ಮೋದಿ ವರ್ಸಸ್ ಕೇಜ್ರಿವಾಲ್ : ಯಾರು ಉತ್ತಮ?

– ಆನಂದ ಪ್ರಸಾದ್

ಬಿಜೆಪಿ ಹಾಗೂ ನರೇಂದ್ರ ಮೋದಿ 2014ರ ಲೋಕಸಭಾ ಚುನಾವಣೆಯಲ್ಲಿ ಕಳೆದ ಹತ್ತು ವರ್ಷಗಳ ಕಾಂಗ್ರೆಸ್ ನೇತೃತ್ವದ ಯುಪಿಎ ಒಕ್ಕೂಟದ ಕೇಂದ್ರ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ದೇಶಾದ್ಯಂತ ಎದ್ದಿರುವ ಆಡಳಿತವಿರೋಧಿ ಅಲೆಯ ಪ್ರಯೋಜನ ಪಡೆದು ಅಧಿಕಾರಕ್ಕೆ ಏರುವ ಹವಣಿಕೆಯಲ್ಲಿರುವಾಗ ಕೊನೆಯ ಕ್ಷಣದಲ್ಲಿ ಅದಕ್ಕೆ ಬಲವಾದ ಪ್ರತಿರೋಧದ ಶಕ್ತಿಯೊಂದು ಆಮ್ ಆದ್ಮಿ ಪಕ್ಷದ ರೂಪದಲ್ಲಿ ಎದುರಾಗಿರುವುದು ಪ್ರಜಾಪ್ರಭುತ್ವದ ಉಳಿವಿನ AAP Launchದೃಷ್ಟಿಯಿಂದ ಬಹಳ ಒಳ್ಳೆಯ ಬೆಳವಣಿಗೆಯಾಗಿದೆ. ಆಮ್ ಆದ್ಮಿ ಪಕ್ಷ ಮುಂದಿನ ಲೋಕಸಭಾ ಚುನಾವಣೆಗಳಲ್ಲಿ ಎಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂಬುದು ಮುಖ್ಯವಲ್ಲ. ಕಾಂಗ್ರೆಸ್ ನೇತೃತ್ವದ ಯುಪಿಎ ಒಕ್ಕೂಟವು ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ತಡೆಯಲು ಸಮರ್ಥವಾಗಿಲ್ಲದ ಹಾಗೂ ಎಡಪಕ್ಷಗಳೂ ಸದ್ಯದ ಪರಿಸ್ಥಿತಿಯಲ್ಲಿ ನರೇಂದ್ರ ಮೋದಿಯ ನಾಯಕತ್ವದಲ್ಲಿ ಫ್ಯಾಸಿಸಂ ದೇಶದಲ್ಲಿ ಬೆಳೆಯುತ್ತಿರುವುದನ್ನು ತಡೆಯುವಲ್ಲಿ ಅಸಮರ್ಥವಾಗಿರುವ ಹೊತ್ತಿನಲ್ಲಿ ಆಮ್ ಆದ್ಮಿ ಪಕ್ಷವು ಅಂಥ ಫ್ಯಾಸಿಸಂ ದೇಶದಲ್ಲಿ ಬೆಳೆಯುವುದನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವ ಎಲ್ಲ ಲಕ್ಷಣಗಳೂ ದಟ್ಟವಾಗುತ್ತಿವೆ. ಹೀಗಾಗಿ ಆಮ್ ಆದ್ಮಿ ಪಕ್ಷದ ಬೆಳವಣಿಗೆ ದೇಶದ ಪ್ರಜಾಪ್ರಭುತ್ವದ ಬೆಳವಣಿಗೆಗೆ ಹಾಗೂ ಉಳಿವಿಗೆ ಮುಖ್ಯವಾಗಿ ಕಂಡುಬರುತ್ತದೆ.

ಬಿಜೆಪಿಯು ದೇಶಾದ್ಯಂತ ಕ್ಷಿಪ್ರವಾಗಿ ಬೆಳೆಯಲು ಜನಸಾಮಾನ್ಯರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಹಾದಿಯನ್ನು ಅಳವಡಿಸಿಕೊಂಡಿತು. ಇದರ ಅಂಗವಾಗಿ ಅಡ್ವಾಣಿಯ ರಥಯಾತ್ರೆ ದೇಶಾದ್ಯಂತ ಧಾರ್ಮಿಕ ನೆಲೆಯಲ್ಲಿ ಜನರನ್ನು ವಿಭಜಿಸಲು ಕಾರಣವಾಯಿತು. ಮುಂದೆ ರಾಮ ಮಂದಿರದ ನೆಪದಲ್ಲಿ ಜನರನ್ನು ದೇಶಾದ್ಯಂತ ಅಯೋಧ್ಯೆಗೆ ಕರಸೇವೆಯ ಹೆಸರಿನಲ್ಲಿ ಕರೆದುಕೊಂಡು ಹೋಗಿ ಬಾಬ್ರಿ ಮಸೀದಿಯನ್ನು ಜನರೇ ಕಾನೂನನ್ನು ಕೈಗೆತ್ತಿಕೊಂಡು ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಇದರಿಂದಾಗಿ ದೇಶದಲ್ಲಿ ಉಂಟಾದ ಕೋಮುಗಲಭೆಗಳಲ್ಲಿ Advani-Rath-Yatraಸುಮಾರು 20,000 ಕೋಟಿ ರೂಪಾಯಿಗಳಷ್ಟು ಹಾನಿಯಾಯಿತು ಎಂದು ಅಂದಾಜಿಸಲಾಗಿದೆ ಮಾತ್ರವಲ್ಲ ಹಿಂದೂ, ಮುಸ್ಲಿಂ ಎರಡೂ ಧರ್ಮಗಳ ನೂರಾರು ಅಮಾಯಕ ಜನರು ಗಲಭೆಗಳಲ್ಲಿ ಪ್ರಾಣ ಕಳೆದುಕೊಂಡರು. ರಾಜಕೀಯಕ್ಕಾಗಿ ಇದನ್ನೆಲ್ಲಾ ಮಾಡುವಾಗ ಬಿಜೆಪಿಯ ಯಾರಿಗೂ ಇದು ಕಾನೂನನ್ನು ಕೈಗೆತ್ತಿಕೊಳ್ಳುವ ಕೃತ್ಯ ಎನಿಸಲಿಲ್ಲ. ಇದಕ್ಕೆ ಹೋಲಿಸಿದರೆ ಆಮ್ ಆದ್ಮಿ ಪಕ್ಷವು ಭ್ರಷ್ಟಾಚಾರದಂಥ ಜನರ ಸಮಸ್ಯೆಗಳನ್ನು ಎತ್ತಿಕೊಂಡು ಶಾಂತಿಯುತ ಹೋರಾಟಗಳ ಮೂಲಕವೇ ಬೆಳೆಯುತ್ತಿದೆ. ಆಮ್ ಆದ್ಮಿ ಪಕ್ಷವು ತನ್ನ ಬೆಳವಣಿಗೆಯ ಹಾದಿಯಲ್ಲಿ ಜನರನ್ನು ಬಿಜೆಪಿಯಂತೆ ತನ್ನ ದೇಶವ್ಯಾಪಿ ಬೆಳವಣಿಗೆಗಾಗಿ ಬಲಿ ಕೊಟ್ಟಿಲ್ಲ. ಹೀಗಾಗಿ ಆಮ್ ಆದ್ಮಿ ಪಕ್ಷವು ಬಿಜೆಪಿಗಿಂಥ ಎಷ್ಟೋ ಪಟ್ಟು ಉತ್ತಮ ಎಂದು ಕಂಡುಬರುತ್ತದೆ. ದೆಹಲಿಯಲ್ಲಿ ಇದೀಗ ಆಮ್ ಆದ್ಮಿ ಪಕ್ಷದ ಮುಖ್ಯ ಮಂತ್ರಿ ದೆಹಲಿ ಪೋಲೀಸರ ನಿಷ್ಕ್ರಿಯತೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೇಡಿಕೆ ಇರಿಸಿ ಧರಣಿ ಕೈಗೊಂಡು ಅರಾಜಕತೆ ಉಂಟು ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದುವರೆಗೆ ಯಾವ ಮುಖ್ಯಮಂತ್ರಿಯೂ ತೋರಿಸದೆ ಇರುವ ಧೈರ್ಯವನ್ನು ಕೇಂದ್ರ ಸರಕಾರದ ವಿರುದ್ಧ ಕೇಜ್ರಿವಾಲ್ ತೋರಿಸುತ್ತಿದ್ದು ಇದು ಪ್ರಜಾಪ್ರಭುತ್ವದ ಬೆಳವಣಿಗೆಗೆ ಕೈಗೊಳ್ಳುತ್ತಿರುವ ಬಹಳ ಉತ್ತಮ ಹೋರಾಟವಾಗಿದೆ. ದೆಹಲಿಯಲ್ಲಿ ಉಂಟಾಗುವ ಅತ್ಯಾಚಾರ, ಅನಾಚಾರಗಳಿಗೆ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ದೂರುವುದರಲ್ಲಿ ಹುರುಳಿಲ್ಲ ಏಕೆಂದರೆ ಅಲ್ಲಿನ ಪೊಲೀಸರು ದೆಹಲಿ ರಾಜ್ಯ ಸರ್ಕಾರದ ಕೈಕೆಳಗೆ ಬರುತ್ತಿಲ್ಲ ಮಾತ್ರವಲ್ಲ ಅವರು ದೆಹಲಿ ಸರ್ಕಾರದ ಮಾತನ್ನು ಕೇಳುತ್ತಿಲ್ಲ. ಅವರ ನಿಯಂತ್ರಣ ಕೇಂದ್ರ ಸರ್ಕಾರವು ತನ್ನ ಬಳಿಯೇ ಇರಿಸಿಕೊಂಡಿರುವ ಕಾರಣ ದೆಹಲಿಯಲ್ಲಿ ನಡೆಯುತ್ತಿರುವ ಅತ್ಯಾಚಾರಗಳಿಗೆ ಕೇಂದ್ರ ಸರ್ಕಾರವೇ ಹೊಣೆಯಾಗುತ್ತದೆ. ಆದರೆ ಅದನ್ನು ಅರಿಯದೆ ಜನ ಇದುವರೆಗೆ ಆಮ್ ಆದ್ಮಿ ಪಕ್ಷದ ನೂತನ ಸರ್ಕಾರವನ್ನು ದೂರುವ ಪ್ರವೃತ್ತಿ ಕಂಡುಬರುತ್ತಿತ್ತು. ಇದೀಗ ಕೇಜ್ರಿವಾಲ್ ಕೈಗೊಂಡಿರುವ ಧರಣಿಯಿಂದ ಇದು ದೇಶಾದ್ಯಂತ ಮಾಧ್ಯಮಗಳ ಗಮನ ಸೆಳೆದು ಇದರ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲೆ ಬೀಳುವಂತೆ ಆಗಿದ್ದು ಇದು ಆಮ್ ಆದ್ಮಿ ಪಕ್ಷದ ದೇಶವ್ಯಾಪಿ ಬೆಳವಣಿಗೆಗೆ ಸಹಾಯಕವಾಗಲಿದೆ. ಒಬ್ಬ ನಾಯಕನಲ್ಲಿ ಇರಬೇಕಾದ ಈ ರೀತಿಯ ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ಕ್ರಮ ತೆಗೆದುಕೊಳ್ಳುವ ದೃಢತೆ ಆಮ್ ಆದ್ಮಿ ಪಕ್ಷವನ್ನು ಇತರ ಪಕ್ಷಗಳಿಗಿಂತ ಭಿನ್ನವಾಗಿ ಮಾಡುತ್ತದೆ. ಈವರೆಗೆ ಯಾವ ಮುಖ್ಯಮಂತ್ರಿಯೂ ಈ ರೀತಿ ಬೀದಿಯಲ್ಲಿ ಜನರ ಹಕ್ಕಿಗಾಗಿ, ಸುರಕ್ಷತೆಗಾಗಿ ಆಗ್ರಹಿಸಿ ರಾತ್ರಿ ಕಳೆದ ಉದಾಹರಣೆ ಇಲ್ಲ. ಹೀಗಾಗಿ ಕೇಜ್ರಿವಾಲ್ ವ್ಯವಸ್ಥೆ ಪರಿವರ್ತನೆಗಾಗಿ ಈ ರೀತಿ ಕೈಗೊಳ್ಳುವ ಹೋರಾಟ ಅರಾಜಕತೆ ಎನಿಸಿದರೂ ದೂರಗಾಮಿ ಪರಿಣಾಮ ಬೀರಲಿದೆ ಮಾತ್ರವಲ್ಲ ಇದರಿಂದ ಪಕ್ಷವು ಜನರಿಗೆ ಇನ್ನಷ್ಟು ಹತ್ತಿರವಾಗಲಿದೆ.

ಮೋದಿ ಭ್ರಷ್ಟಾಚಾರದ ಬಗ್ಗೆ ಬಹಳ ಮಾತಾಡಿದರೂ ಯಡಿಯೂರಪ್ಪನವರಂಥ ಭ್ರಷ್ಟಾಚಾರದ ಆಪಾದನೆ ಹೊತ್ತಿರುವ ವ್ಯಕ್ತಿಗಳನ್ನು yeddy-reddyಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ. ಯಡಿಯೂರಪ್ಪ ಆಪರೇಶನ್ ಕಮಲ ಎಂಬ ಅನೈತಿಕ ರಾಜಕಾರಣ ಮಾಡಿದ ಇತಿಹಾಸ ಹಾಗೂ ರೆಡ್ಡಿ ಸಹೋದರರ ಅಕ್ರಮ ಗಣಿಗಾರಿಕೆಯನ್ನು ತಡೆಯಲು ಯಾವ ಕ್ರಮವನ್ನೂ ಕೈಗೊಳ್ಳದ ಚರಿತ್ರೆ ಹೊಂದಿದ್ದಾರೆ. ಜನಾರ್ಧನ ರೆಡ್ಡಿಯನ್ನು ಗಣಿ ಅಕ್ರಮಗಳಿಗಾಗಿ ಜೈಲಿಗೆ ಕಳುಹಿಸಲು ಕಾರಣವಾದದ್ದು ಎಸ್. ಆರ್. ಹಿರೇಮಠ ಅವರ ನ್ಯಾಯಾಂಗ ಹೋರಾಟವೇ ವಿನಃ ಯಡಿಯೂರಪ್ಪನವರು ಗಣಿ ಅಕ್ರಮದ ವಿರುದ್ಧ ಕ್ರಮ ಕೈಗೊಂಡು ಅವರು ಜೈಲಿಗೆ ಹೋದದ್ದು ಅಲ್ಲ. ಯಡಿಯೂರಪ್ಪ ಮಾಧ್ಯಮಗಳನ್ನು ಕೂಡ ತನ್ನ ಪರವಾಗಿ ಭ್ರಷ್ಟಗೊಳಿಸಿದ ಆಪಾನೆಗಳಿವೆ. ಹೀಗಿದ್ದರೂ ಇಂಥವರನ್ನು ಮೋದಿ ಸಮರ್ಥಿಸಿಕೊಳ್ಳುವುದು ಹಾಗೂ ಪಕ್ಷಕ್ಕೆ ಮತ್ತೆ ಸೇರಿಸಿಕೊಳ್ಳುವುದು ದೇಶಕ್ಕೆ ಕೊಡುವ ಸಂದೇಶ ಏನು? ಮೋದಿ ವೈಯಕ್ತಿಕವಾಗಿ ಭ್ರಷ್ಟನಲ್ಲದಿರಬಹುದು ಆದರೆ ಅವರ ಗುಜರಾತಿನ ಕೆಲವು ಮಂತ್ರಿಗಳ ಮೇಲೇ ಭ್ರಷ್ಟಾಚಾರದ ಆರೋಪಗಳು ಇವೆ. ರಾಜ್ಯದಲ್ಲಿ ಸಶಕ್ತ ಲೋಕಾಯುಕ್ತ ವ್ಯವಸ್ಥೆ ಇಲ್ಲದಿರುವ ಕಾರಣ ಇವೆಲ್ಲ ಬೆಳಕಿಗೆ ಬಂದಿಲ್ಲ. ಇರುವ ಲೋಕಾಯುಕ್ತ ವ್ಯವಸ್ಥೆಯನ್ನೂ ಮೋದಿ ಮತ್ತಷ್ಟು ದುರ್ಬಲಗೊಳಿಸಿ ಅದನ್ನು ಸರ್ಕಾರದ ಕೈಗೊಂಬೆಯನ್ನಾಗಿ ಪರಿವರ್ತಿಸಿದ್ದಾರೆ. ಇಂಥವರಿಂದ ಭ್ರಷ್ಟಾಚಾರಮುಕ್ತ ಆಡಳಿತ ನೀಡುವುದು ಹೇಗೆ ಸಾಧ್ಯ? ಮೋದಿ ಒಬ್ಬ ಪ್ರಾಮಾಣಿಕವಾಗಿದ್ದರೆ ಸಾಕೇ? ಹಾಗೆ ನೋಡಿದರೆ ಮನಮೋಹನ್ ಸಿಂಗ್ ವೈಯಕ್ತಿಕವಾಗಿ ಅತ್ಯಂತ ಪ್ರಾಮಾಣಿಕ ವ್ಯಕ್ತಿ. ಅವರು ಪ್ರಾಮಾಣಿಕರಾಗಿದ್ದರೂ ಅವರ ಸಂಪುಟದ ಸಚಿವರು ಭ್ರಷ್ಟಾಚಾರ ಮಾಡುವುದನ್ನು ನೋಡಿಯೂ ಅದನ್ನು ತಡೆಯದೆ ಇರುವ ಆಪಾದನೆಯನ್ನು ಅವರ ಮೇಲೆ ಹೊರಿಸಲಾಗುತ್ತಿದೆ. ಇದೇ ಪರಿಸ್ಥಿತಿ ಮೋದಿ ಪ್ರಧಾನಿಯಾದರೂ ಮುಂದುವರಿಯಲಿದೆ ಎಂಬುದರ ಮುನ್ಸೂಚನೆಯಾಗಿ ಮೋದಿ ಯಡಿಯೂರಪ್ಪನವರನ್ನು ವಾಪಸ್ ಪಕ್ಷಕ್ಕೆ ಕರೆದುಕೊಂಡಿದ್ದರಲ್ಲಿಯೇ ಕಂಡುಬರುತ್ತದೆ. ಅದೇ ರೀತಿ ಭ್ರಷ್ಟಾಚಾರದ ಆಪಾದನೆ ಹೊಂದಿರುವ ನಿತಿನ್ ಗಡ್ಕರಿ, ಅನಂತ್ ಕುಮಾರ್, ಗಣಿಕಳ್ಳ ರೆಡ್ಡಿಗಳಿಂದ ಹಣ ಪಡೆದ ಆಪಾದನೆ ಹೊಂದಿರುವ ಸುಷ್ಮಾ ಸ್ವರಾಜ್ ಮೊದಲಾದವರು ಪಕ್ಷದ ಪ್ರಮುಖ ಹುದ್ದೆಗಳಲ್ಲಿ ಇದ್ದಾರೆ. ಇಂಥ ವ್ಯಕ್ತಿಗಳನ್ನು ಇಟ್ಟುಕೊಂಡು ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇನೆ ಎಂದರೆ ಅದನ್ನು ನಂಬಲು ಸಾಧ್ಯವೇ? ಭ್ರಷ್ಟಾಚಾರದ ಬಗ್ಗೆ ಬಹಳ ದೊಡ್ಡ ಬೊಬ್ಬೆ ಹಾಕುತ್ತಿರುವ ಬಿಜೆಪಿ ತನ್ನ ವೆಬ್‌ಸೈಟಿನಲ್ಲಿ ಪಕ್ಷಕ್ಕೆ ದೇಣಿಗೆ ನೀಡಿದವರ ವಿವರಗಳನ್ನು ಪಾರದರ್ಶಕವಾಗಿ ಎಲ್ಲರಿಗೂ ಗೊತ್ತಾಗುವಂತೆ ಹಾಕುವ ಧೈರ್ಯವನ್ನು ತೋರಿಸುತ್ತಿಲ್ಲ. ಹೀಗಾಗಿ ಅದರ ಭ್ರಷ್ಟಾಚಾರದ ವಿರುದ್ಧ ಹೋರಾಟವೆಂಬುದು ಕೇವಲ ಬಾಯ್ಮಾತಿಗೆ ಸೀಮಿತವಾಗಿರುವಂತೆ ಕಂಡುಬರುತ್ತದೆ. ಆದರೆ ಆಮ್ ಆದ್ಮಿ ಪಕ್ಷವಾದರೋ ತನಗೆ ದೇಣಿಗೆ ನೀಡಿದವರ ಪಟ್ಟಿಯನ್ನು ಆ ಕ್ಷಣವೇ ತನ್ನ ವೆಬ್‌ಸೈಟಿನಲ್ಲಿ ತೋರಿಸುವ ವ್ಯವಸ್ಥೆ ಮಾಡಿ ಸಂಪೂರ್ಣ ಪಾರದರ್ಶಕತೆಯನ್ನು ಮೆರೆದಿದೆ. ಹೀಗಾಗಿ ಬಿಜೆಪಿಗಿಂತ ಆಮ್ ಆದ್ಮಿ ಪಕ್ಷವು ಎಷ್ಟೋ ಉತ್ತಮ ಎಂದು ಹೇಳಬಹುದಾಗಿದೆ. ಬಿಜೆಪಿ ಪಕ್ಷದ ಅತ್ಯಂತ ದುಬಾರಿಯಾದ ಸಾರ್ವಜನಿಕ ರ್ಯಾಲಿಗಳಿಗೆ ನೀರಿನಂತೆ ಹಣ ಚೆಲ್ಲಲು ಯಾರು ದೇಣಿಗೆ ಯಾಕಾಗಿ ಕೊಡುತ್ತಿದ್ದಾರೆ ಎಂಬುದು ಜನಸಾಮಾನ್ಯರಿಗೆ ತಿಳಿಯುತ್ತಿಲ್ಲ. ಈ ಹಣದ ಮೂಲ ತಿಳಿದರೆ ಬಿಜೆಪಿಯ ಪಾರದರ್ಶಕ ಆಡಳಿತದ ನೀಡುವ ಭರವಸೆ ಎಷ್ಟು ಪೊಳ್ಳು ಎಂಬುದು ಜನರಿಗೆ ಗೊತ್ತಾಗಲಿದೆ.

ಬಿಜೆಪಿಯ ನೇತೃತ್ವದ ಆಡಳಿತ ಬಂದರೆ ಶಿಕ್ಷಣ ಕ್ಷೇತ್ರದಲ್ಲಿ ವಿಪರೀತ ಕೇಸರೀಕರಣ ಜಾರಿಗೆ ಬರುತ್ತದೆ. ಸಂಘ ಪರಿವಾರದ ಎಲ್ಲ ಸಂಘಟನೆಗಳೂ ಪರ್ಯಾಯ ಆಡಳಿತ ಕೇಂದ್ರಗಳಾಗಿ ಕಾರ್ಯ ನಿರ್ವಹಿಸಲಾರಂಭಿಸುತ್ತವೆ. ಕಾಂಗ್ರೆಸ್ಸಿಗೆ ನೆಹರೂ ಕುಟುಂಬದ narender_modi_rssಯಜಮಾನಿಕೆಯಾದರೆ ಬಿಜೆಪಿಗೆ ಸಂಘ ಪರಿವಾರದ ಯಜಮಾನಿಕೆ ಕಂಡುಬರುತ್ತದೆ. ಸಂಘ ಪರಿವಾರವು ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸದೆಯೇ ಪರೋಕ್ಷ ಆಡಳಿತ ಚಲಾಯಿಸಲು ಆರಂಭಿಸುತ್ತದೆ. ಹೀಗಾಗಿ ಬಿಜೆಪಿಯ ಆಡಳಿತ ಬಂದರೆ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲವಾಗುತ್ತದೆ, ಪುರೋಹಿತಶಾಹಿ ವ್ಯವಸ್ಥೆಗೆ ಹೆಚ್ಚಿನ ಉತ್ತೇಜನ ದೊರೆಯುತ್ತದೆ. ಬಿಜೆಪಿಗೆ ಕುರುಡಾಗಿ ಮತ ಚಲಾಯಿಸುವ ಮುನ್ನ ಇದನ್ನು ನಾವು ಯೋಚಿಸಬೇಕಾಗುತ್ತದೆ. ಆಮ್ ಆದ್ಮಿ ಪಕ್ಷದಲ್ಲಿ ಈ ರೀತಿ ಹೈಕಮಾಂಡ್ ಆಡಳಿತ ವ್ಯವಸ್ಥೆ ಇಲ್ಲ. ಹೀಗಾಗಿಯೂ ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ. ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಶಾಂತಿಯುತವಾಗಿ ಧರಣಿ ಸತ್ಯಾಗ್ರಹ ಕೈಗೊಂಡರೂ ಅದನ್ನು ಅರಾಜಕತೆ ಹಬ್ಬಿಸುತ್ತಾರೆ ಎಂದು ಹೇಳುವುದು ಸಮಂಜಸವಾಗಿ ಕಾಣುವುದಿಲ್ಲ. ನಕ್ಸಲರಂತೆ ಕೇಜ್ರಿವಾಲ್ ಬಂದೂಕು ಹಿಡಿದಿದ್ದಾರೆಯೇ ಅಥವಾ ಜನರನ್ನು ಕಾನೂನನ್ನು ಕೈಗೆತ್ತಿಕೊಂಡು ಹಿಂಸಾಚಾರಕ್ಕೆ ಇಳಿಯಲು ಕರೆ ನೀಡಿದ್ದಾರೆಯೇ ಎಂದರೆ ಅಂಥ ಯಾವುದೇ ಕೃತ್ಯ ಅವರು ಮಾಡಿಲ್ಲ. ಹೀಗಿದ್ದರೂ ಅವರು ದೇಶದಲ್ಲಿ ಅರಾಜಕತೆ ಹಬ್ಬಿಸುತ್ತಿದ್ದಾರೆ ಎಂದು ಮುಖ್ಯ ವಾಹಿನಿಯ ಮಾಧ್ಯಮಗಳು ಹೇಳುತ್ತಿರುವುದು ಸೂಕ್ತವಾದದ್ದಲ್ಲ. ಜಡ್ಡುಗಟ್ಟಿದ ವ್ಯವಸ್ಥೆಯ ಸುಧಾರಣೆಗೆ ಇಂಥ ಹೋರಾಟಗಳೂ ಅಗತ್ಯ. ಇದು ಜಡ್ಡು ಗಟ್ಟಿರುವ ವ್ಯವಸ್ಥೆಯಲ್ಲಿ ಸಂಚಲನ ತರಲು ಸಹಾಯವಾಗಲಿದೆ. ಹೀಗಾಗಿ ಆಮ್ ಆದ್ಮಿ ಪಕ್ಷದ ಈ ವಿಭಿನ್ನ ಹೋರಾಟ ಸ್ವಾಗತಾರ್ಹ ಬೆಳವಣಿಗೆ ಎಂದೇ ಹೇಳಬೇಕಾಗುತ್ತದೆ.

9 thoughts on “ಮೋದಿ ವರ್ಸಸ್ ಕೇಜ್ರಿವಾಲ್ : ಯಾರು ಉತ್ತಮ?

  1. bhatmahesht

    ಕಾಂಗ್ರೆಸ್ ಆಡಳಿತವಿದ್ದರೆ ಪುರೋಹಿತಶಾಹಿಗಳಿಗೆ ತಮ್ಮ ಕೆಲಸ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಲು ಯಾವುದೇ ತೊಂದರೆ ಇರುವದಿಲ್ಲ. ಕಾಂಗ್ರೆಸ್ ಆಡಳಿತವಿದ್ದರೆ ಮುಂದಿನ ವರ್ಷ ಖಂಡಿತವಾಗಿ ಮಡೆಸ್ನಾನ ಮುಂದುವರಿಯುತ್ತದೆ ಆದರೆ ಆ ಕುರಿತು ಯಾವುದೇ ಯಾವುದೇ ವಿವಾದವಿರದಿರುವ ಸಾಧ್ಯತೆಗಳು ತುಂಬಾ ಹೆಚ್ಚಾಗಿರುತ್ತವೆ.

    Reply
  2. Naveen

    You want or not, there will be Congress govt in Karnataka for next four years in Karnataka.. Yes there will not be much resistance because this congress govt n its chief minister is darling of Karnataka media…

    Reply
  3. Ananda Prasad

    ಅರವಿಂದ್ ಕೇಜ್ರಿವಾಲ್ ಅವರಿಗೆ ಆಡಳಿತದ ಅನುಭವ ಇಲ್ಲ, ಹೀಗಾಗಿ ಅವರಿಂದ ಉತ್ತಮ ಆಡಳಿತ ಸಾಧ್ಯವಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಅವರ ಕಳೆದ ಇಪ್ಪತ್ತು ದಿನಗಳ ಆಡಳಿತ ನೋಡಿದರೆ ಮತ್ತು ಕೈಗೊಳ್ಳುತ್ತಿರುವ ಕ್ರಮಗಳನ್ನು ನೋಡಿದರೆ ಇಂಥ ಅನುಮಾನ ಸಮರ್ಪಕವಲ್ಲ ಎಂದು ತೋರುತ್ತದೆ. ಇದುವರೆಗೆ ಆಡಳಿತಕ್ಕೆ ಬಂದ ಕೆಲ ದಿನಗಳಲ್ಲೇ ಯಾವ ಮುಖ್ಯಮಂತ್ರಿಯೂ ಇಷ್ಟು ವೇಗವಾಗಿ ಕೆಲಸ ಮಾಡಿದ ಉದಾಹರಣೆ ಇಲ್ಲ. ಹಾಗೆ ನೋಡಿದರೆ ನರೇಂದ್ರ ಮೋದಿ ಮುಖ್ಯಮಂತ್ರಿಯಾಗುವ ಮೊದಲು ಅವರಿಗೂ ಆಡಳಿತದ ಅನುಭವ ಇರಲಿಲ್ಲ. ಮುಖ್ಯಮಂತ್ರಿಯಾಗುವ ಮೊದಲು ಅವರು ಮಂತ್ರಿಯಾಗಿ ಕೂಡ ಕೆಲಸ ಮಾಡಿದ ಅನುಭವ ಹೊಂದಿರಲಿಲ್ಲ, ಕೇವಲ ಪಕ್ಷ ಹಾಗೂ ಸಂಘ ಪರಿವಾರದ ಸಂಘಟನೆಯಲ್ಲಿ ತೊಡಗಿದ ಅನುಭವವಿತ್ತಷ್ಟೆ. ಅವರೇನೂ ಹೊಸದಾಗಿ ಪಕ್ಷವನ್ನು ಕಟ್ಟಿದವರಲ್ಲ. ಕೇಜ್ರಿವಾಲ್ ಆದರೋ ಹೊಸದಾಗಿ ಪಕ್ಷವನ್ನು ಕಟ್ಟಿ ಅದನ್ನು ಅಧಿಕಾರದೆಡೆಗೆ ಮುನ್ನಡೆಸಿದ ಅನುಭವ ಹೊಂದಿದ್ದಾರೆ. ವ್ಯಕ್ತಿಯಲ್ಲಿ ಸಂದರ್ಭಕ್ಕೆ ತಕ್ಕನಾದ ವಿವೇಕಯುತವಾದ ಹಾಗೂ ದೃಢ ವಾದ ನಿರ್ಧಾರ ಕೈಗೊಳ್ಳುವ ಚಿಂತನಶಕ್ತಿ ಇದ್ದರೆ ಆತ ಉತ್ತಮ ಆಡಳಿತ ನೀಡಬಲ್ಲ. ಅದು ಕೇಜ್ರಿವಾಲರಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಇಂಥ ಚಿಂತನಾಶಕ್ತಿ ಹಾಗೂ ಸಂದರ್ಭಕ್ಕೆ ತಕ್ಕನಾಗಿ ವಿವೇಕಯುತವಾದ ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯ ಎಲ್ಲರಲ್ಲೂ ಇರುವುದಿಲ್ಲ ಮತ್ತು ಅದು ತರಬೇತಿಯಿಂದ ಬರುವುದಿಲ್ಲ. ಇದು ವ್ಯಕ್ತಿಯ ವಂಶವಾಹಿಗಳನ್ನು ಹೊಂದಿಕೊಂಡು ನಿರ್ಧಾರವಾಗುತ್ತದೆ. ಒಬ್ಬ ವಿಜ್ಞಾನಿಯನ್ನು ಯಾವ ರೀತಿ ತರಬೇತಿಯಿಂದ ರೂಪಿಸಲಾಗುವುದಿಲ್ಲವೋ ಅದೇ ರೀತಿ ಒಳ್ಳೆಯ ನಾಯಕರನ್ನೂ ತರಬೇತಿಯಿಂದ ರೂಪಿಸಲಾಗುವುದಿಲ್ಲ. ಯಾರಲ್ಲಿ ಅಂಥ ಲಕ್ಷಣಗಳಿವೆಯೋ ಅಂಥವರನ್ನು ಸಮಾಜ ಬೆಳೆಸಬೇಕು. ಅದರಿಂದ ದೇಶಕ್ಕೆ ಒಳಿತಾಗಲಿದೆ.

    Reply
    1. ಜೆ.ವಿ.ಕಾರ್ಲೊ, ಹಾಸನ

      ಆಡಳಿತ ಎಂಬುದು ಹೀಗೇ ಇರಬೇಕು ಎಂದು ದಶಕಗಳಿಂದ ನಮ್ಮ ತಲೆಗೆ ತುಂಬಿಸಿರುವಾಗ ಕೇಜ್ರಿವಾಲ್ ‘ಕ್ರೇಜಿ’ವಾಲ್ ನಂತೆ ಕಾಣಿಸಿದರೆ ಖಂಡಿತಾ ಆಶ್ಚರ್ಯವಿಲ್ಲ. ಕನಿಷ್ಠ ಐದು ವರ್ಷಗಳಾದರೂ ಆಮ್ ಆದ್ಮಿ ಪಕ್ಷ ವಿಪಕ್ಷದಲ್ಲಿ ಬೇಯಬೇಕಿತ್ತೆಂದು ನನಗೂ ಅನ್ನಿಸಿದುಂಟು!

      Reply
  4. Ananda Prasad

    ಯಾರು ಯಥಾಸ್ಥಿತಿಯನ್ನು ವಿರೊಧಿಸುತ್ತಾರೋ ಅವರೆಲ್ಲ ಪಟ್ಟಭದ್ರರಿಗೆ ಅರಾಜಕತೆ ಹಬ್ಬಿಸುವವರಂತೆ ಕಂಡುಬರುತ್ತಾರೆ. ಬ್ರಿಟಿಷರಿಗೆ ಮಹಾತ್ಮ ಗಾಂಧಿಯವರು ಅರಾಜಕತೆ ಹಬ್ಬಿಸುವವರಂತೆ ಕಂಡುಬರುತ್ತಿದ್ದರು ಏಕೆಂದರೆ ಅವರು ಬ್ರಿಟಿಷರ ಹಂಗಿನಿಂದ ಹೊರಬಂದು ಸ್ವಾತಂತ್ರ್ಯ ಪಡೆಯಲು ಹೋರಾಡುತ್ತಿದ್ದರು. ಮಹಾತ್ಮಾ ಗಾಂಧಿಯವರು ಬ್ರಿಟಿಷರಿಗೆ ಮಾತ್ರವಲ್ಲದೆ ಭಾರತದಲ್ಲಿ ಪಟ್ಟಭದ್ರರಾಗಿದ್ದ ಜಮೀನ್ದಾರರಿಗೂ ಅರಾಜಕತೆ ಹಬ್ಬಿಸುವವರಂತೆ ತೋರುತ್ತಿದ್ದರು. ಅದೇ ರೀತಿ ಈಗ ಅರವಿಂದ ಕೇಜ್ರಿವಾಲ್ ಪಟ್ಟಭದ್ರ ರಾಜಕೀಯ ಪಕ್ಷಗಳಿಗೆ ಹಾಗೂ ಅವರ ಬಾಲಂಗೋಚಿ ಮಾಧ್ಯಮಗಳಿಗೆ ಕೂಡ ಒಬ್ಬ ಅರಾಜಕತೆ ಹಬ್ಬಿಸುವ ವ್ಯಕ್ತಿಯಂತೆ ಕಂಡುಬರುತ್ತಿದ್ದಾರೆ ಏಕೆಂದರೆ ಅವರು ವ್ಯವಸ್ಥೆಯ ಯಥಾಸ್ಥಿತಿಯನ್ನು ಪ್ರಶ್ನಿಸುತ್ತಿದ್ದಾರೆ ಹಾಗೂ ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ.

    Reply
  5. Srini

    AAP has already shown how stupid they can be. Forget India, they aren’t even fit to rule Delhi. They better be activists, not politicians. His team is full of racists and thugs who are eager to take law into their hands. Haven’t we seen enough drama in last 2 days? I regret donating my hard earned 5000 when this movement started.

    My vote for 2014 goes to Modi.

    Reply
  6. Ananda Prasad

    ‘ಥಗ್ಸ್’ ಎಂದರೆ ದರೋಡೆಕೋರರು ಹಾಗೂ ತಾವು ದರೋಡೆಗೈದವರನ್ನು ಉಸಿರುಗಟ್ಟಿಸಿ ಕೊಲ್ಲುವವರು ಎಂದು ಅರ್ಥ. ಇಂಥ ಪಾತಕಿಗಳು ಯಾರೂ ಆಮ್ ಆದ್ಮಿ ಪಕ್ಷದಲ್ಲಿ ಇರುವಂತೆ ಕಂಡುಬರುವುದಿಲ್ಲ. ಆದರೆ ಮೋದಿಯ ಮಂತ್ರಿ ಮಂಡಲದಲ್ಲಿ ಇದ್ದ ಮಾಯಾ ಕೊಡ್ನಾನಿ ಎಂಬ ಮಂತ್ರಿ ೯೫ ಜನರ ಕೊಲೆಗೆ ಕಾರಣವಾದ ನರೋಡ ಪಾಟಿಯಾ ಹತ್ಯಾಕಾಂಡದ ನೇತೃತ್ವ ವಹಿಸಿದ್ದರು ಹಾಗೂ ಇದು ಕೋರ್ಟಿನಲ್ಲಿ ಸಾಬೀತಾಗಿ ೨೮ ವರ್ಷಗಳ ಜೈಲು ಶಿಕ್ಷೆಯೂ ಆಗಿದೆ. ವಿಪರ್ಯಾಸ ಎಂದರೆ ಇವರು ಇಷ್ಟು ದೊಡ್ಡ ತಪ್ಪು ಮಾಡಿದ್ದರೂ ಇವರು ಮೋದಿಯ ಮಂತ್ರಿಮಂಡಲದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದರು. ಸ್ವಚ್ಛ ಇಮೇಜ್ ಹೊಂದಿದ್ದಾರೆ ಎಂದು ಹೇಳಲಾಗುವ ಮೋದಿಯವರು ಇಂಥವರನ್ನು ತಮ್ಮ ಮಂತ್ರಿಮಂಡಲದಲ್ಲಿ ಸೇರಿಸಿಕೊಂಡಿದ್ದರು. ಇವರಿಗೆ ಹೋಲಿಸಿದರೆ ಆಮ್ ಆದ್ಮಿ ಪಕ್ಷದವರು ಯಾರೂ ಕೊಲೆ, ಹತ್ಯಾಕಾಂಡದಲ್ಲಿ ಭಾಗಿಗಳಾಗಿಲ್ಲ. ಧರ್ಮದ ಹೆಸರಿನಲ್ಲಿ ಮಾಡಿದ ಅಪರಾಧಗಳು ಅಪರಾಧವೇ ಅಲ್ಲ ಎಂಬ ನಮ್ಮ ಜನರ ಮನೋಭಾವ ನೋಡಿದಾಗ ನಗಬೇಕೋ ಅಳಬೇಕೋ ಗೊತ್ತಾಗುವುದಿಲ್ಲ.

    Reply
  7. ಜೆ.ವಿ.ಕಾರ್ಲೊ, ಹಾಸನ

    ನಿಮ್ಮ hard earned money ಎಷ್ಟು ಬೇಗ ಹಸ್ತಾಂತರವಾಗುತ್ತಿದೆ ನೋಡಿ! 2014 ನಿಮಗೆ ಶುಭವಾಗಲಿ.

    Reply

Leave a Reply

Your email address will not be published. Required fields are marked *