ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಮಂಗಳೂರಿನಲ್ಲಿ ಮತೀಯ ರಕ್ಕಸರ ರಾಜಕೀಯ ಚದುರಂಗದಾಟ


– ಮುನೀರ್ ಕಾಟಿಪಳ್ಳ


 

ಕರಾವಳಿ ಜಿಲ್ಲೆ ಮಂಗಳೂರಿನಲ್ಲಿ ಮತ್ತೆ ಮತೀಯ ರಕ್ಕಸರ ರಾಜಕೀಯ ಚದುರಂಗದಾಟ ಶುರುವಾಗಿದೆ. ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಇಂತಹ ಬೆಳವಣಿಗೆ ನಿರೀಕ್ಷಿತವೇ ಆಗಿದ್ದರೂ ಏಕಾಏಕಿ ಮತೀಯ ಶಕ್ತಿಗಳು ಮೇಲುಗೈ ಸಾಧಿಸಿರುವುದು. ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರ ಈ ನಿಟ್ಟಿನಲ್ಲಿ ಯಾವುದೇ ಗಂಭೀರ ಕ್ರಮಕೈಗೊಳ್ಳದೆ ಎದುರಾಳಿಗಳಿಗೆ ಆಟ ಬಿಟ್ಟು ಕೊಟ್ಟಿರುವುದು ಅನಿರೀಕ್ಷಿತ. ವಿಧಾನ ಸಭಾ ಚುನಾವಣೆಯ ಸೋಲಿನಿಂದ ಕಂಗೆಟ್ಟಿದ್ದ ಬಿಜೆಪಿ ಪರಿವಾರ ಇಂತಹದ್ದೊಂದು ಆಟಕ್ಕೆ ಸ್ಕೆಚ್ ಹಾಕಿ ಸಮಯ ಕಾಯುತ್ತಾ ಕೂತದ್ದು ಅವರ ನಡೆಗಳನ್ನು ಬಲ್ಲ ಎಲ್ಲರಿಗೂ ಗೊತ್ತಿರುವಂತದ್ದೆ. ಆದರೆ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಹುಟ್ಟಿಕೊಂಡ ಹೋರಾಟ ಇಲ್ಲಿನ ಕೋಮುಶಕ್ತಿಗಳ ಆಶ್ರಯದಾತರಾಗಿರುವ ಆಗೋಚರ ಸರಕಾರಗಳ ವಿರುದ್ಧದ ಜನ ಚಳುವಳಿಯಾಗಿ ಪರಿವರ್ತನೆಗೊಂಡಿದ್ದು, ಜನ ಚಳುವಳಿಗಳು ಜನಸಾಮಾನ್ಯರ ಮಧ್ಯೆ ಸಕ್ರಿಯಗೊಂಡಿದ್ದು, ನುಡಿಸಿರಿ, ಜನನುಡಿ alva-nudisiri-baraguru-bhairappaಕಾರ್ಯಕ್ರಮಗಳು ಹುಟ್ಟು ಹಾಕಿದ ವೈಚಾರಿಕ ಸಂಘರ್ಷಗಳ ಮಧ್ಯೆ ಏಕಾಏಕಿ ಮತೀಯ ಶಕ್ತಿಗಳಿಗೆ ಪ್ರಬಲವಾಗಿ ಎದ್ದು ನಿಲ್ಲಲು ಸಾಧ್ಯವಾದುದರ ಹಿಂದೆ ಆಳವಾದ ಪಿತೂರಿಯ ವಾಸನೆ ಬಡಿಯುತ್ತದೆ.

ಕರಾವಳಿಯ ಜಿಲ್ಲೆಗಳಲ್ಲಿ ನೈತಿಕ ಪೊಲೀಸ್‌ಗಿರಿ, ಭೂಗತ ಜಗತ್ತು, ಕ್ರಿಮಿನಲ್ ಚಟುವಟಿಕೆ, ಮತೀಯ ಹಿಂಸೆ ಹೊಸದಲ್ಲ. ಕಳೆದ ಒಂದು ದಶಕದಲ್ಲಿ ಇಲ್ಲಿನ ಜನತೆ ಈ ಕೂಟಗಳ ಅಪವಿತ್ರ ಮೈತ್ರಿಯಿಂದ ಹೈರಾಣಗೊಂಡಿರುವುದರಿಂದ ಪಕ್ಕನೆ ಇವರು ಹಣೆದ ಬಲೆಗೆ ಬೀಳಲಾರರು ಎಂಬ ನಿರೀಕ್ಷೆ ಜಾತ್ಯಾತೀತರದ್ದು. ಕಾಂಗ್ರೆಸ್ ಸರಕಾರವು ಹಳೆಯ ನೆನಪುಗಳಿಂದ ಪಾಠ ಕಲಿತು ಇಂತಹ ಶಕ್ತಿಗಳ ಬಗ್ಗೆ ನಿರ್ದಾಕ್ಷಿಣ್ಯವಾಗಿ ವರ್ತಿಸುತ್ತದೆ ಎಂಬ ನಿರೀಕ್ಷೆಯು ಸಹಜ.

ಆದರೆ ಈಗ ನಡೆದಿರುವ ಬೆಳವಣಿಗೆಗಳು ಆತಂಕ ಉಂಟುಮಾಡುವಂತಿದೆ. ಹಿಂದುತ್ವವಾದಿ ಶಕ್ತಿಗಳಿಗೆ ಪರ್‍ಯಾಯ ಎಂಬಂತೆ ಬಿಂಬಿಸಿಕೊಂಡು ಮುಸ್ಲಿಮರ ಮಧ್ಯೆ ನೆಲೆ ಕಂಡುಕೊಂಡಿರುವ ಮತ ತೀವ್ರವಾದಿ ಶಕ್ತಿಗಳು ಈ ಬಾರಿಯ ಆಟದಲ್ಲಿ ನಿರ್ವಹಿಸುತ್ತಿರುವ ಪಾತ್ರ ಸಂಘ ಪರಿವಾರದ ಕೆಲಸವನ್ನು ಸುಲಭಗೊಳಿಸಿದೆ. ಅದರ ಜೊತೆಯಲ್ಲಿ ಮುಸ್ಲಿಂ ಭೂಗತ ಜಗತ್ತಿಗೆ ಎಂಟ್ರಿ ಕೊಟ್ಟಿರುವ ಹೊಸ ತಲೆಮಾರಿನ ಕ್ರಿಮಿನಲ್ ಹುಡುಗರ ಅಮಾನವೀಯ ವಿಕೃತ ಕೃತ್ಯಗಳು ಪರಿವಾರದ ರೊಟ್ಟಿಯನ್ನು ಅನಾಯಾಸವಾಗಿ ತುಪ್ಪಕ್ಕೆ ಜಾರಿಸಿದೆ.

ವಿಟ್ಲದಲ್ಲಿ ಕರಾವಳಿ ಅಲೆ ಪತ್ರಿಕೆಯ ವರದಿಗಾರ ವಿ.ಟಿ. ಪ್ರಸಾದ್‌ಗೆ ಪಿಎಫ್‌ಐ ಕಾರ್ಯಕರ್ತರು ಎನ್ನಲಾದ ಗುಂಪು ಮುಸ್ಲಿಂ ಮಹಿಳೆಗೆ ಸಹಾಯ ಮಾಡಿದ ಕಾರಣಕ್ಕೆ ಮಾಡಿದ ಬರ್ಬರ ಹಲ್ಲೆ, ಬಂಟ್ವಾಳದ ಗಡಿಯಾರ ಎಂಬಲ್ಲಿ ಮುಸ್ಲಿಂ ಮಹಿಳೆಯೊಂದಿಗೆ ಮಾತನಾಡಿಸಿದ್ದಕ್ಕೆ ಜಯರಾಮ ಎಂಬ ಲಾರಿ ಚಾಲಕನಿಗೆ ಗುಂಪು ಕಟ್ಟಿಕೊಂಡು ಅನಾಗರಿಕ ರೀತಿಯಲ್ಲಿ ನಡೆಸಿದ ಹಲ್ಲೆ, ಮಂಗಳೂರು ನಗರದ ಕೇಂದ್ರ ಭಾಗದಲ್ಲಿ ಕೇರಳ ಮೂಲದ ಇಬ್ಬರು ಹಿಂದು ವಿದ್ಯಾರ್ಥಿಗಳಿಗೆ ಅವರ ಸಹಪಾಠಿ ಮುಸ್ಲಿಂ ವಿದ್ಯಾರ್ಥಿನಿಗೆ ಡ್ರಾಪ್ ಕೊಟ್ಟದ್ದಕ್ಕೆ ನಡೆಸಿದ ಬಹಿರಂಗ ಹಲ್ಲೆಗಳು ಬಜರಂಗ ದಳ, ವಿಶ್ವ ಹಿಂದೂ ಪರಿಷತ್ ಮುಂತಾದ ಹಿಂದುತ್ವವಾದಿ ಸಂಘಟನೆಗಳಿಗೆ ಅಕಾಲದಲ್ಲಿ ಹಬ್ಬ ಆಚರಿಸುವಷ್ಟು ಸಂಭ್ರಮವನ್ನು ಉಂಟುಮಾಡಿದೆ. ಅದರೊಂದಿಗೆ ಹದಿಹರೆಯದ ಮುಸ್ಲಿಂ ಕ್ರಿಮಿನಲ್‌ಗಳ ಗುಂಪೊಂದು ಕೊಣಾಜೆ ಎಂಬಲ್ಲಿ ಹಿಂದೂ ಧರ್ಮಕ್ಕೆ ಸೇರಿದ ವೈದ್ಯಕೀಯ ವಿದ್ಯಾರ್ಥಿನಿ ಮತ್ತಾಕೆಯ ಮುಸ್ಲಿಂ ಸಹಪಾಠಿಯನ್ನು ಅಪಹರಿಸಿ ಅವರನ್ನು ಕೂಡಿ ಹಾಕಿ ಬಲವಂತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಮಾಡಿ ಆ ದೃಶ್ಯವನ್ನು ವಿಡಿಯೋ ರೆಕಾರ್ಡ್ ಮಾಡಿ ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿತ್ತು. ಆ ಸಂದರ್ಭದಲ್ಲಿ ನರೇಂದ್ರ ನಾಯಕ್ ಮತ್ತವರ ಪ್ರಗತಿಪರ ಬಳಗಕ್ಕೆ ವಿದ್ಯಾರ್ಥಿನಿಯ ಆಪ್ತರಿಂದ ಮಾಹಿತಿ ಸಿಕ್ಕಿದ್ದರಿಂದ ಪೊಲೀಸರು ಸಕಾಲಿಕ ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿಗಳನ್ನು ಬಂಧಮುಕ್ತಗೊಳಿಸಿ ಕ್ರಿಮಿನಲ್ ಗ್ಯಾಂಗ್ ಅನ್ನು ಬಂಧಿಸಿ ಜೈಲಿಗಟ್ಟಿದರು. ಪೊಲೀಸರ ನಿಷ್ಕೀಯತೆ, ಕಾಂಗ್ರೆಸ್ ಮಂತ್ರಿಗಳ, ಪುಡಿನಾಯಕರ ಸ್ನೇಹದಿಂದಾಗಿ ಇಲ್ಲಿನ ಭೂಗತ ಜಗತ್ತು ಇತ್ತೀಚೆಗೆ ಸ್ವಲ್ಪ ಹೆಚ್ಚೇ ಅನ್ನುವಷ್ಟು ಚಿಗಿತುಕೊಂಡಿದೆ. ದುಬಾಯ್ ಡಾನ್‌ಗಳಿಗೆ, ಅವರ ಒಂದು ಮೊಬೈಲ್ ಕರೆಗೆ ಇಲ್ಲಿನ ಉದ್ಯಮಿಗಳು ದೈವದೇವರುಗಳಿಗಿಂತಲೂ ಜಾಸ್ತಿ ಭಯ ಪಡುತ್ತಾರೆ.

ಕೊಣಾಜೆ ಘಟನೆ ನಡೆದದ್ದೇ ತಡ ಸಂಘ ಪರಿವಾರದ ಗುಂಪುಗಳು ವಿದ್ಯಾರ್ಥಿ ಜೋಡಿಗೆ ನೀಡಿದ ವಿಕೃತ ಹಿಂಸೆಯನ್ನು ಹಿಂದೂ ಧರ್ಮದ ಮೇಲಿನ ಸಂಘಟಿತ ದಾಳಿ ಎಂಬಂತೆಯೂ, ಕರಾವಳಿಯ ಇಡೀ ಬ್ಯಾರಿ ಮುಸ್ಲಿಂ ಸಮುದಾಯ ಇದಕ್ಕೆ ಹೊಣೆಯೆಂಬಂತೆಯೂ ಬೀದಿಗಿಳಿದು ಬಿಟ್ಟಿದೆ. ಇವರು ಆರ್ಭಟಕ್ಕೆ ಪೂರಕ ಎಂಬಂತೆ ಮುಸ್ಲಿಂvt-prasad-PFI-attack ನೈತಿಕ ಪೊಲೀಸರ ಸರಣಿ ದಾಳಿಗಳು ಇದೇ ಸಂದರ್ಭದಲ್ಲಿ ನಡೆದದ್ದು ಪರಿವಾರದ ಧರ್ಮರಕ್ಷಕರಿಗೆ ಆನೆಬಲ ಬಂದಂತಾಗಿದೆ. ಇಂತಹ ಸಂದರ್ಭದಲ್ಲಿ ತಕ್ಷಣ ಕ್ರಿಯಾಶೀಲ ಆಗಬೇಕಾದ ಪೊಲೀಸ್ ಇಲಾಖೆ, ಜಿಲ್ಲಾಡಳಿತ, ಮೂವರು ಮಂತ್ರಿಗಳ ನಿಧಾನ ಪ್ರತಿಕ್ರಿಯೆ ಜಿಲ್ಲೆಯ ಜನತೆಯ ಆತಂಕವನ್ನು ಹೆಚ್ಚಿಸಿದೆ. ವಿಟ್ಲ, ಗಡಿಯಾರ, ಪಳ್ನೀರ್ ಮುಂತಾದೆಡೆ ದಾಳಿಗಳನ್ನು ಸಂಘಟಿಸಿದ್ದ ಮುಸ್ಲಿಂ ಮತೀಯವಾದಿ ಗುಂಪುಗಳ ಮೇಲೆ ದೃಢವಾದ ಕ್ರಮಗಳನ್ನು ಕೈಗೊಳ್ಳದೇ ಇದ್ದುದಕ್ಕೆ ಕಾಂಗ್ರೆಸ್‌ಪಕ್ಷ ಮಾತ್ರ ಅಲ್ಲ ಜಿಲ್ಲೆಯ ಜನಸಾಮಾನ್ಯರೂ ಬೆಲೆ ತೆರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬಜರಂಗದಳ, ಹಿಂದೂ ಜಾಗರಣಾ ವೇದಿಕೆಗಳು ಪ್ರತಿಭಟನೆಯ ನೆಪದಲ್ಲಿ ಮುಸ್ಲಿಮರನ್ನು, ಜಾತ್ಯಾತೀತರನ್ನು ಹೀನಾಯವಾಗಿ ನಿಂದಿಸುತ್ತಿವೆ. ರಕ್ತಪಾತಕ್ಕೆ ಕರೆ ಕೊಡುತ್ತಿವೆ, ಹಿಂದೂ ಯುವಕರನ್ನು ಗಲಭೆಗೆ ಪ್ರಚೋದಿಸುತ್ತಿದೆ. ತಾವು ನೈತಿಕ ಪೊಲೀಸ್‌ಗಿರಿಯ ವಿರೋಧಿಗಳು ಎಂಬಂತೆ ಬಿಂಬಿಸಿಕೊಳ್ಳುವ ದೃಶ್ಯಗಳನ್ನು ಸೃಷ್ಟಿಸುತ್ತಿವೆ.

ಈ ಬಾರಿಯ ಧರ್ಮದಾಟದ ವಿಶೇಷತೆ ಏನೆಂದರೆ ಆಟದಲ್ಲಿ ಕಾಯಿ ಉರುಳಿಸುತ್ತಿರುವುದು ಮುಸ್ಲಿಂ ತೀವ್ರವಾದಿ ಗುಂಪು ಮತ್ತು ಕ್ರಿಮಿನಲ್ ಗುಂಪುಗಳು. ಹಿಂದೆಲ್ಲಾ ಇಂತಹ ಪರಿಸ್ಥಿತಿ ನಿರ್ಮಿಸಲು ಪರಿವಾರದ ಗೇಮ್ ಫ್ಲಾನರ್‌ಗಳು ಕಾಲ್ಪನಿಕ ಸುಳ್ಳಿನ ಕಂತೆಯನ್ನು ಕಟ್ಟಲು ಹರಸಾಹಸ (ಆಗೆಲ್ಲ ಜಿಲ್ಲೆಯ ಕೆಲ ಪತ್ರಿಕೆಗಳು ಅವರ ಕಥೆಗಳಿಗೆ ಜೀವತುಂಬಿದೆ)ಪಡಬೇಕಿತ್ತು. ಈಗ ಮುಸ್ಲಿಮರ ಮಧ್ಯೆ ಇಂತಹ ಘಟನೆಗಳನ್ನು ಸೃಷ್ಟಿಸಲು ಇವರ ದಯಾದಿಗಳು ರಣೋತ್ಸಾಹದಲ್ಲಿ ಮುಂದುವರಿಯುತ್ತಿರುವುದರಿಂದ ಅಷ್ಟರ ಮಟ್ಟಿಗೆ ಸಂಘ ಪರಿವಾರ ನಿರಾಳ.

ಮುಸ್ಲಿಂ ಮತೀಯವಾದಿಗಳು ಮತ್ತು ಹಿಂದುತ್ವವಾದಿಗಳು ಪರಸ್ಪರ ಹೊಂದಾಣಿಕೆಯಿಂದಲೇ (ಕಳೆದ ಚುನಾವಣೆಯ ಸಂದರ್ಭದಲ್ಲಿ ಇಂತಹ ಆರೋಪಿಗಳು ಸಕಾರಣವಾಗಿಯೇ ಕೇಳಿ ಬಂದಿದ್ದವು) ಇಂತಹ ಪರಿಸ್ಥಿತಿಯನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ. ಇದು ನಿಜವಾಗಿದ್ದರೆ ಆಶ್ಚರ್ಯಪಡುವಂತಹದ್ದು ಏನೂ ಇಲ್ಲ. ಆದರೆ ಎರಡೂ ಕಡೆಯ ಕೋಮುಶಕ್ತಿಗಳು ಕೈ ಹಾಕುತ್ತಿರುವುದು ತಮ್ಮ ಮತ ಬುಟ್ಟಿಗೆ ಎಂಬ ಅರಿವಿನಿಂದಲಾದರೂ ಮತೀಯವಾದಿಗಳ, ಅವರಿಗೆ ಪೂರಕವಾಗಿ ವರ್ತಿಸುತ್ತಿರುವ ಕ್ರಿಮಿನಲ್‌ಗಳನ್ನು ಮಟ್ಟಹಾಕದೆ ನಿರ್ಲಿಪ್ತರಾಗಿ ವರ್ತಿಸುತ್ತಿರುವ ತ್ರಿಮೂರ್ತಿ ಮಂತ್ರಿಗಳಾದ ರೈ, ಖಾದರ್, ಜೈನ್‌ಗಳ ವರ್ತನೆಯ ಬಗ್ಗೆ ಏನನ್ನೋಣ…

10 thoughts on “ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಮಂಗಳೂರಿನಲ್ಲಿ ಮತೀಯ ರಕ್ಕಸರ ರಾಜಕೀಯ ಚದುರಂಗದಾಟ

 1. ಅನಿತಾ

  ಹಿಂದೂಗಳಲ್ಲಿರುವಂತೆ ಮುಸ್ಲಿಮರಲ್ಲೂ ಕೊಮುವಾದಿಗಳಿದ್ದಾರೆ ಎಂದು ಈಗಲಾದರೂ ಪ್ರಗತಿಪರರಿಗೆ ಜ್ನಾನೋದಯವಾಗಲಿ ಎಂದು ಆಶಿಸುವ. ಇಲ್ಲವಾದರೆ ಮುಸ್ಲಿಮರೆಲ್ಲ ಅಮಾಯಕರು, ಮುಗ್ಧರು, ಅವರಿಗೆಲ್ಲ ಭಯೋತ್ಪಾದಕರ ಪಟ್ಟ ಕಟ್ಟಿ ಹಿಂಸಿಸಲಾಗುತ್ತಿದೆ ಎಂಬ ಮಾಮೂಲಿ ಆರೋಪ ಕೇಳಿಬರುತ್ತಿತ್ತು. ಮುಸ್ಲಿಂ ಕೋಮುವಾದಿಗಳ ಅಟ್ಟಹಾಸ ನೋಡಬೆಕಿದ್ದರೆ ಕೇರಳಕ್ಕೆ ಬನ್ನಿ. ಇದು ಬಾಬರಿ ಮಸೀದಿ ಕೆಡವಿದ ನಂತರ ಹುಟ್ಟಿಕೊಂಡುದಲ್ಲ. ಅದು ಕೊಲ್ಲಿಯ ಪ್ರಭಾವ, ಅಲ್ಲಿನ ದುಡ್ಡಿನ ಪ್ರಭಾವ, ಜಾಗತಿಕ ಇಸ್ಲಾಮಿಕ್ ಕೋಮುವಾದದ ಪ್ರತಿಫಲನ. ಕೇರಳದಲ್ಲಿ ಬಿ ಜೆ ಪಿ, ಆರ್ ಎಸ್ ಎಸ್ ಪ್ರಭಾವ ಶೂನ್ಯವೆನ್ನುವಷ್ಟು ನಗಣ್ಯ. ಎಡಪಂಥೀಯರೇ ಮೆರೆಯುತ್ತಿರುವ ಕೇರಳದಲ್ಲಿ ಯಾಕಿಷ್ಟು ಕೊಮುಹಿಂಸೆ ನಡೆಯುತ್ತಿದೆ? ಹಿಂದೂ -ಮುಸ್ಲಿಂ ಎರಡೂ ಕೊಮುವಾದಗಳನ್ನು ಸಮವಾಗಿ ನೋಡಿ ಸಮವಾಗಿ ಪ್ರತಿಕ್ರಿಯಿಸಲು ಪ್ರಗತಿಪರರು ಸಿದ್ಧರಾಗಬೇಕು.

  Reply
  1. Mahesha Prasad Neerkaje

   ಅನಿತಕ್ಕ, ಸರಿಯಾಗೇ ಹೇಳಿದ್ದೀರಿ. ಸ್ವಾತಂತ್ರ್ಯ ಪೂರ್ವದ ಮಾಪಿಳ್ಳೆ ದಂಗೆ ನಡೆದಾಗ, ಮಾರಾಡ್ ನಲ್ಲಿ ಇಸ್ಲಾಮಿಕ್ ಮತಾಂಧರು ಮೆರೆದಾಗ ಆರೆಸ್ಸೆಸ್ಸು ಬಾಬ್ರಿ ಎಲ್ಲ ಎಲ್ಲಿತ್ತು? ಜಗತ್ತಿನ ಬೇರೆ ಬೇರೆ ಕಡೆ ತಲೆ ಎತ್ತಿರುವ ಇಸ್ಲಾಮಿಕ್ ಮೂಲಭೂತವಾದಕ್ಕೂ ಹಿಂದೂ ಮೂಲಭೂತವಾದ ಕಾರಣ ಎನ್ನುತ್ತಾರೋ? ಪ್ರಗತಿಪರರು ಮುಸ್ಲಿಂ ಮೂಲಭೂತವಾದಕ್ಕೆ ಹಿಂದೂ ಮೂಲಭೂತವಾದದ ಸಮರ್ಥನೆ ಕೊಡುವುದು ಇಂದು ನಿನ್ನೆಯದಲ್ಲ. ಅವರ ವಾದಗಳು ಈ ತನಕ ಸುಳ್ಳಿನ ಮೇಲೆ ಕಟ್ಟಿರುವಂಥಾದ್ದು. ಅವರುಗಳು ಇನ್ನಾದರೂ ಬದಲಾಗುತ್ತಾರೆ ಎನ್ನುವ ಆಶಯ ಇಟ್ಟುಕೊಳ್ಳುವುದು ಬಹುಶ: ತೀರಾ ಆಶಾವಾದ ಆಗುತ್ತದೇನೋ?

   Reply
 2. Johnsheen, Kodagu

  Any type of Religious hatred is the symbol of uncivilization. Let the religions be used to spread love.
  Johnsheen, Kodagu

  Reply
 3. Ananda Prasad

  ಮುಸ್ಲಿಂ ಮೂಲಭೂತವಾದಿಗಳ ಅಟ್ಟಹಾಸವನ್ನು ಕಾನೂನು ಪ್ರಕಾರ ಹತ್ತಿಕ್ಕಲು ರಾಜ್ಯದ ಕಾಂಗ್ರೆಸ್ ಸರಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳದೆ ಇರುವುದು ಮುಸ್ಲಿಂ ವೋಟ್ ಬ್ಯಾಂಕ್ ಎಲ್ಲಿ ತಮ್ಮ ಕೈತಪ್ಪಿ ಹೋಗುತ್ತದೆಯೇನೋ ಎಂಬ ಆತಂಕದಿಂದ ಎಂಬುದು ಸ್ಪಷ್ಟ. ಇದರ ಲಾಭ ಹಿಂದೂ ಮೂಲಭೂತವಾದಿಗಳಿಗೆ ಆಗುತ್ತದೆ. ಮುಸ್ಲಿಂ ಮೂಲಭೂತವಾದ ಮೇರೆ ಮೀರಿದಾಗಲೆಲ್ಲ ಅದರ ವಿರುದ್ಧ ಹಿಂದೂಗಳು ಒಗ್ಗಟ್ಟಾಗಿ ಹಿಂದೂ ವೋಟ್ ಬ್ಯಾಂಕ್ ಸೃಷ್ಟಿಯಾಗುತ್ತದೆ. ಮುಸ್ಲಿಂ ವೋಟ್ ಬ್ಯಾಂಕ್ ೧೫-೨೦% ಇದ್ದರೆ ಹಿಂದೂ ವೋಟ್ ಬ್ಯಾಂಕ್ ಅದಕ್ಕಿಂತ ಬಹಳ ದೊಡ್ಡದು ಎಂಬ ಸತ್ಯ ಕಾಂಗ್ರೆಸ್ಸಿನ ರಾಜಕಾರಣಿಗಳಿಗೆ ಇಲ್ಲದೆ ಇರುವುದು ಅವರ ತಲೆಯಲ್ಲಿ ಮೆದುಳು ಇದೆಯೋ ಎಂಬ ಸಂಶಯವನ್ನು ಉಂಟು ಮಾಡುತ್ತಿದೆ. ಮುಸ್ಲಿಂ ಮೂಲಭೂತವಾದವನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕದೆ ಇದ್ದರೆ ಅದಕ್ಕೆ ತಕ್ಕ ಬೆಲೆಯನ್ನು ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಗಳಲ್ಲಿ ತೆರುವುದು ಅನಿವಾರ್ಯವಾದೀತು. ಉತ್ತಮ ಆಡಳಿತ ನೀಡಿ ಜನರ ಮನಸ್ಸು ಗೆಲ್ಲುವ ಬದಲು ಅಲ್ಪಸಂಖ್ಯಾತ ವೋಟ್ ಬ್ಯಾಂಕಿನ ಮೇಲೆ ರಾಜಕೀಯ ನಡೆಸುವುದು ಕಾಂಗ್ರೆಸ್ಸಿನ ಅವಿವೇಕವನ್ನು ಸೂಚಿಸುತ್ತದೆ. ಇಂಥ ಮೂಲಭೂತ ಅಂಶಗಳೂ ಕಾಂಗ್ರೆಸ್ಸಿಗರಿಗೆ ಹೊಳೆಯದೆ ಇರುವುದು ಅವರ ರೋಗಗ್ರಸ್ತ ಮನೋಸ್ಥಿತಿಯನ್ನು ಬಿಂಬಿಸುತ್ತದೆ. ಕಾಂಗ್ರೆಸ್, ಬಿಜೆಪಿ, ದಳ ಇತ್ಯಾದಿ ಸಾಂಪ್ರದಾಯಿಕ ಪಕ್ಷಗಳು ಆಡುತ್ತಿರುವ ಮತೀಯ ವೋಟ್ ಬ್ಯಾಂಕ್ ರಾಜಕೀಯದ ಆಟದ ವಿರುದ್ಧ ಜನ ಜಾಗೃತರಾಗಿ ಪರ್ಯಾಯ ರಾಜಕೀಯನ್ನು ಬೆಳೆಸುವುದು ಪ್ರಜಾಪ್ರಭುತ್ವದ ಬೆಳವಣಿಗೆಗೆ ಅಗತ್ಯ.

  Reply
  1. sudheer sanu

   ಇದೇ ಮೊದಲ ಬಾರಿಗೆ ಒಂದು balanced ಎನ್ನಬಹುದಾದ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದೀರಿ. ಅಭಿನಂದನೆಗಳು

   Reply
  2. Mahesha Prasad Neerkaje

   KFD/PFI ಭಯೋತ್ಪಾದನೆಯ ಬಗ್ಗೆ ಕನಿಷ್ಠ ಒಂದೆರಡು ಮಾತನ್ನಾದರೂ ಹೇಳಿದ್ದಕ್ಕೆ ಮುನೀರ್ ಮತ್ತು ಆನಂದ್ ಪ್ರಸಾದರಿಗೆ ಅಭಿನಂದನೆಗಳು. ಹಾಗೆಯೇ ಪಬ್ ಧಾಳಿ ಸಮಯದಲ್ಲಿ ತಿಂಗಳುಗಟ್ಟಲೆ ಕೂಗಾಡಿದ್ದ ಮಾಧ್ಯಮಗಳು ಈಗ ಯಾಕೆ ಸುಮ್ಮನಿವೆ ಎಂಬ ಬಗ್ಗೆ ನಿಮಗೆ ಮಾಹಿತಿ ಇದ್ದರೆ ದಯವಿಟ್ಟು ಹಂಚಿ ಕೊಳ್ಳಿರಿ. ಹಾಗೆಯೇ, ಕ. ಕೋ. ಸೌ. ವೇ. ಎಂಬ ಕಾಗೆ ಸಂಘಟನೆ ಯಾಕೆ ಈಗ ಬಾಯ್ಬಿಡುತ್ತಿಲ್ಲ ಅಂತ ಕೂಡ ತಿಳಿಸಿರಿ.

   Reply
 4. Srini

  Now what is congress doing who came to power with the promise of putting full stop to all communal activities? Indeed, moment congress is back in-power we are reading more about such incidents. No idea when our politicians do something for this country

  Reply
 5. Mahesh

  ಮುನೀರ್ ಕಾಟಿಪಳ್ಳರವರೇ, ಹಿಂದೂ ಕೋಮುವಾದ ಬೆಳೆಯಲು ಅವಕಾಶ ದೊರಕುತ್ತದೆ ಎಂಬ ಕಾರಣಕ್ಕಾಗಿ ಮಾತ್ರ ಮುಸ್ಸಿಂ ಕೋಮುವಾದವನ್ನು ನಿಯಂತ್ರಿಸಬೇಕೋ ಅಥವಾ ಯಾವ ಕೋಮುವಾದವಾದರೂ ಸಾಮಾನ್ಯ ಜನರಿಗೆ ಅಪಾಯ ತಪ್ಪಿದ್ದಲ್ಲ ಎಂಬ ಭಾವನೆಯಿಂದ ಮುಸ್ಲಿಂ ಕೋಮುವಾದವನ್ನು ನಿಯಂತ್ರಿಸಬೇಕೋ.. ??

  Reply
 6. Mahesha Prasad Neerkaje

  ಮುಸ್ಲಿಂ ಮೂಲಭೂತವಾದಕ್ಕಿಂತ ಹಿಂದೂ ಮೂಲಭೂತವಾದ ಅಪಾಯಕಾರಿ ಎನ್ನುವ “ಹಿಡನ್ ಮೆಸೇಜ್” ಈ ಲೇಖನದಲ್ಲಿ ಕಾಣುತ್ತದೆ. ಯಾವ ಮೂಲಭೂತವಾದವೂ ಹೆಚ್ಚಲ್ಲ, ಯಾವುದೋ ಕಡಿಮೆಯಲ್ಲ ಎಂಬುದು ನನ್ನ ಅಭಿಪ್ರಾಯವಾದರೂ ವಾದಕ್ಕೊಸ್ಕರ ಹೇಳುವುದಾದಲ್ಲಿ ಇಸ್ಲಾಮಿಕ್ ಮೂಲಭೂತವಾದವೇ ಹೆಚ್ಚು ಅಪಾಯಕಾರಿ. ಯಾಕೆಂದರೆ ಇವರಿಗೆ ಹೊರದೇಶಗಳ (ಇತರ ಇಸ್ಲಾಮಿಕ್ ದೇಶಗಳ) ಬೆಂಬಲ ಇದೆ. ಹಿಂದೂ ಮೂಲಭೂತವಾದಕ್ಕೆ ಅಂತಹಾ ಬೆಂಬಲ ಇಲ್ಲ. ಪ್ರಗತಿಪರರು ಇದನ್ನು ಅರ್ಥ ಮಾಡಿಕೊಳ್ಳದಷ್ಟು ಅಮಾಯಕರೇ? ಅಥವಾ ಇದನ್ನು ಅರ್ಥಮಾಡಿಕೊಳ್ಳುವುದು ಅವರುಗಳಿಗೆ ಬೇಕಿಲ್ಲವೇ?

  Reply
 7. Johnsheen

  It is time people should start finding the loop holes in their own religions and move forward to better tomorrows than to point their fingers at other faiths. No religion should promote or practice violence and terrorism. Then it becomes safe shelters for the criminals to hide under the tents of religion. Thanks for the balanced outlook in the article. It is time we must make two groups. Criminals and Good people. Let the good lot keep the criminals away from socializing.

  Reply

Leave a Reply

Your email address will not be published.