ಜಿ.ಎಸ್.ಎಸ್. ನಮಗೆ ಏಕೆ ಮತ್ತು ಹೇಗೆ ಮಾದರಿ


– ಡಾ.ರಾಮಲಿಂಗಪ್ಪ. ಟಿ. ಬೇಗೂರು


 

ಜಿ.ಎಸ್.ಎಸ್. ಭೌತಿಕವಾಗಿ ಇನ್ನಿಲ್ಲ. ಆದರೆ ಅವರ ಕೃತಿಗಳಲ್ಲಿ ಮತ್ತು ಕೆಲಸಗಳಲ್ಲಿ ಅವರು ಸದಾ ಜೀವಂತ ಇರುತ್ತಾರೆ. ಪ್ರಜ್ಞೆಯ ನೆಲೆಯಲ್ಲಿ ಹೊಸ ಪೀಳಿಗೆಯ ಮಾನಸದಲ್ಲಿ ಅವರು ಸದಾ ಜೀವಿತರೆ.

ಯಾರಾದರೂ ಗಣ್ಯರು ತೀರಿಕೊಂಡಾಗ ಸಾಮಾನ್ಯವಾಗಿ ಇನ್ನು ಇಂಥವರು ಹುಟ್ಟುವುದಿಲ್ಲ, GSSಇವರ ಸಾವಿನಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳುವುದುಂಟು. ತುಂಬಲಾರದ ನಷ್ಟ ಎಂಬ ಮಾತು ಕ್ಲೀಶೆಯಾದರೂ ಜಿ.ಎಸ್.ಎಸ್. ವಿಷಯದಲ್ಲಿ ಇದು ವಾಸ್ತವ. ಅವರಂಥವರು ಯಾರೂ ಇಲ್ಲ ನಿಜ. ಆದರೆ ಅವರಂಥವರೆ ಯಾರಾದರೂ ಯಾಕೆ ಇರಬೇಕು?

ಯಾರನ್ನಾದರೂ ನೆನೆಸುವುದು ಅವರ ಒಳ್ಳೆಯ ಕೆಲಸಗಳಿಂದ. ಜಿ.ಎಸ್.ಎಸ್. ಹಲವಾರು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಅವರು ಕನ್ನಡ ಅಧ್ಯಯನ ಕೇಂದ್ರ ಕಟ್ಟಿದ ಕೆಲಸ, ಸುಗಮ ಸಂಗೀತ ಮತ್ತು ಸುಗಮ ಸಾಹಿತ್ಯವನ್ನು ಕಟ್ಟಿದ ಕೆಲಸ, ಕನ್ನಡ ಕಾವ್ಯತತ್ವ ಮತ್ತು ಕಾವ್ಯಮೀಮಾಂಸೆ ಹಾಗೂ ವಿಮರ್ಶೆಯನ್ನು ಕಟ್ಟಿದ ಕೆಲಸ, ಕನ್ನಡದ ಪ್ರತಿಷ್ಠಿತ ಸಾಹಿತ್ಯ ಪರಂಪರೆಯನ್ನು ಹತ್ತು ಹಲವು ವಿಚಾರ ಸಂಕಿರಣಗಳ ಮೂಲಕ ಮರುಓದಿಗೆ ಗುರಿಪಡಿಸಿ ವರ್ತಮಾನಕ್ಕೆ ಪ್ರಸ್ತುತಗೊಳಿಸಿದ ಕೆಲಸ, ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಇ ನಿರ್ವಹಿಸಿದ ಕೆಲಸ, ಹೊಸ ಪೀಳಿಗೆಯನ್ನು ಕಟ್ಟಿದ ಕೆಲಸ ಹೀಗೆ ಹಲವಾರು ಕೆಲಸಗಳಿಂದ ಜಿ.ಎಸ್.ಎಸ್. ಸದಾ ನಮಗೆಲ್ಲ ಮಾರ್ಗದರ್ಶಿಯೆ, ಮಾದರಿಯೆ ಆಗಿದ್ದಾರೆ.

ಒಬ್ಬ ಮನುಷ್ಯ ಎಷ್ಟು ಕಾಲ ಬದುಕಲು ಸಾಧ್ಯ? 100? 105? 110? ಆನಂತರ ಸಾಯಲೇಬೇಕಲ್ಲವೆ? ಆದರೆ ಆತನಿಂದ ಸಮಾಜಕ್ಕೆ ಎಷ್ಟರಮಟ್ಟಿಗೆ ಒಳಿತು ಆಗಿದೆ ಎಂಬುದೆ ಮುಖ್ಯ. ಅಲ್ಲದೆ ಆತನ ವಿಶಿಷ್ಟ ವಿಚಾರಕ್ರಮ, ಕಾರ್‍ಯಶೀಲತೆಗಳು ನಂತರದ ಪೀಳಿಗೆಯಲ್ಲಿ ಮುಂದುವರಿಯಬೇಕು. ಇಲ್ಲದೆ ಇದ್ದರೆ ಯಾವ ಉನ್ನತ ಪರಂಪರೆಗಳಿಗು ಮಾನವ ಸಮಾಜದಲ್ಲಿ ಜಿವಂತ ಇರಲು ಆಗದು. ಈ ದೃಷ್ಟಿಯಿಂದ ಜಿ.ಎಸ್.ಎಸ್. ಹಣತೆ ಹಚ್ಚಿ ಹಲವರ ಕೈಗೆ ಕೊಟ್ಟು ಹೋಗಿದ್ದಾರೆ. ಅವುಗಳು ಬೆಳಗುತ್ತಿವೆ ಮತ್ತು ಮುಂದಿನ ಪೀಳಿಗೆಗೆ ರವಾನೆ ಆಗಬಲ್ಲವು.

ಇಂದಿನ ಕಾಲದಲ್ಲಿ ರಾಮಣ್ಣನನ್ನು ಕಂಡರೆ ಭೀಮಣ್ಣನಿಗೆ ಆಗುವುದಿಲ್ಲ, ಭೀಮಣ್ಣನನ್ನು ಕಂಡರೆ ರಹೀಮಣ್ಣನಿಗೆ ಆಗುವುದಿಲ್ಲ. ಇದು ರಾಜಕಾರಣದಲ್ಲಿ ಮಾತ್ರ ಅಲ್ಲ; ಸಾಹಿತ್ಯದಲ್ಲು ನಿಜ. ಒಂದು ಬೌದ್ಧಿಕ ವಿಚಾರಧಾರೆಗೆ ಸೇರಿದವರು ಇನ್ನೊಂದು ವಿಚಾರಶಾಲೆಗೆ ಸೇರಿದವರನ್ನು ತಮ್ಮೊಂದಿಗೆ ಸೇರಿಸಿಕೊಳ್ಳುವುದಿಲ್ಲ. ಆದರೆ ಜಿ.ಎಸ್.ಎಸ್. ಹಾಗಲ್ಲ. ಭಿನ್ನ ರೀತಿಯ ವಿಚಾರಧಾರೆಗಳಿಗೆ ಸೇರಿದವರನ್ನೂ ತಮ್ಮೊಂದಿಗೆ ಒಡನಾಡಲು ಬಿಟ್ಟವರು ಮತ್ತು ಬೆಳೆಸಿದವರು. ಬರಗೂರು, ಸಿದ್ಧಲಿಂಗಯ್ಯ, ಡಿ.ಆರ್.ನಾಗರಾಜ, ಕಿ.ರಂ.ನಾಗರಾಜ, ಕೆ.ವಿ.ನಾರಾಯಣ. ಬಸವರಾಜ ಕಲ್ಗುಡಿ ಹೀಗೆ ಭಿನ್ನ ಆಲೋಚನಾ ಕ್ರಮದ ಜನರನ್ನೆಲ್ಲ ಒಟ್ಟಿಗೆ ಬೆಳೆಸಿದ ಮತ್ತು ಭಿನ್ನವಾಗಿ ಬೆಳೆಯಲು ಬಿಟ್ಟ ಚೈತನ್ಯ ಅವರು. ಅವರು ಕಾವ್ಯ ಮತ್ತು ಇತರ ಸಾಹಿತ್ಯವನ್ನು ಬರೆದದ್ದು ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರವನ್ನು ಕಟ್ಟಿದ್ದು ಎರಡೂ ಕೂಡ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಎರಡು ಭಿನ್ನ ಅನನ್ಯ ಕೊಡುಗೆಗಳು.

ಜಿ.ಎಸ್.ಎಸ್. ಅವರನ್ನು ಸಮನ್ವಯ ಕವಿ, ಭಾವಗೀತೆಯ ಕವಿ ಎಂದೇ ಬ್ರಾಂಡು ಮಾಡಲಾಗಿದೆ. ಹಾಗೆ ಮಾಡುವಾಗ ಬೇಂದ್ರೆ ಕಾವ್ಯ ಮಾದರಿ ಮತ್ತು ಅಡಿಗರ ಕಾವ್ಯಮಾದರಿಗಳನ್ನು ತನ್ನ ಮಾನದಂಡವನ್ನಾಗಿ ಇಟ್ಟುಕೊಂಡು ಕನ್ನಡ ವಿಮರ್ಶೆಯು ಇವರನ್ನು ಮತ್ತು ಇವರ ಪೂರ್ವಸೂರಿಗಳಾದಂತಹ ಕೆ.ಎಸ್.ನ., ಕಣವಿ, ಪು.ತಿ.ನ, ಮುಂತಾದವರನ್ನು ಕಡಿಮೆ ದರ್ಜೆಯ ಕವಿಗಳು ಎಂದೆ ಬಿಂಬಿಸಿದೆ. ಯಾಕೆ ಹೀಗೆ? ಖಂಡಿತಾ ನಮ್ಮಲ್ಲಿ ಕಾವ್ಯ ರಚನಾ ಕ್ರಮ ಮತ್ತು ಕಾವ್ಯ ರೂಪದ ಬಗೆಗಿನ ಮಿತಿಯುಳ್ಳ ತಿಳುವಳಿಕೆಯೆ ಇದಕ್ಕೆ ಕಾರಣವಾಗಿದೆ. ಏನನ್ನು ಕುರಿತು ಬರೆಯಬೇಕು ಮತ್ತು ಅದನ್ನು ಹೇಗೆ ಬರೆಯಬೇಕು ಎಂಬ ಬಗ್ಗೆ ನಮ್ಮ ಕನ್ನಡ ವಿಮರ್ಶಾ ವಾಜ್ಞಯವು ತನ್ನದೆ ಕೆಲವು ಕಲ್ಪನೆಗಳನ್ನು ಇಟ್ಟುಕೊಂಡಿದೆ. ಅಲ್ಲಿ ಜಿ.ಎಸ್.ಎಸ್. ಮಾದರಿ ಉನ್ನತ ಅಲ್ಲ! ಹಾಡುವ/ಗೇಯ ಕಾವ್ಯ ಉನ್ನತ ಅಲ್ಲ. ಸರಳ ಮತ್ತು ನೇರವಾದ ಕಾವ್ಯ ಉನ್ನತ ಅಲ್ಲ. ಜಿ.ಎಸ್.ಎಸ್. ಅವರನ್ನಷ್ಟೆ ಅಲ್ಲ ಆನಂತರದ ಕೆ.ಎಸ್.ನಿಸಾರ್ ಅಹಮದ್, ಎಚ್.ಎಸ್.ವೆಂಕಟೇಶಮೂರ್ತಿ, ಬಿ.ಆರ್.ಲಕ್ಷ್ಮಣರಾವ್, ಲಕ್ಷ್ಮೀನಾರಾಯಣ ಭಟ್ಟ ಮೊದಲಾದವರನ್ನೂ ಕೆಸೆಟ್ ಕವಿಗಳು ಎಂದೇ ಗೇಲಿ ಮಾಡುತ್ತ ಬರಲಾಗಿದೆ! ಭಿನ್ನ ಮಾದರಿಗಳನ್ನು ಗೌರವಿಸದ ಮತ್ತು ಎಲ್ಲವನ್ನೂ ಶ್ರೇಣೀಕರಣ ಮಾಡುವ ವಿದ್ಯಮಾನ ನಮ್ಮ ಕನ್ನಡ ವಿಮರ್ಶೆಯಲ್ಲಿ ಧಾರಾಳವಾಗಿ ನಡೆದಿದೆ. ಭಾವ ಕಡಿಮೆ ಬುದ್ಧಿ ಮೇಲು ಹೇಗೆ? ಅದಕ್ಕಿರುವ ರೀಚ್ ಅದಕ್ಕೆ, ಇದಕ್ಕಿರುವ ರೀಚ್ ಇದಕ್ಕೆ.

ನವ್ಯ ಸಂವೇದನೆಯ ಏರುಗಾಲದಲ್ಲಿ ರಾಮಚಂದ್ರ ಶರ್ಮ, ಅಡಿಗ ಮೊದಲಾದವರ ಕಾವ್ಯ ಮಾದರಿಯೆ ಉನ್ನತವಾದುದು ಎಂಬ ನಂಬಿಕೆಯನ್ನು ಸೃಷ್ಟಿಸಲಾಗಿತ್ತು. ಸುಗಮ ಸಂಗೀತ ಮತ್ತು ಸುಗಮ ಸಾಹಿತ್ಯವನ್ನು ಕಡಿಮೆ ದರ್ಜೆಯ ಕಾವ್ಯ ಎಂದೆ ಕಾಣಲಾಗುತ್ತಿತ್ತು. ಗಂಭೀರ ಸಾಹಿತ್ಯ ಮತ್ತು ಜನಪ್ರಿಯ ಸಾಹಿತ್ಯ ಎಂಬ ಸಾಹಿತ್ಯದ ಒಡಕು ಇಲ್ಲಿ ನವ್ಯ ಮತ್ತು ಸುಗಮ (ಭಾವಗೀತಾತ್ಮಕ) ಎಂದು ಒಡೆದಿತ್ತು. ಆದರೆ ಜಿ.ಎಸ್.ಎಸ್. ತಮ್ಮ ನಿರಂತರವಾದ ಭಾವಗೀತೆ, ನಿಯತ ಲಯ, ಗೇಯ ಕವನಗಳ ರಚನೆಯ ಮೂಲಕ ಕನ್ನಡ ಕಾವ್ಯದ ಭಿನ್ನ ಮಾದರಿಯನ್ನು ಸ್ಥಾಪಿಸಲು ಯತ್ನಿಸಿದರು. ಕಾವ್ಯ ಬಂಧ ಮತ್ತು ಆಕಾರದ ಬಗ್ಗೆ ಇದ್ದ ಸ್ಥಾಪಿತ ನಂಬಿಕೆಯನ್ನು ಒಡೆಯಲು ಯತ್ನಿಸಿದರು. ನವೋದಯದ ಆರಂಭದಲ್ಲಿ ಬಿ.ಎಂ.ಶ್ರೀ. ಯಾವ ಮಾದರಿಯನ್ನು ಮುಂದಿಡಲು ಯತ್ನಿಸಿದರೋ ಅಂಥಹ ಮಾದರಿಯನ್ನು ನವ್ಯದ ನಂತರ ಜಿ.ಎಸ್.ಎಸ್. ಕೂಡ ಮುಂದಿಡಲು ಯತ್ನಿಸಿದರು. ಇದರಿಂದ ಕನ್ನಡ ಕಾವ್ಯಕ್ಕೆ ನಷ್ಟವೇನೂ ಆಗಲಿಲ್ಲ. ಒಳಿತೇ ಆಯಿತು. ಸಾಮಾನ್ಯ ಮತ್ತು ಗಂಭೀರ ಎಂಬ ಕಾವ್ಯನೆಲೆಗಳ ನಡುವಣ ಬ್ರಿಜ್ ಒಂದು ತಾಯಾರಾಗಲು ಸಾಧ್ಯವಾಯಿತು. ಹೀಗಾಗಿ ಕಾವ್ಯ ಮತ್ತು ಗಾಯನಗಳು ಬೆರೆತ ಒಂದು ಮಾದರಿಯೆ ಇಂದು ಜೋರಾಗಿ ಸ್ಥಾಪಿತ ಆಗಿದೆ.

ಕನ್ನಡ ಸಾಹಿತ್ಯವನ್ನು ಬೋಧಿಸುವ ಪ್ರಾಧ್ಯಾಪಕರಾಗಿದ್ದ ಜಿ.ಎಸ್.ಎಸ್. ಸಾಹಿತ್ಯದ ಎಲ್ಲ ಕವಲುಗಳನ್ನೂ ಸಮಾನವಾಗಿ ಪ್ರೀತಿಸುತ್ತಿದ್ದವರು. ಹಾಗಾಗಿಯೆ ಅವರಿಗೆ ಎಲ್ಲ ಪ್ರಾಚೀನ ಸಾಹಿತ್ಯದ ಒಳ್ಳೆಯ ಭಾಗಗಳನ್ನು ಸಲಹುವ ಹಾಗೆಯೆ ಆಧುನಿಕ ಸಾಹಿತ್ಯದ ಎಲ್ಲ ಮಾದರಿಗಳ ಬಗೆಗೂ ಪ್ರೀತಿ ಇತ್ತು. ಇವರ ‘ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ’ ಎಂಬ ಮಾತು ಸಾಹಿತ್ಯದ ಭಿನ್ನ ಮಾದರಿಗಳಿಗು ಅನ್ವಯಿಸುವಂಥದ್ದು. ಎಲ್ಲ ಮಾದರಿಗಳನ್ನೂ ಇವರು ಪ್ರೀತಿಯಿಂದ ಕಾಣುತ್ತಿದ್ದ ಕಾರಣಕ್ಕೆ ಇವರು ಭಿನ್ನ ಮಾದರಿಗಳನ್ನು ಬೆಳೆಸಲು ಸಾಧ್ಯ ಆಯಿತು. ಹಾಗಾಗಿಯೆ ಇವರ ಕಾವ್ಯ ಕೂಡ ಒಂದು ರೀತಿಯುಲ್ಲಿ ಪ್ರಯೋಗಶೀಲ ಆಯಿತು. ನವ್ಯ, ನವೋದಯ, ಬಂಡಾಯ ಎಲ್ಲ ರೀತಿಯ ಸಂವೇದನೆಗಳ ಕಾವ್ಯವನ್ನೂ ಇವರು ಪ್ರಯೋಗ ಮಾಡಿದ್ದಾರೆ.

ಅದೂ ಬೇಕು ಇದೂ ಬೇಕು
ಎಲ್ಲವೂ ಬೇಕು ನನಗೆ
ದಾರಿ ನೂರಾರಿವೆ ಬೆಳಕಿನರಮನೆಗೆ

ನೂರಾರು ಭಾವದ ಬಾವಿ: ಎತ್ತಿಕೋ
ನಿನಗೆ ಬೇಕಾದಷ್ಟು ಸಿಹಿನೀರ
ಪಾತ್ರೆಯಾಕಾರಗಳ ಕುರಿತು ಏತಕೆ ಜಗಳ?
ನಮಗೆ ಬೇಕಾದದ್ದು ದಾಹ ಪರಿಹಾರ.

ಎನ್ನುವ ಜಿ.ಎಸ್.ಎಸ್. ಕಾವ್ಯದ ಬಂಧ ಮತ್ತು ಆಕೃತಿಗಳ ಬಗೆಗೆ ಅಷ್ಟಾಗಿ ತಲೆ ಕೆಡಿಸಿಕೊಂಡವರಲ್ಲ. ಈ ಬಗ್ಗೆ ಬಹುವಾಗಿ ತಲೆ ಕೆಡಿಸಿಕೊಂಡಿದ್ದ ನವ್ಯದ ರಾಚನಿಕ ಮೀಮಾಂಸೆಯ ವ್ಯಸನವನ್ನು ಇವರು ನವಿರಾಗಿಯೆ ನಿರಾಕರಿಸಿದವರು. ನಿರಂತರ ತಮ್ಮ ನವಿರು ಕಾವ್ಯದ, ಚೆಲುವು ಮತ್ತು ಒಲವುಗಳ ಕಾವ್ಯದ, ಮೆಲುದನಿಯ ವೈಚಾರಿಕ ಕಾವ್ಯದ ರಚನೆಯ ಮೂಲಕವೆ ಅಂಥ ವ್ಯಸನಕ್ಕೆ ತಕ್ಕ ಉತ್ತರವನ್ನು ಕೊಟ್ಟರು. ಈ ದೃಷ್ಟಿಯಿಂದ ನವ್ಯಕಾವ್ಯ ಮಾದರಿಯ ಬಗೆಗೆ ಪ್ರೀತಿ ಮತ್ತು ಗೌರವ ಇದ್ದೂ ಆ ಮಾದರಿಯು ನನ್ನ ನೆಚ್ಚಿನ ಮಾದರಿ ಅಲ್ಲ ಎಂಬ ನಿರಾಕರಣೆ ಇವರ ಕಾವ್ಯದಲ್ಲೆ ಅಂತರ್ಗತ ಆಗಿರುವುದನ್ನು ಕಾಣಬಹುದು. ಅಂತಹ ಮಾದರಿಯ ಕಾವ್ಯಕ್ಕೆ ತೋರಿದ ದೊಡ್ಡ ಪ್ರಮಾಣದ ಪ್ರತಿರೋಧ ಎಂಬಂತೆಯೂ ಅವರ ಕಾವ್ಯವನ್ನು ನಾವು ಅಭ್ಯಾಸ ಮಾಡಲು ಸಾಧ್ಯವಿದೆ.

ನವಿರಾದ ಭಾವ ಮತ್ತು ಪ್ರಸನ್ನತೆ ಮಾತ್ರವೆ ಜಿ.ಎಸ್.ಎಸ್. ಅವರಲ್ಲಿ ಇದೆ ಎಂದೂ ಅವರನ್ನು ವ್ಯಾಖ್ಯಾನಿಸಲಾಗಿದೆ. ಆದರೆ ಅವರಲ್ಲಿ ಭಾವದಷ್ಟೆ ತೀವ್ರವಾಗಿ (ನೇರವಾಗಿ ಮತ್ತು ಸರಳವಾಗಿ) ವೈಚಾರಿಕತೆಯೂ ಇದೆ. ಆದರೆ ನಮ್ಮ ಕನ್ನಡ ವಿಮರ್ಶೆ ಅದನ್ನು ಗಂಭೀರವಾಗಿ ಗುರ್ತಿಸಿಯೆ ಇಲ್ಲ! ಭಾವ ಮತ್ತು ಚೆಲುವಿನ ನಿರೂಪಣೆ ಹಾಗೂ ವೈಚಾರಿಕತೆಗಳು ಒಟ್ಟಿಗೇ ಇರಲಾರವು ಎಂಬ ವಿಮರ್ಶಾ ಮಿಥ್ ಒಂದು ನಮ್ಮಲ್ಲಿ ಸೃಷ್ಠಿ ಆಗಿದೆ. ಆದರೆ ಜಿ.ಎಸ್.ಎಸ್. ಈ ಮಿಥ್‌ಅನ್ನು ಒಡೆಯುವಂತೆ ಬರೆದಿದ್ದಾರೆ. ಭಾವ ಮಾತ್ರವೆ ನಮಗೆ ಏಕೆ ಎದ್ದು ಕಾಣುತ್ತದೆ ಎಂದರೆ ಅವರ ಕವಿತೆಗಳನ್ನು ಕಣ್ಣೋದಿಗೆ ಗುರಿ ಮಾಡಿರುವುದಕ್ಕಿಂತ ಕಿವಿಯ ಕೇಳಿಕೆಗೆ ಮಾತ್ರ ನಾವು ಹೆಚ್ಚು ಗುರಿಮಾಡಿದ್ದೇವೆ. ಸಂಗೀತ ಮತ್ತು ನಾದಗಳಲ್ಲಿ ಅರ್ಥ ಗೌಣ ಆಗುವುದು ಸಹಜ ತಾನೆ. ಹಾಡು ಕೇಳುವಾಗ ನಾವು ಭಾವದಲ್ಲಿ ತೇಲುತ್ತೇವೆ, ನಾದವನ್ನು ಗುನುಗುತ್ತೇವೆ, ನಿಯತಲಯವನ್ನು ಆನಂದಿಸುತ್ತೇವೆ. ಆದರೆ ಚಿಂತಿಸುವುದಿಲ್ಲ. ಹಾಡಿನ ಕೇಳಿಕೆಗೆ ಇರುವ ಸಾಧ್ಯತೆ ಇದು. ಇದನ್ನೆ ಮಾಡುತ್ತ ಜಿ.ಎಸ್.ಎಸ್. ಅವರಲ್ಲಿ ವೈಚಾರಿಕತೆ ಇಲ್ಲ. ಬರಿ ಭಾವುಕತೆ ಇದೆ ಎಂದರೆ ಹೇಗೆ? ಆನಂದಿಸಿದರೆ ವೈಚಾರಿಕತೆ ಕಾಣುವುದಿಲ್ಲ; ಚಿಂತಿಸಿದರೆ ಕಾಣುತ್ತದೆ.

ಜಿ.ಎಸ್.ಎಸ್. ಅವರಿಗೆ ಲೋಕದಲ್ಲಿ ದುಖ, ತಲ್ಲಣ, ಸಮಸ್ಯೆ ಕಾಣುವುದೆ ಇಲ್ಲ; ಅವರಿಗೆ ಚೆಲುವು ಮಾತ್ರ ಕಾಣುತ್ತದೆ ಎಂಬಂತೆಯು ಅವರನ್ನು ವ್ಯಾಖ್ಯಾನಿಸಲಾಗಿದೆ. ಜಿ.ಎಸ್.ಎಸ್. ಅವರಿಗೆ ಲೋಕದಲ್ಲಿ ಕಾಣುವುದಿಲ್ಲವೊ ಅಥವಾ ನಮಗೆ ಅವರ ಕಾವ್ಯದಲ್ಲಿ ಕಾಣುವುದಿಲ್ಲವೊ? ಜಿ.ಎಸ್.ಎಸ್. ನಿಜವಾದ ಅರ್ಥದಲ್ಲಿ ವೈಚಾರಿಕತೆ ಮತ್ತು ಚೆಲುವು-ಒಲವು ಒಟ್ಟಿಗೆ ಇರಬಲ್ಲುವು ಎಂದು ತೋರಿಸಿದವರು. ಅಷ್ಟೆ ಅಲ್ಲ ಪಾಂಡಿತ್ಯ ಮತ್ತು ಕವಿತ್ವ ಎರಡೂ ಒಟ್ಟಿಗೆ ಇರಬಲ್ಲುವು ಎಂದು ಬಾಳಿ ತೋರಿಕೊಟ್ಟವರು. ಬರೆದು ತೋರಿ ಕೊಟ್ಟವರು.

ರಾಷ್ಟ್ರಕವಿ, ರಾಷ್ಟ್ರಕವಿ ಎಂದು ಕರೆದು ಜಿ.ಎಸ್.ಎಸ್. ಅವರನ್ನು ಕೇವಲ ಕವಿ ಎಂಬಂತೆ ನಮ್ಮಲ್ಲಿ ಬಿಂಬಿಸಲಾಗಿದೆ. (ರಾಷ್ಟ್ರಕವಿ ಎಂಬುದು ಒಳ್ಳೆಯ ಲೇಖಕ ಎಂಬ ಒಂದು ಬಿರುದು ಅಷ್ಟೆ.) ಅಷ್ಟೆ ಅಲ್ಲ ಭಾವಗೀತೆಯ ಕವಿ, ಸುಗಮ ಗೀತೆಯ ಕವಿ ಎಂದೆ ಬಿಂಬಿಸಲಾಗಿದೆ. ಅವರು ಭಾವಗೀತೆಗಳನ್ನೂ/ಸುಗಮಗೀತೆಗಳನ್ನೂ ಬರೆದಿದ್ದಾರೆ. ಹಾಗೆಯೆ ಎಲ್ಲ ರೀತಿಯ ಆಧುನಿಕ ಸಂವೇದನೆಯ ಕವಿತೆಗಳನ್ನೂ ಪ್ರಯೋಗ ಮಾಡಿದ್ದಾರೆ. ಆದರೆ ಅವರು ಬರಿದೆ ಕವಿಯಲ್ಲ. ಕನ್ನಡ ವಿಮರ್ಶೆ ಮತ್ತು ಮೀಮಾಂಸೆಗೆ ಕೂಡ ಅವರು ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಅವರ ಸೌಂದರ್‍ಯ ಮೀಮಾಂಸೆ, ವಿಮರ್ಶೆಯ ಪೂರ್‍ವ ಪಶ್ಚಿಮ, ಕಾವ್ಯಾರ್ಥ ಚಿಂತನ ಮೊದಲಾದ ಕೃತಿಗಳು ಕನ್ನಡ ತತ್ವಶಾಸ್ತ್ರ, ಮೀಮಾಂಸೆ ಮತ್ತು ವಿಮರ್ಶೆಯನ್ನು ಸಂಸ್ಕೃತದ ನೆರಳಿನಿಂದ ಮತ್ತು ಇಂಗ್ಲಿಷಿನ ನೆರಳಿನಿಂದ ನೋಡುವ ಕೃತಿಗಳೆ ಆಗಿವೆ. ಆದರೆ ಅವರ ಕನ್ನಡ ಕಾವ್ಯತತ್ವ ಚಿಂತನೆ ಆ ರೀತಿಯ ಕೃತಿಯಲ್ಲ. ತೀ.ನಂ.ಶ್ರೀ. ಹಾಕಿಕೊಟ್ಟ ಭಾರತೀಯ ಕಾವ್ಯಮೀಮಾಂಸೆ ಎಂಬ ಸಂಸ್ಕೃತವನ್ನೆ ಭಾರತೀಯ ಎಂದು ಕರೆಯುವ ಚಿಂತನಾಕ್ರಮವನ್ನು ಮೀರಿದ ಕೃತಿಯಿದು. ಕನ್ನಡದ್ದೆ ಕವಿಗಳು ಕನ್ನಡದ್ದೆ ಕಾವ್ಯತತ್ವ ಮತ್ತು ಮೀಮಾಂಸೆಯನ್ನು ಹೇಗೆ ರಚಿಸಿಕೊಳ್ಳಲು ಯತ್ನಿಸಿದ್ದಾರೆ ಎಂಬ ಹುಡುಕಾಟದ ಕೃತಿಯಿದು. ಹೀಗಾಗಿ ಕನ್ನಡದಲ್ಲಿ ಕೆ.ಕೃಷ್ಣಮೂರ್ತಿ, ಎಂ.ವಿ.ಸೀತಾರಾಮಯ್ಯ ಮೊದಲಾದವರ ಪ್ರಯತ್ನಗಳನ್ನು ಮುಂದುವರಿಸಿ ಕನ್ನಡದ್ದೆ ಕಾವ್ಯಮೀಮಾಂಸೆಯನ್ನು ಕಟ್ಟಿಕೊಳ್ಳುವಲ್ಲಿ ಮೊದಲು ಮಾಡಿದ ಹೆಗ್ಗಳಿಕೆ ಜಿ.ಎಸ್.ಎಸ್.ಗೆ ಸಲ್ಲಬೇಕು. ಕನ್ನಡಕ್ಕೆ ಇಂಗ್ಲಿಷ್ ಮತ್ತು ಸಂಸ್ಕೃತಗಳ ಹೊರತಾಗಿಯೂ ತನ್ನದೆ ಅನನ್ಯತೆ ಇದೆ ಎಂದು ಗುರ್ತಿಸಿದ ಹೆಗ್ಗಳಿಕೆ ಜಿ.ಎಸ್.ಎಸ್.ಗೆ ಸಲ್ಲಬೇಕು.

ಇವರು ಏರ್ಪಡಿಸಿದ ವಿಚಾರಸಂಕಿರಣಗಳು ಮತ್ತು (ಸಾಹಿತ್ಯ ವಾರ್ಷಿಕವನ್ನೂ ಒಳಗೊಂಡಂತೆ) ಇವರು ಮಾಡಿದ ಪ್ರಕಟಣೆಗಳು ಕನ್ನಡ ಸಾಹಿತ್ಯಕ್ಕೆ ಒಂದು ಘನತೆಯನ್ನು ತಂದುಕೊಟ್ಟವು. ಪ್ರತಿಷ್ಠಿತ ಸಾಹಿತ್ಯ ಪರಂಪರೆಯನ್ನು ತಮ್ಮ ಗುರುಗಳಾದ ಕುವೆಂಪು, ತ.ಸು.ಶಾಮರಾಯ ಮೊದಲಾದವರು ಹೇಗೆ ತಮ್ಮ ಮುಂದಿನ ಪೀಳಿಗೆಗೆ ರವಾನಿಸಿದರೋ ಹಾಗೆ ಜಿ.ಎಸ್.ಎಸ್. ಕೂಡ ಸಾಹಿತ್ಯ ಸಂಸ್ಕೃತಿ ಪರಂಪರೆಯನ್ನು ಮರುಮೌಲ್ಯಮಾಪನ ಮತ್ತು ಮರು ಓದುಗಳ ಮೂಲಕ ತಮ್ಮ ಮುಂದಿನ (ಶಿಷ್ಯ-ಪ್ರಶಿಷ್ಯ) ಪೀಳಿಗೆಗೂ ರವಾನಿಸಿದರು. ಪರಂಪರೆಯೊಂದಿಗೆ ಜಗಳ ಹೂಡುವ ಮತ್ತು ಅಲ್ಲಿನ ಉನ್ನತವಾದುದನ್ನು ಉಳಿಸಿಕೊಳ್ಳುವ ಪ್ರಜ್ಞೆಯನ್ನು ಇವರು ಸದಾ ತೋರಿದರು. ಸಾಮಾಜಿಕ ಮೌಲ್ಯ, ಅಲಕ್ಷಿತ ನೆಲೆ, ಅನ್ಯಜ್ಞಾನ ಶಿಸ್ತು ಇತ್ಯಾದಿಗಳ ಮೂಲಕ ಕನ್ನಡ ಸಾಹಿತ್ಯವನ್ನು ನೋಡುವ ಹಲವು ಹೊಸ ಓದುಗಳನ್ನು ನಡೆಸಿದರು. ಅಷ್ಟೆ ಅಲ್ಲ ವರ್ತಮಾನದ ಸಾಹಿತ್ಯದ ಸತ್ವವನ್ನು ಕೂಡ ಪರಿಶೀಲನೆಗೆ ಗುರಿಪಡಿಸಿದರು. ಇವರು ಸಾಹಿತ್ಯ ಅಕಾಡೆಮಿಯ ಅದ್ಯಕ್ಷರಾಗಿದ್ದಾಗ ಮಾಡಿದ ಸಾಲುದೀಪಗಳು ಪ್ರಕಟಣೆ ಮತ್ತು ಇತರ ವಿಚಾರಸಂಕಿರಣಗಳ ಪ್ರಕಟಣೆಗಳು ಕೂಡ ಇಲ್ಲಿ ಗಮನಾರ್ಹ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಯಾವ ಕೆಲಸವನ್ನು ಇವರು ಮಾಡುತ್ತಿದ್ದರೋ ಅದಕ್ಕೆ ಇಲ್ಲಿ ಇನ್ನಷ್ಟು ವಿಸ್ತರಣೆ ಸಿಕ್ಕಂತೆ ಆಯಿತು. ಈ ದೃಷ್ಟಿಯಿಂದ ಜಿ.ಎಸ್.ಎಸ್. ಉಪಯುಕ್ತವಾದ ಸಾಹಿತ್ಯಕ ಬಾಳನ್ನು, ತುಂಬು ಬಾಳನ್ನು ಬಾಳಿದವರು.

ಕನ್ನಡ ವಿಮರ್ಶೆಯ ಲೋಕವೆ ಇತ್ತಂಡವಾಗಿ 60 ರ ದಶಕದಿಂದ 80 ರ ದಶಕದವರೆಗೆ ಕುವೆಂಪುವನ್ನು ಎರಡು ಅತಿಗಳಲ್ಲಿ ನೋಡುತ್ತಿತ್ತು. ಒಂದೊ ಕುವೆಂಪು ಋಷಿ ಇಲ್ಲವೆ ದೇವರು ಎಂದು ಒಂದು ತಂಡ ವಾದಿಸುತ್ತಿದ್ದರೆ ಇನ್ನೊಂದು ತಂಡkuvempu ಕುವೆಂಪು ಕವಿಯೇ ಅಲ್ಲ ಎಂದು ವಾದಿಸುತ್ತಿತ್ತು. ಆದರೆ ಜಿ.ಎಸ್.ಎಸ್. ಕುವೆಂಪು ತಮ್ಮ ಮೆಚ್ಚಿನ ಗುರು ಮತ್ತು ಮಾರ್ಗದರ್ಶಕರೆ ಆಗಿದ್ದರೂ ಅವರ ಸಾಹಿತ್ಯದ ನಿಜವಾದ ಸತ್ವ ಏನು ಎಂಬುದನ್ನು ಕನ್ನಡದ ಅಂದಿನ ಎಲ್ಲ ಧಾರೆಗಳಿಗೆ ಸೇರಿದ ಚಿಂತಕರಿಂದಲೂ ಪರಿಶೀಲನೆಗೆ ಒಳಪಡಿಸಿದ್ದರು. ಕುವೆಂಪು ಸಾಹಿತ್ಯದ ಮೇಲೆ ಬೆಂಗಳೂರಿನ ಸೆನೆಟ್ ಹಾಲಿನಲ್ಲಿ ವಿಚಾರಸಂಕಿರಣ ನಡೆಸಿ ತೇಜಸ್ವಿ, ಡಿ.ಆರ್.ನಾಗರಾಜ, ಬಿ.ಕೃಷ್ಣಪ್ಪ, ಮೊದಲಾದವರಿಂದ ಕುವೆಂಪು ಸಾಹಿತ್ಯವನ್ನು ವಸ್ತುನಿಷ್ಟವಾಗಿ ಪರಿಶೀಲಿಸಿದ್ದರು. ಆನಂತರ ಅಲ್ಲಿನ ಭಾಷಣಗಳನ್ನೆಲ್ಲ ಸಂಕಲಿಸಿ “ಶ್ರೀ ಕುವೆಂಪು” ಎಂಬ ಪುಸ್ತಕವನ್ನೂ ಪ್ರಕಟಿಸಿದರು. ಇಂತಹ ಅನೇಕ ವಿಚಾರ ಸಂಕಿರಣಗಳನ್ನು ನಡೆಸಿ ಜಿ.ಎಸ್.ಎಸ್. ಕನ್ನಡ ಸಾಹಿತ್ಯ ಪರಂಪರೆಯನ್ನು ಸೋಸಿ ಕಟ್ಟಿಕೊಳ್ಳುವ ಕೆಲಸವನ್ನು ಮಾಡಿದ್ದಾರೆ.

ಅಷ್ಟೆ ಅಲ್ಲ ಕನ್ನಡ ಸಾಹಿತ್ಯ ಚಿಂತಕರ ಒಂದು ದೊಡ್ಡ ದಂಡನ್ನೆ ತಯಾರು ಮಾಡಿದ್ದಾರೆ. ತಾವು ಕನ್ನಡ ಅಧ್ಯಯನ ಕೇಂದ್ರದಲ್ಲಿ ಇದ್ದಾಗ ಸಾಹಿತ್ಯ ವಾರ್ಷಿಕ ಎಂಬ ಯೋಜನೆಯನ್ನು ಹಾಕಿಕೊಂಡು ಆಯಾ ವರ್ಷ ಬಂದ ಎಲ್ಲ ಬಗೆಯ ಗ್ರಂಥಗಳನ್ನೂ ಪರಿಚಯಿಸುವ ಮತ್ತು ವಿಮರ್ಶಿಸುವ ಕೆಲಸವನ್ನೂ ಮಾಡಿದ್ದಾರೆ. ಇಂತಹ ಹತ್ತಾರು ಯೋಜನೆ ಮತ್ತು ಗೋಷ್ಠಿಗಳಿಂದ ಕನ್ನಡ ಸಾಹಿತ್ಯವನ್ನು ವರ್ತಮಾನಕ್ಕೆ ಪ್ರಸ್ತುತಗೊಳಿಸಿದ್ದಾರೆ. ಆಧುನಿಕ ಕನ್ನಡ ಸಾಹಿತ್ಯ ವಿಮರ್ಶೆ ಒಂದು ಬೃಹತ್ ಆಲದ ಮರದಂತೆ ಬೆಳೆಯವಲ್ಲಿ, ಒಂದು ಸಾಹಿತ್ಯಕ ಚಳುವಳಿ ಎಂಬಂತೆ ಬೆಳೆಯವಲ್ಲಿ ಇವರ ಕೊಡುಗೆ ಸಾಕಷ್ಟು ಇದೆ. ತಮ್ಮತನವನ್ನು ಬಿಟ್ಟುಕೊಡದೆ ಒಟ್ಟಿಗೆ ಇರಬಹುದಾದ ಕನ್ನಡದ ಹಲವಾರು ವಿಮರ್ಶಕರನ್ನು ಬೆಳೆಸಿದ್ದರಿಂದ 80 ರ ದಶಕದ ನಂತರ ಕನ್ನಡ ವಿಮರ್ಶೆಗೆ ಒಂದು ಹೊಸತನ ಕೂಡ ಸಾಧ್ಯವಾಗಿದೆ. ಈ ನೆಲೆಯಲ್ಲಿಯೂ ಜಿ.ಎಸ್.ಎಸ್. ಸಾಧನೆ ಗಮನಾರ್ಹ ಮತ್ತು ಅನುಕರಣೀಯ.

ಸಾಹಿತ್ಯವೆ ಆಗಲಿ, ಸಾಹಿತ್ಯ ಚಿಂತಕರ ಬಳಗವೆ ಆಗಲಿ, ಶಿಷ್ಯ ಬಳಗವೆ ಆಗಲಿ, ಸಮಾಜವೆ ಆಗಲಿ ಎಲ್ಲೆಡೆಯು ಜಾತ್ಯತೀತವಾದಿ ಮತ್ತು ಗುಣಗ್ರಾಹಿ ಆಗಿ ಜಿ.ಎಸ್.ಎಸ್. ವರ್ತಿಸಿದ್ದಾರೆ ಮತ್ತು ಅಂತಹ ಮೌಲ್ಯವನ್ನೆ ಬಾಳಿದ್ದಾರೆ. ಈ ದೃಷ್ಟಿಯಿಂದ ಅವರು ನಮಗೆಲ್ಲ ಮಾದರಿ. (ಎಲ್ಲ ಮನುಷ್ಯರಿಗು ಇರುವ ಹಲವು ದೌರ್ಬಲ್ಯಗಳು ಇವರಿಗು ಇದ್ದುವು ಎಂಬುದು ಕೂಡ ನಿಜ.) ಇವರೇನು ಸಂತರಲ್ಲ, ದೇವರಲ್ಲ, ನಮ್ಮ ನಿಮ್ಮಂತೆ ಒಬ್ಬ ಸಾಮಾನ್ಯ ಮನುಷ್ಯ. ಒಬ್ಬ ಸಾಮಾನ್ಯ ಶಾಲಾ ಮಾಸ್ತರರ ಮಗನಾಗಿ ಶಿಕಾರಿಪುರದಂತಹ ಒಂದು ಊರಿನಲ್ಲಿ ಒಬ್ಬ ಸಾಮಾನ್ಯ ಮನುಷ್ಯನಾಗಿ ಹುಟ್ಟಿದ ಜಿ.ಎಸ್.ಎಸ್. ಇಷ್ಟೆಲ್ಲ ಸಾಧಿಸಿದ್ದಾರೆ. ಒಬ್ಬ ಮನುಷ್ಯನಿಂದ ಇನ್ನೆಷ್ಟನ್ನು ನಿರೀಕ್ಷಿಸಲು ಸಾಧ್ಯ?


ಪೂರಕ ಓದಿಗೆ ಜಿ.ಎಸ್‌. ಶಿವರುದ್ರಪ್ಪನವರ ಕೆಲವು ಕವಿತೆಗಳು:

Leave a Reply

Your email address will not be published.