ಜಿ.ಎಸ್. ಶಿವರುದ್ರಪ್ಪನವರ “ಅಗ್ನಿಪರ್ವ” ಕವಿತೆ

ಅಗ್ನಿಪರ್ವ

– ಜಿ.ಎಸ್. ಶಿವರುದ್ರಪ್ಪ

ಕಾಲಿನ ಕೆಳಗೆ ನಾನಿದುವರೆಗೆ ನಿಂತ
ಹಚ್ಚನೆ ಹಸಿರು ಯಾವತ್ತೋ ಮರು-
ಭೂಮಿಯಾಗಿ ಹೋಗಿದೆ. ಮೇಲಿನಾ
ಕಾಶದಲ್ಲಿ ಒಂದಾದರೂ ಮೋಡಗಳಿಲ್ಲ.
ತಲೆ ಎತ್ತಿ ನೋಡಿದರೆ ರಣ ಹದ್ದು
ಗಳ ರೆಕ್ಕೆಯ ನೆರಳು. ನೆಲ ಹತ್ತಿ
ಉರಿಯುತ್ತಿದೆ ನಂದಿಸಲು ನೀರೆ ಇಲ್ಲ!

ಒಲೆ ಹತ್ತಿ ಉರಿದಡೆ ನಿಲ್ಲಬಹುದ
ಲ್ಲದೆ ಧರೆ ಹತ್ತಿ ಉರಿದಡೆ ಎಲ್ಲೋಡ
ಬಹುದೋ? ಧಗದ್ ಧಗದ್ ಧಗಾ-
ಯಮಾನವಾದ ಈ ಬಕಾಸುರ ಬೆಂಕಿಗೆ
ಭಯಂಕರ ಹಸಿವು. ತಳಿರುಗಳನ್ನು
ಹೂವುಗಳನ್ನು, ಹೀಚುಗಳನ್ನು, ಹಣ್ಣು-
ಗಳನ್ನು ಒಂದೇ ಸಮನೆ ತಿನ್ನುವುದೆ
ಕೆಲಸ. ಹೊತ್ತಿಕೊಂಡಿದೆ ಬೆಂಕಿ ಮಂ-
ದಿರಕ್ಕೆ, ಮಸೀದಿಗೆ, ಚರ್ಚಿಗೆ, ಚಲಿಸು-
ತ್ತಿರುವ ರೈಲಿಗೆ, ಓಡುತ್ತಿರುವ ಬಸ್ಸಿಗೆ,
ಹಾರುವ ವಿಮಾನಕ್ಕೆ, ಆಕಾಶಕ್ಕೆ ಮುಡಿ-
ಯೆತ್ತಿ ನಿಂತಿರುವ ಸೌಧಗಳಿಗೆ, ಬಡ-
ವರ ಜೋಪಡಿಗಳಿಗೆ, ತಿನ್ನುವ
ಅನ್ನಕ್ಕೆ, ಕುಡಿಯುವ ನೀರಿಗೆ, ಉಸಿ-
ರಾಡುತ್ತಿರುವ ಗಾಳಿಗೆ, ಬಹುಕಾಲದಿಂದ
ಹೇಗೋ ಕಾಪಾಡಿಕೊಂಡು ಬಂದಿರುವ
ಪಾರಿವಾಳಗಳ ಕನಸಿನ ಗೂಡಿಗೆ.

ಈ ಉರಿವ ಬೆಂಕಿಯ ಸುತ್ತ ಛಳಿ ಕಾ-
ಯಿಸಿಕೊಳ್ಳುತ್ತ, ಆಗಾಗ ಎಣ್ಣೆ ಹೊ-
ಯ್ಯುತ್ತ ಕೂತ ಮಹನೀಯರೆ, ನೀವು
ಯಾರು? ಮಾತನಾಡಿಸಲೆಂದು ಬಂದರೆ
ಹತ್ತಿರ, ನಿಮಗೆ ಮುಖವೇ ಇಲ್ಲ! ಬರೀ
ಮುಖವಾಡ. ಸಾಧ್ಯವೇ ಸಂವಾದ ಮುಖ
ವಾಡಗಳ ಜತೆಗೆ? ಆಡಬೇಕೆಂದಿದ್ದ
ಮಾತೆಲ್ಲವೂ ಸವೆದ ನಾಣ್ಯಗಳಾಗಿ ವ್ಯರ್ಥ-
ವಾಗಿವೆ ಕೊನೆಗೆ. ಇಷ್ಟೊಂದು ಹತ್ತಿರವಿದ್ದೂ
ದೂರಕ್ಕೆ ನಿಲ್ಲುವ ನೆರಳುಗಳೇ ನೀವು ಯಾರು?
ಏನೂ ಅನ್ನಿಸುವುದಿಲ್ಲವೇ ನಿಮಗೆ ನಿರ್ದಯ-
ವಾಗಿ ದಹಿಸುತ್ತಿರುವ ಈ ಬೆಂಕಿಯನ್ನು
ಕುರಿತು. ಏನೂ ಅನ್ನಿಸುವುದಿಲ್ಲವೇ ಈ ಅಗ್ನಿ
ಯಲ್ಲಿ ದಗ್ಧವಾಗುತ್ತಿರುವ ಸರ್ವೋ
ದಯದ ಸ್ವಪ್ನಗಳನ್ನು ಕುರಿತು?  ಏನೂ
ಅನ್ನಿಸುವುದಿಲ್ಲವೇ ನಿಮಗೆ ರಕ್ತಸಿಕ್ತವಾ-
ಗುತ್ತಿರುವ ಈ ಚರಿತ್ರೆಯನ್ನು ಕುರಿತು?

ಏನೆಂದು ಗುರುತಿಸಲಿ ಹೇಳಿ ನಿಮ್ಮನ್ನು?
ಈ ಮಹಾಜನದ ಪ್ರತಿನಿಧಿಗಳೆಂದೇ?
ಗದ್ದುಗೆ ಏರಿ ಕೂತಿರುವ ಪ್ರಭುಗಳೆಂದೇ?
ಅಥವಾ ನಮ್ಮೊಳಗೆ ಮನೆ ಮಾಡಿರುವ
ತಲಾ ತಲದ ವಿಕೃತಿಗಳ ಮೂರ್ತ
ರೂಪಗಳೆಂದೆ? ಹಳೆಯ ಗುಡಿಗೋಪು-
ರದ ಕಲಶಗಳನ್ನು ಈಟಿಯ ಮಾಡಿ ನೀಲಾ-
ಕಾಶದೆದೆ ಸೀಳಿ ಕತ್ತಲನು ಕರೆದವರೆ,
ಗರ್ಭಗುಡಿಯೊಳಗುರಿವ ನಂದಾದೀಪ-
ಗಳಿಂದ ಪಂಜು ಹೊತ್ತಿಸಿಕೊಂಡು ದೆವ್ವಂ-
ಗುಣಿವ ತಮಸ್ಸಿನಾರಾಧಕರೆ, ಹಿಂಸಾ
ರತಿಯ ಪೂಜಾರಿಗಳೆ, ಎಲ್ಲಿದ್ದರೂ ನೀವು
ಒಂದೆ ಜಾತಿಯ ಜನವೆ! ಜಗತ್ತಿನಾ-
ದ್ಯಂತ ಭಯೋತ್ಪಾದನೆಯ ಬಲೆನೆಯ್ದ
ಪೆಡಂಭೂತ ಜೇಡಗಳೆ, ಏನಾಗಿದೆ ನಿಮಗೆ,
ಇನ್ನೂ ಏನಾಗಬೇಕಾಗಿದೆ ಈ ಮನುಕುಲಕ್ಕೆ?

ಪಾಚಿಗಟ್ಟುತ್ತಿರುವ ಈ ನೀರುಗಳನ್ನು
ಶುದ್ಧೀಕರಿಸುವುದು ಹೇಗೆ? ಶತ
ಚ್ಛಿದ್ರವಾಗುತ್ತಿರುವ ಈ ಮನಸ್ಸುಗಳನ್ನು
ಹಿಡಿದು ಕೂಡಿಸುವುದು ಹೇಗೆ? ಪುರಾಣ-
ಗಳಲ್ಲಿ ಸ್ಥಗಿತಗೊಳ್ಳುತ್ತಿರುವ ಬುದ್ಧಿ-
ಗಳನ್ನು ವರ್ತಮಾನದ ವಾಸ್ತವದೊಳಕ್ಕೆ
ತರುವುದು ಹೇಗೆ? ಗುಡಿ-ಚರ್ಚು ಮಸ
ಜೀದಿಗಳನ್ನು ಬಿಟ್ಟು ಹೊರ ಬರುವಂತೆ
ಮಾಡುವುದು ಹೇಗೆ? ವೇದ-ಖುರಾನು-ಬೈ-
ಬಲ್ಲಿನಿಂದಾಚೆ ಬಯಲ ಬೆಳಕಿನ ಕೆಳಗೆ
ಬದುಕುವುದನ್ನು ಇನ್ನಾದರೂ ಕಲಿಯು-
ವುದು ಹೇಗೆ?

One thought on “ಜಿ.ಎಸ್. ಶಿವರುದ್ರಪ್ಪನವರ “ಅಗ್ನಿಪರ್ವ” ಕವಿತೆ

Leave a Reply

Your email address will not be published. Required fields are marked *