ವಿಧಾನಸಭೆಯಲ್ಲಿ ಕೊಳೆತು ನಾರುತ್ತಿರುವ ಶಾಸಕರು…


– ರವಿ ಕೃಷ್ಣಾರೆಡ್ಡಿ


 

ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಅನರ್ಹರನ್ನು ಮತ್ತು ಅಯೋಗ್ಯರನ್ನೇ ಹೆಚ್ಚಿಗೆ ಶಾಸನಸಭೆಗೆ ಕಳುಹಿಸಿದ ದೌರ್ಭಾಗ್ಯಕ್ಕೆ ಕರ್ನಾಟಕ ಈಡಾಗಿದೆ. ಇದಕ್ಕೆ ನಮ್ಮ ರಾಜ್ಯದ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಆಯಾಮಗಳನ್ನು ವಿಶ್ಲೇಷಿಸಬೇಕೆ ಹೊರತು ಅದಕ್ಕೆ ಅಲ್ಲಿ ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿರುವ ಶಾಸಕರನ್ನೇ ಸಂಪೂರ್ಣವಾಗಿ ಹೊಣೆ ಮಾಡಲಾಗದು. ಅದರೂ ನಾವು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮತ್ತು ಶಾಸಕರ ಕಾರ್ಯವೈಖರಿ ಉತ್ತಮಗೊಳಿಸಲು ಅವರನ್ನೇ ಹೊಣೆಗಾರರನ್ನಾಗಿ ಮಾಡಿಕೊಂಡು ಟೀಕಿಸಬೇಕಿದೆ.

ರಾಜ್ಯದ ಆಡಳಿತದಲ್ಲಿನ ಸ್ವಚ್ಚಂದ ಭ್ರಷ್ಟಾಚಾರಕ್ಕೆ ಕಾರಣ ಸರ್ಕಾರಿ ಅಧಿಕಾರಿಗಳು. ಸಚಿವರ ಮತ್ತು ಶಾಸಕರ ಭ್ರಷ್ಟಾಚಾರವನ್ನು ಬದಿಗಿಟ್ಟು ನೋಡಿದರೆ, ದಿನನಿತ್ಯದ ಭ್ರಷ್ಟಾಚಾರ ಮತ್ತು ಅದ್ವಾನದ ಆಡಳಿತದಲ್ಲಿ ನೇರ ಪಾತ್ರಧಾರಿಗಳು ಅಧಿಕಾರಿಗಳೇ. ಈ ಅಧಿಕಾರಿಗಳು “ಭ್ರಷ್ಟಾಚಾರ ಮಾಡಲೇಬೇಕು, ಲಂಚ ತೆಗೆದುಕೊಳ್ಳಲೇಬೇಕು, ಕೆಳಗಿನ ಅಧಿಕಾರಿಗಳಿಂದ ಮಾಮೂಲು ಪಡೆಯಲೇಬೇಕು” kpsc-krishna-bangalore-metroಎನ್ನುವ ಸ್ಥಿತಿಗೆ ತಾವು ಕೆಲಸಕ್ಕೆ ಸೇರಿದ ಮೊದಲ ದಿನದಿಂದಲೇ ಬಂದಿದ್ದರೆ ಅದಕ್ಕೆ ಮುಖ್ಯ ಕಾರಣ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ). ಈ ಕೆಪಿಎಸ್‌ಸಿ ಎನ್ನುವ ಪರಮ ಭ್ರಷ್ಟಾಚಾರಿ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಅಲ್ಲಿಯ ನೌಕರರ ಹೀನ ಮತ್ತು ಅನೈತಿಕ ಕೃತ್ಯಗಳು ಕಳೆದ ಐದು-ಹತ್ತು ವರ್ಷಗಳಿಂದ ರಾಜ್ಯದ ವಿವಿಧ ಮಾಧ್ಯಮಗಳಲ್ಲಿ ಪ್ರಸ್ತಾಪವಾಗುತ್ತಲೇ ಇದೆ. ಈ ಆಯೋಗದ ಅಧ್ಯಕ್ಷರಾಗಿದ್ದ ಎಚ್.ಎನ್.ಕೃಷ್ಣ ಎನ್ನುವವರು ತಮ್ಮ ಅಧಿಕಾರಾವಧಿಯಲ್ಲಿ ನಡೆದ ಭ್ರಷ್ಟಾಚಾರದ ಆರೋಪದ ಮೇಲೆ ವಿಚಾರಣಾಧೀನ ಖೈದಿಯಾಗಿ ಪರಪ್ಪನ ಅಗ್ರಹಾರದ ಬಂಧೀಖಾನೆಯಲ್ಲಿ ಕೆಲವು ತಿಂಗಳುಗಳು ಇದ್ದರು, ಆದರೆ, ಅವರ ನಂತರ ಅಧ್ಯಕ್ಷರಾಗಿ ಬಂದ ಭೀಮಪ್ಪ ಗೋನಾಳ ಎಂಬ ಪರಮಭ್ರಷ್ಟರಿಗೆ ತಮ್ಮ ಹಿಂದಿನವರ ರೀತಿಯೇ ತಾನೂ ಮಾಡಿದರೆ ತಾನೂ ಖೈದಿಯಾಗಬೇಕಾಗಬಹುದು ಎಂಬ ಸಣ್ಣ ಭಯವೂ ಇದ್ದಂತಿರಲಿಲ್ಲ. ಅವರು ತಮ್ಮ ಅಧಿಕಾರದ ಕೊನೆಯ ದಿನಗಳ ತನಕವೂ ಹೀನಾತಿಹೀನ ಕೃತ್ಯಗಳಲ್ಲೇ ತೊಡಗಿಕೊಂಡಿದ್ದದ್ದು ಸಿಐಡಿ ತನಿಖೆಯ ವರದಿಯಲ್ಲಿ ದಾಖಲಾಗಿದೆ. ನಮ್ಮ ರಾಜ್ಯದಲ್ಲಿ ನ್ಯಾಯವ್ಯವಸ್ಥೆ ತನ್ನ ಪಾಲಿನ ಕೆಲಸದಲ್ಲಿ ಕಾಲು ಭಾಗದಷ್ಟನ್ನಾದರೂ ಮಾಡಿದರೆ Gonal-Bheemappa-kpsc-chairmanಗೋನಾಳ್ ಭೀಮಪ್ಪ ಮತ್ತವರ ಸಹಚರರು ತಾವು ಅರಿತಿದ್ದೂ ಮಾಡಿದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸುವುದರಲ್ಲಿ ಸಂಶಯವಿಲ್ಲ. ರಾಜ್ಯದ ಸಾವಿರಾರು, ಲಕ್ಷಾಂತರ ಯುವಜನರ ನೈತಿಕ ಮೌಲ್ಯಗಳನ್ನು ಹಾಳುಮಾಡಿದ ಮತ್ತು ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗುವಂತೆ ಮಾಡಿದ ಪಾಪ ಈ ಆಯೋಗದ ಅಧ್ಯಕ್ಷರ ಮತ್ತು ಸದಸ್ಯರ ಮೇಲಿದೆ.

ನಮ್ಮ ವರ್ತಮಾನ.ಕಾಮ್‌ನಲ್ಲಿಯೂ ಕೆಪಿಎಸ್‌ಸಿಯ ಹಗರಣಗಳ ಬಗ್ಗೆ ಕೆಲವು ಲೇಖನಗಳು ಪ್ರಕಟವಾಗಿವೆ. ಇವು ಕೆಪಿಎಸ್‌ಸಿಯ ಹೀನಚರಿತ್ರೆಯನ್ನು ನಿಮಗೆ ಸ್ಪಷ್ಟ ಮಾಡುತ್ತವೆ:

ಈಗ ವಿಧಾನಸಭಾ ಅಧಿವೇಶನ ನಡೆಯುತ್ತಿದೆ. ಇತ್ತೀಚೆಗೆ ಲೀಕ್ ಆಗಿರುವ ಸಿಐಡಿ ತನಿಖೆಯ ವರದಿಯ ಆಧಾರದ ಮೇಲೆ ಪ್ರಜಾವಾಣಿಯಲ್ಲಿ ಪತ್ರಕರ್ತ ರವೀಂದ್ರ ಭಟ್ಟರು ಬರೆಯುತ್ತಿರುವ ಲೇಖನ ಸರಣಿ ನವೆಂಬರ್ 28, 2013 ರಿಂದ ಬರುತ್ತಿದೆ. ಕೆಲವು ವರದಿಗಳು ಮುಖಪುಟದಲ್ಲೂ ಪ್ರಕಟವಾಗಿವೆ. ಏಳೆಂಟು ದಿನಗಳಿಂದ ಪ್ರಕಟವಾಗುತ್ತಿರುವ ಈ ಲೇಖನಗಳಲ್ಲಿ ಯಾವೊಂದನ್ನೂ ನಮ್ಮ ಶಾಸಕರು ಗಮನಿಸಿಲ್ಲವೇ? belgaum vidhanasoudhaರಾಜ್ಯದಲ್ಲಿ ಇಂದು ಸಚಿವರಲ್ಲದ ಸುಮಾರು 195+ ವಿಧಾನಸಭಾ ಸದಸ್ಯ ಶಾಸಕರು ಮತ್ತು ಸುಮಾರು 70+ ವಿಧಾನಪರಿಷತ್ ಸದಸ್ಯ ಶಾಸಕರಿದ್ದಾರೆ. ಇಂದು ಚಳಿಗಾಲದ ಅಧಿವೇಶನದ ಕೊನೆಯ ದಿನದ ಹಿಂದಿನ ದಿನ. ಈಗಿನವರೆಗೂ ಆ ವಿಷಯ ಪ್ರಸ್ತಾಪವಾಗಿಲ್ಲ. ನಾಳೆ ಎಲ್ಲರೂ ಬೀಳ್ಕೊಳ್ಳುವ ಆತುರದಲ್ಲಿರುತ್ತಾರೆ. ನಾಳೆಯೂ ಅದು ಪ್ರಸ್ತಾಪವಾಗುವುದಿಲ್ಲ. ರಾಜ್ಯದ ಆಡಳಿತ ಮತ್ತು ನೈತಿಕತೆಯನ್ನು ಎತ್ತಿಹಿಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ಬಹಳ ಪ್ರಮುಖವಾದ ಈ ಗಂಭೀರ ವಿಷಯವನ್ನು 270+ ಶಾಸಕರಲ್ಲಿ ಯಾರೊಬ್ಬರೂ ಎತ್ತಿಲ್ಲ ಎನ್ನುವುದು ನಮ್ಮ ಶಾಸನಸಭೆಯ ಸದಸ್ಯರ ಅರ್ಹತೆ ಮತ್ತು ಕಾಳಜಿಯನ್ನು ತೋರಿಸುತ್ತದೆ. ಸರಳವಾಗಿ ಹೇಳಬೇಕೆಂದರೆ, ಈ ಕೆಪಿಎಸ್‌ಸಿಯ ದುರಾಚಾರದ ಫಲಾನುಭವಿಗಳು ಎಲ್ಲಾ ಪಕ್ಷಗಳಲ್ಲಿ ಇರುವುದೇ ಇಲ್ಲಿಯ ಸಮಸ್ಯೆಯ ಮೂಲ. ಆದರೆ ಫಲಾನುಭವಿಗಳಲ್ಲದ ಶಾಸಕರು ಈ ವಿಚಾರವನ್ನು ಎತ್ತದಂತೆ ಇರುವ ತಡೆಗಳಾದರೂ ಏನು? ಪಟ್ಟಭದ್ರ ಹಿತಾಸಕ್ತಿಗಳು ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ.

ಇನ್ನು, ಮಸೂದೆಗಳ ಮಂಡನೆಯ ವಿಚಾರ. ಹಿಂದಿನ ಬಿಜೆಪಿ ಸರ್ಕಾರ ಒಂದೇ ದಿನದಲ್ಲಿ ಹತ್ತು-ಹದಿನೈದು ಮಸೂದೆಗಳನ್ನು ಮಂಡಿಸಿ ಯಾವೊಂದು ಚರ್ಚೆಯೂ ಇಲ್ಲದೆ ವಿರೋಧಪಕ್ಷಗಳ ಅನುಪಸ್ಥಿತಿಯಲ್ಲಿ (ಪಾಪ ಅವರಿಗೂ ಚರ್ಚೆ ಮಾಡುವಷ್ಟು ತಾಳ್ಮೆ ಮತ್ತು ತಿಳಿವಳಿಕೆ ಇರುತ್ತಿರಲಿಲ್ಲ) ಸದನದ ಅನುಮೋದನೆ ಪಡೆದುಕೊಳ್ಳುತ್ತಿತ್ತು. ಅಂತಹ ಹೀನ, ಅಪ್ರಜಾಸತ್ತಾತ್ಮಕ ಪರಂಪರೆಯನ್ನು Karnataka-assembly-sessionಇಂದಿನ ಕಾಂಗ್ರೆಸ್ ಸರ್ಕಾರವೂ ಮುಂದುವರೆಸುತ್ತಿದೆ. ನೆನ್ನೆ ಸರ್ಕಾರ ಸದನದಲ್ಲಿ ಅನೇಕ ಮಸೂದೆಗಳನ್ನು ಮಂಡಿಸಲು ಪ್ರಯತ್ನಿಸಿದೆ. ಒಂದಷ್ಟು ಶಾಸಕರು ಮಾತ್ರ ಪೂರ್ವಸಿದ್ಧತೆ ಅಥವ ಕಾಮನ್-ಸೆನ್ಸ್‌ನಿಂದ ಮಾತಾಡಿರುವ ವಿಚಾರಗಳು ವರದಿಯಾಗಿವೆ. ಬಹುತೇಕರದು ಮಾಮೂಲಿ ತಂತ್ರಗಾರಿಕೆ: ವಿರೋಧಪಕ್ಷದಲ್ಲಿರುವ ಕಾರಣಕ್ಕೆ ವಿರೋಧ ಮತ್ತು ಆಡಳಿತ ಪಕ್ಷಕ್ಕೆ ಸೇರಿರುವುದರಿಂದ ಬೆಂಬಲ. ಇನ್ನು ವಿರೋಧ ಪಕ್ಷದ ನಾಯಕರಾದ ಕುಮಾರಸ್ವಾಮಿಯವರ ಮಾತು ನೋಡಿ: “ಮಸೂದೆಗಳನ್ನು ಮಂಡಿಸದೇ ಹೋದರೆ ದೇಶ ಮುಳುಗಿ ಹೋಗೋದಿಲ್ಲ. ಮಸೂದೆ ಮಂಡನೆಯನ್ನು ಮುಂದೂಡಿ ಕೃಷ್ಣಾ ನ್ಯಾಯ ಮಂಡಳಿ ತೀರ್ಪಿನ ಚರ್ಚೆಗೆ ಅವಕಾಶ ನೀಡಬೇಕು.” ಕೃಷ್ಣಾ ನದಿನೀರು ಹಂಚಿಕೆಯ ವಿಷಯವೂ ಮುಖ್ಯವೇ. ಆದರೆ ಮಸೂದೆಗಳ ಬಗ್ಗೆ ಚರ್ಚೆ ಬೇಡ, ಕೃಷ್ಣಾದಷ್ಟೇ ಚರ್ಚೆಯಾಗಲಿ ಎನ್ನುವುದರಲ್ಲಿ ರಾಜಕೀಯ ಹಿತಾಸಕ್ತಿ ಮತ್ತು ಬೇಜವಾಬ್ದಾರಿತನವಿದೆಯೇ ಹೊರತು ಬೇರೇನಲ್ಲ. ಮಸೂದೆಗಳ ಬಗ್ಗೆ ಚರ್ಚೆ ಮಾಡಬೇಕಾದರೆ ಸಿದ್ಧತೆ ಮಾಡಿಕೊಳ್ಳಬೇಕು. ಮೆದುಳಿಗೆ ಕೆಲಸ ಕೊಡಬೇಕು. ಅದು ನಮ್ಮ ಶಾಸಕರಿಗೆ ಪರಮಹಿಂಸೆಯ ಕೆಲಸ. ಆದರೆ ಕೃಷ್ಣಾ ನದಿಯ ಬಗ್ಗೆ ರೋಷಾವೇಷದಿಂದ ಭಾವನಾತ್ಮಕವಾಗಿ ಮಾತಾಡಿದರೆ ಸಾಕು.

ಮತ್ತು ಸದನದಲ್ಲಿ ಮಸೂದೆಗಳು ವಿಸ್ತೃತವಾಗಿ ಚರ್ಚೆಯಾಗದೆ ಅನುಮೋದನೆಯಾಗಿ ಬಿಡುವುದು ಆ ಸದನದ ಸ್ಪೀಕರ್‌ರ ಕುರಿತು ಒಳ್ಳೆಯ ಅಭಿಪ್ರಾಯ ಮೂಡಿಸುವುದಿಲ್ಲ. ಹಿಂದಿನ ಶಾಸನಸಭೆಯ ಸ್ಪೀಕರ್ ಬಗ್ಗೆ ಇಡೀ ರಾಜ್ಯದ ಜನತೆ ಯಾವೊಂದು ಭರವಸೆಯನ್ನೂ ಇಟ್ಟುಕೊಂಡಿರಲಿಲ್ಲ. ಸ್ಪೀಕರ್‌ಗೆ ಬೇಕಾದ ನಿಷ್ಪಕ್ಷಪಾತತನ ಮತ್ತು ಸ್ವತಂತ್ರ್ಯ ಆಲೋಚನೆ-ನಡವಳಿಕೆ ಇಲ್ಲದ ವ್ಯಕ್ತಿಯಾಗಿದ್ದು, ಸ್ಪೀಕರ್ ಹುದ್ದೆಯ ಘನತೆಯನ್ನು ಕಳೆದವರು ಕೆ.ಜಿ.ಬೋಪಯ್ಯ. ಬಿಜೆಪಿ ಸರ್ಕಾರ ಉಳಿಸಲು ಕೆಲವು ಶಾಸಕರನ್ನು ಕಾನೂನುಬಾಹಿರವಾಗಿ ಅನರ್ಹಗೊಳಿಸಿದ ವಿಚಾರದಲ್ಲಿ ಸುಪ್ರೀಮ್‌ಕೋರ್ಟ್‌ನಿಂದ ಛೀಮಾರಿ ಮಾಡಿಸಿಕೊಂಡವರವರು. ಕೆಲವು ಶಾಸಕರು ರಾಜೀನಾಮೆ ಕೊಡಲು ಬಂದಾಗ ನಾಪತ್ತೆ ಪ್ರಕರಣ ಸೃಷ್ಟಿಸಿಕೊಂಡು ನಗೆಪಾಟಲಾದವರು.  bhopayyaಯಾವುದೇ ಪ್ರಜಾಪ್ರಭುತ್ವವನ್ನು ಗೌರವಿಸುವ ಪಕ್ಷ  ಇಂತಹ ವ್ಯಕ್ತಿಯನ್ನು ಪಕ್ಷದಿಂದ ಉಚ್ಚಾಟಿಸಬೇಕಿತ್ತು. ಆದರೆ ಅಂತಹ ಪ್ರಬುದ್ಧ ಪ್ರಜಾಪ್ರಭುತ್ವದ ಸಂದರ್ಭ ನಮ್ಮ ದೇಶದಲ್ಲಿ ಇನ್ನೂ ಉದಯಿಸಿಲ್ಲ. ಆದರೆ ಈಗಿನ ಸಭಾಧ್ಯಕ್ಷರಾದ ಕಾಗೋಡು ತಿಮ್ಮಪ್ಪನವರ ಬಗ್ಗೆ ಒಂದಷ್ಟು ಸದಭಿಪ್ರಾಯ ಮತ್ತು ಆಶಾವಾದ ಇದೆ. ಹಿರಿಯ ಸಂಸದೀಯಪಟು ಅವರು. ಅವರು ಮಸೂದೆಗಳ ಮಂಡನೆಯ ವಿಚಾರಕ್ಕೆ ಸರ್ಕಾರಕ್ಕೆ ನೇರ ನಿರ್ದೇಶನ ಕೊಡಬೇಕು, ಯಾವುದೇ ಕಾರಣಕ್ಕೂ ಅಧಿವೇಶನದ ಕೊನೆಯ ಒಂದೆರಡು ದಿನಗಳಲ್ಲಿ ಮಸೂದೆಗಳ ಮಂಡನೆಗೆ ಅವಕಾಶ ಕೊಡಬಾರದು, ಮತ್ತು ಪ್ರತಿಮಸೂದೆಯನ್ನೂ ವಿಸ್ತೃತ ಚರ್ಚೆಯ ನಂತರವೇ ಮತಕ್ಕೆ ಹಾಕಬೇಕು. ಹಾಗೆಯೇ, ಪ್ರತಿಯೊಂದು ಮಸೂದೆಗೂ ಯಾವ ಶಾಸಕ ಪರ ಹಾಕಿದ್ದಾನೆ, ವಿರುದ್ಧ ಹಾಕಿದ್ದಾನೆ, ಮತ್ತು ಮತಚಲಾಯಿಸದೆ ಗೈರುಹಾಜರಾಗಿದ್ದಾನೆ ಎನ್ನುವುದು ದಾಖಲಾಗಬೇಕು. ಈ ರಾಜ್ಯದ ಸಂಸದೀಯ ವ್ಯವಸ್ಥೆಯ ಘನತೆಯನ್ನು ಎತ್ತಿಹಿಡಿಯುವ ವಿಚಾರಕ್ಕೆ ರಾಜ್ಯದ ಪ್ರಜ್ಞಾವಂತ ಜನತೆ ಕಾಗೋಡು ತಿಮ್ಮಪ್ಪನವರತ್ತ ನೋಡುತ್ತಿದೆ.

ಇದೇ ಸಂದರ್ಭದಲ್ಲಿ ಮಾಜಿ ಸ್ಪೀಕರ್ ರಮೇಶ್‌ಕುಮಾರರ ನಡವಳಿಕೆಯನ್ನೂ ನಾವು ವಿಮರ್ಶಿಸಬೇಕಿದೆ. rameshkumarರಾಜ್ಯದ ಅಧಿಕಾರರೂಢರ ಭ್ರಷ್ಟಾಚಾರದ ವಿರುದ್ಧ ಸತತವಾಗಿ ಹೋರಾಟ ಮಾಡಿಕೊಂಡು ಬರುತ್ತಿರುವ ಎಸ್.ಆರ್.ಹಿರೇಮಠರ ವಿರುದ್ಧ ಸದನದಲ್ಲಿ ಇವರು ಹಕ್ಕುಚ್ಯುತಿ ಮಂಡಿಸಿದ್ದಾರೆ. ತಮ್ಮ ಮೇಲೆ ಬಂದಿರುವ ವೈಯಕ್ತಿಕ ಆರೋಪಗಳನ್ನು ರಮೇಶ್‌ಕುಮಾರರು ಎದುರಿಸಬೇಕಿರುವುದು ಸದನದ ಹೊರಗಡೆ, ಒಳಗಲ್ಲ. ಶಾಸಕರ ಹಕ್ಕುಗಳ ಮರೆಯಲ್ಲಿ ನಿಂತು ಅವರು ಹೋರಾಡಬಾರದು. ಸದನದ ಮತ್ತು ಶಾಸಕಾಂಗದ ಸಮಯವನ್ನು ತಮ್ಮ ವೈಯಕ್ತಿಕ ವಿಚಾರಕ್ಕೆ ಬಳಸಿಕೊಳ್ಳಬಾರದು ಎಂಬ ವಿವೇಚನೆಯನ್ನು ಆವರು ಕಳೆದುಕೊಂಡಂತಿದೆ. ಚಿಕ್ಕವಯಸ್ಸಿಗೇ ಸ್ಪೀಕರ್ ಅಂತಹ ಉನ್ನತ ಜವಾಬ್ದಾರಿ ಹೊತ್ತು ಅದನ್ನು ಅತ್ಯುತ್ತಮವಾಗಿ ನಿರ್ವಹಿಸಿ ರಾಜ್ಯದ ಜನರ ಪ್ರೀತಿ ಮತ್ತು ವಿಶ್ವಾಸಗಳನ್ನು ಪಡೆದಿದ್ದ ರಮೇಶ್‌ಕುಮಾರರು ಶಾಸಕರಾಗಿ ಬಹಳ ಕೆಟ್ಟ ರೀತಿಯಲ್ಲಿ ಸೋಲುತ್ತಿದ್ದಾರೆ. ಬಹುಶಃ ಅವರಿಗೆ ಒಳ್ಳೆಯ ಸ್ನೇಹಿತರ ಅವಶ್ಯಕತೆ ಇದೆಯೇ ಹೊರತು ಶಾಸಕರ ಹಕ್ಕಿನ ಅವಶ್ಯಕತೆಯಲ್ಲ.

ನಮ್ಮ ಶಾಸಕರು ತಮ್ಮ ನೈಜ ಮತ್ತು ಮೂಲಭೂತ ಜವಾಬ್ದಾರಿಗಳನ್ನು ಬಿಟ್ಟು ಮಿಕ್ಕೆಲ್ಲವನ್ನೂ ಮಾಡುತ್ತಿದ್ದಾರೆ. ಹಸು ಮೇಯಿಸುವ ಕೆಲಸಕ್ಕೆ ನೇಮಿಸಿದರೆ ಅವನು ಹಸುಗಳನ್ನು ಮರೆತು ಅಲೆಮಾರಿ ಕತ್ತೆಗಳ ಹಿಂದೆ ಹೊರಟಂತೆ ಇದು. ಸದನದಲ್ಲಿ ತಪ್ಪದೇ ಪಾಲ್ಗೊಳ್ಳುವುದು, ಜವಾಬ್ದಾರಿಯಿಂದ ವಿಷಯಗಳನ್ನು ಪ್ರಸ್ತಾಪಿಸುವುದು, ಚರ್ಚಿಸುವುದು, ಸರ್ಕಾರ ಮಂಡಿಸುವ ಪ್ರತಿಯೊಂದು ಮಸೂದೆಯ ಸಾಧಕಬಾಧಕಗಳ ಚರ್ಚೆ ಮಾಡುವುದು, ಪರ ಅಥವ ವಿರುದ್ಧವಾಗಿ ಮತ ಹಾಕುವುದು, ಅತ್ಯವಶ್ಯಕವಾದ ಯಾವುದಾದರೂ ಮಸೂದೆಯನ್ನು ಸರ್ಕಾರ ಮಂಡಿಸಲು ಹಿಂದೇಟು ಹಾಕುತ್ತಿದ್ದಾರೆ ತಾವೇ ಒಂದು ಮಸೂದೆ ರಚಿಸಿ ಖಾಸಗಿ ಮಸೂದೆಯಾಗಿ ಅದನ್ನು ಮಂಡಿಸುವುದು, assembly-speaker-kagoduಹೀಗೆ ಶಾಸಕರು ಮಾಡಬೇಕಾದ ಮೂಲಭೂತ ಕರ್ತವ್ಯಗಳನ್ನು ಬಿಟ್ಟು ನಮ್ಮ ಬಹುತೇಕ ಶಾಸಕರು ಕರ್ತವ್ಯಲೋಪದಲ್ಲಿ ತೊಡಗಿದ್ದಾರೆ. ಅವರು ಚುನಾವಣೆಯಲ್ಲಿ ಗೆದ್ದುಬಂದು ಶಾಸಕರಾಗಿದ್ದಾರೆ. ಆದರೆ ಶಾಸಕನಾಗಿ ಮುಂದುವರೆಯಲು ಬೇಕಾದ ನೈಜ ಅರ್ಹತೆಯನ್ನು ಗಳಿಸುವ ಮತ್ತು ಉಳಿಸಿಕೊಳ್ಳುವ ಕೆಲಸದಲ್ಲಿ ಅವರು ಜನಪ್ರತಿನಿಧಿಯಾಗಿರುವ ತನಕವೂ ಮಾಡಬೇಕಾಗಿರುತ್ತದೆ. ಇದನ್ನು ಅವರು ಅರಿಯಬೇಕಾಗುತ್ತದೆ ಅಥವ ಸ್ಪೀಕರ್ ಆದವರು ಪಾಠ ಮಾಡಬೇಕಿರುತ್ತದೆ. ಇಲ್ಲವಾದಲ್ಲಿ ಈ ಸದಸ್ಯರು ಕೊಳೆತು ನಾರುತ್ತಾರೆ. ಅದು ರಾಜ್ಯದ ಮತ್ತು ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಒಳ್ಳೆಯದಲ್ಲ.

One thought on “ವಿಧಾನಸಭೆಯಲ್ಲಿ ಕೊಳೆತು ನಾರುತ್ತಿರುವ ಶಾಸಕರು…

  1. RAJUDAVANAGERE

    ಭ್ರಷ್ಟಾಚಾರದ ಬೇರುಗಳು ಆಳವಾಗಿ ಇಳಿದುಬಿಟ್ಟಿದೆ.
    ಅವುಗಳನ್ನು ಅಲುಗಾಡಿಸಬೇಕಾದವರೇ. ಪರಮ ಭ್ರಷ್ಟರಾಗುತ್ತಿದ್ದಾರೆ.

    Reply

Leave a Reply to RAJUDAVANAGERE Cancel reply

Your email address will not be published. Required fields are marked *