ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸಾಧನೆ – ದೇಶಕ್ಕೆ ಹೊಸ ಸಂದೇಶ ನೀಡುವಲ್ಲಿ ಯಶಸ್ವಿ

– ಆನಂದ ಪ್ರಸಾದ್

ದೆಹಲಿಯಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ರಾಜಕೀಯ ಹಿನ್ನೆಲೆಯೇನೂ ಇಲ್ಲದ ಆಮ್ ಆದ್ಮಿ ಪಕ್ಷವು ಮೊದಲ ಬಾರಿಗೆ ಸ್ಪರ್ಧಿಸಿ 70 ಸ್ಥಾನಗಳಲ್ಲಿ 28 ಸ್ಥಾನಗಳನ್ನು ಗೆದ್ದು 30% ಮತಗಳನ್ನು ಪಡೆದು ಎರಡನೆಯ ಸ್ಥಾನದಲ್ಲಿ ನಿಂತಿರುವುದು ಒಂದು ಅತ್ಯುತ್ತಮ ಸಾಧನೆ ಎನ್ನಲು ಅಡ್ಡಿ ಇಲ್ಲ. ಇದು ಏಕೆ ಮುಖ್ಯ ಸಾಧನೆಯಾಗುತ್ತದೆ ಎಂದರೆ ಇಲ್ಲಿ ಚುನಾವಣೆಗೆ ಸ್ಪರ್ಧಿಸಲು ಬೇಕಾದ ಹಣವನ್ನು ಜನತೆಯ ದೇಣಿಗೆಯಿಂದಲೇ ಅತ್ಯಂತ ನ್ಯಾಯಯುತ ಮಾರ್ಗದಿಂದಲೇ ಪಾರದರ್ಶಕವಾಗಿ ಪಡೆಯಲಾಗಿದೆ ಹಾಗೂ ಚುನಾವಣಾ ಆಯೋಗದ ಮಿತಿಯೊಳಗೇ AAP Launchಚುನಾವಣಾ ಖರ್ಚುಗಳನ್ನು ಪ್ರಾಮಾಣಿಕವಾಗಿ ನಿಭಾಯಿಸಿ ಇಂಥ ಸಾಧನೆಯನ್ನು ಆಮ್ ಆದ್ಮಿ ಪಕ್ಷವು ಮಾಡಿದೆ. ಎಲ್ಲಿಯೂ ಮತದಾರರಿಗೆ ಹಣ, ಹೆಂಡ, ಇನ್ನಿತರ ಆಮಿಷಗಳನ್ನು ಒಡ್ಡಿ ಮತ ಖರೀದಿಸದೆಯೂ ಇಂಥ ಸಾಧನೆ ಮಾಡಿರುವುದು ಮರುಭೂಮಿಯ ನಡುವಿನ ಓಯಸಿಸ್ನಂತೆ ಭಾರತದ ಪ್ರಜ್ಞಾವಂತರೆಲ್ಲರೂ ಸಮಾಧಾನ ಪಡುವ ವಿಷಯವಾಗಿದೆ. ಆಮ್ ಆದ್ಮಿ ಪಕ್ಷವು ಬಿಜೆಪಿಯಂತೆ ಧರ್ಮ ಹಾಗೂ ದೇವರ ವಿಷಯದಲ್ಲಿ ಅಮಾಯಕ ಜನತೆಯನ್ನು ಕೆರಳಿಸಿ ತನ್ಮೂಲಕ ಅದರ ದುರ್ಲಾಭವನ್ನು ರಾಜಕೀಯವಾಗಿ ಪಡೆದುಕೊಂಡು ಬೆಳೆಯುವ ಕುಟಿಲ ನೀತಿಯನ್ನು ಅಳವಡಿಸಿಕೊಳ್ಳದೆ ಈ ಸಾಧನೆಯನ್ನು ಮಾಡಿದೆ. ಇದಕ್ಕಾಗಿಯೂ ಆಮ್ ಆದ್ಮಿ ಪಕ್ಷದ ಸಾಧನೆ ಪ್ರಾಧಾನ್ಯತೆ ಪಡೆದುಕೊಳ್ಳುತ್ತದೆ. ಬಿಜೆಪಿ ಪಕ್ಷವು ಅಮಾಯಕ ಜನರನ್ನು ಧರ್ಮ ಹಾಗೂ ದೇವರ ಹೆಸರಿನಲ್ಲಿ ಕೆರಳಿಸಿ ಅವರನ್ನು ಅಯೋಧ್ಯೆಗೆ ಕರೆದುಕೊಂಡು ಹೋಗಿ ಬಾಬ್ರಿ ಮಸೀದಿಯನ್ನು ಕಾನೂನನ್ನು ಕೈಗೆ ತೆಗೆದುಕೊಂಡು ಉರುಳಿಸಿ ಆಗ ಉಂಟಾದ ಮಹಾ ರಕ್ತಪಾತದ ರಾಜಕೀಯ ಲಾಭವನ್ನು ಪಡೆದುಕೊಂಡು ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಕಾರಣವಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಇಂಥ ರಕ್ತಪಾತದ ಹಿನ್ನೆಲೆ ಇಲ್ಲದೆಯೂ ಬಲಿಷ್ಠ ರಾಜಕೀಯ ಪಕ್ಷಗಳ ಎದುರು ನಿಂತು ಆಮ್ ಆದ್ಮಿ ಪಕ್ಷವು ಮೊದಲ ಪ್ರಯತ್ನದಲ್ಲಿಯೇ ಗಮನಾರ್ಹ ಯಶಸ್ಸನ್ನು ಸಾಧಿಸಿರುವುದು ಭಾರತದಲ್ಲಿ ಬದಲಾವಣೆಯ ಗಾಳಿ ಬೀಸಲಿದೆ ಎಂಬುದರ ಮುನ್ಸೂಚನೆಯಾಗಿದೆ. ಇದಕ್ಕಾಗಿಯೂ ಈ ಯಶಸ್ಸು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ.

ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಹೋರಾಟ ಯಶಸ್ಸನ್ನು ಕಾಣಲು ವಿಫಲವಾದಾಗ ಬದಲಾವಣೆಗೆ ರಾಜಕೀಯ ರಂಗಕ್ಕೆ ನೇರವಾಗಿ ಇಳಿಯುವ ಅನಿವಾರ್ಯತೆ ಕೇಜ್ರಿವಾಲ್ ಅವರಿಗೆ ಎದುರಾಯಿತು. ಈ ವಿಷಯದಲ್ಲಿ ಅಣ್ಣಾ ಹಜಾರೆಯವರ ಸಹಕಾರ kejriwal_aap_pti_rallyಕೇಜ್ರಿವಾಲರಿಗೆ ದೊರೆಯದಿದ್ದರೂ ಅವರು ಇದನ್ನು ಸವಾಲಾಗಿ ತೆಗೆದುಕೊಂಡು ಉತ್ತಮ ಸಾಧನೆ ಮಾಡಿದ್ದಾರೆ. ಮಾಧ್ಯಮಗಳೂ ಕೂಡ ರಾಜಕೀಯ ಹೋರಾಟದ ಹಾದಿಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಅದು ಪ್ರತಿಪಾದಿಸಿದ ಸ್ವಚ್ಛ ಹಾಗೂ ಮೌಲ್ಯಾಧಾರಿತ ರಾಜಕೀಯಕ್ಕೆ ಯಾವುದೇ ಬೆಂಬಲ ಕೊಡಲಿಲ್ಲ. ದೈತ್ಯ ಬಂಡವಾಳಶಾಹೀ ಸಂಸ್ಥೆಗಳ ಸಹಕಾರ ಪಡೆದು ಅಬ್ಬರದ ಪ್ರಚಾರ ನಡೆಸಿದ ಮೋದಿಯ ಮಹಾ ಅಲೆಯಿದೆಯೆಂದು ಹೇಳಲಾಗಿದ್ದರೂ ದೆಹಲಿಯಲ್ಲಿ ಮಾಧ್ಯಮಗಳ ಸಹಕಾರವಿಲ್ಲದೆಯೂ ಆಮ್ ಆದ್ಮಿ ಪಕ್ಷ ಸಾಧಿಸಿದ ಈ ಯಶಸ್ಸು ಇಡೀ ದೇಶಕ್ಕೆ ನಿಧಾನವಾಗಿ ಹಬ್ಬಿದರೆ ಭಾರತದ ಭವಿಷ್ಯವು ಬದಲಾಗಲಿರುವುದು ಖಚಿತ.

ಇದೀಗ ದೆಹಲಿಯಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿರುವಾಗ ಆಮ್ ಆದ್ಮಿ ಪಕ್ಷವು ಬಿಜೆಪಿಯ ಜೊತೆಗೂಡಿ ಸರ್ಕಾರ ರಚಿಸಬೇಕೆಂದು ಕೆಲವು ಮಾಧ್ಯಮಗಳು ಆಮ್ ಆದ್ಮಿ ಪಕ್ಷಕ್ಕೆ ಒತ್ತಡ ಹಾಕುತ್ತಿವೆ. ಆದರೆ ಈ ಒತ್ತಡಕ್ಕೆ ಆಮ್ ಆದ್ಮಿ ಪಕ್ಷವು ಮಣಿಯದಿರಲು ನಿರ್ಧರಿಸಿರುವುದು ಒಂದು ಒಳ್ಳೆಯ ನಿರ್ಧಾರವಾಗಿದೆ. ಇಂಥ ನಿರ್ಧಾರಕ್ಕೆ ಬಂದು ಕೋಮುವಾದಿ ಹಿನ್ನೆಲೆ ಇರುವ ಪ್ರತಿಗಾಮಿ ರಾಜಕೀಯ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಭವಿಷ್ಯದಲ್ಲಿ ಆಮ್ ಆದ್ಮಿ ಪಕ್ಷದ ಬೆಳವಣಿಗೆಗೆ ತೊಂದರೆಯಾಗಲಿರುವುದು ಖಚಿತ. ಸಂಘ ಪರಿವಾರದ ಹಿಡಿತದಲ್ಲಿ ಇರುವ ಹಾಗೂ ಸಂಘ ಪರಿವಾರ ನಿರ್ದೇಶಿತ ಬಿಜೆಪಿಯ ರಾಜಕೀಯ ಚಟುವಟಿಕೆಗಳು ಆಮ್ ಆದ್ಮಿ ಪಕ್ಷದ ಉದಾರ ಹಾಗೂ ಜಾತ್ಯತೀತ ನಿಲುವಿಗೆ ವಿರೋಧವಾಗಿದ್ದು ಇದರಿಂದ ಆಮ್ ಆದ್ಮಿ ಪಕ್ಷ ತೊಂದರೆಗೆ ಸಿಕ್ಕಿಹಾಕಿಕೊಳ್ಳಬಹುದು. ಹೀಗಾಗಿ ಬಿಜೆಪಿಯ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಚಾರಿತ್ರಿಕ ಪ್ರಮಾದವಾದೀತು. ಪ್ರತಿಗಾಮಿ ಕಾರ್ಯಸೂಚಿ ಹೊಂದಿರುವ ಬಿಜೆಪಿಯ ಪೂರ್ವಾವತಾರವಾಗಿದ್ದ ಜನಸಂಘದ ಜೊತೆ ಜನತಾ ಪರಿವಾರ ಹೊಂದಾಣಿಕೆ ಮಾಡಿ ವಿಫಲವಾದ ಇತಿಹಾಸವೇ ಇದೆ. aap-kejriwal-yogendra-yadavಹೀಗಾಗಿ ಬಿಜೆಪಿ ಜೊತೆ ಕೈಜೋಡಿಸದಿರುವ ಆಮ್ ಆದ್ಮಿ ಪಕ್ಷದ ನಿಲುವು ಅತ್ಯಂತ ವಿವೇಚನೆಯಿಂದ ಕೂಡಿದೆ ಎಂದೇ ಹೇಳಬೇಕಾಗುತ್ತದೆ. ಬಿಜೆಪಿ ಆಮ್ ಆದ್ಮಿ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಪರೋಕ್ಷವಾಗಿ ಕಿರಣ್ ಬೇಡಿಯ ಮಧ್ಯಸ್ಥಿಕೆಯ ಮೂಲಕ ಪ್ರಯತ್ನಿಸಿತು. ಆದರೆ ಬದಲಾವಣೆಗಾಗಿ ರಾಜಕೀಯಕ್ಕೆ ಇಳಿದ ಆಮ್ ಆದ್ಮಿ ಪಕ್ಷ ಇಂಥ ಹೊಂದಾಣಿಕೆಗೆ ನಿರಾಕರಿಸಿರುವುದು ಸಮಂಜಸವಾಗಿಯೇ ಇದೆ. ಇದಕ್ಕೂ ಮೊದಲು ಚುನಾವಣಾ ಫಲಿತಾಂಶ ಬರುವ ಮುನ್ನಾ ದಿನವೇ ಆಮ್ ಆದ್ಮಿ ಪಕ್ಷದ ಗೆಲ್ಲಬಹುದಾದ ಅಭ್ಯರ್ಥಿಗಳನ್ನು ತನ್ನೆಡೆಗೆ ಸೆಳೆದುಕೊಳ್ಳಲು ಬಿಜೆಪಿ ಪ್ರಯತ್ನಿಸಿತ್ತೆಂದು ಆಮ್ ಆದ್ಮಿ ಪಕ್ಷ ಹೇಳಿದೆ, ಆದರೆ ನೈತಿಕ ಹಾಗೂ ಮೌಲ್ಯಾಧಾರಿತ ರಾಜಕೀಯಕ್ಕೆ ಬದ್ಧರಾದ ಅವರನ್ನು ಸೆಳೆಯಲು ಬಿಜೆಪಿಗೆ ಸಾಧ್ಯವಾಗಲಿಲ್ಲ. ಇಂಥ ನೈತಿಕ ಹಾಗೂ ಮೌಲ್ಯಾಧಾರಿತ ದೃಢತೆ ಇದ್ದಾಗ ಮಾತ್ರ ಏನಾದರೂ ಬದಲಾವಣೆ ಮಾಡಿ ತೋರಿಸಲು ಸಾಧ್ಯ. ಹೀಗಾಗಿಯೇ ಬಿಜೆಪಿಯು ಬೇರೆ ಕಡೆಗಳಲ್ಲಿ ಕುದುರೆ ವ್ಯಾಪಾರ ಹಾಗೂ ‘ಆಪರೇಶನ್ ಕಮಲ’ ಎಂಬ ರಾಜಕೀಯ ಅನೈತಿಕತೆಯನ್ನು ಪ್ರೋತ್ಸಾಹಿಸಿದ ಇತಿಹಾಸ ದೆಹಲಿಯಲ್ಲಿ ತಾನು ಸರ್ಕಾರ ರಚಿಸುವುದಿಲ್ಲ ಹಾಗೂ ಕುದುರೆ ವ್ಯಾಪಾರ ಮಾಡುವುದಿಲ್ಲ ಎಂದು ಹೇಳಿಕೊಳ್ಳುತ್ತಿದೆ. ಹೀಗೆ ಹೇಳುವ ಅನಿವಾರ್ಯತೆಗೆ ಸಿಲುಕಲು ಕಾರಣವಾಗಿರುವುದು ಆಮ್ ಆದ್ಮಿ ಪಕ್ಷದ ನೈತಿಕ ಹಾಗೂ ಮೌಲ್ಯಾಧಾರಿತ ರಾಜಕೀಯದ ದೃಢ ನಿಲುವು. ಕುದುರೆ ವ್ಯಾಪಾರಕ್ಕೆ ಆಮ್ ಆದ್ಮಿ ಪಕ್ಷದ ಗೆದ್ದ ಅಭ್ಯರ್ಥಿಗಳು ಬಗ್ಗುವುದಿಲ್ಲ ಎಂದಾದ ನಂತರ ವಿಷಯಾಧಾರಿತ ಮೈತ್ರಿಯ ಮಾತನ್ನು ಬಿಜೆಪಿ ಪರೋಕ್ಷವಾಗಿ ಕಿರಣ್ ಬೇಡಿಯ ಮೂಲಕ ತೇಲಿ ಬಿಟ್ಟಿದೆ. ಇದಕ್ಕೆ ಕಾರಣವೂ ಇದೆ. ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ದೆಹಲಿಯಿಂದ ಹೊರಗೆ ನಗರ ಪ್ರದೇಶಗಳಲ್ಲಿ ಆಮ್ ಆದ್ಮಿ ಪಕ್ಷವು ಸ್ಪರ್ಧಿಸಿದರೆ ದೆಹಲಿಯಲ್ಲಿ ಆದಂತೆ ಮತದಾರರಿಗೆ ಮೂರನೆಯ ಪರ್ಯಾಯವೊಂದು ದೊರಕಿ ಮೋದಿಗೆ ಬರುವ ಮತಗಳಿಗೆ ಪೆಟ್ಟು ಬೀಳಬಹುದು ಎಂಬ ಚಿಂತೆಯೇ ಇಂಥ ಮೈತ್ರಿಯ ಮಾತು ಆಡಲು ಕಾರಣ. ಆದರೆ ಪ್ರತಿಭಾವಂತರೂ, ಚಿಂತನಶೀಲರೂ, ರಾಜಕೀಯದಲ್ಲಿ ಸಂದರ್ಭಕ್ಕೆ ತಕ್ಕ ದೃಢ ನಿರ್ಧಾರ ತೆಗೆದುಕೊಳ್ಳುವ ವಿವೇಕ ಹೊಂದಿರುವ ಕೇಜ್ರಿವಾಲರು ಇಂಥ ಮೈತ್ರಿಯನ್ನು ತಳ್ಳಿಹಾಕಿದ್ದಾರೆ. ರಕ್ತಪಾತ ಹಾಗೂ ಧಾರ್ಮಿಕ ವಿಷಯಗಳಲ್ಲಿ ಜನರನ್ನು ಕೆರಳಿಸಿಯೇ ದೇಶದಲ್ಲಿ ಕ್ಷಿಪ್ರವಾಗಿ ಬೆಳೆದ ಪ್ರತಿಗಾಮಿ ರಾಜಕೀಯ ಪಕ್ಷವಾದ ಬಿಜೆಪಿಯ ಕಳಂಕಿತ ಹಾಗೂ ಭ್ರಷ್ಟ ಇತಿಹಾಸದ ಅರಿವು ಇರುವ ಕೇಜ್ರಿವಾಲರು ಕಾಂಗ್ರೆಸ್ಸನ್ನು ದೂರ ಇರಿಸಿದಂತೆ ಬಿಜೆಪಿಯನ್ನು ದೂರ ಇರಿಸುವ ನಿರ್ಧಾರ ಮಾಡಿ ಗಟ್ಟಿ ನಿಲುವು ತಳೆದಿರುವುದು ಭಾರತದ ಭವಿಷ್ಯದ ದೃಷ್ಟಿಯಿಂದ ಹಾಗೂ ಮೌಲ್ಯಾಧಾರಿತ ನೈತಿಕ ರಾಜಕೀಯವನ್ನು ಬೆಳೆಸುವ ದೃಷ್ಟಿಯಿಂದ ಅತ್ಯಂತ ಸೂಕ್ತವೇ ಆಗಿದೆ.

ಬಿಜೆಪಿ ಪಕ್ಷ ಹಾಗೂ ಅದರ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಇಬ್ಬರೂ ಕೇಜ್ರಿವಾಲ್ anna-kejriwalಅಣ್ಣಾ ಹಜಾರೆಯವರಿಗೆ ಬೆನ್ನಿಗೆ ಚೂರಿ ಹಾಕಿ ನಂಬಿಕೆದ್ರೋಹ ಮಾಡಿದ್ದಾರೆ ಎಂದು ಅಪಪ್ರಚಾರದಲ್ಲಿ ತೊಡಗಿರುವುದು ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ತಮಗೆ ನಿರಾಯಾಸವಾಗಿ ದೊರೆಯಬಹುದಾದ ನಗರಗಳ ಮಧ್ಯಮ ವರ್ಗಗಳ ಮತ ಆಮ್ ಆದ್ಮಿ ಪಕ್ಷಕ್ಕೆ ಹೋಗಬಹುದು ಎಂಬ ಭೀತಿಯಿಂದಲೇ ಎಂಬುದು ಕಂಡುಬರುತ್ತದೆ. ಅಣ್ಣಾ ಹಜಾರೆಯವರಿಗೆ ಕೇಜ್ರಿವಾಲ್ ದ್ರೋಹ ಬಗೆದಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂಬುದು ದೆಹಲಿ ಚುನಾವಣಾ ಫಲಿತಾಂಶದಿಂದ ಸಾಬೀತಾಗಿದೆ. ಅಣ್ಣಾ ಅವರ ಸತ್ಯಾಗ್ರಹದ ಹಾದಿ ವಿಫಲವಾದ ನಂತರವಷ್ಟೇ ಕೇಜ್ರಿವಾಲ್ ರಾಜಕೀಯ ಹೋರಾಟದ ನಿರ್ಣಯ ತೆಗೆದುಕೊಂಡಿರುವ ಕಾರಣ ಕೇಜ್ರಿವಾಲ್ ಅಣ್ಣಾ ಹಜಾರೆಗೆ ಮೋಸ ಮಾಡಿದರು ಎಂಬ ಮಾತು ಅರ್ಥಹೀನ ಹಾಗೂ ರಾಜಕೀಯ ದುರುದ್ಧೇಶದಿಂದ ಕೂಡಿದೆ ಎಂಬುದು ಕಂಡುಬರುತ್ತದೆ. ಅಣ್ಣಾ ಹಜಾರೆಯವರು ಪಕ್ಷರಹಿತ ರಾಜಕೀಯದ ಮಾತಾಡುತ್ತಾರೆ ಆದರೆ ಅದು ಸಾಧ್ಯವಾಗದು. ಪಕ್ಷರಹಿತ ಪ್ರಜಾಪ್ರಭುತ್ವ ವ್ಯವಸ್ಥೆ ಯಾವ ದೇಶದಲ್ಲಿಯೂ ಇಲ್ಲ. ಅಣ್ಣಾ ಹಜಾರೆಯವರಿಗೆ ಸ್ಪಷ್ಟವಾದ ರಾಜಕೀಯ ಚಿಂತನೆ ಇಲ್ಲ. ಪಕ್ಷ ರಾಜಕೀಯ ಸಂವಿಧಾನಬಾಹಿರ ಎಂಬ ಅಣ್ಣಾ ಹಜಾರೆ ಮಾತಿನಲ್ಲಿ ಹುರುಳಿಲ್ಲ ಏಕೆಂದರೆ ಸ್ವತಃ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರೇ ರಾಜಕೀಯ ಪಕ್ಷ ಕಟ್ಟಿದ್ದರು. ಅಧ್ಯಕ್ಷೀಯ ಪದ್ಧತಿಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ ರಾಜಕೀಯ ಪಕ್ಷಗಳು ಇರುತ್ತವೆ. ಪಕ್ಷರಹಿತ ವ್ಯವಸ್ಥೆ ಇದ್ದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆ ಆಗುವುದಿಲ್ಲ, ಅದು ರಾಜಪ್ರಭುತ್ವವಷ್ಟೇ ಆದೀತು. ಸಮಾನ ಚಿಂತನೆ, ಕಾರ್ಯಕ್ರಮ ಇರುವವರು ಒಟ್ಟಿಗೆ ಸೇರಿ ಜನರನ್ನು ಸಂಘಟಿಸಿ ಕೆಲಸ ಮಾಡಲು ರಾಜಕೀಯ ಪಕ್ಷಗಳು ಇರಲೇಬೇಕಾಗುತ್ತದೆ. ಪಕ್ಷ ರಹಿತ ರಾಜಕೀಯ ವ್ಯವಸ್ಥೆ ಕಟ್ಟುವುದು ಸಾಧ್ಯವಿಲ್ಲ. ಹೀಗಾಗಿ ಹಜಾರೆಯವರ ಚಿಂತನೆಗಳು ಎಡಬಿಡಂಗಿ ಚಿಂತನೆಗಳಲ್ಲದೆ ಬೇರೇನೂ ಅಲ್ಲ. ಅಣ್ಣಾ ಹಾಗೂ ಇತರರು ರಾಜಕೀಯ ಪಕ್ಷ ಕಟ್ಟಿ ಹೋರಾಡುವ ಪ್ರಯತ್ನಕ್ಕೆ ಬೆಂಬಲ ಕೊಟ್ಟಿದ್ದರೆ ದೆಹಲಿಯಲ್ಲಿ ಮೂರನೇ ಎರಡು ಬಹುಮತ ಪಡೆಯಲು ಸಾಧ್ಯವಿತ್ತು. ಅಣ್ಣಾ ಹಾಗೂ ಇತರರ ಅಸಹಕಾರದಿಂದ ಅಂಥ ಸುವರ್ಣ ಅವಕಾಶವೊಂದು ಕಳೆದುಹೋಯಿತು ಎಂದರೆ ತಪ್ಪಾಗಲಾರದು.

ಅಣ್ಣಾ ಹಜಾರೆಯವರ ಉಪವಾಸ ಸತ್ಯಾಗ್ರಹದಿಂದ ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ anna-hazareಮೂಡಿದರೂ ಆಳುವ ಪಟ್ಟಭದ್ರ ಹಿತಾಸಕ್ತಿಗಳು ಉಪವಾಸ ಸತ್ಯಾಗ್ರಹವನ್ನು ಕುಟಿಲ ತಂತ್ರಗಳ ಮೂಲಕ ನಿಲ್ಲಿಸುವಲ್ಲಿ ಯಶಸ್ವಿಯಾಗುತ್ತಾರೆ. ಒಂದೋ ಅವರು ಆಶ್ವಾಸನೆ ನೀಡಿ ಕಾಲಹರಣ ಮಾಡುತ್ತಾರೆ ಅಥವಾ ಕಣ್ಣೊರೆಸುವ ದುರ್ಬಲ ಹಾಗೂ ಹಲ್ಲು ಕಿತ್ತ ಹಾವಿನಂಥ ಮಸೂದೆಯನ್ನು ತಂದು ಹೋರಾಟವನ್ನು ಶಮನಗೊಳಿಸುತ್ತಾರೆ ಅಥವಾ ಕಾನೂನು ಮತ್ತು ಸುವ್ಯವಸ್ಥೆಯ ಕಾರಣ ನೀಡಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವವರನ್ನು ಬಲತ್ಕಾರವಾಗಿ ಆಸ್ಪತ್ರೆಗೆ ಸೇರಿಸಿ ನಳಿಕೆಯ ಮೂಲಕ ಆಹಾರ ನೀಡಿ ಕೊನೆಗೊಳಿಸುತ್ತಾರೆ. ಸರಕಾರ ಹೀಗೆ ಮಾಡಿದರೆ ಉಪವಾಸ ಸತ್ಯಾಗ್ರಹ ತನ್ನ ಗುರಿ ಮುಟ್ಟಲು ಸಾಧ್ಯವಿಲ್ಲ. ಹೀಗಾಗಿ ಉತ್ತಮ ಹಾಗೂ ಸಶಕ್ತ ಕಾಯಿದೆ ತರಬೇಕಾದರೆ ರಾಜಕೀಯ ವ್ಯವಸ್ಥೆಯ ಒಳಗೆ ಇಳಿದು ಸಂಸತ್ತಿಗೆ ಜನರಿಂದ ಆಯ್ಕೆಯಾಗಿ ಹೋಗಿ ಶಾಸನಗಳನ್ನು ರೂಪಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಿಯಾದ ಹಾದಿ. ಇದು ಅಣ್ಣಾ ಹಜಾರೆ ಹಾಗೂ ಇತರರಿಗೆ ಅರ್ಥವಾಗದೆ ಇರುವುದು ಶೋಚನೀಯ.

ಕೇಜ್ರಿವಾಲ್ ಹಾಗೂ ಸಂಗಡಿಗರು ರೂಪಿಸಿದ ಆಮ್ ಆದ್ಮಿ ಪಕ್ಷ ಬೇರೆ ರಾಜಕೀಯ ಪಕ್ಷಗಳಲ್ಲಿ ಇಲ್ಲದ ಆಂತರಿಕ ಲೋಕಪಾಲ್ ವ್ಯವಸ್ಥೆಯನ್ನು ಹೊಂದಿರುವುದು ಪಕ್ಷದ ಒಳಗಿನ ವ್ಯಕ್ತಿಗಳು ತಪ್ಪು ಮಾಡುವುದನ್ನು ತಡೆಯಲು ಒಂದು ಉತ್ತಮ ವ್ಯವಸ್ಥೆಯಾಗಿದೆ. ಈ ಆಂತರಿಕ ಲೋಕಪಾಲಕ್ಕೆ ನಿಷ್ಪಕ್ಷಪಾತ ಹಾಗೂ ನ್ಯಾಯವನ್ನು ಎತ್ತಿ ಹಿಡಿಯುವ ವ್ಯಕ್ತಿಗಳನ್ನು ಆಯ್ಕೆ ಮಾಡುವ ಮೂಲಕ ಪಕ್ಷದ ಒಳಗೆ ತಪ್ಪುಗಳು ಆಗುವುದನ್ನು ಸಾಕಷ್ಟು ತಡೆಗಟ್ಟಬಹುದು. ಅಧಿಕಾರಕ್ಕೆ ಬಂದ ನಂತರ ರಾಜಕೀಯ ಧುರೀಣರು ತಪ್ಪು ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಧಿಕಾರ ಬಂದ ನಂತರ ಸರಳವಾಗಿದ್ದ ಜನರು ವೈಭೋಗದ ಜೀವನಕ್ಕೆ ಮರುಳಾಗಿ ಬೂರ್ಜ್ವಾ ಆಗಿ ಪರಿವರ್ತನೆಯಾಗುವುದನ್ನು ನಾವು ಸಾಕಷ್ಟು ಕಾಣುತ್ತಿದ್ದೇವೆ. ಅತ್ಯಂತ ತತ್ವಬದ್ಧ ಜನರೂ ಒಮ್ಮೆ ಪಕ್ಷ ಅಧಿಕಾರಕ್ಕೆ ಬಂದ ನಂತರ ಇತರ ಅಸ್ತಿತ್ವದಲ್ಲಿರುವ ರಾಜಕೀಯ ಪಕ್ಷಗಳಲ್ಲಿ ಇರುವಂತೆಯೇ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಜಾತಿ, ಕೋಮುಗಳ ಓಲೈಕೆ, ಸಿದ್ಧಾಂತಗಳನ್ನು ಗಾಳಿಗೆ ತೂರುವುದನ್ನು ಮಾಡುವುದನ್ನು ತಡೆಯಲು ಇಂಥ ಆಂತರಿಕ ಲೋಕಪಾಲ್ ವ್ಯವಸ್ಥೆ ಕಡಿವಾಣ ಹಾಕಬಲ್ಲದು. ಈ ನಿಟ್ಟಿನಲ್ಲಿ arvind-kejriwal-campaigningಆಮ್ ಆದ್ಮಿ ಪಕ್ಷ ಇತರ ಪಕ್ಷಗಳಿಗಿಂತ ಭಿನ್ನ ಎಂದು ಕಂಡುಬರುತ್ತದೆ. ಅಲ್ಲದೆ ಚುನಾವಣೆ ಎದುರಿಸಲು ಹಾಗೂ ಪಕ್ಷ ಕಟ್ಟಲು ಜನರಿಂದಲೇ ಹನಿಗೂಡಿ ಹಳ್ಳ ಎಂಬ ರೀತಿಯಲ್ಲಿ ನ್ಯಾಯಯುತ ಮಾರ್ಗದಲ್ಲಿ ದೇಣಿಗೆ ಪಡೆಯುವ ಮತ್ತು ಅದನ್ನು ಪಾರದರ್ಶಕವಾಗಿ ತನ್ನ ವೆಬ್ ಸೈಟಿನಲ್ಲಿ ಪ್ರಕಟಿಸುವ ಮೂಲಕ ಇದು ತಾನು ಭಿನ್ನ ಎಂದು ತೋರಿಸಿಕೊಂಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುವ ರಾಜಕೀಯ ಪಕ್ಷಗಳು ಬಂಡವಾಳಶಾಹಿಗಳಿಂದ ಗುಪ್ತ ಶರತ್ತುಗಳಿಗೆ ಮಣಿದು ಪಡೆಯುವ ಹಣವೇ ಎಲ್ಲ ಭ್ರಷ್ಟಾಚಾರಗಳ ತಾಯಿಯಾಗಿರುವ ಕಾರಣ ಅದನ್ನು ನಿವಾರಿಸಿದ ಆಮ್ ಆದ್ಮಿ ಪಕ್ಷ ದೇಶಕ್ಕೆ ಒಳಿತು ಮಾಡುವ ಸಾಧ್ಯತೆ ಸ್ಪಷ್ಟವಾಗಿ ಕಂಡುಬರುತ್ತದೆ. ಇದು ಮಾತ್ರವಲ್ಲದೆ ಕೆಲಸ ಮಾಡದ ಜನಪ್ರತಿನಿಧಿಗಳನ್ನು ವಾಪಸ್ ಕರೆಸಿಕೊಳ್ಳುವ ಹಕ್ಕು, ಯೋಗ್ಯ ಅಭ್ಯರ್ಥಿಗಳು ಕಣದಲ್ಲಿ ಇಲ್ಲದೆ ಇದ್ದರೆ ‘ಯಾರಿಗೂ ಇಲ್ಲ’ ಎಂಬ ಮತವನ್ನು ನೀಡುವ ಹಾಗೂ ಹಾಗೆ ಯಾರಿಗೂ ಇಲ್ಲ ಎಂಬ ಮತಗಳು ಗೆದ್ದ ಅಭ್ಯರ್ಥಿಯು ಪಡೆದ ಮತಗಳಿಗಿಂತ ಹೆಚ್ಚಾದರೆ ಪುನಃ ಚುನಾವಣೆ ನಡೆಸುವ ವ್ಯವಸ್ಥೆ, ನ್ಯಾಯಾಂಗ ಸುಧಾರಣೆ, ಚುನಾವಣಾ ಸುಧಾರಣೆ ಇತ್ಯಾದಿ ಕ್ರಾಂತಿಕಾರಕ ಸುಧಾರಣೆಗಳನ್ನು ತರುವ ಬದ್ಧತೆಯನ್ನು ತೋರಿಸುವ ಮಾತನ್ನು ಹೇಳುತ್ತಿದೆ. ಇವೆಲ್ಲಾ ಜಾರಿಗೆ ಬಂದರೆ ಪ್ರಜಾಪ್ರಭುತ್ವ ವ್ಯವಸ್ಥೆ ಕ್ರಾಂತಿಕಾರಕವಾಗಿ ಸುಧಾರಣೆಯಾಗುವುದರಲ್ಲಿ ಸಂದೇಹವೇ ಇಲ್ಲ. ಹೀಗಾಗಿ ಈ ಪಕ್ಷವನ್ನು ದೇಶಾದ್ಯಂತ ಯುವಜನ ಬೆಳೆಸಬೇಕಾಗಿರುವುದು ಇಂದಿನ ಅಗತ್ಯವಾಗಿದೆ.

ಜನ ಅಧ್ಯಾತ್ಮ ಎಂದು ತಮ್ಮ ಸ್ವಾರ್ಥ ಸಾಧನೆಯ ವೈಯಕ್ತಿಕ ನಿರರ್ಥಕ ಹಾದಿಯಲ್ಲಿ ಹೋಗುವ ಬದಲು ದೇಶದ ಹಾಗೂ ಜನರ ಪರಿಸ್ಥಿತಿ ಸುಧಾರಣೆಗೆ ತೊಡಗುವುದು ಹೆಚ್ಚು ಸಾರ್ಥಕ ಹಾದಿಯಾಗಿದೆ. ದೇವರು ದಿಂಡರು ಎಂದು ದೇವಸ್ಥಾನಗಳಿಗೆ ಕಾಣಿಕೆ ಹಾಕುವ ಬದಲು ಪ್ರಜಾಪ್ರಭುತ್ವ ವ್ಯವಸ್ಥೆಯ ಸುಧಾರಣೆಗೆ ಶ್ರಮಿಸುವ ಸಲುವಾಗಿ ಆಮ್ ಆದ್ಮಿಯಂಥ ಪಕ್ಷಗಳಿಗೆ ದೇಣಿಗೆ ನೀಡುವುದರಲ್ಲಿ ದೇಶದ ಹಿತ ಹಾಗೂ ಜನಸಾಮಾನ್ಯರ ಹಿತ ಅಡಗಿದೆ. Arvind_Kejriwal_party_launchವಿದೇಶಗಳಿಗೆ ಹೋಗಿ ಕೋಟ್ಯಂತರ ಹಣ ಗಳಿಸಿರುವ ಭಾರತೀಯರು ಇದೀಗ ಭಾರತಕ್ಕೆ ಮರಳಿ ದೇಶಸೇವೆಗೆ ಸಜ್ಜಾಗಬೇಕಾಗಿದೆ. ವಿದೇಶಗಳಿಗೆ ಹೋಗಿ ಹತ್ತಾರು ವರ್ಷ ದುಡಿದು ಕೋಟಿಗಟ್ಟಲೆ ಸಂಪಾದಿಸಿದ ಹಣವನ್ನು ಇಲ್ಲಿ ಬ್ಯಾಂಕುಗಳಲ್ಲಿ ನಿಗದಿತ ಠೇವಣಿ ಇರಿಸಿ ಅದರ ಬಡ್ಡಿಯಿಂದಲೇ ಉತ್ತಮ ಮಧ್ಯಮ ವರ್ಗದ ಜೀವನ ತೆಗೆಯಲು ಹಾಗೂ ತಮ್ಮ ಸಮಯವನ್ನು ದೇಶಸೇವೆಗೆ ಮೀಸಲಿಡಲು ಅನಿವಾಸಿ ಭಾರತೀಯರಿಗೆ ಸಾಧ್ಯವಿದೆ. ಈ ರೀತಿ ವಿದೇಶಗಳಿಂದ ಆದರ್ಶವಾದಿ ಭಾರತೀಯರನ್ನು ಭಾರತದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಆಮ್ ಆದ್ಮಿ ಪಕ್ಷವು ಪ್ರೇರೇಪಿಸಿದರೆ ಪಕ್ಷದ ಯಶಸ್ವೀ ಬೆಳವಣಿಗೆಗೆ ಸಹಾಯವಾಗಬಹುದು. ಇದು ಇಂದು ಆಗಬೇಕಾಗಿರುವ ಕಾರ್ಯ.

ಭಾರತದ ಮಾಧ್ಯಮಗಳು ಯಾವುದೇ ಆದರ್ಶ ಹಾಗೂ ನೈತಿಕ ಹಾಗೂ ಮೌಲ್ಯಾಧಾರಿತ ರಾಜಕೀಯವನ್ನು ದೇಶದಲ್ಲಿ ಬೆಳೆಸುವಲ್ಲಿ ಮುಂದೆ ಬರುವುದಿಲ್ಲ ಹಾಗೂ ಹಾಗೆ ನಿಸ್ವಾರ್ಥವಾಗಿ ಮುಂದೆ ಬರುವವರಿಗೂ ಪ್ರೋತ್ಸಾಹ ನೀಡುವುದಿಲ್ಲ ಎಂಬುದು ಆಮ್ ಆದ್ಮಿ ಪಕ್ಷದ ವಿಷಯದಲ್ಲಿ ನಿಜವಾಗಿದೆ. ಹೀಗಾಗಿ ಇಂದು ಹೊಸ ಆದರ್ಶ ಹಾಗೂ ಮೌಲ್ಯಾಧಾರಿತ ರಾಜಕೀಯ ಪಕ್ಷವನ್ನು ದೇಶಾಧ್ಯಂತ ಕಟ್ಟುವುದು ಬಹಳ ಸಮಯವನ್ನು ಹಾಗೂ ಶ್ರಮವನ್ನು ಬೇಡುತ್ತದೆ. ಮಾಧ್ಯಮಗಳ ಅಸಹಕಾರದ ನಡುವೆಯೂ ಇಂಥ ಒಂದು ಕಾರ್ಯ ಸಾಧ್ಯ ಎಂದು ಆಮ್ ಆದ್ಮಿ ಪಕ್ಷ ಮಾಡಿ ತೋರಿಸಿದೆ. ಆಮ್ ಆದ್ಮಿ ಪಕ್ಷದ ಈ ಸಾಧನೆಯ ಹಾದಿಯಲ್ಲಿ ಅಂತರ್ಜಾಲ ಮಾಧ್ಯಮವು ಜನರ ಸಂಪರ್ಕ ಸೇತುವಾಗಿ ಮಹತ್ವದ ಕಾಣಿಕೆ ನೀಡಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ದೈತ್ಯ ದೃಶ್ಯಮಾಧ್ಯಮಗಳ ಅಪಪ್ರಚಾರವನ್ನು ಮೆಟ್ಟಿ ನಿಲ್ಲಲು ಅಂತರ್ಜಾಲ ಮಾಧ್ಯಮವು ಆಮ್ ಆದ್ಮಿ ಪಕ್ಷಕ್ಕೆ ಬಹಳಷ್ಟು ನೆರವಾಗಿದೆ. ಅಂತರ್ಜಾಲ ಇಲ್ಲದೆ ಹೋಗಿದ್ದರೆ ಪಟ್ಟಭದ್ರ ಹಿತಾಸಕ್ತಿ ಉಳ್ಳ ಬಂಡವಾಳಗಾರರು ಹಾಗೂ ರಾಜಕೀಯ ಶಕ್ತಿಗಳು ದೈತ್ಯ ದೃಶ್ಯ ಮಾಧ್ಯಮಗಳಲ್ಲಿ ನಡೆಸುವ ಅಪಪ್ರಚಾರವನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಮುಂಬರುವ ದಿನಗಳಲ್ಲಿ ಭಾರತದಲ್ಲಿ ಹೊಸ ರಾಜಕೀಯ ವ್ಯವಸ್ಥೆಯನ್ನು ಕಟ್ಟುವಲ್ಲಿಯೂ ಅಂತರ್ಜಾಲ ಮಾಧ್ಯಮ ಬಹಳ ಪ್ರಮುಖ ಪಾತ್ರ ವಹಿಸುವುದು ಖಚಿತ. ಆಮ್ ಆದ್ಮಿ ಪಕ್ಷವು ಸಾಧಿಸಲು ಅಸಾಧ್ಯವಾದ arvind-kejriwal-delhi-electionsಆಶ್ವಾಸನೆಗಳನ್ನು ನೀಡಲು ಹೋಗಲೇಬಾರದು. ಹೀಗೆ ಮಾಡಿದರೆ ಅದರ ವಿಶ್ವಾಸಾರ್ಹತೆಗೆ ಧಕ್ಕೆಯಾದೀತು. ಜನರಿಗೆ ಹೆಚ್ಚಿನ ಆಶ್ವಾಸನೆ ಬೇಕಾಗಿಲ್ಲ. ಜನರಿಗೆ ಬೇಕಾಗಿರುವುದು ಪ್ರಾಮಾಣಿಕ ಆಡಳಿತ ನೀಡುವ ವಿಶ್ವಾಸಾರ್ಹ ಜನ. ಅಷ್ಟನ್ನು ನೀಡಿದರೂ ಸಾಕು, ಕಾರ್ಯಸಾಧ್ಯವಲ್ಲದ ಆಶ್ವಾಸನೆಗಳನ್ನು ನೀಡಬೇಕಾದ ಅಗತ್ಯ ಇಲ್ಲ.

ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು ಇದುವರೆಗೆ ಭಾರತದಲ್ಲಿ ರೂಪುಗೊಂಡ ಪಕ್ಷಗಳಲ್ಲೇ ಉತ್ತಮವಾದ ಪಕ್ಷ ಎಂಬುದು ಅದರ ನಿಲುವುಗಳನ್ನು ನೋಡಿದರೆ ತಿಳಿಯುತ್ತದೆ. ಹೀಗಿದ್ದರೂ ಅದರ ಧ್ಯೆಯೋದ್ಧೇಶಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ನಮ್ಮ ಪ್ರಧಾನ ವಾಹಿನಿಯ ಮಾಧ್ಯಮಗಳು ಮಾಡಿಲ್ಲ, ಮಾಡುತ್ತಿಲ್ಲ. ಇದೇಕೆ ಹೀಗೆ? ಮಾಧ್ಯಮ ಕ್ಷೇತ್ರದ ತರುಣ್ ತೇಜಪಾಲ್ ತನ್ನ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಹೊರಗೆ ಬಂದಾಗ ಮಾಧ್ಯಮ ಕ್ಷೇತ್ರವನ್ನೂ ಒಳಗೊಂಡು ಎಲ್ಲ ಕ್ಷೇತ್ರಗಳ ಜನರೂ ಈ ಅತ್ಯಾಚಾರವನ್ನು ಖಂಡಿಸಿದರು. ಆದರೆ ಮಾಧ್ಯಮಗಳು ದಿನನಿತ್ಯ ಮೌಲ್ಯಗಳ ಮೇಲೆ ಎಸಗುತ್ತಿರುವ ಅತ್ಯಾಚಾರದ ಬಗ್ಗೆ ಯಾರೂ ಏಕೆ ಚಕಾರ ಎತ್ತುತ್ತಿಲ್ಲ. ಏಕೆ ಹೀಗೆ? ನೈತಿಕ ಹಾಗೂ ಮೌಲ್ಯಾಧಾರಿತ ರಾಜಕೀಯವನ್ನು ದೇಶದಲ್ಲಿ ಬೆಳೆಸಲು ಆಮ್ ಆದ್ಮಿ ಪಕ್ಷ ಅಪಾರ ಶ್ರಮ ಹಾಕಿ ದುಡಿಯುತ್ತಿರುವಾಗ ದೃಶ್ಯ ಮಾಧ್ಯಮಗಳು ಆಮ್ ಆದ್ಮಿ ಪಕ್ಷದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿಕೊಂಡದ್ದೂ ಕಂಡುಬಂತು. ಪ್ರಾಮಾಣಿಕವಾಗಿ ದೇಶಕ್ಕಾಗಿ ದುಡಿಯುತ್ತಿರುವ ಆಮ್ ಆದ್ಮಿ ಪಕ್ಷದ ಮೇಲೆ ಅಪಪ್ರಚಾರ ಮಾಡುವುದು ಮಾಧ್ಯಮ ಕ್ಷೇತ್ರದ ಮೌಲ್ಯಗಳ ಮೇಲೆ ನಡೆಸಿದ ಅತ್ಯಾಚಾರವಲ್ಲವೇ ಎಂಬ ಬಗ್ಗೆ ಮಾಧ್ಯಮಗಳ ಮಂದಿ ಯೋಚಿಸದಿದ್ದರೆ ಇನ್ನು ಯಾರು ಯೋಚಿಸಬೇಕು? ಮಾಧ್ಯಮ ಕ್ಷೇತ್ರದ ದೊರೆಗಳು ಈ ಬಗ್ಗೆ ಯೋಚಿಸಬೇಕಾದ ಅಗತ್ಯ ಇಂದು ಇದೆ. ಮೋದಿಗೆ ದೃಶ್ಯ ಮಾಧ್ಯಮ ಕ್ಷೇತ್ರದಲ್ಲಿ ದೊರಕಿದ ಪ್ರಚಾರದ ನೂರರಲ್ಲಿ ಒಂದು ಪಾಲು ಕೂಡ ಆಮ್ ಆದ್ಮಿ ಪಕ್ಷಕ್ಕೆ ದೊರೆಯಲಿಲ್ಲ. ಇದೂ ಕೂಡ ಮಾಧ್ಯಮ ಕ್ಷೇತ್ರದ ಮಂದಿ ಮೌಲ್ಯಗಳ ಮೇಲೆ ಮಾಡುತ್ತಿರುವ ಅತ್ಯಾಚಾರವೇ ಸರಿ. ಇದರ ಬಗ್ಗೆಯೂ ಮಾಧ್ಯಮಗಳಲ್ಲಿ ಚರ್ಚೆ ಆಗಲಿ.

6 thoughts on “ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸಾಧನೆ – ದೇಶಕ್ಕೆ ಹೊಸ ಸಂದೇಶ ನೀಡುವಲ್ಲಿ ಯಶಸ್ವಿ

  1. Srini

    AAP has sent some standards…..very happy to see they routing corrupt congress. AK is true role model, hope he maintains his sincerity and values. Any contribution from AAP to rout UPA from next general election is fantastic.

    Also, BJP performance in MP, RJ was stupendous. Way to go BJP.

    Reply
  2. ರವಿಕಾಂತ್ , ಬಳ್ಳಾರಿ

    ನಾಲ್ಕು ರಾಜ್ಯಗಳ ಫಲಿತಾಂಶ ಬಂದ ಬಳಿಕ, ವರ್ತಮಾನದ ಲೇಖಕರು ಸೇರಿದಂತೆ ಒಂದಿಷ್ಟು ಮಂದಿ ಬರಹ ನಿಲ್ಲಿಸಿ, ರಜೆ ಮೇಲೆ ತೆರಳುತ್ತಾರೆ, ಬಿಜೆಪಿ ಗೆಲುವು ಆ ರೀತಿ ಮಾಡುತ್ತದೆ ನೋಡ್ತಾ ಇರ್ರಿ ಎಂದು ಗೆಳೆಯರೊಬ್ಬರು ಗೇಲಿ ಮಾಡಿದ್ದರು. ತಡವಾಗಿಯಾದರೂ-ಆ ಚುನಾವಣೆಗಳ ಫಲಿತಾಂಶ ಕುರಿತು ಬರಹಕ್ಕೆ ಇಳಿದಿದ್ದೀರಿ, ಎಂದಿನಂತೆ ಬಿಜೆಪಿಯೊಂದಿಗೆ ಹೋಲಿಸಿ, ಕೇಜ್ರಿವಾಲ್ ಬೆನ್ನು ತಟ್ಟುತ್ತಲೇ ಬಿಜೆಪಿಯನ್ನು ತೆಗಳಿದ್ದೀರಿ. ಮೂರನೇ ಸ್ಥಾನಕ್ಕೆ ಹೋಗಿರುವ ಕಾಂಗ್ರೆಸ್ ಬಗ್ಗೆ ಸೊಲ್ಲೇ ಇಲ್ಲ !
    ಅದೇನೆ ಇರಲಿ, ನಿಜವಾಗಿಯೂ ಕೇಜ್ರಿವಾಲ್ ಅವರಿಂದ ಪಾಠ ಕಲಿಯಲೇ ಬೇಕು ಎಂದಿದ್ದರೆ, ಅದು ಬೇರೆ ಇನ್ಯಾರು ಅಲ್ಲ. ಮೊದಲು ನೀವುಗಳೇ ಕಲಿಯಬೇಕು ! ಹಜಾರೆ ಮತ್ತು ಕೇಜ್ರಿವಾಲ್ ತಂಡ ದಿಲ್ಲಿಯಲ್ಲಿ ಭ್ರಷ್ಟಾಚಾರದ ವಿರುದ್ಧ, ಲೋಕಪಾಲ್ಗೆ ಆಗ್ರಹಿಸಿ ಹೋರಾಟಕ್ಕೆ ಇಳಿದಾಗ, ಬಹಳಷ್ಟು ಮೂಗು ಮುರಿದವರು ಕಾಂಗ್ರೆಸ್ಸಿಗರು ಅಲ್ಲ, ಬಿಜೆಪಿಯವರು ಅಲ್ಲ. ಅದು ನೀವೆ. ಈ ತಂಡದಲ್ಲಿ ಬ್ರಾಹ್ಮರಿಲ್ಲ, ಒಕ್ಕಲಿಗರಲಿಲ್ಲ, ಅಲ್ಪಸಂಖ್ಯಾತರಿಲ್ಲ ಎಂದು ಜಾತ್ಯತೀತ ಮೂಲಭೂತವಾದಿತನವನ್ನು ಪ್ರದರ್ಶಿಸಿದರು. ಬಳಿಕ ಪ್ರತಿಭಟನೆ ಮಾಡುತ್ತಿರುವರೆಲ್ಲರೂ, ದಿಲ್ಲಿಯ ಮಧ್ಯಮ ವರ್ಗದವರು, ಅವರಿಗೆ ಸಂಕಟದ ಅರಿವಿಲ್ಲ, ಬಡವರ ಬಗ್ಗೆ ಕಾಳಜಿ ಇಲ್ಲ, ರೈತರು ಯಾರೆಂಬುದನ್ನು ಗೊತ್ತೇ ಇಲ್ಲ. ಇಷ್ಟು ಮಂದಿಗೆ ಏನೂ ಮಾಡಲು ಸಾಧ್ಯವೇ ಇಲ್ಲ ಎಂದು ಪುಂಖಾನುಪುಂಖವಾಗಿ ಬರೆದಿರಿ. ಈಗ ಅದೇ ಕೇಜ್ರಿವಾಲ್ಗೆ ತುತ್ತೂರಿ ಹಿಡಿಯುತ್ತಿದ್ದೀರಿ, ಜತೆಗೆ ಒಂದಷ್ಟು ಸಲಹೆ ಬೇರೆ.
    ಆ ವರ್ಗ- ಈ ವರ್ಗ ಎಂದೆನಿಸದೇ, ಬಿಜಎಪಿ ಭ್ರಷ್ಟಾಚಾರಕ್ಕಿಂತ ಕಾಂಗ್ರೆಸ್ ಭ್ರಷ್ಟಾಚಾರ ಎಸ್ಟೋ ವಾಸಿ- ಎಡಬಿಡಂಗಿತನ ಬಿಟ್ಟು, ಹೋರಾಟ ನಡೆಸಿ, ಪ್ರಾಮಾಣಿವಾಗ ಬರೆಯಿರಿ. ಆಗ ಜನ ನಂಬುತ್ತಾರೆ ಮತ್ತು ನೀವು ಯಾರೇ ಗೆದ್ದರೂ, ಸೋತರು ಧೈರ್ಯವಾಗಿ ಮಾತನಾಡುವ ನೈತಿಕತೆ ಬರುತ್ತದೆ. ಇಲ್ಲದಿದ್ದರೆ ಈಗಿನಂತೆ, ಏನು ಬರೆಯಬೇಕೆಂದು ಯೋಚಸಬೇಕಾಗುತ್ತದೆ.
    ರವಿಕಾಂತ್, ಬಳ್ಳಾರಿ

    Reply
  3. Ananda Prasad

    ವರ್ತಮಾನವು ಸ್ಪಷ್ಟವಾದ ಜನಪರವಾದ, ಪ್ರಗತಿಪರವಾದ, ಪ್ರಜಾಪ್ರಭುತ್ವವನ್ನು ಬಲಪಡಿಸುವಂಥ ಬರಹಗಳನ್ನು ಪ್ರಕಟಿಸುತ್ತಾ ಬಂದಿದೆ. ಇದು ಪ್ರತಿಗಾಮಿ ನಿಲುವಿನ ಜನರಿಗೆ ನುಂಗಲಾರದ ತುತ್ತಾಗಿರಬಹುದು ಏಕೆಂದರೆ ಸಾಂಪ್ರದಾಯಿಕವಾದ ಮುಖ್ಯವಾಹಿನಿಯ ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಪ್ರಕಟವಾಗದಂಥ ಪ್ರಗತಿಪರ, ಪ್ರಜಾಪ್ರಭುತ್ವವಾದಿ ಬರಹಗಳು ಇಲ್ಲಿ ಹಿಂಜರಿಕೆಯಿಲ್ಲದೆ ಪ್ರಕಟವಾಗುತ್ತವೆ. ಸಹಜವಾಗಿಯೇ ಪ್ರಗತಿಪರ ನಿಲುವಿಗೆ ಪ್ರಧಾನ ವಿರೋಧಿಯಾದ ಬಿಜೆಪಿ ಹಾಗೂ ಸಂಘ ಪರಿವಾರದ ಕುರಿತಾದ ಟೀಕೆಗಳು ಇಲ್ಲಿ ಪ್ರಕಟವಾಗಿವೆ. ಪ್ರಗತಿಪರರು ತಮ್ಮ ಪ್ರಧಾನ ವಿರೋಧಿಯಾಗಿ ಬಿಜೆಪಿ ಹಾಗೂ ಸಂಘ ಪರಿವಾರವನ್ನು ಗುರುತಿಸಿದ್ದಾರೆ. ಹೀಗಾಗಿ ಅವುಗಳ ಕುರಿತಾಗಿಯೇ ಪ್ರಜಾಪ್ರಭುತ್ವದ ಬಗ್ಗೆ ಕಾಳಜಿ ಉಳ್ಳವರು ಹೆಚ್ಚಿನ ಎಚ್ಚರ ವಹಿಸಬೇಕಾಗುತ್ತದೆ. ಅದನ್ನು ವರ್ತಮಾನ ವಹಿಸಿದೆ. ಅಣ್ಣಾ ಹಜಾರೆಯವರ ಉಪವಾಸ ಸತ್ಯಾಗ್ರಹವನ್ನೂ ಈ ದೃಷ್ಟಿಯಿಂದಲೇ ನೋಡಲಾಗಿದೆ. ಅಣ್ಣಾ ಹಜಾರೆಯವರ ಹೋರಾಟಕ್ಕೆ ಬಂಡವಾಳಶಾಹಿ ಮಾಧ್ಯಮಗಳು ಭಾರೀ ಪ್ರಚಾರ ಕೊಟ್ಟ ಕಾರಣ ಅದು ದೇಶದಲ್ಲಿ ಜನಜಾಗೃತಿ ಮೂಡಲು ಕಾರಣವಾಯಿತು. ಇಲ್ಲದಿದ್ದರೆ ಅಂಥ ಪರಿಣಾಮ ಆಗುತ್ತಿರಲಿಲ್ಲ. ಉದಾಹರಣೆಗೆ ಮಣಿಪುರದಲ್ಲಿ ಒಬ್ಬ ಮಹಿಳೆ ಹಲವು ವರ್ಷಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಲೇ ಇದ್ದಾರೆ, ಅವರನ್ನು ಸರ್ಕಾರ ಬಲವಂತವಾಗಿ ಆಸ್ಪತ್ರೆಗೆ ಸೇರಿಸಿ ನಳಿಕೆಯ ಮೂಲಕ ಆಹಾರ ಕೊಟ್ಟು ಬದುಕಿಸುತ್ತಾ ಇದ್ದಾರೆ. ಕೆಲವು ವರ್ಷಗಳಿಂದ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತಿದ್ದರೂ ಫಲಿತಾಂಶ ಶೂನ್ಯ.

    ಕೇಜ್ರಿವಾಲ್ ಉಪವಾಸ ಸತ್ಯಾಗ್ರಹ ಗುರಿ ತಲುಪಲು ವಿಫಲವಾದಾಗ ರಾಜಕೀಯ ಪಕ್ಷ ಕಟ್ಟುವ ನಿರ್ಧಾರ ಕೈಗೊಂಡಾಗ ನಾನು ಇದೇ ವರ್ತಮಾನದಲ್ಲಿಯೇ ಅದನ್ನು ಬೆಂಬಲಿಸಿ ಲೇಖನ ಬರೆದಿದ್ದೆ. ಹೀಗಾಗಿ ನಾನು ಆಗ ಬೆಂಬಲಿಸಲಿಲ್ಲ ಈಗ ಬೆಂಬಲಿಸುತ್ತಿದ್ದೇನೆ ಎನ್ನುವುದರಲ್ಲಿ ಹುರುಳಿಲ್ಲ. ಉಪವಾಸ ಸತ್ಯಾಗ್ರಹ ಗುರಿ ತಲುಪಲು ಯಶಸ್ವಿಯಾಗುವ ಸಾಧ್ಯತೆ ಕಡಿಮೆ. ಬಿಜೆಪಿ ಸರ್ಕಾರವು ಬಂದರೂ ಸಶಕ್ತ ಲೋಕಪಾಲ್ ಮಸೂದೆ ಬರುವ ಸಂಭವ ಇಲ್ಲ. ಅವರು ಭ್ರಷ್ಟಾಚಾರದ ವಿಷಯವನ್ನು ಅಧಿಕಾರದ ಗದ್ದುಗೆಗೆ ಏರುವ ಏಣಿಯಾಗಿ ಮಾತ್ರ ಬಳಸುತ್ತಾರೆ ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ. ನರೇಂದ್ರ ಮೋದಿಯ ಗುಜರಾತಿನಲ್ಲಿಯೂ ಸಶಕ್ತ ಲೋಕಾಯುಕ್ತ ಕಾಯಿದೆಯನ್ನು ರೂಪಿಸಲಾಗಿಲ್ಲ ಬದಲಿಗೆ ಇರುವ ಲೋಕಾಯುಕ್ತ ಕಾಯಿದೆಗೆ ತಿದ್ದುಪಡಿ ತಂದು ಲೋಕಾಯುಕ್ತರನ್ನು ನೇಮಿಸುವ ಹೆಚ್ಚಿನ ಅಧಿಕಾರ ಆಳುವ ಸರ್ಕಾರದ ಕೈಯಲ್ಲಿ ಬರುವಂತೆ ಮಾಡಲಾಗಿದೆ. ಇಂಥ ಲೋಕಾಯುಕ್ತದಿಂದ ಹೆಚ್ಚಿನ ಉಪಯೋಗ ಆಗಲಾರದು.

    Reply
  4. Srini

    What is the definition of “Pragatipararu”? What makes to say whoever criticizes you are not Pragatipararu and are part of RSS?

    When you do journalism, you can’t be biased. You need to put the facts, just facts. And let your audience to decide and conclude. Most of journalists here (or just bloggers) are biased. I don’t think so this is journalism. This is just blogging personal opinion…

    Reply
  5. Ananda Prasad

    ಮಾಧ್ಯಮಗಳಿಗೆ ಜನರನ್ನು ಸಮಕಾಲೀನ ಜ್ಞಾನದೊಂದಿಗೆ ಜನರನ್ನು ನವೀಕರಿಸುವ ಹಾಗೂ ಉದಾತ್ತ ಹಾಗೂ ಉದಾರವಾದಿ ಮೌಲ್ಯಗಳ ಪರವಾಗಿ ಜನರನ್ನು ಜಾಗೃತಗೊಳಿಸುವ ಮಹತ್ತರ ಜವಾಬ್ದಾರಿ ಇದೆ ಮತ್ತು ಇದನ್ನು ವರ್ತಮಾನವು ಮಾಡುತ್ತಾ ಬಂದಿದೆ. ಪ್ರಗತಿಪರ ಎಂದರೆ ಸಮಕಾಲೀನ ಜ್ಞಾನದೊಂದಿಗೆ ಮೌಲ್ಯಗಳನ್ನು ನವೀಕರಿಸಿಕೊಂಡು ಹಿಂದಿನ ಅರ್ಥಹೀನ ಹಾಗೂ ಆಧಾರರಹಿತ, ಶೋಷಕ, ಊಳಿಗಮಾನ್ಯ ಮೌಲ್ಯಗಳನ್ನು ಧಿಕ್ಕರಿಸಿ ಸಮಾನತೆಯ ಕಡೆಗೆ ಸಮಾಜವನ್ನು ಕೊಂಡೊಯ್ಯುವ ಒಂದು ಮನೋಭಾವ. ಇಂಥ ಮೌಲ್ಯಗಳನ್ನು ಎಲ್ಲ ಮಾಧ್ಯಮಗಳೂ ಹೊಂದಿರಬೇಕು ಆದರೆ ಬಹುತೇಕ ಮುಖ್ಯ ವಾಹಿನಿಯ ಮಾಧ್ಯಮಗಳು ಇದನ್ನು ಮಾಡುತ್ತಿಲ್ಲ. ಮುಖ್ಯ ವಾಹಿನಿಯ ಮಾಧ್ಯಮಗಳು ಕುರುಡು ನಂಬಿಕೆಗಳನ್ನು ಹಾಗೂ ಊಳಿಗಮಾನ್ಯ, ಶೋಷಕ ವ್ಯವಸ್ಥೆಯನ್ನು ಹಾಗೇ ಮುಂದುವರಿಸುವ ಪ್ರವೃತ್ತಿಯನ್ನು ತೋರಿಸುತ್ತಿವೆ.

    Reply
  6. ಅನಿತಾ

    ನೋಡ್ತಾ ಇರಿ . ಒಂದೊಮ್ಮೆ ಈ ಕೆಜ್ರಿವಾಲ್ ಬಿ ಜೆ ಪಿ ಪರ ಒಂದು ಮಾತಾಡಿದರೆ ವರ್ತಮಾನದ ಲೇಖಕರ ಪ್ಲೇಟು ಹೇಗೆ ಉಲ್ಟಾ ತಿರುಗುತ್ತೆ ಅಂತ . ಕೆಜ್ರಿವಾಲ್ ನ ಹೆಸರಿನಲ್ಲೇ ಕೇಸರಿ ಇದೆ ಅಂತ ಟೀಕಿಸಿದ್ದ ಬುದ್ಧಿಜೀವಿಗಳು ಅಂದು ಅಣ್ಣಾ ಹೋರಾಟ ವಿರೋಧಿಸಿ, ಅದು ದಲಿತ ವಿರೋಧಿ ಮುಸ್ಲಿಂ ವಿರೋಧಿ ಅಂತ ಎಸ್ ಎಂ ಎಸ್ ಚಳುವಳಿ ಮಾಡಿದ್ದರು. ಈಗ ಎಡ ಪಕ್ಷಗಳು ತಮ್ಮ ರಾಷ್ಟ್ರೀಯ ಸಭೆಗಳಲ್ಲಿ ಆಮ್ ಅದ್ಮಿ ಬಗ್ಗೆ ಗಂಭೀರವಾಗಿ ಚರ್ಚಿಸಲು ಆರಂಭಿಸಿವೆ.

    Reply

Leave a Reply to ಅನಿತಾ Cancel reply

Your email address will not be published. Required fields are marked *