ಅಣ್ಣಾ ಹಜಾರೆಯನ್ನು ಭೇಟಿ ಮಾಡಿದ 16 ವರ್ಷಗಳ ನಂತರ…

– ಚಂದ್ರಶೇಖರ ಬೆಳಗೆರೆ

ಹದಿನಾರು ವರ್ಷಗಳ ನಂತರ ನಾನು ಮತ್ತೆ ಜನವರಿ 13 ರಂದು ಮಹಾರಾಷ್ಟ್ರದ ಅಹಮದ್ ನಗರ್ ಜಿಲ್ಲೆಯ ಪರೇಲ್ ತಾಲೂಕಿನ ರಲೇಗಾಂವ್ ಸಿದ್ದಿ ಗ್ರಾಮಕ್ಕೆ ಹೋಗಿದ್ದೆ. ಈ ಗ್ರಾಮದ ಅಭಿವೃದ್ಧಿಯ ಮೂಲಕ ಭಾರತಕ್ಕೆ ಗ್ರಾಮೀಣ ಅಭಿವೃದ್ಧಿಯ ಮಾದರಿಯನ್ನು ನೀಡಿದ ಅಣ್ಣಾ ಹಜಾರೆ ಅವರನ್ನು ಒಂದೂವರೆ ದಶಕದ ನಂತರ ಅವರ ಈ ಊರಿನಲ್ಲಿ ಮತ್ತೆ ಭೇಟಿ ಮಾಡುವ ಅವಕಾಶ ಸಿಕ್ಕಿತು. 1997 ರಲ್ಲಿ ರಲೇಗಾಂವ್‌ ಸಿದ್ಧಿ ದೇಶದ ಗ್ರಾಮೀಣ ಅಭಿವೃದ್ಧಿಯ ಪ್ರತೀಕವಾಗಿ ಭಾರೀ ಸುದ್ದಿ ಮಾಡಿತ್ತು. ralegan_siddhi_the_sustainable_villageಅಣ್ಣಾ ಆಗ ಸೇನೆಯಿಂದ ವಾಪಾಸು ಬಂದು ಒಂದು ದಶಕವಾಗಿತ್ತಷ್ಟೆ. ತಮ್ಮ ಪುಟ್ಟ ಹಳ್ಳಿಯನ್ನು ಅಭಿವೃದ್ಧಿಪಡಿಸುವ ಮೂಲಕ ಗ್ರಾಮೀಣ ಅಭಿವೃದ್ಧಿ ಎಂದರೆ ಏನು ಎಂಬುದನ್ನು ದೇಶಕ್ಕೆ ಪರಿಚಯಿಸುತ್ತಿದ್ದರು ಈ ಮಾಜಿ ಸೇನಾನಿ. ಆಗಷ್ಟೇ ಊರಿನ ದೇವಸ್ಥಾನ ದುರಸ್ಥಿಯಾಗಿತ್ತು. ಬೆಟ್ಟದ ಸಾಲುಗಳಲ್ಲಿ ಚೆಕ್ ಡ್ಯಾಂಗಳು-ಹೊಂಡಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿತ್ತು. ಗ್ರಾಮದ ಆಸು-ಪಾಸಿನ ಗೋಮಾಳದಲ್ಲಿ, ರಸ್ತೆ ಬದಿಯಲ್ಲಿ ಬೆಳೆದ ಮರಗಳಿಂದಾಗಿ ತಂಪಿನ ವಾತಾವರಣವಿತ್ತು. ಬತ್ತದ ಅಂತರ್ಜಲ ಮತ್ತು ಮಳೆ ನೀರಿನ ಸಂಗ್ರಹದಿಂದಾಗಿ ದನಕರುಗಳಿಗೆ ಹುಲ್ಲುಗಾವಲು ಸಹಜವಾಗಿ ಸೃಷ್ಟಿಯಾಗಿತ್ತು. ಭ್ರಷ್ಟ ವ್ಯವಸ್ಥೆಯಲ್ಲಿ ಕೊಳೆತು ಹೋಗಿದ್ದ ತಮ್ಮ ಗ್ರಾಮವನ್ನು ಅಭಿವೃದ್ಧಿ ಮಾಡಲು ಅಣ್ಣಾ ಹಜಾರೆ ಜನರನ್ನೇ ಸಂಘಟಿಸಿದ್ದರು. ಹಳ್ಳಿಯ ನಾಗರೀಕರು ಮೊದಲು ಹಿಂದೇಟು ಹಾಕಿದರೂ ನಂತರ ಅಣ್ಣಾ ಅವರನ್ನು ಅನುಸರಿಸಿದರು. ಗ್ರಾಮದ ಪ್ರತಿಯೊಬ್ಬರೂ ಪ್ರಾಮಾಣಿಕರಾಗುವ ಮೂಲಕ ಒಂದು ಮಾದರಿ ವ್ಯವಸ್ಥೆ ಸೃಷ್ಟಿಯಾಗಲು ಎಲ್ಲರೂ ಕಾರಣರಾದರು.

ತಮ್ಮ ಊರಿನ ಅಭಿವೃದ್ಧಿಯ ಜೊತೆಗೆ ಅಣ್ಣಾ ಭ್ರಷ್ಟಾಚಾರದ ವಿರುದ್ಧ ಜನಾಂದೋಲನವನ್ನು ರೂಪಿಸುತ್ತಿದ್ದರು. anna-ralegaonಇವರಂತೆ ಯೋಚಿಸುತ್ತಿದ್ದ ಸಮಾನ ಮನಸ್ಕರು ಇವರಿಗೆ ಕೈ ಜೋಡಿಸಿದರು. ರಲೇಗಾಂವ್ ಸಿದ್ಧಿ ಗ್ರಾಮವನ್ನು ಬಂಗಾರವಾಗಿಸುವ ಮೂಲಕ ಮಾಜಿ ಯೋಧ ಜನ ಸಾಮಾನ್ಯರ ಸೇನಾನಿಯಾಗಿ ಬೆಳೆದಿದ್ದರು. ದೇಶಕ್ಕೆ ಗ್ರಾಮೀಣ ಅಭಿವೃದ್ಧಿಯ ಮಾದರಿ ನೀಡಿದ ಅಣ್ಣಾ ಹಜಾರೆ ಮಾಹಿತಿ ಹಕ್ಕು ಕಾನೂನಿನ ಅನುಷ್ಠಾನಕ್ಕೆ ಹೋರಾಡಿ ಯಶಸ್ವಿಯಾದರು. ಭ್ರಷ್ಟ ಅಧಿಕಾರಿಗಳಿಗೆ ಅಂಕುಶವಾಗುವ ಲೋಕಪಾಲ ಕಾನೂನು ಆಗಲು ಅಣ್ಣಾ ಕೊಡುಗೆ ಅಪಾರ.

ಇಂತಹ ಹಜಾರೆ ದೆಹಲಿ ಚುನಾವಣೆಯ ನಂತರ ಮಂಕು ಬಡಿದವರಂತಿದ್ದಾರೆ. ಆಮ್ ಆದ್ಮಿ ಪಕ್ಷ ಮತ್ತು ಇವರ ನಡುವಿನ ಭಿನ್ನಾಭಿಪ್ರಾಯ ಮಾಧ್ಯಮಗಳ ಕೆನ್ನಾಲಿಗೆಗೆ ತುತ್ತಾದ ಮೇಲಂತೂ ಹಜಾರೆ ಸುತ್ತಾ ಮತ್ತೆ-ಮತ್ತೆ ವಿವಾದದ ಹುತ್ತ ಹೆಚ್ಚುತ್ತಲೇ ಇದೆ.

ಈಗ ರಲೇಗಾಂವ್ ನಿತ್ಯ ಸುದ್ದಿಯಲ್ಲಿದೆ. ಲೋಕಪಾಲ ಮಸೂದೆಯ ಹೋರಾಟದ ಮೂಲಕ ಭಾರತದೆಲ್ಲೆಡೆ ಮನೆ ಮಾತಾದ ಅಣ್ಣಾ ರಲೇಗಾಂವ್ ಗ್ರಾಮವನ್ನು ಪುಟ್ಟ ಪಟ್ಟಣದಂತೆ ಮಾರ್ಪಡಿಸಿದ್ದಾರೆ. ಕೃಷಿ ಬದುಕನ್ನು ಹಸನಾಗಿ ನಡೆಸಲು ಸಂಪೂರ್ಣ ಯೋಗ್ಯವಾಗಿದ್ದ ಈ ಆದರ್ಶ ಗ್ರಾಮ ಈಗ ಅಭಿವೃದ್ಧಿಯ ಮಾದರಿಯಾಗಿ ರೂಪು ತಾಳಿದೆ. ಗ್ರಾಮೀಣ ಅಭಿವೃದ್ಧಿ ತರಬೆತಿ ಸಂಸ್ಥೆ, ಭ್ರಷ್ಟಾಚಾರ ವಿರೋಧಿ ಜನಾಂದೋಲನ ಟ್ರಸ್ಟ್ ಹೀಗೆ ಅನೇಕ ಕಟ್ಟಡಗಳು ಈ ಪುಟ್ಟ ಗ್ರಾಮದಲ್ಲಿ ತಲೆ ಎತ್ತಿವೆ.

‘ಗುರುಗಾಂವ್ ಪಟ್ಟಣದಲ್ಲಿ ನಮ್ಮ ಅಭಿಮಾನಿಗಳು ನನ್ನ ಪ್ರತಿಮೆ ಹಾಕಲು ನಿಮ್ಮ ಸ್ಥಳೀಯ ಕಾರ್ಯಕರ್ತರು ಅಡ್ಡಿ ಪಡಿಸುತ್ತಿದ್ದಾರೆ, anna_hazare_at_ralegan_siddhiದಯವಿಟ್ಟು ನೀವು ಮಧ್ಯ ಪ್ರವೇಶಿಸಿ ಸರಿಪಡಿಸಿ’ ಎಂದು ಅಣ್ಣಾ ಹಜಾರೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ರಾಜ್‌ನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ಪತ್ರ ಬರೆದ ಸುದ್ದಿ ಪತ್ರಿಕೆಗಳಲ್ಲಿ ಬಂದ ನಂತರ ಅಣ್ಣಾ ಕೊಂಚ ಟೀಕೆಗೊಳಗಾಗಿದ್ದಾರೆ. ಇಳಿ ವಯಸ್ಸಿನ ಅಣ್ಣಾ ಹಜಾರೆ ಇಂತಹ ಅನೇಕ ಪ್ರಕರಣಗಳಿಂದ ಮುಜಗರಗೊಂಡ ಪಕ್ಷಿಯಾಗಿದ್ದಾರೆ.

ಅಂದು ಊರ ಮುಂದಿನ ಚಾವಡಿ ಮೇಲೆ ಎಲ್ಲರಿಗೂ ಸಿಗುತ್ತಿದ್ದ ಅಣ್ಣಾ ಹಜಾರೆ ಕಟ್ಟಡಗಳ ಆವರಣದಲ್ಲಿರುವ ಒಂದು ಕೋಣೆಯಲ್ಲಿದ್ದಾರೆ. ಭದ್ರತಾ ವ್ಯವಸ್ಥೆಯನ್ನು ಭೇದಿಸದೆ ಇವರನ್ನು ಯಾರೂ ನೋಡುವಂತಿಲ್ಲ. ನಾವು (ನನ್ನ ಹೆಂಡತಿ ಮತ್ತು ಇಬ್ಬರು ಹೆಣ್ಣುಮಕ್ಕಳ ನನ್ನ ಕುಟುಂಬ) ಬೆಂಗಳೂರಿನಿಂದ ಬಂದಿದ್ದೇವೆ ಎಂದು ಅವರ ಸಹಾಯಕರನ್ನು ಅಂಗಲಾಚಿದಾಗ ಸುಮಾರು ಒಂದು ಗಂಟೆ ನಂತರ ಅಣ್ಣಾ ನಮಗೆ ಸಿಕ್ಕರು. ಅಣ್ಣಾ ನಮ್ಮೊಂದಿಗೆ ಸುಮಾರು ಐದು ನಿಮಿಷಗಳ ಕಾಲ ಇದ್ದರು. ನಂತರ ಕೋಣೆಯೊಳಗೆ ಹೋದರು. ಅವರ ಸಿಬ್ಬಂದಿ ಅಣ್ಣಾರನ್ನು ನೋಡಲು ಬಂದ ಸ್ಥಳೀಯ ಜನರಿಗೆ ಸಂಜೆಯವರೆಗೂ ಅವರು ಸಿಕ್ಕುವುದಿಲ್ಲ ಎಂದು ಹೇಳಿ ಕಳುಹಿಸುತ್ತಿದ್ದರು.

ಭಾರತದ ಮಾದರಿ ಗ್ರಾಮವನ್ನು ಸಾಕಾರ ರೂಪಕ್ಕಿಳಿಸಿದ ಅಣ್ಣಾ ತಮ್ಮ ಇತರ ಹೋರಾಟಗಳ ಜೊತೆ-ಜೊತೆಗೆ ದೇಶದ ಎಲ್ಲಾ ಭಾಗಗಳಲ್ಲೂ ಗ್ರಾಮೀಣ ಅಭಿವೃದ್ಧಿಯ ಪಡೆಗಳನ್ನೇ ನಿರ್ಮಿಸಿದ್ದರೆ ನಗರ ವಿಲಾಸಿ ಮಧ್ಯಮ ವರ್ಗದ ರಾಜಕೀಯ ನಾಯಕರ ಮಧ್ಯೆ ಸಿಕ್ಕಿ ಹಾಕಿಕೊಳ್ಳುತ್ತಿರಲಿಲ್ಲವೇನೋ. ಅಣ್ಣಾ ತಮ್ಮ ಗ್ರಾಮವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಎಂದು ಸರ್ಕಾರದ ಮುಂದೆ ಭಿಕ್ಷೆ ಕೇಳುತ್ತಿರಲಿಲ್ಲ. ಜನರನ್ನು ಸಂಘಟಿಸಿ ಅಗತ್ಯವಿರುವ ಕೆಲಸಗಳನ್ನು ಆರಂಭಿಸುತ್ತಿದ್ದರು. chambe-family-with-anna-hazareಆಗ ಸರ್ಕಾರ ಇವರಿಗೆ ಕೈ ಜೋಡಿಸುವುದು ಅನಿವಾರ್ಯವಾಗುತ್ತಿತ್ತು. ಅಣ್ಣಾ ಹಜಾರೆ ಇದೇ ತಂತ್ರವನ್ನು ತಮ್ಮ ಜಿಲ್ಲೆಯಲ್ಲಿ ಅನುಸರಿಸಿದ್ದರೂ ಸಾಕಾಗಿತ್ತು. ಈ ಕ್ರಾಂತಿ ತನ್ನಿಂದ ತಾನೇ ದೇಶವ್ಯಾಪಿ ವಿಸ್ತರಣೆಯಾಗುತ್ತಿತ್ತೇನೋ. ಆದರೆ ಇದು ಸಾಧ್ಯವಾಗಲಿಲ್ಲ. ಇದಕ್ಕೆ ಹಜಾರೆ ಕಾರಣರೋ, ಸರ್ಕಾರ ಕಾರಣವೋ ಗೊತ್ತಿಲ್ಲ.

ಅಣ್ಣಾ ಹಜಾರೆ ಅವರನ್ನು ನೋಡಿಕೊಂಡು ಸಂಜೆ ಪುಣೆ ಪಟ್ಟಣದಲ್ಲಿ ಬಸ್ಸು ಹತ್ತಿದ ನಾವು ಮುಂಜಾನೆ ಬೆಂಗಳೂರಿನಲ್ಲಿ ಕಣ್ಣು ಬಿಟ್ಟಾಗ ರಸ್ತೆ ಬದಿಯಲ್ಲಿ ಕನ್ನಡದ ಬೋರ್ಡ್‌ಗಳು, ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು. ಅಯ್ಯಪ್ಪನ ಭಕ್ತರು ಉದ್ಘೋಷ ಹಾಕುತ್ತಾ ವಾಹನಗಳಲ್ಲಿ ಸಾಗುತ್ತಿದ್ದುದು ಸಾಮಾನ್ಯವಾಗಿತ್ತು. ಗುರುಸ್ವಾಮಿಗೆ ಕಿರಿ ಸ್ವಾಮಿಗಳು ಕಾಲಿಗೆ ಬೀಳುವ ದೊಡ್ಡ ಫ್ಲೆಕ್ಸ್‌ಗಳಲ್ಲಿನ ಚಿತ್ರಗಳು ಹಜಾರೆ ಅಭಿವೃದ್ಧಿಯನ್ನು ಕಂಡು ಬಂದ ನನ್ನನ್ನು ಅಣಕಿಸುತ್ತಿದ್ದವು. ಹಜಾರೆ ರಲೇಗಾವ್ ಸಿದ್ಧಿಯಲ್ಲಿ ಕಟ್ಟಿದ ಸೇನಾ ಪಡೆಯನ್ನು ಭಾರತದ ಎಲ್ಲಾ ಗ್ರಾಮಗಳಿಗೂ ವಿಸ್ತರಿಸಿದ್ದರೆ ಅಯ್ಯಪ್ಪನ ಭಕ್ತರ ಪಡೆಗಿಂತ ಹೆಚ್ಚು ಸಂಖ್ಯೆಯ ಗ್ರಾಮೀಣ ಅಭಿವೃದ್ಧಿ ಸೇನಾನಿಗಳನ್ನು ನಾವು ಇಂದು ಕಾಣಬಹುದಾಗಿತ್ತು. ಇದು ಏಕೆ ಸಾಧ್ಯವಾಗಿಲ್ಲ ಎಂದು ಯೋಚಿಸಿದಾಗ ಹದಿನಾರು ವರ್ಷಗಳ ಹಿಂದೆಯೇ ಅಣ್ಣಾ ಹಜಾರೆಯನ್ನು ಭೇಟಿ ಮಾಡಿ ಬಂದು ಒಂದು ಲೇಖನ ಬರೆದು ಸುಮ್ಮನಾದ ನನ್ನ ಬಗ್ಗೆ ನಾಚಿಕೆಯಾಯಿತು.

Leave a Reply

Your email address will not be published. Required fields are marked *