Daily Archives: December 12, 2013

ವಿವಾಹ ನೋಂದಣಿ ಬಾಲ್ಯವಿವಾಹಕ್ಕೊಂದು ತಡೆಗೋಡೆ


– ರೂಪ ಹಾಸನ


 

ಯೂನಿಸೆಫ್‌ನ “ಸ್ಟೇಟ್ ಆಫ್ ದಿ ವರ್ಲ್ಡ್ ಚಿರ್ಲ್ಡನ್”-2009 ರ ವರದಿ, ‘47% ಭಾರತೀಯ ಹೆಣ್ಣುಮಕ್ಕಳು ಕಾನೂನಿಗೆ ವಿರುದ್ಧವಾಗಿ 18 ವರ್ಷದೊಳಗೇ ವಿವಾಹವಾಗುತ್ತಿದ್ದಾರೆ, ಇದರಲ್ಲಿ 56% ರಷ್ಟು ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಮತ್ತು ವಿಶ್ವದಲ್ಲಿ ನಡೆಯುವ ಬಾಲ್ಯ ವಿವಾಹಗಳಲ್ಲಿ 40% ಭಾರತದಲ್ಲೇ ನಡೆಯುತ್ತವೆ’ ಎಂದು ಹೇಳುತ್ತದೆ. ಹಾಗೇ ಇದೇ ವರ್ಷದ ಫೆಬ್ರವರಿಯಲ್ಲಿ ದೆಹಲಿಯ “ಪಾಪುಲೇಷನ್ ಕೌನ್ಸಿಲ್” ಹಾಗೂ ಮುಂಬಯಿಯ “ಇಂಟರ್‌ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಪಾಪುಲೇಷನ್ ಸೈನ್ಸ್” ಸಂಸ್ಥೆಗಳು ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಭಾರತದಲ್ಲಿ 15 ವರ್ಷದೊಳಗೆ ಮದುವೆಯಾಗುವ ಹೆಣ್ಣುಮಕ್ಕಳ ಸಂಖ್ಯೆ ಶೇ.50 ಕ್ಕೂ ಹೆಚ್ಚು ಎಂದು ವರದಿ ಮಾಡಿದೆ.

ಸಾಮೂಹಿಕ ವಿವಾಹದಲ್ಲಿ ನಡೆಯುತ್ತಿರುವ ಅಪ್ರಾಪ್ತ ವಯಸ್ಸಿನ ಬಾಲಕಿಯರ Child_marriage_in_Indiaವಿವಾಹ ಕುರಿತು ಮೊನ್ನೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದ್ದನ್ನು ಕಂಡಾಗ ಮತ್ತೆ ಇದೆಲ್ಲಾ ನೆನಪಾಯ್ತು. ಬಾಲ್ಯ ವಿವಾಹ ನಮ್ಮ ದೇಶಕ್ಕೆ ಅಂಟಿದ ದೊಡ್ಡ ಶಾಪ. ಇದಕ್ಕೆ ಮುಖ್ಯ ಕಾರಣ ಬಡತನ, ನಿರಕ್ಷರತೆ, ಅಜ್ಞಾನ ಮತ್ತು ಕೆಲ ಮಟ್ಟಿನ ಮೂಢನಂಬಿಕೆ ಎಂಬುದು ನಿರ್ವಿವಾದ. ಬಾಲ್ಯ ವಿವಾಹ ನಿಷೇಧ ಕಾಯ್ದೆ 1929 ರಲ್ಲೇ ಜಾರಿಯಾಗಿದ್ದರೂ ಅದು ಇನ್ನೂ ಜೀವಂತವಿರುವುದು, ಜ್ವಲಂತ ಸಮಸ್ಯೆಯಾಗಿರುವುದು ಮೇಲಿನ ಅಂಕಿ ಅಂಶಗಳಿಂದ ತಿಳಿಯುತ್ತದೆ. ಜೊತೆಗೆ 2010 ನೇ ವರ್ಷದ “ವಿಶ್ವ ಮಕ್ಕಳ ದಿನಾಚರಣೆ”ಯನ್ನು “ಬಾಲ್ಯ ವಿವಾಹ ತಡೆಗಟ್ಟಿ” ಎಂಬ ಘೋಷಣೆಯೊಂದಿಗೆ ಆಚರಿಸಿದ್ದು ಸಮಸ್ಯೆಯ ಗಂಭೀರತೆಯನ್ನು ಎತ್ತಿ ಹಿಡಿದಿದೆ.

ಬಾಲ್ಯವಿವಾಹದಿಂದ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳು ಮೊದಲು ತಮ್ಮ ಮೂಲಭೂತ ಹಕ್ಕುಗಳಿಂದ ವಂಚಿತರಾಗುತ್ತಾರೆ. ಬಾಲ್ಯದಲ್ಲಿಯೇ ಮದುವೆಯಾಗುವ ಕಾರಣದಿಂದ ಶಿಕ್ಷಣದ ಕೊರತೆಯುಂಟಾಗಿ, ಸಮರ್ಪಕ ಉದ್ಯೋಗ ಸಿಗದೇ ದೀರ್ಘಕಾಲದ ಬಡತನಕ್ಕೆ ತುತ್ತಾಗುತ್ತಾರೆ. ಜೊತೆಗೆ ಅರಿವಿನ ಕೊರತೆ, ಅಜ್ಞಾನ, ಮೂಢನಂಬಿಕೆಗಳು ಅವರಲ್ಲಿ ಮುಂದುವರೆಯುತ್ತದೆ. ತಮ್ಮ ಸ್ಥಾನಮಾನದ ಅರಿವಿರದ, ಸಬಲರಾಗಿಲ್ಲದ ಮತ್ತು ಇನ್ನೂ ಪ್ರೌಢಾವಸ್ಥೆಯನ್ನು ಹೊಂದದ ಚಿಕ್ಕ ಹುಡುಗಿಯರು ಪತಿಯ ಮನೆಯಲ್ಲಿ ದೌರ್ಜನ್ಯ, ಲೈಂಗಿಕ ಶೋಷಣೆ ಮತ್ತು ಸಾಮಾಜಿಕ ಪ್ರತ್ಯೇಕತೆಗೆ ಗುರಿಯಾಗುತ್ತಾರೆ. childmarriageಇದರಿಂದ ನಿಷ್ಕಾರಣವಾದ ಅಸಮಾನತೆ, ಖಾಯಿಲೆ ಹಾಗೂ ನಿಕೃಷ್ಟತೆಗೂ ಒಳಗಾಗುತ್ತಾರೆ. ಎಳೆವಯಸ್ಸಿನಲ್ಲಿಯೇ ಮದುವೆಯಾಗುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಬಲಿಷ್ಠರಾಗಿಲ್ಲದಿರುವುದರಿಂದ ಬಸಿರು, ಹೆರಿಗೆ ಸಮಯದಲ್ಲಿನ ಸಾವಿನ ಪ್ರಮಾಣ ಅಧಿಕವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಶಿಶು ಮರಣ ಹಾಗೂ ಅಶಕ್ತ ಮಕ್ಕಳ ಜನನ ಕೂಡ ಅತ್ಯಂತ ಸಾಮಾನ್ಯ ಸಂಗತಿಯಾಗಿರುತ್ತದೆ. ಅಧಿಕ ಪ್ರಮಾಣದ ಬಾಲ್ಯವಿವಾಹದ ಕಾರಣದಿಂದಲೇ ಗರ್ಭಿಣಿ ಸಾವು ಹಾಗು ಶಿಶು ಮರಣ ಪ್ರಮಾಣದಲ್ಲಿ ಕೂಡ ಭಾರತವೇ ಅಗ್ರ ಸ್ಥಾನದಲ್ಲಿರುವುದನ್ನು ಅತ್ಯಂತ ಸಂಕಟದಿಂದ ನೆನಪಿಸಿಕೊಳ್ಳಬೇಕಾಗಿದೆ. ಸಾಮಾನ್ಯವಾಗಿ ಅಪ್ರಾಪ್ತ ಹೆಣ್ಣುಮಕ್ಕಳನ್ನು ಅಸಮ ವಯಸ್ಸಿನ ಗಂಡಿಗೆ ವಿವಾಹ ಮಾಡುವುದರಿಂದ ಬಾಲ್ಯವೈಧವ್ಯ ಉಂಟಾಗುತ್ತದೆ. ಕಿರಿಯ ವಯಸ್ಸಿನಲ್ಲೇ ಸಂಸಾರ, ಮಕ್ಕಳ ಜವಾಬ್ದಾರಿಯನ್ನು ಹೊರಬೇಕಾದಾಗ ಹೆಚ್ಚಿನ ವಿದ್ಯಾಭ್ಯಾಸವಿಲ್ಲದಿರುವುದರಿಂದ ಇಂತಹ ಹೆಣ್ಣುಮಕ್ಕಳು ಅನೈತಿಕ ಮಾರ್ಗಗಳಿಂದ ಸಂಪಾದಿಸುವುದೂ ಅನಿವಾರ್ಯವಾಗುತ್ತಿದೆ.

ಇನ್ನು ಸಾಮೂಹಿಕ ವಿವಾಹಗಳು ನಮ್ಮ ಸಮಾಜಕ್ಕೆ ಹೊಸದೇನೂ ಅಲ್ಲ. ಕೆಲವು ಜಾತಿ, ಧರ್ಮ, ಜನಾಂಗಗಳಲ್ಲಿ ಸಾಮೂಹಿಕ ವಿವಾಹಗಳು ನಡೆಯುತ್ತಾ ಬಂದಿವೆ. ಆಧುನಿಕ ಸಮಾಜದಲ್ಲಿ ಮದುವೆಗಳ ಮೂಲಕ ನಡೆಯುವ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು, Mass_Marriage_Couplesಅಂತರ್ಜಾತಿ ವಿವಾಹವನ್ನು ಪ್ರೋತ್ಸಾಹಿಸಲು, ಮುಖ್ಯವಾಗಿ ಬಡ ಕುಟುಂಬಗಳ ಆರ್ಥಿಕ ಹೊರೆ ಕಡಿಮೆ ಮಾಡಲು ಸಾಮಾಜಿಕ ಸುಧಾರಣೆಯ ಒಂದು ಮಾರ್ಗವಾಗಿ ಸಾಮೂಹಿಕ ವಿವಾಹಗಳು ನೆರವಾಗಿವೆ. ವಿಧವೆಯರಿಗೆ, ವಿವಾಹ ವಿಚ್ಛೇದಿತರಿಗೆ, ಅಂಗವಿಕಲರಿಗೆ, ಅನಾಥರಿಗಾಗಿಯೂ ವಿಶೇಷ ಸಾಮೂಹಿಕ ವಿವಾಹಗಳು ಏರ್ಪಟ್ಟು ದಾಖಲೆಗಳನ್ನೇ ನಿರ್ಮಿಸಿದೆ.

ಆದರೆ ಸಾಮೂಹಿಕ ವಿವಾಹಗಳಲ್ಲಿ ಅಪ್ರಾಪ್ತ ಬಾಲಕಿಯರ ವಿವಾಹ ನಡೆಯುತ್ತಿರುವುದು ಮಾತ್ರ ಕಾಯ್ದೆಯ ಕಣ್ಣಲ್ಲಿ ಅಕ್ಷಮ್ಯ ಅಪರಾಧವಾಗಿದೆ. ಸಾಮೂಹಿಕ ವಿವಾಹಗಳಲ್ಲಿ ಬಾಲಕಿಯರ ವಿವಾಹ ಅತ್ಯಂತ ಸಾಮಾನ್ಯವೆಂಬಂತೆ ನಡೆಯುತ್ತಲೇ ಬಂದಿದೆ. ಇದು ಹೊಸದೇನೂ ಅಲ್ಲ. ಇಂತಹ ಸಾಮೂಹಿಕ ವಿವಾಹಗಳನ್ನು ಸಂಘಟಿಸುವವರು ರಾಜಕಾರಣಿಗಳು ಮಠಾಧೀಶರು, ಕೆಲವು ಪಟ್ಟಭದ್ರಹಿತಾಸಕ್ತಿಗಳು ಎಂಬುದನ್ನು ಮುಖ್ಯವಾಗಿ ಗಮನಿಸಬೇಕಿದೆ. ಇತ್ತೀಚೆಗೆ ಇಂತಹ ವಿವಾಹಗಳ ಹಿಂದೆ ಹಣ, mass-marriage-sriramuluರಾಜಕೀಯ, ಜಾತಿ, ದಾಖಲೆ ಮಾಡುವ ಹುಚ್ಚು…… ಹೀಗೆ ಬೇರೆ ಬೇರೆ ಹಿತಾಸಕ್ತಿಗಳು ಕೆಲಸ ಮಾಡುವುದರಿಂದ ಅದರ ನಿಜವಾದ ಉದ್ದೇಶ ಮರೆಯಾಗಿ, ಪರಸ್ಪರ ಗಂಡು ಹೆಣ್ಣು ಮನ ಒಪ್ಪಿ ಮದುವೆಗೆ ಸಿದ್ಧರಾಗುವುದಕ್ಕಿಂತಾ ಸಂಘಟಕರಿಗೆ ತಮ್ಮ ನಿಗದಿತ ಗುರಿ ಮುಟ್ಟಲು ಪೋಷಕರ ಮನವೊಲಿಸಿ ಮದುವೆ ಮಾಡುವುದನ್ನು ಕಾಣುತ್ತಿದ್ದೇವೆ. ಬಹಳಷ್ಟು ಬಾರಿ ಇಲ್ಲಿ ಹೆಣ್ಣುಮಕ್ಕಳ ಅಭಿಪ್ರಾಯಕ್ಕೆ ಯಾವ ಬೆಲೆಯೂ ಇರುವುದಿಲ್ಲ ಎಂದು ದೆಹಲಿಯ ಪಾಪ್ಯುಲೇಷನ್ ಕೌನ್ಸಿಲ್ ಇಂತಹ ಅಪ್ರಾಪ್ತ ನವವಧುಗಳನ್ನು ಸಮೀಕ್ಷೆ ಮಾಡಿ ದೃಢಪಡಿಸಿದೆ. ಇದನ್ನು ಕಂಡಾಗ 1975-77 ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಮಾನುಷವಾಗಿ ಮತ್ತು ಬಲವಂತದಿಂದ ನಡೆಸಲಾದ ಕುಟುಂಬ ಯೋಜನೆಯ ಶಸ್ತ್ರಚಿಕಿತ್ಸೆಗಳು ನೆನಪಾಗುತ್ತವೆ. ಇದಕ್ಕೂ ಇಂತಹ ಬಾಲ್ಯವಿವಾಹಗಳಿಗೂ ಯಾವ ವ್ಯತ್ಯಾಸಗಳೂ ಇಲ್ಲವೇನೋ!

ವರದಕ್ಷಿಣೆ ಹಾಗೂ ವಿವಾಹಕ್ಕಾಗಿ ವಿನಿಯೋಗಿಸುವ ವಿಪರೀತದ ಖರ್ಚನ್ನು ಭರಿಸಲಾಗದ ಹೆಚ್ಚಿನ ಬಡ ಕುಟುಂಬಗಳು, ತಮ್ಮ ಹೆಣ್ಣುಮಕ್ಕಳ ಹೊರೆಯನ್ನು ಇಲ್ಲಿ ಸುಲಭವಾಗಿ ಕಳೆದುಕೊಳ್ಳಬಹುದೆಂದು ಸಾಮೂಹಿಕ ವಿವಾಹದ ಮೊರೆ ಹೋಗುತ್ತಾರೆ. ಇದು ತಪ್ಪೇನೂ ಅಲ್ಲ. ಆದರೆ ಸಾಮೂಹಿಕ ವಿವಾಹದ ನೆವದಲ್ಲಿ ಅಪ್ರಾಪ್ತ ಬಾಲಕಿಯರನ್ನು ಮದುವೆ ಮಾಡುವುದು ಮಾತ್ರ ಕಾನೂನಿನ ರೀತಿಯಲ್ಲಿ ಅಪರಾಧವೇ ಆಗಿದೆ. ಇಂತಹ ವಿವಾಹಗಳು ಕೂಡ ಸಂಘಟಕರಿಗೆ ಲಾಭಕಾರಕ ವ್ಯಾಪಾರವಾಗಿರುವುದನ್ನು ಕಾಣುತ್ತಿದ್ದೇವೆ. ಇದರ ಹಿಂದೆ ಪ್ರತಿಷ್ಠಿತ ಗಣ್ಯವ್ಯಕ್ತಿಗಳು, ಸಂಸ್ಥೆಗಳಿರುವುದರಿಂದ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ವಿವಾಹ ನಡೆಯುತ್ತಿದ್ದರೂ ಇದರ ವಿರುದ್ಧ ಯಾರೂ ದನಿಯೆತ್ತದಂತಾ ಸ್ಥಿತಿ ನಿರ್ಮಾಣವಾಗಿದೆ. ನಕಲಿ ವಯೋಮಾನ ದೃಢೀಕರಣ ಪತ್ರಗಳೂ ಇಂದು ಹಣಕ್ಕೆ ಮಾರಾಟವಾಗುವುದರಿಂದ ಬಾಲ್ಯವಿವಾಹವನ್ನು ತಡೆಗಟ್ಟುವಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೂ, ಸಾಮಾಜಿಕ ಕಾರ್ಯಕರ್ತರೂ ವಿಫಲರಾಗುವ ಜೊತೆಗೆ ಪೇಚಿಗೆ ಸಿಕ್ಕಿಹಾಕಿಕೊಂಡು ತಾವೇ ಅಪರಾಧಿಗಳ ಸ್ಥಾನದಲ್ಲಿ ನಿಲ್ಲಬೇಕಾಗಿದೆ.

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅಪ್ರಾಪ್ತ ಬಾಲಕಿಯರ ಮದುವೆ ಮಾಡಿಸುವ ಪೋಷಕರನ್ನು ಮೊದಲು ಶಿಕ್ಷಿಸಬೇಕೆಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಆದರೆ ಪೋಷಕರೂ ಬಹಳಷ್ಟು ವೇಳೆ ಮುಗ್ಧರೂ, ಅಶಿಕ್ಷಿತರು, ಬಡವರು ಆಗಿರುತ್ತಾರೆ. child-marriage-indiaಶಿಕ್ಷಿತರಲ್ಲಿ ಇಂತಹ ನಿರ್ಧಾರಕ್ಕೆ ಬರುವವರು ಕಡಿಮೆ. ಆದ್ದರಿಂದ ಕಾನೂನಿನ ಅರಿವಿದ್ದೂ, ವಿದ್ಯಾವಂತರಾಗಿದ್ದೂ ವಿವೇಚನೆಯಿಲ್ಲದೇ ಅಪ್ರಾಪ್ತ ಹೆಣ್ಣುಮಕ್ಕಳ ಮದುವೆ ಮಾಡಲು ಮುಂದಾಗುವ ಸಂಘಟಕರನ್ನು ಮೊದಲು ಶಿಕ್ಷಿಸಬೇಕು. ಪರಿಷ್ಕೃತಗೊಂಡ ಬಾಲ್ಯವಿವಾಹ ನಿಷೇಧ ಕಾಯ್ದೆ-2006 ರ ಅನ್ವಯ ಬಾಲ್ಯ ವಿವಾಹ ಸಾಬೀತಾದರೆ ಅಪ್ರಾಪ್ತ ಬಾಲಕಿಯನ್ನು ವಿವಾಹವಾಗುವ ಪುರುಷ, ಹುಡುಗಿಯ ಪೋಷಕರು, ಹಾಗೂ ಇಂತಹ ಮದುವೆಯನ್ನು ನೆರವೇರಿಸುವ ಮತ್ತು ಪ್ರೋತ್ಸಾಹಿಸುವ ವ್ಯಕ್ತಿಗಳಿಗೆ ಎರಡು ವರ್ಷ ಸೆರೆವಾಸ ಹಾಗೂ ಒಂದು ಲಕ್ಷದವರೆಗೆ ಜುಲ್ಮಾನೆ ವಿಧಿಸಲಾಗುತ್ತದೆ. ತಪ್ಪಿತಸ್ಥರು ಶಿಕ್ಷೆಗೀಡಾದರೆ ಇಂತಹ ಅಪರಾಧಗಳ ಸಂಖ್ಯೆ ತಗ್ಗುತ್ತದೆ ಎಂಬುದು ನಿಜ ಆದರೆ ಬಲವಂತದಿಂದ, ತಮ್ಮ ದುರುದ್ದೇಶ ಸಾಧನೆಗಾಗಿ ಸಾಮೂಹಿಕ ವಿವಾಹಗಳಲ್ಲಿ ಅಪ್ರಾಪ್ತ ಹೆಣ್ಣುಮಕ್ಕಳ ಮದುವೆ ಮಾಡಿಸುವ ಸಂಘಟಕರಿಗೆ ಅತಿ ಹೆಚ್ಚಿನ ಪ್ರಮಾಣದ ಶಿಕ್ಷೆಯಾಗುವಂತೆ ಕಾನೂನು ತಿದ್ದುಪಡಿಯಾಗಬೇಕಿರುವುದು ಇಂದಿನ ತುರ್ತು.

ಬಾಲ್ಯ ವಿವಾಹ ಪದ್ಧತಿಯನ್ನು ನಿಯಂತ್ರಿಸಲು ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಹಿಮಾಚಲಪ್ರದೇಶ ರಾಜ್ಯಗಳು ಮದುವೆಯಾಗುವ ಗಂಡು ಹೆಣ್ಣಿನ ವಯಸ್ಸುಗಳನ್ನು ದೃಢಪಡಿಸಲು ಮತ್ತು ನ್ಯಾಯಬದ್ಧಗೊಳಿಸಲು ವಿವಾಹವನ್ನು ನೋಂದಣಿ ಮಾಡಿಸುವುದನ್ನು ಕಡ್ಡಾಯ ಮಾಡಿವೆ. ಯಾವುದೇ ಧರ್ಮದ ಅಥವಾ ಜಾತಿಯವರಾಗಿರಲಿ ಕಡ್ಡಾಯವಾಗಿ ಸರ್ಕಾರಿ ನೋಂದಣಿ ಕಚೇರಿಯಲ್ಲಿ ಮದುವೆಗಳು ದಾಖಲಾಗಲೇಬೇಕು ಎಂಬ ಕಾನೂನು ದೇಶದಾದ್ಯಂತ ಜಾರಿಗೆ ಬಂದಿದೆ. ಅದನ್ನು ಈಗ ಕಡ್ಡಾಯವಾಗಿ ಜಾರಿಗೊಳಿಸಬೇಕು. ಇದಕ್ಕೂ ಮೊದಲು ಜನನ ಹಾಗೂ ಮರಣದ ದಾಖಲಾತಿ ಕಡ್ಡಾಯ ಎಂಬುದರ ಅರಿವನ್ನು ಜನರಿಗೆ ಮೂಡಿಸಬೇಕು. ಸಾಮೂಹಿಕ ವಿವಾಹಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಸುವ, ಮಾಡಿಸದಿದ್ದರೆ ಶಿಕ್ಷೆಗೊಳಪಡಿಸುವ ಕಾನೂನು ಜಾರಿ ಆಗಲೇ ಬೇಕು. ಇದರಿಂದ ಮದುವೆಯಾಗಬಯಸುವ ಗಂಡು ಮತ್ತು ಹೆಣ್ಣುಗಳ ವಯಸ್ಸು ನಿಖರವಾಗಿ ತಿಳಿದು ಬರುತ್ತದೆ. ತನ್ಮೂಲಕ ಬಾಲ್ಯವಿವಾಹ ಹತೋಟಿಗೆ ಬಂದು, ಆ ಕಾರಣದಿಂದ ನಮ್ಮ ಹೆಣ್ಣುಮಕ್ಕಳು ಅನುಭವಿಸುವ ಅನೇಕ ಸಮಸ್ಯೆಗಳು ಕಡಿಮೆಯಾಗಬಹುದು.