Daily Archives: December 2, 2013

ಅವಳ ಬಸಿರು ಸುತ್ತಲ ರಾಜಕಾರಣ


– ರೂಪ ಹಾಸನ


 

ಈಚೆಗೆ ರಾಜ್ಯದ ಹಲವು ದಿನಪತ್ರಿಕೆ ಹಾಗೂ ವಾರಪತ್ರಿಕೆಗಳಲ್ಲಿ ಅತ್ಯಂತ ಆಕರ್ಷಕ ಪದಗಳೊಂದಿಗೆ ತುರ್ತು ಗರ್ಭನಿರೋಧಕ/ಗರ್ಭನಿವಾರಕ ಮಾತ್ರೆಯೊಂದರ ಜಾಹಿರಾತು ಪ್ರಕಟವಾಗುತ್ತಿದೆ. i-pillಅದು ಹಲವು ದಿನಗಳು ಮತ್ತೆ ಮತ್ತೆ ಪ್ರಕಟಗೊಂಡಾಗ ಸಾಮಾನ್ಯ ಓದುಗರ ಗಮನ ಸೆಳೆಯುವುದೂ ನಿಜ.

ಅನಿರೀಕ್ಷಿತ, ಅನಪೇಕ್ಷಿತ ಲೈಂಗಿಕ ಸಂಪರ್ಕ ಉಂಟಾದಾಗ (ಹೆಚ್ಚಾಗಿ ಅತ್ಯಾಚಾರಕ್ಕೊಳಗಾದಾಗ) ಹೆಣ್ಣಿನ ಗರ್ಭಧಾರಣೆಯನ್ನು ತಡೆಯುವ ಹಿನ್ನೆಲೆಯಲ್ಲಿ ಈ ಐ-ಪಿಲ್ ಎಂಬ ಮಾತ್ರೆಯನ್ನು ಮಾರುಕಟ್ಟೆಗೆ ತರಲಾಗಿದೆ. ಆದರೆ ಜಾಹಿರಾತಿನಲ್ಲಿ ಇದನ್ನೊಂದು “ತುರ್ತು ಗರ್ಭನಿರೋಧಕ” ಎಂಬುದನ್ನಷ್ಟೇ ಎತ್ತಿಹಿಡಿದು ಅದಕ್ಕೆ ಸಂಬಂಧಿಸಿದ ಮಿಕ್ಕ ವಿವರಗಳನ್ನು ಚಿಕ್ಕದಾಗಿ, ಅಪ್ರಮುಖವೆಂಬಂತೆ ಬಿಂಬಿಸಿದ್ದು ಈ ಮಾತ್ರೆಯ ಮತ್ತೊಂದು ಕರಾಳ ಮುಖವನ್ನು ಮುಚ್ಚಿಟ್ಟಂತಾಗಿದೆ. ಈ ಮಾತ್ರೆ ಔಷಧಿ ಅಂಗಡಿಗಳಲ್ಲಿ, ವೈದ್ಯರ ಪ್ರಿಸ್ಕ್ರಿಪ್ಶನ್ ಇಲ್ಲದೇ ಮುಕ್ತವಾಗಿ ಮಾರಾಟಗೊಳ್ಳಲಾರಂಭಿಸಿದ್ದು ಅದರ ಕ್ರಯವನ್ನು ನಿರೀಕ್ಷಿತ ಪ್ರಮಾಣಕ್ಕಿಂತಾ ಹೆಚ್ಚಿಸಿದ್ದರೂ, ಅದರ ವಿಕ್ರಯ ಭರದಿಂದ ನಡೆಯುತ್ತಿದೆ! ಆತಂಕಕಾರಿಯಾದ ಅಂಶವೆಂದರೆ ಇದನ್ನು ಹೆಚ್ಚಾಗಿ ಬಳಸುತ್ತಿರುವವರು ಶಾಲಾ ಕಾಲೇಜುಗಳ ಹದಿಹರೆಯದ ಯುವತಿಯರು ಎಂಬುದು! ಬೇರೆಲ್ಲಕ್ಕಿಂಥಾ ಔಷಧಿ ಮಾರಾಟದ ಜಾಲ ಶಕ್ತಿಯುತವಾಗಿರುವುದರಿಂದ ನಗರ ಪಟ್ಟಣವೆನ್ನದೇ ಇಂತಹ ಉತ್ಪನ್ನಗಳು ಏಕಕಾಲಕ್ಕೆ ಎಲ್ಲೆಡೆ ಲಭ್ಯವಾಗುತ್ತಿವೆ.

ಈ ಕುರಿತು ಸಮೀಕ್ಷೆ ನಡೆಸಿರುವ ರಾಷ್ಟ್ರಮಟ್ಟದ ಪತ್ರಿಕೆಯೊಂದರ ಪ್ರಕಾರ ದೇಶಾದ್ಯಂತ ಸುಮಾರು ಎರಡು ಲಕ್ಷ ಐ-ಪಿಲ್ ಮಾತ್ರೆಗಳು ಪ್ರತಿ ತಿಂಗಳೂ ಮಾರಾಟವಾಗುತ್ತಿವೆ. ಹಾಸನದ ನನ್ನ ಸ್ತ್ರೀರೋಗ ತಜ್ಞ ಗೆಳತಿಯರ ಪ್ರಕಾರ ಸರಿಯಾದ ಸೇವನಾ ಕ್ರಮದ ಅರಿವಿರದೇ ತಿಂಗಳಿಗೆ 3-4 ಬಾರಿ ಈ ಮಾತ್ರೆ ಸೇವಿಸುವ ಹೆಣ್ಣುಮಕ್ಕಳಿಗೆ ಹೊಟ್ಟೆನೋವು, ವಿಪರೀತ ರಕ್ತಸ್ರಾವ, ಸುಸ್ತು, ವಾಕರಿಕೆಗಳು ಪ್ರಾರಂಭಿಕ ಹಂತದಲ್ಲಿ ಕಂಡು ಬರುತ್ತಿದ್ದರೂ ಇದನ್ನು ವೈದ್ಯರ ಸಲಹೆ ಇಲ್ಲದೇ ವಿವೇಚನಾರಹಿತವಾಗಿ ಮಾಮೂಲಿ ಗರ್ಭನಿರೋಧಕದಂತೆ ಪ್ರತಿಬಾರಿಯೂ ಬಳಸಿದಾಗ ತೀವ್ರ ತೆರನಾದ ಪಾರ್ಶ್ವ ಪರಿಣಾಮಗಳು ಕಾಲಾಂತರದಲ್ಲಿ ಆಗುವ ಸಾಧ್ಯತೆಗಳು ಹೆಚ್ಚಾಗಿವೆ. ಏಕೆಂದರೆ ಇದು ಮಾಮೂಲಿ ಗರ್ಭನಿರೋಧಕಗಳ ನಾಲ್ಕುಪಟ್ಟು ಪ್ರಭಾವಶಾಲಿಯಾಗಿರುತ್ತದೆ. ಅದನ್ನು ಮತ್ತೆ ಮತ್ತೆ ತಡೆದುಕೊಳ್ಳುವ ಸಾಮರ್ಥ್ಯ ದೇಹಕ್ಕಿರುವುದಿಲ್ಲ. ಜೀವಮಾನದಲ್ಲಿ 1-2 ಬಾರಿ ಅನಿವಾರ್ಯ ಸಂದರ್ಭದಲ್ಲಿ ಬಳಸಬಹುದಾದ ಈ ಮಾತ್ರೆಯನ್ನು ಗರ್ಭಧಾರಣೆಯ ಸಾಧ್ಯತೆಯನ್ನು ತಡೆಯುತ್ತದೆಂದು ಭ್ರಮಿಸಿ ನಿರಂತರವಾಗಿ ಸೇವಿಸಲಾರಂಭಿಸಿದರೆ ಹೆಣ್ಣು ಮಕ್ಕಳ ಗತಿ ಏನಾಗಬೇಕು? ಸಂಕೋಚ, ಹೆದರಿಕೆಗಳಿಂದ ವೈದ್ಯರ ಬಳಿಗೆ ತಪಾಸಣೆಗೆ ಹೋಗಲೂ ಹಿಂಜರಿವ ಹೆಣ್ಣುಮಕ್ಕಳು ಮುಂದಿನ ದಿನಗಳಲ್ಲಿ ಆರೋಗ್ಯ ಹಾಗೂ ಬಸಿರು ಸಂಬಂಧಿ ಮುಖ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆಂಬ ಆತಂಕ ವೈದ್ಯರದು.

ಆದರೆ ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೆಂದರೆ ಮಾಧ್ಯಮಗಳಲ್ಲಿ ಎಲ್ಲೆಂದರಲ್ಲಿ ಪ್ರಕಟಗೊಳ್ಳುತ್ತಿರುವ safe-sex-campaignಯಾವುದೇ ಗರ್ಭನಿರೋಧಕಗಳ ಅಥವಾ ಏಡ್ಸ್ ಕುರಿತ ಎಚ್ಚರಿಕೆಯ ಜಾಹಿರಾತುಗಳಲ್ಲಿ ಸೆಕ್ಸ್‌ನ ಮುಕ್ತತೆ ತಪ್ಪಲ್ಲವೆಂದು ಪ್ರತಿಪಾದಿಸುತ್ತಲೇ ಅದು “ಸುರಕ್ಷಿತವಾಗಿದ್ದರೆ” ಸಾಕು ಎಂದು ಸಮರ್ಥಿಸುತ್ತಿರುವ ಸಂದೇಶದ ಹಿನ್ನೆಲೆಯಲ್ಲಿ ವ್ಯಾಪಾರಿ ಜಗತ್ತಿನ ಕ್ರೂರ ಚಾಣಾಕ್ಷತೆಯೊಂದಿಗೆ, ಹೆಣ್ಣಿನ ದೇಹವನ್ನು ಸರಕೆಂಬಂತೆ ವೈಭವೀಕರಿಸುತ್ತಿರುವ ಪುರುಷ ವಿಕೃತಿಯೂ ಎದ್ದು ತೋರುತ್ತದೆ. ಇವು ಸದ್ದಿಲ್ಲದೇ ಮುಕ್ತಕಾಮವನ್ನು ಪ್ರಚೋದಿಸುವಂತವೂ ಆಗಿವೆ. ಅಥವಾ ಕಾಲಕ್ಕೇ ಇಂತಹ ತುರ್ತು ಬಂದೊದಗಿದೆ ನಾವಿನ್ನೂ ಓಬಿರಾಯನ ಕಾಲದಲ್ಲಿದ್ದೇವೆಯೇ ಎಂದು ಮನಸು ಆತಂಕದಿಂದ ಪ್ರಶ್ನಿಸಿಕೊಳ್ಳುತ್ತಿದೆ.

ಗಂಡು-ಹೆಣ್ಣಿನ ಖಾಸಗಿ, ಕೌಟುಂಬಿಕ ಸುಖದ ಪ್ರತೀಕವಾದ ಬಸಿರು ಇಂದು ಸಾಮಾಜಿಕ ಬದಲಾವಣೆಯ ಸಂಕೇತವಾಗಿ, ಸಾರ್ವಜನಿಕವಾಗಿಬಿಟ್ಟಿರುವುದು ವಿಪರ್ಯಾಸ! ಭಾರತದಲ್ಲಿ ವರ್ಷವೊಂದಕ್ಕೆ 30-40 ಲಕ್ಷ ಭ್ರೂಣಗಳು ಹತ್ಯೆಗೀಡಾಗುತ್ತಿವೆಯೆಂದು ವರದಿಯೊಂದು ತಿಳಿಸುತ್ತದೆ. (ಹೆಣ್ಣು ಭ್ರೂಣಹತ್ಯೆಯದು ಬೇರೆಯದೇ ಲೆಕ್ಕಾಚಾರ.) ಭೋಗ ಸಂಸ್ಕೃತಿಯೆಡೆಗಿನ ವಿಪರೀತದ ಆಕರ್ಷಣೆ, ಸೆಕ್ಸ್‌ನ್ನು ಎಲ್ಲಕ್ಕೂ ಮಿಗಿಲೆಂಬಂತೆ ಎತ್ತಿ ಹಿಡಿಯುತ್ತಿರುವ ದೃಶ್ಯ ಮಾಧ್ಯಮಗಳು, ಬದಲಾದ ಆರ್ಥಿಕ, ಸಾಮಾಜಿಕ ಪರಿಸರ ಹಾಗೂ ಶೈಕ್ಷಣಿಕ-ವೈಜ್ಞಾನಿಕ ಸೌಲಭ್ಯಗಳ ಹಿನ್ನೆಲೆಯಲ್ಲಿ ನೈತಿಕತೆಯ-ಲೈಂಗಿಕತೆಯ ಪರಿಕಲ್ಪನೆಯಲ್ಲಿ ವೇಗದ ಬದಲಾವಣೆಗಳಾಗುತ್ತಿರುವುದು, ಸಮಾಜದ ಹಿತಕ್ಕಿಂಥಾ ವೈಯಕ್ತಿಕತೆಯೇ ಮೇಲುಗೈ ಸಾಧಿಸುತ್ತಿರುವುದು, ಸ್ವಂತ ಸ್ವಾತಂತ್ರ್ಯದ ಪರಿಧಿ ಗಂಡು-ಹೆಣ್ಣುಗಳಿಬ್ಬರಿಗೂ ವಿಸ್ತಾರವಾಗುತ್ತಿರುವುದು, ಇದು ಮಿತಿಯಿರದ ಸ್ವಾತಂತ್ರ್ಯವಾಗಿ ಬದಲಾಗುತ್ತಿರುವುದು, ಇದೇ ಈ ಪ್ರಮಾಣದ ಭ್ರೂಣ ಹತ್ಯೆಗೆ ಕಾರಣ ಎಂದು ಸಮಾಜ ವಿಜ್ಞಾನಿಗಳು ವಿಶ್ಲೇಷಿಸುತ್ತಾರೆ.

ಜೊತೆಗೆ ಭಾವನಾತ್ಮಕ ಅಪಕ್ವತೆ, ಸಂಬಂಧಗಳ ನಿರ್ವಹಣೆಯಲ್ಲಿನ ಬೇಜವಾಬ್ದಾರಿತನ, ಲೈಂಗಿಕತೆ ಕುರಿತು ಅವಸರದ ಕುತೂಹಲ, ಮಾಧ್ಯಮಗಳ ಪ್ರಭಾವ, ಸರಿಯಾದ ಮಾದರಿ-ಮಾರ್ಗದರ್ಶನಗಳ ಕೊರತೆ, ಉಸಿರುಕಟ್ಟಿಸುವ ಸಂಪ್ರದಾಯಗಳು, ಆಧುನಿಕತೆ ಹಾಗೂ ಹಳೆಯ ಸಂಪ್ರದಾಯಗಳ ಸಂಘರ್ಷದಲ್ಲಿ ಮೂರನೆಯ, ಸಮಾಜ ಒಪ್ಪಿತ ದಾರಿ ಇಲ್ಲದಿರುವುದು, ಸಮಾಜದ ವಿರೋಧ ಕಟ್ಟಿಕೊಂಡು, ಅದನ್ನು ಎದುರಿಸಿ ನಿಲ್ಲುವ ಸಾಮರ್ಥ್ಯಹೀನತೆ, ಶಿಶುವಿನ ಹೊಣೆಗಾರಿಕೆ ಹೊರಲು ಸಿದ್ಧವಿಲ್ಲದ ಸ್ವತಂತ್ರ ಮನಸ್ಸುಗಳು….. ಇಂಥಹ ಹತ್ತು ಹಲವು ಮನಃಶಾಸ್ತ್ರೀಯ ನೆಲೆಯ ಕಾರಣಗಳು ಬಸಿರನ್ನು ಘಾಸಿಗೊಳಿಸಿ ಹತ್ಯೆಗೊಳಿಸುವ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತವೆ.

ಅತ್ಯಾಚಾರಕ್ಕೆ, ಗೌಪ್ಯ ಲೈಂಗಿಕ ಕಿರುಕುಳಕ್ಕೆ, ತಮ್ಮನ್ನು ತಾವೇ ನಿಭಾಯಿಸಿಕೊಳ್ಳಲಾಗದ ದೌರ್ಬಲ್ಯಕ್ಕೆ, india-foeticideಮದುವೆಯಾಗುವುದಾಗಿ ನಂಬಿಸಿ ಮೋಸ ಹೋದ ತಪ್ಪಿಗೆ ಬಸಿರಾದ ಹೆಣ್ಣು ಮಕ್ಕಳ ಕಥೆಗಳು, ಹೆಣ್ಣು ಮಗು ಬೇಡವೆಂಬ ಕುಟುಂಬದವರ ಒತ್ತಡ ಹೀಗೆ ಹಲವಾರು ಬಸಿರು ಸಂಬಂಧಿ ಸಮಸ್ಯೆಯ ಹಲವು ಮುಖಗಳು ವೈದ್ಯರಲ್ಲಿ “ಆಫ್ ದಿ ರೆಕಾರ್ಡ್” ಆಗಿ ದಾಖಲಾಗಿರುತ್ತವೆ. ನಿತ್ಯ ದಾಖಲಾಗುತ್ತಿವೆ.

ಯಾವುದೇ ಪ್ರಾಣಿಸಂತತಿಯ ಆರೋಗ್ಯವಂತ ಬಸಿರು ಮತ್ತು ಆರೋಗ್ಯಪೂರ್ಣ ಪೀಳಿಗೆಯ ದೃಷ್ಟಿಯಿಂದ ನಿಸರ್ಗವೇ ಅಗೋಚರವಾಗಿ ಹಲವು ಪ್ರಾಕೃತಿಕ ನಿಯಮಗಳನ್ನು ರೂಪಿಸಿದೆ. ಹೆಣ್ಣಿನ ಬಸಿರು ಅದರ ಎಲ್ಲಾ ಧಾರ್ಮಿಕ, ನೈತಿಕ ಚೌಕಟ್ಟುಗಳಿಂದಾಗಿ ಭಾರತೀಯ ಸಂದರ್ಭದಲ್ಲಿ ಪಾವಿತ್ರ್ಯತೆಯ ಹೆಸರಿನಲ್ಲಿಯೇ ಗುಣಾತ್ಮಕತೆಯನ್ನು ಪಡೆದುಕೊಂಡಿತ್ತು. ಆದರೆ ಇತ್ತೀಚೆಗಿನ ಕೆಲ ದಶಕಗಳಿಂದ ಆಧುನಿಕತೆಯ ಪ್ರಭಾವ, ಮಾಧ್ಯಮಗಳ ಅಬ್ಬರ, ಎಗ್ಗಿಲ್ಲದೇ ಕೈಗೆಟುಕುತ್ತಿರುವ ವೈದ್ಯಕೀಯ ಮುನ್ನೆಚ್ಚರಿಕೆಯ ಲೈಂಗಿಕ ಸಾಧನ, ಸೌಲಭ್ಯಗಳಿಂದಾಗಿ ಹಲವಾರು ಹದಿಹರೆಯದ ಯುವಕ-ಯುವತಿಯರು ಸೆಕ್ಸ್‌ನ್ನು ಮೋಜಿಗಾಗಿ ಬಳಸುತ್ತಿರುವುದು, ನಿರಂತರವಾಗಿ ಹೊಸ ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತಿದೆ. ಅವು ಅನೈತಿಕ ನೆಲೆಯ, ಉತ್ತರಗಳೇ ಇಲ್ಲದ ಬೃಹತ್ ಸಮಸ್ಯೆಗಳಾಗಿ ಕುಟುಂಬ-ಸಮಾಜದ ಎದುರು ನಿಲ್ಲುತ್ತಿವೆ.

ಹೆಣ್ಣಿನ ಬಸಿರನ್ನು ಪ್ರಧಾನವಾಗಿರಿಸಿಕೊಂಡು ವೈದ್ಯಕೀಯ ಪ್ರಾಯೋಗಿಕ ಪರೀಕ್ಷೆಗಾಗಿ ಅನೈತಿಕ ನೆಲೆಗಳಲ್ಲಿ ಭಾರತದ ಬಡ ಹೆಣ್ಣುಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ಇಂದಿನ ಹಲವು ಸಮೀಕ್ಷೆಗಳು ಬೆಳಕು ತೋರುತ್ತಿವೆ. save-girl-childಹಾಗೇ 2002 ರಲ್ಲಿ “ಬಾಡಿಗೆ ತಾಯಂದಿರ” ಹಕ್ಕನ್ನು ಕಾನೂನುಬದ್ಧಗೊಳಿಸಿದ ನಂತರ ಭಾರತದ ಕೆಲವು ಬಡ ಹೆಣ್ಣುಮಕ್ಕಳು ಹಣಗಳಿಕೆಯ ಮಾರ್ಗವಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಇದೂ ಕೂಡ ಶೋಷಣೆಯ ಇನ್ನೊಂದು ಮುಖವೆಂದು ವಾದಿಸುವವರಿದ್ದಾರೆ. ಆದರೆ ಬಡತನ, ಅಸಹಾಯಕತೆಗಳು ನಮ್ಮ ಹೆಣ್ಣು ಮಕ್ಕಳಿಂದ ಏನೆಲ್ಲಾ ಕುಕೃತ್ಯಗಳನ್ನು ಮಾಡಿಸುತ್ತದೆ ಎಂಬುದಕ್ಕೆ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಹೆಣ್ಣುಮಕ್ಕಳ ಮಾರಾಟ, ವೇಶ್ಯಾವಾಟಿಕೆ, ಅಕ್ರಮ ಸಂಬಂಧ, ಬಲವಂತದ ವಿವಾಹ….. ಇತ್ಯಾದಿಗಳ ಮೂಲಕ ಬಾಡಿಗೆ ತಾಯಂದಿರಿಗಿಂಥಾ ಕ್ರೂರವಾಗಿ, ಆಘಾತಕಾರಿ ಪ್ರಮಾಣದಲ್ಲಿ ಅವರು ಶೋಷಣೆಗೊಳಗಾಗುತ್ತಿದ್ದಾರೆ.

ಬದಲಾಗುತ್ತಿರುವ ಪರಿಸರದಂತೆ ವೈದ್ಯಕೀಯ ಕ್ಷೇತ್ರದಲ್ಲೂ ಅಗಾಧ ಪ್ರಮಾಣದಲ್ಲಿ ಪ್ರಗತಿಯಾಗಿದೆ. ಹುಟ್ಟಲಿರುವ ಮಗು ಅನಾರೋಗ್ಯ ಹೊಂದಿರುವಂತಹುದು, ಅದರ ಭವಿಷ್ಯದ ದೃಷ್ಟಿಯಿಂದ ಯಾತನಾದಾಯಕವಾದುದೂ ಮತ್ತು ಅಂತಹ ಮಗುವನ್ನು ನೋಡಿಕೊಳ್ಳಲು ವೈದ್ಯಕೀಯ ವೆಚ್ಚಕ್ಕಾಗಿ ಹೆಚ್ಚು ಹಣ ಖರ್ಚುಮಾಡಬೇಕಾದ ಹಾಗೂ ಜೀವನ ಪರ್ಯಂತ ಅಂಥಹಾ ಮಗುವನ್ನು ಸಾಕುವಾಗ ಅನುಭವಿಸಬೇಕಾಗುವ ಮಾನಸಿಕ ಹಿಂಸೆಯಿಂದ ತಪ್ಪಿಸಿಕೊಳ್ಳಲು ಅದನ್ನು ಭ್ರೂಣದ ಹಂತದಲ್ಲಿಯೇ ಗರ್ಭಪಾತ ಮಾಡಿಸಲು ಕಾನೂನಿನಲ್ಲಿ ಅವಕಾಶವಿರುವುದು ಎಲ್ಲ ರೀತಿಯಲ್ಲಿಯೂ ಸಮಂಜಸವಾದುದು. ಆದರೆ ಕಾನೂನುಬಾಹಿರವಾಗಿ ಯಾವ ಎಗ್ಗೂ ಇಲ್ಲದೇ ಇಷ್ಟೊಂದು ಪ್ರಮಾಣದಲ್ಲಿ ನಡೆಯುವ ಭ್ರೂಣಹತ್ಯೆಯಂಥ ಚಟುವಟಿಕೆಗೆ ನಿಯಂತ್ರಣ ತರದಿದ್ದಾಗ ಕಾನೂನಿಗೆ ಯಾವ ಬೆಲೆ ಇರುತ್ತದೆ?

ಇಂದಿನ ಮಹಿಳೆ, ಮತ್ತವಳ ಆರೋಗ್ಯ ಪೂರ್ಣ ಬಸಿರಿನ ಹಿತದೃಷ್ಟಿಯಿಂದ ಯಾವುದೇ ರೀತಿಯ ಗರ್ಭನಿರೋಧಕಗಳನ್ನು ವೈದ್ಯರ ಸಲಹೆ ಇಲ್ಲದೇ ಕೊಂಡುಕೊಳ್ಳುವ ಮತ್ತು ಬಳಸುವ ವಿಧಾನವನ್ನು ಕಾನೂನುಬಾಹಿರವೆಂದು ಪರಿಗಣಿಸಿ, ಮೊದಲಿಗೆ ಕಟ್ಟುನಿಟ್ಟಿನ ಕಾನೂನಿನ ಕ್ರಮ ಕೈಗೊಳ್ಳಬೇಕು. ನಿರಂತರವಾದ ಗರ್ಭನಿರೋಧಕದಂಥ ಪ್ರಖರವಾದ ಔಷಧಿ ಸೇವನೆಯಿಂದ ಪಾರ್ಶ್ವ ಪರಿಣಾಮಗಳಾಗಿ ಸರಿಪಡಿಸಲಾಗದ ಭೀಕರ ಆರೋಗ್ಯ ಸಮಸ್ಯೆಗಳು ಹಾಗೂ ಅನಾರೋಗ್ಯಕರ ಪೀಳಿಗೆಯ ಹುಟ್ಟಿಗೆ ಕಾರಣವಾಗಬಹುದೆಂದು ಸ್ತ್ರೀರೋಗ ತಜ್ಞರು ಎಚ್ಚರಿಸುತ್ತಲೇ ಬಂದಿದ್ದಾರೆ. moodsಔಷಧಿ ಅಂಗಡಿಗಳ ಕೌಂಟರ್‌ಗಳಲ್ಲಿ ಮುಕ್ತವಾಗಿ ಮಾರಾಟ ಮಾಡುವ ವಿಧಾನದ ಬಗ್ಗೆಯೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಅಂತಹ ಮಾರಾಟಗಾರರಿಗೆ ಕಠಿಣ ಶಿಕ್ಷೆ ವಿಧಿಸುವಂತಹಾ ನಿಯಮ ಜಾರಿಯಾಗಬೇಕು. ಮಾಧ್ಯಮಗಳಲ್ಲಿ ವಿವೇಚನಾರಹಿತವಾಗಿ ಜಾಹಿರಾತು ನೀಡುವ ಮೂಲಕ ಯುವಜನರು ದಾರಿತಪ್ಪುವ ಸಾಧ್ಯತೆಗಳು ಹೆಚ್ಚಿರುವುದರಿಂದ ಜಾಹಿರಾತುಗಳಿಗೆ ಕಡಿವಾಣ ಅಗತ್ಯ. ಮಾಧ್ಯಮಗಳೂ ಹೆಚ್ಚು ಸಾಮಾಜಿಕ ಜವಾಬ್ದಾರಿಯಿಂದ, ವಿವೇಕಯುತವಾಗಿ ನಡೆದುಕೊಳ್ಳಬೇಕಿರುವುದು ಮುಖ್ಯ. ಜಾಹಿರಾತುಗಳು ಎಲ್ಲಿ? ಹೇಗೆ? ಯಾವ ರೀತಿಯಲ್ಲಿ ಎಚ್ಚರಿಕೆಯಿಂದ ಪ್ರಕಟಗೊಳ್ಳಬೇಕೆಂಬ ಚರ್ಚೆಗಳಾಗಬೇಕು. ಇದನ್ನು ವೈದ್ಯಕೀಯ ಸಂಸ್ಥೆಗಳು ಮಾಡಿದರೆ ಉತ್ತಮ.

ಇದೆಲ್ಲಕ್ಕಿಂತಾ ಮುಖ್ಯವಾಗಿ ಹದಿಹರೆಯದ ಪ್ರಾರಂಭದಲ್ಲೇ ಹೆಣ್ಣು ಮಗುವಿಗೆ ಅವಳ ದೇಹ, ಅದರ ಕುರಿತ ಎಚ್ಚರಿಕೆ, ಸೆಕ್ಸ್ ಸಂಬಂಧದಿಂದಾಗುವ ಪರಿಣಾಮ, ಗರ್ಭನಿರೋಧಕ ಮತ್ತದರ ಪ್ರಭಾವವೆಲ್ಲವನ್ನು ಮನೆಯಲ್ಲಿ, ಶಿಕ್ಷಣದ ಭಾಗವಾಗಿ ತಿಳಿಹೇಳುವುದು ಮುಖ್ಯವಾದುದು. ಇದರೊಂದಿಗೆ ಗಂಡು ಮಕ್ಕಳಿಗೂ ಲೈಂಗಿಕ ಬದುಕಿನ ನೈತಿಕ ಜವಾಬ್ದಾರಿ, ಅದರ ಪರಿಣಾಮಗಳ ಕುರಿತು ಎಚ್ಚರಿಕೆ, ಆರೋಗ್ಯಪೂರ್ಣ, ಹೊಣೆಗಾರಿಕೆಯ ಜೀವನದ ಮಹತ್ವದ ಅರಿವು ಮೂಡಿಸುವುದು ಅಷ್ಟೇ ಮುಖ್ಯವಾದುದು.

ಬಡತನ, ಅಸಹಾಯಕತೆ, ಶಿಕ್ಷಣ ಮತ್ತು ಮುಖ್ಯವಾಗಿ ಅರಿವಿನ ಕೊರತೆ, ಇಂತಹ ಬಹಳಷ್ಟು ಸಮಸ್ಯೆಗಳಿಗೆ ಕಾರಣವಾದ್ದರಿಂದ ಮೊದಲು ಈ ಮೂಲ ಸಮಸ್ಯೆಗಳಿಂದ ವಿಮುಕ್ತಗೊಳಿಸುವುದು ಸರ್ಕಾರ, ಸಮಾಜ ಮತ್ತು ಮಹಿಳಾ ಸಂಘಟನೆಗಳ ಮುಖ್ಯ ಗುರಿಯಾಗಬೇಕಿದೆ. ಅದಾಗದಿದ್ದಾಗ ಹೆಣ್ಣಿನ ಬಸಿರು ಮತ್ತೆ ಮತ್ತೆ ಹೀಗೇ ಹಲ್ಲೆಗೊಳಗಾಗುತ್ತಲೇ ಇರುತ್ತದೆ. ಹೆಣ್ಣು ಮಕ್ಕಳಿಗೆ ಎಲ್ಲಿಯವರೆಗೂ ತಾವೊಂದು ವಸ್ತುವಲ್ಲ, ತಾವೊಂದು ’ವ್ಯಕ್ತಿ’ ಎನ್ನುವ, ಮತ್ತು ತನ್ನ ವ್ಯಕ್ತಿತ್ವಕ್ಕೆ ಗೌರವ ಪಡೆಯಬೇಕೆಂಬ ವಿವೇಚನೆ ಮೂಡುವುದಿಲ್ಲವೋ ಅಲ್ಲಿಯವರೆಗೂ ಜಾಗೃತಿ ಮೂಡಿಸುವ ಪ್ರಯತ್ನಗಳು ನಡೆಯುತ್ತಲೇ ಇರಬೇಕಾಗುತ್ತದೆ.