ಮಂಗಳೂರಿನಲ್ಲಿ “ನುಡಿಸಿರಿ”ಗೆ ಪರ್ಯಾಯವಾಗಿ “ಜನ ನುಡಿ”

ಸ್ನೇಹಿತರೇ,

ಪ್ರತಿವರ್ಷ ಮಂಗಳೂರು ಜಿಲ್ಲೆಯ ಮೂಡಬಿದ್ರೆಯಲ್ಲಿ ಮೋಹನ್‌ ಆಳ್ವ ಎನ್ನುವ ಉದ್ಯಮಿಯ ಶಿಕ್ಷಣ ಸಂಸ್ಥೆಯಲ್ಲಿ “ನುಡಿಸಿರಿ” ಎನ್ನುವ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ ನಡೆಯುತ್ತದೆ. ಈ ಉತ್ಸವದ ಹಿನ್ನೆಲೆ ಮತ್ತು ಅದರ ನೈಜ ಉದ್ದೇಶದ ಬಗೆ ನಾಡಿನ ಕೆಲವು ಜನರಿಗೆ ಕೆಲವು ಸಂಶಯಗಳಿವೆ. ಕಳೆದ ವರ್ಷ ನಾಡಿನ ಹಿರಿಯ ಸಾಹಿತಿ ಅನಂತಮೂರ್ತಿಯವರು ಈ “ನುಡಿಸಿರಿ” ಕಾರ್ಯಕ್ರಮದ ಉದ್ಘಾಟಕರು ಎಂದು ಘೋಷಣೆಯಾದ ಸಂದರ್ಭದಲ್ಲಿ ಮಂಗಳೂರಿನ ಪತ್ರಕರ್ತ ನವೀನ್ ಸೂರಿಂಜೆಯವರು ವರ್ತಮಾನ.ಕಾಮ್‌ನಲ್ಲಿ “ಆಳ್ವಾಸ್ ನುಡಿಸಿರಿಗೆ ಅನಂತಮೂರ್ತಿಯವರು ಹೋಗುವುದು ಯುಕ್ತವೇ” ಎಂಬ ಲೇಖನ ಬರೆದಿದ್ದರು. ಅದರ ಹಿನ್ನೆಲೆಯಲ್ಲಿ ಇದೇ ವೇದಿಕೆಯಲ್ಲಿ ಕೆಲವು ಚರ್ಚೆಗಳು ಆಗಿದ್ದವು.

ಈ ವರ್ಷದ ನುಡಿಸಿರಿಗೆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಉದ್ಘಾಟಕರಾಗಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ವಿವೇಕ ರೈ‌ರವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅಂದಹಾಗೆ, ಈ ಕಾರ್ಯಕ್ರಮದ ಅಧ್ಯಕ್ಷರನ್ನು ಅಡ್ಡಪಲ್ಲಕ್ಕಿಯಲ್ಲಿ ಆ ಶಿಕ್ಷಣಸಂಸ್ಥೆಯ ವಿದ್ಯಾರ್ಥಿಗಳು ಹೊರುತ್ತಾರೆ. Alvas-Nudisiri-2010ಈ ಬಾರಿ ವಿವೇಕ ರೈರವರೂ ಸಹ ಆ ಅಡ್ದಪಲ್ಲಕ್ಕಿಯಲ್ಲಿ ಕುಳಿತು ಅಲ್ಲಿಯ ವಿದ್ಯಾರ್ಥಿಗಳಿಂದ ಹೊರೆಸಿಕೊಂಡು, ಮೆರವಣಿಗೆ ಮಾಡಿಸಿಕೊಂಡು, ತದನಂತರ ತಮ್ಮ ಆಶೀರ್ವಚನ ಅಥವ ಪ್ರವಚನ ನೀಡಲಿದ್ದಾರೆ ಎನ್ನಿಸುತ್ತದೆ. ನಾಡಿನಲ್ಲಿ ಅಡ್ದಪಲ್ಲಕ್ಕಿ ಉತ್ಸವಗಳ ಬಗ್ಗೆ ಚರ್ಚೆಗಳಾಗುತ್ತಿರುವ ಸಂದರ್ಭದಲ್ಲಿ ಸಹಜವಾಗಿಯೇ ಇದನ್ನು ಕೆಲವರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಆಳ್ವಾಸ್ ನುಡಿಸಿರಿಯನ್ನು ಮತ್ತು ಅದರ ಹಿಂದೆ ಇದ್ದಿರಬಹುದಾದ ಹುನ್ನಾರಗಳನ್ನು ಅರಿತಿರುವ ಮಂಗಳೂರಿನ ಕೆಲವು ಲೇಖಕರು ಮತ್ತು ಸಾಮಾಜಿಕ ಕಾರ್ಯಕರ್ತರು ನಾಡಿನ ಹಲವು ಪ್ರಗತಿಪರ ಮನಸ್ಸುಗಳು ಮತ್ತು ಗುಂಪುಗಳೊಡನೆ ಸೇರಿ ಆಳ್ವಾಸ್ ನುಡಿಸಿರಿಗೆ ಪರ್ಯಾಯವಾಗಿ ಎರಡು ದಿನಗಳ ಸಾಹಿತ್ಯ ಸಮ್ಮೇಳನವೊಂದನ್ನು ಇದೇ ಶನಿವಾರ ಮತ್ತು ಭಾನುವಾರ ಆಯೋಜಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ವರ್ತಮಾನ.ಕಾಮ್ ಬಳಗ ನೈತಿಕ ಬೆಂಬಲ ಕೊಡುತ್ತಿದೆ ಮತ್ತು ವರ್ತಮಾನದ ಓದುಗರಿಗೂ ಈ ಮೂಲಕ ಆಹ್ವಾನಿಸಲಾಗುತ್ತಿದೆ. ನಮ್ಮ ಬಳಗದ ಹಲವು ಲೇಖಕರು ಮತ್ತು ಮಿತ್ರರೂ ಅಲ್ಲಿ ಬರಲಿದ್ದಾರೆ. ನೀವುಗಳೂ ಸಹ ದಯವಿಟ್ಟು ಬಂದು, ಭಾಗವಹಿಸಿ. ಕಾರ್ಯಕ್ರಮಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಶನಿವಾರದ ರಾತ್ರಿ ವಸತಿ ಸೌಕರ್ಯ ಇರುತ್ತದೆ, ಮತ್ತು ಎರಡೂ ದಿನ ತಿಂಡಿ-ಊಟದ ವ್ಯವಸ್ಥೆ ಇರುತ್ತದೆ.

ಈ ಕಾರ್ಯಕ್ರಮದ ಬಗ್ಗೆ ನಿರ್ವಾಹಕರು ಹಂಚಿಕೊಂಡಿರುವ ಅಭಿಪ್ರಾಯ ಮತ್ತು ಕಾರ್ಯಕ್ರಮದ ವಿವರಗಳನ್ನು ಕೆಳಗೆ ಕೊಡಲಾಗಿದೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ, ವರ್ತಮಾನ.ಕಾಮ್

ಆತ್ಮೀಯರೆ,

ವರ್ತಮಾನದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುವವರಿಗೆ ಒಂದು ವಿಷಯ ಸ್ಪಷ್ಟವಾಗುತ್ತದೆ: ಮೂಲಭೂತವಾದ ಹಾಗೂ ಬಂಡವಾಳವಾದ ಈ ಎರಡೂ ಸಾಹಿತ್ಯ-ಸಂಸ್ಕೃತಿಗಳ ಮುಖವಾಡ ತೊಟ್ಟು ಜನಪರವೆಂದು ಬಿಂಬಿಸಿಕೊಳ್ಳುತ್ತ ತಮ್ಮ ಕಾರ್ಯಯೋಜನೆಗಳಿಗೆ ಮನ್ನಣೆ ಪಡೆಯುತ್ತಲಿರುವುದು; ಅಷ್ಟೇ ಅಲ್ಲ, ಜನಸಾಮಾನ್ಯರ ದೈನಂದಿನ ಬದುಕಿನೊಳಗೂ ಮಾರುಕಟ್ಟೆ ಮತ್ತು ಧಾರ್ಮಿಕ ಹಿತಾಸಕ್ತಿ ಅನಾರೋಗ್ಯಕರ ಪೈಪೋಟಿ ಹಾಗೂ ಅಸಹನೆ ಹುಟ್ಟುಹಾಕುತ್ತಿರುವುದು. ಸೂಕ್ಷ್ಮಜ್ಞನಾಗುಳಿದು ವ್ಯವಸ್ಥೆಯ ಲೋಪದೋಷಗಳನ್ನೆತ್ತಿ ತೋರಿಸಬೇಕಾದ ಸಾಹಿತಿ-ಕಲಾವಿದ-ಸಂಘಟನೆಯ ವ್ಯಕ್ತಿಗಳು ಇಂಥವರ ಮಾರುವೇಷದ ಮರ್ಮ ಅರ್ಥಮಾಡಿಕೊಳ್ಳದೇ ಅದರ ಭಾಗವಾಗುತ್ತಿದ್ದಾರೆ. ತಿಳಿದೋ, ತಿಳಿಯದೆಯೋ ಈ ವರ್ತುಲದ ಸಹಭಾಗಿಗಳಾಗುತ್ತಿದ್ದಾರೆ. ಈ ಬೆಳವಣಿಗೆಯಿಂದ ಭವಿಷ್ಯದ ದಿಕ್ಸೂಚಿಯಾಗಬೇಕಾದ ಸಾಹಿತಿ-ಕಲಾವಿದರು ಸಾಹಿತ್ಯ ಮತ್ತು ಸಂಸ್ಕೃತಿಯ ಮಹಾಪೋಷಕರ ಋಣಭಾರ ಮತ್ತು ಆಮಿಷಕ್ಕೊಳಗಾಗಿ ಆತ್ಮವಂಚನೆ ಮಾಡಿಕೊಳ್ಳುವ ಅಪಾಯವಿದೆ. ಇದು ಯುವ ಪೀಳಿಗೆಯದ ದಿಕ್ಕು ತಪ್ಪಿಸುವ, ಗೊಂದಲಗೊಳಿಸುವ ಅಪಾಯ ದಟ್ಟವಾಗಿದೆ.

ಹೀಗಿರುತ್ತ ಸಮಾನ ಮನಸ್ಕರು ಒಂದೆಡೆ ಸೇರಿ, ಜನರಿಂದಲೇ ಹಣ ಸಂಗ್ರಹಿಸಿ, ಜನಪರವಾದ ಚಿಂತನೆಗಳನ್ನು ನಡೆಸಿ ಆ ಮೂಲಕ ಪರ್ಯಾಯ ಮಾದರಿಯೊಂದನ್ನು ರೂಪಿಸುವ ಅಗತ್ಯ ಬಹಳವಾಗಿದೆ.

ಈ ಹಿನ್ನೆಲೆಯೊಂದಿಗೆ, ‘ಅಭಿಮತ, ಮಂಗಳೂರು’ ಎಂಬ ವೇದಿಕೆ ರೂಪುಗೊಂಡಿದ್ದು ಡಿ. 14, 15 ರಂದು ಮಂಗಳೂರಿನಲ್ಲಿ ‘ಜನ ನುಡಿ’ ಸಮಾವೇಶವನ್ನು ನಡೆಸಲು ಯೋಜಿಸಲಾಗಿದೆ. ಸಮಾನ ಮನಸ್ಕರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸಿದ್ಧವಾದ ಕಾರ್ಯಕ್ರಮದ ವಿವರಗಳು ಹೀಗಿವೆ:

abhimata-page1
abhimata-page1
abhimata-page1
abhimata-page1
abhimata-page1
ಬನ್ನಿ, ಗೆಳೆಯರೊಂದಿಗೆ.

ನಿಮ್ಮ ಸಹಭಾಗಿತ್ವದ ನಿರೀಕ್ಷೆಯಲ್ಲಿ..
– ಅಭಿಮತ, ಮಂಗಳೂರು

One thought on “ಮಂಗಳೂರಿನಲ್ಲಿ “ನುಡಿಸಿರಿ”ಗೆ ಪರ್ಯಾಯವಾಗಿ “ಜನ ನುಡಿ”

  1. a

    ಅಡ್ಡಪಲ್ಲಕ್ಕಿಯಲ್ಲಿ ಕುಳಿತು ಸಹಮಾನವರಿಂದ ಹೊರಿಸಿಕೊಳ್ಳುವುದು ತೀರಾ ನಾಚಿಕೆಗೇಡಿನ ಸಂಗತಿ ಹಾಗೂ ಇದನ್ನು ಸಾಹಿತಿಗಳು ಒಪ್ಪಿಕೊಳ್ಳುವುದು ಯೋಗ್ಯವಲ್ಲ. ಇದನ್ನು ನಿಜವಾದ ಸಾಹಿತಿಯಾದವನು ಖಡಾಖಂಡಿತವಾಗಿ ವಿರೋಧಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಇಂಥ ಊಳಿಗಮಾನ್ಯ ಜಮೀನ್ದಾರಿ ಪದ್ಧತಿಯ ಪಳೆಯುಳಿಕೆಗಳನ್ನು ಮುಂದುವರಿಸಲು ನಮ್ಮ ಸಾಹಿತಿಗಳು ಎನಿಸಿಕೊಂಡವರಿಗೆ ನಾಚಿಕೆ ಆಗದಿದ್ದರೆ ಅಂಥವರು ಸಾಹಿತಿ ಎಂದು ಹೇಗೆ ಅನಿಸಿಕೊಳ್ಳುತ್ತಾರೆ? ಮಾನವನು ಮಾನವನನ್ನು ಹೊತ್ತುಕೊಂಡು ಹೋಗುವುದು ಚಟ್ಟದಲ್ಲಿ ಸ್ಮಶಾನ ಯಾತ್ರೆಗೆ ಮಾತ್ರ ಅಥವಾ ಬೇರೆ ಯಾವುದೇ ವಾಹನ ಸೌಕರ್ಯ ಇಲ್ಲದಿರುವ ಕಡೆ ನಡೆಯಲು ಅಸಾಧ್ಯವಾದ ಅಸಹಾಯಕರನ್ನು ಮಾತ್ರ. ಜೀವಂತ ಮಾನವನನ್ನು ಬೇರೆ ಮಾನವರು ಹೊತ್ತುಕೊಂಡು ಹೋಗುವ ಪದ್ಧತಿಯನ್ನು ಸಾಹಿತಿಗಳು ನಿಲ್ಲಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ.

    Reply

Leave a Reply

Your email address will not be published. Required fields are marked *