Daily Archives: December 4, 2013

ಮುಸ್ಲಿಂ ಮೂಲಭೂತವಾದವನ್ನು ಖಂಡಿಸೋಣ, ಜೊತೆಗೆ ಮುಸ್ಲಿಂ ಸಮುದಾಯದ ತಲ್ಲಣವನ್ನು ಅರ್ಥೈಸೋಣ

– ಆಸೀಫ್ ಅಸನ್, ಬೆಂಗಳೂರು

ಕೆಲ ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಪಂಜಿಮೊಗೆರು ಎಂಬ ಗ್ರಾಮದ ನಿವಾಸಿ ಆಯೆಷಾ ಭಾನು ಹಾಗೂ ಆಕೆಯ ಪತಿ ಜುಬೈರ್ ಎಂಬುವವರನ್ನು ಬಿಹಾರ ಪೊಲೀಸರು ಬಂಧಿಸಿದ್ದರು. ಮರುದಿನ ರಾಜ್ಯದ ಪ್ರಮುಖ ಮಾಧ್ಯಮಗಳಲ್ಲಿ ಬಿಹಾರದ ಪಾಟ್ನಾದಲ್ಲಿ ಮೋದಿಯ “ಹೂಂಕಾರ್ ರ್‍ಯಾಲಿ”ಯಲ್ಲಿ ನಡೆದ ಬಾಂಬ್ ಸ್ಟೋಟಕ್ಕೆ ಸಂಬಂಧಿಸಿದಂತ್ತೆ ಮಂಗಳೂರಿನಲ್ಲಿ ಮಹಿಳೆಯೊಬ್ಬಳನ್ನು ಬಂಧಿಸಲಾಗಿದೆ ಎಂಬ ಸುದ್ದಿ ವಿವಿಧ ಆಯಾಮಗಳನ್ನು ಪಡೆದು ಮಾಧ್ಯಮಗಳಿಗೆ ಆಹಾರವಾಯಿತು. ಆಯೆಷಾಳನ್ನು “ಲೇಡಿ ಟೆರರಿಸ್ಟ್” ಎಂದು ಕೆಲವರು ಬಿಂಬಿಸಿದರು, ಇನ್ನು ಕೆಲವರು ಆಯೆಷಾ ಮೋದಿ ಹತ್ಯೆಗೆ ಸ್ಕೆಚ್ ರೂಪಿಸಿದ್ದಳು ಎಂಬ ಅರ್ಥದಲ್ಲೇ ವಿಶೇಷ ವರದಿಗಳನ್ನು ಪುಂಕಾನುಪುಂಕವಾಗಿ ಪ್ರಕಟಿಸತೊಡಗಿದರು. ನೈಜ್ಯವಾಗಿ ಮಾಧ್ಯಮಗಳಲ್ಲಿ ಪ್ರಕಟವಾದಂತಹಾ ಶೇ 90 ರಷ್ಟು ಸುದ್ದಿಗಳು ಊಹೆಗಳಿಂದ ಕೂಡಿದ್ದವು. ಬಿಹಾರದ ಲಕೆಶರಾಯಿ Aysha-Banuಪೊಲೀಸ್ ಠಾಣೆಯ ಅಧಿಕಾರಿಗಳ ಹೇಳಿಕೆಗಳಿಂದ ಇದೆಲ್ಲಾ ಸ್ಪಷ್ಟಗೊಳ್ಳುತ್ತದೆ. ಆಯೆಷಾ ಹಾಗೂ ಜುಬೈರ್ ದಂಪತಿ ಮಾಡುತ್ತಿದ್ದದ್ದು ಹವಾಲ ವ್ಯಾಪಾರ. ಕಾನೂನುಬಾಹಿರವಾಗಿ ತೆರಿಗೆ ವಂಚಿಸಿ ನಡೆಸುವಂತಹಾ ಈ ವ್ಯವಹಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ದೇಶಾದ್ಯಂತ ಇದರ ಜಾಲ ವಿಸ್ತರಿಸಿದೆ. ವಿದೇಶದಲ್ಲಿರುವವರು ಸರ್ಕಾರಕ್ಕೆ ತೆರಿಗೆ ವಂಚಿಸಿ ಹುಂಡಿ ಮೂಲಕ ವ್ಯವಹಾರ ನಡೆಸಿ ಊರಲ್ಲಿರುವ ಸಂಬಂಧಿಕರಿಗೆ ಹಣವನ್ನು ತಲುಪಿಸುತ್ತಾರೆ. ಇದಕ್ಕಾಗಿ ಹುಂಡಿ ವ್ಯವಹಾರಸ್ಥರಲ್ಲಿ ಸಾಕಷ್ಟು ಸಂಖ್ಯೆಯ ಏಜಂಟ್‌ಗಳಿರುತ್ತಾರೆ. ಅಂಥಹದ್ದೇ ಏಜಂಟ್‌ಗಳಲ್ಲಿ ಒಬ್ಬ ಜುಬೈರ್ ಹಾಗೂ ನಂತರದ ದಿನಗಳಲ್ಲಿ ಬಂಧಿತವಾದ ಆಸೀಫ್ ಹಾಗೂ ಮುಸ್ತಾಕ್. ಪೊಲೀಸರೇ ನೀಡುವ ಮಾಹಿತಿ ಪ್ರಕಾರ ಪಾಟ್ನಾ ಸ್ಟೋಟಕ್ಕೂ ಬಂಧಿತರಿಗೂ ಯಾವುದೇ ಲಿಂಕ್ ಇರುವುದು ಇದುವರೆಗೂ ಸಾಬೀತಾಗಿಲ್ಲ. ಅವರ ಬಂಧನವಾಗಿರುವುದು ಅಕ್ರಮ ಹವಾಲ ಜಾಲಕ್ಕೆ ಸಂಬಂಧಿಸಿದಂತೆ ಎಂಬುವುದನ್ನು ಬಿಹಾರದ ಪೊಲೀಸರು ಸ್ಪಷ್ಟಪಡಿಸಿರುತ್ತಾರೆ.

ಆಯೆಷಾ ಜುಬೈರ್ ಒಂದೇ ಪ್ರಕರಣ ಅಲ್ಲ, ಇಂತಹಾ ನೂರಾರು ಪ್ರಕರಣಗಳು ದೇಶಾದ್ಯಂತ ಪ್ರತಿದಿನ ನಡೆಯುತ್ತಲೇ ಇದೆ. ಭಯೋತ್ದಾಧನೆಯ ಆರೋಪದ ಅಡಿಯಲ್ಲಿ ಅದೆಷ್ಟೋ ಮುಗ್ದರು ಜೈಲಲ್ಲಿ ಜೀವನ ಪರ್ಯಂತ ಕೊಳೆಯುವ ಸ್ಥಿತಿಯಲ್ಲಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಸ್ಟೋಟಗಳು ಹೆಚ್ಚಾಗಿ ಸಂಭವಿಸುತ್ತಿವೆ. ಸ್ಟೋಟದ ಬೆನ್ನಲ್ಲೇ ಅವುಗಳನ್ನು ಮುಸ್ಲಿಂಮರ ತಲೆಗೆ ಕಟ್ಟಿಬಿಡಲಾಗುತ್ತಿದೆ. malegaon_blastಇನ್ನೊಂದೆಡೆ ಮಲೆಗಾಂವ್, ಬುದ್ಧಗಯಾ, ನಾಂದೇಡ್, ಮಕ್ಕಾ ಮಸೀದಿ ಸ್ಟೋಟ ಪ್ರಕರಣಗಳಲ್ಲೂ ಪೊಲೀಸರು ಮುಸ್ಲಿಂಮರ ಸುತ್ತ ತನಿಖೆಯನ್ನು ಕೇಂದ್ರೀಕರಿಸುತ್ತಾರೆಯೆ ಹೊರತು ತನಿಖೆಯ ದಿಕ್ಕನ್ನು ಬದಲಾಯಿಸುತ್ತಿಲ್ಲ. ಹೀಗೆ ತಾನು ಮಾಡದ ತಪ್ಪಿಗೆ ಮಾಧ್ಯಮಗಳಲ್ಲಿ, ಪೊಲೀಸರ ಹಿಟ್‌ಲಿಸ್ಟ್‌ಗಳಲ್ಲಿ ಮುಸ್ಲಿಂಮರು ಡೇಂಜರಸ್ ವ್ಯಕ್ತಿಗಳಾಗಿಯೇ ಬಿಂಬಿತವಾಗುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ಸಂಘಪರಿವಾರ ಮುಸ್ಲಿಂ ಸಮುದಾಯವನ್ನು ತಮ್ಮ ಮೊದಲ ಟಾರ್ಗೆಟ್ ಮಾಡಿ ವ್ಯವಸ್ಥಿತವಾಗಿ ಹಂತಹಂತವಾಗಿ ಅಲ್ಪಸಂಖ್ಯಾತರ ಸಮುದಾಯದ ವಿರುದ್ಧ ಪಿತೂರಿ ನಡೆಸುತ್ತಾ ಬಂದಿದೆ. ಮುಸ್ಲಿಂ ಸಮುದಾಯದ ಮೇಲೆ ನಡೆಯುತ್ತಿರುವ ಹಲ್ಲೆಗಳು, ಆಸ್ತಿಪಾಸ್ತಿ ಧ್ವಂಸ, ಕೋಮು ಗಲಭೆಗಳನ್ನು ಸೃಷ್ಟಿಸಿ ವ್ಯವಸ್ಥಿತ ಮಾರಣ ಹೋಮ ನಡೆಸುತ್ತಾ ಬಂದಿದೆ. ಈ ಎಲ್ಲದರ ಪಾಲೂ ಹೆಚ್ಚುತ್ತಿರುವ ಮುಸ್ಲಿಂ ಕೋಮುವಾದ ಅಥವಾ ಮೂಲಭೂತವಾದದಲ್ಲಿದೆ.

ಸದಾ ಹಿಂಸೆಗೊಳಗಾದ ಸಮಾಜ, ಅಭದ್ರತೆಯಲ್ಲಿ ಜೀವನ ಕಂಡುಕೊಳ್ಳುವ ಸಮುದಾಯ, ಬಹುಸಂಖ್ಯಾತರ ದಬ್ಬಾಳಿಕೆ, ಮತ್ತು ದೌರ್ಜನ್ಯ, ಯಾವುದೇ ದೇಶದಲ್ಲಿರುವ ಅಲ್ಪಸಂಖ್ಯಾತರನ್ನು ಹೆಚ್ಚಾಗಿ ಸಂಘಟಿತರಾಗುವಂತೆ ಮಾಡುತ್ತದೆ. ಅದು ಧಾರ್ಮಿಕ ನೆಲೆಯಲ್ಲಿರಬಹುದು ಅಥವಾ ಸಾಮಾಜಿಕ ನೆಲೆಯಲ್ಲಿರಬಹುದು. ಭಾರತದಲ್ಲಿ ಅಲ್ಪಸಂಖ್ಯಾತರಾಗಿರುವ ಮುಸ್ಲಿಂಮರ ಹಾಗೆಯೇ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳದ್ದೂ ಇದೇ ಪರಿಸ್ಥಿತಿ. ಕರ್ನಾಟಕದ ಇತಿಹಾಸವನ್ನೇ ನೋಡೋಣ. ಹಿಂದೂ ಮೂಲಭೂತವಾದ ಸಂಘಪರಿವಾರದ ಮೂಲಕ ಕರ್ನಾಟಕದಲ್ಲಿ ಪ್ರಬಲವಾಗಿ ಬೇರೂರಲು ಸಾಧ್ಯವಾಗಿದ್ದು ಬಾಬರೀ ಮಸೀದಿ ಧ್ವಂಸದ ನಂತರದಲ್ಲಿ. adi-udupi-naked-parade1990 ನಂತರದಲ್ಲಿ ಸಂಘ ಪರಿವಾರದಿಂದ ವ್ಯವಸ್ಥಿತವಾಗಿ ಮುಸ್ಲಿಂಮರ ಹಾಗೂ ಕ್ರೈಸ್ತರ ಮೇಲೆ ಹಲ್ಲೆಗಳು ಅಧಿಕವಾದವು. 1997 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಗಲಭೆ. ಆದಿ ಉಡುಪಿ ಬೆತ್ತಲೆ ಪ್ರಕರಣ, ಚರ್ಚ್ ದಾಳಿ, ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಗಲಭೆಗಳನ್ನು ಸೃಷ್ಟಿಸಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ದಾಳಿಗಳು ನಡೆಯುತ್ತಿದ್ದವು. ಇಂಥಹಾ ದಾಳಿಗಳಲ್ಲಿ ಅಧಿಕ ಪ್ರಮಾಣದಲ್ಲಿ ಹಾನಿಗೊಳಗಾಗುತ್ತಿದ್ದದ್ದು ಮುಸ್ಲಿಂ ಸಮುದಾಯ ಎಂಬುವುದು ಗಮನಾರ್ಹ.

ಸಂಘಪರಿವಾರ ಪ್ರಾಯೋಜಿತ ಕೋಮು ಹಿಂಸಾಚಾರದಲ್ಲಿ ಅನ್ಯಾಯಕ್ಕೆ ಒಳಗಾದ ಮುಸ್ಲಿಂ ಸಮುದಾಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯದ ನಿರೀಕ್ಷೆಯಲ್ಲಿದ್ದರೂ ಅವುಗಳೆಲ್ಲವೂ ಹುಸಿಯಾದವು. ಪರಿಣಾಮ ದೇವರ ಆಸ್ಥಾನದಲ್ಲಿ ನ್ಯಾಯದ ನಿರೀಕ್ಷೆಯನ್ನು ಆ ಸಮುದಾಯ ಇಟ್ಟುಕೊಳ್ಳತೊಡಗಿತು. ಇದುವೇ ಮುಸ್ಲಿಂ ಮೂಲಭೂತವಾದಕ್ಕೆ ಆರಂಭಿಕ ವೇದಿಕೆಯನ್ನು ಕಲ್ಪಿಸಿತು. ಹಿಂದೂ ಮಹಾ ಸಭಾ ಸಂಘಟನೆಗೆ ಪರ್ಯಾಯವಾಗಿ ಮುಸ್ಲಿಂ ಲೀಗ್ ಹುಟ್ಟಿದರೂ ಮುಸ್ಲಿಂ ಸಮುದಾಯದ ಬಹುಜನ ಒಪ್ಪಿತ ಪಕ್ಷವಾಗಿ ಇದು ಮಾರ್ಪಡಲಿಲ್ಲ. ನಂತರದಲ್ಲಿ ಅಂದರೆ 1942 ರಲ್ಲಿ ಅಬೂಲಾಬ್ ಮೊಯ್ದೂದಿ ನೇತ್ರತ್ವದಲ್ಲಿ ’ಜಮಾತೆ ಇಸ್ಲಾಂ ಹಿಂದ್’ ಜನ್ಮ ತಾಳಿತು. ಜಮಾತ್ ಶಿಯಾ ಚಿಂತನೆಗಳನ್ನು ಅಲ್ಪಮಟ್ಟಿಗೆ ಮೈಗೂಡಿಸಿಕೊಂಡಿತ್ತು. ಭಾರತದ ಬಹುಸಂಖ್ಯಾತ ಸಂಪ್ರದಾಯ ಸುನ್ನಿ ಸಮುದಾಯದ ಆಚಾರ ವಿಚಾರಗಳನ್ನು ಜಮಾತ್ ವಿರೋಧಿಸುತ್ತಿತ್ತು. ಮುಸ್ಲಿಂ ಸಮುದಾಯದ ಸಾಮಾಜಿಕ ಹಾಗೂ ಸಮಕಾಲಿನ ಸಮಸ್ಯೆಗಳಿಗೆ ಸ್ಪಂದಿಸುವ ಬದಲಾಗಿ ಜಮಾತ್ ಧಾರ್ಮಿಕ ಜಾಗೃತಿಯತ್ತ ಹೆಚ್ಚು ಗಮನ ನೀಡಿತು. Bodh_Gaya_blastಅಂತಿಮವಾಗಿ ಜಮಾತ್ ಇಸ್ಲಾಂ ರಾಜ್ಯ ಸ್ಥಾಪನೆಯ ಅಜೆಂಡಾವನ್ನು ಇಟ್ಟುಕೊಂಡರೂ ಅದನ್ನು ಸಾಧಿಸಲು ಜಮಾತ್ ಅನುಸರಿಸುತ್ತಿರುವ ದಾರಿ ಆರ್.ಎಸ್.ಎಸ್. ಹಿಂದೂ ರಾಷ್ಟ್ರ ಸ್ಥಾಪನೆಗೆ ಅನುಸರಿಸುತ್ತಿರುವ ದಾರಿಗಿಂತ ಭಿನ್ನ. ಇಷ್ಟಾದರೂ ಜಮಾತ್ ಮುಸ್ಲಿಂಮರ ಸಾಮಾಜಿಕ ನಾಯಕತ್ವವನ್ನು ವಹಿಸಿಕೊಳ್ಳಲು ಸಾಧ್ಯವಾಗಿಲ್ಲ. ಅದೇ ಮಾರ್ಗವನ್ನು ಅಹ್ಲೆ ಹದೀಸ್, ತಬ್ಲೀಗ್ ಜಮಾತ್, ಸಲಫೀ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳು ಅನುಸರಿಸಿದವು. (ಇವುಗಳ ನಿಲುವುಗಳಲ್ಲಿ ಕೊಂಚ ಭಿನ್ನತೆ ಇದೆಯಾದರೂ ಇಸ್ಲಾಂ ಧರ್ಮವನ್ನು ಜಾಗತಿಕವಾಗಿ ಪಸರಿಸುವ ಮೂಲಕ ಧರ್ಮ ಸ್ಥಾಪನೆ ಇವರ ಮೂಲ ಅಜೆಂಡಾ.) ಈ ಎಲ್ಲಾ ಸಂಘಟನೆಗಳನ್ನು ಮುಸ್ಲಿಂ ಸಮುದಾಯದ ಬಹುಪಾಲು ಜನರು ಸಂಶಯದ ದೃಷ್ಟಿಯಿಂದಲೇ ನೋಡುತ್ತಿದ್ದರು.

ಮುಸ್ಲಿಂ ಸಮುದಾಯದ ಪಾಲಿಗೆ ಇವರೆಲ್ಲಾ ನೂತನವಾದಿಗಳಾಗಿ ಕಂಡರು. ಮುಸ್ಲಿಂಮರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಮುಸ್ಲಿಂ ಸಮುದಾಯ ಧಾರ್ಮಿಕ ಪ್ರಜ್ಞೆಯಿಂದ ದೂರ ಉಳಿದಿರುವುದೇ ಕಾರಣ ಎನ್ನುವುದೇ ಈ ಎಲ್ಲಾ ಸಂಘಟನೆಗಳ ವಾದದಲ್ಲಿರುವ ಪ್ರಮುಖವಾದ ಅಂಶವಾಗಿತ್ತು. ಇಂಥಹಾ ಸಂಧರ್ಭದಲ್ಲೇ ಹಿಂದುತ್ವ ಮೂಲಭೂತವಾದಿಗಳ ಅಟ್ಟಹಾಸಕ್ಕೆ ಪ್ರತಿಗಾಮಿ ಸಂಘಟನೆಯೊಂದರ ಅವಶ್ಯಕತೆ ಮುಸ್ಲಿಂ PFI-mangaloreಸಮುದಾಯದ ಬಹುತೇಕ ಜನರಲ್ಲಿ ಕಾಣಿಸತೊಡಗಿತು. ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಮುಸ್ಲಿಂ ಸಮುದಾಯವನ್ನು ಕೇವಲ ಓಟ್ ಬ್ಯಾಂಕ್ ಗಳಾಗಿ ಮಾತ್ರ ಬಳಸಿಕೊಳ್ಳುತ್ತಿವೆ, ಇನ್ನು ಎಡಪಂಥೀಯ ಪಕ್ಷಗಳು, ಸಂಘಟನೆಗಳು ಕರ್ನಾಟಕದ ಶೋಷಿತ ಮುಸ್ಲಿಂ ಸಮುದಾಯದ ಪರ ಅಲ್ಪ ಪ್ರಮಾಣದಲ್ಲಿ ಮಾತ್ರ ಧ್ವನಿ ಎತ್ತುತ್ತಿತ್ತು. ಮುಸ್ಲಿಂಮರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಪ್ರತಿರೋಧ ಒಡ್ಡುವ, ಸಮುದಾಯದ ಜೊತೆ ನಿಂತು ಸಾಮಾಜಿಕವಾಗಿ, ಕಾನೂನಾತ್ಮಕವಾಗಿ, ಪೂರ್ಣ ಪ್ರಮಾಣದ ಪ್ರತಿರೋಧ ಹೋರಾಟ ನಡೆಸುವ ಸಂಘಟನೆಯನ್ನು ಹುಟ್ಟುಹಾಕುವ ಕಲ್ಪನೆ ಹುಟ್ಟಿದ್ದೇ ಇಲ್ಲಿ. ಪರಿಣಾಮ ಉದಯವಾಗಿದ್ದು ಮತ್ತೊಂದು ಮೂಲಭೂತವಾದದ ಪ್ರತಿಗಾಮಿ ಶಕ್ತಿ “ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ”.

ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ:

ಪಿಎಫ್‌ಐ ಹುಟ್ಟಿನ ಹಿಂದೆ ಸಾಕಷ್ಟು ಪ್ರಯತ್ನಗಳಿವೆ. ಈ ಸಂಘಟನೆಯ ಮೂಲ ಸಿಮಿ. ಅಂದರೆ ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ. ಒಂದು ಕಾಲದಲ್ಲ ಜಮಾತೆ ಇಸ್ಲಾಮಿ ಹಿಂದ್ ಸಂಘಟನೆಯ ವಿದ್ಯಾರ್ಥಿ ಸಂಘಟನೆಯೇ ಸಿಮಿ. ಪ್ರಪಂಚದ ಇತರ ದೇಶಗಳಲ್ಲಿ ಅಂದರೆ ಬಾಂಗ್ಲಾದೇಶ ಹಾಗೂ ಪಾಕಿಸ್ಥಾನದಲ್ಲಿ ಜಮಾತ್ ಸಂಘಟನೆ ಪ್ರಬಲವಾಗಿದ್ದು ಇಸ್ಲಾಮಿಕ್ ಶರಿಯಾ ಕಾನೂನು ಆಧಾರವಾಗಿಯೇ ದೇಶದ ಕಾನೂನು ವ್ಯವಸ್ಥೆ ಜಾರಿಯಾಗಬೇಕೆಂಬುವುದು ಇವರ ಮೂಲ ಅಜೆಂಡಾ. (ಜಮಾತ್ ಸ್ಥಾಪಕ ಅಬೂಲಾಬ್ ಮೌದೂರಿಯವರ “ಜಿಹಾದ್” ಗ್ರಂಥದಿಂದ ಇದು ಸ್ಪಷ್ಟವಾಗುತ್ತದೆ.) ಆ ಅಜೆಂಡಾವನ್ನು ಹೊಂದಿದ್ದರೂ ಭಾರತದಲ್ಲಿ ಜಮಾತ್ ಇಸ್ಲಾಮಿ ತನ್ನನ್ನು ನೂತನವಾದಿ ಹಾಗೂ ಸೌಮ್ಯವಾದಿ ಸಂಘಟನೆಯನ್ನಾಗಿ ಬಿಂಬಿಸಿಕೊಳ್ಳಲು ಹೊರಟಿದೆ. pfiಆದರೆ ಸಿಮಿ ಸಂಘಟನೆ ಇದಕ್ಕೆ ವಿರುದ್ಧವಾದ ನಿಲುವಿನಲ್ಲಿ ಗುರುತಿಸಿಕೊಳ್ಳತೊಡಗಿತು. ಈ ವಿಚಾರವಾಗಿಯೇ ಜಮಾತ್ ಹಾಗೂ ಸಿಮಿ ನಡುವೆ ಬಿರುಕು ಉಂಟಾಗಿ ಸಿಮಿ ಪ್ರತ್ಯೇಕ ಸಂಘಟನೆಯಾಗಿ ಬೆಳೆಯತೊಡಗಿತು. ಸಿಮಿಯ ಈ ಬೆಳವಣಿಗೆಯನ್ನು ಅಥೈಸಿಕೊಂಡ ಸರ್ಕಾರ ಬಾಬರೀ ಮಸೀದಿ ಧ್ವಂಸದ ನಂತರದಲ್ಲಿ ಈ ಸಂಘಟನೆಯನ್ನು ನಿಷೇಧಿಸಿತು. ಆದ್ರೆ ಅದರ ಫುಲ್ ಟೈಂ ಸದಸ್ಯರು ನಂತರದ ದಿನಗಳಲ್ಲಿ ಗುಪ್ತವಾಗಿಯೇ ಆರ್‌ಎಸ್‌ಎಸ್‌ಗೆ ಪರ್ಯಾಯವಾಗಿ ಪ್ರತಿರೋಧ ಸಂಘಟನೆಯನ್ನು ಹುಟ್ಟುಹಾಕತೊಡಗಿದರು. ಪರಿಣಾಮ ಕೇರಳದಲ್ಲಿ ಎನ್‌ಡಿ‌ಎಫ್, ತಮಿಳು ನಾಡಿನಲ್ಲಿ ಮನಿದ ನೀತಿ ಪಸರೈ, (ಆರಂಭದಲ್ಲಿ ಬೇರೆ ಬೇರೆ ಹೆಸರುಗಳಿಂದ ಈ ಸಂಘಟನೆಗಳು ಗುರುತಿಸಿಕೊಂಡಿದ್ದವು) ಕರ್ನಾಟಕದಲ್ಲಿ ಕೆ‌ಎಫ್‌ಡಿ (ಆರಂಭದಲ್ಲಿ ಎಮ್‌ವೈಎಫ್) ಸಂಘಟನೆಗಳು ಆರಂಭವಾದವು. ತಮ್ಮ ಪ್ರಾರಂಭದ ದಿನಗಳಲ್ಲಿ ಬಹಳ ಗುಪ್ತವಾಗಿ ಇವರು ಸಂಘಟನೆಯನ್ನು ಕಟ್ಟತೊಡಗಿದರು. ವಿದ್ಯಾರ್ಥಿಗಳನ್ನು ಕೇಂದ್ರವಾಗಿಟ್ಟುಕೊಂಡು ಗುಪ್ತ ಮೀಟಿಂಗ್‌ಗಳನ್ನು ಕರೆದು ಅವರನ್ನು ಸಂಘಟನೆಯ ಸದಸ್ಯರನ್ನಾಗಿ ಪರಿವರ್ತಿಸತೊಡಗಿದರು.

ಗುಜರಾತ್ ಗಲಭೆ, ಭಯೋತ್ಪಾದನೆಯ ಆರೋಪದಲ್ಲಿ ಮುಗ್ದ ಯುವಕರನ್ನು ಬಂಧಿಸುವುದು, ಮುಸ್ಲಿಂ ಸಮಾಜದ ಮೇಲೆ ನಡೆಯುತ್ತಿರುವ ಫ್ಯಾಸಿಸ್ಟ್ ದಬ್ಬಾಳಿಕೆ, ಮುಸ್ಲಿಮರ ಆರ್ಥಿಕ-ಶೈಕ್ಷಣಿಕ-ಸಾಮಾಜಿಕ ಪರಿಸ್ಥಿತಿ, ಮುಸ್ಲಿಂ ಯುವಕರಲ್ಲಿರುವ ಅಭದ್ರತೆ, ಆರ್‌ಎಸ್‌ಎಸ್ ಸ್ಥಾಪಿಸ ಹೊರಟಿರುವ ಹಿಂದೂ ರಾಷ್ಟ್ರದ ಪರಿಕಲ್ಪನೆ, ಹಾಗಾದಲ್ಲಿ ಮುಸ್ಲಿಮರ ಪರಿಸ್ಥಿತಿ, ಮುಸ್ಲಿಂ ಸಮಾಜ ಓಟ್‌ಬ್ಯಾಂಕ್ ಆಗಿರುವ ಪಕ್ಷಗಳು ಮುಸ್ಲಿಮರನ್ನು ಬಳಸಿಕೊಳ್ಳುತ್ತಿರುವ ರೀತಿ, ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟು ಈ ಸಮುದಾಯದ ಪರ ಧ್ವನಿಯೆತ್ತುವ ಸಂಘಟನೆಯ ಅಗತ್ಯ ಎಷ್ಟಿದೆ ಎಂಬುವುದನ್ನು ಮುಸ್ಲಿಂ ಯುವಕರಿಗೆ ಮನದಟ್ಟು ಮಾಡಿಸಿ ಅವರನ್ನು ತಮ್ಮತ್ತ ಸೆಳೆಯತೊಡಗಿದರು. ಇವರ ಪ್ರಯತ್ನ ಫಲ ನೀಡಲು ಪೂರಕವಾದ ವಾತಾವರಣ ಕರ್ನಾಟಕದಲ್ಲಿತ್ತು. 270579-gujarat-riotsಆಗಷ್ಟೇ ಗುಜರಾತ್‌ನಲ್ಲಿ ನಡೆದ ಕೋಮು ಗಲಭೆಯಲ್ಲಿ ಮುಸ್ಲಿಮರ ಮಾರಣ ಹೋಮ, ಕರ್ನಾಟಕದಲ್ಲಿ ಹಿಂದುತ್ವವಾದಿಗಳಿಂದ ಆಗುತ್ತಿದ್ದ ಹಲ್ಲೆಗಳು, ಹಿಂಸಾಚಾರಗಳು, ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆಗಳು, ಜೊತೆಗೆ ಅಗ್ರೆಸ್ಸಿವ್ ಆಗಿ ಬೆಳೆಯುತ್ತಿರುವ ಹಿಂದುತ್ವ ಪರ ಸಂಘಟನೆಗಳು. ಈ ಎಲ್ಲಾ ವಿಚಾರಗಳು ಸಹಜವಾಗಿ ಮುಸ್ಲಿಂ ಸಮಾಜದಲ್ಲಿ ಅಭದ್ರತೆಗೆ ಕಾರಣವಾಗಿತ್ತು. ಅಲ್ಲದೆ ಕೆಲವೊಂದು ಬಿಸಿರಕ್ತದ ಯುವಕರಿಗೆ ಸಂಘಪರಿವಾರದ ಕ್ರಿಯೆಗೆ ಪ್ರತಿಕ್ರಿಯೆ ನೀಡುವ ಛಲವಿತ್ತು. ಇನ್ನು ಸುಶಿಕ್ಷಿತವಾಗಿಯೂ, ಯಾವುದೇ ಗಲಭೆ, ಜಂಜಾಟಗಳಲ್ಲಿ ತಮ್ಮನ್ನು ಗುರುತಿಸಿಕೊಳ್ಳದೆ ತಾವಾಯಿತು ತಮ್ಮ ಕೆಲಸವಾಯಿತು ಎಂಬಂತಿದ್ದ ಯುವಕರಿಗೂ ಮನಸ್ಸಿನ ಆಳದಲ್ಲಿದ್ದ ನೋವು, ಭಯ ಎಲ್ಲವೂ ಕೆಎಫ್‌ಡಿ ಸಂಘಟನೆಯ ಹುಟ್ಟಿಗೆ ವರದಾನವಾಗಿ ಪರಿಣಮಿಸಿತು. ಮೊದಲೇ ಭಯದಲ್ಲಿದ್ದ ಮುಸ್ಲಿಂ ಸಮಾಜದ ಯುವಕರ ಮನಸ್ಸಿನಲ್ಲಿ ಇನ್ನಷ್ಟು ಭಯ ಆತಂಕವನ್ನು ತುಂಬಿ ಅವರನ್ನು ಸಂಘಟಿಸಿ ಸಂಘಟನೆಯನ್ನು ಬಲಪಡಿಸುವುದು ಕೆ‌ಎಫ್‌ಡಿ ಉದ್ದೇಶವಾಗಿತ್ತು. ಸಂಘಟನೆ ಆರಂಭದಲ್ಲಿ ಸಮಾಜಸೇವೆ, ಮುಸ್ಲಿಂ ಸಮಾಜದಲ್ಲಿದ್ದ ವರದಕ್ಷಿಣೆ ಸೇರಿದಂತೆ ಸಾಮಾಜಿಕ ಕಾರ್ಯದತ್ತ ಗಮನ ಕೇಂದ್ರೀಕರಿಸಿತು. ಜೊತೆಗೆ ಗಾಂಜಾ, ಕುಡಿತದಂತಹ ದುರಭ್ಯಾಸದಿಂದ ಕೂಡಿದ್ದ ಯುವಕರನ್ನು ಅದರಿಂದ ಮುಕ್ತಗೊಳಿಸಿ ಧಾರ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸತೊಡಗಿತು. ಪರಿಣಾಮ ಎಲ್ಲಾ ಮಸೀದಿಗಳಲ್ಲಿ ಬೆಳಗ್ಗಿನ ನಮಾಜ್ ಪ್ರಾರ್ಥನೆಗೆ ಯುವಕರ ಸಂಖ್ಯೆಯೂ ಅಧಿಕವಾಗತೊಡಗಿತು. ಈ ಯುವಕರೆಲ್ಲಾ ಮಸೀದಿ ಕಡೆ ಮುಖ ಮಾಡಲು ಪರೋಕ್ಷ ಕಾರಣ ಹಿಂದೂ ಮೂಲಭೂತವಾದಿಗಳ ಭಯ ಎಂದರೆ ತಪ್ಪಿಲ್ಲ.

ಇನ್ನೂ ಪ್ರಮುಖವಾದ ವಿಷಯವೇನೆಂದರೆ ಕೆ‌ಎಫ್‌ಡಿ ಆರಂಭದಲ್ಲಿ ಬರೀ ಮುಸ್ಲಿಂ ಸಮಾಜದ ಸಮಸ್ಯೆ ಮಾತ್ರ ಅಲ್ಲ, pfi-keralaಶೋಷಿತ ಸಮುದಾಯವಾದ ದಲಿತ ಹಾಗೂ ಕ್ರೈಸ್ತರ ಪರ ಧ್ವನಿ ಎತ್ತುವಂತಹ ಕೆಲವೊಂದು ಕಾರ್ಯಕ್ರಮಗಳನ್ನು ರೂಪಿಸಿತು. ದಲಿತ ಸಂಘಟನೆಗಳೊಂದಿಗೆ ಸೇರಿಕೊಂಡು ಹೋರಾಟ ನಡೆಸತೊಡಗಿತು. ಈ ಸಂದರ್ಭದಲ್ಲೇ ಕೋಮು ಸೌಹಾರ್ದ ವೇದಿಕೆಯಲ್ಲೂ ಹಾಗೂ ಎಡಪಂಥೀಯ ಸಂಘಟನೆಗಳ ಜೊತೆಗೂ ಸಖ್ಯ ಬೆಳೆಸಲು ಪ್ರಯತ್ನಿಸುತ್ತಿತ್ತು. ಸದಸ್ಯರಿಗೆ ತಮ್ಮ ಹೋರಾಟ ಆರ್‌ಎಸ್‌ಎಸ್ ವಿರುದ್ಧವೇ ಹೊರತಾಗಿ ಹಿಂದೂ ಸಮುದಾಯದ ಮೇಲಲ್ಲ ಎಂಬ ನೀತಿ ಪಾಠಗಳನ್ನೂ ಬೋಧಿಸುತ್ತಿತ್ತು. ಆದರೆ ಬರಬರುತ್ತಾ ಪಿಎಫ್‌ಐ ಪ್ರಬಲವಾಗುತ್ತಿದ್ದಂತೆ ತನ್ನ ಅಜೆಂಡಾಗಳಲ್ಲೂ ಬದಲಾವಣೆಯಾಗತೊಡಗಿದವು. ಸದಸ್ಯರ ನಡವಳಿಕೆಗಳಲ್ಲೂ ಬದಲಾವಣೆಯಾಗತೊಡಗಿದವು. ಸಂಘಟನೆಯ ಪ್ರತಿರೋಧಕ ಶಕ್ತಿಯ ಪ್ರದರ್ಶನವಾಗತೊಡಗಿದವು. ಸಂಘಪರಿವಾರದ ದುಷ್ಕೃತ್ಯಗಳನ್ನು ಖಂಡಿಸುತ್ತಿದ್ದ ಸಂಘಟನೆ ಅದೇ ರೀತಿಯ ಭಯದ ವಾತಾವರಣವನ್ನು ತಾನೂ ನಿರ್ಮಿಸತೊಡಗಿತು. vt-prasad-PFI-attackತನ್ನ ಸದಸ್ಯರನ್ನು ಆರ್‌ಎಸ್‌ಎಸ್ ಮಾದರಿಯಲ್ಲಿ ಸೈನಿಕರ ರೀತಿಯಲ್ಲಿ ತರಬೇತುಗೊಳಿಸತೊಡಗಿತು. ಹೀಗೆ ಧಾರ್ಮಿಕವಾಗಿ, ಬೌದ್ಧಿಕವಾಗಿ, ಶಾರೀರಿಕವಾಗಿ ಬಲವಾಗಿರುವ ಒಂದು ಪ್ರತಿರೋಧಕ ಶಕ್ತಿಯಾಗಿರುವ ಒಂದು ಪಡೆಯನ್ನು ನಿರ್ಮಿಸುತ್ತಿದೆ ಪಿ‌ಎಫ್‌ಐ. ಯಾವುದೇ ತ್ಯಾಗ ಬಲಿದಾನಕ್ಕೂ ಸಿದ್ದವಾಗಿರುವ ಒಂದು ಪಡೆಯಾಗುತ್ತಿದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ. ಇದಕ್ಕೆ ಉದಾಹರಣೆಯಾಗಿ ಸಂಘಪರಿವಾರಕ್ಕೆ ಪ್ರತಿರೋಧವನ್ನು ಕೊಡುವುದರ ಜೊತೆಗೆ ಅಮಾಯಕರ ಮೇಲೂ ಅದು ನಡೆಸಿದಂತಹ ಹಲ್ಲೆಗಳು, ಇತ್ತೀಚಿನ ನೈತಿಕ ಪೊಲೀಸ್ ಗಿರಿ ಸಾಕ್ಷಿಯಾಗಿ ನಮ್ಮ ಮುಂದಿದೆ. ಅಂದು ಕೇವಲ ಶೋಷಣೆಯ ವಿರುದ್ಧದ ಹೋರಾಟಕ್ಕಾಗಿ ಸಂಘಟಿತವಾದ ಸಂಘಟನೆ ಇಂದು ಇಸ್ಲಾಂ ಶರೀಯತ್ ಕಾನೂನು ಜಾರಿಗೂ ಹೋರಾಟ ನಡೆಸುವಂತಹಾ ರೀತಿಯಲ್ಲೇ ಮುಂದುವರಿಯುತ್ತಿದೆ.

ಮುಸ್ಲಿಂ ಮೂಲಭೂತವಾದದ ಹುಟ್ಟು ಮತ್ತು ಎಡಪಂಥೀಯ ಪಕ್ಷಗಳ ಧೋರಣೆ:

“ಮುಸ್ಲಿಮರು ಧಾರ್ಮಿಕ ಭಾವನೆಗಳನ್ನು ಬಿಟ್ಟು ನಮ್ಮ ಪಕ್ಷದಲ್ಲಿ ಸೇರಿ ಜಾತ್ಯಾತೀತವಾದಿಗಳಾಗಿ. ಇಲ್ಲವಾದಲ್ಲಿ ನೀವೂ ಭಯೋತ್ಪಾದಕರ Pinarayi-Vijayan-cpimಸಾಲಿಗೆ ಸೇರಲಿರುವಿರಿ.” ಇದು ನವಂಬರ್ 7 ರಂದು ಕಲ್ಲಿಕೋಟೆಯ ಮರೈನ್ ಗ್ರೌಂಡ್‌ನಲ್ಲಿ ನಡೆದ ಅಲ್ಪಸಂಖ್ಯಾತರಿಗಾಗಿ ಏರ್ಪಡಿಸಲಾದ ಕಾರ್ಯಕ್ರಮವೊಂದರಲ್ಲಿ ಸಿಪಿಐ(ಎಂ) ನೇತಾರ ಪಿಣರಾಯ್ ವಿಜಯನ್ ನೀಡಿದ ಹೇಳಿಕೆ. ಇತ್ತೀಚೆಗೆ ಎಡಪಂಥೀಯ ಗೆಳೆಯರೊಂದಿಗೆ ಮುಸ್ಲಿಮರಲ್ಲಿ ಬೆಳೆಯುತ್ತಿರುವ ಮೂಲಭೂತವಾದ ಕುರಿತಾಗಿ ಚರ್ಚೆ ನಡೆಸುತ್ತಿರುವಾಗ ಪಿಣರಾಯ್ ವಿಜಯನ್ ನೀಡಿದ ಹೇಳಿಗೆ ಗಮನಕ್ಕೆ ಬಂತು. ಒಂದೆಡೆಯಲ್ಲಿ ಫ್ಯಾಸಿಸ್ಟ್ ಸಿದ್ದಾಂತವನ್ನು ಹರಡಿ ಭಾರತ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿಸಬೇಕು ಎಂದು ಪಣ ತೊಟ್ಟಿರುವ ಸಂಘಪರಿವಾರ, ಮತ್ತೊಂದೆಡೆ ಮುಸ್ಲಿಮರ ಓಟನ್ನು ಪಡೆಯಲು ತಮಗೆ ಹೇಗೆ ಬೇಕೋ ಹಾಗೆ ಉಪಯೋಗಿಸುತ್ತಿರುವ ಕಾಂಗ್ರೆಸ್ ಹಾಗೂ ಇತರ ಸ್ವಯಂಘೋಷಿತ ಜಾತ್ಯಾತೀತ ಪಕ್ಷಗಳು, ಮಗದೊಂದೆಡೆ ತಮ್ಮದೇ ಆದ ಧೋರಣೆಗಳನ್ನಿಟ್ಟುಕೊಂಡಿರುವ ಎಡಪಂಥೀಯ ಪಕ್ಷಗಳು. ಇವುಗಳ ಜೊತೆಗೆ ಮುಸ್ಲಿಂಮರ ಆರ್ಥಿಕ, ಸಾಮಾಜಿಕ ,ಶೈಕ್ಷಣಿಕ ಹಾಗೂ ಬೆಳೆಯುತ್ತಿರುವ ಮೂಲಭೂತವಾದಗಳನ್ನು ಸೂಕ್ಷವಾಗಿ ಗಮಸಬೇಕಾದ ಅಗತ್ಯ ಇದೆ. ಮುಸ್ಲಿಂ ಮೂಲಭೂತವಾದ ಭಾರತದಲ್ಲಿ ಹುಟ್ಟಲು ಎಡಪಂಥೀಯ ಪಕ್ಷಗಳ ಧೋರಣೆಗಳೂ ಕಾರಣವಾಗಿವೆ. ಯಾವುದೇ ಶೋಷಿತ ವರ್ಗದ ಮೇಲೆ ದಬ್ಬಾಳಿಕೆ ನಡೆಯುತ್ತಿರುವಾಗ ಅವು ಆ ಪ್ರಭುತ್ವದ ನ್ಯಾಯವ್ಯವಸ್ಥೆಯಲ್ಲಿ ಆರಂಭದಲ್ಲಿ ನಂಬಿಕೆ ವಿಶ್ವಾಸ, ನಿರೀಕ್ಷೆಗಳನ್ನೂ ಇಟ್ಟಿರುತ್ತದೆ. ಆದರೆ ಅವೆಲ್ಲವೂ ಹುಸಿಯಾಗತೊಡಗಿದಾಗ ಕೊನೆಗೆ ದೇವರ ನ್ಯಾಯವ್ಯವಸ್ಥೆಯಲ್ಲಾದರೂ ನಮಗೆ ವಿಜಯ ಸಿಗಬಹುದು ಎಂಬ ಭ್ರಮೆಯಲ್ಲಿರುತ್ತವೆ. ಇಂಥಹಾ ಸಂಧರ್ಭದಲ್ಲಿ ದೇವರ ಹೆಸರಲ್ಲಿ ಶೋಷಿತರ ಪರ ನಿಂತು ಹೋರಾಡಲು ಮುಂದಾದ ಸಂಘಟನೆಗಳು ಅಥವಾ ಶಕ್ತಿ ಆ ಶೋಷಿತ ವರ್ಗಕ್ಕೆ ಹತ್ತಿರವಾಗತೊಡಗುತ್ತದೆ.

ಭಾರತದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ. ಅನ್ಯಾಯಕ್ಕೆ ಒಳಗಾಗುತ್ತಿದ್ದ ಶೋಷಿತರ ಪರ ಪೂರ್ಣಪ್ರಮಾಣದಲ್ಲಿ ಎಡಪಂಥೀಯ ಸಂಘಟನೆಗಳು ಧ್ವನಿ ಎತ್ತಿಲ್ಲ ಎಂಬುವುದನ್ನು ಎಡಪಂಥೀಯ ಚಳುವಳಿಗಾರರು ಕಂಡುಕೊಳ್ಳಬೇಕು. ಅಂಗನವಾಡಿ ಕಾರ್ಯಕರ್ತರ ಸಮಸ್ಯೆ, Beedi-workers-protest-cpimಬೀಡಿ ಕಾರ್ಮಿಕರ ಸಮಸ್ಯೆ, ಇತರ ಸಾಮಾಜಿಕ ಸಮಸ್ಯೆಗಳಿಗೆ ನೀಡಿದ ಒತ್ತನ್ನು ಶೋಷಿತರಿಗೆ ನ್ಯಾಯ ಒದಗಿಸಿಕೊಡುವಲ್ಲಿ ನೀಡಿಲ್ಲ. ಈ ನಿಟ್ಟಿನಲ್ಲಿ ಮುಸ್ಲಿಂ ಯುವಕರ ಸಂಘಟನೆಯನ್ನು ಮಾಡುವಲ್ಲಿ ಎಡಪಂಥಿಯ ಪಕ್ಷಗಳು ಎಡವಿದೆ. ಕೇರಳ, ಪಶ್ವಿಮ ಬಂಗಾಳದಲ್ಲಿ ಸಾಕಷ್ಟು ಮುಸ್ಲಿಂ ಸಮುದಾಯದ ನಾಯಕರುಗಳು ಎಡಪಂಥೀಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಆದರೆ ಕರ್ನಾಟಕದ ಪಾಲಿಗೆ ಇದು ಸಾಧ್ಯವಾಗಿಲ್ಲ. ಎಡಪಕ್ಷಗಳು ಮುಸ್ಲಿಮರ ಮೇಲೆ ನಡೆಯುತ್ತಿರುವ ಶೋಷಣೆ ದಬ್ಬಾಳಿಕೆಯನ್ನು ರಾಜಕೀಯ ಹೋರಾಟವಾಗಿ ನೋಡಿಲ್ಲ. ಅಲ್ಪಸಂಖ್ಯಾತರ ಮೇಲೆ ಹಲ್ಲೆಗಳು, ಹಿಂಸೆಗಳಾದಾಗ ಆ ಘಟನೆಗಳನ್ನು ಎಡಪಕ್ಷಗಳು ಖಂಡಿಸಿವೆ, ಹೋರಾಟವನ್ನೂ ನಡೆಸಿವೆ. ಆದರೆ ಇದು ಪೂರ್ಣ ಪ್ರಮಾಣದ್ದಾಗಿರಲಿಲ್ಲ. ಶೋಷಿತ ವರ್ಗಕ್ಕೆ ನಾಯಕತ್ವ ನೀಡಿ ಹೋರಾಟವನ್ನು ಮುಂದುವರಿಸಿಸಲಿಲ್ಲ. ನಕ್ಸಲೈಟ್‌ಗಳೆಂದು ಅಮಾಯಕ ಆದಿವಾಸಿ ಯುವಕರ ಮೇಲೆ ಪ್ರಭುತ್ವ ದೌರ್ಜನ್ಯ ನಡೆಸಿದಾಗ ಅದನ್ನು ಖಂಡಿಸಿದ ರೀತಿಯಲ್ಲಿ ಅದರ ವಿರುದ್ಧ ಹೋರಾಟ ನಡೆಸಿದ ರೀತಿಯಲ್ಲಿ ಭಯೋತ್ಪಾದನೆಯ ಆರೋಪದಲ್ಲಿ ಸಾಲು ಸಾಲು ಮುಗ್ದ ಯುವಕರನ್ನು ಬಂಧಿಸಿ ಅವರ ಮೇಲೆ ದೌರ್ಜನ್ಯ ನಡೆಸಿದಾಗ ಎಡಪಕ್ಷಗಳು ಹೋರಾಟ ನಡೆಸಿಲ್ಲ.

ಇಂಥಹಾ ಸಂದರ್ಭದಲ್ಲಿ ಮುಸ್ಲಿಮರ ಮುಂದೆ ಇರುವ ಮಾರ್ಗ ಯಾವುದು? golwalkarಆರ್‌ಎಸ್‌ಎಸ್ ನಾಯಕ ಗೋವಲ್ಕರ್ ತಮ್ಮ ’ಚಿಂತನಾ ಗಂಗಾ’ ಪುಸ್ತಕದಲ್ಲಿ ಉಲ್ಲೇಖಿಸಿದಂತೆ. ಮುಸ್ಲಿಂ ಸಮುದಾಯ ಇಸ್ಲಾಂ ಧರ್ಮದಿಂದ, ಮತ್ತದರ ಆಚಾರ ವಿಚಾರಗಳಿಂದ ದೂರವಾಗಿ ಭಾರತದಲ್ಲಿ ಎರಡನೇ ದರ್ಜೆಯ ಪ್ರಜೆಗಳಾಗಿ ಬದುಕಬೇಕೆ ಅಥವಾ ಭಾರತ ಬಿಟ್ಟು ತೊಲಗಬೇಕೆ? ತಮ್ಮ ಮೇಲೆ ಶೋಷಣೆ, ದಬ್ಬಾಳಿಕೆ, ಅಪನಂಬಿಕೆಗಳು ನಿರಂತರವಾಗಿ ನಡೆಯುತ್ತಿದ್ದರೂ ಅವುಗಳನ್ನು ಸಹಿಸಿಕೊಂಡು ಜೀವನ ನಡೆಸಬೇಕೆ? ಇದು ಸಾಮಾನ್ಯ ಮುಸಲ್ಮಾನನೊಬ್ಬನ ಮನಸ್ಸಿನಲ್ಲಿರುವ ಪ್ರಶ್ನೆ ಮತ್ತು ಆತಂಕ ಕೂಡಾ. ಎಡಪಂಥೀಯ ಪಕ್ಷಗಳು ಇದಕ್ಕೆ ಏನು ಉತ್ತರ ನೀಡುತ್ತದೆ? 2002 ರಲ್ಲಿ ಗುಜರಾತ್‌ನಲ್ಲಿ ನಡೆದ ಹತ್ಯಾಕಾಂಡದ ನಂತರದ ದಿನಗಳಲ್ಲಿ ಶೋಷಿತರ ಪರ ಅಲ್ಲಿನ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆತಲ್ವಾಡ್ ಹಾಗೂ ಸಂಗಾತಿಗಳು ಜೊತೆಯಾಗಿ ನಿಂತು ನ್ಯಾಯಕ್ಕಾಗಿ ಪೂರ್ಣ ಪ್ರಮಾಣದಲ್ಲಿ ಹೋರಾಡಿದ ಪರಿಣಾಮ ಅಲ್ಲಿ ಮುಸ್ಲಿಂ ಮೂಲಭೂತವಾದಿಗಳು ತಮ್ಮದೇ ಸಮುದಾಯದ ಮೇಲೆ ಹಿಡಿತ ಸಾಧಿಸಲು ಸಾಧ್ಯ ಆಗಲಿಲ್ಲ. ಅಲ್ಲಿನ ಮುಸ್ಲಿಮರಿಗೆ ತೀಸ್ತಾ ಸೆತಲ್ವಾಡ್ ನಾಯಕಿಯಾಗಿ ಕಂಡರು. ಕರ್ನಾಟಕದಲ್ಲಿ ಕೋಮು ಸೌಹಾರ್ದ ವೇದಿಕೆಯ ಕೆ.ಎಲ್.ಅಶೋಕ್, ಗೌರಿ ಲಂಕೇಶ್, ಫಣಿರಾಜ್, ಜಿ.ರಾಜಶೇಖರ್, ಸುರೇಶ್ ಭಟ್ ಭಾಕ್ರಬೈಲ್ PFI_mangalore_protestಮತ್ತಿತರರು ಈ ಪ್ರಯತ್ನ ಮಾಡುತ್ತಿದ್ದರೂ, ಪಿಎಪ್‌ಐ ಮುಸ್ಲಿಂ ಸಮುದಾಯದ ಶೋಷಿತ ಮನಸ್ಸುಗಳನ್ನು ತನ್ನತ್ತ ಆಕರ್ಷಿಸುವಲ್ಲಿ ಸಫಲವಾಯಿತು. ವಿಪರ್ಯಾಸವೆಂದರೆ ಮೂಲಭೂತವಾದದ ವಿರುದ್ಧ ಹೋರಾಟದಲ್ಲಿ ಮೂತಭೂತವಾದದ ಮತ್ತೊಂದು ಮುಖದೊಂದಿಗೆ ಕೋಮು ಸೌಹಾರ್ದ ವೇದಿಕೆ ಗುರುತಿಸಿಕೊಳ್ಳಬೇಕಾಗುವಂತಾಯಿತು.

ಶೋಷಕರ ವಿರುದ್ಧ ಶೋಷಿತರ ಹೋರಾಟ ಅತ್ಯಗತ್ಯ. ಆದರೆ ಆ ಹೋರಾಟ ಸಾಗುವ ದಿಕ್ಕು ಬದಲಾಗಬೇಕಾಗಿದೆ. ಮುಸ್ಲಿಂ ಸಮುದಾಯದಲ್ಲಿರುವ ಧಾರ್ಮಿಕ ಸಂಕುಚಿತ ಭಾವನೆ ದೂರವಾಗಬೇಕಾಗಿದೆ. ಎಲ್ಲವನ್ನೂ ಧರ್ಮದ ಆಧಾರದಲ್ಲಿ ವಿಶ್ಲೇಷಣೆ ಮಾಡುವುದು, ಅಲ್ಲಾನನ್ನು ಹೊರತುಪಡಿಸಿ ಬೇರೆ ದೇವರಿಲ್ಲ ಎಂಬ ಧೃಡ ವಿಶ್ವಾಸ ಹಾಗೂ ಆ ಕುರಿತು ವಾದಿಸುವಂತಹಾ ಮನೋಭಾವ ಮುಸ್ಲಿಂ ಸಮುದಾಯವನ್ನು ಇನ್ನಷ್ಟು ಮೂಲಭೂತವಾದದತ್ತ ಕೊಂಡೊಯ್ಯುತ್ತದೆ. (ವಾಸ್ತವದಲ್ಲಿ ದೇವರ ಅಸ್ತಿತ್ವವೇ ಇಲ್ಲ.) ಇನ್ನು ಭಾರತದಲ್ಲಿ ಮುಸ್ಲಿಂ ಸಮುದಾಯದ ಮೇಲೆ ನಡೆಯುತ್ತಿರುವ ಹೋರಾಟವನ್ನು ಬರೀ ಧಾರ್ಮಿಕ ನೆಲೆಯಲ್ಲಿ ವಿಶ್ಲೇಷಣೆ ಮಾಡುವುದುನ್ನು ಎಡಪಂಥೀಯ ಪಕ್ಷಗಳು ಬಿಡಬೇಕಾಗಿದೆ. ಆರ್‌ಎಸ್‌ಎಸ್ ಹುಟ್ಟಿಗೂ ಪಿಎಫ್‌ಐ ಹುಟ್ಟಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಹಿಂದೂ ರಾಷ್ಟ್ರ ಸ್ಥಾಪನೆಗಾಗಿ 1925 ರಲ್ಲಿ ಆರ್‌ಎಸ್‌ಎಸ್ ಜನ್ಮ ತಾಳಿದ್ದರೆ ಮತ್ತು ಅದಕ್ಕಾಗಿ ಅದು ಕಂಡುಕೊಂಡ ಮಾರ್ಗವೇ ಭಾರತದಲ್ಲಿ ಮುಸ್ಲಿಂ ತೀವ್ರಗಾಮಿಗಳ ಹುಟ್ಟಿಗೂ ಬಹುಪಾಲು ಕಾರಣವಾಗಿದೆ ಎಂಬುವುದನ್ನು, PFI-eventಮತ್ತು ಹಿಂದು ಮೂಲಭೂತವಾದಕ್ಕೆ ಸರಿಸಮಾನವಾಗಿ ಮುಸ್ಲಿಂ ಮೂಲಭೂತವಾದವನ್ನು ವಿಶ್ಲೇಷಿಸುವ ಎಡಪಂಥೀಯ ನಾಯಕರು ಅರ್ಥೈಸಿಕೊಳ್ಳಬೇಕಾಗಿದೆ. ಮೂಲಭೂತವಾದಿಗಳ ಕೈವಶವಾಗುತ್ತಿರುವ ಮುಸ್ಲಿಂ ಸಮುದಾಯದ ಶೋಷಿತ ಮನಸ್ಸುಗಳನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಕರ್ನಾಟಕದ ಎಡಪಕ್ಷಗಳು ಮಾಡಬೇಕಾಗಿದೆ. ನಾಸ್ತಿಕ ವಾದವನ್ನು ಮುಂದಿಟ್ಟು ಎಡಪಕ್ಷಗಳನ್ನು ಒಪ್ಪಿಕೊಳ್ಳಲು ಮುಸ್ಲಿಂ ಸಮುದಾಯ ಹಿಂದೇಟು ಹಾಕುತ್ತಿದೆ ಎಂಬ ವಾದದಲ್ಲಿ ಹುರುಳಿಲ್ಲ. ಪಶ್ಚಿಮ ಬಂಗಾಳ, ಕೇರಳದಲ್ಲಿ ಹಾಗೂ ಸ್ವಾತಂತ್ರಪೂರ್ವ ಹೋರಾಟಗಳಲ್ಲಿ ಎಡಪಕ್ಷಗಳ ಜೊತೆಗೆ ಸಾಕಷ್ಟು ಮುಸ್ಲಿಂ ನಾಯಕರು ಗುರುತಿಸಿಕೊಂಡಿದ್ದಾರೆ. ಜೊತೆಗೆ ಹಿಂದೂರಾಷ್ಟ್ರವಾದಿಗಳ ವಿರುದ್ಧದ ಹೋರಾಟ ಸಾಮಾಜಿಕ ನೆಲೆಯಲ್ಲಿರಬೇಕೇ ಹೊರತು ಅದನ್ನು ಧಾರ್ಮಿಕ ನೆಲೆಯಲ್ಲಿ ಅಲ್ಲ ಎಂಬುವುದನ್ನು ಮುಸ್ಲಿಂ ಶೋಷಿತ ಮನಸ್ಸುಗಳು ಅರ್ಥೈಸಿಕೊಳ್ಳಬೇಕಾಗಿದೆ.