ಫರೂಕ್ ಶೇಖ್ – ತೀರಿಕೊಂಡ ಪಕ್ಕದಮನೆ ಹುಡುಗ

–  ಬಿ.ಶ್ರೀಪಾದ ಭಟ್

ಹಿಂದಿ ಚಿತ್ರ ನಟ ಫರೂಕ್ ಶೇಖ್ ಹೃಧಯಾಘಾತದಿಂದ ದುಬೈನಲ್ಲಿ ತೀರಿಕೊಂಡಿದ್ದಾನೆ. ಮೊನ್ನೆ ತಾನೆ ಕೋಮು ಸಾಮರಸ್ಯದ ಅಗತ್ಯತೆಯ ಕುರಿತಾಗಿ ಅತ್ಯಂತ ಕಳಕಳಿಯಿಂದ ಮಾತನಾಡಿದ ಫರೂಕ್ ಶೇಖ್ ಎಲ್ಲಾ ಧರ್ಮಗಳ ಮೂಲಭೂತವಾದವನ್ನು ಖಂಡಿಸಿದ್ದ. ಸೋ ಕಾಲ್ಡ್ ಬಾಲಿವುಡ್‌ನ ಮೆಗಾಸ್ಟಾರ್‌ಗಳು, ಬಿಗ್‌ಬಿಗಳು ಎಲ್ಲ ಬಗೆಯ ಧಾರ್ಮಿಕ ಮೂಲಭೂತವಾದವನ್ನು ಸಾರ್ವಜನಿಕವಾಗಿ ಖಂಡಿಸಲು ಹಿಂಜರಿಯುತ್ತಿದ್ದರೆ, ಸೋಗಲಾಡಿತನದಿಂದ ತಲೆತಪ್ಪಿಸಿಕೊಳ್ಳುತ್ತಿದ್ದರೆ, ಫರೂಕ್ ಶೇಖ್ ನೇರವಾಗಿ ಮುಸ್ಲಿಂ ಮೂಲಭೂತವಾದಿಗಳ ಧರ್ಮಾಂದತೆಯನ್ನು ಖಂಡಿಸಿದ್ದ. 2002ರ ಗುಜರಾತ್‌ನ ಹತ್ಯಾಕಾಂಡವನ್ನು ವಿರೋಧಿಸಿ ಫ್ಯಾಸಿಸಂನ ಅಪಾಯಗಳ ಕುರಿತು ಮಾರ್ಮಿಕವಾಗಿ ಮಾತನಾಡಿದ್ದ. farooq-sheikh“ಸರ್ಕಾರಗಳು ಉಪವಾಸ ಮುಷ್ಕರಗಳನ್ನು ನಡೆಸುತ್ತ ಸಾಯುವವರೆಗೂ ಹೋರಾಡುತ್ತೇವೆ ಅಥವಾ ಬಂದೂಕು ಹಿಡಿದು ಹಿಂಸಾತ್ಮಕ ಹೋರಾಟದ ಮೂಲಕ ಬದಲಾವಣೆ ತರುತ್ತೇವೆ ಎನ್ನುವ ವಿಭಿನ್ನ ದೃವಗಳ ಗುಂಪಿಗೆ ತಲೆಬಾಗುತ್ತದೆ ಆದರೆ moderate ಜನರಿಗೆ ಜಾಗವೆಲ್ಲಿ?” ಎಂದು ನೋವಿನಿಂದ ಪ್ರಶ್ನಿಸಿದ್ದ ಫರೂಕ್ ಶೇಖ್ ನಟನಾಗಿಯೂ ಇದೇ ರೀತಿ. ಎಪ್ಪತ್ತರ ಮತ್ತು ಎಂಬತ್ತರ ದಶಕಗಳಲ್ಲಿ ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್‌ಗಳು, ಆಂಗ್ರಿ ಯಂಗ್ ಮ್ಯಾನ್‌ಗಳು ದೇಶಾದ್ಯಾಂತ ಸೂಪರ್ ಮ್ಯಾನ್‌ಗಳಾಗಿ, ಕೈಗೆಟುಕದ ತಾರೆಗಳಾಗಿ ಅಬ್ಬರಿಸುತ್ತಿದ್ದರೆ ನಮ್ಮ ಫರೂಕ್ ಶೇಖ್ ಆ ದೇಶದೊಳಗಿನ ಸಾಮಾನ್ಯ ಜನರ ಪಾತ್ರವಾಗಿ ಈ ನೆಲದೊಳಗೆ ಬೇರು ಬಿಟ್ಟು ತಣ್ಣಗೆ ನಟಿಸುತ್ತಿದ್ದ. ಅಮೊಲ್ ಪಾಲೇಕರ್‌ನೊಂದಿಗೆ ಸೇರಿ ಜನಸಾಮಾನ್ಯರಿಗೆ ಐಡೆಂಟಿಟಿ ತಂದುಕೊಟ್ಟಿದ್ದ. ಆತನ Underplay ಶೈಲಿಯ ನಟನೆ ಜನಸಾಮಾನ್ಯ ಪ್ರೇಕ್ಷಕರನ್ನು ಗೆದ್ದಿತ್ತು. ಪ್ರೇಮವನ್ನು ನಿವೇದಿಸಲು ಮರ ಸುತ್ತಬೇಕಾಗಿಲ್ಲ, ಕುಣಿಯಬೇಕಿಲ್ಲ, ವ್ಯವಸ್ತೆಯೊಂದಿಗೆ ಹೋರಾಡಬೇಕಿಲ್ಲ, ಸುಂದರಾಂಗನಾಗಬೇಕಿಲ್ಲ, ಬದಲಾಗಿ ನನ್ನ ಹಾಗೆ ಖುಜುತ್ವದಿಂದ Underplay ಗುಣದಿಂದ, ತೊದಲು ನುಡಿಯಿಂದ ಗೆಳತಿಯ ಅಪ್ತ ಮತ್ತು ಮನದಾಳದ ಪ್ರೇಮಿಯಾಗಬಹುದು ಎಂದು ತೋರಿಸಿಕೊಟ್ಟಿದ್ದು ಫರೂಕ್ ಶೇಖ್. ರಾಜೇಶ್ ಖನ್ನಾನಿಗೆ ರಕ್ತದಲ್ಲಿ ಪ್ರೇಮ ಪತ್ರವನ್ನು ಬರೆಯುವಂತ ಹುಡುಗಿಯರ ಆರಾಧ್ಯ ದೈವವಾಗಿರಲಿಲ್ಲ ಫರೂಕ್ ಶೇಖ್. ಆದರೆ ನನಗೂ ಇಂತಹ ಜೊತೆಗಾರ ಸಿಕ್ಕರೆ ಎಷ್ಟು ಚೆನ್ನ ಎಂದು ಯುವತಿಯರು ಮನದಲ್ಲಿ ಹುಡುಕಾಟ ನಡೆಸುವಂತಹ ಅಪ್ತತೆಯನ್ನು ತಂದು ಕೊಟ್ಟದ್ದು ಫರೂಕ್ ಶೇಖ್‌ನ ಯಶಸ್ಸು.

“ಗರಂ ಹವಾ” ಚಿತ್ರದಲ್ಲಿ ಬಲರಾಜ್ ಸಾಹ್ನಿಯ ಮಗನಾಗಿ ಸಿಕಂದರ್ ಮಿರ್ಜಾ ಪಾತ್ರದಲ್ಲಿ ಮನಸೆಳೆಯುವಂತೆ ನಟಿಸಿದ್ದ ಫರೂಕ್ ಶೇಖ್ ಮುಸ್ಲಿಂರ ತಲ್ಲಣಗಳನ್ನು ಮನೋಜ್ಞವಾಗಿ ವ್ಯಕ್ತಪಡಿಸಿ ಮನದಲ್ಲಿ ನೋವು ಮೂಡಿಸಿದ್ದ. “ಗಮನ್” ಚಿತ್ರದಲ್ಲಿ ಹೊಟ್ಟೆಪಾಡಿಗಾಗಿ ಹಳ್ಳಿಯಿಂದ ನಗರಕ್ಕೆ ಗುಳೇ ಬರುವ ಯುವಕನ ಪಾತ್ರದಲ್ಲಿ ಆತನ Underplay ಶೈಲಿಯ ನಟನೆಯನ್ನು ಮರೆಯಲಿಕ್ಕೆ ಸಾಧ್ಯವೇ ಇಲ್ಲ. ನಗರದ ದೌರ್ಜ್ಯನ್ಯಕ್ಕೆ,ಕ್ರೂರತೆಗೆ ಗೋಳಾಡಿ,ನರಳಾಡಿ ನಟಿಸುವ ಅವಶ್ಯಕತೆ ಇಲ್ಲ, ನನ್ನಂತೆ ಪಾತ್ರದೊಳಗೆ ಸೇರಿಕೊಂಡು Underplay ಶೈಲಿಯ ನಟನೆ ಎಲ್ಲವನ್ನೂ ಹೇಳಿಬಿಡುತ್ತದೆ ಎಂದು ಹೇಳುವಂತೆ ನಟಿಸಿದ್ದ ಫರೂಕ್ ಶೇಖ್. ಅಲ್ಲಿ ಅವನು ನಮ್ಮಲ್ಲಿ ಮೂಡಿಸಿದ್ದು ವಿಷಾದದ ಛಾಯೆ. ಇದು ಸ್ಮಿತಾ ಪಾಟೀಲ್ ಶೈಲಿ. ಸತ್ಯಜಿತ್ ರಾಯ್ ಅವರ “ಶತರಂಜ್‌ಕೆ ಖಿಲಾಡಿ”ಯಲ್ಲಿ ಅಕೀಲ್ ನ ಪಾತ್ರದಲ್ಲಿ ನಟಿಸಿದ್ದ.

“ನೂರಿ” ಚಿತ್ರದಲ್ಲಿ ಪೂನಂ ಧಿಲ್ಲೋನ್‌ಳೊಂದಿಗೆ ಯುವ ಪ್ರೇಮಿಯಾಗಿ ನಟಿಸಿದ್ದ ಫರೂಕ್ ಶೇಖ್ ಆ ಸಿನಿಮಾದ ಯಶಸ್ಸಿನಿಂದ ಬಾಲಿವುಡ್‌ನ ಗಲಭೆಯಲ್ಲಿ ಕಳೆದು ಹೋಗುವ ಅಪಾಯದಿಂದ ಸ್ವತಃ ತನ್ನ ವಿವೇಚನೆಯಿಂದ, ಕಾಮನ್‌ಸೆನ್ಸ್‌ನಿಂದ ಪಾರಾಗಿದ್ದ. ಆಗ ಈತನಿಗೆ ಸಾಥ್ ನೀಡಿದ್ದು ನಟಿ ದೀಪ್ತಿ ನಾವೆಲ್. ಇವರಿಬ್ಬರು ನಟಿಸಿದ “ಚಸ್ಮೆ ಬದ್ದೂರ್”,”ಸಾಥ್ ಸಾಥ್”,ಕಥಾ”,”ರಂಗ್ ಬಿರಂಗಿ”,”ಬಾಜಾರ್” ನಂತಹ ಸಿನಿಮಾಗಳು ಹೊಸ ಬಗೆಯ ಅಹ್ಲಾದವನ್ನು, ಹಾಯ್ ಎನ್ನಿಸುವಂತಹ ಸಮಾಧಾನವನ್ನು, ಅರೇ ಅಲ್ಲಿರುವವರು ನಾವಲ್ಲವೇ ಎನ್ನುವಂತಹ ಐಡೆಂಟಿಟಿಯನ್ನು ತಂದುಕೊಟ್ಟವು. ಫರೂಕ್ ಶೇಖ್ ಇದನ್ನೆಲ್ಲಾ ಸಾಧಿಸಿದ್ದು ಮುಗ್ಧತೆಯಿಂದ,ನೆಲದೊಳಗೆ ಬೇರು ಬಿಟ್ಟು ಆಕಾಶದ ನಕ್ಷತ್ರಕ್ಕೆ ಕೈಚಾಚದೆ ಹಾಗೆ ಸುಮ್ಮನೆ ಎನ್ನುವ ಗುಣದಿಂದ.

ಲಾ ಅನ್ನು ಓದಿಕೊಂಡಿದ್ದ ಫರೂಕ್ ಶೇಖ್ ನಾಟಕದೆಡೆಗೆ ಆಕರ್ಷಿತನಾಗಿ ತಾರುಣ್ಯದಲ್ಲಿ ಇಪ್ಟಾ ತಂಡದೊಂದಿಗೆ ಗುರುತಿಸಿಕೊಂಡಿದ್ದ. ಗರಂ ಹವಾ ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ. ನಾಟಕದ ದಿನಗಳ ಸಹನಟಿ ರೂಪ ಅವರನ್ನು ಪ್ರೇಮಿಸಿ ಮದುವೆ ಆದ. 2010 ರಲ್ಲಿ “ಲಾಹೋರ್” ಸಿನಿಮಾದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ಅವಾರ್ಡ ಪಡೆದಿದ್ದ.

ದೀಪ್ತಿ ನಾವೆಲ್, ಫರೂಕ್ ಶೇಖ್, ಸ್ಮಿತಾ ಪಟೇಲ್, ಶಬನಾ ಅಜ್ಮಿ, ನಾಸಿರುದ್ದೀನ್ ಶಾ, ಓಂಪುರಿ ಇವರ ಕಾಲ ನಿಜಕ್ಕೂ ಹಿಂದಿ ಚಿತ್ರರಂಗದ ಗೋಲ್ಡನ್ ಯುಗ. ಏಕೆಂದರೆ ಇವರು ತಮ್ಮದೇ ರೀತಿಯಲ್ಲಿ ಒಂದು ತಲೆಮಾರನ್ನು ರೂಪಿಸಿದರು. ಅದು ನಮ್ಮ ತಲೆಮಾರು. ಏನಾದರೂ ಆಗದಿದ್ದರೂ ಪರವಾಗಿಲ್ಲ, ಸ್ವಂತಿಕೆಯನ್ನು ಬಿಟ್ಟುಕೊಟ್ಟು ಕಳೆದು ಹೋಗಬೇಡ ಎಂದು ಹೇಳಿಕೊಟ್ಟ ಇವರಿಗೆ ನಾವೆಲ್ಲ  “ಥ್ಯಾಂಕ್ಸ್ ಸರ್,ಥ್ಯಾಂಕ್ಸ್ ಮೇಡಂ” ಎಂದು ಹೇಳುತ್ತೇವೆ.

2 thoughts on “ಫರೂಕ್ ಶೇಖ್ – ತೀರಿಕೊಂಡ ಪಕ್ಕದಮನೆ ಹುಡುಗ

  1. Naveen

    ಶ್ರೀಪಾದ್ ಭಟ್ಟರು ತಾವೇ ಬರೆದ ಈ ಬರಹವನ್ನು ಎರಡು ಸಾರಿ ಓದಬೇಕಾಗಿ ವಿನಂತಿ…

    Reply

Leave a Reply to Anonymous Cancel reply

Your email address will not be published.