ಸ್ವಾತಂತ್ರಕ್ಕಾಗಿ ಜೀವನಪರ್ಯಂತ ನಡೆದ ಮಹಾಪುರುಷ ಇನ್ನಿಲ್ಲ

– ಬಿ.ಶ್ರೀಪಾದ ಭಟ್

“During my lifetime I have dedicated myself to this struggle of the African people. I have fought against white domination, and I have fought against black domination.” – Nelson Mandela

ಮಾನವತಾವಾದಿ, ದಕ್ಷಿಣ ಆಫ್ರಿಕಾದ ಬಾಪೂಜಿ ಎಂದೇ ಪ್ರಖ್ಯಾತರಾಗಿದ್ದ ನೆಲ್ಸನ್ ಮಂಡೇಲ ತಮ್ಮ 95 ರ ಇಳಿ Nelson_Mandelaವಯಸ್ಸಿನಲ್ಲಿ ತೀರಿಕೊಂಡಿದ್ದಾರೆ. ಅವರು ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ನೆಲ್ಸನ್ ಮಂಡೇಲ ಎಂದರೆ ಒಂದು Legacy, ಪರಂಪರೆ. ವರ್ಣಬೇಧ ನೀತಿಯ ವಿರುದ್ಧ ಮತ್ತು ಆ ಪ್ರಭುತ್ವದ ದೌರ್ಜನ್ಯದ ವಿರುದ್ಧ 1944 ರಿಂದಲೇ ತಮ್ಮ ಹೋರಾಟವನ್ನು ಪ್ರಾರಂಭಿಸಿದ ಮಂಡೇಲ 1994 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ವರ್ಣಬೇಧ ನೀತಿಯ ಪ್ರಭುತ್ವ ತೊಲಗುವವರೆಗೂ ತಮ್ಮ ಹೋರಾಟವನ್ನು ನಿಲ್ಲಿಸಲಿಲ್ಲ. ಆರಂಭದಲ್ಲಿ ಗೆರಿಲ್ಲಾ ಮಾದರಿಯ ಸಶಸ್ತ್ರ ಹೋರಾಟಕ್ಕೆ ಒಲವು ತೋರಿಸಿದ ಮಂಡೇಲ ಬಲು ಬೇಗನೆ ಅಂಹಿಸಾ ಮಾರ್ಗಕ್ಕೆ ಹೊರಳಿಕೊಂಡರು. ಎಂಬತ್ತರ ದಶಕದ ವೇಳೆಗೆ ಗಾಂಧಿವಾದಿಯಾಗಿ ರೂಪುಗೊಂಡರು. 1993 ರಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಪಡೆದ ನೆಲ್ಸನ್ ಮಂಡೇಲ 1994 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊಟ್ಟ ಮೊದಲ ಸರ್ವ ಜನಾಂಗಗಳನ್ನೊಳಗೊಂಡಂತಹ ಪ್ರಜಾಪ್ರಭುತ್ವದ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲವು ಸಾಧಿಸಿ ದೇಶದ ಅಧ್ಯಕ್ಷರಾಗಿ ಆಯ್ಕೆಯಾದರು. ಆದರೆ ಈ ಮಹಾನ್ ನಾಯಕ ಯಾವುದೇ ರಾಜಕೀಯ ಮಹಾತ್ವಾಕಾಂಕ್ಷೆಯನ್ನು ಸಾರ್ವಜನಿಕವಾಗಿ ತೋರ್ಪಡಿಸಿಕೊಳ್ಳದೆ 1999 ರಲ್ಲಿ ರಾಜಕೀಯದಿಂದ ನಿವೃತ್ತಿ ಹೊಂದಿದರು. ದಕ್ಷಿಣ ಆಫ್ರಿಕಾದ ಪ್ರಶ್ನಾತೀತ ನಾಯಕನಾಗಿ ಕಡೆ ಉಸಿರಿರುವವರೆಗೂ ಅಧಿಕಾರ ಚಲಾಯಿಸುವ ಎಲ್ಲಾ ಪ್ರಲೋಭನೆಗಳನ್ನು ತಿರಸ್ಕರಿಸಿ ಕೇವಲ ಐದು ವರ್ಷಗಳ ಕಾಲ ಅಧ್ಯಕ್ಷರಾಗಿ ತುಂಬ ಘನತೆಯಿಂದ ತಮಗೆ ಸಹಜವಾದ ಆದರ್ಶವನ್ನು ನಿರೂಪಿಸಿ ತಮ್ಮ ರಾಜಕೀಯ ಅಧಿಕಾರವನ್ನು ಮೊಟಕುಗೊಳಿಸಿಕೊಂಡರು. ಇವರ ಈ ಸಂಯಮ ನಮ್ಮನ್ನು ಬೆರಗುಗೊಳಿಸುತ್ತದೆ. ಭಾರತೀಯರಿಗೆ ಮತ್ತು ತೃತೀಯ ಜಗತ್ತಿನ ಇತರೆ ಅನೇಕ ರಾಷ್ಟ್ರಗಳ ಸರ್ವಾಧಿಕಾರ ಮತ್ತು ಅಮರಣಾಂತ ಅಧಿಕಾರದ ಹುಚ್ಚಿನ ನಾಯಕರನ್ನು ಕಂಡ ದೇಶಗಳ ಜನತೆಗಂತೂ ಇದೂ ಹೀಗೂ ಉಂಟೆ ಎನ್ನುವ ವಿಸ್ಮಯ!!

“ಬಿಳಿಯರ ದೌರ್ಜನ್ಯದ ವಿರುದ್ಧ ಹೋರಾಡಿದ ನಾನು ಕಪ್ಪು ವರ್ಣೀಯರ ಪ್ರತೀಕಾರದ ದೌರ್ಜನ್ಯದ ವಿರುದ್ಧವೂ ಹೋರಾಡುತ್ತೇನೆ” ಎಂದು ಅಧಿಕಾರ ವಹಿಕೊಂಡಾಗ ಪಣ ತೊಟ್ಟ ಮಂಡೇಲ ಗಾಂಧಿವಾದದ ನಿಜ ನಾಯಕ. ನುಡಿದಂತೆ ನಡೆದ ಮಂಡೇಲ ಮಾದರಿಯಾಗಿ ಬದುಕಿದರು. 1962 ರಲ್ಲಿ ಸ್ವಾತಂತ್ರ ಹೋರಾಟಗಾರನಾಗಿ ಜೈಲು ಸೇರಿದ ಮಂಡೇಲ ಜೈಲಿನಿಂದ ಬಿಡುಗಡೆಗೊಂಡಿದ್ದು 1990 ರಲ್ಲಿ. Long_Walk_to_Freedomಸುಮಾರು ಇಪ್ಪತ್ತೆಂಟು ವರ್ಷಗಳ ಕಾಲ ಸೆರೆಮನೆವಾಸ ಅನುಭವಿಸಿದ್ದ ಮಂಡೇಲ ಎಲ್ಲಿಯೂ ನೈತಿಕವಾಗಿ ಕುಗ್ಗಲೇ ಇಲ್ಲ. ಯಾವುದೇ ಬಗೆಯ ಸಂಧಾನವನ್ನು ನಿರಾಕರಿಸಿದರು. ಹೋರಾಟದ ಮಾರ್ಗವನ್ನು ಅನುಸರಿಸುವ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾದಾಗ ತನ್ನ ಎರಡನೇ ಪತ್ನಿ ವಿನ್ನಿ ಮಂಡೇಲ ಅವರೊಂದಿಗೆ 1996 ರಲ್ಲಿ ವಿಚ್ಛೇದನೆ ಪಡೆದುಕೊಂಡ ಮಂಡೇಲ ಬಿಳಿಯರ ಸರ್ಕಾರದ ಕಾಲಘಟ್ಟದಲ್ಲಿ ನಡೆದ ದೌರ್ಜನ್ಯ, ಅತ್ಯಾಚಾರ, ಕೊಲೆಗಳ ತನಿಖೆ ನಡೆಸಲು ಡೆಸ್ಮಂಡ್ ಟುಟು ನಾಯಕತ್ವದಲ್ಲಿ “Truth and Reconciliation Commission” ಅನ್ನು ಸ್ಥಾಪಿಸಿದರು. ಇದರ ತನಿಖೆಯ ವ್ಯಾಪ್ತಿಗೆ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಜರುಗಿದ ದೌರ್ಜನ್ಯಗಳ ವಿರುದ್ಧವೂ ತನಿಖೆ ನಡೆಸಬೇಕೆಂದು ಆದೇಶಿಸಿದ್ದರು. ಒಂದು ವೇಳೆ ಮಂಡೇಲ ಅವರು ಅಧ್ಯಕ್ಷರಾಗಿ ಆಯ್ಕೆಗೊಂಡಂತಹ ಸಂದರ್ಭದಲ್ಲಿ ಈ ಬಗೆಯ ಸಮತೋಲನದ ನಿರ್ಧಾರಗಳನ್ನು ತೆಗೆದುಕೊಳ್ಳದೇ ಹೋಗಿದ್ದಲ್ಲಿ ಶತಮಾನಗಳಿಂದ ಬಿಳಿಯರ ಕೈಯಲ್ಲಿ ಕ್ರೌರ್ಯಕ್ಕೆ ತುತ್ತಾಗಿದ್ದ ಬಹುಸಂಖ್ಯಾತ ಕಪ್ಪುವರ್ಣೀಯರ ಆಕ್ರೋಶಕ್ಕೆ ಅಲ್ಪಸಂಖ್ಯಾತ ಬಿಳಿಯರು ಗುರಿಯಾಗುತ್ತಿದ್ದರು. ಆದರೆ ಅತ್ಯಂತ ನಿರ್ಣಾಯಕ ಘಟ್ಟದಲ್ಲಿ ತನ್ನ ಸಮಯಪ್ರಜ್ಞೆ, ರಾಜಕೀಯ ಮುತ್ಸದ್ದಿತನ ಮತ್ತು ಸಮತಾವಾದದ ತತ್ವಕ್ಕೆ ಬದ್ಧರಾಗಿ ಜರುಗಬಹುದಾಗಿದ್ದ ಜನಾಂಗೀಯ ಘರ್ಷಣೆ ಮತ್ತು ಪ್ರತೀಕಾರದ ರಕ್ತಪಾತವನ್ನು ತಡೆದರು. ಇದು ಮಂಡೇಲಾ ಅವರ ಮಹಾನ್ ಸಾಧನೆಗಳಲ್ಲೊಂದು.

“ಮಡಿಬಾ” ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಮಂಡೇಲ ಕುರಿತು ಅವರ ಸಹವರ್ತಿ ಡೆಸ್ಮಂಡ್ ಟುಟು ಕೆಲವು ಗಂಟೆಗಳ ಹಿಂದೆ ಹೇಳಿದ್ದು ಇದು: “He was not only an amazing gift to humankind, he made South Africans and Africans feel good about being who we are. He made us walk tall.”

ಇನ್ನು ಮುಂದಿನ ಕೆಲವು ದಿನಗಳ ಕಾಲ ಜಗತ್ತಿನಾದ್ಯಂತ ಈ “ಮಡಿಬಾ ಮ್ಯಾಜಿಕ್” ಕುರಿತು ಚರ್ಚೆಗಳು ನಡೆಯುತ್ತಿರುತ್ತವೆ. ಇದು ಇಂದು ತುರ್ತಾಗಿ ಅವಶ್ಯಕವಿರುವ ಆಕ್ಸಿಜನ್.

Leave a Reply

Your email address will not be published. Required fields are marked *