Daily Archives: January 16, 2014

ಮಹಿಳಾ ಚಳವಳಿಗಳು ಮತ್ತು ಆಧುನಿಕ ಲೇಖಕಿಯರ ಮೇಲೆ ವಿಜಯಾ ದಬ್ಬೆಯವರ ಪ್ರಭಾವಗಳು


– ರೂಪ ಹಾಸನ


 

[ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗು ಹಾಸನದ ಜಿಲ್ಲಾ ಲೇಖಕಿಯರ ಬಳಗದ ವತಿಯಿಂದ ದಿನಾಂಕ 27.2.2010 ರಂದು ಬೇಲೂರಿನಲ್ಲಿ ನಡೆದ ‘ವಿಜಯಾನ್ವೇಷಣೆ’ ವಿಜಯಾ ದಬ್ಬೆ ಸಾಹಿತ್ಯ -ಸಾಧನೆ ಕುರಿತ ವಿಚಾರಸಂಕಿರಣದಲ್ಲಿ ಮಂಡಿಸಿದ ವಿಚಾರಗಳ ಬರಹ ರೂಪ.]

ಪ್ರಜಾವಾಣಿಯಲ್ಲಿ ಆತ್ಮಕಥೆಗಳ ಹಿನ್ನಲೆಯಲ್ಲಿ ವಿಜಯಾದಬ್ಬೆಯವರ ಕುರಿತ ನನ್ನ ಅಂಕಣ ಪ್ರಕಟವಾದ ನಂತರ, ವಿವಿಧ ದೂರದರ್ಶನ ವಾಹಿನಿಗಳಲ್ಲಿ ನಾನು ಮೇಡಂ ಕುರಿತು “ಅವರು ನಮ್ಮ ಜಿಲ್ಲೆಯ ಆಧುನಿಕ ಕವಯಿತ್ರಿಯರಲ್ಲಿ ಮೊದಲಿಗರು ಮತ್ತು ಕನ್ನಡ ಸಾಹಿತ್ಯದ ಮಹತ್ವದ ಲೇಖಕಿ, ಅವರಿಂದು ಕ್ರಿಯಾಶೀಲರಾಗಿದ್ದರೆ ಮಹಿಳಾ ಲೋಕದಲ್ಲಿ ಪ್ರಮುಖ ಸ್ಥಾನದಲ್ಲಿರ್‍ತಿದ್ದರು” ಎಂದು ಮಾತನಾಡಿದ್ದು ಕೇಳಿದ ರಾಜ್ಯದ ಬೇರೆ ಬೇರೆ ಭಾಗದ ಕೆಲವು ಲೇಖಕ-ಲೇಖಕಿಯರು ನನ್ನೊಂದಿಗೆ ಮಾತನಾಡಿ “ವಿಜಯಾ ದಬ್ಬೆಯವರು ಈಗ ಅಪ್ರಸ್ತುತ. ಅವರ ಬಗ್ಗೆ ಯಾಕೆ ಅಷ್ಟೊಂದು ಬರೆದು, ಮಾತನಾಡಲು ಹೋದ್ರಿ?” ಎಂದಿದ್ದರು. ಅವರ ಮಾತು ಕೇಳಿ ನನಗೆ ವಿಷಾದವಾಗಿತ್ತು. ಸಾಹಿತ್ಯ ಲೋಕದ ಸಣ್ಣತನದ ಪರಿಚಯವೂ ಆಗಿತ್ತು. ಜಾತಿ, ಲಿಂಗ, ವರ್ಗ, ಬೌದ್ಧಿಕ ಸಾಮರ್ಥ್ಯ ಆಧಾರಿತವಾಗಿರುವ ಅಸೂಯೆ, vijaya-dabbeಹೊಟ್ಟೆಕಿಚ್ಚುಗಳು ಬೇರೆಲ್ಲ ಕ್ಷೇತ್ರಕ್ಕಿಂತ ಸಾಹಿತ್ಯ ಕ್ಷೇತ್ರದಲ್ಲೇ ಹೆಚ್ಚು ಎಂದು ಇಂಥಹ ಸಂದರ್ಭದಲ್ಲೆಲ್ಲಾ ನನಗೆ ಅನ್ನಿಸುತ್ತಿರುತ್ತದೆ. ಆದರೆ ಹಾಗೇ, “ಮೇಡಂ ಬಗ್ಗೆ ಓದಿ, ಟಿ.ವಿ. ನಲ್ಲಿ ನೋಡಿ ಸಂತೋಷವಾಯ್ತು. ಈಗ ಹೇಗಿದ್ದಾರೆ? ಎಲ್ಲಿದ್ದಾರೆ?” ಎಂದು ವಿಚಾರಿಸಿದವರ ಸಂಖ್ಯೆ ಕಿಡಿಕಾರಿದವರ ಸಂಖ್ಯೆಗಿಂತಾ ಹೆಚ್ಚಿತ್ತೆನ್ನುವುದೇ ಒಂದು ಸಮಾಧಾನ. ಆಗ ನನ್ನಲ್ಲಿ ಪ್ರಶ್ನೆಗಳೆದ್ದಿತ್ತು, ‘ಒಬ್ಬ ಲೇಖಕ ನಿಷ್ಕ್ರಿಯನಾದ ಎಂದ ತಕ್ಷಣ ಅವನು ಅಪ್ರಸ್ತುತನೇ? ಅವನು ತನ್ನ ಬರವಣಿಗೆಯ ಮೂಲಕ ಸದಾ ಪ್ರಸ್ತುತನಾಗಿರುತ್ತಾನಲ್ಲವೇ? ಸಾಹಿತ್ಯ ಚರಿತ್ರೆಯಲ್ಲಿ ದಾಖಲಾದ ಯಾವುದೇ ಸಾಹಿತಿ ಆಯಾ ಕಾಲಘಟ್ಟದ ಜೊತೆಗೆ, ಸಾರ್ವಕಾಲಿಕ ಸತ್ಯಗಳನ್ನು ಪ್ರತಿಪಾದಿಸಿದ್ದರೆ ಸರ್ವಕಾಲಕ್ಕೂ ಪ್ರಸ್ತುತನಾಗಿರುತ್ತಾನಲ್ಲವೇ?’ ಅನ್ನಿಸಿತ್ತು. ಅದರಲ್ಲೂ ವಿಜಯಾ ದಬ್ಬೆಯವರು ಲೇಖಕಿ ಮಾತ್ರ ಅಲ್ಲ. ಮುಖ್ಯವಾಗಿ ಅವರೊಬ್ಬ ದಿಟ್ಟ ಮಹಿಳಾಪರ ಹೋರಾಟಗಾರ್ತಿ. ಸಾಹಿತ್ಯದ ಜೊತೆಗೆ ಪ್ರತಿಭಟನೆ, ಹೋರಾಟಗಳ ಮೂಲಕ ಲಿಂಗಾಧಾರಿತವಾದ ಸಾಮಾಜಿಕ ಬದಲಾವಣೆಯನ್ನು, ಸಮಾನತೆಯನ್ನು ತರಬೇಕು, ಜಾಗೃತಿ ಮೂಡಿಸಬೇಕು ಎಂದು ನಂಬಿದವರು. ಹೀಗಾಗಿ ಸಾಹಿತ್ಯ ಚರಿತ್ರೆಯಲ್ಲಿ ಮಾತ್ರ ಅಲ್ಲ, ಮಹಿಳಾ ಚರಿತ್ರೆಯಲ್ಲಿ ಕೂಡ ಅವರ ಹೆಸರು ಚಿರಸ್ಥಾಯಿಯಾಗಿರುವಂತದ್ದು ಎಂದು ನಾನು ಭಾವಿಸಿದ್ದೇನೆ.

ಹಾಗೆ ವಿಜಯಾ ಮೇಡಂ ನನಗೆ ವೈಯಕ್ತಿಕವಾಗಿ ತುಂಬಾ ಪರಿಚಿತರಲ್ಲ. ಆದರೆ ಒಂದು ರೀತಿಯಲ್ಲಿ ಅವರು ನನ್ನ ಮಾನಸ ಗುರುಗಳು ಅಂದ್ರೆ ತಪ್ಪಿಲ್ಲ. ನನ್ನ ಕಾಲೇಜು ದಿನಗಳಲ್ಲಿ [ನಾನು ಪದವಿ ಓದಿದ್ದು ಗೌರಿಬಿದನೂರಿನಂತ ಒಂದು ಪುಟ್ಟ ಊರಿನಲ್ಲಿ] ಅವರ ಶಿಷ್ಯೆ ಆಗಿದ್ದ ನನ್ನ ಕನ್ನಡ ಉಪನ್ಯಾಸಕರಾದ ಪೂರ್ಣಿಮಾ ಅವರು ವಿಜಯಾ ಮೇಡಂ ಬಗ್ಗೆ ಎಷ್ಟೊಂದು ಹೇಳ್ತಿದ್ದರು ಎಂದರೆ, ನಮಗೆಲ್ಲ ‘ಆದ್ರೆ ವಿಜಯಾ ದಬ್ಬೆ ತರಹ ಧೈರ್ಯವಂತ ಹೆಣ್ಣುಮಗಳಾಗಬೇಕು’ ಎನ್ನುವಂತಾ ಆಸೆಯನ್ನ ಹುಟ್ಟಿಸಿದ್ದರು. ಅವರ ಮಹಿಳಾಪರ ಲೇಖನಗಳನ್ನು ಓದಿ, ಅವರ ಸಮತಾ ಚಟುವಟಿಕೆಗಳ ಬಗ್ಗೆ ಕೇಳಿ ಅವರನ್ನು ನೋಡದಿದ್ದರೂ ನಾವು ಗೆಳತಿಯರು ಅದೆಷ್ಟೊಂದು ಪ್ರೇರಣೆ ಪಡೆದಿದ್ದೆವು ಎನ್ನುವುದನ್ನು ವಿವರಿಸೋದು ತುಂಬಾ ಕಷ್ಟ. ಅವರ ಮೊದಲ ಪ್ರಭಾವ ನನ್ನಂತವರ ಮೇಲೆ ಲೇಖಕಿಯಾಗಿ ಆಗಿದ್ದಕ್ಕಿಂತಾ ಹೆಚ್ಚಾಗಿ ಹೋರಾಟಗಾರ್ತಿಯಾಗಿಯೇ ಹೆಚ್ಚು ಎಂದು ಭಾವಿಸುತ್ತೇನೆ. ಆನಂತರದ ಪ್ರಭಾವ ಕವಿಯಾಗಿ, ಬರಹಗಾರ್ತಿಯಾಗಿ. ನನ್ನ ಕಾಲೇಜು ದಿನಗಳಲ್ಲೇ ಮೈಸೂರಿಗೆ ಹೋದಾಗ ಅವರನ್ನ ಒಮ್ಮೆ ನೋಡಲೇಬೇಕು ಎಂದು ಯೂನಿವರ್ಸಿಟಿಗೆ ಹುಡುಕಿಕೊಂಡು ಹೋಗಿದ್ದು ಇನ್ನೂ ನೆನಪಿದೆ. ಆಗ ಅವರನ್ನ ನೋಡಿ ನನಗೆ ಬಹಳವೇ ನಿರಾಶೆ ಆಗಿತ್ತು. ಅವರು ಅತ್ಯಂತ ಮೃದು ಸ್ವಭಾವದ, ತೀರಾ ಮುಗ್ಧ ಹೆಣ್ಣು ಮಗಳಾಗಿ ನನಗೆ ಕಂಡಿದ್ದರು. ದಿಟ್ಟ ಮಹಿಳಾ ಹೋರಾಟಗಾರ್ತಿ, ಅನ್ಯಾಯಗಳ ವಿರುದ್ಧ ಕಿಡಿಕಾರುವ ಬಂಡಾಯಗಾರ್ತಿ, ಸಮಾನತೆಗಾಗಿ ಪ್ರತಿಭಟನೆ ಮಾಡೋ ಚಳವಳಿಗಾರ್ತಿ ಇವರೇನಾ? ಅಂತ ಆಶ್ಚರ್ಯ ಆಗಿತ್ತು. ಅವರ ವ್ಯಕ್ತಿತ್ವ ನಾನು ಕಲ್ಪಿಸಿಕೊಂಡಂತಾ ‘ದಿಟ್ಟ ಹೆಣ್ಣು ಮಗಳ’ ಚಿತ್ರಕ್ಕೆ ಸ್ವಲ್ಪ ಕೂಡ ಹೊಂದಿಕೆ ಆಗುತ್ತಿರಲಿಲ್ಲ. ಅದು ನನ್ನ ಹದಿಹರೆಯದ ತಿಲಿವಳಿಕೆಯ ದೋಷವಿರಬಹುದು! ‘ಇವರು ಮಹಿಳೆಯರ ಪರವಾಗಿ ಅದೆಂಥಾ ಹೋರಾಟ ಮಾಡ್ತಾರೆ?’ ಎಂದು ವಿಸ್ಮಯಪಟ್ಟುಕೊಂಡಿದ್ದೆ. ಆದರೆ ನನ್ನ ಮೇಲಿನ ಅವರ ಪ್ರಭಾವ ಮಾತ್ರ ಅಳಿಸಿ ಹೋಗುವಂತದ್ದಾಗಿರಲಿಲ್ಲ. ಯಾಕೆಂದರೆ ಎಂಭತ್ತರ ದಶಕದಲ್ಲಿ ಅವರು ಮಾಡ್ತಿದ್ದಂತಾ ಕೆಲಸಗಳು ಅಷ್ಟೊಂದು ಶಕ್ತಿಶಾಲಿಯಾಗಿದ್ದವು.

ಇನ್ನು ಮಹಿಳಾ ಚಳವಳಿಗಳ ಕುರಿತು ಹೇಳ್ಬೇಕು ಅಂದ್ರೇ ಯಾವುದೇ ಚಳವಳಿನೂ ದಿಢೀರನೆ ತನ್ನಷ್ಟಕ್ಕೆ ತಾನೇ ಹುಟ್ಟಿಕೊಂಡುಬಿಡುವಷ್ಟು ಸ್ವಯಂಭು ಅಲ್ಲ. ಪಕ್ವವಾದ ಬೀಜಕ್ಕೆ ಪೂರಕವಾಗಿ ಹದವಾದ ಮಣ್ಣು, ಗಾಳಿ, ಬೆಳಕು, ನೀರು ಎಲ್ಲವೂ ಬೇಕು. ಆಗ ಮಾತ್ರ ಬೀಜ ಮೊಳಕೆ ಒಡೆಯುತ್ತೆ, ಚಿಗುರುತ್ತೆ, ಹೂ-ಹಣ್ಣುಗಳನ್ನ ನೀಡುತ್ತೆ. ಇಂತಹ ಎಲ್ಲ ಪೂರಕ ಪರಿಸರ ೭೦ರ ದಶಕದಲ್ಲಿ ನಿರ್ಮಾಣ ಆಗಿದ್ದರಿಂದಲೇ ಮಹಿಳಾ ಚಳವಳಿ ಆ ಕಾಲಕ್ಕೆ ಸಶಕ್ತವಾಗಿ ರೂಪುಗೊಂಡಿತು. ಬಂಡಾಯ ಸಾಹಿತ್ಯ ಚಳವಳಿ, ದಲಿತ ಚಳವಳಿ, ರೈತ ಚಳವಳಿ, ಕಾರ್ಮಿಕ ಚಳವಳಿ…… ಹೀಗೆ ಹತ್ತು ಹಲವು ಚಳವಳಿಗಳು ಪ್ರಬಲವಾಗಿ ಹುಟ್ಟಿಕೊಂಡಂತಾ ಕಾಲಘಟ್ಟದಲ್ಲಿ ಅವುಗಳೆಲ್ಲದರಿಂದ ಪ್ರೇರಣೆ ಪಡೆದು, ಅದರ ಜೊತೆಜೊತೆಗೇ ಹೆಜ್ಜೆ ಹಾಕಲು ಪ್ರಾರಂಭಿಸಿದ್ದು ಈ ಮಹಿಳಾ ಚಳವಳಿ. ದೇಶದ ಬೇರೆ ಬೇರೆ ಭಾಗಗಳಲ್ಲಿ ಮಹಿಳಾ ಸಂಘಟನೆಗಳvijaya-dabbe-2 ಅಡಿಯಲ್ಲಿ ರೂಪುಗೊಂಡ ಈ ಮಹಿಳಾ ಚಳವಳಿ ತನ್ನ ಅನನ್ಯತೆ ಹಾಗೂ ವಿಶಿಷ್ಟತೆಯಿಂದ ಇತಿಹಾಸದಲ್ಲಿ ದಾಖಲಾಗಿದ್ದು ಒಂದು ವಿಶೇಷ.

ಬೇರೆ ಬೇರೆ ಚಳವಳಿಗಳು ಹಾಗೂ ವಿಚಾರವಾದದ ಹಿನ್ನಲೆಯ ಜೊತೆಗೆ, ಹೆಚ್ಚಾದ ಮಹಿಳಾ ಶಿಕ್ಷಣ ಪ್ರಮಾಣ, ಮಹಿಳಾ ಸಬಲೀಕರಣ ಹಾಗೂ ಔದ್ಯೋಗಿಕ ಕ್ರಾಂತಿ, ಆ ಸಂದರ್ಭದಲ್ಲಿ ಮಹಿಳೆಯರಲ್ಲಿ ಜಾಗೃತಿಯನ್ನು ಮೂಡಿಸಿತ್ತು. ಇದೇ ಸಂದರ್ಭದಲ್ಲಿ ೧೯೭೨ರಲ್ಲಿ ಅದೇಮೊದಲ ಬಾರಿಗೆ ಇಂದಿರಾಗಾಂಧಿಯವರ ಸರ್ಕಾರ ಮಹಿಳಾ ಸ್ಥಿತಿಗತಿಗಳ ಅಧ್ಯಯನಕ್ಕಾಗಿ ನೇಮಕ ಮಾಡಿದ್ದ ಸಮಿತಿಯ ವರದಿ, ಬೌದ್ಧಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಮಹಿಳೆಯರಲ್ಲಿ ಹೊಸ ಎಚ್ಚರವನ್ನು ಮೂಡಿಸಿತು. ಮಹಿಳೆಯರ ಸ್ಥಾನಮಾನ, ಸಾಮಾಜಿಕ ಸ್ಥಿತಿಯ ಕುರಿತು ಕಾಳಜಿ ಇದ್ದ ಹಲವು ಮಹಿಳೆಯರು ಈ ವರದಿ ಕುರಿತು ದೇಶದ ಎಲ್ಲೆಡೆ ಚರ್ಚೆಗಳನ್ನು, ವಿಚಾರಗೋಷ್ಠಿಗಳನ್ನು, ಕಾರ್ಯಾಗಾರಗಳನ್ನು ನಡೆಸಿದರು. ಇಂಥಹ ಒಂದು ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡ ಮೈಸೂರಿನ ಆಹಾರವಿಜ್ಞಾನಿಗಳಾದ ಡಾ.ಈ.ರತಿರಾವ್ ಹಾಗೂ ಡಾ.ವಿಜಯಾ ದಬ್ಬೆಯವರ ದೃಢ ನಿರ್ಧಾರದಿಂದ 1978 ರಲ್ಲಿ, ಮೈಸೂರಿನಲ್ಲಿ “ಸಮತಾ” ವೇದಿಕೆಯನ್ನು ಹುಟ್ಟುಹಾಕಿಕೊಂಡರು. ಹಾಗೆ ಇದೇ ಸಂದರ್ಭದಲ್ಲಿ ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲೂ ಅನೇಕ ಮಹಿಳಾ ಪರ ಸಂಸ್ಥೆಗಳು, ಸಂಘಟನೆಗಳು ಹುಟ್ಟಿಕೊಂಡವು. ಅವುಗಳಲ್ಲಿ ಬೆಂಗಳೂರಿನ “ವಿಮೋಚನಾ” ಹಾಗೂ “ಮಾನಿನಿ” ಮುಖ್ಯವಾದವುಗಳು.

“ಸಮತಾ” ಪ್ರಾರಂಭದಲ್ಲಿ ಒಂದು ಮಹಿಳಾ ಅಧ್ಯಯನ ಕೇಂದ್ರವಾಗಿ ಕೆಲಸ ಮಾಡಲು ಉದ್ದೇಶಿಸಿದ್ದರೂ ಮಹಿಳೆಯರ ಸಮಸ್ಯೆಗಳ ತೀವ್ರತೆಯನ್ನು ಗಮನಿಸಿ, ಅಧ್ಯಯನದ ಜೊತೆಗೆ ಹೋರಾಟದ ಹಾದಿಯನ್ನು ಹಿಡಿಯಿತು. ವಿಜಯಾ ದಬ್ಬೆಯವರ ವ್ಯಕ್ಕಿತ್ವವನ್ನು ಈ “ಸಮತಾ ವೇದಿಕೆ” ಹಾಗೂ “ಸಮತಾ ಅಧ್ಯಯನ ಕೇಂದ್ರ”ಗಳನ್ನು ಹೊರತುಪಡಿಸಿ ಕಟ್ಟಿಕೊಳ್ಳುವುದಿಕ್ಕೆ ಸಾಧ್ಯವೇ ಇಲ್ಲ. ಇವು, ಅವರು ಮಹಿಳಾಪರ ಮತ್ತು ಸಮಾಜಮುಖಿಯಾಗುವಂತೆ ಹಂತ ಹಂತವಾಗಿ ಬೆಳೆಸಿವೆ. ಮಹಿಳಾ ಚಳವಳಿಗೆ ಒಂದು ಸಾಂಸ್ಕೃತಿಕ ನೆಲೆಗಟ್ಟು ರೂಪಿಸುವಲ್ಲಿ ಇದವರಿಗೆ ನೆರವಾಗಿವೆ. ಸಮಾಜದ ಎಲ್ಲ ಸ್ತರದ ಮಹಿಳೆಯರ ಮೇಲಿನ ವಿವಿಧ ರೀತಿಯ ಶೋಷಣೆಯ ವಿಶ್ವರೂಪದರ್ಶನ ವಿಜಯಾ ಅವರಿಗಾಗಿದ್ದು ಇವುಗಳಿಂದಲೇ. ‘ಸ್ತ್ರೀವಾದವೆಲ್ಲಾ ಪಾಶ್ಚಾತ್ಯರಿಂದ ಬಂದದ್ದು ನಮ್ಮಲ್ಲಿ ಅದರ ಅವಶ್ಯಕತೆ ಇಲ್ಲ’ ಎನ್ನುವಂತಹ ನಂಬಿಕೆ ಇದ್ದ ಕಾಲದಲ್ಲಿ ಕಲಿತ ತಿಳಿವಳಿಕೆಯ ಜೊತೆಗೆ, ಸ್ವಂತ ಅನುಭವದ ಸಾರವನ್ನು ಬೆರೆಸಿ ತನ್ನ ಬದುಕನ್ನು-ಬರಹವನ್ನು-ಚಟುವಟಿಕೆಗಳನ್ನು ಗಟ್ಟಿಗೊಳಿಸಿಕೊಳ್ಳುವುದರ ಜೊತೆಗೆ, ಅದು ಸಮಾಜಕ್ಕೆ ಉಪಯೋಗಿಯಾಗುವಂತೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಲೆ, ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡರು ವಿಜಯಾ ದಬ್ಬೆಯವರು. ಜೊತೆಗೆ ವಿಚಾರವಂತ ಮಹಿಳೆಯರನ್ನು ನಿರಂತರವಾಗಿ ಸಂಘಟನೆಯಲ್ಲಿ ಹಿಡಿದಿಡುವಂತಾ ಕೆಲಸ ಕಡಿಮೆಯದಲ್ಲ.

ಕರ್ನಾಟಕದಾದ್ಯಂತ ಹಲವಾರು ಮಹಿಳಾ ಜಾಗೃತಿ ಶಿಬಿರ, ಸಂಕಿರಣ, ಸಂಘಟನೆಗಳನ್ನು ವ್ಯವಸ್ಥಿತವಾಗಿ ಇಪ್ಪತ್ತು ವರ್ಷಗಳ ಕಾಲ, ಸಮಾನಮನಸ್ಕರೊಡಗೂಡಿ ನಡೆಸಿದ ಗಟ್ಟಿಗಿತ್ತಿ ಇವರು. ಮಹಿಳೆಯರ ಮೇಲೆ ವಿವಿಧ ರೂಪಗಳಲ್ಲಿ ನಡೆಯುತ್ತಿದ್ದ ವರದಕ್ಷಿಣೆ ಕಿರುಕುಳ, ಸಾವು ಅಥವಾ ಕೊಲೆ, ಅತ್ಯಾಚಾರ, ಕೌಟುಂಬಿಕ ಹಿಂಸೆ, ಮುಂತಾದವುಗಳನ್ನು ಪ್ರತಿಭಟನೆ, ಹೋರಾಟಗಳ ಮೂಲಕ ಹೆಣ್ಣಿನಪರವಾಗಿ ನ್ಯಾಯ ಕೇಳಲು ಬಳಸಿಕೊಂಡಿದ್ದಾರೆ. ಅನೇಕ ದನಿಯಿಲ್ಲದ ಮಹಿಳೆಯರಿಗೆ ದನಿ ನೀಡಿದ್ದು, ನೊಂದ ಮಹಿಳೆಯರಿಗೆ ಸಾಂತ್ವನ ನೀಡಿ, ಸಮಸ್ಯೆಗಳಿಗೆ ಪರಿಹಾರ ನೀಡಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸಿದ್ದು “ಸಮತಾ ವೇದಿಕೆ”.

ಚೇತನ ಕನ್ನಡ ಸಂಘದ ಪುಸ್ತಕ ಪುರವಣಿಯ ಸಂಪಾದಕಿಯಾಗಿ, ನೆಲೆ ತಪ್ಪಿದ ಮಹಿಳೆಯರಿಗೆ ಭದ್ರನೆಲೆ ಒದಗಿಸುವ ಉದ್ದೇಶದಿಂದ ರೂಪಿತಗೊಂಡಿರುವ “ಶಕ್ತಿಧಾಮ”ದ ಖಜಾಂಚಿಯಾಗಿ, ಆಳಕ್ಕಿಳಿದು ಅಭ್ಯಸಿಸುವ ಸಂಶೋಧಕಿಯಾಗಿ, ಪುರುಷ ಪ್ರಧಾನ ವ್ಯವಸ್ಥೆಯ ಮೂಲ ಬೇರುಗಳನ್ನು ಜಾಗೃತ ನೆಲೆಗಳಿಂದ ದಿಟ್ಟವಾಗಿ ಪ್ರಶ್ನಿಸುವ ಕವಯಿತ್ರಿಯಾಗಿ, ಕಡ್ಡಿ ತುಂಡು ಮಾಡುವ ನಿಷ್ಠೂರತೆ ಇಲ್ಲದೇ, ಮಗುವಿಗೆ ತಿಳಿ ಹೇಳುವ ನೆಲೆಯ ವಿಮರ್ಶಕಿಯಾಗಿ, ನಿರ್ಲಕ್ಷಿತ ಲೇಖಕಿಯರ ಕುರಿತ ಲೇಖನಗಳ ಸಂಪಾದಕಿಯಾಗಿ, ಮಹಿಳಾ ಲೋಕದ ಅಧ್ಯಯನದ ಗಂಭೀರ ಲೇಖಕಿಯಾಗಿ, ಸಂಸ್ಕೃತಿಯ ಪುನರ್ ನಿರ್ಮಾಣದ ದಿಟ್ಟ ಚಿಂತಕಿಯಾಗಿ, ಪುರಾಣ ಪ್ರತೀಕಗಳನ್ನು ಮುರಿದು ಕಟ್ಟುವ ವಿದ್ವಾಂಸರಾಗಿ, ಸಮರ್ಥ ಅನುವಾದಕಿಯಾಗಿ, ಪ್ರವಾಸದಲ್ಲಿ ತನ್ನ ಸುತ್ತಲನ್ನು ಸೂಕ್ಷ್ಮತೆಯೊಂದಿಗೆ ದಾಖಲಿಸುವ ಸಾಹಿತಿಯಾಗಿ, ವಿಮೆನ್ ರೈಟಿಂಗ್ ಇನ್ ಇಂಡಿಯಾ- ಕನ್ನಡ ವಿಭಾಗದ ಪ್ರಾದೇಶಿಕ ಸಂಪಾದಕಿಯಾಗಿ, ಲೇಖಕಿಯರ ಆತ್ಮ ಕಥಾನಕ “ಲೇಖ-ಲೋಕ”ದ ಸಂಪಾದಕಿಯಾಗಿ……… ಹೀಗೆ ಆಧುನಿಕ ಲೇಖಕಿಯರು ಮಾತ್ರವಲ್ಲ, ಆಧುನಿಕ ಮಹಿಳೆಯರೆಲ್ಲರ ಮೇಲೂ ಪ್ರಭಾವ ಬೀರಬಲ್ಲಂತಾ ಬಹುಮುಖಿ ವ್ಯಕ್ತಿತ್ವ ವಿಜಯಾ ದಬ್ಬೆಯವರದ್ದು.

ಮೈಸೂರು ವಿಶ್ವವಿದ್ಯಾನಿಲಯದ ಪ್ರಾರಂಭದ ದಿನಗಳಲ್ಲಿ, ಮಹಿಳೆಯರು ಓದಲು ಸೇರಲು ಹಿಂಜರಿಯುತ್ತಿದ್ದ ಕಾಲದಲ್ಲಿ, ಅನೇಕರಿಗೆ ಪ್ರೋತ್ಸಾಹ, ಪ್ರೇರಣೆ ನೀಡಿದ್ದಾರೆ. ಮಹಿಳಾ ಉಪನ್ಯಾಸಕಿಯರನ್ನು ರೂಪಿಸಿದ್ದಾರೆ. ಮಹಿಳಾ ಪಿ.ಹೆಚ್.ಡಿ ಗೈಡ್‌ಗಳು ಇಲ್ಲದಿದ್ದ ಕಾಲದಲ್ಲಿ ತಾವೇ ಪ್ರಥಮ ಮಹಿಳಾ ಗೈಡ್ ಆಗಿ ದಾಖಲೆ ನಿರ್ಮಿಸುವುದರೊಂದಿಗೆ, ಅನೇಕರಿಗೆ ಮಾರ್ಗದರ್ಶನ ನೀಡಿದ್ದಾರೆ. ಇವೆಲ್ಲವೂ ಅವರ “ವಿಜಯಾಭಿನಂದನ” ಗ್ರಂಥದಲ್ಲಿ ದಾಖಲಾಗಿವೆ. ಅವರ ಗುರುಗಳು, ಸಹವರ್ತಿಗಳು, ಮಿತ್ರವೃಂದ, ಶಿಷ್ಯರು, ಸಹಾಯ ಪಡೆದವರು ಅವರನ್ನು, ಅವರ ಗುಣ-ಸ್ವಭಾವಗಳನ್ನು ಮೆಚ್ಚಿ ಬರೆದಿರುವ ಬರಹಗಳನ್ನು ಓದಿದರೆ ಕಣ್ಣು ತುಂಬಿಬರುತ್ತದೆ. ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಮಾಡುವುದೆಲ್ಲವನ್ನೂ ಅವರು ಕೇವಲ ಇಪ್ಪತ್ತು ವರ್ಷಗಳಲ್ಲಿ ಮಾಡಿ ತೋರಿಸಿದ್ದಾರೆ ಎಂಬುದೇ ಅಚ್ಚರಿಯ ವಿಷಯ. ಅನೇಕರಿಗೆ ವಿದ್ಯಾಭ್ಯಾಸಕ್ಕೆ ಹಣ ನೀಡಿದ್ದಾರೆ. ತಮ್ಮ ಮನೆಯಲ್ಲೇ ಇಟ್ಟುಕೊಂಡು ಓದಿಸಿದ್ದಾರೆ. ಇಂತಹ ಅನನ್ಯ ವ್ಯಕ್ತಿತ್ವದ ವಿಜಯಾ ದಬ್ಬೆಯವರ ಬರಹಗಳು ಮಾತ್ರವಲ್ಲ, ಅವರ ಕೆಲಸಗಳೂ ನಮಗೆ ಮಾದರಿಯಾಗುವಂತದ್ದು.

ನನ್ನ ವೈಯಕ್ತಿಕ ನೆಲೆಯಲ್ಲಿ ವಿಜಯಾ ದಬ್ಬೆಯವರ ಪ್ರಭಾವ ತುಂಬಾ ದೊಡ್ಡದು. ವಿದ್ಯಾರ್ಥಿ ಜೀವನದಲ್ಲಿದ್ದಾಗ, ಅವರು ಮತ್ತವರ ತಂಡದವರು ಶತಮಾನಗಳಿಂದ ಸ್ತ್ರೀ ಪ್ರವೇಶ ನಿಷಿದ್ಧವಾಗಿದ್ದ ದೇವಾಲಯವೊಂದಕ್ಕೆ ಪ್ರತಿಭಟನಾತ್ಮಕವಾಗಿ ಪ್ರವೇಶಿಸಿದ್ದು ಕೇಳಿ ರೋಮಾಂಚನಗೊಂಡಿದ್ದೆ. ಅವರ ಮಹಿಳಾ ಪರ ಹೋರಾಟಗಳಿಂದ ಪ್ರೇರಿತರಾಗಿ ರಾಜ್ಯಾದ್ಯಂತ ಅನೇಕ ಮಹಿಳಾ ಸಂಘಟನೆಗಳು- ಸಂಸ್ಥೆಗಳು ಎಂಭತ್ತರ ದಶಕದಲ್ಲಿ ಹುಟ್ಟಿಕೊಂಡಿದ್ದವು. ಗೌರಿಬಿದನೂರಿನಂತ ಪುಟ್ಟ ತಾಲ್ಲೂಕಿನಲ್ಲಿ ಕಾಲೇಜು ಓದುತ್ತಿದ್ದ ನಾನು, ರೂಪ್ ಕನ್ವರಳ ಸತಿಸಹಗಮನ, ಹಾಗೂ ತಿಪಟೂರಿನ ವೈದ್ಯರ ಪತ್ನಿ ಶಶಿಕಲಾ ವರದಕ್ಷಿಣೆ ಪ್ರಕರಣಗಳಲ್ಲಿ, ಮೈಸೂರಿನ ಸಮತಾ ನಡೆಸಿದ ಪ್ರತಿಭಟನೆಯಂತೆಯೇ ಗೌರಿಬಿದನೂರಿನ ನ್ಯಾಷನಲ್ ಕಾಲೇಜು ಹಾಗೂ ಆಚಾರ್ಯ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳನ್ನು ಸೇರಿಸಿ ಮೌನ ಪ್ರತಿಭಟನೆ ಮಾಡಿದ್ದು ಹಾಗೂ ಬೀದಿಗಿಳಿದು ಹೋರಾಟ ನಡೆಸಿದ್ದು ನೆನಪಾಗುತ್ತದೆ. ಮಹಿಳೆಯರನ್ನು ಸೇರಿಸಿ ಪುರಸಭೆಯ ಎದುರು ಖಾಲಿಕೊಡಗಳ ಪ್ರದರ್ಶನ ನಡೆಸಿದ್ದು, ಮಹಿಳಾ ಉಪನ್ಯಾಸಕಿಯರಿಗೆ ಅನುಸರಿಸುತ್ತಿದ್ದ ತಾರತಮ್ಯ ನೀತಿಯನ್ನು, ವಿದ್ಯಾರ್ಥಿಗಳನ್ನು ಸೇರಿಸಿ ಪ್ರತಿಭಟಿಸಿದ್ದು……… ಹೀಗೆ ಇಂಥಹ ಹತ್ತು ಹಲವು ಪ್ರಗತಿಪರ ಕಾರ್ಯಗಳಿಗೆ ಸಮತಾ ಹಾಗೂ ವಿಜಯಾ ದಬ್ಬೆಯವರು ನನಗೆ ಪರೋಕ್ಷ ಪ್ರೇರಣೆ ನೀಡಿದ್ದಾರೆ. ನನ್ನಂತೆ ಅವರಿಂದ ಪ್ರೇರಣೆ ಪಡೆದ ಅನೇಕ ಲೇಖಕಿಯರು, ಮಹಿಳೆಯರು, ಅಜ್ಞಾತರಿರಬಹುದು. ಇನ್ನು ಅವರ ‘ಇರುತ್ತವೆ’, ‘ನೀರು ಲೋಹದ ಚಿಂತೆ’, ‘ಇತಿಗೀತಿಕೆ’ ಕವನ ಸಂಕಲನಗಳು ಕಾವ್ಯಾಭ್ಯಾಸಿಗಳಿಗೆಲ್ಲಾ, ಅದರಲ್ಲೂ ಮಹಿಳಾ ಚಳುವಳಿಗಳ ಹಿನ್ನಲೆಯಲ್ಲಿ ಕವಿತೆಗಳನ್ನು ಅಧ್ಯಯನ ಮಾಡುವ ಸಂಶೋಧಕರು, ಹಾಗೂ ವಿದ್ಯಾರ್ಥಿಗಳಿಗೆಲ್ಲಾ ಆಕರ ಕೃತಿಗಳಾಗಿವೆ ಹಾಗೂ ಪ್ರಭಾವ ಬೀರುವಂತವೇ ಆಗಿವೆ. ಸ್ತ್ರೀವಾದಿ ಅಧ್ಯಯನಕ್ಕೆ ಅವರ ಮಹಿಳಾ ಕಾಳಜಿಯ ಅಸಂಖ್ಯ ಲೇಖನಗಳು ಮುನ್ನುಡಿಗಳಿದ್ದಂತೆ. ಅವನ್ನು ಓದಿಕೊಳ್ಳದೇ ಮುನ್ನಡೆಯುವಂತೆಯೇ ಇಲ್ಲ.

ಅವರು ಆರೋಗ್ಯದಿಂದಿದ್ದಾಗ ನಾನವರನ್ನು ನೋಡಿದ್ದು ಒಂದೇ ಬಾರಿ. ಆದರೆ ಅವರು ಅಪಘಾತಕ್ಕೀಡಾಗಿ ನೆನಪಿನಶಕ್ತಿ ಕಳೆದುಕೊಂಡ ನಂತರದ ಇತ್ತೀಚೆಗಿನ ಎರಡು ವರ್ಷಗಳಲ್ಲಿ 3-4 ಬಾರಿ ಅವರನ್ನು ಭೇಟಿಯಾಗಿದ್ದೇನೆ. ಆಗೆಲ್ಲಾ ಅವರ ಅದಮ್ಯ ಜೀವನ ಪ್ರೀತಿಯನ್ನು ಕಂಡು ಬೆರಗಾಗಿದ್ದೇನೆ. vijaya-dabbe-3ಹೊರಗಿನದೆಲ್ಲವನ್ನೂ ಗ್ರಹಿಸುವ ಶಕ್ತಿ ಇದ್ದರೂ ಅದನ್ನು ಸಮರ್ಥವಾಗಿ ಅಭಿವ್ಯಕ್ತಿಸುವ ಶಕ್ತಿಯನ್ನು ಕಳೆದುಕೊಂಡಿರುವ ವಿಜಯಾ ಮೇಡಂ, ಈಗ ಕವಿತೆಗಳನ್ನು, ಚಿಕ್ಕ ಕಥೆಗಳನ್ನು ಬರೀತಿದ್ದೀನಿ. ಪ್ರಕಟಣೆಗೆ ಕಳಿಸಕ್ಕಾಗಲ್ಲ ಇನ್ನೂ ತಿದ್ದಬೇಕು. ನಿಮ್ಮೆಲ್ಲರ ಪ್ರೀತಿ ನಾನು ಮೊದಲಿನಂತಾಗಲು ಸಹಕರಿಸುತ್ತದೆ ಎಂದು ಹೇಳುವಾಗ ಕಣ್ಣು ತುಂಬಿ ಬರುತ್ತದೆ. ಅವರ ಅಸ್ಪಷ್ಟ ಕವಿತೆಗಳು ನಿಗೂಢವಾಗಿ, ಅವರೊಳಗಿನದನ್ನೆಲ್ಲಾ ತೋಡಿಕೊಳ್ಳಲು ಕಾದಿರುವ ಏಕೈಕ ಮಾಧ್ಯಮವಾಗಿ ನನಗೆ ತೋರುತ್ತದೆ. ಇಂಥಹಾ ಹೊತ್ತಿನಲ್ಲೂ ಅವರಲ್ಲಿರುವ ಆಶಾವಾದ ಬರೀ ಲೇಖಕಿಯರನ್ನು ಮಾತ್ರವಲ್ಲ, ಯಾವುದೇ ಪರಿಸ್ಥಿತಿಯಲ್ಲಿರುವ ಎಂಥಹಾ ನಿರಾಶಾವಾದಿಗಳನ್ನೂ ಪ್ರೇರೇಪಿಸುವಂತದ್ದು.

ಅವರ ಊರು ದಬ್ಬೆಗೆ ಹೋದಾಗ ಅವರ ತಂದೆ-ತಾಯಿ ವಿಜಯ ಮೇಡಂ ಅವರ ಬಾಲ್ಯದ ಕುರಿತು ವಿವರಿಸುವಾಗಲೆಲ್ಲಾ ಅವರ ಬಗೆಗಿನ ಗೌರವ ಮತ್ತಷ್ಟು ಹೆಚ್ಚುತ್ತದೆ. ದಬ್ಬೆಯಂಥಾ ಪುಟ್ಟಹಳ್ಳಿಯಲ್ಲಿ ಆ ಕಾಲಕ್ಕೆ ಶಿಕ್ಷಣ ಸೌಲಭ್ಯಗಳಿಲ್ಲದಿದ್ದಾಗ, ಪರ ಊರಿನಲ್ಲಿದ್ದ ಸಂಬಂಧಿಕರ ಮನೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ವಿಜಯಾ ಅವರು, ನಂತರ ಹಾಸನದಲ್ಲಿ ಮನೆ ಮಾಡಿಕೊಂಡು, ಹೈಸ್ಕೂಲಿಗೆ ಸೇರಿ ತಮ್ಮ-ತಂಗಿಯರನ್ನೂ ಜೊತೆಗಿರಿಸಿಕೊಂಡು ಅಡಿಗೆ, ಮನೆವಾರ್ತೆ ನೋಡಿಕೊಳ್ಳುತ್ತಾ ಓದಿ, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮೈಸೂರಿಗೆ ಹೋಗಿ, ಅಲ್ಲಿ ಇಷ್ಟೆಲ್ಲಾ ಪ್ರಬುದ್ಧವಾಗಿ ಬೆಳೆದಿದ್ದನ್ನು ಕೇಳುವಾಗ, ಕಡು ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿ ಬೆಳೆದ ಇವರಿಗೆ, ಒಬ್ಬಂಟಿಯಾಗಿ ಎಲ್ಲವನ್ನೂ ಎದುರಿಸುವ ಇಂಥಹಾ ದಿಟ್ಟತನ ಎಲ್ಲಿಂದಾ ಬಂತು? ಎಂದು ಆಶ್ಚರ್ಯವಾಗುತ್ತದೆ. ಜೊತೆಗೇ ಅವರ ಬದುಕಿನ ಈ ಎಲ್ಲ ಘಟ್ಟಗಳೂ ಜೀವನ ಚರಿತ್ರೆಯ ರೂಪದಲ್ಲಾದರೂ ದಾಖಲಾಗಬೇಕು ಎಂಬ ಆಸೆ ನನ್ನದು. ಅವರು ಮಾಮೂಲಿನಂತೆ ಆರೋಗ್ಯದಿಂದ ಇದ್ದಿದ್ದರೆ ಇಷ್ಟು ಹೊತ್ತಿಗೆ ಅವರೇ ಆತ್ಮಕಥೆಯನ್ನು ಬರೆದುಕೊಂಡಿರುತ್ತಿದ್ದರೇನೋ? ಅವರ ಬದುಕನ್ನು ದಾಖಲಿಸುವ ಕುರಿತು ಅವರೊಡನೆ ಒಡನಾಡಿದ ಗೆಳತಿಯರಲ್ಲಿ ಹೇಳುತ್ತಲೇ ಬಂದಿದ್ದೇನೆ. ಅದು ಖಂಡಿತಾ ಮುಂದಿನ ಪೀಳಿಗೆಯ ನಮ್ಮಂಥಾ ಅನೇಕರಿಗೆ ಪ್ರೇರಣೆ ನೀಡುವಂತದ್ದು.

ಕರ್ನಾಟಕ ಲೇಖಕಿಯರ ಸಂಘದಿಂದ ಹೊರ ಬಂದ “ಲೇಖ-ಲೋಕ” ಮಹಿಳೆಯರ ಆತ್ಮಕಥಾನಕಗಳ ಸಂಕಲನದಲ್ಲಿ ನಾನು ಮೊದಲು ಹುಡುಕಿದ್ದು ವಿಜಯಾ ದಬ್ಬೆಯವರ ಆತ್ಮಕಥಾನಕವನ್ನು. ಆದರೆ, ತಮ್ಮ ಬದುಕಿನ ಕಥೆಯನ್ನು ಸಂಘದ ಸಂವಾದ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದವರಿಗೆ ಅದನ್ನು ಲಿಖಿತ ರೂಪದಲ್ಲಿ ದಾಖಲಿಸುವ ಮೊದಲೇ ಅಪಘಾತವಾಗಿದ್ದು ನಮ್ಮ ದುರದೃಷ್ಟ ಎಂದು ನಾನು ಭಾವಿಸುತ್ತೇನೆ. ಅವರೇ ಅವರ ಬದುಕಿನ ಸೂಕ್ಷ್ಮ, ಮುಖ್ಯ ವಿಷಯಗಳ ಕುರಿತು ಬರೆದುಕೊಂಡಿದ್ದರೆ ಖಂಡಿತಾ ಅದೊಂದು ಮನೋಜ್ಞವಾದ ಬರಹವಾಗಿರುತ್ತಿತ್ತು. ಈಗಲೂ ಅವರ ಕುಟುಂಬದವರು, ಆತ್ಮೀಯರು, ಗೆಳತಿಯರು ಅವರ ಬದುಕಿನ ಪ್ರಮುಖಘಟ್ಟಗಳನ್ನು ದಾಖಲಿಸುವ ಕೆಲಸವನ್ನು ಮಾಡಬೇಕು. ಅವರ ಅನನ್ಯವೂ, ವಿಶಿಷ್ಟವೂ ಆದ ಬದುಕು ಸರ್ವಕಾಲಕ್ಕೂ ಮಾದರಿಯಾಗಿ ಉಳಿಯುವಂತೆ ದಾಖಲಾಗಬೇಕು ಎಂದು ಆಶಿಸುತ್ತೇನೆ. ಹಾಸನ ಜಿಲ್ಲೆಯ ಪುಟ್ಟಹಳ್ಳಿಯ ಹೆಣ್ಣುಮಗಳೊಬ್ಬಳು ಸಾಹಿತ್ಯ ಹಾಗೂ ಮಹಿಳಾ ಚರಿತ್ರೆಯಲ್ಲಿ ಈ ಎತ್ತರವನ್ನು ತಲುಪಿದ್ದು ಖಂಡಿತಾ ದೊಡ್ಡ ಸಾಧನೆಯೇ. ವಿಜಯಾ ದಬ್ಬೆಯವರು ಮತ್ತೆ ಮೊದಲಿನಂತಾಗಲಿ ನನ್ನಂಥಾ ಅನೇಕ ಕಿರಿಯರಿಗೆ ಅವರ ಬರಹ, ಕೆಲಸಗಳು, ಚೈತನ್ಯ ಸದಾ ಪ್ರೇರಣೆ ನೀಡುವಂತಾಗಲಿ ಎಂದು ಮನತುಂಬಿ ಹಾರೈಸುತ್ತೇನೆ. ಅವರ ಬದುಕು-ಬರಹ-ಚಟುವಟಿಕೆಗಳನ್ನು ಈ ಮೂಲಕ ಮತ್ತೊಮ್ಮೆ ನೆನಪಿಸಿಕೊಳ್ಳಲು ಅನುವು ಮಾಡಿಕೊಟ್ಟ ಕರ್ನಾಟಕ ಸಾಹಿತ್ಯ ಅಕಾಡೆಮಿ, ಹಾಸನ ಜಿಲ್ಲಾ ಲೇಖಕಿಯರ ಬಳಗಕ್ಕೆ ಹೃತ್ಪೂರ್ವಕವಾಗಿ ವಂದಿಸುತ್ತೇನೆ.

ಕಡಲ ಊರಿನ ಕಣ್ಣೀರ ಕಥೆಗಳು

– ಮಂಜುಳ ಹುಲಿಕುಂಟೆ
ಬದುಕು ಕಮ್ಯುನಿಟಿ ಕಾಲೇಜು

ಕರಾವಳಿ ಮಹಿಳಾ ಲೋಕ ಕುರಿತಾಗಿ ನಮ್ಮ (ಬೆಂಗಳೂರಿನ “ಬದುಕು ಕಮ್ಯುನಿಟಿ ಕಾಲೇಜು” ವಿದ್ಯಾರ್ಥಿಗಳ) ಸಂಶೋಧನಾ ಪಯಣದಲ್ಲಿ ಒಂದೊಂದು ಹೆಣ್ಣಿನ ಒಡಲಾಳದಲ್ಲೂ ನೋವಿನ ಕಿಚ್ಚು ಬೆಸೆದ ಆಕ್ರೋಶದ ಧ್ವನಿ, ಗುಡುಗು-ಮಿಂಚುಗಳಂತೆ, ನೋವುಂಡವರ ಧ್ವನಿ ಎತ್ತರದ್ದು ಎಂಬುದು ಅರ್ಥವಾಗಿದ್ದು ಮಂಗಳೂರಿನಲ್ಲೇ.

ಕರಾವಳಿಯ ಮಹಿಳೆಯರ ಬಗ್ಗೆ ಒಂದಿಷ್ಟು ಕರುಣೆ ಕುತೂಹಲ ಹೊಂದಿದ್ದ ನಾವು, ಅವರಾಳದ ಬದುಕನ್ನು ಹತ್ತಿರದಿಂದ ನೋಡುವ ತವಕದಿಂದ ಅಲ್ಲಿಗೆ ಹೋಗಿದ್ದೆವು.

ಮೊದಲ ದಿನವೇ ನಾವು ಹೋಗಿದ್ದು “ಜನ ನುಡಿ”ಗೆ. ಅಲ್ಲಿ ಮಹಿಳೆಯರ ಮಾತು, ಅವರ ಧೈರ್‍ಯ, abhimatha-mangalooru-jananudi“ನಾವು ನೋವುಂಡವರು ಎಲ್ಲರಿಗಿಂತ ಶಕ್ತಿವಂತರು” ಎಂದು ನುಡಿದ ಮಾತುಗಳ ಕೇಳಿ ನಮ್ಮಗಳ ಬಗ್ಗೆಯೇ ಮರುಕ ಹುಟ್ಟಿತು. ನಮ್ಮಲ್ಲಿ (ಬಯಲುಸೀಮೆಯಲ್ಲಿ) ಒಂದು ಮಾತನ್ನಾಡಲೂ ಹಿಂದು ಮುಂದು ನೋಡುವ ಮಹಿಳೆಯರನ್ನು ನೋಡಿದ್ದ ನಮಗೆ ಮಂಗಳೂರಿನ ಮಹಿಳೆಯರ ಸವಾಲು ತುಂಬಿದ್ದ ಮಾತುಗಳು ನಮ್ಮ ಜಡ ಆತ್ಮಗಳಿಗೆ ಜೀವ ತುಂಬಿದಂತಾಗಿತು. ಕೋಮುವಾದ, ಜಾಗತೀಕರಣ ಭೂತಕ್ಕೆ ಬಲಿಯಾಗಿರುವ ತುಳುನಾಡ ಸಂಸ್ಕೃತಿಯ ಕುರಿತಾಗಿ ಹಲವಾರು ಮಹಿಳೆಯರನ್ನು, ಶ್ರೇಷ್ಟ ಬರಹಗಾರ್ತಿಯರನ್ನು ಮಾತನಾಡಿಸಿದೆವು. ಕೋಮುವಾದದ ವಿಷಬೀಜದ ಕರಾಳತೆ ಅಲ್ಲಿನ ಹೆಣ್ಣು ಮಕ್ಕಳ ಮೇಲೆ ಬೀರಿರುವ ದುಷ್ಪರಿಣಾಮದ ಕುರಿತಾಗಿ ಅನೇಕ ಕಡೆ ಚರ್ಚಿಸಿದೆವು. ಲೇಖಕಿ ಸಾರಾ ಅಬೂಬಕರ್, “ಮಂಗಳೂರಿನಲ್ಲಿ ಕೋಮುವಾದ ಇತ್ತೀಚಿನದು ನಾವು ಇಂದಿಗೂ ಹಿಂದೂ-ಮುಸಲ್ಮಾನರು ಒಟ್ಟಿಗೆ ಬದುಕುತ್ತೇವೆ. ನಮ್ಮ ಹೆಣ್ಣು ಮಕ್ಕಳು ವಿದ್ಯಾವಂತೆಯರು. ಇಲ್ಲಿ ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಮಾನ್ಯತೆ ಇದೆ, ಇದು ಉತ್ತರ ಭಾರತಕ್ಕಿಂತ ಸ್ವಲ್ಪ ಮಟ್ಟಿಗೆ ಮಹಿಳೆಯರಿಗೆ ಹೆಚ್ಚು ಮಾನ್ಯತೆ ನೀಡುವ ಪ್ರದೇಶ. ಆದರೆ ಉತ್ತರ ಪ್ರದೇಶದಲ್ಲಿ ೧೮ ವರ್ಷ ತುಂಬುವ ಮೊದಲೇ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಬಿಡುತ್ತಾರೆ, ಶಾಲೆಗೆ ಕಳಿಸುವುದಿಲ್ಲ. ನಮ್ಮಲ್ಲಿ ಅಂತ ಪದ್ಧತಿ ಇಲ್ಲ. ಮಹಿಳೆಯರು ಶಿಕ್ಷಿತರು, ಅಧಿಕಾರ ರಂಗದಲ್ಲೂ ಅವರೇ ಸ್ವತಹ ಆಡಳಿತ ನಿರ್ವಹಿಸುವಷ್ಟು ಸಬಲರು. ಅನೇಕ ಕಡೆ, ಸ್ಥಾನ ಹೆಂಡತಿಯದ್ದು ಆದರೆ ಗಂಡ ಅಧಿಕಾರ ನೆಡೆಸುತ್ತಾನೆ. ಆದರೆ ನಮ್ಮಲ್ಲಿ ಆ ರೀತಿ ಇಲ್ಲ,” ಎಂದು ಅವರ ಹಲವಾರು ಅನುಭವಗಳನ್ನು ಹಂಚಿಕೊಂಡರು. ಅಲ್ಲಿನ ವಾತಾವರಣ ಗಮನಿಸಿದ ನನಗೆ ಅದು ಸತ್ಯವೆನಿತು.

ಎಲ್ಲಕ್ಕಿಂತ ಹೆಚ್ಚಾಗಿ ನಮ್ಮನ್ನು ಮುಟ್ಟಿದ್ದು ಅತ್ರಾಡಿ ಅಮೃತಾ ಶೆಟ್ಟಿಯವರ ನುಡಿಗಳು. “ನಾವು ತುಳುನಾಡಿನವರು, ಸೂಕ್ಷ್ಮ ಮನಸ್ಸಿನವರು, ಧರ್ಮದಿಂದ ಬಂದವರಿಗೆ ನಮ್ಮ ಎದೆಯಲ್ಲಿ ಜಾಗ ಕೊಡುತ್ತೇವೆ. ಅಧರ್ಮದಿಂದ ಬಂದವರಿಗೆ ಕತ್ತಿಯ ಮೊನೆಯಲ್ಲಿ ಉತ್ತರ ನೀಡುತ್ತೇವೆ. ತುಳುನಾಡ ಸಂಸ್ಕೃತಿ ಮಾತೃ ಪ್ರಧಾನವಾದದ್ದು. athradi-amrutha-shettyಹೆಣ್ಣನ್ನು ಪೂಜಿಸುವ ಸಂಸ್ಕೃತಿ ನಮ್ಮದು. ಇಲ್ಲಿ ಹೆಣ್ಣುಮಕ್ಕಳಾಗಲಿ ಎಂದು ಹರಕೆ ಹೊರುತ್ತಾರೆ, ಇಲ್ಲಿ ಹೆಣ್ಣು ಭ್ರೂಣ ಹತ್ಯೆಗಳಿರಲಿಲ್ಲ. ಇದು ಮಹಿಳೆಯರನ್ನು ಪೂಜಿಸುವ ನಾಡು. ಇಂತಹ ನಾಡಲ್ಲಿ ಸೌಜನ್ಯ ಕೊಲೆ ಪ್ರಕರಣ, ಒಂದು ಅವಮಾನಕರವಾದ ಪ್ರಕರಣ. ಇದಕ್ಕೆ ನ್ಯಾಯ ದೊರಕುವವರೆಗೂ ಈ ಪ್ರಕರಣವನ್ನು ಜೀವಂತವಾಗಿಡುತ್ತೇವೆ. ಬೇರಾವ ಹೆಣ್ಣು ಮಕ್ಕಳಿಗೂ ಇಂತ ಸಾವು-ನೋವು ಬರದಂತೆ ನೋಡಿಕೊಳ್ಳುತ್ತೇವೆ,” ಎಂದು ಶಪಥ ಮಾಡಿದರು. “ಕರಾವಳಿ ಕೆಲವು ವರ್ಷಗಳ ಹಿಂದೆ ಮಾನಸಿಕವಾಗಿ ಸಮೃದ್ಧವಾಗಿತ್ತು. ಆದರೆ ಇಂದು ಕೋಮುವಾದ, ಬಂಡವಾಳಶಾಹಿ ವ್ಯವಸ್ಥೆ, ಆಧುನಿಕರಣ ಮತ್ತು ರಾಜಕಾರಣದಿಂದ ಕಲುಷಿತವಾಗಿದೆ. ತುಳುನಾಡಿನವರಾದ ನಾವು ಸದಾ ತಲ್ಲಣಗಳೊಂದಿಗೆ, ಮತ್ತು ವೈರುಧ್ಯಗಳೊಂದಿಗೆ ಬದುಕುವವರು. ನಾವು ಗಟ್ಟಿಜನ. ಹೆಣ್ಣನ್ನು ಗೌರವಿಸುವ ಇಂತಹ ಪ್ರದೇಶದಲ್ಲಿ, ಸೌಜನ್ಯಳ ಮೇಲೆ ಆದ ಭೀಕರ ಅತ್ಯಾಚಾರ ಇಡೀ ತುಳುನಾಡಿನ ತಾಯಿ ಮನಸ್ಸುಗಳಿಗೆ ಆದ ಅತ್ಯಾಚಾರ. ಇಂತಹ ಎಷ್ಟೋ ಪ್ರಕರಣಗಳು ಆಗಿ ಹೋಗಿವೆ. ನೇತ್ರಾವತಿ ನದಿಯಲ್ಲಿ ಹರಿಯುವ ನೀರು ಇಲ್ಲಿನ ಹೆಣ್ಣಿನ ರಕ್ತ ಮತ್ತು ಕಣ್ಣೀರು” ಎಂದು ತಿಳಿಸಿದ ಅವರು, “ನಾವು ಸದಾ ತಲ್ಲಣ್ಣಗಳೊಂದಿಗೇ ಬದುಕುವವರು. ಯಾವ ಹೋರಾಟಗಳಿಗೂ ಸಿದ್ಧರಿರುತ್ತೇವೆ,” ಎಂದರು.

ನನಗನ್ನಿಸಿದಂತೆ ಮಂಗಳೂರು ಒಂದು ಬೃಹತ್ ವ್ಯಾಪಾರ ಕ್ಷೇತ್ರ. ವ್ಯಾಪಾರದಲ್ಲಿ ಮೊಗವೀರ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಪ್ರತಿಯೊಬ್ಬ ಮಹಿಳೆಯೂ ಸಹ ಆರ್ಥಿಕವಾಗಿ ಸ್ವತಂತ್ರಳಾಗಿರುತ್ತಾಳೆ. ಬೀಡಿ ಕಟ್ಟುವುದರ ಮೂಲಕವಾದರೂ ದುಡಿಯುತ್ತಾಳೆ. ಆದ್ದರಿಂದ ಇಲ್ಲಿ ಮಹಿಳೆಯನ್ನು ಕಟ್ಟಿಹಾಕುವ ಹುನ್ನಾರದಲ್ಲಿ ಇಂತಹ ಬೆದರಿಕೆ, ಅತ್ಯಾಚಾರ, ಕೋಮುಗಲಭೆಗಳೂ ಒಂದು ಭಾಗವಾಗಿ ಸದಾ ನೆಡೆಯುತ್ತಲೇ ಇರುತ್ತದೆ. ಇತ್ತೀಚೆಗೆ ಮಂಗಳೂರು ಹಿಂದುತ್ವದ ಪ್ರಯೋಗಶಾಲೆಯಾಗಿ ಮಾರ್ಪಾಡಾಗುತ್ತಿದ್ದು, ಇದರ ಕರಾಳಬಾಹು ಕರಾವಳಿಯ ಮಹಿಳೆಯರ ಮೇಲೆ ಭೀಕರವಾಗಿ ಚಾಚುತ್ತಿದೆ. mangalore-women-protestಬಾಯಲ್ಲಿ ಮಂಗಳೂರು ಮಹಿಳಾ ಪ್ರಾಧಾನ್ಯತೆಯ ನಾಡಾಗಿದ್ದರೂ, ಅದು ಆ ರೀತಿ ಉಳಿದಿಲ್ಲ. ಜೊತೆಗೆ ಆಧುನಿಕತೆಯ ಭೂತ ಕೆಲವು ಸಾಂಸ್ಕೃತಿಕ ಕುಲ-ಕಸುಬುಗಳನ್ನು ಬಲಿತೆಗೆದುಕೊಳ್ಳುತ್ತಿರುವುದರಿಂದ ಅದರಲ್ಲಿ ತೊಡಗಿಸಿಕೊಂಡಿದ್ದ ಮಹಿಳೆಯರನ್ನು ಬಲಹೀನರನ್ನಾಗಿಸಿ ಬಂಧನದಲ್ಲಿಡುತ್ತಿದೆ.

ನಾವು ಹಲವಾರು ಮಹಿಳೆಯರನ್ನು ಮಾತನಾಡಿಸಿದಾಗಲೂ, ಅವರೆಲ್ಲರ ಅಳಲು ಇದೇ ಆಗಿತ್ತು.

ಕರಾವಳಿಯ ಇಂದಿನ ಮಹಿಳೆಯರ ಬದುಕಿನ ಬಗ್ಗೆ ಮಾತನಾಡುತ್ತಾ ಗುಲಾಬಿ ಬಿಳಿಮಲೆಯವರು, “ಇಂದು ಕರಾವಳಿಯಲ್ಲಿಯೂ ಸಹ ಮಹಿಳೆಯರ ಸಂಖ್ಯೆ ಇಳಿಮುಖವಾಗುತ್ತಿದೆ. ಕಾರಣ ಇತ್ತೀಚೆಗೆ ಇಲ್ಲೂ ಹೆಣ್ಣು ಭ್ರೂಣಹತ್ಯೆಗಳು ನೆಡೆಯುತ್ತಿವೆ. ಆದರೆ ವಿದ್ಯಾವಂತರಿರುವುದರಿಂದ ಇದು ಮೇಲ್ಮಟ್ಟಕ್ಕೆ ಕಾಣಿಸುವುದಿಲ್ಲ. ಹಾಗು ಮಂಗಳೂರು ಒಂದು ಕೃಷಿನಾಡು, ಕೃಷಿಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಇತ್ತೀಚೆಗೆ ಹೆಚ್ಚುತ್ತಿರುವ ಬೃಹತ್ ಕೈಗಾರೀಕರಣದಿಂದಾಗಿ ಮಹಿಳೆಯರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅಲ್ಲದೆ ಹೆಚ್ಚುತ್ತಿರುವ ಕೋಮುವಾದ ನೇರವಾಗಿ ಮಹಿಳೆಯರ ಮೇಲೆ ಪರಿಣಾಮ ಬೀರುತ್ತಿದೆ. ಇಲ್ಲಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳಷ್ಟೇ ಆಗುತ್ತಿಲ್ಲ, ಅವರ ಸಾಗಾಣಿಕೆ ಕೂಡ ನಡೆಯುತ್ತಿದೆ. ಇದು ನಮ್ಮ ನಾಡಿಗೆ ತುಂಬ ಅವಮಾನಕರವಾದದ್ದು. ಆದರೆ ಸರ್ಕಾರ ಈಗಲೂ ಸಹ ಇದರ ಕುರಿತು ಸರಿಯಾದ ಕ್ರಮ ಕೈಗೊಂಡಿಲ್ಲ,” ಎಂದು ಹೇಳಿದ್ದು ಕೇವಲ ಅವರ ಅನುಭವ ಮಾತ್ರ ಆಗಿರಲಿಲ್ಲ. ಅದು ಅವರ ಒಡಲಾಳದ ನೋವಾಗಿತ್ತು.

ಕರಾವಳಿ ಮಾತೃಪ್ರಾಧಾನ್ಯತೆಯ ನಾಡಾಗಿದ್ದರೂ, ಅಲ್ಲಿಯೂ ಸಹ ಮಹಿಳೆಯರ ಮೇಲೆ ನೆಡೆಯುವ ಶೋಷಣೆಗೆ ಮಿತಿ ಇಲ್ಲ. ಇಂದು ಮಾತೃಪ್ರಾಧಾನ್ಯತೆ ಎಂಬುದು ಬರಿಯ ಹೆಸರಿಗೆ ಉಳಿದಿರುವುದು ಎಂಬುದು ಅಲ್ಲಿನ ಮಹಿಳಾ ಚಿಂತಕರ ಅಭಿಪ್ರಾಯವಾಗಿದೆ. ಸಾಂಸ್ಕೃತಿಕ ಮತ್ತು ವಿದ್ಯಾವಂತರ ನಾಡು ಎಂದೇ ಪ್ರಖ್ಯಾತವಾಗಿರುವ ತುಳುನಾಡು ಇಂದು ಕೋಮುವಾದ, ಜಾಗತೀಕರಣ, ಮತ್ತು ಬಂಡವಾಳಶಾಹಿಗಳ ವಿಕೃತ ಹಿಡಿತದಿಂದ ನಲುಗುತ್ತಿದೆ ಎಂಬುದು ಸತ್ಯ.