೈ ಬಂದರ ಅವರಿಗಿ ನೀರಿನ ವ್ಯವಸ್ಥಾ ಆಗದ ಇರೋ ಅಂಜಿಕಿಯೊಳಗ ಯಾರೂ ಮದುವಿ ಕಾರ್‍ಯೇನ ಠರಾಸೋ ಗೋಳಿಗಿ ಹೋಗಿರಲಿಲ್ಲ. ಮದುವಿ ಠರಾಸಿದರೂ ಈರಮಾಕದ ದೇವ್ಕಾರ್‍ಯೇನ ಮುಂದಕ್ಕ ಮಾಡಿದರಾತು ಅಂತ ಮುಂದ ಹಾಕುತ್ತಿದ್ದರು. ಇಂತಾ ಸಿತಿಯಾಗ ಗಂಡ ಹೊಸಾ ಆಟ ಹೂಡಿದಾ ಯಾಂಬಲ್ಲ ಅಂತ ಶಾಣವ್ವ ಅಂದುಕೊಂಡಳು. ಈರದ್ಯಾವರು ಅವನ ಕನಸಿನ್ಯಾಗ ಖರೆಖರೇನ ಬರತಾನೋ ಇಲ್ಲ ಹುಸೀನೋ ಅಂತ ಸಂಶ್ಯಾ ಬಂತು. ’ಅಂವಾ ಬರತ್ತಿದ್ದರ ಗಂಡನಿಗ್ಯಾಕ ಒಂದ ಮನಿ ಕಟ್ಕೋರೋ ಬುದ್ಧಿ ಕೊಡವಾಲ್ಲ, ಹಾಳ ಗುಡಲಾಗ ಹುಗದ್ದಾನು. ಹರತಾಟ ತಪ್ಪವೊಲ್ದು’ ಎಂದು ಒಳಗೊಳಗ ನೊಂದಳು.

ಸಂಜಿಯಾಗತ್ತಿದ್ದಂಗ ಮುಸಲ್ಲರ ಗುಲ್ಲ ಮತ್ತೊಂದಿಬ್ಬರನ್ನ ಮುಂದ ಮಾಡಿಕೊಂಡು ಅಣ್ಣಪ್ಪ ನಿಜಗುಣಿಯ ಗುಡ್ಲಕ್ಕ ಬಂದು ಮಳೀಗಿ ಕುಂಡ್ರಬಾರದು ಅಂತ ಏನೋ ಬೇತಾ ಹೂಡಾಕ ಹ್ವಾತ್ವಾರಿಸಿದ. ನಿಜಗುಣಿ ನಿಚ್ಚಳಾಗಿ ಈರದ್ಯಾವರ ಕನಸಿನ ವಿಚಾರ ತಿಳಿಸಿ ತಾ ಮಾಡೊ ಕೆಲಸ ನಕ್ಕೀನಽ ಅಂತ ಅವರನ್ನ ಕಳಿಸಿದ್ದ.

ಶಾಣವ್ವಗ ಇದೆಲ್ಲ ಒಣ ಉಸಾಬರಿಯ್ಹಂಗ ಕಂಡು ನಿಜಗುಣಿಗಿ “ಖಮ್ಮಗ ನಾಕ ದಿವಸ ಎಲ್ಲ್ಯೆರೆ ದಗದಕ್ಕ ಹೋಗಬಾರದೇನ? ಕೈಯಾಗ ಒಂದೀಟ ರೊಕ್ಕಾಗತ್ತಿದ್ದೂ” ಅಂದಳು. ನಿಜಗುಣಿ ಹೆಗಲ ಮ್ಯಾಲಿನ ಟವಲನ್ನ ಝಾಡಿಸಿ ಎದ್ದು ಏನೂ ಹೇಳದ ಹೊಸಲಾ ದಾಟಿ ಹೊರನಡದು ಕಟ್ಟಿಗಿ ಕುಂತ. ಹಾದೀಲೆ ಹೋಗ್ಬರಾವರೆಲ್ಲ ಇವನಽ ನೋಡಾವರು; ಮಾತಾಡೋರು. ಇಂವ ಒಂದೀಟ ಕುಂತ್ಹಂಗ್ಮಾಡಿ ಅಗಸಿಕಟ್ಟಿಯತ್ತ ನಡೆದ.

ಕತ್ತಲಿ ಹನುಮಂತನ ಬಳ್ಳಿಯಾಗಿ ಹಬ್ಬುತ ನಡೆದಿತ್ತು. ಮುದಕ್ಯಾರ ಬತ್ತಿದ ಮಲಿಯ್ಹಂಗ ಬಲ್ಬುಗಳು ಲೈಟ್ಕಂಬಗಳ ತುದಿಗಿ ಉರೀತಿದ್ದವು. ಅಗಸಿಕಟ್ಟೀಗಿ ಜನ ಒಬ್ಬೊಬ್ಬರಾಗಿ ಬರಾತಿದ್ದರು. ಒಂದ್ಕಡಿ ಅಣ್ಣಪ್ಪ ಲಿಂಗಾಯತರು, ಕುರುಬರು, ಮುಸಲ್ಲರು ಮತ್ತು ಕೇರಿಯ ಒಂದಿಷ್ಟು ಹುಡುಗೋರ್‍ನ ಗ್ವಾಳೆ ಹಾಕ್ಕೊಂಡು ಕುಂತಿದ್ದ. ಮತ್ತೊಂದ್ಕಡಿ ಅಪ್ಸೂ ಸಾಹುಕಾರ ಕುಂತಿದ್ದ. ಅವನ ಆಜೂಬಾಜೂನೂ ಮಂದಿಯಿದ್ದರು.

ಸಾಲ್ಹಚ್ಚಿದ ಇರವಿಗಳಂಗ ಊರು-ಕೇರಿಯ ಮಂದಿ ಹಗುರಕ ಬಂದು ತಳಾ ಊರುತ್ತಿದ್ದರು. ಇಮಲವ್ವನ ಮನೀಗಿ ಹೋಗಿ ಕಳ್ಳ ತುಂಬ ದಾರೂ ಇಳಿಸಿ ಬರುತ್ತಿದ್ದ ಕೆಲವರು ಅನುಕೂಲವಾದಲ್ಲಿ ಕುಂಡ್ರುತ್ತಿದ್ದರು. ನಿಜಗುಣಿ ಕೇರಿಯ ಮಂದಿ ಕುಂತಲ್ಲಿ ಬಂದು ಸೇರಿದ. ಬುದುಬುದು ಕೂಡುಬಿದ್ದ ಮಂದಿ ಬಾಯ್ಬಿಚ್ಚಿ ಮಾತಗಳನುದುರಿಸುತ್ತಿದ್ದರು.

“ಭೂಮಿ ಮ್ಯಾಲ ಪಾಪ ತುಂಬಿ ಮಳಿಬೆಳಿ ಬರದ್ಹಂಗಾತು” ದಡ್ಡ್ಯಾರ ರಾಯಪ್ಪ ದೊಡ್ಡ ದನೀಲೆ ನುಡಿದ.

ಅದಕ್ಕ ಸಾಹುಕಾರ “ಮಂದಿ, ಹಗಲ್ಹೊತ್ತು ಮಾಡೊ ಕೆಲಸಾನ ರಾತ್ರಿ ಮಾಡತಾರು… ಮತ್ತ, ರಾತ್ರಿ ಮಾಡೋ ಕೆಲಸಾನ ಹಗಲ್ಹೊತ್ತು ಮಾಡತಾರು… ಹಿಂಗಾದರ ಪಾಪ ತುಂಬದ ಏನಾಗತೈತಿ?!” ಅಂದ. ಇದನ್ನು ಕೇಳಿಸಿಕೊಂಡ ಅಣ್ಣಪ್ಪ ತನಗಽ ಅಂದಂತ ಕುಂತಲ್ಲೆ ಕುಂಡಿ ಹೊಸಕಿ ಕುತ್ತುಸುಲು ಬಿಟ್ಟ.

ಅಟ್ಟರಾಗ ನಿಂಗಪ್ಪಜ್ಜ ಮಾತು ಸುರು ಮಾಡಿ “ಏನ್ರಪಾ, ಇವತ್ತ ದೈವನ್ನ ಯಾಕ ಕೂಡಿಸಿದೇವತ್ತ ಗೊತ್ತೈತೇನು?” ಕೇಳಿದ.

ಒಂದ್ಸೊಲ್ಪ್ಮಂದಿ ಹೂಂವನ್ನೂವಂಗ ಪ್ರತಿಕ್ರಿಯಿಸಿದರು.

ಬಸರಿಗಿಡದಚಿಕಡಿಗಿದ್ದ ಮ್ಯಾಲಿನಕೇರಿ ಹೆಂಗಸರ ಹಂತೇಕ್ಕುಂತಿದ್ದ ಗಿಡ್ಡ ಮಾರೂತಿ ಅಗಸಿಕಟ್ಟಿ ತುಂಬೋವಟ್ಟು ಅವಾಜ್ ಮಾಡಿ ಹೂಸ್ ಬಿಟ್ಟ. ಮಂದಿ ನಕ್ಕರು. ಹುಚ್ಚ್ಯಾಗೋಳ ಬರಮಪ್ಪ ಮಾರೂತಿನ ಬೆದರಿಸಿದ.

ಹೂಗಾರ ರಾಮಜ್ಜ “ತಳವಾರ್ರ ನಿಜಗುಣಿ ಮಳೀಗಿ ಕುಂಡ್ರಾಕ್ಹತ್ತಾನ…! ಅದಕ್ಕೆಲ್ಲಾರದೂ ಒಪ್ಪಿಗೈತಿಲ್ಲೊ?” ಗಟ್ಟ್ಯಾಗಿ ಕೇಳಿದ.

ಅಣ್ಣಪ್ಪನ ಮಗ್ಗಲಾಗಿದ್ದ ಗೂಳಿ ಹನುಮ ಯಾಕೋ ಮಿಸುಕಾಡಿದ. ಅವನ ಹೆಗಲ ಮ್ಯಾಲ ಕೈಯಿಟ್ಟು ಕುಂತಿದ್ದ ಐನಾರ ರಾಚ ಒಮ್ಮಿ ಅಣ್ಣಪ್ಪನ್ಕಡಿ ನೋಡಿ ಮತ್ತ ಮಂದೀಕಡಿ ಮಾರಿಮಾಡಿ ಏನೋ ಹೇಳಬೇಕಂದ. ಧೈರ್‍ಯಾ ಸಾಲದ ಸುಮ್ಮನಾದ. ಆಗ ಅಣ್ಣಪ್ಪನಽ “ನಮ್ ಸಿದಗೇರಿ ಮಲ್ಲಯ್ಯಸಾಮಿನೂ ಕುಂಡ್ರತಾನಂತಿದ್ದರು…” ಅಂದ. ತಿಳಿಯಾಗಿದ್ದ ನೀರಿನ್ಯಾಗ ಕಲ್ಲೊಗದ್ಹಂಗಾತು. ಕೆಲವರು ಹಿಂಗಽಽ ಆಗತದ ಅಂತ ಅನಕೊಂಡಿದ್ದರು.

“ಕಚ್ಚರಕ್ ಸ್ವಾಮ್ಯೇನ?” ಬರಮಪ್ಪ ಸಿಟ್ಟಿನೊಳಗ ಕುದ್ದು ಕೇಳಿದ್ದ.

“ಮಲ್ಲಯ್ಯಸಾಮಿ ಕುಂಡ್ರಬಾರದಽ?” ಗುಲ್ಲ ಸವಾಲ್ಹಾಕಿದ.

“ಏ ಹುಡುಗಾ… ಹಂಗೆಲ್ಲ ಸಿಕ್ಕ್ಸಕ್ಕ್ಹಂಗ ಮಾತಾಡ್ಬ್ಯಾಡ. ತಪಕ್ಕ ಕುಂಡಾವರಿಗಿ ನೇಮ ನೀತಿ ಅತ ಇರತಾವ್… ಆ ಸ್ವಾಮಿಗೆ ಏನದ?” ಅಂದ ಸಾಹುಕಾರನ ಮಾತಿಗಿ ಗುಲ್ಲನಾಗಲೀ, ಅಣ್ಣಪ್ಪನ ಹುಡುಗೋರಾಗಲಿ ಯಾವ ಉತ್ತರಾನೂ ಕೊಡಲಿಲ್ಲ.

ಮಲ್ಲಯ್ಯಸ್ವಾಮಿ ಅನ್ನೋ ಮನುಸ್ಯಾ ಯಾತಾಳ ಸಿದ್ದಿಯಂತ ತಿರಗಾಂವಾಗಿದ್ದ. ಮ್ಯಾಲಿನ ಕೇರಿಯವನಾದರೂ ಊರ ಬಿಟ್ಟು ಸೀಮಿಯಚಿಕಡೆ ಮಠ ಕಟಕೊಂಡು ಇದ್ದ. ಸೀರಿ ಕಂಡ್ರ ಸಾಕು ಬೆದರ ಬೆಚ್ಚಕ್ಕೂ ತೆಕ್ಕಿ ಹಾಯೋ ಗಿರಾಕಿ ಅಂವ. ಮಾಟ, ಮಂತ್ರ, ನಿಧಿಯ ಶೋಧ ಅನಕೊಂತ ಮಂದಿ ತೆಲಿ ಕೆಡಸ್ತಿದ್ದ. ಮನ್ಮನ್ನಿ ಅದ್ಯಾಕೋ ಟೇಶನದಾಗೂ ಬಿದ್ದು ಬಂದಿದ್ದ. ಹಿಂತಾವನ ಒಪ್ಪಕೊಳ್ಳಾಕ ಊರ್‍ಮಂದಿ ತಯಾರಿರಲಿಲ್ಲ.

ಮಾತಿಗಿ ಮಾತು ಬೆಳೀತಿದ್ದಂಗ ಕುಂತ ಮಂದಿಗಿ ಏನಾಗತೈತೋ ಅನ್ನೊ ಚಿಂತಿ ಹತ್ತಿತು. ಮಲ್ಲಯ್ಯ ಸ್ವಾಮಿನೋ ನಿಜಗುಣಿನೋ ಅಂಬೋ ಧಡಂದುಡಕಿಯಾಟದಾಗ ನಿಜಗುಣಿ ಕಡೇನಽಽ ಬಹುತೇಕರು ಒಲವು ತೋರಿಸಿದರು. ಇದನ್ನೆಲ್ಲ ಶಾಂತಲಿಂದಽ ಗಮನಿಸಿದ ನಿಜಗುಣಿಯ ತುಟಿ ಪಿಟಕ್ಕನ್ನಲಿಲ್ಲ.

ಇನ್ನೇನು ಎಲ್ಲಾ ಮುಗಿದಂಗ ಅಂತ ಮಂದಿ ತಿಳಕೊಳ್ಳೊ ವ್ಯಾಳ್ಯಾಕ್ಕ ಇಮಲವ್ವ ಮ್ಯಯನ್ನ ಮುದ್ದಾಂ ಹೊಳಿಸ್ಯಾಡುತಾ ಕೇರಿ ಮಂದಿ ಕಡೆ ಬಂದು ಕುಂತಳು. ಅಕಿ ಚಾಳದ ಸಪ್ಪಳ ಎಷ್ಟೋ ಗಂಡಸರ ಎದ್ಯಾಗ ರಿಂಗಣ ಮೂಡಿಸಿತು. ಅಕಿ ಕಣ್ಣು ಅಂಥಾ ಮಕತಲ್ಯಾಗೂ ಚೂರಿಯಂಗ ಮಿಂಚಿ ಇರಿತಿದ್ದವು. ಹೆಂಗಸರು ಅಕಿನ್ನ ’ಊರು ಕೆಡಸೊ ಹೆಣ್ಣು’ ಅಂತಾ ಶರಾಪಿಸಿದರು. ಒಂದಿಟ್ಮಂದಿ ಅಕ್ಕೀನೂ ಅಣ್ಣಪ್ಪನೂ ನೋಡದರಾಗ ಮುಳಗಿದರು.

ಕೊನಿಗಿ ಹಿರೇರೆಲ್ಲ ಮಾತಾಡಕೊಂಡು ನಿಜಗುಣಿ ಕುಂಡ್ರೋದು ನಕ್ಕಿ ಮಾಡಿದರು. ಇದೆಲ್ಲ ಮುಗಿದ ನಂತರ ಅಂವಾ ಎಲ್ಲಿ ತಪಕ್ಕ ಕುಂಡಬೇಕನ್ನೋದೊಂದು ಸಮಸ್ಯೆ ಹುಟ್ಕೋಂತು.

ಯಾರೋ “ಬಸವನಗುಡಿಯ ಪೌಳಿ” ಅಂದರ ಮ್ಯಾಲಿನಕೇರಿಯ ಮಂದಿ ಬ್ಯಾಡ ಅಂದ್ರು. ಮತ್ತ್ಯಾರೊ “ಲಗಮವ್ವನ ಗುಡಿಯ ಕಟ್ಟಿ” ಅಂತ ಸಲಹೆ ಕೊಟ್ಟರು. ಅದಕ್ಕ ಆರೇರ ಮಂದಿ ತಕರಾರು ಮಾಡಿದರು. ಇದನ್ನಲ್ಲ ಕೇಳಿ ತೆಲಿಚಿಟ್ ಹಿಡಿದ ನಿಜಗುಣಿ ಎದ್ದು ನಿಂತು “ನಾ ಕ್ವಾಣೇರಿ ದಿಬ್ಬದಾಗ ಅರಣ್ಯಸಿದ್ದನ ಗುಡಿ ಬಾಜೂಕಿನ ಪಟಂಗಳದಾಗ ಕುಂಡಬೇಕಂತ ತಾಳೆ ಮಾಡಿನಿ” ಅಂದು ಕೈ ಮುಗಿದು ಕುಂತ. ಅರ್ಧಕ್ಕರ್ಧ ಮಂದಿ ತೆಲಿದೂಗಿದರು. ಕುರುಬರ ಹುಡುಗುರು “ಕುಂತರ ಕುಂಡ್ಲಿ, ಖರೆ ಅಂವಾ ಗುಡ್ಯಾಗ ಹೋಗೋದು ಬ್ಯಾಡ” ಅಂತ ಮಾತಿಟ್ಟರು. ನಿಜಗುಣಿಯ ಆಜೂಬಾಜೂದಾಗಿನ ಒಂದಿಷ್ಟು ಹುಡುಗುರು ಕಣ್ಣು ಕೆಂಪು ಮಾಡಿದರು. ರಾಮಜ್ಜ ಅವರನ್ನ ಕಣ್ಣ ಸನ್ನಿ ಮಾಡಿ ಸಮಾಧಾನ ಮಾಡಿದ.

ಅಪ್ಸೂ ಸಾಹುಕಾರನ ಮಾರಿಮ್ಯಾಗ ನಗಿ ಕುಣಿದಾಡಿತು. ಅಣ್ಣಪ್ಪ ಸೋತಂಗಾದ. ಸಿಟ್ಟಲೆ ಎದ್ದು ಹೆಜ್ಜಿ ಹಾಕುತ ಕರೆವ್ವನ ಗುಡಿಯ ಸಂದ್ಯಾಗ ಕರಗಿ ಹೋದ. ಅವನ ಮ್ಯಾಳದ ಹುಡುಗೋರು ಕೈ ಕೈ ಹಿಚಕೊಂಡು ಅಲ್ಲೆ ಕುಂತರು.

ಕೂಡಿದ ವಿಚಾರ ಸುಸೂತ್ರಲೇ ಮುಗಿದರೂ ಏನೋ ಹುಣಾರ ಕಾದ ಕುಂತೈತೇನೊ ಅನ್ನೊಹಂಗ ಮಂದಿ ಎದ್ದು ಮೈಯೊಜ್ಜೆಯಾದಂಗ ಮೆಲ್ಲಕ ನಡಕೋಂತ ಹೊಂಟರು. ಆದರೂ ಎಷ್ಟೋ ಮಂದಿಯ ಕಣ್ಣಾಗ ಮುಗಿಲ ಕಾರುಣ್ಯದ ದೆಸಿ ಮಳಿಯಾಗಿ ಸುರಿಯೋ ಕನಸು ನೂರಾರು ನಮೂನಿಯ ಚಿತ್ರಪಟಗಳಾಗಿ ತೆರಕೋಂತಿದ್ದವು.

***

ಬೆಳಗಾಗೂತ್ಲೆ ಊರ ಮಂದಿ ತೆಂಬಗಿ ತಗೊಂಡು ಮಢ್ಡಿಹಳ್ಳದ ಕಡಿ ಹೋಗಿ ಬರೋದು ನಡೆಸಿದ್ದರು. ಅತ್ತ ಫೈಸಕ್ಕ ಊರ ಹೊರಗಿನ ಕ್ವಾಣೇರಿ ದಿಬ್ಬದ ಬಯಲಿನ್ಯಾಗ ಹಾರಿ, ಗುದ್ಲಿ, ಗಳಾ ಹೊತ್ತುಕೊಂಡು ಹ್ವಾದವರು ಹಂದರದ ಚಟುವಟಿಕ್ಯಾಗ ಮಗ್ನರಾಗಿದ್ದರು. ಅದರಾಗ ಅಪ್ಸೂ ಸಾಹುಕಾರನ ಆಳಮಕ್ಕಳಽ ಭಾಳಿದ್ಹಂಗಿತ್ತು. ಸರ್ವೊತ್ತನ್ಯಾಗ ಕೆಲಸಕ್ಕ ನಿಂತಾರೆನೋ ಅನ್ನೊವಂಗ ನೋಡನೋಡತಾನಽ ಗಳಾ ಬಿಗಿದು ತಪ್ಪಲಾ ಹಾಕಿ ಹಂದರಾ ತಯಾರ ಮಾಡಿದರು.

ರಾತ್ರೆಲ್ಲ ಕಣ್ಣಿಗಿ ಕಣ್ಣಚ್ಚದ ಹೊಳ್ಳ್ಯಾಡೆದ್ದ ನಿಜಗುಣಿ ಮಡಿಯಾಗಿ ಬಿಳಿ ಧೋತ್ರಾ ಮುಂಡಾ ತೊಟ್ಟು ತಳವಾರಕಿ ಹೊಲದಾಗಿನ ಈರದ್ಯಾವರಿಗಿ ಕಾಲಬಿದ್ದು ಗುಡ್ಲಕ್ಕ ಬಂದು ಗಳಗಳ ನೀರು ಕುಡದು ಕುಂತ. ಶಾಣವ್ವ “ರೊಟ್ಟಿ ತಿಂತಿಯೇನ?” ಅಂತಾ ಮಾಯೆ ಮಾಡಿ ಕೇಳಿದಳು. ಅಂವಾ “ಬ್ಯಾಡ, ಇನ್ ನಾನು ಮುಗಿಲ ಹರಕೊಂಡ ಬಿದ್ದ ಮ್ಯಾಲ ಹೊಟ್ಟಿಗಿ ತಗೋತಿನಿ. ಅಲ್ಲೀತಕ ಅನ್ನ ನೀರಂಬೋದಽಽ ಇಲ್ಲ” ಅಂದ. ಅವನ ಮಾರಿ ನಿಚ್ಚಳಾಗಿತ್ತು.

ಹೊತ್ತಗಳದ್ಹಂಗ ಅಪ್ಸೂ ಸಾಹುಕಾರ ತಾನಽ ಖುದ್ದಾಗಿ ಒಂದಿಷ್ಟು ಮಂದೀನ ಕರಕೊಂಡು ನಿಜಗುಣಿಯ ಗುಡ್ಲದ ಕಡಿ ಬಂದ; ಜತಿಗಿ ಸನಾದಿಯವರೂ ಇದ್ದರು. ಕೇರ್‍ಯಾಗಿನ ಮಂದೀನೆಬ್ಬಿಸಿ ಲಗೂ ಲಗೂ ಅಂತಾ ಹ್ವಾತ್ವಾರ ಮಾಡಿದ. ಸಣ್ಣ್ಸಣ್ಣ ಪೋರಿಗೊಳು ಆರತಿ ತಾಟ ಹಿಡಕೊಂಡು ನಿಜಗುಣಿಯ ಅಂಗಳಕ ಬಂದವು. ನಿಜಗುಣಿ ಉಟ್ಟ ಅರವಿ ಮ್ಯಾಲ ಮತ್ತೊಂದು ಕೊಡ ನೀರು ಸುರುವಿಕೊಂಡು ನಿಂತ. ಸನಾದಿಯವರು ತಮ್ಮ ಕಾಯಕ ಸುರು ಮಾಡಿದರು. ಜನ ಗ್ವಾಳೆ ಬಿದ್ದರು. ಮೆರವಣಿಗಿ ಸುರುವಾಗಿ ಅಗಸಿಕಟ್ಟಿ ಮುಟ್ಟುತಿದ್ದಂಗ ಮ್ಯಾಲಿನಕೇರಿಯ ತ್ವಾಡೆ ಮಂದೀನೂ ಸೇರಿದರು.

ಇಮಲವ್ವ ಮಿಂಚೊ ಸೀರಿವುಟಕೊಂಡು ವಯ್ಯಾರ ಬೀರತಾ ಗುಂಪಿನೊಳಗ ಒಂದಾದಳು. ಅಣ್ಣಪ್ಪನ ಮ್ಯಾಳದ ಹುಡುಗೋರು ಬಂದರಾದರೂ ಅವನಽ ಕಾಣಲಿಲ್ಲ. ಗಿಡ್ಡ ಮಾರೂತಿ ಚಂಪವ್ವನ ಬಾಜೂಕ ಹಲ್ಕಿಸಿದು ಸನಾದಿಯವರ ಬಾರ್‍ಸೂಣಕಿಗಿ ಚಪ್ಪಾಳಿ ಬಡೀತ ನಡೆದಿದ್ದ. ಸಾಹುಕಾರನ ಮಗಳು ಶಾಂತಾ ಚಂಪವ್ವನ ಮಗ್ಗಲಕ ಹೆಜ್ಜಿ ಇಡುತ ಹೊಂಟಿದ್ದ. ಚಂಪವ್ವ ಗೌನ್ನಾರ ಹುಡುಗನ ಗರಕಿನ್ಯಾಗ ಘಮ್ಮನ್ನುತ್ತಿದ್ದಳು. ಹುಚ್ಚ್ಯಾಗೋಳ ಬರಮಪ್ಪ ಎಲ್ಲಾರ ಕಡಿ ಗಮನಕೊಟ್ಟು ಅವಘಡ ತರೋ ಮಂದಿಯೇನರ ಅದಾರೇನೋ ಅಂತಾ ಹುಡುಕುತ್ತಿದ್ದ. ಮುಂದ ಮುಂದ ಮ್ಯಾಲಿನಕೇರಿಯ ಮಂದಿ ಅವರ ಹಿಂದ್ಹಿಂದ ಕೇರಿಯವರು. ಹೀಂಗ ಮೆರವಣಿಗಿಯ ಮಂದಿ ನಿದಾನಕ ದೇವರುಗಳ ಹೆಸರು ಹೇಳತಾ ಜೈಕಾರ ಹಾಕತಾ ಮಡ್ಡಿಹಳ್ಳ ದಾಟಿ ಮುಟುರಾದ ಬಳ್ಳಾರಿ ಜಾಲಿಯ ಕಂಟಿಗಳನ್ನು ಹಾದು ಕ್ವಾಣೇರಿ ದಿಬ್ಬದ ಬಯಲಿಗಿ ನೆಡೆದಿದ್ದರು.

ಬರದಾಗಿನ ಹೆಣ ಸಿಂಗಾರಗೊಂಡ್ಹಂಗ ಕ್ವಾಣೇರಿ ದಿಬ್ಬದ ಬಯಲು ಕಾಣಾಕ್ಹತ್ತಿತ್ತು. ಹಾಕಿದ ಹಂದರದ ಬಾಜೂಕ ಅಪ್ಸೂ ಸಾಹುಕಾರ ಕೈಮುಕ್ಕೊಂಡು ನಿಂತ ಹೋರ್ಡಿಂಗ ಹಾಕಿದ್ದರು. ನಾಕೈದು ಬೈಕುಗಳು ಬಂದು ನಿಂತಿದ್ದವು.

ಮೆರವಣಿಗಿ ಬ್ಯಾಟಿ ನುಂಗಿದ ಹಾವು ತೆವಳೊ ತರ ಹಗುರಕ ಹಾದಿ ಸಾಗಿಸಿ ದಿಬ್ಬದಾಗಿನ ಅರಣ್ಯಸಿದ್ದನ ಗುಡಿಗಿ ಬಂತು. ನಿಜಗುಣಿ ಗುಡಿ ಹೊರಗ ನಿಂತು ದೇವರಿಗಿ ಕೈಮುಗಿದು ಹಿಂತಿರುಗಿ ನೆರೆದ ದೈವಕ್ಕೆಲ್ಲಾ ಶರಣೆಂದು ಹಂದರದಾಗ ಹಾಸಿದ ಮಡಿತಟ್ಟಿನ ಮ್ಯಾಲ ಕುಂತ. ಜನ ದೇವರ ಹೆಸರಿಲೆ ಜೈಕಾರ ಹಾಕಿದರು.

ಮತ್ತೊಂದೆರಡು ಬೈಕ್‌ಗಳು ಬಂದವು. ಅದರಿಂದಿಳಿದವರು ಟಿ.ವಿ ಚಾನಲ್‌ನವರಾಗಿದ್ದರು. ಹಿಂದಿಂದ ಕಾರಿನ್ಯಾಗ ಮಂತ್ರಿಕಡಿಯ ಮನುಶ್ಯಾ ಲಕ್ಕಪ್ಪ ಬಂದಿದ್ದ. ಅಂವ ಸೊಟ್ಟಮಾರಿಯ ಹೂವಿನಮಾಲಿ ತಂದು ನಿಜಗುಣಿಯ ಕೊಳ್ಳಿಗಿ ಹಾಕಿದ. ಜೈಕಾರ ಮೊಳಗಿತು. ಚಾನಲ್‌ನವರು ತಿರಗ್ಯಾಡಿ ದೃಶ್ಯ ಸೆರೆ ಹಿಡೀತಿದ್ದರು. ಲಕ್ಕಪ್ಪ ಮತ್ತು ಚಾನೆಲ್‌ದವರ ಕೈಯಾಗ ಬಿಸ್ಲೇರಿ ನೀರಿನ ಬಾಟಲಿಗಳಿದ್ದವು. ಲಕ್ಕಪ್ಪ ಅದ ನೀರಿನಿಂದ ಮಾರಿ ತೊಳೆದು ಬಾಯಿ ಮುಕ್ಕಳಿಸುತ್ತಿದ್ದ. ಗಿಡ್ಡ ಮಾರೂತಿಗಿ ನೀರಡಿಕಿ ಹೊಕ್ಕಳದಿಂದ ಸುರುವಾಗಿ ಗಂಟಲಮಟ ಬಂದು ಕುಂತಿತ್ತು. ಅವ್ಹಾ ಚಾನಲ್‌ದವನ ಹಂತೇಕ ಹೋಗಿ ನೀರು ಕೇಳಿ ಇಸಕೊಂಡ. ಗಟಾಗಟಾ ಕುಡಿದು ಎಲ್ಲ ಮುಗಿಸಿ ಚಾನಲ್‌ದವನ ಕೈಗೆ ಖಾಲಿ ಬಾಟಲಿ ಕೊಟ್ಟ. ಮಾರೂತಿಯ ಮುಖದಾಗ ಪರಮಾನಂದ. ಚಾನಲ್‌ದವಾ ಮಂಗ್ಯಾ ಆಗಿದ್ದ.

ಕ್ಯಾಮರಾ ತಮ್ಮ ಕಡಿ ತಿರುಗಿದಾಗ ಮಂದಿ-ಮಕ್ಕಳೆಲ್ಲ ಮಾರಿ ಅಡಾಗಲ ಮಾಡಿ ನಿಲ್ಲುತ್ತಿದ್ದರು. ಇಮಲವ್ವ ಸೆರಗ ಸರಿಮಾಡ್ಕೊಂಡು ನಕ್ಕಳು. ಚಾನಲ್‌ದವ ಚಂಪವ್ವ-ಶಾಂತಾರ ಕಡೇನ ತಿರುತಿರುಗಿ ಹೋಗುತಿದ್ದ. ಗೌನ್ನಾರ ಹುಡಗನಿಗಿ ಸಿಟ್ಟು ಬರುತಿತ್ತು.

ಸಾಹುಕಾರನು ಲಕ್ಕಪ್ಪನನ್ನು ಮಂತ್ರಿಸಾಹೇಬರ ಛೊಲೋ-ಕೆಟ್ಟ ವಿಚಾರಿಸುತ್ತಿದ್ದ. ಲಕ್ಕಪ್ಪ “ಸಾಹೇಬರು ಬೆಂಗಳೂರಿನ್ಯಾಗ ಅದಾರ. ಮತ್ತ್ಯಾರೋ ಹೊಸದಾಗಿ ಸಿ.ಎಂ ಆಗಾಕ ಕುಂತಾರ. ಇವರಕಡೆ ಮನಶ್ಯಾನ ಆಗಬೇಕಂತ ಸಾಮೂಹಿಕ ರಾಜೀನಾಮಿ ಕೊಡೊ ವಿಚಾರದಾಗಿದ್ದಾರ” ಅಂತೆಲ್ಲ ಹೇಳಿದ್ದ. ಲಕ್ಕಪ್ಪನ ಯಾವ ಸಂಗತಿಗಳೂ ಮಂದಿಗೆ ಬೇಕಾಗಿರಲಿಲ್ಲ. ಅವರೆಲ್ಲರ ಲಕ್ಷ್ಯ ಕ್ಯಾಮರಾ ಕಡೆಗಿತ್ತು.

ಭಾಳ್ಹೊತ್ತಿನ ಮ್ಯಾಲ ಚಾನೆಲ್‌ನವರು ಮತ್ತು ಲಕ್ಕಪ್ಪ ಹ್ವಾದರು. ದಿಬ್ಬದ ಬಯಲನ್ನ ತುಂಬಿದ್ದ ಮಂದಿ ಬಯಲಾದರು. ಹತ್ತಹದಿನೈದು ಮಂದಿಯಷ್ಟ ಉಳದರು.

ಸಂಜಿಹೊತ್ತು ಊರು-ಕೇರಿಯ ಮಂದಿ ಟಿವಿ ಮುಂದ ಕುಂತು ತಮ್ಮೂರಿನ ಸುದ್ದಿ ಬರೋದನ್ನ ಕಾಯುತಿದ್ದರು. ದಗದ-ಬಗಸಿ ಬಿಟ್ಟು ಹಂಗ ಕುಂತಾವರಿಗಿ ಬರೀ ಮಂತ್ರಿಗಳ ಸುದ್ದಿ ನೋಡಿನೋಡಿ ಬ್ಯಾಸರಾಗಿತ್ತು. ಯಾವ ಚಾನಲ್ ಹಚ್ಚಿದರೂ ಸಾಮೂಹಿಕ ರಾಜೀನಾಮಿ, ಪಕ್ಷದಾಗಿನ ಬಿಕ್ಕಟ್ಟು, ಹೊಸ ಸಿ. ಎಂ, ಡಿಸಿಎಂಗಳದ್ದೆ ಭರಾಟಿ. ಅಣ್ಣಪ್ಪ ಇಮಲವ್ವನ ಮನಿಯಾಗ ನಾಕಾರು ಕುಡುಕ ಗಿರಾಕಿಗಳ ಜತಿ ತಾನೂ ಒಂದಾಗಿ ಟಿ.ವಿ ನೋಡುತಿದ್ದ. ರಾಜಕಾರಣಿಗಳ ಸುದ್ದೀನ ಹರೀತ ಹ್ವಾದಂಗ “ಇವರೇನಪಾ ಹಳಿ ಎಮ್ಮಿಗಿ ಕ್ವಾಣ ಹತ್ತಿಬಿದ್ದಂಗ ಬಿದ್ದಾರಲ್ಲೊ ಮಾರಾಯಾ…!” ಅಂದಿದ್ದ.

ತಮ್ಮೂರ ಸುದ್ದಿ ಆಗ ಬಂದೋತು ಈಗ ಬಂದೋತು ಅಂತಾ ಕಾದು ಕುಂತೊರು ಕರಂಟ್ ಹ್ವಾದಮ್ಯಾಲ ತಣ್ಣಗಾದರು.

ಕತ್ತಲಿ ತನ್ನ ಚಾದರ ಜಾಡಿಸಿದಾಗ ದಿಬ್ಬದ ಮ್ಯಾಲ ಹಿಲಾಲುಗಳು ಹೊತ್ತಿಕೊಂಡವು. ಲೈಟಿನ ವ್ಯವಸ್ಥೆಯಿತ್ತಾದರೂ ಯಾವಾಗ ಕೈ ಕೊಡತೈತಂತ ಹೇಳಾಕ ಬರತಿರಲಿಲ್ಲ. ಬಾಜೂದೂರಿನಿಂದ ಭಜನಾ ಮ್ಯಾಳ ಬಂದಿತ್ತು. ಸರ್ವೊತ್ತಿನತನಕ ಅವರು ಪದಾ ಹೇಳತಾ ಹ್ವಾದರು. ಭಜನಿ ಪದಗಳು ಅಲೆಯಾಗಿ ಊರಮಟ ಮುಟ್ಟಿ ಮಳಿಯ ಕನಸಿನ್ಯಾಗ ಹೊಳ್ಕೊಂಡಾವರನ ತೇಲಿಸುತ್ತ ಹೋಗುತ್ತಿದ್ದವು.

***

ನಿಜಗುಣಿ ಅನ್ನ ನೀರು ಬಿಟ್ಟು ತಪಕ್ಕ ಕುಂತು ಬರೊಬ್ಬರಿ ನಾಕ್ ದಿವಸಾಗಿದ್ದವು. ಮಳಿಯ ಕಾತರದಾಗ ಊರು ಸಾವಿರಾರು ಕನಸುಗಳನ್ನು ಹೊಟ್ಟಿಯೊಳಗಿಟ್ಟುಕೊಂಡು ದುಗುಡದಾಗ ಕಾಲದ ರೆಕ್ಕಿಗಳನ್ನ ಬಡೀತಿತ್ತು. ಮಂದಿ ನೆತ್ತಿಮ್ಯಾಲ ಕಣ್ಣೇರಿಸಿ ಏಕಾದ್ಹಂಗ ಚಿಂತಿಯ ಗರ ಬಡಕೊಂಡು ಉಸಿರಾಡುತ್ತಿದ್ದರು. ದಿನ ಕಳೆದಂಗೆಲ್ಲ ನಿಜಗುಣಿ ಕುಸೀತಿದ್ದ. ಅಣ್ಣಪ್ಪನ ಕಡೆಯ ಹುಡಗೋರು ನಿಜಗುಣಿ ಅನ್ನ-ನೀರನ್ನ ಎಲ್ಲೆರೆ ಸೇವಿಸ್ತಾನೇನೋ ಅಂತಾ ಕಾವಲಕ್ಕ ಕುಂತಿದ್ದರು.

ಮಳಿ ಬರಲಾರದಕ್ಕ ಐನಾರ ರಾಚ ನಿಜಗುಣಿನ ಕೇಳಿದ್ದ. “ಯಾಕಪಾ ಶರಣ, ಇನ್ನಾ ಮಳೀನ ಬರವಲ್ಲದಲ್ಲ?” ಅಂತ.

ನಿಜಗುಣಿ “ಮ್ಯಾಲ್ತ ತಳದಾಗ ಮೋಡ ತಳಕ್ ಹಾಕ್ಕೊಂಡಾವು. ತಳಕಿನ ಗಂಟು ಬಿಡಬೇಕಂದರ ಊರಮಂದಿಯಲ್ಲ ಆಚಾರ ಪಾಲಿಸಬೇಕು” ಅಂದಿದ್ದ. ಇದಕ್ಕ ಅಣ್ಣಪ್ಪನ ಹುಡುಗೋರು ನಕ್ಕಿದ್ದರು.

ಆವತ್ತಿನ ಮಟಮಟ ಮಧ್ಯಾಣದಾಗ ಊರವರಿಗಿ ಸುದ್ದಿಯೊಂದು ಹಾರಿಬಂದು ಸಿಡಿದಿತ್ತು. ಅಣ್ಣಪ್ಪನ ಕಡೆಗಿದ್ದ ಬದನಿಕಾಯಿ ಬಾಳೂ ಸಾಲಿಬಸ್ಸಿನ್ಯಾಗ ನಿಜಗುಣಿಯ ಜಾತಿಯ ಹೆಸರಿಡಿದು ಆ ಜಾತಿಯ ಸ್ವಾಮಿ ಮಳಿಗಿ ಕುಂತರೂ ಮಳಿ ಬರಲಿಲ್ಲಂತ ಟಿಂಗಲ್ ಮಾಡಿದ್ದ. ಅದಕ್ಕ ಕೇರಿಯ ಹುಡುಗೋರೆಲ್ಲ ಬಾಳೂನ ದನಾ ಬಡಿದಂಗ ಬಡಿದಿದ್ದರು. ಇದು ಊರಾಗಿನ ದೋಪಾರ್ಟಿ ಮಂದಿಗೆ ಚೀಕ್ ಹಾಕಿದಂಗಾತು.

ಅಣ್ಣಪ್ಪ ಮಸಲತ್ತು ಚಾಲೂ ಮಾಡಿದ್ದ. ಆ ರಾತ್ರಿ ಅಂವಾ ಇಮಲವ್ವನ ಹಂತೇಕಿದ್ದಾಗ ಅಕಿ ಮನಿಮ್ಯಾಲ ಕಲ್ಲು ಬಿದ್ದವು. ಇದೆಲ್ಲ ಸಾಹೂಕಾರನ ಹುಣಾರ ಅಂತಾ ಯಾರೋ ಪಿತೂರಿ ಮಾಡಿದರು. ನೀರಿಲ್ಲದ ತಾಪದಾಗ ದಣಿದ ಊರಿನ ಹೊಟ್ಟಿಗಿ ಬೆಂಕಿ ಬೀಳಾಕ ಸುರುವಾತು. ಅಣ್ಣಪ್ಪ ಕುಂಡಿಸುಟ್ಟ ಬೆಕ್ಕಿನಂಗ ಚಡಪಡಿಸಾಕ ಹತ್ತಿದ. ರಾಚ, ಬಾಳೂ, ಗುಲ್ಲ, ಈರಗಾರರ ಹುಡುಗೋರನ ಕೂಡಿಸಿ “ನಾಳಿಗಿ ದಿಬ್ಬದಾಗ ಆ ಜಗಳ ತಗದ ಹುಡುಗೋರು ಬರತಾರು. ಅವರನ್ನ ಹುಟ್ಟಲಿಲ್ಲ ಅನ್ನೊಹಂಗ ಜಡೀರಿ” ಅಂತಂದ. ಅವನ ಮ್ಯಾಳ ಬಡಗಿ ಕುಡುಗೋಲುಗಳ ತಯಾರಿ ಮಾಡಿತು. ಸುದ್ದಿ ಹ್ಯಾಂಗೋ ಸಾಹುಕಾರನ ಕಿವಿಗಿ ಬಿತ್ತು. ಗುಲ್ಲನ ಮ್ಯಾಲ ಸಾಹುಕಾರನ ಸಿಟ್ಟಿತ್ತು. ಸಾಹೂಕಾರನೂ ಬರಮಪ್ಪನ ಮುಂದಮಾಡಿ ದಾಳಿಗಿ ಬೇತಾ ಹೂಡಿದ.

ಹೊತ್ತು ಮುಳುಗುತ್ತಿತ್ತು. ಗುಳ್ಳವ್ವನ ತರೋ ಗದ್ದಲದಾಗಿದ್ದ ಮಕ್ಕಳು ಊರ ತುಂಬ ತಳವಾರರ ಹಾಡಿನ ಅಲೆಯನ್ನು ತುಂಬಿಸಿಬಿಟ್ಟಿದ್ದರು. ಕತ್ತಲು ಮೆಲ್ಲಕ ಮುಸುಕು ಬಡಿಯುತ್ತ ನೆಡೆದಿತ್ತು. ಮುಂದ ಅಮಾಸಿ ಇದ್ದದ್ದರಿಂದ ಅದರ ಕಾಳವು ಬೆಳಕಿನ ಸುಳಿವಿರದಂಗ ಹೊಡೆದಟ್ಟುತ್ತಿತ್ತು. ಕ್ವಾಣೇರಿ ದಿಬ್ಬದ ಬಯಲಿನ್ಯಾಗ ಮಿಣಕಮಿಣುಕಾಗಿ ಲೈಟ್ ಹತ್ತಿಕೊಂಡಿತ್ತು. ದೀವಟಗಿ ಹಚ್ಚಾಕ ನಿಂತಿದ್ದ ಗಿಡ್ಡ ಮಾರೂತಿ ಬೆಂಕಿಕಡ್ಡಿಯ ತಲಾಶನ್ಯಾಗ ಹಚ್ಚೋದನ್ನ ಮರತಿದ್ದ.

ಐದು ದಿವಸಾದ್ದರಿಂದ ನಿಜಗುಣಿ ಕಸುವು ಇಲ್ಲದಾಗಿ ಸುಸ್ತಾಗಿದ್ದ. ಶಾಣವ್ವ ದಿಗಿಲು ಬಡಿದಿದ್ದಳು. ಮನ್ಯಾಗ ಪಂಚಮಿಗಿ ಮಗಳು ಬಂದು ಕುಂತಿದ್ದಳು. 1824-constable_seascape_study_with_rain_cloudನೆತ್ತಿ ಮ್ಯಾಲ ಮೋಡಗಳಿದ್ದರೂ ಮಳಿ ಹನಿ ತಪ್ಪಿ ಸೈತ ಬಿದ್ದಿರಲಿಲ್ಲ. “ಸಿವನ ನನ್ನ ಗಂಡನ ಉಳಿಸಾಕರೆ ಮುಗಿಲು ಹರಕೊಂಡು ಬೀಳಬಾರದೇನು?” ಅಂತ ಮ್ಯಾಲ ಮಾರಿ ಮಾಡಿದಳು. ಪರಸೂ ಸಹ ಆಕಿ ಜತೀಗೆ ದಿಬ್ಬದೊಳಗಽ ಜಾಂಡಾ ಊರಿದ್ದ. ಅಂವಾ ’ಮಳಿ ಬರಲಿ ಬಿಡಲಿ ಅಣ್ಣ ನಿಜಗುಣಿನ ಎಬ್ಬಿಸಿ ದವಾಖಾನಿಗೆ ಹಾಕಬೇಕು. ಅನ್ನ ನೀರಿಲ್ಲದ ಅಂವಾ ನಮ್ಮ ಕೈ ಬಿಡತಾನ’ ಅಂತಾ ತಾಳೆ ಮಾಡಿ ಯಾರಿಗೂ ಗೊತ್ತಿಲ್ಲದಂಗ 108 ಅಂಬ್ಯುಲೆನ್ಸ್ ಗಾಡಿಗಿ ಪೋನ್ ಮಾಡಿದ್ದ.

ಚಿಣಗಿ ಹಾವಿನಂಗ ಸುಳಿದಾಡ್ತಿದ್ದ ಹಾರ್‍ಸುದ್ದಿಗಳನ್ನ ಕೇಳಿಸ್ಕೋಂತ, ವಯಸ್ಸಿನವರ ಹಾರಾಟಗಳನ ನೋಡತಾ ’ಏನ ಘಟಿಸತದೋ’ ಅಂತ ಭೀಮಪ್ಪಜ್ಜ ನಿಂಗಪ್ಪಜ್ಜರೆಲ್ಲ ದುಗುಡದ ನೆರಳಿನ್ಯಾಗ ಜೀವಾ ಹಿಡದು ಕುಂತಿದ್ದರು.

ಅತ್ತ ಅಣ್ಣಪ್ಪನ ಮ್ಯಾಳ ಅರಣ್ಯಸಿದ್ದನ ಗುಡಿ ಹಿಂದಿನ ಕವನೆಳ್ಳಾಗ ತಂಗಾಗಿ ಕುಂತಿದ್ದರ ಸಾಹುಕಾರನ ಮಂದೀನೂ ಹಂದರದ ಮುಂದಿದ್ದ ಕುರುಬರ ಹೊಲದ ಎತ್ತರದ ಬದುವಿನ ಮರಿಯೊಳಗ ಸಿದ್ದಗೊಂಡಿದ್ದರು.

ಗಾಳಿ ಯಾಕೋ ಇದ್ದಕಿದ್ದಂಗ ಅರ್ಭಟ ಮಾಡಿತು, ಏಕಾಯೇಕಿ ಹಂದರದ ಗಳ ಅಳಗಾಡಲು ಹತ್ತಿದವು. ಹಂದರದಾಗ ಕುಂತಿದ್ದ ಐದಾರು ಮಂದಿ ಅಂಜಿ ಮೈ ಹಿಡಿಮಾಡ್ಕೊಂಡು ಕುಂತರು. ತಟ್ಟಿಗೊರಗಿ ಕುಂತಿದ್ದ ನಿಜಗುಣಿ “ಸಿವಾ ಕಣ್ ಬಿಡಾತಾನು…” ಅಂದ. ಅಲ್ಲಿನ ಜನಕ್ಕ ಖುಷಿಯಾತು. ಅಷ್ಟರೊಳಗ ಕರಂಟ್ ಹೋಗಿ ಇದ್ದ ಮಿಣುಕು ಲೈಟೂ ಆರಿತು. ಗಿಡ್ಡ ಮಾರೂತಿ ಹಿಲಾಲ ಹಚ್ಚಾಕ ಕಡ್ಡಿ ಡಬ್ಬಿ ಸಿಗಲಾರದ ತಡಬಡಿಸಿದ. ಗಾಳಿ ಕಡಿಮೆಯಾಗಿ ಒಂದೆರಡು ಹನಿ ಉದುರಿದವು. ಹಂದರದಾಗಿನ ಮಂದಿ ಬೆಳಕನ್ನ ಮರೆತು ’ಹೋ..’ ಅಂದರು. ಗುಡಿ ಹಿಂದಿನವರು ’ಹರಹರ ಮಹಾದೇವ’ ಅನ್ನತಾ ಎದ್ದರ, ಬದುವಿನ ಮರೆಯಾಗಿದ್ದವರು ’ಚಾಂಗಭಲೇ’ ಅಂತ ಧಾವಿಸಿದರು. ಬಡಿಗಿ ಕುಡುಗೋಲುಗಳು ಮಾತಾಡಿದವು. ನೋಡನೋಡತಾನ ನೆತ್ತರದೋಕುಳಿ!

’ಹಾ ಹಾ ಅಯ್ಯೋ..’ ಅನ್ನೊ ಹಾಹಾಕಾರ!

ಬಿದ್ದಿನೋ ಸತ್ತಿನೋ ಅಂತ ಶಾಣವ್ವ ಗಂಡನ ತೆಕ್ಕಿ ಬಡಿದು ಪರಸೂನ ಕರಕೊಂಡು ಗುಡಿ ಹಿಂದಕ ಹೋದಳು.

ಅಸಲಿಗಿ ಮಳಿಹನಿ ಜೋರಾಗಿ ಬೀಳಲಿಲ್ಲ. ಗಾಳಿ ಮೋಡಗಳನ್ನ ಹೊತ್ತೊಯ್ಯುತ್ತಿತ್ತು. ಸ್ವಲ್ಪೊತ್ತು ಬಿಟ್ಟು ಬರಮಪ್ಪ ಸದ್ದು ಮಾಡದ ನಿಧಾನಕ್ಕ ಹಂದರದ ಕಡಿಗಿ ಬಂದ. ಎಲ್ಲೆಲ್ಲ ಕತ್ತಲು. ಕತ್ತಲಿನ್ಯಾಗ ಯಾರೂ ಕಾಣುತಿರಲಿಲ್ಲ. ಅವನ ಕಾಲಿಗಿ ಏನೋ ತಡಕಿದಂಗಾತು. ಮೊಬೈಲಿನ ಬ್ಯಾಟರಿ ಹಚ್ಚಿ ನೋಡಿದ…

ಗಿಡ್ಡ ಮಾರೂತಿ ರಕ್ತದ ನಡುವ ಬಿದ್ದಿದ್ದ. ಬರಮಪ್ಪ ಅವನ ಮೂಗಿಗೆ ಕೈ ಹಚ್ಚತಾನ. ಉಸಿರಾಡುತ್ತಿದ್ದ.

ಬರಮಪ್ಪ ಯಾರಿಗೋ ಫೋನ್ ಮಾಡಬೇಕಂತಾನ ಆಗ ಕೆಂಪು ದೀಪದ ಗಾಡಿ ’ಟೋಂಯ್ ಟೋಂಯ್’ ಅನ್ನೂತ ಬರುತಿತ್ತು. ಸದ್ದು ಕೇಳೋದ ತಡ ಬರಮಪ್ಪನಾದಿಯಾಗಿ ಎಲ್ಲ ಮಂದಿ ಪೋಲೀಸರು ಅಂತ ಕತ್ತಲಿನ್ಯಾಗ ಕರಗಿ ಹ್ವಾದರು.

ಬಂದ ಅಂಬ್ಯುಲನ್ಸಿಗಿ ಪರಸೂ ನಿಜಗುಣೀನೂ ಶಾಣವ್ವನ್ನೂ ಹತ್ತಿಸಿ ತಾನೂ ಹತ್ತಬೇಕು ಅನ್ನೋಟರಾಗ ಗಾಡಿ ಬಿಟ್ಟಿತ್ತು. ಹೊಡಮಳ್ಳಿ ಬಂದ ಬರಮಪ್ಪ ಅದ್ಹೆಂಗೊ ಓಡಿ ಗಾಡಿ ಹೊಕ್ಕಿದ್ದ.

ದಿಬ್ಬದಾಗಿನ ಅಪಸ್ವರದ ನಾದ ಊರು ಸ್ಪರ್ಶಿಸಿ ಕತ್ತಲೆಯೊಳಗ ಉಸಿರಾಡುತ್ತಿದ್ದವರನ್ನ ಆತಂಕಕ್ಕ ನುಗ್ಗಿಸಿತು. ಎಲ್ಲಾ ಘಟಿಸಿ ತಾಸಾಗಿತ್ತು. horror_rainy_artಯಾರಿಗೂ ಯಾವೊಂದು ಸುದ್ದೀನೂ ಸರ್‍ಯಾಗಿ ಮುಟ್ಟಿರಲಿಲ್ಲ. ಸಾಹುಕಾರನು ಬರಮಪ್ಪನ ಮೋಬೈಲಿಗೆ ಪೋನ್ ಹಚ್ಚೇ ಹಚ್ಚುತ್ತಿದ್ದ. ನಾಟ್ ರಿಚೇಬಲ್ ಆಗಿತ್ತು. ಆಣ್ಣಪ್ಪಗ ಅದ್ಹೆಂಗೋ ಅಷ್ಟಿಷ್ಟು ಸುದ್ದಿ ಮುಟ್ಟಿ ಅಂವಾ ಇಮಲವ್ವನ ಮನಿಯತ್ತ ನಡೆದಿದ್ದ.

ಊರಿಗಿ ಊರಽ ಜಡಗೊಂಡು ನರಳಾಡುವಾಗ ಸರ್ರಂತ ಇದ್ದಕ್ಕಿದ್ದಂಗ ಮಳಿಯ ಸರುವು ಗಾಳಿಯ ಜತಿಗೂಡಿ ಬೀಸಿ ಬಂತು. ರಪರಪ ಹನಿಯಾಕ ಸುರುವಾತು. ಮೋಡಗಳ ಅಡಿಯಿಂದ ದೊಡ್ಡ ದೊಡ್ಡ ಹನಿಗಳು ಜಡಿಯತೊಡಗಿದಾಗ ನರಸತ್ತ ಭೂಮಿ ತೇವದ ಒಲವಿಗೆ ಶರಣೆಂದಿತು. ಮಳಿಯ ಬೀಸು ಜೋರಾಗಿತ್ತು. ದಿಬ್ಬದೊಳಗ ಉಳದು ಮಳಿಯ ನಡುವ ಸಿಕ್ಕ ಪರಸೂ ಸಣ್ಣ ಜಾಲಿಯ ಕಂಟಿಯ ಕೆಳಗ ಕುಂತು, ಸುರಿವ ಮಳಿಯ ಸುದ್ದಿಯನ್ನು ನಿಜಗುಣಿಗೆ ಮುಟ್ಟಿಸಲು ಹವಣಿಸಿ ಖುಷಿಯಿಂದ ಮೊಬೈಲ್ ತೆಗೆದು ಬರಮಪ್ಪಗ ಫೋನ್ ಹಚ್ಚಿ ಆ ಕಡಿಂದ ಬರೋ ಮಾತಿಗಾಗಿ ಕಾಯುತ್ತ ತೋಯಿಸ್ಕೋಂತ ನಿಂತಿದ್ದ.

ಬಿಸಿಲ ಧಗಿಯೊಳಗ ನಖಶಿಖಾಂತ ಮುಳಗಿ ಬೇಸತ್ತಿದ್ದ ಊರವರೂ, ದಿಬ್ಬದ ಕತ್ತಲಲ್ಲಿ ಕರಗಿದವರೂ, ಇಮಲವ್ವನ ತೆಕ್ಕೆಯಲ್ಲಿ ಬೆಚ್ಚಗಾಗುತ್ತಿದ್ದ ಅಣ್ಣಪ್ಪನೂ ಮನಸ್ಸಿನ ವ್ಯಾಪಾರದ ಚಟುವಟಿಕಿಯೊಳಗ ತೊಡಗಿಕೊಂಡರು.

ಮಳಿಯಂತೂ ಊರು-ಕೇರಿ, ಹಾದಿ-ಬೀದಿ, ದಿಬ್ಬ-ಇಳವು, ನೆಲ-ಮುಗಿಲು ಯಾವೊಂದು ಭೇದವಿಲ್ಲದೆ ಏಕವಾಗಿ ಸುರೀತ್ತಿತ್ತು.