ಸರ್ಕಾರೀ ಲೋಕಪಾಲ್ ಮಸೂದೆ ಹಾಗೂ ಜನಲೋಕಪಾಲ್ ಮಸೂದೆಗಳ ನಡುವಿನ ಪ್ರಮುಖ ವ್ಯತ್ಯಾಸಗಳು

– ಆನಂದ ಪ್ರಸಾದ್

ಕೇಂದ್ರ ಸರ್ಕಾರವು ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವು ಉತ್ತಮ ಸಾಧನೆ ಮಾಡಿರುವುದನ್ನು ನೋಡಿ ಗಾಬರಿಯಾಗಿ ದುರ್ಬಲ ಲೋಕಪಾಲ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲು ತರಾತುರಿಯಲ್ಲಿ ಮುಂದಾಗಿದೆ. ಇದಕ್ಕೆ ವಿಪಕ್ಷ ಬಿಜೆಪಿಯೂ ಗಾಬರಿಯಿಂದ ಚರ್ಚೆ ಇಲ್ಲದೆ ಒಪ್ಪಿಕೊಳ್ಳುವ ಇಂಗಿತ ತೋರಿಸಿದೆ. ಈ ದುರ್ಬಲ ಮಸೂದೆಯನ್ನುanna-kejriwal ಹಿಂದೆ ಬಲಿಷ್ಠ ಲೋಕಪಾಲ ಮಸೂದೆಗಾಗಿ ಪಟ್ಟು ಹಿಡಿದಿದ್ದ ಅಣ್ಣಾ ಹಜಾರೆಯವರೂ ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಅಲ್ಲಿಗೆ ಹಲ್ಲಿಲ್ಲದ ಹಾವನ್ನು ಸೃಷ್ಟಿಸಿ ಜನರ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ನಡೆಯುತ್ತಿರುವುದು ಸ್ಪಷ್ಟವಾಗಿದ್ದು ಆಮ್ ಆದ್ಮಿ ಪಕ್ಷದ ಕೇಜ್ರಿವಾಲ್ ಅಣ್ಣಾ ಅವರನ್ನು ದುರ್ಬಲ ಮಸೂದೆಗೆ ಕೆಲವು ಸ್ಥಾಪಿತ ಹಿತಾಸಕ್ತರು ದಾರಿ ತಪ್ಪಿಸಿ ಒಪ್ಪಿಸಿದ್ದಾರೆ ಎಂದೂ ಮತ್ತು ಇದನ್ನು ತಾವು ವಿರೋಧಿಸುವುದಾಗಿಯೂ ಹೇಳಿದ್ದಾರೆ. ಆಮ್ ಆದ್ಮಿ ಪಕ್ಷದ ವೆಬ್‌ಸೈಟಿನಲ್ಲಿ ಕೇಜ್ರಿವಾಲ್ ಸರ್ಕಾರೀ ಲೋಕಪಾಲ್ ಮಸೂದೆ ಹಾಗೂ ಈ ಹಿಂದೆ ಅಣ್ಣಾ ನೇತೃತ್ವದ ಜನಲೋಕಪಾಲ್ ಚಳುವಳಿ ಸಿದ್ಧಪಡಿಸಿದ ಜನಲೋಕಪಾಲ್ ಮಸೂದೆಯ ನಡುವಣ ಪ್ರಮುಖ ವ್ಯತ್ಯಾಸಗಳನ್ನು ಪಟ್ಟಿ ಮಾಡಿದ್ದಾರೆ. ಅವುಗಳು ಇಂತಿವೆ:

  1. ಲೋಕಪಾಲರ ನೇಮಕ: ಸರ್ಕಾರೀ ಮಸೂದೆಯ ಪ್ರಕಾರ ಲೋಕಪಾಲರನ್ನು ನೇಮಿಸಲು 5 ಸದಸ್ಯರ ಸಮಿತಿ ಇರುತ್ತದೆ. ಅವರೆಂದರೆ ಪ್ರಧಾನಿ, ವಿರೋಧ ಪಕ್ಷದ ನಾಯಕ, ಲೋಕಸಭೆಯ ಸ್ಪೀಕರ್, ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ, ಹಾಗೂ ಈ ನಾಲ್ವರು ಸೂಚಿಸುವ ಒಬ್ಬ ವಿದ್ವಾಂಸರು/ನ್ಯಾಯಾಧೀಶರು/ವಕೀಲರು ಅಥವಾ ತೀರ್ಪುಗಾರರು. ಜನಲೋಕಪಾಲ ಮಸೂದೆಯ ಪ್ರಕಾರ ಲೋಕಪಾಲರನ್ನು ನೇಮಿಸಲು 7 ಜನರ ಸಮಿತಿ ಇರುತ್ತದೆ. ಅವರ್ಯಾರೆಂದರೆ 2 ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು, 2 ಉಚ್ಛ ನ್ಯಾಯಾಲಯದ ನ್ಯಾಯಾಧೀಶರು; ಸಿಎಜಿ, ಸಿವಿಸಿ, ಸಿಇಸಿ (ಮುಖ್ಯ ಚುನಾವಣಾ ಆಯುಕ್ತ) ಸೂಚಿಸಿದ ತಲಾ ಒಬ್ಬ ಸದಸ್ಯ; ಪ್ರಧಾನ ಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ. ಸರ್ಕಾರೀ ಮಸೂದೆಯ ಪ್ರಕಾರ ಇರುವ ಸಮಿತಿಯಲ್ಲಿ ರಾಜಕಾರಣಿಗಳೇ ಹೆಚ್ಚಿರುವ ಕಾರಣ ನಿಷ್ಪಕ್ಷಪಾತ ನೇಮಕ ಸಾಧ್ಯವಾಗಲಾರದು.
  2. ಲೋಕಪಾಲರನ್ನು ತೆಗೆದುಹಾಕುವುದು: ಸರ್ಕಾರೀ ಮಸೂದೆ ಪ್ರಕಾರ ಲೋಕಪಾಲರನ್ನು ತೆಗೆದುಹಾಕಲು ಒಂದೋ ಆಳುವ ಸರ್ಕಾರ ಅಥವಾ 100 ಜನ ಲೋಕಸಭಾ ಸದಸ್ಯರು ಸರ್ವೋಚ್ಚ ನ್ಯಾಯಾಲಯಕ್ಕೆ ದೂರು ನೀಡಲು ಮಾತ್ರ ಅವಕಾಶ ಇದೆ. ಜನಲೋಕಪಾಲ್ ಮಸೂದೆ ಪ್ರಕಾರ ಯಾವುದೇ ನಾಗರಿಕನೂ ಸರ್ವೋಚ್ಛ ನ್ಯಾಯಾಲಯಕ್ಕೆ ದೂರು ನೀಡುವ ಮೂಲಕ ಲೋಕಪಾಲದ ಸದಸ್ಯರನ್ನು ತೆಗೆದುಹಾಕಲು ದೂರು ಕೊಡಬಹುದು. ಸರ್ಕಾರೀ ಮಸೂದೆಯ ಪ್ರಕಾರ ಲೋಕಪಾಲರನ್ನು ತೆಗೆದು ಹಾಕಲು ದೂರು ನೀಡುವ ಅಧಿಕಾರ ಆಳುವ ಸರ್ಕಾರ ಹಾಗೂ ರಾಜಕಾರಣಿಗಳ ಬಳಿ ಮಾತ್ರವೇ ಇರುವುದರಿಂದ ಲೋಕಪಾಲದ ದಕ್ಷತೆ ಹಾಗೂ ಸ್ವಾತಂತ್ರ್ಯದ ಮೇಲೆ ಗಂಭೀರ ಲೋಪ ಉಂಟಾಗಬಹುದು.
  3. ತನಿಖಾ ದಳ: ಸರ್ಕಾರೀ ಮಸೂದೆ ಪ್ರಕಾರ ಲೋಕಪಾಲಕ್ಕೆ ಬರುವ ದೂರುಗಳ ವಿಚಾರಣೆಯನ್ನು ಕೈಗೊಳ್ಳಲು ಸರ್ಕಾರೀ ಅಧೀನದಲ್ಲಿರುವ ಸಿಬಿಐ ಅಥವಾ ಇನ್ಯಾವುದೇ ತನಿಖಾ ಸಂಸ್ಥೆಯನ್ನು ಅವಲಂಬಿಸಬೇಕು. ಸಿಬಿಐ ಅಧಿಕಾರಿಗಳ ನೇಮಕ, ವರ್ಗಾವಣೆ ಹಾಗೂ ನಿವೃತ್ತಿಯ ನಂತರದ ಸೇವೆಗಳಿಗೆ ನೇಮಕ ಮಾಡುವ ಅಧಿಕಾರ ಸಂಪೂರ್ಣವಾಗಿ ಸರ್ಕಾರ ಹಾಗೂ ರಾಜಕಾರಣಿಗಳ ಬಳಿ ಇರುವ ಕಾರಣ ಸಿಬಿಐ ಸಂಸ್ಥೆಯ ಹಿಡಿತ ಸರ್ಕಾರದ ಬಳಿಯೇ ಇರಲಿದ್ದು ತನಿಖಾ ಸಂಸ್ಥೆಯ ಸ್ವಾತಂತ್ರ್ಯಕ್ಕೆ ಗಂಭೀರ ಹಾನಿಯಾಗುತ್ತಿರುತ್ತದೆ (ಈಗ ಆಗುತ್ತಿರುವಂತೆ). ಜನಲೋಕಪಾಲ್ ಮಸೂದೆ ಪ್ರಕಾರ ಸಿಬಿಐ ತನಿಖಾ ಸಂಸ್ಥೆಯ ಆಡಳಿತಾತ್ಮಕ ನಿಯಂತ್ರಣವು ಲೋಕಪಾಲದ ಅಡಿಯಲ್ಲಿ ಇರುತ್ತದೆ ಮತ್ತು ಸರ್ಕಾರದಿಂದ ಸ್ವತಂತ್ರವಾಗಿರುತ್ತದೆ.
  4. ವಿಷಲ್ ಬ್ಲೋವರ್ ರಕ್ಷಣೆ: ಸರ್ಕಾರೀ ಮಸೂದೆ ಪ್ರಕಾರ ವಿಷಲ್ ಬ್ಲೋವರ್ಗಳಿಗೆ (ಅಂದರೆ ಜನಜಾಗೃತಿಗಾಗಿ ಕೆಲಸ ಮಾಡುವ ಮಾಹಿತಿ ಹಕ್ಕು ಕಾರ್ಯಕರ್ತರು ಇತ್ಯಾದಿ ಜನರಿಗೆ) ರಕ್ಷಣೆ ನೀಡುವ ಯಾವುದೇ ವಿಚಾರ ಇಲ್ಲ. ಜನಲೋಕಪಾಲ್ ಮಸೂದೆಯಲ್ಲಿ ವಿಷಲ್ ಬ್ಲೋವರ್‌ಗಳಿಗೆ ರಕ್ಷಣೆ ನೀಡುವ ವ್ಯವಸ್ಥೆ ಇರುತ್ತದೆ.
  5. ಸಿಟಿಜೆನ್ ಚಾರ್ಟರ್: ಸರ್ಕಾರೀ ಮಸೂದೆ ಪ್ರಕಾರ ಇಂಥ ಯಾವುದೇ ವ್ಯವಸ್ಥೆ ಇಲ್ಲ (ಸಿಟಿಜನ್ ಚಾರ್ಟರ್ ಎಂದರೆ ನಾಗರಿಕರಿಗೆ ಅವಶ್ಯವಿರುವ ಸರ್ಕಾರೀ ಸೇವೆಗಳನ್ನು ಮಾಡಿಕೊಡಲು ಕಾಲಾವಧಿ ನಿಗದಿಪಡಿಸುವುದು ಮತ್ತು ಆ ಕಾಲಾವಧಿಯೊಳಗೆ ಕೆಲಸ ಮಾಡಿಕೊಡದಿದ್ದರೆ ದಂಡ ವಿಧಿಸುವ ಅವಕಾಶ). ಜನಲೋಕಪಾಲ್ ಮಸೂದೆಯ ಪ್ರಕಾರ ಸಿಟಿಜನ್ ಚಾರ್ಟರ್ ಅನ್ನು ಲೋಕಪಾಲದೊಳಗೆ ಸೇರಿಸಲಾಗುತ್ತದೆ.
  6. ರಾಜ್ಯಗಳಲ್ಲಿ ಲೋಕಾಯುಕ್ತಗಳನ್ನು ರೂಪಿಸುವುದು: ಸರಕಾರೀ ಲೋಕಪಾಲದ ಪ್ರಕಾರ ಇದನ್ನು ಆಯಾ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಡಲಾಗುತ್ತದೆ. ಜನಲೋಕಪಾಲ್ ಮಸೂದೆ ಪ್ರಕಾರ ಲೋಕಪಾಲ್ ವ್ಯವಸ್ಥೆಯನ್ನು ಕೇಂದ್ರದಲ್ಲಿ ರೂಪಿಸಿದಂತೆಯೇ ರಾಜ್ಯಗಳಲ್ಲಿ ಅದೇ ಮಾದರಿಯಲ್ಲಿ ಲೋಕಾಯುಕ್ತಗಳನ್ನು ರೂಪಿಸಬೇಕು.
  7. ಸುಳ್ಳು ದೂರುಗಳು: ಸರ್ಕಾರೀ ಮಸೂದೆ ಪ್ರಕಾರ ಸುಳ್ಳು ದೂರು ಅಥವಾ ದೂರುಗಳು ಸಾಬೀತಾಗದ ಪಕ್ಷದಲ್ಲಿ ದೂರುದಾರರನ್ನು ಒಂದು ವರ್ಷದ ಅವಧಿಗೆ ಸೆರೆಮನೆಗೆ ತಳ್ಳುವ ಅಧಿಕಾರ ಲೋಕಾಯುಕ್ತಕ್ಕೆ ನೀಡಲಾಗುತ್ತದೆ (ಇದರಿಂದಾಗಿ ಪ್ರಾಮಾಣಿಕ ದೂರುದಾರರೂ ಲೋಕಪಾಲಕ್ಕೆ ದೂರು ನೀಡಲು ಹಿಂಜರಿಯುವ ಸಂಭವ ಇದೆ). ಜನಲೋಕಪಾಲ ಮಸೂದೆ ಪ್ರಕಾರ ಸುಳ್ಳು ದೂರು ಅಥವಾ ದೂರುಗಳು ಸಾಬೀತಾಗದ ಪಕ್ಷದಲ್ಲಿ ಒಂದು ಲಕ್ಷ ರೂಪಾಯಿಗಳ ಜುಲ್ಮಾನೆಯನ್ನು ದೂರುದಾರರಿಗೆ ವಿಧಿಸಬಹುದು, ಆದರೆ ಜೈಲು ಶಿಕ್ಷೆ ಇಲ್ಲ.
  8. ಲೋಕಪಾಲದ ಮಿತಿ: ಸರ್ಕಾರೀ ಲೋಕಪಾಲ್ ಪ್ರಕಾರ ನ್ಯಾಯಾಂಗ ಹಾಗೂ ಜನಪ್ರತಿನಿಧಿಗಳನ್ನು ಅವರ ಸದನದ ಒಳಗಿನ ಮತ ಹಾಗೂ ಮಾತುಗಳ ವಿಷಯದಲ್ಲಿ ಲೋಕಪಾಲದಿಂದ ಹೊರಗಿಡಲಾಗುತ್ತದೆ. ಜನಲೋಕಪಾಲದ ಪ್ರಕಾರ ಎಲ್ಲಾ ಸರ್ಕಾರೀ ಸೇವಕರನ್ನು, ಜನಪ್ರತಿನಿಧಿಗಳನ್ನು ಹಾಗೂ ನ್ಯಾಯಾಂಗದ ನ್ಯಾಯಾಧೀಶರನ್ನೂ ಲೋಕಪಾಲದ ವ್ಯಾಪ್ತಿಗೆ ತರಲಾಗುತ್ತದೆ.

6 thoughts on “ಸರ್ಕಾರೀ ಲೋಕಪಾಲ್ ಮಸೂದೆ ಹಾಗೂ ಜನಲೋಕಪಾಲ್ ಮಸೂದೆಗಳ ನಡುವಿನ ಪ್ರಮುಖ ವ್ಯತ್ಯಾಸಗಳು

  1. ಅನಿತಾ

    ಬಹಳ ಚೆನ್ನಾಗಿ ಎಲ್ಲರಿಗೂ ತಿಳಿಯುವಂತೆ ಬರೆದಿದ್ದೀರಿ. ನಾನು ಗಮನಿಸಿದಂತೆ ಯಾವ ಪತ್ರಿಕೆಯೂ ಹೀಗೆ ಎಲ್ಲರಿಗೂ ಅರ್ಥವಾಗುವಂತೆ ಬರೆಯುತ್ತಿಲ್ಲ. ಧನ್ಯವಾದಗಳು

    Reply
  2. ಅನಿತಾ

    ಸಮಾಜವಾದಿ ಪಾರ್ಟಿ ಯಾಕೆ ಲೋಕಪಾಲ ಮಸೂದೆಯನ್ನು ವಿರೋಧಿಸುತ್ತಾ ಇದೆ? ಮುಲಾಯಂ ಲಾಲೂ ಮಹಿಳಾ ಮೀಸಲಾತಿಯನ್ನೂ ವಿರೋಧಿಸುತ್ತಾ ಇದ್ದಾರೆ. ಹಾಗಿರುವಾಗ ಇವರೆಲ್ಲ ಪ್ರಗತಿಪರರಾಗುವುದು ಹೇಗೆ? ‘ಪ್ರಗತಿ ಪರ ‘ ಎಂಬುದು ಇವರ ಮುಖವಾಡ ಮಾತ್ರವಲ್ಲವೇನು? ಸಮಾಜವಾದಿ ಪಾರ್ಟಿ ಯಾಕೆ ಭ್ರಷ್ಟರ ಪರವಾಗಿದೆ? ದಯವಿಟ್ಟು .ವಿವರಿಸಿ ಬರೆಯಿರಿ

    Reply
  3. Ananda Prasad

    ಸಮಾಜವಾದಿ ಪಕ್ಷವು ಸಮಾಜವಾದದ ಮೌಲ್ಯಗಳನ್ನು ಇಂದು ಹೊಂದಿಲ್ಲ. ಹೆಸರು ಮಾತ್ರ ಸಮಾಜವಾದಿ ಪಕ್ಷ ಎಂದು ಇದೆಯೇ ಹೊರತು ರಾಮ ಮನೋಹರ ಲೋಹಿಯಾ ಅವರ ಆದರ್ಶಗಳಿಂದ ಪಕ್ಷವು ಬಹಳ ದೂರ ಹೋಗಿದೆ ಹಾಗೂ ಫ್ಯೂಡಲ್ (ಜಮೀನ್ದಾರಿ) ಮೌಲ್ಯಗಳನ್ನೇ ಇಂದು ತೋರಿಸುತ್ತಿದೆ. ಹೀಗಾಗಿ ಇದನ್ನು ಪ್ರಗತಿಪರವೆಂದು ಹೇಳಲಾಗದು. ಅದೇ ರೀತಿ ಲಾಲೂ ಯಾದವರ ರಾಷ್ಟ್ರೀಯ ಜನತಾ ದಳವೂ ಅದೇ ಹಾದಿಯಲ್ಲಿ ಸಾಗಿದೆ. ನಮ್ಮ ದೇಶದಲ್ಲಿ ಇರುವ ಗುಲಾಮಗಿರಿಯ ಮನೋಭಾವವೇ ಇದಕ್ಕೆ ಕಾರಣ. ನಮ್ಮ ದೇಶದ ಬಹುತೇಕ ಜನ ಇನ್ನೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೇಕಾದ ಪಕ್ವತೆಯನ್ನು ಮೈಗೂಡಿಸಿಕೊಂಡಿಲ್ಲ. ಇತ್ತೀಚೆಗೆ ರಾಜವಂಶಸ್ಥ ಒಡೆಯರ್ ಅವರು ನಿಧನರಾದಾಗ ನಮ್ಮ ಜನ ವರ್ತಿಸಿದ ರೀತಿ ನೋಡಿದರೆ ಇಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ ಯಾರಾದರೂ ಹೇಳಲು ಸಾಧ್ಯವೇ? ಇದು ಬರಿ ಹಳೆಯ ತಲೆಮಾರಿನ ಮಂದಿಯ ಬಗ್ಗೆ ಮಾತ್ರವಲ್ಲ, ಮಾಧ್ಯಮಗಳನ್ನು ಅದರಲ್ಲೂ ಮುಖ್ಯವಾಗಿ ದೃಶ್ಯ ಮಾಧ್ಯಮಗಳನ್ನು ನಡೆಸುವ ಈಗಿನ ತಲೆಮಾರಿನ ಮಂದಿ ನಡೆದುಕೊಂಡ ರೀತಿ ನೋಡಿದಾಗ ನಿಜಕ್ಕೂ ದಿಗ್ಭ್ರಮೆ ಆಗುತ್ತದೆ. ಜನರಿಗೆ ಪ್ರಜಾಪ್ರಭುತ್ವದ ಮಹತ್ವದ ಬಗ್ಗೆ ತಿಳುವಳಿಕೆ ಕೊಡಬೇಕಾದ ಮಂದಿಯೇ ಒಡೆಯರ ಗುಲಾಮನಂತೆ ಮೂರ್ನಾಲ್ಕು ದಿವಸ ವರ್ತಿಸಿದ ಪರಿ ನಾಚಿಕೆಗೇಡಿನದ್ದು. ಸಾವಿರಾರು ವರ್ಷಗಳ ರಾಜರ, ಪಾಳೆಯಗಾರರ, ಸ್ವಾಮೀಜಿಗಳ ಗುಲಾಮರಂತೆ ಬದುಕಿದ ಭಾರತದ ಜನ ಆ ಮನೋಭಾವದಿಂದ ಹೊರಬಂದಿಲ್ಲ. ಅಂಥ ಗುಲಾಮಗಿರಿಯ ಮನೋಭಾವದಿಂದ ದೇಶದ ಜನ ಎಲ್ಲಿಯವರೆಗೆ ಹೊರಬರುವುದಿಲ್ಲವೋ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಊಳಿಗಮಾನ್ಯ ವ್ಯವಸ್ಥೆಯಿಂದ ಮೇಲಕ್ಕೆ ಏಳಲಾರದು.

    Reply
  4. Naveen H

    Since earlier i had a doubt that Anna having soft corner for BJP and his aim is to benefit BJP. Now that Arvind Kejrival snubbed both BJP n Congress and emerges as real pro people, Anna might have thought no point in supporting Kejrival which is not going to help BJp anytime. So as soon as BJP satisfied with current lokpal bill he also agreeing to it. It seems there is more than what meet to eyes. More than that Anna is a Daivabhakta and his natural support will be those who share his ideology not one who are bunch of aesthetes. This is my view.

    Reply
  5. ಅನಿತಾ

    Naveen H ಅವರೇ, ನೀವು ಅಣ್ಣಾ ಮತ್ತು ಗಾಂಧಿಯನ್ನು ಹೋಲಿಸುತ್ತಿದ್ದೀರಿ ಅಂತ ಅನಿಸುತ್ತದೆ. ದೇಶ ವಿಭಜನೆ ಸಮಯದಲ್ಲಿ ಗಾಂಧೀ ಕೂಡ ಒಂದು ವಿಭಾಗದ ಆಶಯಕ್ಕೆ ಮಣಿದು ದೇಶ ವಿಭಜನೆಗೆ ಸಮ್ಮತಿಸಿದ ಆಪಾದನೆಗೆ ಒಳಗಾಗಿದ್ದರು.

    Reply
  6. ಅನಿತಾ

    ಸಮಾಜವಾದಿ ಪಕ್ಷ, ಅರ್ ಜೆ ಡಿ ಗಳಂತಹ ಪಕ್ಷಗಳನ್ನು ಜಾತ್ಯತೀತ ಅಂತ ಕರೆಯಲು ಸಾಧ್ಯವೇ? ಈ ಪಕ್ಷಗಳು ಯಾದವ ಮುಸ್ಲಿಂ ಸೂತ್ರದಲ್ಲಿ ಬದುಕುತ್ತಿವೆ. ಇತ್ತೀಚೆಗಿನ ಮುಜಪರ್ ನಗರ ಹಿಂಸೆಯಲ್ಲಿ ಎಸ್ ಪಿ ನಡೆದುಕೊಂಡ ರೀತಿ ಜಾತ್ಯತೀತ ಪಕ್ಷದಂತಿದೆಯೇ? ಹಾಗಿದ್ದರೂ ಈ ಪಕ್ಷಗಳು ಜಾತ್ಯತೀತ ಅಂತ ಕರೆಸಿಕೊಂಡು ‘ಕೋಮುವಾದಿ ಪಕ್ಷ’ವನ್ನು ದೂರವಿರಿಸಲು ಕಾಂಗ್ರೆಸ್ ಜತೆ ಸೇರಬಹುದು. ಇವುಗಳಿಗೆ ರಾಜಕೀಯ ಅಶ್ಪ್ರುಶ್ಯತೆ ಇಲ್ಲ!
    ಕೇರಳದಲ್ಲಿ ‘ಮುಸ್ಲಿಂ ಲೀಗ್’ ಅಂತ ಪಕ್ಷವೊಂದಿದೆ. ಇನ್ನೊಂದೆರಡು ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರೋದ್ರಿಂದ ರಾಷ್ಟ್ರೀಯ ಪಕ್ಷ ಅಂತ ಕರೆಸಿಕೊಳ್ಳುವ ಇದು ಕಾಂಗ್ರೆಸ್ಸಿನ ಸ್ನೇಹಿತ (ಹಿಂದೊಮ್ಮೆ ಎಡ ಪಕ್ಷಗಳ ಜತೆ ಸೇರಿ ಸರಕಾರ ರಚಿಸಿದ್ದೂ ಇದೆ) ಈ ಪಕ್ಷದಲ್ಲಿ ಪ್ರಾಥಮಿಕ ಸದಸ್ಯತ್ವ ಪಡೆಯಲು ಮುಸ್ಲಿಂ ಆಗಿರಲೇ ಬೇಕು. ಉಳಿದ ಧರ್ಮೀಯರಿಗೆ ಈ ಪಕ್ಷದಲ್ಲಿ ಸ್ಥಾನವೇ ಇಲ್ಲ. ಗಮನಿಸಿ- ಬಿ ಜೆ ಪಿ ಯ ಸದಸ್ಯತ್ವ ಯಾವ ಧರ್ಮೀಯರೂ ಪಡೆಯಬಹುದು. ಸಿಕಂಧರ್ ಭಕ್ಥ್ ರಂತಹ ಮುಸ್ಲಿಮರು ಬಿ ಜೆ ಪಿ ಯಲ್ಲಿ ಉನ್ನತ ಸ್ಥಾನ ಪಡೆದಿದ್ದಾರೆ. ಅಬ್ದುಲ್ ಕಲಾಂ ರಾಷ್ಟ್ರಪತಿ ಆದದ್ದು ಬಿ ಜೆ ಪಿ ಕಾಲದಲ್ಲಿ. ನಾಳೆಯೇ ಲಕ್ಷ ಸಂಖ್ಯೆಯಲ್ಲಿ ಮುಸ್ಲಿಂ ಮುಖಂಡರು ಬಿ ಜೆ ಪಿ ಸೇರಿ ಅದನ್ನು ಮುಸ್ಲಿಂ ಪರ ಪಕ್ಷವನ್ನಾಗಿ ತಿದ್ದಬಹುದು( ಹಾಗೊಂದು ಅವಕಾಶ ಮುಕ್ತವಾಗಿದೆ) ಆದರೆ ಮುಸ್ಲಿಂ ಲೀಗಿನ ಸಂವಿಧಾನದಲ್ಲೇ ಇತರ ಧರ್ಮೀಯರಿಗೆ ಅವಕಾಶವಿಲ್ಲ. ಇಂದು ಕೇರಳ ವನ್ನು ವಾಸ್ತವವಾಗಿ ಆಳುತ್ತಿರೊದು ಮುಸ್ಲಿಂ ಲೀಗ್. (ಯು ಡಿ ಎಫ್ ಮುಖಂಡ ಕಾಂಗ್ರೆಸ್ ಎಂಬುದು ಹೆಸರಿಗೆ ಮಾತ್ರ) ಈ ಮುಸ್ಲಿಂ ಲೀಗ್ ಮುಸ್ಲಿಂ ಹಿತಾಸಕ್ತಿ ಗಾಗಿ ಮಾತ್ರ ಕೆಲಸ ಮಾಡುತ್ತಿದೆ ( ಮಾರಾಡ್ ದೊಮ್ಬಿಯಲ್ಲಿ – ಕ್ಷಮಿಸಿ ರಾಜೇಂದ್ರ ಚೆನ್ನಿ ಅವರು ಹೇಳುವಂತೆ ಜನಾಂಗೀಯ ಕಗ್ಗೊಲೆಯಲ್ಲಿ ಬಡ ಹಿಂದೂ ಬೆಸ್ತರ ಬದುಕಿಗೆ ಕೊಳ್ಳಿ ಇಟ್ಟ ಈ ಪಕ್ಷ ಇತ್ತೀಚಿಗೆ ಮುಸ್ಲಿಂ ಹೆಣ್ಣು ಮಕ್ಕಳ ವಿವಾಹ ವಯಸ್ಸನ್ನು ೧೬ಕ್ಕೆ ಇಳಿಸಬೇಕು ಎಂದು ಪ್ರಯತ್ನಿಸುತ್ತಾ ಇದೆ )
    ಹೇಳಿ – ಕೋಮುವಾದಿ , ಜಾತ್ಯತೀತ ಎಂಬುದು ಸರಳ ಸಮೀಕರಣಕ್ಕೆ ದಕ್ಕುವುದೇ? ಇದೆಲ್ಲ ಅರ್ಥಮಾಡಿ ಕೊಳ್ಳದ ಕೆಲವು ಸಾಹಿತಿಗಳು ‘ಕೋಮುವಾದಿ ಸರಕಾರ ನೀಡುವ ಪ್ರಶಸ್ತಿ ಸ್ವೀಕರಿಸುವುದಿಲ್ಲ’ ಎನ್ನುವಾಗ ನಗು ಬರುತ್ತದೆ. ಹಾಗಾದರೆ ಮೊದಲು ಮುಸ್ಲಿಂ ಲೀಗ್ ಮೈತ್ರಿ ಕಳೆದುಕೊಳ್ಳಲು ಕಾಂಗ್ರೆಸ್ಸಿಗೆ ಹೇಳಿ. ಅಲ್ಲಿಯ ಕಾಂಗ್ರೆಸ್ ನೀಡುವ ಪ್ರಶಸ್ತಿ ಕೂಡ ಸ್ವೀಕರಿಸ ಬೇಡಿ
    ಪ್ರಗತಿ ಪರರು ಜಾತ್ಯತೀತತೆ ಎಂಬುದಕ್ಕೆ ಸ್ಪಷ್ಟ ವ್ಯಾಖ್ಯಾನ ನೀಡಬೇಕು. ಹಿಂದೂ ಪರವಾದರೆ ಜಾತ್ಯತೀತ ಅಲ್ಲ, ಆದರೆ ಹೆಚ್ಚು ಮುಸ್ಲಿಂ ಪರವಾಗಿದ್ದಷ್ಟೂ ಮುಸ್ಲಿಂ ಪರವಾಗಿ ಹಿಂಸೆ ಭಯೋತ್ಪಾದನೆ ನಡೆಸಿಷ್ಟೂ ಜಾತ್ಯತೀತ ಮೌಲ್ಯ ಹೆಚ್ಚಾಗುತ್ತದೆ ಎಂಬ ನಿಲುವು ನಿಮ್ಮದಾದರೆ ಅದನ್ನು ಒಪ್ಪಿಕೊಳ್ಳಲು ಜನರು ಮೂರ್ಖರಲ್ಲ

    Reply

Leave a Reply to Ananda Prasad Cancel reply

Your email address will not be published. Required fields are marked *