Daily Archives: January 21, 2014

ಮೋದಿ ವರ್ಸಸ್ ಕೇಜ್ರಿವಾಲ್ : ಯಾರು ಉತ್ತಮ?

– ಆನಂದ ಪ್ರಸಾದ್

ಬಿಜೆಪಿ ಹಾಗೂ ನರೇಂದ್ರ ಮೋದಿ 2014ರ ಲೋಕಸಭಾ ಚುನಾವಣೆಯಲ್ಲಿ ಕಳೆದ ಹತ್ತು ವರ್ಷಗಳ ಕಾಂಗ್ರೆಸ್ ನೇತೃತ್ವದ ಯುಪಿಎ ಒಕ್ಕೂಟದ ಕೇಂದ್ರ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ದೇಶಾದ್ಯಂತ ಎದ್ದಿರುವ ಆಡಳಿತವಿರೋಧಿ ಅಲೆಯ ಪ್ರಯೋಜನ ಪಡೆದು ಅಧಿಕಾರಕ್ಕೆ ಏರುವ ಹವಣಿಕೆಯಲ್ಲಿರುವಾಗ ಕೊನೆಯ ಕ್ಷಣದಲ್ಲಿ ಅದಕ್ಕೆ ಬಲವಾದ ಪ್ರತಿರೋಧದ ಶಕ್ತಿಯೊಂದು ಆಮ್ ಆದ್ಮಿ ಪಕ್ಷದ ರೂಪದಲ್ಲಿ ಎದುರಾಗಿರುವುದು ಪ್ರಜಾಪ್ರಭುತ್ವದ ಉಳಿವಿನ AAP Launchದೃಷ್ಟಿಯಿಂದ ಬಹಳ ಒಳ್ಳೆಯ ಬೆಳವಣಿಗೆಯಾಗಿದೆ. ಆಮ್ ಆದ್ಮಿ ಪಕ್ಷ ಮುಂದಿನ ಲೋಕಸಭಾ ಚುನಾವಣೆಗಳಲ್ಲಿ ಎಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂಬುದು ಮುಖ್ಯವಲ್ಲ. ಕಾಂಗ್ರೆಸ್ ನೇತೃತ್ವದ ಯುಪಿಎ ಒಕ್ಕೂಟವು ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ತಡೆಯಲು ಸಮರ್ಥವಾಗಿಲ್ಲದ ಹಾಗೂ ಎಡಪಕ್ಷಗಳೂ ಸದ್ಯದ ಪರಿಸ್ಥಿತಿಯಲ್ಲಿ ನರೇಂದ್ರ ಮೋದಿಯ ನಾಯಕತ್ವದಲ್ಲಿ ಫ್ಯಾಸಿಸಂ ದೇಶದಲ್ಲಿ ಬೆಳೆಯುತ್ತಿರುವುದನ್ನು ತಡೆಯುವಲ್ಲಿ ಅಸಮರ್ಥವಾಗಿರುವ ಹೊತ್ತಿನಲ್ಲಿ ಆಮ್ ಆದ್ಮಿ ಪಕ್ಷವು ಅಂಥ ಫ್ಯಾಸಿಸಂ ದೇಶದಲ್ಲಿ ಬೆಳೆಯುವುದನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವ ಎಲ್ಲ ಲಕ್ಷಣಗಳೂ ದಟ್ಟವಾಗುತ್ತಿವೆ. ಹೀಗಾಗಿ ಆಮ್ ಆದ್ಮಿ ಪಕ್ಷದ ಬೆಳವಣಿಗೆ ದೇಶದ ಪ್ರಜಾಪ್ರಭುತ್ವದ ಬೆಳವಣಿಗೆಗೆ ಹಾಗೂ ಉಳಿವಿಗೆ ಮುಖ್ಯವಾಗಿ ಕಂಡುಬರುತ್ತದೆ.

ಬಿಜೆಪಿಯು ದೇಶಾದ್ಯಂತ ಕ್ಷಿಪ್ರವಾಗಿ ಬೆಳೆಯಲು ಜನಸಾಮಾನ್ಯರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಹಾದಿಯನ್ನು ಅಳವಡಿಸಿಕೊಂಡಿತು. ಇದರ ಅಂಗವಾಗಿ ಅಡ್ವಾಣಿಯ ರಥಯಾತ್ರೆ ದೇಶಾದ್ಯಂತ ಧಾರ್ಮಿಕ ನೆಲೆಯಲ್ಲಿ ಜನರನ್ನು ವಿಭಜಿಸಲು ಕಾರಣವಾಯಿತು. ಮುಂದೆ ರಾಮ ಮಂದಿರದ ನೆಪದಲ್ಲಿ ಜನರನ್ನು ದೇಶಾದ್ಯಂತ ಅಯೋಧ್ಯೆಗೆ ಕರಸೇವೆಯ ಹೆಸರಿನಲ್ಲಿ ಕರೆದುಕೊಂಡು ಹೋಗಿ ಬಾಬ್ರಿ ಮಸೀದಿಯನ್ನು ಜನರೇ ಕಾನೂನನ್ನು ಕೈಗೆತ್ತಿಕೊಂಡು ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಇದರಿಂದಾಗಿ ದೇಶದಲ್ಲಿ ಉಂಟಾದ ಕೋಮುಗಲಭೆಗಳಲ್ಲಿ Advani-Rath-Yatraಸುಮಾರು 20,000 ಕೋಟಿ ರೂಪಾಯಿಗಳಷ್ಟು ಹಾನಿಯಾಯಿತು ಎಂದು ಅಂದಾಜಿಸಲಾಗಿದೆ ಮಾತ್ರವಲ್ಲ ಹಿಂದೂ, ಮುಸ್ಲಿಂ ಎರಡೂ ಧರ್ಮಗಳ ನೂರಾರು ಅಮಾಯಕ ಜನರು ಗಲಭೆಗಳಲ್ಲಿ ಪ್ರಾಣ ಕಳೆದುಕೊಂಡರು. ರಾಜಕೀಯಕ್ಕಾಗಿ ಇದನ್ನೆಲ್ಲಾ ಮಾಡುವಾಗ ಬಿಜೆಪಿಯ ಯಾರಿಗೂ ಇದು ಕಾನೂನನ್ನು ಕೈಗೆತ್ತಿಕೊಳ್ಳುವ ಕೃತ್ಯ ಎನಿಸಲಿಲ್ಲ. ಇದಕ್ಕೆ ಹೋಲಿಸಿದರೆ ಆಮ್ ಆದ್ಮಿ ಪಕ್ಷವು ಭ್ರಷ್ಟಾಚಾರದಂಥ ಜನರ ಸಮಸ್ಯೆಗಳನ್ನು ಎತ್ತಿಕೊಂಡು ಶಾಂತಿಯುತ ಹೋರಾಟಗಳ ಮೂಲಕವೇ ಬೆಳೆಯುತ್ತಿದೆ. ಆಮ್ ಆದ್ಮಿ ಪಕ್ಷವು ತನ್ನ ಬೆಳವಣಿಗೆಯ ಹಾದಿಯಲ್ಲಿ ಜನರನ್ನು ಬಿಜೆಪಿಯಂತೆ ತನ್ನ ದೇಶವ್ಯಾಪಿ ಬೆಳವಣಿಗೆಗಾಗಿ ಬಲಿ ಕೊಟ್ಟಿಲ್ಲ. ಹೀಗಾಗಿ ಆಮ್ ಆದ್ಮಿ ಪಕ್ಷವು ಬಿಜೆಪಿಗಿಂಥ ಎಷ್ಟೋ ಪಟ್ಟು ಉತ್ತಮ ಎಂದು ಕಂಡುಬರುತ್ತದೆ. ದೆಹಲಿಯಲ್ಲಿ ಇದೀಗ ಆಮ್ ಆದ್ಮಿ ಪಕ್ಷದ ಮುಖ್ಯ ಮಂತ್ರಿ ದೆಹಲಿ ಪೋಲೀಸರ ನಿಷ್ಕ್ರಿಯತೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೇಡಿಕೆ ಇರಿಸಿ ಧರಣಿ ಕೈಗೊಂಡು ಅರಾಜಕತೆ ಉಂಟು ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದುವರೆಗೆ ಯಾವ ಮುಖ್ಯಮಂತ್ರಿಯೂ ತೋರಿಸದೆ ಇರುವ ಧೈರ್ಯವನ್ನು ಕೇಂದ್ರ ಸರಕಾರದ ವಿರುದ್ಧ ಕೇಜ್ರಿವಾಲ್ ತೋರಿಸುತ್ತಿದ್ದು ಇದು ಪ್ರಜಾಪ್ರಭುತ್ವದ ಬೆಳವಣಿಗೆಗೆ ಕೈಗೊಳ್ಳುತ್ತಿರುವ ಬಹಳ ಉತ್ತಮ ಹೋರಾಟವಾಗಿದೆ. ದೆಹಲಿಯಲ್ಲಿ ಉಂಟಾಗುವ ಅತ್ಯಾಚಾರ, ಅನಾಚಾರಗಳಿಗೆ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ದೂರುವುದರಲ್ಲಿ ಹುರುಳಿಲ್ಲ ಏಕೆಂದರೆ ಅಲ್ಲಿನ ಪೊಲೀಸರು ದೆಹಲಿ ರಾಜ್ಯ ಸರ್ಕಾರದ ಕೈಕೆಳಗೆ ಬರುತ್ತಿಲ್ಲ ಮಾತ್ರವಲ್ಲ ಅವರು ದೆಹಲಿ ಸರ್ಕಾರದ ಮಾತನ್ನು ಕೇಳುತ್ತಿಲ್ಲ. ಅವರ ನಿಯಂತ್ರಣ ಕೇಂದ್ರ ಸರ್ಕಾರವು ತನ್ನ ಬಳಿಯೇ ಇರಿಸಿಕೊಂಡಿರುವ ಕಾರಣ ದೆಹಲಿಯಲ್ಲಿ ನಡೆಯುತ್ತಿರುವ ಅತ್ಯಾಚಾರಗಳಿಗೆ ಕೇಂದ್ರ ಸರ್ಕಾರವೇ ಹೊಣೆಯಾಗುತ್ತದೆ. ಆದರೆ ಅದನ್ನು ಅರಿಯದೆ ಜನ ಇದುವರೆಗೆ ಆಮ್ ಆದ್ಮಿ ಪಕ್ಷದ ನೂತನ ಸರ್ಕಾರವನ್ನು ದೂರುವ ಪ್ರವೃತ್ತಿ ಕಂಡುಬರುತ್ತಿತ್ತು. ಇದೀಗ ಕೇಜ್ರಿವಾಲ್ ಕೈಗೊಂಡಿರುವ ಧರಣಿಯಿಂದ ಇದು ದೇಶಾದ್ಯಂತ ಮಾಧ್ಯಮಗಳ ಗಮನ ಸೆಳೆದು ಇದರ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲೆ ಬೀಳುವಂತೆ ಆಗಿದ್ದು ಇದು ಆಮ್ ಆದ್ಮಿ ಪಕ್ಷದ ದೇಶವ್ಯಾಪಿ ಬೆಳವಣಿಗೆಗೆ ಸಹಾಯಕವಾಗಲಿದೆ. ಒಬ್ಬ ನಾಯಕನಲ್ಲಿ ಇರಬೇಕಾದ ಈ ರೀತಿಯ ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ಕ್ರಮ ತೆಗೆದುಕೊಳ್ಳುವ ದೃಢತೆ ಆಮ್ ಆದ್ಮಿ ಪಕ್ಷವನ್ನು ಇತರ ಪಕ್ಷಗಳಿಗಿಂತ ಭಿನ್ನವಾಗಿ ಮಾಡುತ್ತದೆ. ಈವರೆಗೆ ಯಾವ ಮುಖ್ಯಮಂತ್ರಿಯೂ ಈ ರೀತಿ ಬೀದಿಯಲ್ಲಿ ಜನರ ಹಕ್ಕಿಗಾಗಿ, ಸುರಕ್ಷತೆಗಾಗಿ ಆಗ್ರಹಿಸಿ ರಾತ್ರಿ ಕಳೆದ ಉದಾಹರಣೆ ಇಲ್ಲ. ಹೀಗಾಗಿ ಕೇಜ್ರಿವಾಲ್ ವ್ಯವಸ್ಥೆ ಪರಿವರ್ತನೆಗಾಗಿ ಈ ರೀತಿ ಕೈಗೊಳ್ಳುವ ಹೋರಾಟ ಅರಾಜಕತೆ ಎನಿಸಿದರೂ ದೂರಗಾಮಿ ಪರಿಣಾಮ ಬೀರಲಿದೆ ಮಾತ್ರವಲ್ಲ ಇದರಿಂದ ಪಕ್ಷವು ಜನರಿಗೆ ಇನ್ನಷ್ಟು ಹತ್ತಿರವಾಗಲಿದೆ.

ಮೋದಿ ಭ್ರಷ್ಟಾಚಾರದ ಬಗ್ಗೆ ಬಹಳ ಮಾತಾಡಿದರೂ ಯಡಿಯೂರಪ್ಪನವರಂಥ ಭ್ರಷ್ಟಾಚಾರದ ಆಪಾದನೆ ಹೊತ್ತಿರುವ ವ್ಯಕ್ತಿಗಳನ್ನು yeddy-reddyಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ. ಯಡಿಯೂರಪ್ಪ ಆಪರೇಶನ್ ಕಮಲ ಎಂಬ ಅನೈತಿಕ ರಾಜಕಾರಣ ಮಾಡಿದ ಇತಿಹಾಸ ಹಾಗೂ ರೆಡ್ಡಿ ಸಹೋದರರ ಅಕ್ರಮ ಗಣಿಗಾರಿಕೆಯನ್ನು ತಡೆಯಲು ಯಾವ ಕ್ರಮವನ್ನೂ ಕೈಗೊಳ್ಳದ ಚರಿತ್ರೆ ಹೊಂದಿದ್ದಾರೆ. ಜನಾರ್ಧನ ರೆಡ್ಡಿಯನ್ನು ಗಣಿ ಅಕ್ರಮಗಳಿಗಾಗಿ ಜೈಲಿಗೆ ಕಳುಹಿಸಲು ಕಾರಣವಾದದ್ದು ಎಸ್. ಆರ್. ಹಿರೇಮಠ ಅವರ ನ್ಯಾಯಾಂಗ ಹೋರಾಟವೇ ವಿನಃ ಯಡಿಯೂರಪ್ಪನವರು ಗಣಿ ಅಕ್ರಮದ ವಿರುದ್ಧ ಕ್ರಮ ಕೈಗೊಂಡು ಅವರು ಜೈಲಿಗೆ ಹೋದದ್ದು ಅಲ್ಲ. ಯಡಿಯೂರಪ್ಪ ಮಾಧ್ಯಮಗಳನ್ನು ಕೂಡ ತನ್ನ ಪರವಾಗಿ ಭ್ರಷ್ಟಗೊಳಿಸಿದ ಆಪಾನೆಗಳಿವೆ. ಹೀಗಿದ್ದರೂ ಇಂಥವರನ್ನು ಮೋದಿ ಸಮರ್ಥಿಸಿಕೊಳ್ಳುವುದು ಹಾಗೂ ಪಕ್ಷಕ್ಕೆ ಮತ್ತೆ ಸೇರಿಸಿಕೊಳ್ಳುವುದು ದೇಶಕ್ಕೆ ಕೊಡುವ ಸಂದೇಶ ಏನು? ಮೋದಿ ವೈಯಕ್ತಿಕವಾಗಿ ಭ್ರಷ್ಟನಲ್ಲದಿರಬಹುದು ಆದರೆ ಅವರ ಗುಜರಾತಿನ ಕೆಲವು ಮಂತ್ರಿಗಳ ಮೇಲೇ ಭ್ರಷ್ಟಾಚಾರದ ಆರೋಪಗಳು ಇವೆ. ರಾಜ್ಯದಲ್ಲಿ ಸಶಕ್ತ ಲೋಕಾಯುಕ್ತ ವ್ಯವಸ್ಥೆ ಇಲ್ಲದಿರುವ ಕಾರಣ ಇವೆಲ್ಲ ಬೆಳಕಿಗೆ ಬಂದಿಲ್ಲ. ಇರುವ ಲೋಕಾಯುಕ್ತ ವ್ಯವಸ್ಥೆಯನ್ನೂ ಮೋದಿ ಮತ್ತಷ್ಟು ದುರ್ಬಲಗೊಳಿಸಿ ಅದನ್ನು ಸರ್ಕಾರದ ಕೈಗೊಂಬೆಯನ್ನಾಗಿ ಪರಿವರ್ತಿಸಿದ್ದಾರೆ. ಇಂಥವರಿಂದ ಭ್ರಷ್ಟಾಚಾರಮುಕ್ತ ಆಡಳಿತ ನೀಡುವುದು ಹೇಗೆ ಸಾಧ್ಯ? ಮೋದಿ ಒಬ್ಬ ಪ್ರಾಮಾಣಿಕವಾಗಿದ್ದರೆ ಸಾಕೇ? ಹಾಗೆ ನೋಡಿದರೆ ಮನಮೋಹನ್ ಸಿಂಗ್ ವೈಯಕ್ತಿಕವಾಗಿ ಅತ್ಯಂತ ಪ್ರಾಮಾಣಿಕ ವ್ಯಕ್ತಿ. ಅವರು ಪ್ರಾಮಾಣಿಕರಾಗಿದ್ದರೂ ಅವರ ಸಂಪುಟದ ಸಚಿವರು ಭ್ರಷ್ಟಾಚಾರ ಮಾಡುವುದನ್ನು ನೋಡಿಯೂ ಅದನ್ನು ತಡೆಯದೆ ಇರುವ ಆಪಾದನೆಯನ್ನು ಅವರ ಮೇಲೆ ಹೊರಿಸಲಾಗುತ್ತಿದೆ. ಇದೇ ಪರಿಸ್ಥಿತಿ ಮೋದಿ ಪ್ರಧಾನಿಯಾದರೂ ಮುಂದುವರಿಯಲಿದೆ ಎಂಬುದರ ಮುನ್ಸೂಚನೆಯಾಗಿ ಮೋದಿ ಯಡಿಯೂರಪ್ಪನವರನ್ನು ವಾಪಸ್ ಪಕ್ಷಕ್ಕೆ ಕರೆದುಕೊಂಡಿದ್ದರಲ್ಲಿಯೇ ಕಂಡುಬರುತ್ತದೆ. ಅದೇ ರೀತಿ ಭ್ರಷ್ಟಾಚಾರದ ಆಪಾದನೆ ಹೊಂದಿರುವ ನಿತಿನ್ ಗಡ್ಕರಿ, ಅನಂತ್ ಕುಮಾರ್, ಗಣಿಕಳ್ಳ ರೆಡ್ಡಿಗಳಿಂದ ಹಣ ಪಡೆದ ಆಪಾದನೆ ಹೊಂದಿರುವ ಸುಷ್ಮಾ ಸ್ವರಾಜ್ ಮೊದಲಾದವರು ಪಕ್ಷದ ಪ್ರಮುಖ ಹುದ್ದೆಗಳಲ್ಲಿ ಇದ್ದಾರೆ. ಇಂಥ ವ್ಯಕ್ತಿಗಳನ್ನು ಇಟ್ಟುಕೊಂಡು ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇನೆ ಎಂದರೆ ಅದನ್ನು ನಂಬಲು ಸಾಧ್ಯವೇ? ಭ್ರಷ್ಟಾಚಾರದ ಬಗ್ಗೆ ಬಹಳ ದೊಡ್ಡ ಬೊಬ್ಬೆ ಹಾಕುತ್ತಿರುವ ಬಿಜೆಪಿ ತನ್ನ ವೆಬ್‌ಸೈಟಿನಲ್ಲಿ ಪಕ್ಷಕ್ಕೆ ದೇಣಿಗೆ ನೀಡಿದವರ ವಿವರಗಳನ್ನು ಪಾರದರ್ಶಕವಾಗಿ ಎಲ್ಲರಿಗೂ ಗೊತ್ತಾಗುವಂತೆ ಹಾಕುವ ಧೈರ್ಯವನ್ನು ತೋರಿಸುತ್ತಿಲ್ಲ. ಹೀಗಾಗಿ ಅದರ ಭ್ರಷ್ಟಾಚಾರದ ವಿರುದ್ಧ ಹೋರಾಟವೆಂಬುದು ಕೇವಲ ಬಾಯ್ಮಾತಿಗೆ ಸೀಮಿತವಾಗಿರುವಂತೆ ಕಂಡುಬರುತ್ತದೆ. ಆದರೆ ಆಮ್ ಆದ್ಮಿ ಪಕ್ಷವಾದರೋ ತನಗೆ ದೇಣಿಗೆ ನೀಡಿದವರ ಪಟ್ಟಿಯನ್ನು ಆ ಕ್ಷಣವೇ ತನ್ನ ವೆಬ್‌ಸೈಟಿನಲ್ಲಿ ತೋರಿಸುವ ವ್ಯವಸ್ಥೆ ಮಾಡಿ ಸಂಪೂರ್ಣ ಪಾರದರ್ಶಕತೆಯನ್ನು ಮೆರೆದಿದೆ. ಹೀಗಾಗಿ ಬಿಜೆಪಿಗಿಂತ ಆಮ್ ಆದ್ಮಿ ಪಕ್ಷವು ಎಷ್ಟೋ ಉತ್ತಮ ಎಂದು ಹೇಳಬಹುದಾಗಿದೆ. ಬಿಜೆಪಿ ಪಕ್ಷದ ಅತ್ಯಂತ ದುಬಾರಿಯಾದ ಸಾರ್ವಜನಿಕ ರ್ಯಾಲಿಗಳಿಗೆ ನೀರಿನಂತೆ ಹಣ ಚೆಲ್ಲಲು ಯಾರು ದೇಣಿಗೆ ಯಾಕಾಗಿ ಕೊಡುತ್ತಿದ್ದಾರೆ ಎಂಬುದು ಜನಸಾಮಾನ್ಯರಿಗೆ ತಿಳಿಯುತ್ತಿಲ್ಲ. ಈ ಹಣದ ಮೂಲ ತಿಳಿದರೆ ಬಿಜೆಪಿಯ ಪಾರದರ್ಶಕ ಆಡಳಿತದ ನೀಡುವ ಭರವಸೆ ಎಷ್ಟು ಪೊಳ್ಳು ಎಂಬುದು ಜನರಿಗೆ ಗೊತ್ತಾಗಲಿದೆ.

ಬಿಜೆಪಿಯ ನೇತೃತ್ವದ ಆಡಳಿತ ಬಂದರೆ ಶಿಕ್ಷಣ ಕ್ಷೇತ್ರದಲ್ಲಿ ವಿಪರೀತ ಕೇಸರೀಕರಣ ಜಾರಿಗೆ ಬರುತ್ತದೆ. ಸಂಘ ಪರಿವಾರದ ಎಲ್ಲ ಸಂಘಟನೆಗಳೂ ಪರ್ಯಾಯ ಆಡಳಿತ ಕೇಂದ್ರಗಳಾಗಿ ಕಾರ್ಯ ನಿರ್ವಹಿಸಲಾರಂಭಿಸುತ್ತವೆ. ಕಾಂಗ್ರೆಸ್ಸಿಗೆ ನೆಹರೂ ಕುಟುಂಬದ narender_modi_rssಯಜಮಾನಿಕೆಯಾದರೆ ಬಿಜೆಪಿಗೆ ಸಂಘ ಪರಿವಾರದ ಯಜಮಾನಿಕೆ ಕಂಡುಬರುತ್ತದೆ. ಸಂಘ ಪರಿವಾರವು ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸದೆಯೇ ಪರೋಕ್ಷ ಆಡಳಿತ ಚಲಾಯಿಸಲು ಆರಂಭಿಸುತ್ತದೆ. ಹೀಗಾಗಿ ಬಿಜೆಪಿಯ ಆಡಳಿತ ಬಂದರೆ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲವಾಗುತ್ತದೆ, ಪುರೋಹಿತಶಾಹಿ ವ್ಯವಸ್ಥೆಗೆ ಹೆಚ್ಚಿನ ಉತ್ತೇಜನ ದೊರೆಯುತ್ತದೆ. ಬಿಜೆಪಿಗೆ ಕುರುಡಾಗಿ ಮತ ಚಲಾಯಿಸುವ ಮುನ್ನ ಇದನ್ನು ನಾವು ಯೋಚಿಸಬೇಕಾಗುತ್ತದೆ. ಆಮ್ ಆದ್ಮಿ ಪಕ್ಷದಲ್ಲಿ ಈ ರೀತಿ ಹೈಕಮಾಂಡ್ ಆಡಳಿತ ವ್ಯವಸ್ಥೆ ಇಲ್ಲ. ಹೀಗಾಗಿಯೂ ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ. ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಶಾಂತಿಯುತವಾಗಿ ಧರಣಿ ಸತ್ಯಾಗ್ರಹ ಕೈಗೊಂಡರೂ ಅದನ್ನು ಅರಾಜಕತೆ ಹಬ್ಬಿಸುತ್ತಾರೆ ಎಂದು ಹೇಳುವುದು ಸಮಂಜಸವಾಗಿ ಕಾಣುವುದಿಲ್ಲ. ನಕ್ಸಲರಂತೆ ಕೇಜ್ರಿವಾಲ್ ಬಂದೂಕು ಹಿಡಿದಿದ್ದಾರೆಯೇ ಅಥವಾ ಜನರನ್ನು ಕಾನೂನನ್ನು ಕೈಗೆತ್ತಿಕೊಂಡು ಹಿಂಸಾಚಾರಕ್ಕೆ ಇಳಿಯಲು ಕರೆ ನೀಡಿದ್ದಾರೆಯೇ ಎಂದರೆ ಅಂಥ ಯಾವುದೇ ಕೃತ್ಯ ಅವರು ಮಾಡಿಲ್ಲ. ಹೀಗಿದ್ದರೂ ಅವರು ದೇಶದಲ್ಲಿ ಅರಾಜಕತೆ ಹಬ್ಬಿಸುತ್ತಿದ್ದಾರೆ ಎಂದು ಮುಖ್ಯ ವಾಹಿನಿಯ ಮಾಧ್ಯಮಗಳು ಹೇಳುತ್ತಿರುವುದು ಸೂಕ್ತವಾದದ್ದಲ್ಲ. ಜಡ್ಡುಗಟ್ಟಿದ ವ್ಯವಸ್ಥೆಯ ಸುಧಾರಣೆಗೆ ಇಂಥ ಹೋರಾಟಗಳೂ ಅಗತ್ಯ. ಇದು ಜಡ್ಡು ಗಟ್ಟಿರುವ ವ್ಯವಸ್ಥೆಯಲ್ಲಿ ಸಂಚಲನ ತರಲು ಸಹಾಯವಾಗಲಿದೆ. ಹೀಗಾಗಿ ಆಮ್ ಆದ್ಮಿ ಪಕ್ಷದ ಈ ವಿಭಿನ್ನ ಹೋರಾಟ ಸ್ವಾಗತಾರ್ಹ ಬೆಳವಣಿಗೆ ಎಂದೇ ಹೇಳಬೇಕಾಗುತ್ತದೆ.

ವಿದೇಶಿ ಪ್ರವಾಸಿಗರ ನಜರಲ್ಲಿ ರೇಪಿಸ್ಥಾನ್ ಆಗದಿರಲಿ


– ಡಾ.ಎಸ್.ಬಿ. ಜೋಗುರ


 

ಕಾಮಾತುರರಿಗೆ ಕಣ್ಣಿಲ್ಲ. ಹಾಗೆಯೇ ದೇಶ ಭಾಷೆಯ ಹಂಗೂ ಇಲ್ಲ. ಇವರ ವಿಷಯ ವಾಸನೆಯ ಮುಂದೆ ದೇಶದ ಮಾನ ಸಮ್ಮಾನಗಳಂತೂ ಏನೂ ಅಲ್ಲ. ’ಅತಿಥಿ ದೇವೋಭವ’ ಎಂಬ ವಿಷಯದಲ್ಲಿ ಬೇರೆ ರಾಷ್ಟ್ರಗಳಿಗೆ ಗುರುವಿನ ಸ್ಥಾನದಲ್ಲಿರುವ ನಮ್ಮ ದೇಶ ಈಗೀಗ ಕೆಲವೇ ಕೆಲವು ಕಿರಾತಕರಿಂದ ವಿಶ್ವವ್ಯಾಪಕವಾಗಿ ಅಪಮಾನವನ್ನು ಮೂದಲಿಕೆಯ ಮಾತುಗಳನ್ನು ಅನುಭವಿಸಬೇಕಾಗಿ ಬರುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ. ದೇಶದ ರಾಜಧಾನಿ ಅತ್ಯಾಚಾರಗಳಿಂದಲೇ ಮತ್ತೆ ಮತ್ತೆ ಸುದ್ದಿಯಾಗುತ್ತಿರುವದು ಇನ್ನೊಂದು ದೊಡ್ದ ವಿಪರ್ಯಾಸ. ಈಚೆಗೆ 51 ವರ್ಷ national-post-danish-gang-rape-delhiವಯಸ್ಸಿನ ಡೆನ್ಮಾರ್ಕ್ ಮೂಲದ ಮಹಿಳೆಯೋರ್ವಳ ಮೇಲೆ 8 ಜನ ರಕ್ಕಸರ ಹಾಗೆ ಎರಗಿ ಅವಳ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವುದು ಮಾತ್ರವಲ್ಲದೇ ಆಕೆಯ ಬಳಿಯಿದ್ದ ಹಣವನ್ನೆಲ್ಲ ಕಿತ್ತುಕೊಂಡು ಅವಳ ಮೊಬೈಲ್, ವಾಚ್ ಕೂಡಾ ಅಪಹರಿಸಿದ್ದಾರೆ. ಸುಮಾರು ಐದು ಘಂಟೆಗಳ ಕಾಲ ಈ ವಿಕೃತರು ಅವಳ ಮೇಲೆ ಅತ್ಯಾಚಾರ ಎಸಗಿರುವದಿದೆ. ಆ ಮಹಿಳೆ ತಾನು ಉಳಿದುಕೊಂಡ ಹೊಟೆಲ್ ಸ್ವಾಗತಕಾರನ ಬಳಿ ರಿಕ್ಷಾಗೆ ದುಡ್ದು ಬೇಡುವಂಥಾ ದೈನೇಸಿ ಸ್ಥಿತಿಯನ್ನು ನಿರ್ಮಿಸಿದ ಈ ದುರುಳರಿಗೆ ತಮ್ಮ ದೇಶದ ಘನತೆ ಗೌರವದ ಬಗ್ಗೆ ಕಿಂಚಿತ್ತೂ ಗಮನವಿಲ್ಲದಿರುವದು ಇನ್ನೊಂದು ವಿಷಾದದ ಸಂಗತಿ. ಆಕೆಯ ಕುತ್ತಿಗೆಯ ಮೇಲೆ ಚಾಕು ಇಟ್ಟು ಅತ್ಯಾಚಾರ ಎಸಗಿರುವ ಈ ಎಂಟು ಜನರು ಕೂಡಾ ನಮ್ಮ ದೇಶವನ್ನು ಪ್ರತಿನಿಧಿಸುವಂತಾದದ್ದು ದೊಡ್ಡ ದುರಂತ.

ಇನ್ನೊಂದು ಘಟನೆ ಚೆನೈನ ರೈಲು ಒಂದರಲ್ಲಿ ಬಿಹಾರ ಮೂಲದ ಕಿರಾತಕ 22 ವರ್ಷದ ಚಂದನ ಕುಮಾರ ಎನ್ನುವಾತ 18 ವರ್ಷದ ಜರ್ಮನ್ ಯುವತಿಯ ಮೆಲೆ ಅತ್ಯಾಚಾರ ಎಸಗಿದ ಸುದ್ದಿಯೊಂದು ಜನೆವರಿ 13 ನೇ ತಾರೀಕಿನಂದು ಬಯಲಾಗಿದೆ. ಈ ಎರಡೂ ಘಟನೆಗಳು ನಮ್ಮ ದೇಶದ ಪ್ರವಾಸದ್ಯೋಮ ಇಲಾಖೆಗೆ ದೊಡ್ದ ಪೆಟ್ಟನ್ನು ಹಾಕುವದಂತೂ ನಿಜ. ಈಗಾಗಲೇ ನಮ್ಮ ದೇಶಕ್ಕೆ ಹೊರಗಿನಿಂದ ಬರುವವರ ಪ್ರಮಾಣದಲ್ಲಿ ಸುಮಾರು 25 ಪ್ರತಿಶತದಷ್ಟು ಇಳಿಮುಖತೆಯಾಗಿದೆ. ಮಹಿಳೆಯರ ವಿಷಯದಲ್ಲಂತೂ ಆ ಪ್ರಮಾಣ 35 ಪ್ರತಿಶತದಷ್ಟು ಕಡಿಮೆಯಾಗಿದೆ. ಹೀಗೆ ಪ್ರವಾಸ ಮಾಡುವ ಮಹಿಳೆಯರನ್ನು ಹರಿದು ಮುಕ್ಕಲು ಕಾದು ಕುಳಿತಂತಿರುವ ಈ ದುರುಳರಿಂದಾಗಿ ಇಲ್ಲಿಗೆ ಪ್ರವಾಸ ಮಾಡಲು ಬಯಸುವವರ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.

ಭಾರತದಂತಹ ಸಾಂಸ್ಕೃತಿಕ ಶ್ರೀಮಂತಿಕೆಯುಳ್ಳ ನೆಲದಲ್ಲಿ ಪ್ರವಾಸೋದ್ಯಮ ಒಂದು ಅತಿ ಮುಖ್ಯವಾದ ರಾಷ್ಟ್ರೀಯ ಆದಾಯವಾಗಬೇಕು. ವಿದೇಶಗಳಿಂದ ಬರುವವರೇ ಆ ದಿಶೆಯಲ್ಲಿ ಅತಿ ಮುಖ್ಯವಾದ ಆದಾಯ. ಹೀಗೆ ಮತ್ತೆ ಮತ್ತೆ ಇಂಥಾ ಕಹಿ ಘಟನೆಗಳು ಜರುಗಿದರೆ ಅದು ಇಡೀ ವಿಶ್ವದಲ್ಲಿ ಈ ದೇಶದಲ್ಲಿಯ ಪ್ರವಾಸದ ಬಗೆಗಿನ ಅಸುರಕ್ಷಿತತೆಯನ್ನು ಡಂಗುರು ಸಾರಿದಂತಾಗುತ್ತದೆ. ಅವರು ವಿದೇಶಿಯರಿರಲಿ ಇಲ್ಲವೇ ಇದೇ ದೇಶದವರಿರಲಿ ಈ ಬಗೆಯ ಕುಕೃತ್ಯಗಳನ್ನು ಎಸಗುವುದು ಸುತಾರಾಂ ಸರಿಯಲ್ಲ. ಹೀಗೆ ವಿದೇಶಿ ಪ್ರವಾಸಿಗರ ಮೆಲೆ ಲೈಂಗಿಕ ದೌರ್ಜನ್ಯ ಜರುಗಿರುವುದು ಇದೇ ಮೊದಲಂತೂ ಅಲ್ಲ. ಮಾರ್ಚ್ 2006 ರ ಸಂದರ್ಭದಲ್ಲಿ ಬಿಟಿ ಮೊಹಂತಿ ಎಂಬಾತ ಜರ್ಮನ್ ಮೂಲದ ಓರ್ವ ಯುವತಿಯನ್ನು ರಾಜಸ್ಥಾನದಲ್ಲಿ ಅತ್ಯಾಚಾರಗೈದಿದ್ದ. ಮಾರ್ಚ 2013 ರಲ್ಲಿ ಮಧ್ಯಪ್ರದೇಶದಲ್ಲಿ ಸ್ವಿಜ್ಜರಲ್ಯಾಂಡ್ ಮೂಲದ 39 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಜೂನ್ 2013 ರಲ್ಲಿ ಹಿಮಾಚಲ ಪ್ರದೇಶದಲ್ಲಿ ಅಮೇರಿಕೆಯ ಓರ್ವ ಪ್ರವಾಸಿಯನ್ನು cnn-danish-woman-gangrapeಗ್ಯಾಂಗ್‌ರೇಪ್ ಮಾಡಲಾಗಿತ್ತು. 2010 ರಲಿ ಇಬ್ಬರು ಡಚ್ ಮಹಿಳೆಯರನ್ನು, 2011 ರಲ್ಲಿ ಆಸ್ಟ್ರೇಲಿಯನ್ ಮಹಿಳೆಯನ್ನು, 2012 ರಂದು ಓರ್ವ ಡಚ್ ಮಹಿಳೆಯನ್ನು, ಜೂನ್ 2013 ರಲ್ಲಿ ಉಗಾಂಡಾದ ಓರ್ವ ಯುವತಿಯನ್ನು ಅತ್ಯಾಚಾರ ಮಾಡಲಾದ ಬಗ್ಗೆ ವರದಿಯಾಗಿದೆ. [ಹಿಂದುಸ್ಥಾನ ಟೈಮ್ಸ್], ಹಾಗೆಯೇ ಅಗಷ್ಟ 2013 ರಲ್ಲಿ ಜರ್ಮನ್ ಮೂಲದ ಓರ್ವ ಯುವತಿಯನ್ನು ಅತ್ಯಚಾರ ಎಸಗಿರುವದಿದೆ. ಹೀಗೆ ಸರಣಿಯ ರೂಪದಲ್ಲಿ ಜರುಗಿದ ಈ ಅತ್ಯಾಚಾರಕ್ಕೆ ಭಾರತೀಯರಾದ ನಾವೆಲ್ಲರೂ ತಲೆತಗ್ಗಿಸಬೇಕಿದೆ.

ಅದಾಗಲೇ ಜನಾಂಗೀಯ ಬೇಧಗಳ ಹಿನ್ನೆಲೆಯಲ್ಲಿ ಅಲ್ಲಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆಗಳು ನಡದೇ ಇವೆ. ಅಂತಹದರಲ್ಲಿ ಹೀಗೆ ಭಾರತ ಒಂದು ರೇಪಿಸ್ಟಗಳ ನೆಲೆ ಎನ್ನುವ ಹಣೆಪಟ್ಟಿ ಅಂಟಿಕೊಳ್ಳುವ ಮೊದಲೇ ಜಾಗೃತರಾಗಬೇಕಿದೆ. ಅದರಲ್ಲೂ ವಿಶೇಷವಾಗಿ ಈ ವಿದೇಶಿ ಪ್ರವಾಸಿಗರಿಗೆ ಸಂರಕ್ಷಣೆಯನ್ನು ಒದಗಿಸುವಲ್ಲಿ ಭಾರತದ ಪ್ರವಾಸೋದ್ಯಮ ಇಲಾಖೆ ತೀವ್ರವಾದ ಕ್ರಮಗಳನ್ನು ಕೈಗೊಳ್ಳಬೇಕು. ಅತ್ಯಂತ ಪ್ರಮುಖ ಪ್ರವಾಸಿ ತಾಣಗಳನ್ನು ಹೊಂದಿರುವ ಈ ದೇಶಕ್ಕೆ ಭವಿಷ್ಯದಲ್ಲಿ ಯಾವ ಪ್ರವಾಸಿಗರೂ ಬರಲಿಕ್ಕಿಲ್ಲ. ಹಾಗೆಯೇ ವಿದೇಶಿ ಪ್ರವಾಸಿಗರು ಇಲ್ಲಿಗೆ ಬಂದಾಗ ಅವರೊಂದಿಗೆ ಅತ್ಯಂತ ಉಚಿತವಾಗಿ ನಡೆದುಕೊಳ್ಳುವ ಅವಶ್ಯಕತೆ ಇದೆ. ಅವರನ್ನು ಸುಲಿಗೆ ಮಾಡುವ, ಮೋಸ ಮಾಡುವ, ಚುಡಾಯಿಸುವಂಥಾ ಕ್ರಿಯೆಗಳಲ್ಲಿ ತೊಡಗುವುದು ಕೂಡಾ ನಮ್ಮ ದೇಶದ ಜನರ ಬಗ್ಗೆ ಪೂರ್ವಾಗ್ರಹಗಳು ಸೃಷ್ಟಿಯಾಗಲು ಕಾರಣವಾಗುತ್ತದೆ. ಅದಕ್ಕೆ ಅವಕಾಶ ಮಾಡಿಕೊಡಬಾರದು. ಇನ್ನು ಈ ಬಗೆಯ ಅತ್ಯಾಚಾರ ಮತ್ತು ಮೋಸದ ಪ್ರಕರಣಗಳಲ್ಲಿ ಹೆಚ್ಚೆಚ್ಚು ಯುವಕರೇ ತೊಡಗಿಕೊಂಡಿರುವದನ್ನು ಗಮನಿಸಿದರೆ ಭವಿಷ್ಯದ ಭಾರತದ ಬಗ್ಗೆ ಯಾರಿಗಾದರೂ ಹೆದರಿಕೆಯಾಗುತ್ತಿದೆ. ತಪ್ಪು ಸಾಮಾಜೀಕರಣದ ಪರಿಣಾಮವೇ ಇದಕ್ಕೆ ಮುಖ್ಯ ಕಾರಣ. ಈ ದಿಶೆಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಗಂಭೀರವಾಗಿ ಯೋಚಿಸಬೇಕಿದೆ.