Daily Archives: December 20, 2013

ಆಮ್ ಆದ್ಮಿ ಪಾರ್ಟಿ – ಭಾರತದ ಟೀ ಪಾರ್ಟಿ ಮೂವ್‌ಮೆಂಟ್

– ಮೂಲ : ಶೃತಿ ಕಪಿಲ
– ಅನುವಾದ: ಬಿ.ಶ್ರೀಪಾದ ಭಟ್

ಆಮ್ ಆದ್ಮಿ ಪಾರ್ಟಿಯಲ್ಲಿ ಅಮ್ (ಸಾಮಾನ್ಯ) ಅನ್ನುವಂತಹದ್ದೇನು ಕಾಣಿಸುತ್ತಿಲ್ಲ. ಆದರೆ ಈ ಪಕ್ಷವು ಸಾಮಾನ್ಯ ಮನುಷ್ಯನ ಹೆಸರಿನಲ್ಲಿ ದೇಶದ ರಾಜಧಾನಿಯನ್ನು ಅಭೂತಪೂರ್ವವಾಗಿ ಗೆದ್ದು ಭಾರತದ ಪ್ರಜಾಪ್ರಭುತ್ವದ ನಕ್ಷೆಯಲ್ಲಿ ಪ್ರವೇಶಿಸಿರುವುದನ್ನು ಒಪ್ಪಿಕೊಳ್ಳಲೇಬೇಕು. ಇಂಡಿಯಾದ ರಾಜಕೀಯ ವಾತಾವರಣಕ್ಕೆ arvind-kejriwal-delhi-electionsಈ ಬಗೆಯ ಗೆಲುವು ಮಹತ್ವದ್ದಾಗಿದ್ದರೂ ಸಮಕಾಲೀನ ರಾಜಕೀಯ ಸಂದರ್ಭದಲ್ಲಿ ಮಾತ್ರ ಈ ರೀತಿಯ ರಾಜಕೀಯ ಪ್ರವೇಶ ಸಾಮಾನ್ಯವಾದದ್ದು. ಕಳೆದ ದಶಕದಿಂದ ತಹ್ರೀರ್ ಚೌಕದಿಂದ ತಾಸ್ಕಿಮ್ ಚೌಕದವರೆಗಿನ ಜಾಗತಿಕ ಮಟ್ಟದ ರಾಜಕೀಯ ಮತ್ತು ಸಾಮಾಜಿಕ ವಿದ್ಯಾಮಾನಗಳನ್ನು ಅವಲೋಕಿಸಿದಾಗ ನೇಪಥ್ಯದಲ್ಲಿದ್ದ ಸಾಮಾನ್ಯ ಮನುಷ್ಯನು ದಿಢೀರನೆ ಈ ಬಗೆಯ ಸಾರ್ವಜನಿಕವಾದ ಅತ್ಯಂತ ಮಹತ್ವದ ವೇದಿಕೆಗೆ ಬಂದು ನಿಲ್ಲವುದನ್ನು ನಾವು ಕಾಣಬಹುದು. ಆದರೆ ಇದು ಜಾಗತಿಕವಾಗಿ ವಿವಿಧ ದೇಶಗಳಲ್ಲಿ ಒಂದೇ ಬಗೆಯ pattern ನಲ್ಲಿ ಸಂಭವಿಸುತ್ತದೆ ಎನ್ನುವ ಚಿಂತನೆ ಮೋಸಗೊಳಿಸುವಂತಹದ್ದು. ಕಡಿವಾಣದ ಮನಸ್ಥಿತಿ ಇಲ್ಲದಿದ್ದರೂ ದೆಹಲಿಯ ಚಲ್ತಾ ಹೈ ಚಿಂತನೆಯ ಸಮಾಜವು ಮತ್ತು ನಿರ್ಣಾಯಕ ರಾಜಕೀಯ ಶಕ್ತಿಗಳು ಸ್ವಘೋಷಿತ ಆಮ್ ಆದ್ಮಿ ಅರ್ಥಾತ್ ಸಾಮಾನ್ಯ ಮನುಷ್ಯನ ಹೆಸರಿನಲ್ಲಿ ಒಂದು ಬಗೆಯ ಬದಲಾವಣೆಗಾಗಿ ಒಗ್ಗಟ್ಟಾಗಿ ಗುಂಪುಗೂಡುತ್ತಿದ್ದದು ಕಳೆದೆರಡು ವರ್ಷಗಳಲ್ಲಿ ಕಂಡುಬರುವ ಸಾಮಾನ್ಯ ನೋಟವಾಗಿತ್ತು.

ಈ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷವು ಈ ದಿನಕ್ಕೆ,ಈ ಕ್ಷಣಕ್ಕೆ ತುರ್ತಾಗಿ ಇದು ಆಗಲೇಬೇಕೆಂಬ rhetoric ರಾಜಕೀಯ ವಾತಾವರಣವನ್ನು ನಿರ್ಮಿಸಿತ್ತು. ಪ್ರಭುತ್ವ ಮತ್ತು ಪ್ರಜೆಗಳ ನಡುವಿನ ಸಂಬಂಧದ ಇತಿಹಾಸವನ್ನು ಅವಲೋಕಿಸಿದರೆ kejriwal_aap_pti_rallyನಾವು ಇದರ ವಿರೋಧಿ, ನಾವು ಅದರ ವಿರೋಧಿ ಎನ್ನುವಂತಹ rhetoric ರಾಜಕೀಯ ಭಾಷೆ ಇಂದಿನ ಸಮಕಾಲೀನ ಸಂದರ್ಭದಲ್ಲಿ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ. ಕೇಂದ್ರದಲ್ಲಿ ಅನೇಕ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧದ ಕಾಂಗ್ರೆಸ್ ವಿರೋಧಿ rhetoric ರಾಜಕೀಯ ಭಾಷೆಯು ಈ ಆಮ್ ಆದ್ಮಿ ಪಕ್ಷಕ್ಕೆ ಗಟ್ಟಿಯಾದ ನೆಲೆಗಟ್ಟನ್ನು ತಂದುಕೊಟ್ಟಿತು.

ಐವತ್ತರ ದಶಕದ, ನೆಹರೂ ಅವರ ಆಡಳಿತಾವಧಿಯ ಕಾಲಘಟ್ಟದಲ್ಲಿ, ಇಡೀ ದೇಶವೇ ಪ್ರಧಾನಿ ನೆಹರೂ ಅವರನ್ನು ಅಭಿಮಾನದಿಂದ ಪೂಜಿಸುತ್ತಿದ್ದಂತಹ ಅಂದಿನ ದಿನಗಳಲ್ಲಿ ಸಮಾಜವಾದಿ ನಾಯಕ ರಾಮಮನೋಹರ ಲೋಹಿಯ ಅವರು ವಂಶಾಡಳಿತದ ವಿರುದ್ಧ, ಏಕಮಾದ್ವೇತೀಯವಾದ ರಾಜಕೀಯ ಅಧಿಕಾರದ ವಿರುದ್ಧ “ಕಾಂಗ್ರೆಸ್ ವಿರೋಧಿ” ಆಂದೋಲನವನ್ನು ಕಟ್ಟುತ್ತಿದ್ದರು. 60 ರ ದಶಕದಲ್ಲಿ ಲೋಹಿಯಾ ನೇತೃತ್ವದ ಈ ಕಾಂಗ್ರೆಸ್ ವಿರೋಧಿ ಆಂದೋಲವು ಭಾರತದ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಇತರೇ ವಿರೋಧಿ ಪಕ್ಷಗಳು ಅಧಿಕಾರಕ್ಕೆ ಬರುವಂತಹ ವಾತಾವರಣ ನಿರ್ಮಿಸಿತ್ತು. ಇಂದಿನ ಪರಿಸ್ಥಿತಿಯನ್ನು ಅಂದಿನ 60 ರ ದಶಕದ ರಾಜಕೀಯ ವಾತಾವರಣಕ್ಕೆ ಹೋಲಿಸಿದಾಗ ಅನೇಕ ಸಾಮ್ಯತೆಗಳು ಕಂಡುಬರುತ್ತವೆ. ಆಗ ಭೂಮಿ ಹಂಚಿಕೆಯಲ್ಲಿನ ತಾರತಮ್ಯ ಮತ್ತು ವ್ಯವಸಾಯ ಉತ್ಪನ್ನಗಳ ಇಳಿಮುಖವು ತಾರಕಕ್ಕೇರಿತು. ಇಂದಿನ ಪರಿಸ್ಥಿತಿಯೂ ಅಂದಿನದಕ್ಕಿಂತ ಭಿನ್ನವಾಗೇನಿಲ್ಲ. Lohialಆಗಲೂ ಹಿಂಸಾತ್ಮಕ ನಕ್ಸಲೈಟ್ ಮೂವ್‌ಮೆಂಟ್ ಶುರುವಾಗಿದ್ದರೆ ಇಂದಿನ ದಿನಗಳಲ್ಲಿಯೂ ಹಿಂಸಾತ್ಮಕ ಮಾವೋವಾದಿ ಚಳುವಳಿಯು ದೇಶದ ಅನೇಕ ಕಡೆಗಳಲ್ಲಿ ಕ್ರಿಯಾಶೀಲವಾಗಿದೆ.

“ಕಾಂಗ್ರೆಸ್ ವಿರೋಧಿ, ಇಂಗ್ಲೀಷ್ ವಿರೋಧಿ, ಜಾತಿ ವಿರೋಧಿ” ಚಳುವಳಿಗಳು ಮತ್ತು ಸಿದ್ಧಾಂತಗಳು ರಾಮಮನೋಹರ ಲೋಹಿಯಾರವರ ರಾಜಕೀಯ ಮಾನಿಫೆಸ್ಟೋಗಳಾಗಿದ್ದವು. ಪರಿಣಾಮದ ಮಟ್ಟದಲ್ಲಿ ಗಾಂಧಿ, ಮಾರ್ಕ್ಸರವರ ಸಿದ್ಧಾಂತ, ಚಳುವಳಿಗಿಂತ ಲೋಹಿಯಾರ ಈ ಸಿದ್ಧಾಂತಗಳು ಮತ್ತು ಚಳುವಳಿಗಳು ತುಂಬಾ ಕಡಿಮೆಯಿದ್ದರೂ ಸಮಾಜವನ್ನು, ವ್ಯವಸ್ಥೆಯನ್ನು ಮುಟ್ಟುವ ಮಟ್ಟದಲ್ಲಿ ಪ್ರಭಾವಶಾಲಿಯಾಗಿತ್ತು. ಈ ಹಿನ್ನೆಲೆಯಲ್ಲಿ ರಾಮಮನೋಹರ ಲೋಹಿಯಾ ಅವರು ದೇಶದ ಬುದ್ಧಿಜೀವಿ ರಾಜಕಾರಣಿಯಾಗಿ ತೀವ್ರವಾದ ಬದಲಾವಣೆಗಳ ಹರಿಕಾರರಾಗಿದ್ದರು. ಸೋಷಿಯಲಿಸ್ಟ್ ಚಿಂತಕರಾಗಿದ್ದ ಲೋಹಿಯಾರವರು ಸಿದ್ಧ ಮಾದರಿಯ ರಾಜಕೀಯ ವ್ಯವಸ್ಥೆಯ ವಿರುದ್ಧ ಸೆಡ್ಡು ಹೊಡೆದು ಅದನ್ನು ತಿರಸ್ಕರಿಸಿದರು. ಅದಕ್ಕೆ ಪರ್ಯಾಯವಾಗಿ ಸಾಮಾಜಿಕ ಆಶಯಗಳೇ ಪ್ರಧಾನವಾಗಿದ್ದ ರಾಜಕೀಯ ಚಿಂತನೆಗಳನ್ನು ಜಾರಿಗೆ ತಂದರು. ಸಾರ್ವಜನಿಕ ಖರ್ಚುವೆಚ್ಚಗಳಿಂದ ಹಿಡಿದು ಮಾನವ ಹಕ್ಕುಗಳವರೆಗೂ, ಹಿಂಸಾತ್ಮಕ ಸಾಮಾಜಿಕ ವಾತಾವರಣದ ವಿರುದ್ಧದಿಂದ ಹಿಡಿದು ವಿದೇಶಾಂಗ ನೀತಿಗಳವರೆಗೂ ತಮ್ಮ ಸಿದ್ಧಾಂತಗಳನ್ನು ರೂಪಿಸಿದರು. ಇದಕ್ಕಾಗಿ ನ್ಯಾಯಾಂಗ ಮತ್ತು ಪ್ರಜಾಪ್ರಭುತ್ವದ ಜೀವ ಪ್ರಜೆಗಳನ್ನು ಒಳಗೊಳ್ಳುವಂತಹ ರಾಜಕೀಯ ವಾತಾವರಣಕ್ಕಾಗಿ ಶ್ರಮಿಸಿದರು.

ಆದರೆ ರಾಮಮನೋಹರ ಲೋಹಿಯಾ ಅವರನ್ನು ಇತರೇ ಹಿಂದುಳಿದ ಜಾತಿಗಳ ಸಾಮಾಜಿಕ ಮತ್ತು ರಾಜಕಾರಣವು ಪ್ರವರ್ಧಮಾನಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಅದರ ಅದ್ಯಪ್ರವರ್ತಕರಾಗಿದ್ದರು ಎಂದೇ ವಿಶ್ಲೇಷಿಸಲಾಗುತ್ತದೆ. ಹಿಂದುಳಿದ ಜಾತಿಗಳು ಮತ್ತು “ಸಾಮಾಜಿಕ” ಐಡೆಂಟಿಟಿಯನ್ನು ಮುಖ್ಯ ಧಾರೆಯಲ್ಲಿ ಚರ್ಚೆಗೆ ಬರುವಂತೆ ಈ ಓಬಿಸಿ ರಾಜಕಾರಣವನ್ನು ರೂಪಿಸಲಾಗಿತ್ತು. ಆಗಾಗ ರಾಮಮನೋಹರ ಲೋಹಿಯಾ ಅವರು “ಆಮ್ ಆದ್ಮಿ” ಪದವನ್ನು, ಅದರ ಅಗತ್ಯತೆಯನ್ನು ಪ್ರಯೋಗಿಸುತ್ತಿದ್ದರೂ ಅದು ಈ “ಓಬಿಸಿ” ರಾಜಕಾರಣದ ಮುಂದೆ ಆ ನುಡಿಕಟ್ಟು ಮತ್ತು ಐಡೆಂಟಿಟಿ ಪ್ರಾಮುಖ್ಯತೆ ಪಡೆದುಕೊಳ್ಳಲಿಲ್ಲ. ಅಂದರೆ ಅಂದಿನ ಕಾಲಘಟ್ಟದಲ್ಲಿ, ಅಂದಿನ ಸಂದರ್ಭಕ್ಕೆ ಈ “ಆಮ್ ಆದ್ಮಿ” ನುಡಿಕಟ್ಟು ಪ್ರಸ್ತುತವಾಗಿರಲಿಲ್ಲವೇ? ಸಾಮಾಜಿಕ ನ್ಯಾಯದ ಚಿಂತನೆಗಳಲ್ಲಿ ಸ್ಥಾನ ಪಡೆದುಕೊಳ್ಳದೆ ಕೇವಲ ಜನಪ್ರಿಯ ಪದಪುಂಜವಾಗಿತ್ತೇ??

ಮುಂದಿನ ದಶಕಗಳಲ್ಲಿ ರಾಮಮನೋಹರ ಲೋಹಿಯಾ ಅವರು ಬಳಕೆಗೆ ತಂದ, ಪ್ರತಿಪಾದಿಸಿದ “ಸಂಯುಕ್ತ ಸರ್ಕಾರ”ದ ಕಲ್ಪನೆಗಳು, ಆಶಯಗಳು ಪ್ರಾಮುಖ್ಯತೆ ಪಡೆದುಕೊಳ್ಳತೊಡಗಿತು. ಇದರಲ್ಲಿ “ಓಬಿಸಿ” ಮೆಜಾರಿಟಿಯಲ್ಲಿತ್ತು. Advani-Rath-Yatraತೊಂಬತ್ತರ ದಶಕದ ವೇಳೆಗೆ ಅಡ್ವಾನಿಯವರ ರಥಯಾತ್ರೆ ತೀವ್ರವಾಗಿದ್ದಂತಹ ಸಂದರ್ಭದಲ್ಲಿ ಪರ್ಯಾಯವಾಗಿ “ಓಬಿಸಿ” ರಾಜಕಾರಣ ತನ್ನ ಪ್ರಭಾವನ್ನು ಹೆಚ್ಚಿಸಕೊಳ್ಳತೊಡಗಿತು. ಈ “ಕಮಂಡಲ”ಕ್ಕೆ ಪರ್ಯಾಯವಾಗಿ “ಮಂಡಲ್” ರಾಜಕಾರಣ ಪ್ರವರ್ಧಮಾನಕ್ಕೆ ಬರತೊಡಗಿತು. ಕಾಲಕಳೆದಂತೆ ಇದು ಮತ್ತಷ್ಟು ಸಂಕೀರ್ಣವಾಗತೊಡಗಿತು. ಇಂದಿನ ಆಮ್ ಆದ್ಮಿ ಪಕ್ಷದಂತೆಯೇ ಅಂದಿನ ದಿನಗಳಲ್ಲಿ ಈ ಜನಪ್ರಿಯ rhetoric ಬಳಸಿಕೊಂಡು ಎನ್.ಟಿ.ರಾಮರಾವ್ ನೇತೃತ್ವದ ತೆಲುಗುದೇಶಂ ಪಕ್ಷ ಅಧಿಕಾರಕ್ಕೆ ಬಂದಿತು.ಇದೇ ಬಗೆಯಲ್ಲಿಯೇ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸಹ ಉದಾಹರಿಸಬಹುದು.

ದೆಹಲಿ ರಾಜ್ಯದ ಎರಡು ವಿಭಿನ್ನ ಮಾದರಿಯ ಧ್ರುವಗಳ ನಡುವೆ ಹುಟ್ಟಿಕೊಂಡ “ಆಮ್ ಆದ್ಮಿ ಪಕ್ಷ”ವು ಜನತೆಯ ಸಿಟ್ಟು ಮತ್ತು ಅಸಹಾಯಕತೆಯನ್ನು ಸಂಪೂರ್ಣವಾಗಿ ಬಳಸಿಕೊಂಡಿತು. ಆರಂಭದಲ್ಲಿ underdog ಪ್ರಾದೇಶಿಕ ಪಕ್ಷವಾಗಿಯೇ ಗುರುತಿಸಿಕೊಂಡಿದ್ದ “ಆಮ್ ಆದ್ಮಿ” ಪಕ್ಷಕ್ಕೆ ಇಂದಿನ ವಿದ್ಯಾಮಾನಗಳ ಹಿನ್ನೆಲೆಯಲ್ಲಿ ಧಿಢೀರನೆ ಮಾಧ್ಯಮಗಳ ಪ್ರಚಾರ ದೊರಕಿಬಿಟ್ಟಿತು. ವಿವಿಧ ಬೇಡಿಕೆಗಳು ಮತ್ತು ವಿವಿಧ ವಿಚಾರಗಳ ನಡುವೆ ಒಂದು ಸಮಾನ ಕೊಂಡಿಯನ್ನು ನಿರ್ಮಿಸಿದ್ದು ಈ “ಆಮ್ ಆದ್ಮಿ ಪಕ್ಷ”. ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಬೆಲೆಯೇರಿಕೆ, ತುಟ್ಟಿಯಾದ ವಿದ್ಯುತ್ ಬಿಲ್ಲುಗಳು, AAP-manifesto-PTIಅತ್ಯಾಚಾರ ಮತ್ತು ಸೆಕ್ಸ್ ಎಲ್ಲವನ್ನೂ ಪೋಣಿಸಿ ಒಂದೇ ನೆಲೆಯಲ್ಲಿ ಚರ್ಚೆಗೆ ತರುವಲ್ಲಿ ಆಮ್ ಆದ್ಮಿ ಪಕ್ಷವು ಯಶಸ್ವಿಯಾಯಿತು

ಜನಪ್ರಿಯ ಸಿದ್ಧಾಂತವನ್ನು ಒಳಗೊಳ್ಳುತ್ತಲೇ ಮಧ್ಯಮವರ್ಗಗಳ ಸೆಂಟಿಮೆಂಟಲ್ ನೆಲೆಯಲ್ಲಿ ಇತರೇ ಬಲಾಢ್ಯ ಪಕ್ಷಗಳ ಓಲೈಸುವಿಕೆ ರಾಜಕಾರಣವನ್ನು ಟೀಕಿಸುತ್ತಾ ತನ್ನ ಪ್ರಸ್ತುತತೆಯನ್ನು ಗಟ್ಟಿಗಳಿಸಿಕೊಂಡಿದ್ದು ಆಮ್ ಆದ್ಮಿ ಪಕ್ಷದ ಗೆಲುವಿಗೆ ಮೂಲಭೂತ ಕಾರಣ. ಅಲ್ಲದೆ ಅಧಿಕಾರದಲ್ಲಿರುವ ಪಕ್ಷಗಳನ್ನು ಶತೃಗಳನ್ನಾಗಿ ಬಿಂಬಿಸುವಲ್ಲಿ ಮತ್ತು ಅದನ್ನು ಮಧ್ಯಮವರ್ಗಗಳಿಗೆ ನಂಬಿಸುವಲ್ಲಿಯೂ ಆಮ್ ಆದ್ಮಿ ಪಕ್ಷ ಯಶಸ್ವಿಯಾಯಿತು.

ಅದರೆ ಕೆಲವು ರಾಜಕೀಯ ವಿಶ್ಲೇಷಕರ ಪ್ರಕಾರ ಸಾಮಾಜಿಕ ನ್ಯಾಯ ಮತ್ತು ಸಮತಾವಾದದೊಂದಿಗೆ ಇಂದಿನ ಜನಪ್ರಿಯ ನಂಬಿಕೆಯಾದ ಕಾರ್ಯಕ್ಷಮತೆ ಮತ್ತು ಪಾರದರ್ಶಕತೆಯನ್ನು ಮುಖಾಮುಖಿಯಾಗಿಸುವುದರಲ್ಲಿ ಯಶಸ್ವಿಯಾಗಿರುವ ಮಧ್ಯಮವರ್ಗಗಳಿಗೆ ರಾಜಕೀಯವಾಗಿ ಅಂಬೆಗಾಲಿಡುತ್ತಿರುವ ಆಮ್ ಆದ್ಮಿ ಪಕ್ಷವು ಹೊಸ ಬೆಳಕಾಗಿದ್ದು ಸುಳ್ಳಲ್ಲ. ಆದರೆ ಹಿಂದುತ್ವದ ರಾಜಕಾರಣ ತಲೆಯೆತ್ತುತ್ತಿರುವಂತಹ ಇಂದಿನ ದಿನಗಳಲ್ಲಿ, ಕೋಮುವಾದದ ಗಲಭೆಗಳು ಮರುಕಳುಸಿತ್ತಿರುವಂತಹ ಇಂದಿನ ದಿನಗಳಲ್ಲಿ ಈ ಆಮ್ ಆದ್ಮಿ ಪಕ್ಷವು ಐಡೆಂಟಿಟಿ ರಾಜಕಾರಣಕ್ಕೆ ಅಂತ್ಯ ಹಾಡಿದೆ ಎಂಬಂತಹ ಚಿಂತನೆಗಳು ಇಂದು ಚರ್ಚಾರ್ಹವಾಗಿವೆ.

ಆದರೆ ರಾಜಕೀಯ ಅಧಿಕಾರವೇ ಈ ಆಮ್ ಆದ್ಮಿ ಪಕ್ಷಕ್ಕೆ ಐಡೆಂಟಿಟಿ ಕ್ರೈಸಿಸ್ ತಂದೊಡ್ಡಲಿದೆ. ತನ್ನ ಮ್ಯಾನಿಫೆಸ್ಟೋದಲ್ಲಿ ನೀಡಿದ ಭರವಸೆಗಳನ್ನು ಸಂಪೂರ್ಣವಾಗಿ ಈಡೇರಿಸುವಲ್ಲಿ ಈ ಪಕ್ಷವು ಪಟ್ಟಭಧ್ರ ಹಿತಾಸಕ್ತಿಗಳನ್ನು, ಅಧಿಕಾರದ ಲಾಬಿಗಳನ್ನು ಹೇಗೆ ಪಳಗಿಸುತ್ತದೆ ಎಂಬುದಕ್ಕೆ ಇಲ್ಲಿ ಉತ್ತರವಿಲ್ಲ.

ಆದರೆ ಪ್ರಜಾಪ್ರಭುತ್ವದ ದೇಶವೊಂದರ ಪ್ರಜೆಗಳು ಯಾವುದೇ ಜಾತಿಗೆ ಸೇರಿದವರಲ್ಲ ಅಥವಾ ಯಾವುದೇ ವರ್ಗಗಳಲ್ಲ, arvind-kejriwal-campaigningಬದಲಾಗಿ ತಳಮಳಗಳನ್ನು, ಸಿಟ್ಟನ್ನು ವ್ಯಕ್ತಪಡಿಸುವ ಸಾಮಾನ್ಯ ನಾಗರಿಕರು ಎನ್ನುವ ಸಿದ್ಧಾಂತವನ್ನು ಹೊಂದಿರುವ ಈ ಆಮ್ ಆದ್ಮಿ ಪಕ್ಷವನ್ನು ನಾವು ಅಮೇರಿಕಾ ದೇಶದ “ಟೀ ಪಾರ್ಟಿ”ಗೆ ಹೋಲಿಸಬಹುದು. ಅಷ್ಟೇಕೆ ಈ ಆಮ್ ಆದ್ಮಿ ಪಕ್ಷದ ನೇತಾರ ಅರವಿಂದ್ ಕೇಜ್ರಿವಾಲ್ ಹಲವಾರು ಬಾರಿ ಅಮೇರಿಕ ಮಾದರಿಯ ಡೆಮಾಕ್ರಸಿಯನ್ನು ಓಲೈಸಿರುವುದರಿಂದ ಸಾಮಾನ್ಯ ಜನರ ಕುಂದು ಕೊರತೆಗಳಿಗಾಗಿಯೇ ಹೋರಾಡಲು ಹುಟ್ಟಿಕೊಂಡಿರುವ ಅಲ್ಲಿನ ಟೀ ಪಾರ್ಟಿಯೊಂದಿಗೆ ಈ ಆಮ್ ಆದ್ಮಿ ಪಕ್ಷಕ್ಕೆ ಹಲವಾರು ಸಾಮ್ಯತೆಗಳಿವೆ. ಈ ಈ ಆಮ್ ಆದ್ಮಿ ಪಕ್ಷವು ಈ ಹೋರಾಟಕ್ಕಾಗಿ ಗಾಂಧಿ ಟೋಪಿಯನ್ನು ಸಾಂಕೇತಿಕವಾಗಿ ಬಳಸಿದಂತೆಯೇ ಅಲ್ಲಿನ ಟೀ ಪಾರ್ಟಿಯು ಕಲೋನಿಯಲ್ ವಿರೋಧಿ ಸಂಕೇತವನ್ನು ಬಳಸಿಕೊಂಡಿತ್ತು.

ಕಡೆಗೆ ವಿಭಿನ್ನ ಧ್ರುವಗಳಲ್ಲಿರುವ ರಾಜಕೀಯ ವ್ಯವಸ್ಥೆಯನ್ನು ಒಂದೇ ಪಾತಳಿಯಲ್ಲಿ ಪೋಣಿಸುವುದು ಈ ಆಮ್ ಆದ್ಮಿ ಪಕ್ಷದ ಸಾಧನೆ ಅಲ್ಲವೇ ಅಲ್ಲ. ತನ್ನ ಪಕ್ಷದ ಹೆಸರನ್ನು ರಾಜಕೀಯಕ್ಕಾಗಿ ಬಳಸಿಕೊಂಡಿರುವುದರಲ್ಲಿ ಮಾತ್ರ ಇದರ ಸಾಧನೆ ಇರುವುದು. ಆದರೆ ಸಧ್ಯಕ್ಕಂತೂ ಇದು ಯಾವುದೇ ಹೂರಣವಿಲ್ಲದ ಹೆಸರಾಗಿ ಉಳಿದಿದೆ

( ಕೃಪೆ: ಎಕನಾಮಿಕ್ಸ್ ಟೈಮ್ಸ್, 18 ಡಿಸೆಂಬರ್, 2013)

ಆಮ್ ಆದ್ಮಿ ಪಕ್ಷ ವ್ಯವಸ್ಥೆ ಬದಲಾವಣೆಯ ಹರಿಕಾರ ಆಗಲಿ

– ಆನಂದ ಪ್ರಸಾದ್

ಅರವಿಂದ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷವನ್ನು ಸ್ಥಾಪಿಸಿ ದೆಹಲಿಯಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಉತ್ತಮ ಸಾಧನೆ ಮಾಡಿದುದನ್ನು ನೋಡಿ ಪರಂಪರಾಗತ ರಾಜಕಾರಣಿಗಳು ಬೆಚ್ಚಿಬಿದ್ದಿದ್ದಾರೆ. ಈ ಪಕ್ಷವೆಲ್ಲಿಯಾದರೂ ಇದೇ ರೀತಿ ದೇಶಾದ್ಯಂತ ಬೆಳೆದರೆ ತಮ್ಮ ಅಸ್ತಿತ್ವಕ್ಕೆ ಎಲ್ಲಿ ಧಕ್ಕೆಯಾಗುವುದೋ ಎಂಬ ಗಾಬರಿಯಿಂದ ಸಂಸತ್ತಿನಲ್ಲಿ ಲೋಕಪಾಲ್ ಮಸೂದೆಯನ್ನು ಅದು ದುರ್ಬಲವಾಗಿದ್ದರೂ ತರಾತುರಿಯಲ್ಲಿ ಮಂಡಿಸಿ ಪಾಸು ಮಾಡಿಸಿಕೊಂಡಿದ್ದಾರೆ. ಈ ತರಾತುರಿಗೆ ಕಾರಣ ಅಣ್ಣಾ ಹಜಾರೆಯವರ anna-hazareಉಪವಾಸ ಸತ್ಯಾಗ್ರಹವೇನೂ ಅಲ್ಲ. ಅಣ್ಣಾ ಹಜಾರೆಯವರ ಉಪವಾಸ ಸತ್ಯಾಗ್ರಹ ಇದಕ್ಕೆ ಕಾರಣವೆಂದಾದರೆ ಈ ಮಸೂದೆ ಎರಡು ವರ್ಷಗಳ ಹಿಂದೆಯೇ ಪಾಸಾಗಬೇಕಿತ್ತು. ಎರಡು ವರ್ಷಗಳ ಹಿಂದೆ ಉಪವಾಸ ಸತ್ಯಾಗ್ರಹ ಮಾಡಿದ ನಂತರ ಅಣ್ಣಾ ಹಜಾರೆಯವರೂ ಉಪವಾಸ ಕುಳಿತುಕೊಳ್ಳದೆ ಲೋಕಸಭಾ ಚುನಾವಣೆ ಹತ್ತಿರ ಆಗುತ್ತಿದ್ದಂತೆ ಮಸೂದೆಯನ್ನು ಪಾಸು ಮಾಡುವಂತೆ ಉಪವಾಸ ಕುಳಿತುಕೊಂಡದ್ದು ಕಾಕತಾಳೀಯ ಇರಲಾರದು. ಅಣ್ಣಾ ಹಜಾರೆಯವರ ರಾಜಕೀಯ ನಿಲುವು ನೋಡಿದಾಗ ಅವರು ಬಿಜೆಪಿ ಹಾಗೂ ಸಂಘ ಪರಿವಾರದ ಸಿದ್ಧಾಂತಗಳಿಗೆ ಹತ್ತಿರವಿರುವುದು ಕಂಡುಬರುತ್ತದೆ. ಭ್ರಷ್ಟಾಚಾರ ವಿರೋಧಿ ಹೋರಾಟದ ಫಲವಾಗಿ ದೇಶಾದ್ಯಂತ ಎದ್ದ ಜನಜಾಗೃತಿಯ ಫಲ ಬಿಜೆಪಿ ಪಕ್ಷಕ್ಕೆ ದೊರಕಲಿ ಎಂಬ ಒಳ ಆಶಯ ಅಣ್ಣಾ ಅವರಲ್ಲಿ ಹಾಗೂ ಅವರ ಸಂಗಡಿಗರಾದ ಕೆಲವರಲ್ಲಿ ಇರುವಂತೆ ಕಾಣುತ್ತದೆ. ಹೀಗಾಗಿಯೇ ಅರವಿಂದ ಕೇಜ್ರಿವಾಲ್ ಪ್ರತ್ಯೇಕ ಪಕ್ಷ ಸ್ಥಾಪಿಸಿ ರಾಜಕೀಯ ಹೋರಾಟದ ನಿರ್ಧಾರ ತೆಗೆದುಕೊಂಡಾಗ ಅದನ್ನು ಬೆಂಬಲಿಸಲು ಹಜಾರೆ ನಿರಾಕರಿಸಿದುದು ಹಾಗೂ ದೆಹಲಿ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನ ಬಾಕಿ ಇದೆ ಎಂದಿರುವಾಗ ಭ್ರಷ್ಟಾಚಾರ ವಿರೋಧಿ ಹೋರಾಟದ ಸಮಯದಲ್ಲಿ ಸಂಗ್ರಹವಾದ ನಿಧಿಯನ್ನು ಕೇಜ್ರಿವಾಲ್ ಚುನಾವಣೆಗೆ ಬಳಸುತ್ತಿದ್ದಾರೆಯೋ ಎಂಬ ಗೊಂದಲವನ್ನು ಸೃಷ್ಟಿಸಿ ಜನತೆಯಲ್ಲಿ anna-kejriwalಕೇಜ್ರಿವಾಲ್ ಹಾಗೂ ಸಂಗಡಿಗರ ಬಗ್ಗೆ ಅಪನಂಬಿಕೆಯನ್ನು ಹುಟ್ಟು ಹಾಕಿದ್ದು ಕೂಡ ಇದೇ ಉದ್ಧೇಶದಿಂದ ಇರಬಹುದು. ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಹೋರಾಟದ ಫಲ ಆಮ್ ಆದ್ಮಿ ಪಕ್ಷವು ಎಲ್ಲಿ ತನ್ನಿಂದ ಕಿತ್ತುಕೊಳ್ಳುವುದೋ ಎಂಬ ಭೀತಿಯಿಂದಲೇ ಬಿಜೆಪಿಯವರು ಅಣ್ಣಾ ಹಜಾರೆಗೆ ಕೇಜ್ರಿವಾಲ್ ಬೆನ್ನಿಗೆ ಚೂರಿ ಹಾಕಿದರು, ವಿಶ್ವಾಸ ದ್ರೋಹ ಮಾಡಿದರು ಎಂಬಂಥ ಅಪ್ರಪ್ರಚಾರದಲ್ಲಿ ತೊಡಗಿದರು. ಈ ಎಲ್ಲಾ ಅಪಪ್ರಚಾರದ ಹೊರತಾಗಿಯೂ ಕೇಜ್ರಿವಾಲರ ಆಮ್ ಆದ್ಮಿ ಪಕ್ಷ ದೆಹಲಿ ಚುನಾವಣೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿತು.

ಕೇಜ್ರಿವಾಲ್ ಹಾಗೂ ಸಂಗಡಿಗರು ರಾಜಕೀಯ ಪಕ್ಷ ಸ್ಥಾಪನೆ ಮಾಡಿರುವುದು ಭಾರತದ ಪಾಲಿಗೆ ಒಂದು ಒಳ್ಳೆಯ ನಿರ್ಧಾರವಾಗಿದೆ. ಇಂದು ದೇಶಕ್ಕೆ ಪರ್ಯಾಯ ರಾಜಕೀಯದ ಅಗತ್ಯವಿದೆ. ರಾಜಕೀಯ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರದೇ ಹೋದರೆ ಭಾರತದಲ್ಲಿ ಹೆಚ್ಚಿನ ಬದಲಾವಣೆ ತರಲು ಸಾಧ್ಯವಿಲ್ಲ. ಸಾಂಪ್ರದಾಯಿಕ ಪಕ್ಷಗಳಿಗೆ ಕ್ರಾಂತಿಕಾರಕ ಬದಲಾವಣೆ ತರುವುದು ಬೇಡವಾಗಿದೆ. ಅಂಥ ಬದಲಾವಣೆ ತರುವ ಮನಸ್ಸಿದ್ದರೆ ಈಗ ಇರುವ ಲೋಕಸಭೆ ಹಾಗೂ ರಾಜ್ಯಸಭೆಗಳೇ ಸೂಕ್ತ ಕಾನೂನುಗಳನ್ನು ಈಗಲೇ ಮಾಡುವುದು ಸಾಧ್ಯವಿದೆ. ಅದನ್ನೆಂದಾದರೋ ಅವುಗಳು ಮಾಡಿವೆಯೇ? ಇಲ್ಲ. ಪ್ರತಿಯೊಂದು ವಿಷಯಕ್ಕೂ ಜನರು ನಿರಂತರ ಒತ್ತಡ ಹಾಕಿದರೆ ಮಾತ್ರ ಕಾನೂನು ಮಾಡುವುದು ಎಂದಾದರೆ ಜನಪ್ರತಿನಿಧಿಗಳ ಅಗತ್ಯ ಏನು? aam-admi-partyರಾಜಪ್ರಭುತ್ವವನ್ನೇ ಮುಂದುವರಿಸಬಹುದಿತ್ತಲ್ಲವೇ? ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಒಂದೇ ನಾಣ್ಯದ ಎರಡು ಮುಖಗಳು ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಾ ಬಂದಿದೆ. ದೇಶಕ್ಕೆ ಇಂದು ಪ್ರಾಮಾಣಿಕ, ಜವಾಬ್ದಾರಿಯುತ, ಉದಾರವಾದಿ ನಾಯಕತ್ವದ ಅಗತ್ಯ ಇದೆ. ಇದನ್ನು ಆಮ್ ಆದ್ಮಿ ಪಕ್ಷವು ನೀಡುವ ಹಾಗೂ ಉಳಿದೆಲ್ಲ ಪಕ್ಷಗಳಿಗಿಂತ ತಾನು ಭಿನ್ನ ಎಂದು ತೋರಿಸುವ ಅಗತ್ಯ ಇದೆ. ಆಮ್ ಆದ್ಮಿ ಪಕ್ಷದ ಇದುವರೆಗಿನ ನಿಲುವನ್ನು ನೋಡಿದರೆ ಅದು ಉಳಿದ ಪಕ್ಷಗಳಿಗಿಂತ ಭಿನ್ನ ಎಂದು ತೋರಿಸಿಕೊಂಡಿದೆ. ಪಕ್ಷ ಕಟ್ಟಲು ಹಾಗೂ ಚುನಾವಣೆಗೆ ಸ್ಪರ್ಧಿಸಲು ಬೇಕಾದ ಹಣವನ್ನು ಜನರ ದೇಣಿಗೆಯಿಂದಲೇ ಪ್ರಾಮಾಣಿಕವಾಗಿ ಪಡೆದು ಅದನ್ನು ತನ್ನ ವೆಬ್ ಸೈಟಿನಲ್ಲಿ ಹಾಕಿ ಪಾರದರ್ಶಕತೆಯನ್ನು ಮೆರೆದಿದೆ. ಮತಗಳಿಗಾಗಿ ಹಣ, ಹೆಂಡ, ಇನ್ನಿತರ ಆಮಿಷಗಳನ್ನು ಮತದಾರರಿಗೆ ಒಡ್ಡಿಲ್ಲ. ಜಾತಿ ಹಾಗೂ ಧರ್ಮ, ದೇವರ ಹೆಸರಿನಲ್ಲಿ ರಾಜಕಾರಣ ಮಾಡಿಲ್ಲ. ಅಧಿಕಾರವು ತನ್ನ ಕೈಗೆಟಕುವ ಹತ್ತಿರ ಇದ್ದರೂ ಉನ್ನತ ನೈತಿಕ ಧೈರ್ಯವನ್ನು ತೋರಿಸಿ ಅನೈತಿಕ ರಾಜಕೀಯ ಮಾಡುವುದಿಲ್ಲ ಎಂದು ನಡೆದಂತೆ ನುಡಿದಿದೆ. ದೆಹಲಿ ಚುನಾವಣೆಗೂ ಮೊದಲು ಪೂರ್ಣ ಬಹುಮತ ಪಡೆಯದೇ ಇದ್ದ ಪಕ್ಷದಲ್ಲಿ ತಾನು ಯಾರಿಗೂ ಬೆಂಬಲ ಕೊಡುವುದಿಲ್ಲ ಹಾಗೂ ಯಾರಿಂದಲೂ ಬೆಂಬಲ ಪಡೆಯುವುದಿಲ್ಲ ಎಂದು ಹೇಳಿತ್ತು. ಹೀಗಾಗಿ ಆಮ್ ಆದ್ಮಿ ಪಕ್ಷವು ಕಾಂಗ್ರೆಸ್ ಬಾಹ್ಯ ಬೆಂಬಲ ಕೊಡಲು ಮುಂದೆ ಬಂದಿದ್ದರೂ ಸರಕಾರ ರಚಿಸಬೇಕೋ ಬೇಡವೋ ಎಂಬ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿದೆ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಸರ್ಕಾರ ಮಾಡಿದರೂ ಟೀಕೆ ತಪ್ಪಿದ್ದಲ್ಲ, ಸರ್ಕಾರ ಮಾಡದಿದ್ದರೂ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂಬ ಟೀಕೆಯೂ ತಪ್ಪಿದ್ದಲ್ಲ. ಇದೀಗ ಈ ಕುರಿತು ದೆಹಲಿಯ ಜನತೆಯನ್ನೇ ಕೇಳಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ದಿಟ್ಟ ನಿಲುವು ತೆಗೆದುಕೊಂಡಿರುವುದು ಅತ್ಯಂತ ಪಕ್ವ, ಪ್ರಬುದ್ಧ ನಿಲುವು ಎಂದೇ ಹೇಳಬೇಕಾಗುತ್ತದೆ. ಇದರಿಂದಾಗಿಯೂ ಇದು ಉಳಿದ ಪಕ್ಷಗಳಿಗಿಂತ ಸಂಪೂರ್ಣ ಭಿನ್ನ ಎಂದು ಕಂಡುಬರುತ್ತದೆ. ಪರಿವರ್ತನೆಯ ಹಾದಿಯಲ್ಲಿ ಒಮ್ಮೆ ಅರಾಜಕ ಪರಿಸ್ಥಿತಿ ತಲೆದೋರುತ್ತದೆ. ಒಂದು ವ್ಯವಸ್ಥೆಯಿಂದ ಇನ್ನೊಂದು ವ್ಯವಸ್ಥೆಗೆ ಬದಲಾವಣೆ ಆಗುವಾಗ ಇದು ಅನಿವಾರ್ಯ. ಉದಾಹರಣೆಗೆ ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬದಲಾವಣೆ ಹೊಂದುವಾಗ ಗೊಂದಲ, ಅರಾಜಕ ಪರಿಸ್ಥಿತಿ ತಲೆದೋರುತ್ತದೆ. ಇದರಿಂದ ವಿಚಲಿತರಾಗಬೇಕಾಗಿಲ್ಲ. ಊಳಿಗಮಾನ್ಯ ವ್ಯವಸ್ಥೆಯಿಂದ ಸಮತಾವಾದಿ ವ್ಯವಸ್ಥೆಗೆ ರಷ್ಯ ಬದಲಾಗುವ ವೇಳೆಯಲ್ಲಿ ಕೆಲವು ವರ್ಷಗಳವರೆಗೆ ಅರಾಜಕ ಪರಿಸ್ಥಿತಿ ಇತ್ತು. ಹೀಗೆಯೇ ಇದೀಗ ದೆಹಲಿಯಲ್ಲಿ ಪಾರಂಪರಿಕ ಭ್ರಷ್ಟ ಪಕ್ಷಗಳ ವ್ಯವಸ್ಥೆಯಿಂದ ನೈತಿಕ ಹಾಗೂ ಮೌಲ್ಯಾಧಾರಿತ ವ್ಯವಸ್ಥೆಗೆ ಬದಲಾಗುವ ಈ ಸಂಧಿ ಕಾಲದಲ್ಲಿ ದೆಹಲಿಯಲ್ಲಿ ಸ್ವಲ್ಪ ಸಮಯ ರಾಷ್ಟ್ರಪತಿ ಆಳ್ವಿಕೆ ಬಂದರೆ ಅದನ್ನು ಜನತೆಯ ಮೇಲಿನ ಹೊರೆ ಎಂದು ತಿಳಿದುಕೊಳ್ಳಬೇಕಾಗಿಲ್ಲ. ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾದರೆ ಇದನ್ನು ಸಹಿಸಿಕೊಳ್ಳಬೇಕಾಗುತ್ತದೆ. ರಾಷ್ಟ್ರಪತಿ ಆಳ್ವಿಕೆ ಎಂದರೆ ಅರಾಜಕ ಪರಿಸ್ಥಿತಿಯೇನೂ ಉಂಟಾಗುವುದಿಲ್ಲ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಲ್ಲಿ ಸ್ವಲ್ಪ ವಿಳಂಬ ಆಗಬಹುದು ಅಷ್ಟೇ.

ಆಮ್ ಆದ್ಮಿ ಪಕ್ಷವು ಭಾರತಾದ್ಯಂತ ಒಂದು ಪರ್ಯಾಯ ಶಕ್ತಿಯಾಗಿ ಬೆಳೆಯಬೇಕಾದ ಅಗತ್ಯ ಇಂದು ಇದೆ. ಸಮಾನ ಮನಸ್ಕ ರಾಜಕೀಯ ಪಕ್ಷಗಳ ಜೊತೆ ಈ ನಿಟ್ಟಿನಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಅಗತ್ಯ. ಲೋಕಪಾಲ್ ಸಂಸ್ಥೆಯ ಸ್ಥಾಪನೆ ಆಗುವ ಕಾರಣ ಪಕ್ಷದ ಬೆಳವಣಿಗೆ ದೆಹಲಿಗೆ ಸೀಮಿತ ಆಗಲಾರದು. ಉನ್ನತ ರಾಜಕೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಪರ್ಯಾಯ ರಾಷ್ಟ್ರೀಯ ಪಕ್ಷವೊಂದರ ಅಗತ್ಯ ಇಂದು ಈ ದೇಶಕ್ಕೆ ಇದೆ. ಅದನ್ನು ಆಮ್ ಆದ್ಮಿ ಪಕ್ಷವು ತುಂಬುವ ಸಂಭವ ಇದೆ ಮತ್ತು ಇದನ್ನು ದೇಶಾದ್ಯಂತ ಬೆಳೆಸಲು ಸಮಾಜದ ಎಲ್ಲಾ ವರ್ಗಗಳ ಜನ ಮುಂದೆ ಬಂದರೆ ಇದು ಅಸಾಧ್ಯವೇನೂ ಅಲ್ಲ. ಇದು ಕೆಲವು ವರ್ಷಗಳನ್ನು ತೆಗೆದುಕೊಳ್ಳಬಹುದು. ಕೇಜ್ರಿವಾಲರು ಅಣ್ಣಾ ಹಜಾರೆಯವರನ್ನು ಗುರುವೆಂದು ತಿಳಿದುಕೊಳ್ಳಬೇಕಾದ ಅಗತ್ಯ ಇಲ್ಲ ಮತ್ತು ಅವರು ಅಣ್ಣಾ ಅವರ ಬೆಂಬಲ ಇಲ್ಲದೆಯೂ ತನ್ನ ಸ್ವಂತ ಪ್ರತಿಭೆಯಿಂದಲೇ ಬೆಳೆಯಬಲ್ಲರು. arvind-kejriwal-campaigningಗುರು-ಶಿಷ್ಯ ಎಂಬ ಪರಿಕಲ್ಪನೆ ಪ್ರಜಾಪ್ರಭುತ್ವಕ್ಕೆ ಸರಿಹೊಂದುವುದಿಲ್ಲ ಮತ್ತು ಅದು ಬೇಕಾಗಿಯೂ ಇಲ್ಲ. ಅಣ್ಣಾ ಹಜಾರೆಯವರು ವೈಜ್ಞಾನಿಕ ಮನೋಭಾವ ಇಲ್ಲದ ಹಳೆಯ ತಲೆಮಾರಿನ ವ್ಯಕ್ತಿ ಆದ ಕಾರಣ ಅವರ ಬೆಂಬಲ ಇಂದಿನ ತಲೆಮಾರಿನ ಪ್ರಜಾಪ್ರಭುತ್ವ, ಸಮಾನತೆ, ವೈಚಾರಿಕ ಮನೋಭಾವ, ಉದಾರವಾದಿ ವ್ಯಕ್ತಿತ್ವ ಹೊಂದಿರುವ ಕೇಜ್ರಿವಾಲ್ ಹಾಗೂ ಸಂಗಡಿಗರಿಗೆ ದೊರೆಯಲಾರದು. ಹೀಗಾಗಿ ಅವರು ಅಣ್ಣಾ ಅವರನ್ನು ಗುರು ಎಂದು ಹೇಳಿಕೊಳ್ಳುವುದು, ಅವರ ಬೆಂಬಲ ಪಡೆದುಕೊಳ್ಳಲು ಪ್ರಯತ್ನಿಸುವುದು ವ್ಯರ್ಥ. ಹಾದಿಗಳು ಬೇರೆ ಬೇರೆಯಾದ ಕಾರಣ ಕೇಜ್ರಿವಾಲ್ ಹಾಗೂ ಸಂಗಡಿಗರು ತಮ್ಮ ಸ್ವಂತ ಪ್ರತಿಭೆಯಿಂದಲೇ ಬೆಳೆಯುವುದು ಉತ್ತಮ ಹಾಗೂ ಅಂಥ ಪ್ರತಿಭೆ ಹಾಗೂ ಮುನ್ನೋಟ ಅವರಲ್ಲಿ ಇದೆ. ಯಾವುದೇ ಕಾರಣಕ್ಕೂ ಕೇಜ್ರಿವಾಲ್ ಹಿಂಜರಿಯಬೇಕಾದ ಅಗತ್ಯ ಇಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಈ ಎರಡೂ ಪಕ್ಷಗಳಲ್ಲಿಯೂ ಸನಾತನವಾದಿ, ಪುರೋಹಿತಶಾಹಿ, ಯಥಾಸ್ಥಿತಿವಾದಿ, ಪಟ್ಟಭದ್ರ ಹಿತಾಸಕ್ತಿಗಳು ನೆಲೆಯೂರಿರುವ ಕಾರಣ ಭಾರತವು ಸರಿಯಾದ ಹಾದಿಯಲ್ಲಿ ಸಾಗಲು ಸಾಧ್ಯವಿಲ್ಲ. ಭಾರತವನ್ನು ಮುನ್ನಡೆಸಲು ಆಧುನಿಕ ನಿಲುವಿನ ಪ್ರತಿಭಾವಂತರು ಕೇಜ್ರಿವಾಲ್ ಹಾಗೂ ಸಂಗಡಿಗರ ಜೊತೆ ರಾಜಕೀಯಕ್ಕೆ ಇಳಿಯಬೇಕಾದ ಅಗತ್ಯ ಇದೆ.

ಕೇಜ್ರಿವಾಲ್ ಅವರಲ್ಲಿ ಇರುವ ದೃಢತೆ, ಚಿಂತನೆ ನೋಡುವಾಗ ಭಗತ್ ಸಿಂಗ್, ಸುಭಾಷಚಂದ್ರ ಬೋಸ್ ಅವರ ಹೋಲಿಕೆ ಕಂಡುಬರುತ್ತದೆ. ಪ್ರಾಮಾಣಿಕ ಹಾಗೂ ಜವಾಬ್ದಾರಿಯುತ ಜನ ಇದ್ದರೆ ಜನ ಜಾತಿ, ಮತ, ಧರ್ಮ ಭೇದ ಮರೆತು; ಕೆಳವರ್ಗ, ಮಧ್ಯಮ ವರ್ಗ, ಶ್ರೀಮಂತ ವರ್ಗ ಎಂಬ ಭೇದವಿಲ್ಲದೆ ಬೆಂಬಲಿಸುತ್ತಾರೆ ಮತ್ತು ಮೆಚ್ಚುತ್ತಾರೆ. ಲಾಲ್ ಬಹದ್ದೂರ್ ಶಾಸ್ತ್ರಿ ಇದಕ್ಕೊಂದು ಉತ್ತಮ ಉದಾಹರಣೆ. ಆಮ್ ಆದ್ಮಿ ಪಕ್ಷವು ಪ್ರಾಮಾಣಿಕ, ಜವಾಬ್ದಾರಿಯುತ ಜನರನ್ನು ಗುರುತಿಸಿ ಬೆಳೆಸುವ ಕಾರ್ಯ ಮಾಡಬೇಕು. ಪಕ್ಷದಲ್ಲಿ ಎರಡನೆಯ ಹಾಗೂ ಮೂರನೆಯ ಪೀಳಿಗೆಯ ನಾಯಕರನ್ನು ತಯಾರು ಮಾಡಬೇಕು. ಕೇಜ್ರಿವಾಲ್ ನಂತರ ಯಾರು ಎಂಬ ಪ್ರಶ್ನೆ ಎಂದೂ ಬರಬಾರದು. ವಂಶಪಾರಂಪರ್ಯ ರಾಜಕೀಯಕ್ಕೆ ಆಸ್ಪದ ಕೊಡುವುದಿಲ್ಲ ಎಂಬ ನಿಯಮವನ್ನು ಆಮ್ ಆದ್ಮಿ ಪಕ್ಷವು ಹೊಂದಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬೆಳೆಸಲು ಅಗತ್ಯವಾಗಿ ಬೇಕಾಗಿತ್ತು. ಒಬ್ಬನೇ ವ್ಯಕ್ತಿ ನಿರಂತರವಾಗಿ ಪದೇ ಪದೇ ಮುಖ್ಯಮಂತ್ರಿಯೋ, ಪ್ರಧಾನ ಮಂತ್ರಿಯೋ ಆಗಬಾರದು. ಹೀಗೆ ಒಬ್ಬನೇ ಮತ್ತೆ ಮತ್ತೆ ಮುಖ್ಯ ಮಂತ್ರಿ ಅಥವಾ ಪ್ರಧಾನ ಮಂತ್ರಿ ಆಗುವುದು ಕೂಡ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾದದ್ದು. ಉದಾಹರಣೆಗೆ ಜೀವಂತ ಇರುವವರೆಗೋ ನೆಹರೂ ಅವರೇ ಪ್ರಧಾನ ಮಂತ್ರಿ ಆಗಿದ್ದದ್ದು, ಇಂದಿರಾ ಗಾಂಧಿಯೂ ಜೀವಂತ ಇದ್ದಷ್ಟು ದಿನ ಕಾಂಗ್ರೆಸ್ಸಿನಿಂದ ಪ್ರಧಾನ ಮಂತ್ರಿಯಾಗಿದ್ದದ್ದು. ಇದು ಪ್ರಜಾಪ್ರಭುತ್ವವಲ್ಲ, ರಾಜಪ್ರಭುತ್ವದ ಇನ್ನೊಂದು ಅವತಾರವಷ್ಟೇ. ಈ ರೋಗ ಕಾಂಗ್ರೆಸ್ಸಿಗೆ ಮಾತ್ರ ಸೀಮಿತವಲ್ಲ ಬಿಜೆಪಿ, ಸಮಾಜವಾದಿ, ಅಣ್ಣಾಡಿಎಂಕೆ, ಡಿಎಂಕೆ, ಟಿಡಿಪಿ, ಬಿಜು ಜನತಾದಳ, ಜಾತ್ಯಾತೀತ ಜನತಾದಳ ಹೀಗೆ ಎಲ್ಲ ಪಕ್ಷಗಳನ್ನೂ ಆವರಿಸಿಕೊಂಡಿದೆ. ಬಿಜೆಪಿಯಲ್ಲಿಯೂ ನರೇಂದ್ರ ಮೋದಿಯೇ ನಾಲ್ಕನೆಯ ಸಲ ಮುಖ್ಯಮಂತ್ರಿಯಾಗಿರುವುದು ಕೂಡ ನೈಜ ಪ್ರಜಾಪ್ರಭುತ್ವವಲ್ಲ. ಅದೇ ರೀತಿ ಎಡ ಪಕ್ಷಗಳಲ್ಲಿ ಜ್ಯೋತಿ ಬಸು ಐದು ಸಲ ಮುಖ್ಯಮಂತ್ರಿ ಆಗಿದ್ದು ಕೂಡ. ಒಬ್ಬನೇ ಸಾಯುವವರೆಗೆ ಅಧಿಕಾರಕ್ಕೆ ಅಂಟಿಕೊಂಡಿರುವುದು ಪ್ರಜಾಪ್ರಭುತ್ವಕ್ಕೆ ಯೋಗ್ಯವಲ್ಲ. ಹೆಚ್ಚೆಂದರೆ ಒಬ್ಬನಿಗೆ ಎರಡು ಅವಕಾಶಗಳಷ್ಟೇ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಯಾಗಲು ಇರಬೇಕು. ಅದಕ್ಕಿಂತಲೂ ಹೆಚ್ಚು ಬಾರಿ ಒಬ್ಬನೇ ಅಧಿಕಾರ ಸ್ಥಾನಕ್ಕೆ ಏರುವುದು ಕೂಡ ರಾಜಪ್ರಭುತ್ವದ ಮುಂದುವರಿಕೆಯಾಗುತ್ತದೆ. ಇದು ಸರ್ವಾಧಿಕಾರಿ ಹಾಗೂ ವಂಶವಾಹೀ ಅಧಿಕಾರಕ್ಕೆ ಎಡೆಮಾಡಿಕೊಡುತ್ತದೆ. ಹೀಗಾಗಿ ಒಬ್ಬನೇ ಒಂದು ಪಕ್ಷದಿಂದ ಎರಡಕ್ಕಿಂತ ಹೆಚ್ಚು ಬಾರಿ ಮುಖ್ಯ ಮಂತ್ರಿಯೋ, ಪ್ರಧಾನ ಮಂತ್ರಿಯೋ ಆಗದಂತೆ ಪಕ್ಷಗಳು ನಿಯಮ ರೂಪಿಸುವ ಅಗತ್ಯ ಇದೆ. ಅದೇ ರೀತಿ ಪಕ್ಷದ ಅಧ್ಯಕ್ಷರ ವಿಚಾರದಲ್ಲಿಯೂ ಕೂಡ ನಿಯಮ ಮಾಡಬೇಕು. ಹಾಗಾದಾಗ ಮಾತ್ರ ಪ್ರಜಾಪ್ರಭುತ್ವ ಬೆಳೆಯಲು ಸಾಧ್ಯ.

ಲೋಕಪಾಲ್ ಸಂಸ್ಥೆ ಸ್ಥಾಪನೆ ಆಗುವ ಕಾರಣ ಭ್ರಷ್ಟಾಚಾರ ಸ್ವಲ್ಪ ನಿಯಂತ್ರಣಕ್ಕೆ ಬರಬಹುದು ಆದರೆ ಪ್ರಾಮಾಣಿಕ ಹಾಗೂ ಜವಾಬ್ದಾರಿಯುತ ಜನ ಅಧಿಕಾರಕ್ಕೆ ಬರುವ ಪರಿಸ್ಥಿತಿ ರೂಪುಗೊಳ್ಳುವವರೆಗೆ ಹೆಚ್ಚಿನ ಬದಲಾವಣೆ ನಿರೀಕ್ಷಿಸಲಾಗದು. ಉದಾಹರಣೆಗೆ ಕರ್ನಾಟಕದಲ್ಲಿ ಲೋಕಾಯುಕ್ತ ಸಂಸ್ಥೆ ಇದೆ. ಆದರೆ ಭ್ರಷ್ಟಾಚಾರ ನಿಯಂತ್ರಣ ಆಗಿದೆಯೇ? corruption-india-democracyಇಲ್ಲವೆಂದೇ ಹೇಳಬೇಕಾಗುತ್ತದೆ. ವಿಜಯಕರ್ನಾಟಕ ಪತ್ರಿಕೆಯಲ್ಲಿ ಬರುವ ‘ಲಂಚ ಪ್ರಪಂಚ’ ಎಂಬ ಅಂಕಣದಲ್ಲಿ ಪ್ರಕಟವಾಗುವ ಬರಹಗಳನ್ನು ನೋಡಿದರೆ ಲೋಕಾಯುಕ್ತ ಸಂಸ್ಥೆ ನಿಷ್ಪ್ರಯೋಜಕ ಎಂಬ ಭಾವನೆ ಬರುವುದಿಲ್ಲವೇ? ಎಲ್ಲಿಯವರೆಗೆ ಪ್ರಾಮಾಣಿಕ ಹಾಗೂ ಜವಾಬ್ದಾರಿಯುತ ಜನರು ಅಧಿಕಾರ ಸ್ಥಾನಕ್ಕೆ ಬರುವ ಪರಿಸ್ಥಿತಿ ರೂಪುಗೊಳ್ಳುವು ದಿಲ್ಲವೋ ಅಲ್ಲಿಯವರೆಗೆ ನೂರು ಲೋಕಾಯುಕ್ತಗಳು, ನೂರು ಲೋಕಪಾಲಗಳು ಬಂದರೂ ಪರಿಸ್ಥಿತಿಯಲ್ಲಿ ಸುಧಾರಣೆ ಆಗುವ ಲಕ್ಷಣ ಕಾಣುವುದಿಲ್ಲ. ಬಿಜೆಪಿ ಆಡಳಿತದಲ್ಲಿಯೂ ಇದೇ ಪರಿಸ್ಥಿತಿ, ಕಾಂಗ್ರೆಸ್ ಆಡಳಿತದಲ್ಲಿಯೂ ಇದೇ ಪರಿಸ್ಥಿತಿ, ಜೆಡಿಎಸ್ ಆಡಳಿತದಲ್ಲಿಯೂ ಇದೇ ಪರಿಸ್ಥಿತಿ. ಕ್ರಾಂತಿಕಾರಕ ಪ್ರಜಾಸತ್ತಾತ್ಮಕ ಬದಲಾವಣೆಗಳನ್ನು ವ್ಯವಸ್ಥೆಯಲ್ಲಿ ತರದಿದ್ದರೆ ಹೀಗೇ ಆಗುವುದು, ಯಾರು ಅಧಿಕಾರಕ್ಕೆ ಬಂದರೂ ವ್ಯವಸ್ಥೆ ಬದಲಾವಣೆ ಆಗುವುದಿಲ್ಲ. ನ್ಯಾಯಾಂಗ ಸುಧಾರಣೆ, ಚುನಾವಣಾ ಸುಧಾರಣೆ, ಕೆಲಸ ಮಾಡದ ಜನಪ್ರತಿನಿಧಿಗಳನ್ನು ವಾಪಸ್ ಕರೆಸಿಕೊಳ್ಳುವ ಹಕ್ಕು, ಮತದಾನದಲ್ಲಿ ‘ಯಾರಿಗೂ ಇಲ್ಲ’ (NOTA) ಎಂಬ ಮತ ನೀಡುವ ಅವಕಾಶ ಹಾಗೂ ಹಾಗೆ ಯಾರಿಗೂ ಇಲ್ಲ ಎಂಬ ಮತಗಳ ಸಂಖ್ಯೆ ಗೆದ್ದ ಅಭ್ಯರ್ಥಿಯ ಮತಗಳಿಗಿಂತ ಹೆಚ್ಚಾದರೆ ಅಲ್ಲಿ ಪುನಃ ಮತದಾನ ನಡೆಸುವ ವ್ಯವಸ್ಥೆ ಮೊದಲಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ಕ್ರಾಂತಿಕಾರಕ ಚಿಂತನೆಗಳನ್ನು ಆಮ್ ಆದ್ಮಿ ಪಕ್ಷವು ಹೊಂದಿದೆ. ಬೇರೆ ಯಾವ ರಾಜಕೀಯ ಪಕ್ಷಗಳಲ್ಲಿಯೂ ಇಂಥ ಕ್ರಾಂತಿಕಾರಕ ಚಿಂತನೆ ಕಂಡುಬರುವುದಿಲ್ಲ. ಈ ನಿಟ್ಟಿನಿಂದಲೂ ಆಮ್ ಆದ್ಮಿ ಪಕ್ಷವನ್ನು ರಾಷ್ಟ್ರೀಯ ಪಕ್ಷವಾಗಿ ಬೆಳೆಸುವ ಅಗತ್ಯ ಇದೆ.