ಕೊನೆಗೂ ಅನುಮೋದನೆಗೊಂಡ ಲೋಕಪಾಲ್ ಮಸೂದೆ…


– ರವಿ ಕೃಷ್ಣಾರೆಡ್ಡಿ


 

ಕೊನೆಗೂ ನಮ್ಮ ಸಂಸದರು ಲೋಕಪಾಲ್ ಮಸೂದೆಯನ್ನು ಅನುಮೋದಿಸಿಯೇಬಿಟ್ಟರು. ಮೂರ್ನಾಲ್ಕು ದಶಕಗಳಿಂದ ಮರೀಚಿಕೆಯಾಗಿದ್ದ ಈ ಮಸೂದೆ ಕಳೆದ ಐದಾರು ದಿನಗಳಲ್ಲಿ ಪಡೆದುಕೊಂಡ ವೇಗ ನೋಡಿ ದಂಗಾಗದೆ ಹೋದವರು ವಿರಳ. ಹಾಲಿ ಲೋಕಸಭೆ ಮತ್ತು ರಾಜ್ಯಸಭೆಯ “ಗೌರವಾನ್ವಿತ”, “ಅರ್ಹ”, “ಜವಾಬ್ದಾರಿಯುತ” ಸಂಸದರಿಗೆ ಇಂತಹ ಪ್ರಮುಖ ಮಸೂದೆಯನ್ನು parliamentಗಂಭೀರವಾಗಿ ಚರ್ಚಿಸಿ ಅದನ್ನು ಅನುಮೋದನೆ ಮಾಡುವ ಪರಿಸ್ಥಿತಿ ಉದ್ಭವಿಸಿದ್ದು ಸ್ವಯಂಸ್ಫೂರ್ತಿಯಿಂದ ಮತ್ತು ಕರ್ತವ್ಯಪ್ರಜ್ಞೆಯಿಂದೇನಲ್ಲ. ಸಂಸತ್ತಿನ ಹೊರಗೆ ನಡೆದ ಘಟನೆಯೊಂದರ ಮೂಲಕವಾಗಿ. ಒಂದು ಸಣ್ಣ ರಾಜ್ಯದ ಚುನಾವಣೆಯಿಂದಾಗಿಯೇ ಇದು ಸಾಧ್ಯವಾಗಿದ್ದು ಎನ್ನುವ ಅಂಶ ನಮ್ಮ ಸಂಸದರ ಕರ್ತವ್ಯಪ್ರಜ್ಞೆ ಮತ್ತು ಯೋಗ್ಯತೆಯನ್ನು ಅಳೆಯುವಂತಾಗಿದ್ದು ದುರಂತ.

ಈಗಿನ ಲೋಕಪಾಲ್ ಎಷ್ಟು ಸಶಕ್ತ ಎನ್ನುವ ಅಂಶವನ್ನು ಹೊರಗಿಟ್ಟು ನೋಡಿದರೆ, ಇದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ. ಯಾವುದೇ ಮಸೂದೆಗಾಗಲಿ ತಿದ್ದುಪಡಿಗೊಳಗಾಗುವ ಅವಕಾಶ ಇದ್ದೇ ಇರುತ್ತದೆ. ಇದು ಸಾಕಷ್ಟು ಬಲಿಷ್ಟವಲ್ಲ ಎಂತಾದರೆ ಮತ್ತೆ ಅದಕ್ಕೆ ಜನ ಒತ್ತಡ ತಂದೇ ತರುತ್ತಾರೆ. ಆ ಆಶಾವಾದ ಮತ್ತು ಕ್ರಿಯಾಶೀಲತೆಯಲ್ಲಿ ನಾವು ಇದನ್ನು ಗಮನಿಸಬೇಕಿದೆ. ಅದನ್ನು ಬಲಿಷ್ಟಗೊಳಿಸುವ ಹೋರಾಟವನ್ನು ಆಮ್ ಆದ್ಮಿ ಪಕ್ಷ ಮುಂದುವರೆಸುವ ಎಲ್ಲಾ ಲಕ್ಷಣಗಳೂ ಇವೆ.

ಈ ಲೋಕಪಾಲ್ ಮಸೂದೆ ಅನುಮೋದನೆಗೊಂಡದ್ದರ ಶ್ರೇಯಸ್ಸು ಸಂಸದರಿಗಿಂತ ಹೆಚ್ಚಾಗಿ ಹೊರಗಿನವರಿಗೇ ಸಲ್ಲಬೇಕು. ಅಣ್ಣಾ ಹಜಾರೆ ಮತ್ತು ಅವರೊಡನೆ ಸೇರಿಕೊಂಡು “ಭ್ರಷ್ಟಾಚಾರ ವಿರುದ್ಧ ಭಾರತ” ಆಂದೋಳನ ರೂಪಿಸಿದ ಅವರೆಲ್ಲ ಸಹವರ್ತಿಗಳು, ದೇಶದಾದ್ಯಂತ ಅವರ ಕರೆಗೆ ಓಗೊಟ್ಟು ಆ ಚಳವಳಿಯಲ್ಲಿ ಪಾಲ್ಗೊಂಡ ಉಪವಾಸ ಸತ್ಯಾಗ್ರಹಿಗಳು, anna-kejriwalಕಾರ್ಯಕರ್ತರು, ಬೆಂಬಲಿಗರು, ಅರವಿಂದ್ ಕೇಜ್ರಿವಾಲ್ ಮತ್ತವರ ಆಮ್ ಆದ್ಮಿ ಪಕ್ಷ, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಿದ ದೆಹಲಿಯ ಮತದಾರರು. ಲೋಕಪಾಲ್ ಮಸೂದೆ ಇಂದಲ್ಲ ನಾಳೆ–ಅದು ಯಾವುದೇ ರೂಪದಲ್ಲಾಗಲಿ–ಬಂದೇ ಬರುತ್ತಿತ್ತು. ಆದರೆ ಅದು ಇಂದೇ ಅನುಮೋದನೆಗೊಳ್ಳಲು ಕಾರಣ ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಓಟು ಹಾಕಿದ ಮತದಾರ. ಬಹುಮುಖ್ಯವಾಗಿ ಅಭಿನಂದಿಸಬೇಕಿರುವುದು ಅವರನ್ನು.

ಈ ಲೋಕಪಾಲ್ ಮಸೂದೆ ಜಾರಿಗೆ ಬಂದ ತಕ್ಷಣ ಈ ದೇಶದಲ್ಲಿ ಭ್ರಷ್ಟಾಚಾರ ನಿಂತೇ ಬಿಡುತ್ತದೆ ಎಂಬ ಭ್ರಮೆ ಯಾರಿಗೂ ಇಲ್ಲ. ಆದರೆ ಉನ್ನತ ಮಟ್ಟದಲ್ಲಿಯ ಭ್ರಷ್ಟಾಚಾರವನ್ನು ತಡೆಯುವಲ್ಲಿ ಸಹಕಾರಿಯಾಗಿರುತ್ತದೆ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡುವವರಿಗೆ ಇಲ್ಲಿಯವರೆಗೂ ಇಲ್ಲದಿದ್ದಂತಹ ಕಾನೂನಿನ ಮತ್ತು ಸಂವಿಧಾನಿಕ ಸಂಸ್ಥೆಯೊಂದರ ಬೆಂಬಲ ಇನ್ನು ಮುಂದಕ್ಕೆ ಇರುತ್ತದೆ ಎನ್ನುವುದು ಪರಿಗಣಿಸಬೇಕಾದ ಅಂಶ. ರಾಜಕೀಯ ಭ್ರಷ್ಟಾಚಾರಕ್ಕೊಂದಕ್ಕೆ ಮುಕ್ತಿ ಸಿಕ್ಕಿದರೆ ಸಾಲದು. ಒಟ್ಟಾರೆ ಸಮಾಜದಲ್ಲಿಯ arvind-kejriwal-campaigningನೈತಿಕ ಮೌಲ್ಯಗಳ ಪ್ರಜ್ಞೆ ಎತ್ತರಕ್ಕೇರಿದರೆ ಮಾತ್ರ ಇಲ್ಲಿ ಭ್ರಷ್ಟಾಚಾರ ತೀವ್ರಗತಿಯಲ್ಲಿ ಕಡಿಮೆಯಾಗುತ್ತದೆ. ನಮ್ಮ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ನಾಯಕರ ಮುಂದಿರುವ ಬಹುದೊಡ್ಡ ಸವಾಲು ಅದು.

ದೇಶದಲ್ಲಿಯ ಇಂದಿನ ರಾಜಕೀಯ ಸಂಚಲನ ಉತ್ತಮವಾದ, ನೈತಿಕವಾದ, ಜವಾಬ್ದಾರಿಯುತವಾದ ಪ್ರಜಾಪ್ರಭುತ್ವವೊಂದನ್ನು ಕಟ್ಟಿಕೊಳ್ಳುವ ಅವಕಾಶವನ್ನು ನಮಗೆ ಕಲ್ಪಿಸುತ್ತಿದೆ. ಸಮಾಜಕ್ಕಾಗಿ, ಈ ದೇಶದ ಪ್ರಜೆಗಳಿಗಾಗಿ, ನಮ್ಮ ವರ್ತಮಾನದ ಮತ್ತು ಮುಂದಿನ ತಲೆಮಾರುಗಳಿಗಾಗಿ ನಾವು ರಾಜಕೀಯ ಮಾಡಬೇಕಿದೆ ಎಂದು ಭಾವಿಸುವವರು ಮುನ್ನೆಲೆಗೆ ಬರಲು, ಕಾರ್ಯಪ್ರವೃತ್ತರಾಗಲು ಇದು ಪ್ರಶಸ್ತವಾದ ಸಮಯ. ಕಳೆದ ಮೂರು-ನಾಲ್ಕು ದಶಕಗಳಲ್ಲಿ ಕಂಡಂತಹ ಜನಪ್ರತಿನಿಧಿಗಳಿಗಿಂತ ಉತ್ತಮರಾದ, ಯೋಗ್ಯರಾದ, ಪ್ರಾಮಾಣಿಕರಾದ ಜನಪ್ರತಿನಿಧಿಗಳನ್ನು ನಾವು ಮುಂದಿನ ಐದಾರು ವರ್ಷಗಳಲ್ಲಿಯೇ ಕಾಣುತ್ತೇವೆ ಎನ್ನುವ ವಿಶ್ವಾಸ ನನ್ನದು.

ಆದರೆ, ಇದೇ ಸಮಯದಲ್ಲಿ ಅನೇಕ ತೋಳಗಳು ಕುರಿವೇಷ ತೊಟ್ಟು ಜನರ ಮುಂದೆ ಬರಲು ಸನ್ನದ್ಧರಾಗುತ್ತಿದ್ದಾರೆ.india ಇವರನ್ನು ಗುರುತಿಸಲು ಮತ್ತು ಅಂತಹವರನ್ನು ನಿರಾಕರಿಸಲು ಜನರೂ ಪ್ರಯತ್ನಿಸಬೇಕು. ದೇಶದ ಬಗ್ಗೆ ಕಾಳಜಿ ಇರುವ ನನ್ನ ಯುವಮಿತ್ರರಲ್ಲಿ ಒಂದು ಮನವಿ: ನೀವು ಇಷ್ಟೂ ದಿನ ನೋಡಿದ್ದಕ್ಕಿಂತ ಬೇರೆಯದೇ ರಾಜಕಾರಣವನ್ನು ಈ ದೇಶದಲ್ಲಿ ನೀವು ಇನ್ನು ಮುಂದಕ್ಕೆ ನೋಡಲಿದ್ದೀರಿ. ಅದು ಗೌರವಾನ್ವಿತವಾದದ್ದೂ ಆಗಿರಲಿದೆ. ಮತ್ತು ನೀವು ಯೋಗ್ಯರಾಗಿದ್ದಲ್ಲಿ ಮತ್ತು ಪ್ರಾಮಾಣಿಕರಾಗಿದ್ದಲ್ಲಿ ರಾಜಕೀಯ ಮತ್ತು ಚುನಾವಣೆಗಳು ಸುಲಭವೂ ಆಗಲಿದೆ. ನಿಮ್ಮ ಆಶಯಗಳಿಗೆ ಸ್ಪಂದಿಸುವ, ಸಂಕುಚಿತತೆಯನ್ನೇ ತಮ್ಮ ಬಂಡವಾಳವಾಗಿಟ್ಟುಕೊಂಡಿಲ್ಲದ, ಪ್ರಜಾಸತ್ತೆಯಲ್ಲಿ ಪ್ರಶ್ನಾತೀತ ವಿಶ್ವಾಸ ಹೊಂದಿರುವ, ಸಾರ್ವಕಾಲಿಕ ಮೌಲ್ಯಗಳನ್ನು ಗೌರವಿಸುವಂತಹ, ಆಂತರಿಕ ಪ್ರಜಾಪ್ರಭುತ್ವ ಹೊಂದಿರುವಂತಹ, ಈ ದೇಶದ ಬಹುತ್ವವನ್ನು ಮತ್ತು ಪರಂಪರೆಯನ್ನು ಒಪ್ಪಿಕೊಳ್ಳುವಂತಹ, ಭಾರತ ದೇಶದ ಸಂವಿಧಾನಕ್ಕೆ ನಿಷ್ಟವಾಗಿರುವಂತಹ, ಮತ್ತು ನಿಮ್ಮ ಮನಸ್ಸಿಗೆ ಒಪ್ಪುವಂತಹ ಯಾವುದಾದರೂ ಒಂದು ಪಕ್ಷದಲ್ಲಿ ಗುರುತಿಸಿಕೊಳ್ಳಲು ಆರಂಭಿಸಿ. ಕೆಲಸ ಮಾಡಿ. ಈ ದೇಶಕ್ಕೆ ಲಕ್ಷಾಂತರ ಜನಪ್ರತಿನಿಧಿಗಳ ಮತ್ತು ರಾಜಕೀಯ ನಾಯಕರ ಅಗತ್ಯ ಇದೆ. ಉತ್ತಮ ಜನಪ್ರತಿನಿಧಿಗಳಲ್ಲಿ ನೀವೂ ಒಬ್ಬರಾಗಲು ಪ್ರಯತ್ನಿಸಿ. ಆ ದಿಸೆಯಲ್ಲಿ ನಡೆಯುವ ಮೂಲಕ ನೀವೂ ಬೆಳೆಯುತ್ತೀರಿ, ದೇಶವೂ ವಿಕಾಸವಾಗುತ್ತದೆ.

Leave a Reply

Your email address will not be published. Required fields are marked *