ಜನ ನುಡಿ, ನುಡಿಸಿರಿ, ವರ್ತಮಾನ.ಕಾಮ್


– ರವಿ ಕೃಷ್ಣಾರೆಡ್ಡಿ


 

ಕಳೆದ ವಾರ ಮಂಗಳೂರಿನಲ್ಲಿ ನಡೆದ “ಜನ ನುಡಿ” ಕಾರ್ಯಕ್ರಮಕ್ಕೆ ಮೊದಲೇ ಒಂದು ವಿಸ್ತೃತವಾದ ಲೇಖನವನ್ನು, ಮುಖ್ಯವಾಗಿ ಪ್ರಗತಿಪರ ಎಂದು ಭಾವಿಸುವ ಯುವಮಿತ್ರರನ್ನು ಗಮನದಲ್ಲಿಟ್ಟುಕೊಂಡು ಬರೆಯಬೇಕೆಂದು ತೀರ್ಮಾನಿಸಿದ್ದೆ. ಆದರೆ, ದೆಹಲಿ ಚುನಾವಣೆಯ ಫಲಿತಾಂಶದ ನಂತರ ನನಗೆ ಸ್ವಲ್ಪ ಬಿಡುವಿಲ್ಲದೆ ಹೋಯಿತು. ಅದೇ ಸಮಯದಲ್ಲಿ ಸರ್ಕಾರಿ ನೇಮಕಾತಿಯಲ್ಲಿ ಕೆಪಿಎಸ್‌ಸಿಯ ಕರ್ಮಕಾಂಡದ ಬಗ್ಗೆ ಸಿಐಡಿ ವರದಿ ಕೈಗೆ ಸಿಕ್ಕ ಪರಿಣಾಮವಾಗಿ ಅದರ ಕುರಿತೂ ಒಂದಷ್ಟು ಕೆಲಸಗಳಾದವು. western-ghats-as-seen-from-BLR-Karwar-trainಮತ್ತೆ ಸಕಲೇಶಪುರದಿಂದ ಮಂಗಳೂರಿಗೆ ಪಶ್ಚಿಮಘಟ್ಟಗಳ ಮಧ್ಯೆ ಹಾದು ಹೋಗುವ ರೈಲಿನಲ್ಲಿ ಹೋಗುವ ಕಾರಣಕ್ಕಾಗಿ ನಾನು ಮತ್ತು ನಮ್ಮ ಬಳಗದ ಶ್ರೀಪಾದ ಭಟ್ಟರು ಒಂದು ದಿನ ಮೊದಲೇ ಬೆಂಗಳೂರು ಬಿಟ್ಟಿದ್ದೆವು. ಮೂರು ದಿನದ ನಂತರ ಬೆಂಗಳೂರಿಗೆ ಬಂದಂದಿನಿಂದ ಲೋಕಸತ್ತಾ ಪಕ್ಷದ ಮೂಲಕ ಕೆಪಿಎಸ್‌ಸಿ ಹಗರಣದ ಬಗ್ಗೆ ಹಮ್ಮಿಕೊಂಡ ಚಟುವಟಿಕೆಗಳ ಕಾರಣವಾಗಿ ಏನನ್ನೂ ಬರೆಯಲು ಬಿಡುವಿಲ್ಲದೆ ಹೋಗಿತ್ತು. ಇದೇ ಕಾರಣವಾಗಿ ನೆನ್ನೆ ನಡೆದ ಪ್ರತಿಭಟನೆಯಲ್ಲಿ ಮೊದಲಬಾರಿಗೆ ಬಂಧನಕ್ಕೊಳಪಟ್ಟು ಸಂಜೆ ಆರರ ತನಕ ಆಡುಗೋಡಿಯ ಪೋಲಿಸ್ ಗ್ರೌಂಡ್ಸ್‌ನ ಶೆಡ್‌ನಲ್ಲಿ ಇರಬೇಕಾಯಿತು. ಇದೆಲ್ಲದರ ಮಧ್ಯೆ ಮುಂದಕ್ಕೆ ಹಾಕಲಾಗದ ವೈಯಕ್ತಿಕ ಕಾರ್ಯಕ್ರಮವೊಂದು ಇಂದು.

ಕಳೆದ ಎರಡು-ಮೂರು ದಿನಗಳಿಂದ ಮೂಡಬಿದ್ರೆಯಲ್ಲಿ “ಆಳ್ವಾಸ್ ನುಡಿಸಿರಿ” ಮತ್ತು “ಆಳ್ವಾಸ್ ವಿರಾಸತ್” ವಿಜೃಂಭಣೆಯಿಂದ ನಡೆಯುತ್ತಿದೆ. ಈ ಕಾರ್ಯಕ್ರಮದ ಬಗ್ಗೆ ಇರಬಹುದಾದ ಸಂಶಯಗಳು ಮತ್ತು ಆರೋಪಗಳು ಮೊದಲ ಬಾರಿಗೆ ರಾಜ್ಯದ ಜನರ ಗಮನಕ್ಕೆ ವಿಸ್ತೃತವಾಗಿ ಬಂದದ್ದು ಕಳೆದ ವರ್ಷ ನವೀನ್ ಸೂರಿಂಜೆ ನಮ್ಮ ವರ್ತಮಾನ.ಕಾಮ್‌ನಲ್ಲಿ “ಆಳ್ವಾಸ್ ನುಡಿಸಿರಿಗೆ ಅನಂತಮೂರ್ತಿ ಹೋಗುವುದು ಯುಕ್ತವೇ?” ಲೇಖನ ಬರೆದಾಗ. ಆ ಸಮಯದಲ್ಲಿ ಈ ವೇದಿಕೆಯಲ್ಲಿ nudisiri-ananthamurthyಅದು ಬಹಳ ಗಂಭೀರ ಚರ್ಚೆಗೆ ಒಳಪಟ್ಟಿತು ಮತ್ತು ಅದಕ್ಕೆ ತಾತ್ವಿಕ ಮಟ್ಟದಲ್ಲಿ ವಿರೋಧ ಮತ್ತು ವಿಮರ್ಶೆ ಆರಂಭವಾಯಿತು. ಧನಂಜಯ ಕುಂಬ್ಳೆ ಎನ್ನುವವರು ಸೂರಿಂಜೆಯವರ ಲೇಖನವನ್ನು ವಿಮರ್ಶಿಸಿ “ಆಳ್ವಾಸ್, ನುಡಿಸಿರಿ, ಅನಂತಮೂರ್ತಿ ಲೇಖನ : ಋಣಾತ್ಮಕ ಮತ್ತು ಪೂರ್ವಾಗ್ರಹಪೀಡಿತ” ಲೇಖನ ಬರೆದರು. ಅದಕ್ಕೆ ಉತ್ತರಿಸಿ ಸೂರಿಂಜೆ “ಆಳ್ವ ಮತ್ತು ನುಡಿಸಿರಿ ಸಮರ್ಥಕರ ಲೇಖನ ಪಕ್ಷಪಾತಪೀಡಿತ ಮತ್ತು ಅಸಾಂದರ್ಭಿಕ ಸುಳ್ಳುಗಳ ಕಂತೆ…” ಎಂಬ ಇನ್ನೊಂದು ಲೇಖನ ಬರೆದರು. ತೇಜ ಸಚಿನ್ ಪೂಜಾರಿ ಎಂಬ ಮಂಗಳೂರಿನ ಯುವಕ ಇದೇ ವಿಷಯದ ಮೇಲೆ ಅದ್ಭುತವೆನ್ನಿಸುವಂತಹ “ಅನಂತಮೂರ್ತಿ, ಆಳ್ವಾಸ್, ಹಾಗೂ ಅಸೋಸಿಯೇಶನ್” ಲೇಖನ ಬರೆದ. (ಅದಾದ ಮೇಲೆ ನಾಲ್ಕೈದು ಲೇಖನಗಳನ್ನು ಬರೆದ ತೇಜ ಸಚಿನ್ ಪೂಜಾರಿ, ಕೆಲಸವೊಂದು ಸಿಕ್ಕಿ ಬೆಂಗಳೂರಿಗೆ ಬಂದ ತಕ್ಷಣ ನಾಪತ್ತೆಯಾಗಿದ್ದಾರೆ. ಸಾಧ್ಯವಾದರೆ ಯಾರಾದರೂ ಹುಡುಕಿಕೊಡಬೇಕಾಗಿ ಮನವಿ!!)

ಮೂಡಬಿದ್ರೆಯ “ನುಡಿಸಿರಿ” ಎನ್ನುವುದನ್ನು ಅದರ ಆರಂಭದ ದಿನಗಳಲ್ಲಿ ಕೆಲವು ಮಂಗಳೂರಿನ ಲೇಖಕರು ಮತ್ತು ಪತ್ರಕರ್ತರು “ಕುಡಿಸಿರಿ” ಎಂದು ತಮಾಷೆ ಮಾಡುತ್ತಿದ್ದರು ಎಂದು ಹೊರಗಿನ ಜನರಿಗೆ ಗೊತ್ತಾಗಿದ್ದೇ ವರ್ಷದ ಹಿಂದೆ ಅದು ವರ್ತಮಾನ.ಕಾಮ್‌ನಲ್ಲಿ ಚರ್ಚೆಗೊಳಗಾದಾಗ.

ಅಂದಹಾಗೆ, ನುಡಿಸಿರಿಯ ಬೆಂಬಲಿಗರ ಹೇಳಿಕೊಳ್ಳುವ ಹಾಗೆ “ಆಳ್ವಾಸ್ ನುಡಿಸಿರಿ” ಹುಟ್ಟಿದ್ದೇ ಒಂದು ರೀತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ “ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ”ಕ್ಕೆ ಪರ್ಯಾಯವಾಗಿ.alvas-nudisiri-2 ಆಳ್ವಾಸ್‌ನ ಮೋಹನ ಆಳ್ವರು ದಶಕದ ಹಿಂದೆ ಮೂಡಬಿದ್ರೆಯಲ್ಲಿ ನಡೆದ “ಕನ್ನಡ ಸಾಹಿತ್ಯ ಸಮ್ಮೇಳನ”ದ ಸ್ಥಳೀಯ ಉಸ್ತುವಾರಿ ಹೊತ್ತಿದ್ದರು. ಅವರ ಪ್ರಕಾರ ಬಹಳ ಅದ್ಭುತವಾಗಿ ಅದನ್ನು ನಡೆಸಿಕೊಟ್ಟರು. ಆದರೆ ಆ ಅನುಭವ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿರುವ ಅಶಿಸ್ತು ಅವರಿಗೆ ಬೇಸರ ಮೂಡಿಸಿತು. ಹಾಗಾಗಿ ಅಂತಹ ಒಂದು ಕಾರ್ಯಕ್ರಮವನ್ನು ಹೇಗೆ “ಅಚ್ಚುಕಟ್ಟಾಗಿ” ಮಾಡುವುದು ಎನ್ನುವುದನ್ನು ತೋರಿಸುವುದಕ್ಕಾಗಿಯೇ “ಆಳ್ವಾಸ್ ನುಡಿಸಿರಿ”ಯನ್ನು ಸಾಹಿತ್ಯ ಪರಿಷತ್ತಿನ ಜನರ “ಸಾಹಿತ್ಯ ಸಮ್ಮೇಳನ”ಕ್ಕೆ ಪರ್ಯಾಯವಾಗಿ ಆರಂಭಿಸಲಾಯಿತು. ಈ ವಿಚಾರವನ್ನು “ಜನ ನುಡಿ” ಕಾರ್ಯಕ್ರಮ “ನುಡಿ ಸಿರಿ”ಗೆ ಪರ್ಯಾಯ ಎಂಬ ಮಾತು ಬಂದಾಕ್ಷಣ “ಜನ ನುಡಿ”ಯನ್ನು ವಿರೋಧಿಸಲು ಆರಂಭಿಸಿದವರು ಗಮನಿಸಬೇಕು. ತನ್ನೆಲ್ಲಾ ಸಮಯಪ್ರಜ್ಞೆಯ ಅಭಾವ, ಗೊಂದಲ, ಇತ್ಯಾದಿಗಳ ನಡುವೆ ಸಾಹಿತ್ಯ ಪರಿಷತ್ತಿನ “ಕನ್ನಡ ಸಾಹಿತ್ಯ ಸಮ್ಮೇಳನ” ಜನರದ್ದು. ನಾಡಿನ ಎಲ್ಲರಿಗೂ ಸೇರಿದ್ದು. kannada-sahithya-sammelanaಯಾವೊಬ್ಬ ವ್ಯಕ್ತಿಯ ಮೇಲೂ ಅವಲಂಬಿತವಲ್ಲ. ಏಳೆಂಟು ದಶಕಗಳಿಂದ ನಿರಂತರವಾಗಿ ನಡೆದುಬರುತ್ತಿದೆ. ತನ್ನೆಲ್ಲಾ ಇತಿಮಿತಿಗಳ ನಡುವೆಯೂ ಅದು ನಾಡಿನ ಪ್ರಜಾಸತ್ತಾತ್ಮಕ ಆಶಯಗಳನ್ನು ಎತ್ತಿಹಿಡಿಯುತ್ತ ಬರುತ್ತಿದೆ.

ಆದರೆ, “ಆಳ್ವಾಸ್ ನುಡಿಸಿರಿ” ಎನ್ನುವುದು ಸಂಪೂರ್ಣವಾಗಿ “one man show”. ಮೋಹನ ಆಳ್ವರ ಅನೇಕ ಹಿಂಬಾಲಕರು ಅವರ ನಾಯಕತ್ವದಲ್ಲಿ ಅದನ್ನು ನಡೆಸಿಕೊಡುತ್ತಾರೆ. ಬಹುಶಃ ಆ ಕಾರ್ಯಕ್ರಮದಲ್ಲಿ “ಮುಂಡಾಸು” ಧರಿಸುವುದು, ಅಧ್ಯಕ್ಷರನ್ನು ಹುಡುಗರ ಹೆಗಲ ಮೇಲೆ “ಅಡ್ಡ ಪಲ್ಲಕ್ಕಿ” ಹೊರೆಸಿ ಮೆರವಣಿಗೆ ಮಾಡುವುದು, ಇತ್ಯಾದಿ ಕೆಲವು ವಿಚಾರಗಳು ಹೇಗೆ “ಪ್ರಜಾಪ್ರಭುತ್ವ ವಿರೋಧಿ ಆಶಯ”ಗಳನ್ನು ಹೊಂದಿದೆ ಎನ್ನುವುದು ಅನೇಕರಿಗೆ ಬಹಳ ಬೇಗ ಹೊಳೆಯುವುದಿಲ್ಲ. ಸ್ಥಳೀಯ ಮೇಲ್ಜಾತಿಗಳ ಕೆಲವು ಪಾಳೇಗಾರಿಕೆ ಮತ್ತು ಪುರೋಹಿತಶಾಹಿ ಅಂಶಗಳು ಇಲ್ಲಿ ಸ್ವಲ್ಪವೂ ಹಿಂಜರಿಕೆಯಿಲ್ಲದೆ ಹೇಗೆ ಅಲ್ಲಿಯ ಎಲ್ಲರಿಗೂ ಒಪ್ಪಿತವೆಂಬಂತೆ ಮುನ್ನೆಲೆಗೆ ಬರುತ್ತವೆ ಎನ್ನುವುದನ್ನು ಸ್ಥಳೀಯ ಸೂಕ್ಷ್ಮಜ್ಞರು ಮಾತ್ರವೇ ಹೇಳಬಲ್ಲರು. ಯಾವುದಾದರೂ ಊರಿನಲ್ಲಿಯ ಸ್ಥಳೀಯ ಜನತೆ ಅಲ್ಲಿ ಒಂದು ಸುಂದರ ಸಾಂಸ್ಕೃತಿಕ ಮತ್ತು ಸಾಹಿತ್ಯಕ ವಾತಾವರಣ ರೂಪಿಸಿಕೊಳ್ಳುವುದರ ಬಗ್ಗೆ ನಾವೆಲ್ಲ ಸಂತಸ ಪಡಬೇಕು ಮತ್ತು ಅದು ಇತರ ಕಡೆಗೂ ಹರಡುವಂತೆ ಆಶಿಸಬೇಕು. ಆದರೆ, alva-veerendra-heggadeಮೂಡಬಿದ್ರೆಯಲ್ಲಿ ಆಗುತ್ತಿರುವ ಕಾರ್ಯಕ್ರಮ ಇನ್ನೊಂದು ಕಡೆ ನಕಲು ಅಥವ ಪುನರಾವರ್ತನೆ ಆಗಲು ಸಾಧ್ಯವಾಗದಂತಹ ಕಾರ್ಯಕ್ರಮ. ಇದು ಒಬ್ಬ ಮನುಷ್ಯನ ದುಡ್ಡು ಮತ್ತು ನಿಲುವು-ಒಲವುಗಳ ಮೇಲೆ ಆಗುವ ಕಾರ್ಯಕ್ರಮವೇ ಹೊರತು ಹಲವಾರು ಜನರ ಅಭೀಪ್ಸೆ ಮತ್ತು ಸಾಮೂಹಿಕ-ಸಾಮುದಾಯಿಕ ಪಾಳ್ಗೊಳ್ಳುವಿಕೆಯಿಂದ ಅಲ್ಲ.

ಮತ್ತೊಂದು, ತಾನು ಎಂಬತ್ತು ಕೋಟಿ ಸಾಲದಲ್ಲಿದ್ದೇನೆ ಎಂದು ಮೋಹನ ಆಳ್ವರು ಅಲವತ್ತುಕೊಂಡಿರುವುದು ಇಂದೂ ಸಹ ಕೆಲವು ಪತ್ರಿಕೆಗಳಲ್ಲಿ ಬಂದಿದೆ. ಅವರು “ನುಡಿಸಿರಿ” ಕಾರ್ಯಕ್ರಮ ಮಾಡಿ ಈ ಸಾಲ ಹೊತ್ತುಕೊಂಡಿದ್ಡಾರೊ ಅಥವ ತಮ್ಮ ಶಿಕ್ಷಣ ಸಂಸ್ಥೆಯ ಕಾರಣಕ್ಕಾಗಿಯೊ ಗೊತ್ತಾಗಿಲ್ಲ. ಮತ್ತು ಈ ಪರಿ ಸಾಲದಲ್ಲಿರುವಾಗಲೂ ಹತ್ತಿಪ್ಪತ್ತು ಕೋಟಿಗಳ ವೆಚ್ಚದಲ್ಲಿ ನುಡಿಸಿರಿ ನಡೆಸುವುದಾದರೂ ಏಕೆ? ಸಾಲವನ್ನು ಮುಂದಿನ ದಿನಗಳಲ್ಲಿ ಹೇಗೆ ಭರಿಸಲಿದ್ದಾರೆ? ಅವರು ಈ ಸಾಲದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುತ್ತಿರುವುದರಿಂದ ಒಂದು ಪ್ರಶ್ನೆಯನ್ನು ಸಾರ್ವಜನಿಕರೂ ಅವರಿಗೆ ಕೇಳಬಹುದು ಮತ್ತು ಪ್ರಾಮಾಣಿಕವಾದ ಉತ್ತರವನ್ನು ನಿರೀಕ್ಷಿಸಬಹುದು: “ಈ ವರ್ಷದ ನುಡಿಸಿರಿ ಮತ್ತು ವಿರಾಸತ್ ಕಾರ್ಯಕ್ರಮಕ್ಕೆ ಆಗುವ ಖರ್ಚೆಷ್ಟು, ಯಾವ ಬಾಬತ್ತಿಗೆ ಎಷ್ಟೆಷ್ಟು, ಇದಕ್ಕಾಗಿ ಸಂಗ್ರಹಿಸಿದ ಹಣವೆಷ್ಟು, vijaykarnataka-mohan-alva-22122013ಮತ್ತು ಆ ಹಣದ ಮೂಲ ಯಾವುದು?” ತಮ್ಮ ಊರುಗಳಲ್ಲಿಯೂ ಇಂತಹ ಕಾರ್ಯಕ್ರಮ ಮಾಡಬೇಕೆಂದು ಬಯಸುವವರಿಗೂ ಈ ಮಾಹಿತಿ ಸ್ವಲ್ಪ ಸಹಾಯ ಮಾಡುತ್ತದೆ.

ಈ ಸಾಲಿನ ಅಧ್ಯಕ್ಷರು ಕರಾವಳಿಯವರೇ ಆದ ವಿವೇಕ ರೈ. ಸಜ್ಜನ ಎಂದು ಹೆಸರು ಗಳಿಸಿದ ವಿದ್ವಾಂಸರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿ ಅವಧಿ ಇನ್ನೂ ಒಂದು ವರ್ಷ ಇರುವಾಗಲೇ ಅಲ್ಲಿಯ ರಾಜಕೀಯ ಮತ್ತು ಭ್ರಷ್ಟತೆಗೆ ರೋಸಿಹೋಗಿ (!?) ದೂರದ ಜರ್ಮನಿಗೆ ವರ್ಷಕ್ಕೆ ಹತ್ತಿಪ್ಪತ್ತು ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವಂತಹ ಯಾವುದೇ ಅಧಿಕಾರ ಮತ್ತು ಠೇಂಕಾರಗಳಿಲ್ಲದ ಕೆಲಸಕ್ಕೆ ಹೊರಟವರು. ಇಂತಹ ಗುಣದ ವಿವೇಕ ರೈರವರು ಕಳೆದ ವರ್ಷ ನವೀನ್ ಸೂರಿಂಜೆ ಬರೆದ “ಆಳ್ವಾಸ್ ನುಡಿಸಿರಿಗೆ ಅನಂತಮೂರ್ತಿ ಹೋಗುವುದು ಯುಕ್ತವೇ?” ಲೇಖನವನ್ನು ಬಹುವಾಗಿ ಮೆಚ್ಚಿಕೊಂಡು ಸ್ವತಃ ಜರ್ಮನಿಯಿಂದಲೇ ಸೂರಿಂಜೆಯವರಿಗೆ ಕರೆಮಾಡಿ ಅಭಿನಂದಿಸಿದವರು. ಅಷ್ಟೇ ಸಾಲದೆಂಬಂತೆ ಸೂರಿಂಜೆಯವರ ಫೇಸ್‌ಬುಕ್ ಖಾತೆಗೆ ದೀರ್ಘ ಪತ್ರವನ್ನೂ ಬರೆದಿದ್ದವರು. ಈ ವರ್ಷ ಯಾವೊಂದೂ ಹಿಂಜರಿಕೆ ಇಲ್ಲದೆ ಮತ್ತು ತಾವು ಹಿಂದೆ ಹೊಂದಿದ್ದ ನಿಲುವಿಗೆ ಸ್ಪಷ್ಟೀಕರಣ ನೀಡದೆ “ಆಳ್ವಾಸ್ ನುಡಿಸಿರಿ”ಗೆ ಸಮ್ಮೇಳನಾಧ್ಯಕ್ಷರಾಗಿದ್ದಾರೆ. ಕನ್ನಡ ಅಂತರ್ಜಾಲದಲ್ಲಿ ರೈರವರು ಸಕ್ರಿಯರೂ ಆಗಿದ್ದಾರೆ. ಅವರಿಗೆ ಬಹುಶಃ ವರ್ತಮಾನ.ಕಾಮ್ ಬಗ್ಗೆಯೂ ತಿಳಿದಿರಬಹುದು. ಹ್ಮೂ, ತಿಳಿದಿರದೇ ಏನು? ಇಲ್ಲಿ ಪ್ರಕಟವಾದ ಸೂರಿಂಜೆಯವರ ಲೇಖನಕ್ಕೇ ಅಲ್ಲವೇ ಅವರು ಆ ಲೇಖಕರೊಂದಿಗೆ ಪ್ರತಿಕ್ರಿಯೆ ಹಂಚಿಕೊಂಡಿದ್ದು. ಹಾಗಾಗಿ ತಾವು ಹಿಂದೆ ಹೇಳಿದ್ದೇನು ಮತ್ತು ತಮ್ಮ ಇಂದಿನ ನಿಲುವೇನು ಎನ್ನುವುದರ ಬಗ್ಗೆ ಅವರು ವರ್ತಮಾನ.ಕಾಮ್‌ಗೆ ಅಥವ ನವೀನ್ ಸೂರಿಂಜೆಯವರಿಗೆ ಒಂದು ಸ್ಪಷ್ಟೀಕರಣ ನೀಡಬೇಕೆಂದು ಬಯಸುವುದು ಅಸೌಜನ್ಯವಲ್ಲ ಎಂದು ನಾನು ಭಾವಿಸುತ್ತೇನೆ.

ಇನ್ನು “ಆಳ್ವಾಸ್ ನುಡಿಸಿರಿ”ಯ ಮೊದಲ ಅಧ್ಯಕ್ಷರಾಗಿದ್ದ ಬರಗೂರು ರಾಮಚಂದ್ರಪ್ಪನವರು alva-nudisiri-baraguru-mohan-alva-veerendra-heggade-vivek-raiಈ ವರ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿದ ಬಗ್ಗೆ ಖಾರದ (ತುಸು ಹೆಚ್ಚೇ ಖಾರದ) “ಬರಗೂರು ಸನ್ಮಾನದ ಶಾಲಿನಲ್ಲಿ ಮೆತ್ತಿಕೊಂಡಿದ್ದ ರಕ್ತದ ಕಲೆಗಳು” ಲೇಖನವನ್ನು ಮಂಗಳೂರಿನ ಜೀವನ್ ಎನ್ನುವವರು ಬರೆದಿದ್ದಾರೆ. ಬರಗೂರರು ಈ ವರ್ಷದ ಸಮ್ಮೇಳನದಲ್ಲಿ ಅರ್ಧಕ್ಕೇ ಹಿಂದಿರುಗಿರುವುದೂ ಅದರಲ್ಲಿದೆ.

ಕಳೆದ ಶನಿವಾರ (14-12-13) ಮಂಗಳೂರಿನಲ್ಲಿ “ಜನ ನುಡಿ” ಆರಂಭವಾದ ದಿನದಂದೆ ಪ್ರಜಾವಾಣಿಯಲ್ಲಿ ನಾಗತಿಹಳ್ಳಿ ಚಂದ್ರಶೇಖರರ ಅಂಕಣ ಪ್ರಕಟವಾಗಿತ್ತು. ಇತ್ತೀಚಿನ ದಿನಗಳಲ್ಲಿ ಅಂಕಣ ಲೇಖನಗಳನ್ನು ಹುಮ್ಮಸ್ಸಿನಿಂದ ಓದದ ನಾನೂ ತಪ್ಪದೇ ಕಣ್ಣಾಡಿಸುವ ಕೆಲವೇ ಅಂಕಣಗಳಲ್ಲಿ ನಾಗತಿಹಳ್ಳಿಯವರದೂ ಒಂದು. ಅದನ್ನು ಈ ಬಾರಿ ಅವರು ಆಳ್ವರ ನುಡಿಸಿರಿ ಬಗ್ಗೆ ಮೀಸಲಿಟ್ಟಿದ್ದು ಮತ್ತು ಹಿಂದೆ ಅವರು ಅಲ್ಲಿ ಮಾಡಿದ್ದ ಭಾಷಣವನ್ನು ಅಚ್ಚುಹಾಕಿದ್ದು ನಿಜಕ್ಕೂ ಚೆನ್ನಾಗಿರಲಿಲ್ಲ. ಅದು ಅವರದಾಗಲಿ, ಅವರ ಅಂಕಣದ್ದಾಗಲಿ, ಘನತೆ ಹೆಚ್ಚಿಸುವ ಲೇಖನವಾಗಿರಲಿಲ್ಲ ಎನ್ನುವುದು ನನ್ನ ಅಭಿಪ್ರಾಯ. ಅದೇ ಅಥವ ಅದಕ್ಕಿಂತ ತೀಕ್ಷ್ಣವಾದ ಅಭಿಪ್ರಾಯ ಹಲವು ಗೆಳೆಯರು ಹಂಚಿಕೊಂಡರು.

ನಮ್ಮ ಬಹುತೇಕ ಸಾಹಿತಿಗಳಿಗೆ ವೇದಿಕೆ-ಭಾಷಣ ಎಂದರೆ ಪ್ರಿಯವೇ. ಅದರಲ್ಲೂ ಕೆಲವರಿಗೆ ಸನ್ಮಾನ ಎಂದರೆ ಇನ್ನೂ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಫ್ಲೈಟ್‌ನಲ್ಲಿ, ಟ್ರೈನ್‌ನಲ್ಲಿ, ಕಾರಿನಲ್ಲಿ ಕರೆಸಿಕೊಳ್ಳುತ್ತಾರೆ ಎಂದರೆ ಇನ್ನೂ ಪ್ರೀತಿ. ಅಲ್ಲಿ ಎಣ್ಣೆ ಸಿಗುತ್ತದೆ ಎಂದರೆ ಕೇಳಲೇ ಬೇಡಿ. (ಆಳ್ವಾಸ್‌ನ ಕಾರ್ಯಕ್ರಮಕ್ಕೆ ಹೋಗಿದ್ದ ಅತಿಥಿಯೊಬ್ಬರ ಕೊಠಡಿಗೆ ಆಯೋಜಕ ಸಮಿತಿಯಲ್ಲೊಬ್ಬರು ಮದ್ಯದ ಬಾಟಲಿ ಕೊಂಡೊಯ್ದು ಕೊಟ್ಟಿದ್ದರು ಮತ್ತು ಆ ಬಗ್ಗೆ ಅತಿಥಿಗಳು ಬಹಳ ಪ್ರೀತಿಯಿಂದ ತಮ್ಮ ಲೇಖನವೊಂದರಲ್ಲಿ ಸ್ಮರಿಸಿದ್ದರು ಎಂದು ಯಾರೋ ಒಬ್ಬರು ಹೇಳುತ್ತಿದ್ದರು.) ಪಾಪ ಮೋಹನ ಆಳ್ವರು ಸಾಲಸೋಲ ಮಾಡಿ ಈ ಪರಿಯ ಆತಿಥ್ಯ ಕೊಡುವಾಗ ತೆಗೆದುಕೊಳ್ಳುವವರು ಯೋಚಿಸಿ ತೆಗೆದುಕೊಳ್ಳಬೇಕು. ಆದರೆ, ಸನ್ಮಾನ ಮತ್ತು ಬಿರುದಿನ ಪ್ರಶ್ನೆ ಬಂದಾಗ ನಮ್ಮ ಸಾಹಿತಿಗಳಿಗೆ ದೇಶ-ಕಾಲದ ಪರಿವೆ ಇಲ್ಲದಂತಾಗಿಬಿಡುವುದು ಅವರ ತಪ್ಪಲ್ಲ. ಬಹಳಷ್ಟು ಸಲ ಅದು ವಯೋಮಾನದ ತಪ್ಪು. ನವೀನ್ ಸೂರಿಂಜೆಯವರ ಲೇಖನದಲ್ಲಿ ಪ್ರಸ್ತಾಪವಾದಂತೆ “ಜಮೀನ್ದಾರರ ಮನೆಯ ಜಿಲೇಬಿ ಎಂದರೆ ಎಲ್ಲರಿಗೂ ಇಷ್ಟ”. ಸ್ವಹಿತಾಸಕ್ತ ಸಾಹಿತಿಗಳಿಗಂತೂ ತುಸು ಹೆಚ್ಚೇ ಇಷ್ಟ.

ಗಂಭೀರವಾಗಿ ಹೇಳಬಹುದಾದರೆ, ಒಬ್ಬರು ತಮ್ಮ ವೈಯಕ್ತಿಕ ಹಣ ಮತ್ತು ಅಂತಸ್ತಿನಿಂದ ಇಂತಹ ಕಾರ್ಯಕ್ರಮ ಮಾಡಿದರೆ ಅದರಲ್ಲಿ ಭಾಗವಹಿಸುವುದರ ಬಗ್ಗೆ ಎಲ್ಲರೂ ಸ್ವಲ್ಪ ಗಂಭೀರವಾಗಿ ಯೋಚಿಸಬೇಕು. (ಯಾಕೆ ಎಂದು ವಿವರಿಸಬೇಕು ಎಂದು ಇಲ್ಲಿ ಯಾರಾದರೂ ಓದುಗರು ಬಯಸಿದರೆ ಬಹುಶಃ ಅವರಿಗೆ ವಿವರಿಸಿದರೂ ಅರ್ಥವಾಗದು. ಅದಕ್ಕಾಗಿ ಅದನ್ನು ಅಲ್ಲಿಗೇ ಬಿಡುತ್ತೇನೆ.)

ಈಗ “ಜನ ನುಡಿ” ಕಾರ್ಯಕ್ರಮಕ್ಕೆ ಬರುತ್ತೇನೆ. “ಆಳ್ವಾಸ್ ನುಡಿಸಿರಿ”ಯನ್ನು ಆಳ್ವರ ಆಳದಲ್ಲಿರುವ ಮತೀಯ ತಾತ್ವಿಕತೆ ಮತ್ತು ತುಷ್ಟೀಕರಣವನ್ನು ಹಾಗೂ ಅದನ್ನು ತಮ್ಮ ಶಿಕ್ಷಣ ಸಂಸ್ಥೆಯ ಮಾರ್ಕೆಟಿಂಗ್ ತಂತ್ರವಾಗಿಯೂ ಬಳಸುತ್ತಾರೆ abhimata-page1ಎಂದು ಪ್ರಾಮಾಣಿಕವಾಗಿ ನಂಬಿರುವ ಮಂಗಳೂರಿನ ಅನೇಕ ಯುವಮಿತ್ರರು ಕಳೆದ ಒಂದು ವರ್ಷದಲ್ಲಿ ಆದ ಚರ್ಚೆಗಳ ಮೂಲಕ ಗಟ್ಟಿಯಾಗಿ ರೂಪುಗೊಂಡ ಅಭಿಪ್ರಾಯದ ಹಿನ್ನೆಲೆಯಲ್ಲಿ “ಅಭಿಮತ ಮಂಗಳೂರು” ವೇದಿಕೆಯ ಮೂಲಕ “ಜನ ನುಡಿ” ಕಾರ್ಯಕ್ರಮ ಆಯೋಜಿಸಿದ್ದರು. ಮುನೀರ್ ಕಾಟಿಪಳ್ಳ, ನವೀನ್ ಸೂರಿಂಜೆ, ಹೊನ್ನಾವರದ ಡಾ.ಎಚ್.ಎಸ್.ಅನುಪಮ ಸೇರಿದಂತೆ ಅನೇಕರ ಶ್ರಮ ಮತ್ತು ಕಾಳಜಿ ಈ ಕಾರ್ಯಕ್ರಮದ ಆಯೋಜನೆಯಲ್ಲಿತ್ತು. ನಾಡಿನ ಮೂಲೆಮೂಲೆಗಳಿಂದ ಬಂದಿದ್ದ ಸುಮಾರು 400-500 ಜನ ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅನೇಕರ ನೈತಿಕ ಬೆಂಬಲ ಮಾತ್ರವಲ್ಲದೆ ಬಹುಶಃ ನೂರಕ್ಕೂ ಹೆಚ್ಚು ಜನ ಸ್ವಯಂಇಚ್ಛೆಯಿಂದ ಕಾರ್ಯಕ್ರಮದ ಖರ್ಚುವೆಚ್ಚಗಳನ್ನು ನೋಡಿಕೊಂಡರು. ಯಾರು ಯಾರಿಗಾಗಿಯೂ ಸಾಲ ಮಾಡಿಕೊಳ್ಳಲಿಲ್ಲ. ಪ್ರತಿಷ್ಟೆ ಮೆರೆಸಲಿಲ್ಲ. ಯಾವುದೇ ರೀತಿಯ ಶುಲ್ಕವಿಲ್ಲದ ಮತ್ತು ಮೊದಲೇ ನೊಂದಾಯಿಸಬೇಕಾದ ಜರೂರತ್ತಿಲ್ಲದ ಈ ಕಾರ್ಯಕ್ರಮಕ್ಕೆ ಹೊರ ಊರುಗಳಿಂದ ಬಂದಿದ್ದವರಿಗೆ ಉಚಿತವಾಗಿ ಯಾವೊಂದೂ ತೊಂದರೆ ಇಲ್ಲದಂತೆ ಉಚಿತವಾಗಿ ಊಟ ಮತ್ತು ವಸತಿ ಸೌಕರ್ಯವನ್ನು ಕಾಟಿಪಳ್ಳ ಮತ್ತು ಗೆಳೆಯರು ಕಲ್ಪಿಸಿದ್ದರು. ಅಲ್ಲಿ ಬಂದು ಮಾತನಾಡಿದ ಬಹುತೇಕರು ಒಂದು ಪೈಸೆಯನ್ನೂ ತೆಗೆದುಕೊಳ್ಳದೆ ಪ್ರೀತಿಯಿಂದ ಭಾಷಣ ಮಾಡಿ, ಬೆರೆತು, ಮಾತನಾಡಿ ಹೋದರು. ಅಲ್ಲಿ abhimatha-mangalooru-jananudi-2ಭಯ-ಭಕ್ತಿ ಇರಲಿಲ್ಲ. ಹಾಗೆಯೇ ಪಂಕ್ತಿಭೇದಕ್ಕೆ ಹೆಸರಾದ ಅವಿಭಜಿತ ಮಂಗಳೂರು ಜಿಲ್ಲೆಯಲ್ಲಿಯೇ ಇದು ನಡೆದರೂ, ಕೇವಲ ಸಸ್ಯಾಹಾರ ಮಾತ್ರವಲ್ಲದೆ ಮೀನು ಮತ್ತು ಕೋಳಿ ಮಾಂಸದ ಪದಾರ್ಥಗಳಿದ್ದರೂ ಅಲ್ಲಿ ಯಾವುದೇ ಪಂಕ್ತಿಭೇದವಿರಲಿಲ್ಲ. ಯಾರೊಬ್ಬರೂ ಇನ್ನೊಬ್ಬರ ಊಟಾಹಾರದ ವಿಚಾರದ ಬಗ್ಗೆ ಅಸಹ್ಯ ಪಡಲಿಲ್ಲ. ಬದಲಿಗೆ ಪ್ರೀತಿ, ವಿಶ್ವಾಸ, ಪ್ರಾಮಾಣಿಕ ವಿಮರ್ಶೆಗಳು ಅಲ್ಲಿದ್ದವು. ಕಾಳಜಿ ಇತ್ತು. ಆಶಾವಾದವಿತ್ತು. ಉತ್ಸಾಹವಿತ್ತು. ನೈತಿಕತೆ ಇತ್ತು. ಒಬ್ಬರನ್ನೊಬ್ಬರು ಬೌದ್ಧಿಕವಾಗಿ ಬೆಳೆಸುವ ವಾತಾವರಣವಿತ್ತು. ಏನಿಲ್ಲದಿದ್ದರೂ “ಜನ ನುಡಿ”ಯಲ್ಲಿ ಪ್ರಜಾಸತ್ತಾತ್ಮಕ ಆಶಯವಿದೆ ಮತ್ತು ಅದರ ಆಯೋಜಕರಿಗೆ ಯಾರೊಬ್ಬರನ್ನೂ ಮೆರೆಸುವ ಅಥವ ಬಳಸಿಕೊಳ್ಳುವ ಉಮೇದಿದ್ದಂತಿಲ್ಲ. ಈಗ ಸಂಘಟಕರ ಮುಂದಿರುವ ದೊಡ್ಡ ಸವಾಲು ಅದನ್ನು ಮುಂದಿನ ವರ್ಷಗಳಲ್ಲಿ ಮುಂದುವರೆಸುವುದು ಮತ್ತು ಇನ್ನೂ ಚೆನ್ನಾಗಿ ಮಾಡುವುದು.

ಹಾಗೆಂದು ಇಲ್ಲಿ ಕುಂದುಕೊರತೆಗಳೇ ಇರಲಿಲ್ಲ ಎಂತಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲವೇ ಇಲ್ಲ ಎನ್ನುವ ರೀತಿ ಇದ್ದವು. ಗೋಷ್ಟಿಗಳಲ್ಲಿಯ ಬಹುತೇಕ ಎಲ್ಲಾ ಭಾಷಣಗಳೂ ಏಕಮುಖಿಯಾಗಿದ್ದವು. ಪ್ರತಿಕ್ರಿಯೆ ನೀಡುವುದು ಎನ್ನುವುದು ನಾಮಕಾಸ್ತೆಯಾಗಿ ಎಲ್ಲರೂ ವಿಷಯಮಂಡಕರಾಗುವ ವಾತಾವರಣ ಸೃಷ್ಟಿಸಲಾಗಿತ್ತು. abhimatha-mangalooru-jananudiಒಂದೊಂದು ಗೋಷ್ಟಿಯಲ್ಲಿ ಎಂಟೊಂಭ‌ತ್ತು ಭಾಷಣಕಾರರು. (ಮತ್ತು ಕೆಲವು ಭಾಷಣಕಾರರ ಅಗತ್ಯ ಇದ್ದಂತಿರಲಿಲ್ಲ.) ಸಭಿಕರು ಭಾಷಣ ಮಾಡಿದವರೊಂದಿಗೆ ವೇದಿಕೆಯಲ್ಲಿ ಸಂವಾದದಲ್ಲಿ ಪಾಳ್ಗೊಳ್ಳುವ ಅವಕಾಶವೇ ಇರಲಿಲ್ಲ. ಮಾತನಾಡಿದವರು ಬಹುತೇಕ ಒಂದೇ ತರಹದ ಜನ. ಅಂದರೆ, ಬಹುತೇಕರು ಲೇಖಕರು, ಅಧ್ಯಾಪಕರು, ಮತ್ತು ಪತ್ರಕರ್ತರು. ಒಂದೆರಡು ಗೋಷ್ಟಿಗಳಲ್ಲಿ ಚಳವಳಿಯಲ್ಲಿ ತೊಡಗಿಸಿಕೊಂಡವರಿದ್ದರು. ಸಾಹಿತಿ-ಪತ್ರಕರ್ತರನ್ನು ಹೊರತುಪಡಿಸಿ ರಂಗಭೂಮಿಯಲ್ಲಿ ತೊಡಗಿಸಿಕೊಂಡ ಕೆಲವೇ ಕೆಲವು ಮಂದಿ ಹಾಗೂ ಪಿಚ್ಚಳ್ಳಿ ಶ್ರೀನಿವಾಸ್ ಮತ್ತು ಇಪ್ಟಾ ಜೊತೆ ಸ್ಥಳೀಯ ಹಾಡುಗಾರರು (ಸೌಜನ್ಯಾ ಘಟನೆ ಕುರಿತು ಹಾಡಿದವರು) ಇದ್ದರು. ಬರಹ – ಪತ್ರಕರ್ತ ಹಾಗೂ ಕೆಲ ಹೋರಾಟಗಾರರಲ್ಲದೆ ಬೇರೆ ಯಾರೂ ಇರಲಿಲ್ಲ ಎನ್ನುವುದು ಸತ್ಯ. ಆದರೆ ನನ್ನ ಪ್ರಶ್ನೆ ಈ ವೇದಿಕೆಗೆ ಸೂಕ್ತವಾಗಬಲ್ಲ – ಸಂವೇದನಾಶೀಲ ನಟ-ನಟಿಯರು, ಧಾರಾವಾಹಿ-ಸಿನೆಮಾ ನಿರ್ದೇಶಕರು, ಮುಖ್ಯವಾಹಿನಿಯ ಟಿ.ವಿ. ಪತ್ರಕರ್ತರು ಇದ್ದಾರಾ? ಬರವಣಿಗೆ ಒಂದೇ ಅಭಿವ್ಯಕ್ತಿಯ ಮಾದರಿ ಅಲ್ಲ ಮತ್ತು ಅದರ ಆಚೆಗೂ ವಿಶಾಲ ಜನಸಮೂಹವನ್ನು ಪ್ರಭಾವಿಸುವ ಮತ್ತು ಪ್ರಚೋದಿಸುವ ಪ್ರಬಲ ಮಾಧ್ಯಮ ವಿಭಾಗಗಳಿವೆ ಎನ್ನುವುದನ್ನು ಆಯೋಜಕರು ಮರೆಯಬಾರದು. ಅಲ್ಲಿಗೆ ಬಂದಿರುವವರು ಇಂತಹ ಬೇರೆಬೇರೆ ಮಾಧ್ಯಮಗಳೊಂದಿಗೆ ಅನುಸಂಧಾನ ಮಾಡುವುದಾಗಲಿ, ಅಲ್ಲಿಗೆ ಹೋಗುವುದರ ಬಗ್ಗೆ ಆಗಲಿ ಕೆಲವು ಮಾತುಕತೆ ಚರ್ಚೆ ಯೋಜನೆಗಳು ಆಗಬೇಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಒಂದು ಮೂರು-ನಾಲ್ಕು ಗಂಟೆಗಳ ಕಾಲದ ಮುಕ್ತ ಚರ್ಚೆ ಇರಬೇಕಿತ್ತು. ಅಲ್ಲಿ ಮುಂದಿನ ನಡಾವಳಿ ಮತ್ತು ಯೋಜನೆಗಳ ಬಗ್ಗೆ ಅಭಿಪ್ರಾಯಕ್ಕೆ ಬರಬೇಕಿತ್ತು. ಪ್ರತಿಕ್ರಿಯಾತ್ಮಕವಾಗಿಯಷ್ಟೇ ಅಲ್ಲದ ಸೃಜನಶೀಲವಾಗಿ ಕಾರ್ಯಪ್ರವೃತ್ತರಾಗುವ ಮತ್ತು ಒಟ್ಟಾಗಿ ಕೆಲಸ ಮಾಡುವ ಬಗೆಗಳ ಹುಡುಕಾಟ ಇರಬೇಕಿತ್ತು. ಇದು ಮುಂದಿನ ವರ್ಷದಲ್ಲಾದರೂ ಆಗಬೇಕು.

ಇಂತಹ ಸಭೆಗಳಲ್ಲಿ ಮಾತನಾಡುವವರಿಗೆ ಸಲಹೆ ಅಥವ ಕೋರಿಕೆ ಅಂದರೂ ಆದೀತು. ಎಡಪಂಥೀಯ–ಅದರಲ್ಲೂ ಕಮ್ಯುನಿಸ್ಟ್ ವಿಚಾರಧಾರೆಯ ಚಿಂತನೆಗಳ–ಚಿಂತಕ ಮಹಾಶಯರು “ಕೋಮುವಾದ” ಮತ್ತು “ಬಂಡವಾಳಶಾಹಿ” ಎಂಬ ಎರಡು ಪದಗಳ ಬಳಕೆಯನ್ನು ಕಮ್ಮಿ ಮಾಡಿ ವಿಷಯ ಮಂಡಿಸಲು ಪ್ರಯತ್ನಿಸಬೇಕು. ರೇಜಿಗೆ ಹುಟ್ಟಿಸುವಷ್ಟು ಸಲ ಅದನ್ನು ಬಳಸುತ್ತಾರೆ. ಹಾಗೆಯೇ ಮಹಾತ್ಮ ಗಾಂಧಿಯ ನಾಡಿನ ಇತ್ತೀಚಿನ ರಾಜಕೀಯ ವ್ಯಕ್ತಿಯೊಬ್ಬರ ಹೆಸರನ್ನೂ ಸಹ ತಮ್ಮ ಭಾಷಣಗಳಲ್ಲಿ ಅನಗತ್ಯವಾಗಿ ಮತ್ತು ವಿಪರೀತವಾಗಿ ಉಲ್ಲೇಖಿಸದ ಹಾಗೆ ಸ್ವಯಂನಿಯಂತ್ರಣ ಹೇರಿಕೊಳ್ಳಬೇಕು. ವಿಷಯ ಮತ್ತು ಹೆಸರುಗಳ ಪುನರಾವರ್ತನೆ ಎರಡು ದಿನಗಳ ಕಾರ್ಯಕ್ರಮದಲ್ಲಿ ಆಗುವುದು ಅಸಹನೀಯ. ನಮ್ಮ ಪರಂಪರೆಯಲ್ಲಿ ಇದ್ದಿರಬಹುದಾದ ಉನ್ನತ ವ್ಯಕ್ತಿ ಮತ್ತು ವಿಚಾರಗಳನ್ನು ಪ್ರಸ್ತಾಪಿಸುತ್ತ ಸಮಕಾಲೀನ ಸಂದರ್ಭದ ಕೆಟ್ಟದ್ದರ ಬಗ್ಗೆ ಮಾತನಾಡುವುದು ಹೇಗೆ ಎನ್ನುವುದನ್ನು ಸಮಾಜದ ಬಗ್ಗೆ ಕಾಳಜಿಯುಳ್ಳ ಜನ ಕಲಿಯಬೇಕಿದೆ. ಇಲ್ಲದಿದ್ದರೆ ನಮ್ಮ ಭಾಷಣಗಳು ಕೇವಲ ವೈಯಕ್ತಿಕ ರಾಗ-ದ್ವೇಷಗಳ ಅಭಿವ್ಯಕ್ತಿಯಾಗುತ್ತದೆ.

“ಜನ ನುಡಿ”ಗೆ ಮತ್ತು ತಿಂಗಳ ಹಿಂದೆ ಹಾಸನದಲ್ಲಿ ನಡೆದ “ನಾವು-ನಮ್ಮಲ್ಲಿ” ಕಾರ್ಯಕ್ರಮಕ್ಕೆ ಹೋಗಿಬಂದ ನಂತರ ವರ್ತಮಾನ.ಕಾಮ್‌ನ ಪ್ರಸ್ತುತತೆ ಮತ್ತು ಅಗತ್ಯದ ಬಗ್ಗೆ ನನಗೆ ಯಾವ ಸಂಶಯಗಳೂ ಇಲ್ಲ. New-Logo1-01-022.jpgವರ್ತಮಾನ.ಕಾಮ್ ಯಾವುದೇ ಒಬ್ಬ ವ್ಯಕ್ತಿಯದ್ದಲ್ಲ. ನಮ್ಮಲ್ಲಿ ಬರೆದಿರುವ ನೂರಾರು ಜನ ಲೇಖಕರು ಸೇರಿ ಕಟ್ಟಿರುವ ವೇದಿಕೆ ಇದು. ಒಬ್ಬಿಬ್ಬರದೇ ಆಗಿದ್ದರೆ ಒಂದು ಬ್ಲಾಗ್ ಸಾಕಿತ್ತು. ಆದರೆ ಇದು ಒಂದು ರೀತಿಯಲ್ಲಿ ಸಾಮೂಹಿಕ ಜವಾಬ್ದಾರಿಯ, ಸಾಮೂಹಿಕ ಪ್ರಯತ್ನದ ಫಲ. ನಾವು ಹಾಕಿಕೊಂಡಿರುವ ಆಶಯಗಳಿಗೆ ತಕ್ಕನಾಗಿ ನಡೆಯುವ ತನಕ ಇದು ಮುಂದುವರೆಯುತ್ತದೆ. ಅದಾಗದ ದಿನ ನಿಲ್ಲುತ್ತದೆ.

ಅಂದಹಾಗೆ, ಇತ್ತೀಚಿನ ದಿನಗಳಲ್ಲಿಯ ನನ್ನ ಕಾರ್ಯದೊತ್ತಡದ ಕಾರಣಕ್ಕಾಗಿ ಇಲ್ಲಿ ಕೆಲವೊಂದು ನಿಯಮಗಳು ನಮಗೆ ಗೊತ್ತಿಲ್ಲದೆ ಮುರಿದಿವೆ. ಬೇರೆ ಕಡೆ, ಅದರಲ್ಲೂ ಬೇರೆ ವೆಬ್‌ಸೈಟ್-ಬ್ಲಾಗುಗಳಲ್ಲಿ ಈಗಾಗಲೆ ಪ್ರಕಟವಾಗಿರುವ ಲೇಖನಗಳನ್ನು courtesy-announcementಇಲ್ಲಿ ಪ್ರಕಟಿಸುವುದಿಲ್ಲ ಎನ್ನುವುದು. ಕೆಲವು ಉತ್ಸಾಹಿ ಲೇಖಕರು ಇತರೆ ಕಡೆಗಳಿಗೂ ಕಳುಹಿಸಿ ನಮಗೂ ಕಳುಹಿಸಿರುವಂತಹ ಸಂದರ್ಭದಲ್ಲಿ ಸರಿಯಾಗಿ ಪರಿಶೀಲಿಸದೆ ಇಲ್ಲಿ ಪ್ರಕಟಿಸಿಬಿಟ್ಟಿದ್ದೇವೆ. ವರ್ತಮಾನ.ಕಾಮ್‌ಗೆ ತನ್ನದೇ ಆದ ಐಡೆಂಟಿಟಿ ಇದೆ. ನಮ್ಮಲ್ಲಿ ಪ್ರಕಟವಾಗುವ ಲೇಖನಗಳನ್ನು ಇಲ್ಲಿ ಓದುವುದಕ್ಕಿಂತ ಹೆಚ್ಚಾಗಿ ರಾಜ್ಯದ ಅನೇಕ ಕಡೆ ಮರುಮುದ್ರಿಸುವ ಸ್ಥಳೀಯ ಪತ್ರಿಕೆಗಳಲ್ಲಿ ಜನ ಓದುತ್ತಾರೆ. ಹಾಗಾಗಿ ನಮ್ಮಲ್ಲಿ ಪ್ರಕಟವಾಗುವ ಲೇಖನಗಳಿಗೆ ಒಂದು ಶಿಸ್ತಿಲ್ಲದೆ ಹೋದರೆ ಕಷ್ಟ. ಲೇಖಕರು ಇದನ್ನು ಗಮನಿಸಿ ಸಹಕರಿಸಬೇಕೆಂದು ಕೋರುತ್ತೇನೆ.

ಹಾಗೆಯೇ, ನಮ್ಮಲ್ಲಿ ಪ್ರಕಟವಾದ ಲೇಖನಗಳನ್ನು ಕನ್ನಡದ ಇತರೆ ಕೆಲವು ವೆಬ್‌ಸೈಟ್ ಮತ್ತು ಬ್ಲಾಗುಗಳವರು ಮರುಪ್ರಕಟಿಸುತ್ತಾರೆ. ನಾವು ಈಗಾಗಲೆ ಹೇಳಿರುವ ಹಾಗೆ ಲೇಖನದ ಹಕ್ಕುಗಳು ಲೇಖಕರದು. ಇತರೆ ಕಡೆ ಪ್ರಕಟಿಸುವವರಲ್ಲಿ ಕೆಲವರು ಕೃಪೆ ವರ್ತಮಾನ.ಕಾಮ್ ಎಂದೋ, ಅಥವ ನೇರವಾಗಿ ಇಲ್ಲಿಯ ಲಿಂಕ್ ಅನ್ನೋ ಕೊಡುತ್ತಾರೆ. ಹಾಗೆ ಮಾಡದವರು ದಯವಿಟ್ಟು ಕೃಪೆ ಎಂದು ಇನ್ನು ಮುಂದಾದರೂ ಸೂಚಿಸಿ ಸ್ಪಷ್ಟವಾಗಿ ಇಂಗ್ಲಿಷಿನಲ್ಲಿ www.vartamaana.com ಎಂದು ಕೊಟ್ಟರೆ ಉತ್ತಮ. ಹೀಗಾದಲ್ಲಿ ಮಾತ್ರ ವರ್ತಮಾನ.ಕಾಮ್‌ನ ಓದುಗರೂ ಹೆಚ್ಚುತ್ತಾರೆ, ಹೆಚ್ಚುಹೆಚ್ಚು ಲೇಖಕರೂ ಬರೆಯುತ್ತಾರೆ, ನಮ್ಮ ಸಮಕಾಲೀನ ಸಂದರ್ಭದ ವಿಷಯಗಳೂ ಸಶಕ್ತವಾಗಿ ಚರ್ಚೆಗೊಳಪಡುತ್ತವೆ, ಮತ್ತು ಅದು ಕ್ರಿಯಾಶೀಲತೆಯೆಡೆಗೆ ನಮ್ಮ ಲೇಖಕರನ್ನು ಮತ್ತು ಓದುಗರನ್ನು ಒಯ್ಯುತ್ತದೆ. ಹಾಗಾಗಿ ದಯವಿಟ್ಟು ಎಲ್ಲರೂ ಸಹಕರಿಸಬೇಕೆಂದು ಮತ್ತೊಮ್ಮೆ ಕೋರುತ್ತೇನೆ.

19 thoughts on “ಜನ ನುಡಿ, ನುಡಿಸಿರಿ, ವರ್ತಮಾನ.ಕಾಮ್

  1. Naveen

    ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಕ್ಕೂ ಆಳ್ವಾಸ್ ಸುದಿಸಿರಿಗೂ ಹೋಲಿಸುವದು ಅವಾಸ್ತವ. ಕ ಸಾ ಪ ಸಮ್ಮೇಳನಕ್ಕೆ ಪರ್ಯಾಯ ಎಂದು ಕಾರೆಯುವದೆ ಹಾಸ್ಯಾಸ್ಪದ! ಆಳ್ವಾಸ್ ನುದಿಸಿರಿಯಂಥ ಕಾರ್ಯಕ್ರಮದಿಂದ ಗುಡ್ ವಿಲ್ ಹೆಚ್ಚುತ್ತದೆ ಎನ್ನುವದು ಅಷ್ಟೇ ಸತ್ಯ. ಎಂಭತ್ತು ಕೋಟಿ ಸಾಲ ಎಂದರೆ ಏನು ಸಾಮಾನ್ಯವೇ? ಅದೇನು ಮೂಡುಬಿದಿರೆಯ ಯಾವದೋ ಬ್ರ್ಯಾನ್ಚಿನ ಮ್ಯಾನೇಜರ್ ನ ವೀವೆಚನೆಯಿಂದ ಕೊಟ್ಟಿರಲ್ಲ. ಅಷ್ಟೊಂದು ಸಾಲ ಅಂದರೆ ಅದು ಒಂದು ರಾಷ್ಟ್ರೀಕೃತ ಬ್ಯಾಂಕೇ ಆಗಿರಬಹುದು, ಹಾಗೂ ಅದು ಅತಿ ಕಡಿಮೆಯೆಂದರೂ ಜೊನಲ್ ಮ್ಯಾನೇಜರ್ ನ ಲೆವಲ್ ನಲ್ಲಿ ನಿರ್ಧರಿತವಾಗಿರತ್ತೆ. ಎಂಭತ್ತು ಕೋಟಿ ಸಾಲಕ್ಕೆ ಆಧಾರ ಏನು?

    ಅದೆಲ್ಲಾ ಹೋಗಲಿ. ಲಕ್ಷಾಂತರ ಜನ ಸೇರುವ ಕಸಾಪ ಸಮ್ಮೇಳನ ಅಂದರೆ ಅದೇನು ಯಾರೊಬ್ಬನ ಆಸ್ತಿಯಿಂದ ಆಗುವ ಸಮ್ಮೇಳನವಲ್ಲ. ಅಲ್ಲಿ ಹತ್ತಾರು ಉಪ ಸಮಿತಿಗಳು, ಸಮಿತಿಗಳು, ಕಾರ್ಯಕರ್ತರು, ಒಬ್ಬೊಬ್ಬರದ್ದು ಒಂದೊಂದು ಅಭಿಪ್ರಾಯ ಐದಿಯಾಲಜಿ, ವಿರೋಧ ವ್ಯಕ್ತಪದಿಸಳಕ್ಕೆಂದೇ ಸಮ್ಮೇಳನಕ್ಕೆ ಬರುವ ಕೆಲ ಜನ, ಅನಾಯಾಸವಾಗಿ ಪತ್ರಿಕೆಗಳಲ್ಲಿ ಕೇವಲ ಪ್ರತಿಭಟನೆ, ದೊಂಬರಾಟಕ್ಕೆ ಸಿಗುವ ಪ್ರಾಮುಖ್ಯತೆ, ಇತ್ಯಾದಿಯಿಂದ ಕಸಾಪ ಸಮ್ಮೇಳನವೆಂದರೆ ಒಂದು ಜಾತ್ರೆಯಂತೆ ಕಂಡುಬಂದರೆ ಆಶ್ಚರ್ಯವಿಲ್ಲ. ಇದರ ಮುಂದೆ ಒಂದು ಇವೆಂಟ್ ಮ್ಯಾನೇಜ್ಮೆಂಟ್ ಥರ ಶಿಸ್ತುಬದ್ಧವಾಗಿ ನಡೆಯುವ ಒಂದು ಖಾಸಗಿ ಸಮ್ಮೇಳನ ಸಹಜವಾಗಿಯೇ ಅಚ್ಚುಕಟ್ಟಾಗಿ ಕೂಡಿರುತ್ತದೆ.

    ಈಗಿನ ದಿನಗಳಲ್ಲಿ ಪ್ರತಿ ಸಮ್ಮೇಳನಕ್ಕೂ ಒಂದು ಪರ್ಯಾಯ ಸಮ್ಮೇಳನ ಇದ್ದೆ ಇರತ್ತೆ. ಇದು ಕಸಾಪ ಸಮ್ಮೇಳನ ಆಗಿರಬಹುದು, ಆಳ್ವಾಸ್ ನುಡಿಸಿರಿ ಇರಬಹುದು, ಅಥವಾ ಧಾರವಾಡದಲ್ಲಿ ಜರುಗಿದ ಜೈಪುರ್ ಲಿಟ್ ಫೆಸ್ಟ್ ಮಾದರಿಯ ಸಮ್ಮೇಳನ ಆಗಿರಬಹುದು, ಅಲ್ಲೆಲ್ಲಾ ಒಂದೊಂದು ಸಮ್ಮೇಳನಕ್ಕೂ ಪರ್ಯಾಯ ಸಮ್ಮೇಳನ ಇದ್ದೇ ಇದೆ. ಇದರಿಂದ ಕೆಟ್ಟದ್ದೇನೂ ಇಲ್ಲಾ. ಒಂದು ರೀತಿಯಿಂದ ಒಳ್ಳೆಯದೇ. ಒಂದೇ ವೇದಿಕೆಯಲ್ಲಿ ಆಗಬಹುದಾದ ಪರ ವಿರೋಧ ಚರ್ಚೆ ಎರಡೆರಡು ವೇದಿಕೆಯಲ್ಲಿ ಆಗುತ್ತದೆ. ಮಾತನಾಡುವವರು ಮಾತಾಡ್ತಾರೆ, ಕೇಳಿಸಿಕೊಳ್ಳುವವರು ಕೇಳಿಸಿಕೊಂಡು ಆಹುದಹುದೆಂದು ಗೋಣು ಆಲಿಸಿ ಹೋಗುತ್ತಾರೆ, ಇದಕ್ಕಿಂತ ಹೆಚಿನದು ಯಾವ ಮಹಾ ಸಮ್ಮೇಳನದಲ್ಲೂ ಆಗಲ್ಲಾ.

    ಆದರೆ ಒಂದು ಸಮ್ಮೇಳನಕ್ಕೆ ಹೋದವರನ್ನು ಇನ್ನೊಂದು ಪರ್ಯಾಯದ ಜನ ಅಷ್ಪಷ್ಯರಂತೆ, ಬಹಿಷ್ಕರಿಸಿದವರಂತೆ, ಏನೋ ದೊಡ್ಡ ಪಾಪ ಮಾಡಿದವರಂತೆ ಕಾಣುವದು ತಪ್ಪು. ಆಳ್ವಾಸ್ ನುಡಿಸಿರಿಗೆ ಹೋದ ಮಾತ್ರಕ್ಕೆ ಬರಗೂರರ ಐದಿಯಲಜಿಯಲ್ಲಿ ಬದಲಾವನೆಯಗತ್ತೆ ಅಂತ ಹೇಳೋಕಗತ್ತಾ?

    ರವಿಕೃಷ್ಣಾ ರೆಡ್ಡಿಯವರು ಹೇಳಿದಂತೆ ಜನನುಡಿಯಲ್ಲಿ ಏಕಮುಖ ವಾದ ಮಂದನೆಯಾಗದೆ ಏನು? ಯಾಕೆಂದರೆ ಒಂದೋ ಬಿಜೆಪಿ,ಕೋಮುವಾದ,ಬಂದವಳಶಾಹಿಗಳನ್ನು ಬಯ್ಯಬೇಕು, ಅಥವಾ ಕೋಮುವಾದಿ, ಚೆಡ್ಡಿ, ಬಂಡವಾಳಶಾಹಿಗಳ ಎಂಜಲನ್ನು ನೆಕ್ಕುವವ ಎಂದು ಅನ್ನಿಸಿಕೊಲ್ಲಬೇಕು. ಇಂಥ ಪರಿಸ್ತಿತಿಯಲ್ಲಿ ಅಭಿಪ್ರಾಯಬೇಧವಿದ್ದವರು ಯಾರಾದ್ರು ಅಲ್ಲಿ ಹೋಗಿ ಮಾತನಾಡುವ ಧೈರ್ಯ ಮಾಡ್ತಾರಾ?

    ಇನ್ನು ಬರೀ ಕೋಮುವಾದ, ಬಂಡವಾಳಶಾಹಿ, ಗಾಂಧಿ ಈ ಮೂರನ್ನು ಅತಿಯಾಗಿ ರೇಜಿಗೆ ಹುಟ್ಟಿಸುವಷ್ಟು ಬಾರಿ ಮಾತನಾಡುವ ಕುರಿತು. ಒಂದು ಸಮಾಧಾನ, ಖುಷಿಯ ಸಂಗತಿಯೆಂದರೆ ರವಿಕೃಷ್ಣಾ ರೆಡ್ಡಿಯವರಿಗೆ ಈ ವಿಷಯ ಗಮನಕ್ಕೆ ಬಂದದ್ದು. ಬೇಕಾದ್ರೆ ಅವರು ತಮ್ಮ ವರ್ತಮಾನ.ಕಾಂ ಲೇಖನಗಳನ್ನೇ ಒಂದಷ್ಟು ಕಣ್ಣಾಡಿಸಲಿ ಹಾಗೂ ಈ ಅಂಶವನ್ನು ತಮ್ಮ ವರ್ತಮಾನ ವೆಬ್ ಸೈತಿನಲ್ಲೂ ಸ್ವಲ್ಪ ಅಳವಡಿಸಿಕೊಳ್ಳಲಿ. (ಒಂದುವೇಳೆ ಇದನ್ನು ಅಳವಡಿಸಿಕೊಂಡರೆ ಆನಂದ್ ಪ್ರಸಾದ್ ಥರದವರಿಕೆ ಕೆಲಸ ಇರಲ್ಲ ಆ ಮಾತು ಬೇರೆ!)

    ರವಿಕೃಷ್ಣಾ ರೆಡ್ಡಿಯವರು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಒಂದು ಮಾತು ಅವರಿಗೆ ಹೇಳೋಕೆ ಇಷ್ಟಾ ಪಡ್ತೀನಿ – ಇದು ಅವರಿಗೆ ಗೊತ್ತಿದ್ದದ್ದೇ – ಆಮ್ ಆದ್ಮಿ ಪಾರ್ಟಿ ತನ್ನ ಮಡಿವಂತಿಕೆ ಬಿಟ್ಟು ಕಸಬರಿಕೆ ಹಿಡಿದು ಗಲ್ಲಿ ಗಲ್ಲಿ, ಕೊಳಗೇರಿ ಕೇರಿಗಳನ್ನ, ಅಲ್ಲಿಯ ಜನರ ವಿಶ್ವಾಸ ಗೆದ್ದಷ್ಟೇ, ಮುಖ್ಯವಾಗಿ ಮಧ್ಯಮವರ್ಗದ ಜನರ ವಿಶ್ವಾಸವನ್ನೂ ಗೆದ್ದು ಅದರ ಮುಖಾಂತರ ಒಂದು ಪವಾಡ ಮಾಡಿತೆ ಹೊರತು ಕೇವಲ ಒಂದು ವರ್ಗವನ್ನು ಬಯ್ಯುತ್ತ ಈ ಕೆಲಸ ಮಾಡಲಿಲ್ಲ.

    ಆಮ್ ಆದ್ಮಿ ಪಾರ್ಟಿಯ ಎಲ್ಲಾ ಲಕ್ಷಣಗಳೂ ಲೋಕಸತ್ತಾ ಪರ್ತಿಯಲ್ಲಿವೆ. ಆದರೆ ಇನ್ಕ್ಲುಸಿವೆನೆಸ್ ಇರದೇ ನಮಗೆ ಕೇವಲ ಎಡಪಕ್ಷದ, ಅಲ್ಪಸಂಖ್ಯಾತರ, ಬಹುಸಂಖ್ಯಾತ ಜನರನ್ನು ಬಯ್ಯುವದೆ ಕಾಯಕ ಮಾಡಿಕೊಂಡವರ ದಂಡು ಮಾತ್ರ ಬೇಕೆಂದರೆ ಹೀಗೆ ಪ್ರತಿ ವರ್ಷ ಮೂರುಸಾವಿರ ವೋಟು ಪಡೆದು ನಂದೂ ಒಂದು ಪ್ರಯತ್ನ ಎನ್ನುತ್ತಾ ಇರಬೇಕಾಗತ್ತೆ.

    -ನವೀನ ಎಚ್.

    Reply
    1. 08389231054

      ಕೋಮುವಾದ ಮತ್ತು ಬಂಡವಾಳವಾದ ಈ ನೆಲದ ವಾಸ್ತವವಾಗಿರುವಾಗ ಅದನ್ನು ಬಿಟ್ಟು ಮಾತನಾಡುವುದು ಹೇಗೆ? ಈ ನಾಡಿನ ತಲ್ಲಣಗಳು ಕೇವಲ ಈ ನಾಡಿನ ಕೊಡುಗೆ ಅಲ್ಲ.ಸಾಮ್ರಾಜ್ಜ್ಯವಾದಿ ರಾಜಕಾರಣದೊಂದಿಗೆ ಸಂಬಂಧ ಉಳ್ಳದ್ದು. ಕೋಮುವಾದ ,ಜಾತಿವಾದದ ಬೆಳವಣಿಗೆಗೂ ಅಮೇರಿಕನ್ ಸಾರ್ಮಾಜ್ಯಶಾಹಿ ಕಾರ್ಯತಂತ್ರಕ್ಕೂ ನೇರ ಸಂಬಂಧ ಿದೆ ಅನ್ನುವುದನ್ನು ಅರ್ಥಮಾಡಿಕೊಳ್ಳದಿದ್ದರೆ ನಾವೇ ದಾರಿ ತಪ್ಪುತ್ತೇವೆ.

      ಆಳ್ವಾಸ್ ನುಡಿಸಿರಿಯ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿರುವುದು ಸ್ವಾಗತಾರ್ಹ.ಆದರೆ ಅದು ಅಲ್ಲಿ ಹೋದವರ ಕುರಿತಾಗಿ ವಯಕ್ತಿಕ ಾರೋಪಗಳಿಗೆ ಇಳಿದಂತೆ ಕಾಣುತ್ತದೆ. ಸಿದ್ಧಾಂತದ ಚರ್ಚೆ ಪಕ್ಕಕ್ಕೆ ದೂಡಲ್ಪಡುತ್ತಿದೆ. ಬರಗೂರರು ಅಲ್ಲಿ ಭಾಗವಹಿಸಿದ್ದರ ಕುರಿತು ನನಗೂ ಬೇಸರ ಇದೆ. ಆದರೆ ಅವರನ್ನು ಖಳನಾಯಕರಾಗಿ ಚಿತ್ರಿಸುತ್ತಿರುವುದು ಸರಿ ಅಲ್ಲವೇನೋ? ಆಳ್ವಾನಿಗಿಂತ,ಪೇಜಾವರರಿಗಿಂತ,ಹೆಗ್ಗಡೆಗಿಂತ ಬರಗೂರು ಅವರೇ ನಮ್ಮ ವಿರೋಧಿಗಳಾಗಬೇಕಾಗಿಲ್ಲ.. ಅವರೊಂದಿಗೆ ಒಂದು ಚ್ರಚೆ ಸಾಧ್ಯ ಻ಂದುಕೊಂಡಿದ್ದೇನೆ. ಕೊನೆಗೂ ನಾವೆಲ್ಲ ನಮ್ಮ ನಮ್ಮ ತಪ್ಪು ತಿದ್ದಿಕೊಂಡು ಒಟ್ಟಾಗುವುದು ಈನಾಡಿನ ಻ನಿವಾರ್ಯತೆಗಳಲ್ಲಿ ಒಂದು–vittal,kerekon

      Reply
    2. Ananda Prasad

      ರವಿಕೃಷ್ಣಾ ರೆಡ್ಡಿಯವರಿಗೆ ತಾನು ಪ್ರತಿಪಾದಿಸುವ ಮೌಲ್ಯಗಳು ಮುಖ್ಯವೇ ಹೊರತು ಶಾಸಕತ್ವ, ಅಧಿಕಾರ, ಹಣ ಗಳಿಸಿ ಭೋಗ ವಿಲಾಸಿ ಜೀವನ ನಡೆಸುವುದು ಮುಖ್ಯ ಅಲ್ಲ ಎಂದು ಅವರ ಇದುವರೆಗಿನ ನಡವಳಿಕೆಗಳಿಂದ ಕಂಡುಬರುತ್ತದೆ. ಇಲ್ಲದೆ ಇದ್ದರೆ ಅವರು ಅಮೇರಿಕಾದಲ್ಲಿ ಕೋಟ್ಯಂತರ ಹಣ ಗಳಿಸುತ್ತಾ ಮೆರೆಯಬಹುದಾಗಿತ್ತು, ಅಲ್ಲಿಯ ಕೆಲಸ ಬಿಟ್ಟು ಇಲ್ಲಿಗೆ ಬರುತ್ತಿರಲಿಲ್ಲ. ಅವರಿಗೆ ಶಾಸಕನಾಗುವುದು ಮುಖ್ಯ ಎಂದಾಗಿದ್ದರೆ ತನ್ನ ತತ್ವ, ಮೌಲ್ಯಗಳೊಂದಿಗೆ ರಾಜಿ ಮಾಡಿಕೊಂಡು ಕಾಂಗ್ರೆಸ್ ಅಥವಾ ಬಿಜೆಪಿ ಸೇರಿ ಶಾಸಕನಾಗಿಯೂ ಆಯ್ಕೆಯಾಗುತ್ತಿದ್ದರು. ಇದು ಅತ್ಯಂತ ಸುಲಭದ ಹಾದಿ.

      Reply
      1. Naveen H

        Dear Anand Prasad sir
        I didnt understand why you write this. I know this fact. N whats the motive of Prajasatta party? Just to be a player or to win election? I also said samne thing, he has choosen sailing against the tide, people will support him provided he become more accommodative on iseogical differences.

        Reply
        1. Ananda Prasad

          ರವಿಕೃಷ್ಣಾ ರೆಡ್ಡಿಯವರು ಲೋಕಸತ್ತಾ ಪಕ್ಷದ ಅಡಿಯಲ್ಲಿ ಸ್ಪರ್ಧಿಸುವ ಕಾರಣ ಆ ಪಕ್ಷದ ನೀತಿ ನಿಲುವುಗಳ, ಕಾರ್ಯಕ್ರಮಗಳ ಆಧಾರದಲ್ಲಿ ಮತ ಕೇಳುವುದು. ಇದಕ್ಕಾಗಿ ಅವರು ತನ್ನ ವೈಯಕ್ತಿಕ ನಂಬಿಕೆಗಳನ್ನು ಅಥವಾ ಮೌಲ್ಯಗಳನ್ನು ಬಲಿ ಕೊಡಬೇಕಾಗಿಲ್ಲ ಎಂದು ನನ್ನ ಅನಿಸಿಕೆ. ಲೋಕಸತ್ತಾ ಪಕ್ಷದ ರಾಜಕೀಯ ನಿಲುವು ಹಾಗೂ ‘ವರ್ತಮಾನ’ ವೆಬ್ ಸೈಟ್ ಇದರ ನಡುವೆ ಸಂಬಂಧ ಇಲ್ಲ. ಹಾಗೆಂದು ಹಿಂದೆಯೇ ಅವರು ಹೇಳಿದ್ದಾರೆ.

          Reply
  2. Srinivasamurthy

    “ಬರಗೂರು ಸನ್ಮಾನದ ಶಾಲಿನಲ್ಲಿ ಮೆತ್ತಿಕೊಂಡಿದ್ದ ರಕ್ತದ ಕಲೆಗಳು” ಈ ಲೇಕನದ ಶೀರ್ಶಿಕೆ ಸರಿಯಾಗಿಲ್ಲ ಮತ್ತು ಈ ಹಿಂದೆ ನೀವು “ಕೊಳೆತು ನಾರುತ್ತಿರುವ ಶಾಸಕರು” ಎಂಬ ಪದವನ್ನು ಬಳಸಿದ್ದೂ ಕೂಡ ಸರಿಯಾಗಿಲ್ಲ. ಒಂದು ವೇಳೆ ನೀವು ಶಾಸಕರಾಗಿದ್ದಿದ್ದರೆ ಇದೇ ಪದವನ್ನು ಯಾರಾದರು ಬಳಸಿದ್ದಲ್ಲಿ ನಿಮ್ಮ ಪ್ರತಿಕ್ರಿಯೆ ಏನಾಗುತ್ತಿತ್ತು? ಶಾಸಕರೆಲ್ಲರನ್ನು ಒಟ್ಟಾಗಿ ಹೀಗೆ ಅನ್ನುವುದು ಸರಿಯೆ? ಶಾಸಕಾಂಗದ ಚ್ಯುತಿಗೆ ಬಾದ್ಯತೆಯನ್ನುಂಟು ಮಾಡಿದಂತೆ ಆಗುವುದಿಲ್ಲವೆ?

    Reply
  3. Srinivasamurthy

    ಕ್ಶಮಿಸಿ.
    ಇದೇ ಪದವನ್ನು ಯಾರಾದರು ಬಳಸಿದ್ದಲ್ಲಿ ನಿಮ್ಮ ಪ್ರತಿಕ್ರಿಯೆ ಏನಾಗುತ್ತಿತ್ತು? ಶಾಸಕರೆಲ್ಲರನ್ನು ಒಟ್ಟಾಗಿ ಹೀಗೆ ಅನ್ನುವುದು ಸರಿಯೆ? ಶಾಸಕಾಂಗದ ಗನತೆಗೆ ಬಾದ್ಯತೆಯನ್ನುಂಟು ಮಾಡಿದಂತೆ ಆಗುವುದಿಲ್ಲವೆ? ಗುರುವಿನ ಕಲ್ಪನೆಯನ್ನೂ ಕೂಡ ಗುಲಾಮಿತನಕ್ಕೆ ತಳ್ಳುವ ಲೇಕನಗಳನ್ನು ಈ ತಾಣದಲ್ಲಿ ಹಾಕುತ್ತಿರುವುದು ಸರಿಯೆ?

    Reply
    1. Ananda Prasad

      “ಗುರುವಿನ ಗುಲಾಮನಾಗದೆ ದೊರೆಯದಣ್ಣ ಮುಕುತಿ” ಎಂದು ಒಂದು ಯಾರದೋ ಒಂದು ಹಾಡೇ ಇದೆ. ಗುರುವಿನ ಅಡಿಯಾಳಾಗಿ ಸ್ವತಂತ್ರ ಚಿಂತನೆಯನ್ನು ಮಾಡದೆ ಗುರು ಎನಿಸಿಕೊಂಡವರು ಹೇಳಿದ್ದನ್ನು ಶಿರಸಾವಹಿಸಿ ಪಾಲಿಸುವವರು ನಮ್ಮ ದೇಶದಲ್ಲಿ ಹೆಚ್ಚಾಗಿದ್ದಾರೆ. ಇದರಿಂದಾಗಿ ಸಮಾಜದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯುತ್ತಿಲ್ಲ. ವೈಜ್ಞಾನಿಕ ಮನೋಭಾವ ಬೆಳೆಯದೆ ದೇಶವು ಮಾನವೀಯ ಮೌಲ್ಯಗಳ ಕಡೆಗೆ ಚಲಿಸುವುದು ಕಷ್ಟ. ಇರುವ ವಿಷಯವನ್ನು ಇದ್ದಂತೆ ಹೇಳಿದರೆ ಕೆಲವರಿಗೆ ಹಿಡಿಸುವುದಿಲ್ಲ. ಆದರೇನು ಮಾಡುವುದು ಸತ್ಯವು ಕಹಿಯೆಂದು ಹೇಳದೆಯೂ ಇರುವಂತಿಲ್ಲ.

      Reply
      1. Srinivasamurthy

        “ಗುರುವಿನ ಗುಲಾಮನಾಗದೆ ದೊರೆಯದಣ್ಣ ಮುಕುತಿ” ಎಂದು ಒಂದು ಯಾರದೋ ಒಂದು ಹಾಡೇ ಇದೆ.
        ಹೀಗೆ ನೀವು ಯಾರದೋ ಪದದ ಬದಲಾಗಿ ನೇರವಾಗಿ ಬಸವಣ್ಣ ನವರ ಹೆಸರನ್ನು ಹೇಳಲು ಒಪ್ಪದ ನೀವು ಹೊಂದಿರುವ ವಿಚಾರದ ದಾರಿಯೇ ಬವ್ದಿಕ ವಿಶಕಾರಿಯದ್ದು ಎಂದು ತೋರಿಸುತ್ತದೆ. ಯಜಮಾನ ಮತ್ತು ಗುರುವಿನ ಕಲ್ಪನೆಗಳೆರಡು ಬೇರೆ ಅದನ್ನು ಮೊದಲು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಿ.
        ಇನ್ನೊಂದನ್ನು ಹೇಳುತ್ತೇನೆ
        ಅತಿಯಾದ ದರ್ಮ ಮಾತ್ರವೇ ಅಲ್ಲ ಅಪೀಮು; ಅತಿಯಾದ ವೈಜ್ಞಾನಿಕವೂ ಕೂಡ ಅಪೀಮು
        ಎಂಬುವುದನ್ನು ತಿಳಿದುಕೊಳ್ಳಿ.
        ಅತಿಯಾದ ದರ್ಮ
        ಬಾವನೆಗಳನ್ನು ಕೆರಳಿಸಿ ಮಾನವ ಸಂಬಂದವನ್ನು ಹಾಳುಗೆಡವಿ ಸಮಾಜದ ಅವನತಿಗೆ ಕಾರಣವಾಗುವಂತೆ,
        ಅತಿಯಾದ ವೈಜ್ಞಾನಿಕ ಮನೋಬಾವ
        ಬಾವನಾತ್ಮಕ ಸಂಬಂದವನ್ನು ಕುಗ್ಗಿಸಿ ಕ್ರುತಕ ಸಂಬಂದವನ್ನು ಉಂಟು ಮಾಡಿ ಸಮಾಜವನ್ನು ಯಾಂತ್ರಿಕವಾಗಿಸುತ್ತದೆ.
        ನೀವು ಮಂಡಿಸುತ್ತಿರುವ ವಿಶಯವೇ ಯಾಂತ್ರಿಕ ಲಕ್ಶಣದ್ದು ಅಂತ ಅನಿಸಿದೆ.
        “ಗುರುವಿನ ಗುಲಾಮನಾಗದೆ ದೊರೆಯದಣ್ಣ ಮುಕುತಿ”
        ಇದು ಅಹಂಕಾರ ದಿಂದ ಬಿಡುಗಡೆ ಹೊಂದುವ ಪ್ರತಿಕವಾಗಿಯೇ ಇರುವುದು.
        ನೀವು ಹೇಳಿದಂತೆ ಯಾವ ರೀತಿಯ ಗುಲಾಮಿತನದ್ದು ಅಲ್ಲ.
        ಸಮಾಜವು ಹಲತನದಿಂದ ಕೂಡಿದ್ದು. ಎಡ ಪಂತಿಯರಿಗೂ ಮತ್ತು ಬಲ ಪಂತಿಯರಿಗೂ ತಮ್ಮ ತಮ್ಮ ಸಮರ್ತನೆಯನ್ನು ಮಂಡಿಸಲಿಕ್ಕಾಗಿ ನಯ್ಜ ಸಂಗತಿಗಳನ್ನು ಒದಗಿಸುತ್ತದೆ. ಆದರೆ, ಅವರುಗಳು ತಮಗೆ ಒಪ್ಪುವ ಸಂಗತಿಯನ್ನು ಮಾತ್ರ ಆಯ್ದುಕೊಂಡು ಸಮಾಜ ಹೀಗೆಯೇ ಇರೋದು ಅಂತ ವಚಾನುಗೋಚರವಾಗಿ ಮೂಗಿನ ನೇರಕ್ಕೆ ಮಂಡಿಸಿ ಸಂಗರ್ಶಕ್ಕೆ ಎಡೆ ಮಾಡುತ್ತಿದ್ದಾರೆ.
        ಸಮಾಜದ ಈ ಹಲತನದ ಕಲ್ಪನೆಯನ್ನೇ ಸರಿಯಾಗಿ ಅರಿಯದೆ ಸೀಮಿತ ಅನಿಸಿಕೆಗಳನ್ನು ಮಂಡಿಸುವುದನ್ನು ನಿಲ್ಲಿಸಿ.

        Reply
        1. Ananda Prasad

          “ಗುರುವಿನ ಗುಲಾಮನಾಗದೇ ದೊರೆಯದಣ್ಣ ಮುಕುತಿ” ಎಂಬ ಹಾಡು ಯಾರದ್ದು ಎಂಬ ಬಗ್ಗೆ ಸ್ಪಷ್ಟವಾಗಿ ಗೊತ್ತಿಲ್ಲದಿದ್ದುದರಿಂದ ಯಾರೋ ಎಂದು ಬರೆದಿದ್ದೇನೆ. ಇದೀಗ ಅಂತರ್ಜಾಲದಲ್ಲಿ ಹುಡುಕಿದಾಗ ಈ ಹಾಡು ಪುರಂದರದಾಸರದ್ದು ಎಂದು ಕಂಡುಬರುತ್ತದೆ. ನೀವು ಊಹಿಸಿದಂತೆ ಬಸವಣ್ಣನವರದ್ದು ಅಲ್ಲ. ಮುಕ್ತಿ ಎಂಬುದನ್ನು ವೈಜ್ಞಾನಿಕ ಮನೋಭಾವ ಒಪ್ಪುವುದಿಲ್ಲ. ಮುಕ್ತಿ ಎಂಬ ಪರಿಕಲ್ಪನೆ ಪುನರ್ಜನ್ಮದ ಪರಿಕಲ್ಪನೆಯಿಂದ ರೂಪುಗೊಂಡಿರುವುದು. ಪುನರ್ಜನ್ಮವನ್ನು ವೈಜ್ಞಾನಿಕ ಚಿಂತನೆ ಒಪ್ಪುವುದಿಲ್ಲ. ಅತಿಯಾದ ವೈಜ್ಞಾನಿಕ ಮನೋಭಾವ ಭಾವನಾತ್ಮಕ ಸಂಬಂಧವನ್ನು ಕುಗ್ಗಿಸುತ್ತದೆ ಎನ್ನಲಾಗದು. ವಾಸ್ತವವಾಗಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡವರು ಹೆಚ್ಚು ಸಂವೇದನಾಶೀಲರೂ, ಮೌಲ್ಯಗಳ ಬಗ್ಗೆ ದೃಢವಾದ ಬದ್ಧತೆ ಇರುವವರೂ ಆಗಿರುತ್ತಾರೆ. ಇಂಥವರನ್ನು ಆಮಿಷಗಳಿಂದ ಬಗ್ಗಿಸುವುದು ಸಾಧ್ಯವಿಲ್ಲ. ಅಲ್ಬರ್ಟ್ ಐನ್ಸ್ಟೈನ್, ಜಿ. ಟಿ. ನಾರಾಯಣ ರಾಯರು, ಎಚ್. ನರಸಿಂಹಯ್ಯನವರು ಮೊದಲಾದವರು ಅತ್ಯಂತ ಸಂವೇದನಾಶೀಲರೂ, ಮಾನವೀಯ ಸಂಬಂಧಗಳನ್ನು ಗಾಢತೆಯನ್ನು ಎತ್ತಿ ಹಿಡಿದವರೂ ಆಗಿದ್ದಾರೆ. ನಾನು ಗುಲಾಮಗಿರಿ ಎಂದು ಹೇಳುವಾಗ ನನ್ನ ದೃಷ್ಟಿ ಗುರು ಎಂದು ಹೇಳಿಕೊಂಡು ಸ್ವಾಮೀಜಿಗಳು ತಮ್ಮ ಶಿಷ್ಯ ವೃಂದವನ್ನು ಅಜ್ಞಾನದಲ್ಲಿ ಇಡುವ ಪ್ರವೃತ್ತಿಯ ಬಗ್ಗೆ ಇದೆಯೇ ಹೊರತು ವಿದ್ಯೆ ಕಳಿಸಿದ ಗುರುಗಳು ಅಥವಾ ಸಂಗೀತ, ಸಾಹಿತ್ಯ ಇತ್ಯಾದಿ ಕ್ಷೇತ್ರಗಳಲ್ಲಿ ಗುರು ಶಿಷ್ಯರ ಸ್ಥಾನದಲ್ಲಿ ಇದ್ದವರ ಬಗ್ಗೆ ಅಲ್ಲ. ಉದಾಹರಣೆಗೆ ಕುವೆಂಪು-ಜಿಎಸ್ ಶಿವರುದ್ರಪ್ಪ ಇತ್ಯಾದಿ.

          Reply
          1. Srinivasamurthy

            ಪುರಂದರದಾಸರು ಬರೆದದ್ದೆಂದು ಮರೆತಿದ್ದನ್ನು ನೆನಪಿಸಿದಕ್ಕೆ ವಂದನೆಗಳು.
            ಆದರೆ,
            ವಿವೇಕನಂದರೂ ಕೂಡ ಸಂತರಂತೆಯೇ ಬದುಕಿದರಲ್ಲವೆ? ಅವರಲ್ಲಿಯೂ ನೀವು ಗುಲಾಮಿಯ ಜಾಡನ್ನು ಇರಿಸಿಲ್ಲ ತಾನೆ? ಹೇಗೆ ವಿವೇಕನಂದರು ಅವರ ಶಿಶ್ಯರನ್ನು ಅಜ್ಞಾನದಲ್ಲಿಟ್ಟಿದ್ದರು ತುಸು ವಿವರಿಸಿ.

  4. ajithkumar ullal

    Just Bcoz the Programme is Good ..Dont Criticize. Let Vartamaana Karnataka not behave like Politicians…It is Intellectual Bankruptcy of Vartamaana Karnataka

    Reply
  5. Srini

    Vartamana team is loosing its direction and good motive it had earlier. By personally targeting people who attended Alvas nudisiri – you guys are stooping to new lows…

    Reply
  6. Tushar Joshi

    “ನಮ್ಮ ಪರಂಪರೆಯಲ್ಲಿ ಇದ್ದಿರಬಹುದಾದ ಉನ್ನತ ವ್ಯಕ್ತಿ ಮತ್ತು ವಿಚಾರಗಳನ್ನು ಪ್ರಸ್ತಾಪಿಸುತ್ತ ಸಮಕಾಲೀನ ಸಂದರ್ಭದ ಕೆಟ್ಟದ್ದರ ಬಗ್ಗೆ ಮಾತನಾಡುವುದು ಹೇಗೆ ಎನ್ನುವುದನ್ನು ಸಮಾಜದ ಬಗ್ಗೆ ಕಾಳಜಿಯುಳ್ಳ ಜನ ಕಲಿಯಬೇಕಿದೆ”.ಈ ಸಾಲುಗಳು ತುಂಬಾ ಇಷ್ಟ ಆದವು ಸರ್. ಬಹುಷ ನಮ್ಮ ಹಿರಿಯ ಸಾಹಿತಿಗಳು,ಚಿಂತಕರು ತಮ್ಮ ವಾದ ಮಂಡಿಸುವುದರಲ್ಲಿ ಈ ಗುಣವನ್ನು ಮೈಗೂಡಿಸಿಕೊಂಡಿದ್ದರಿಂದಲೆ ಅವರ ವಾದಗಳು ಒಂದು ಹೊಸ ಆಲೋಚನೆ,ತಾತ್ವಿಕ ಬೆಳವಣಿಗೆಗೆ ದಾರಿ ಮಾಡಿ ಕೊಡುತ್ತಿದ್ದವು ಆದರೆ ಇತ್ತಿಚಿಗೆ ಅದು ಮರೆಯಾಗುತ್ತಿರುವುದರಿದ ಬಹಳ ಕಡೆಗಳಲ್ಲಿ ಕೇವಲ ವಾದಗಳು ವಾದಗಳಾಗಿ ಉಳಿಯುತ್ತಿವೆಯೆ ಹೊರತು ಹೊಸದನ್ನು ನೀಡುತ್ತಿಲ್ಲ.

    Reply
  7. ಅನಿತಾ

    ನುದಿಸಿರಿಗೆ ಪರ್ಯಾಯ ಎಂದು ಬಿಂಬಿತವಾದ ‘ಜನನುಡಿ’ ಯಂತಹ ಕಾರ್ಯಕ್ರಮದಲ್ಲಿ ಯಾಕೆ ಜನರ ಭಾಗವಹಿಸುವಿಕೆ ಕಡಿಮೆ ಎಂದು ಯೋಚಿಸಬೇಕು. ‘ಜನನುಡಿ’ಯಲ್ಲಿ ಭಾಗವಹಿಸಿದವರು ಮಾತ್ರ ಪ್ರಗತಿಪರರು, ನುದಿಸಿರಿಗೆ ಹೋದವರು ಕೋಮುವಾದಿಗಳು, ಮದ್ಯದ- ಸಂಮಾನದ ಆಸೆಗೆ ಹೋದವರು ಎಂಬ ಸರಳ ವ್ಯಾಖ್ಯಾನ ಅಹಂಕಾರದಿಂದ ಕೂಡಿದ್ದು ಮತ್ತು ಅಪಾಯಕಾರಿ ಕೂಡ. ತಮ್ಮ ಚಿಂತನೆಯಿಂದ ಭಿನ್ನವಾಗಿ ಯೋಚಿಸುವ ಸಾಹಿತಿಗಳನ್ನು ಬಹಿಷ್ಕರಿಸುವಂತಹ ಬಾಲಿಶತನಕ್ಕೆ ಇದು ದಾರಿಮಾಡಿಕೊಡುತ್ತದೆ. Naveen ಹೇಳುವಂತೆ ಜನನುದಿಯಲ್ಲಿ ಏಕಮುಖಿ ಚರ್ಚೆಯಲ್ಲದೆ ಇನ್ನೇನು ಸಾಧ್ಯ? ಬಿಜೆಪಿ ಸಂಘಪರಿವಾರವನ್ನು ‘ಹಿಂದುತ್ವ -ಪುರೋಹಿತಶಾಹಿ’ ಎಂದು ಟೀಕಿಸುವುದು, ಮುಸ್ಲಿಂ ಮತಾನ್ಧರನ್ನು ಮೌನವಾಗಿ ಪ್ರೋತ್ಸಾಹಿಸುವುದು ಇದುವೇ ಪ್ರಗತಿಪರತೆ ಎಂದರೆ ಅದಕ್ಕೆ ಕಿವಿಗೊಡಲು ಯಾರೂ ಸಿದ್ಧರಾಗರು. ಅಸಲಿ ಕೋಮುವಾದಿ ಮದನಿಯ ಕುರಿತಾದ ಅನುತಾಪದಲ್ಲೇ ‘ಕೋಮು ಸೌಹಾರ್ದದ’ ಅಸಲು ಗುಟ್ಟು ಬಯಲಾಗಿದೆ. ಮದನಿ, ಪಾಪ್ಯುಲರ್ ಫ್ರಂಟ್, ಸ್ವಧರ್ಮದಲ್ಲೇ ಮುಸ್ಲಿಂ ಹೆಣ್ಣು ಮಕ್ಕಳ ಶೋಷಣೆ ಇನ್ತಹ ವಿಷಯಗಳ ಕುರಿತು ಧ್ವನಿ ಎತ್ತಿದ್ದು ಉಂಟಾ? ನಿಮ್ಮ ಉದ್ದೇಶ ಶುದ್ಧಿ ಬಗ್ಗೆ ಅನುಮಾನ ಪಡಲು ಇನ್ನೇನು ಬೇಕು?

    Reply
    1. Girish

      ಉತ್ತಮ ಬರಹ…. ಅದ್ಯಾಕೋ ಈಗೀಗ ಏಕಮುಖ ವಿಚಾರವಾದಿಗಳು ಹೆಚ್ಚಾಗುತ್ತಿದ್ದಾರೆ..

      Reply
  8. Ananda Prasad

    @ ಶ್ರೀನಿವಾಸಮೂರ್ತಿ – ನಾನು ಸ್ವಾಮಿ ವಿವೇಕಾನಂದರ ಬಗ್ಗೆ ಹೇಳಿಲ್ಲ. ನಿತ್ಯಾನಂದ ಸ್ವಾಮೀಜಿ ಎಂದು ಹೇಳಿಕೊಂಡು ತಮ್ಮ ಶಿಷ್ಯರನ್ನು ಮದ್ಯ ಕುಡಿದವರ ತರಹ ಕುಣಿಸುವುದನ್ನು ನೋಡುವಾಗ ಗುಲಾಮಗಿರಿಯ ನೆನಪಾಗುತ್ತದೆ. ಕೆಲವು ಸ್ವಾಮೀಜಿಗಳು ತಮ್ಮನ್ನು ಪಲ್ಲಕ್ಕಿಯಲ್ಲಿ ಹೊತ್ತು ಮೆರೆಸುವಾಗ ಇಂಥದ್ದೆಲ್ಲ ಮಾನವ ಘನತೆಗೆ ಕುಂದು ಎಂದು ತಮ್ಮ ಶಿಷ್ಯರಿಗೆ ಹೇಳದೆ ಅವರನ್ನು ಅಜ್ಞಾನದಲ್ಲಿ ಇರಿಸುತ್ತಾರೆ. ಸ್ವಾಮಿ ವಿವೇಕಾನಂದರು ಪುರೋಹಿತಶಾಹಿಯ ಮೂಲೋತ್ಪಾಟನೆ ಮಾಡಿ ಎಂದು ಕರೆ ನೀಡಿದ್ದಾರೆ. ಇಂದು ಸ್ವಾಮಿ ವಿವೇಕಾನಂದರ ಈ ಕರೆಗೆ ವಿರುದ್ಧವಾಗಿ ಪುರೋಹಿತಶಾಹಿ ವ್ಯವಸ್ಥೆಯನ್ನು ಬಲಗೊಳಿಸುವ ಕೆಲಸ ಅವರ ಅನುಯಾಯಿಗಳು ಎಂದು ಹೇಳಿಕೊಳ್ಳುವವರಿಂದಲೇ ನಡೆಯುತ್ತಿದೆ.

    Reply
    1. Srinivasamurthy

      ಈ ಗ ನೋಡಿ ನಿಮ್ಮ ಅನಿಸಿಕೆಗಳಲ್ಲಿ ಎಶ್ಟು ಬದಲಾವಣೆಗಳಾದವು?
      “ನಾನು ಸ್ವಾಮಿ ವಿವೇಕಾನಂದರ ಬಗ್ಗೆ ಹೇಳಿಲ್ಲ”
      ಈ ಅನಿಸಿಕೆಗೂ ಮುಂಚೆ
      “ನನ್ನ ದೃಷ್ಟಿ ಗುರು ಎಂದು ಹೇಳಿಕೊಂಡು ಸ್ವಾಮೀಜಿಗಳು ತಮ್ಮ ಶಿಷ್ಯ ವೃಂದವನ್ನು ಅಜ್ಞಾನದಲ್ಲಿ ಇಡುವ ಪ್ರವೃತ್ತಿಯ ಬಗ್ಗೆ ಇದೆಯೇ ಹೊರತು…”
      ಎಂದು ಹೇಳಿದಿರಿ.
      ಕೆಟ್ಟ ಸ್ವಾಮೀಜಿಗಳು ಹಾಗೂ ಒಳ್ಳೆಯ ಸ್ವಾಮೀಜಿಗಳು ಎಂದೇ ವಿಂಗಡಿಸಿ ಹೇಳುವ ಕಲ್ಪನೆ ಇರುವಾಗ ಗುರು-ಶಿಶ್ಯರ ಸಂಬಂದವನ್ನು ಗುಲಾಮಿಯ ಕಲ್ಪನೆಗೆ ಅನ್ವಯಿಸಿ ಹೇಳುವುದು ಎಶ್ಟರ ಮಟ್ಟಿಗೆ ಸರಿ?
      ಕೇವಲ ಗುರು-ಶಿಶ್ಯರ ಕಲ್ಪನೆಯನ್ನೇ ಸರಿಯಾಗಿ ಅರಿತುಕೊಳ್ಳಲಾರದ ನಾವಿಬ್ಬರು ಕ್ರಿಯೆ-ಪ್ರತಿಕ್ರಿಯೆಗಳಲ್ಲಿಯೇ ಎಶ್ಟು ಎಡವಿದೆವು? ಎಶ್ಟು ಸಲ ಪರಿಶೊದನಾತ್ಮಕ ಮನೋಬಾವಕ್ಕೆ ಒಳಗಾದೆವು ಅಲ್ಲವೆ?
      ಇನ್ನು ಸಮಾಜದ ವ್ಯವಸ್ತೆಯನ್ನು ಅರಿತುಕೊಂಡು ಇದು ಹೀಗೆಯೇ ಇರೋದು ಎಂದು ಒಂದೇ ಮಗ್ಗಲಿನ ತೀರ್ಮಾನಕ್ಕೆ ಬರಲು ಆಗುವುದೆ? ನಿಜವಾಗಿಯು ಆಗಲಾರದು. ಒಂದು ವೇಳೆ ಆಗುವುದಾದರೆ ಹೀಗೆಯೆ ಅದೇ ನಾವಿಬ್ಬರು ಗುರು ಬಗೆಗೆ ಚರ್ಚಿಸಿದೇವಲ್ಲಾ ಹಾಗೆ.
      ಒಂದು ಮನವಿ:
      ಈ ಕುರಿತು ಒಂದು ಲೇಕನವನ್ನೇ ಬರೆದು ಹಾಕಿ. ಅಲ್ಲಿಯೇ ನನ್ನ ಅನಿಸಿಕೆಗಳನ್ನು ಬರೆಯುತ್ತೇನೆ.

      Reply

Leave a Reply

Your email address will not be published. Required fields are marked *