Daily Archives: December 7, 2013

ಆಮ್ ಆದ್ಮಿ ಪಾರ್ಟಿ, ದೆಹಲಿ ಚುನಾವಣೆ, ದೇಶದ ರಾಜಕಾರಣ…


– ರವಿ ಕೃಷ್ಣಾರೆಡ್ಡಿ


 

ಇತ್ತೀಚೆಗೆ ತಾನೆ ಮುಗಿದ ರಾಷ್ಟ್ರದ ಐದು ವಿಧಾನಸಭಾ ಚುನಾವಣೆಗಳ ಫಲಿತಾಂಶ ನಾಳೆ ಹೊರಬೀಳಲಿದೆ. ಆದರೆ ಈ ಐದು ಚುನಾವಣೆಗಳಲ್ಲಿ ಎರಡನೆ ಕಿರಿಯ ರಾಜ್ಯವಾದ ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಮಾತ್ರ ದೇಶದ ಬಹುತೇಕ ಜನ ಕಾತರದಿಂದ ಎದುರು ನೋಡುತ್ತಿದ್ದಾರೆ. ಇದು ಕೇವಲ ದೆಹಲಿಯ ಚುನಾವಣೆ ಮಾತ್ರವಲ್ಲ, ಬದಲಿಗೆ ದೇಶದ ಪಾಲಿಗೆ ಐತಿಹಾಸಿಕವಾದ ಚುನಾವಣೆಯೂ ಆಗಿದೆ.

ಹಾಗೆಯೇ, ದೇಶದ ಭವಿಷ್ಯದ ಬಗ್ಗೆ ಕಾಳಜಿ ಇರುವ, ಪ್ರಜಾಪ್ರಭುತ್ವದಲ್ಲಿ ಮತ್ತು ಈ ದೇಶದ aam-admi-partyಸಂವಿಧಾನದಲ್ಲಿ ನಂಬಿಕೆ ಇಟ್ಟಿರುವ ಜನ ಪಕ್ಷಾತೀತವಾಗಿ (ಆಮ್ ಆದ್ಮಿ ಪಕ್ಷವನ್ನು ಹೊರತುಪಡಿಸಿ) ತಮ್ಮದಲ್ಲದ ಒಂದು ಪಕ್ಷ ದೆಹಲಿ ಚುನಾವಣೆಯಲ್ಲಿ ಗೆಲ್ಲಲಿ ಎಂದು ಅಪೇಕ್ಷಿಸುತ್ತಿದ್ದಾರೆ. ಬಹುಶಃ ಇದು ಇತ್ತೀಚಿನ ದಶಕಗಳಲ್ಲಿ ಕಂಡುಕೇಳರಿಯದ ವಿದ್ಯಮಾನ. ಆ ಮಟ್ಟಿಗೆ ದೆಹಲಿ ವಿಧಾನಸಭಾ ಚುನಾವಣೆ ಈ ದೇಶದ ರಾಜಕೀಯ. ಸಾಮಾಜಿಕ, ಮತ್ತು ಆರ್ಥಿಕ ಗತಿವಿಧಿಗಳನ್ನು ನಿರ್ದೇಶಿಸುವ ಸಾಮರ್ಥ್ಯ ಪಡೆದುಕೊಂಡಿದೆ.

ಈ ಚುನಾವಣೆಯ ಫಲಿತಾಂಶ  ಇನ್ನೇನು 24 ಗಂಟೆಗಳ ಒಳಗೇ ಗೊತ್ತಾಗುತ್ತದೆ. ಆದರೆ, ಈ ಸಂದರ್ಭದಲ್ಲಿ ಒಮ್ಮೆ ನಿಂತು ನಾವು ಈ ಚುನಾವಣೆ ಅದು ಹೇಗೆ ನಮ್ಮ ದೇಶದ ಭವಿಷ್ಯವನ್ನು ಪ್ರಭಾವಿಸಲಿದೆ ಎಂದು ಒಮ್ಮೆ ಅವಲೋಕಿಸಬೇಕಿದೆ.

ದೇಶದ ಎರಡು ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಕೆಲವು ವಿಚಾರಗಳನ್ನು ಹೊರತುಪಡಿಸಿದರೆ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಭ್ರಷ್ಟಾಚಾರ ಮತ್ತು ಅನೈತಿಕತೆಯ ವಿಚಾರಕ್ಕೆ ಎರಡೂ ಪಕ್ಷಗಳಲ್ಲಿ ಯಾವುದೇ ಭೇದ ಇಲ್ಲ. ಸಮಾನ ಭ್ರಷ್ಟರು. ಕಾಂಗ್ರೆಸ್ ಎನ್ನುವ ಪಕ್ಷ rahul_priyanka_soniaಯಾವುದೇ ನಾಚಿಕೆ ಇಲ್ಲದೆ ಗುಲಾಮಗಿರಿಯ ವಂಶರಾಜಕಾರಣವನ್ನು ಪೋಷಿಸುತ್ತ ಬಂದಿದೆ. ಆ ಪಕ್ಷದಲ್ಲಿ ಇರುವ ನಾಯಕರು ಎಷ್ಟೇ ಜ್ಞಾನಿಗಳಾಗಿರಲಿ, ಪ್ರಾಮಾಣಿಕರಾಗಿರಲಿ, ದಕ್ಷರಾಗಿರಲಿ, ಅವರು ಪಕ್ಷದ ರಾಜಕೀಯವನ್ನು ವಿಮರ್ಶಿಸುವ, ಹೈಕಮಾಂಡ್ ಅನ್ನು ವಿಶ್ಲೇಷಿಸುವ, ಮತ್ತು ಅದರ ವಿರುದ್ಧ ಮಾತನಾಡುವ ಹಕ್ಕು ಪಡೆದಿಲ್ಲ. ಸ್ವಾಭಿಮಾನವನ್ನು ಒತ್ತೆಯಿಟ್ಟು ಅಲ್ಲಿ ಕೆಲಸ ಮಾಡಬೇಕಿದೆ. ಈ ಪಕ್ಷ ಇವತ್ತು ದೇಶದ ಅತಿದೊಡ್ಡ ರಾಜಕೀಯ ಪಕ್ಷ ಎನ್ನುವುದು ದೇಶದ ದೌರ್ಭಾಗ್ಯವಾಗಿದೆ. ಇನ್ನು ಎರಡನೆ ದೊಡ್ಡ ಪಕ್ಷವಾದ ಬಿಜೆಪಿಯ ಹಿಂದೆ ಇನ್ನೊಂದು ತರಹದ ಹೈಕಮ್ಯಾಂಡ್ ಇದೆ. ಸಂಕುಚಿತ ದೃಷ್ಟಿಕೋನಗಳುಳ್ಳ ಈ ಹೈಕಮ್ಯಾಂಡ್‌‍ಗೆ ಮಾನವನ ವಿಕಾಸದ ಹಾದಿ ಮತ್ತು ಅವನ ಚರಿತ್ರೆಯ ಪರಿಜ್ಞಾನವಿಲ್ಲ. ಪುರಾಣಗಳನ್ನೇ ಈ ದೇಶದ ಚರಿತ್ರೆ ಎಂದು ಭಾವಿಸಿದೆ. ಕೇವಲ ಕೀಳುತನ ಮತ್ತು ಸ್ವಾರ್ಥದಿಂದ ಕೂಡಿದ, ಮಧ್ಯಾಕಾಲೀನ ಯುಗದ ಚಿಂತನೆಯ ಉಗ್ರ ಹಿಂದುತ್ವವನ್ನು ಅದು ಪ್ರತಿಪಾದಿಸುತ್ತದೆ. ಅದಕ್ಕೆ ಬೇಕಾದಂತೆ ಜನರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತದೆ. ಮನುಷ್ಯರಲ್ಲಿಯ ಭೇದವನ್ನು ಉಳಿಸಿಕೊಳ್ಳುವುದೇ narender_modi_rssಈ ದೇಶದ ಪ್ರಗತಿ ಎನ್ನುತ್ತದೆ. ಈ ನೆಲದಲ್ಲಿ ಇಲ್ಲಿಯ ಸಮಾಜವನ್ನು ಎತ್ತರಿಸುವ ಮತ್ತು ಜನರನ್ನು ಪ್ರೀತಿ-ಪ್ರೇಮ-ಕರುಣೆ-ಸಮಾನತೆಗಳ ಮಾನವರನ್ನಾಗಿಸಲು ಕಾಲಕಾಲಕ್ಕೆ ಹುಟ್ಟಿಕೊಂಡ ಪ್ರತಿರೋಧ ಮತ್ತು ಹೋರಾಟಗಳನ್ನು ಅದು ಅಣಕಿಸುತ್ತದೆ. ಅದು ಇತಿಹಾಸವಲ್ಲ, ಪುರಾಣಗಳೇ ನಮ್ಮ ಇತಿಹಾಸ ಎನ್ನುವ ಈ ಪಕ್ಷದ ಧೋರಣೆ ಭಾರತೀಯರ ಪ್ರಗತಿ, ಸಮಾನತೆ, ಸಾರ್ಥಕಜೀವನಕ್ಕೆ ದೊಡ್ಡ ಶತ್ರುವಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ಎರಡು-ಮೂರು ವರ್ಷಗಳ ಹಿಂದೆ ಆರಂಭವಾದ “ಭ್ರಷ್ಟಾಚಾರದ ವಿರುದ್ಧ ಭಾರತ” ಚಳವಳಿ ದೇಶದಲ್ಲಿ ಸಂಚಲನ ಮೂಡಿಸಿತು. ಅಣ್ಣಾ ಹಜಾರೆ, ಅರವಿಂದ್ ಕೇಜ್ರಿವಾಲ್, ಪ್ರಶಾಂತ್ ಭೂಷಣ್, ಕಿರಣ್ ಬೇಡಿ, ಮೇಧಾ ಫಾಟ್ಕರ್, ಮತ್ತಿತರ ಜನರ ಅವಿರತ ಶ್ರಮದಿಂದ ದೇಶದಾದ್ಯಂತ ಈ ದೇಶದ ಭವಿಷ್ಯದ ಬಗ್ಗೆ ಜನ ಗಂಭೀರವಾಗಿ ಯೋಚಿಸುವಂತೆ, ಚರ್ಚಿಸುವಂತೆ ಆಗಿದ್ದೇ ಆ ಆಂದೋಳನದ ದೊಡ್ಡ ಯಶಸ್ಸು. ಜಯಪ್ರಕಾಶ್ ನಾರಾಯಣರ “ಸಂಪೂರ್ಣ ಕ್ರಾಂತಿ”ಯ ನಂತರ, (ಸುಮಾರು ಮುವ್ವತ್ತೈದು ವರ್ಷಗಳ ನಂತರ) ದೇಶ ಅಂತಹ ಮತ್ತೊಂದು ಆಂದೋಳನಕ್ಕೆ ಸಾಕ್ಷಿಯಾಯಿತು. ಇದರ ಮಿತಿಗಳು ಏನೇ ಇರಲಿ, ಜೆಪಿಯವರ ಸಂದರ್ಭಕ್ಕಿಂತಲೂ ಹೆಚ್ಚಿನ ಸಿನಿಕತೆಯಿಂದ, ಅಪನಂಬಿಕೆಯಿಂದ, ಭ್ರಷ್ಟಾಚಾರದಿಂದ, ಸ್ವಾರ್ಥದಿಂದ ತುಂಬಿರುವ ಈವತ್ತಿನ ಸಮಾಜದಲ್ಲಿ anna-kejriwal“ಭ್ರಷ್ಟಾಚಾರದ ವಿರುದ್ಧ ಭಾರತ” ಉಂಟುಮಾಡಿದ ಜನಚೈತನ್ಯವನ್ನು ನಾವು ಕೀಳಾಗಿ ಪರಿಗಣಿಸಲಾಗದು. ಅದರ ಮುಂದಿನ ಹೆಜ್ಜೆಯಾಗಿ ರೂಪಿತವಾದ “ಆಮ್ ಆದ್ಮಿ ಪಾರ್ಟಿ”ಯನ್ನು ದೆಹಲಿಯ ಜನತೆ ಹೇಗೆ ಸ್ವೀಕರಿಸಿದ್ದಾರೆ ಎನ್ನುವುದು ನಾಳೆ ಗೊತ್ತಾಗುತ್ತದೆ.

ನನ್ನ ಪ್ರಕಾರ ದೆಹಲಿಯಲ್ಲಿ ಮತದಾನವಾಗುವುದಕ್ಕಿಂತ ಮುಂಚೆಯೇ ಆಮ್ ಆದ್ಮಿ ಪಾರ್ಟಿ ಹಲವಾರು ವಿಷಯಗಳಲ್ಲಿ ಗೆದ್ದುಬಿಟ್ಟಿದೆ. ದೆಹಲಿಯ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗಿಂತ ಆ ಪಕ್ಷದ ಅರವಿಂದ್ ಕೇಜ್ರಿವಾಲ್‌ ದೆಹಲಿಯ ಜನರ ಮನಸ್ಸಿಗೆ ಹತ್ತಿರವಾಗಿದ್ದಾರೆ ಎಂದು ಸ್ಪಷ್ಟವಾಗಿ ಗೊತ್ತಾಗಿದ್ದೇ, ತಡಮಾಡದೆ ಬಿಜೆಪಿ ಪಕ್ಷ ಭ್ರಷ್ಟಾಚಾರದ ಸೋಂಕಿಲ್ಲದ ವ್ಯಕ್ತಿ ಈತ ಎಂದು ಒಬ್ಬರನ್ನು ಯಶಸ್ವಿಯಾಗಿ ಬಿಂಬಿಸಿ ಅವರನ್ನು ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿಬಿಟ್ಟಿತು. ಅಲ್ಲಿಯವರೆಗೂ ಅಲ್ಲಿ ಆ ಪಕ್ಷವನ್ನು ಮುನ್ನಡೆಸುತ್ತಿದ್ದ ವಿಜಯ್ ಗೋಯಲ್‌ರನ್ನು ಡಮ್ಮಿ ಮಾಡಿತು. ಭ್ರಷ್ಟರನ್ನು ಮತ್ತು ಅದಕ್ಷರನ್ನು ಇಟ್ಟುಕೊಂಡು ನಾವು ಈ ಚುನಾವಣೆ ನಡೆಸಲಾಗದು ಎಂದು ಪ್ರಮುಖ ರಾಜಕೀಯ ಪಕ್ಷವೊಂದು ತೀರ್ಮಾನಕ್ಕೆ ಬರುವುದೇ ಒಂದು ದೊಡ್ಡ ಗುಣಾತ್ಮಕ ಬದಲಾವಣೆ. ಆಪ್ ದೆಹಲಿ ಚುನಾವಣೆಗೆ ಇಳಿಯದೇ ಇದ್ದಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ.

ಇನ್ನೊಂದು ದೊಡ್ಡ ಸಾಧನೆ, ಆಪ್ ಚುನಾವಣೆಗಳನ್ನು ಎದುರಿಸಿದ ರೀತಿ. ಯಾವುದೇ ಕಾರಣಕ್ಕೂ ತಮ್ಮ ಪಕ್ಷದ ಅಭ್ಯರ್ಥಿಗಳು ಚುನಾವಣಾ ಆಯೋಗದ ಮಿತಿಯಾದ 16 ಲಕ್ಷಕ್ಕಿಂತ ಹೆಚ್ಚು ದುಡ್ಡು ಖರ್ಚು ಮಾಡುವುದಿಲ್ಲ ಎನ್ನುವ ಅದರ ತೀರ್ಮಾನ ಮತ್ತು ಹಾಗೆ ನಡೆದುಕೊಂಡ ರೀತಿ ಅದನ್ನು ಅಲ್ಲಿಯ ಬೇರೆಲ್ಲ ಪಕ್ಷಗಳಿಗಿಂತ ಮೊದಲ ದಿನದಿಂದಲೇ ಭಿನ್ನವಾಗಿಸಿತು. ದೆಹಲಿ ಚುನಾವಣೆಗೆ ಈ ಮಿತಿಯಲ್ಲಿ ಚುನಾವಣೆ ನಡೆಸಲು ನಮಗೆ aap-donationಇಪ್ಪತ್ತು ಕೋಟಿ ಬೇಕಾಗುತ್ತದೆ ಮತ್ತು ಅದೆಲ್ಲವನ್ನೂ ಜನರಿಂದಲೇ ಸಂಗ್ರಹಿಸುತ್ತೇವೆ ಎಂದು ಹೊರಟ ಆ ಪಕ್ಷ, ಅಷ್ಟು ಮೊತ್ತ ಸಂಗ್ರಹವಾದ ತಕ್ಷಣ ಹಣ-ಸಂಗ್ರಹ ಅಭಿಯಾನವನ್ನು ನಿಲ್ಲಿಸಿತು. ಅವರ ಕೋರಿಕೆಗೆ ಈ ದೇಶದ ಜನ ಸ್ಪಂದಿಸಿದ ರೀತಿಯನ್ನು ನಾವು ಪರಿಗಣಿಸದೇ ಇರಲು ಸಾಧ್ಯವಿಲ್ಲ. ತಮಗೆ ಬಂದ ಪ್ರತಿಯೊಂದು ದೇಣಿಗೆಯನ್ನು ಆ ಪಕ್ಷ ತನ್ನ ಅಂತರ್ಜಾಲ ತಾಣದಲ್ಲಿ ತತ್‌ಕ್ಷಣದಲ್ಲಿ ಅಪ್‌ಡೇಟ್ ಮಾಡುತ್ತಿತ್ತು. ದೇಣಿಗೆ ಕೊಟ್ಟವರ ಹೆಸರು, ವಿಳಾಸ, ಮತ್ತು ಮೊತ್ತವನ್ನು ಹೀಗೆ ಕೂಡಲೆ ಪ್ರಕಟಿಸುವ ಮೂಲಕ ಬೇರೆಲ್ಲ ಪಕ್ಷಗಳಿಗೆ ಅದು ಒಂದು ಮಾದರಿಯನ್ನು ತೋರಿಸಿ, ಕೇವಲ ಕಪ್ಪುಹಣದಲ್ಲಿ, ಪತ್ತೆಯಾಗದ ಮೂಲಗಳಿಂದ ಸಂಗ್ರಹಿಸಿದ ಭ್ರಷ್ಟಾಚಾರದ ಹಣದಲ್ಲಿ, ಅಥವ ಕೆಲವರ ವೈಯಕ್ತಿಕ (ಅನೈತಿಕ) ಹಣದಿಂದ ಚುನಾವಣೆ ನಡೆಸುವ ಪ್ರಮುಖ ರಾಜಕೀಯ
ಪಕ್ಷಗಳನ್ನು ಅವಮಾನಗೊಳಿಸಿತು. ನೈತಿಕ ಮತ್ತು ಮೌಲ್ಯಾಧಾರಿತ ರಾಜಕಾರಣವನ್ನು ಪ್ರತಿಪಾದಿಸುವವರು ಇದನ್ನು ಪ್ರಶಂಸಿಸದೇ ಇರಲು ಸಾಧ್ಯವೇ ಇಲ್ಲ.

ಹಾಗೆ ನೋಡಿದರೆ, ಆಪ್ ಪಕ್ಷದ ಯಾವೊಬ್ಬ ಅಭ್ಯರ್ಥಿಯೂ ತನ್ನ ಸ್ವಂತ ಹಣವನ್ನು ಚುನಾವಣೆಗೆ ಬಳಸಬೇಕಾದ ಪ್ರಮೇಯವೇ ಬರಲಿಲ್ಲ. (ಹಾಗೇನಾದರೂ ಆಗಿದ್ದಲ್ಲಿ ಅದು ಅವರು ಚುನಾವಣೆಗೆ ಮುನ್ನ ಇಷ್ಟೊಂದು ಹಣ ಸಂಗ್ರಹವಾಗದೇನೊ ಎನ್ನುವ ಆತಂಕದಲ್ಲಿ ಪಕ್ಷಕ್ಕೆ ನ್ಯಾಯವಾಗಿಯೇ ದೇಣಿಗೆ ಕೊಟ್ಟಿದ್ದಾಗಿರುತ್ತದೆ.) ದೇಶದಲ್ಲಿ ಈಗಲೂ ಅಲ್ಲೊಬ್ಬರು ಇಲ್ಲೊಬ್ಬರು ಹೀಗೆ ಜನರ ಪಾಲುದಾರಿಕೆಯಲ್ಲಿ ಚುನಾವಣೆ ನಡೆಸುತ್ತಾರೆ. ಆದರೆ, ರಾಜಕೀಯ ಪಕ್ಷವೊಂದು ತನ್ನೆಲ್ಲ ಅಭ್ಯರ್ಥಿಗಳ ಖರ್ಚುವೆಚ್ಚಗಳನ್ನು ಹೀಗೆ ಜನರ ದುಡ್ಡಿನಿಂದಲೇ ನಿಭಾಯಿಸಿದ್ದು ಮತ್ತು ತಮಗೆ ಇನ್ನು ಹಣ ಬೇಕಿಲ್ಲ ಎಂದಿದ್ದು ಇದೇ ಮೊದಲು. ತಾವು ಚುನಾವಣೆಗೆ ಖರ್ಚು ಮಾಡಿದ ಹಣವನ್ನು ನಮ್ಮ ಜನಪ್ರತಿನಿಧಿಗಳು ವ್ಯವಹಾರಕ್ಕೆ ತೊಡಗಿಸಿದ ಬಂಡವಾಳ ಎಂದುಕೊಂಡಿರುವ ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಈ ಸಂಪ್ರದಾಯ ನಮ್ಮ ರಾಜಕಾರಣಿಗಳು ಭ್ರಷ್ಟಾಚಾರ ಮಾಡಲೇಬೇಕಾದ ಪರಿಸ್ಥಿತಿ ಮತ್ತು ಪ್ರಲೋಭನೆಯನ್ನು ತಡೆಗಟ್ಟುವಲ್ಲಿ ದೊಡ್ಡ ಪಾತ್ರ ವಹಿಸಲಿದೆ.

ಮತ್ತೆ ಕೆಲವು ವರದಿಗಳ ಪ್ರಕಾರ ಆಮ್ ಆದ್ಮಿ ಪಕ್ಷ ಇತ್ತೀಚಿನ ದಿನಗಳಲ್ಲಿ ರಾಜಕೀಯ ರಂಗದಲ್ಲಿ ಪ್ರಚಲಿತದಲ್ಲಿರುವ arvind-kejriwal-campaigningಸೋಷಿಯಲ್ ಇಂಜಿನಿಯರಿಂಗ್ ಅನ್ನು ಮಾಡದೇ ಇರಲು ತೀರ್ಮಾನಿಸಿದ್ದು. ಒಂದು ಕ್ಷೇತ್ರದಲ್ಲಿಯ ಜಾತಿ ಮತ್ತು ಮತೀಯರನ್ನು ನೋಡಿಕೊಂಡು ಅದು ಅಭ್ಯರ್ಥಿಗಳನ್ನು ನಿಲ್ಲಿಸಿಲ್ಲ. ಅದರ ಅನೇಕ ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳಲ್ಲಿರುವ ಬಹುಸಂಖ್ಯಾತ ಜನರ ಜಾತಿ ಅಥವ ಮತಗಳಿಗೆ ಸೇರಿದವರಲ್ಲ. ಇದು ಅಪ್ಪಟ ಗಾಂಧಿವಾದದ ರಾಜಕಾರಣ. ಹಾಗೆಯೇ, ಅದರ ನಾಯಕರು ಸುರಕ್ಷಿತ ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸುವ ಅವಕಾಶವಾದಿತನವನ್ನೂ ತೋರಿಲ್ಲ. ಸ್ವತಃ ಅರವಿಂದ್ ಕೇಜ್ರಿವಾಲರು ಕಳೆದ ಹದಿನೈದು ವರ್ಷಗಳಿಂದ ಅಲ್ಲಿ ಮುಖ್ಯಮಂತ್ರಿಯಾಗಿರುವ ಶೀಲಾ ದೀಕ್ಷಿತರ ವಿರುದ್ಧವೇ ಸ್ಪರ್ಧಿಸಿದ್ದಾರೆ. ವೈಯಕ್ತಿಕ ಗೆಲುವಿಗಿಂತ ಪಕ್ಷದ ಅಥವ ಸಿದ್ಧಾಂತದ ಗೆಲುವಿಗೆ ಶ್ರಮಿಸುವವರ ನಡವಳಿಕೆ ಹೀಗೆಯೇ ಇರಲು ಸಾಧ್ಯ.

ಈ ಎಲ್ಲಾ ಯಶಸ್ಸುಗಳ ಜೊತೆಗೆ ಆಮ್ ಅದ್ಮಿ ಪಕ್ಷ ಸಂಖ್ಯಾವಾರು ಯಶಸ್ಸು ಪಡೆಯುತ್ತದೆಯೇ ಎನ್ನುವುದು ಸದ್ಯದ ಕುತೂಹಲ ಮತ್ತು ಭರವಸೆಯ ಕಿರಣ. ಅದು ಶೇ.20 ಕ್ಕಿಂತ ಹೆಚ್ಚಿನ ಮತಪ್ರಮಾಣ ಪಡೆಯಲಿದೆ ಎಂದು ಎಲ್ಲಾ ಸರ್ವೇಗಳು ಹೇಳುತ್ತಿವೆ. ನೆನ್ನೆಯ CNN-IBN ನ ಸರ್ವೆ ಅದು ಕಾಂಗ್ರೆಸ್‌ಗಿಂತ ಹೆಚ್ಚು ಮತಗಳನ್ನು ಪಡೆಯಲಿದೆ ಎಂದು ಹೇಳಿದೆ. ಅದರೆ ಈ ಮತಗಳು ಎಷ್ಟು ಸ್ಥಾನಗಳಾಗಿ ಪರಿವರ್ತಿತವಾಗುತ್ತದೆ ಎಂದು ಹೇಳಲಾಗದು. ಕರ್ನಾಟಕದ ವಿಧಾನಸಭೆಗೆ 2008ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮತಗಳನ್ನು ಪಡೆದಿದ್ದರೂ ಬಿಜೆಪಿಗಿಂತ ಶೇ.10 ರಷ್ಟು ಕಡಿಮೆ ಶಾಸಕ ಸ್ಥಾನಗಳನ್ನು ಪಡೆದಿತ್ತು. ತ್ರಿಕೋನ ಅಥವ ಚತುಷ್ಕೋನ ಸ್ಪರ್ಧೆ ಇರುವ ಕಡೆ ಒಟ್ಟು ಮತಪ್ರಮಾಣಕ್ಕೂ, ಗೆಲ್ಲುವ ಸ್ಥಾನಗಳಿಗೂ ಬಹಳ ಅಂತರವಿರುತ್ತದೆ.

ಆಪ್ ಪಕ್ಷ ದೆಹಲಿ ವಿಧಾನಸಭೆಯಲ್ಲಿ ಬಹುಮತ ಪಡೆದರೆ, ಅಥವ ಅದಾಗದ ಪಕ್ಷದಲ್ಲಿ aap-kejriwal-yogendra-yadavಆ ಪಕ್ಷದ ಬೆಂಬಲವಿಲ್ಲದೆ ಅಲ್ಲಿ ಸರ್ಕಾರ ರಚನೆ ಸಾಧ್ಯವಿಲ್ಲ ಎಂತಾದರೆ, ಮುಂದಿನ ದಿನಗಳಲ್ಲಿ ದೇಶದ ರಾಜಕಾರಣ ತ್ವರಿತಗತಿಯಲ್ಲಿ ಗುಣಾತ್ಮಕ ಬದಲಾವಣೆಗಳನ್ನು ಕಾಣಲಿದೆ ಎಂದರ್ಥ. ಈ ದೇಶದ ರಾಜಕೀಯ ವ್ಯವಸ್ಥೆಯ ಸುಧಾರಣೆಯ ಬಗ್ಗೆ ಕಾಳಜಿ ಇರುವ ಪ್ರಜ್ಞಾವಂತರಿಗೆ ಇದಕ್ಕಿಂತ ಖುಷಿಯ ವಿಚಾರ ಸದ್ಯದ ಸಂದರ್ಭದಲ್ಲಿ ಇನ್ನೊಂದಿರಲಾರದು.

2009 ರ ಲೋಕಸಭಾ ಚುನಾವಣೆಗೆ ಮೊದಲು ಬರೆದ ತಮ್ಮ ಲೇಖನವೊಂದರಲ್ಲಿ ಇತಿಹಾಸಕಾರ ರಾಮಚಂದ್ರ ಗುಹಾರವರು, “ವಂಶ ರಾಜಕಾರಣವಿಲ್ಲದ ಕಾಂಗ್ರೆಸ್ ಮತ್ತು ಆರ್‍ಎಸ್‌ಎಸ್ ಹಿಡಿತವಿಲ್ಲದ ಬಿಜೆಪಿ ಈ ದೇಶಕ್ಕೆ ಅಗತ್ಯವಿದೆ” ಎಂದು ಪ್ರತಿಪಾದಿಸುತ್ತಾರೆ. ಮತೀಯ ಪೂರ್ವಾಗ್ರಹಗಳಿಲ್ಲದ ಬಲಪಂಥೀಯ ಪಕ್ಷ ಮತ್ತು ಒಂದೇ ಕುಟುಂಬದ ಹಿಡಿತದಲ್ಲಿಲ್ಲದ ಎಡಪಂಥೀಯ ಧೋರಣೆಗಳ ಪಕ್ಷ ಈ ದೇಶದ ಪ್ರಜಾಪ್ರಭುತ್ವದ ವಿಕಾಸಕ್ಕೆ ಅಗತ್ಯ ಎನ್ನುತ್ತಾರವರು. ತಮ್ಮ ಇತ್ತೀಚಿನ ಲೇಖನವೊಂದರಲ್ಲಿ ಅದನ್ನೇ ಪ್ರಸ್ತಾಪಿಸುತ್ತ ಕಾಂಗ್ರೆಸ್ ಪಕ್ಷದ ಮೇಲೆ ಒಂದು ಕುಟುಂಬದ ಹಿಡಿತ ಕೈಬಿಡುವ ಸಾಧ್ಯತೆ ಹತ್ತಿರದಲ್ಲೇ ಇದ್ದ ಹಾಗಿದೆ ಎನ್ನುತ್ತಾರೆ ಗುಹಾ. ಹಾಗೆಯೇ, ಬಿಜೆಪಿ ಮೇಲಿನ ಆರ್‍ಎಸ್‌ಎಸ್ ಹಿಡಿತ ತಪ್ಪುವ ದಿನಗಳು ಹತ್ತಿರದಲ್ಲೆಲ್ಲೂ ಕಾಣಿಸುತ್ತಿಲ್ಲ ಎನ್ನುವ ಆತಂಕವನ್ನೂ ವ್ಯಕ್ತಪಡಿಸುತ್ತಾರೆ.

ಈ ಹಿನ್ನೆಲೆಯಲ್ಲಿ ಈ ದೇಶದ ಭವಿಷ್ಯಕ್ಕೆ ಮೂಲಭೂತವಾಗಿ ಆಗಬೇಕಾದ ಮೇಲಿನ ಎರಡನ್ನೂ ಸಾಧಿಸಲು ಸಮಾನಮನಸ್ಕರು ಜೊತೆಯಾಗಬೇಕಿದೆ. ರಾಷ್ಟ್ರದಾದ್ಯಂತ ಕೇಂದ್ರದ ಕಾಂಗ್ರೆಸ್ ಮುಖಂಡತ್ವದ ಸರ್ಕಾರದ ವಿರುದ್ಧ ಜನರಿಗೆ ಆಕ್ರೋಶವಿದೆ. indiaಅದನ್ನು ಸಹಜವಾಗಿಯೇ ವಿರೋಧಪಕ್ಷವಾದ ಬಿಜೆಪಿ ಬಂಡವಾಳ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ ಆ ಪಕ್ಷದ ನೀತಿಗಳಾಗಲಿ, ಅದು ಮುಂದೊಡ್ಡುತ್ತಿರುವ ನಾಯಕತ್ವವಾಗಲಿ ಈ ದೇಶಕ್ಕೆ ಒಳ್ಳೆಯ ಪರ್ಯಾಯ ಅಲ್ಲವೇ ಅಲ್ಲ. ಹಾಗಾಗಿಯೇ ಇಲ್ಲಿಯ ಪ್ರಜಾಪ್ರಭುತ್ವವಾದಿ ಪಕ್ಷಗಳು, ವಂಶಪಾರಂಪರ್ಯವನ್ನು ಆಚರಿಸಿದ ಪಕ್ಷಗಳು, ಸಮಾನತೆ ಮತ್ತು ಜಾತ್ಯತೀತತೆಯಲ್ಲಿ ನಂಬಿಕೆ ಇಟ್ಟಿರುವ ಪಕ್ಷಗಳು, ಎಲ್ಲಕ್ಕಿಂತ ಹೆಚ್ಚಾಗಿ ಈ ದೇಶದ ಸಂವಿಧಾನವನ್ನು ಗೌರವಿಸುವ ಪಕ್ಷಗಳು ಒಂದು ಗುಂಪಾಗಿ ಹೊರಹೊಮ್ಮಬೇಕಿದೆ. ತಮ್ಮಲ್ಲಿಯೇ ಒಬ್ಬಿಬ್ಬರನ್ನು ನಾಯಕರನ್ನಾಗಿ ಒಪ್ಪಿಕೊಂಡು ತಮ್ಮೆಲ್ಲ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡೇ ಪರ್ಯಾಯವನ್ನು ಕಟ್ಟಬೇಕಿದೆ. ಅಂತಹ ಸಾಧ್ಯತೆಗೆ ದೇಶದ ಜನರ ಒಲವಿದೆ ಎಂದು ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಚುನಾವಣಾ ಫಲಿತಾಂಶದ ಮೊದಲೇ ನಿರೂಪಿಸಿದೆ. ಅದಕ್ಕಾಗಿ ನಾಯಕರಾದವರು ತಮ್ಮ ವೈಯಕ್ತಿಕ ಪ್ರತಿಷ್ಠೆಗಳನ್ನು ಕೈಬಿಟ್ಟು ಯೋಚಿಸಬೇಕಿದೆ, ಕ್ರಿಯಾಶೀಲರಗಬೇಕಿದೆ. ಹಾಗೆಯೇ ದೇಶದ ಸಾಮಾಜಿಕ ಕಾರ್ಯಕರ್ತರು ಅಂತಹ ಒಂದು ಒಗ್ಗೂಡುವಿಕೆಗೆ ಒತ್ತಡ ತರಬೇಕಿದೆ.

ನಾನು ಮೊದಲೇ ಪ್ರಸ್ತಾಪಿಸಿದಂತೆ ನಮ್ಮ ಸದ್ಯದ ಸಂದರ್ಭ ಅಪನಂಬಿಕೆ, ಸಿನಿಕತೆ, ವೈಯಕ್ತಿಕ ಆಕಾಂಕ್ಷೆಗಳು, ಸ್ವಕೇಂದ್ರಿತ ಚಿಂತನೆಗಳಿಂದ ಕೂಡಿದೆ. ದೆಹಲಿಯ ಫಲಿತಾಂಶ ಅದನ್ನು ಬದಲಿಸಿ ವಿಶಾಲ ಮನೋಭೂಮಿಕೆಯನ್ನು ನಮ್ಮ ರಾಜಕೀಯ ರಂಗದಲ್ಲಿ ಪ್ರತಿಷ್ಠಾಪಿಸಲಿ, ಕಾಂಗ್ರೆಸ್ ಮತ್ತು ಬಿಜೆಪಿಗಳನ್ನೂ ಬದಲಾಯಿಸಲಿ ಎನ್ನುವುದೊಂದು ಆಶಯ.