Daily Archives: January 22, 2014

ನಾಯಿ, ನರಿ, ನೊಣ ಈ ದೇವಸ್ಥಾನಕ್ಕೆ ಹೋಗಬಹುದು, ಆದರೆ ದಲಿತರಿಗೆ ಪ್ರವೇಶವಿಲ್ಲ!

– ಶುಕ್ಲಾಂ ಸಕಲೇಶಪುರ

’ದಲಿತರು ಆ ದೇವಸ್ಥಾನಕ್ಕೆ ಹೋದರೆ, ಅವರಿಗೆ ಅಪಾಯ ಶತಃಸಿದ್ಧ’, ಇಂತಹದೊಂದು ಸುಳ್ಳು (ಇಂತಹ ಸುಳ್ಳನ್ನು ನಂಬಿಕೆ ಎಂದೂ ಕರೆಯಬಹುದು) ಸಕಲೇಶಪುರ ತಾಲೂಕಿನ ಗಡಿ ಭಾಗದ ಕಾಗಿನಹರೆ ಹಳ್ಳಿಯ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಬಲವಾಗಿ ಹಬ್ಬಿದೆ. ಆ ಕಾರಣ ಶತಮಾನದಷ್ಟು ಹಳೆಯದಾದ ದೇವಸ್ಥಾನಕ್ಕೆ ಇಂದಿಗೂ ಸ್ಥಳೀಯ ದಲಿತರು ಹೋಗುವುದಿಲ್ಲ. ಆ ದೇವಸ್ಥಾನಕ್ಕೆ ಅಷ್ಟೇ ಅಲ್ಲ, kaginahare-shiradi-temple-1ಆ ದೇವಸ್ಥಾನ ಇರುವ ಕಾಗಿನಹರೆಗೆ ಹೋಗಲೂ ಹಿಂಜರಿಯುತ್ತಾರೆ. ಇದುವರೆಗೆ ಒಬ್ಬೇ ಒಬ್ಬ ದಲಿತನೂ, ಆ ಊರಲ್ಲಿ ಮನೆ ಮಾಡಿಲ್ಲ. ಆ ಮೂಲಕ ದಲಿತರಿಗೆ ಆ ಊರು ಒಂದರ್ಥದಲ್ಲಿ ನಿಷೇಧಿತ ಪ್ರದೇಶ. ಆದರೆ ಅಲ್ಲಿಯ ಮುಂದುವರಿದ ಜನಾಂಗದವರ ಹೊಲ, ಗದ್ದೆ, ತೋಟಗಳಿಗೆ ಕಾರ್ಮಿಕರಾಗಿ ದುಡಿಯಲಷ್ಟೇ ದಲಿತರು ಅರ್ಹರು. ಸುಂದರ ಪಶ್ಚಿಮ ಘಟ್ಟಗಳ ಬುಡದಲ್ಲಿರುವ ಆ ಹಳ್ಳಿಯಲ್ಲಿ ಅವರು ನೆಲೆಯೂರುವಂತಿಲ್ಲ!

ಹತ್ತಾರು ವರ್ಷಗಳ ಹಿಂದೆ ಕೆಲ ದಲಿತರು ಗೊತ್ತಿಲ್ಲದೆ ಆ ದೇವಸ್ಥಾನ ಆವರಣ ಪ್ರವೇಶ ಮಾಡಿ ನೋವುಂಡರಂತೆ. ಆ ಕಾರಣ ಇಂದಿಗೂ, ಆ ಭಾಗದ ಆಸ್ತಿಕ ದಲಿತರಲ್ಲಿ, ಕಾಗಿನಹರೆಯ ಚಾಮುಂಡಿ ಎಂದರೆ ಭಯ. ದೂರದ ತಮಿಳು ನಾಡು, ಕೇರಳಗಳಿಂದ ಕೂಡ ಭಕ್ತರು ಇಲ್ಲಿಗೆ ಬರುತ್ತಾರೆ. ಆದರೆ ಪಕ್ಕದಲ್ಲೇ ಇರುವ ದಲಿತರು ಮಾತ್ರ ಇತ್ತ ತಲೆ ಹಾಕುವುದಿಲ್ಲ. ’ನಾವು ಅತ್ತ ತಲೆ ಹಾಕಿ ಮಲಗುವುದೂ ಇಲ್ಲ, ಆ ದಿಕ್ಕಿನ ಕಡೆಗೆ ಮುಖ ಹಾಕಿ ನಮಸ್ಕಾರ ಕೂಡ ಮಾಡುವುದಿಲ್ಲ..’ ಎಂದು ಅನೇಕ ದಲಿತರು ಹೇಳುವುದುಂಟು. ಕೆಲ ವರ್ಷಗಳ ಹಿಂದೆ ’ಇಲ್ಲಿ ದಲಿತರಿಗೆ ಪ್ರವೇಶ ಇಲ್ಲ’ ಎಂಬ ಬೋರ್ಡ್ ಕೂಡ ಹಾಕಿದ್ದರು ಎಂದು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ.

ಇಲ್ಲಿಯ ಚಾಮುಂಡಿಗೆ ದಲಿತರು ಆಗಿ ಬರೋಲ್ಲವಂತೆ! ಇಂತಹದೊಂದು ಸುಳ್ಳನ್ನು ಸೃಷ್ಟಿಸಿದ್ದು ಯಾರು? ನಿಸ್ಸಂಶಯವಾಗಿ ದಲಿತರಂತೂ ಆಗಿರಲಿಕ್ಕಿಲ್ಲ. ಅಸ್ಪೃಶ್ಯತೆಯನ್ನು ಸಾವಿರಾರು ವರ್ಷಗಳಿಂದ ಕಾಪಾಡಿಕೊಂಡು ಬಂದ ಮುಂದುವರಿದ ಜನಾಂಗದವರು ಇಂತಹದೊಂದು ಸುಳ್ಳನ್ನು ಸೃಷ್ಟಿಸಿ, ದಲಿತರು ಈ ದೇವಸ್ಥಾನಕ್ಕೆ ಬರಲು ಅರ್ಹರಲ್ಲ ಎಂದು ಸಾರಿದರು. ಆ ಮೂಲಕ ದಲಿತರನ್ನು ಮುಖ್ಯವಾಹಿನಿಯಿಂದ ದೂರ ಇಡಬಹುದು. ಅಷ್ಟೇ ಅಲ್ಲ, ಅವರನ್ನು ದೇವಸ್ಥಾನದಿಂದ, ಆ ಊರಿನಿಂದ ದೂರ ಇಡಬಹುದು. ಈ ಉದ್ದೇಶಗಳಲ್ಲದೆ ಬೇರೆ ಯಾವ ಉದ್ದೇಶಗಳೂ ಕಾರಣವಲ್ಲ. ಹಾಗಿಲ್ಲದಿದ್ದರೆ, ನಾಯಿ, ನರಿ, ನೊಣ, ಸೊಳ್ಳೆ..ಕಣ್ಣಿಗೆ ಕಾಣದ ಅಮೀಬಾ, ಬ್ಯಾಕ್ಟೀರಿಯಾಗಳೆಲ್ಲಾ ಆ ದೇವಸ್ಥಾನದ ಆವರಣಕ್ಕೆ ಹೋಗಬಹುದು, ಆದರೆ ದಲಿತರು ಮಾತ್ರ ಅಲ್ಲ ಎನ್ನಲು ಬೇರೇನು ಕಾರಣ ಇದ್ದೀತು?

ಕಾಗಿನಹರೆ ಇಂದು ಸಕಲೇಶಪುರ ಎಂಬ ಮೀಸಲು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುತ್ತದೆ. ಕ್ಷೇತ್ರವನ್ನು ಪ್ರತಿನಿಧಿಸುವ kaginahare-shiradi-temple-2ಶಾಸಕ ಹೆಚ್.ಕೆ. ಕುಮಾರಸ್ವಾಮಿ ದಲಿತರು. ಅನೇಕ ಬಾರಿ ಜನರ ಮತ ಕೇಳಲು, ಆ ಊರಿಗೆ ಹೋಗಿದ್ದ ಕುಮಾರಸ್ವಾಮಿ, ಇದುವರೆಗೂ ಆ ದೇವಸ್ಥಾನಕ್ಕೆ ಕಾಲಿಟ್ಟಿಲ್ಲ. ಊರಿನ ಪ್ರವೇಶದಲ್ಲಿಯೇ ಆ ದೇವಸ್ಥಾನ ಇರುವುದರಿಂದ, ಅದು ಕಣ್ಣಿಗೆ ಬಿದ್ದಿಲ್ಲ ಎಂದು ಹೇಳಲಾಗದು. ಊರ ಮಂದಿ ಹೇಳುವ ಪ್ರಕಾರ, ಶಾಸಕರಿಗೆ ವ್ಯವಸ್ಥಿತವಾಗಿ ಪ್ರಚಾರ ಆಗಿರುವ ನಂಬಿಕೆ (ಅರ್ಥಾತ್ ಸುಳ್ಳು) ಬಗ್ಗೆ ಗೊತ್ತಿರುವುದರಿಂದ ಅವರು ದೇವಸ್ಥಾನ ಪ್ರವೇಶ ಮಾಡಿಲ್ಲ.

ಜಾತಿ ಎನ್ನುವುದು ಇಲ್ಲವೇ ಇಲ್ಲ. ಅದು ವಸಾಹತುಶಾಹಿಯ ಸೃಷ್ಟಿ ಎಂದು ಬೊಬ್ಬಿಡುವ ಮಂದಿಗೆ ಇದೆಲ್ಲವೂ ಅರ್ಥವಾಗುವುದು ಯಾವಾಗ? ಸಕಲೇಶಪುರ, ಹೆತ್ತೂರು, ಹೊಂಗಡಹಳ್ಳ, ಅತ್ತಿಹಳ್ಳಿ, ಬಾಳೇಹಳ್ಳದಂತಹ ಊರುಗಳಲ್ಲಿರುವ ದಲಿತರನ್ನು ಒಮ್ಮೆ ’ಕಾಗಿನಹರೆ ಚಾಮುಂಡಿಗೆ ಹೋಗಿದ್ದೀರಾ..?’ ಎಂದು ಕೇಳಿ ನೋಡಿ. ಒಂದು ಕ್ಷಣ ಬೆಚ್ಚಿ ಬೀಳುತ್ತಾರೆ. ಕಾರಣ ಇಷ್ಟೆ… ತಲೆತಲಾಂತರಗಳಿಂದ ಅವರ ಪೂರ್ವಿಕರು ಅವರಿಗೆ ಹೇಳಿರುವುದು ’ಆ ದೇವಿಯ ಬಗ್ಗೆ ಮಾತನಾಡಬಾರದು, ಅವಳನ್ನು ನೋಡಬಾರದು..’ ಇಂದಿಗೂ ಅಲ್ಲಿ ಅದೇ ಸಂಪ್ರದಾಯ ಮುಂದುವರೆಯುತ್ತಿದೆ. ಪೂಜೆಗೆ ಅರ್ಹಳಾಗುವ ದೇವತೆಯೊಬ್ಬಳನ್ನು ಕೆಲವೇ ಸಮುದಾಯಗಳಿಗೆ ಸೀಮಿತ ಮಾಡುವುದೆಂದರೆ ಏನು? ’ಒಬ್ಬ ದೇವತೆಯೂ, ತನ್ನ ಭಕ್ತರನ್ನು ಜಾತಿಯ ಲೆಕ್ಕಾಚಾರದಲ್ಲಿ ನೋಡುತ್ತಾಳಾ…?’- ಎಂಬ ಕನಿಷ್ಟ ಸಾಮಾನ್ಯ ಜ್ಞಾನದ ಪ್ರಶ್ನೆ ಅಲ್ಲಿಯ ಮುಂದುವರಿದ ಜನಾಂಗದ ಜನರಿಗೆ ಏಕೆ ಕಾಡಲಿಲ್ಲ?

ಇಲ್ಲಿ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ಕೊಡಿಸುವ ಪ್ರಶ್ನೆಯಿಲ್ಲ. ಒಂದು ನಿರ್ದಿಷ್ಟ ಪ್ರದೇಶದ ಪ್ರವೇಶಕ್ಕೆ ಅವರು ಅನರ್ಹರು ಎಂದು ಸಾರುವ ಮೂಲಕ ಅವರನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುವ ಪ್ರಯತ್ನ. ಅವರನ್ನು ಹಾಗೆ ಕುಗ್ಗಿಸಿದರೆ, ಅವರು ಆ ದೇವಸ್ಥಾನದತ್ತ ಸುಳಿಯುವುದಿಲ್ಲ. ಆ ಊರಿನ ಕಡೆಗೂ ತಲೆಹಾಕುವುದಿಲ್ಲ ಎಂಬ ಹುನ್ನಾರ ಇದೆ. ನೈಸರ್ಗಿಕ ಸಂಪನ್ಮೂಲಗಳು ಕೇವಲ ಕೆಲವರ ಸ್ವತ್ತಾಗಿ ಉಳಿಯಬೇಕು ಎಂಬ ಉದ್ದೇಶವೂ ಇದರ ಹಿಂದಿದೆ.