Daily Archives: December 10, 2013

ಆಮ್ ಆದ್ಮಿ ಪಾರ್ಟಿ ಮತ್ತು ರಾಜಕೀಯ


– ಚಿದಂಬರ ಬೈಕಂಪಾಡಿ


 

ಐದು ರಾಜ್ಯಗಳ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಗೆ ಹೊಸ ಸಂದೇಶವನ್ನು ದೆಹಲಿ ಮೂಲಕ ಆಮ್ ಆದ್ಮಿ ಪಾರ್ಟಿ ರವಾನಿಸಿದೆ. ಇಂಥ ಫಲಿತಾಂಶವನ್ನು ಸ್ವತ: ಆಮ್ ಆದ್ಮಿ ಕೂಡಾ ನಿರೀಕ್ಷೆ ಮಾಡಿರಲಿಕ್ಕಿಲ್ಲ. ಅಂಥ ಫಲಿತಾಂಶವನ್ನು ದಾಖಲಿಸುವ ಮೂಲಕ ಅರವಿಂದ್ ಕೇಜ್ರಿವಾಲ್ ಇದು ಸಾಧ್ಯವಾದದ್ದು ಹೇಗೆ ಎನ್ನುವ ಪ್ರಶ್ನೆ ಕೇಳಲು ಕಾರಣರಾಗಿದ್ದಾರೆ.

ಸಧ್ಯ ದೆಹಲಿಯಲ್ಲಿ ಯಾರು ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ ಎನ್ನುವುದು ಅಸ್ಪಷ್ಟವಾದರೂ ಕೂಲದೆಳೆ ಅಂತರದಲ್ಲಿ ಆಮ್ ಆದ್ಮಿ ಅಧಿಕಾರ ಕಳೆದುಕೊಂಡಿರುವುದು ವಿಪರ್ಯಾಸವೇ ಸರಿ.

ಆಮ್ ಆದ್ಮಿ ಜನಸಾಮಾನ್ಯರ ಶಕ್ತಿ ಕೇಂದ್ರವೆಂದು ಈಗ ಇಡೀ ದೇಶದ ಗಮನ ಸೆಳೆದಿದೆ. aam-admi-partyರಾಜಕೀಯ ಪಕ್ಷವಾಗಿ ಆಮ್ ಆದ್ಮಿ ಗುರುತಿಸಿಕೊಳ್ಳುವುದು ಸಾಧ್ಯವಾಗಿರುವುದಕ್ಕೆ ದೆಹಲಿಯಲ್ಲಿ ಮೂರು ಅವಧಿಗೆ ಆಡಳಿತ ಮಾಡಿದ ಕಾಂಗ್ರೆಸ್ ಮತದಾರರನ್ನು ಟೇಕನ್ ಫಾರ್ ಗ್ರಾಂಟೆಡ್ ಎನ್ನುವ ಮನೋಭಾವ ಬೆಳೆಸಿಕೊಂಡದ್ದು. ಬಿಜೆಪಿಯನ್ನು ವಿರೋಧಿಸಿ ಎನ್ನುವ ಸಂದೇಶ ನೀಡುತ್ತಲೇ ಕಾಲ ಕಳೆದ ಕಾಂಗ್ರೆಸ್ ತನ್ನನ್ನು ಯಾಕೆ ಆಯ್ಕೆ ಮಾಡಬೇಕು ಎಂದು ಹೇಳುವುದನ್ನು ಮರೆತೇ ಬಿಟ್ಟಿತು.

ನಿರಂಕುಶ ಆಡಳಿತವನ್ನು ಸಹಿಸಿಕೊಳ್ಳುವುದಕ್ಕೂ ಮಿತಿ ಇರುತ್ತದೆ ಎನ್ನುವುದನ್ನು ಕಾಂಗ್ರೆಸ್ ಮರೆತು ತಪ್ಪೆಸಗಿತು. ಆ ತಪ್ಪನ್ನು ತನ್ನ ಅಸ್ತ್ರವಾಗಿಸಿಕೊಂಡದ್ದು ಆಮ್ ಆದ್ಮಿ. ಮತದಾರ ತನ್ನ ತೆಕ್ಕೆಯಲ್ಲೇ ಇರುತ್ತಾನೆ, ಅವನಿಗೆ ಬೇರೆ ಪಕ್ಷಗಳಿಲ್ಲ ಎನ್ನುವ ವೈಯಕ್ತಿಕ ತೀರ್ಮಾನಕ್ಕೆ ಬಂದು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ.

ಅತ್ತ ಬಿಜೆಪಿ ಕೂಡಾ ಆಂತರಿಕ ಭಿನ್ನಮತದಿಂದ ನಲುಗಿ ಸುಧಾರಿಸಿಕೊಳ್ಳುವಷ್ಟರಲ್ಲಿ ಚುನಾವಣೆ ಕಾಲಿಟ್ಟಿತು. ನರೇಂದ್ರ ಮೋದಿಯನ್ನು ಪ್ರಧಾನ ಮಂತ್ರಿ ಮಾಡುವ ಸಿಂಗಲ್ ಪಾಯಿಂಟ್ ಘೋಷಣೆಯೊಂದಿಗೆ ಬಿಜೆಪಿ ಕಾಲಹರಣ ಮಾಡಿತು. ಕಾಂಗ್ರೆಸ್ ಸರ್ಕಾರವನ್ನು ವಿರೋಧಿಸಲು ಹೇಳಿದ ಬಿಜೆಪಿ ಆಮ್ ಆದ್ಮಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ.

ದೆಹಲಿಯಲ್ಲಿ ನಡೆದ ಗ್ಯಾಂಗ್ ರೇಪ್ ಮತ್ತು ಆನಂತರದ ಬೆಳವಣಿಗೆಗಳಲ್ಲಿ ಆಮ್ ಆದ್ಮಿಯ ಕೇಜ್ರಿವಾಲ್ ತಂಡ ಸಕ್ರಿಯವಾಗಿ ಗುರುತಿಸಿಕೊಂಡಿತು. ದೆಹಲಿ ಸುರಕ್ಷಿತ ನಗರವಲ್ಲ ಎನ್ನುವ ಭಾವನೆ ಯುವಕರಲ್ಲಿ ಮತ್ತು ಯುವತಿಯರಲ್ಲಿ ಅದರಲ್ಲೂ ಹೆಂಗಸರ ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಗ್ಯಾಂಗ್ ರೇಪ್ ನಂತರವೂ ದೆಹಲಿಯಲ್ಲಿ ಶೀಲಾ ದೀಕ್ಷಿತ್ ಓರ್ವ ಹೆಣ್ಣಾಗಿ ಅಂತಹ ಭಯದ ವಾತಾವರಣವನ್ನು ನಿಗ್ರಹಿಸುವಂಥ ಕಾಳಜಿ ತೋರಲಿಲ್ಲ ಎನ್ನುವ ಅಪವಾದವನ್ನು ಹೊತ್ತುಕೊಳ್ಳಬೇಕಾಯಿತು. ಇದು ಕೇವಲ ಅಪವಾದವಾಗಿರದೇ ವಾಸ್ತವವಾಗಿತ್ತು.

ಜನಸಾಮಾನ್ಯರ ಸಮಸ್ಯೆಗಳನ್ನು ಕಾಂಗ್ರೆಸ್ ಕಡೆಗಣಿಸಿತ್ತು, ಅದನ್ನು ಗುರುತಿಸಿ ತಮ್ಮ ಪಕ್ಷದ ಘೋಷಣೆಯನ್ನಾಗಿ arvind-kejriwal-campaigningಮಾಡಿಕೊಂಡವರು ಕೇಜ್ರಿವಾಲ್. ಮಧ್ಯಮ ಮತ್ತು ಕೆಳಸ್ಥರದ ಜನರ ನಾಡಿಮಿಡಿತವನ್ನು ಅರ್ಥಮಾಡಿಕೊಂಡ ಕೇಜ್ರಿವಾಲ್ ಅವರ ಸಮಸ್ಯೆಗಳಿಗೆ ಧ್ವನಿಯಾದರು.

ಕಾಂಗ್ರೆಸ್ ಮತ್ತು ಬಿಜೆಪಿಗೆ ಯಾವುದು ಮುಖ್ಯವೆನಿಸಲಿಲ್ಲವೋ ಆ ಸಂಗತಿಗಳೇ ಆಮ್ ಆದ್ಮಿಗೆ ಮುಖ್ಯವೆನಿಸಿದವು. ಐಟಿ, ಬಿಟಿ ಯುವಕ, ಯುವತಿಯರು ಆಮ್ ಆದ್ಮಿಯತ್ತ ಮುಖಮಾಡಲು ಕೇಜ್ರಿವಾಲ್ ಅವರ ಶ್ರಮವೂ ಕಾರಣ. ಹೈಫೈ ರಾಜಕಾರಣಕ್ಕಿಳಿಯದೇ ಸಾಮಾನ್ಯ ಜನರ ಭಾವನೆಗಳಿಗೆ ಸ್ಪಂದಿಸುವ ಸರಳ ಗುಣಕ್ಕೆ ದಿಲ್ಲಿಯ ಜನ ಮತ ಹಾಕಿದರು. ಕೈಯಲ್ಲಿದ್ದ ಅಧಿಕಾರವನ್ನು ಪೊರಕೆಗೆ ಕೊಡಬೇಕೆನ್ನುವ ತೀರ್ಮಾನವನ್ನೇನೂ ಅವರು ಮಾಡಿರಲಿಲ್ಲ, ಬದಲಾವಣೆಯ ಗಾಳಿ ಬೀಸುತ್ತಿದೆ ಎನ್ನುವ ನಂಬಿಕೆಯಲ್ಲೇ ಮತ ಹಾಕಿದರು. ಅದು ಈ ಹಂತಕ್ಕೆ ಬಂದು ನಿಲ್ಲುತ್ತದೆ ಎನ್ನುವ ಕಲ್ಪನೆ ಆಮ್ ಆದ್ಮಿ ಪಕ್ಷಕ್ಕೂ ಪೂರ್ಣವಾಗಿ ಹೊಳೆದಿರಲಿಲ್ಲ.

ಒಂದು ವೇಳೆ ಅಣ್ಣಾ ಹಜಾರೆ ಆಮ್ ಆದ್ಮಿಯಲ್ಲಿ ಸಕ್ರಿಯರಾಗಿದಿದ್ದರೆ ದಿಲ್ಲಿ ಗದ್ದುಗೆ ಅನಾಯಾಸವಾಗಿ ಆಮ್ ಆದ್ಮಿ ವಶಕ್ಕೆ ಬರುತ್ತಿತ್ತು ಅನ್ನಿಸುತ್ತಿದೆ ಈಗ. ಸ್ವತಃ ಅಣ್ಣಾ ಹಜಾರೆಗೂ ಅನ್ನಿಸಿರಬಹುದು. ಹಾಗೆಂದು ಇಂಥ ಬೆಳವಣಿಗೆ ಎಲ್ಲ ಕಾಲದಲ್ಲೂ ಘಟಿಸುವುದಿಲ್ಲ.

ಅಸ್ಸಾಂ ವಿದ್ಯಾರ್ಥಿಗಳು ಹುಟ್ಟು ಹಾಕಿದ್ದ ಅಸ್ಸಾಂ ಗಣಸಂಗ್ರಾಮ ಪರಿಷತ್ ಪ್ರಫುಲ್ಲ ಕುಮಾರ್ ಮೊಹಂತ ಅವರ ಸಾರಥ್ಯದಲ್ಲಿ ಆ ರಾಜ್ಯದಲ್ಲಿ ರಾಜಕೀಯ ಪಕ್ಷಗಳ ಲೆಕ್ಕಾಚಾರವನ್ನು ಬುಡಮೇಲು ಮಾಡಿದ ನಂತರ ದೆಹಲಿಯಲ್ಲಿ ಆಮ್ ಆದ್ಮಿ ಇಂಥ ಸಾಧನೆ ಮಾಡಿದೆ.

ರಾಜಕೀಯದಲ್ಲಿ ಅಂತಿಮವಾಗಿ ಗೆಲ್ಲುವುದು ಅಧಿಕಾರವೇ. ಅಂಥ ಅಧಿಕಾರದ ಹಗ್ಗ ಹಿಡಿಯುವ ಸನಿಹಕ್ಕೆ ಬಂದಿರುವ ಆಮ್ ಆದ್ಮಿ ಇದೇ ಟ್ರೆಂಡ್ ಉಳಿಸಿಕೊಳ್ಳುತ್ತದೆ ಎಂದು ನಿರೀಕ್ಷೆ ಮಾಡುವುದು ಈ ಕ್ಷಣಕ್ಕೆ ಸಾಧ್ಯವಿಲ್ಲ. ಒಂದು ಸಂಘಟನೆಗೆ ಸಂಘಟನೆಯ ಗುಣಗಳಿರುತ್ತವೆಯೇ ಹೊರತು ರಾಜಕೀಯ ಪಕ್ಷದ ಉಸಿರಿರುವುದಿಲ್ಲ. ಆಮ್ ಆದ್ಮಿಯೊಳಗೂ ರಾಜಕೀಯದ ಉಸಿರಿಲ್ಲ, ಕವಚ ಮಾತ್ರ ಇದೆ.

“ನುಡಿಸಿರಿ”ಯ ಡಾ.ಮೋಹನ ಆಳ್ವರಿಗೆ ಸಬಿಹಾ ಭೂಮಿಗೌಡರ ಬಹಿರಂಗ ಪತ್ರ

ಡಾ. ಮೋಹನ ಆಳ್ವ ಅವರಿಗೆ,

ಮೂಡಬಿದಿರೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗದೆ ಹೋಗಿದ್ದಿದ್ದರೆ, ಅದರ ವ್ಯವಸ್ಥೆಯ ಹೊಣೆಗಾರಿಕೆಯನ್ನು ನೀವು ಹೊತ್ತುಕೊಳ್ಳದೆ ಹೋಗಿದ್ದಿದ್ದರೆ, ಅಚ್ಚುಕಟ್ಟುಪ್ರಿಯರೂ ಸೊಗಸುಗಾರರೂ ಆದ ನಿಮಗೆ ಆ ಸಮ್ಮೇಳ ಅತೃಪ್ತಿಯನ್ನು ಉಂಟುಮಾಡದೆ ಹೋಗಿದ್ದಿದ್ದರೆ, ಬಹುಶ: ನುಡಿಸಿರಿ ಹುಟ್ಟುತ್ತಿರಲಿಲ್ಲ. ನುಡಿಸಿರಿ ಸಮ್ಮೇಳನ ಶುರುವಾದಾಗಿನಿಂದ ನಿಮ್ಮ ತಂಡದಲ್ಲಿ ಒಬ್ಬಳಾಗಿದ್ದು ನಿಮ್ಮ ಕಾರ್ಯವೈಖರಿ, alvas-nudisiri-2ವಿನಯ, ಆದರವನ್ನು ಕಂಡವಳಾದರೂ ಈಗ ಅದರೊಳಗೆ ಒಬ್ಬಳಾಗಲು ಮನಸ್ಸು ಸಂಕೋಚ ಪಡುವಂಥ, ನಿರಾಕರಿಸುವಂಥ ಸ್ಥಿತಿ ಉಂಟಾಗಿದೆ. ಯಾವ ಕಾರಣಗಳೂ, ಯಾವ ಸಮರ್ಥನೆಗಳೂ ನನ್ನನ್ನು ನಿಮ್ಮ ಜೊತೆ ನಿಲ್ಲುವಂತೆ ಮಾಡದಂಥ ಸ್ಥಿತಿ ಈಗ ನಿರ್ಮಾಣಗೊಂಡಿದೆಯಾದರೂ ನಿಮ್ಮ ಮೇಲಿನ ನನ್ನ ಗೌರವ, ವಿಶ್ವಾಸಗಳೇ ಈ ಪತ್ರದ ಹಿಂದಿನ ಆಶಯವೂ ಆಗಿದೆ.

ಇದು ಏಕಾಏಕಿ ಆದ ಬೆಳವಣಿಗೆ ಅಲ್ಲ. ನುಡಿಸಿರಿ ಸಮ್ಮೇಳನದ ಆರಂಭಿಕ ಸಭೆಗಳಿಂದ ನಿಮ್ಮ ಜೊತೆಗಿದ್ದ ನನಗೆ ಮೊದಲೆರಡು ವರ್ಷಗಳ ಕಾಲ ಸಮ್ಮೇಳನದ ಅಚ್ಚುಕಟ್ಟುತನ, ವೈಭವ, ಆತಿಥ್ಯದ ವೈಖರಿ, ಸನ್ಮಾನಿತರ ಸನ್ಮಾನದ ವೇಳೆ ನೀವು ತೋರುವ ಪ್ರೀತಿ ಮತ್ತು ವಿನಯಗಳ ಕುರಿತು, ಸಂಭ್ರಮ, ಬೆರಗು ಹುಟ್ಟಿತ್ತು. ಸಮ್ಮೇಳನಾಧ್ಯಕ್ಷರನ್ನು ಮತ್ತು ವಿಶೇಷ ಕಲಾವಿದರನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಮೆರೆಸುವುದರ ಬಗ್ಗೆ ನನಗಾಗ ಪ್ರಶ್ನೆಯೇ ಎದ್ದಿರಲಿಲ್ಲ. ಕೆಲವರು ಪಲ್ಲಕ್ಕಿಯಲ್ಲಿ ಕುಳಿತ ಸಂದರ್ಭದಲ್ಲಿ ಕಣ್ಮುಚ್ಚಿ ಧನ್ಯತೆಯಿಂದ, ವಿನಯದಿಂದ ಸಭೆಗೆ, ಸಭಿಕರಿಗೆ ವಂದಿಸುತ್ತ ಸಾಗಿದಾಗ ಅವರ ಸಾಧನೆಗೆ ಅವರ ಬದುಕಿನಲ್ಲಿ ಈ ಕ್ಷಣ ಅವಿಸ್ಮರಣೀಯವಾಗಿ ಉಳಿಯುತ್ತದೆ ಎಂದು ಮಾತ್ರ ಯೋಚಿಸಿದ್ದೆ. ಕೆಲವರು ಪಲ್ಲಕ್ಕಿಯಲ್ಲಿ ಕುಳಿತು ತನ್ನವರು ಎಲ್ಲಿದ್ದಾರೆ ಎಂದು ಹುಡುಕಿದಾಗ, ಅವರನ್ನು ಕರೆಸಲು ಕರೆ ನೀಡಿದಾಗ, ತನ್ನನ್ನು ಬಿಟ್ಟರೆ ಈ ಜಗದಲ್ಲಿ ಇನ್ನೋರ್ವ ಸಾಧಕರಿಲ್ಲ ಎಂಬಂತೆ ಹಮ್ಮು ತೋರಿ ಬೀಗಿದಾಗ, ಅಂಥವರ ಬಗ್ಗೆ ಹೇವರಿಕೆ ಉಂಟಾಗಿತ್ತು. ಅನಂತರದ ವರ್ಷಗಳಲ್ಲಿ ಪಲ್ಲಕ್ಕಿಯಲ್ಲಿ ಕೂತವರ ಕಡೆಗಿಂತ ಅದನ್ನು ಹೊತ್ತವರ ಕಡೆ ನನ್ನ ದೃಷ್ಟಿ ಹರಿದಾಗ, ಹೊತ್ತವರ ಮೈಮೇಲೆ ಮೂಡಿದ ಮತ್ತು ಹರಿದ ಬೆವರಿನ ಸ್ನಾನವು ’ಪಲ್ಲಕ್ಕಿಸಂಸ್ಕೃತಿ’ಯ ಇನ್ನೊಂದು ಮುಖವನ್ನು ಪರಿಚಯಿಸಿತು. ’ನಾಲ್ಕು ಜನರ ಮೇಲೆ ಹೊರಿಸಿಕೊಳ್ಳುವ ಸಂದರ್ಭ ಪ್ರತಿಯೊಬ್ಬರಿಗೂ ಒಂದು ದಿನ ಬಂದೇ ಬರುತ್ತದೆ; ಅದು ಅವರ ಕೊನೆಯ ಯಾತ್ರೆ’ ಎಂದು ನನ್ನ ಪ್ರೀತಿಯ ಪಂಡಿತಾರಾಧ್ಯ ಮೇಷ್ಟ್ರು ಹೇಳಿದ್ದ ಮಾತು ಆ ಕ್ಷಣದಲ್ಲಿ ಧುತ್ತೆಂದು ನೆನಪಾಗಿ ಇಡೀ ’ಪಲ್ಲಕ್ಕಿಸಂಸ್ಕೃತಿ’ಯ ಕುರಿತು ನನ್ನಲ್ಲಿ ವಿಮುಖತೆ ಆರಂಭವಾಯ್ತು.

ನಾಡಿನ ಬೇರೆಬೇರೆ ಕಡೆಗಳಿಂದ ಸಾಹಿತಿ-ಕಲಾವಿದರನ್ನು ಕರೆಸಿಕೊಂಡು, ಅವರ ನಿರೀಕ್ಷೆಗೆ ಮೀರಿದ ಉಪಚಾರ, ಉಡುಗೊರೆ ನೀಡಿ, ನಿಮ್ಮ ಔದಾರ್‍ಯವನ್ನು ಅವರೆಲ್ಲ ಕೊಂಡಾಡುವಂತೆ ಮಾಡಿದಿರಿ. ಅದರಿಂದ ಅವರನ್ನು ನಿಮ್ಮ ಮತ್ತು ನಿಮ್ಮ ಶಿಕ್ಷಣ ಸಂಸ್ಥೆಯ ರಾಯಭಾರಿಗಳನ್ನಾಗಿ ಮಾಡಿದಿರಿ; ಕ್ರಮೇಣ ಹಾಗೆ ಬಂದವರಲ್ಲಿ ಕೆಲವರು ತಮಗೆ ಕೊಟ್ಟದ್ದು ಸಾಕಾಗಲಿಲ್ಲ ಎಂಬ ತಕರಾರು ಎತ್ತಿದ ವಿಚಾರ ನನ್ನ ಕಿವಿಗೆ ಬಿದ್ದಾಗಲೆಲ್ಲ ಅಂಥ ಸಾಹಿತಿಗಳ ಬಗ್ಗೆ ಹೇವರಿಸಿಕೊಂಡೆನೇ ಹೊರತು, ನಿಮ್ಮ ವ್ಯವಸ್ಥೆಯು ಅವರನ್ನು ಭ್ರಷ್ಟಗೊಳಿಸಿದ್ದನ್ನು ಅರಿಯಲಾಗದೆ ಹೋದೆ. ಅಪನುಡಿ ಬಾರದಂತೆ ನೋಡಿಕೊಳ್ಳುವುದನ್ನೇ ಆದ್ಯತೆಯಾಗಿಸಿದ ನೀವು ಸಾಹಿತಿಗಳ ಇಂಥ ತಕರಾರುಗಳಿಗೆ ’ಕೇಳಿದಷ್ಟು ನೀಡಿ’ ಹಿಂದಿನಿಂದ ’ಒಟ್ಟು ಕಲಾವಿದ ಮತ್ತು ಸಾಹಿತಿಗಳೇ ಹೀಗೆ’ ಎಂದು ರೇಜಿಗೆಗೊಂಡು ಸಣ್ಣ ಮಾತುಗಳನ್ನಾಡುವ ಸ್ಥಿತಿ ಬಂದಿತು.

ಆದರೆ ಪೂರ್ವಭಾವಿ ಸಭೆಗಳಲ್ಲಿ ಇಂಥ ವಿಚಾರಗಳ ಕುರಿತು ಮುಕ್ತ ಚರ್ಚೆಯನ್ನು ಮಾಡಲು ಸಾಧ್ಯವಾಗದಿರುವುದಕ್ಕೆalvas-nudisiri-3 ಹಲವು ಕಾರಣಗಳಿವೆ. ಒಂದು, ನಿಮ್ಮ ಆಪ್ತ ಬಳಗದ ಭಟ್ಟಂಗಿಗಳ ಕೋಟೆ ದಾಟಿ ನನ್ನಂಥವರ ಮಾತು ನಿಮ್ಮ ವಲಯವನ್ನು ಪ್ರವೇಶಮಾಡುವುದು ಅಸಾಧ್ಯವಾಗಿತ್ತು. ಎರಡು, ಸಾಹಿತ್ಯ ಸಮ್ಮೇಳನದ ಇಡೀ ಖರ್ಚನ್ನು ನೀವೆ ಹಾಕಿಕೊಂಡು ಮಾಡುವಾಗ, ಸಾರ್ವಜನಿಕರ ಹಣದಿಂದ ನಡೆಸುವ ಕಾರ್ಯಕ್ರಮಗಳ ಸಂಘಟನೆಯಲ್ಲಿ ನಡೆಸುವಂಥ ಮುಕ್ತ ಮತ್ತು ನಿಷ್ಠುರ ಚರ್ಚೆ ಅಲ್ಲಿ ಅಸಾಧ್ಯವೆಂಬ ಭಾವ ನನ್ನಂತೆ ಸಭೆಗಳಿಗೆ ಬರುತ್ತಿದ್ದ ಬಹುತೇಕ ಎಲ್ಲರದೂ ಆಗಿರುತ್ತಿತ್ತು. ಹೀಗಾಗಿ ಬಂದವರಲ್ಲಿ ಹಲವರು ನಿಮ್ಮ ಅಂತರಂಗದ ವಲಯದವರ ನಿಲುವುಗಳಿಗೆ ಪೂರಕವಾಗಿ ನಿಂತು, ಇಲ್ಲವೇ ತಮ್ಮ ಭಿನ್ನಮತವನ್ನು ನುಂಗಿಕೊಂಡು, ಗೋಷ್ಠಿಗಳ ಸಂಪನ್ಮೂಲ ವ್ಯಕ್ತಿಗಳ ಆಯ್ಕೆ ಪ್ರಕ್ರಿಯೆಗಳಲ್ಲಿ ಮಾತ್ರ ಭಾಗವಹಿಸುವಂತಾಗಿತ್ತು.

ಅಂಥ ಸಮಾಲೋಚನಾ ಸಭೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕ್ರಮೇಣ ತೀರಾ ಸೊರಗಿದಾಗಲೂ ಅದು ನಿಮಗೆ ಪ್ರಶ್ನೆಯಾಗಿ ಯಾವತ್ತೂ ಕಾಡಿದ್ದಿಲ್ಲ. ನಿಮಗೆ ಅಲಂಕಾರಕ್ಕೆ, ಶೋಭೆಗೆ ಮಹಿಳೆಯರು ಬೇಕಾಗಿತ್ತು ಮತ್ತು ಅವರನ್ನು ಪರಿಧಿಗೆ ಸರಿಸಿಲ್ಲ ಎಂದು ತೋರಿಸಲು ಬೇಕಿತ್ತು. ಕಾವ್ಯ, ಕತೆಗಳನ್ನು ಬಿಟ್ಟು ಚಿಂತನೆಯ ಕ್ಷೇತ್ರ ಅವರದಲ್ಲ ಎಂಬ ನಿಲುವು ಈ ಒಂಬತ್ತು ವರ್ಷಗಳ ನುಡಿಸಿರಿಯ ಉದ್ದಕ್ಕೂ ಗಾಢವಾಗಿಯೇ ಕಂಡಿದೆ.

ಈ ಕರಾವಳಿಯಲ್ಲಿ ಇಲ್ಲಿನ ಜನಜೀವನವು ತಲ್ಲಣಿಸುವಂಥ ಎಷ್ಟು ವಿದ್ಯಮಾನಗಳು ಜರುಗಿಲ್ಲ? ಅದರೆ ಸಮ್ಮೇಳನ ಅದ್ದೂರಿಯಾಗಿ ಆಗಬೇಕು; ವಿವಾದಾತೀತ ಆಗಿರಬೇಕು ಎಂಬುದೇ ನಿಮ್ಮ ಆದ್ಯತೆ ಆಗಿದ್ದಾಗ, ಈ ನೆಲದ ಜನಸಾಮಾನ್ಯರ ಬದುಕು, ಚಿಂತನೆ, ಸಂವೇದನೆಗಳು ಸಹಜವಾಗಿ ಪರಿಧಿಯಾಚೆಗೇ ಉಳಿದುಬಿಟ್ಟಿವೆ. ಒಮ್ಮೆ ಈವರೆಗೆ ’ಕನ್ನಡ ಮನಸ್ಸು’ ಎಂದಿಟ್ಟುಕೊಂಡು ಆಯೋಜಿಸಿದ ನುಡಿಸಿರಿಗಳನ್ನು ಹಿಂತಿರುಗಿ ನೋಡಿ. ಸಮಕಾಲೀನ ಸಮಸ್ಯೆಗಳು, ಜನಸಾಮಾನ್ಯರ ಬಿಕ್ಕಟ್ಟುಗಳು, ಕರಾವಳಿಯ ಸಾಮಾಜಿಕ, ಸಾಂಸ್ಕೃತಿಕ ವಲಯಗಳ ತಲ್ಲಣಗಳು-ಇಂಥ ಯಾವ ವಿಷಯಗಳ ಕುರಿತು ಚರ್ಚೆಗೆ ನುಡಿಸಿರಿಯು ವೇದಿಕೆಯನ್ನು ನೀಡಿದೆ? ಕಳೆದೆರಡು ವರ್ಷಗಳಿಂದ ಪದೇ ಪದೇ ಸಮಾಲೋಚನಾ ಸಭೆಗಳಲ್ಲಿ ಈ ಬಗ್ಗೆ ನಾನು ಮತ್ತು ನನ್ನಂಥ ಕೆಲವರು ಒತ್ತಿ ಹೇಳಲು ಯತ್ನಿಸಿದರೂ ಅದಕ್ಕೆ ಮಾನ್ಯತೆ ದೊರೆಯದೆ ನಿಮಗೆ ಭಿನ್ನ ದನಿಗಳು ’ಒಡಕು ದನಿ’ಗಳಾಗಿ ಕೇಳಿಸಿದವು.

ಶಿಕ್ಷಣ ಸಂಸ್ಥೆಯ ಒಡೆಯರಾಗಿ, ಬಂಡವಾಳಶಾಹಿಯ ಪ್ರತಿನಿಧಿಯಾಗಿ, ಊಳಿಗಮಾನ್ಯ ವ್ಯವಸ್ಥೆಯ ಕೊಂಡಿಯಾಗಿ Alvas-Nudisiri-2010ಇಂಥ ಸಾಮಾಜಿಕ ಸಮಸ್ಯೆಗಳ ಕುರಿತು ಮಾತನಾಡುವುದು ನಿಮಗೆ ಕಷ್ಟವಾಗುತ್ತದೆ. ಆದರೆ ಕಳೆದ ಕೆಲವು ವರ್ಷಗಳಿಂದ ಕರಾವಳಿಯ ಅವಳಿ ಜಿಲ್ಲೆಗಳು ಕೋಮುವಾದಿಗಳ ಆಡುಂಬೊಲವಾದ ಬಗ್ಗೆ ನಿಮಗೆ ಏನೂ ಅನ್ನಿಸುವುದಿಲ್ಲವೇ? ಕರಾವಳಿಯ ಅವಳಿ ಜಿಲ್ಲೆಗಳಲ್ಲಿ ಒಂದು ವರ್ಷದ ಅವಧಿಯಲ್ಲೇ ನಾಲ್ನೂರಕ್ಕೂ ಹೆಚ್ಚು ಯುವತಿಯರು ನಾಪತ್ತೆಯಾಗಿರುವ, ಮಾನವ ಕಳ್ಳಸಾಗಣೆಗೆ ತುತ್ತಾಗಿರುವ ಅಪಾಯವು ಸಮಕಾಲೀನ ತುರ್ತು, ಬಿಕ್ಕಟ್ಟು ಎಂದು ನಿಮಗೆ ಇನ್ನೂ ಅನಿಸಿಲ್ಲವೆ? ಮಡೆಮಡೆಸ್ನಾನ, ಪಂಕ್ತಿಭೇದದಂಥ ಆಚರಣೆಗಳು ಜಾರಿಯಲ್ಲಿದ್ದರೂ ಇಂಥ ಯಾವ ವಿಚಾರಗಳ ಚರ್ಚೆಗೆ ನುಡಿಸಿರಿಯು ವೇದಿಕೆಯನ್ನು ಒದಗಿಸಿದೆ? ಲವ್ ಜಿಹಾದ್ ನೆಪದಲ್ಲಿ ವಿಭಿನ್ನ ಕೋಮಿಗೆ ಸೇರಿದ ಹುಡುಗ-ಹುಡುಗಿಯರು ಜೊತೆಯಾಗಿ ಮಾತನಾಡುವುದು ಕಷ್ಟವಾಗಿರುವುದು; ಹೋಂ ಸ್ಟೇ ಪ್ರಕರಣ; ಅತ್ಯಾಚಾರ; ಇವೆಲ್ಲ ಸಾಹಿತ್ಯ ಸಮ್ಮೇಳನದಲ್ಲಿ ಚರ್ಚಿಸುವ ಘನ ವಿಷಯ ಆಗಲಾರದೇ? (ಅ)ನೈತಿಕ ಪೊಲೀಸರ ಬಗೆಗೆ ನೀವಾಗಲೀ, ನುಡಿಸಿರಿಯಾಗಲೀ ದನಿ ಎತ್ತಬೇಕಲ್ಲವೇ?

ಜನಸಾಮಾನ್ಯರಲ್ಲಿ ಮೂಢನಂಬಿಕೆಗಳನ್ನು ಬಿತ್ತಿ, ಅವರ ಬೆವರಿನ, ದುಡಿಮೆಯ ಫಲವಾಗಿ ಬರುವ ’ಕಾಣಿಕೆ’ಗಳಿಂದ ಬದುಕುವ, ನಾಲ್ಕುನೂರಾ ಅರವತ್ತೇಳು ಹೆಣ್ಣುಮಕ್ಕಳ ಅಸಹಜ ಸಾವು ಮತ್ತು ದುರ್ಮರಣಗಳಿಗೆ ಕಾರಣವಾದ, ಅವು ಬಯಲಿಗೆ ಬಾರದಂತೆ ಮಾಡಿದ ಅಧರ್ಮಸ್ಥಳದ ’ಧರ್ಮಾಧಿಕಾರಿ’ಯನ್ನು-ನಿಮ್ಮ ಮಾತಿನಲ್ಲೇ ಹೇಳುವುದಾದರೆ, ’ಖಾವಂದರ’ನ್ನು-ನೀವು ಹೆಚ್ಚು ಹೆಚ್ಚು ಅವಲಂಬಿಸುತ್ತಿರುವುದೇ ನೀವು ಯಾರ ಜೊತೆ ನಿಂತಿದ್ದೀರಿ ಎಂಬುದನ್ನು ಸೂಚಿಸುತ್ತದೆ. ಇಡೀ ಬೆಳ್ತಂಗಡಿ ತಾಲೂಕಿನ ಜನತೆ ತಮ್ಮ ಸಹನೆಯ ಕಟ್ಟೆಯೊಡೆದು, ಬೀದಿಗಿಳಿದು ಸೌಜನ್ಯಳಿಗೆ ನ್ಯಾಯ ದೊರಕಿಸಲು ಹೋರಾಟ ನಿರತರಾಗಿದ್ದಾರೆ. ಅಂದು ಪದ್ಮಲತಾ, ಮೊನ್ನೆ ವೇದವಲ್ಲಿ, ನಿನ್ನೆ ಸೌಜನ್ಯ, ನಾಳೆ ಇನ್ನು ಯಾರ ಬಲಿ ಎಂದು ಜನ ಕೇಳುತ್ತಿದ್ದಾರೆ. ಎಲ್ಲ ಸಾಕ್ಷ್ಯಗಳನ್ನೂ ವ್ಯವಸ್ಥಿತವಾಗಿ ನಾಶಮಾಡುತ್ತಿರುವ ದುಷ್ಕರ್ಮಿಗಳ ಕುರಿತು ಚಕಾರ ಎತ್ತದ ವ್ಯಕ್ತಿಯ ಕೈಗಳಿಂದ ಈ ಬಾರಿಯ ವಿಶ್ವನುಡಿಸಿರಿಯನ್ನು ಉದ್ಘಾಟಿಸುತ್ತಿದ್ದೀರಿ ಎಂದಾದರೆ ನಿಮ್ಮ ಸಾಮಾಜಿಕ ಕಾಳಜಿ ಯಾವ ಮಟ್ಟದ್ದು ಎಂಬುದನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳಬೇಕಿದೆ.

ನನಗೆ ಪಾಠ ಹೇಳಿದ, ಈ ಕರಾವಳಿ ಜಿಲ್ಲೆಯ ಬಲಪಂಥೀಯ ಚಟುವಟಿಕೆಗಳ ಕುರಿತು ನಿರಂತರ ಕಕ್ಕುಲಾತಿಯಿಂದ ಮಾತನಾಡುತ್ತಿದ್ದ,  Alvas Nudisiri ಜಾತಿಯ ಚೌಕಟ್ಟಿನಲ್ಲಿ ತಾನೆಂದೂ ಸಿಲುಕಿಯೇ ಇಲ್ಲ ಎಂದು ಅಭಿಮಾನಪಡುತ್ತಿದ್ದ, ಆ ಮೂಲಕ ನಮ್ಮೆಲ್ಲರಿಗೆ ಒಂದಿಷ್ಟು ಮಾದರಿ ಎನಿಸಿದ್ದ ಜಾನಪದ ತಜ್ಞ ಪ್ರೊ.ಬಿ.ಎ.ವಿವೇಕ ರೈ ಅವರು ಇಂಥ ವಿಶ್ವನುಡಿಸಿರಿಯ ಸರ್ವಾಧ್ಯಕ್ಷರು ಎಂಬುದು ನನಗೆ ಆಶ್ಚರ್ಯ ಮತ್ತು ನೋವಿನ ಸಂಗತಿ. ಹೆತ್ತವರೇ ಆಗಲಿ, ಅಧ್ಯಾಪಕರೇ ಆಗಲಿ, ತಪ್ಪೆಸಗಿದಾಗ ಅವರ ತಪ್ಪನ್ನು ಮತ್ತು ಮಿತಿಯನ್ನು ಹೇಳುವುದು ಮಕ್ಕಳ/ಶಿಷ್ಯರ ಆದ್ಯ ಕರ್ತವ್ಯ ಮತ್ತು ಅದು ಹಿರಿಯರಿಗೆ ಪ್ರೀತಿ ತೋರುವ ಒಂದು ವಿಧಾನ ಎಂಬ ರಾಜಕಾರಣದಲ್ಲಿ ನಂಬಿಕೆ ಇಟ್ಟ ಕಾರಣ ನಾನು ಈ ಮಾತುಗಳನ್ನು ಹೇಳಬೇಕಾಗಿ ಬಂದಿದೆ.

ಇದೆಲ್ಲದರ ಬಗ್ಗೆ ಎಚ್ಚರಿಕೆ ಹೇಳಿದ/ಹೇಳಬೇಕಾದ ದನಿಗಳು ಪೂರ್ವಭಾವಿ ಸಭೆಗಳಲ್ಲಿ ಕ್ಷೀಣವಾಗಿ ಬಿಟ್ಟವು. ಕೊನೆಯ ಪ್ರಯತ್ನವಾಗಿ ’ಸಂಪನ್ಮೂಲ ವ್ಯಕ್ತಿ’ಗಳ ಆಯ್ಕೆಯ ನೆಲೆಯಲ್ಲಿ ಕೆಲವು ಪ್ರಯತ್ನವನ್ನು ನಡೆಸಿದ್ದೆ. ಹೀಗೆ ನಾನು ಸೂಚಿಸಿದ, ನಿಮ್ಮ ಸಭೆಯಲ್ಲಿ ಅಂಗೀಕಾರಗೊಂಡ ಕವಯಿತ್ರಿಯರು ನುಡಿಸಿರಿಗೆ ಬಂದಾಗ ನಡೆದುದಾದರೂ ಏನು? ಓರ್ವ ಗೆಳತಿಯನ್ನು ಕವಿಸಮಯಕ್ಕೆ ಕರೆಸಿ, ಅವಳಲ್ಲಿ ಅಪರಾಧಿ ಪ್ರಜ್ಞೆಯನ್ನು ಹುಟ್ಟುಹಾಕಿದಂತಾಯ್ತು. ಅವಳು ತನ್ನೂರಿಗೆ ಹೋಗಿ ನಿಮ್ಮಿಂದ ಪಡೆದ ಹಣವೆಲ್ಲವನ್ನೂ ಕಾರಣವನ್ನೊಳಗೊಂಡ ಪತ್ರ ಬರೆದು ಹಿಂದಿರುಗಿಸಿದ್ದು ಯಾರ ಗಮನಕ್ಕೂ ಬರಲೇ ಇಲ್ಲ. ಇನ್ನೋರ್ವ ಗೆಳತಿ ಕರಾವಳಿಯ ತಲ್ಲಣಗಳ ಪರವಾಗಿ ನುಡಿಸಿರಿ ವೇದಿಕೆಯಲ್ಲಿ ದನಿಯೆತ್ತಿ ಸುದ್ದಿ ಮಾಡಿದರೂ ಅದು ನಿಮಗೆ ’ಒಡಕು ದನಿ’ಯಾಗಿ ಕೇಳಿಸಿತೇ ಹೊರತು ಭಿನ್ನದನಿಗೆ ಬೆಲೆ ನೀಡಬೇಕು ಎಂದು ಅನ್ನಿಸಲೇ ಇಲ್ಲ.

ನಮ್ಮ ಗುರಿಯಷ್ಟೇ ನಾವು ಹೋಗುವ ದಾರಿಯೂ ಮುಖ್ಯ ಎಂಬ ಮಾತು ನಿಮಗೂ ಹೊಸದಿರಲಾರದು. ಕರ್ನಾಟಕದ ಮೂಲೆಮೂಲೆಗಳಲ್ಲಿ ಹಾಗೂ ವಿದೇಶಗಳಲ್ಲಿ ನುಡಿಸಿರಿಯ ಘಟಕಗಳನ್ನು ತೆರೆಯಲು ನೀವು ಲಕ್ಷಾಂತರ ಹಣವನ್ನು ವ್ಯಯಿಸಿದ್ದೀರಿ. ಈಗ ಕೋಟಿಗಳ ಲೆಕ್ಕದಲ್ಲಿ ವಿಶ್ವನುಡಿಸಿರಿಯನ್ನು ಆಯೋಜಿಸುತ್ತಿದ್ದೀರಿ. abhimata-page5ಇಲ್ಲಿಯವರೆಗೆ ಸಮ್ಮೇಳನದ ಖರ್ಚನ್ನು ನೀವು ನಿಭಾಯಿಸುತ್ತಿದ್ದ ಕ್ರಮದ ಬಗ್ಗೆ ನನಗೆ ಬೆರಗು ಇತ್ತು. ಈಗ ಹತ್ತಾರು ಪ್ರಶ್ನೆಗಳಿವೆ. ಡಿಸೆಂಬರ್ 14 ಮತ್ತು 15 ರಂದು ಮಂಗಳೂರಿನ ಶಕ್ತಿನಗರದ ಕಲಾಂಗಣದಲ್ಲಿ ಕರ್ನಾಟಕದ ಪ್ರಗತಿಪರ ಸಂಘಟನೆಗಳೆಲ್ಲ ಸೇರಿ ಕೆಲವೇ ಕೆಲವು ಸಾವಿರಗಳಲ್ಲಿ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ಸಾಧ್ಯ ಎಂದು ತೋರುತ್ತಿದ್ದಾರೆ; ಆ ಮೂಲಕ ನಿಮಗೊಂದು ಉತ್ತರವನ್ನು ಕೊಡುವುದಕ್ಕೂ ಸಿದ್ಧರಾಗಿದ್ದಾರೆ.

ನಿಮ್ಮ ಸಿರಿವಂತ ಸಾಹಿತ್ಯ ಸಮ್ಮೇಳನಕ್ಕೆ ನಾನು ಮತ್ತು ನನ್ನಂಥ ಸಮಾನ ಮನಸ್ಕ ಜನರು ಬರಲಾರೆವು. ಆದರೆ ಸರಳ, ಜನಪರ, ಜನರ ತಲ್ಲಣಗಳಿಗೆ ದನಿಯಾಗಲು ಹೊರಟಿರುವ ಸಾಹಿತ್ಯ ಸಮ್ಮೇಳನಕ್ಕೆ ನೀವೂ ಬನ್ನಿ ಎಂದು ಹೃತ್ಪೂರ್ವಕವಾಗಿ ಆಹ್ವಾನಿಸುತ್ತಿದ್ದೇನೆ. ‘ನಮಗೆ ನುಡಿಯು ಸಿರಿಯಲ್ಲ, ಬದುಕು’ ಎಂಬುದು ಸಮ್ಮೇಳನದ ಧ್ಯೇಯ ವಾಕ್ಯ. ಇದು ನಮ್ಮ ಪ್ರೀತಿಯ ಕರೆಯೋಲೆ.

– ಡಾ. ಸಬಿಹಾ ಭೂಮಿಗೌಡ

ಮಂಗಳೂರಿನಲ್ಲಿ “ನುಡಿಸಿರಿ”ಗೆ ಪರ್ಯಾಯವಾಗಿ “ಜನ ನುಡಿ”

ಸ್ನೇಹಿತರೇ,

ಪ್ರತಿವರ್ಷ ಮಂಗಳೂರು ಜಿಲ್ಲೆಯ ಮೂಡಬಿದ್ರೆಯಲ್ಲಿ ಮೋಹನ್‌ ಆಳ್ವ ಎನ್ನುವ ಉದ್ಯಮಿಯ ಶಿಕ್ಷಣ ಸಂಸ್ಥೆಯಲ್ಲಿ “ನುಡಿಸಿರಿ” ಎನ್ನುವ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ ನಡೆಯುತ್ತದೆ. ಈ ಉತ್ಸವದ ಹಿನ್ನೆಲೆ ಮತ್ತು ಅದರ ನೈಜ ಉದ್ದೇಶದ ಬಗೆ ನಾಡಿನ ಕೆಲವು ಜನರಿಗೆ ಕೆಲವು ಸಂಶಯಗಳಿವೆ. ಕಳೆದ ವರ್ಷ ನಾಡಿನ ಹಿರಿಯ ಸಾಹಿತಿ ಅನಂತಮೂರ್ತಿಯವರು ಈ “ನುಡಿಸಿರಿ” ಕಾರ್ಯಕ್ರಮದ ಉದ್ಘಾಟಕರು ಎಂದು ಘೋಷಣೆಯಾದ ಸಂದರ್ಭದಲ್ಲಿ ಮಂಗಳೂರಿನ ಪತ್ರಕರ್ತ ನವೀನ್ ಸೂರಿಂಜೆಯವರು ವರ್ತಮಾನ.ಕಾಮ್‌ನಲ್ಲಿ “ಆಳ್ವಾಸ್ ನುಡಿಸಿರಿಗೆ ಅನಂತಮೂರ್ತಿಯವರು ಹೋಗುವುದು ಯುಕ್ತವೇ” ಎಂಬ ಲೇಖನ ಬರೆದಿದ್ದರು. ಅದರ ಹಿನ್ನೆಲೆಯಲ್ಲಿ ಇದೇ ವೇದಿಕೆಯಲ್ಲಿ ಕೆಲವು ಚರ್ಚೆಗಳು ಆಗಿದ್ದವು.

ಈ ವರ್ಷದ ನುಡಿಸಿರಿಗೆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಉದ್ಘಾಟಕರಾಗಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ವಿವೇಕ ರೈ‌ರವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅಂದಹಾಗೆ, ಈ ಕಾರ್ಯಕ್ರಮದ ಅಧ್ಯಕ್ಷರನ್ನು ಅಡ್ಡಪಲ್ಲಕ್ಕಿಯಲ್ಲಿ ಆ ಶಿಕ್ಷಣಸಂಸ್ಥೆಯ ವಿದ್ಯಾರ್ಥಿಗಳು ಹೊರುತ್ತಾರೆ. Alvas-Nudisiri-2010ಈ ಬಾರಿ ವಿವೇಕ ರೈರವರೂ ಸಹ ಆ ಅಡ್ದಪಲ್ಲಕ್ಕಿಯಲ್ಲಿ ಕುಳಿತು ಅಲ್ಲಿಯ ವಿದ್ಯಾರ್ಥಿಗಳಿಂದ ಹೊರೆಸಿಕೊಂಡು, ಮೆರವಣಿಗೆ ಮಾಡಿಸಿಕೊಂಡು, ತದನಂತರ ತಮ್ಮ ಆಶೀರ್ವಚನ ಅಥವ ಪ್ರವಚನ ನೀಡಲಿದ್ದಾರೆ ಎನ್ನಿಸುತ್ತದೆ. ನಾಡಿನಲ್ಲಿ ಅಡ್ದಪಲ್ಲಕ್ಕಿ ಉತ್ಸವಗಳ ಬಗ್ಗೆ ಚರ್ಚೆಗಳಾಗುತ್ತಿರುವ ಸಂದರ್ಭದಲ್ಲಿ ಸಹಜವಾಗಿಯೇ ಇದನ್ನು ಕೆಲವರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಆಳ್ವಾಸ್ ನುಡಿಸಿರಿಯನ್ನು ಮತ್ತು ಅದರ ಹಿಂದೆ ಇದ್ದಿರಬಹುದಾದ ಹುನ್ನಾರಗಳನ್ನು ಅರಿತಿರುವ ಮಂಗಳೂರಿನ ಕೆಲವು ಲೇಖಕರು ಮತ್ತು ಸಾಮಾಜಿಕ ಕಾರ್ಯಕರ್ತರು ನಾಡಿನ ಹಲವು ಪ್ರಗತಿಪರ ಮನಸ್ಸುಗಳು ಮತ್ತು ಗುಂಪುಗಳೊಡನೆ ಸೇರಿ ಆಳ್ವಾಸ್ ನುಡಿಸಿರಿಗೆ ಪರ್ಯಾಯವಾಗಿ ಎರಡು ದಿನಗಳ ಸಾಹಿತ್ಯ ಸಮ್ಮೇಳನವೊಂದನ್ನು ಇದೇ ಶನಿವಾರ ಮತ್ತು ಭಾನುವಾರ ಆಯೋಜಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ವರ್ತಮಾನ.ಕಾಮ್ ಬಳಗ ನೈತಿಕ ಬೆಂಬಲ ಕೊಡುತ್ತಿದೆ ಮತ್ತು ವರ್ತಮಾನದ ಓದುಗರಿಗೂ ಈ ಮೂಲಕ ಆಹ್ವಾನಿಸಲಾಗುತ್ತಿದೆ. ನಮ್ಮ ಬಳಗದ ಹಲವು ಲೇಖಕರು ಮತ್ತು ಮಿತ್ರರೂ ಅಲ್ಲಿ ಬರಲಿದ್ದಾರೆ. ನೀವುಗಳೂ ಸಹ ದಯವಿಟ್ಟು ಬಂದು, ಭಾಗವಹಿಸಿ. ಕಾರ್ಯಕ್ರಮಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಶನಿವಾರದ ರಾತ್ರಿ ವಸತಿ ಸೌಕರ್ಯ ಇರುತ್ತದೆ, ಮತ್ತು ಎರಡೂ ದಿನ ತಿಂಡಿ-ಊಟದ ವ್ಯವಸ್ಥೆ ಇರುತ್ತದೆ.

ಈ ಕಾರ್ಯಕ್ರಮದ ಬಗ್ಗೆ ನಿರ್ವಾಹಕರು ಹಂಚಿಕೊಂಡಿರುವ ಅಭಿಪ್ರಾಯ ಮತ್ತು ಕಾರ್ಯಕ್ರಮದ ವಿವರಗಳನ್ನು ಕೆಳಗೆ ಕೊಡಲಾಗಿದೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ, ವರ್ತಮಾನ.ಕಾಮ್

ಆತ್ಮೀಯರೆ,

ವರ್ತಮಾನದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುವವರಿಗೆ ಒಂದು ವಿಷಯ ಸ್ಪಷ್ಟವಾಗುತ್ತದೆ: ಮೂಲಭೂತವಾದ ಹಾಗೂ ಬಂಡವಾಳವಾದ ಈ ಎರಡೂ ಸಾಹಿತ್ಯ-ಸಂಸ್ಕೃತಿಗಳ ಮುಖವಾಡ ತೊಟ್ಟು ಜನಪರವೆಂದು ಬಿಂಬಿಸಿಕೊಳ್ಳುತ್ತ ತಮ್ಮ ಕಾರ್ಯಯೋಜನೆಗಳಿಗೆ ಮನ್ನಣೆ ಪಡೆಯುತ್ತಲಿರುವುದು; ಅಷ್ಟೇ ಅಲ್ಲ, ಜನಸಾಮಾನ್ಯರ ದೈನಂದಿನ ಬದುಕಿನೊಳಗೂ ಮಾರುಕಟ್ಟೆ ಮತ್ತು ಧಾರ್ಮಿಕ ಹಿತಾಸಕ್ತಿ ಅನಾರೋಗ್ಯಕರ ಪೈಪೋಟಿ ಹಾಗೂ ಅಸಹನೆ ಹುಟ್ಟುಹಾಕುತ್ತಿರುವುದು. ಸೂಕ್ಷ್ಮಜ್ಞನಾಗುಳಿದು ವ್ಯವಸ್ಥೆಯ ಲೋಪದೋಷಗಳನ್ನೆತ್ತಿ ತೋರಿಸಬೇಕಾದ ಸಾಹಿತಿ-ಕಲಾವಿದ-ಸಂಘಟನೆಯ ವ್ಯಕ್ತಿಗಳು ಇಂಥವರ ಮಾರುವೇಷದ ಮರ್ಮ ಅರ್ಥಮಾಡಿಕೊಳ್ಳದೇ ಅದರ ಭಾಗವಾಗುತ್ತಿದ್ದಾರೆ. ತಿಳಿದೋ, ತಿಳಿಯದೆಯೋ ಈ ವರ್ತುಲದ ಸಹಭಾಗಿಗಳಾಗುತ್ತಿದ್ದಾರೆ. ಈ ಬೆಳವಣಿಗೆಯಿಂದ ಭವಿಷ್ಯದ ದಿಕ್ಸೂಚಿಯಾಗಬೇಕಾದ ಸಾಹಿತಿ-ಕಲಾವಿದರು ಸಾಹಿತ್ಯ ಮತ್ತು ಸಂಸ್ಕೃತಿಯ ಮಹಾಪೋಷಕರ ಋಣಭಾರ ಮತ್ತು ಆಮಿಷಕ್ಕೊಳಗಾಗಿ ಆತ್ಮವಂಚನೆ ಮಾಡಿಕೊಳ್ಳುವ ಅಪಾಯವಿದೆ. ಇದು ಯುವ ಪೀಳಿಗೆಯದ ದಿಕ್ಕು ತಪ್ಪಿಸುವ, ಗೊಂದಲಗೊಳಿಸುವ ಅಪಾಯ ದಟ್ಟವಾಗಿದೆ.

ಹೀಗಿರುತ್ತ ಸಮಾನ ಮನಸ್ಕರು ಒಂದೆಡೆ ಸೇರಿ, ಜನರಿಂದಲೇ ಹಣ ಸಂಗ್ರಹಿಸಿ, ಜನಪರವಾದ ಚಿಂತನೆಗಳನ್ನು ನಡೆಸಿ ಆ ಮೂಲಕ ಪರ್ಯಾಯ ಮಾದರಿಯೊಂದನ್ನು ರೂಪಿಸುವ ಅಗತ್ಯ ಬಹಳವಾಗಿದೆ.

ಈ ಹಿನ್ನೆಲೆಯೊಂದಿಗೆ, ‘ಅಭಿಮತ, ಮಂಗಳೂರು’ ಎಂಬ ವೇದಿಕೆ ರೂಪುಗೊಂಡಿದ್ದು ಡಿ. 14, 15 ರಂದು ಮಂಗಳೂರಿನಲ್ಲಿ ‘ಜನ ನುಡಿ’ ಸಮಾವೇಶವನ್ನು ನಡೆಸಲು ಯೋಜಿಸಲಾಗಿದೆ. ಸಮಾನ ಮನಸ್ಕರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸಿದ್ಧವಾದ ಕಾರ್ಯಕ್ರಮದ ವಿವರಗಳು ಹೀಗಿವೆ:

abhimata-page1
abhimata-page1
abhimata-page1
abhimata-page1
abhimata-page1
ಬನ್ನಿ, ಗೆಳೆಯರೊಂದಿಗೆ.

ನಿಮ್ಮ ಸಹಭಾಗಿತ್ವದ ನಿರೀಕ್ಷೆಯಲ್ಲಿ..
– ಅಭಿಮತ, ಮಂಗಳೂರು