Daily Archives: January 29, 2014

ಅರವಟ್ಟಿಗೆಗಳು

– ಎನ್. ಗೋವಿಂದಪ್ಪ

(“ನೆಲಕಣಜ” ಪುಸ್ತಕದಿಂದ ಆಯ್ದ ಲೇಖನ)

ಆಗೆಲ್ಲಾ ಪ್ರಯಾಣಕ್ಕೆಂದು ಬಸ್ಸುಗಳಿರಲಿಲ್ಲ. ಬಸ್ಸುಗಳು ಆರಂಭವಾದ ಮೇಲೆಯೂ ಆಗೊಂದು ಈಗೊಂದು ಪಟ್ಟಣ ಪ್ರದೇಶಗಳಲ್ಲಿ ಅಡ್ಡಾಡುತ್ತಿದ್ದವು. ಸಾಮಾನ್ಯವಾಗಿ ಜನ ಊರಿಂದೂರಿಗೆ ಪ್ರಯಾಣಿಸುತ್ತಿದ್ದುದು water-containers-stone4ದೂರದ ಊರಾದರೆ ಎತ್ತಿನ ಬಂಡಿ,ಹತ್ತಿರದ ಊರಾದರೆ ಕಾಲ್ನಡಿಗೆ. ಎತ್ತಿನ ಬಂಡಿಯಲ್ಲಿಯೂ ಹೆಂಗಸರು ಮಕ್ಕಳಿಗೆ ಸ್ಥಳಾವಕಾಶ ಮಾಡಿಕೊಟ್ಟು ಮಿಕ್ಕಿ ಸ್ಥಳವಿದ್ದರೆ ಗಂಡಸರು ಕೂರುತ್ತಿದ್ದರು. ಇಲ್ಲವೆ ಬಂಡಿಯನ್ನು ಮುಂದಕ್ಕೆ ಬಿಟ್ಟು ಹಿಂದೆ ನಡೆಯುತ್ತಿದ್ದರು.

ಹೀಗೆ ಪ್ರಯಾಣಿಸುತ್ತಿದ್ದ ಜನಕ್ಕೆ ದಾರಿಗುಂಟ ನೆರಳು ಸಿಗಲೆಂದು ಸಾಲುಮರಗಳನ್ನು, ದಣಿವಾರಿಸಿಕೊಳ್ಳಲು ಜಗಲಿಗಳನ್ನು, ನೀರು ಕುಡಿಯಲು ಅರವಟ್ಟಿಗೆಗಳನ್ನು ನಿರ್ಮಿಸಲಾಗುತ್ತಿತ್ತು. ಗ್ರಾಮೀಣ ಭಾಗದಲ್ಲಿ ಇವುಗಳನ್ನು ’ಸಿಸಂದ್ರ’ಗಳೆಂದು ಕರೆಯಲಾಗುತ್ತದೆ. ಸಿಸಂದ್ರ ಎಂದರೆ ಬಹುಷಃ ಸಿಹಿನೀರು ತುಂಬುವ ತೊಟ್ಟಿಗಳಿರಬಹುದೆಂದು ತೋರುತ್ತದೆ. ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ಈ ಹೆಸರೇ ಚಾಲ್ತಿಯಲ್ಲಿದೆ. “ಸಿಸಂದ್ರಕ್ಕೆ ನೀರು ತುಂಬಿದಿರಾ” ಎಂದು ಹಿರಿಯರು ಎಚ್ಚರಿಸುತ್ತಿದ್ದರೆಂದು ಹಳ್ಳಿಜನ ನೆನಪಿಸಿಕೊಳ್ಳುತ್ತಾರೆ. ಆಳೆತ್ತರದ ನಾಲ್ಕು ಕಲ್ಲಿನ ಕೂಚಗಳನ್ನು ನೆಟ್ಟು ಅದರ ಮೇಲೆ ಚೌಕಾಕಾರದ ತೊಟ್ಟಿಯನ್ನು ಕಟ್ಟಿ ನೀರನ್ನು ತುಂಬಿ ಇಡಲಾಗುತ್ತಿತ್ತು. ಆ ತೊಟ್ಟಿಗೆ ಒಂದು ರಂದ್ರವನ್ನು ಕೊರೆದು ಕಡ್ಡಿಯಿಂದ ಮುಚ್ಚಲಾಗುತ್ತಿತ್ತು. ಅದಕ್ಕೊಂದು ಚಪ್ಪಡಿಯನ್ನು ಓರೆಯಾಗಿ ನಿಲ್ಲಿಸಲಾಗುತ್ತಿತ್ತು. ನೀರು ತುಂಬಲು ಅನುವಾಗುವಂತೆ. ಪ್ರಯಾಣಿಸುತ್ತಾ ದಣಿದು ಬಂದ ಜನ ಕಡ್ಡಿಯನ್ನು ತೆಗೆದು ನೀರು ಕುಡಿದ ನಂತರ ಕಡ್ಡಿಯಿಂದ ರಂದ್ರವನ್ನು ಮುಚ್ಚಿಡುತ್ತಿದ್ದರು. ಇದು ನಮ್ಮ ಹಿಂದಿನವರ “ಹಾಲಂತ ಮನಸಿನ ನೆರಳಂತ ನೆರವಿನ ಪ್ರತೀಕ” .

ಈ ರೀತಿ ಅರವಟ್ಟಿಗೆಗಳನ್ನು ಸ್ಥಾಪಿಸಿ ನೀರು ಕೊಟ್ಟು ಪುಣ್ಯ ಕಟ್ಟಿಕೊಳ್ಳುವ ಕೆಲಸ ಮಾಡೆಂದು ಅವರಿಗೆ ಯಾರೂ ಹೇಳಿದ್ದಲ್ಲ, ಅಥವಾ ಹೆಚ್ಚು ದುಡ್ಡು ಇದೆಯೆಂದು ದೊಡ್ಡಸ್ತಿಕೆ ತೋರ್ಪಡಿಕೆಗೆ ಮಾಡಿದ್ದಲ್ಲ. ಅದೊಂದು ಮಾನವೀಯ ಅಂತಃಕರಣದ ಕಳಕಳಿ. ಅಂತಹವರು ಎಲೆಮರೆಯ ಕಾಯಂತೆ ಮರೆಯಾಗಿರುತ್ತಾರೆ. water-containers-stone1ಇನ್ನೊಂದು ಸಂಗತಿಯೆಂದರೆ ಅರವಟ್ಟಿಗೆಗಳನ್ನು ಕಟ್ಟಿಸಿದವರೆ ಅದಕ್ಕೆ ನೀರು ತುಂಬಬೇಕಾಗಿರಲಿಲ್ಲ. ಊರಿನವರು ಯಾರಾದರೂ ಊರಿನ ಸೇದು ಬಾವಿಯಿಂದ ಸೇದಿಕೊಂಡು ತಂದು ಹಾಕಿ, ಆ ಕೆಲಸವನ್ನು ಸ್ವ-ಪ್ರೇರಣೆಯಿಂದ ಮಾಡಿರುತ್ತಿದ್ದರು. ಅರವಟ್ಟೆಗೆ ಪಾಚಿ ಕಟ್ಟಿಕೊಂಡಾಗ, ಅಶುದ್ದಗೊಂಡಾಗ ಅದನ್ನು ಸ್ವಚ್ಛಗೊಳಿಸಿ ಸುಣ್ಣ ಬಳಿದು ಶುಚಿಮಾಡುತ್ತಿದ್ದರು. ಹೀಗೆ ನೀರು ದಾನಮಾಡುವ ಕಾಲವೊಂದಿತ್ತು. ಈಗ ನೀರು ಮಾರುವ ಜಾಲ ಬಹು ವ್ಯವಸ್ಥಿತವಾಗಿ ಹೆಮ್ಮರವಾಗಿ ಬೆಳೆದು ನಿಂತಿದೆ. ಕೆರೆ, ಕುಂಟೆಗಳನ್ನು ಕಟ್ಟುವ ಕಾಲವೊಂದಿತ್ತು. ಈಗ ಕೆರೆ, ಕುಂಟೆಗಳನ್ನು ಮುಚ್ಚಲಾಗುತ್ತಿದೆ. ಅರವಟ್ಟಿಗೆಗಳು ಈಗಲೂ ಕಂಡುಬಂದರೂ ಅವುಗಳಿಗೆ ನೀರುತುಂಬುವ ಕೆಲಸವನ್ನು ಯಾರೂ ಮಾಡುವುದಿಲ್ಲ. ಅವು ಗತಕಾಲದ ಕುರುಹುಗಳಂತೆ ಅನಾಥವಾಗಿವೆ. ಇಲ್ಲವೇ ಗಿಡ ಗಂಟೆಗಳು ಬೆಳೆದು ಮುಚ್ಚಿಹೋಗಿವೆ ಇಲ್ಲ ಒಡೆದು ಹೋಗಿವೆ, ಮತ್ತೂ ಹೇಳಬೇಕೆಂದರೆ ಯಾರದೋ ಮನೆಯ ನೆಲಹಾಸೋ ಜಗಲಿಯೋ ಸೇರಿಕೊಂಡಿದೆ.

ಊರಿನ ಅಶ್ವಥಕಟ್ಟೆಗಳಲ್ಲಿಯೇ ಹೆಚ್ಚೆಚ್ಚು ನ್ಯಾಯ ಪಂಚಾಯ್ತಿಗಳು, ಮದುವೆ ಮುಂಜಿಗಳು ನಡೆಯುತ್ತಿದ್ದು ಅಶ್ವಥಕಟ್ಟೆಗಳ ಬಳಿ, ಸಂತೆ ಮಾಳಗಳಲ್ಲಿ, ಜಾತ್ರೆಗಳಲ್ಲಿ, ದೇವಾಲಯಗಳ ಬಳಿ ಕೂಡ ಅರವಟ್ಟಿಗೆಗಳನ್ನು ನಿರ್ಮಿಸಲಾಗುತ್ತಿತ್ತು. ಇವುಗಳನ್ನು ಈಗಲೂ ಹಳ್ಳಿಗಳಲ್ಲಿ ಕಾಣಬಹುದಾಗಿದೆ. ಎಲ್ಲಾ ಅರವಟ್ಟಿಗೆಗಳೂ ಒಂದೆ ತೆರನಾಗಿದ್ದರೂ, ಕೆಲವೊಂದು ಕಡೆ ಅರವಟ್ಟಿಗೆಗಳನ್ನು ಕಟ್ಟಿಸಿದವರ ಹೆಸರು ಮತ್ತು ದಿನಾಂಕಗಳನ್ನು ಕೆತ್ತಿಸಲಾಗಿದೆ. ಕೆಲವೊಂದು ಸುಂದರ ಕಲಾತ್ಮಕ ಕೆತ್ತನೆಯಿಂದ ಕೂಡಿದೆ. ಕೋಲಾರ ತಾಲ್ಲುಕು ತಂಬಿಹಳ್ಳಿಯಲ್ಲಿ ಇಂತಹ ಅನಾದಿ ಕಾಲದ ಸುಂದರ ಬೃಹತ್ ಕಲಾತ್ಮಕ ಏಕಶಿಲಾ ಅರವಟ್ಟಿಗೆ ಕಾಣಸಿಗುತ್ತದೆ.

ಇದೇ ಮಾದರಿಯ ಅರವಟ್ಟಿಗೆಗಳನ್ನು ಈ ಜಿಲ್ಲೆಯಾದ್ಯಂತ ಕಾಣಬಹುದಾಗಿದೆ. ಯಾವುದೇ ನದಿ ಪಾತ್ರ, ಕಾಲುವೆ, ತೊರೆಗಳಿಲ್ಲದ ಬಯಲು ಸೀಮೆಯಾದ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಆಗಿನ ಕಾಲಕ್ಕೆ ಜನಗಳಿಗೆ ನೀರುಣಿಸುವ ಸಲುವಾಗಿ ನಿರ್ಮಾಣಗೊಂಡ ಅರವಟ್ಟಿಗೆಗಳು ಕಾಲಾಂತರದಲ್ಲಿ ಮರೆಗೆ ಸರಿದವು. water-containers-stone3ಮೊದಲಿಗೆ ತೆರೆದ ಬಾವಿಗಳಿಂದ ಏತ, ಕಪಿಲೆ, ಬಾನೆ, ಚಕ್ರಬಾವಿಗಳಿಂದ ಅವಶ್ಯಕತೆಗೆ ತಕ್ಕಂತೆ ಮಿತವರಿತು ನೀರನ್ನು ಮೇಲಕ್ಕೆ ಎತ್ತಿ ಕುಡಿಯಲು ಮತ್ತು ಬೇಸಾಯಕ್ಕೆ ಬಳಸಲಾಗುತ್ತಿತ್ತು. ನಂತರ ಜನಸಂಖ್ಯೆ ಹೆಚ್ಚಳದಿಂದಲೋ, ದುರಾಸೆಯಿಂದಲೋ ವಿದ್ಯುತ್, ಡೀಸೆಲ್ ಪಂಪು ಅಳವಡಿಸಿಕೊಂಡು ಅಗತ್ಯಕ್ಕಿಂತ ಹೆಚ್ಚು ನೀರನ್ನೆತ್ತಿದ ಪರಿಣಾಮ ಕ್ರಮೇಣ ತೆರೆದ ಬಾವಿಗಳಲ್ಲಿ ನೀರು ಬರಿದಾಗಿ, ಬೋರ್‌ವೆಲ್‌ಗಳನ್ನು ಕೊರೆದು ಅಂತರ್ಜಲವನ್ನು ಬಗೆದು, ಜೊತೆ ಜೊತೆಗೆ ಮರಗಳನ್ನು ಕಡಿದು, ಮರಳನ್ನು ಸಾಗಿಸಿ ಭೂತಾಯಿಯ ಒಡಲನ್ನು ಬರಿದು ಮಾಡಿದ್ದು ಅಂತರ್ಜಲ 1200 ಅಡಿಗಳಿಗೂ ಮಿಕ್ಕಿ ಪಾತಾಳ ಸೇರಿದೆ. ಈ ನಿಟ್ಟಿನಲ್ಲಿ ಅರವಟ್ಟಿಗೆಗಳನ್ನು ಸುಸ್ಥಿತಿಯಲ್ಲಿಟ್ಟು ನೀರುಣಿಸುವ ದಿನ ದೂರವಿಲ್ಲವೆನಿಸುತ್ತದೆ.

water-containers-stone2