ಎಸ್.ಆರ್.ಹಿರೇಮಠ್ : ವರ್ತಮಾನ.ಕಾಮ್‌ನ ವರ್ಷದ ವ್ಯಕ್ತಿ

[ವರ್ತಮಾನ.ಕಾಮ್‌ನ ಪ್ರಿಯ ಓದುಗರೇ,
ನಮ್ಮ ಬಳಗದಿಂದ “ವರ್ತಮಾನ.ಕಾಮ್‌ನ 2013 ವರ್ಷದ ವ್ಯಕ್ತಿ”ಯಾಗಿ ರಾಜ್ಯದ ನೈತಿಕ ಸಾಕ್ಷಿಪ್ರಜ್ಞೆಯಾಗಿ ಗುರುತಾಗಿರುವ ಮತ್ತು ಈ ನಾಡಿನಲ್ಲಿ ಕಾನೂನು ಮತ್ತು ಪ್ರಜಾಪ್ರಭುತ್ವ ನೆಲೆಗೊಳ್ಳಲು ನಿರಂತರವಾಗಿ ಶ್ರಮಿಸುತ್ತಿರುವ ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠರನ್ನು ಆಯ್ಕೆ ಮಾಡಿದ್ದೇವೆ. ಇದು ಈ ವರ್ಷದ ಕೊನೆಯ ಲೇಖನ. ಇಂತಹ ಒಂದು ಧನ್ಯವಾದಪೂರ್ವಕ ಲೇಖನದಿಂದ ಈ ವರ್ಷಕ್ಕೆ ವಿದಾಯ ಹೇಳುತ್ತ, ಮತ್ತಷ್ಟು ಆಶಾವಾದ ಮತ್ತು ಕ್ರಿಯಾಶೀಲತೆಯಿಂದ ಹೊಸ ವರ್ಷವನ್ನು ಎದುರುಗೊಳ್ಳೋಣ. ಹಿರೇಮಠರಂತಹವರ ಕೆಲಸ ನಮ್ಮೆಲ್ಲರಲ್ಲೂ ಅಂತಹ ಸ್ಫೂರ್ತಿ ಮತ್ತು ಧೃಢನಿಶ್ಚಯ ಮೂಡಿಸಲಿ ಎಂದು ಆಶಿಸುತ್ತಾ…
ನಮಸ್ಕಾರ,
ರವಿ ಕೃಷ್ಣಾರೆಡ್ಡಿ]


ಎಸ್.ಆರ್.ಹಿರೇಮಠ್ : ವರ್ತಮಾನ.ಕಾಮ್‌ನ ವರ್ಷದ ವ್ಯಕ್ತಿ

– ಬಿ.ಶ್ರೀಪಾದ ಭಟ್

“Because I am involved in mankind,
And therefore never send to know for whom the bell tolls;
It tolls for thee” ಎಂದು ಹೇಳಿದ ಕವಿ ಜಾನ್ ಡನ್‌ನ “for whom the bell tolls” ಸಾಲುಗಳನ್ನು ಉದಾಹರಿಸುತ್ತ ‘ಆ ಓಲಗದ ಸದ್ದು ಯಾವ ನೋವನ್ನು, ಯಾರ ಸಾವನ್ನು, ಎಷ್ಟು ಹೃದಯಗಳ ಆಕ್ರಂದನವನ್ನು ಸೂಚಿಸುತ್ತದೆ? ಆ ಓಲಗದ ಸದ್ದು ಯಾವ ಮಾಯವಾದ ಕ್ರಿಯಾಶೀಲತೆಯನ್ನು, ಕೊನೆಗೊಂಡ ಕನಸನ್ನು ಸೂಚಿಸುತ್ತದೆ?’ ಎಂದು “ಇಲ್ಲಿ ಯಾವನೂ ದ್ವೀಪವಲ್ಲ” ಎನ್ನುವ ತಮ್ಮ ಅದ್ಭುತ ಟಿಪ್ಪಣಿಯಲ್ಲಿ ಲಂಕೇಶ್ ಮಾರ್ಮಿಕವಾಗಿ ಪ್ರಶ್ನಿಸಿದ್ದರು. ಅಂದು ಕಾಂಗ್ರೆಸ್ ಪಕ್ಷದ ಗುಂಡೂರಾವ್ ಅವರ ದುಷ್ಟ ಆಡಳಿತ ಕೊನೆಗೊಂಡು ಹೆಗಡೆಯ ಸರ್ಕಾರ ಅಧಿಕಾರದಲ್ಲಿತ್ತು. ಆದರೆ 1985 ರ ವೇಳೆಗೆ ಹೆಗಡೆ ಸರ್ಕಾರ ಸಹ ಹಾದಿ ತಪ್ಪತೊಡಗಿತ್ತು. ಆಗ ಕರ್ನಾಟಕದಲ್ಲಿ ಅನಧಿಕೃತ ವಿರೋಧ ಪಕ್ಷದಂತೆ ಕಾರ್ಯ ನಿರ್ವಹಿಸುತ್ತಿದ್ದ ಲಂಕೇಶ್ ಪತ್ರಿಕೆಯ ಸಂಪಾದಕೀಯದಲ್ಲಿ ಲಂಕೇಶ್ ಮೇಲಿನಂತೆ ಪ್ರಶ್ನಿಸಿದ್ದರು. ಮುಂದುವರೆದು ಲಂಕೇಶ್ “ಆತ್ಮವಿಲ್ಲದ ಆಡಳಿತ ನೀಡಬೇಡಿ” ಎಂದು ಹೇಳಿದ್ದರು. ಇಂದಿಗೂ ಈ ಟೀಕೆ ಟಿಪ್ಪಣಿ ಪ್ರಸ್ತುತ.

ಇಂದು ಬಿಜೆಪಿಯ ದುಷ್ಟ ಆಡಳಿತ ಕೊನೆಗೊಂಡು ಸಿದ್ಧರಾಮಯ್ಯನವರ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಅಂದಿನ ಹೆಗಡೆ ಸರ್ಕಾರದಂತೆಯೇ ಇಂದಿನ ಸಿದ್ಧರಾಮಯ್ಯನವರ ಸರ್ಕಾರ ಹಳಿ ತಪ್ಪತೊಡಗಿದೆ. ನಾವೇನು ಮಾಡಬೇಕು?? ಅನಧಿಕೃತ ವಿರೋಧ ಪಕ್ಷದಂತೆ ಕಾರ್ಯ ನಿರ್ವಹಿಸಬೇಕಿತ್ತು. ಆದರೆ ನಮ್ಮೆಲ್ಲರ ಪ್ರಕಾರ ಇದು ಶಾಂತಿಯ ಕಾಲ. ಕ್ರಾಂತಿ ಮುಗಿದಿದೆ. ಕಾಂಬುಜಿಗಳಿಗೆ (ಕಾಂಗ್ರೆಸ್ ಬುದ್ಧಿಜೀವಿಗಳು -ಚಂಪಾ ಹೇಳಿದ್ದು), ಮತ್ತು ಕಾಂಬುಜಿಗಳಾಗಲು ಬಾಗಿಲಲಿ ನಿಂತಿರುವ ಬಂಡಾಯದ ಅಂದಕಾಲತ್ತಿಲ್ ಸಾಹಿತಿಗಳಿಗೆ ಈ ಓಲಗದ ಸದ್ದು ಈಗ ಕೇಳಿಸುತ್ತಿಲ್ಲ !!

ನಮಗೂ ಕೇಳಿಸುತ್ತಿಲ್ಲ!! ಸಬ್ ಆರಾಮ್ ಹೈ!!

ಆದರೆ ಅಂದು ಬಳ್ಳಾರಿ ರಿಪಬ್ಲಿಕ್‌ನ ಸರ್ವಾಧಿಕಾರಕ್ಕೆ ಅಂತ್ಯ ಹಾಡಿ ಬಿಜೆಪಿ ಪಕ್ಷದ sr-hiremathಬೆನ್ನೆಲೆಬು ಮುರಿದು ಹಾಕಿದ ಎಸ್.ಆರ್. ಹಿರೇಮಠ್ ಅವರು ಈಗಲೂ ಸುಮ್ಮನೆ ಕುಳಿತಿಲ್ಲ. ಎಂಬತ್ತರ ದಶಕದ ಲಂಕೇಶ್ ಪತ್ರಿಕೆಯಂತೆ ಇಂದು ಸಹ ಅಧಿಕೃತ ವಿರೋಧ ಪಕ್ಷದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ, ಸೋಗಲಾಡಿ ಬುದ್ದಿಜೀವಿ ರಾಜಕಾರಣಿ ರಮೇಶ್ ಕುಮಾರ್‌ರಂತವರ ಬಣ್ಣ ಬಯಲು ಮಾಡುತ್ತಿದ್ದಾರೆ.

ಇಂದು ನಮ್ಮೆಲ್ಲರ ಸಾಕ್ಷೀಪ್ರಜ್ಞೆಯಂತಿರುವ “ಎಸ್.ಆರ್. ಹಿರೇಮಠ್” ನಿಜಕ್ಕೂ ಈ ರಾಜ್ಯದ ವರ್ಷದ ವ್ಯಕ್ತಿ.


ಕೊನೆಗೆ, ದಕ್ಷಿಣ ಕನ್ನಡದಲ್ಲಿ ಎಲ್ಲಾ ಬಗೆಯ ಮೂಲಭೂತವಾದಿಗಳ ಸರ್ವಾಧಿಕಾರದ ವಿರುದ್ಧ ಹೋರಾಟ ನಡೆಸುತ್ತಿರುವ ಕಾಮ್ರೇಡ್ ಮುನೀರ್ ಕಾಟಿಪಳ್ಳ ಮತ್ತವರ ಗೆಳೆಯರಿಗೆ ನಾವೆಲ್ಲ ಬೆಂಬಲವಾಗಿ ನಿಲ್ಲಬೇಕು. ಇವರ ಹೋರಾಟ ಒಂಟಿಧ್ವನಿಯಾಗಲು ಬಿಡಬಾರದು.  ಏಕೆಂದರೆ, ಲಂಕೇಶ್ ಹೇಳಿದಂತೆ, “No man is an island ಎನ್ನುವುದರ ಮೂಲಕ ಜಗತ್ತಿನ ಎಲ್ಲರ ಬದುಕು ತಳುಕು ಹಾಕಿಕೊಂಡಿರುವುದನ್ನು, ಪರಸ್ಪರ ಸಂಬಂಧ ಹೊಂದಿರುವುದನ್ನು ಕವಿ ಸೂಚಿಸುತ್ತಾನೆ.”

ನಮಗೂ ಆ ಓಲಗದ ಸದ್ದು ಕೇಳಿಸುವಂತೆ ನಮ್ಮ ಪಂಚೇಂದ್ರಿಯಗಳು ಸದಾ ಕಾರ್ಯನಿರ್ವಹಿಸುತ್ತಿರಲಿ…

3 thoughts on “ಎಸ್.ಆರ್.ಹಿರೇಮಠ್ : ವರ್ತಮಾನ.ಕಾಮ್‌ನ ವರ್ಷದ ವ್ಯಕ್ತಿ

  1. Naveen

    ಸಮರ್ಥ ವ್ಯಕ್ತಿಯನ್ನೇ ಆಯ್ಕೆ ಮಾಡಿದ್ದೀರಿ. ಶ್ರೀ ಹಿರೆಮಥರಂಥ ಹೋರಾಟಗಾರರು ಇನ್ನೂ ಒಂದಷ್ಟು ಜನ ಬೇಕಾಗಿರುವದು ಇಂದಿನ ಅತೀ ಅಗತ್ಯವಾಗಿದೆ. ಇಂಥ ವ್ಯಕ್ತಿಗಳಿಗೆ ಬೆಂಬಲ ನೀಡದಿದ್ದರೆ ಮುಂದಿನ ತಲೆಮಾರಿನ ಜನ ನಮ್ಮನ್ನು ಕ್ಷಮಿಸಲ್ಲಾ.

    Reply

Leave a Reply to Naveen Cancel reply

Your email address will not be published. Required fields are marked *