“ನುಡಿಸಿರಿ”ಯ ನಂತರ

– ಪ್ರಸಾದ್ ರಕ್ಷಿದಿ

“ಆಳ್ವಾಸ್ ನುಡಿಸಿರಿ” ಮತ್ತು ಅಲ್ಲಿನ ವಿಚಾರಗಳ ಬಗೆಗೆ ನಡೆಯುತ್ತಿರುವ ಚರ್ಚೆ ಹಾಗೂ ರವಿ ಕೃಷ್ಣಾರೆಡ್ಡಿಯವರ ಲೇಖನ ಇವುಗಳನ್ನು ನೋಡಿ ಕೆಲವು ವಿಷಯಗಳನ್ನು ಹಂಚಿಕೊಳ್ಳಬೇಕೆನಿಸಿತು. ರವಿಯವರ ನಿಲುವು ಸರಿಯಾಗಿಯೇ ಇದೆ. ಇದಕ್ಕೆ ಪೂರಕವಾಗಿ ನಾನು ಕೆಲವು ಸಂಗತಿಗಳನ್ನು ಹೇಳಬಯಸುತ್ತೇನೆ.

ಮೊದಲನೆಯದಾಗಿ ಆಳ್ವಾಸ್ ಪ್ರತಿಷ್ಟಾನ ಮತ್ತು ಅದರ ಚಟುವಟಿಕೆಗಳ ಬಗ್ಗೆ. alvas-nudisiri-3ಆಳ್ವರ ಸಾಂಸ್ಕೃತಿಕ ಆಸಕ್ತಿಗಳನ್ನು ನಮ್ಮಂತವರು ಹಲವು ವರ್ಷಗಳಿಂದ ನೋಡುತ್ತ ಬಂದಿದ್ದೇವೆ. ಬಹುಶಃ ಮೋಹನ ಆಳ್ವರ ಅಭಿರುಚಿಗಳ ಬಗ್ಗೆ ಮತ್ತು ಅವರ ಸಾಂಸ್ಕೃತಿಕ ಆಸಕ್ತಿಗಳ ಬಗ್ಗೆ ಯಾರದೂ ತಕರಾರು ಇರಲಾರದು. ಆದರೂ ಹೀಗೇಕೆ ಆಗುತ್ತಿದೆ. ಎನ್ನುವುದಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ ಆಳ್ವರು ನಮ್ಮ ಊಳಿಗಮಾನ್ಯ ಪದ್ಧತಿಯ ತುಂಡರಸರ ಪರಂಪರೆಯಲ್ಲಿ ಬಂದವರು. ಅವರ ಮಾತಿನ ಕ್ರಮ, ನಿಲುವುಗಳು, ಹಾವಭಾವಗಳು ಕೂಡಾ ಇದೇ ರೀತಿ ಇವೆ. ಆದರೆ ವೈಯಕ್ತಿವಾಗಿ ಅವರು ತುಂಬ ವಿನಯವಂತರೆಂದೇ ಕೇಳಿದ್ದೇನೆ. (ನನಗೆ ವೈಯಕ್ತಿಕವಾಗಿ ಆಳ್ವರ ಪರಿಚಯ ಇಲ್ಲ. ನಾನು ಇದುವರೆಗೂ ಅಲ್ಲಿಯ ಯಾವುದೇ ಕಾರ್ಯಕ್ರಮದಲ್ಲೂ ಭಾಗವಹಿಸಿಲ್ಲ.)

ಮೋಹನ ಆಳ್ವರ ವಿದ್ಯಾಸಂಸ್ಥೆಗಳ ಪ್ರಚಾರಕ್ಕೆ ಅವರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬಳಸಿಕೊಳ್ಳುತ್ತಾರೆ ಎಂಬ ದೂರಿದೆ. ಅದು ನಿಜ ಕೂಡಾ, ಆದರೆ ಹಲವಾರು ವಿದ್ಯಾಸಂಸ್ಥೆಗಳನ್ನು ಹೊಂದಿ, ಜಾತಿ-ರಾಜಕೀಯ, ಅಧಿಕಾರಗಳನ್ನು ಬಳಸಿ ನಡೆಸುವ (ಅವರೂ ಕೂಡಾ ತೋರಿಕೆಗಾದರೂ ಕೆಲವು ಬಡಮಕ್ಕಳಿಗೆ ಉಚಿತ ವಿದ್ಯೆಯನ್ನೊ ಅಥವಾ ರಿಯಾಯಿತಿಗಳನ್ನೋ ಕೊಡುತ್ತಾರೆ) ಮಠಮಾನ್ಯರು, ಮಂತ್ರಿಗಳಿಗಿಂತ ಯಾವುದೇ ತಾರತಮ್ಯ ತೋರದೆ ಎಲ್ಲ ವರ್ಗ-ಜಾತಿಗಳ ನೂರಾರು Alvas-Campusವಿದ್ಯಾರ್ಥಿಗಳಿಗೆ ಉಚಿತ ವಿದ್ಯೆ ನೀಡಿದ, ನೀಡುತ್ತಿರುವ ಮೋಹನ ಆಳ್ವರ ಬಗ್ಗೆ ನಾವು ಅಷ್ಟೊಂದು ಕಠಿಣರಾಗಬೇಕಿಲ್ಲವೆನಿಸುತ್ತದೆ. ಆದರೆ ಆಳ್ವರು ಇದಕ್ಕೆ ಯಾವರೀತಿಯಲ್ಲಿ ಹಣಸಂಗ್ರಹ ಮಾಡುತ್ತಾರೆ. ಮತ್ತು ಇವರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಣವೆಲ್ಲಿಂದ ಬರುತ್ತದೆಯೆಂಬ ಬಗ್ಗೆ ತಿಳಿದುಕೊಳ್ಳುವ ಹಕ್ಕು ಖಂಡಿತ ನಮಗೆಲ್ಲರಿಗೂ ಇದೆ. ಯಾಕೆಂದರೆ ನನಗೆ ಕೋಟ್ಯಂತರ ರೂಪಾಯಿಗಳ ಸಾಲವಿದೆಯೆಂದು ಆಳ್ವರು ಅನೇಕ ವೇದಿಕೆಗಳಲ್ಲಿ ಹೇಳಿದ್ದಾರೆ. ಅಲ್ಲದೆ ಆಳ್ವರ ಸಾಲದಲ್ಲಿ ಬಹುಪಾಲು ಹಣ ಧರ್ಮಸ್ಥಳದ್ದೆಂದು ಜನ ಅಲ್ಲಲ್ಲಿ ಮಾತಾಡಿಕೊಳ್ಳುತ್ತಿದ್ದಾರೆ. ಇದರ ಸತ್ಯಾಸತ್ಯತೆಯನ್ನು ಆಳ್ವರೇ ತಿಳಿಸಬೇಕು. ಆಳ್ವರ ವಿದ್ಯಾಸಂಸ್ಥೆಗಳ ಆಡಳಿತದ ವಿಚಾರದಲ್ಲಿ ಯಾರದ್ದಾದರೂ ತಕರಾರಿದ್ದರೆ ಅದಕ್ಕೂ ಆಳ್ವರು ಉತ್ತರಿಸಬೇಕು. ನಾಡು ನುಡಿಯ ಸೇವೆ ಮಾಡುತ್ತೇನೆನ್ನುವ ಆಳ್ವರು ಅಷ್ಟಾದರೂ ಪಾರದರ್ಶಕರಾಗಿರುವದು ಅತೀ ಅಗತ್ಯ. ಹಿಂದೆ ನಮ್ಮ ಒಬ್ಬ ಹಿರಿಯ ರಂಗ ನಿರ್ದೇಶಕರು ತಾನು ’ನಾಟಕ ಮಾಡಿಸಿ ನಷ್ಟಪಟ್ಟುಕೊಂಡೆ’ vijaykarnataka-mohan-alva-22122013ಎಂದು ದೂರಿದಾಗ ’ನಿಮ್ಮಲ್ಲಿ ನಾಟಕ ಮಾಡಿಸಿ ಎಂದು ಕನ್ನಡಿಗರು ಕೇಳಿಕೊಂಡಿದ್ದರೇ’ ಎಂದು ಲಂಕೇಶರು ಮೊಟಕಿದ್ದರು.

ಇದಲ್ಲದೆ ಆಳ್ವರು ತಮ್ಮ ಕಾರ್ಯಕ್ರಮಗಳಿಗೆ “ಆಳ್ವಾಸ್ ವಿರಾಸತ್”. “ಆಳ್ವಾಸ್ ನುಡಿಸಿರಿ” ಇವುಗಳಿಗೆ ಬದಲಾಗಿ ಕನ್ನಡ ನುಡಿಸಿರಿ ಎಂದೋ ಕರಾವಳಿ ವಿರಾಸತ್ ಎಂದೋ ಅಥವಾ ಬೇರೇನಾದರೂ ಹೆಸರಿನಿಂದ ಕರೆದಿದ್ದರೆ ಅದು ಇನ್ನು ಹೆಚ್ಚು ವಿಸ್ತ್ರುತವಾಗುತ್ತಿತ್ತು, ಆಳ್ವರು ಇನ್ನೂ ದೊಡ್ಡವರಾಗುತ್ತಿದ್ದರು. ಆದರೆ ಅದು ಅವರ ವಿವೇಚನೆಗೆ ಬಿಟ್ಟ ವಿಷಯ.

ಇನ್ನು ಆಳ್ವರ ವೈಚಾರಿಕ ದೃಷ್ಟಿಕೋನಗಳ ಬಗ್ಗೆ, ಅವರು ನಡೆಸುತ್ತಿರುವ ಪಲ್ಲಕ್ಕಿಸೇವೆ ಸನ್ಮಾನಗಳು ಇತ್ಯಾದಿಗಳ ಬಗ್ಗೆ, ಹಾಗೇ ಶ್ರೀಮಂತಿಕೆಯ ವೈಭವೀಕರಣ ಇತ್ಯಾದಿ ವಿಚಾರವಾಗಿ ಅವರಲ್ಲಿ ಯಾರಾದರೂ ಹಿರಿಯರು ಕುಳಿತು ತಿಳಿಹೇಳಿದರೆ ಅವರು ಖಂಡಿತ ಬದಲಾಗುತ್ತಾರೆಂಬ ನಂಬಿಕೆ ನನಗಿನ್ನೂ ಉಳಿದಿದೆ. ಯಾಕೆಂದರೆ ಆಳ್ವರಂಥ ಸಂಘಟಕರನ್ನು ಒಂದಿಷ್ಟು ಒಳ್ಳೆಯ ಅಭಿರುಚಿ ಹೊಂದಿದವರನ್ನು ಅಪ್ಪಟ ಕೋಮುವಾದಿಗಳ ಬಲೆಗೆ ಬೀಳದಂತೆ ಪ್ರಯತ್ನಿಸುವ ಕೆಲಸವೂ ನಮ್ಮದಾಗಬೇಕು.

ಇನ್ನು ಬರಗೂರು ರಾಮಚಂದ್ರಪ್ಪನವರು ಮತ್ತು ಇನ್ನು ಕೆಲವರು ನಡೆದುಕೊಂಡ ರೀತಿ ನಮ್ಮಂತವರಿಗೆ ಖಂಡಿತ ಬೇಸರವೆನಿಸುತ್ತದೆ. ಬರಗೂರಿಗೆ ಆಳ್ವಾಸ್ ನುಡಿಸಿರಿಯ ಬಗ್ಗೆ ಎಲ್ಲ ವಿವರಗಳೂ ಮೊದಲೇ ಇತ್ತು. ಅವರು ಸನ್ಮಾನವನ್ನು ನಿರಾಕರಿಸಿ, alva-nudisiri-baraguru-mohan-alva-veerendra-heggade-vivek-raiನಂತರ ಭಾಷಣದಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದರೆ ಸಾಕಿತ್ತು. ಈ ಎಲ್ಲ ಗೊಂದಲ ಸೃಷ್ಟಿಯಾಗುತ್ತಿರಲಿಲ್ಲ. ಆದರೆ ಆಳ್ವರ ವಿಚಾರದಲ್ಲಿ ಕೊಡಬಯಸುವ ರಿಯಾಯತಿಯನ್ನು ನಾನು ಬರಗೂರರಿಗೆ ಕೊಡಬಯಸುವುದಿಲ್ಲ. ಯಾಕೆಂದರೆ ಬರಗೂರರ ಶಕ್ತಿ ಮತ್ತು ಜವಾಬ್ದಾರಿ ಆಳ್ವರಿಗಿಂತ ದೊಡ್ಡದು. (ಆಳ್ವರೊಳಗೊಬ್ಬ ಒಳ್ಳೆಯ ಹುಂಬ ಇನ್ನೂ ಇದ್ದಾನೆ ಎಂದೇ ನನ್ನ ಅನಿಸಿಕೆ. ಹಿಂದೊಮ್ಮೆ ಅವರ ಕಾಲೇಜಿನ ವಿದ್ಯಾರ್ಥಿಗಳು ರಾತ್ರಿ ಏನೋ ಗಲಾಟೆ ಮಾಡಿದಾಗ, ಪೋಲಿಸ್ ಕರೆಸಿದ್ದರು. ಆಗ ಪೋಲಿಸರಿಂದ ಏಟುತಿಂದ ವಿದ್ಯಾರ್ಥಿಗಳನ್ನು ನೋಡಿ ಆಳ್ವರು ’ನನ್ನ ಮಕ್ಕಳಿಗೆ ನಾನೇ ಹೊಡೆಸಿದೆನಲ್ಲ’ ಎಂದು ಗಳಗಳನೆ ಅತ್ತರಂತೆ. ಇದು ನನ್ನ ಗೆಳೆಯನೊಬ್ಬನ ಮಗ ಹೇಳಿದ ವಿಷಯ.)

ನನ್ನದೇ ಅನುಭವದ ಎರಡು ಉದಾಹರಣೆ ನೀಡುತ್ತೇನೆ. ಎರಡು ವರ್ಷಗಳ ಹಿಂದೆ ನಮ್ಮೂರಿನ ಕೆಲವರು ಯುವಕರು, ಬಜರಂಗದಳ-ಆರ್.ಎಸ್.ಎಸ್.ವತಿಯಿಂದ ಗುರುವಂದನೆ ಕಾರ್ಯಕ್ರಮವಿದೆ. ನೀವು ಬಂದು ಮಾತಾಡಬೇಕು ಎಂದರು. ನಾನು ತುಸು ಗೊಂದಲಕ್ಕೊಳಗಾದೆ. ಎಲ್ಲರೂ ನಮ್ಮೂರಿನ ಸುತ್ತಲಿನ ಹಳ್ಳಿಗಳ ಯುವಕರು. ಕೆಲವರು ನನ್ನ ಸ್ನೇಹಿತರ ಮಕ್ಕಳೇ. ಯೋಚಿಸಿ ನಂತರ ಅಲ್ಲಿಗೆ ಹೋದೆ. ನಮ್ಮೂರಿನ ಹೈಸ್ಕೂಲ್ ಒಳಗಡೆ ಸಣ್ಣ ಕಾರ್ಯಕ್ರಮ. ಅಲ್ಲಿ ವಿವೇಕಾನಂದರ ಹಾಗೇ ಭಗತ್ ಸಿಂಗರ ಫೋಟೋಗಳಿದ್ದವು. ಹೊರಗಿನಿಂದ ಬಂದ ಒಂದಿಬ್ಬರು ಕಾರ್ಯಕರ್ತರೂ ಇದ್ದರು. ನನ್ನ ಮಾತಿನ ಸರದಿ ಬಂದಾಗ ಭಗತ್ ಸಿಂಗ್ ಹೇಗೆ ಉಗ್ರ ಕ್ರಾಂತಿಕಾರಿ ಮತ್ತು ತೀವ್ರ ಮಾರ್ಕ್ಸವಾದಿ ಎಂದೂ, ವಿವೇಕಾನಂದರು ನಮ್ಮ ಜಾತಿ ಪದ್ಧತಿಗಳಬಗ್ಗೆ ಆಹಾರಗಳ ಬಗ್ಗೆ ಏನು ಹೇಳಿದ್ದರೆಂದೂ ವಿವರಿಸಿದೆ. ಇವೆಲ್ಲ ಅವರಿಗೆ ಹೊಸ ಸಂಗತಿಗಳಾಗಿದ್ದವು. ಅಲ್ಲದೆ ಕೊನೆಯಲ್ಲಿ ನಾನು ಗುರುಕಾಣಿಕೆಯೆಂಬ ಚಂದಾವನ್ನೂ ನಿಮಗೆ ಕೊಡಲಾರೆ ಎಂದೆ. ಈಗ ಆ ಹುಡುಗರಲ್ಲಿ ಹೆಚ್ಚಿನವರು ಪುಸ್ತಕಗಳನ್ನು ಓದಲು ತೊಡಗಿದ್ದಾರೆ. ಮತ್ತು ಆ ಸಂಘಟನೆಗಳಿಂದ ದೂರವಿದ್ದಾರೆ.

ಇನ್ನೊಂದು ಘಟನೆ ಇಷ್ಟು ಸರಳವಾದದ್ದಲ್ಲ. ಇದೂ ಸುಮಾರು ಎರಡು ವರ್ಷ ಹಿಂದಿನ ಘಟನೆಯೇ. ಉಡುಪಿ ಜಿಲ್ಲೆಯ ಹಳ್ಳಿಯಲ್ಲಿ ಸಂಘ ಪರಿವಾರ, ಮತ್ತು ಗೋಸಂರಕ್ಷಣಾ ಸಂಘಟನೆ, ಕೆಲವು ಮಠಗಳ ಆಶ್ರಯದಲ್ಲಿ ಗೋಸಂರಕ್ಷಣೆ, ಸಾವಯವ ಕೃಷಿ ಬಗ್ಗೆ ಕಾರ್ಯಕ್ರಮ, ನಾರಾಯಣರೆಡ್ಡಿಯವರೂ ಸೇರಿದಂತೆ ಕರ್ನಾಟಕದ ಹಲವು ಗಣ್ಯ ಸಾವಯವ ಕೃಷಿಕರೂ ಅತಿಥಿಗಳಾಗಿದ್ದರು. ಆ ಕಾರ್ಯಕ್ರಮಕ್ಕೆ ನಾನು ನನ್ನ ಗೆಳೆಯ ಹಮೀದ್ರೊಂದಿಗೆ (ಇವರು ಒಳ್ಳೆಯ ಸಾವಯವ ಕೃಷಿಕರು) ಅಲ್ಲಿಗೆ ಹೋಗಿದ್ದೆ. Two old and weak cows looking hungry, weak and unhealthy standinನಾವಿಬ್ಬರೂ ಅಲ್ಲಿ ಮಾತನಾಡಲು ಆಹ್ವಾನಿತರಾಗಿದ್ದೆವು. ಹಮೀದ್ ಕಾಫಿ-ಮೆಣಸಿನ ಬೆಳೆಯಲ್ಲಿ ಸಾವಯವ ಕೃಷಿಯ ಬಗ್ಗೆ, ಹಾಗೇ ಜೀವಾಮೃತ ಇತ್ಯಾದಿಗಳ ಬಗ್ಗೆ ಮಾತನಾಡಿದರು. ನನ್ನ ಸರದಿ ಬಂದಾಗ ಮಲೆನಾಡಿನಲ್ಲೂ ಕೂಡಾ ಇಂದು ದನಕರುಗಳನ್ನು ಸಾಕುವ ಕಷ್ಟಗಳ ಬಗ್ಗೆ (ನಮ್ಮ ಮನೆಯಲ್ಲೂ ಒಂದು ಕಾಲದಲ್ಲಿ ಹತ್ತು ಹಸುಗಳಿದ್ದವು, ನಂತರ ನಾನು ಹದಿನಾಲ್ಕು ವರ್ಷಕಾಲ ನಮ್ಮೂರಿನ ಖಾಸಗಿ ಡೇರಿ ಫಾರಂನಲ್ಲಿ ನೌಕರನಾಗಿದ್ದೆ.) ಹೇಳುತ್ತ ಅದರಲ್ಲೂ ಹೈಬ್ರಿಡ್ ಹಸು ಸಾಕಣೆ ಅದಕ್ಕೆ ಖಾಯಿಲೆಯಾದರೆ ಆಗುವ ತೊಂದರೆಗಳ ಬಗ್ಗೆ ಹೇಳುತ್ತ ನಾನು ನೌಕರನಾಗಿದ್ದ ಸಂದರ್ಭದಲ್ಲಿ (ಹದಿನಾಲ್ಕು ವರ್ಷಗಳಲ್ಲಿ) ತೀವ್ರ ಖಾಯಿಲೆಗೊಳಗಾಗಿದ್ದ ಸುಮಾರು ಅರುವತ್ತು ಹಸುಗಳನ್ನು ಇಂಜೆಕ್ಷನ್ ನೀಡಿ ಸಾಯಿಸಬೇಕಾಯಿತು. ಹೀಗಾಗಿ ಹಸು ಸಾಕಣೆ ಅದರಲ್ಲೂ ಮುದಿಯಾದ ಮತ್ತು ಬರಡಾದ ಹಸುಗಳ, ಹೋರಿಗಳ ವಿಚಾರದಲ್ಲಿ ನಾವು ಹೆಚ್ಚು ವಾಸ್ತವ ಪ್ರಜ್ಞೆ ಹೊಂದಿರುವುದು ಸೂಕ್ತ ಎಂದೆ. ಆಗಲೇ ಜನರ ನಡುವೆ ಗುಜು ಗುಜು ಚರ್ಚೆ ಆರಂಭವಾಯಿತು. ಕಾರ್ಯಕ್ರಮದ ನಂತರ ಅನೇಕರು ನನ್ನಲ್ಲಿ ’ನೀವು ಸರಿಯಾಗಿಯೇ ಹೇಳಿದಿರಿ’ ಎಂದರು. ಹಾಗೇ ಗೋಶಾಲೆಗಳ ಹೆಸರಲ್ಲಿ ನಡೆಯತ್ತಿರುವ ಅವ್ಯವಹಾರಗಳ ಬಗ್ಗೆಯೂ ಹೇಳಿದರು. ಆದರೆ ಮರುದಿನ ಕಾರ್ಯಕ್ರಮದ ಸಂಘಟಕರ ನಡುವೆ ಆ ಕಾರ್ಯಕ್ರಮಕ್ಕೆ ನನ್ನನ್ನು ಕರೆಸಿದ ಬಗ್ಗೆ ದೊಡ್ಡ ಜಗಳ ನಡೆಯಿತೆಂದು ತಿಳಿದುಬಂತು.

ಇದನ್ನೆಲ್ಲ ನಾನು ಯಾಕೆ ಹೇಳುತ್ತಿದ್ದೇನೆಂದರೆ ನಾವು ಯಾರ ವಿರುದ್ಧವಾಗಿಯೂ ಕಾರ್ಯಕ್ರಮಗಳನ್ನು ಮಾಡಬೇಕಾಗಿಲ್ಲ. abhimata-page5ಹಾಗೇ ನಮ್ಮ ನಿಲುವನ್ನು ಹೇಳಲು ಸದಾಕಾಲ ಇನ್ನೊಬ್ಬರನ್ನು ಬಯ್ಯುವ ಅಗತ್ಯವೂ ಇಲ್ಲ. (ನಾವು ಬೇಕಾದರೇ ನಮ್ಮದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋಣ.) ನಮ್ಮ ನಿಲುವು ಹಾಗೇ ಬದುಕು ಪಾರದರ್ಶಕವಾಗಿದ್ದರೆ ಜನ ಖಂಡಿತ ಅರ್ಥಮಾಡಿಕೊಳ್ಳುತ್ತಾರೆ. ನಮಗೀಗ ಬೇಕಾಗಿರುವುದು ಎಲ್ಲರನ್ನೂ ಒಳಗೊಳ್ಳುತ್ತ ಹಾಗೇ ನಮ್ಮ ವಿಚಾರಧಾರೆಯಿಂದ ವಿಮುಖರಾಗದೆ ನಡೆ-ನುಡಿ ಒಂದಾಗಿರುವ ರಾಜಕಾರಣ. ಇದಕ್ಕೆ ಪ್ರಬಲ ಇಚ್ಛಾಶಕ್ತಿಯೂ ನಿರಂತರ ಜನಸಂಪರ್ಕವೂ ಬೇಕು. ನಾವು ಭ್ರಷ್ಟರಾಗದೇ (ಎಲ್ಲ ರೀತಿಯ) ಉಳಿದರೆ ಸಾಲದು, ಪ್ರತಿ ಚುನಾವಣೆಯಲ್ಲಿ ಕೆಲವು ನೂರು-ಸಾವಿರ ಮತಗಳನ್ನು ಪಡೆದು ಸಂತೃಪ್ತಿಗೊಳ್ಳಬಾರದು. ನಿಧಾನವಾಗಿಯಾದರೂ ಅಧಿಕಾರದತ್ತ ಚಲಿಸಿ ಅದರ ಮೂಲಕವೇ ಏನನ್ನಾದರೂ ಸಾಧಿಸುವ ಪ್ರಯತ್ನ ಮಾಡಬೇಕು. ಯಾಕೆಂದರೆ ಪ್ರಜಾಪ್ರಭುತ್ವಕ್ಕೆ ಮತ್ತು ನಮ್ಮ ಬಹುಸಂಸ್ಕೃತಿಯ ಉಳಿವಿಗೆ ಬೇರೆದಾರಿ ಇಲ್ಲ. ಪ್ರಜಾಪ್ರಭುತ್ವ ಶಕ್ತಿಗುಂದಿದಾಗ, ತನ್ನ ಜವಾಬ್ದಾರಿಯನ್ನು ನಿರ್ವಹಿಸದಿದ್ದಾಗ ಮಾತ್ರ ಎಲ್ಲ ರೀತಿಯ ಖಾಸಗಿ ಸಾಹಸಗಳು ಮೆರೆದಾಡಲು ಸಾಧ್ಯವಾಗುತ್ತದೆ.

ಈ ವಿಚಾರದಲ್ಲಿ ’ಆಮ್ ಆದ್ಮಿ ಪಾರ್ಟಿ’ಯಿಂದ ಖಂಡಿತ ಇಡೀ ದೇಶಕ್ಕೆ ಒಂದು ಪಾಠವಿದೆ. Arvind_Kejriwal_party_launchಸದ್ಯಕ್ಕಂತೂ ಆ ಪಾರ್ಟಿ ಒಂದು ಊದಿದ ಬೆಲೂನಿನಂತೆ ಗೋಚರಿಸಿದರೂ ಅವರೇನು ಮಾಡುತ್ತಾರೆಂದು ಕಾದುನೋಡಬೇಕು. ಆದರೆ ಸಂಘಟನೆ ದೃಷ್ಟಿಯಿಂದ ಖಂಡಿತ ನಮ್ಮ ಸರ್ವೋದಯ ಪಕ್ಷದಂತವರೂ (ತಮ್ಮ ವಿಚಾರ ಬಿಟ್ಟುಕೊಡದೆ) ಅವರಿಂದ ಕಲಿಯುವುದಿದೆ ಅನ್ನಿಸುತ್ತದೆ.

ಇದೆಲ್ಲ ಒಂದಕ್ಕೊಂದು ಸಂಬಂಧವಿಲ್ಲದ ವಿಚಾರಗಳಂತೆ ಕಾಣಿಸುತ್ತದೆ. ಆದರೆ ಇವೆಲ್ಲದರ ಹಿಂದೆ ನಮ್ಮ ಸಾಂಸ್ಕೃತಿಕ ರಾಜಕಾರಣವಿದೆಯೆಂದೇ ನನ್ನ ನಂಬಿಕೆ. ಇಲ್ಲದಿದ್ದರೆ ನಾವು ಎಲ್ಲರನ್ನೂ ಉಗ್ರವಾಗಿ ಖಂಡಿಸುತ್ತಾ, ವೇದಿಕೆಯೇರಿ ದೊಡ್ಡಗಂಟಲಿನಲ್ಲಿ ಕೂಗಾಡುತ್ತ ಇದ್ದಲ್ಲಿಯೇ ಇರುತ್ತೇವೆ.

13 thoughts on ““ನುಡಿಸಿರಿ”ಯ ನಂತರ

  1. ರೂಪ ಹಾಸನ

    ಶಾಂತಚಿತ್ತದಿಂದ ಆಲೋಚಿಸುವ ವಿವೇಚಿಸುವ ವ್ಯಕ್ತಿ ಮಾತ್ರ ಇಂತಹ ನಿಲುವನ್ನು ತೆಗೆದುಕೊಳ್ಳಬಲ್ಲ. ಧನ್ಯವಾದ ಪ್ರಸಾದ್.

    Reply
  2. ನಾಗರಾಜ್ ಹೆತ್ತೂರು

    ನಾವು ಯಾರ ವಿರುದ್ಧವಾಗಿಯೂ ಕಾರ್ಯಕ್ರಮಗಳನ್ನು ಮಾಡಬೇಕಾಗಿಲ್ಲ. abhimata-page5ಹಾಗೇ ನಮ್ಮ ನಿಲುವನ್ನು ಹೇಳಲು ಸದಾಕಾಲ ಇನ್ನೊಬ್ಬರನ್ನು ಬಯ್ಯುವ ಅಗತ್ಯವೂ ಇಲ್ಲ. (ನಾವು ಬೇಕಾದರೇ ನಮ್ಮದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋಣ.) ನಮ್ಮ ನಿಲುವು ಹಾಗೇ ಬದುಕು ಪಾರದರ್ಶಕವಾಗಿದ್ದರೆ ಜನ ಖಂಡಿತ ಅರ್ಥಮಾಡಿಕೊಳ್ಳುತ್ತಾರೆ.

    Reply
  3. vittal d.k.

    ನಾನು ಹೇಳಬೇಕೆಂದಿದ್ದುದನ್ನು ….ಹೇಳಿದ್ದಕ್ಕೆ ರೂಪ ಹಾಸನ ಅವರ ಬಗ್ಗೆ ಹೊಟ್ಟೆಕಿಚ್ಚಿದೆ…..” ಇಂದು ಇಂತಹ ಬರಹಗಳ ಅಗತ್ಯವಿದೆ”….. ಎಂದರೆ …. ಪ್ರಾಯಷಃ ಅದು ತೀರಾ “Dry” ಎನಿಸೀತೇನೋ…. “ಇಂದು ಬೇಕಾಗಿರುವುದೇ ಇಂತಹ ಬರಹ”…. ಎನ್ನುವುದೇ ಹೆಚ್ಚು ಸರಿ…. ಇಲ್ಲವಾದಲ್ಲಿ … ಮೊದಲೇ “ಪೂರ್ವಗ್ರಹೀತ” ಯೋಚನೆಗಳೊಂದಿಗೇ ಸಾಗುವ ನಮ್ಮ ಮನಸ್ಸು…. ಮತ್ತಷ್ಟು ಸಮರ್ಥನೆಗಳನ್ನು ಮಾಡಿಕೊಳ್ಳುವುದರಲ್ಲೇ… ತೃಪ್ತವಾದೀತೇನೋ…..!!!
    – ವಿಟ್ಲದಿಂದ ಮೂರ್ತಿ ದೇರಾಜೆ

    Reply
  4. bolwar

    ‘ನಿಮ್ಮಂಥವರರಿಂದಲೇ ಮಳೆ ಬೆಳೆ ಇನ್ನೂ ಅಗುತ್ತಿರುವುದು’
    ಎಂದು ಪ್ರತಿಕ್ರಿಯಿಸಿದರೆ ಮೂಢನಂಬಿಕೆ ಅಂದುಕೊಳ್ಳಬಹುದು; ಕೊಳ್ಳಲಿ ಬಿಡಿ.
    – ಬೊಳುವಾರು

    Reply
  5. Raghu V

    “ನಮಗೀಗ ಬೇಕಾಗಿರುವುದು ಎಲ್ಲರನ್ನೂ ಒಳಗೊಳ್ಳುತ್ತ ಹಾಗೇ ನಮ್ಮ ವಿಚಾರಧಾರೆಯಿಂದ ವಿಮುಖರಾಗದೆ ನಡೆ-ನುಡಿ ಒಂದಾಗಿರುವ ರಾಜಕಾರಣ.”…….. ಇದೊಂದು ವಾಕ್ಯ ಸಾಕು ಸಾರ್…ಅರ್ಥ ಮಾಡಿಕೊಳ್ಳುವವರಿಗೆ. ಒಳ್ಳೆಯ ಲೇಖನ. ಧನ್ಯವಾದಗಳು.

    Reply
  6. P Girish Kumar

    ಬುದ್ಧಿಜೀವಿಗಳ, ವಿಚಾರವಾದಿಗಳ ಚರ್ಚೆಗೆ ನಗರ ಪ್ರದೇಶಗಳಲ್ಲಿ ಒಂದಷ್ಟು ಪ್ರೇಕ್ಷಕರು ದಕ್ಕಬಹುದು. ಮೂಡಬಿದ್ರಿಯಂತಹ ಅರೆ ಗ್ರಾಮೀಣ ಪ್ರದೇಶದಲ್ಲಿ ಜನರನ್ನು ಆಕರ್ಷಿಸಲು ಸ್ವಲ್ಪ ಮಟ್ಟಿನ ವೈಭವದ ಅಗತ್ಯವಿದೆ ಎಂದು ನನಗನ್ನಿಸುತ್ತಿದೆ. ಈ ವೈಭವವನ್ನುಹಲವಾರು ಹಿರಿ, ಕಿರಿಯ ಸಾಹಿತಿ, ಬುದ್ಧಿಜೀವಿಗಳ ಉಪಸ್ಥಿತಿಯೂ ಇದ್ದಿದ್ದು ಎಲ್ಲರಿಗೂ ತಿಳಿದೇ ಇದೆ. ಸಾಹಿತ್ಯ ಸಂಬಂಧಿ ಚರ್ಚೆ, ಗೋಷ್ಟಿಗಳು ಎಷ್ತು ಜನರನ್ನು ಆಕರ್ಷಿಸಿದವೋ ತಿಳಿಯದು. ಆದರೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಲಾವಿದರ ಅತ್ಯುತ್ತಮ ಗುಣಮಟ್ಟದ ಕಲಾ ಪ್ರದರ್ಶನವನ್ನಂತೂ ಸರ್ವರೂ ಆಸ್ವಾದಿಸಿದ್ದಂತೂ ನಿಜ. ಕಾರ್ಯಕ್ರಮದ ಅಚ್ಚುಕಟ್ಟುತನ, ಸಮಯ ನಿರ್ವಹಣೆ ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾಗಿವೆ. ಪುಸ್ತಕ ವ್ಯಾಪಾರ ಎಷ್ಟಾಯಿತೋ ಗೊತ್ತಿಲ್ಲ. ಇತರ ವಸ್ತುಗಳಿಗಂತೂ ಭರ್ಜರಿ ವ್ಯಾಪಾರವಾಗಿರುವುದೂ ಸುಳ್ಳಲ್ಲ. ಇದರ ನೆಪದಲ್ಲಾದರೂ ಸಾಮಾನ್ಯ ಜನ ಒಂದಷ್ಟು ಕನ್ನಡ ಭಾಷೆ ಹಾಗೂ ಸಾಹಿತ್ಯ ದ ಬಗ್ಗೆ ಆಸಕ್ತಿ ಬೆಳೆಸಿಕೊಂಡರೆ ಅದೇ ಸಾರ್ಥಕ. ಸಮ್ಮೇಳನದ ಖರ್ಚು ವೆಚ್ಚಗಳ ಬಗ್ಗೆ ಲೆಕ್ಕ ನೀಡುವ ಬಗ್ಗೆ ಕೂಡಾ ಈಗಾಗಲೇ ಆಳ್ವರು ಹೇಳಿಕೆ ನೀಡಿದ್ದಾರೆ. ಸರಕಾರೀ ಪ್ರಾಯೋಜಿತ ಕನ್ನಡ ಸಾಹಿತ್ಯ ಸಮ್ಮೇಳನ ಇನ್ನೇನು ಕೆಲವೇ ದಿನಗಳ ಅಂತರದಲ್ಲಿ ನಡೆಯಲಿದೆ. ಇದರ ಗೊಂದಲಗಳು ಇನ್ನೂ ಸರಿಹೋಗಿಲ್ಲ. ವಿತ್ತ ಸಂಗ್ರಹಣೆಗಾಗಿ ಸರಕಾರಿ ನೌಕರರ ಒಂದು ದಿನದ ಸಂಬಳ ಇತ್ಯಾದಿ ಬಲವಂತದ ವಿಧಾನಗಳೂ ಇರಬಹುದು.ಇಲ್ಲಿ ಯಾವುದು ಸರಿ ಯಾವುದು ತಪ್ಪು ಎನ್ನುವುದು ಅವರವ ವೈಯಕ್ತಿಕ ವಿವೇಚನೆಗೆ ಬಿಡುವುದು ಒಳ್ಳೆಯದು.
    ಗಿರೀಶ್, ಬಜಪೆ.

    Reply
  7. suma embar

    Well said, Prasad. ‘Reaction to’ -some undemocratic practices, by itself can not be a pro active alternative in the long run.( first aid, ok) Good models don’t have to be knee jerk responses: Good models are such interactions which take time to sort out issues and felicitate serious and sustained debate about them over a period of time.

    Reply
  8. sindhu

    A very balanced and much needed views. And well said too. This article needs to be republished in other open forums, webzines and social forum. This is much needed as food for thought and also as a medicine to the prejudiced share articles on the same topic.
    Thanks Rakshidi.

    Reply
  9. Sudheer sanu

    ತುಂಬಾ ಒಳ್ಳೆಯ ಬರಹ.
    ಸೋಗಲಾಡಿ ಬುದ್ದಿಜೀವಿಗಳು ತಮ್ಮ ಬುದ್ದಿಹೀನತೆ ಹಾಗೂ ಪೂರ್ವಗ್ರಹಪೀಡಿತತೆಯಿಂದ ಹೊರಬಂದು ನಿಜವಾದ ವೈಚಾರಿಕ ದೃಷ್ಟಿಕೋನದಿಂದ ಸಮಾಜವನ್ನು ಗಮನಿಸಬೇಕಾಗಿರುವುದು ಈ ಸಮಯದ ಜರೂರತ್ತು.

    Reply

Leave a Reply

Your email address will not be published. Required fields are marked *