ಆಮ್ ಆದ್ಮಿ ಪಕ್ಷ ಹೆಜ್ಜೆ ಹೆಜ್ಜೆಗೂ ಎಚ್ಚರಿಕೆಯಿಂದಿರಬೇಕು

– ಆನಂದ ಪ್ರಸಾದ್

ಆಮ್ ಆದ್ಮಿ ಪಕ್ಷದ ದೇಶವ್ಯಾಪಿ ಸದಸ್ಯತ್ವ 1 ಕೋಟಿ 5 ಲಕ್ಷ ತಲುಪಿದೆ. ಇದು ಒಂದು ಒಳ್ಳೆಯ ಬೆಳವಣಿಗೆ ಎಂದು ಹೇಳಬಹುದು. ಅದೇ ವೇಳೆ ಆಮ್ ಆದ್ಮಿ ಪಕ್ಷ ತಾನು ಇತರ ಪಕ್ಷಗಳಿಗಿಂಥ ಭಿನ್ನ ಹಾಗೂ ಸಂವೇದನಾಶೀಲ ಎಂದು ತೋರಿಸಬೇಕಾಗಿದೆ. ಇಲ್ಲದೆ ಹೋದರೆ ಪಕ್ಷದ ಬೆಳವಣಿಗೆಯ ಮೇಲೆ ತೀವ್ರ ದುಷ್ಪರಿಣಾಮ ಬೀರಬಹುದು. ದೆಹಲಿ ಸರ್ಕಾರದ ಕಾನೂನು ಮಂತ್ರಿ ಸೋಮನಾಥ್ ಭಾರತಿ ಮೇಲೆ ನಡುರಾತ್ರಿ ಮಾದಕ ದ್ರವ್ಯ ಹಾಗೂ ವೇಶ್ಯಾವಾಟಿಕೆ ಜಾಲ ನಡೆಸುತ್ತಿದ್ದ ಆರೋಪದ ಮೇಲೆ ವಿದೇಶಿ ಮಹಿಳೆಯರ ಮೇಲೆ ಕಾನೂನನ್ನು ಕೈಗೆ ತೆಗೆದುಕೊಂಡು ತನ್ನ ಬೆಂಬಲಿಗರ ಜೊತೆ ಹಲ್ಲೆ ನಡೆಸಿದ ಆಪಾದನೆ ಬಹಳ ಬಲವಾಗಿ ಕೇಳಿಬಂದಿದೆ. ಈ ವಿಚಾರದಲ್ಲಿ ಆಮ್ ಆದ್ಮಿ ಪಕ್ಷವು ನೈತಿಕತೆಯನ್ನು ಎತ್ತಿ ಹಿಡಿಯುವ ಕ್ರಮವಾಗಿ ಸೋಮನಾಥ್ ಭಾರತಿಯ ರಾಜೀನಾಮೆಯನ್ನು ಪಡೆಯುವುದು ಪಕ್ಷದ ಬೆಳವಣಿಗೆಯ ದೃಷ್ಟಿಯಿಂದ ಅಗತ್ಯವಾಗಿತ್ತು. ಈ ವಿಚಾರವಾಗಿ ನ್ಯಾಯಾಂಗ ವಿಚಾರಣೆ ಜಾರಿಯಲ್ಲಿದೆ. aamadmipartyಹೀಗಾಗಿ ವಿಚಾರಣೆ ಮುಗಿದು ಸೋಮನಾಥ್ ಭಾರತಿ ತಪ್ಪಿತಸ್ಥ ಹೌದು ಅಥವಾ ಅಲ್ಲ ಎಂದು ನಿರ್ಧಾರ ಆಗುವವರೆಗೂ ತನ್ನ ಪದವಿಯಿಂದ ದೂರ ನಿಲ್ಲುವುದು ಪಕ್ಷದ ವಿಶ್ವಾಸಾರ್ಹತೆಯ ದೃಷ್ಟಿಯಿಂದ ಅತೀ ಅಗತ್ಯವಾಗಿತ್ತು. ಅವರು ಒಂದು ವೇಳೆ ತಪ್ಪಿತಸ್ಥರೆಂದು ಕಂಡು ಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲೂ ಪಕ್ಷವು ಹಿಂಜರಿಯಬಾರದು. ಯಾವುದೇ ಕೆಲಸ ಮಾಡುವುದಿದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೇ ಹೊರತು ಸಂಘ ಪರಿವಾರದ ಅನುಯಾಯಿಗಳ ರೀತಿ ಕಾನೂನನ್ನು ಕೈಗೆತ್ತಿಕೊಳ್ಳುವುದು ಯೊಗ್ಯವಾದದ್ದಲ್ಲ. ಇದರಿಂದ ಆಮ್ ಆದ್ಮಿ ಪಕ್ಷ ಇತರ ಪಕ್ಷಗಳಿಗಿಂತ ಭಿನ್ನ ಎಂಬ ಇಮೇಜಿಗೆ ಧಕ್ಕೆ ಆಗುತ್ತದೆ. ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ತಮ್ಮ ಮಾತಿನ ಮೇಲೆ ಹಿಡಿತ ಇರಿಸಿಕೊಳ್ಳಬೇಕಾಗಿದೆ ಹಾಗೂ ಮಾತಿನಲ್ಲಿ ವಿನಯವಂತಿಕೆಯನ್ನು ತೋರಿಸಬೇಕು. ಇಲ್ಲದಿದ್ದರೆ ಅವರಿಗೂ ಉಳಿದ ರಾಜಕೀಯ ಪಕ್ಷಗಳಿಗೂ ವ್ಯತ್ಯಾಸ ಇರುವುದಿಲ್ಲ.  ಮಾನವನಿಗೆ ಶ್ರೀಮಂತಿಕೆ, ಅಧಿಕಾರ, ಪದವಿ ಬಂದಾಗ ಅಹಂಕಾರ ಬರುವುದು ಸಹಜ. ಪ್ರಜ್ಞಾವಂತರು ಇದನ್ನು ಮೆಟ್ಟಿ ನಿಲ್ಲುತ್ತಾರೆ. manishsisodia-yogendrayadav-arvindkejriwal-prashantbhushanಆಮ್ ಆದ್ಮಿ ಪಕ್ಷದವರು ಇಂಥ ಪ್ರಜ್ಞಾವಂತಿಕೆಯನ್ನು ತೋರಿಸಬೇಕಾಗಿದೆ. ಇಲ್ಲದೆ ಹೋದರೆ ಅವಸಾನ ಖಚಿತ. ಹೊಸ ವಿಧಾನಸಭಾ ಸದಸ್ಯರಿಗೂ ಹಾಗೂ ಮಂತ್ರಿಗಳಿಗೂ, ಪಕ್ಷದ ಕಾರ್ಯಕರ್ತರುಗಳಿಗೂ ವಿನಯದಿಂದ ನಡೆದುಕೊಳ್ಳುವ ತರಬೇತಿ ನೀಡಬೇಕಾಗಿದೆ. ಬಿಸಿರಕ್ತದ ಯುವಕ ಕಾರ್ಯಕರ್ತರು ಕಾನೂನನ್ನು ಕೈಗೆ ತೆಗೆದುಕೊಳ್ಳಲು ಹೋಗಬಾರದು. ಬೇರೆ ಪಕ್ಷಗಳವರು ಪ್ರಚೋದನಾಕಾರಿ ಹೇಳಿಕೆ ನೀಡಿದರೂ ಸಂಯಮದಿಂದ ಪ್ರತಿಕ್ರಿಯಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕಾಗಿದೆ ಇಲ್ಲದಿದ್ದರೆ ನರೇಂದ್ರ ಮೋದಿಯ ಬೆಂಬಲಿಗರಿಗೂ ಆಮ್ ಆದ್ಮಿ ಪಕ್ಷದ ಬೆಂಬಲಿಗರಿಗೂ ವ್ಯತ್ಯಾಸ ಇರಲಾರದು. ಹೀಗಾಗಿ ಆಮ್ ಆದ್ಮಿ ಪಕ್ಷದ ಥಿಂಕ್ ಟ್ಯಾಂಕ್ ಎಂದೆನಿಸಿಕೊಂಡಿರುವ ಯೋಗೇಂದ್ರ ಯಾದವ್ ಅವರಂಥ ಹಿರಿಯ ನಾಯಕರು ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ನಡೆದುಕೊಳ್ಳಬೇಕಾದ ವಿಧಾನದ ಬಗ್ಗೆ ಒಂದು ನೀತಿ ಸಂಹಿತೆಯನ್ನು ರೂಪಿಸಲು ಮುಂದಾಗುವುದು ಉತ್ತಮ.

ಆಮ್ ಆದ್ಮಿ ಪಕ್ಷವು ಮೊದಲು ದೆಹಲಿಯಲ್ಲಿ ಆಡಳಿತ ನಡೆಸಿ ಅನುಭವ ಪಡೆದು ನಂತರ ದೇಶವ್ಯಾಪಿ ಪಕ್ಷವನ್ನು ಬೆಳೆಸಬೇಕು ಹಾಗೂ ಚುನಾವಣೆಗೆ ಸ್ಪರ್ಧಿಸಬೇಕು ಎಂದು ವಿರೋಧಿ ಪಕ್ಷಗಳವರು ಅದರಲ್ಲೂ ಮುಖ್ಯವಾಗಿ ಸಂಘ ಪರಿವಾರದ ಕಡೆಯವರು ಹೇಳುತ್ತಿದ್ದಾರೆ. ಇದಕ್ಕೆ ಕಾರಣ ಎಲ್ಲಿ ಬಿಜೆಪಿಗೆ ಬೀಳಬಹುದಾದ ಮತಗಳು ನಗರ ಪ್ರದೇಶಗಳಲ್ಲಿ ಆಮ್ ಆದ್ಮಿ ಪಕ್ಷದ ಜೊತೆ ಹಂಚಿಹೋಗಿ ನರೇಂದ್ರ ಮೋದಿಯ ವರ್ಚಸ್ಸು ಕುಂದಿಹೊಗುತ್ತದೋ ಎಂಬ ಆತಂಕ ಎಂಬುದು ಕಂಡುಬರುತ್ತದೆ. ದೇಶದಲ್ಲಿ ಈಗ ಇರುವ ಭ್ರಷ್ಟಾಚಾರ ವಿರೋಧಿ ಅಲೆಯ ಪ್ರಯೋಜನ ಪಡೆದು ದೇಶವ್ಯಾಪಿ ಪಕ್ಷವನ್ನು ಬೆಳೆಸಲು ಆಮ್ ಆದ್ಮಿ Arvind_Kejriwal_party_launchಪಕ್ಷಕ್ಕೆ ಇದುವೇ ಸಕಾಲ. ಇಲ್ಲದಿದ್ದರೆ ಬಿಎಸ್ಪಿ, ಎಸ್ಪಿ, ಅಥವಾ ಎಡ ಪಕ್ಷಗಳಂತೆ ಕೆಲವೇ ರಾಜ್ಯಕ್ಕೆ ಆಮ್ ಆದ್ಮಿ ಪಕ್ಷ ಸೀಮಿತವಾಗಬೇಕಾದೀತು. ಪಕ್ಷವನ್ನು ದೇಶವ್ಯಾಪಿ ಬೆಳೆಸಲು ಯಾವುದಾದರೂ ಒಂದು ಅಲೆಯ ಸಹಾಯ ಬೇಕಾಗುತ್ತದೆ. ಇಲ್ಲದಿದ್ದರೆ ದೇಶವ್ಯಾಪಿ ಹೊಸ ಪಕ್ಷವನ್ನು ಬೆಳೆಸುವುದು ಬಹಳ ಕಷ್ಟ ಅಥವಾ ತುಂಬಾ ವರ್ಷಗಳನ್ನೇ ತೆಗೆದುಕೊಳ್ಳಬಹುದು ಅಥವಾ ಅದು ಅಸಾಧ್ಯವೂ ಆಗಬಹುದು. ಈಗ ಆಮ್ ಆದ್ಮಿ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ದೊರಕಿದ ಪ್ರತಿಕ್ರಿಯೆ ನೋಡಿದರೆ ದೇಶವು ಪರ್ಯಾಯ ರಾಜಕೀಯ ಪಕ್ಷವೊಂದರ ಹುಡುಕಾಟದಲ್ಲಿದೆ ಹಾಗೂ ದೇಶದಲ್ಲಿ ಒಂದು ಭ್ರಷ್ಟಾಚಾರ ವಿರೋಧಿ ಅಲೆ ಇದೆ. ಇಲ್ಲದೆ ಹೋದರೆ ಈ ರೀತಿಯ ಸ್ಪಂದನೆ ಆಮ್ ಆದ್ಮಿ ಪಕ್ಷಕ್ಕೆ ಸಿಗುತ್ತಿರಲಿಲ್ಲ. ಜನ ಬಿಜೆಪಿಗೂ ಒಂದು ಅವಕಾಶ ಕೊಟ್ಟು ನೋಡಿದ್ದಾರೆ ಹಾಗೂ ಅದರ ಅವಧಿಯ ಭ್ರಷ್ಟಾಚಾರಗಳನ್ನೂ ಕಂಡಿದ್ದಾರೆ. ಹೀಗಾಗಿ ಜನ ಹೊಸ ಪರ್ಯಾಯ ಇದೆಯೋ ಎಂದು ನೋಡುತ್ತಿದ್ದಾರೆ. ಇದನ್ನು ಆಮ್ ಆದ್ಮಿ ಪಕ್ಷವು ಬಳಸಿಕೊಂಡು ದೇಶವ್ಯಾಪಿ ಬೆಂಬಲಿಗರ ಜಾಲ ಬೆಳೆಸಿಕೊಳ್ಳುವುದು ಸೂಕ್ತವೇ ಆಗಿದೆ.

ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಧರಣಿ ಮಾಡಬಾರದು ಎಂದು ಸಂವಿಧಾನದಲ್ಲಿ ಹೇಳಿಲ್ಲ ಎಂದು ಕೇಜ್ರಿವಾಲ್ ತಮ್ಮ ಧರಣಿ ಸತ್ಯಾಗ್ರಹವನ್ನು ಸಮರ್ಥಿಸಿಕೊಂಡಿದ್ದಾರೆ. ಇದು ನಿಜ. ಆದರೆ ನಿಷೇಧಾಜ್ಞೆ ಜಾರಿ ಇರುವ ಕಡೆ ಧರಣಿ ನಡೆಸಿದ್ದರಿಂದಾಗಿ ಕಾನೂನನ್ನು ಉಲ್ಲಂಘಿಸಿದ ಅಪವಾದ ಅವರaravind-kejriwal ಮೇಲೆ ಬಂದಿದೆ ಹಾಗೂ ಇದರಿಂದಾಗಿ ದೇಶದಾದ್ಯಂತ ಪಕ್ಷದ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಆಗಿದೆ. ಧರಣಿ ಕೈಗೊಳ್ಳುವುದಿದ್ದರೂ ನಿಷೇಧಾಜ್ಞೆ ಇಲ್ಲದ ಕಡೆ ಕೈಗೊಂಡಿದ್ದರೆ ಜನಸಾಮಾನ್ಯರಿಗೆ ತೊಂದರೆ ಆಗುತ್ತಿರಲಿಲ್ಲ. ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಸದಸ್ಯರು ಧರಣಿ ಕೈಗೊಳ್ಳುವ ಬದಲು ಪಕ್ಷದ ಕಾರ್ಯಕರ್ತರು ಧರಣಿ ಕೈಗೊಂಡಿದ್ದರೂ ಆಗುತ್ತಿತ್ತು ಮತ್ತು ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿರಲಿಲ್ಲ. ಹೀಗಾಗಿ ಇಂಥ ನಡೆಗಳನ್ನು ಪಕ್ಷವು ಮುಂದುವರಿಸಬಾರದು ಹಾಗೂ ಯಾವುದೇ ಪ್ರಮುಖ ತೀರ್ಮಾನ ಕೈಗೊಳ್ಳುವಾಗ ಪಕ್ಷದಲ್ಲಿ ಚಿಂತಕರ ಜೊತೆ ಸಮಾಲೋಚನೆ ನಡೆಸಿ ಬಹುಮತದ ಆಧಾರದಲ್ಲಿ ತೀರ್ಮಾನ ತೆಗೆದುಕೊಳ್ಳುವುದು ಪಕ್ಷದ ಬೆಳವಣಿಗೆಯ ದೃಷ್ಟಿಯಿಂದ ಸೂಕ್ತವಾದೀತು. ನಡೆಯುವವರು ಎಡವುವುದು ಸಹಜ. ಹಾಗೆಯೇ ಹೊಸದಾಗಿ ಆಡಳಿತ ವಹಿಸಿಕೊಂಡಾಗ ಕೆಲವು ತಪ್ಪುಗಳು ಆಗಬಹುದು. ಇಂಥ ತಪ್ಪುಗಳನ್ನು ಸಮರ್ಥಿಸಲು ಹೋಗಿ ಇನ್ನಷ್ಟು ತಪ್ಪುಗಳನ್ನು ಮಾಡಬಾರದು. ತಪ್ಪುಗಳನ್ನು ವಿನೀತತೆಯಿಂದ ಒಪ್ಪಿಕೊಂಡರೆ ಪಕ್ಷದ ವಿಶ್ವಾಸಾರ್ಹತೆ ಹೆಚ್ಚಬಹುದು.

ಆಮ್ ಆದ್ಮಿ ಪಕ್ಷದ ನಡೆಗಳ ಬಗ್ಗೆ ಮಾಧ್ಯಮಗಳು ಹಾಗೂ ಬೇರೆ ರಾಜಕೀಯ ಪಕ್ಷಗಳು ತೀವ್ರ ಆಕ್ರಮಣಕಾರಿಯಾಗಿ ನಡೆದುಕೊಳ್ಳುತ್ತಿರುವುದು ಕಂಡುಬರುತ್ತಿದೆ. ಇದನ್ನು ನೋಡುವಾಗ ಮಾಧ್ಯಮಗಳಿಗೆ ದೇಶದಲ್ಲಿ ಪರ್ಯಾಯ ಶಕ್ತಿಗಳು ರೂಪುಗೊಂಡು ಪ್ರಜಾಪ್ರಭುತ್ವ ಬಲಗೊಳ್ಳಬೇಕೆಂಬ ಸದಾಶಯ ಇಲ್ಲವೆಂಬ ಗುಮಾನಿ ಬರುತ್ತದೆ. ಮಾಧ್ಯಮಗಳು ಒಂದು ವರ್ಷ ಪ್ರಾಯದ ಕೂಸಾದ ಆಮ್ ಆದ್ಮಿ ಪಕ್ಷವನ್ನು ಸರಿಯಾದ ಹಾದಿಯಲ್ಲಿ ಮುನ್ನಡೆಸಬೇಕಾದ ಜವಾಬ್ದಾರಿ ಹೊಂದಿವೆ. ಹೀಗಾಗಿ ಆ ಪಕ್ಷದ ಸಣ್ಣ ತಪ್ಪುಗಳನ್ನು ಬಹಳ ದೊಡ್ಡ ತಪ್ಪುಗಳಂತೆ ಬಿಂಬಿಸಿ ದೇಶದಲ್ಲಿ ಭ್ರಮನಿರಸನ ಉಂಟುಮಾಡಲು ಆರಂಭದಲ್ಲೇ ಯತ್ನಿಸುವುದು ಸೂಕ್ತವಲ್ಲ.  ಅದಕ್ಕೆ ಸಾಕಷ್ಟು ಸಮಯ ಕೊಡಬೇಕಾದ ಅಗತ್ಯ ಇದೆ. ತಪ್ಪಾದಾಗ ಸೌಮ್ಯವಾಗಿ ಬುದ್ಧಿ ಹೇಳಬೇಕು ಮತ್ತು ದೇಶದ ಪ್ರಖ್ಯಾತ ಚಿಂತಕರು, ಲೇಖಕರು, ಸಾಹಿತಿಗಳು, ವಿಜ್ಞಾನಿಗಳಿಂದ ಪಕ್ಷಕ್ಕೆ ಸೂಕ್ತ ಮಾರ್ಗದರ್ಶನ ಮಾಡಿಸಬೇಕು. ಹಾಗಾದರೆ ಪಕ್ಷವು ಸರಿ ದಾರಿಯಲ್ಲಿ ಮುನ್ನಡೆಯಬಲ್ಲದು. ದೇಶದ ರಾಜಕೀಯವು ನಿಂತ ನೀರಾಗಿ ಕೊಳಚೆ ಗುಂಡಿಯಂತೆ ಆಗಿದೆ. ಆ ಕೊಳಚೆ ಗುಂಡಿಗೆ ಹೊಸ ನೀರು ಬರಬೇಕಾಗಿದೆ ಹಾಗೂ ಪ್ರವಾಹವಾಗಿ ಹರಿದು ಕೊಳಚೆ ನೀರು ಹೊರಹೋಗಿ ಶುದ್ಧ ನೀರು ತುಂಬಬೇಕಾಗಿದೆ. ಹೀಗಾಗಬೇಕಾದರೆ ಕಾಲಕಾಲಕ್ಕೆ ರಾಜಕೀಯ ರಂಗದಲ್ಲಿ ಹೊಸ ಚಿಂತನೆಗಳು, ಪ್ರಯತ್ನಗಳು ನಡೆಯುತ್ತಿರಬೇಕಾಗುತ್ತದೆ. ಹೊಸ ಪ್ರಯತ್ನಗಳು ನಡೆದಾಗಲೆಲ್ಲ ಸಿನಿಕರಾಗಿ ಹಿಂದೆ ನಡೆದ ರಾಜಕೀಯ ಸ್ವಚ್ಛತೆಯ ಪ್ರಯತ್ನಗಳು ವಿಫಲವಾಗಿವೆ ಎಂದೂ, ಇನ್ನು ಮುಂದೆಯೂ ಹೀಗೆಯೇ ಆಗುತ್ತದೆ ಎಂದು ಜನರ ದಾರಿ ತಪ್ಪಿಸುವ ಕೆಲಸವನ್ನು ಮಾಧ್ಯಮಗಳು ಮಾಡುವುದನ್ನು ನಿಲ್ಲಿಸುವುದು ಸೂಕ್ತ. ಹೊಸ ಪ್ರಯತ್ನ ನಡೆದಾಗ ಅದನ್ನು ಮಾಧ್ಯಮಗಳು ಬೆಂಬಲಿಸಬೇಕು. ಅದು ವಿಫಲವಾದರೂ ಚಿಂತೆ ಇಲ್ಲ. ಇಂಥ ಪ್ರಯತ್ನಗಳು ಅಲ್ಪ ಸ್ವಲ್ಪವಾದರೂ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರುತ್ತವೆ ಮತ್ತು ಹೀಗೆಯೇ ಪ್ರಯತ್ನಗಳು ಮುಂದುವರಿಯುತ್ತಾ ಇರಬೇಕು. ಹರಿಯುವ ನೀರು ನಿಂತ ಕೂಡಲೇ ಅದು ಪಾಚಿಗಟ್ಟಿ ಕೊಳಕಾಗುತ್ತದೆ. Kejriwal-janata-durbarಅದೇ ರೀತಿ ರಾಜಕೀಯ ರಂಗದಲ್ಲಿಯೂ ಹೊಸ ಪ್ರಯೋಗಗಳು ನಡೆಯುತ್ತಲೇ ಇರಬೇಕು, ಇದರಿಂದ ರಾಜಕೀಯ ನಿಂತ ನೀರಾಗಿ ಕೊಳಚೆಯಾಗುವುದು ಸ್ವಲ್ಪ ಮಟ್ಟಿಗಾದರೂ ತಪ್ಪುತ್ತದೆ.

ಆಮ್ ಆದ್ಮಿ ಪಕ್ಷವು ಮಾಧ್ಯಮಗಳ ಅಪಪ್ರಚಾರದ ಹೊರತಾಗಿಯೂ ಬೆಳೆದು ಅಧಿಕಾರದ ಹತ್ತಿರ ಬಂದಿದೆ. ಅವಕಾಶ ಸಿಕ್ಕಾಗಲೆಲ್ಲ ಅದರ ವಿರುದ್ಧ ಅಪಪ್ರಚಾರ ನಡೆಸಲು ದೇಶದ ಪ್ರಧಾನ ಪಕ್ಷಗಳು ಟೊಂಕ ಕಟ್ಟಿ ನಿಂತಿವೆ. ಇದಕ್ಕೆ ಮಾಧ್ಯಮಗಳು ತಾಳ ಹಾಕುತ್ತಿವೆ. ಇಂಥ ಪರಿಸ್ಥಿತಿಯಲ್ಲಿ ಆಮ್ ಆದ್ಮಿ ಪಕ್ಷವು ಪ್ರತಿಯೊಂದು ನಡೆಯನ್ನೂ ಬಹಳ ಎಚ್ಚರಿಕೆಯಿಂದ ಇರಿಸಬೇಕಾಗುತ್ತದೆ. ಆಮ್ ಆದ್ಮಿ ಪಕ್ಷವು ಒಂದು ಸಣ್ಣ ತಪ್ಪು ಮಾಡಿದರೂ ಮಾಧ್ಯಮಗಳಿಗೆ ಹಾಗೂ ಪಟ್ಟಭದ್ರ ರಾಜಕೀಯ ಪಕ್ಷಗಳಿಗೆ ಅದು ಭೂತಾಕಾರವಾಗಿ ಕಾಣುತ್ತದೆ. ಹೀಗಾಗಿ ಮಾಧ್ಯಮಗಳ ಅಪಪ್ರಚಾರವನ್ನು ಮೆಟ್ಟಿ ನಿಲ್ಲಲು ಆಮ್ ಆದ್ಮಿ ಪಕ್ಷವು ಜನಸಾಮಾನ್ಯರನ್ನೇ ತನ್ನ ಸಂದೇಶಗಳನ್ನು ಜನತೆಗೆ ಬಿತ್ತರಿಸಲು ಹಾಗೂ ಹರಡಲು ಬಳಸಿಕೊಳ್ಳಬೇಕಾಗಿದೆ. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಹೆಚ್ಚಿನ ಮಾಧ್ಯಮಗಳು ಇಲ್ಲದ ಕಾಲದಲ್ಲಿಯೂ ಮಹಾತ್ಮಾ ಗಾಂಧಿಯವರ ಸಂದೇಶಗಳು ದೇಶದ ಮೂಲೆಮೂಲೆಗೂ ಜನರ ಬಾಯಿಯಿಂದ ಬಾಯಿಗೆ ಹರಡುತ್ತಿದ್ದವು. ಇದೇ ರೀತಿ ದೇಶದಲ್ಲಿ ತನ್ನ ಸಂದೇಶಗಳನ್ನು ಹರಡಲು ಆಮ್ ಆದ್ಮಿ ಪಕ್ಷವು ತನ್ನ ಪರ ಸಹಾನುಭೂತಿ ಉಳ್ಳ ಜನಸಾಮಾನ್ಯರ ವ್ಯೂಹವೊಂದನ್ನು ರಚಿಸಿಕೊಳ್ಳಬೇಕಾಗಿದೆ. ಜನಸಾಮಾನ್ಯರು ಪಕ್ಷದ ಪರವಾಗಿ ನಿಲ್ಲಬೇಕಾದರೆ ನಡೆ ಹಾಗೂ ನುಡಿಗಳಲ್ಲಿ ಅಂತರವಿಲ್ಲದ ರೀತಿಯಲ್ಲಿ ಆಮ್ ಆದ್ಮಿ ಪಕ್ಷವು ನಡೆದುಕೊಳ್ಳುವುದು ಬಹಳ ಮುಖ್ಯ. ಇದನ್ನು ಪಕ್ಷದ ಮುಖಂಡರು ಸದಾ ಕಾಲ ನೆನಪಿನಲ್ಲಿ ಇಟ್ಟುಕೊಳ್ಳಬೇಕು.

3 comments

  1. ಆಮ್ ಆದ್ಮಿ ಪಕ್ಷದ ಕೇಜ್ರಿವಾಲ್ ಭ್ರಷ್ಟ ರಾಜಕಾರಣಿಗಳ ಪಟ್ಟಿಯೊಂದನ್ನು ಮಾಡಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅದನ್ನು ಓದಿ ಹೇಳಿ ಇಂಥವರನ್ನು ಚುನಾವಣೆಗಳಲ್ಲಿ ಸೋಲಿಸಬೇಕೆಂದು ಕರೆ ನೀಡಿದ್ದು ಎಲ್ಲಾ ಮಾಧ್ಯಮಗಳಲ್ಲಿ ವರದಿಯಾಗಿ ಪರಂಪರಾಗತ ಭ್ರಷ್ಟ ಪಕ್ಷಗಳು ಹಾಗೂ ಅವುಗಳ ರಾಜಕಾರಣಿಗಳು ಗರಂ ಆಗಿದ್ದಾರೆ. ಭ್ರಷ್ಟ ಎಂದು ಹೇಳಲು ಇವರ ಬಳಿ ಏನು ಆಧಾರ ಇದೆ ಎಂದು ಹರಿಹಾಯ್ದಿದ್ದಾರೆ. ಆಮ್ ಆದ್ಮಿ ಪಕ್ಷ ತನಗೆ ಪಕ್ಷ ಕಟ್ಟಲು ಹಾಗೂ ಚುನಾವಣೆ ಪ್ರಚಾರ ನಡೆಸಲು ಪಕ್ಷಕ್ಕೆ ದೇಣಿಗೆ ನೀಡಿದವರ ಪಟ್ಟಿಯನ್ನು ತನ್ನ ವೆಬ್ ಸೈಟಿನಲ್ಲಿ ಪಾರದರ್ಶಕವಾಗಿ ದೇಣಿಗೆ ಪಡೆದ ಮರುಕ್ಷಣವೇ ಪ್ರಕಟಿಸುತ್ತಾ ಮೇಲ್ಪಂಕ್ತಿ ಹಾಕಿದೆ ಮಾತ್ರವಲ್ಲ ತಾನು ಸ್ವಚ್ಛ ಮೂಲದಿಂದ ಗಳಿಸಿದ ಹಣವನ್ನು ಮಾತ್ರ ಸ್ವೀಕರಿಸುತ್ತೇನೆ ಎಂದು ಹಾಗೆಯೆ ನಡೆದುಕೊಳ್ಳುತ್ತಿದೆ. ಉಳಿದ ಪ್ರಮುಖ ಪಕ್ಷಗಳು ಭ್ರಷ್ಟ ಅಲ್ಲದಿದ್ದರೆ ಈ ಮೇಲ್ಪಂಕ್ತಿಯನ್ನು ಅನುಸರಿಸಲು ಅವುಗಳು ಮುಂದಾಗಬೇಕು. ಉಳಿದ ಪಕ್ಷಗಳು ಇದನ್ನು ಅನುಸರಿಸರಿಸದೆ ಇರುವ ಕಾರಣ ಅವುಗಳನ್ನು ಭ್ರಷ್ಟ ಎಂದು ಹೇಳಲು ಬೇರೆ ಆಧಾರ ಬೇಕಾಗಿಲ್ಲ. ಯಾವ ಪಕ್ಷಗಳು ತಮ್ಮ ಚುನಾವಣಾ ರ್ಯಾಲಿಗಳಿಗೆ ಹಾಗೂ ಅಬ್ಬರದ ಮಾಧ್ಯಮ ಪ್ರಚಾರಕ್ಕೆ ತನ್ನ ಆದಾಯ ಮೂಲವನ್ನು ಪ್ರಕಟಿಸದೆ ಅತಿ ಹೆಚ್ಚು ಹಣವನ್ನು ನೀರಿನಂತೆ ಖರ್ಚು ಮಾಡುತ್ತಿವೆಯೋ ಆ ಪಕ್ಷಗಳು ಅತ್ಯಂತ ಭ್ರಷ್ಟ ಪಕ್ಷಗಳು ಎಂಬುದು ಮೇಲ್ನೋಟಕ್ಕೇ ಸಾಬೀತಾಗುತ್ತದೆ. ಇದಕ್ಕೆ ನ್ಯಾಯಾಲಯದ ತೀರ್ಪು ಅವಶ್ಯಕವಿಲ್ಲ. ಒಂದು ರಾಷ್ಟ್ರೀಯ ಪಕ್ಷವು ಒಬ್ಬ ವ್ಯಕ್ತಿಯನ್ನು ಪ್ರಾಮಾಣಿಕ ವ್ಯಕ್ತಿಯೆಂದು ವೈಭವೀಕರಿಸುತ್ತಾ ಆ ವ್ಯಕ್ತಿಯ ರ್ಯಾಲಿಗಳನ್ನು ಹಣವನ್ನು ಅತ್ಯಂತ ದುಂದುವೆಚ್ಚ ಮಾಡುತ್ತಾ ರಾಷ್ಟ್ರಾದ್ಯಂತ ಪ್ರಚಾರ ನಡೆಸುವುದು ಭ್ರಷ್ಟಾಚಾರಕ್ಕೆ ಇಂಬು ಕೊಟ್ಟಂತೆ ಅಲ್ಲವೇ? ಈ ಬಗ್ಗೆ ನಾವು ಯೋಚಿಸಬೇಕು. ಇವರು ದೇಶಾದ್ಯಂತ ಒಂದೊಂದು ರ್ಯಾಲಿಗೂ ಹತ್ತು ಹದಿನೈದು ಕೋಟಿ ರೂಪಾಯಿ ಖರ್ಚು ಮಾಡಿ ಮಹಾರಾಜನ ವೈಭವದಲ್ಲಿ ಒಟ್ಟು ನೂರು ರ್ಯಾಲಿಗಳನ್ನು ನಡೆಸುತ್ತಾರಂತೆ. ಅಂದರೆ ೧೦೦೦ ದಿಂದ ೧೫೦೦ ಕೋಟಿ ರೂಪಾಯಿ ಹಣ ಇವರ ರ್ಯಾಲಿಗಳಿಗೆ ಖರ್ಚಾದೀತು. ಅದಲ್ಲದೆ ಇವರು ತಮ್ಮ ಕೃತಕ ಇಮೇಜ್ ಸೃಷ್ಟಿಸಿಕೊಳ್ಳಲು ಮಾಧ್ಯಮ ಸಂಸ್ಥೆಗಳಿಗೆ, ಜಾಹೀರಾತು ಏಜೆನ್ಸಿಗಳಿಗ ಸುರಿಯುವ ಹಣ ಏನಿಲ್ಲವೆಂದರೂ ೫೦೦ ಕೋಟಿ ದಾಟಬಹುದು. ಈ ಹಣದ ಮೂಲ ಯಾವುದು ಎಂದು ಇವರು ಏಕೆ ಆಮ್ ಆದ್ಮಿ ಪಕ್ಷದಂತೆ ತಮ್ಮ ವೆಬ್ ಸೈಟಿನಲ್ಲಿ ಪಾರದರ್ಶಕವಾಗಿ ತೋರಿಸುವುದಿಲ್ಲ? ಇವರು ಭ್ರಷ್ಟ ರಲ್ಲದಿದ್ದರೆ ಇದನ್ನು ಇದನ್ನು ತಮ್ಮ ವೆಬ್ ಸೈಟಿನಲ್ಲಿ ತೋರಿಸಲು ಅಂಜುವುದು ಏಕೆ? ಇವರು ಈ ರೀತಿ ನೀರಿನಂತೆ ಖರ್ಚು ಮಾಡುತ್ತಿರುವ ಹಣ ಬೆವರು ಸುರಿಸಿ ದುಡಿದು ಗಳಿಸಿದ ಹಣವೇ ಎಂದು ತಿಳಿದುಕೊಳ್ಳುವ ಹಕ್ಕು ಪ್ರತಿಯೊಬ್ಬ ಮತದಾರನಿಗೂ ಇದೆ. ಇವರು ಇದರ ಮೂಲವನ್ನು ತಿಳಿಸುವುದಿಲ್ಲವಾದ ಅದು ಭ್ರಷ್ಟ ಮೂಲದ ಹಣ ಎಂದು ನಿಸ್ಸಂಶಯವಾಗಿ ಹೇಳಬಹುದು. ಅದು ಕಪ್ಪು ಹಣವಿರಬಹುದು ಅಥವಾ ಭ್ರಷ್ಟ ಬಂಡವಾಳಗಾರರು ಹಾಗೂ ಉದ್ಯಮಿಗಳು, ರೀಯಲ್ ಎಸ್ಟೇಟ್ ಏಜೆಂಟರು, ಭ್ರಷ್ಟ ಅಧಿಕಾರಿಗಳಿಂದ ಸಂಗ್ರಹಿಸಿದ ಹಣವಿರಬಹುದು. ಇಂಥ ಮೂಲದಿಂದ ಹಣ ಪಡೆದು ಇವರು ಭ್ರಷ್ಟಾಚಾರಮುಕ್ತ ಸರ್ಕಾರ ನೀಡುತ್ತೇನೆ ಎಂದು ಹೇಳುವುದನ್ನು ನಂಬಲು ಸಾಧ್ಯವೇ? ಇನ್ನೊಂದು ಪ್ರಮುಖ ರಾಷ್ಟ್ರೀಯ ಪಕ್ಷವೂ ಇದೇ ರೀತಿ ಹಣವನ್ನು ಜಾಹೀರಾತುಗಳಿಗೆ ಹಾಗೂ ಕೃತಕ ಇಮೇಜ್ ಸೃಷ್ಟಿಸಿಕೊಳ್ಳಲು ನೀರಿನಂತೆ ಚೆಲ್ಲುತ್ತಿದೆ. ಉಳಿದ ಪ್ರಾದೇಶಿಕ ಪಕ್ಷಗಳೂ ಇದಕ್ಕೆ ಹೊರತಲ್ಲ. ಕುರುಡಾಗಿ ಮತ ಹಾಕುವ ಮುನ್ನ ಪ್ರತಿಯೊಬ್ಬ ಮತದಾರನೂ ಯಾರು ಪ್ರಾಮಾಣಿಕ ಎಂದು ಯೋಚಿಸಿ ಮತ ನೀಡುವುದು ದೇಶದ ಭವಿಷ್ಯದ ಹಿತದೃಷ್ಟಿಯಿಂದ ಅಗತ್ಯ. ಈಗ ಇರುವ ಪಕ್ಷಗಳಲ್ಲಿ ನಿಸ್ಸಂಶಯವಾಗಿ ಆಮ್ ಆದ್ಮಿ ಪಕ್ಷವೇ ಹೆಚ್ಚು ಪ್ರಾಮಾಣಿಕವಾದ ಪಕ್ಷ. ಹೀಗಾಗಿ ಇದನ್ನು ಬೆಳೆಸುವುದು ದೇಶದ ಬಗ್ಗೆ ಕಾಳಜಿ ಉಳ್ಳವರ ಆದ್ಯತೆಯಾಗಬೇಕು.

  2. ನಮ್ಮ ಮಾಧ್ಯಮಗಳಿಗೆ ಅದರಲ್ಲೂ ದಿಲ್ಲಿಯ ಎಲೆಕ್ಟ್ರಾನಿಕ್ಸ್ ಮಾಧ್ಯಮಗಳಿಗೆ ಒಂದು ಪರ್ಯಾಯ ರಾಜಕೀಯ ಶಕ್ತಿಯ ಉದಯ ಬೇಕಾಗಿಲ್ಲ. ಅವರಿಗೆ ಬೇಕಾದದ್ದು ಆ ಹೊತ್ತಿಗೆ ಅಂದು ಸಂಜೆಗೆ ಒಂದು ಮೂರು ಗಂಟೆಯಷ್ಟು ಕಿರುಚಾಟ ಹಾಗೂ ಈ ಕಿರುಚಾಟಕ್ಕೆ “outrage” ಎಂಬ ಹೆಸರಿನಲ್ಲಿ ವಾಕ ಸಮರ.
    ಅವರಿಗೆ ಯಾರು ದುಡ್ಡು ಕೊಡ್ತಾರೋ, ಯಾರ ಬೆಂಬಲಿಸಿ ಮಾತನಾಡಿದರೆ ಟಿಆರ್ಪಿ ಹೆಚ್ಚತ್ತೋ ಅದರ ಬಗ್ಗೆ ಮಾತ್ರ ಗಮನ. ಅವರ ಕಣ್ಣಲ್ಲಿ ಡೆಲ್ಲಿ ಪೋಲಿಸ್ ಒಮ್ಮೆಲೇ ಒಳ್ಳೆಯ ವ್ಯಕ್ತಿಯಾಗಿ ಬಿಡ್ತಾರೆ, ಕೆಜ್ರಿವಾಲ್ ನ ಮೂರು ಬೆಡ್ ರೂಮಿನ ಮನೆ ಉಳಿದ ಮುಖ್ಯಮಂತ್ರಿಗಳ ಮಹಲಿಗಿಂತಲೂ ಮುಖ್ಯವಾಗಿ ಕಾಣತ್ತ್ತೆ. ಕೆಜ್ರಿವಾಲ್ ಕೆಮ್ಮಿದ್ದು, ಸೀನಿದ್ದು, ಎದ್ದದ್ದು, ಕೂತದ್ದನ್ನು ಸುದ್ದಿ ಮಾಡ್ತಾರೆ ಹೊರತು ಇವರಿಗಿಂತ ಮುಚೆ ಇದ್ದವರು ಏನು ಕಿಸಿದರು ಎಂದು ಯೋಚನೆ ಮಾಡಲ್ಲಾ. ಯಾಕೆಂದ್ರೆ ಇವರಿಗೆ ಬೇಕಾದದ್ದು ಪಿಆರ್ ಏಜೆನ್ಸಿಗಳು ನೀಡಿದ ಕಾಂಚಾಣವೆ ಹೊರತು ಒಂದು ಪರ್ಯಾಯ ರಾಜಕೀಯದ ಸಾಧ್ಯತೆಯಲ್ಲ.

  3. One more thing. Have you noticed one thing? The same media is not talking anything about what is happening in the states of Rajasthan, Madhyapradesh and Chatisgarh where BJP government came into existence along with Kejriwal’s Government in Delhi. Basically, nothing worthwhile is happening.

    As Naveen rightly said, no one wants a good and clean politics these days..

Leave a Reply

Your email address will not be published.