Daily Archives: December 29, 2013

ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಮಂಗಳೂರಿನಲ್ಲಿ ಮತೀಯ ರಕ್ಕಸರ ರಾಜಕೀಯ ಚದುರಂಗದಾಟ


– ಮುನೀರ್ ಕಾಟಿಪಳ್ಳ


 

ಕರಾವಳಿ ಜಿಲ್ಲೆ ಮಂಗಳೂರಿನಲ್ಲಿ ಮತ್ತೆ ಮತೀಯ ರಕ್ಕಸರ ರಾಜಕೀಯ ಚದುರಂಗದಾಟ ಶುರುವಾಗಿದೆ. ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಇಂತಹ ಬೆಳವಣಿಗೆ ನಿರೀಕ್ಷಿತವೇ ಆಗಿದ್ದರೂ ಏಕಾಏಕಿ ಮತೀಯ ಶಕ್ತಿಗಳು ಮೇಲುಗೈ ಸಾಧಿಸಿರುವುದು. ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರ ಈ ನಿಟ್ಟಿನಲ್ಲಿ ಯಾವುದೇ ಗಂಭೀರ ಕ್ರಮಕೈಗೊಳ್ಳದೆ ಎದುರಾಳಿಗಳಿಗೆ ಆಟ ಬಿಟ್ಟು ಕೊಟ್ಟಿರುವುದು ಅನಿರೀಕ್ಷಿತ. ವಿಧಾನ ಸಭಾ ಚುನಾವಣೆಯ ಸೋಲಿನಿಂದ ಕಂಗೆಟ್ಟಿದ್ದ ಬಿಜೆಪಿ ಪರಿವಾರ ಇಂತಹದ್ದೊಂದು ಆಟಕ್ಕೆ ಸ್ಕೆಚ್ ಹಾಕಿ ಸಮಯ ಕಾಯುತ್ತಾ ಕೂತದ್ದು ಅವರ ನಡೆಗಳನ್ನು ಬಲ್ಲ ಎಲ್ಲರಿಗೂ ಗೊತ್ತಿರುವಂತದ್ದೆ. ಆದರೆ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಹುಟ್ಟಿಕೊಂಡ ಹೋರಾಟ ಇಲ್ಲಿನ ಕೋಮುಶಕ್ತಿಗಳ ಆಶ್ರಯದಾತರಾಗಿರುವ ಆಗೋಚರ ಸರಕಾರಗಳ ವಿರುದ್ಧದ ಜನ ಚಳುವಳಿಯಾಗಿ ಪರಿವರ್ತನೆಗೊಂಡಿದ್ದು, ಜನ ಚಳುವಳಿಗಳು ಜನಸಾಮಾನ್ಯರ ಮಧ್ಯೆ ಸಕ್ರಿಯಗೊಂಡಿದ್ದು, ನುಡಿಸಿರಿ, ಜನನುಡಿ alva-nudisiri-baraguru-bhairappaಕಾರ್ಯಕ್ರಮಗಳು ಹುಟ್ಟು ಹಾಕಿದ ವೈಚಾರಿಕ ಸಂಘರ್ಷಗಳ ಮಧ್ಯೆ ಏಕಾಏಕಿ ಮತೀಯ ಶಕ್ತಿಗಳಿಗೆ ಪ್ರಬಲವಾಗಿ ಎದ್ದು ನಿಲ್ಲಲು ಸಾಧ್ಯವಾದುದರ ಹಿಂದೆ ಆಳವಾದ ಪಿತೂರಿಯ ವಾಸನೆ ಬಡಿಯುತ್ತದೆ.

ಕರಾವಳಿಯ ಜಿಲ್ಲೆಗಳಲ್ಲಿ ನೈತಿಕ ಪೊಲೀಸ್‌ಗಿರಿ, ಭೂಗತ ಜಗತ್ತು, ಕ್ರಿಮಿನಲ್ ಚಟುವಟಿಕೆ, ಮತೀಯ ಹಿಂಸೆ ಹೊಸದಲ್ಲ. ಕಳೆದ ಒಂದು ದಶಕದಲ್ಲಿ ಇಲ್ಲಿನ ಜನತೆ ಈ ಕೂಟಗಳ ಅಪವಿತ್ರ ಮೈತ್ರಿಯಿಂದ ಹೈರಾಣಗೊಂಡಿರುವುದರಿಂದ ಪಕ್ಕನೆ ಇವರು ಹಣೆದ ಬಲೆಗೆ ಬೀಳಲಾರರು ಎಂಬ ನಿರೀಕ್ಷೆ ಜಾತ್ಯಾತೀತರದ್ದು. ಕಾಂಗ್ರೆಸ್ ಸರಕಾರವು ಹಳೆಯ ನೆನಪುಗಳಿಂದ ಪಾಠ ಕಲಿತು ಇಂತಹ ಶಕ್ತಿಗಳ ಬಗ್ಗೆ ನಿರ್ದಾಕ್ಷಿಣ್ಯವಾಗಿ ವರ್ತಿಸುತ್ತದೆ ಎಂಬ ನಿರೀಕ್ಷೆಯು ಸಹಜ.

ಆದರೆ ಈಗ ನಡೆದಿರುವ ಬೆಳವಣಿಗೆಗಳು ಆತಂಕ ಉಂಟುಮಾಡುವಂತಿದೆ. ಹಿಂದುತ್ವವಾದಿ ಶಕ್ತಿಗಳಿಗೆ ಪರ್‍ಯಾಯ ಎಂಬಂತೆ ಬಿಂಬಿಸಿಕೊಂಡು ಮುಸ್ಲಿಮರ ಮಧ್ಯೆ ನೆಲೆ ಕಂಡುಕೊಂಡಿರುವ ಮತ ತೀವ್ರವಾದಿ ಶಕ್ತಿಗಳು ಈ ಬಾರಿಯ ಆಟದಲ್ಲಿ ನಿರ್ವಹಿಸುತ್ತಿರುವ ಪಾತ್ರ ಸಂಘ ಪರಿವಾರದ ಕೆಲಸವನ್ನು ಸುಲಭಗೊಳಿಸಿದೆ. ಅದರ ಜೊತೆಯಲ್ಲಿ ಮುಸ್ಲಿಂ ಭೂಗತ ಜಗತ್ತಿಗೆ ಎಂಟ್ರಿ ಕೊಟ್ಟಿರುವ ಹೊಸ ತಲೆಮಾರಿನ ಕ್ರಿಮಿನಲ್ ಹುಡುಗರ ಅಮಾನವೀಯ ವಿಕೃತ ಕೃತ್ಯಗಳು ಪರಿವಾರದ ರೊಟ್ಟಿಯನ್ನು ಅನಾಯಾಸವಾಗಿ ತುಪ್ಪಕ್ಕೆ ಜಾರಿಸಿದೆ.

ವಿಟ್ಲದಲ್ಲಿ ಕರಾವಳಿ ಅಲೆ ಪತ್ರಿಕೆಯ ವರದಿಗಾರ ವಿ.ಟಿ. ಪ್ರಸಾದ್‌ಗೆ ಪಿಎಫ್‌ಐ ಕಾರ್ಯಕರ್ತರು ಎನ್ನಲಾದ ಗುಂಪು ಮುಸ್ಲಿಂ ಮಹಿಳೆಗೆ ಸಹಾಯ ಮಾಡಿದ ಕಾರಣಕ್ಕೆ ಮಾಡಿದ ಬರ್ಬರ ಹಲ್ಲೆ, ಬಂಟ್ವಾಳದ ಗಡಿಯಾರ ಎಂಬಲ್ಲಿ ಮುಸ್ಲಿಂ ಮಹಿಳೆಯೊಂದಿಗೆ ಮಾತನಾಡಿಸಿದ್ದಕ್ಕೆ ಜಯರಾಮ ಎಂಬ ಲಾರಿ ಚಾಲಕನಿಗೆ ಗುಂಪು ಕಟ್ಟಿಕೊಂಡು ಅನಾಗರಿಕ ರೀತಿಯಲ್ಲಿ ನಡೆಸಿದ ಹಲ್ಲೆ, ಮಂಗಳೂರು ನಗರದ ಕೇಂದ್ರ ಭಾಗದಲ್ಲಿ ಕೇರಳ ಮೂಲದ ಇಬ್ಬರು ಹಿಂದು ವಿದ್ಯಾರ್ಥಿಗಳಿಗೆ ಅವರ ಸಹಪಾಠಿ ಮುಸ್ಲಿಂ ವಿದ್ಯಾರ್ಥಿನಿಗೆ ಡ್ರಾಪ್ ಕೊಟ್ಟದ್ದಕ್ಕೆ ನಡೆಸಿದ ಬಹಿರಂಗ ಹಲ್ಲೆಗಳು ಬಜರಂಗ ದಳ, ವಿಶ್ವ ಹಿಂದೂ ಪರಿಷತ್ ಮುಂತಾದ ಹಿಂದುತ್ವವಾದಿ ಸಂಘಟನೆಗಳಿಗೆ ಅಕಾಲದಲ್ಲಿ ಹಬ್ಬ ಆಚರಿಸುವಷ್ಟು ಸಂಭ್ರಮವನ್ನು ಉಂಟುಮಾಡಿದೆ. ಅದರೊಂದಿಗೆ ಹದಿಹರೆಯದ ಮುಸ್ಲಿಂ ಕ್ರಿಮಿನಲ್‌ಗಳ ಗುಂಪೊಂದು ಕೊಣಾಜೆ ಎಂಬಲ್ಲಿ ಹಿಂದೂ ಧರ್ಮಕ್ಕೆ ಸೇರಿದ ವೈದ್ಯಕೀಯ ವಿದ್ಯಾರ್ಥಿನಿ ಮತ್ತಾಕೆಯ ಮುಸ್ಲಿಂ ಸಹಪಾಠಿಯನ್ನು ಅಪಹರಿಸಿ ಅವರನ್ನು ಕೂಡಿ ಹಾಕಿ ಬಲವಂತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಮಾಡಿ ಆ ದೃಶ್ಯವನ್ನು ವಿಡಿಯೋ ರೆಕಾರ್ಡ್ ಮಾಡಿ ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿತ್ತು. ಆ ಸಂದರ್ಭದಲ್ಲಿ ನರೇಂದ್ರ ನಾಯಕ್ ಮತ್ತವರ ಪ್ರಗತಿಪರ ಬಳಗಕ್ಕೆ ವಿದ್ಯಾರ್ಥಿನಿಯ ಆಪ್ತರಿಂದ ಮಾಹಿತಿ ಸಿಕ್ಕಿದ್ದರಿಂದ ಪೊಲೀಸರು ಸಕಾಲಿಕ ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿಗಳನ್ನು ಬಂಧಮುಕ್ತಗೊಳಿಸಿ ಕ್ರಿಮಿನಲ್ ಗ್ಯಾಂಗ್ ಅನ್ನು ಬಂಧಿಸಿ ಜೈಲಿಗಟ್ಟಿದರು. ಪೊಲೀಸರ ನಿಷ್ಕೀಯತೆ, ಕಾಂಗ್ರೆಸ್ ಮಂತ್ರಿಗಳ, ಪುಡಿನಾಯಕರ ಸ್ನೇಹದಿಂದಾಗಿ ಇಲ್ಲಿನ ಭೂಗತ ಜಗತ್ತು ಇತ್ತೀಚೆಗೆ ಸ್ವಲ್ಪ ಹೆಚ್ಚೇ ಅನ್ನುವಷ್ಟು ಚಿಗಿತುಕೊಂಡಿದೆ. ದುಬಾಯ್ ಡಾನ್‌ಗಳಿಗೆ, ಅವರ ಒಂದು ಮೊಬೈಲ್ ಕರೆಗೆ ಇಲ್ಲಿನ ಉದ್ಯಮಿಗಳು ದೈವದೇವರುಗಳಿಗಿಂತಲೂ ಜಾಸ್ತಿ ಭಯ ಪಡುತ್ತಾರೆ.

ಕೊಣಾಜೆ ಘಟನೆ ನಡೆದದ್ದೇ ತಡ ಸಂಘ ಪರಿವಾರದ ಗುಂಪುಗಳು ವಿದ್ಯಾರ್ಥಿ ಜೋಡಿಗೆ ನೀಡಿದ ವಿಕೃತ ಹಿಂಸೆಯನ್ನು ಹಿಂದೂ ಧರ್ಮದ ಮೇಲಿನ ಸಂಘಟಿತ ದಾಳಿ ಎಂಬಂತೆಯೂ, ಕರಾವಳಿಯ ಇಡೀ ಬ್ಯಾರಿ ಮುಸ್ಲಿಂ ಸಮುದಾಯ ಇದಕ್ಕೆ ಹೊಣೆಯೆಂಬಂತೆಯೂ ಬೀದಿಗಿಳಿದು ಬಿಟ್ಟಿದೆ. ಇವರು ಆರ್ಭಟಕ್ಕೆ ಪೂರಕ ಎಂಬಂತೆ ಮುಸ್ಲಿಂvt-prasad-PFI-attack ನೈತಿಕ ಪೊಲೀಸರ ಸರಣಿ ದಾಳಿಗಳು ಇದೇ ಸಂದರ್ಭದಲ್ಲಿ ನಡೆದದ್ದು ಪರಿವಾರದ ಧರ್ಮರಕ್ಷಕರಿಗೆ ಆನೆಬಲ ಬಂದಂತಾಗಿದೆ. ಇಂತಹ ಸಂದರ್ಭದಲ್ಲಿ ತಕ್ಷಣ ಕ್ರಿಯಾಶೀಲ ಆಗಬೇಕಾದ ಪೊಲೀಸ್ ಇಲಾಖೆ, ಜಿಲ್ಲಾಡಳಿತ, ಮೂವರು ಮಂತ್ರಿಗಳ ನಿಧಾನ ಪ್ರತಿಕ್ರಿಯೆ ಜಿಲ್ಲೆಯ ಜನತೆಯ ಆತಂಕವನ್ನು ಹೆಚ್ಚಿಸಿದೆ. ವಿಟ್ಲ, ಗಡಿಯಾರ, ಪಳ್ನೀರ್ ಮುಂತಾದೆಡೆ ದಾಳಿಗಳನ್ನು ಸಂಘಟಿಸಿದ್ದ ಮುಸ್ಲಿಂ ಮತೀಯವಾದಿ ಗುಂಪುಗಳ ಮೇಲೆ ದೃಢವಾದ ಕ್ರಮಗಳನ್ನು ಕೈಗೊಳ್ಳದೇ ಇದ್ದುದಕ್ಕೆ ಕಾಂಗ್ರೆಸ್‌ಪಕ್ಷ ಮಾತ್ರ ಅಲ್ಲ ಜಿಲ್ಲೆಯ ಜನಸಾಮಾನ್ಯರೂ ಬೆಲೆ ತೆರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬಜರಂಗದಳ, ಹಿಂದೂ ಜಾಗರಣಾ ವೇದಿಕೆಗಳು ಪ್ರತಿಭಟನೆಯ ನೆಪದಲ್ಲಿ ಮುಸ್ಲಿಮರನ್ನು, ಜಾತ್ಯಾತೀತರನ್ನು ಹೀನಾಯವಾಗಿ ನಿಂದಿಸುತ್ತಿವೆ. ರಕ್ತಪಾತಕ್ಕೆ ಕರೆ ಕೊಡುತ್ತಿವೆ, ಹಿಂದೂ ಯುವಕರನ್ನು ಗಲಭೆಗೆ ಪ್ರಚೋದಿಸುತ್ತಿದೆ. ತಾವು ನೈತಿಕ ಪೊಲೀಸ್‌ಗಿರಿಯ ವಿರೋಧಿಗಳು ಎಂಬಂತೆ ಬಿಂಬಿಸಿಕೊಳ್ಳುವ ದೃಶ್ಯಗಳನ್ನು ಸೃಷ್ಟಿಸುತ್ತಿವೆ.

ಈ ಬಾರಿಯ ಧರ್ಮದಾಟದ ವಿಶೇಷತೆ ಏನೆಂದರೆ ಆಟದಲ್ಲಿ ಕಾಯಿ ಉರುಳಿಸುತ್ತಿರುವುದು ಮುಸ್ಲಿಂ ತೀವ್ರವಾದಿ ಗುಂಪು ಮತ್ತು ಕ್ರಿಮಿನಲ್ ಗುಂಪುಗಳು. ಹಿಂದೆಲ್ಲಾ ಇಂತಹ ಪರಿಸ್ಥಿತಿ ನಿರ್ಮಿಸಲು ಪರಿವಾರದ ಗೇಮ್ ಫ್ಲಾನರ್‌ಗಳು ಕಾಲ್ಪನಿಕ ಸುಳ್ಳಿನ ಕಂತೆಯನ್ನು ಕಟ್ಟಲು ಹರಸಾಹಸ (ಆಗೆಲ್ಲ ಜಿಲ್ಲೆಯ ಕೆಲ ಪತ್ರಿಕೆಗಳು ಅವರ ಕಥೆಗಳಿಗೆ ಜೀವತುಂಬಿದೆ)ಪಡಬೇಕಿತ್ತು. ಈಗ ಮುಸ್ಲಿಮರ ಮಧ್ಯೆ ಇಂತಹ ಘಟನೆಗಳನ್ನು ಸೃಷ್ಟಿಸಲು ಇವರ ದಯಾದಿಗಳು ರಣೋತ್ಸಾಹದಲ್ಲಿ ಮುಂದುವರಿಯುತ್ತಿರುವುದರಿಂದ ಅಷ್ಟರ ಮಟ್ಟಿಗೆ ಸಂಘ ಪರಿವಾರ ನಿರಾಳ.

ಮುಸ್ಲಿಂ ಮತೀಯವಾದಿಗಳು ಮತ್ತು ಹಿಂದುತ್ವವಾದಿಗಳು ಪರಸ್ಪರ ಹೊಂದಾಣಿಕೆಯಿಂದಲೇ (ಕಳೆದ ಚುನಾವಣೆಯ ಸಂದರ್ಭದಲ್ಲಿ ಇಂತಹ ಆರೋಪಿಗಳು ಸಕಾರಣವಾಗಿಯೇ ಕೇಳಿ ಬಂದಿದ್ದವು) ಇಂತಹ ಪರಿಸ್ಥಿತಿಯನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ. ಇದು ನಿಜವಾಗಿದ್ದರೆ ಆಶ್ಚರ್ಯಪಡುವಂತಹದ್ದು ಏನೂ ಇಲ್ಲ. ಆದರೆ ಎರಡೂ ಕಡೆಯ ಕೋಮುಶಕ್ತಿಗಳು ಕೈ ಹಾಕುತ್ತಿರುವುದು ತಮ್ಮ ಮತ ಬುಟ್ಟಿಗೆ ಎಂಬ ಅರಿವಿನಿಂದಲಾದರೂ ಮತೀಯವಾದಿಗಳ, ಅವರಿಗೆ ಪೂರಕವಾಗಿ ವರ್ತಿಸುತ್ತಿರುವ ಕ್ರಿಮಿನಲ್‌ಗಳನ್ನು ಮಟ್ಟಹಾಕದೆ ನಿರ್ಲಿಪ್ತರಾಗಿ ವರ್ತಿಸುತ್ತಿರುವ ತ್ರಿಮೂರ್ತಿ ಮಂತ್ರಿಗಳಾದ ರೈ, ಖಾದರ್, ಜೈನ್‌ಗಳ ವರ್ತನೆಯ ಬಗ್ಗೆ ಏನನ್ನೋಣ…

ಫರೂಕ್ ಶೇಖ್ – ತೀರಿಕೊಂಡ ಪಕ್ಕದಮನೆ ಹುಡುಗ

–  ಬಿ.ಶ್ರೀಪಾದ ಭಟ್

ಹಿಂದಿ ಚಿತ್ರ ನಟ ಫರೂಕ್ ಶೇಖ್ ಹೃಧಯಾಘಾತದಿಂದ ದುಬೈನಲ್ಲಿ ತೀರಿಕೊಂಡಿದ್ದಾನೆ. ಮೊನ್ನೆ ತಾನೆ ಕೋಮು ಸಾಮರಸ್ಯದ ಅಗತ್ಯತೆಯ ಕುರಿತಾಗಿ ಅತ್ಯಂತ ಕಳಕಳಿಯಿಂದ ಮಾತನಾಡಿದ ಫರೂಕ್ ಶೇಖ್ ಎಲ್ಲಾ ಧರ್ಮಗಳ ಮೂಲಭೂತವಾದವನ್ನು ಖಂಡಿಸಿದ್ದ. ಸೋ ಕಾಲ್ಡ್ ಬಾಲಿವುಡ್‌ನ ಮೆಗಾಸ್ಟಾರ್‌ಗಳು, ಬಿಗ್‌ಬಿಗಳು ಎಲ್ಲ ಬಗೆಯ ಧಾರ್ಮಿಕ ಮೂಲಭೂತವಾದವನ್ನು ಸಾರ್ವಜನಿಕವಾಗಿ ಖಂಡಿಸಲು ಹಿಂಜರಿಯುತ್ತಿದ್ದರೆ, ಸೋಗಲಾಡಿತನದಿಂದ ತಲೆತಪ್ಪಿಸಿಕೊಳ್ಳುತ್ತಿದ್ದರೆ, ಫರೂಕ್ ಶೇಖ್ ನೇರವಾಗಿ ಮುಸ್ಲಿಂ ಮೂಲಭೂತವಾದಿಗಳ ಧರ್ಮಾಂದತೆಯನ್ನು ಖಂಡಿಸಿದ್ದ. 2002ರ ಗುಜರಾತ್‌ನ ಹತ್ಯಾಕಾಂಡವನ್ನು ವಿರೋಧಿಸಿ ಫ್ಯಾಸಿಸಂನ ಅಪಾಯಗಳ ಕುರಿತು ಮಾರ್ಮಿಕವಾಗಿ ಮಾತನಾಡಿದ್ದ. farooq-sheikh“ಸರ್ಕಾರಗಳು ಉಪವಾಸ ಮುಷ್ಕರಗಳನ್ನು ನಡೆಸುತ್ತ ಸಾಯುವವರೆಗೂ ಹೋರಾಡುತ್ತೇವೆ ಅಥವಾ ಬಂದೂಕು ಹಿಡಿದು ಹಿಂಸಾತ್ಮಕ ಹೋರಾಟದ ಮೂಲಕ ಬದಲಾವಣೆ ತರುತ್ತೇವೆ ಎನ್ನುವ ವಿಭಿನ್ನ ದೃವಗಳ ಗುಂಪಿಗೆ ತಲೆಬಾಗುತ್ತದೆ ಆದರೆ moderate ಜನರಿಗೆ ಜಾಗವೆಲ್ಲಿ?” ಎಂದು ನೋವಿನಿಂದ ಪ್ರಶ್ನಿಸಿದ್ದ ಫರೂಕ್ ಶೇಖ್ ನಟನಾಗಿಯೂ ಇದೇ ರೀತಿ. ಎಪ್ಪತ್ತರ ಮತ್ತು ಎಂಬತ್ತರ ದಶಕಗಳಲ್ಲಿ ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್‌ಗಳು, ಆಂಗ್ರಿ ಯಂಗ್ ಮ್ಯಾನ್‌ಗಳು ದೇಶಾದ್ಯಾಂತ ಸೂಪರ್ ಮ್ಯಾನ್‌ಗಳಾಗಿ, ಕೈಗೆಟುಕದ ತಾರೆಗಳಾಗಿ ಅಬ್ಬರಿಸುತ್ತಿದ್ದರೆ ನಮ್ಮ ಫರೂಕ್ ಶೇಖ್ ಆ ದೇಶದೊಳಗಿನ ಸಾಮಾನ್ಯ ಜನರ ಪಾತ್ರವಾಗಿ ಈ ನೆಲದೊಳಗೆ ಬೇರು ಬಿಟ್ಟು ತಣ್ಣಗೆ ನಟಿಸುತ್ತಿದ್ದ. ಅಮೊಲ್ ಪಾಲೇಕರ್‌ನೊಂದಿಗೆ ಸೇರಿ ಜನಸಾಮಾನ್ಯರಿಗೆ ಐಡೆಂಟಿಟಿ ತಂದುಕೊಟ್ಟಿದ್ದ. ಆತನ Underplay ಶೈಲಿಯ ನಟನೆ ಜನಸಾಮಾನ್ಯ ಪ್ರೇಕ್ಷಕರನ್ನು ಗೆದ್ದಿತ್ತು. ಪ್ರೇಮವನ್ನು ನಿವೇದಿಸಲು ಮರ ಸುತ್ತಬೇಕಾಗಿಲ್ಲ, ಕುಣಿಯಬೇಕಿಲ್ಲ, ವ್ಯವಸ್ತೆಯೊಂದಿಗೆ ಹೋರಾಡಬೇಕಿಲ್ಲ, ಸುಂದರಾಂಗನಾಗಬೇಕಿಲ್ಲ, ಬದಲಾಗಿ ನನ್ನ ಹಾಗೆ ಖುಜುತ್ವದಿಂದ Underplay ಗುಣದಿಂದ, ತೊದಲು ನುಡಿಯಿಂದ ಗೆಳತಿಯ ಅಪ್ತ ಮತ್ತು ಮನದಾಳದ ಪ್ರೇಮಿಯಾಗಬಹುದು ಎಂದು ತೋರಿಸಿಕೊಟ್ಟಿದ್ದು ಫರೂಕ್ ಶೇಖ್. ರಾಜೇಶ್ ಖನ್ನಾನಿಗೆ ರಕ್ತದಲ್ಲಿ ಪ್ರೇಮ ಪತ್ರವನ್ನು ಬರೆಯುವಂತ ಹುಡುಗಿಯರ ಆರಾಧ್ಯ ದೈವವಾಗಿರಲಿಲ್ಲ ಫರೂಕ್ ಶೇಖ್. ಆದರೆ ನನಗೂ ಇಂತಹ ಜೊತೆಗಾರ ಸಿಕ್ಕರೆ ಎಷ್ಟು ಚೆನ್ನ ಎಂದು ಯುವತಿಯರು ಮನದಲ್ಲಿ ಹುಡುಕಾಟ ನಡೆಸುವಂತಹ ಅಪ್ತತೆಯನ್ನು ತಂದು ಕೊಟ್ಟದ್ದು ಫರೂಕ್ ಶೇಖ್‌ನ ಯಶಸ್ಸು.

“ಗರಂ ಹವಾ” ಚಿತ್ರದಲ್ಲಿ ಬಲರಾಜ್ ಸಾಹ್ನಿಯ ಮಗನಾಗಿ ಸಿಕಂದರ್ ಮಿರ್ಜಾ ಪಾತ್ರದಲ್ಲಿ ಮನಸೆಳೆಯುವಂತೆ ನಟಿಸಿದ್ದ ಫರೂಕ್ ಶೇಖ್ ಮುಸ್ಲಿಂರ ತಲ್ಲಣಗಳನ್ನು ಮನೋಜ್ಞವಾಗಿ ವ್ಯಕ್ತಪಡಿಸಿ ಮನದಲ್ಲಿ ನೋವು ಮೂಡಿಸಿದ್ದ. “ಗಮನ್” ಚಿತ್ರದಲ್ಲಿ ಹೊಟ್ಟೆಪಾಡಿಗಾಗಿ ಹಳ್ಳಿಯಿಂದ ನಗರಕ್ಕೆ ಗುಳೇ ಬರುವ ಯುವಕನ ಪಾತ್ರದಲ್ಲಿ ಆತನ Underplay ಶೈಲಿಯ ನಟನೆಯನ್ನು ಮರೆಯಲಿಕ್ಕೆ ಸಾಧ್ಯವೇ ಇಲ್ಲ. ನಗರದ ದೌರ್ಜ್ಯನ್ಯಕ್ಕೆ,ಕ್ರೂರತೆಗೆ ಗೋಳಾಡಿ,ನರಳಾಡಿ ನಟಿಸುವ ಅವಶ್ಯಕತೆ ಇಲ್ಲ, ನನ್ನಂತೆ ಪಾತ್ರದೊಳಗೆ ಸೇರಿಕೊಂಡು Underplay ಶೈಲಿಯ ನಟನೆ ಎಲ್ಲವನ್ನೂ ಹೇಳಿಬಿಡುತ್ತದೆ ಎಂದು ಹೇಳುವಂತೆ ನಟಿಸಿದ್ದ ಫರೂಕ್ ಶೇಖ್. ಅಲ್ಲಿ ಅವನು ನಮ್ಮಲ್ಲಿ ಮೂಡಿಸಿದ್ದು ವಿಷಾದದ ಛಾಯೆ. ಇದು ಸ್ಮಿತಾ ಪಾಟೀಲ್ ಶೈಲಿ. ಸತ್ಯಜಿತ್ ರಾಯ್ ಅವರ “ಶತರಂಜ್‌ಕೆ ಖಿಲಾಡಿ”ಯಲ್ಲಿ ಅಕೀಲ್ ನ ಪಾತ್ರದಲ್ಲಿ ನಟಿಸಿದ್ದ.

“ನೂರಿ” ಚಿತ್ರದಲ್ಲಿ ಪೂನಂ ಧಿಲ್ಲೋನ್‌ಳೊಂದಿಗೆ ಯುವ ಪ್ರೇಮಿಯಾಗಿ ನಟಿಸಿದ್ದ ಫರೂಕ್ ಶೇಖ್ ಆ ಸಿನಿಮಾದ ಯಶಸ್ಸಿನಿಂದ ಬಾಲಿವುಡ್‌ನ ಗಲಭೆಯಲ್ಲಿ ಕಳೆದು ಹೋಗುವ ಅಪಾಯದಿಂದ ಸ್ವತಃ ತನ್ನ ವಿವೇಚನೆಯಿಂದ, ಕಾಮನ್‌ಸೆನ್ಸ್‌ನಿಂದ ಪಾರಾಗಿದ್ದ. ಆಗ ಈತನಿಗೆ ಸಾಥ್ ನೀಡಿದ್ದು ನಟಿ ದೀಪ್ತಿ ನಾವೆಲ್. ಇವರಿಬ್ಬರು ನಟಿಸಿದ “ಚಸ್ಮೆ ಬದ್ದೂರ್”,”ಸಾಥ್ ಸಾಥ್”,ಕಥಾ”,”ರಂಗ್ ಬಿರಂಗಿ”,”ಬಾಜಾರ್” ನಂತಹ ಸಿನಿಮಾಗಳು ಹೊಸ ಬಗೆಯ ಅಹ್ಲಾದವನ್ನು, ಹಾಯ್ ಎನ್ನಿಸುವಂತಹ ಸಮಾಧಾನವನ್ನು, ಅರೇ ಅಲ್ಲಿರುವವರು ನಾವಲ್ಲವೇ ಎನ್ನುವಂತಹ ಐಡೆಂಟಿಟಿಯನ್ನು ತಂದುಕೊಟ್ಟವು. ಫರೂಕ್ ಶೇಖ್ ಇದನ್ನೆಲ್ಲಾ ಸಾಧಿಸಿದ್ದು ಮುಗ್ಧತೆಯಿಂದ,ನೆಲದೊಳಗೆ ಬೇರು ಬಿಟ್ಟು ಆಕಾಶದ ನಕ್ಷತ್ರಕ್ಕೆ ಕೈಚಾಚದೆ ಹಾಗೆ ಸುಮ್ಮನೆ ಎನ್ನುವ ಗುಣದಿಂದ.

ಲಾ ಅನ್ನು ಓದಿಕೊಂಡಿದ್ದ ಫರೂಕ್ ಶೇಖ್ ನಾಟಕದೆಡೆಗೆ ಆಕರ್ಷಿತನಾಗಿ ತಾರುಣ್ಯದಲ್ಲಿ ಇಪ್ಟಾ ತಂಡದೊಂದಿಗೆ ಗುರುತಿಸಿಕೊಂಡಿದ್ದ. ಗರಂ ಹವಾ ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ. ನಾಟಕದ ದಿನಗಳ ಸಹನಟಿ ರೂಪ ಅವರನ್ನು ಪ್ರೇಮಿಸಿ ಮದುವೆ ಆದ. 2010 ರಲ್ಲಿ “ಲಾಹೋರ್” ಸಿನಿಮಾದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ಅವಾರ್ಡ ಪಡೆದಿದ್ದ.

ದೀಪ್ತಿ ನಾವೆಲ್, ಫರೂಕ್ ಶೇಖ್, ಸ್ಮಿತಾ ಪಟೇಲ್, ಶಬನಾ ಅಜ್ಮಿ, ನಾಸಿರುದ್ದೀನ್ ಶಾ, ಓಂಪುರಿ ಇವರ ಕಾಲ ನಿಜಕ್ಕೂ ಹಿಂದಿ ಚಿತ್ರರಂಗದ ಗೋಲ್ಡನ್ ಯುಗ. ಏಕೆಂದರೆ ಇವರು ತಮ್ಮದೇ ರೀತಿಯಲ್ಲಿ ಒಂದು ತಲೆಮಾರನ್ನು ರೂಪಿಸಿದರು. ಅದು ನಮ್ಮ ತಲೆಮಾರು. ಏನಾದರೂ ಆಗದಿದ್ದರೂ ಪರವಾಗಿಲ್ಲ, ಸ್ವಂತಿಕೆಯನ್ನು ಬಿಟ್ಟುಕೊಟ್ಟು ಕಳೆದು ಹೋಗಬೇಡ ಎಂದು ಹೇಳಿಕೊಟ್ಟ ಇವರಿಗೆ ನಾವೆಲ್ಲ  “ಥ್ಯಾಂಕ್ಸ್ ಸರ್,ಥ್ಯಾಂಕ್ಸ್ ಮೇಡಂ” ಎಂದು ಹೇಳುತ್ತೇವೆ.