ಕ್ರಿಸ್ಮಸ್ ಉಡುಗೊರೆ

ಓ. ಹೆನ್ರಿ
– ಕನ್ನಡಕ್ಕೆ: ಜೆ.ವಿ.ಕಾರ್ಲೊ

[ಕ್ರಿಸ್ಮಸ್‌ಗೆ ಸಂಬಂಧಿಸಿದಂತೆ ಹೇರಳ ಸಾಹಿತ್ಯವಿದ್ದರೂ, ಹೆಸರಾಂತ ಅಮೆರಿಕನ್ ಸಣ್ಣ ಕತೆಗಾರ ಓ. ಹೆನ್ರಿಯ “The Gift of Magi” ಇಂದಿಗೂ ಜನಪ್ರಿಯ. ಇದು ಹೆಚ್ಚು ಕಮ್ಮಿ ಎಲ್ಲಾ O.Henryಭಾಷೆಗಳಿಗೂ ಅನುವಾದಗೊಂಡಿರುವ ಸಣ್ಣ ಕತೆ. ಕನ್ನಡದಲ್ಲೂ ಅನುವಾದಗೊಂಡಿರಬಹುದು.

ಜಿಮ್ ಮತ್ತು ಡೆಲ್ಲಾ ಪ್ರೀತಿಸಿ ಮದುವೆಯಾದ ಒಂದು ಯುವಜೋಡಿ. ಜಿಮ್ಮನಿಗೆ ಕೇವಲ ಇಪ್ಪತೆರಡು ವರ್ಷಗಳು! ಆ ವಯಸ್ಸಿನ ಪ್ರೀತಿಯೇ ಅಂತಾದ್ದು. ಪ್ರೀತಿಯೇ ಸರ್ವಸ್ವ. ಪ್ರೀತಿಯ ಮುಂದೆ ಎಲ್ಲವೂ ತೃಣ ಸಮಾನ! ಬಡತನ ಕೂಡ, ಎಂಬ ಹುಚ್ಚು ವಯಸ್ಸಿನ ಮುಗ್ಧ ಆದರ್ಶ ಯಾರನ್ನೂ ತಮ್ಮ ಆ ದಿನಗಳಿಗೆ ಕೊಂಡೊಯ್ಯಬಹುದಾದದ್ದು. ಎಂತಾ ಕಠಿಣ ತ್ಯಾಗಗಳಿಗೂ ಹಿಂದುಮುಂದು ನೋಡದ ವಯಸ್ಸು. ಈ ಯುವ ಜೋಡಿಗಳು ಒಬ್ಬರನ್ನೊಬ್ಬರು ಮೆಚ್ಚಿಸಲು ಅವರು ಆರಿಸಿಕೊಂಡ ಉಡುಗೊರೆ, ಅದಕ್ಕಾಗಿ ಅವರು ಮಾಡುವ ತ್ಯಾಗ, ತಿರುವು ಪಡೆದ ಅಂತ್ಯ.. ವಯಸ್ಸಾದವರಿಗೆ ಇಲ್ಲೊಂದು ವಿಷಾದವಿದ್ದರೆ, ಯುವಕರಿಗೆ ಒಂದು ಆದರ್ಶವಿದೆ.]

ಒಂದು ಡಾಲರ್ ಮತ್ತು ಎಂಭತ್ತೇಳು ಸೆಂಟುಗಳು. ಅಷ್ಟೇ. ಇದರಲ್ಲಿ ಅರವತ್ತೇಳು ಸೆಂಟುಗಳು ಬರೇ ಒಂದು ಪೆನ್ನಿಯ ನಾಣ್ಯಗಳಲ್ಲಿದ್ದವು. ದಿನ ನಿತ್ಯ ಒಂದೆರಡು ಪೆನ್ನಿಗಳು ಅಂಗಡಿಯವನತ್ತಿರವೋ, ತರಕಾರಿ ಮಾರುವವನತ್ತಿರವೋ ಗಂಟೆಗಳ ಕಾಲ ಚೌಕಾಸಿ ಮಾಡಿ ಕೂಡಿ ಹಾಕಿದ್ದವು. ಈಗ ನೆನೆಸಿಕೊಂಡಾಗ ಲಜ್ಜೆಯಿಂದ ಮುಖ ಕೆಂಪಾಗಾಗುತ್ತದೆ. ಬೇರಾವ ದಾರಿ ಇರಲಿಲ್ಲ. ಡೆಲ್ಲಾ ಮೂರನೇ ಬಾರಿ ಹಣ ಲೆಕ್ಕ ಮಾಡಿದಳು. ಅಷ್ಟೇ. ಒಂದು ಡಾಲರ್, ಎಂಭತ್ತೇಳು ಸೆಂಟುಗಳು. merry-christmasನಾಳೆ ಕ್ರಿಸ್ಮಸ್ ಹಬ್ಬ!

ಮುರಿದು ಸುಕ್ಕಾಗಿ ಹೋದ ಸೋಫಾದ ಮೇಲೆ ಕುಳಿತುಕೊಂಡು ತನ್ನ ಅದೃಷ್ಟವನ್ನು ನೆನೆದು ಅಳುವುದಲ್ಲದೆ ಬೇರಾವ ದಾರಿಯೂ ಡೆಲ್ಲಾಳಿಗೆ ಕಾಣಿಸಲಿಲ್ಲ. ಸಮದಾನವಾಗುವಷ್ಟೂ ಅತ್ತಳು. ಜೀವನ ಅಂದರೆ ಇಷ್ಟೇಯಾ: ಕೆಲವೊಮ್ಮೆ ಖುಷಿ, ಕೆಲವೊಮ್ಮೆ ದುಃಖ. ವ್ಯತ್ಯಾಸವೇನೆಂದರೆ, ದುಃಖದ ಪಾಲೇ ಹೆಚ್ಚು!

ಮನೆಯೊಡತಿ ಎಷ್ಟೊತ್ತು ಅಳುತ್ತಾ ಕೂರಬಹುದು? ಡೆಲ್ಲಾ ಎದ್ದು, ಕಣ್ಣೀರನ್ನು ಒರೆಸುತ್ತಾ ಸುತ್ತ ಒಮ್ಮೆ ಕಣ್ಣಾಡಿಸಿದಳು. ವಾರಕ್ಕೆ ಎಂಟು ಡಾಲರ್ ಬಾಡಿಗೆಯ ಫರ್‍ನಿಶ್ ಮಾಡಿದ ಅಪಾರ್ಟ್‌ಮೆಂಟ್ ಅವಳದು. ಕೆಳಗೆ, ಮೇಲೆ ಹತ್ತುವ ಜಾಗದಲ್ಲಿ ತುಕ್ಕು ಹಿಡಿದ ಲೆಟರ್ ಬಾಕ್ಸೊಂದು ಗೋಡೆಗೆ ತೂಗುತ್ತಿತ್ತು. ಅದು ಉಪಯೋಗಿಸದೆ ಎಷ್ಟು ಕಾಲವಾಗಿತ್ತೋ? ಲೆಟರ್ ಬಾಕ್ಸಿನ ಮಗ್ಗುಲಲ್ಲೇ, ಸಂಪರ್ಕ ಕಳೆದುಕೊಂಡಿದ್ದ ಕರೆಗಂಟೆಯ ಗುಂಡಿಯೊಂದು ಕೀವು ತುಂಬಿದ ವೃಣದಂತೆ ಎದ್ದು ಕಾಣುತ್ತಿತ್ತು. ಅದರ ಮಗ್ಗುಲಲ್ಲೇ. “ಮಿ. ಜೇಮ್ಸ್ ಡಿಲ್ಲಿಂಗ್ಯಾಮ್ ಯಂಗ್” ಎಂಬ ಮಾಸಿ ಹೋದ ಅಕ್ಷರಗಳ ಬೋರ್ಡೊಂದು ಕಾಣಿಸುತ್ತಿತ್ತು. ಮನೆಯೊಡೆಯನಿಗೆ ವಾರಕ್ಕೆ ಮುವ್ವತ್ತು ಡಾಲರ್ ಸಂಬಳ ಸಿಗುತ್ತಿರುವವರೆಗೆ ಹೆಸರಿನ ಫಲಕ ಮಿನುಗುತ್ತಿತ್ತು! oil-paintingಮನೆಯೊಡೆಯನ ಸಂಬಳ ಈಗ ಇಪ್ಪತ್ತು ಡಾಲರ್‌ಗಳಿಗೆ ಇಳಿದಿತ್ತು. ಆದರೂ, ನಿಮಗೀಗಷ್ಟೇ ಪರಿಚಿತಳಾದ ಮಿಸೆಸ್ ಜೇಮ್ಸ್ ಡಿಲ್ಲಿಂಗ್ಯಾಮಾ ಳಿಂದ, ಮನೆಯೊಡೆಯ ಮೆಟ್ಟಿಲು ಹತ್ತಿ ಬರುವಾಗ, “ಜಿಮ್ ಡಿಯರ್!” ಎಂಬ ಹೃತ್ಪೂರ್ವಕ ಬೆಚ್ಚನೆಯ ಸ್ವಾಗತ ದೊರಕುತ್ತಿತ್ತು.

ಮನಸಾರೆ ಅತ್ತು ಎದ್ದ ಡೆಲ್ಲಾ ಮುಖ ತೊಳೆದುಕೊಂಡಳು. ತೆಳುಪಾಗಿ ಪೌಡರನ್ನು ಹಚ್ಚಿ ಕಿಟಕಿಯ ಬಳಿ ನಿಂತು ಹೊರಗೆ ನೋಡಿದಳು. ಬಣ್ಣ ಮಾಸಿದ ಕಾಂಪೌಡಿನ ಮೇಲೆ ಬೆಕ್ಕೊಂದು ಆಲಸ್ಯದಿಂದ ಕಳ್ಳ ಹೆಜ್ಜೆ ಇಡುತ್ತಾ, ಏನೋ ಹೊಂಚು ಹಾಕಿತ್ತು. ನಾಳೆ ಕ್ರಿಸ್ಮಸ್ ಹಬ್ಬ. ಜಿಮ್ಮನಿಗೆ ಉಡುಗೊರೆ ಕೊಡಲು ಬಹಳಷ್ಟು ತಿಂಗಳುಗಳಿಂದ ಉಳಿಸುಕೊಂಡು ಬಂದ ಹಣ ಕೇವಲ ಒಂದು ಡಾಲರ್ ಎಂಭತ್ತೇಳು ಸೆಂಟ್‌ಗಳಾಗಿದ್ದವು. “ಜಿಮ್. ನನ್ನ ಜಿಮ್.” ಜಿಮ್ಮನಿಗೆ ಏನು ಉಡುಗೊರೆ ಕೊಡುವುದೆಂದು ಅವಳು ಬಹಳಷ್ಟು ಯೋಚಿಸಿದ್ದಳು. ಜಿಮ್ಮನ ಘನತೆಗೆ ತಕ್ಕುದಾದಂತ, ಅವನು ಹೆಮ್ಮೆ ಪಡುವಂತ, ಸದಾಕಾಲ ಅವನಲ್ಲಿರುವಂತ ಉಡುಗೊರೆ ಕೊಡಲು ಅವಳು ಬಹಳಷ್ಟು ಯೋಚಿಸಿದ್ದಳು.
ಅಪಾರ್ಟ್‌ಮೆಂಟಿನ ಎರಡು ಕಿಟಕಿಗಳ ಮಧ್ಯೆ ಒಂದು ಮಾಸಲಾದ ಕನ್ನಡಿ ನೇತುಹಾಕಲಾಗಿತ್ತು. ಅದರಲ್ಲಿ ಡೆಲ್ಲಾ ಒಬ್ಬಳೇ ತನ್ನ ಪ್ರತಿರೂಪವನ್ನು ಅಂದಾಜು ಮಾಡಲು ಶಕ್ತಳಾಗಿದ್ದಳು.

ಹಠಾತ್ತನೆ ಕಿಟಕಿಯಿಂದ ಸರಿದು ಅವಳು ಕನ್ನಡಿಯ ಎದುರಿಗೆ ನಿಂತುಕೊಂಡಳು. ಅವಳು ಉದ್ವೇಗಗೊಂಡಿದ್ದಳು. ಕಣ್ಣುಗಳು ಕಾಂತಿಯಿಂದ ಹೊಳೆಯುತ್ತಿದ್ದವು. ಆದರೆ ಮುಂದಿನ ಕ್ಷಣದಲ್ಲೇ ಅವಳ ಮುಖ ಕಳೆಗುಂದಿತು. ಕತ್ತಿನ ಮೇಲ್ಭಾಗಕ್ಕೆ ಕಟ್ಟಿದ್ದ ಕೂದಲ ರಾಶಿಯನ್ನು ಬಿಚ್ಚಿ ಒಮ್ಮೆ ತಲೆ ಕೊಡವಿಕೊಂಡಳು.

ಡಿಲ್ಲಿಂಗ್ಯಾಮ್ ಕುಟುಂಬದಲ್ಲಿ ಎರಡು ಬೆಲೆ ಬಾಳುವ ವಸ್ತುಗಳಿದ್ದವು. ಅದರ ಬಗ್ಗೆ ಅವರಿಬ್ಬರಿಗೂ ಹೆಮ್ಮೆ ಇತ್ತು. ಒಂದು, ಜಿಮ್ಮಿಯ ಬಂಗಾರದ ಜೇಬು ಗಡಿಯಾರ. ಅದು ಅವನ ಪೂರ್ವಜರಿಂದ ಅವನಿಗೆ ಬಂದಿತ್ತು. ಎರಡನೆಯದು ಡೆಲ್ಲಾಳ ಅಪೂರ್ವ ಕೇಶರಾಶಿ. ಒಂದು ವೇಳೆ ಶೀಬಾದ ರಾಣಿ ಡೆಲ್ಲಾಳ ಎದುರು ಫ್ಲ್ಯಾಟಿನಲ್ಲಿ ವಾಸಿಸುತ್ತಿದ್ದಲ್ಲಿ, ಅವಳಿಗೆ ಹೊಟ್ಟೆ ಉರಿಸಲೆಂದೇ ಇವಳು ಕೂದಲನ್ನು ಕಿಟಕಿಯ ಹೊರಗೆ ಹರವಿಕೊಂಡು ಬಿಸಿಲಿಗೆ ನಿಂತಿರುತ್ತಿದ್ದಳೇನೋ! ಹಾಗೆಯೇ ಸೋಲೊಮನ್ ರಾಜನೇನಾದರೂ ಜಿಮ್ಮನಿಗೆ ದಿನಾಲು ಎದುರು ಸಿಗುವಂತಿದ್ದರೆ ಅವನೂ ಕೂಡ ರಾಜನಿಗೆ ಹೊಟ್ಟೆಯುರಿ ಭರಿಸಲು ಗಡಿಯಾರವನ್ನು ಹೊರತೆಗೆಯುತ್ತಿದ್ದನೇನೋ!

ಡೆಲ್ಲಾ ತಲೆ ಕೊಡವಿಕೊಂಡಿದ್ದೇ ತಡ, ಬಂಧನದಲ್ಲಿದ್ದ ಕೂದಲ ರಾಶಿ ಸಮುದ್ರದ ದಂಡೆಯ ಮೇಲೆ ಮುಗಿ ಬೀಳುವ ತೆರೆಗಳಂತೆ ಅವಳ ಮೊಣಕಾಲವರೆಗೆ ಬಂದು ಬಿದ್ದಿತು. ಕೇಶಗಳಲ್ಲೇ ಕಸೂತಿ ಮಾಡಿದ ವಸ್ತ್ರದಂತೆ ಅದು ಡೆಲ್ಲಾಳ ಮೇಲೆ ಶೋಭಿಸುತ್ತಿತ್ತು. ಕೂದಲನ್ನೆಲ್ಲಾ ಆಯ್ದು ಅವಳು ಮೊದಲಿನಂತೆ ಕತ್ತಿನ ಹಿಂಭಾಗಕ್ಕೆ ಗಂಟು ಕಟ್ಟಿದಳು. ತಾನಾಗಿಯೇ ಎರಡು ಕಣ್ಣೀರ ಹನಿಗಳು ಅವಳ ಕೆನ್ನೆಯನ್ನು ಸವರಿಕೊಂಡು ಸವೆದು ಹೋದ ಕೆಂಪು ಕಾರ್ಪೆಟಿನೊಳಗೆ ಅಂತರ್ಧಾನವಾದವು. ಕೆಲವು ಕ್ಷಣ ಅವಳ ಮನಸ್ಸು ಚಂಚಲಗೊಂಡಿತಾದರೂ ತುಟಿ ಕಚ್ಚಿಕೊಂಡು ತನ್ನ ಭಾವನೆಗಳನ್ನು ಹತ್ತಿಕ್ಕಿ ಕೊಂಡಳು.

ಅವಳು ಅವಸರದಿಂದ ತನ್ನ ಹಳೆಯ ಕಂದು ಬಣ್ಣದ ಕೋಟನ್ನು ಧರಿಸಿದಳು. ತಲೆಗೆ ಅದೇ ವರ್ಣದ ಹ್ಯಾಟು ಏರಿಸಿದಳು. ಕನ್ನಡಿಯ ಎದುರು ನಿಂತು ಒಂದು ಗಿರಿಕಿ ಹೊಡೆದು ಹೊರನಡೆದಳು. ಅವಳ ಕಣ್ಣುಗಳು ಮೊದಲಿನಂತೆಯೇ ಮಿನುಗುತ್ತಿದ್ದವು.

ರಸ್ತೆಗೆ ಬಿದ್ದ ಅವಳು ಅವಸರದಿಂದಲೇ ಮೇಡಂ ಸೊಪ್ರೋನಿಕಾಳ ಕೇಶಾಲಂಕಾರದ ಅಂಗಡಿಗೆ ಬಂದು ತಲುಪಿದಳು. ಮೆಟ್ಟಿಲುಗಳನ್ನು ಏರಿ ಏದುಸಿರು ಬಿಡುತ್ತಾ, ದಷ್ಟಪುಷ್ಟವಾಗಿದ್ದ ಮೇಡಂ ಸೊಪ್ರೋನಿಕಾಳ ಕೌಂಟರಿನ ಎದುರಿಗೆ ಬಂದು ನಿಂತಳು.

“ನನ್ನ ಕೂದಲು ಕೊಂಡ್ಕೋತೀರಾ?” ಡೆಲ್ಲಾ ಮೇಡಮಳನ್ನು ಕೇಳಿದಳು.

“ಹೌದು. ನಾನು ಕೂದಲು ಖರಿದಿಸುತ್ತೇನೆ.” ಮೇಡಂ ಗಂಭೀರಳಾಗಿ ಉತ್ತರಿಸಿದಳು.

ಡೆಲ್ಲಾ ತನ್ನ ಕೂದಲಿನ ಗಂಟನ್ನು ಬಿಚ್ಚಿ ಮೇಡಮ್ಮಳ ಮುಂದೆ ಹರವಿದಳು.

“ಇಪ್ಪತ್ತು ಡಾಲರುಗಳು.” ಮೇಡಂ ಸೊಪ್ರೋನಿಕಾ ಬೆಲೆ ಕಟ್ಟಿದಳು.

“ಆಯ್ತು. ಬೇಗ ಕೊಡಿ.” ಡೆಲ್ಲಾ ಅವಸರಿಸಿದಳು.

ಡೆಲ್ಲಾಳ ಮುಂದಿನ ಎರಡು ತಾಸುಗಳು ಹೇಗೆ ಕಳೆದು ಹೋದವು ಎಂದು ವಿವರಿಲಸಾಧ್ಯ. ಅವಳಿಗೆ ಹೊಸದಾಗಿ ಎರಡು ರೆಕ್ಕೆಗಳು ಮೂಡಿದ್ದವೆಂದರೂ ಅತಿಶಯೋಕ್ತಿಯಾಗಲಾರದು. ಜಿಮ್ಮಿಗೆ ಉಡುಗೊರೆ ಹುಡುಕುತ್ತಾ ಅವಳು ಸುತ್ತದ ಅಂಗಡಿಗಳೇ ಉಳಿದಿರಲಿಲ್ಲ!

ಅವಳು ಹುಡುಕುತ್ತಿದ್ದ ವಸ್ತು ಕೊನೆಗೂ ಅವಳಿಗೆ ಸಿಕ್ಕಿತು. ಖಂಡಿತವಾಗಿಯೂ ಅದು ಅವಳ ಜಿಮ್ಮನಿಗೆಂದೇ ಮಾಡಿದ್ದೆಂದು ಅದರ ಮೇಲೆ ಕಣ್ಣು ಹಾಯಿಸಿದಾಗಲೇ ಅವಳಿಗನಿಸಿತ್ತು. ಅದರಲ್ಲಿ ಸಂಶಯವೇ ಇರಲಿಲ್ಲ. ಅದೊಂದು ತುಂಬಾ ಸರಳವಾದ ಪ್ಲ್ಯಾಟಿನಂ ಲೋಹದಿಂದ ಮಾಡಿದ್ದ ಜೇಬು ಗಡಿಯಾರದ ಚೇಯ್ನ್ ಆಗಿತ್ತು. ಯಾವುದೇ ಕೃತಕತೆಯಿಲ್ಲದೆ ತಯಾರಿಸಿದ್ದ ಆ ಚೇಯ್ನು ತನ್ನ ಸರಳತೆಯಿಂದಲೇ ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡಿತ್ತು. ಅವಳಿಗೆ ಕೊಂಚ ದುಬಾರಿಯೆಂದೇ ಅನಿಸಿತು. ಆದರೂ, ಜಿಮ್ಮಿಯ ವಾಚಿಗೆ, ಅವನ ವ್ಯಕ್ತಿತ್ವಕ್ಕೆ ಆ ಚೇಯ್ನು ಸರಿಸಾಟಿಯಾಗಿತ್ತು. ಅವಳು ಖುಷಿಯಿಂದಲೇ ಅದಕ್ಕೆ ಇಪ್ಪತ್ತೊಂದು ಡಾಲರುಗಳನ್ನು ತೆತ್ತು ಮನೆಯ ಹಾದಿ ಹಿಡಿದಳು. ಅವಳ ಬಳಿ ಕೇವಲ ಎಂಭತ್ತೇಳು ಸೆಂಟುಗಳು ಉಳಿದಿದ್ದವು. ಸ್ನೇಹಿತರೊಂದಿಗಿದ್ದಾಗ ಜಿಮ್ಮನಿಗೆ ಇನ್ನೆಂದಿಗೂ ಗಡಿಯಾರ ಹೊರತೆಗೆದು ವೇಳೆ ನೋಡಲು ಸಂಕೋಚವಾಗಲಾರದು. ಜಿಮ್ಮಿಯ ಗಡಿಯಾರ ಬಂಗಾರದಾಗಿದ್ದರೂ ಅದಕ್ಕೆ ಕಟ್ಟಿದ್ದ ಚರ್ಮದ ದಾರದಿಂದಾಗಿ ವೇಳೆ ನೋಡುವಾಗ ಅವನು ಯಾರೂ ಗಿಡಿಯಾರವನ್ನು ನೋಡದಂತೆ ಮರೆಗೆ ಹೋಗುತ್ತಿದ್ದ.

ಮನೆ ತಲುಪುತ್ತಿದ್ದಂತೆ ಡೆಲ್ಲಾಳಿಗೆ ವಾಸ್ತವದ ಅರಿವಾಯಿತು. ದೀಪ ಹೊತ್ತಿಸಿ ಅವಳು ಕೂದಲಿನ ರಿಪೇರಿಗೆ ಕೈ ಹಚ್ಚಿದಳು. ಪ್ರೀತಿಗಾಗಿ ಮಾಡಿದ ತ್ಯಾಗ ಕೊಂಚ ದುಬಾರಿಯೇ ಆಗಿತ್ತು.

ನಲವತ್ತು ನಿಮಿಷಗಳಲ್ಲಿ ಅವಳ ಕೂದಲು ಕರ್ಲರ್‌ಗಳಿಂದ ತುಂಬಿಕೊಂಡು ಅವಳು ನೋಡಲು ತುಂಟ ಸ್ಕೂಲ್ ಹುಡುಗಿಯಂತೆ ಕಾಣಿಸುತ್ತಿದ್ದಳು. ಬಹಳ ಹೊತ್ತು ತನ್ನನ್ನು ಕನ್ನಡಿಯಲ್ಲಿ ಪರೀಕ್ಷಿಸಿಕೊಂಡಳು.

“ಈ ವೇಷದಲ್ಲಿ ನನ್ನನ್ನು ನೋಡಿ ಜಿಮ್ಮಿ ಸಾಯಿಸದಿದ್ದರೆ, ಖಂಡಿತವಾಗಿಯೂ ನಾಟಕ ಕಂಪೆನಿಯ ಹುಡುಗಿ ಎಂದು ಭಾವಿಸುವುದರಲ್ಲಿ ಸಂಶಯವಿಲ್ಲ!” ಎಂದುಕೊಂಡಳು ಮನಸ್ಸಿನಲ್ಲೇ. ಒಂದು ಡಾಲರ್ ಎಂಭತ್ತೇಳು ಸೆಂಟುಗಳಲ್ಲಿ ಏನು ತಾನೇ ಮಾಡಲು ಸಾಧ್ಯ ಎಂದು ತನ್ನನ್ನೇ ಸಮಾದಾನ ಮಾಡಿಕೊಂಡಳು.

ಏಳು ಗಂಟೆಗೆ ಅವಳು ಕಾಫಿ ಕಾಯಿಸಿ ಒಲೆಯ ಮೇಲೆ ಕಾವಲಿಯನ್ನು ಏರಿಸಿದಳು. ಜಿಮ್ಮ್ ಒಳಗೆ ಬರುವಾಗ ಅದು ಚಾಪ್ಸ್ ಹುರಿಯಲು ಕಾದು ತಯಾರಾಗಿರುತ್ತಿತ್ತು.

ಜಿಮ್ಮ್ ತಡಮಾಡಿಕೊಂಡು ಬರುತ್ತಿರಲಿಲ್ಲ. ಚೇಯ್ನಾನ್ನು ಮುಚ್ಚಿದ್ದ ಮುಷ್ಠಿಯಲ್ಲಿಡಿದು ಡೆಲ್ಲಾ ಬಾಗಿಲ ಮರೆಯಲ್ಲೇ ಮೇಜಿನ ಮೇಲೆ ಕುಳಿತುಕೊಂಡಳು. ಅಷ್ಟರಲ್ಲಿ ಕೆಳಗಿನಿಂದ ಜಿಮ್ಮಿ ಮೆಟ್ಟಿಲು ಹತ್ತುವ ಸಪ್ಪಳ ಕೇಳಿಸಿತು. ಡೆಲ್ಲಾ ಬಿಳಿಚಿಕೊಂಡಳು. ದಿನದ ಮಧ್ಯೆ ಹಲವಾರು ಭಾರಿ ಅವಳಿಗೆ ಪ್ರಾರ್ಥಿಸುವ ಅಭ್ಯಾಸವಾಗಿತ್ತು. ಅವಳು ಬೇಡಿಕೊಳ್ಳತೊಡಗಿದಳು: ದೇವರೇ, ನನ್ನ ಜಿಮ್ಮಿಗೆ ನಾನು ಇವತ್ತೂ ಚಂದ ಕಾಣಿಸುವ ಹಾಗೆ ಮಾಡು!

ಬಾಗಿಲು ತೆರೆದು ಒಳ ಬಂದ ಜಿಮ್ ಹಾಗೆಯೇ ಬಾಗಿಲನ್ನು ಮುಚ್ಚಿ ಅಗುಳಿ ಹಾಕಿದ. ಜಿಮ್ಮ್ ದೈಹಿಕವಾಗಿ ಸಪೂರನಾಗಿ ಗಂಭೀರ ವ್ಯಕ್ತಿತ್ವದವನಂತೆ ಕಾಣಿಸುತ್ತಿದ್ದ. ಅವನಿಗೆ ಕೇವಲ ಇಪ್ಪತ್ತೆರಡು ವರ್ಷ ವಯಸ್ಸಾಗಿತ್ತು. ಆದರೆ, ಅನುಭವದಿಂದ ಮಾಗಿದ ಹಿರಿಯನಂತೆ ಕಾಣಿಸುತ್ತಿದ್ದ. ಅವನಿಗೊಂದು ಓವರ್‌ಕೋಟಿನ ಅಗತ್ಯತೆ ಖಂಡಿತಾ ಇತ್ತು. ಹಾಗೆಯೇ ಕೈಗವಸುಗಳು ಕೂಡ. ಒಳ ಬಂದಂತೆ ಜಿಮ್ ಕೆಲವು ಕ್ಷಣ ಅವಕ್ಕಾದ. ಅವನ ದೃಷ್ಠಿ ಡೆಲ್ಲಾಳ ಮೇಲೆ ಕೇಂದ್ರಿತವಾಗಿತ್ತು. ಡೆಲ್ಲಾ ಕಸಿವಿಸಿಗೊಂಡಳು. ಭೀತಳಾದಳು. ಆದರೂ ಅವನ ದೃಷ್ಠಿಯೊಳಗೆ ಕೋಪ, ಅಚ್ಚರಿ, ಹತಾಶೆ.. ಯಾವುದೇ ಭಾವಗಳನ್ನು ಅವಳು ಗುರುತಿಸಲಿಲ್ಲ. ಅವನು ನೆಟ್ಟ ನೋಟದಿಂದ, ಇವತ್ತೇ ಡೆಲ್ಲಾಳನ್ನು ಮೊದಲ ಭಾರಿ ನೋಡಿದಂತೆ ಗಮನಿಸುತ್ತಿದ್ದ.

ಮೇಜಿನಿಂದ ಇಳಿದು ಡೆಲ್ಲಾ, ಜಿಮ್ಮನ ಬಳಿ ಧಾವಿಸಿ ಬಂದಳು. “ಜಿಮ್ಮ್ ಡಾರ್ಲಿಂಗ್, ನೀ ನನ್ನ ಹಿಂಗ ನೋಡಬ್ಯಾಡ! ನಾನು ನನ್ನ ಕೂದಲನ್ನು ಮಾರಿದೆ. ಯಾಕೆಂದರೆ, ನಿನಗೊಂದು ಕ್ರಿಸ್‌ಮಸ್ ಉಡುಗೊರೆ ಕೊಡದಿದ್ದರೆ ನನಗೆ ಸಮಾಧಾನವಾಗುತ್ತಿರಲಿಲ್ಲ. ಕೂದಲಿನದೇನು ಮಹಾ? ದಯವಿಟ್ಟು ಹೀಗೆ ನೋಡಬೇಡ. ಕೂದಲು ಮತ್ತೆ ಬೆಳೀತಾವೆ. ನನಗೆ ಬೇರೆ ದಾರಿಯಿರಲಿಲ್ಲ. ನೀನೇನೂ ಆತಂಕಪಡುವುದು ಬೇಡ. ನನ್ನ ಕೂದಲು ಬೇಗ ಬೆಳೆಯುತ್ತವೆ. ನನಗೆ ಕ್ರಿಸ್ಮಸ್ ಶುಭಾಶಯಗಳನ್ನು ಕೋರು ಜಿಮ್ಮ್! ನಾನು ನಿನಗೆ ಯಾವ ಕ್ರಿಸ್ಮಸ್ ಉಡುಗೊರೆ ತಂದಿದ್ದೇನೆಂದು ನೀನರಿಯೇ!”

“ನೀನು ಕೂದಲು ಕತ್ತರಿಸಿದೆ?!” ಜಿಮ್ಮ್ ಹತಾಶಗೊಂಡವನಂತೆ ಉದ್ಘರಿಸಿದ.

“ಹೌದು. ನಾನು ಕೂದಲು ಕತ್ತರಿಸಿ ಮಾರಿದೆ. ನನ್ನ ಕೂದಲ ಹೊರತಾಗಿ ನನ್ನನ್ನು ಪ್ರೀತಿಸಲಾರೆಯಾ ಜಿಮ್ಮ್?” ಅವಳ ದನಿ ಕಂಪಿಸುತ್ತಿತ್ತು.

ಜಿಮ್ಮ್, ಏನನ್ನೂ ಹೇಳದ ಸ್ಥಿತಿಯಲ್ಲಿದ್ದ. ಅವನು ಸುತ್ತ ಮುತ್ತಲು ನೋಡತೊಡಗಿದ.

“ನೀ ಸುತ್ತಮುತ್ತ ಹುಡುಕಾಬ್ಯಾಡ ಜಿಮ್ಮ್. ನಾನು ಕೂದಲು ಮಾರಿದೆ. ಇಂದು, ಕ್ರಿಸ್ಮಸ್ ಹಿಂದಿನ ರಾತ್ರಿ. ನಿನಗಾಗಿ ಮಾರಿದೆ. ಹಟ ತೊಟ್ಟು ನನ್ನ ಕೇಶಗಳನ್ನು ಎಣಿಸಬಹುದಿತ್ತೇನೋ? ಆದರೆ, ನಿನ್ನ ಮೇಲಣ ನನ್ನ ಪ್ರೀತಿ ಯಾರಿಗೂ ಅಳೆಯಲು ಸಾಧ್ಯವಿಲ್ಲ! ಈಗ ಚಾಪ್ಸ್ ಹುರಿಯಲೇ ಜಿಮ್ಮ್?”

ನಿದ್ರೆಯಿಂದ ಎಚ್ಚೆತ್ತವನಂತೆ ಜಿಮ್ಮ್ ಕಣ್ಣು ಬಿಟ್ಟು ಡೆಲ್ಲಾಳನ್ನು ಬಿಗಿದಪ್ಪಿಕೊಂಡ. ಕೆಲವು ಕ್ಷಣಗಳಿಗೆ ನಾವು ದೃಷ್ಠಿ ಬೇರೆ ಕಡೆ ಹೊರಳಿಸೋಣ! ವಾರಕ್ಕೆ ಎಂಟು ಡಾಲರೋ, ವರ್ಷಕ್ಕೆ ಹತ್ತು ಲಕ್ಷ ಡಾಲರೋ, ಏನಂತೆ?

ಜಿಮ್ಮ್ ತನ್ನ ಕೋಟಿನ ಜೇಬಿನಿಂದ ಪ್ಯಾಕ್ ಮಾಡಿದ್ದ ವಸ್ತುವೊಂದನ್ನು ಹೊರತೆಗೆದು ಮೇಜಿನ ಮೇಲೆಸೆದ.

“ನನ್ನನ್ನು ತಪ್ಪು ತಿಳಿದುಕೊಳ್ಳಬೇಡ ಡಿಯರ್! ಕೂದಲ ಹೊರತಾಗಿಯೂ ನಾನು ನಿನ್ನನ್ನು ಪ್ರೀತಿಸುತ್ತೇನೆ. ಈ ಪೊಟ್ಟಣವನ್ನು ಬಿಚ್ಚಿ ನೋಡು. ನಾನೇಕೆ ಕೆಲವು ಕ್ಷಣ ದಂಗಾಗಿ ಹೋದೆ ಎಂದು ನಿನಗೇ ಅರ್ಥವಾಗುತ್ತದೆ.”

ಡೆಲ್ಲಾ, ಸರಸರನೇ ಪೊಟ್ಟಣ ಬಿಚ್ಚುತ್ತಿದ್ದಂತೇ ಅವಳಿಂದ ಖುಷಿಯ ಚೀತ್ಕಾರವೊಂದು ಹೊರಟಿತು. ಮರುಕ್ಷಣದಲ್ಲೇ ದುಃಖ ಉಮ್ಮಳಿಸಿ ಬಿಕ್ಕಲಾರಂಭಿಸಿದಳು. ಅವಳಿಗೆ ಸಮಾಧಾನಗೊಳಿಸಲು ಅವನು ಹರ ಸಾಹಸಪಡಬೇಕಾಯ್ತು.

ತೆರೆದ ಪೊಟ್ಟಣದಿಂದ ತಲೆಗೆ ಮುಡಿಯುವ ಬಾಚಣಿಗೆಯ ಸೆಟ್ಟೊಂದು ಹೊರ ಕಾಣುತ್ತಿತ್ತು. ಅದನ್ನು ಧರಿಸುವ ಆಸೆಯನ್ನು ಎಂದೋ ಒಮ್ಮೆ ಅವಳು ಜಿಮ್ಮನ ಕಿವಿಗಳಲ್ಲಿ ಉಸುರಿದ್ದಳು. ಅದೊಂದು ದುಬಾರಿ ಸೆಟ್ಟಾಗಿತ್ತು. ಆಮೆಯ ಚಿಪ್ಪಿನಲ್ಲಿ ಕುಸುರಿ ಕೆಲಸದಿಂದ ತಯಾರಿಸಲಾಗಿದ್ದ ಆ ಬಾಚಣಿಗೆಯ ಮಧ್ಯೆ ಸುಂದರವಾದ ಹರಳುಗಳನ್ನು ಜೋಡಿಸಲಾಗಿತ್ತು. ಡೆಲ್ಲಾಳ ಹೆರಳಿಗೆ ತಕ್ಕ ಬಾಚಣಿಗೆ ಅದಾಗಿತ್ತು. ಇದುವರೆಗೆ ಅದನ್ನು ಖರೀದಿಸುವ ಸಾಹಸಕ್ಕೆ ಅವನು ಕೈಹಾಕಿರಲಿಲ್ಲ. ಕೊನೆಗೂ ಅವನ ಕನಸು ನನಸಾದಾಗ ಡೆಲ್ಲಾಳಿಗೆ ಕೂದಲಿರಲಿಲ್ಲ!

ಬಾಚಣಿಗೆಯನ್ನು ಒಂದು ಮಗುವಿನಂತೆ ಎತ್ತಿ ಎದೆಗವುಚಿಕೊಂಡಳು. ಕೃತಕ ನಗೆ ಬರಿಸುತ್ತಾ, “ಜಿಮ್ಮ್, ಬೇಜಾರು ಮಾಡಿಕೊಳ್ಳಬೇಡ. ನನ್ನ ಕೂದಲು ಬೇಗ ಬೆಳೆಯುತ್ತವೆ.” ಎಂದು ಧಡಕ್ಕನೆ ಎದ್ದಳು. ಅವಳ ಮರೆ ಮಾಚಿದ ಕೈಯಲ್ಲೂ ಒಂದು ವಸ್ತುವಿತ್ತು. ಅದುವರೆಗೆ ಜಿಮ್ಮನಿಗೆ ಅದರ ಬಗ್ಗೆ ಗೊತ್ತಿರಲಿಲ್ಲ. ಅವಳು, ಅವನ ಮುಂದೆ ಬಿಗಿದ ಮುಷ್ಟಿಯನ್ನು ತೆರೆಯುತ್ತಾ ಅವನ ಮುಖ ನೋಡಿದಳು. ಮಂದ ಹೊಳಪಿನ ಪ್ಲ್ಯಾಟಿನಮ್ ಲೋಹ ಅವಳ ಪ್ರೀತಿಯ ಹೊಳಪು ಪಡೆದು ಅವನ ಮುಂದೆ ನಳನಳಿಸಿತು.

“ಏನಂತೀಯಾ, ಜಿಮ್ಮ್? ಇದಕ್ಕಾಗಿ ಎಷ್ಟೊಂದು ಹುಡುಕಾಡಿದೆ ಗೊತ್ತಾ? ಇನ್ಮುಂದೆ ನೀನು ದಿನಕ್ಕೆ ನೂರು ಭಾರಿಯಾದರೂ ನಿನ್ನ ಗಡಿಯಾರವನ್ನು ಹೊರತೆಗೆದು ನೋಡಬಹುದು! ತೆಗೇ ನಿನ್ನ ಗಡಿಯಾರ. ಈ ಚೇಯ್ನು ಹೇಗೆ ಕಾಣಿಸುತ್ತೆ ನೋಡಬೇಕು ನನಗೆ!” affection-paintingಅವಳು ಉತ್ಸಾಹದ ಬುಗ್ಗೆಯಾಗಿದ್ದಳು.

ಜಿಮ್ಮ್ ಸೋಫಾದ ಮೇಳೆ ಕುಸಿದು ಬಿದ್ದ. ತಲೆಯ ಹಿಂಭಾಗಕ್ಕೆ ಎರಡೂ ಕೈಗಳನ್ನು ಆಸರಿಸುತ್ತಾ ಅವಳನ್ನು ನೋಡಿ ಪೆದ್ದು ಪೆದ್ದಾಗಿ ನಕ್ಕ.

“ಡೆಲ್ಲಾ ಡಿಯರ್! ಕೆಲವು ಕ್ಷಣ ನಮ್ಮ ಕ್ರಿಸ್ಮಸ್ ಉಡುಗೊರೆಗಳನ್ನು ಮರೆತು ಬಿಡೋಣ. ಸದ್ಯಕ್ಕೆ ಅವುಗಳನ್ನು ನಾವು ಬಳಸುವಂತಿಲ್ಲ. ನಿನ್ನ ಬಾಚಣಿಗೆ ಸೆಟ್ಟನ್ನು ಕೊಳ್ಳಲು ನಾನು ನನ್ನ ವಾಚನ್ನು ಮಾರಿದೆ. ಹೋಗಲಿ ಬಿಡು. ಊಟ ತಯಾರು ಮಾಡು!”

Leave a Reply

Your email address will not be published. Required fields are marked *