ನೆಲ್ಸನ್ ಮಂಡೇಲ ಮತ್ತು ಇಂದಿನ ದಕ್ಷಿಣ ಆಫ್ರಿಕ


– ಮುನೀರ್ ಕಾಟಿಪಳ್ಳ


 

ದಕ್ಷಿಣ ಆಫ್ರಿಕಾ ದೇಶದ ಕರಿಯರಿಗೆ ರಾಜಕೀಯ ಅಧಿಕಾರ ಕೊಡಿಸಿದ, ವರ್ಣಭೇದ ನೀತಿಯನ್ನು ಅಧಿಕೃತವಾಗಿ ಕೊನೆಗೊಳಿಸಿದ ಜಗತ್ತು ಕಂಡ ಮಹಾನ್ ನಾಯಕ, ಅಪ್ರತಿಮ ಹೋರಾಟಗಾರ ನೆಲ್ಸನ್ ಮಂಡೇಲಾ ತನ್ನ ಸಾರ್ಥಕ ಬದುಕನ್ನು ಕೊನೆಗೊಳಿಸಿ ಜಗತ್ತಿಗೆ ವಿದಾಯ ಹೇಳಿದ್ದಾರೆ. Nelson_Mandelaಆತನಿಗೊಂದು ಗೌರವಪೂರ್ವಕ ಸಲಾಂ.

ನೆಲ್ಸನ್ ಮಂಡೇಲಾನ ನಾಡು ದಕ್ಷಿಣ ಆಫ್ರಿಕಾ ದೇಶದಲ್ಲಿ ಮೂರು ವರ್ಷದ ಹಿಂದೆ ನಡೆದ ಸಾಮ್ರಾಜ್ಯಶಾಹಿ ವಿರೋಧಿ “ವಿಶ್ವ ವಿದ್ಯಾರ್ಥಿ ಯುವಜನ ಉತ್ಸವ“ದಲ್ಲಿ ನಾನು ಪ್ರತಿನಿಧಿಯಾಗಿ ಭಾಗವಹಿಸಿದ್ದೆ. ನೆಲ್ಸನ್ ಮಂಡೇಲಾ ಸಮಾವೇಶವನ್ನು ಪರೋಕ್ಷವಾಗಿ ಉದ್ಘಾಟಿಸಿದ್ದರು. ಆ ಸಂದರ್ಭದಲ್ಲಿ ನಾನು ಕಂಡ ದಕ್ಷಿಣ ಆಫ್ರಿಕಾ, ಅಲ್ಲಿನ ಕರಿಯರನ್ನು ಹಿನ್ನೆಲೆಯಾಗಿಟ್ಟುಕೊಂಡು ಒಂದೆರಡು ಮಾತುಗಳು.

“ವಿಶ್ವ ವಿದ್ಯಾರ್ಥಿ ಯುವಜನ ಉತ್ಸವ” ಜೋಹಾನ್ಸ್‌ಬರ್ಗ್ ಸಮೀಪದ ಪ್ರಿಟೋರಿಯಾದಲ್ಲಿ ಆಯೋಜಿಸಲಾಗಿತ್ತು. ಅನಾರೋಗ್ಯದ ನಿಮಿತ್ತ ಮಂಡೇಲಾ ಅವರ ಧ್ವನಿ ಮುದ್ರಿತ ಭಾಷಣದ ಮೂಲಕ ಅವರ ಅನುಪಸ್ಥಿತಿಯಲ್ಲಿ ಸಮಾವೇಶವನ್ನು ಉದ್ಘಾಟಿಸಲಾಯಿತು. World-Festival-of-Youth-and-Students((Johannesburg_2010)ಮುದ್ರಿತ ಸಂದೇಶದಲ್ಲಿ ಮಂಡೇಲಾ ಸಂದೇಶದ ಧ್ವನಿ ಕೇಳಿದಾಗ ಜಗತ್ತಿನಾದ್ಯಂತದಿಂದ ಬಂದ ಯುವ ಪ್ರತಿನಿಧಿಗಳಲ್ಲಿ ರೋಮಾಂಚನ, ಅದರಲ್ಲೂ ಆಫ್ರಿಕಾ ಖಂಡದ ಕಪ್ಪು ಯುವಜನತೆಯ ಉತ್ಸಾಹವಂತೂ ಮೇರೆ ಮೀರುತ್ತಿತ್ತು. ಅಂತಹಾ ಅಗಾಧ ಪ್ರಭಾವವನ್ನು ಮಂಡೇಲಾ ಕರಿಯ ಜನತೆಯಲ್ಲಿ ಮೂಡಿಸಿದ್ದಾರೆ.

ನಾನು ದಕ್ಷಿಣ ಆಫ್ರಿಕಾದಲ್ಲಿ ಕಳೆದ ಹನ್ನೆರಡು ದಿನಗಳಲ್ಲಿ ದಕ್ಷಿಣ ಆಫ್ರಿಕಾದ ಇಂದಿನ ಪರಿಸ್ಥಿತಿ ವರ್ಣಭೇದ ನೀತಿ ಕೊನೆಗೊಂಡ ನಂತರದ ಅಲ್ಲಿನ ಕರಿಯರ ಸ್ಥಿತಿಗತಿಯನ್ನು ಅರಿಯಲು ಒಂದಿಷ್ಟು ಪ್ರಯತ್ನಿಸಿದೆ. ಸದಾ ಹಾಡು ಹೇಳುತ್ತಾ, ಸಣ್ಣ ಮ್ಯೂಸಿಕ್ ಕೇಳಿದರೂ ಸಾಕು ನಿಂತಲ್ಲೇ ಕುಣಿಯಲು ತೊಡಗುವ ಕರಿಯ ಯುವಜನರು ಅಗಾಧ ಜೀವನ ಪ್ರೀತಿ ಉಳ್ಳ ಸ್ನೇಹಜೀವಿಗಳು. ಅಲ್ಲಿನ ಮಹಿಳೆಯರಿಗೆ ಸಾಮಾಜಿಕವಾಗಿ ಸಮಾನ ಸ್ಥಾನಮಾನವಿದೆ. ಹೆಣ್ಣು ಗಂಡು ಎಂಬ ಭೇದಭಾವ ಅಲ್ಲಿ ಕಾಣಿಸುವುದಿಲ್ಲ. ಕರಿಯರಿಗೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆ. ಕರಿಯರೇ ಪ್ರಧಾನಿ, ಅಧ್ಯಕ್ಷರಾಗಿ ದೇಶವನ್ನು ಆಳುತ್ತಿದ್ದಾರೆ. ದಕ್ಷಿಣ ಆಫ್ರಿಕಾದ ರಸ್ತೆಗಳು ಅತ್ಯುತ್ತಮವಾಗಿದೆ. ಕಟ್ಟಡಗಳು, ಮಾಲ್‌ಗಳು ಯಾವುದೇ ಫಿಲಂ ಸಿಟಿಯನ್ನು ನಾಚಿಸುವಷ್ಟು ಅದ್ಭುತವಾಗಿದೆ. ಜಗತ್ತಿನ ಎಲ್ಲಾ ಬ್ರಾಂಡ್‌ನ ಐಷಾರಾಮಿ ಕಾರುಗಳು ಅಲ್ಲಿನ ರಸ್ತೆಯಲ್ಲಿ ಓಡಾಡುತ್ತದೆ. ಆದರೆ ಅಂತಹ ಮಾಲ್‌ಗಳಲ್ಲಿ, ಕಾರ್‌ಗಳಲ್ಲಿ ಕರಿಯರು ಕಾಣಸಿಗುವುದು ಅಪರೂಪ. ಜಗತ್ತಿನ ವೈಭವೋಪೋತ ನಗರಗಳಲ್ಲಿ ಒಂದಾಗಿರುವ ಜೋಹಾನ್ಸ್‌ಬರ್ಗ್ ಸಂಜೆ ಐದು ಗಂಟೆಯಾದರೆ ಸಾಕು ಬಾಗಿಲೆಳೆಯತೊಡಗುತ್ತದೆ. Johannesburgಆರು ಗಂಟೆಗೆ ರಸ್ತೆಗಳು ಸಂಪೂರ್ಣ ನಿರ್ಜನ. ನಿರ್ಗತಿಕರಿಗೆ, ನಿರುದ್ಯೋಗಿಗಳಿಗೆ ಪ್ರಿಟೋರಿಯಾ, ಜೋಹಾನ್ಸ್‌ಬರ್ಗ್‌ನಲ್ಲಿ ಗಂಜಿ ಕೇಂದ್ರಗಳಿವೆ. ಅಲ್ಲಿನ ಮಾರುದ್ಧದ ಸರತಿ ಸಾಲಿನಲ್ಲಿ ಬಿಳಿಯರು ಒಬ್ಬರೂ ಕಾಣಸಿಗುವುದಿಲ್ಲ. ಅಲ್ಲಿನ ಆಧುನಿಕ ಡಿಸ್ಕೋತೆಕ್, ಡಿ.ಜೆ. ಡ್ಯಾನ್ಸ್‌ಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಶ್ರೀಮಂತರಾಗಿರುವ ಕರಿಯ ಕುಟುಂಬಗಳ ಕೆಲ ಯುವಜನತೆ ಕಂಡು ಬರುತ್ತಾರೆ. ಅದೇ ಸಂದರ್ಭದಲ್ಲಿ ಕಾಲೇಜು ಓದುವ, ಡಿಗ್ರಿ ಪಡೆದು ನಿರುದ್ಯೋಗಿಗಳಾಗಿರುವ ಕರಿಯ ಯುವತಿಯರು ಚಿಲ್ಲರೆ ದುಡ್ಡಿಗೆ ಯಾವುದೇ ಸಂಕೋಚ ಇಲ್ಲದೆ ಮೈಮಾರುತ್ತಾರೆ. ಯುವಕರು ಲೂಟಿಗಿಳಿದು ಕ್ರಿಮಿನಲ್‌ಗಳಾಗುತ್ತಾರೆ. ಮಾರುಕಟ್ಟೆ ಸಂಸ್ಕೃತಿ, ಕೊಳ್ಳುಬಾಕ ಸಂಸ್ಕೃತಿಗೆ ತನ್ನತನ, ಪರಂಪರೆಯನ್ನು ಮರೆತು ಬಲಿ ಬಿದ್ದಿದ್ದಾರೆ. ರಾಜಕೀಯ ಅಧಿಕಾರ ದಕ್ಕಿದ್ದರೂ ಉದ್ಯೋಗಗಳು ಕರಿಯರಿಗೆ ದಕ್ಕುತ್ತಿಲ್ಲ. ನಿರುದ್ಯೋಗ ಕರಿಯ ಯುವಜನತೆಯನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಖಾಸಗೀಕರಣದ ಕಾರುಬಾರಿನಲ್ಲಿ ಸರಕಾರಿ ಉದ್ಯೋಗ ತೀರಾ ಕಡಿಮೆ. ಖಾಸಗಿ ಉದ್ಯೋಗ ದೊರಕುವುದಿಲ್ಲ.

“ಇದೆಲ್ಲಾ ಯಾಕೆ ಹೀಗೆ, ನಿಮ್ಮವರೇ ಅಧಿಕಾರದಲ್ಲಿದ್ದಾರಲ್ಲ? ಇಷ್ಟು ಶ್ರೀಮಂತಿಕೆ ಇದ್ದರೂ ನಿಮಗ್ಯಾಕೆ ಇಂತಹ ಬಡತನ,” south-africa_povertyಅಂತ ಇಂಜಿನಿಯರಿಂಗ್ ಓದಿರುವ ನಮ್ಮ ಕರಿಯ ಟ್ಯಾಕ್ಸಿ ಡ್ರೈವರ್‌ನಲ್ಲಿ ಪ್ರಶ್ನಿಸಿದರೆ ಆತನ ಉತ್ತರ ಹೀಗಿತ್ತು. “ಹೌದು ನಮಗೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆ. ನಮ್ಮವರೇ ದೇಶ ಆಳುತ್ತಿದ್ದಾರೆ. ಆದರೆ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿಲ್ಲ. ಇಲ್ಲಿ ಎಲ್ಲವೂ ಖಾಸಗಿ ಒಡೆತನದಲ್ಲಿದೆ. ಜಾಗತೀಕರಣಕ್ಕೆ ನಾವು ಬಹು ಹಿಂದೆಯೇ ತೆರೆದುಕೊಂಡಿದ್ದೇವೆ. ಹೆಚ್ಚಿನ ದೇಶೀಯ ಸೇರಿದಂತೆ ಬಹುರಾಷ್ಟ್ರೀಯ ಕಂಪೆನಿಗಳ ಆಡಳಿತ ಬಿಳಿಯರ ಕೈಯ್ಯಲ್ಲಿದೆ. ವರ್ಣಭೇದ ನೀತಿ ಅಧಿಕೃತವಾಗಿ ಇಲ್ಲದಿದ್ದರೂ ಅವರು ನಮ್ಮನ್ನು ಒಳ್ಳೆಯ ಉದ್ಯೋಗಕ್ಕೆ ಸೇರಿಸಿಕೊಳ್ಳುವುದಿಲ್ಲ. ಅದು ಬಿಳಿಯರಿಗೆ ಮೀಸಲು. ಇನ್ನು ಉದ್ಯಮಗಳನ್ನು, ವ್ಯಾಪಾರಗಳನ್ನು ನಡೆಸುವಷ್ಟು ಆರ್ಥಿಕವಾಗಿ ನಾವು ಬಲಿಷ್ಠರಲ್ಲ. ಇಲ್ಲಿ ಹೊಟೇಲ್‌ಗಳೆಂದರೆ ’ಕೆಎಫ್‌ಸಿ’ , ’ಮೆಕ್ ಡೋನಾಲ್ಡ್’ ಮಾರುಕಟ್ಟೆಗಳೆಂದರೆ ವಾಲ್ ಮಾರ್ಟ್, ಜೆಸ್ಕೋ ಮುಂತಾದವು. ಇಲ್ಲಿ ಅಪಾರ ಗಣಿ ಸಂಪತ್ತಿದ್ದರೂ ಅದೆಲ್ಲವೂ ಬಹುರಾಷ್ಟ್ರೀಯ ಕಂಪೆನಿಗಳ, ಬಿಳಿಯರ ಕೈಯಲ್ಲಿದೆ. ಅಲ್ಲಿ ಯಾವುದೇ ಕಾರ್ಮಿಕ ಕಾನೂನುಗಳಿಗೆ ಬೆಲೆ ಇಲ್ಲ. ಅಲ್ಲಿ ಗುಲಾಮರ ರೀತಿ ನಮ್ಮ ಕಪ್ಪು ಕಾರ್ಮಿಕರು ದುಡಿಯುತ್ತಾರೆ. ಇದರಿಂದಾಗಿ ನಮ್ಮ ಯುವಜನತೆ ಹತಾಶರಾಗಿದ್ದಾರೆ. ಹಸಿವು ಅವರನ್ನು ಕಿತ್ತು ತಿನ್ನುತ್ತಿದೆ. ಆಧುನಿಕ ಮಾಲ್‌ಗಳು, ಡಿಸ್ಕೋತೆಕ್‌ಗಳು ಅವರನ್ನು ಆಕರ್ಷಿಸುತ್ತಿದೆ. ಅಣಕಿಸುತ್ತಿದೆ. ಇದರಿಂದಾಗಿ ಇಲ್ಲಿ ಅಪರಾಧ ಪ್ರಕರಣಗಳು ಜಾಸ್ತಿಯಾಗುತ್ತಿದೆ. ಶ್ರೀಮಂತ ಜೀವನಕ್ಕಾಗಿ ಮಾತ್ರ ಅಲ್ಲ ಒಂದು ತುಂಡು ಬ್ರೆಡ್‌ಗಾಗಿಯೂ ಇಲ್ಲಿ ಕೊಲೆಗಳಾಗುತ್ತವೆ, ಹಾಡುಹಗಲೇ ಅಪಹರಣಗಳಾಗುತ್ತವೆ. ಇದನ್ನು ನಿಭಾಯಿಸಲಾಗದ ಸರಕಾರ ಐದು ಗಂಟೆಗೆ ಮಾರುಕಟ್ಟೆ, ಅಂಗಡಿ, ಮಾಲ್‌ಗಳನ್ನು ಬಂದ್ ಮಾಡಿಸುತ್ತದೆ. ಆರು ಗಂಟೆಯ ನಂತರ ಯಾರೂ ಬೀದಿಗೆ ಬರುವುದಿಲ್ಲ,” ಎಂದು ನಿಟ್ಟುಸಿರು ಬಿಟ್ಟ. ಇದು ಇಂದಿನ ನೆಲ್ಸನ್ ಮಂಡೇಲಾ ನಾಡಿನ ಸ್ಥಿತಿ.

ದಕ್ಷಿಣ ಆಫ್ರಿಕಾದ ಯುವ ತಲೆಮಾರಿನ ಕಾರ್ಯಕರ್ತರಲ್ಲಿ ಈ ಕುರಿತು ಚರ್ಚಿಸಿದಾಗ ಹಲವು ಗಂಭೀರ ವಾದಮಾತುಗಳನ್ನು ತೆರೆದಿಟ್ಟರು. Poverty_and_Policy_in_Post_Apartheid_South_Africaನೆಲ್ಸನ್ ಮಂಡೇಲಾ ಸಾಮಾಜಿಕ, ರಾಜಕೀಯ ಸ್ವಾತಂತ್ರ್ಯಕ್ಕಾಗಿ ಅಪ್ರತಿಮ ಹೋರಾಟ ನಡೆಸಿದರು. ಆದರೆ ಆರ್ಥಿಕ ಸ್ವಾತಂತ್ರ್ಯದ ಪ್ರಶ್ನೆಯನ್ನು ಕಡೆಗಣಿಸಿದ್ದರಿಂದ ಈ ಪರಿಸ್ಥಿತಿ ಎದುರಾಗಿದೆ. ಇಂದು ಕರಿಯರ ಸರಕಾರ ಅಧಿಕಾರದಲ್ಲಿ ಇದ್ದರೂ ಆರ್ಥಿಕ ನೀತಿಗಳನ್ನು ರೂಪಿಸುವುದು ವಿಶ್ವಬ್ಯಾಂಕ್, ಬಹುರಾಷ್ಟ್ರೀಯ ಕಂಪೆನಿಗಳು ಸೇರಿದಂತೆ ಅಮೇರಿಕಾ ಮುಂತಾದ ಮುಂದುವರಿದ ದೇಶಗಳು. ಇಂದು ಚಿಲ್ಲರೆ ಮಾರುಕಟ್ಟೆ, ಹೊಟೇಲ್‌ಗಳು ಸೇರಿದಂತೆ ಇಲ್ಲಿನ ಗಣಿಗಾರಿಕೆಯನ್ನು, ಆರ್ಥಿಕ ಕ್ಷೇತ್ರವನ್ನು ವಿದೇಶಿಯರು ಆಳುತ್ತಿದ್ದಾರೆ. ಅಲ್ಲಿ ಬಿಳಿಯರದ್ದೇ ಕಾರುಬಾರು. ಆರ್ಥಿಕ ಆಯಾಮವನ್ನು ನೆಲ್ಸನ್ ಮಂಡೇಲಾ ನೇತೃತ್ವದ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಕಡೆಗಣಿಸಿದ್ದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ವರ್ಣಭೇದ ನೀತಿ ಕೊನೆಗೊಂಡ ನಂತರವೂ ಎರಡು ದಶಕಗಳ ಆಳ್ವಿಕೆಯಲ್ಲೂ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಅಮೇರಿಕನ್ ಪ್ರಣೀತಿ ಬಂಡವಾಳ ಶಾಹಿ ನೀತಿಯನ್ನೇ ಮುಂದುವರಿಸುತ್ತಿದೆ. ಈ ನೀತಿಗಳ ಬದಲಾವಣೆಗೆ ಅವರು ಮುಂದಾಗುತ್ತಿಲ್ಲ ಎಂದು ಆರೋಪಿಸುತ್ತಾರೆ. ಅಷ್ಟೇ ಅಲ್ಲ ಗಣಿಗಳಲ್ಲಿ ಉತ್ತಮ ವೇತನಕ್ಕಾಗಿ, ನಗರಗಳಲ್ಲಿ ಉದ್ಯೋಗಕ್ಕಾಗಿ ಹೋರಾಟಗಳು ನಡೆಯದಂತೆ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ತಡೆಯುತ್ತಿದೆ. ಯುವಜನತೆಗೆ ಉದ್ಯೋಗ ಸೃಷ್ಟಿಸಲು, ಜೀವನ ಭದ್ರತೆಗೆ ಸರಕಾರ ಮುಂದಾಗುತ್ತಿಲ್ಲ. ಮಂಡೇಲಾ ಕೂಡಾ ಈ ಕುರಿತು ಏನೂ ಮಾಡುತ್ತಿಲ್ಲ ಎಂಬುದು ಇವರ ಆರೋಪ.

ಹೌದು ಮಂಡೇಲಾ ಒಂದು ಮಹಾನ್ ಹೋರಾಟವನ್ನು ನಡೆಸಿದ್ದಾರೆ. ಅದರಲ್ಲಿ ಮಿತಿಗಳೂ ಇರಬಹುದು. ಆ ಹೋರಾಟದಲ್ಲಿ ಅವರು ಗೆಲ್ಲುವಾಗ ಮುಂದೆ ನಡೆಯಬೇಕಾದ ಹೋರಾಟಗಳನ್ನು ನಡೆಸುವಷ್ಟು ಪ್ರಾಯ, ದೈಹಿಕ ಶಕ್ತಿ ಅವರಲ್ಲಿ ಉಳಿದಿರಲಿಲ್ಲ. ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುವುದು, ಅದರಲ್ಲಿ ಗೆಲ್ಲುವುದು ಈಗಿನ ಕಾಲಘಟ್ಟದಲ್ಲಿ ಅಷ್ಟು ಸುಲಭ ಅಲ್ಲ. ಅಲ್ಲಿನ ಸರಕಾರ ನೆಲ್ಸನ್ ಮಂಡೇಲಾ ಮನೆಯ ಸಂದರ್ಶನಕ್ಕೂ ಸಹ ದುಬಾರಿ ಶುಲ್ಕ ಇಟ್ಟು ಅದರಲ್ಲೂ mandela-house-ticketಲಾಭ ನಷ್ಟದ ಲೆಕ್ಕಾಚಾರ ನೋಡುತ್ತಿರುವ ಈ ಸಂದರ್ಭದಲ್ಲಿ, ಮಂಡೇಲ ಶಾಂತಿ ಮಂತ್ರವನ್ನು ಪಠಿಸುತ್ತಾ ಕರಿಯರ ಹೋರಾಟದ ಕೆಚ್ಚನ್ನು ಕುಂಠಿತಗೊಳಿಸಿದ್ದಾರೆ ಎಂಬ ಆರೋಪದ ನಡುವೆಯೂ ಮಂಡೇಲಾ ಹೋರಾಟದಿಂದ ಸ್ಫೂರ್ತಿ ಪಡೆದು ಅಲ್ಲಿನ ಕರಿಯ ಯುವಜನತೆ ಇಂದಿನ ಕಾಲಘಟ್ಟಕ್ಕೆ ಅಗತ್ಯವಾದ ಹೋರಾಟವನ್ನು ಕಟ್ಟಬೇಕಾಗಿದೆ. ಅದು ಅಪ್ರತಿಮ ನಾಯಕ ನೆಲ್ಸನ್ ಮಂಡೇಲರಿಗೆ ಕೊಡುವ ನಿಜವಾದ ಶ್ರದ್ಧಾಂಜಲಿ.

ಯಾರಿಗೆ ಬೇಕಿರಲಿ, ಬೇಡದಿರಲಿ, ಮುಂದೆ ನಡೆಯುವ ಎಲ್ಲಾ ರೀತಿಯ ವಿಮೋಚನಾ ಹೋರಾಟಗಳಲ್ಲಿಯೂ ಮಂಡೇಲಾ ಇದ್ದೇ ಇರುತ್ತಾನೆ. ನಿನಗೊಂದು ಸಲಾಂ, ಸಂಗಾತಿ ನೆಲ್ಸನ್ ಮಂಡೇಲಾ.

Leave a Reply

Your email address will not be published.