Daily Archives: December 31, 2013

ಎಸ್.ಆರ್.ಹಿರೇಮಠ್ : ವರ್ತಮಾನ.ಕಾಮ್‌ನ ವರ್ಷದ ವ್ಯಕ್ತಿ

[ವರ್ತಮಾನ.ಕಾಮ್‌ನ ಪ್ರಿಯ ಓದುಗರೇ,
ನಮ್ಮ ಬಳಗದಿಂದ “ವರ್ತಮಾನ.ಕಾಮ್‌ನ 2013 ವರ್ಷದ ವ್ಯಕ್ತಿ”ಯಾಗಿ ರಾಜ್ಯದ ನೈತಿಕ ಸಾಕ್ಷಿಪ್ರಜ್ಞೆಯಾಗಿ ಗುರುತಾಗಿರುವ ಮತ್ತು ಈ ನಾಡಿನಲ್ಲಿ ಕಾನೂನು ಮತ್ತು ಪ್ರಜಾಪ್ರಭುತ್ವ ನೆಲೆಗೊಳ್ಳಲು ನಿರಂತರವಾಗಿ ಶ್ರಮಿಸುತ್ತಿರುವ ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠರನ್ನು ಆಯ್ಕೆ ಮಾಡಿದ್ದೇವೆ. ಇದು ಈ ವರ್ಷದ ಕೊನೆಯ ಲೇಖನ. ಇಂತಹ ಒಂದು ಧನ್ಯವಾದಪೂರ್ವಕ ಲೇಖನದಿಂದ ಈ ವರ್ಷಕ್ಕೆ ವಿದಾಯ ಹೇಳುತ್ತ, ಮತ್ತಷ್ಟು ಆಶಾವಾದ ಮತ್ತು ಕ್ರಿಯಾಶೀಲತೆಯಿಂದ ಹೊಸ ವರ್ಷವನ್ನು ಎದುರುಗೊಳ್ಳೋಣ. ಹಿರೇಮಠರಂತಹವರ ಕೆಲಸ ನಮ್ಮೆಲ್ಲರಲ್ಲೂ ಅಂತಹ ಸ್ಫೂರ್ತಿ ಮತ್ತು ಧೃಢನಿಶ್ಚಯ ಮೂಡಿಸಲಿ ಎಂದು ಆಶಿಸುತ್ತಾ…
ನಮಸ್ಕಾರ,
ರವಿ ಕೃಷ್ಣಾರೆಡ್ಡಿ]


ಎಸ್.ಆರ್.ಹಿರೇಮಠ್ : ವರ್ತಮಾನ.ಕಾಮ್‌ನ ವರ್ಷದ ವ್ಯಕ್ತಿ

– ಬಿ.ಶ್ರೀಪಾದ ಭಟ್

“Because I am involved in mankind,
And therefore never send to know for whom the bell tolls;
It tolls for thee” ಎಂದು ಹೇಳಿದ ಕವಿ ಜಾನ್ ಡನ್‌ನ “for whom the bell tolls” ಸಾಲುಗಳನ್ನು ಉದಾಹರಿಸುತ್ತ ‘ಆ ಓಲಗದ ಸದ್ದು ಯಾವ ನೋವನ್ನು, ಯಾರ ಸಾವನ್ನು, ಎಷ್ಟು ಹೃದಯಗಳ ಆಕ್ರಂದನವನ್ನು ಸೂಚಿಸುತ್ತದೆ? ಆ ಓಲಗದ ಸದ್ದು ಯಾವ ಮಾಯವಾದ ಕ್ರಿಯಾಶೀಲತೆಯನ್ನು, ಕೊನೆಗೊಂಡ ಕನಸನ್ನು ಸೂಚಿಸುತ್ತದೆ?’ ಎಂದು “ಇಲ್ಲಿ ಯಾವನೂ ದ್ವೀಪವಲ್ಲ” ಎನ್ನುವ ತಮ್ಮ ಅದ್ಭುತ ಟಿಪ್ಪಣಿಯಲ್ಲಿ ಲಂಕೇಶ್ ಮಾರ್ಮಿಕವಾಗಿ ಪ್ರಶ್ನಿಸಿದ್ದರು. ಅಂದು ಕಾಂಗ್ರೆಸ್ ಪಕ್ಷದ ಗುಂಡೂರಾವ್ ಅವರ ದುಷ್ಟ ಆಡಳಿತ ಕೊನೆಗೊಂಡು ಹೆಗಡೆಯ ಸರ್ಕಾರ ಅಧಿಕಾರದಲ್ಲಿತ್ತು. ಆದರೆ 1985 ರ ವೇಳೆಗೆ ಹೆಗಡೆ ಸರ್ಕಾರ ಸಹ ಹಾದಿ ತಪ್ಪತೊಡಗಿತ್ತು. ಆಗ ಕರ್ನಾಟಕದಲ್ಲಿ ಅನಧಿಕೃತ ವಿರೋಧ ಪಕ್ಷದಂತೆ ಕಾರ್ಯ ನಿರ್ವಹಿಸುತ್ತಿದ್ದ ಲಂಕೇಶ್ ಪತ್ರಿಕೆಯ ಸಂಪಾದಕೀಯದಲ್ಲಿ ಲಂಕೇಶ್ ಮೇಲಿನಂತೆ ಪ್ರಶ್ನಿಸಿದ್ದರು. ಮುಂದುವರೆದು ಲಂಕೇಶ್ “ಆತ್ಮವಿಲ್ಲದ ಆಡಳಿತ ನೀಡಬೇಡಿ” ಎಂದು ಹೇಳಿದ್ದರು. ಇಂದಿಗೂ ಈ ಟೀಕೆ ಟಿಪ್ಪಣಿ ಪ್ರಸ್ತುತ.

ಇಂದು ಬಿಜೆಪಿಯ ದುಷ್ಟ ಆಡಳಿತ ಕೊನೆಗೊಂಡು ಸಿದ್ಧರಾಮಯ್ಯನವರ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಅಂದಿನ ಹೆಗಡೆ ಸರ್ಕಾರದಂತೆಯೇ ಇಂದಿನ ಸಿದ್ಧರಾಮಯ್ಯನವರ ಸರ್ಕಾರ ಹಳಿ ತಪ್ಪತೊಡಗಿದೆ. ನಾವೇನು ಮಾಡಬೇಕು?? ಅನಧಿಕೃತ ವಿರೋಧ ಪಕ್ಷದಂತೆ ಕಾರ್ಯ ನಿರ್ವಹಿಸಬೇಕಿತ್ತು. ಆದರೆ ನಮ್ಮೆಲ್ಲರ ಪ್ರಕಾರ ಇದು ಶಾಂತಿಯ ಕಾಲ. ಕ್ರಾಂತಿ ಮುಗಿದಿದೆ. ಕಾಂಬುಜಿಗಳಿಗೆ (ಕಾಂಗ್ರೆಸ್ ಬುದ್ಧಿಜೀವಿಗಳು -ಚಂಪಾ ಹೇಳಿದ್ದು), ಮತ್ತು ಕಾಂಬುಜಿಗಳಾಗಲು ಬಾಗಿಲಲಿ ನಿಂತಿರುವ ಬಂಡಾಯದ ಅಂದಕಾಲತ್ತಿಲ್ ಸಾಹಿತಿಗಳಿಗೆ ಈ ಓಲಗದ ಸದ್ದು ಈಗ ಕೇಳಿಸುತ್ತಿಲ್ಲ !!

ನಮಗೂ ಕೇಳಿಸುತ್ತಿಲ್ಲ!! ಸಬ್ ಆರಾಮ್ ಹೈ!!

ಆದರೆ ಅಂದು ಬಳ್ಳಾರಿ ರಿಪಬ್ಲಿಕ್‌ನ ಸರ್ವಾಧಿಕಾರಕ್ಕೆ ಅಂತ್ಯ ಹಾಡಿ ಬಿಜೆಪಿ ಪಕ್ಷದ sr-hiremathಬೆನ್ನೆಲೆಬು ಮುರಿದು ಹಾಕಿದ ಎಸ್.ಆರ್. ಹಿರೇಮಠ್ ಅವರು ಈಗಲೂ ಸುಮ್ಮನೆ ಕುಳಿತಿಲ್ಲ. ಎಂಬತ್ತರ ದಶಕದ ಲಂಕೇಶ್ ಪತ್ರಿಕೆಯಂತೆ ಇಂದು ಸಹ ಅಧಿಕೃತ ವಿರೋಧ ಪಕ್ಷದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ, ಸೋಗಲಾಡಿ ಬುದ್ದಿಜೀವಿ ರಾಜಕಾರಣಿ ರಮೇಶ್ ಕುಮಾರ್‌ರಂತವರ ಬಣ್ಣ ಬಯಲು ಮಾಡುತ್ತಿದ್ದಾರೆ.

ಇಂದು ನಮ್ಮೆಲ್ಲರ ಸಾಕ್ಷೀಪ್ರಜ್ಞೆಯಂತಿರುವ “ಎಸ್.ಆರ್. ಹಿರೇಮಠ್” ನಿಜಕ್ಕೂ ಈ ರಾಜ್ಯದ ವರ್ಷದ ವ್ಯಕ್ತಿ.


ಕೊನೆಗೆ, ದಕ್ಷಿಣ ಕನ್ನಡದಲ್ಲಿ ಎಲ್ಲಾ ಬಗೆಯ ಮೂಲಭೂತವಾದಿಗಳ ಸರ್ವಾಧಿಕಾರದ ವಿರುದ್ಧ ಹೋರಾಟ ನಡೆಸುತ್ತಿರುವ ಕಾಮ್ರೇಡ್ ಮುನೀರ್ ಕಾಟಿಪಳ್ಳ ಮತ್ತವರ ಗೆಳೆಯರಿಗೆ ನಾವೆಲ್ಲ ಬೆಂಬಲವಾಗಿ ನಿಲ್ಲಬೇಕು. ಇವರ ಹೋರಾಟ ಒಂಟಿಧ್ವನಿಯಾಗಲು ಬಿಡಬಾರದು.  ಏಕೆಂದರೆ, ಲಂಕೇಶ್ ಹೇಳಿದಂತೆ, “No man is an island ಎನ್ನುವುದರ ಮೂಲಕ ಜಗತ್ತಿನ ಎಲ್ಲರ ಬದುಕು ತಳುಕು ಹಾಕಿಕೊಂಡಿರುವುದನ್ನು, ಪರಸ್ಪರ ಸಂಬಂಧ ಹೊಂದಿರುವುದನ್ನು ಕವಿ ಸೂಚಿಸುತ್ತಾನೆ.”

ನಮಗೂ ಆ ಓಲಗದ ಸದ್ದು ಕೇಳಿಸುವಂತೆ ನಮ್ಮ ಪಂಚೇಂದ್ರಿಯಗಳು ಸದಾ ಕಾರ್ಯನಿರ್ವಹಿಸುತ್ತಿರಲಿ…

ಶರಮ್ ನಹೀ ಶರ್ಮ…

– ಸುಧಾಂಶು ಕಾರ್ಕಳ

ದಾವಣಗೆರೆ ವಿಶ್ವವಿದ್ಯಾನಿಲಯ ಕುಲಪತಿ ಆಯ್ಕೆ ಪ್ರಕ್ರಿಯೆಯಲ್ಲಿ ಹಣ ಮುಖ್ಯ ಪಾತ್ರ ವಹಿಸಿರುವ ಅನುಮಾನಗಳು ದಟ್ಟವಾಗಿವೆ. ಕುಲಪತಿ ಆಯ್ಕೆ ಸಮಿತಿ ಅಧ್ಯಕ್ಷತೆ ವಹಿಸಿದ್ದ ಯು.ಆರ್. ಅನಂತಮೂರ್ತಿಯವರು davanagere-vc-fiascoಸುದ್ದಿ ಮಾಧ್ಯಮಗಳಿಗೆ ಮಾತನಾಡಿ ಈ ಅನುಮಾನಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ. ಅವರ ಅಧ್ಯಕ್ಷತೆಯ ಸಮಿತಿಯಲ್ಲಿದ್ದವರೇ ಭ್ರಷ್ಟ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಬಗ್ಗೆಯೂ ಅವರು ಮಾತನಾಡಿದ್ದಾರೆ.

ಆ ನಂತರ ಸರಕಾರ ಸೂಚಿಸಿದ್ದ ಹೆಸರನ್ನು ರಾಜಭವನ ತಿರಸ್ಕರಿಸಿದೆ ಹಾಗೂ ಸಮಿತಿ ಅಧ್ಯಕ್ಷರ ಹೊರತಾಗಿ ಇತರರು ಸೂಚಿಸಿದ್ದ ಹೆಸರಿಗೆ ಮನ್ನಣೆ ನೀಡಿದೆ. ರಾಜಭವನದಲ್ಲಿ ಇಂತಹ ಕೃತ್ಯಗಳು ನಡೆದಿವೆ ಎನ್ನುವುದನ್ನು ನಂಬಲಿಕ್ಕೆ ಅಸಹನೆ ಪಡಬೇಕಿಲ್ಲ. ರಾಜಭವನದ ಸದ್ಯದ ವಾರಸುದಾರರು ಇಂತಹ ಕೃತ್ಯಗಳಲ್ಲಿ ಸಿದ್ಧಹಸ್ತರು. ಅರ್ಹತೆ ಇಲ್ಲದ ವ್ಯಕ್ತಿಯನ್ನೇ ವಿ.ಸಿ.ಯಾಗಿ ನೇಮಕ ಮಾಡಿದ್ದಲ್ಲದೆ, ಅದೇ ವ್ಯಕ್ತಿಯ ಅವಧಿಯನ್ನೂ ಅವರು ವಿಸ್ತರಿಸಿದವರಲ್ಲವೆ? ಹಿಂದಿನ ವಿ.ವಿಯಲ್ಲಿ ವಿ.ಸಿ.ಯಾಗಿದ್ದಾಗ ನಾನಾ ಆರೋಪಗಳನ್ನು ಹೊತ್ತವರು ಮತ್ತೊಂದು ಪ್ರಮುಖ ವಿ.ವಿ.ಗೆ ಕುಲಪತಿಯಾಗಿ ಅನಾಯಾಸವಾಗಿ ನೇಮಕಗೊಳ್ಳುತ್ತಾರೆ. ಎಷ್ಟು ಕೋಟಿ ರೂಗಳ ವ್ಯವಹಾರ ಇದು ಎನ್ನುವುದು ಗುಟ್ಟಾಗಿ ಉಳಿದಿಲ್ಲ.

ಈ ವಿ.ವಿ.ಗಳ ಅವ್ಯವಹಾರಗಳ ಗಲಾಟೆ ಮಧ್ಯದಲ್ಲಿ ಬಹಳ ಕಾಲದವರೆಗೆ ಮರೆಯಾಗಿ ಉಳಿದದ್ದು Tumkur-VC-Sharma-with-Governorತುಮಕೂರು ವಿಶ್ವವಿದ್ಯಾನಿಲಯದಲ್ಲಿ ಎಸ್.ಸಿ. ಶರ್ಮಾ ಅವರು ವಿ.ಸಿಯಾಗಿದ್ದಾಗ ನಡೆದ ಭಾನಗಡಿಗಳು. ಅವರು ತುಮಕೂರು ವಿ.ವಿ.ಗೆ ಕುಲಪತಿಯಾಗಿ ಬಂದಾಗಿನಿಂದ ಅವರು ನಡೆದುಕೊಂಡ ರೀತಿಯಲ್ಲಿ ಎರಡು ಹಂತಗಳನ್ನು ಗುರುತಿಸಬಹುದು. ಮೊದ ಮೊದಲು ಅವರು ಕಾನೂನಿನಲ್ಲಿರುವ ಅಸ್ಪಷ್ಟತೆಗಳ ಲಾಭ ಪಡೆದುಕೊಂಡರು. ನಂತರ ಅಧಿಕಾರದಲ್ಲಿರುವವರ ಸಖ್ಯ ಬಳಸಿಕೊಂಡು ತಮಗೆ ಅನುಕೂಲವಾಗುವ ಕಾನೂನನ್ನೇ ತರಲು ಮುಂದಾದರು!

ಅವರು ಅಧಿಕಾರಕ್ಕೆ ಬರುವಾಗಲೇ ವಿವಾದ ಹುಟ್ಟಿಕೊಂಡಿತು. ವಿ.ಸಿ.ಯಾಗುವವರು ತಮ್ಮ ಹಿಂದಿನ ಸ್ಥಾನದಲ್ಲಿ ಪಡೆಯುತ್ತಿದ್ದ ಸಂಭಾವನೆ/ಸಂಬಳ/ಸವಲತ್ತುಗಳನ್ನು ಮುಂದೆಯೂ ಪಡೆಯುತ್ತಾರೆ ಎಂದು ಕರ್ನಾಟಕದ ಕಾಯಿದೆಯಲ್ಲಿ ಇದ್ದದ್ದನ್ನು ಪತ್ತೆ ಹಚ್ಚಿ ತಾವು ಹಿಂದೆ ಇದ್ದ ಖಾಸಗಿ ಕಾಲೇಜಿನಲ್ಲಿ ಲಕ್ಷಾಂತರ ರೂ ಸಂಬಳ ಬರುತ್ತಿತ್ತು ಎಂದು ತೋರಿಸಿ, ವಿ.ಸಿ. ಆದಮೇಲೂ ಅದನ್ನೇ ಪಡೆದರು. (http://www.deccanherald.com/content/107863/F)Tumkur-VC-Shameless-Sharma ನೇಮಕಾತಿ ಸಂದರ್ಭದಲ್ಲಿ ಅವ್ಯವಹಾರದ ಸುದ್ದಿಗಳು ಅಲ್ಲಲ್ಲಿ ಬಂದರೂ, ತನಿಖೆಯಾಗಬೇಕು, ವಿ.ಸಿ. ರಾಜಿನಾಮೆ ನೀಡಬೇಕು ಎಂದು ಕೂಗು ಏಳಲಿಲ್ಲ.

ಇತ್ತೀಚೆಗೆ ಬಹಿರಂಗವಾಗಿರುವಂತೆ ಅವರ ಅವಧಿಯಲ್ಲಿ ಕೆಲವು ಅದ್ಭುತ ಸಾಧನೆಗಳು ವಿ.ವಿ.ಯಲ್ಲಿ ಆಗಿ ಹೋಗಿವೆ. ಆ ಸಾಧನೆಗಳಿಗೆ ಬಹುಶಹ ಭಾರತರತ್ನವೂ ಕಡಿಮೆಯೆ. ಕೇವಲ ಎಂಟು-ಒಂಭತ್ತು ತಿಂಗಳಿಗೆ ಪಿ.ಎಚ್.ಡಿ ಅಧ್ಯಯನ ಮುಗಿಸಿದ್ದಾರೆ ಇಲ್ಲಿಯ ಸಂಶೋಧಕರು (ಪ್ರಜಾವಾಣಿ ವರದಿ: 49 ದಿನದಲ್ಲಿ ಪಿಎಚ್.ಡಿ). ಜಗತ್ತಿನ ಯಾವ ವಿ.ವಿ.ಯಲ್ಲೂ ಇಂತಹದೊಂದು ಸಾಧನೆ ಆಗಿಲ್ಲ ಎನಿಸುತ್ತೆ. ಸಮಾಜ ಕಲ್ಯಾಣ ಇಲಾಖೆಯವರು ವಿವಿಧ ಯೋಜನೆ ಅಡಿಯಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗೆ ಆರು-ಎಂಟು ತಿಂಗಳ ತರಬೇತಿ ಆಯೋಜಿಸುತ್ತಾರೆ. ಆದರೆ ಅಲ್ಲಿ ತರಬೇತಿ ಪಡೆದವರನ್ನು ’ಡಾ’ ಎಂದು ಕರೆಯುವುದಿಲ್ಲ ಅಷ್ಟೆ.

ಗೌರವ ಡಾಕ್ಟರೇಟ್ ಗಳು ಇಲ್ಲಿ ಬೇಕಾಬಿಟ್ಟಿ. ಒಂದೇ ವರ್ಷ 25 ಜನರಿಗೆ ಕೊಟ್ಟಿದ್ದಾರೆ. Tumkur-VC-Sharma-and-doctoratesಯಾಕಿಷ್ಟು ಕೊಟ್ಟೀರಿ ಎಂದು ಕೇಳಿದರೆ, “ದುಡ್ಡು ಜಾಸ್ತಿ ಇದ್ದವರು, ಜಾಸ್ತಿ ದಾನ ಮಾಡ್ತಾರೆ..ಅದರಲ್ಲೇನು ತಪ್ಪು..?” ಎಂದು ಕೇಳುತ್ತಾರೆ (ಪ್ರಜಾವಾಣಿ ವರದಿ). ಹಾಗಾದರೆ ಇವರ ವಿ.ವಿಯಲ್ಲಿ ಗೌರವ ಡಾಕ್ಟರೇಟ್‌ಗಳು ಬೇಕಾದಷ್ಟು ಬಿದ್ದಿದ್ದವು, ಹಾಗಾಗಿ ಇವರು ತಮಗೆ ಬೇಕಾದವರಿಗೆಲ್ಲ ಕೊಟ್ಟರು. ಅವರು ದಾನಶೂರ ಕರ್ಣ… ಅಲ್ಲಲ್ಲ ಶರ್ಮ! ಹೀಗೆ ವಿ.ವಿಯಲ್ಲಿ ಇವರಿಂದ ವಿವಿಧ ಸವಲತ್ತು ಪಡೆದವರು ಅವರದೇ ಜಾತಿಯವರು ಎನ್ನುವುದನ್ನು ಪ್ರಜಾವಾಣಿಯಲ್ಲಿ ಪ್ರಕಟವಾದ ವರದಿಗಳು ಸ್ಪಷ್ಟವಾಗಿ ಹೇಳುತ್ತವೆ. ಆದರೆ ವಿಪರ್ಯಾಸ ನೋಡಿ, ಈ ಭಾನಗಡಿಗಳು ಎಲ್ಲೋ ಒಂದು ಮೂಲೆಯಲ್ಲಿ ಚರ್ಚೆಯಾಗಿ ಮರೆಯಾಗುತ್ತವೆ. ಅವರ ಕೃತ್ಯಗಳಿಗೆ ಅವರು ಕೊಡುವ ಇನ್ನೊಂದು ಸಮರ್ಥನೆ, “ಇಷ್ಟೇ ಜನಕ್ಕೆ ಗೌರವ ಡಾಕ್ಟರೇಟ್ ಕೊಡಬೇಕೆಂದು ನಿಯಮವೇನಿಲ್ಲ.”

ಅವರು ತಮ್ಮ ಕಾಲಾವಧಿ ಮುಗಿಯುವ ವೇಳೆಗೆ ಉನ್ನತ ಶಿಕ್ಷಣ ಪರಿಷತ್‌ನ ಉಪಾಧ್ಯಕ್ಷರಾಗಿದ್ದರು. ಆ ಹಂತದಲ್ಲಿ ಅವರಿಗೆ ತಾವು ಹಿಂದೆ ಇದ್ದ ಶಿಕ್ಷಣ ಸಂಸ್ಥೆಗೆ ಹೋಗಿ ಪ್ರಾಂಶುಪಾಲರಾಗಿ ಮುಂದುವರಿಯಬೇಕೆಂಬ ಹಂಬಲ ಹುಟ್ಟಿಕೊಂಡಿತು. ಅದಕ್ಕೆ ಅಲ್ಲಿಯ ಆಡಳಿತ ಒಪ್ಪುತ್ತಿರಲಿಲ್ಲ. ಆಗ ಸರಕಾರ ಜಾರಿಯಲ್ಲಿದ್ದ ಕಾನೂನಿಗೆ ತಿದ್ದುಪಡಿ ತಂದು ಆ ಸವಲತ್ತನ್ನು ಅವರಿಗೆ ಒದಗಿಸಲು ಮುಂದಾಗುತ್ತಾರೆ. ಅಂದಿನ ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ತಿದ್ದುಪಡಿ ಮಸೂದೆಯನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸುತ್ತಾರೆ. ಆದರೆ, ಆ ಹೊತ್ತಿಗೆ ಈ ಮಸೂದೆ ಹಿಂದಿನ ಮರ್ಮ ಅರಿತ ಕೆಲ ಹಿರಿಯರು, ವಿರೋಧ ಪಕ್ಷದ ಸದಸ್ಯರುಗಳು ವಿರೋಧಿಸಿದಾಗ, Tumkur-VC-Shameless-Sharma-and-minister-CT-Ravi-in-unholy-nexusರವಿ ತನ್ನ ಮಸೂದೆಯನ್ನ ಸಮರ್ಥನೆ ಮಾಡಿಕೊಳ್ಳಲಾಗದೆ ಮಸೂದೆಯನ್ನು ಹಿಂದಕ್ಕೆ ಪಡೆಯುತ್ತಾರೆ. (http://www.thehindu.com/todays-paper/tp-national/tp-karnataka/government-withdraws-university-amendment-bill-following-protests/article3715111.ece)

ಒಂದು ಖಾಸಗಿ ಕಾಲೇಜಿನ ಪ್ರಾಂಶುಪಾಲರು ಈ ಮಟ್ಟಿಗೆ ಪ್ರಭಾವಿಯಾಗಿ ಬೆಳೆಯಲು ಸಾಧ್ಯವಾಗಿದ್ದು, ರಾಜಕಾರಣಿಗಳು ಅವರಿಗೆ ಬೆಂಬಲಿಗೆ ಇದ್ದದ್ದು. ರಾಜಭವನವೂ ಅವರಿಗೆ ಸಹಕರಿಸಿತು. ಇಲ್ಲವಾಗಿದ್ದಲ್ಲಿ, ಅವರ ಸಂಬಳದ ವಿಚಾರದಲ್ಲಿಯೇ ತಕ್ಕ ನಿರ್ಧಾರ ತೆಗೆದುಕೊಂಡಿದ್ದರೆ, ಅವರು ಮುಂದುವರಿದು ಈ ಮಟ್ಟಿಗೆ ಅವ್ಯವಹಾರಗಳಿಗೆ ಕೈ ಹಾಕುತ್ತಿರಲಿಲ್ಲ. ಸೂಕ್ತ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.