Monthly Archives: January 2014

ಯಾರು ರೋಗಿ? ರಾಜ್ಯಪಾಲರೇ, ಆದಷ್ಟು ಬೇಗ ಹೊರಡಿ…

– ಸುಧಾಂಶು ಕಾರ್ಕಳ

“Who is Anantamurthy? He is nobody…. He is sick”… ಘನತೆವೆತ್ತ ರಾಜ್ಯಪಾಲರು ಹೀಗೆ ಮಾತನಾಡಿದ್ದಾರೆ. ದಾವಣಗೆರೆ ವಿ.ವಿಗೆ ಕುಲಪತಿ ನೇಮಕ ಮಾಡುವಾಗ ಆಗಿರಬಹುದಾದ ಅವ್ಯವಹಾರದ ಬಗ್ಗೆ ಎದ್ದಿರುವ ವಿವಾದದ ಮುಂದುವರಿದ ಭಾಗವಿದು.ಹೀಗೆ ಮಾತನಾಡುವ ಮೂಲಕ nudisiri-ananthamurthyರಾಜ್ಯಪಾಲರು ತಮ್ಮ ಕುಲಪತಿ ನೇಮಕಾತಿಯಲ್ಲಿ ತಮಗಿರುವ ಪರಮಾಧಿಕಾರವನ್ನು ಎತ್ತಿ ತೋರಿಸಿದ್ದಾರೆ. ಅಷ್ಟೇ ಅಲ್ಲ ತಮ್ಮ ವಿಶಿಷ್ಟ ಪದ ಬಳಕೆಯಿಂದ ತಮ್ಮ ’ಘನತೆ’ಗೆ ಕುಂದು ತಂದುಕೊಂಡಿದ್ದಾರೆ. ರಾಜ್ಯಪಾಲರು ’ಸಿಕ್’ ಎಂಬ ಪದ ಬಳಸಿದ್ದು, ಅನಂತಮೂರ್ತಿಯವರ ದೈಹಿಕ ಅನಾರೋಗ್ಯದ ಬಗ್ಗೆ ಅಲ್ಲ. ಅವರ ಮಾನಸಿಕ ಸ್ತಿಮಿತತೆಯನ್ನು ಪ್ರಶ್ನೆ ಮಾಡಿದ್ದಾರೆ. ಇಲ್ಲವಾದಲ್ಲಿ “I can’t argue with him, he is sick…” – ಎಂದು ಹೇಳುವ ಅಗತ್ಯವೇನಿತ್ತು?

ಒಂದಂತೂ ಸತ್ಯ ಇತ್ತೀಚೆಗೆ ಯಾವ ವಿ.ವಿಗೂ ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ನೇಮಕವಾಗುತ್ತಿಲ್ಲ. ಕೋಟಿಗಟ್ಟಲೆ ಹಣ ಸಂದಾಯ, ಹಸ್ತಾಂತರ ಆಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅನಂತಮೂರ್ತಿಯವರೇ ಈ ಬಗ್ಗೆ ಸುದ್ದಿವಾಹಿನಿಯೊಂದಕ್ಕೆ ಮಾತನಾಡಿದ್ದಾರೆ. ಒಂದು ಸಮುದಾಯದ ವ್ಯಕ್ತಿಯೊಬ್ಬರು ಕುಲಪತಿಯಾಗುತ್ತಾರೆಂದರೆ, ಆ ಸಮುದಾಯದ ಗುತ್ತಿಗೆದಾರರು, ಉದ್ಯಮಿಗಳು, ಇತರ ಆಸಕ್ತರು ’ಬಂಡವಾಳ’ ಹೂಡುತ್ತಾರಂತೆ. ಬಂಡವಾಳ ಹೂಡಿದ ಮೇಲೆ ಲಾಭ ಮಾಡಲೇಬೇಕಲ್ಲ? ಹಾಗಾಗಿ ಅವರ ವ್ಯಕ್ತಿ ಕುಲಪತಿ ಆದ ನಂತರ ವಿವಿಧ ಕಾಮಗಾರಿಗಳ ಹೆಸರಿನಲ್ಲ, ಕಾಲೇಜುಗಳ ಮಾನ್ಯತೆ ಹೆಸರಿನಲ್ಲಿ, ಬೋಧಕ ಹಾಗೂ ಬೋಧಕೇತರ ಹುದ್ದೆಗಳ ನೇಮಕಾತಿಯಲ್ಲಿ ಲಾಭ ಗಳಿಸುತ್ತಾರೆ.

ಒಂದು ವರ್ಷದ ಹಿಂದೆ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಆದ ನೇಮಕಾತಿಗಳಲ್ಲಿ ಸಾಕಷ್ಟು ಹಣ ಹರಿದ ವರ್ತಮಾನವಿದೆ. ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿಗಳಲ್ಲಿ ಆಗುವ ಅವ್ಯವಹಾರಗಳ ಬಗ್ಗೆ ಇತ್ತೀಚೆಗೆ ಸಾರ್ವಜನಿಕವಾಗಿ ಚರ್ಚೆಗಳಾಗುತ್ತಿವೆ ಆದರೆ, ವಿಶ್ವವಿದ್ಯಾನಿಲಯಗಳ ನೇಮಕಾತಿ ಬಗ್ಗೆ ಚರ್ಚೆಗಳು ಇನ್ನಷ್ಟೇ ಆಗಬೇಕಿದೆ.

ಹಂಸರಾಜ್ ಭಾರಧ್ವಾಜ್ ಅವರು ಕರ್ನಾಟಕಕ್ಕೆ ರಾಜ್ಯಪಾಲರಾಗಿ ನೇಮಕರಾದ ನಂತರ ಅವರು ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಅವರು ಅನೇಕ ’ಶಿಕ್ಷಣ ರತ್ನ’ಗಳನ್ನು ಈ ಕ್ಷೇತ್ರಕ್ಕೆ ಪರಿಚಯಿಸಿದ್ದಾರೆ. ತಪ್ಪು ಮಾಹಿತಿ ನೀಡಿ ಕುಲಪತಿ ಹುದ್ದೆಗೆ ಅರ್ಹತೆ ದಕ್ಕಿಸಿಕೊಂಡು ನೇಮಕವಾದ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ ಕುಲಪತಿ ಸನ್ಮಾನ್ಯ ರಾಜ್ಯಪಾಲರು ಈ ರಾಜ್ಯಕ್ಕೆ ಕೊಟ್ಟ ಬಳುವಳಿ. Tumkur-VC-Sharma-with-Governorತುಮಕೂರಿನಲ್ಲಿದ್ದುಕೊಂಡು ’ಫಟಾಫಟ್ ಪಿ.ಎಚ್.ಡಿ’ ಯೋಜನೆ ತಂದ ಮಹನೀಯರು ಕೂಡ ಇದೇ ರಾಜ್ಯಪಾಲರ ಆಯ್ಕೆ. ಇನ್ನು ಮೈಸೂರು ವಿ.ವಿ ಕುಲಪತಿಗಳ ಬಗ್ಗೆ, ಅವರ ಸಾಧನೆಗಳ ಬಗ್ಗೆ ಹೇಳಲು ಪದಗಳೇ ಸಿಗುತ್ತಿಲ್ಲ! ಇತ್ತೀಚೆಗೆ ಮೈಸೂರು ವಿ.ವಿ ನಡೆಸಿದ ಸ್ಲೆಡ್ (SLET) ಪರೀಕ್ಷೆಗಳಲ್ಲೂ ಅವ್ಯವಹಾರ ನಡೆಯುತ್ತಿದೆಯೆಂದು ಸುದ್ದಿಗಳು ಹರಿದಾಡುತ್ತಿವೆ. ಎರಡರಿಂದ ಮೂರು ಲಕ್ಷ ದುಡ್ಡು ಕೊಟ್ಟವರು ಬೋಧಕ ಹುದ್ದೆಗಳಿಗೆ ಅರ್ಹತೆ ಪಡೆಯುತ್ತಾರೆ. ಸದ್ಯದಲ್ಲೆ ರಾಜ್ಯ ಸರಕಾರ ಪದವಿ ಕಾಲೇಜುಗಳಿಗೆ ನೇಮಕಾತಿ ಆರಂಭಿಸುವ ಸೂಚನೆ ಇರುವುದರಿಂದ ಈ ದಂಧೆಗೆ ಮಹತ್ವ ದೊರಕಿದೆ.

ಅಷ್ಟೇ ಅಲ್ಲ..ಹಿಂದಿನ ಸರಕಾರ ಬೇಕಾಬಿಟ್ಟಿಯಾಗಿ ಖಾಸಗಿ ವಿ.ವಿ ಮಸೂದೆಗಳನ್ನು ಮಂಡಿಸಿ ಕೊಟ್ಟಂತೆ..ರಾಜ್ಯಪಾಲರು ಒಪ್ಪಿ ಸಹಿ ಹಾಕಿದರು. ಘನತೆವೆತ್ತ ರಾಜ್ಯಪಾಲರೇ ರಾಜ್ಯಕ್ಕೆ ನೀವಿತ್ತ ಸೇವೆ ಅತ್ಯಮೂಲ್ಯ. ನಿಮ್ಮ ಅವಧಿಯಲ್ಲಿ ’ಉನ್ನತ ಶೈಕ್ಷಣಿಕ ರಂಗ ಬಾನೆತ್ತರಕೆ ಬೆಳೆದು’ ಪ್ರಾಮಾಣಿಕರ ಕೈಗೆ ಎಟುಕದಂತಾಗಿದೆ. ನಿಮ್ಮ ಸೇವೆ ಪಡೆದ ಈ ರಾಜ್ಯವೇ ಧನ್ಯ. ದಯವಿಟ್ಟು… ತಾವು ಆದಷ್ಟು ಬೇಗ ಹೊರಟುಬಿಡಿ. ಆ ಮೂಲಕ ರಾಜ್ಯವನ್ನು ಕಾಪಾಡಿ.

ಆಮ್ ಆದ್ಮಿ ಪಕ್ಷ ಹೆಜ್ಜೆ ಹೆಜ್ಜೆಗೂ ಎಚ್ಚರಿಕೆಯಿಂದಿರಬೇಕು

– ಆನಂದ ಪ್ರಸಾದ್

ಆಮ್ ಆದ್ಮಿ ಪಕ್ಷದ ದೇಶವ್ಯಾಪಿ ಸದಸ್ಯತ್ವ 1 ಕೋಟಿ 5 ಲಕ್ಷ ತಲುಪಿದೆ. ಇದು ಒಂದು ಒಳ್ಳೆಯ ಬೆಳವಣಿಗೆ ಎಂದು ಹೇಳಬಹುದು. ಅದೇ ವೇಳೆ ಆಮ್ ಆದ್ಮಿ ಪಕ್ಷ ತಾನು ಇತರ ಪಕ್ಷಗಳಿಗಿಂಥ ಭಿನ್ನ ಹಾಗೂ ಸಂವೇದನಾಶೀಲ ಎಂದು ತೋರಿಸಬೇಕಾಗಿದೆ. ಇಲ್ಲದೆ ಹೋದರೆ ಪಕ್ಷದ ಬೆಳವಣಿಗೆಯ ಮೇಲೆ ತೀವ್ರ ದುಷ್ಪರಿಣಾಮ ಬೀರಬಹುದು. ದೆಹಲಿ ಸರ್ಕಾರದ ಕಾನೂನು ಮಂತ್ರಿ ಸೋಮನಾಥ್ ಭಾರತಿ ಮೇಲೆ ನಡುರಾತ್ರಿ ಮಾದಕ ದ್ರವ್ಯ ಹಾಗೂ ವೇಶ್ಯಾವಾಟಿಕೆ ಜಾಲ ನಡೆಸುತ್ತಿದ್ದ ಆರೋಪದ ಮೇಲೆ ವಿದೇಶಿ ಮಹಿಳೆಯರ ಮೇಲೆ ಕಾನೂನನ್ನು ಕೈಗೆ ತೆಗೆದುಕೊಂಡು ತನ್ನ ಬೆಂಬಲಿಗರ ಜೊತೆ ಹಲ್ಲೆ ನಡೆಸಿದ ಆಪಾದನೆ ಬಹಳ ಬಲವಾಗಿ ಕೇಳಿಬಂದಿದೆ. ಈ ವಿಚಾರದಲ್ಲಿ ಆಮ್ ಆದ್ಮಿ ಪಕ್ಷವು ನೈತಿಕತೆಯನ್ನು ಎತ್ತಿ ಹಿಡಿಯುವ ಕ್ರಮವಾಗಿ ಸೋಮನಾಥ್ ಭಾರತಿಯ ರಾಜೀನಾಮೆಯನ್ನು ಪಡೆಯುವುದು ಪಕ್ಷದ ಬೆಳವಣಿಗೆಯ ದೃಷ್ಟಿಯಿಂದ ಅಗತ್ಯವಾಗಿತ್ತು. ಈ ವಿಚಾರವಾಗಿ ನ್ಯಾಯಾಂಗ ವಿಚಾರಣೆ ಜಾರಿಯಲ್ಲಿದೆ. aamadmipartyಹೀಗಾಗಿ ವಿಚಾರಣೆ ಮುಗಿದು ಸೋಮನಾಥ್ ಭಾರತಿ ತಪ್ಪಿತಸ್ಥ ಹೌದು ಅಥವಾ ಅಲ್ಲ ಎಂದು ನಿರ್ಧಾರ ಆಗುವವರೆಗೂ ತನ್ನ ಪದವಿಯಿಂದ ದೂರ ನಿಲ್ಲುವುದು ಪಕ್ಷದ ವಿಶ್ವಾಸಾರ್ಹತೆಯ ದೃಷ್ಟಿಯಿಂದ ಅತೀ ಅಗತ್ಯವಾಗಿತ್ತು. ಅವರು ಒಂದು ವೇಳೆ ತಪ್ಪಿತಸ್ಥರೆಂದು ಕಂಡು ಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲೂ ಪಕ್ಷವು ಹಿಂಜರಿಯಬಾರದು. ಯಾವುದೇ ಕೆಲಸ ಮಾಡುವುದಿದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೇ ಹೊರತು ಸಂಘ ಪರಿವಾರದ ಅನುಯಾಯಿಗಳ ರೀತಿ ಕಾನೂನನ್ನು ಕೈಗೆತ್ತಿಕೊಳ್ಳುವುದು ಯೊಗ್ಯವಾದದ್ದಲ್ಲ. ಇದರಿಂದ ಆಮ್ ಆದ್ಮಿ ಪಕ್ಷ ಇತರ ಪಕ್ಷಗಳಿಗಿಂತ ಭಿನ್ನ ಎಂಬ ಇಮೇಜಿಗೆ ಧಕ್ಕೆ ಆಗುತ್ತದೆ. ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ತಮ್ಮ ಮಾತಿನ ಮೇಲೆ ಹಿಡಿತ ಇರಿಸಿಕೊಳ್ಳಬೇಕಾಗಿದೆ ಹಾಗೂ ಮಾತಿನಲ್ಲಿ ವಿನಯವಂತಿಕೆಯನ್ನು ತೋರಿಸಬೇಕು. ಇಲ್ಲದಿದ್ದರೆ ಅವರಿಗೂ ಉಳಿದ ರಾಜಕೀಯ ಪಕ್ಷಗಳಿಗೂ ವ್ಯತ್ಯಾಸ ಇರುವುದಿಲ್ಲ.  ಮಾನವನಿಗೆ ಶ್ರೀಮಂತಿಕೆ, ಅಧಿಕಾರ, ಪದವಿ ಬಂದಾಗ ಅಹಂಕಾರ ಬರುವುದು ಸಹಜ. ಪ್ರಜ್ಞಾವಂತರು ಇದನ್ನು ಮೆಟ್ಟಿ ನಿಲ್ಲುತ್ತಾರೆ. manishsisodia-yogendrayadav-arvindkejriwal-prashantbhushanಆಮ್ ಆದ್ಮಿ ಪಕ್ಷದವರು ಇಂಥ ಪ್ರಜ್ಞಾವಂತಿಕೆಯನ್ನು ತೋರಿಸಬೇಕಾಗಿದೆ. ಇಲ್ಲದೆ ಹೋದರೆ ಅವಸಾನ ಖಚಿತ. ಹೊಸ ವಿಧಾನಸಭಾ ಸದಸ್ಯರಿಗೂ ಹಾಗೂ ಮಂತ್ರಿಗಳಿಗೂ, ಪಕ್ಷದ ಕಾರ್ಯಕರ್ತರುಗಳಿಗೂ ವಿನಯದಿಂದ ನಡೆದುಕೊಳ್ಳುವ ತರಬೇತಿ ನೀಡಬೇಕಾಗಿದೆ. ಬಿಸಿರಕ್ತದ ಯುವಕ ಕಾರ್ಯಕರ್ತರು ಕಾನೂನನ್ನು ಕೈಗೆ ತೆಗೆದುಕೊಳ್ಳಲು ಹೋಗಬಾರದು. ಬೇರೆ ಪಕ್ಷಗಳವರು ಪ್ರಚೋದನಾಕಾರಿ ಹೇಳಿಕೆ ನೀಡಿದರೂ ಸಂಯಮದಿಂದ ಪ್ರತಿಕ್ರಿಯಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕಾಗಿದೆ ಇಲ್ಲದಿದ್ದರೆ ನರೇಂದ್ರ ಮೋದಿಯ ಬೆಂಬಲಿಗರಿಗೂ ಆಮ್ ಆದ್ಮಿ ಪಕ್ಷದ ಬೆಂಬಲಿಗರಿಗೂ ವ್ಯತ್ಯಾಸ ಇರಲಾರದು. ಹೀಗಾಗಿ ಆಮ್ ಆದ್ಮಿ ಪಕ್ಷದ ಥಿಂಕ್ ಟ್ಯಾಂಕ್ ಎಂದೆನಿಸಿಕೊಂಡಿರುವ ಯೋಗೇಂದ್ರ ಯಾದವ್ ಅವರಂಥ ಹಿರಿಯ ನಾಯಕರು ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ನಡೆದುಕೊಳ್ಳಬೇಕಾದ ವಿಧಾನದ ಬಗ್ಗೆ ಒಂದು ನೀತಿ ಸಂಹಿತೆಯನ್ನು ರೂಪಿಸಲು ಮುಂದಾಗುವುದು ಉತ್ತಮ.

ಆಮ್ ಆದ್ಮಿ ಪಕ್ಷವು ಮೊದಲು ದೆಹಲಿಯಲ್ಲಿ ಆಡಳಿತ ನಡೆಸಿ ಅನುಭವ ಪಡೆದು ನಂತರ ದೇಶವ್ಯಾಪಿ ಪಕ್ಷವನ್ನು ಬೆಳೆಸಬೇಕು ಹಾಗೂ ಚುನಾವಣೆಗೆ ಸ್ಪರ್ಧಿಸಬೇಕು ಎಂದು ವಿರೋಧಿ ಪಕ್ಷಗಳವರು ಅದರಲ್ಲೂ ಮುಖ್ಯವಾಗಿ ಸಂಘ ಪರಿವಾರದ ಕಡೆಯವರು ಹೇಳುತ್ತಿದ್ದಾರೆ. ಇದಕ್ಕೆ ಕಾರಣ ಎಲ್ಲಿ ಬಿಜೆಪಿಗೆ ಬೀಳಬಹುದಾದ ಮತಗಳು ನಗರ ಪ್ರದೇಶಗಳಲ್ಲಿ ಆಮ್ ಆದ್ಮಿ ಪಕ್ಷದ ಜೊತೆ ಹಂಚಿಹೋಗಿ ನರೇಂದ್ರ ಮೋದಿಯ ವರ್ಚಸ್ಸು ಕುಂದಿಹೊಗುತ್ತದೋ ಎಂಬ ಆತಂಕ ಎಂಬುದು ಕಂಡುಬರುತ್ತದೆ. ದೇಶದಲ್ಲಿ ಈಗ ಇರುವ ಭ್ರಷ್ಟಾಚಾರ ವಿರೋಧಿ ಅಲೆಯ ಪ್ರಯೋಜನ ಪಡೆದು ದೇಶವ್ಯಾಪಿ ಪಕ್ಷವನ್ನು ಬೆಳೆಸಲು ಆಮ್ ಆದ್ಮಿ Arvind_Kejriwal_party_launchಪಕ್ಷಕ್ಕೆ ಇದುವೇ ಸಕಾಲ. ಇಲ್ಲದಿದ್ದರೆ ಬಿಎಸ್ಪಿ, ಎಸ್ಪಿ, ಅಥವಾ ಎಡ ಪಕ್ಷಗಳಂತೆ ಕೆಲವೇ ರಾಜ್ಯಕ್ಕೆ ಆಮ್ ಆದ್ಮಿ ಪಕ್ಷ ಸೀಮಿತವಾಗಬೇಕಾದೀತು. ಪಕ್ಷವನ್ನು ದೇಶವ್ಯಾಪಿ ಬೆಳೆಸಲು ಯಾವುದಾದರೂ ಒಂದು ಅಲೆಯ ಸಹಾಯ ಬೇಕಾಗುತ್ತದೆ. ಇಲ್ಲದಿದ್ದರೆ ದೇಶವ್ಯಾಪಿ ಹೊಸ ಪಕ್ಷವನ್ನು ಬೆಳೆಸುವುದು ಬಹಳ ಕಷ್ಟ ಅಥವಾ ತುಂಬಾ ವರ್ಷಗಳನ್ನೇ ತೆಗೆದುಕೊಳ್ಳಬಹುದು ಅಥವಾ ಅದು ಅಸಾಧ್ಯವೂ ಆಗಬಹುದು. ಈಗ ಆಮ್ ಆದ್ಮಿ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ದೊರಕಿದ ಪ್ರತಿಕ್ರಿಯೆ ನೋಡಿದರೆ ದೇಶವು ಪರ್ಯಾಯ ರಾಜಕೀಯ ಪಕ್ಷವೊಂದರ ಹುಡುಕಾಟದಲ್ಲಿದೆ ಹಾಗೂ ದೇಶದಲ್ಲಿ ಒಂದು ಭ್ರಷ್ಟಾಚಾರ ವಿರೋಧಿ ಅಲೆ ಇದೆ. ಇಲ್ಲದೆ ಹೋದರೆ ಈ ರೀತಿಯ ಸ್ಪಂದನೆ ಆಮ್ ಆದ್ಮಿ ಪಕ್ಷಕ್ಕೆ ಸಿಗುತ್ತಿರಲಿಲ್ಲ. ಜನ ಬಿಜೆಪಿಗೂ ಒಂದು ಅವಕಾಶ ಕೊಟ್ಟು ನೋಡಿದ್ದಾರೆ ಹಾಗೂ ಅದರ ಅವಧಿಯ ಭ್ರಷ್ಟಾಚಾರಗಳನ್ನೂ ಕಂಡಿದ್ದಾರೆ. ಹೀಗಾಗಿ ಜನ ಹೊಸ ಪರ್ಯಾಯ ಇದೆಯೋ ಎಂದು ನೋಡುತ್ತಿದ್ದಾರೆ. ಇದನ್ನು ಆಮ್ ಆದ್ಮಿ ಪಕ್ಷವು ಬಳಸಿಕೊಂಡು ದೇಶವ್ಯಾಪಿ ಬೆಂಬಲಿಗರ ಜಾಲ ಬೆಳೆಸಿಕೊಳ್ಳುವುದು ಸೂಕ್ತವೇ ಆಗಿದೆ.

ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಧರಣಿ ಮಾಡಬಾರದು ಎಂದು ಸಂವಿಧಾನದಲ್ಲಿ ಹೇಳಿಲ್ಲ ಎಂದು ಕೇಜ್ರಿವಾಲ್ ತಮ್ಮ ಧರಣಿ ಸತ್ಯಾಗ್ರಹವನ್ನು ಸಮರ್ಥಿಸಿಕೊಂಡಿದ್ದಾರೆ. ಇದು ನಿಜ. ಆದರೆ ನಿಷೇಧಾಜ್ಞೆ ಜಾರಿ ಇರುವ ಕಡೆ ಧರಣಿ ನಡೆಸಿದ್ದರಿಂದಾಗಿ ಕಾನೂನನ್ನು ಉಲ್ಲಂಘಿಸಿದ ಅಪವಾದ ಅವರaravind-kejriwal ಮೇಲೆ ಬಂದಿದೆ ಹಾಗೂ ಇದರಿಂದಾಗಿ ದೇಶದಾದ್ಯಂತ ಪಕ್ಷದ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಆಗಿದೆ. ಧರಣಿ ಕೈಗೊಳ್ಳುವುದಿದ್ದರೂ ನಿಷೇಧಾಜ್ಞೆ ಇಲ್ಲದ ಕಡೆ ಕೈಗೊಂಡಿದ್ದರೆ ಜನಸಾಮಾನ್ಯರಿಗೆ ತೊಂದರೆ ಆಗುತ್ತಿರಲಿಲ್ಲ. ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಸದಸ್ಯರು ಧರಣಿ ಕೈಗೊಳ್ಳುವ ಬದಲು ಪಕ್ಷದ ಕಾರ್ಯಕರ್ತರು ಧರಣಿ ಕೈಗೊಂಡಿದ್ದರೂ ಆಗುತ್ತಿತ್ತು ಮತ್ತು ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿರಲಿಲ್ಲ. ಹೀಗಾಗಿ ಇಂಥ ನಡೆಗಳನ್ನು ಪಕ್ಷವು ಮುಂದುವರಿಸಬಾರದು ಹಾಗೂ ಯಾವುದೇ ಪ್ರಮುಖ ತೀರ್ಮಾನ ಕೈಗೊಳ್ಳುವಾಗ ಪಕ್ಷದಲ್ಲಿ ಚಿಂತಕರ ಜೊತೆ ಸಮಾಲೋಚನೆ ನಡೆಸಿ ಬಹುಮತದ ಆಧಾರದಲ್ಲಿ ತೀರ್ಮಾನ ತೆಗೆದುಕೊಳ್ಳುವುದು ಪಕ್ಷದ ಬೆಳವಣಿಗೆಯ ದೃಷ್ಟಿಯಿಂದ ಸೂಕ್ತವಾದೀತು. ನಡೆಯುವವರು ಎಡವುವುದು ಸಹಜ. ಹಾಗೆಯೇ ಹೊಸದಾಗಿ ಆಡಳಿತ ವಹಿಸಿಕೊಂಡಾಗ ಕೆಲವು ತಪ್ಪುಗಳು ಆಗಬಹುದು. ಇಂಥ ತಪ್ಪುಗಳನ್ನು ಸಮರ್ಥಿಸಲು ಹೋಗಿ ಇನ್ನಷ್ಟು ತಪ್ಪುಗಳನ್ನು ಮಾಡಬಾರದು. ತಪ್ಪುಗಳನ್ನು ವಿನೀತತೆಯಿಂದ ಒಪ್ಪಿಕೊಂಡರೆ ಪಕ್ಷದ ವಿಶ್ವಾಸಾರ್ಹತೆ ಹೆಚ್ಚಬಹುದು.

ಆಮ್ ಆದ್ಮಿ ಪಕ್ಷದ ನಡೆಗಳ ಬಗ್ಗೆ ಮಾಧ್ಯಮಗಳು ಹಾಗೂ ಬೇರೆ ರಾಜಕೀಯ ಪಕ್ಷಗಳು ತೀವ್ರ ಆಕ್ರಮಣಕಾರಿಯಾಗಿ ನಡೆದುಕೊಳ್ಳುತ್ತಿರುವುದು ಕಂಡುಬರುತ್ತಿದೆ. ಇದನ್ನು ನೋಡುವಾಗ ಮಾಧ್ಯಮಗಳಿಗೆ ದೇಶದಲ್ಲಿ ಪರ್ಯಾಯ ಶಕ್ತಿಗಳು ರೂಪುಗೊಂಡು ಪ್ರಜಾಪ್ರಭುತ್ವ ಬಲಗೊಳ್ಳಬೇಕೆಂಬ ಸದಾಶಯ ಇಲ್ಲವೆಂಬ ಗುಮಾನಿ ಬರುತ್ತದೆ. ಮಾಧ್ಯಮಗಳು ಒಂದು ವರ್ಷ ಪ್ರಾಯದ ಕೂಸಾದ ಆಮ್ ಆದ್ಮಿ ಪಕ್ಷವನ್ನು ಸರಿಯಾದ ಹಾದಿಯಲ್ಲಿ ಮುನ್ನಡೆಸಬೇಕಾದ ಜವಾಬ್ದಾರಿ ಹೊಂದಿವೆ. ಹೀಗಾಗಿ ಆ ಪಕ್ಷದ ಸಣ್ಣ ತಪ್ಪುಗಳನ್ನು ಬಹಳ ದೊಡ್ಡ ತಪ್ಪುಗಳಂತೆ ಬಿಂಬಿಸಿ ದೇಶದಲ್ಲಿ ಭ್ರಮನಿರಸನ ಉಂಟುಮಾಡಲು ಆರಂಭದಲ್ಲೇ ಯತ್ನಿಸುವುದು ಸೂಕ್ತವಲ್ಲ.  ಅದಕ್ಕೆ ಸಾಕಷ್ಟು ಸಮಯ ಕೊಡಬೇಕಾದ ಅಗತ್ಯ ಇದೆ. ತಪ್ಪಾದಾಗ ಸೌಮ್ಯವಾಗಿ ಬುದ್ಧಿ ಹೇಳಬೇಕು ಮತ್ತು ದೇಶದ ಪ್ರಖ್ಯಾತ ಚಿಂತಕರು, ಲೇಖಕರು, ಸಾಹಿತಿಗಳು, ವಿಜ್ಞಾನಿಗಳಿಂದ ಪಕ್ಷಕ್ಕೆ ಸೂಕ್ತ ಮಾರ್ಗದರ್ಶನ ಮಾಡಿಸಬೇಕು. ಹಾಗಾದರೆ ಪಕ್ಷವು ಸರಿ ದಾರಿಯಲ್ಲಿ ಮುನ್ನಡೆಯಬಲ್ಲದು. ದೇಶದ ರಾಜಕೀಯವು ನಿಂತ ನೀರಾಗಿ ಕೊಳಚೆ ಗುಂಡಿಯಂತೆ ಆಗಿದೆ. ಆ ಕೊಳಚೆ ಗುಂಡಿಗೆ ಹೊಸ ನೀರು ಬರಬೇಕಾಗಿದೆ ಹಾಗೂ ಪ್ರವಾಹವಾಗಿ ಹರಿದು ಕೊಳಚೆ ನೀರು ಹೊರಹೋಗಿ ಶುದ್ಧ ನೀರು ತುಂಬಬೇಕಾಗಿದೆ. ಹೀಗಾಗಬೇಕಾದರೆ ಕಾಲಕಾಲಕ್ಕೆ ರಾಜಕೀಯ ರಂಗದಲ್ಲಿ ಹೊಸ ಚಿಂತನೆಗಳು, ಪ್ರಯತ್ನಗಳು ನಡೆಯುತ್ತಿರಬೇಕಾಗುತ್ತದೆ. ಹೊಸ ಪ್ರಯತ್ನಗಳು ನಡೆದಾಗಲೆಲ್ಲ ಸಿನಿಕರಾಗಿ ಹಿಂದೆ ನಡೆದ ರಾಜಕೀಯ ಸ್ವಚ್ಛತೆಯ ಪ್ರಯತ್ನಗಳು ವಿಫಲವಾಗಿವೆ ಎಂದೂ, ಇನ್ನು ಮುಂದೆಯೂ ಹೀಗೆಯೇ ಆಗುತ್ತದೆ ಎಂದು ಜನರ ದಾರಿ ತಪ್ಪಿಸುವ ಕೆಲಸವನ್ನು ಮಾಧ್ಯಮಗಳು ಮಾಡುವುದನ್ನು ನಿಲ್ಲಿಸುವುದು ಸೂಕ್ತ. ಹೊಸ ಪ್ರಯತ್ನ ನಡೆದಾಗ ಅದನ್ನು ಮಾಧ್ಯಮಗಳು ಬೆಂಬಲಿಸಬೇಕು. ಅದು ವಿಫಲವಾದರೂ ಚಿಂತೆ ಇಲ್ಲ. ಇಂಥ ಪ್ರಯತ್ನಗಳು ಅಲ್ಪ ಸ್ವಲ್ಪವಾದರೂ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರುತ್ತವೆ ಮತ್ತು ಹೀಗೆಯೇ ಪ್ರಯತ್ನಗಳು ಮುಂದುವರಿಯುತ್ತಾ ಇರಬೇಕು. ಹರಿಯುವ ನೀರು ನಿಂತ ಕೂಡಲೇ ಅದು ಪಾಚಿಗಟ್ಟಿ ಕೊಳಕಾಗುತ್ತದೆ. Kejriwal-janata-durbarಅದೇ ರೀತಿ ರಾಜಕೀಯ ರಂಗದಲ್ಲಿಯೂ ಹೊಸ ಪ್ರಯೋಗಗಳು ನಡೆಯುತ್ತಲೇ ಇರಬೇಕು, ಇದರಿಂದ ರಾಜಕೀಯ ನಿಂತ ನೀರಾಗಿ ಕೊಳಚೆಯಾಗುವುದು ಸ್ವಲ್ಪ ಮಟ್ಟಿಗಾದರೂ ತಪ್ಪುತ್ತದೆ.

ಆಮ್ ಆದ್ಮಿ ಪಕ್ಷವು ಮಾಧ್ಯಮಗಳ ಅಪಪ್ರಚಾರದ ಹೊರತಾಗಿಯೂ ಬೆಳೆದು ಅಧಿಕಾರದ ಹತ್ತಿರ ಬಂದಿದೆ. ಅವಕಾಶ ಸಿಕ್ಕಾಗಲೆಲ್ಲ ಅದರ ವಿರುದ್ಧ ಅಪಪ್ರಚಾರ ನಡೆಸಲು ದೇಶದ ಪ್ರಧಾನ ಪಕ್ಷಗಳು ಟೊಂಕ ಕಟ್ಟಿ ನಿಂತಿವೆ. ಇದಕ್ಕೆ ಮಾಧ್ಯಮಗಳು ತಾಳ ಹಾಕುತ್ತಿವೆ. ಇಂಥ ಪರಿಸ್ಥಿತಿಯಲ್ಲಿ ಆಮ್ ಆದ್ಮಿ ಪಕ್ಷವು ಪ್ರತಿಯೊಂದು ನಡೆಯನ್ನೂ ಬಹಳ ಎಚ್ಚರಿಕೆಯಿಂದ ಇರಿಸಬೇಕಾಗುತ್ತದೆ. ಆಮ್ ಆದ್ಮಿ ಪಕ್ಷವು ಒಂದು ಸಣ್ಣ ತಪ್ಪು ಮಾಡಿದರೂ ಮಾಧ್ಯಮಗಳಿಗೆ ಹಾಗೂ ಪಟ್ಟಭದ್ರ ರಾಜಕೀಯ ಪಕ್ಷಗಳಿಗೆ ಅದು ಭೂತಾಕಾರವಾಗಿ ಕಾಣುತ್ತದೆ. ಹೀಗಾಗಿ ಮಾಧ್ಯಮಗಳ ಅಪಪ್ರಚಾರವನ್ನು ಮೆಟ್ಟಿ ನಿಲ್ಲಲು ಆಮ್ ಆದ್ಮಿ ಪಕ್ಷವು ಜನಸಾಮಾನ್ಯರನ್ನೇ ತನ್ನ ಸಂದೇಶಗಳನ್ನು ಜನತೆಗೆ ಬಿತ್ತರಿಸಲು ಹಾಗೂ ಹರಡಲು ಬಳಸಿಕೊಳ್ಳಬೇಕಾಗಿದೆ. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಹೆಚ್ಚಿನ ಮಾಧ್ಯಮಗಳು ಇಲ್ಲದ ಕಾಲದಲ್ಲಿಯೂ ಮಹಾತ್ಮಾ ಗಾಂಧಿಯವರ ಸಂದೇಶಗಳು ದೇಶದ ಮೂಲೆಮೂಲೆಗೂ ಜನರ ಬಾಯಿಯಿಂದ ಬಾಯಿಗೆ ಹರಡುತ್ತಿದ್ದವು. ಇದೇ ರೀತಿ ದೇಶದಲ್ಲಿ ತನ್ನ ಸಂದೇಶಗಳನ್ನು ಹರಡಲು ಆಮ್ ಆದ್ಮಿ ಪಕ್ಷವು ತನ್ನ ಪರ ಸಹಾನುಭೂತಿ ಉಳ್ಳ ಜನಸಾಮಾನ್ಯರ ವ್ಯೂಹವೊಂದನ್ನು ರಚಿಸಿಕೊಳ್ಳಬೇಕಾಗಿದೆ. ಜನಸಾಮಾನ್ಯರು ಪಕ್ಷದ ಪರವಾಗಿ ನಿಲ್ಲಬೇಕಾದರೆ ನಡೆ ಹಾಗೂ ನುಡಿಗಳಲ್ಲಿ ಅಂತರವಿಲ್ಲದ ರೀತಿಯಲ್ಲಿ ಆಮ್ ಆದ್ಮಿ ಪಕ್ಷವು ನಡೆದುಕೊಳ್ಳುವುದು ಬಹಳ ಮುಖ್ಯ. ಇದನ್ನು ಪಕ್ಷದ ಮುಖಂಡರು ಸದಾ ಕಾಲ ನೆನಪಿನಲ್ಲಿ ಇಟ್ಟುಕೊಳ್ಳಬೇಕು.

ಮಹಾತ್ಮ ಹುತಾತ್ಮನಾದಂದು…

– ರವಿ ಕೃಷ್ಣಾರೆಡ್ಡಿ

(ಹತ್ತು ವರ್ಷಗಳ ಹಿಂದೆ – 2004 ಜನವರಿ 30 – ದಟ್ಸ್‌ಕನ್ನಡ.ಕಾಮ್‌ಗೆ ಬರೆದಿದ್ದ ಲೇಖನ.)

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತನ್ನ ಸದಸ್ಯರು ಸತ್ತ ಮನುಷ್ಯನಿಗೆ ಗೌರವ ಸೂಚಿಸಲಿಕ್ಕಾಗಿ ಕಲಾಪವನ್ನು ಕೆಲಕಾಲ ಸ್ಥಗಿತಗೊಳಿಸಿತು. ಬ್ರಿಟಿಷ್‌ ಪ್ರತಿನಿಧಿ ಫಿಲಿಪ್‌ ನೋಯೆಲ್‌ಬೆಕರ್‌ ಗಾಂಧಿಯನ್ನು ‘ಕಡುಬಡವನ, ಏಕಾಂಗಿಯ ಮತ್ತು ಸೋತವನ ಸ್ನೇಹಿತ” ಎಂದು ವರ್ಣಿಸಿ ‘ಗಾಂಧಿಯ ಮಹತ್ಸಾಧನೆಗಳು ಇನ್ನು ಮುಂದೆಯೂ ಬರಲಿವೆ” ಎಂದು ಪ್ರತಿಪಾದಿಸಿದ.

ಭದ್ರತಾ ಮಂಡಳಿಯ ಅನ್ಯ ಸದಸ್ಯರು ಗಾಂಧಿಯ ಆಧ್ಯಾತ್ಮಿಕ ಗುಣಗಳನ್ನು ಶ್ಲಾಘಿಸಿ ಶಾಂತಿ ಮತ್ತು ಅಹಿಂಸೆಯಡೆಗೆ 200px-MKGandhi[1]ಆತನ ನಿಷ್ಠೆಯನ್ನು ಪ್ರಶಂಸಿಸಿದರು. ಸೋವಿಯತ್‌ ಒಕ್ಕೂಟದ ಆಂಡ್ರ್ಯಿಗ್ರಾಮಿಕೊ ಗಾಂಧಿಯನ್ನು ಭಾರತದ ಉನ್ನತ ರಾಜಕೀಯ ನಾಯಕರೊಲ್ಲಬ್ಬರೆಂದು ವರ್ಣಿಸಿ ಆತನ ಹೆಸರು ಸುದೀರ್ಘ ಸಮಯ ತೆಗೆದುಕೊಂಡ ಭಾರತದ ಜನರ ರಾಷ್ಟ್ರೀಯ ವಿಮೋಚನಾ ಹೋರಾಟದ ಜೊತೆಗೆ ಎಂದಿಗೂ ಜೋಡಿಸಲ್ಪಡುತ್ತದೆ ಎಂದರು. ಸೋವಿಯತ್‌ ಉಕ್ರೇನ್‌ನ ಪ್ರತಿನಿಧಿ ಟಾರಾಸೆಂಕೊ ಸಹ ಗಾಂಧಿಯ ರಾಜಕಾರಣವನ್ನು ಒತ್ತುಕೊಟ್ಟು ಹೇಳಿದರು.

ವಿಶ್ವಸಂಸ್ಥೆ ತನ್ನ ಧ್ವಜವನ್ನು ಅರ್ಧಕ್ಕೆ ಕೆಳಗಿಳಿಸಿತು.
ಮಾನವತೆ ತನ್ನ ಧ್ವಜವನ್ನು ಕೆಳಗಿಳಿಸಿತು.

ಗಾಂಧಿಯ ಸಾವಿಗೆ ಜಗತ್ತಿನಾದ್ಯಂತದ ಪ್ರತಿಕ್ರಿಯೆಯೇ ಒಂದು ಮುಖ್ಯ ನೈಜಸಾಕ್ಷಿ; ಅದು ವ್ಯಾಪಕವಾಗಿ ಹರಡಿದ್ದ ಮನೋಭಾವ ಮತ್ತು ಅಗತ್ಯವನ್ನು ಅಭಿವ್ಯಕ್ತಗೊಳಿಸಿತು. ನ್ಯೂಯಾರ್ಕ್‌ನ ಪತ್ರಿಕೆಯ ಆಲ್ಬರ್ಟ್‌ ಡ್ಯೂಶ್ಚ್‌ ‘ಗಾಂಧಿಯ ಸಾವಿಗೆ ಪೂಜ್ಯಭಾವನೆಯಿಂದ ಪ್ರತಿಸ್ಪಂದಿಸಿದ ಜಗತ್ತಿಗೆ ಇನ್ನೂ ಸ್ವಲ್ಪ ಭರವಸೆಯಿದೆ”ಎಂದು ಘೋಷಿಸಿ- ‘ನವದೆಹಲಿಯ ದುರಂತವನ್ನು ಹಿಂಬಾಲಿಸಿದ ಆಘಾತ ಮತ್ತು ಪರಿತಾಪ ನಾವು ಸಂತತ್ವವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೂ ಅದನ್ನು ಗೌರವಿಸುತ್ತೇವೆ ಎಂಬುದನ್ನು ತೋರಿಸಿಕೊಟ್ಟಿತು” ಎಂದರು.

ಅಮೇರಿಕಾದ ಸೆನೆಟರ್‌ ಆರ್ಥರ್‌ ವ್ಯಾಂಡೆನ್‌ಬರ್ಗ್‌ ಹೇಳಿದ್ದು ‘ವಿನಯಶೀಲತೆ ಮತ್ತು ಸರಳ ಸತ್ಯಗಳನ್ನು gandhi_dead_bodyಗಾಂಧಿ ಸಾಮ್ರಾಜ್ಯಗಳಿಗಿಂತ ಶಕ್ತಿಶಾಲಿಯನ್ನಾಗಿ ಮಾಡಿದರು”. ಕಾದಂಬರಿಕಾರ ಪರ್ಲ್‌ ಬಕ್‌ ಗಾಂಧಿಯ ಹತ್ಯೆಯನ್ನು ‘ಮತ್ತೊಂದು ಶಿಲುಬೆಗೇರಿಕೆ” ಎಂದು ವರ್ಣಿಸಿದರು. ನ್ಯಾಯಾಧೀಶ ಫೆಲಿಕ್ಸ್‌ ಫ್ರಾಂಕ್‌ಫರ್ಟರ್‌ ಅದನ್ನು ‘ಪ್ರಪಂಚದ ಸತ್ಯ ಪಡೆಗಳ ವಿರುದ್ಧದ ಅತಿ ಕ್ರೂರ ಹೊಡೆತ” ಎಂದರು.

ಗಾಂಧಿಯನ್ನು ಪ್ರಶಂಸಿಸುತ್ತಿದ್ದ ಆಡಳಿತಗಾರ ಮತ್ತು ರಾಜಕಾರಣಿಗಳಿಗೆ ತಮ್ಮ ಸ್ವಂತವೇ ನ್ಯೂನತೆಗಳನ್ನು ಕನಿಷ್ಠ ನೆನಪಿಸುವಷ್ಟಾದರೂ ಆಗಿದ್ದರಾತ.

ಕ್ಯಾಲಿಫೋರ್ನಿಯಾದ ಹದಿಮೂರು ವರ್ಷದ ಹುಡುಗಿ ಒಂದು ಕಾಗದದಲ್ಲಿ ಬರೆದಳು: ‘ಗಾಂಧಿಯ ಸಾವನ್ನು ಕೇಳಿ ನನಗೆ ನಿಜವಾಗಿಯೂ ದಾರುಣ ದುಃಖವಾಯಿತು. ನನಗೆ ಆತನಲ್ಲಿ ಅಷ್ಟು ಆಸಕ್ತಿಯಿದೆ ಎಂದು ಎಂದೂ ತಿಳಿದಿರಲಿಲ್ಲ ಆದರೆ ಆ ಮಹಾನ್‌ ವ್ಯಕ್ತಿಯ ಸಾವಿನಿಂದ ನನಗೆ ಎಷ್ಟು ಅಸಂತೋಷವಾಗಿದೆ ಎಂದು ನನಗೇ ತಿಳಿಯಿತು”.

ನ್ಯೂಯಾರ್ಕಿನಲ್ಲಿ, ಹನ್ನೆರಡು ವರ್ಷದ ಹುಡುಗಿ ಅಡಿಗೆ ಮನೆಗೆ ಉಪಹಾರ ಸ್ವೀಕರಿಸಲು ಹೋಗಿದ್ದಳು. ಚಾಲನೆಯಲ್ಲಿದ್ದ ರೇಡಿಯಾ ಗಾಂಧಿಗೆ ಗುಂಡಿಟ್ಟ ಸುದ್ದಿ ತಂದಿತು. ಅದೇ ಕ್ಷಣದಲ್ಲಿ, ಆ ಚಿಕ್ಕ ಹುಡುಗಿ, ಮನೆಕೆಲಸದವಳು, ಮತ್ತು ತೋಟದ ಮಾಲಿ ಪ್ರಾರ್ಥನಾ ಸಭೆ ನಡೆಸಿದರು, ಪ್ರಾರ್ಥಿಸಿದರು ಮತ್ತು ಅತ್ತರು. ಅದೇ ರೀತಿ, ಪ್ರಪಂಚದಾದ್ಯಂತ ಲಕ್ಷಾಂತರ ಜನ ಗಾಂಧಿಯ ಸಾವನ್ನು ವೈಯುಕ್ತಿಕ ನಷ್ಟವೆಂಬಂತೆ ಶೋಕಿಸಿದರು. ಅವರಿಗೆ ಯಾಕೆಂದು ಅಷ್ಟೇನೂ ಸರಿಯಾಗಿ ತಿಳಿದಿರಲಿಲ್ಲ; ಆತ ಏನನ್ನು ಪ್ರತಿನಿಧಿಸಿದ್ದ ಎಂದೂ ಸಹ ಚೆನ್ನಾಗಿ ಗೊತ್ತಿರಲಿಲ್ಲ. ಆದರೆ ಆತ ‘ಒಳ್ಳೆಯ ಮನುಷ್ಯ”ನಾಗಿದ್ದ ಮತ್ತು ಒಳ್ಳೆಯವರು ವಿರಳ.

ಸರ್‌ ಸ್ಟಾಫರ್ಡ್‌ ಕ್ರಿಪ್ಸ್‌ ಬರೆಯುತ್ತಾರೆ, ‘ಲೌಕಿಕ ವಸ್ತುಗಳ ಮೇಲೆ ಶಕ್ತಿಯುತ ಚೈತನ್ಯವನ್ನು ಇಷ್ಟು ಬಲಯುತವಾಗಿ ಮತ್ತು ಸಮಂಜಸವಾಗಿ ಯಾವುದೇ ಸಮಯದಲ್ಲಾಗಲಿ ಅಥವ ಕನಿಷ್ಠ ಇತ್ತೀಚಿನ ಇತಿಹಾಸದಲ್ಲಾಗಲಿ ಪ್ರದರ್ಶಿಸಿದ ಮತ್ತೊಬ್ಬ ವ್ಯಕ್ತಿ ನನಗೆ ತಿಳಿದಿಲ್ಲ”. ಇದನ್ನೇ ತಾವು ಶೋಕಿಸುತ್ತಿದ್ದಾಗ ಜನ ಗ್ರಹಿಸಿದ್ದು. ಅವರ ಸುತ್ತಮುತ್ತೆಲ್ಲ ಲೌಕಿಕ ವಸ್ತುಗಳು ಅಲೌಕಿಕ ಚೈತನ್ಯಕ್ಕಿಂತ ಬಲವಾಗಿದ್ದವು. ಆತನ ಮಿಂಚಿನಂತಹ ದಿಢೀರ್‌ ಸಾವು ವಿಶಾಲ ಕತ್ತಲನ್ನು ಅನಾವರಣಗೊಳಿಸಿತು. ಆತನ ನಂತರ ಜೀವಿಸಿದ ಯಾರೂ ಸತ್ಯವಂತ ಜೀವನವನ್ನು ಜೀವಿಸುವುದಕ್ಕಾಗಿ, ಕಕ್ಕುಲತೆ, ಸ್ವವ್ಯಕ್ತಿನಾಶ, ವಿನಯಶೀಲತೆ, ಸೇವೆ ಮತ್ತು ಅಹಿಂಸೆಯನ್ನು ಸುದೀರ್ಘ ಕಾಲ, ಪ್ರಬಲ ಶತ್ರುಗಳ ವಿರುದ್ಧದ ಕಷ್ಟಮಯ ಹೋರಾಟವನ್ನು, ಆತನಷ್ಟು ಕಠಿಣವಾಗಿ ಪ್ರಯತ್ನಿಸಲಿಲ್ಲ ಮತ್ತು ಅಷ್ಟು ಯಶಸ್ಸು ಪಡೆಯಲಿಲ್ಲ. ತನ್ನ ದೇಶದಲ್ಲಿನ ಬ್ರಿಟಿಷ್‌ ಆಡಳಿತದ ವಿರುದ್ಧ ಮತ್ತು ತನ್ನ ದೇಶದ್ದೇ ಜನರ ದುಷ್ಟತೆಯ ವಿರುದ್ಧ ಆತ ತೀವ್ರವಾಗಿ ಮತ್ತು ನಿರಂತರವಾಗಿ ಹೋರಾಡಿದ. ಆದರೆ ಯುದ್ದದ ಮಧ್ಯದಲ್ಲಿ ತನ್ನ ಕೈಗಳನ್ನು ಪವಿತ್ರವಾಗಿಟ್ಟುಕೊಂಡ. ಮತ್ಸರವಿಲ್ಲದೆ, ಢೋಂಗಿತನವಿಲ್ಲದೆ, ಅಥವ ದ್ವೇಷವಿಲ್ಲದೆ ಹೋರಾಡಿದ.

ಈ ಮೇಲಿನ ಸಾಲುಗಳು 1950ರಲ್ಲಿ ಪ್ರಕಟವಾದ, ಲೂಯಿ ಫಿಷರ್‌ ಎಂಬ ಪಾಶ್ಚಾತ್ಯ ಲೇಖಕ ಬರೆದ The Life of Mahatma Gandhi ಎಂಬ ಜೀವನಚರಿತ್ರೆ ಪುಸ್ತಕದ ಒಂದೆರಡು ಪುಟಗಳಲ್ಲಿ ಬರುವ ವಾಕ್ಯಗಳು. ಈ ಪುಸ್ತಕವನ್ನು ಆತ ಬರೆದದ್ದು ಇಂಗ್ಲೀಷ್‌ ಬಲ್ಲ the-life-of-mahatma-gandhiಅಮೇರಿಕನ್‌ ಹಾಗೂ ಪಾಶ್ಚಾತ್ಯ ಓದುಗರನ್ನು ಗಮದಲ್ಲಿಟ್ಟುಕೊಂಡು. ಆದ್ದರಿಂದ ಅಮೇರಿಕನ್ನರಿಗೆ ಅಥವ ಪಾಶ್ಚಾತ್ಯರಿಗೆ ಪ್ರಸ್ತುತ ಮತ್ತು ಪರಿಚಿತವಿರುವ, ಅವರಿಗೆ ಮುಖ್ಯವೆನಿಸುವ ವ್ಯಕ್ತಿ-ವಿಷಯಗಳನ್ನು ತೆಗೆದುಕೊಂಡು ಆ ದೃಷ್ಟಿಕೋನದಲ್ಲಿ ನಿರೂಪಿಸಿರುವುದು.

ಶರಣರ ಗುಣವನ್ನು ಮರಣದಲ್ಲಿ ನೋಡೆಂಬಂತೆ, ಮೋಹನದಾಸ ಗಾಂಧಿ ಸತ್ತಾಗ ಜಗತ್ತು ಪ್ರತಿಕ್ರಿಯಿಸಿದ ರೀತಿ ಅನನ್ಯ. ಆದರೆ ಇಲ್ಲಿ ಆ ಅನನ್ಯತೆಗೆ ಕೇವಲ ಒಳ್ಳೆಯವರು ವಿರಳ ಎಂಬುದಷ್ಟೇ ಕಾರಣವಲ್ಲ ಎನ್ನುವುದು ಸ್ವಲ್ಪ ಆಲೋಚಿಸಿದರೆ ಎಲ್ಲರಿಗೂ ತಿಳಿಯುವ ಸರಳ ಸತ್ಯ. ಐವತ್ತಾರು ವರ್ಷಗಳ ಹಿಂದೆ ಗಾಂಧಿ ಸತ್ತ ದಿನವನ್ನು ಹುತಾತ್ಮರ ದಿನಾಚರಣೆಯನ್ನಾಗಿಸಿ ಕೈತೊಳೆದುಕೊಳ್ಳುವುದಕ್ಕಿಂತ ಸಮಕಾಲೀನ ಅಗತ್ಯಗಳಿಗೆ ತಕ್ಕಂತೆ ಗಾಂಧೀವಾದವನ್ನು ಸಾಣೆ ಹಿಡಿದುಕೊಂಡರೆ ಎಷ್ಟೋ ಸಮಸ್ಯೆಗಳಿಗೆ ನೀತಿಯುಕ್ತ, ಸತ್ಯ ಉತ್ತರ ಸಿಗುತ್ತದೆ.

ನಮ್ಮ ಅನಂತಾನಂತ ಅವತಾರಾಚಾರ್ಯ ಪುರುಷರು(?) ಹೇಳಿದಷ್ಟು ಕಠಿಣವಾಗಲಿ, ಅಮೂರ್ತವಾಗಿಯಾಗಲಿ ಗಾಂಧಿಯ ಚಿಂತನೆಗಳು ಇಲ್ಲ. ಹಾಗೆಯೇ ಗಾಂಧಿ ಹೇಳಿದ ಪ್ರತಿ ಅಕ್ಷರವೂ ಸರಿ, ಅದನ್ನು ಸಮಕಾಲೀನಕ್ಕೆ ತಕ್ಕಂತೆ ಪರಿಷ್ಕರಿಸಿ ಅಳವಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂಬ ಮುಲ್ಲಾ ಮಠಾಧೀಶರ ಸ್ವತ್ತಾಗಿಯೂ ಗಾಂಧಿ ಉಳಿದಿಲ್ಲ. ತನ್ನೆಲ್ಲ ಹುಳುಕಗಳ ಜೊತೆಗೆ ಸಾರ್ವಜನಿಕವಾಗಿ ಜೀವಿಸಿದ, ಲೇಖಕ ಫಿಷರ್‌ ಹೇಳುವಂತೆ ಸ್ವವ್ಯಕ್ತಿನಾಶಕ್ಕೆ (self-effacement) ಶ್ರಮಿಸಿದವನ ವ್ಯಕ್ತಿಪೂಜೆ ಮಾಡುವವರು ಅಪಹಾಸ್ಯಕ್ಕೆ ಈಡಾಗುವುದು ಸಹಜ. ಆದ್ದರಿಂದ ಗಾಂಧಿ-ಬುದ್ಧರ ಪುನರವತಾರಕ್ಕಾಗಿ ಕಾಯಬೇಕು ಎಂಬ ನಿರಾಶಾ ಮತ್ತು ಅಸಹಾಯಕ ಸ್ಥಿತಿಯಲ್ಲಿ ಬಿದ್ದು ಹೊಸ ಮಾರ್ಗಗಳನ್ನು ಹುಡುಕುವ, ಹುಟ್ಟು ಹಾಕುವ ಕೆಲಸ ಮಾಡದೆ ಗಾಂಧಿ-ಬುದ್ಧರಿಗೆ ಕಾಯುವುದು ಕರುಣಾಜನಕವೆನಿಸುವ ಸ್ಥಿತಿ. ಇತಿಹಾಸದ ಮಟ್ಟಿಗೆ ಹೇಳುವುದಾದರೆ ಮತ್ತೆ ನಾ ಬರುವೆ ಎಂದು ಇವರ್ಯಾರೂ ಹೇಳಿಲ್ಲ! ಸತ್ತವರಿಗೆ ಕಾಯುತ್ತಾ ಕೂರುವುದು ಮನುಷ್ಯಜಾತಿಯ ಕ್ರಿಯಾಶಕ್ತಿಯನ್ನೇ ಶಂಕಿಸಿದಂತೆ. ನಮ್ಮ ದಾರಿ ನಾವೇ ಹುಡುಕಿಕೊಳ್ಳಬೇಕು. ಯಾಕೆಂದರೆ ಹುತಾತ್ಮರು ಪ್ರೇತಾತ್ಮರಲ್ಲ.

ಅರವಟ್ಟಿಗೆಗಳು

– ಎನ್. ಗೋವಿಂದಪ್ಪ

(“ನೆಲಕಣಜ” ಪುಸ್ತಕದಿಂದ ಆಯ್ದ ಲೇಖನ)

ಆಗೆಲ್ಲಾ ಪ್ರಯಾಣಕ್ಕೆಂದು ಬಸ್ಸುಗಳಿರಲಿಲ್ಲ. ಬಸ್ಸುಗಳು ಆರಂಭವಾದ ಮೇಲೆಯೂ ಆಗೊಂದು ಈಗೊಂದು ಪಟ್ಟಣ ಪ್ರದೇಶಗಳಲ್ಲಿ ಅಡ್ಡಾಡುತ್ತಿದ್ದವು. ಸಾಮಾನ್ಯವಾಗಿ ಜನ ಊರಿಂದೂರಿಗೆ ಪ್ರಯಾಣಿಸುತ್ತಿದ್ದುದು water-containers-stone4ದೂರದ ಊರಾದರೆ ಎತ್ತಿನ ಬಂಡಿ,ಹತ್ತಿರದ ಊರಾದರೆ ಕಾಲ್ನಡಿಗೆ. ಎತ್ತಿನ ಬಂಡಿಯಲ್ಲಿಯೂ ಹೆಂಗಸರು ಮಕ್ಕಳಿಗೆ ಸ್ಥಳಾವಕಾಶ ಮಾಡಿಕೊಟ್ಟು ಮಿಕ್ಕಿ ಸ್ಥಳವಿದ್ದರೆ ಗಂಡಸರು ಕೂರುತ್ತಿದ್ದರು. ಇಲ್ಲವೆ ಬಂಡಿಯನ್ನು ಮುಂದಕ್ಕೆ ಬಿಟ್ಟು ಹಿಂದೆ ನಡೆಯುತ್ತಿದ್ದರು.

ಹೀಗೆ ಪ್ರಯಾಣಿಸುತ್ತಿದ್ದ ಜನಕ್ಕೆ ದಾರಿಗುಂಟ ನೆರಳು ಸಿಗಲೆಂದು ಸಾಲುಮರಗಳನ್ನು, ದಣಿವಾರಿಸಿಕೊಳ್ಳಲು ಜಗಲಿಗಳನ್ನು, ನೀರು ಕುಡಿಯಲು ಅರವಟ್ಟಿಗೆಗಳನ್ನು ನಿರ್ಮಿಸಲಾಗುತ್ತಿತ್ತು. ಗ್ರಾಮೀಣ ಭಾಗದಲ್ಲಿ ಇವುಗಳನ್ನು ’ಸಿಸಂದ್ರ’ಗಳೆಂದು ಕರೆಯಲಾಗುತ್ತದೆ. ಸಿಸಂದ್ರ ಎಂದರೆ ಬಹುಷಃ ಸಿಹಿನೀರು ತುಂಬುವ ತೊಟ್ಟಿಗಳಿರಬಹುದೆಂದು ತೋರುತ್ತದೆ. ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ಈ ಹೆಸರೇ ಚಾಲ್ತಿಯಲ್ಲಿದೆ. “ಸಿಸಂದ್ರಕ್ಕೆ ನೀರು ತುಂಬಿದಿರಾ” ಎಂದು ಹಿರಿಯರು ಎಚ್ಚರಿಸುತ್ತಿದ್ದರೆಂದು ಹಳ್ಳಿಜನ ನೆನಪಿಸಿಕೊಳ್ಳುತ್ತಾರೆ. ಆಳೆತ್ತರದ ನಾಲ್ಕು ಕಲ್ಲಿನ ಕೂಚಗಳನ್ನು ನೆಟ್ಟು ಅದರ ಮೇಲೆ ಚೌಕಾಕಾರದ ತೊಟ್ಟಿಯನ್ನು ಕಟ್ಟಿ ನೀರನ್ನು ತುಂಬಿ ಇಡಲಾಗುತ್ತಿತ್ತು. ಆ ತೊಟ್ಟಿಗೆ ಒಂದು ರಂದ್ರವನ್ನು ಕೊರೆದು ಕಡ್ಡಿಯಿಂದ ಮುಚ್ಚಲಾಗುತ್ತಿತ್ತು. ಅದಕ್ಕೊಂದು ಚಪ್ಪಡಿಯನ್ನು ಓರೆಯಾಗಿ ನಿಲ್ಲಿಸಲಾಗುತ್ತಿತ್ತು. ನೀರು ತುಂಬಲು ಅನುವಾಗುವಂತೆ. ಪ್ರಯಾಣಿಸುತ್ತಾ ದಣಿದು ಬಂದ ಜನ ಕಡ್ಡಿಯನ್ನು ತೆಗೆದು ನೀರು ಕುಡಿದ ನಂತರ ಕಡ್ಡಿಯಿಂದ ರಂದ್ರವನ್ನು ಮುಚ್ಚಿಡುತ್ತಿದ್ದರು. ಇದು ನಮ್ಮ ಹಿಂದಿನವರ “ಹಾಲಂತ ಮನಸಿನ ನೆರಳಂತ ನೆರವಿನ ಪ್ರತೀಕ” .

ಈ ರೀತಿ ಅರವಟ್ಟಿಗೆಗಳನ್ನು ಸ್ಥಾಪಿಸಿ ನೀರು ಕೊಟ್ಟು ಪುಣ್ಯ ಕಟ್ಟಿಕೊಳ್ಳುವ ಕೆಲಸ ಮಾಡೆಂದು ಅವರಿಗೆ ಯಾರೂ ಹೇಳಿದ್ದಲ್ಲ, ಅಥವಾ ಹೆಚ್ಚು ದುಡ್ಡು ಇದೆಯೆಂದು ದೊಡ್ಡಸ್ತಿಕೆ ತೋರ್ಪಡಿಕೆಗೆ ಮಾಡಿದ್ದಲ್ಲ. ಅದೊಂದು ಮಾನವೀಯ ಅಂತಃಕರಣದ ಕಳಕಳಿ. ಅಂತಹವರು ಎಲೆಮರೆಯ ಕಾಯಂತೆ ಮರೆಯಾಗಿರುತ್ತಾರೆ. water-containers-stone1ಇನ್ನೊಂದು ಸಂಗತಿಯೆಂದರೆ ಅರವಟ್ಟಿಗೆಗಳನ್ನು ಕಟ್ಟಿಸಿದವರೆ ಅದಕ್ಕೆ ನೀರು ತುಂಬಬೇಕಾಗಿರಲಿಲ್ಲ. ಊರಿನವರು ಯಾರಾದರೂ ಊರಿನ ಸೇದು ಬಾವಿಯಿಂದ ಸೇದಿಕೊಂಡು ತಂದು ಹಾಕಿ, ಆ ಕೆಲಸವನ್ನು ಸ್ವ-ಪ್ರೇರಣೆಯಿಂದ ಮಾಡಿರುತ್ತಿದ್ದರು. ಅರವಟ್ಟೆಗೆ ಪಾಚಿ ಕಟ್ಟಿಕೊಂಡಾಗ, ಅಶುದ್ದಗೊಂಡಾಗ ಅದನ್ನು ಸ್ವಚ್ಛಗೊಳಿಸಿ ಸುಣ್ಣ ಬಳಿದು ಶುಚಿಮಾಡುತ್ತಿದ್ದರು. ಹೀಗೆ ನೀರು ದಾನಮಾಡುವ ಕಾಲವೊಂದಿತ್ತು. ಈಗ ನೀರು ಮಾರುವ ಜಾಲ ಬಹು ವ್ಯವಸ್ಥಿತವಾಗಿ ಹೆಮ್ಮರವಾಗಿ ಬೆಳೆದು ನಿಂತಿದೆ. ಕೆರೆ, ಕುಂಟೆಗಳನ್ನು ಕಟ್ಟುವ ಕಾಲವೊಂದಿತ್ತು. ಈಗ ಕೆರೆ, ಕುಂಟೆಗಳನ್ನು ಮುಚ್ಚಲಾಗುತ್ತಿದೆ. ಅರವಟ್ಟಿಗೆಗಳು ಈಗಲೂ ಕಂಡುಬಂದರೂ ಅವುಗಳಿಗೆ ನೀರುತುಂಬುವ ಕೆಲಸವನ್ನು ಯಾರೂ ಮಾಡುವುದಿಲ್ಲ. ಅವು ಗತಕಾಲದ ಕುರುಹುಗಳಂತೆ ಅನಾಥವಾಗಿವೆ. ಇಲ್ಲವೇ ಗಿಡ ಗಂಟೆಗಳು ಬೆಳೆದು ಮುಚ್ಚಿಹೋಗಿವೆ ಇಲ್ಲ ಒಡೆದು ಹೋಗಿವೆ, ಮತ್ತೂ ಹೇಳಬೇಕೆಂದರೆ ಯಾರದೋ ಮನೆಯ ನೆಲಹಾಸೋ ಜಗಲಿಯೋ ಸೇರಿಕೊಂಡಿದೆ.

ಊರಿನ ಅಶ್ವಥಕಟ್ಟೆಗಳಲ್ಲಿಯೇ ಹೆಚ್ಚೆಚ್ಚು ನ್ಯಾಯ ಪಂಚಾಯ್ತಿಗಳು, ಮದುವೆ ಮುಂಜಿಗಳು ನಡೆಯುತ್ತಿದ್ದು ಅಶ್ವಥಕಟ್ಟೆಗಳ ಬಳಿ, ಸಂತೆ ಮಾಳಗಳಲ್ಲಿ, ಜಾತ್ರೆಗಳಲ್ಲಿ, ದೇವಾಲಯಗಳ ಬಳಿ ಕೂಡ ಅರವಟ್ಟಿಗೆಗಳನ್ನು ನಿರ್ಮಿಸಲಾಗುತ್ತಿತ್ತು. ಇವುಗಳನ್ನು ಈಗಲೂ ಹಳ್ಳಿಗಳಲ್ಲಿ ಕಾಣಬಹುದಾಗಿದೆ. ಎಲ್ಲಾ ಅರವಟ್ಟಿಗೆಗಳೂ ಒಂದೆ ತೆರನಾಗಿದ್ದರೂ, ಕೆಲವೊಂದು ಕಡೆ ಅರವಟ್ಟಿಗೆಗಳನ್ನು ಕಟ್ಟಿಸಿದವರ ಹೆಸರು ಮತ್ತು ದಿನಾಂಕಗಳನ್ನು ಕೆತ್ತಿಸಲಾಗಿದೆ. ಕೆಲವೊಂದು ಸುಂದರ ಕಲಾತ್ಮಕ ಕೆತ್ತನೆಯಿಂದ ಕೂಡಿದೆ. ಕೋಲಾರ ತಾಲ್ಲುಕು ತಂಬಿಹಳ್ಳಿಯಲ್ಲಿ ಇಂತಹ ಅನಾದಿ ಕಾಲದ ಸುಂದರ ಬೃಹತ್ ಕಲಾತ್ಮಕ ಏಕಶಿಲಾ ಅರವಟ್ಟಿಗೆ ಕಾಣಸಿಗುತ್ತದೆ.

ಇದೇ ಮಾದರಿಯ ಅರವಟ್ಟಿಗೆಗಳನ್ನು ಈ ಜಿಲ್ಲೆಯಾದ್ಯಂತ ಕಾಣಬಹುದಾಗಿದೆ. ಯಾವುದೇ ನದಿ ಪಾತ್ರ, ಕಾಲುವೆ, ತೊರೆಗಳಿಲ್ಲದ ಬಯಲು ಸೀಮೆಯಾದ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಆಗಿನ ಕಾಲಕ್ಕೆ ಜನಗಳಿಗೆ ನೀರುಣಿಸುವ ಸಲುವಾಗಿ ನಿರ್ಮಾಣಗೊಂಡ ಅರವಟ್ಟಿಗೆಗಳು ಕಾಲಾಂತರದಲ್ಲಿ ಮರೆಗೆ ಸರಿದವು. water-containers-stone3ಮೊದಲಿಗೆ ತೆರೆದ ಬಾವಿಗಳಿಂದ ಏತ, ಕಪಿಲೆ, ಬಾನೆ, ಚಕ್ರಬಾವಿಗಳಿಂದ ಅವಶ್ಯಕತೆಗೆ ತಕ್ಕಂತೆ ಮಿತವರಿತು ನೀರನ್ನು ಮೇಲಕ್ಕೆ ಎತ್ತಿ ಕುಡಿಯಲು ಮತ್ತು ಬೇಸಾಯಕ್ಕೆ ಬಳಸಲಾಗುತ್ತಿತ್ತು. ನಂತರ ಜನಸಂಖ್ಯೆ ಹೆಚ್ಚಳದಿಂದಲೋ, ದುರಾಸೆಯಿಂದಲೋ ವಿದ್ಯುತ್, ಡೀಸೆಲ್ ಪಂಪು ಅಳವಡಿಸಿಕೊಂಡು ಅಗತ್ಯಕ್ಕಿಂತ ಹೆಚ್ಚು ನೀರನ್ನೆತ್ತಿದ ಪರಿಣಾಮ ಕ್ರಮೇಣ ತೆರೆದ ಬಾವಿಗಳಲ್ಲಿ ನೀರು ಬರಿದಾಗಿ, ಬೋರ್‌ವೆಲ್‌ಗಳನ್ನು ಕೊರೆದು ಅಂತರ್ಜಲವನ್ನು ಬಗೆದು, ಜೊತೆ ಜೊತೆಗೆ ಮರಗಳನ್ನು ಕಡಿದು, ಮರಳನ್ನು ಸಾಗಿಸಿ ಭೂತಾಯಿಯ ಒಡಲನ್ನು ಬರಿದು ಮಾಡಿದ್ದು ಅಂತರ್ಜಲ 1200 ಅಡಿಗಳಿಗೂ ಮಿಕ್ಕಿ ಪಾತಾಳ ಸೇರಿದೆ. ಈ ನಿಟ್ಟಿನಲ್ಲಿ ಅರವಟ್ಟಿಗೆಗಳನ್ನು ಸುಸ್ಥಿತಿಯಲ್ಲಿಟ್ಟು ನೀರುಣಿಸುವ ದಿನ ದೂರವಿಲ್ಲವೆನಿಸುತ್ತದೆ.

water-containers-stone2