Daily Archives: December 25, 2013

ಸಲಿಂಗ ಕಾಮ – ಅಲ್ಪಸಂಖ್ಯಾತರ ಮೇಲೆ ಬಹುಸಂಖ್ಯಾತರ ದಬ್ಬಾಳಿಕೆ

– ಆನಂದ ಪ್ರಸಾದ್

ಸರ್ವೋಚ್ಛ ನ್ಯಾಯಾಲಯವು ಸಲಿಂಗ ಕಾಮ ಶಿಕ್ಷಾರ್ಹ ಅಪರಾಧ ಅಲ್ಲವೆಂದು ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಪಡಿಸಿ ಒಂದು ಶತಮಾನ ಹಿಂದಕ್ಕೆ ದೇಶವನ್ನು ಕೊಂಡೊಯ್ಯುವ ತೀರ್ಪು ನೀಡಿದ್ದು ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ. ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡುವಾಗ ಸಮಕಾಲೀನ ಜ್ಞಾನವನ್ನು ಕಡೆಗಣಿಸಿರುವುದು ಆಘಾತಕಾರಿ ಬೆಳವಣಿಗೆ ಹಾಗೂ ವೈಜ್ಞಾನಿಕ ಮನೋಭಾವಕ್ಕೆ ವಿರುದ್ಧವಾಗಿದೆ. ಇದು ಸಂವಿಧಾನವು ಖಚಿತಪಡಿಸಿದ ವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯೂ ಹೌದು. homosexual-symbolಈ ತೀರ್ಪು ನೀಡಿದ ನ್ಯಾಯಾಧೀಶರು ಸನಾತನವಾದಿ ಮನೋಸ್ಥಿತಿಯ ನ್ಯಾಯಾಧೀಶರೆಂದು ತೀರ್ಪಿನಿಂದ ಕಂಡುಬರುತ್ತದೆ. ನ್ಯಾಯಾಧೀಶರು ಪ್ರಗತಿಶೀಲ ಮನೋಭಾವದವರಾಗಿದ್ದಿದ್ದರೆ ಇಂದಿನ ಸಮಕಾಲೀನ ಜ್ಞಾನವನ್ನು ಆಧರಿಸಿ ತೀರ್ಪು ನೀಡುತ್ತಿದ್ದರು. ನ್ಯಾಯವೂ ಕೂಡ ನ್ಯಾಯಾಧೀಶರ ವೈಯಕ್ತಿಕ ಮನೋಭಾವವನ್ನು ಹೊಂದಿಕೊಂಡು ನೀಡಲ್ಪಡುತ್ತದೆ. ಸಂವಿಧಾನವು ನೀಡಿದ ವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಬಳಸಿಕೊಂಡು ಸಂವಿಧಾನದ ಐಪಿಸಿ 377ನೇ ವಿಧಿ ಇಂದಿನ ಸಮಕಾಲೀನ ಜ್ಞಾನದ ಹಿನ್ನೆಲೆಯಲ್ಲಿ ಅಪ್ರಸ್ತುತ ಎಂದು ಸರ್ವೋಚ್ಛ ನ್ಯಾಯಾಲಯವು ಅದನ್ನು ರದ್ದು ಪಡಿಸಿದ್ದರೆ ಯಾರಿಗೂ ಏನೂ ಮಾಡಲು ಸಾಧ್ಯವಿರಲಿಲ್ಲ, ಏಕೆಂದರೆ ಸರ್ವೋಚ್ಛ ನ್ಯಾಯಾಲಯದ ತೀರ್ಪೇ ಅಂತಿಮ. ಹೀಗಿರುವಾಗ ಸರ್ವೋಚ್ಛ ನ್ಯಾಯಾಲಯವು ಪ್ರತಿಗಾಮಿ ತೀರ್ಪನ್ನು ನೀಡಿ ಮಾನವೀಯತೆ ಹಾಗೂ ಉದಾರವಾದಿ ಪರಂಪರೆಗೆ ಕೊಡಲಿ ಏಟು ಹಾಕಿದೆ. ಸರ್ವೋಚ್ಛ ನ್ಯಾಯಾಲಯವು ಸಂವಿಧಾನದ ಐಪಿಸಿ 377ನೇ ವಿಧಿಯನ್ನು ಪರಾಮರ್ಶಿಸುವ ಹೊಣೆಯನ್ನು ಸಂಸತ್ತಿನ ಮೇಲೆ ಜಾರಿಸಿ ತಾನು ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಭಾರತದಲ್ಲಿ ಧಾರ್ಮಿಕ ಪಟ್ಟಭದ್ರ ಹಿತಾಸಕ್ತ ಸನಾತನವಾದಿ ಗುಂಪುಗಳು ಎಲ್ಲ ಧರ್ಮಗಳಲ್ಲೂ ತುಂಬಿಕೊಂಡಿರುವುದರಿಂದ ಇಂಥ ವಿಷಯದಲ್ಲಿ ಸಂಸತ್ತು ಕೂಡ ಕ್ರಮ ಕೈಗೊಳ್ಳುವುದು ಕಷ್ಟವೇ. ಸನಾತನವಾದಿಗಳ ವಿರೋಧವನ್ನು ಕಟ್ಟಿಕೊಳ್ಳಲು Hyakinthos-paintingರಾಜಕೀಯ ಪಕ್ಷಗಳು ಹಿಂಜರಿಯುವ ಸನ್ನಿವೇಶ ಭಾರತದಲ್ಲಿ ಇರುವಾಗ ಸಂಸತ್ತು ಈ ಬಗ್ಗೆ ಕ್ರಮ ಕೈಗೊಂಡು ಐಪಿಸಿ 377ನೇ ವಿಧಿಯನ್ನು ರದ್ದುಪಡಿಸುವ ಅಥವಾ ತಿದ್ದುಪಡಿ ತರಲು ಹಿಂಜರಿಯುವ ಸ್ಥಿತಿ ಕಂಡುಬರುತ್ತಾ ಇದೆ. ಇದಕ್ಕೆ ಪೂರಕವಾಗಿ ಭಾರತೀಯ ಜನತಾ ಪಕ್ಷವು ತಾನು ಸಲಿಂಗಕಾಮ ಅಪರಾಧ ಎಂಬ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ ಹಾಗೂ ಇದರ ವಿರುದ್ಧವಾಗಿ ಸಂವಿಧಾನದ ಐಪಿಸಿ 377ನೇ ವಿಧಿಯನ್ನು ರದ್ದುಪಡಿಸುವುದನ್ನು ವಿರೋಧಿಸುತ್ತೇನೆ ಎಂದು ಹೇಳಿ ತಾನು ಎಂಥ ಪ್ರತಿಗಾಮಿ ಮನೋಭಾವದ ಪಕ್ಷ ಎಂಬುದನ್ನು ತೋರಿಸಿಕೊಂಡಿದೆ.

ಸಲಿಂಗಕಾಮವು ನಿಸರ್ಗಕ್ಕೆ ವಿರೋಧ ಎಂಬುದು ಸನಾತನವಾದಿಗಳ ಹಾಗೂ ಶಾಸ್ತ್ರಾಂಧ ಜನರ ವಾದ. ಸಲಿಂಗಕಾಮಿಗಳನ್ನು ನಿಸರ್ಗವೇ ಸೃಷ್ಟಿಸಿದ್ದು ಆಗಿರುವಾಗ ಇದು ನಿಸರ್ಗಕ್ಕೆ ವಿರೋಧ ಹೇಗಾಗುತ್ತದೆ? ನಿಸರ್ಗ ವಿರೋಧ ಆಗಬೇಕಾದರೆ ಸಲಿಂಗಕಾಮಿಗಳನ್ನು ವಿಜ್ಞಾನಿಗಳು ಪ್ರಯೋಗಶಾಲೆಯಲ್ಲಿ ಕೃತಕವಾಗಿ ಸೃಷ್ಟಿಸಿರಬೇಕು. ಆದರೆ ಸಲಿಂಗಕಾಮಿಗಳನ್ನು ವಿಜ್ಞಾನಿಗಳು ವಂಶವಾಹಿ ತಂತ್ರಜ್ಞಾನದ (genetical engineering) ಮೂಲಕ ಕೃತಕವಾಗಿ ಸೃಷ್ಟಿಸಿದ್ದು ಅಲ್ಲ. ಹೀಗಿರುವಾಗ ಇದು ನಿಸರ್ಗಕ್ಕೆ ವಿರೋಧವಾದದ್ದು ಎಂಬುದು ಅರ್ಥಹೀನ. ಸಲಿಂಗಕಾಮವೆಂಬುದು ಪ್ರಧಾನವಾಗಿ ವಂಶವಾಹಿಗಳ ಮೂಲಕ ನಿರ್ಧರಿತವಾಗುತ್ತದೆ ಎಂದು ವಿಜ್ಞಾನ ಹಾಗೂ ವೈದ್ಯಕೀಯ ಲೋಕ ಸ್ಪಷ್ಟಪಡಿಸಿದೆ ಹಾಗೂ ಇದನ್ನು ಚಿಕಿತ್ಸೆಯ ಮೂಲಕ ಬದಲಾಯಿಸಲು ಸಾಧ್ಯವಿಲ್ಲವೆಂದೂ ಹೇಳಿದೆ. ಸಲಿಂಗಕಾಮವು ನಿಸರ್ಗದ್ದೇ ಒಂದು ವೈವಿಧ್ಯ. ಹಾಗಾಗಿ ಇದನ್ನು ಅಪರಾಧವಾಗಿ ಕಾಣುವುದು ಅಮಾನವೀಯ ಹಾಗೂ ಸಂವಿಧಾನವು ನೀಡಿದ ವ್ಯಕ್ತಿಸ್ವಾತಂತ್ರ್ಯದ ಉಲ್ಲಂಘನೆಯೂ ಹೌದು. ಸಲಿಂಗಕಾಮಿಗಳು ಸೇರಿದರೆ ಸಂತಾನೋತ್ಪತ್ತಿ ಆಗುವುದಿಲ್ಲ. ಗಂಡು ಹಾಗೂ ಹೆಣ್ಣು ಕೂಡುವುದು ಸಂತಾನೋತ್ಪತ್ತಿಗೆ ಆಗಿದ್ದರೆ ಮಾತ್ರ ಅದು ಧರ್ಮಸಮ್ಮತ ಎಂಬ ವಾದವನ್ನು ಮಾಡುವವರೂ ಇದ್ದಾರೆ. ಇವರ ವಾದ ನೋಡಿದರೆ ಗಂಡು ಹೆಣ್ಣುಗಳು ಸಂತಾನೋತ್ಪತ್ತಿಗೆ ಮಾತ್ರ ಕೂಡಬೇಕು ಎಂದಾದರೆ ಮಕ್ಕಳಾದ ನಂತರವೂ ಮನುಷ್ಯರು ಲೈಂಗಿಕ ಕ್ರಿಯೆ ನಡೆಸುವುದಿಲ್ಲವೇ? ಮನುಷ್ಯನಲ್ಲಿ ಲೈಂಗಿಕತೆ ಸಂತಾನೋತ್ಪತ್ತಿಯನ್ನು ಮೀರಿ ಬೇರೆ ಉದ್ಧೇಶಗಳನ್ನೂ ಹೊಂದಿದೆ. ಬರಿಯ ಸಂತಾನೋತ್ಪತ್ತಿಗೆ ಮಾತ್ರ ಲೈಂಗಿಕತೆ ಸೀಮಿತ ಎಂದಾಗಿದ್ದರೆanimal_homosexual_behavior ಮನುಷ್ಯರಲ್ಲಿ ಗಂಡು ಹೆಣ್ಣುಗಳು ಎಲ್ಲ ಕಾಲದಲ್ಲೂ ಕೂಡುವುದನ್ನು ನಿಸರ್ಗವು ಸಾಧ್ಯ ಮಾಡುತ್ತಿರಲಿಲ್ಲ. ಹೆಚ್ಚಿನ ಪ್ರಾಣಿಗಳಲ್ಲಿ ಬೆದೆಯ ಕಾಲ ಎಂದು ಇದೆ. ಆ ಕಾಲದಲ್ಲಿ ಮಾತ್ರ ಗಂಡು ಹೆಣ್ಣುಗಳು ಪ್ರಾಣಿಗಳಲ್ಲಿ ಕೂಡಲು ಸಾಧ್ಯ. ಮನುಷ್ಯರಲ್ಲಿ ಇಂಥ ಬೆದೆಯ ಕಾಲ ಎಂದು ಇಲ್ಲ. ಮನುಷ್ಯರಲ್ಲಿ ಎಲ್ಲಾ ಕಾಲದಲ್ಲೂ ಗಂಡು ಹೆಣ್ಣುಗಳು ಕೂಡಬಹುದು. ಮನುಷ್ಯರಲ್ಲಿ ಲೈಂಗಿಕತೆ ಮನೋರಂಜನೆಯಾಗಿಯೂ, ಸುಖಪಡುವ ಸಾಧನವಾಗಿಯೂ ಬಳಕೆಯಾಗುತ್ತದೆ ಮತ್ತು ಇದನ್ನು ನಿಸರ್ಗವೇ ಮಾನವನಲ್ಲಿ ರೂಪಿಸಿದೆ. ಹೀಗಿರುವಾಗ ಅಲ್ಪಸಂಖ್ಯಾತರಾದ ಸಲಿಂಗಕಾಮಿಗಳು ಸುಖ ಪಡಬಾರದು, ಬಹುಸಂಖ್ಯಾತರಾದ ಭಿನ್ನಲಿಂಗಿ ಮಾನವರು ಮಾತ್ರ ಸುಖಪಡಬೇಕು ಎಂಬುದು ನ್ಯಾಯವಾಗುತ್ತದೆಯೇ ಎಂದು ನ್ಯಾಯಾಧೀಶರು ತೀರ್ಪು ನೀಡುವ ಮುನ್ನ ಯೋಚಿಸಬೇಕಾಗಿತ್ತು. ಅದೇ ರೀತಿ ಬಹುಸಂಖ್ಯಾತ ಭಿನ್ನಲಿಂಗಿ ಮಾನವರು ಹೇಳಿದಂತೆ ಅಲ್ಪಸಂಖ್ಯಾತ ಸಲಿಂಗಕಾಮಿಗಳು ಕೇಳಬೇಕು ಎಂಬುದು ಹಿಟ್ಲರ್ ಹಾಗೂ ಸ್ಟಾಲಿನ್ ತರಹದ ಸರ್ವಾಧಿಕಾರವಾಗುವುದಿಲ್ಲವೇ ಎಂದು ಸನಾತನವಾದಿಗಳು ಯೋಚಿಸಬೇಕಾದ ಅಗತ್ಯ ಇದೆ.

ಸಲಿಂಗಕಾಮವು ಮನುಷ್ಯರಲ್ಲಿ ಮಾತ್ರ ಇದೆಯೆಂದು ಕೆಲವು ಸನಾತನವಾದಿಗಳು ತಪ್ಪು ತಿಳಿದಿದ್ದಾರೆ. ಸಲಿಂಗಕಾಮವು ಹಲವಾರು ಪ್ರಾಣಿಗಳಲ್ಲಿಯೂ ಇದೆ ಎಂದು ವಿಜ್ಞಾನ ಹೇಳುತ್ತದೆ. ಹೋಮೋಸೆಕ್ಶುವಾಲಿಟಿ ಎಂದು ಹಾಕಿದರೆ ವಿಕಿಪೀಡಿಯದಲ್ಲಿ ಸಲಿಂಗಕಾಮದ ಸಮಗ್ರ ವಿವರಗಳು ಲಭಿಸುತ್ತವೆ. ಈ ಬಗ್ಗೆ ಸನಾತನವಾದಿಗಳು ಒಮ್ಮೆ ನೋಡುವುದು ಉತ್ತಮ. ಸಲಿಂಗಕಾಮದಿಂದ ಸಮಾಜದ ನೈತಿಕತೆ ಸರ್ವನಾಶವಾಗುತ್ತದೆ ಎಂಬ ಗುಲ್ಲನ್ನೂ ಸನಾತನವಾದಿಗಳು ಎಬ್ಬಿಸುತ್ತಿದ್ದಾರೆ. ಇದೊಂದು ಹುರುಳಿಲ್ಲದ ವಾದ. ಯಾರು ತಮ್ಮ ವಂಶವಾಹಿಗಳ (genes) ಮೂಲಕ ಸಲಿಂಗಕಾಮಿಗಳಾಗುವ ಸಾಧ್ಯತೆಯನ್ನು ಪಡೆದಿದ್ದಾರೆಯೋ lgbt-pride-parade-in-chennaiಅವರು ಮಾತ್ರ ಸಲಿಂಗಕಾಮದಲ್ಲಿ ಸುಖವನ್ನು ಕಾಣಲು ಸಾಧ್ಯ. ಉಳಿದಂತೆ ಭಿನ್ನಲಿಂಗಿಗಳು ಗಂಡು ಹೆಣ್ಣುಗಳ ಮಿಲನದಿಂದ ಪಡೆಯುವ ಸುಖವನ್ನು ಸಲಿಂಗಕಾಮದಿಂದ ಪಡೆಯಲು ಸಾಧ್ಯವೇ ಇಲ್ಲ. ಹೀಗಾಗಿ ಇಡೀ ಸಮಾಜದ ನೈತಿಕತೆಯೇ ಸಲಿಂಗಕಾಮದಿಂದ ಸರ್ವನಾಶವಾಗಿಹೋಗುತ್ತದೆ ಎಂಬ ಸನಾತನವಾದಿಗಳ ಆತಂಕಕ್ಕೆ ಕಾರಣವಿಲ್ಲ. ಅದೇ ರೀತಿ ಸಲಿಂಗಕಾಮದಿಂದ ಮಾನವ ಕುಲವೇ ನಾಶವಾದೀತು ಎಂಬ ಹಾಹಾಕಾರವೂ ಹುರುಳಿಲ್ಲದ್ದು. ಸಲಿಂಗಕಾಮಿಗಳ ಸಂಖ್ಯೆ ಸಮಾಜದಲ್ಲಿ ದೊಡ್ಡ ಪ್ರಮಾಣದಲ್ಲಿ ಇಲ್ಲ. ಅಂದಾಜು ಪ್ರಕಾರ ಅದು 10ರಿಂದ 15%ಕ್ಕಿಂತ ಹೆಚ್ಚು ಇಲ್ಲ. ಹೀಗಾಗಿ ಮಾನವ ಜನಾಂಗ ನಾಶವಾಗುವ ಯಾವ ಅಪಾಯವೂ ಇಲ್ಲ. ಸಲಿಂಗಕಾಮ ಅಪರಾಧ ಎಂಬ ವಸಾಹತುಶಾಹೀ ಕಾಲದ ಕಾನೂನು ಇಂದಿನ ವೈಜ್ಞಾನಿಕ ಜ್ಞಾನದ ಹಿನ್ನೆಲೆಯಲ್ಲಿ ಅರ್ಥಹೀನ ಹಾಗೂ ಕಾಲಬಾಹಿರ ಎಂಬುದನ್ನು ಸಮಾಜವು ಅರ್ಥಮಾಡಿಕೊಂಡು ಸಲಿಂಗಕಾಮಿಗಳು ಕೂಡ ಘನತೆಯಿಂದ ಬದುಕುವ ಅವಕಾಶ ಮಾಡಿಕೊಡಬೇಕಾದದ್ದು ಧರ್ಮ. ಅದು ಶಿಕ್ಷಾರ್ಹ ಅಪರಾಧ ಎಂದು ಹೇಳುವುದು ಅಮಾನವೀಯ ಹಾಗೂ ಹಿಟ್ಲರ್‌ಶಾಹಿ ಮನೋಸ್ಥಿತಿ. ಇದನ್ನು ಎಲ್ಲ ಧರ್ಮಗಳ ಸನಾತನವಾದಿಗಳು ತಿಳಿದುಕೊಳ್ಳಬೇಕಾಗಿದೆ. ಅದೇ ರೀತಿ ಎಲ್ಲ ರಾಜಕೀಯ ಪಕ್ಷಗಳೂ ಈ ಕುರಿತು ಉದಾರವಾದಿ ನಿಲುವನ್ನು ತಳೆಯುವುದು ಮಾನವೀಯತೆಯ ಲಕ್ಷಣ ಆದೀತು.