Monthly Archives: December 2013

ಜಿ.ಎಸ್.ಎಸ್. ನಮಗೆ ಏಕೆ ಮತ್ತು ಹೇಗೆ ಮಾದರಿ


– ಡಾ.ರಾಮಲಿಂಗಪ್ಪ. ಟಿ. ಬೇಗೂರು


 

ಜಿ.ಎಸ್.ಎಸ್. ಭೌತಿಕವಾಗಿ ಇನ್ನಿಲ್ಲ. ಆದರೆ ಅವರ ಕೃತಿಗಳಲ್ಲಿ ಮತ್ತು ಕೆಲಸಗಳಲ್ಲಿ ಅವರು ಸದಾ ಜೀವಂತ ಇರುತ್ತಾರೆ. ಪ್ರಜ್ಞೆಯ ನೆಲೆಯಲ್ಲಿ ಹೊಸ ಪೀಳಿಗೆಯ ಮಾನಸದಲ್ಲಿ ಅವರು ಸದಾ ಜೀವಿತರೆ.

ಯಾರಾದರೂ ಗಣ್ಯರು ತೀರಿಕೊಂಡಾಗ ಸಾಮಾನ್ಯವಾಗಿ ಇನ್ನು ಇಂಥವರು ಹುಟ್ಟುವುದಿಲ್ಲ, GSSಇವರ ಸಾವಿನಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳುವುದುಂಟು. ತುಂಬಲಾರದ ನಷ್ಟ ಎಂಬ ಮಾತು ಕ್ಲೀಶೆಯಾದರೂ ಜಿ.ಎಸ್.ಎಸ್. ವಿಷಯದಲ್ಲಿ ಇದು ವಾಸ್ತವ. ಅವರಂಥವರು ಯಾರೂ ಇಲ್ಲ ನಿಜ. ಆದರೆ ಅವರಂಥವರೆ ಯಾರಾದರೂ ಯಾಕೆ ಇರಬೇಕು?

ಯಾರನ್ನಾದರೂ ನೆನೆಸುವುದು ಅವರ ಒಳ್ಳೆಯ ಕೆಲಸಗಳಿಂದ. ಜಿ.ಎಸ್.ಎಸ್. ಹಲವಾರು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಅವರು ಕನ್ನಡ ಅಧ್ಯಯನ ಕೇಂದ್ರ ಕಟ್ಟಿದ ಕೆಲಸ, ಸುಗಮ ಸಂಗೀತ ಮತ್ತು ಸುಗಮ ಸಾಹಿತ್ಯವನ್ನು ಕಟ್ಟಿದ ಕೆಲಸ, ಕನ್ನಡ ಕಾವ್ಯತತ್ವ ಮತ್ತು ಕಾವ್ಯಮೀಮಾಂಸೆ ಹಾಗೂ ವಿಮರ್ಶೆಯನ್ನು ಕಟ್ಟಿದ ಕೆಲಸ, ಕನ್ನಡದ ಪ್ರತಿಷ್ಠಿತ ಸಾಹಿತ್ಯ ಪರಂಪರೆಯನ್ನು ಹತ್ತು ಹಲವು ವಿಚಾರ ಸಂಕಿರಣಗಳ ಮೂಲಕ ಮರುಓದಿಗೆ ಗುರಿಪಡಿಸಿ ವರ್ತಮಾನಕ್ಕೆ ಪ್ರಸ್ತುತಗೊಳಿಸಿದ ಕೆಲಸ, ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಇ ನಿರ್ವಹಿಸಿದ ಕೆಲಸ, ಹೊಸ ಪೀಳಿಗೆಯನ್ನು ಕಟ್ಟಿದ ಕೆಲಸ ಹೀಗೆ ಹಲವಾರು ಕೆಲಸಗಳಿಂದ ಜಿ.ಎಸ್.ಎಸ್. ಸದಾ ನಮಗೆಲ್ಲ ಮಾರ್ಗದರ್ಶಿಯೆ, ಮಾದರಿಯೆ ಆಗಿದ್ದಾರೆ.

ಒಬ್ಬ ಮನುಷ್ಯ ಎಷ್ಟು ಕಾಲ ಬದುಕಲು ಸಾಧ್ಯ? 100? 105? 110? ಆನಂತರ ಸಾಯಲೇಬೇಕಲ್ಲವೆ? ಆದರೆ ಆತನಿಂದ ಸಮಾಜಕ್ಕೆ ಎಷ್ಟರಮಟ್ಟಿಗೆ ಒಳಿತು ಆಗಿದೆ ಎಂಬುದೆ ಮುಖ್ಯ. ಅಲ್ಲದೆ ಆತನ ವಿಶಿಷ್ಟ ವಿಚಾರಕ್ರಮ, ಕಾರ್‍ಯಶೀಲತೆಗಳು ನಂತರದ ಪೀಳಿಗೆಯಲ್ಲಿ ಮುಂದುವರಿಯಬೇಕು. ಇಲ್ಲದೆ ಇದ್ದರೆ ಯಾವ ಉನ್ನತ ಪರಂಪರೆಗಳಿಗು ಮಾನವ ಸಮಾಜದಲ್ಲಿ ಜಿವಂತ ಇರಲು ಆಗದು. ಈ ದೃಷ್ಟಿಯಿಂದ ಜಿ.ಎಸ್.ಎಸ್. ಹಣತೆ ಹಚ್ಚಿ ಹಲವರ ಕೈಗೆ ಕೊಟ್ಟು ಹೋಗಿದ್ದಾರೆ. ಅವುಗಳು ಬೆಳಗುತ್ತಿವೆ ಮತ್ತು ಮುಂದಿನ ಪೀಳಿಗೆಗೆ ರವಾನೆ ಆಗಬಲ್ಲವು.

ಇಂದಿನ ಕಾಲದಲ್ಲಿ ರಾಮಣ್ಣನನ್ನು ಕಂಡರೆ ಭೀಮಣ್ಣನಿಗೆ ಆಗುವುದಿಲ್ಲ, ಭೀಮಣ್ಣನನ್ನು ಕಂಡರೆ ರಹೀಮಣ್ಣನಿಗೆ ಆಗುವುದಿಲ್ಲ. ಇದು ರಾಜಕಾರಣದಲ್ಲಿ ಮಾತ್ರ ಅಲ್ಲ; ಸಾಹಿತ್ಯದಲ್ಲು ನಿಜ. ಒಂದು ಬೌದ್ಧಿಕ ವಿಚಾರಧಾರೆಗೆ ಸೇರಿದವರು ಇನ್ನೊಂದು ವಿಚಾರಶಾಲೆಗೆ ಸೇರಿದವರನ್ನು ತಮ್ಮೊಂದಿಗೆ ಸೇರಿಸಿಕೊಳ್ಳುವುದಿಲ್ಲ. ಆದರೆ ಜಿ.ಎಸ್.ಎಸ್. ಹಾಗಲ್ಲ. ಭಿನ್ನ ರೀತಿಯ ವಿಚಾರಧಾರೆಗಳಿಗೆ ಸೇರಿದವರನ್ನೂ ತಮ್ಮೊಂದಿಗೆ ಒಡನಾಡಲು ಬಿಟ್ಟವರು ಮತ್ತು ಬೆಳೆಸಿದವರು. ಬರಗೂರು, ಸಿದ್ಧಲಿಂಗಯ್ಯ, ಡಿ.ಆರ್.ನಾಗರಾಜ, ಕಿ.ರಂ.ನಾಗರಾಜ, ಕೆ.ವಿ.ನಾರಾಯಣ. ಬಸವರಾಜ ಕಲ್ಗುಡಿ ಹೀಗೆ ಭಿನ್ನ ಆಲೋಚನಾ ಕ್ರಮದ ಜನರನ್ನೆಲ್ಲ ಒಟ್ಟಿಗೆ ಬೆಳೆಸಿದ ಮತ್ತು ಭಿನ್ನವಾಗಿ ಬೆಳೆಯಲು ಬಿಟ್ಟ ಚೈತನ್ಯ ಅವರು. ಅವರು ಕಾವ್ಯ ಮತ್ತು ಇತರ ಸಾಹಿತ್ಯವನ್ನು ಬರೆದದ್ದು ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರವನ್ನು ಕಟ್ಟಿದ್ದು ಎರಡೂ ಕೂಡ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಎರಡು ಭಿನ್ನ ಅನನ್ಯ ಕೊಡುಗೆಗಳು.

ಜಿ.ಎಸ್.ಎಸ್. ಅವರನ್ನು ಸಮನ್ವಯ ಕವಿ, ಭಾವಗೀತೆಯ ಕವಿ ಎಂದೇ ಬ್ರಾಂಡು ಮಾಡಲಾಗಿದೆ. ಹಾಗೆ ಮಾಡುವಾಗ ಬೇಂದ್ರೆ ಕಾವ್ಯ ಮಾದರಿ ಮತ್ತು ಅಡಿಗರ ಕಾವ್ಯಮಾದರಿಗಳನ್ನು ತನ್ನ ಮಾನದಂಡವನ್ನಾಗಿ ಇಟ್ಟುಕೊಂಡು ಕನ್ನಡ ವಿಮರ್ಶೆಯು ಇವರನ್ನು ಮತ್ತು ಇವರ ಪೂರ್ವಸೂರಿಗಳಾದಂತಹ ಕೆ.ಎಸ್.ನ., ಕಣವಿ, ಪು.ತಿ.ನ, ಮುಂತಾದವರನ್ನು ಕಡಿಮೆ ದರ್ಜೆಯ ಕವಿಗಳು ಎಂದೆ ಬಿಂಬಿಸಿದೆ. ಯಾಕೆ ಹೀಗೆ? ಖಂಡಿತಾ ನಮ್ಮಲ್ಲಿ ಕಾವ್ಯ ರಚನಾ ಕ್ರಮ ಮತ್ತು ಕಾವ್ಯ ರೂಪದ ಬಗೆಗಿನ ಮಿತಿಯುಳ್ಳ ತಿಳುವಳಿಕೆಯೆ ಇದಕ್ಕೆ ಕಾರಣವಾಗಿದೆ. ಏನನ್ನು ಕುರಿತು ಬರೆಯಬೇಕು ಮತ್ತು ಅದನ್ನು ಹೇಗೆ ಬರೆಯಬೇಕು ಎಂಬ ಬಗ್ಗೆ ನಮ್ಮ ಕನ್ನಡ ವಿಮರ್ಶಾ ವಾಜ್ಞಯವು ತನ್ನದೆ ಕೆಲವು ಕಲ್ಪನೆಗಳನ್ನು ಇಟ್ಟುಕೊಂಡಿದೆ. ಅಲ್ಲಿ ಜಿ.ಎಸ್.ಎಸ್. ಮಾದರಿ ಉನ್ನತ ಅಲ್ಲ! ಹಾಡುವ/ಗೇಯ ಕಾವ್ಯ ಉನ್ನತ ಅಲ್ಲ. ಸರಳ ಮತ್ತು ನೇರವಾದ ಕಾವ್ಯ ಉನ್ನತ ಅಲ್ಲ. ಜಿ.ಎಸ್.ಎಸ್. ಅವರನ್ನಷ್ಟೆ ಅಲ್ಲ ಆನಂತರದ ಕೆ.ಎಸ್.ನಿಸಾರ್ ಅಹಮದ್, ಎಚ್.ಎಸ್.ವೆಂಕಟೇಶಮೂರ್ತಿ, ಬಿ.ಆರ್.ಲಕ್ಷ್ಮಣರಾವ್, ಲಕ್ಷ್ಮೀನಾರಾಯಣ ಭಟ್ಟ ಮೊದಲಾದವರನ್ನೂ ಕೆಸೆಟ್ ಕವಿಗಳು ಎಂದೇ ಗೇಲಿ ಮಾಡುತ್ತ ಬರಲಾಗಿದೆ! ಭಿನ್ನ ಮಾದರಿಗಳನ್ನು ಗೌರವಿಸದ ಮತ್ತು ಎಲ್ಲವನ್ನೂ ಶ್ರೇಣೀಕರಣ ಮಾಡುವ ವಿದ್ಯಮಾನ ನಮ್ಮ ಕನ್ನಡ ವಿಮರ್ಶೆಯಲ್ಲಿ ಧಾರಾಳವಾಗಿ ನಡೆದಿದೆ. ಭಾವ ಕಡಿಮೆ ಬುದ್ಧಿ ಮೇಲು ಹೇಗೆ? ಅದಕ್ಕಿರುವ ರೀಚ್ ಅದಕ್ಕೆ, ಇದಕ್ಕಿರುವ ರೀಚ್ ಇದಕ್ಕೆ.

ನವ್ಯ ಸಂವೇದನೆಯ ಏರುಗಾಲದಲ್ಲಿ ರಾಮಚಂದ್ರ ಶರ್ಮ, ಅಡಿಗ ಮೊದಲಾದವರ ಕಾವ್ಯ ಮಾದರಿಯೆ ಉನ್ನತವಾದುದು ಎಂಬ ನಂಬಿಕೆಯನ್ನು ಸೃಷ್ಟಿಸಲಾಗಿತ್ತು. ಸುಗಮ ಸಂಗೀತ ಮತ್ತು ಸುಗಮ ಸಾಹಿತ್ಯವನ್ನು ಕಡಿಮೆ ದರ್ಜೆಯ ಕಾವ್ಯ ಎಂದೆ ಕಾಣಲಾಗುತ್ತಿತ್ತು. ಗಂಭೀರ ಸಾಹಿತ್ಯ ಮತ್ತು ಜನಪ್ರಿಯ ಸಾಹಿತ್ಯ ಎಂಬ ಸಾಹಿತ್ಯದ ಒಡಕು ಇಲ್ಲಿ ನವ್ಯ ಮತ್ತು ಸುಗಮ (ಭಾವಗೀತಾತ್ಮಕ) ಎಂದು ಒಡೆದಿತ್ತು. ಆದರೆ ಜಿ.ಎಸ್.ಎಸ್. ತಮ್ಮ ನಿರಂತರವಾದ ಭಾವಗೀತೆ, ನಿಯತ ಲಯ, ಗೇಯ ಕವನಗಳ ರಚನೆಯ ಮೂಲಕ ಕನ್ನಡ ಕಾವ್ಯದ ಭಿನ್ನ ಮಾದರಿಯನ್ನು ಸ್ಥಾಪಿಸಲು ಯತ್ನಿಸಿದರು. ಕಾವ್ಯ ಬಂಧ ಮತ್ತು ಆಕಾರದ ಬಗ್ಗೆ ಇದ್ದ ಸ್ಥಾಪಿತ ನಂಬಿಕೆಯನ್ನು ಒಡೆಯಲು ಯತ್ನಿಸಿದರು. ನವೋದಯದ ಆರಂಭದಲ್ಲಿ ಬಿ.ಎಂ.ಶ್ರೀ. ಯಾವ ಮಾದರಿಯನ್ನು ಮುಂದಿಡಲು ಯತ್ನಿಸಿದರೋ ಅಂಥಹ ಮಾದರಿಯನ್ನು ನವ್ಯದ ನಂತರ ಜಿ.ಎಸ್.ಎಸ್. ಕೂಡ ಮುಂದಿಡಲು ಯತ್ನಿಸಿದರು. ಇದರಿಂದ ಕನ್ನಡ ಕಾವ್ಯಕ್ಕೆ ನಷ್ಟವೇನೂ ಆಗಲಿಲ್ಲ. ಒಳಿತೇ ಆಯಿತು. ಸಾಮಾನ್ಯ ಮತ್ತು ಗಂಭೀರ ಎಂಬ ಕಾವ್ಯನೆಲೆಗಳ ನಡುವಣ ಬ್ರಿಜ್ ಒಂದು ತಾಯಾರಾಗಲು ಸಾಧ್ಯವಾಯಿತು. ಹೀಗಾಗಿ ಕಾವ್ಯ ಮತ್ತು ಗಾಯನಗಳು ಬೆರೆತ ಒಂದು ಮಾದರಿಯೆ ಇಂದು ಜೋರಾಗಿ ಸ್ಥಾಪಿತ ಆಗಿದೆ.

ಕನ್ನಡ ಸಾಹಿತ್ಯವನ್ನು ಬೋಧಿಸುವ ಪ್ರಾಧ್ಯಾಪಕರಾಗಿದ್ದ ಜಿ.ಎಸ್.ಎಸ್. ಸಾಹಿತ್ಯದ ಎಲ್ಲ ಕವಲುಗಳನ್ನೂ ಸಮಾನವಾಗಿ ಪ್ರೀತಿಸುತ್ತಿದ್ದವರು. ಹಾಗಾಗಿಯೆ ಅವರಿಗೆ ಎಲ್ಲ ಪ್ರಾಚೀನ ಸಾಹಿತ್ಯದ ಒಳ್ಳೆಯ ಭಾಗಗಳನ್ನು ಸಲಹುವ ಹಾಗೆಯೆ ಆಧುನಿಕ ಸಾಹಿತ್ಯದ ಎಲ್ಲ ಮಾದರಿಗಳ ಬಗೆಗೂ ಪ್ರೀತಿ ಇತ್ತು. ಇವರ ‘ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ’ ಎಂಬ ಮಾತು ಸಾಹಿತ್ಯದ ಭಿನ್ನ ಮಾದರಿಗಳಿಗು ಅನ್ವಯಿಸುವಂಥದ್ದು. ಎಲ್ಲ ಮಾದರಿಗಳನ್ನೂ ಇವರು ಪ್ರೀತಿಯಿಂದ ಕಾಣುತ್ತಿದ್ದ ಕಾರಣಕ್ಕೆ ಇವರು ಭಿನ್ನ ಮಾದರಿಗಳನ್ನು ಬೆಳೆಸಲು ಸಾಧ್ಯ ಆಯಿತು. ಹಾಗಾಗಿಯೆ ಇವರ ಕಾವ್ಯ ಕೂಡ ಒಂದು ರೀತಿಯುಲ್ಲಿ ಪ್ರಯೋಗಶೀಲ ಆಯಿತು. ನವ್ಯ, ನವೋದಯ, ಬಂಡಾಯ ಎಲ್ಲ ರೀತಿಯ ಸಂವೇದನೆಗಳ ಕಾವ್ಯವನ್ನೂ ಇವರು ಪ್ರಯೋಗ ಮಾಡಿದ್ದಾರೆ.

ಅದೂ ಬೇಕು ಇದೂ ಬೇಕು
ಎಲ್ಲವೂ ಬೇಕು ನನಗೆ
ದಾರಿ ನೂರಾರಿವೆ ಬೆಳಕಿನರಮನೆಗೆ

ನೂರಾರು ಭಾವದ ಬಾವಿ: ಎತ್ತಿಕೋ
ನಿನಗೆ ಬೇಕಾದಷ್ಟು ಸಿಹಿನೀರ
ಪಾತ್ರೆಯಾಕಾರಗಳ ಕುರಿತು ಏತಕೆ ಜಗಳ?
ನಮಗೆ ಬೇಕಾದದ್ದು ದಾಹ ಪರಿಹಾರ.

ಎನ್ನುವ ಜಿ.ಎಸ್.ಎಸ್. ಕಾವ್ಯದ ಬಂಧ ಮತ್ತು ಆಕೃತಿಗಳ ಬಗೆಗೆ ಅಷ್ಟಾಗಿ ತಲೆ ಕೆಡಿಸಿಕೊಂಡವರಲ್ಲ. ಈ ಬಗ್ಗೆ ಬಹುವಾಗಿ ತಲೆ ಕೆಡಿಸಿಕೊಂಡಿದ್ದ ನವ್ಯದ ರಾಚನಿಕ ಮೀಮಾಂಸೆಯ ವ್ಯಸನವನ್ನು ಇವರು ನವಿರಾಗಿಯೆ ನಿರಾಕರಿಸಿದವರು. ನಿರಂತರ ತಮ್ಮ ನವಿರು ಕಾವ್ಯದ, ಚೆಲುವು ಮತ್ತು ಒಲವುಗಳ ಕಾವ್ಯದ, ಮೆಲುದನಿಯ ವೈಚಾರಿಕ ಕಾವ್ಯದ ರಚನೆಯ ಮೂಲಕವೆ ಅಂಥ ವ್ಯಸನಕ್ಕೆ ತಕ್ಕ ಉತ್ತರವನ್ನು ಕೊಟ್ಟರು. ಈ ದೃಷ್ಟಿಯಿಂದ ನವ್ಯಕಾವ್ಯ ಮಾದರಿಯ ಬಗೆಗೆ ಪ್ರೀತಿ ಮತ್ತು ಗೌರವ ಇದ್ದೂ ಆ ಮಾದರಿಯು ನನ್ನ ನೆಚ್ಚಿನ ಮಾದರಿ ಅಲ್ಲ ಎಂಬ ನಿರಾಕರಣೆ ಇವರ ಕಾವ್ಯದಲ್ಲೆ ಅಂತರ್ಗತ ಆಗಿರುವುದನ್ನು ಕಾಣಬಹುದು. ಅಂತಹ ಮಾದರಿಯ ಕಾವ್ಯಕ್ಕೆ ತೋರಿದ ದೊಡ್ಡ ಪ್ರಮಾಣದ ಪ್ರತಿರೋಧ ಎಂಬಂತೆಯೂ ಅವರ ಕಾವ್ಯವನ್ನು ನಾವು ಅಭ್ಯಾಸ ಮಾಡಲು ಸಾಧ್ಯವಿದೆ.

ನವಿರಾದ ಭಾವ ಮತ್ತು ಪ್ರಸನ್ನತೆ ಮಾತ್ರವೆ ಜಿ.ಎಸ್.ಎಸ್. ಅವರಲ್ಲಿ ಇದೆ ಎಂದೂ ಅವರನ್ನು ವ್ಯಾಖ್ಯಾನಿಸಲಾಗಿದೆ. ಆದರೆ ಅವರಲ್ಲಿ ಭಾವದಷ್ಟೆ ತೀವ್ರವಾಗಿ (ನೇರವಾಗಿ ಮತ್ತು ಸರಳವಾಗಿ) ವೈಚಾರಿಕತೆಯೂ ಇದೆ. ಆದರೆ ನಮ್ಮ ಕನ್ನಡ ವಿಮರ್ಶೆ ಅದನ್ನು ಗಂಭೀರವಾಗಿ ಗುರ್ತಿಸಿಯೆ ಇಲ್ಲ! ಭಾವ ಮತ್ತು ಚೆಲುವಿನ ನಿರೂಪಣೆ ಹಾಗೂ ವೈಚಾರಿಕತೆಗಳು ಒಟ್ಟಿಗೇ ಇರಲಾರವು ಎಂಬ ವಿಮರ್ಶಾ ಮಿಥ್ ಒಂದು ನಮ್ಮಲ್ಲಿ ಸೃಷ್ಠಿ ಆಗಿದೆ. ಆದರೆ ಜಿ.ಎಸ್.ಎಸ್. ಈ ಮಿಥ್‌ಅನ್ನು ಒಡೆಯುವಂತೆ ಬರೆದಿದ್ದಾರೆ. ಭಾವ ಮಾತ್ರವೆ ನಮಗೆ ಏಕೆ ಎದ್ದು ಕಾಣುತ್ತದೆ ಎಂದರೆ ಅವರ ಕವಿತೆಗಳನ್ನು ಕಣ್ಣೋದಿಗೆ ಗುರಿ ಮಾಡಿರುವುದಕ್ಕಿಂತ ಕಿವಿಯ ಕೇಳಿಕೆಗೆ ಮಾತ್ರ ನಾವು ಹೆಚ್ಚು ಗುರಿಮಾಡಿದ್ದೇವೆ. ಸಂಗೀತ ಮತ್ತು ನಾದಗಳಲ್ಲಿ ಅರ್ಥ ಗೌಣ ಆಗುವುದು ಸಹಜ ತಾನೆ. ಹಾಡು ಕೇಳುವಾಗ ನಾವು ಭಾವದಲ್ಲಿ ತೇಲುತ್ತೇವೆ, ನಾದವನ್ನು ಗುನುಗುತ್ತೇವೆ, ನಿಯತಲಯವನ್ನು ಆನಂದಿಸುತ್ತೇವೆ. ಆದರೆ ಚಿಂತಿಸುವುದಿಲ್ಲ. ಹಾಡಿನ ಕೇಳಿಕೆಗೆ ಇರುವ ಸಾಧ್ಯತೆ ಇದು. ಇದನ್ನೆ ಮಾಡುತ್ತ ಜಿ.ಎಸ್.ಎಸ್. ಅವರಲ್ಲಿ ವೈಚಾರಿಕತೆ ಇಲ್ಲ. ಬರಿ ಭಾವುಕತೆ ಇದೆ ಎಂದರೆ ಹೇಗೆ? ಆನಂದಿಸಿದರೆ ವೈಚಾರಿಕತೆ ಕಾಣುವುದಿಲ್ಲ; ಚಿಂತಿಸಿದರೆ ಕಾಣುತ್ತದೆ.

ಜಿ.ಎಸ್.ಎಸ್. ಅವರಿಗೆ ಲೋಕದಲ್ಲಿ ದುಖ, ತಲ್ಲಣ, ಸಮಸ್ಯೆ ಕಾಣುವುದೆ ಇಲ್ಲ; ಅವರಿಗೆ ಚೆಲುವು ಮಾತ್ರ ಕಾಣುತ್ತದೆ ಎಂಬಂತೆಯು ಅವರನ್ನು ವ್ಯಾಖ್ಯಾನಿಸಲಾಗಿದೆ. ಜಿ.ಎಸ್.ಎಸ್. ಅವರಿಗೆ ಲೋಕದಲ್ಲಿ ಕಾಣುವುದಿಲ್ಲವೊ ಅಥವಾ ನಮಗೆ ಅವರ ಕಾವ್ಯದಲ್ಲಿ ಕಾಣುವುದಿಲ್ಲವೊ? ಜಿ.ಎಸ್.ಎಸ್. ನಿಜವಾದ ಅರ್ಥದಲ್ಲಿ ವೈಚಾರಿಕತೆ ಮತ್ತು ಚೆಲುವು-ಒಲವು ಒಟ್ಟಿಗೆ ಇರಬಲ್ಲುವು ಎಂದು ತೋರಿಸಿದವರು. ಅಷ್ಟೆ ಅಲ್ಲ ಪಾಂಡಿತ್ಯ ಮತ್ತು ಕವಿತ್ವ ಎರಡೂ ಒಟ್ಟಿಗೆ ಇರಬಲ್ಲುವು ಎಂದು ಬಾಳಿ ತೋರಿಕೊಟ್ಟವರು. ಬರೆದು ತೋರಿ ಕೊಟ್ಟವರು.

ರಾಷ್ಟ್ರಕವಿ, ರಾಷ್ಟ್ರಕವಿ ಎಂದು ಕರೆದು ಜಿ.ಎಸ್.ಎಸ್. ಅವರನ್ನು ಕೇವಲ ಕವಿ ಎಂಬಂತೆ ನಮ್ಮಲ್ಲಿ ಬಿಂಬಿಸಲಾಗಿದೆ. (ರಾಷ್ಟ್ರಕವಿ ಎಂಬುದು ಒಳ್ಳೆಯ ಲೇಖಕ ಎಂಬ ಒಂದು ಬಿರುದು ಅಷ್ಟೆ.) ಅಷ್ಟೆ ಅಲ್ಲ ಭಾವಗೀತೆಯ ಕವಿ, ಸುಗಮ ಗೀತೆಯ ಕವಿ ಎಂದೆ ಬಿಂಬಿಸಲಾಗಿದೆ. ಅವರು ಭಾವಗೀತೆಗಳನ್ನೂ/ಸುಗಮಗೀತೆಗಳನ್ನೂ ಬರೆದಿದ್ದಾರೆ. ಹಾಗೆಯೆ ಎಲ್ಲ ರೀತಿಯ ಆಧುನಿಕ ಸಂವೇದನೆಯ ಕವಿತೆಗಳನ್ನೂ ಪ್ರಯೋಗ ಮಾಡಿದ್ದಾರೆ. ಆದರೆ ಅವರು ಬರಿದೆ ಕವಿಯಲ್ಲ. ಕನ್ನಡ ವಿಮರ್ಶೆ ಮತ್ತು ಮೀಮಾಂಸೆಗೆ ಕೂಡ ಅವರು ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಅವರ ಸೌಂದರ್‍ಯ ಮೀಮಾಂಸೆ, ವಿಮರ್ಶೆಯ ಪೂರ್‍ವ ಪಶ್ಚಿಮ, ಕಾವ್ಯಾರ್ಥ ಚಿಂತನ ಮೊದಲಾದ ಕೃತಿಗಳು ಕನ್ನಡ ತತ್ವಶಾಸ್ತ್ರ, ಮೀಮಾಂಸೆ ಮತ್ತು ವಿಮರ್ಶೆಯನ್ನು ಸಂಸ್ಕೃತದ ನೆರಳಿನಿಂದ ಮತ್ತು ಇಂಗ್ಲಿಷಿನ ನೆರಳಿನಿಂದ ನೋಡುವ ಕೃತಿಗಳೆ ಆಗಿವೆ. ಆದರೆ ಅವರ ಕನ್ನಡ ಕಾವ್ಯತತ್ವ ಚಿಂತನೆ ಆ ರೀತಿಯ ಕೃತಿಯಲ್ಲ. ತೀ.ನಂ.ಶ್ರೀ. ಹಾಕಿಕೊಟ್ಟ ಭಾರತೀಯ ಕಾವ್ಯಮೀಮಾಂಸೆ ಎಂಬ ಸಂಸ್ಕೃತವನ್ನೆ ಭಾರತೀಯ ಎಂದು ಕರೆಯುವ ಚಿಂತನಾಕ್ರಮವನ್ನು ಮೀರಿದ ಕೃತಿಯಿದು. ಕನ್ನಡದ್ದೆ ಕವಿಗಳು ಕನ್ನಡದ್ದೆ ಕಾವ್ಯತತ್ವ ಮತ್ತು ಮೀಮಾಂಸೆಯನ್ನು ಹೇಗೆ ರಚಿಸಿಕೊಳ್ಳಲು ಯತ್ನಿಸಿದ್ದಾರೆ ಎಂಬ ಹುಡುಕಾಟದ ಕೃತಿಯಿದು. ಹೀಗಾಗಿ ಕನ್ನಡದಲ್ಲಿ ಕೆ.ಕೃಷ್ಣಮೂರ್ತಿ, ಎಂ.ವಿ.ಸೀತಾರಾಮಯ್ಯ ಮೊದಲಾದವರ ಪ್ರಯತ್ನಗಳನ್ನು ಮುಂದುವರಿಸಿ ಕನ್ನಡದ್ದೆ ಕಾವ್ಯಮೀಮಾಂಸೆಯನ್ನು ಕಟ್ಟಿಕೊಳ್ಳುವಲ್ಲಿ ಮೊದಲು ಮಾಡಿದ ಹೆಗ್ಗಳಿಕೆ ಜಿ.ಎಸ್.ಎಸ್.ಗೆ ಸಲ್ಲಬೇಕು. ಕನ್ನಡಕ್ಕೆ ಇಂಗ್ಲಿಷ್ ಮತ್ತು ಸಂಸ್ಕೃತಗಳ ಹೊರತಾಗಿಯೂ ತನ್ನದೆ ಅನನ್ಯತೆ ಇದೆ ಎಂದು ಗುರ್ತಿಸಿದ ಹೆಗ್ಗಳಿಕೆ ಜಿ.ಎಸ್.ಎಸ್.ಗೆ ಸಲ್ಲಬೇಕು.

ಇವರು ಏರ್ಪಡಿಸಿದ ವಿಚಾರಸಂಕಿರಣಗಳು ಮತ್ತು (ಸಾಹಿತ್ಯ ವಾರ್ಷಿಕವನ್ನೂ ಒಳಗೊಂಡಂತೆ) ಇವರು ಮಾಡಿದ ಪ್ರಕಟಣೆಗಳು ಕನ್ನಡ ಸಾಹಿತ್ಯಕ್ಕೆ ಒಂದು ಘನತೆಯನ್ನು ತಂದುಕೊಟ್ಟವು. ಪ್ರತಿಷ್ಠಿತ ಸಾಹಿತ್ಯ ಪರಂಪರೆಯನ್ನು ತಮ್ಮ ಗುರುಗಳಾದ ಕುವೆಂಪು, ತ.ಸು.ಶಾಮರಾಯ ಮೊದಲಾದವರು ಹೇಗೆ ತಮ್ಮ ಮುಂದಿನ ಪೀಳಿಗೆಗೆ ರವಾನಿಸಿದರೋ ಹಾಗೆ ಜಿ.ಎಸ್.ಎಸ್. ಕೂಡ ಸಾಹಿತ್ಯ ಸಂಸ್ಕೃತಿ ಪರಂಪರೆಯನ್ನು ಮರುಮೌಲ್ಯಮಾಪನ ಮತ್ತು ಮರು ಓದುಗಳ ಮೂಲಕ ತಮ್ಮ ಮುಂದಿನ (ಶಿಷ್ಯ-ಪ್ರಶಿಷ್ಯ) ಪೀಳಿಗೆಗೂ ರವಾನಿಸಿದರು. ಪರಂಪರೆಯೊಂದಿಗೆ ಜಗಳ ಹೂಡುವ ಮತ್ತು ಅಲ್ಲಿನ ಉನ್ನತವಾದುದನ್ನು ಉಳಿಸಿಕೊಳ್ಳುವ ಪ್ರಜ್ಞೆಯನ್ನು ಇವರು ಸದಾ ತೋರಿದರು. ಸಾಮಾಜಿಕ ಮೌಲ್ಯ, ಅಲಕ್ಷಿತ ನೆಲೆ, ಅನ್ಯಜ್ಞಾನ ಶಿಸ್ತು ಇತ್ಯಾದಿಗಳ ಮೂಲಕ ಕನ್ನಡ ಸಾಹಿತ್ಯವನ್ನು ನೋಡುವ ಹಲವು ಹೊಸ ಓದುಗಳನ್ನು ನಡೆಸಿದರು. ಅಷ್ಟೆ ಅಲ್ಲ ವರ್ತಮಾನದ ಸಾಹಿತ್ಯದ ಸತ್ವವನ್ನು ಕೂಡ ಪರಿಶೀಲನೆಗೆ ಗುರಿಪಡಿಸಿದರು. ಇವರು ಸಾಹಿತ್ಯ ಅಕಾಡೆಮಿಯ ಅದ್ಯಕ್ಷರಾಗಿದ್ದಾಗ ಮಾಡಿದ ಸಾಲುದೀಪಗಳು ಪ್ರಕಟಣೆ ಮತ್ತು ಇತರ ವಿಚಾರಸಂಕಿರಣಗಳ ಪ್ರಕಟಣೆಗಳು ಕೂಡ ಇಲ್ಲಿ ಗಮನಾರ್ಹ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಯಾವ ಕೆಲಸವನ್ನು ಇವರು ಮಾಡುತ್ತಿದ್ದರೋ ಅದಕ್ಕೆ ಇಲ್ಲಿ ಇನ್ನಷ್ಟು ವಿಸ್ತರಣೆ ಸಿಕ್ಕಂತೆ ಆಯಿತು. ಈ ದೃಷ್ಟಿಯಿಂದ ಜಿ.ಎಸ್.ಎಸ್. ಉಪಯುಕ್ತವಾದ ಸಾಹಿತ್ಯಕ ಬಾಳನ್ನು, ತುಂಬು ಬಾಳನ್ನು ಬಾಳಿದವರು.

ಕನ್ನಡ ವಿಮರ್ಶೆಯ ಲೋಕವೆ ಇತ್ತಂಡವಾಗಿ 60 ರ ದಶಕದಿಂದ 80 ರ ದಶಕದವರೆಗೆ ಕುವೆಂಪುವನ್ನು ಎರಡು ಅತಿಗಳಲ್ಲಿ ನೋಡುತ್ತಿತ್ತು. ಒಂದೊ ಕುವೆಂಪು ಋಷಿ ಇಲ್ಲವೆ ದೇವರು ಎಂದು ಒಂದು ತಂಡ ವಾದಿಸುತ್ತಿದ್ದರೆ ಇನ್ನೊಂದು ತಂಡkuvempu ಕುವೆಂಪು ಕವಿಯೇ ಅಲ್ಲ ಎಂದು ವಾದಿಸುತ್ತಿತ್ತು. ಆದರೆ ಜಿ.ಎಸ್.ಎಸ್. ಕುವೆಂಪು ತಮ್ಮ ಮೆಚ್ಚಿನ ಗುರು ಮತ್ತು ಮಾರ್ಗದರ್ಶಕರೆ ಆಗಿದ್ದರೂ ಅವರ ಸಾಹಿತ್ಯದ ನಿಜವಾದ ಸತ್ವ ಏನು ಎಂಬುದನ್ನು ಕನ್ನಡದ ಅಂದಿನ ಎಲ್ಲ ಧಾರೆಗಳಿಗೆ ಸೇರಿದ ಚಿಂತಕರಿಂದಲೂ ಪರಿಶೀಲನೆಗೆ ಒಳಪಡಿಸಿದ್ದರು. ಕುವೆಂಪು ಸಾಹಿತ್ಯದ ಮೇಲೆ ಬೆಂಗಳೂರಿನ ಸೆನೆಟ್ ಹಾಲಿನಲ್ಲಿ ವಿಚಾರಸಂಕಿರಣ ನಡೆಸಿ ತೇಜಸ್ವಿ, ಡಿ.ಆರ್.ನಾಗರಾಜ, ಬಿ.ಕೃಷ್ಣಪ್ಪ, ಮೊದಲಾದವರಿಂದ ಕುವೆಂಪು ಸಾಹಿತ್ಯವನ್ನು ವಸ್ತುನಿಷ್ಟವಾಗಿ ಪರಿಶೀಲಿಸಿದ್ದರು. ಆನಂತರ ಅಲ್ಲಿನ ಭಾಷಣಗಳನ್ನೆಲ್ಲ ಸಂಕಲಿಸಿ “ಶ್ರೀ ಕುವೆಂಪು” ಎಂಬ ಪುಸ್ತಕವನ್ನೂ ಪ್ರಕಟಿಸಿದರು. ಇಂತಹ ಅನೇಕ ವಿಚಾರ ಸಂಕಿರಣಗಳನ್ನು ನಡೆಸಿ ಜಿ.ಎಸ್.ಎಸ್. ಕನ್ನಡ ಸಾಹಿತ್ಯ ಪರಂಪರೆಯನ್ನು ಸೋಸಿ ಕಟ್ಟಿಕೊಳ್ಳುವ ಕೆಲಸವನ್ನು ಮಾಡಿದ್ದಾರೆ.

ಅಷ್ಟೆ ಅಲ್ಲ ಕನ್ನಡ ಸಾಹಿತ್ಯ ಚಿಂತಕರ ಒಂದು ದೊಡ್ಡ ದಂಡನ್ನೆ ತಯಾರು ಮಾಡಿದ್ದಾರೆ. ತಾವು ಕನ್ನಡ ಅಧ್ಯಯನ ಕೇಂದ್ರದಲ್ಲಿ ಇದ್ದಾಗ ಸಾಹಿತ್ಯ ವಾರ್ಷಿಕ ಎಂಬ ಯೋಜನೆಯನ್ನು ಹಾಕಿಕೊಂಡು ಆಯಾ ವರ್ಷ ಬಂದ ಎಲ್ಲ ಬಗೆಯ ಗ್ರಂಥಗಳನ್ನೂ ಪರಿಚಯಿಸುವ ಮತ್ತು ವಿಮರ್ಶಿಸುವ ಕೆಲಸವನ್ನೂ ಮಾಡಿದ್ದಾರೆ. ಇಂತಹ ಹತ್ತಾರು ಯೋಜನೆ ಮತ್ತು ಗೋಷ್ಠಿಗಳಿಂದ ಕನ್ನಡ ಸಾಹಿತ್ಯವನ್ನು ವರ್ತಮಾನಕ್ಕೆ ಪ್ರಸ್ತುತಗೊಳಿಸಿದ್ದಾರೆ. ಆಧುನಿಕ ಕನ್ನಡ ಸಾಹಿತ್ಯ ವಿಮರ್ಶೆ ಒಂದು ಬೃಹತ್ ಆಲದ ಮರದಂತೆ ಬೆಳೆಯವಲ್ಲಿ, ಒಂದು ಸಾಹಿತ್ಯಕ ಚಳುವಳಿ ಎಂಬಂತೆ ಬೆಳೆಯವಲ್ಲಿ ಇವರ ಕೊಡುಗೆ ಸಾಕಷ್ಟು ಇದೆ. ತಮ್ಮತನವನ್ನು ಬಿಟ್ಟುಕೊಡದೆ ಒಟ್ಟಿಗೆ ಇರಬಹುದಾದ ಕನ್ನಡದ ಹಲವಾರು ವಿಮರ್ಶಕರನ್ನು ಬೆಳೆಸಿದ್ದರಿಂದ 80 ರ ದಶಕದ ನಂತರ ಕನ್ನಡ ವಿಮರ್ಶೆಗೆ ಒಂದು ಹೊಸತನ ಕೂಡ ಸಾಧ್ಯವಾಗಿದೆ. ಈ ನೆಲೆಯಲ್ಲಿಯೂ ಜಿ.ಎಸ್.ಎಸ್. ಸಾಧನೆ ಗಮನಾರ್ಹ ಮತ್ತು ಅನುಕರಣೀಯ.

ಸಾಹಿತ್ಯವೆ ಆಗಲಿ, ಸಾಹಿತ್ಯ ಚಿಂತಕರ ಬಳಗವೆ ಆಗಲಿ, ಶಿಷ್ಯ ಬಳಗವೆ ಆಗಲಿ, ಸಮಾಜವೆ ಆಗಲಿ ಎಲ್ಲೆಡೆಯು ಜಾತ್ಯತೀತವಾದಿ ಮತ್ತು ಗುಣಗ್ರಾಹಿ ಆಗಿ ಜಿ.ಎಸ್.ಎಸ್. ವರ್ತಿಸಿದ್ದಾರೆ ಮತ್ತು ಅಂತಹ ಮೌಲ್ಯವನ್ನೆ ಬಾಳಿದ್ದಾರೆ. ಈ ದೃಷ್ಟಿಯಿಂದ ಅವರು ನಮಗೆಲ್ಲ ಮಾದರಿ. (ಎಲ್ಲ ಮನುಷ್ಯರಿಗು ಇರುವ ಹಲವು ದೌರ್ಬಲ್ಯಗಳು ಇವರಿಗು ಇದ್ದುವು ಎಂಬುದು ಕೂಡ ನಿಜ.) ಇವರೇನು ಸಂತರಲ್ಲ, ದೇವರಲ್ಲ, ನಮ್ಮ ನಿಮ್ಮಂತೆ ಒಬ್ಬ ಸಾಮಾನ್ಯ ಮನುಷ್ಯ. ಒಬ್ಬ ಸಾಮಾನ್ಯ ಶಾಲಾ ಮಾಸ್ತರರ ಮಗನಾಗಿ ಶಿಕಾರಿಪುರದಂತಹ ಒಂದು ಊರಿನಲ್ಲಿ ಒಬ್ಬ ಸಾಮಾನ್ಯ ಮನುಷ್ಯನಾಗಿ ಹುಟ್ಟಿದ ಜಿ.ಎಸ್.ಎಸ್. ಇಷ್ಟೆಲ್ಲ ಸಾಧಿಸಿದ್ದಾರೆ. ಒಬ್ಬ ಮನುಷ್ಯನಿಂದ ಇನ್ನೆಷ್ಟನ್ನು ನಿರೀಕ್ಷಿಸಲು ಸಾಧ್ಯ?


ಪೂರಕ ಓದಿಗೆ ಜಿ.ಎಸ್‌. ಶಿವರುದ್ರಪ್ಪನವರ ಕೆಲವು ಕವಿತೆಗಳು:

“ಜನ ನುಡಿ” ಮತ್ತು “ನುಡಿಸಿರಿ”ಯಲ್ಲಿನ ಅನುಭವಗಳು

– ಸುರೇಶ್ ನಾಯಕ್
ಜರ್ನಲಿಸಂ ವಿದ್ಯಾರ್ಥಿ

ನುಡಿ, ಸಿರಿಯೂ ಹೌದು, ಬದುಕೂ ಹೌದು. ಅದರಲ್ಲಿ ಎಲ್ಲ ಸಮುದಾಯಗಳು ಪಾಲ್ಗೊಳ್ಳಬೇಕು. ದಲಿತ ಮತ್ತು ಅಲ್ಪಸಂಖ್ಯಾತರ ಶೋಷಣೆ, ಕೋಮುವಾದ, ಬಂಡವಾಳಶಾಯಿತ್ವ, ಮಹಿಳೆಯರ ಸ್ಥಿತಿಗತಿ, ಕಾರ್ಮಿಕರ ಸಮಸ್ಯೆಗಳ ವಿಷಯಗಳನ್ನು ಚರ್ಚೆ ಮಾಡಬೇಕು. ಡಿಸೆಂಬರ 14 ಮತ್ತು 15 ರವರಗೆ “ಅಭಿಮತ ಮಂಗಳೂರು” abhimatha-mangalooru-jananudiನೇತೃತ್ವದಲ್ಲಿ ನಡೆದ “ಜನ ನುಡಿ” ಮತ್ತು ಡಿಸೆಂಬರ 19 ರಿಂದ 22 ರವರಗೆ ಮೋಹನ್ ಅಳ್ವ ನೇತೃತ್ವದಲ್ಲಿ ನಡೆದ “ನುಡಿಸಿರಿ” ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೆನು. ಈ ಎರಡು ಕಾರ್ಯಕ್ರಮದಲ್ಲಿ ನನಗೆ ವಿಭಿನ್ನ ಅನುಭವ ಸಿಕ್ಕಿತ್ತು. ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಬಗ್ಗೆ ಅಳ್ವಾಸ್ ನುಡಿಸಿರಿಯಲ್ಲಿ ಭರ್ಜರಿ ಚರ್ಚೆಯಾಯಿತು. ಆದರೆ ಕರಾವಳಿ ತಲ್ಲಣಗಳಾದ ಕೋಮುವಾದ, ಮಹಿಳಾ ದೌರ್ಜನ್ಯಗಳು, ಮಡೆಸ್ನಾನ ಮತ್ತು ಪಂಕ್ತಿಬೇಧ ವಿಷಯದ ಬಗ್ಗೆ ನನ್ನ ಕಿವಿಗೆ ಕೇಳಿಸಲೇ ಇಲ್ಲ. “ಜನನುಡಿ”ಯಲ್ಲಿ ಈ ಎಲ್ಲಾ ವಿಷಯಗಳ ಚರ್ಚೆಯಾಯಿತ್ತು.

ಜನನುಡಿಯಲ್ಲಿ ಸೌಜನ್ಯ ಅತ್ಯಾಚಾರ ಪ್ರಕರಣದ ನ್ಯಾಯಕ್ಕಾಗಿ ಹೋರಾಡುತ್ತಿರುವ ಅತ್ರಾಡಿ ಅಮೃತ ಶೆಟ್ಟಿ. ಪಬ್ ಮೇಲೆ ಮೂಲಭೂತವಾದಿಗಳು ದಾಳಿ ಮಾಡಿದಾಗ “ನಮ್ಮ ಮಕ್ಕಳ ಮೇಲೆ ಕೈ ಮಾಡಲು ನೀವು ಯಾರು?” ಎಂದು ಪ್ರಶ್ನಿಸಿದ್ದ ಸಬಿಹಾ ಭೂಮಿ ಗೌಡ, ಬುಡಕಟ್ಟು ಸಮುದಾಯಕ್ಕೆ ಆಗುತಿರುವ ಅನ್ಯಾಯದ ವಿರುದ್ಧ ಹೋರಾಡುತ್ತಿರುವ ಜ್ಯೋತಿ ಮತ್ತು ಮಂಜುಳ, ಉತ್ತರ ಕರ್ನಾಟಕ ಭಾಗದ ಪ್ರಮುಖ ಮಹಿಳಾ ಹೋರಾಟಗಾರ್ತಿಯರಾದ ಕೆ.ನೀಲಾ, ಮೀನಾಕ್ಷಿ ಬಾಳಿ ಹಾಗೂ ಗುಲಾಬಿ ಬಿಳಿಮಲೆ, ವಸುಂಧರಾ, ಎಚ್ ಎಸ್ ಅನುಪಮಾ, ವಿಮಲಗೌಡ ಇನ್ನೂ ಮುಂತಾದ ಮಹಿಳಾ ಶಕ್ತಿಗಳು ಒಂದೆಡೆ ಸೇರಿರುವುದು ಕಾರ್ಯಕ್ರಮಕ್ಕೆ ಆನೆಬಲ ಬಂದಂತಾಗಿತ್ತು. ಇಂತಹ ಸ್ತ್ರೀಶಕ್ತಿಗಳು “ಆಳ್ವಾಸ್ ನುಡಿಸಿರಿ”ಯಲ್ಲಿ ಏಕೆ ಇರಲಿಲ್ಲ?

ನುಡಿಸಿರಿಯಲ್ಲಿ ಸುಮಾರು ಒಂಬತ್ತು ವೇದಿಕೆಗಳು ಇದ್ದರೂ ಕರಾವಳಿ ತಲ್ಲಣಗಳಾದ, ಸೌಜನ್ಯ ಅತ್ಯಾಚಾರ ಪ್ರಕರಣದ ಬಗ್ಗೆ ಒಬ್ಬರಾದರೂ ಮಾತನಾಡಲಿಲ್ಲ. ಪಬ್ ದಾಳಿಯನ್ನು ವಿರೋಧಿಸಲಿಲ್ಲ. ಹಿಂದೂತ್ವ ಹೆಸರಿನಲ್ಲಿ ನಡೆಯುವ ಕೋಮು ಸಂಘರ್ಷದ ಬಗ್ಗೆ “ಕ್ಯಾರೆ” ಅನ್ನಲಿಲ್ಲ. ಸಮಾಜದ ಕಟ್ಟಕಡೆಯ ಸಮುದಾಯವಾದ ಕೊರಗ alva-nudisiri-baraguru-bhairappaಜನಾಂಗದ ಬಗ್ಗೆ ಚರ್ಚೆಯಾಗಲಿಲ್ಲ. ಕಾರ್ಯಕ್ರಮದಲ್ಲಿ ಕೇವಲ ಸಂಗೀತ, ಸಾಹಿತ್ಯ, ಕಲೆ ಪ್ರದರ್ಶಿಸಿದರೆ ಸಾಲದು ಕಲೆಯ ಹಿಂದಿರುವ ಕಲೆಗಾರರ ನೋವುಗಳ ಬಗ್ಗೆ ಚರ್ಚೆಯಾಗಬೇಕು. ಇಂತಹ ಚರ್ಚೆ ಮೂಲಕ ಸರ್ಕಾರದ ಗಮನ ಸೆಳೆದು ಅವರಿಗೆ ನ್ಯಾಯ ಒದಗಿಸುವ ಕೆಲಸ ಆಗಬೇಕು. ಕೊರಗ ಸಮುದಾಯವನ್ನು ಮುಖ್ಯವಾಹಿನಿಗೆ ಕರೆತರಲು ಪ್ರಯತ್ನ ನಡೆಯುತ್ತಿದೆ. ಆದರೂ ಮೂಲನಿವಾಸಿಗಳಾದ ಇವರಿಗೆ ಸಾಮಾಜಿಕ ಗೌರವ ಇಲ್ಲ. ಉಳುಮೆ ಮಾಡಲು ಭೂಮಿಯೂ ಇಲ್ಲ. ದೇವಸ್ಥಾನಗಳಿಗೆ ಪ್ರವೇಶವಿಲ್ಲ. ಒಟ್ಟಿನಲ್ಲಿ ಕೊರಗರನ್ನು ಅಸ್ಪೃಶ್ಯರಂತೆ ಕಾಣಲಾಗುತ್ತಿದೆ. ಶೈಕ್ಷಣಿಕವಾಗಿ ಮುಂದುವರೆದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಈ ಪರಿಸ್ಥಿತಿ ಇರುವುದು ವಿಪರ್ಯಾಸ. ಇಂತಹ ಜಾತಿ ತಾರತಮ್ಯ ನೆಡೆಯುತ್ತಿದ್ದರು, ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಏಕೆ ಎಂಬುದು ನನಗೆ ಅರ್ಥವಾಗುತ್ತಿಲ್ಲ.

ಕರಾವಳಿ ಭಾಗದ ನಿರುದ್ಯೋಗಿ ಮೊಗವೀರ ಮತ್ತು ಬಂಟ ಸಮುದಾಯದ ಯುವಕರನ್ನು ಸಂಘ ಪರಿವಾರದವರು ಬಳಸಿಕೊಂಡು ಕೋಮುವಾದವನ್ನು ಬಿತ್ತುತಿದ್ದಾರೆ. ಈ ಎಲ್ಲಾ ಪ್ರಮುಖ ಸಮಸ್ಯೆಗಳನ್ನು ಚರ್ಚೆ ಮಾಡಿ, ಪರ್ಯಾಯ ಉತ್ತರ ಕಂಡುಕೊಳ್ಳಲು ಹುಟ್ಟಿಕೊಂಡಿರುವುದು “ಜನ ನುಡಿ”ಯಲ್ಲಿ ಎಂದು ನನಗೆ ಅನಿಸಿದೆ. ಪ್ರೊಫೆಸರ್ ಎಸ್.ಜಿ. ಸಿದ್ಧರಾಮಯ್ಯ “ಜನ ನುಡಿ” ಕಾರ್ಯಕ್ರಮದಲ್ಲಿ ಮಡೆಸ್ನಾನ ಬಗ್ಗೆ ಕಟುವಾಗಿ ಟೀಕಿಸುತ್ತಾ abhimata-mangaluru-jananudi“ಉರುಳಾಡುವವನಿಗೆ ಬುದ್ಧಿ ಇಲ್ಲಂದ್ರೆ, ಉಣ್ಣುವನಿಗೆ ಬುದ್ದಿ ಇಲ್ವಾ? ಅದಕ್ಕೆ ಹಿರಿಯರು ’ಹೊಟ್ಟೆಗೆ ಏನ್ ತಿನ್ನುತ್ತಿಯಾ’ ಎನ್ನುತ್ತಾರೆ. ಇಂತ ಸಂಸ್ಕೃತಿ ಬದಲಾಗಬೇಕು. ಉಳ್ಳವ ಮತ್ತು ಇಲ್ಲದವ ಎಂಬ ಬೇಧಭಾವ ತೊಲಗಿದಾಗ ಮಾತ್ರ ಸಮಾಜದಲ್ಲಿ ಎಲ್ಲ ಸಮುದಾಯಗಳು ಕೂಡಿಬಾಳಲು ಸಾದ್ಯವಾಗುತ್ತದೆ” ಎಂದರು. ಪ್ರಗತಿಪರ ಚಿಂತಕರಾದ ರಹಮತ್ ತರೀಕೇರಿ ಮಾರುಕಟ್ಟೆಯ ವ್ಯವಸ್ಥೆ ಬಗ್ಗೆ ಮಾತನಾಡಿ “ಮಾರುಕಟ್ಟೆ ಪ್ರಜಾಪ್ರಭುತ್ವವನ್ನು ನಿಯಂತ್ರಣ ಮಾಡುತ್ತಿದೆ. ಧರ್ಮ, ಸಾಹಿತ್ಯ, ಕಲೆ, ಶಿಕ್ಷಣ ಮಾರುಕಟ್ಟೆಯಾಗಿದೆ. ಭೂತಾರಾಧನೆಯಂತಹ ಆಚರಣೆಗಳು ಉಳಿಗಮಾನ್ಯ ಪದ್ಧತಿಯನ್ನು ಇನ್ನೂ ಜೀವಂತವಾಗಿ ಇಟ್ಟಿವೆ” ಎಂದರು.

ಕವಿಗೋಷ್ಠಿಯಲ್ಲಿ ಪಿಚ್ಚಳ್ಳಿ ಶ್ರೀನಿವಾಸಮೂರ್ತಿ “ಕವಿಯಾದವನು ಎಲ್ಲ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಬೇಕು. ಇವತ್ತಿನ ದಿನಗಳಲ್ಲಿ ಜಾಗತಿಕರಣ ಎಂಬ ಭೂತದಿಂದ ಮನೆಯಲ್ಲಿ ಕುಳಿತು ಪಿಜ್ಜಾ, ಬರ್ಗರ್, ಕೋಲಾ, ಕುಡಿಯುವಂತೆ ಮಾಡಿದೆ. ಆದರೆ ಎಳನೀರು ಮತ್ತು ಮಜ್ಜಿಗೆ ಇವುಗಳ ನಡುವೆ ಮಾಯಾವಾಗುತ್ತಿದೆ. ಸಮಾಜದಲ್ಲಿ ಮೇಲು ಕೀಳುಗಳ ಬಗ್ಗೆ ಕೈವಾರ ತಾತಯ್ಯನವರು ’ಉಚ್ಚೆ ಬರುವ ದ್ವಾರದಲ್ಲಿ ಬಂದು, ಉಚ್ಚ ನಾನೆಂದು ಮೆರೆಯುವೆಯಾ’” ಎನ್ನುವ ಸಾಲುಗಳನ್ನು ನೆನಪಿಸಿಕೊಂಡರು. ಇಂತಹ ಅನುಭವಿಗಳ ವಿಚಾರಗಳು ಜನನುಡಿಯಲ್ಲಿ ನನಗೆ ಸಿಕ್ಕಿದೆ. ಆದರೆ ನುಡಿಸಿರಿಯಲ್ಲಿ ವಾಸ್ತವಕ್ಕೆ ದೂರವಾದ ಸಾಹಿತ್ಯದ ವೈಭವದ ನುಡಿಗಳಿದ್ದವು.

ದುಡ್ಡು ಇರುವವರು ಕಲೆ, ಸಂಸ್ಕೃತಿಯನ್ನು ವ್ಯಾಪಾರಕ್ಕೆ ಬಳಸದೆ ಜನಪರ ಕಾಳಜಿಗಾಗಿ ಬಳಸಿದರೆ ಅರ್ಥಪೂರ್ಣವಾಗಿರುತ್ತದೆ. ಮೋಹನ್ ಆಳ್ವರು ಮುಂದಿನ ದಿನಗಳಲ್ಲಿ ಜನಪರ ಕಾಳಜಿಯಿಂದ ಮುನ್ನಡೆಯುತ್ತಾರೆ ಎನ್ನುವ ಭರವಸೆ ಇದೆ. ಜನರ ಭರವಸೆಯನ್ನು ಉಳಿಸಿಕೊಳ್ಳುವುದು-ಬಿಡುವುದು ಅವರಿಗೆ ಬಿಟ್ಟ ವಿಷಯ.

ನಾವು ಮನುಷ್ಯರು.. ಅವರು..? ಅವರೂ ಮನುಷ್ಯರೇ.. ಆದರೆ ಜಾತಿವ್ಯವಸ್ಥೆಯ ಬಲಿಪಶುಗಳು


– ಡಾ.ಎಸ್.ಬಿ. ಜೋಗುರ


 

ಮೊನ್ನೆ ಒಬ್ಬಾತ ಸೈಕಲ್ ಮೇಲೆ ಹೋಗುತ್ತಿದ್ದ. ನಾನು ರಸ್ತೆಯ ಬದಿ ಕಾರು ನಿಲ್ಲಿಸಿ ಹಣ್ಣು ತೆಗೆದುಕೊಂಡು ಬರುವಾಗ ಆತ ಸೈಕಲ್ ಹ್ಯಾಂಡಲ್ ಅನ್ನು ನನ್ನ ಕಾರಿಗೆ ತಾಗಿಸಿದ. ನಾನು ಅವನನ್ನು ಹಿಡಿದು ನಿಲ್ಲಿಸಿದೆ. ಪೋಲಿಸರಿಗೆ ಕರೀತೀನಿ ಎನ್ನುತ್ತಿರುವಂತೆ ಆತ ದೈನೇಸಿಯಾಗಿ ’ಸಾಯೆಬ್ರ ಹಂಗ ಮಾಡಬ್ಯಾಡ್ರ” ಅಂದ. ’ಹಂಗಾದ್ರೆ ಈ ಗೆರೆ ತೆಗೆಯೋದು ಯಾರು..? ಅದರ ಖರ್ಚು ಕೊಡ” ಅಂದೆ. ಅವನು ಯತಾರ್ಥವಾಗಿ ’ಎಷ್ಟು..?’ ಎಂದ. ’ಕೇಳೋಣ, ಅದಕ್ಕೆ ತಾಗುವದಕ್ಕಿಂತಾ ಹೆಚ್ಚಿಗೆ ಒಂದು ರೂಪಾಯಿಯೂ ಬೇಡ’ ಎಂದೆ. ಆತ ಕಿಸೆಯಲ್ಲಿರೋ ನೂರು ರೂಪಾಯಿಯ ನೋಟನ್ನು ಕೊಡಲು ಬಂದ. ನನಗೆ ಮುಜುಗುರವಾಗಿ ’ನೀನು ಏನು ಕೆಲಸ ಮಾಡ್ತಿ..?’ ಅಂತ ಕೇಳಿದೆ ಅದಕ್ಕವನು ’ಸ್ಕೆವೆಂಜರ್’ ಅಂದ. ಮುಂದೇನೂ ಮಾತಾಡದೇ ’ಸರಿ ಹೋಗು’ ಅಂದೆ. ಆತ ನಶೆಯಲ್ಲಿದ್ದ. ’ಸಾರಿ ಸರ್..ಸಾರಿ ಸರ್’ ಅನ್ನುತ್ತಲೇ ಸೈಕಲ್ ಹತ್ತಿದ. ಮಲ ಹೊರುವ ಪದ್ಧತಿಯನ್ನು ನಿಷೇಧಿಸಬೇಕು ಎನ್ನುವ ಶಾಸನ ಬಂದು ಎರಡು ದಶಕಗಳು ಕಳೆದರೂ [1993] ಇನ್ನೂ ನಮ್ಮಲ್ಲಿ ಹೀಗೆ ಆ ಕೆಲಸ ಮಾಡಿಕೊಂಡು ಬದುಕುವವರು ಇದ್ದಾರಲ್ಲ..! ಎನ್ನುವುದೇ ಒಂದು ಬಹುದೊಡ್ಡ ಸೋಜಿಗ. manual-scavenging-1ಜಾತಿಪದ್ಧತಿಯ ದಟ್ಟದರಿದ್ರ ಆಚರಣೆಯಾದ ಅಸ್ಪ್ರಶ್ಯತೆ ಎನ್ನುವ ಕೊಳಕು ವ್ಯವಸ್ಥೆಯ ಭಾಗವಾಗಿ ಆಚರಣೆಯಲ್ಲಿರುವ ಈ ಮಲಹೊರುವ ಪದ್ಧತಿ ಕರ್ನಾಟಕದಲ್ಲಿಯೂ ಇದೆ ಎನ್ನಲಿಕ್ಕೆ ಕಳೆದ ವರ್ಷ ಕೋಲಾರ ಜಿಲ್ಲೆಯಲ್ಲಿ ಹೊಲಸು ಗುಂಡಿಯನ್ನು ಸ್ವಚ್ಚಗೊಳಿಸುವ ಸಂದರ್ಭದಲ್ಲಿ ಅಸುನೀಗಿರುವ ಘಟನೆ ಇನ್ನೂ ಮಾಸಿಲ್ಲ.

ಒಂದು ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಹೆಚ್ಚು ಕಡಿಮೆ 12 ಲಕ್ಷದಷ್ಟು ಜನ ಈ ಭಂಗಿ ಕೆಲಸವನ್ನು ಮಾಡುತ್ತಾ ಅತ್ಯಂತ ಅಮಾನವೀಯವಾದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವರು. ಇವರು ಖಾಸಗಿ ಮತ್ತು ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಚ ಮಾಡುವ ಮೂಲಕ ಬದುಕುತ್ತಿರುವುದೇ ಒಂದು ದೊಡ್ದ ಸಾಮಾಜಿಕ ಅನ್ಯಾಯ ಮತ್ತು ನಾಗರಿಕ ಸಮಾಜದ ಗರ್ಭದೊಳಗಿರುವ ಅನಾಗರಿಕತೆಯ ವಿಕೃತದರ್ಶನ. ಶತಶತಮಾನಗಳಿಂದಲೂ ಇವರು ಈ ಬಗೆಯ ಕೆಲಸವನ್ನು ಮಾಡುತ್ತಾ ಬಂದವರು, ಇಲ್ಲವೇ ಇವರಿಂದ ಮಾಡಿಸುತ್ತಾ ಬರಲಾಗಿದೆ. ಅತ್ಯಂತ ಅಹಿತಕರವಾದ ಪರಿಸರದಲ್ಲಿ ವಾಸವಾಗಿರುವ ಇವರು ಅನೇಕ ಬಗೆಯ ಸಾಮಾಜಿಕ ಅಸಮಾನತೆಗಳು, ಕೊರತೆಗಳ ನಡುವೆ, ರೋಗ ರುಜಿನುಗಳಿಂದ ಬಳಲುವುದು ಮಾತ್ರವಲ್ಲದೇ ಅಪೌಷ್ಟಿಕತೆಯಿಂದ ನರಳುವವರಾಗಿದ್ದಾರೆ.

1993 ರಲ್ಲಿಯೇ ಈ ಬಗೆಯ ಭಂಗಿ ಕೆಲಸವನ್ನು ನಿಷೇಧಿಸಿದ್ದರೂ ಕೆಲವು ರಾಜ್ಯಗಳು ಇನ್ನೂ ಅದನ್ನು ಒಪ್ಪಿಕೊಂಡಿರದೇ ಇದ್ದದ್ದು ಇನ್ನೊಂದು ದೊಡ್ಡ ವಿಪರ್ಯಾಸ ಮತ್ತು ಅಣಕ. ಉದಾ- ರಾಜಸ್ಥಾನ ಮತ್ತು ಉತ್ತರ ಪ್ರದೇಶ ಈ ಶಾಸನವನ್ನು ಪೂರ್ಣವಾಗಿ ಒಪ್ಪಿಕೊಂಡಿಲ್ಲ. ಅತೀ ಹೆಚ್ಚು ಸಾಕ್ಷರತೆಯನ್ನು ಹೊಂದಿರುವ ಕೇರಳ ಕೂಡಾ ಇದನ್ನು ಒಪ್ಪಿಕೊಳ್ಳುವುದು ಅನಿವಾರ್ಯವೆಂದು ಭಾವಿಸಿಲ್ಲ. ನಾಗಾಲ್ಯಾಂಡ ಮತ್ತು ಪುದುಚೆರಿಗಳು ಕೂಡಾ ಪೂರ್ಣವಾಗಿ ಇದಕ್ಕೆ ಸಮ್ಮತಿ ನೀಡಿರುವುದಿಲ್ಲ. ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಅಂಕಿ ಅಂಶಗಳ ಪ್ರಕಾರ ಕೇರಳದಲ್ಲಿ 1339, ನಾಗಾಲ್ಯಾಂಡಲ್ಲಿ 1800, ಪುದುಚೇರಿಯಲ್ಲಿ 479 ಡ್ರೈ ಶೌಚಾಲಯಗಳು ಇವೆ Manual_scavanging1[1]ಎಂದು ವರದಿ ಮಾಡಿದೆ. ಡ್ರೈ ಅಂದರೆ ಸಾಕಷ್ಟು ನೀರನ್ನು ಹಾಕಲಾಗದಂತಿರುವ ಅತ್ಯಂತ ಶೋಚನೀಯ ಸ್ಥಿತಿಯ ಶೌಚಾಲಯಗಳಿವು. ಇವುಗಳನ್ನು ಈ ಭಂಗಿ ಸಮುದಾಯದಿಂದಲೇ ಸ್ವಚ್ಚಗೊಳಿಸಾಲಾಗುವುದು. [State of India’s livelihoods report-2012 Vipin Sharma- Sage publication].

NSLS 1993 [The National Scheme of Liberation of Scavengers act 1993] ಅಸ್ಥಿತ್ವದಲ್ಲಿ ಬಂದಿದ್ದರೂ ಕೆಲ ರಾಜ್ಯಗಳು ಅದನ್ನು ಒಪ್ಪಿಕೊಂಡು ಜಾರಿಗೊಳಿಸಿದ್ದರೂ ಪೂರ್ಣಪ್ರಮಾಣದಲ್ಲಿ ಅದರ ನಿಷೇಧ ಸಾಧ್ಯವಾಗಿಲ್ಲ. ಒಂದು ಸಮೀಕ್ಷೆಯ ಪ್ರಕಾರ 1993 ರಲ್ಲಿ 7.7 ಲಕ್ಷ ಈ ಬಗೆಯ ಭಂಗಿ ಕೆಲಸ ಮಾಡುವವರಿದ್ದರು. ಅವರಲ್ಲಿ ಈ ಕಾಯ್ದೆಗನುಗುಣವಾಗಿ ಸುಮಾರು 4.28 ಲಕ್ಷ ಜನರನ್ನು ಈ ಬಗೆಯ ಕೊಳಕು ಕೆಲಸದಿಂದ ಮುಕ್ತಗೊಳಿಸಲಾಯಿತು.ಅದರಲ್ಲಿ 3.42 ಲಕ್ಷ ಜನರಿಗೆ ಪುನರ್ ವಸತಿ ಸೌಲಭ್ಯವನ್ನು ಕಲ್ಪಿಸಿಕೊಡಲಾಯಿತು. 2011 ರ ಜನಗಣತಿ ಮತ್ತು ರಾಷ್ಟ್ರೀಯ ಗರಿಮಾ ಅಧ್ಯಯನದ ವರದಿಯಂತೆ ನಮ್ಮಲ್ಲಿ ಇಂದಿಗೂ 7.94 ಲಕ್ಷ ಶೌಚಾಲಯಗಳು ಮನುಷ್ಯರಿಂದಲೇ ತೊಳೆಯಲ್ಪಡುತ್ತವೆ. ಈ ಬಗೆಯ ಮಲದ ಗುಂಡಿಗಳು ಜೀವಮಾರಕವಾಗಿರುವುದೂ ಇದೆ. ಈ ಅಂಕಿ ಅಂಶಗಳಲ್ಲಿ ರೈಲು ಇಲಾಖೆಯ ಶೌಚಾಲಯಗಳನ್ನು ಸೇರಿಸಿಲ್ಲ. Manual-scavengingಈ ಭಂಗಿ ಸಮುದಾಯದ ಬದುಕನ್ನು ವಸ್ತುನಿಷ್ಟವಾಗಿ ಅಧ್ಯಯನ ಮಾಡಿದ ರಾಷ್ಟ್ರೀಯ ಗರಿಮಾ ಅಧ್ಯಯನ ಮತ್ತು ಸಲಹಾ ಸಮಿತಿ 2010 ರ ಸಂದರ್ಭದಲ್ಲಿ ಕೆಲವು ಸಂಗತಿಗಳನ್ನು ಬಯಲು ಮಾಡಿತು:

  • ಇದಕ್ಕೆ ಸಂಬಂಧಪಡುವ ಶಾಸನದಡಿಯಲ್ಲಿ ಫ಼ಲಾನುಭವಿಗಳಾದವರ ಪೈಕಿ ಭಂಗಿಗಳಾಗಿ ಕೆಲಸ ಮಾಡದಿರುವವರೇ ಹೆಚ್ಚಿಗಿರುವುದನ್ನು ಗುರುತಿಸಲಾಗಿದೆ.
  • ಅಧ್ಯಯನದ ಪ್ರಕಾರ ಹೀಗೆ ಭಂಗಿಗಳಾಗಿ ಕೆಲಸ ಮಾಡುವವರ ಪೈಕಿ ಮಹಿಳೆಯರೇ ಹೆಚ್ಚು ಆದರೆ ಫ಼ಲಾನುಭವಿಗಳಾದವರು ಮಾತ್ರ ಪುರುಷರು.
  • ಬಹಳಷ್ಟು ಜನ ಮಹಿಳೆಯರು, ವೃದ್ಧರು, ಅನಕ್ಷರಸ್ಥರು ಇದರಲ್ಲಿದ್ದಾರೆ.
  • ದೊಡ್ದ ಪ್ರಮಾಣದ ಭ್ರಷ್ಟಾಚಾರ, ಕಿರಕಿರಿ, ಅದಕ್ಷ ಅಧಿಕಾರಿಗಳು ಈ ಭಂಗಿ ಸಮುದಾಯವನ್ನೂ ಪೀಡಿಸದೇ ಬಿಟ್ಟಿಲ್ಲ.

ಪರೋಕ್ಷವಾಗಿ ಹೇಳುವದಾದರೆ ಅವರಿಗೆ ಒದಗಿಸಲಾದ ಪುನರವಸತಿ ಸೌಲಭ್ಯ ಸಾಕಷ್ಟು ದೋಷಗಳಿಂದ ಕೂಡಿದೆ ಎಂದರ್ಥ. ಈ ಬಗೆಯ ಮಲದ ಗುಂಡಿಗಳನ್ನು ಸ್ವಚ್ಚ ಮಾಡಿಸುವ ಕೆಲಸ ಕಾನೂನಿನ ದೃಷ್ಟಿಯಿಂದ ಅಪರಾಧವಾಗಿದೆ. ಇದು ಅಸ್ಪ್ರಶ್ಯತೆಯನ್ನು ಅತ್ಯಂತ ವ್ಯವಸ್ಥಿತವಾಗಿ ಕಾಪಾಡಿಕೊಂಡು ಬರುವಲ್ಲಿ ನೆರವಾಗುತ್ತದೆ. ಹೀಗಾಗಿ ಈ ಬಗೆಯ ಕೆಲಸದಲ್ಲಿ ತೊಡಗಿಸುವವರನ್ನು ಅಪರಾಧಿಗಳನ್ನಾಗಿ ಪರಿಗಣಿಸಿ ಶಿಕ್ಷಿಸಬೇಕು. ಇನ್ನು ಈ ಬಗೆಯ ಅಮಾನವೀಯ, ಹೇಯ ಕೆಲಸದಿಂದ ಅವರನ್ನು ಮುಕ್ತ ಮಾಡುವ ಜೊತೆಗೆ ಅವರಿಗೆ ಪರ್ಯಾಯವಾದ ಬೇರೆ ಉದ್ಯೋಗಗಳನ್ನು ಒದಗಿಸಿಕೊಡಬೇಕು. ಈ ದಿಸೆಯಲ್ಲಿ ರಾಷ್ಟ್ರೀಯ ಗರಿಮಾ ಅಧ್ಯಯನ 2012 ಮತ್ತು ರಾಷ್ಟ್ರೀಯ ಸಲಹಾ ಸಮಿತಿ 2011 ಈ ಸಮುದಾಯವನ್ನು ಸಬಲೀಕರಣಗೊಳಿಸುವ ಹಿನ್ನೆಲೆಯಲ್ಲಿ ಕೆಲವು ಪ್ರಮುಖ ಸಲಹೆಗಳನ್ನು ನೀಡಿರುವುದಿದೆ:

  • ಈ ಬಗೆಯ ಕೆಲಸ ಮಾಡುವವರನ್ನು ಭಿನ್ನ ಭಿನ್ನ ಯೋಜನೆಗಳಲ್ಲಿ ಗುರುತಿಸದೇ ಒಂದೇ ಯೋಜನೆಯಲ್ಲಿ ಗುರುತಿಸಿ ಅವರಿಗೆ ಸೌಲಭ್ಯಗಳನ್ನು ಒದಗಿಸಬೇಕು
  • ಇವರಿಗೆ ನೀಡಲಾಗುವ ಸಾಲವನ್ನು ಅನುದಾನದ ಮೂಲಕ ಪಾವತಿಸಬೇಕುmanual-scavenging-india
  • ಇವರೆಲ್ಲರಿಗೂ ಬಿ.ಪಿ.ಎಲ್. ಕಾರ್ಡ್ ನೀಡಬೇಕು
  • ಇವರಿಗೆ ರಾಜೀವ ಆವಾಸ ಯೋಜನೆಯಡಿ ವಸತಿಯನ್ನು ಕಲ್ಪಿಸುವುದು
  • ಸಾರ್ವಜನಿಕ ಸೇವೆಯಲ್ಲಿ ಇತರೆ ಹುದ್ದೆಗಳಲ್ಲಿ ನೇಮಕ ಮಾಡಬೇಕು
  • ಈ ಬಗೆಯ ಕೆಲಸದಲ್ಲಿದ್ದ ಹಿರಿಯ ಮಹಿಳೆಯರಿಗೆ ಮಾಸಿಕ 2000 ರೂ. ಪಿಂಚಣಿಯನ್ನು ನೀಡಬೇಕು.
  • ಇವರಿಗೆ ಅವರವರ ಊರುಗಳಲ್ಲಿ ಜಮೀನನ್ನು ಒದಗಿಸಬೇಕು

ಈಗಾಗಲೇ ಈ ಸಮುದಾಯವನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ The Prohibition of Employment as Manual Scavengers and their Rehabilitation Bill-2012 ಜಾರಿಗೆ ಬರಬೇಕಿತ್ತು. ಹಲವಾರು ಇತರೆ ಬಿಲ್‌ಗಳ ಹಾಗೆ ಅದೂ ಕೂಡಾ ನೆನೆಗುದಿಗೆ ಬಿದ್ದಂತಿದೆ. ಕೇವಲ ಶಾಸನಗಳ ಮೂಲಕ ಎಲ್ಲ ಬಗೆಯ ಬದಲಾವಣೆ ಸಾಧ್ಯ ಎಂದು ಹೇಳುವಂತಿಲ್ಲ. ಅದರ ಜೊತೆಗೆ ಹೊಸ ಬಗೆಯ ಪ್ರಾಮಾಣಿಕ ಪ್ರಯತ್ನದ ಮೂಲಕ ನಮ್ಮದೇ ದೇಶದ ಜನರನ್ನು ಮನುಷ್ಯರಂತೆ ಕಾಣುವ, ಪರಿಗಣಿಸುವ ಜರೂರತ್ತಂತೂ ಇದ್ದೇ ಇದೆ. ಆ ಮೂಲಕವೇ ನಾವೂ ನಾಗರಿಕರು ಎಂದು ತೋರಿಸಬೇಕಾಗಿದೆ. ನಮ್ಮಲ್ಲಿರುವ ಭೌತಿಕ ಪರಿಕರಗಳಿಂದಲ್ಲ, ಮನುಷ್ಯ ಪರ, ಜೀವಪರ ಕಾಳಜಿಯಿಂದ ತೋರಬೇಕಿದೆ.

ಸಲಿಂಗ ಕಾಮ – ಅಲ್ಪಸಂಖ್ಯಾತರ ಮೇಲೆ ಬಹುಸಂಖ್ಯಾತರ ದಬ್ಬಾಳಿಕೆ

– ಆನಂದ ಪ್ರಸಾದ್

ಸರ್ವೋಚ್ಛ ನ್ಯಾಯಾಲಯವು ಸಲಿಂಗ ಕಾಮ ಶಿಕ್ಷಾರ್ಹ ಅಪರಾಧ ಅಲ್ಲವೆಂದು ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಪಡಿಸಿ ಒಂದು ಶತಮಾನ ಹಿಂದಕ್ಕೆ ದೇಶವನ್ನು ಕೊಂಡೊಯ್ಯುವ ತೀರ್ಪು ನೀಡಿದ್ದು ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ. ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡುವಾಗ ಸಮಕಾಲೀನ ಜ್ಞಾನವನ್ನು ಕಡೆಗಣಿಸಿರುವುದು ಆಘಾತಕಾರಿ ಬೆಳವಣಿಗೆ ಹಾಗೂ ವೈಜ್ಞಾನಿಕ ಮನೋಭಾವಕ್ಕೆ ವಿರುದ್ಧವಾಗಿದೆ. ಇದು ಸಂವಿಧಾನವು ಖಚಿತಪಡಿಸಿದ ವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯೂ ಹೌದು. homosexual-symbolಈ ತೀರ್ಪು ನೀಡಿದ ನ್ಯಾಯಾಧೀಶರು ಸನಾತನವಾದಿ ಮನೋಸ್ಥಿತಿಯ ನ್ಯಾಯಾಧೀಶರೆಂದು ತೀರ್ಪಿನಿಂದ ಕಂಡುಬರುತ್ತದೆ. ನ್ಯಾಯಾಧೀಶರು ಪ್ರಗತಿಶೀಲ ಮನೋಭಾವದವರಾಗಿದ್ದಿದ್ದರೆ ಇಂದಿನ ಸಮಕಾಲೀನ ಜ್ಞಾನವನ್ನು ಆಧರಿಸಿ ತೀರ್ಪು ನೀಡುತ್ತಿದ್ದರು. ನ್ಯಾಯವೂ ಕೂಡ ನ್ಯಾಯಾಧೀಶರ ವೈಯಕ್ತಿಕ ಮನೋಭಾವವನ್ನು ಹೊಂದಿಕೊಂಡು ನೀಡಲ್ಪಡುತ್ತದೆ. ಸಂವಿಧಾನವು ನೀಡಿದ ವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಬಳಸಿಕೊಂಡು ಸಂವಿಧಾನದ ಐಪಿಸಿ 377ನೇ ವಿಧಿ ಇಂದಿನ ಸಮಕಾಲೀನ ಜ್ಞಾನದ ಹಿನ್ನೆಲೆಯಲ್ಲಿ ಅಪ್ರಸ್ತುತ ಎಂದು ಸರ್ವೋಚ್ಛ ನ್ಯಾಯಾಲಯವು ಅದನ್ನು ರದ್ದು ಪಡಿಸಿದ್ದರೆ ಯಾರಿಗೂ ಏನೂ ಮಾಡಲು ಸಾಧ್ಯವಿರಲಿಲ್ಲ, ಏಕೆಂದರೆ ಸರ್ವೋಚ್ಛ ನ್ಯಾಯಾಲಯದ ತೀರ್ಪೇ ಅಂತಿಮ. ಹೀಗಿರುವಾಗ ಸರ್ವೋಚ್ಛ ನ್ಯಾಯಾಲಯವು ಪ್ರತಿಗಾಮಿ ತೀರ್ಪನ್ನು ನೀಡಿ ಮಾನವೀಯತೆ ಹಾಗೂ ಉದಾರವಾದಿ ಪರಂಪರೆಗೆ ಕೊಡಲಿ ಏಟು ಹಾಕಿದೆ. ಸರ್ವೋಚ್ಛ ನ್ಯಾಯಾಲಯವು ಸಂವಿಧಾನದ ಐಪಿಸಿ 377ನೇ ವಿಧಿಯನ್ನು ಪರಾಮರ್ಶಿಸುವ ಹೊಣೆಯನ್ನು ಸಂಸತ್ತಿನ ಮೇಲೆ ಜಾರಿಸಿ ತಾನು ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಭಾರತದಲ್ಲಿ ಧಾರ್ಮಿಕ ಪಟ್ಟಭದ್ರ ಹಿತಾಸಕ್ತ ಸನಾತನವಾದಿ ಗುಂಪುಗಳು ಎಲ್ಲ ಧರ್ಮಗಳಲ್ಲೂ ತುಂಬಿಕೊಂಡಿರುವುದರಿಂದ ಇಂಥ ವಿಷಯದಲ್ಲಿ ಸಂಸತ್ತು ಕೂಡ ಕ್ರಮ ಕೈಗೊಳ್ಳುವುದು ಕಷ್ಟವೇ. ಸನಾತನವಾದಿಗಳ ವಿರೋಧವನ್ನು ಕಟ್ಟಿಕೊಳ್ಳಲು Hyakinthos-paintingರಾಜಕೀಯ ಪಕ್ಷಗಳು ಹಿಂಜರಿಯುವ ಸನ್ನಿವೇಶ ಭಾರತದಲ್ಲಿ ಇರುವಾಗ ಸಂಸತ್ತು ಈ ಬಗ್ಗೆ ಕ್ರಮ ಕೈಗೊಂಡು ಐಪಿಸಿ 377ನೇ ವಿಧಿಯನ್ನು ರದ್ದುಪಡಿಸುವ ಅಥವಾ ತಿದ್ದುಪಡಿ ತರಲು ಹಿಂಜರಿಯುವ ಸ್ಥಿತಿ ಕಂಡುಬರುತ್ತಾ ಇದೆ. ಇದಕ್ಕೆ ಪೂರಕವಾಗಿ ಭಾರತೀಯ ಜನತಾ ಪಕ್ಷವು ತಾನು ಸಲಿಂಗಕಾಮ ಅಪರಾಧ ಎಂಬ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ ಹಾಗೂ ಇದರ ವಿರುದ್ಧವಾಗಿ ಸಂವಿಧಾನದ ಐಪಿಸಿ 377ನೇ ವಿಧಿಯನ್ನು ರದ್ದುಪಡಿಸುವುದನ್ನು ವಿರೋಧಿಸುತ್ತೇನೆ ಎಂದು ಹೇಳಿ ತಾನು ಎಂಥ ಪ್ರತಿಗಾಮಿ ಮನೋಭಾವದ ಪಕ್ಷ ಎಂಬುದನ್ನು ತೋರಿಸಿಕೊಂಡಿದೆ.

ಸಲಿಂಗಕಾಮವು ನಿಸರ್ಗಕ್ಕೆ ವಿರೋಧ ಎಂಬುದು ಸನಾತನವಾದಿಗಳ ಹಾಗೂ ಶಾಸ್ತ್ರಾಂಧ ಜನರ ವಾದ. ಸಲಿಂಗಕಾಮಿಗಳನ್ನು ನಿಸರ್ಗವೇ ಸೃಷ್ಟಿಸಿದ್ದು ಆಗಿರುವಾಗ ಇದು ನಿಸರ್ಗಕ್ಕೆ ವಿರೋಧ ಹೇಗಾಗುತ್ತದೆ? ನಿಸರ್ಗ ವಿರೋಧ ಆಗಬೇಕಾದರೆ ಸಲಿಂಗಕಾಮಿಗಳನ್ನು ವಿಜ್ಞಾನಿಗಳು ಪ್ರಯೋಗಶಾಲೆಯಲ್ಲಿ ಕೃತಕವಾಗಿ ಸೃಷ್ಟಿಸಿರಬೇಕು. ಆದರೆ ಸಲಿಂಗಕಾಮಿಗಳನ್ನು ವಿಜ್ಞಾನಿಗಳು ವಂಶವಾಹಿ ತಂತ್ರಜ್ಞಾನದ (genetical engineering) ಮೂಲಕ ಕೃತಕವಾಗಿ ಸೃಷ್ಟಿಸಿದ್ದು ಅಲ್ಲ. ಹೀಗಿರುವಾಗ ಇದು ನಿಸರ್ಗಕ್ಕೆ ವಿರೋಧವಾದದ್ದು ಎಂಬುದು ಅರ್ಥಹೀನ. ಸಲಿಂಗಕಾಮವೆಂಬುದು ಪ್ರಧಾನವಾಗಿ ವಂಶವಾಹಿಗಳ ಮೂಲಕ ನಿರ್ಧರಿತವಾಗುತ್ತದೆ ಎಂದು ವಿಜ್ಞಾನ ಹಾಗೂ ವೈದ್ಯಕೀಯ ಲೋಕ ಸ್ಪಷ್ಟಪಡಿಸಿದೆ ಹಾಗೂ ಇದನ್ನು ಚಿಕಿತ್ಸೆಯ ಮೂಲಕ ಬದಲಾಯಿಸಲು ಸಾಧ್ಯವಿಲ್ಲವೆಂದೂ ಹೇಳಿದೆ. ಸಲಿಂಗಕಾಮವು ನಿಸರ್ಗದ್ದೇ ಒಂದು ವೈವಿಧ್ಯ. ಹಾಗಾಗಿ ಇದನ್ನು ಅಪರಾಧವಾಗಿ ಕಾಣುವುದು ಅಮಾನವೀಯ ಹಾಗೂ ಸಂವಿಧಾನವು ನೀಡಿದ ವ್ಯಕ್ತಿಸ್ವಾತಂತ್ರ್ಯದ ಉಲ್ಲಂಘನೆಯೂ ಹೌದು. ಸಲಿಂಗಕಾಮಿಗಳು ಸೇರಿದರೆ ಸಂತಾನೋತ್ಪತ್ತಿ ಆಗುವುದಿಲ್ಲ. ಗಂಡು ಹಾಗೂ ಹೆಣ್ಣು ಕೂಡುವುದು ಸಂತಾನೋತ್ಪತ್ತಿಗೆ ಆಗಿದ್ದರೆ ಮಾತ್ರ ಅದು ಧರ್ಮಸಮ್ಮತ ಎಂಬ ವಾದವನ್ನು ಮಾಡುವವರೂ ಇದ್ದಾರೆ. ಇವರ ವಾದ ನೋಡಿದರೆ ಗಂಡು ಹೆಣ್ಣುಗಳು ಸಂತಾನೋತ್ಪತ್ತಿಗೆ ಮಾತ್ರ ಕೂಡಬೇಕು ಎಂದಾದರೆ ಮಕ್ಕಳಾದ ನಂತರವೂ ಮನುಷ್ಯರು ಲೈಂಗಿಕ ಕ್ರಿಯೆ ನಡೆಸುವುದಿಲ್ಲವೇ? ಮನುಷ್ಯನಲ್ಲಿ ಲೈಂಗಿಕತೆ ಸಂತಾನೋತ್ಪತ್ತಿಯನ್ನು ಮೀರಿ ಬೇರೆ ಉದ್ಧೇಶಗಳನ್ನೂ ಹೊಂದಿದೆ. ಬರಿಯ ಸಂತಾನೋತ್ಪತ್ತಿಗೆ ಮಾತ್ರ ಲೈಂಗಿಕತೆ ಸೀಮಿತ ಎಂದಾಗಿದ್ದರೆanimal_homosexual_behavior ಮನುಷ್ಯರಲ್ಲಿ ಗಂಡು ಹೆಣ್ಣುಗಳು ಎಲ್ಲ ಕಾಲದಲ್ಲೂ ಕೂಡುವುದನ್ನು ನಿಸರ್ಗವು ಸಾಧ್ಯ ಮಾಡುತ್ತಿರಲಿಲ್ಲ. ಹೆಚ್ಚಿನ ಪ್ರಾಣಿಗಳಲ್ಲಿ ಬೆದೆಯ ಕಾಲ ಎಂದು ಇದೆ. ಆ ಕಾಲದಲ್ಲಿ ಮಾತ್ರ ಗಂಡು ಹೆಣ್ಣುಗಳು ಪ್ರಾಣಿಗಳಲ್ಲಿ ಕೂಡಲು ಸಾಧ್ಯ. ಮನುಷ್ಯರಲ್ಲಿ ಇಂಥ ಬೆದೆಯ ಕಾಲ ಎಂದು ಇಲ್ಲ. ಮನುಷ್ಯರಲ್ಲಿ ಎಲ್ಲಾ ಕಾಲದಲ್ಲೂ ಗಂಡು ಹೆಣ್ಣುಗಳು ಕೂಡಬಹುದು. ಮನುಷ್ಯರಲ್ಲಿ ಲೈಂಗಿಕತೆ ಮನೋರಂಜನೆಯಾಗಿಯೂ, ಸುಖಪಡುವ ಸಾಧನವಾಗಿಯೂ ಬಳಕೆಯಾಗುತ್ತದೆ ಮತ್ತು ಇದನ್ನು ನಿಸರ್ಗವೇ ಮಾನವನಲ್ಲಿ ರೂಪಿಸಿದೆ. ಹೀಗಿರುವಾಗ ಅಲ್ಪಸಂಖ್ಯಾತರಾದ ಸಲಿಂಗಕಾಮಿಗಳು ಸುಖ ಪಡಬಾರದು, ಬಹುಸಂಖ್ಯಾತರಾದ ಭಿನ್ನಲಿಂಗಿ ಮಾನವರು ಮಾತ್ರ ಸುಖಪಡಬೇಕು ಎಂಬುದು ನ್ಯಾಯವಾಗುತ್ತದೆಯೇ ಎಂದು ನ್ಯಾಯಾಧೀಶರು ತೀರ್ಪು ನೀಡುವ ಮುನ್ನ ಯೋಚಿಸಬೇಕಾಗಿತ್ತು. ಅದೇ ರೀತಿ ಬಹುಸಂಖ್ಯಾತ ಭಿನ್ನಲಿಂಗಿ ಮಾನವರು ಹೇಳಿದಂತೆ ಅಲ್ಪಸಂಖ್ಯಾತ ಸಲಿಂಗಕಾಮಿಗಳು ಕೇಳಬೇಕು ಎಂಬುದು ಹಿಟ್ಲರ್ ಹಾಗೂ ಸ್ಟಾಲಿನ್ ತರಹದ ಸರ್ವಾಧಿಕಾರವಾಗುವುದಿಲ್ಲವೇ ಎಂದು ಸನಾತನವಾದಿಗಳು ಯೋಚಿಸಬೇಕಾದ ಅಗತ್ಯ ಇದೆ.

ಸಲಿಂಗಕಾಮವು ಮನುಷ್ಯರಲ್ಲಿ ಮಾತ್ರ ಇದೆಯೆಂದು ಕೆಲವು ಸನಾತನವಾದಿಗಳು ತಪ್ಪು ತಿಳಿದಿದ್ದಾರೆ. ಸಲಿಂಗಕಾಮವು ಹಲವಾರು ಪ್ರಾಣಿಗಳಲ್ಲಿಯೂ ಇದೆ ಎಂದು ವಿಜ್ಞಾನ ಹೇಳುತ್ತದೆ. ಹೋಮೋಸೆಕ್ಶುವಾಲಿಟಿ ಎಂದು ಹಾಕಿದರೆ ವಿಕಿಪೀಡಿಯದಲ್ಲಿ ಸಲಿಂಗಕಾಮದ ಸಮಗ್ರ ವಿವರಗಳು ಲಭಿಸುತ್ತವೆ. ಈ ಬಗ್ಗೆ ಸನಾತನವಾದಿಗಳು ಒಮ್ಮೆ ನೋಡುವುದು ಉತ್ತಮ. ಸಲಿಂಗಕಾಮದಿಂದ ಸಮಾಜದ ನೈತಿಕತೆ ಸರ್ವನಾಶವಾಗುತ್ತದೆ ಎಂಬ ಗುಲ್ಲನ್ನೂ ಸನಾತನವಾದಿಗಳು ಎಬ್ಬಿಸುತ್ತಿದ್ದಾರೆ. ಇದೊಂದು ಹುರುಳಿಲ್ಲದ ವಾದ. ಯಾರು ತಮ್ಮ ವಂಶವಾಹಿಗಳ (genes) ಮೂಲಕ ಸಲಿಂಗಕಾಮಿಗಳಾಗುವ ಸಾಧ್ಯತೆಯನ್ನು ಪಡೆದಿದ್ದಾರೆಯೋ lgbt-pride-parade-in-chennaiಅವರು ಮಾತ್ರ ಸಲಿಂಗಕಾಮದಲ್ಲಿ ಸುಖವನ್ನು ಕಾಣಲು ಸಾಧ್ಯ. ಉಳಿದಂತೆ ಭಿನ್ನಲಿಂಗಿಗಳು ಗಂಡು ಹೆಣ್ಣುಗಳ ಮಿಲನದಿಂದ ಪಡೆಯುವ ಸುಖವನ್ನು ಸಲಿಂಗಕಾಮದಿಂದ ಪಡೆಯಲು ಸಾಧ್ಯವೇ ಇಲ್ಲ. ಹೀಗಾಗಿ ಇಡೀ ಸಮಾಜದ ನೈತಿಕತೆಯೇ ಸಲಿಂಗಕಾಮದಿಂದ ಸರ್ವನಾಶವಾಗಿಹೋಗುತ್ತದೆ ಎಂಬ ಸನಾತನವಾದಿಗಳ ಆತಂಕಕ್ಕೆ ಕಾರಣವಿಲ್ಲ. ಅದೇ ರೀತಿ ಸಲಿಂಗಕಾಮದಿಂದ ಮಾನವ ಕುಲವೇ ನಾಶವಾದೀತು ಎಂಬ ಹಾಹಾಕಾರವೂ ಹುರುಳಿಲ್ಲದ್ದು. ಸಲಿಂಗಕಾಮಿಗಳ ಸಂಖ್ಯೆ ಸಮಾಜದಲ್ಲಿ ದೊಡ್ಡ ಪ್ರಮಾಣದಲ್ಲಿ ಇಲ್ಲ. ಅಂದಾಜು ಪ್ರಕಾರ ಅದು 10ರಿಂದ 15%ಕ್ಕಿಂತ ಹೆಚ್ಚು ಇಲ್ಲ. ಹೀಗಾಗಿ ಮಾನವ ಜನಾಂಗ ನಾಶವಾಗುವ ಯಾವ ಅಪಾಯವೂ ಇಲ್ಲ. ಸಲಿಂಗಕಾಮ ಅಪರಾಧ ಎಂಬ ವಸಾಹತುಶಾಹೀ ಕಾಲದ ಕಾನೂನು ಇಂದಿನ ವೈಜ್ಞಾನಿಕ ಜ್ಞಾನದ ಹಿನ್ನೆಲೆಯಲ್ಲಿ ಅರ್ಥಹೀನ ಹಾಗೂ ಕಾಲಬಾಹಿರ ಎಂಬುದನ್ನು ಸಮಾಜವು ಅರ್ಥಮಾಡಿಕೊಂಡು ಸಲಿಂಗಕಾಮಿಗಳು ಕೂಡ ಘನತೆಯಿಂದ ಬದುಕುವ ಅವಕಾಶ ಮಾಡಿಕೊಡಬೇಕಾದದ್ದು ಧರ್ಮ. ಅದು ಶಿಕ್ಷಾರ್ಹ ಅಪರಾಧ ಎಂದು ಹೇಳುವುದು ಅಮಾನವೀಯ ಹಾಗೂ ಹಿಟ್ಲರ್‌ಶಾಹಿ ಮನೋಸ್ಥಿತಿ. ಇದನ್ನು ಎಲ್ಲ ಧರ್ಮಗಳ ಸನಾತನವಾದಿಗಳು ತಿಳಿದುಕೊಳ್ಳಬೇಕಾಗಿದೆ. ಅದೇ ರೀತಿ ಎಲ್ಲ ರಾಜಕೀಯ ಪಕ್ಷಗಳೂ ಈ ಕುರಿತು ಉದಾರವಾದಿ ನಿಲುವನ್ನು ತಳೆಯುವುದು ಮಾನವೀಯತೆಯ ಲಕ್ಷಣ ಆದೀತು.

ಜಿ.ಎಸ್. ಶಿವರುದ್ರಪ್ಪನವರ “ಹೊಸ ಹುಟ್ಟು” ಕವಿತೆ

ಹೊಸ ಹುಟ್ಟು

– ಜಿ.ಎಸ್. ಶಿವರುದ್ರಪ್ಪ

“ಎತ್ತಿಕೋ ನನ್ನನ್ನುGSS
ಬಿಡು ಮೊದಲು ನಿನ್ನರಮನೆಯ ತಿಳಿಗೊಳದಲ್ಲಿ
ಆಮೇಲೆ ಹೊಳೆಯಲ್ಲಿ
ಮತ್ತೆ ನಾ ಬೆಳೆದ ಮೇಲೆ ಕಡಲಿಗೆ
ಏನು ಯಾಕೆ ಎಂದು ಸಂಶಯ ಬೇಡ
ಅರ್ಥವಾಗುತ್ತದೆ ಎಲ್ಲವೂ ಕೊನೆಗೆ.”

ಬೊಗಸೆಗೆ ಬಂದ ಪುಟ್ಟ ಮೀನನ್ನು
ದಿಟ್ಟಿಸಿದ ಮನು
ಅದು ಬಿಡುಗಣ್ಗಳಲ್ಲಿ ಬಿಂಬಿಸುತಿತ್ತು
ಬೆಳಗಿನ ಬಾನು
ಅರುಣೋದಯದ ಪ್ರಶಾಂತ ಮೌನದಲಿ
ಮರ್‍ಮರಿಸುತ್ತಾ ಹರಡಿತ್ತು ನದಿ
ತನ್ನ ಪಾಡಿಗೆ ತಾನು.

ಏನಾಶ್ಚರ್ಯ !
ಅರ್ಘ್ಯವೆನೆತ್ತಿದ ಕೈಗೆ ಮೀನು ಬರುವುದು ಏನು !
ವಿಚಿತ್ರವಾಗಿದೆ ಎಲ್ಲ
ನಂಬುವುದು ಒಳ್ಳೆಯದು ! ಅನುಮಾನ
ಒಳ್ಳೆಯದಲ್ಲ.

ಬೆಳೆಯಿತು ಮೀನು ದಿನದಿಂದ ದಿನಕ್ಕೆ
ಮೊದಲು ಅರಮನೆಯ ಉದ್ಯಾನದಲ್ಲಿರುವ
ಕೊಳದಲ್ಲಿ
ಆಮೇಲೆ ಹೊಳೆಯಲ್ಲಿ
ಮತ್ತೆ ಬ್ರಹ್ಮಾಂಡವಾಗಿ ಕಡಲಲ್ಲಿ
ಈಜಿತ್ತು ಅಲೆಗಳ ಸೀಳಿ
ಬಡಬಾಗ್ನಿಯುರಿಸುತ್ತ ತನ್ನ ಕಣ್ಣಲ್ಲಿ.

ನೋಡುತ್ತ ದಡದಲ್ಲಿ ನಿಂತ ಮನುವಿಗೆ
ಹೇಳಿತು ಮತ್ತೆ ;
“ಕೇಳು, ನಾನು ಹೇಳುವುದನ್ನು
ಸರಿಯಾಗಿ ಹೇಳು
ನೀನು ಈ ಯುಗದ ಮನು; ನಾಳಿನ ಜಗದ
ಭಾರವನು ಹೆಗಲಲ್ಲಿ ಹೊತ್ತವನು;
ಈ ಕಾಲ ಮುಗಿತಾಯಕ್ಕೆ ಬಂದಿದೆ
ಬದಲಾಗುವುದು ಅಗತ್ಯ
ಚಕ್ರ ತಿರುಗುವುದಕ್ಕೆ:

ಈಗ ಮೂಲಜಲ ಬಗ್ಗಡವಾಗಿ ಕೆಸರು
ಒಳಗೂ ಹೊರಗೂ: ಕೊಳೆತು ನಾರಿದೆ ತೀರ್ಥ
ದೇವಾಲಯದ ಮೂರ್ತಿಗಳು ಭಗ್ನ ; ತಕ್ಕಡಿ-
ಯೆಲ್ಲ ತಲೆಕೆಳಗು. ತಿನ್ನುವನ್ನದ ತುಂಬ
ಕಲ್ಲು; ಎಲ್ಲೆಂದರಲ್ಲಿ ಬೆಳೆದು ದಂಡಕಾರಣ್ಯ
ಹದ್ದು-ನರಿ-ತೋಳ ರಾಕ್ಷಸ ರಾಜ್ಯ.

ದಾರಿ ಒಂದೇ: ಇರುವೆಲ್ಲವನ್ನೂ ಕೊಚ್ಚಿ
ಮತ್ತೆ ಕಟ್ಟಬೇಕಾಗಿದೆ ಹೊಸ ಜಗತ್ತ,
ನೀನೋ ಅದಕ್ಕೆ ಬರಿ ನಿಮಿತ್ತ.
ಕಟ್ಟು ಹಡಗೊಂದನು, ಶೇಖರಿಸು ಒಂದು ಕಡೆ
ನಾಳೆ ಬಿತ್ತಲು ತಕ್ಕ ಬೀಜಗಳನ್ನು
ನೀನು, ನಿನ್ನ ಪರಿವಾರ, ಮತ್ತೆ ಒಂದಷ್ಟು
ಉತ್ತಮದ ತಳಿಯನ್ನು.
ಬರುತ್ತದೆ ನಾಳೆ ಜಲಪ್ರಳಯ; ಕೊಚ್ಚುತ್ತದೆ
ಇರುವುದೆಲ್ಲವನೂ ನಿಶ್ಯೇಷವಾಗಿ
ನಾ ಹಿಡಿದು ರಕ್ಷಿಸುತ್ತೇನೆ ನೀ ಕೂತ
ಹಡಗನು ಹೊಸ ಹುಟ್ಟಿಗಾಗಿ.”

“ನಾನೊಲ್ಲೆ”
ಕೈ ಮುಗಿದು ಹೇಳಿದನು ಮನು, “ನಾನೊಲ್ಲೆ
ಇರುವ ಈ ಎಲ್ಲವನೂ ನಿರ್ನಾಮಗೊಳಿಸಿ
ನಾಳಿನ ದಿವಸ ನಾನು ನನ್ನ ಪರಿವಾರ
ಉಳಿದು ಬದುಕುವ ಭಾಗ್ಯ ನನಗೆ ಬೇಡ
ನೀ ವರ್ಣಿಸಿದ ವಾಸ್ತವಂಶದ ಒಂದಂಶ
ನಾನೂ ಕೂಡ.
ಕೊಚ್ಚಲಿ ಬಿಡು ನನ್ನನ್ನೂ ಸೇರಿಸಿಕೊಂಡು
ಈ ಮಹಾ ಪ್ರವಾಹ
ನನಗಿಲ್ಲ ನಾನೊಬ್ಬನೇ ಬದುಕುವ ದಾಹ
ನಾಳೆ ಬೆಳೆದೀತು ಹೊಸ ಮಣ್ಣಿನಲ್ಲಿ ಬೇರೂರಿ
ನನ್ನಲ್ಲಿರುವ ಒಳಿತೇನಾದರೂ
ಕೊಂಬೆ-ರೆಂಬೆಗೆ ಪುಟಿದು ಹೊಸ ಹೂವು-ಚಿಗುರು.”