Daily Archives: January 31, 2014

ಯಾರು ರೋಗಿ? ರಾಜ್ಯಪಾಲರೇ, ಆದಷ್ಟು ಬೇಗ ಹೊರಡಿ…

– ಸುಧಾಂಶು ಕಾರ್ಕಳ

“Who is Anantamurthy? He is nobody…. He is sick”… ಘನತೆವೆತ್ತ ರಾಜ್ಯಪಾಲರು ಹೀಗೆ ಮಾತನಾಡಿದ್ದಾರೆ. ದಾವಣಗೆರೆ ವಿ.ವಿಗೆ ಕುಲಪತಿ ನೇಮಕ ಮಾಡುವಾಗ ಆಗಿರಬಹುದಾದ ಅವ್ಯವಹಾರದ ಬಗ್ಗೆ ಎದ್ದಿರುವ ವಿವಾದದ ಮುಂದುವರಿದ ಭಾಗವಿದು.ಹೀಗೆ ಮಾತನಾಡುವ ಮೂಲಕ nudisiri-ananthamurthyರಾಜ್ಯಪಾಲರು ತಮ್ಮ ಕುಲಪತಿ ನೇಮಕಾತಿಯಲ್ಲಿ ತಮಗಿರುವ ಪರಮಾಧಿಕಾರವನ್ನು ಎತ್ತಿ ತೋರಿಸಿದ್ದಾರೆ. ಅಷ್ಟೇ ಅಲ್ಲ ತಮ್ಮ ವಿಶಿಷ್ಟ ಪದ ಬಳಕೆಯಿಂದ ತಮ್ಮ ’ಘನತೆ’ಗೆ ಕುಂದು ತಂದುಕೊಂಡಿದ್ದಾರೆ. ರಾಜ್ಯಪಾಲರು ’ಸಿಕ್’ ಎಂಬ ಪದ ಬಳಸಿದ್ದು, ಅನಂತಮೂರ್ತಿಯವರ ದೈಹಿಕ ಅನಾರೋಗ್ಯದ ಬಗ್ಗೆ ಅಲ್ಲ. ಅವರ ಮಾನಸಿಕ ಸ್ತಿಮಿತತೆಯನ್ನು ಪ್ರಶ್ನೆ ಮಾಡಿದ್ದಾರೆ. ಇಲ್ಲವಾದಲ್ಲಿ “I can’t argue with him, he is sick…” – ಎಂದು ಹೇಳುವ ಅಗತ್ಯವೇನಿತ್ತು?

ಒಂದಂತೂ ಸತ್ಯ ಇತ್ತೀಚೆಗೆ ಯಾವ ವಿ.ವಿಗೂ ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ನೇಮಕವಾಗುತ್ತಿಲ್ಲ. ಕೋಟಿಗಟ್ಟಲೆ ಹಣ ಸಂದಾಯ, ಹಸ್ತಾಂತರ ಆಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅನಂತಮೂರ್ತಿಯವರೇ ಈ ಬಗ್ಗೆ ಸುದ್ದಿವಾಹಿನಿಯೊಂದಕ್ಕೆ ಮಾತನಾಡಿದ್ದಾರೆ. ಒಂದು ಸಮುದಾಯದ ವ್ಯಕ್ತಿಯೊಬ್ಬರು ಕುಲಪತಿಯಾಗುತ್ತಾರೆಂದರೆ, ಆ ಸಮುದಾಯದ ಗುತ್ತಿಗೆದಾರರು, ಉದ್ಯಮಿಗಳು, ಇತರ ಆಸಕ್ತರು ’ಬಂಡವಾಳ’ ಹೂಡುತ್ತಾರಂತೆ. ಬಂಡವಾಳ ಹೂಡಿದ ಮೇಲೆ ಲಾಭ ಮಾಡಲೇಬೇಕಲ್ಲ? ಹಾಗಾಗಿ ಅವರ ವ್ಯಕ್ತಿ ಕುಲಪತಿ ಆದ ನಂತರ ವಿವಿಧ ಕಾಮಗಾರಿಗಳ ಹೆಸರಿನಲ್ಲ, ಕಾಲೇಜುಗಳ ಮಾನ್ಯತೆ ಹೆಸರಿನಲ್ಲಿ, ಬೋಧಕ ಹಾಗೂ ಬೋಧಕೇತರ ಹುದ್ದೆಗಳ ನೇಮಕಾತಿಯಲ್ಲಿ ಲಾಭ ಗಳಿಸುತ್ತಾರೆ.

ಒಂದು ವರ್ಷದ ಹಿಂದೆ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಆದ ನೇಮಕಾತಿಗಳಲ್ಲಿ ಸಾಕಷ್ಟು ಹಣ ಹರಿದ ವರ್ತಮಾನವಿದೆ. ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿಗಳಲ್ಲಿ ಆಗುವ ಅವ್ಯವಹಾರಗಳ ಬಗ್ಗೆ ಇತ್ತೀಚೆಗೆ ಸಾರ್ವಜನಿಕವಾಗಿ ಚರ್ಚೆಗಳಾಗುತ್ತಿವೆ ಆದರೆ, ವಿಶ್ವವಿದ್ಯಾನಿಲಯಗಳ ನೇಮಕಾತಿ ಬಗ್ಗೆ ಚರ್ಚೆಗಳು ಇನ್ನಷ್ಟೇ ಆಗಬೇಕಿದೆ.

ಹಂಸರಾಜ್ ಭಾರಧ್ವಾಜ್ ಅವರು ಕರ್ನಾಟಕಕ್ಕೆ ರಾಜ್ಯಪಾಲರಾಗಿ ನೇಮಕರಾದ ನಂತರ ಅವರು ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಅವರು ಅನೇಕ ’ಶಿಕ್ಷಣ ರತ್ನ’ಗಳನ್ನು ಈ ಕ್ಷೇತ್ರಕ್ಕೆ ಪರಿಚಯಿಸಿದ್ದಾರೆ. ತಪ್ಪು ಮಾಹಿತಿ ನೀಡಿ ಕುಲಪತಿ ಹುದ್ದೆಗೆ ಅರ್ಹತೆ ದಕ್ಕಿಸಿಕೊಂಡು ನೇಮಕವಾದ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ ಕುಲಪತಿ ಸನ್ಮಾನ್ಯ ರಾಜ್ಯಪಾಲರು ಈ ರಾಜ್ಯಕ್ಕೆ ಕೊಟ್ಟ ಬಳುವಳಿ. Tumkur-VC-Sharma-with-Governorತುಮಕೂರಿನಲ್ಲಿದ್ದುಕೊಂಡು ’ಫಟಾಫಟ್ ಪಿ.ಎಚ್.ಡಿ’ ಯೋಜನೆ ತಂದ ಮಹನೀಯರು ಕೂಡ ಇದೇ ರಾಜ್ಯಪಾಲರ ಆಯ್ಕೆ. ಇನ್ನು ಮೈಸೂರು ವಿ.ವಿ ಕುಲಪತಿಗಳ ಬಗ್ಗೆ, ಅವರ ಸಾಧನೆಗಳ ಬಗ್ಗೆ ಹೇಳಲು ಪದಗಳೇ ಸಿಗುತ್ತಿಲ್ಲ! ಇತ್ತೀಚೆಗೆ ಮೈಸೂರು ವಿ.ವಿ ನಡೆಸಿದ ಸ್ಲೆಡ್ (SLET) ಪರೀಕ್ಷೆಗಳಲ್ಲೂ ಅವ್ಯವಹಾರ ನಡೆಯುತ್ತಿದೆಯೆಂದು ಸುದ್ದಿಗಳು ಹರಿದಾಡುತ್ತಿವೆ. ಎರಡರಿಂದ ಮೂರು ಲಕ್ಷ ದುಡ್ಡು ಕೊಟ್ಟವರು ಬೋಧಕ ಹುದ್ದೆಗಳಿಗೆ ಅರ್ಹತೆ ಪಡೆಯುತ್ತಾರೆ. ಸದ್ಯದಲ್ಲೆ ರಾಜ್ಯ ಸರಕಾರ ಪದವಿ ಕಾಲೇಜುಗಳಿಗೆ ನೇಮಕಾತಿ ಆರಂಭಿಸುವ ಸೂಚನೆ ಇರುವುದರಿಂದ ಈ ದಂಧೆಗೆ ಮಹತ್ವ ದೊರಕಿದೆ.

ಅಷ್ಟೇ ಅಲ್ಲ..ಹಿಂದಿನ ಸರಕಾರ ಬೇಕಾಬಿಟ್ಟಿಯಾಗಿ ಖಾಸಗಿ ವಿ.ವಿ ಮಸೂದೆಗಳನ್ನು ಮಂಡಿಸಿ ಕೊಟ್ಟಂತೆ..ರಾಜ್ಯಪಾಲರು ಒಪ್ಪಿ ಸಹಿ ಹಾಕಿದರು. ಘನತೆವೆತ್ತ ರಾಜ್ಯಪಾಲರೇ ರಾಜ್ಯಕ್ಕೆ ನೀವಿತ್ತ ಸೇವೆ ಅತ್ಯಮೂಲ್ಯ. ನಿಮ್ಮ ಅವಧಿಯಲ್ಲಿ ’ಉನ್ನತ ಶೈಕ್ಷಣಿಕ ರಂಗ ಬಾನೆತ್ತರಕೆ ಬೆಳೆದು’ ಪ್ರಾಮಾಣಿಕರ ಕೈಗೆ ಎಟುಕದಂತಾಗಿದೆ. ನಿಮ್ಮ ಸೇವೆ ಪಡೆದ ಈ ರಾಜ್ಯವೇ ಧನ್ಯ. ದಯವಿಟ್ಟು… ತಾವು ಆದಷ್ಟು ಬೇಗ ಹೊರಟುಬಿಡಿ. ಆ ಮೂಲಕ ರಾಜ್ಯವನ್ನು ಕಾಪಾಡಿ.