ನಾವು ಮನುಷ್ಯರು.. ಅವರು..? ಅವರೂ ಮನುಷ್ಯರೇ.. ಆದರೆ ಜಾತಿವ್ಯವಸ್ಥೆಯ ಬಲಿಪಶುಗಳು


– ಡಾ.ಎಸ್.ಬಿ. ಜೋಗುರ


 

ಮೊನ್ನೆ ಒಬ್ಬಾತ ಸೈಕಲ್ ಮೇಲೆ ಹೋಗುತ್ತಿದ್ದ. ನಾನು ರಸ್ತೆಯ ಬದಿ ಕಾರು ನಿಲ್ಲಿಸಿ ಹಣ್ಣು ತೆಗೆದುಕೊಂಡು ಬರುವಾಗ ಆತ ಸೈಕಲ್ ಹ್ಯಾಂಡಲ್ ಅನ್ನು ನನ್ನ ಕಾರಿಗೆ ತಾಗಿಸಿದ. ನಾನು ಅವನನ್ನು ಹಿಡಿದು ನಿಲ್ಲಿಸಿದೆ. ಪೋಲಿಸರಿಗೆ ಕರೀತೀನಿ ಎನ್ನುತ್ತಿರುವಂತೆ ಆತ ದೈನೇಸಿಯಾಗಿ ’ಸಾಯೆಬ್ರ ಹಂಗ ಮಾಡಬ್ಯಾಡ್ರ” ಅಂದ. ’ಹಂಗಾದ್ರೆ ಈ ಗೆರೆ ತೆಗೆಯೋದು ಯಾರು..? ಅದರ ಖರ್ಚು ಕೊಡ” ಅಂದೆ. ಅವನು ಯತಾರ್ಥವಾಗಿ ’ಎಷ್ಟು..?’ ಎಂದ. ’ಕೇಳೋಣ, ಅದಕ್ಕೆ ತಾಗುವದಕ್ಕಿಂತಾ ಹೆಚ್ಚಿಗೆ ಒಂದು ರೂಪಾಯಿಯೂ ಬೇಡ’ ಎಂದೆ. ಆತ ಕಿಸೆಯಲ್ಲಿರೋ ನೂರು ರೂಪಾಯಿಯ ನೋಟನ್ನು ಕೊಡಲು ಬಂದ. ನನಗೆ ಮುಜುಗುರವಾಗಿ ’ನೀನು ಏನು ಕೆಲಸ ಮಾಡ್ತಿ..?’ ಅಂತ ಕೇಳಿದೆ ಅದಕ್ಕವನು ’ಸ್ಕೆವೆಂಜರ್’ ಅಂದ. ಮುಂದೇನೂ ಮಾತಾಡದೇ ’ಸರಿ ಹೋಗು’ ಅಂದೆ. ಆತ ನಶೆಯಲ್ಲಿದ್ದ. ’ಸಾರಿ ಸರ್..ಸಾರಿ ಸರ್’ ಅನ್ನುತ್ತಲೇ ಸೈಕಲ್ ಹತ್ತಿದ. ಮಲ ಹೊರುವ ಪದ್ಧತಿಯನ್ನು ನಿಷೇಧಿಸಬೇಕು ಎನ್ನುವ ಶಾಸನ ಬಂದು ಎರಡು ದಶಕಗಳು ಕಳೆದರೂ [1993] ಇನ್ನೂ ನಮ್ಮಲ್ಲಿ ಹೀಗೆ ಆ ಕೆಲಸ ಮಾಡಿಕೊಂಡು ಬದುಕುವವರು ಇದ್ದಾರಲ್ಲ..! ಎನ್ನುವುದೇ ಒಂದು ಬಹುದೊಡ್ಡ ಸೋಜಿಗ. manual-scavenging-1ಜಾತಿಪದ್ಧತಿಯ ದಟ್ಟದರಿದ್ರ ಆಚರಣೆಯಾದ ಅಸ್ಪ್ರಶ್ಯತೆ ಎನ್ನುವ ಕೊಳಕು ವ್ಯವಸ್ಥೆಯ ಭಾಗವಾಗಿ ಆಚರಣೆಯಲ್ಲಿರುವ ಈ ಮಲಹೊರುವ ಪದ್ಧತಿ ಕರ್ನಾಟಕದಲ್ಲಿಯೂ ಇದೆ ಎನ್ನಲಿಕ್ಕೆ ಕಳೆದ ವರ್ಷ ಕೋಲಾರ ಜಿಲ್ಲೆಯಲ್ಲಿ ಹೊಲಸು ಗುಂಡಿಯನ್ನು ಸ್ವಚ್ಚಗೊಳಿಸುವ ಸಂದರ್ಭದಲ್ಲಿ ಅಸುನೀಗಿರುವ ಘಟನೆ ಇನ್ನೂ ಮಾಸಿಲ್ಲ.

ಒಂದು ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಹೆಚ್ಚು ಕಡಿಮೆ 12 ಲಕ್ಷದಷ್ಟು ಜನ ಈ ಭಂಗಿ ಕೆಲಸವನ್ನು ಮಾಡುತ್ತಾ ಅತ್ಯಂತ ಅಮಾನವೀಯವಾದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವರು. ಇವರು ಖಾಸಗಿ ಮತ್ತು ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಚ ಮಾಡುವ ಮೂಲಕ ಬದುಕುತ್ತಿರುವುದೇ ಒಂದು ದೊಡ್ದ ಸಾಮಾಜಿಕ ಅನ್ಯಾಯ ಮತ್ತು ನಾಗರಿಕ ಸಮಾಜದ ಗರ್ಭದೊಳಗಿರುವ ಅನಾಗರಿಕತೆಯ ವಿಕೃತದರ್ಶನ. ಶತಶತಮಾನಗಳಿಂದಲೂ ಇವರು ಈ ಬಗೆಯ ಕೆಲಸವನ್ನು ಮಾಡುತ್ತಾ ಬಂದವರು, ಇಲ್ಲವೇ ಇವರಿಂದ ಮಾಡಿಸುತ್ತಾ ಬರಲಾಗಿದೆ. ಅತ್ಯಂತ ಅಹಿತಕರವಾದ ಪರಿಸರದಲ್ಲಿ ವಾಸವಾಗಿರುವ ಇವರು ಅನೇಕ ಬಗೆಯ ಸಾಮಾಜಿಕ ಅಸಮಾನತೆಗಳು, ಕೊರತೆಗಳ ನಡುವೆ, ರೋಗ ರುಜಿನುಗಳಿಂದ ಬಳಲುವುದು ಮಾತ್ರವಲ್ಲದೇ ಅಪೌಷ್ಟಿಕತೆಯಿಂದ ನರಳುವವರಾಗಿದ್ದಾರೆ.

1993 ರಲ್ಲಿಯೇ ಈ ಬಗೆಯ ಭಂಗಿ ಕೆಲಸವನ್ನು ನಿಷೇಧಿಸಿದ್ದರೂ ಕೆಲವು ರಾಜ್ಯಗಳು ಇನ್ನೂ ಅದನ್ನು ಒಪ್ಪಿಕೊಂಡಿರದೇ ಇದ್ದದ್ದು ಇನ್ನೊಂದು ದೊಡ್ಡ ವಿಪರ್ಯಾಸ ಮತ್ತು ಅಣಕ. ಉದಾ- ರಾಜಸ್ಥಾನ ಮತ್ತು ಉತ್ತರ ಪ್ರದೇಶ ಈ ಶಾಸನವನ್ನು ಪೂರ್ಣವಾಗಿ ಒಪ್ಪಿಕೊಂಡಿಲ್ಲ. ಅತೀ ಹೆಚ್ಚು ಸಾಕ್ಷರತೆಯನ್ನು ಹೊಂದಿರುವ ಕೇರಳ ಕೂಡಾ ಇದನ್ನು ಒಪ್ಪಿಕೊಳ್ಳುವುದು ಅನಿವಾರ್ಯವೆಂದು ಭಾವಿಸಿಲ್ಲ. ನಾಗಾಲ್ಯಾಂಡ ಮತ್ತು ಪುದುಚೆರಿಗಳು ಕೂಡಾ ಪೂರ್ಣವಾಗಿ ಇದಕ್ಕೆ ಸಮ್ಮತಿ ನೀಡಿರುವುದಿಲ್ಲ. ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಅಂಕಿ ಅಂಶಗಳ ಪ್ರಕಾರ ಕೇರಳದಲ್ಲಿ 1339, ನಾಗಾಲ್ಯಾಂಡಲ್ಲಿ 1800, ಪುದುಚೇರಿಯಲ್ಲಿ 479 ಡ್ರೈ ಶೌಚಾಲಯಗಳು ಇವೆ Manual_scavanging1[1]ಎಂದು ವರದಿ ಮಾಡಿದೆ. ಡ್ರೈ ಅಂದರೆ ಸಾಕಷ್ಟು ನೀರನ್ನು ಹಾಕಲಾಗದಂತಿರುವ ಅತ್ಯಂತ ಶೋಚನೀಯ ಸ್ಥಿತಿಯ ಶೌಚಾಲಯಗಳಿವು. ಇವುಗಳನ್ನು ಈ ಭಂಗಿ ಸಮುದಾಯದಿಂದಲೇ ಸ್ವಚ್ಚಗೊಳಿಸಾಲಾಗುವುದು. [State of India’s livelihoods report-2012 Vipin Sharma- Sage publication].

NSLS 1993 [The National Scheme of Liberation of Scavengers act 1993] ಅಸ್ಥಿತ್ವದಲ್ಲಿ ಬಂದಿದ್ದರೂ ಕೆಲ ರಾಜ್ಯಗಳು ಅದನ್ನು ಒಪ್ಪಿಕೊಂಡು ಜಾರಿಗೊಳಿಸಿದ್ದರೂ ಪೂರ್ಣಪ್ರಮಾಣದಲ್ಲಿ ಅದರ ನಿಷೇಧ ಸಾಧ್ಯವಾಗಿಲ್ಲ. ಒಂದು ಸಮೀಕ್ಷೆಯ ಪ್ರಕಾರ 1993 ರಲ್ಲಿ 7.7 ಲಕ್ಷ ಈ ಬಗೆಯ ಭಂಗಿ ಕೆಲಸ ಮಾಡುವವರಿದ್ದರು. ಅವರಲ್ಲಿ ಈ ಕಾಯ್ದೆಗನುಗುಣವಾಗಿ ಸುಮಾರು 4.28 ಲಕ್ಷ ಜನರನ್ನು ಈ ಬಗೆಯ ಕೊಳಕು ಕೆಲಸದಿಂದ ಮುಕ್ತಗೊಳಿಸಲಾಯಿತು.ಅದರಲ್ಲಿ 3.42 ಲಕ್ಷ ಜನರಿಗೆ ಪುನರ್ ವಸತಿ ಸೌಲಭ್ಯವನ್ನು ಕಲ್ಪಿಸಿಕೊಡಲಾಯಿತು. 2011 ರ ಜನಗಣತಿ ಮತ್ತು ರಾಷ್ಟ್ರೀಯ ಗರಿಮಾ ಅಧ್ಯಯನದ ವರದಿಯಂತೆ ನಮ್ಮಲ್ಲಿ ಇಂದಿಗೂ 7.94 ಲಕ್ಷ ಶೌಚಾಲಯಗಳು ಮನುಷ್ಯರಿಂದಲೇ ತೊಳೆಯಲ್ಪಡುತ್ತವೆ. ಈ ಬಗೆಯ ಮಲದ ಗುಂಡಿಗಳು ಜೀವಮಾರಕವಾಗಿರುವುದೂ ಇದೆ. ಈ ಅಂಕಿ ಅಂಶಗಳಲ್ಲಿ ರೈಲು ಇಲಾಖೆಯ ಶೌಚಾಲಯಗಳನ್ನು ಸೇರಿಸಿಲ್ಲ. Manual-scavengingಈ ಭಂಗಿ ಸಮುದಾಯದ ಬದುಕನ್ನು ವಸ್ತುನಿಷ್ಟವಾಗಿ ಅಧ್ಯಯನ ಮಾಡಿದ ರಾಷ್ಟ್ರೀಯ ಗರಿಮಾ ಅಧ್ಯಯನ ಮತ್ತು ಸಲಹಾ ಸಮಿತಿ 2010 ರ ಸಂದರ್ಭದಲ್ಲಿ ಕೆಲವು ಸಂಗತಿಗಳನ್ನು ಬಯಲು ಮಾಡಿತು:

 • ಇದಕ್ಕೆ ಸಂಬಂಧಪಡುವ ಶಾಸನದಡಿಯಲ್ಲಿ ಫ಼ಲಾನುಭವಿಗಳಾದವರ ಪೈಕಿ ಭಂಗಿಗಳಾಗಿ ಕೆಲಸ ಮಾಡದಿರುವವರೇ ಹೆಚ್ಚಿಗಿರುವುದನ್ನು ಗುರುತಿಸಲಾಗಿದೆ.
 • ಅಧ್ಯಯನದ ಪ್ರಕಾರ ಹೀಗೆ ಭಂಗಿಗಳಾಗಿ ಕೆಲಸ ಮಾಡುವವರ ಪೈಕಿ ಮಹಿಳೆಯರೇ ಹೆಚ್ಚು ಆದರೆ ಫ಼ಲಾನುಭವಿಗಳಾದವರು ಮಾತ್ರ ಪುರುಷರು.
 • ಬಹಳಷ್ಟು ಜನ ಮಹಿಳೆಯರು, ವೃದ್ಧರು, ಅನಕ್ಷರಸ್ಥರು ಇದರಲ್ಲಿದ್ದಾರೆ.
 • ದೊಡ್ದ ಪ್ರಮಾಣದ ಭ್ರಷ್ಟಾಚಾರ, ಕಿರಕಿರಿ, ಅದಕ್ಷ ಅಧಿಕಾರಿಗಳು ಈ ಭಂಗಿ ಸಮುದಾಯವನ್ನೂ ಪೀಡಿಸದೇ ಬಿಟ್ಟಿಲ್ಲ.

ಪರೋಕ್ಷವಾಗಿ ಹೇಳುವದಾದರೆ ಅವರಿಗೆ ಒದಗಿಸಲಾದ ಪುನರವಸತಿ ಸೌಲಭ್ಯ ಸಾಕಷ್ಟು ದೋಷಗಳಿಂದ ಕೂಡಿದೆ ಎಂದರ್ಥ. ಈ ಬಗೆಯ ಮಲದ ಗುಂಡಿಗಳನ್ನು ಸ್ವಚ್ಚ ಮಾಡಿಸುವ ಕೆಲಸ ಕಾನೂನಿನ ದೃಷ್ಟಿಯಿಂದ ಅಪರಾಧವಾಗಿದೆ. ಇದು ಅಸ್ಪ್ರಶ್ಯತೆಯನ್ನು ಅತ್ಯಂತ ವ್ಯವಸ್ಥಿತವಾಗಿ ಕಾಪಾಡಿಕೊಂಡು ಬರುವಲ್ಲಿ ನೆರವಾಗುತ್ತದೆ. ಹೀಗಾಗಿ ಈ ಬಗೆಯ ಕೆಲಸದಲ್ಲಿ ತೊಡಗಿಸುವವರನ್ನು ಅಪರಾಧಿಗಳನ್ನಾಗಿ ಪರಿಗಣಿಸಿ ಶಿಕ್ಷಿಸಬೇಕು. ಇನ್ನು ಈ ಬಗೆಯ ಅಮಾನವೀಯ, ಹೇಯ ಕೆಲಸದಿಂದ ಅವರನ್ನು ಮುಕ್ತ ಮಾಡುವ ಜೊತೆಗೆ ಅವರಿಗೆ ಪರ್ಯಾಯವಾದ ಬೇರೆ ಉದ್ಯೋಗಗಳನ್ನು ಒದಗಿಸಿಕೊಡಬೇಕು. ಈ ದಿಸೆಯಲ್ಲಿ ರಾಷ್ಟ್ರೀಯ ಗರಿಮಾ ಅಧ್ಯಯನ 2012 ಮತ್ತು ರಾಷ್ಟ್ರೀಯ ಸಲಹಾ ಸಮಿತಿ 2011 ಈ ಸಮುದಾಯವನ್ನು ಸಬಲೀಕರಣಗೊಳಿಸುವ ಹಿನ್ನೆಲೆಯಲ್ಲಿ ಕೆಲವು ಪ್ರಮುಖ ಸಲಹೆಗಳನ್ನು ನೀಡಿರುವುದಿದೆ:

 • ಈ ಬಗೆಯ ಕೆಲಸ ಮಾಡುವವರನ್ನು ಭಿನ್ನ ಭಿನ್ನ ಯೋಜನೆಗಳಲ್ಲಿ ಗುರುತಿಸದೇ ಒಂದೇ ಯೋಜನೆಯಲ್ಲಿ ಗುರುತಿಸಿ ಅವರಿಗೆ ಸೌಲಭ್ಯಗಳನ್ನು ಒದಗಿಸಬೇಕು
 • ಇವರಿಗೆ ನೀಡಲಾಗುವ ಸಾಲವನ್ನು ಅನುದಾನದ ಮೂಲಕ ಪಾವತಿಸಬೇಕುmanual-scavenging-india
 • ಇವರೆಲ್ಲರಿಗೂ ಬಿ.ಪಿ.ಎಲ್. ಕಾರ್ಡ್ ನೀಡಬೇಕು
 • ಇವರಿಗೆ ರಾಜೀವ ಆವಾಸ ಯೋಜನೆಯಡಿ ವಸತಿಯನ್ನು ಕಲ್ಪಿಸುವುದು
 • ಸಾರ್ವಜನಿಕ ಸೇವೆಯಲ್ಲಿ ಇತರೆ ಹುದ್ದೆಗಳಲ್ಲಿ ನೇಮಕ ಮಾಡಬೇಕು
 • ಈ ಬಗೆಯ ಕೆಲಸದಲ್ಲಿದ್ದ ಹಿರಿಯ ಮಹಿಳೆಯರಿಗೆ ಮಾಸಿಕ 2000 ರೂ. ಪಿಂಚಣಿಯನ್ನು ನೀಡಬೇಕು.
 • ಇವರಿಗೆ ಅವರವರ ಊರುಗಳಲ್ಲಿ ಜಮೀನನ್ನು ಒದಗಿಸಬೇಕು

ಈಗಾಗಲೇ ಈ ಸಮುದಾಯವನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ The Prohibition of Employment as Manual Scavengers and their Rehabilitation Bill-2012 ಜಾರಿಗೆ ಬರಬೇಕಿತ್ತು. ಹಲವಾರು ಇತರೆ ಬಿಲ್‌ಗಳ ಹಾಗೆ ಅದೂ ಕೂಡಾ ನೆನೆಗುದಿಗೆ ಬಿದ್ದಂತಿದೆ. ಕೇವಲ ಶಾಸನಗಳ ಮೂಲಕ ಎಲ್ಲ ಬಗೆಯ ಬದಲಾವಣೆ ಸಾಧ್ಯ ಎಂದು ಹೇಳುವಂತಿಲ್ಲ. ಅದರ ಜೊತೆಗೆ ಹೊಸ ಬಗೆಯ ಪ್ರಾಮಾಣಿಕ ಪ್ರಯತ್ನದ ಮೂಲಕ ನಮ್ಮದೇ ದೇಶದ ಜನರನ್ನು ಮನುಷ್ಯರಂತೆ ಕಾಣುವ, ಪರಿಗಣಿಸುವ ಜರೂರತ್ತಂತೂ ಇದ್ದೇ ಇದೆ. ಆ ಮೂಲಕವೇ ನಾವೂ ನಾಗರಿಕರು ಎಂದು ತೋರಿಸಬೇಕಾಗಿದೆ. ನಮ್ಮಲ್ಲಿರುವ ಭೌತಿಕ ಪರಿಕರಗಳಿಂದಲ್ಲ, ಮನುಷ್ಯ ಪರ, ಜೀವಪರ ಕಾಳಜಿಯಿಂದ ತೋರಬೇಕಿದೆ.

2 thoughts on “ನಾವು ಮನುಷ್ಯರು.. ಅವರು..? ಅವರೂ ಮನುಷ್ಯರೇ.. ಆದರೆ ಜಾತಿವ್ಯವಸ್ಥೆಯ ಬಲಿಪಶುಗಳು

 1. Harshakugwe

  ಮಾಹಿತಿಗಾಗಿ: The Prohibition of Employment as Manual Scavengers and their Rehabilitation Bill-2013 ಡಿಸೆಂಬರ್ 4 ರಿಂದ ದೇಶದೆಲ್ಲೆಡೆ ಜಾರಿಗೊಂಡಿದೆ.

  Reply
 2. prasadraxidi

  ಹೌದು ಜೋಗುರ ಸರ್..ಅನೇಕ ರೈಲ್ವೆ ನಿಲ್ದಾಣಗಳಲ್ಲಿ ರೈಲುನಿಂತಿದ್ದಾಗ ಬಕೆಟ್ ಹಿಡಿದುಕೊಂಡು ಮಲ ಬಾಚುವವರು ಕಣ್ಣಿಗೆ ಬೀಳುತ್ತಾರೆ. ರೈಲ್ವೆ ಇಲಾಖೆ ಏನು ಮಾಡುತ್ತಿದೆ. ಹಾಗೇ ನಿಲ್ದಾಣಗಳಲ್ಲಿ ಕೆಳಗಿಳಿದು ಹೊರಗಿನ ಶೌಚಾಲಯವನ್ನು ಬಳಸುವ ಸಾಧ್ಯತೆ ಇದ್ದವರೂ ಸಹ, ತಮ್ಮ ಕಣ್ನೆದುರೇ ಇನ್ನೊಬ್ಬ ಮನುಷ್ಯ ಮಲಬಾಚುವುದನ್ನು ಸಹಜವೆನ್ನುವಂತೆ ನೋಡುವ ಜನರಿಗೆ ಹೇಗೆ ತಿಳುವಳಿಕೆ ನೀಡುವುದು.. ಮಲ ಹೊರುವ ಮಲದ ಗುಂಡಿ ಶುಚಿಗೊಳಿಸುವ ಕಾಯಕದ ಹಿಂದೆ ಇನ್ನೂ ಅನೇಕ ಘೋರ ಮುಖಗಳಿವೆ….ಇನ್ನೊಮ್ಮೆ ಬರೆಯುತ್ತೇನೆ

  Reply

Leave a Reply

Your email address will not be published.