Monthly Archives: January 2014

ಆಮ್ ಆದ್ಮಿ ಅಂದರೆ ಯಾರು?

ಇಂಗ್ಲೀಷ್ ಮೂಲ: Nissim Mannthukkaren
ಅನುವಾದ : ಬಿ.ಶ್ರೀಪಾದ ಭಟ್

As far men go, it is not what they are that interests me, but what they can become. – Jean-paul Sartre

ಕೆಲವು ವರ್ಷಗಳ ಹಿಂದೆ ಪಾರದರ್ಶಕ ಗಾಜಿನ ಷೋಕೇಶಿನಲ್ಲಿ ಪೇರಿಸಿಟ್ಟ ಸುಮಾರು 80,000 ಪಾದರಕ್ಷೆಗಳ ಕಡೆಗೆ ಬೆರಳು ತೋರಿಸುತ್ತಾ ನನ್ನ ನಾಲ್ಕು ವರ್ಷದ ಮಗಳು “ಈ ಚಿಕ್ಕ ಪಾದರಕ್ಷೆಗಳಿಗೆ ಇಲ್ಲಿ ಏನು ಕೆಲಸ?” ಎಂದು ಕೇಳಿದಳು. ಇವುಗಳಲ್ಲಿ 8000 ಪಾದರಕ್ಷೆಗಳು ಮಕ್ಕಳ ಶೂಗಳಾಗಿದ್ದವು. ಅಂದು ನಾವು ಪೋಲೆಂಡಿನ ಸರ್ಕಾರಿ ಮ್ಯೂಸಿಯಂಗೆ ಭೇಟಿ ಕೊಟ್ಟಿದ್ದಂತಹ ಸಂದರ್ಭ. ಈಗಿನ ಮ್ಯೂಸಿಯಂ ಸ್ಥಳವು ಒಂದು ಕಾಲದಲ್ಲಿ ಜರ್ಮನಿಯ ನಾಜಿಗಳ ಘಾತುಕ ಯಾತನಾ ಶಿಬಿರವಾಗಿತ್ತು. ನಾನು ನನ್ನ ಮಗಳ ಪ್ರಶ್ನೆಗೆ ಉತ್ತರಿಸದೆ ದೂರದಲ್ಲಿ ದೃಷ್ಟಿ ಹಾಯಿಸಿದೆ. ನಮ್ಮಂತಹ ಸಾಮಾನ್ಯ ಜನರು ಅರ್ಥಾತ್ “ಆಮ್ ಆದ್ಮಿ” ಈ ಘಾತುಕ SCHWAB 118427ಯಾತನಾ ಶಿಬಿರಗಳ ಉಸ್ತುವಾರಿ ವಹಿಸಿಕೊಂಡಿದ್ದರು ಎನ್ನುವ ಸಾರ್ವಕಾಲಿಕ ಸತ್ಯವನ್ನು ನಾನು ನನ್ನ ನಾಲ್ಕು ವರ್ಷದ ಮಗಳಿಗೆ ಹೇಳಲಿಲ್ಲ. ಈ “ಆಮ್ ಆದ್ಮಿ”ಗಳೇ ಸಾವಿರಾರು ಇತರ ಲಕ್ಷಾಂತರ ಸಾಮಾನ್ಯ ಜನರನ್ನು ಈ ಗ್ಯಾಸ್ ಛೇಂಬರ್‌ಗೆ ತಳ್ಳಿದ್ದರು. ಈ ಆಮ್ ಆದ್ಮಿಗಳೇ ಹಿಟ್ಲರ್‌ನನ್ನು ಚುನಾಯಿಸಿ ಆತನಿಗೆ ಆಳುವ ಅಧಿಕಾರ ನೀಡಿದ್ದರು. ರ್‍ವಾಂಡಾದ ಸಾಮಾನ್ಯ ಜನರೇ ತಮ್ಮದೇ ದೇಶದ ಲಕ್ಷಾಂತರ ಸಾಮಾನ್ಯ ಜನರನ್ನು ಹತ್ಯೆಗೈದಿದ್ದರು. ಈ ಸಾಮಾನ್ಯ ಜನರೇ ನರೋಡ ಪಾಟಿಯಾದಲ್ಲಿ ಗುಂಪುಗೂಡಿ ತಮ್ಮ ನೆರೆಹೊರೆಯ ಸಾಮಾನ್ಯ ಜನರ ಮೇಲೆ ಅತ್ಯಾಚಾರ ನಡೆಸಿದ್ದರು, ಅವರ ಮನೆಗಳನ್ನು ಲೂಟಿ ಮಾಡಿ, ಸುಟ್ಟು ಹಾಕಿದ್ದರು, ತಮ್ಮ ನೆರೆಹೊರೆಯವರ ಹತ್ಯೆಗೈದಿದ್ದರು.

“ಆಮ್ ಆದ್ಮಿ” ಮತ್ತೆ ಉದಯಿಸಿದ್ದಾನೆ. ನಾವು ಈ ಬೆಳವಣಿಗೆಯನ್ನು ಸ್ವಾಗತಿಸಲೇಬೇಕು. ಆದರೆ ಆಮ್ ಆದ್ಮಿ ಅಂದರೆ ಏನು ಅರ್ಥ? 27 ಮಹಡಿಗಳ ವೈಭವೋಪೇತ ಮ್ಯಾನ್ಷನ್ ಅನ್ನು ಸುತ್ತುವರೆದ ಸಾವಿರಾರು ಸ್ಲಂಗಳಲ್ಲಿ ವಾಸಿಸುತ್ತಿರವ ಸಾಮಾನ್ಯರು ಈ ಆಮ್ ಆದ್ಮಿಯ ವರ್ತುಲದ ಒಳಗಿದ್ದಾರೆಯೇ??

ಈ ಆಮ್ ಅಥವಾ ಸಾಮಾನ್ಯ ಪದದ ವಿಶ್ಲೇಷಣೆ ನಮ್ಮಲ್ಲಿ ಸಂಧಿಗ್ಧತೆಯನ್ನು ಹುಟ್ಟುಹಾಕುತ್ತದೆ. ಯಾವ ಬಗೆಯ ಸಾಮಾನ್ಯತೆ ಅಥವಾ ಜೀವನ ಮಟ್ಟ ಈ ಸಾಮಾನ್ಯತೆಯಿಂದ ಹೊರಗಿಡುತ್ತದೆ? ಈ ಆರ್ಥಿಕ ವಿಶ್ಲೇಷಣೆಯ ಹೊರತಾಗಿಯೂ ಈ ಸಾಮಾನ್ಯತೆಯನ್ನು ನಿರ್ಧರಿಸಲು ಬಳಸಬಹುದಾದ ನೈತಿಕ ಮತ್ತು ನ್ಯಾಯವಂತಿಕೆಯ ಮಾನದಂಡಗಳಾವುವು? ಏಕೆಂದರೆ ಸಾಮಾನ್ಯ ಜನರು ಇತರೇ ಆಮ್ ಆದ್ಮಿಗೆ ಏನನ್ನಾದರೂ ಮಾಡಲು ಸಾಮರ್ಥ್ಯವಿರುವವರೆಂದು ನಾವಾಗಲೇ ಗಮನಿಸಿದ್ದೇವೆ.

ನಾವು ಕೇವಲ ಆಮ್ ಆದ್ಮಿ ಟೋಪಿ ಧರಿಸಿ, ’ಮೈ ಹೂಂ ಆಮ್ ಆದ್ಮಿ’ ಮಂತ್ರ ಜಪಿಸುತ್ತ ಇದು ಆರಂಭ ಮಾತ್ರ ಎಂದು AAP Launchಮೇಲಿನ ಪ್ರಶ್ನೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಇಲ್ಲಿನ ಈ ಸಾಮಾನ್ಯ ಜನರು ಕೇವಲ ಒಂದು ಸಂಕೇತವಲ್ಲ. ವಿವಿಧ ಜಾತಿಗಳು, ವರ್ಗಗಳು, ಜನಾಂಗೀಯ ಭಿನ್ನತೆಯಂತಹ ಸಂಕೀರ್ಣತೆಯನ್ನು ಒಳಗೊಳ್ಳದೆ ಏಕರೂಪಿಯಾಗಿ ಶೂನ್ಯದಲ್ಲಿ ಈ ಆಮ್ ಆದ್ಮಿ ಇರಲು ಸಾಧ್ಯವೇ ಇಲ್ಲ. ಮೇಲಿನ ವಿಪರ್ಯಾಸಗಳನ್ನು, ಸಂಧಿಗ್ಧತೆಗಳನ್ನು, ಭಿನ್ನತೆಗಳನ್ನು ಗುರುತಿಸದೆ, ಮಾನ್ಯ ಮಾಡದೆ, ಪ್ರಜಾಪ್ರಭುತ್ವದ ಮಾದರಿಗಳನ್ನು ಅನುಸರಿದೇ ಹೋದರೆ ಈ ಪ್ರಜಾಪ್ರಭತ್ವವೇ ಟೊಳ್ಳಾಗುತ್ತದೆ. ಈ ಟೊಳ್ಳುಗೊಂಡಂತಹ ಪ್ರಜಾಪ್ರಭುತ್ವದಲ್ಲಿ ಜನಸಾಮಾನ್ಯರ ಸರ್ಕಾರವೆಂದರೆ ಒಬ್ಬ ವ್ಯಕ್ತಿ ಅನೇಕರ ಮೇಲೆ ಅಧಿಕಾರ ಚಲಾಯಿಸುವುದೆಂದೇ ಅರ್ಥ. ಈ ಜನತೆ ಒಕ್ಕೂಟದಲ್ಲಿ ಒಂದಾಗುವುದೆಂದರೆ ಈ ಒಗ್ಗಟ್ಟು authoritarian ಸ್ವರೂಪ ಪಡೆದುಕೊಳ್ಳುವುದೇ ಇಲ್ಲಿನ ಬಲು ದೊಡ್ಡ ವ್ಯಂಗ. ಈ authoritarian ಸರ್ವಾಧಿಕಾರದ ರೂಪದಲ್ಲಿ ಸಾಮಾನ್ಯ ಜನರ ಮೇಳೆ ದಬ್ಬಾಳಿಕೆಯನ್ನು ನಡೆಸುವ ಸಾಮರ್ಥ್ಯ ಪಡೆದುಕೊಂಡಿರುತ್ತದೆ.

ಈ ಜನ ಸಾಮಾನ್ಯರ ಉತ್ಕರ್ಷವನ್ನು ಸಂಭ್ರಮಿಸುವುದರ ಮೂಲಕ ಈ ಜನಸಾಮಾನ್ಯರನ್ನು ಜನಪ್ರಿಯತೆಯೊಂದಿಗೆ ಸಮೀಕರಿಸುವ ಅಪಾಯಕ್ಕೆ ತಳ್ಳಲ್ಪಡುತ್ತೇವೆ. ಪ್ರಜಾಪ್ರಭುತ್ವವೆಂದರೆ ಕೇವಲ ದೂರವಾಣಿ ಲೈನ್‌ಗಳನ್ನು ಉದ್ಘಾಟಿಸುವುದು ಮಾತ್ರವಲ್ಲ, ಜನ ಸಾಮಾನ್ಯರನ್ನು ನಿನ್ನ ಅಭಿಪ್ರಾಯವನ್ನು ತಿಳಿಸಲು ವೋಟ್ ಮಾಡಿ ಎಂದು ಕೇಳುವುದು ಮಾತ್ರವಲ್ಲ. ಈ ಮಾದರಿಯ ಜನಪ್ರಿಯತೆಯ ಅಭಿಪ್ರಾಯವನ್ನೇ ನಾವು ಅಳತೆಗೋಲಾಗಿ ಪರಿಗಣಿಸಿದಲ್ಲಿ ದೃಶ್ಯ ಮಾಧ್ಯಮದಲ್ಲಿ ಪ್ರದರ್ಶಿತವಾಗುವ “ಬಿಗ್ ಬಾಸ್” ಕಾರ್ಯಕ್ರಮಕ್ಕೂ ಇದೇ ಬಗೆಯ ಮಾನ್ಯತೆ ಕೊಡಬೇಕಾಗುತ್ತದೆ. ಏಕೆಂದರೆ ಈ “ಬಿಗ್ ಬಾಸ್”ದ ಜನಪ್ರಿಯತೆ ಸಹ ಜನಸಾಮಾನ್ಯರ ವೋಟ್‌ನ ಮೇಲೆ ಅವಲಂಬಿತವಾಗಿದೆ. ಇದರ ವೋಟ್‌ನ ಶೇಕಡಾವಾರು ಪ್ರಮಾಣ ಸಾರ್ವತ್ರಿಕ ಚುನಾವಣೆಗಿಂತಲೂ ಅಧಿಕವಿತ್ತೇ ಎನ್ನುವುದರ ಬಗೆಗೂ ಚರ್ಚೆಯಾಗಿತ್ತು.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಕೇವಲ ಜ್ಞಾನಯುಕ್ತ ಗುಂಪು ಮಾತ್ರವಲ್ಲ, ಜೊತೆಗೆ ಮುಖ್ಯವಾಗಿ ನ್ಯಾಯವಂತ ಸಮುದಾಯವೂ ಹೌದು. ಹಾಗಾಗಿಯೇ ಇಲ್ಲಿ ನಾವು ಯಾವ ಮಾದರಿಯ ಆಮ್ ಆದ್ಮಿ ಆಗಿರಬೇಕೆಂಬುದೇ ಪ್ರಮುಖವಾಗಿ ನಿರ್ಧರಿಸಲ್ಪಡಬೇಕು.

ಸಾಮಾಜಿಕ, ರಾಜಕೀಯ ಹೋರಾಟಗಳು ಸಂಪೂರ್ಣ ಅಂಚಿಗೆ ತಳ್ಳಲ್ಪಟ್ಟ, ತಳಸಮುದಾಯಗಳ, ವ್ಯವಸ್ಥೆಯ ಕಟ್ಟಕಡೆಯ ವ್ಯಕ್ತಿಯನ್ನು ಪ್ರಾತಿನಿಧಿಸಿದಾಗ ಮಾತ್ರ (ಅದು ಪ್ರಜ್ಞಾಪೂರ್ವಕ ಅಥವಾ ಅಪ್ರಜ್ಞಾಪೂರ್ವಕವಾಗಿ ಆಗಿರಲಿ) ಅದರ ಚಳುವಳಿ ತನ್ನ ತಾರ್ಕಿಕ ಅಂತ್ಯಕ್ಕೆ ಮುಟ್ಟುತ್ತದೆ. ಇದನ್ನು ಒಳಗೊಳ್ಳದೇ ಹೋದರೆ ಆ ಚಳುವಳಿ ತಾನು ಪ್ರಾತಿನಿಧಿಸುವ ಸಾಮಾನ್ಯತೆ ಮತ್ತು ಸರಳತೆ ಕೇವಲ ನಿರ್ವಿಕಾರವಾಗಿರುತ್ತದೆ. ಇದು ನಿರ್ವಾತದಲ್ಲಿ ಜರುಗುತ್ತಿರುತ್ತದೆ.

ಮೆಕ್ಸಿಕೋದಲ್ಲಿ ಮೂಲ ಜನಾಂಗವಾದ Zapatistas ಹಕ್ಕುಗಳಿಗಾಗಿ, ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ದಿಟ್ಟ ನಾಯಕ ಮಾರ್ಕೋಸ್ ನನ್ನು ಅಲ್ಲಿನ ಪ್ರಭುತ್ವವು ಆತನನ್ನು ಗೇ ಎಂದು ಆರೋಪಿಸಿ ಕಳಂಕಗೊಳಿಸಲು ಯತ್ನಿಸಿತು. ಆಗ ಮಾರ್ಕೋಸ್ ಉತ್ತರಿಸಿದ್ದು ಹೀಗೆ: “ಹೌದು, ಮಾರ್ಕೋಸ್ ಸಾನ್ ಫ್ರಾನ್ಸಿಸ್ಕೋದಲ್ಲಿ ಗೇ ಅನ್ನುವುದು ನಿಜ, ಹಾಗೆಯೇ ದಕ್ಷಿಣ ಅಮೇರಿಕದಲ್ಲಿ ಮಾರ್ಕೋಸ್ ಕಪ್ಪುವರ್ಣೀಯ, ಯುರೋಪಿನಲ್ಲಿ ಮಾರ್ಕೋಸ್ ಏಷ್ಯಾದವನು, ಸ್ಪೇನ್‌ನಲ್ಲಿ ಅರಾಜಕತಾವಾದಿ, ಇಸ್ರೇಲ್‌ನಲ್ಲಿ ಮಾರ್ಕೋಸ್ ಪ್ಯಾಲಸ್ಟೇನಿಯನ್, ಜರ್ಮನಿಯಲ್ಲಿ ಮಾರ್ಕೋಸ್ ಯಹೂದಿ, ಪೋಲಂಡ್‌ನಲ್ಲಿ ಜಿಪ್ಸಿ, ಬೋಸ್ನಿಯಾದಲ್ಲಿ ಪೆಸಿಫಿಸ್ಟ್, ಈ ಮಾರ್ಕೋಸ್ ಮೆಟ್ರೋ ನಗರಗಳಲ್ಲಿ ರಾತ್ರಿ 10 ಘಂಟೆಗೆ ಏಕಾಂಗಿಯಾಗಿ ಸಂಚರಿಸುವ ಮಹಿಳೆ, ಈ ಮಾರ್ಕೋಸ್ ಜಮೀನಿಲ್ಲದ ರೈತ, ಸ್ಲಂನ ಸದಸ್ಯ, ನಿರುದ್ಯೋಗಿ, ಅತೃಪ್ತ ವಿದ್ಯಾರ್ಥಿ ಮತ್ತು ಬೆಟ್ಟಗುಡ್ಡಗಳಲ್ಲಿ Zapatistas.”

ಹಾಗಿದ್ದಲ್ಲಿ ನಮ್ಮ “ಆಮ್ ಆದ್ಮಿ” ಮಾರ್ಕೋಸ್‌ನಂತೆ ‘ಇನ್ನು ಸಾಕು ಮಾಡಿ ಎಂದು ಪ್ರತಿರೋಧಿಸುವ ಅಲ್ಪಸಂಖ್ಯಾತರಾಗಬಲ್ಲರೇ?’ ನಮ್ಮ “ಆಮ್ ಆದ್ಮಿ” ತಮ್ಮೆಲ್ಲ ಶಕ್ತಿಯನ್ನು ಬಳಸಿ ಮಾತನಾಡಬಲ್ಲ ಅಲ್ಪಸಂಖ್ಯಾತರು ಮತ್ತು ಶಾಂತವಾಗಿ, Aam-Aadmiಮೌನವಾಗಿ ಆಲಿಸುವ ಬಹುಸಂಖ್ಯಾತರಾಗಬಲ್ಲರೇ? ನಮ್ಮ “ಆಮ್ ಆದ್ಮಿ” ಖೈರ್ಲಾಂಜಿಯಲ್ಲಿ ದಲಿತರಾಗಬಲ್ಲರೇ? ಬಸ್ತರ್‌ನಲ್ಲಿ ಆದಿವಾಸಿಗಳಾಗಬಲ್ಲರೇ? ಮಣಿಪುರದಲ್ಲಿ ಮನೋರಮಾ?

ಆಮ್ ಆದ್ಮಿ ಈ ಕ್ಷಣದ ಅಗತ್ಯಗಳಿಗೆ ಮಾತ್ರ ಸ್ಪಂದಿಸುತ್ತಾ ಕಾಲಹರಣ ಮಾಡುವರೇ ಅಥವಾ ತಮ್ಮನ್ನು ಮೀರಿದ ಜಗತ್ತೊಂದು ಇದೆ ಎನ್ನುವ ಸಾಮಾನ್ಯ ಜ್ಞಾನದ ಪ್ರಾಪ್ತಿಗಾಗಿ ಪ್ರಯತ್ನಿಸುವರೇ? ದೇಶಾಭಿಮಾನವನ್ನು ಮೀರಿದ ಮಾನವೀಯತೆಯ ಆವರಣದ ಕಡೆಗೆ ಮುಖ ತಿರುಗಿಸುವರೇ?

ಈ ಎಲ್ಲಾ ಪ್ರಶ್ನೆಗಳಿಗೆ, ಅವುಗಳ ಪ್ರಸ್ತುತೆಯ ಕುರಿತಾಗಿ ಮಾನ್ಯತೆ, ಅಂಗೀಕಾರಗಳು ಇಲ್ಲದೇ ಹೋದರೆ, ಈ ಪ್ರಶ್ನೆಗಳಿಗೆ ಕನಿಷ್ಟ ಉತ್ತರಿಸುವ ಪ್ರಯತ್ನವನ್ನೂ ಮಾಡದೇ ಹೋದಲ್ಲಿ ಈ ಆಮ್ ಆದ್ಮಿಯಲ್ಲಿ ಆಮ್ ಅನ್ನುವಂತಾದ್ದೇನು ಇಲ್ಲವೆಂದೇ ಅರ್ಥ. ಕನಿಷ್ಟ 27 ಮ್ಯಾನ್ಷನ್ ಕಟ್ಟಡದಲ್ಲಿ ವಾಸಿಸುವ ಜನತೆ ಮೇಲಿನ ಅರ್ಥದಲ್ಲಿ ಆಮ್ ಆದ್ಮಿ ಆಗಲು ಬಯಸಿದರೆ ಅದು ಕುಟಿಲತೆ ಎಂದು ಅರ್ಥೈಸಬಾರದು. ಅದನ್ನು ಸಧೃಢವಾದ ಐಡಿಯಾಲಜಿ ಎಂದೇ ಪರಿಗಣಿತವಾಗುತ್ತದೆ.

ಬಾರ್ಬರಿಸಂ ಮತ್ತು ಪ್ರಾದೇಶಿಕ ಸಂಸ್ಕೃತಿಯ ನಡುವೆ ಸಿಲುಕಿಕೊಂಡ ಸಾಮಾನ್ಯ ಜನತೆಯೇ ಬಾಸ್ಟಿಲ್‌ನಲ್ಲಿ ರಾಜ ದರ್ಬಾರನ್ನು ಕೆಳಗಿಳಿಸಿತು, ಹೈಟಿಯಲ್ಲಿ ಗುಲಾಮಿ ಸಂಸ್ಕೃತಿಯ ವಿರುದ್ಧ ದಂಗೆಯೆದ್ದಿತು. ದ್ವಾರಪಾಲಕರಾಗಲು, ಕ್ಲರ್ಕಗಳಾಗಲು, ಗಾರ್ಡಗಳಾಗಲು, ನರೋಡಾ ಪಟಿಯಾದ, ರ್‍ವಾಂಡಾದ ಭವಿಷ್ಯದ ಮ್ಯಾನೇಜರ್‌ಗಳಾಗಲು ನಿರಾಕರಿಸುವಂತಹ “ಆಮ್ ಆದ್ಮಿ”ಗಳನ್ನು ಶೋಧಿಸೋಣ. ನಮ್ಮ “ಆಮ್ ಆದ್ಮಿ”ಗಳನ್ನು ನಾವೇ ಕಟ್ಟೋಣ.

(ಕೃಪೆ : ದ ಹಿಂದೂ, 26 ಜನವರಿ, 2014)

ನೆಲಕಣಜ : ಪುಸ್ತಕ ಪರಿಚಯ

– ಬಿ. ಶ್ರೀಪಾದ ಭಟ್

ಹಿರಿಯ ಸ್ನೇಹಿತರಾದ ಎನ್. ಗೋವಿಂದಪ್ಪನವರ ಗ್ರಾಮ ಸಂಸ್ಕೃತಿಯ ಕುರಿತಾದ ಲೇಖನಗಳ ಪುಸ್ತಕ “ನೆಲಕಣಜ” ಮೊನ್ನೆ ಹುಣ್ಣಿಮೆಯಂದು nelakanaja-frontಬಿಡುಗಡೆಯಾಯ್ತು. ಇದನ್ನು ಆದಿಮ ಪ್ರಕಾಶನದವರು ಪ್ರಕಟಿಸಿದ್ದಾರೆ.

ಗೋವಿಂದಪ್ಪನವರು ಮಹಾನ್ ತಾಯ್ತನದ ವ್ಯಕ್ತಿ. ಅವರ ಮಾನವೀಯತೆ ಮತ್ತು ಸದಾ ತುಡಿಯುವ ಅಂತಃಕರಣ, ಹಾಗೂ ಗ್ರಾಮ ಸಂಸ್ಕೃತಿಯ ದಟ್ಟ ಅನುಭವಗಳು ಈ ಗ್ರಾಮೀಣ ಲಯಗಳ ಮತ್ತು ಈ ಮಣ್ಣಿನ ಬದುಕನ್ನು ಕುರಿತಾಗಿ ಅತ್ಯಂತ ಅಪ್ತವಾಗಿ ಮತ್ತು ಪ್ರಾಮಾಣಿಕವಾಗಿ ಬರೆಯುವಂತೆ ಮಾಡಿದೆ. ರಾಮಯ್ಯನವರು ಬೆನ್ನುಡಿಯಲ್ಲಿ ಬರೆದಂತೆ ಇಲ್ಲಿ ಮುರಿದು ಬಿದ್ದಿರುವ ಅರವಂಟಿಕೆಗಳು, ಕಾಣೆಯಾಗುತ್ತಿರುವ ಸಾಲು ಮರಗಳು, ಕಣಜಗಳು, ಮಳೆ ನಕ್ಷತ್ರಗಳು, ಕಂಬಳಿ ಕಾಯಕ ಮುಂತಾದ ಜೀವತೋರಣಗಳ ಸಂಭ್ರಮಗಳನ್ನು, ಪತನಗಳನ್ನು ಗೋವಿಂದಪ್ಪ ಸಶಕ್ತವಾಗಿ ಕಟ್ಟಿಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನು ಅವರು ಸಾಧಿಸಿದ್ದು ತಮ್ಮ ಜೀವಪರ ವ್ಯಕ್ತಿತ್ವದಿಂದ. ಕೊಂಚವೂ ಜಡವಾಗಲು ನಿರಾಕರಿಸುವ ಸೂಕ್ಷ್ಮತೆಯಿಂದ.

ಬೌದ್ಧಿಕ ಬಡಿವಾರಗಳನ್ನು ನಿರ್ಲಜ್ಯದಿಂದ ಪ್ರದರ್ಶಿಸುವ, ಸಾಮಾಜಿಕ, ರಾಜಕೀಯ, ಸಾಹಿತ್ಯಕ, ಸಾಂಸ್ಕೃತಿಕ ಪಠ್ಯಗಳ ಆಳವಾದ ಓದಿನಿಂದ, ಚರ್ಚೆಯಿಂದ ದೊರಕಿದ ಅಪಾರ ಜ್ಞಾನವನ್ನು ಅಕಡೆಮಿಕ್‌ನ ಅಹಂಕಾರವನ್ನು ವ್ಯಕ್ತಪಡಿಸಲು ಮಾತ್ರ ಬಳಸುವ ನಮ್ಮ ಅನೇಕ ಯೂನಿವರ್ಸಿಟಿ ಬುದ್ಧಿಜೀವಿಗಳಿಗೆ ಒಂದು ಮಾನವೀಯತೆಯ ಪಾಠದಂತಿದೆ ಇಲ್ಲಿನ ಸರಳರೇಖೆಯಂತಿರುವ ಲೇಖನಗಳು.

ಸರಳವಾಗಿರುವ ಇಲ್ಲಿನ ಲೇಖನಗಳಿಗೆ ಇನ್ನಷ್ಟು ವಿಸ್ತಾರ ಮತ್ತು ಆಳವಾದ ಒಳನೋಟಗಳ ಕೊರತೆಯಿದೆ. ಆದರೆ ಲೇಖಕರು ಮುಂದಿನ ದಿನಗಳಲ್ಲಿ ಈ ಶೈಲಿ ವಿಸ್ತಾರವನ್ನು ಬೇಡುವ ಈ ಬೆಳವಣಿಗೆಯನ್ನು ಸಾಧಿಸಲು ಅಮೂರ್ತವಾದ ಆದರೆ ವ್ಯಾಪಕವಾದ ಗ್ರಹಿಕೆಯನ್ನು ಕಂಡುಕೊಳ್ಳುತ್ತಾರೆ ಎನ್ನುವ ಭರವಸೆಯಂತೂ ಇಲ್ಲಿ ದೊರಕುತ್ತದೆ.

ಗೋವಿಂದಪ್ಪನವರು ಈ ಗ್ರಾಮ ಸಂಸ್ಕೃತಿಯನ್ನು ಸ್ವತಃ ಅನುಭವಿಸಿದವರು, ಕಣ್ಣಾರೆ ಕಂಡವರು ಮತ್ತು ಇಂದು ಅದರ ಕಣ್ಮರೆಗೆ ಸಾಕ್ಷಿಯಾಗುತ್ತಲೇ ಅಸಹಾಯಕತೆಯಿಂದ ವಿಷಾದಿಸುತ್ತಿರುವವರು. ಲೇಖಕರ ಈ ಪ್ರಾಮಾಣಿಕ ಗುಣಗಳೇ nelakanaja-backಇದು ಒಂದು ವರದಿಯಾಗುವ ಅಪಾಯದಿಂದ ಪಾರು ಮಾಡಿದ್ದು. “ಆದಿಮ ಲಿವಿಂಗ್ ಟೈಮ್ಸ್” ಪತ್ರಿಕೆಯಲ್ಲಿ ಪ್ರಕಟಗೊಂಡ ಇಲ್ಲಿನ ಬಹುಪಾಲು ಲೇಖನಗಳು ಆ ಪತ್ರಿಕೆಗೆ ಸದಾ ಅಂಟಿಕೊಳ್ಳುತ್ತಿದ್ದ ಅಕಡೆಮಿಕ್ ಚಿಂತನೆಗಳ ಕ್ಲೀಷೆಯಿಂದ ಪಾರುಮಾಡಿತು ಎಂದು ನಾನು ಭಾವಿಸುತ್ತೇನೆ.


“ನೆಲಕಣಜ – ಗ್ರಾಮ ಸಂಸ್ಕೃತಿಯ ಕೆಲವು ಟಿಪ್ಪಣಿಗಳು”
ಲೇಖಕರು : ಎನ್.ಗೋವಿಂದಪ್ಪ
ಪ್ರಕಾಶಕರು : ಆದಿಮ ಪ್ರಕಾಶನ, ಶಿವಗಂಗೆ, ವಡೇರಹಳ್ಳಿ ಅಂಚೆ, ಕೋಲಾರ – 563101

ನಾಯಿ, ನರಿ, ನೊಣ ಈ ದೇವಸ್ಥಾನಕ್ಕೆ ಹೋಗಬಹುದು, ಆದರೆ ದಲಿತರಿಗೆ ಪ್ರವೇಶವಿಲ್ಲ!

– ಶುಕ್ಲಾಂ ಸಕಲೇಶಪುರ

’ದಲಿತರು ಆ ದೇವಸ್ಥಾನಕ್ಕೆ ಹೋದರೆ, ಅವರಿಗೆ ಅಪಾಯ ಶತಃಸಿದ್ಧ’, ಇಂತಹದೊಂದು ಸುಳ್ಳು (ಇಂತಹ ಸುಳ್ಳನ್ನು ನಂಬಿಕೆ ಎಂದೂ ಕರೆಯಬಹುದು) ಸಕಲೇಶಪುರ ತಾಲೂಕಿನ ಗಡಿ ಭಾಗದ ಕಾಗಿನಹರೆ ಹಳ್ಳಿಯ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಬಲವಾಗಿ ಹಬ್ಬಿದೆ. ಆ ಕಾರಣ ಶತಮಾನದಷ್ಟು ಹಳೆಯದಾದ ದೇವಸ್ಥಾನಕ್ಕೆ ಇಂದಿಗೂ ಸ್ಥಳೀಯ ದಲಿತರು ಹೋಗುವುದಿಲ್ಲ. ಆ ದೇವಸ್ಥಾನಕ್ಕೆ ಅಷ್ಟೇ ಅಲ್ಲ, kaginahare-shiradi-temple-1ಆ ದೇವಸ್ಥಾನ ಇರುವ ಕಾಗಿನಹರೆಗೆ ಹೋಗಲೂ ಹಿಂಜರಿಯುತ್ತಾರೆ. ಇದುವರೆಗೆ ಒಬ್ಬೇ ಒಬ್ಬ ದಲಿತನೂ, ಆ ಊರಲ್ಲಿ ಮನೆ ಮಾಡಿಲ್ಲ. ಆ ಮೂಲಕ ದಲಿತರಿಗೆ ಆ ಊರು ಒಂದರ್ಥದಲ್ಲಿ ನಿಷೇಧಿತ ಪ್ರದೇಶ. ಆದರೆ ಅಲ್ಲಿಯ ಮುಂದುವರಿದ ಜನಾಂಗದವರ ಹೊಲ, ಗದ್ದೆ, ತೋಟಗಳಿಗೆ ಕಾರ್ಮಿಕರಾಗಿ ದುಡಿಯಲಷ್ಟೇ ದಲಿತರು ಅರ್ಹರು. ಸುಂದರ ಪಶ್ಚಿಮ ಘಟ್ಟಗಳ ಬುಡದಲ್ಲಿರುವ ಆ ಹಳ್ಳಿಯಲ್ಲಿ ಅವರು ನೆಲೆಯೂರುವಂತಿಲ್ಲ!

ಹತ್ತಾರು ವರ್ಷಗಳ ಹಿಂದೆ ಕೆಲ ದಲಿತರು ಗೊತ್ತಿಲ್ಲದೆ ಆ ದೇವಸ್ಥಾನ ಆವರಣ ಪ್ರವೇಶ ಮಾಡಿ ನೋವುಂಡರಂತೆ. ಆ ಕಾರಣ ಇಂದಿಗೂ, ಆ ಭಾಗದ ಆಸ್ತಿಕ ದಲಿತರಲ್ಲಿ, ಕಾಗಿನಹರೆಯ ಚಾಮುಂಡಿ ಎಂದರೆ ಭಯ. ದೂರದ ತಮಿಳು ನಾಡು, ಕೇರಳಗಳಿಂದ ಕೂಡ ಭಕ್ತರು ಇಲ್ಲಿಗೆ ಬರುತ್ತಾರೆ. ಆದರೆ ಪಕ್ಕದಲ್ಲೇ ಇರುವ ದಲಿತರು ಮಾತ್ರ ಇತ್ತ ತಲೆ ಹಾಕುವುದಿಲ್ಲ. ’ನಾವು ಅತ್ತ ತಲೆ ಹಾಕಿ ಮಲಗುವುದೂ ಇಲ್ಲ, ಆ ದಿಕ್ಕಿನ ಕಡೆಗೆ ಮುಖ ಹಾಕಿ ನಮಸ್ಕಾರ ಕೂಡ ಮಾಡುವುದಿಲ್ಲ..’ ಎಂದು ಅನೇಕ ದಲಿತರು ಹೇಳುವುದುಂಟು. ಕೆಲ ವರ್ಷಗಳ ಹಿಂದೆ ’ಇಲ್ಲಿ ದಲಿತರಿಗೆ ಪ್ರವೇಶ ಇಲ್ಲ’ ಎಂಬ ಬೋರ್ಡ್ ಕೂಡ ಹಾಕಿದ್ದರು ಎಂದು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ.

ಇಲ್ಲಿಯ ಚಾಮುಂಡಿಗೆ ದಲಿತರು ಆಗಿ ಬರೋಲ್ಲವಂತೆ! ಇಂತಹದೊಂದು ಸುಳ್ಳನ್ನು ಸೃಷ್ಟಿಸಿದ್ದು ಯಾರು? ನಿಸ್ಸಂಶಯವಾಗಿ ದಲಿತರಂತೂ ಆಗಿರಲಿಕ್ಕಿಲ್ಲ. ಅಸ್ಪೃಶ್ಯತೆಯನ್ನು ಸಾವಿರಾರು ವರ್ಷಗಳಿಂದ ಕಾಪಾಡಿಕೊಂಡು ಬಂದ ಮುಂದುವರಿದ ಜನಾಂಗದವರು ಇಂತಹದೊಂದು ಸುಳ್ಳನ್ನು ಸೃಷ್ಟಿಸಿ, ದಲಿತರು ಈ ದೇವಸ್ಥಾನಕ್ಕೆ ಬರಲು ಅರ್ಹರಲ್ಲ ಎಂದು ಸಾರಿದರು. ಆ ಮೂಲಕ ದಲಿತರನ್ನು ಮುಖ್ಯವಾಹಿನಿಯಿಂದ ದೂರ ಇಡಬಹುದು. ಅಷ್ಟೇ ಅಲ್ಲ, ಅವರನ್ನು ದೇವಸ್ಥಾನದಿಂದ, ಆ ಊರಿನಿಂದ ದೂರ ಇಡಬಹುದು. ಈ ಉದ್ದೇಶಗಳಲ್ಲದೆ ಬೇರೆ ಯಾವ ಉದ್ದೇಶಗಳೂ ಕಾರಣವಲ್ಲ. ಹಾಗಿಲ್ಲದಿದ್ದರೆ, ನಾಯಿ, ನರಿ, ನೊಣ, ಸೊಳ್ಳೆ..ಕಣ್ಣಿಗೆ ಕಾಣದ ಅಮೀಬಾ, ಬ್ಯಾಕ್ಟೀರಿಯಾಗಳೆಲ್ಲಾ ಆ ದೇವಸ್ಥಾನದ ಆವರಣಕ್ಕೆ ಹೋಗಬಹುದು, ಆದರೆ ದಲಿತರು ಮಾತ್ರ ಅಲ್ಲ ಎನ್ನಲು ಬೇರೇನು ಕಾರಣ ಇದ್ದೀತು?

ಕಾಗಿನಹರೆ ಇಂದು ಸಕಲೇಶಪುರ ಎಂಬ ಮೀಸಲು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುತ್ತದೆ. ಕ್ಷೇತ್ರವನ್ನು ಪ್ರತಿನಿಧಿಸುವ kaginahare-shiradi-temple-2ಶಾಸಕ ಹೆಚ್.ಕೆ. ಕುಮಾರಸ್ವಾಮಿ ದಲಿತರು. ಅನೇಕ ಬಾರಿ ಜನರ ಮತ ಕೇಳಲು, ಆ ಊರಿಗೆ ಹೋಗಿದ್ದ ಕುಮಾರಸ್ವಾಮಿ, ಇದುವರೆಗೂ ಆ ದೇವಸ್ಥಾನಕ್ಕೆ ಕಾಲಿಟ್ಟಿಲ್ಲ. ಊರಿನ ಪ್ರವೇಶದಲ್ಲಿಯೇ ಆ ದೇವಸ್ಥಾನ ಇರುವುದರಿಂದ, ಅದು ಕಣ್ಣಿಗೆ ಬಿದ್ದಿಲ್ಲ ಎಂದು ಹೇಳಲಾಗದು. ಊರ ಮಂದಿ ಹೇಳುವ ಪ್ರಕಾರ, ಶಾಸಕರಿಗೆ ವ್ಯವಸ್ಥಿತವಾಗಿ ಪ್ರಚಾರ ಆಗಿರುವ ನಂಬಿಕೆ (ಅರ್ಥಾತ್ ಸುಳ್ಳು) ಬಗ್ಗೆ ಗೊತ್ತಿರುವುದರಿಂದ ಅವರು ದೇವಸ್ಥಾನ ಪ್ರವೇಶ ಮಾಡಿಲ್ಲ.

ಜಾತಿ ಎನ್ನುವುದು ಇಲ್ಲವೇ ಇಲ್ಲ. ಅದು ವಸಾಹತುಶಾಹಿಯ ಸೃಷ್ಟಿ ಎಂದು ಬೊಬ್ಬಿಡುವ ಮಂದಿಗೆ ಇದೆಲ್ಲವೂ ಅರ್ಥವಾಗುವುದು ಯಾವಾಗ? ಸಕಲೇಶಪುರ, ಹೆತ್ತೂರು, ಹೊಂಗಡಹಳ್ಳ, ಅತ್ತಿಹಳ್ಳಿ, ಬಾಳೇಹಳ್ಳದಂತಹ ಊರುಗಳಲ್ಲಿರುವ ದಲಿತರನ್ನು ಒಮ್ಮೆ ’ಕಾಗಿನಹರೆ ಚಾಮುಂಡಿಗೆ ಹೋಗಿದ್ದೀರಾ..?’ ಎಂದು ಕೇಳಿ ನೋಡಿ. ಒಂದು ಕ್ಷಣ ಬೆಚ್ಚಿ ಬೀಳುತ್ತಾರೆ. ಕಾರಣ ಇಷ್ಟೆ… ತಲೆತಲಾಂತರಗಳಿಂದ ಅವರ ಪೂರ್ವಿಕರು ಅವರಿಗೆ ಹೇಳಿರುವುದು ’ಆ ದೇವಿಯ ಬಗ್ಗೆ ಮಾತನಾಡಬಾರದು, ಅವಳನ್ನು ನೋಡಬಾರದು..’ ಇಂದಿಗೂ ಅಲ್ಲಿ ಅದೇ ಸಂಪ್ರದಾಯ ಮುಂದುವರೆಯುತ್ತಿದೆ. ಪೂಜೆಗೆ ಅರ್ಹಳಾಗುವ ದೇವತೆಯೊಬ್ಬಳನ್ನು ಕೆಲವೇ ಸಮುದಾಯಗಳಿಗೆ ಸೀಮಿತ ಮಾಡುವುದೆಂದರೆ ಏನು? ’ಒಬ್ಬ ದೇವತೆಯೂ, ತನ್ನ ಭಕ್ತರನ್ನು ಜಾತಿಯ ಲೆಕ್ಕಾಚಾರದಲ್ಲಿ ನೋಡುತ್ತಾಳಾ…?’- ಎಂಬ ಕನಿಷ್ಟ ಸಾಮಾನ್ಯ ಜ್ಞಾನದ ಪ್ರಶ್ನೆ ಅಲ್ಲಿಯ ಮುಂದುವರಿದ ಜನಾಂಗದ ಜನರಿಗೆ ಏಕೆ ಕಾಡಲಿಲ್ಲ?

ಇಲ್ಲಿ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ಕೊಡಿಸುವ ಪ್ರಶ್ನೆಯಿಲ್ಲ. ಒಂದು ನಿರ್ದಿಷ್ಟ ಪ್ರದೇಶದ ಪ್ರವೇಶಕ್ಕೆ ಅವರು ಅನರ್ಹರು ಎಂದು ಸಾರುವ ಮೂಲಕ ಅವರನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುವ ಪ್ರಯತ್ನ. ಅವರನ್ನು ಹಾಗೆ ಕುಗ್ಗಿಸಿದರೆ, ಅವರು ಆ ದೇವಸ್ಥಾನದತ್ತ ಸುಳಿಯುವುದಿಲ್ಲ. ಆ ಊರಿನ ಕಡೆಗೂ ತಲೆಹಾಕುವುದಿಲ್ಲ ಎಂಬ ಹುನ್ನಾರ ಇದೆ. ನೈಸರ್ಗಿಕ ಸಂಪನ್ಮೂಲಗಳು ಕೇವಲ ಕೆಲವರ ಸ್ವತ್ತಾಗಿ ಉಳಿಯಬೇಕು ಎಂಬ ಉದ್ದೇಶವೂ ಇದರ ಹಿಂದಿದೆ.

ಮೋದಿ ವರ್ಸಸ್ ಕೇಜ್ರಿವಾಲ್ : ಯಾರು ಉತ್ತಮ?

– ಆನಂದ ಪ್ರಸಾದ್

ಬಿಜೆಪಿ ಹಾಗೂ ನರೇಂದ್ರ ಮೋದಿ 2014ರ ಲೋಕಸಭಾ ಚುನಾವಣೆಯಲ್ಲಿ ಕಳೆದ ಹತ್ತು ವರ್ಷಗಳ ಕಾಂಗ್ರೆಸ್ ನೇತೃತ್ವದ ಯುಪಿಎ ಒಕ್ಕೂಟದ ಕೇಂದ್ರ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ದೇಶಾದ್ಯಂತ ಎದ್ದಿರುವ ಆಡಳಿತವಿರೋಧಿ ಅಲೆಯ ಪ್ರಯೋಜನ ಪಡೆದು ಅಧಿಕಾರಕ್ಕೆ ಏರುವ ಹವಣಿಕೆಯಲ್ಲಿರುವಾಗ ಕೊನೆಯ ಕ್ಷಣದಲ್ಲಿ ಅದಕ್ಕೆ ಬಲವಾದ ಪ್ರತಿರೋಧದ ಶಕ್ತಿಯೊಂದು ಆಮ್ ಆದ್ಮಿ ಪಕ್ಷದ ರೂಪದಲ್ಲಿ ಎದುರಾಗಿರುವುದು ಪ್ರಜಾಪ್ರಭುತ್ವದ ಉಳಿವಿನ AAP Launchದೃಷ್ಟಿಯಿಂದ ಬಹಳ ಒಳ್ಳೆಯ ಬೆಳವಣಿಗೆಯಾಗಿದೆ. ಆಮ್ ಆದ್ಮಿ ಪಕ್ಷ ಮುಂದಿನ ಲೋಕಸಭಾ ಚುನಾವಣೆಗಳಲ್ಲಿ ಎಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂಬುದು ಮುಖ್ಯವಲ್ಲ. ಕಾಂಗ್ರೆಸ್ ನೇತೃತ್ವದ ಯುಪಿಎ ಒಕ್ಕೂಟವು ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ತಡೆಯಲು ಸಮರ್ಥವಾಗಿಲ್ಲದ ಹಾಗೂ ಎಡಪಕ್ಷಗಳೂ ಸದ್ಯದ ಪರಿಸ್ಥಿತಿಯಲ್ಲಿ ನರೇಂದ್ರ ಮೋದಿಯ ನಾಯಕತ್ವದಲ್ಲಿ ಫ್ಯಾಸಿಸಂ ದೇಶದಲ್ಲಿ ಬೆಳೆಯುತ್ತಿರುವುದನ್ನು ತಡೆಯುವಲ್ಲಿ ಅಸಮರ್ಥವಾಗಿರುವ ಹೊತ್ತಿನಲ್ಲಿ ಆಮ್ ಆದ್ಮಿ ಪಕ್ಷವು ಅಂಥ ಫ್ಯಾಸಿಸಂ ದೇಶದಲ್ಲಿ ಬೆಳೆಯುವುದನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವ ಎಲ್ಲ ಲಕ್ಷಣಗಳೂ ದಟ್ಟವಾಗುತ್ತಿವೆ. ಹೀಗಾಗಿ ಆಮ್ ಆದ್ಮಿ ಪಕ್ಷದ ಬೆಳವಣಿಗೆ ದೇಶದ ಪ್ರಜಾಪ್ರಭುತ್ವದ ಬೆಳವಣಿಗೆಗೆ ಹಾಗೂ ಉಳಿವಿಗೆ ಮುಖ್ಯವಾಗಿ ಕಂಡುಬರುತ್ತದೆ.

ಬಿಜೆಪಿಯು ದೇಶಾದ್ಯಂತ ಕ್ಷಿಪ್ರವಾಗಿ ಬೆಳೆಯಲು ಜನಸಾಮಾನ್ಯರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಹಾದಿಯನ್ನು ಅಳವಡಿಸಿಕೊಂಡಿತು. ಇದರ ಅಂಗವಾಗಿ ಅಡ್ವಾಣಿಯ ರಥಯಾತ್ರೆ ದೇಶಾದ್ಯಂತ ಧಾರ್ಮಿಕ ನೆಲೆಯಲ್ಲಿ ಜನರನ್ನು ವಿಭಜಿಸಲು ಕಾರಣವಾಯಿತು. ಮುಂದೆ ರಾಮ ಮಂದಿರದ ನೆಪದಲ್ಲಿ ಜನರನ್ನು ದೇಶಾದ್ಯಂತ ಅಯೋಧ್ಯೆಗೆ ಕರಸೇವೆಯ ಹೆಸರಿನಲ್ಲಿ ಕರೆದುಕೊಂಡು ಹೋಗಿ ಬಾಬ್ರಿ ಮಸೀದಿಯನ್ನು ಜನರೇ ಕಾನೂನನ್ನು ಕೈಗೆತ್ತಿಕೊಂಡು ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಇದರಿಂದಾಗಿ ದೇಶದಲ್ಲಿ ಉಂಟಾದ ಕೋಮುಗಲಭೆಗಳಲ್ಲಿ Advani-Rath-Yatraಸುಮಾರು 20,000 ಕೋಟಿ ರೂಪಾಯಿಗಳಷ್ಟು ಹಾನಿಯಾಯಿತು ಎಂದು ಅಂದಾಜಿಸಲಾಗಿದೆ ಮಾತ್ರವಲ್ಲ ಹಿಂದೂ, ಮುಸ್ಲಿಂ ಎರಡೂ ಧರ್ಮಗಳ ನೂರಾರು ಅಮಾಯಕ ಜನರು ಗಲಭೆಗಳಲ್ಲಿ ಪ್ರಾಣ ಕಳೆದುಕೊಂಡರು. ರಾಜಕೀಯಕ್ಕಾಗಿ ಇದನ್ನೆಲ್ಲಾ ಮಾಡುವಾಗ ಬಿಜೆಪಿಯ ಯಾರಿಗೂ ಇದು ಕಾನೂನನ್ನು ಕೈಗೆತ್ತಿಕೊಳ್ಳುವ ಕೃತ್ಯ ಎನಿಸಲಿಲ್ಲ. ಇದಕ್ಕೆ ಹೋಲಿಸಿದರೆ ಆಮ್ ಆದ್ಮಿ ಪಕ್ಷವು ಭ್ರಷ್ಟಾಚಾರದಂಥ ಜನರ ಸಮಸ್ಯೆಗಳನ್ನು ಎತ್ತಿಕೊಂಡು ಶಾಂತಿಯುತ ಹೋರಾಟಗಳ ಮೂಲಕವೇ ಬೆಳೆಯುತ್ತಿದೆ. ಆಮ್ ಆದ್ಮಿ ಪಕ್ಷವು ತನ್ನ ಬೆಳವಣಿಗೆಯ ಹಾದಿಯಲ್ಲಿ ಜನರನ್ನು ಬಿಜೆಪಿಯಂತೆ ತನ್ನ ದೇಶವ್ಯಾಪಿ ಬೆಳವಣಿಗೆಗಾಗಿ ಬಲಿ ಕೊಟ್ಟಿಲ್ಲ. ಹೀಗಾಗಿ ಆಮ್ ಆದ್ಮಿ ಪಕ್ಷವು ಬಿಜೆಪಿಗಿಂಥ ಎಷ್ಟೋ ಪಟ್ಟು ಉತ್ತಮ ಎಂದು ಕಂಡುಬರುತ್ತದೆ. ದೆಹಲಿಯಲ್ಲಿ ಇದೀಗ ಆಮ್ ಆದ್ಮಿ ಪಕ್ಷದ ಮುಖ್ಯ ಮಂತ್ರಿ ದೆಹಲಿ ಪೋಲೀಸರ ನಿಷ್ಕ್ರಿಯತೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೇಡಿಕೆ ಇರಿಸಿ ಧರಣಿ ಕೈಗೊಂಡು ಅರಾಜಕತೆ ಉಂಟು ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದುವರೆಗೆ ಯಾವ ಮುಖ್ಯಮಂತ್ರಿಯೂ ತೋರಿಸದೆ ಇರುವ ಧೈರ್ಯವನ್ನು ಕೇಂದ್ರ ಸರಕಾರದ ವಿರುದ್ಧ ಕೇಜ್ರಿವಾಲ್ ತೋರಿಸುತ್ತಿದ್ದು ಇದು ಪ್ರಜಾಪ್ರಭುತ್ವದ ಬೆಳವಣಿಗೆಗೆ ಕೈಗೊಳ್ಳುತ್ತಿರುವ ಬಹಳ ಉತ್ತಮ ಹೋರಾಟವಾಗಿದೆ. ದೆಹಲಿಯಲ್ಲಿ ಉಂಟಾಗುವ ಅತ್ಯಾಚಾರ, ಅನಾಚಾರಗಳಿಗೆ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ದೂರುವುದರಲ್ಲಿ ಹುರುಳಿಲ್ಲ ಏಕೆಂದರೆ ಅಲ್ಲಿನ ಪೊಲೀಸರು ದೆಹಲಿ ರಾಜ್ಯ ಸರ್ಕಾರದ ಕೈಕೆಳಗೆ ಬರುತ್ತಿಲ್ಲ ಮಾತ್ರವಲ್ಲ ಅವರು ದೆಹಲಿ ಸರ್ಕಾರದ ಮಾತನ್ನು ಕೇಳುತ್ತಿಲ್ಲ. ಅವರ ನಿಯಂತ್ರಣ ಕೇಂದ್ರ ಸರ್ಕಾರವು ತನ್ನ ಬಳಿಯೇ ಇರಿಸಿಕೊಂಡಿರುವ ಕಾರಣ ದೆಹಲಿಯಲ್ಲಿ ನಡೆಯುತ್ತಿರುವ ಅತ್ಯಾಚಾರಗಳಿಗೆ ಕೇಂದ್ರ ಸರ್ಕಾರವೇ ಹೊಣೆಯಾಗುತ್ತದೆ. ಆದರೆ ಅದನ್ನು ಅರಿಯದೆ ಜನ ಇದುವರೆಗೆ ಆಮ್ ಆದ್ಮಿ ಪಕ್ಷದ ನೂತನ ಸರ್ಕಾರವನ್ನು ದೂರುವ ಪ್ರವೃತ್ತಿ ಕಂಡುಬರುತ್ತಿತ್ತು. ಇದೀಗ ಕೇಜ್ರಿವಾಲ್ ಕೈಗೊಂಡಿರುವ ಧರಣಿಯಿಂದ ಇದು ದೇಶಾದ್ಯಂತ ಮಾಧ್ಯಮಗಳ ಗಮನ ಸೆಳೆದು ಇದರ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲೆ ಬೀಳುವಂತೆ ಆಗಿದ್ದು ಇದು ಆಮ್ ಆದ್ಮಿ ಪಕ್ಷದ ದೇಶವ್ಯಾಪಿ ಬೆಳವಣಿಗೆಗೆ ಸಹಾಯಕವಾಗಲಿದೆ. ಒಬ್ಬ ನಾಯಕನಲ್ಲಿ ಇರಬೇಕಾದ ಈ ರೀತಿಯ ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ಕ್ರಮ ತೆಗೆದುಕೊಳ್ಳುವ ದೃಢತೆ ಆಮ್ ಆದ್ಮಿ ಪಕ್ಷವನ್ನು ಇತರ ಪಕ್ಷಗಳಿಗಿಂತ ಭಿನ್ನವಾಗಿ ಮಾಡುತ್ತದೆ. ಈವರೆಗೆ ಯಾವ ಮುಖ್ಯಮಂತ್ರಿಯೂ ಈ ರೀತಿ ಬೀದಿಯಲ್ಲಿ ಜನರ ಹಕ್ಕಿಗಾಗಿ, ಸುರಕ್ಷತೆಗಾಗಿ ಆಗ್ರಹಿಸಿ ರಾತ್ರಿ ಕಳೆದ ಉದಾಹರಣೆ ಇಲ್ಲ. ಹೀಗಾಗಿ ಕೇಜ್ರಿವಾಲ್ ವ್ಯವಸ್ಥೆ ಪರಿವರ್ತನೆಗಾಗಿ ಈ ರೀತಿ ಕೈಗೊಳ್ಳುವ ಹೋರಾಟ ಅರಾಜಕತೆ ಎನಿಸಿದರೂ ದೂರಗಾಮಿ ಪರಿಣಾಮ ಬೀರಲಿದೆ ಮಾತ್ರವಲ್ಲ ಇದರಿಂದ ಪಕ್ಷವು ಜನರಿಗೆ ಇನ್ನಷ್ಟು ಹತ್ತಿರವಾಗಲಿದೆ.

ಮೋದಿ ಭ್ರಷ್ಟಾಚಾರದ ಬಗ್ಗೆ ಬಹಳ ಮಾತಾಡಿದರೂ ಯಡಿಯೂರಪ್ಪನವರಂಥ ಭ್ರಷ್ಟಾಚಾರದ ಆಪಾದನೆ ಹೊತ್ತಿರುವ ವ್ಯಕ್ತಿಗಳನ್ನು yeddy-reddyಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ. ಯಡಿಯೂರಪ್ಪ ಆಪರೇಶನ್ ಕಮಲ ಎಂಬ ಅನೈತಿಕ ರಾಜಕಾರಣ ಮಾಡಿದ ಇತಿಹಾಸ ಹಾಗೂ ರೆಡ್ಡಿ ಸಹೋದರರ ಅಕ್ರಮ ಗಣಿಗಾರಿಕೆಯನ್ನು ತಡೆಯಲು ಯಾವ ಕ್ರಮವನ್ನೂ ಕೈಗೊಳ್ಳದ ಚರಿತ್ರೆ ಹೊಂದಿದ್ದಾರೆ. ಜನಾರ್ಧನ ರೆಡ್ಡಿಯನ್ನು ಗಣಿ ಅಕ್ರಮಗಳಿಗಾಗಿ ಜೈಲಿಗೆ ಕಳುಹಿಸಲು ಕಾರಣವಾದದ್ದು ಎಸ್. ಆರ್. ಹಿರೇಮಠ ಅವರ ನ್ಯಾಯಾಂಗ ಹೋರಾಟವೇ ವಿನಃ ಯಡಿಯೂರಪ್ಪನವರು ಗಣಿ ಅಕ್ರಮದ ವಿರುದ್ಧ ಕ್ರಮ ಕೈಗೊಂಡು ಅವರು ಜೈಲಿಗೆ ಹೋದದ್ದು ಅಲ್ಲ. ಯಡಿಯೂರಪ್ಪ ಮಾಧ್ಯಮಗಳನ್ನು ಕೂಡ ತನ್ನ ಪರವಾಗಿ ಭ್ರಷ್ಟಗೊಳಿಸಿದ ಆಪಾನೆಗಳಿವೆ. ಹೀಗಿದ್ದರೂ ಇಂಥವರನ್ನು ಮೋದಿ ಸಮರ್ಥಿಸಿಕೊಳ್ಳುವುದು ಹಾಗೂ ಪಕ್ಷಕ್ಕೆ ಮತ್ತೆ ಸೇರಿಸಿಕೊಳ್ಳುವುದು ದೇಶಕ್ಕೆ ಕೊಡುವ ಸಂದೇಶ ಏನು? ಮೋದಿ ವೈಯಕ್ತಿಕವಾಗಿ ಭ್ರಷ್ಟನಲ್ಲದಿರಬಹುದು ಆದರೆ ಅವರ ಗುಜರಾತಿನ ಕೆಲವು ಮಂತ್ರಿಗಳ ಮೇಲೇ ಭ್ರಷ್ಟಾಚಾರದ ಆರೋಪಗಳು ಇವೆ. ರಾಜ್ಯದಲ್ಲಿ ಸಶಕ್ತ ಲೋಕಾಯುಕ್ತ ವ್ಯವಸ್ಥೆ ಇಲ್ಲದಿರುವ ಕಾರಣ ಇವೆಲ್ಲ ಬೆಳಕಿಗೆ ಬಂದಿಲ್ಲ. ಇರುವ ಲೋಕಾಯುಕ್ತ ವ್ಯವಸ್ಥೆಯನ್ನೂ ಮೋದಿ ಮತ್ತಷ್ಟು ದುರ್ಬಲಗೊಳಿಸಿ ಅದನ್ನು ಸರ್ಕಾರದ ಕೈಗೊಂಬೆಯನ್ನಾಗಿ ಪರಿವರ್ತಿಸಿದ್ದಾರೆ. ಇಂಥವರಿಂದ ಭ್ರಷ್ಟಾಚಾರಮುಕ್ತ ಆಡಳಿತ ನೀಡುವುದು ಹೇಗೆ ಸಾಧ್ಯ? ಮೋದಿ ಒಬ್ಬ ಪ್ರಾಮಾಣಿಕವಾಗಿದ್ದರೆ ಸಾಕೇ? ಹಾಗೆ ನೋಡಿದರೆ ಮನಮೋಹನ್ ಸಿಂಗ್ ವೈಯಕ್ತಿಕವಾಗಿ ಅತ್ಯಂತ ಪ್ರಾಮಾಣಿಕ ವ್ಯಕ್ತಿ. ಅವರು ಪ್ರಾಮಾಣಿಕರಾಗಿದ್ದರೂ ಅವರ ಸಂಪುಟದ ಸಚಿವರು ಭ್ರಷ್ಟಾಚಾರ ಮಾಡುವುದನ್ನು ನೋಡಿಯೂ ಅದನ್ನು ತಡೆಯದೆ ಇರುವ ಆಪಾದನೆಯನ್ನು ಅವರ ಮೇಲೆ ಹೊರಿಸಲಾಗುತ್ತಿದೆ. ಇದೇ ಪರಿಸ್ಥಿತಿ ಮೋದಿ ಪ್ರಧಾನಿಯಾದರೂ ಮುಂದುವರಿಯಲಿದೆ ಎಂಬುದರ ಮುನ್ಸೂಚನೆಯಾಗಿ ಮೋದಿ ಯಡಿಯೂರಪ್ಪನವರನ್ನು ವಾಪಸ್ ಪಕ್ಷಕ್ಕೆ ಕರೆದುಕೊಂಡಿದ್ದರಲ್ಲಿಯೇ ಕಂಡುಬರುತ್ತದೆ. ಅದೇ ರೀತಿ ಭ್ರಷ್ಟಾಚಾರದ ಆಪಾದನೆ ಹೊಂದಿರುವ ನಿತಿನ್ ಗಡ್ಕರಿ, ಅನಂತ್ ಕುಮಾರ್, ಗಣಿಕಳ್ಳ ರೆಡ್ಡಿಗಳಿಂದ ಹಣ ಪಡೆದ ಆಪಾದನೆ ಹೊಂದಿರುವ ಸುಷ್ಮಾ ಸ್ವರಾಜ್ ಮೊದಲಾದವರು ಪಕ್ಷದ ಪ್ರಮುಖ ಹುದ್ದೆಗಳಲ್ಲಿ ಇದ್ದಾರೆ. ಇಂಥ ವ್ಯಕ್ತಿಗಳನ್ನು ಇಟ್ಟುಕೊಂಡು ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇನೆ ಎಂದರೆ ಅದನ್ನು ನಂಬಲು ಸಾಧ್ಯವೇ? ಭ್ರಷ್ಟಾಚಾರದ ಬಗ್ಗೆ ಬಹಳ ದೊಡ್ಡ ಬೊಬ್ಬೆ ಹಾಕುತ್ತಿರುವ ಬಿಜೆಪಿ ತನ್ನ ವೆಬ್‌ಸೈಟಿನಲ್ಲಿ ಪಕ್ಷಕ್ಕೆ ದೇಣಿಗೆ ನೀಡಿದವರ ವಿವರಗಳನ್ನು ಪಾರದರ್ಶಕವಾಗಿ ಎಲ್ಲರಿಗೂ ಗೊತ್ತಾಗುವಂತೆ ಹಾಕುವ ಧೈರ್ಯವನ್ನು ತೋರಿಸುತ್ತಿಲ್ಲ. ಹೀಗಾಗಿ ಅದರ ಭ್ರಷ್ಟಾಚಾರದ ವಿರುದ್ಧ ಹೋರಾಟವೆಂಬುದು ಕೇವಲ ಬಾಯ್ಮಾತಿಗೆ ಸೀಮಿತವಾಗಿರುವಂತೆ ಕಂಡುಬರುತ್ತದೆ. ಆದರೆ ಆಮ್ ಆದ್ಮಿ ಪಕ್ಷವಾದರೋ ತನಗೆ ದೇಣಿಗೆ ನೀಡಿದವರ ಪಟ್ಟಿಯನ್ನು ಆ ಕ್ಷಣವೇ ತನ್ನ ವೆಬ್‌ಸೈಟಿನಲ್ಲಿ ತೋರಿಸುವ ವ್ಯವಸ್ಥೆ ಮಾಡಿ ಸಂಪೂರ್ಣ ಪಾರದರ್ಶಕತೆಯನ್ನು ಮೆರೆದಿದೆ. ಹೀಗಾಗಿ ಬಿಜೆಪಿಗಿಂತ ಆಮ್ ಆದ್ಮಿ ಪಕ್ಷವು ಎಷ್ಟೋ ಉತ್ತಮ ಎಂದು ಹೇಳಬಹುದಾಗಿದೆ. ಬಿಜೆಪಿ ಪಕ್ಷದ ಅತ್ಯಂತ ದುಬಾರಿಯಾದ ಸಾರ್ವಜನಿಕ ರ್ಯಾಲಿಗಳಿಗೆ ನೀರಿನಂತೆ ಹಣ ಚೆಲ್ಲಲು ಯಾರು ದೇಣಿಗೆ ಯಾಕಾಗಿ ಕೊಡುತ್ತಿದ್ದಾರೆ ಎಂಬುದು ಜನಸಾಮಾನ್ಯರಿಗೆ ತಿಳಿಯುತ್ತಿಲ್ಲ. ಈ ಹಣದ ಮೂಲ ತಿಳಿದರೆ ಬಿಜೆಪಿಯ ಪಾರದರ್ಶಕ ಆಡಳಿತದ ನೀಡುವ ಭರವಸೆ ಎಷ್ಟು ಪೊಳ್ಳು ಎಂಬುದು ಜನರಿಗೆ ಗೊತ್ತಾಗಲಿದೆ.

ಬಿಜೆಪಿಯ ನೇತೃತ್ವದ ಆಡಳಿತ ಬಂದರೆ ಶಿಕ್ಷಣ ಕ್ಷೇತ್ರದಲ್ಲಿ ವಿಪರೀತ ಕೇಸರೀಕರಣ ಜಾರಿಗೆ ಬರುತ್ತದೆ. ಸಂಘ ಪರಿವಾರದ ಎಲ್ಲ ಸಂಘಟನೆಗಳೂ ಪರ್ಯಾಯ ಆಡಳಿತ ಕೇಂದ್ರಗಳಾಗಿ ಕಾರ್ಯ ನಿರ್ವಹಿಸಲಾರಂಭಿಸುತ್ತವೆ. ಕಾಂಗ್ರೆಸ್ಸಿಗೆ ನೆಹರೂ ಕುಟುಂಬದ narender_modi_rssಯಜಮಾನಿಕೆಯಾದರೆ ಬಿಜೆಪಿಗೆ ಸಂಘ ಪರಿವಾರದ ಯಜಮಾನಿಕೆ ಕಂಡುಬರುತ್ತದೆ. ಸಂಘ ಪರಿವಾರವು ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸದೆಯೇ ಪರೋಕ್ಷ ಆಡಳಿತ ಚಲಾಯಿಸಲು ಆರಂಭಿಸುತ್ತದೆ. ಹೀಗಾಗಿ ಬಿಜೆಪಿಯ ಆಡಳಿತ ಬಂದರೆ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲವಾಗುತ್ತದೆ, ಪುರೋಹಿತಶಾಹಿ ವ್ಯವಸ್ಥೆಗೆ ಹೆಚ್ಚಿನ ಉತ್ತೇಜನ ದೊರೆಯುತ್ತದೆ. ಬಿಜೆಪಿಗೆ ಕುರುಡಾಗಿ ಮತ ಚಲಾಯಿಸುವ ಮುನ್ನ ಇದನ್ನು ನಾವು ಯೋಚಿಸಬೇಕಾಗುತ್ತದೆ. ಆಮ್ ಆದ್ಮಿ ಪಕ್ಷದಲ್ಲಿ ಈ ರೀತಿ ಹೈಕಮಾಂಡ್ ಆಡಳಿತ ವ್ಯವಸ್ಥೆ ಇಲ್ಲ. ಹೀಗಾಗಿಯೂ ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ. ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಶಾಂತಿಯುತವಾಗಿ ಧರಣಿ ಸತ್ಯಾಗ್ರಹ ಕೈಗೊಂಡರೂ ಅದನ್ನು ಅರಾಜಕತೆ ಹಬ್ಬಿಸುತ್ತಾರೆ ಎಂದು ಹೇಳುವುದು ಸಮಂಜಸವಾಗಿ ಕಾಣುವುದಿಲ್ಲ. ನಕ್ಸಲರಂತೆ ಕೇಜ್ರಿವಾಲ್ ಬಂದೂಕು ಹಿಡಿದಿದ್ದಾರೆಯೇ ಅಥವಾ ಜನರನ್ನು ಕಾನೂನನ್ನು ಕೈಗೆತ್ತಿಕೊಂಡು ಹಿಂಸಾಚಾರಕ್ಕೆ ಇಳಿಯಲು ಕರೆ ನೀಡಿದ್ದಾರೆಯೇ ಎಂದರೆ ಅಂಥ ಯಾವುದೇ ಕೃತ್ಯ ಅವರು ಮಾಡಿಲ್ಲ. ಹೀಗಿದ್ದರೂ ಅವರು ದೇಶದಲ್ಲಿ ಅರಾಜಕತೆ ಹಬ್ಬಿಸುತ್ತಿದ್ದಾರೆ ಎಂದು ಮುಖ್ಯ ವಾಹಿನಿಯ ಮಾಧ್ಯಮಗಳು ಹೇಳುತ್ತಿರುವುದು ಸೂಕ್ತವಾದದ್ದಲ್ಲ. ಜಡ್ಡುಗಟ್ಟಿದ ವ್ಯವಸ್ಥೆಯ ಸುಧಾರಣೆಗೆ ಇಂಥ ಹೋರಾಟಗಳೂ ಅಗತ್ಯ. ಇದು ಜಡ್ಡು ಗಟ್ಟಿರುವ ವ್ಯವಸ್ಥೆಯಲ್ಲಿ ಸಂಚಲನ ತರಲು ಸಹಾಯವಾಗಲಿದೆ. ಹೀಗಾಗಿ ಆಮ್ ಆದ್ಮಿ ಪಕ್ಷದ ಈ ವಿಭಿನ್ನ ಹೋರಾಟ ಸ್ವಾಗತಾರ್ಹ ಬೆಳವಣಿಗೆ ಎಂದೇ ಹೇಳಬೇಕಾಗುತ್ತದೆ.

ವಿದೇಶಿ ಪ್ರವಾಸಿಗರ ನಜರಲ್ಲಿ ರೇಪಿಸ್ಥಾನ್ ಆಗದಿರಲಿ


– ಡಾ.ಎಸ್.ಬಿ. ಜೋಗುರ


 

ಕಾಮಾತುರರಿಗೆ ಕಣ್ಣಿಲ್ಲ. ಹಾಗೆಯೇ ದೇಶ ಭಾಷೆಯ ಹಂಗೂ ಇಲ್ಲ. ಇವರ ವಿಷಯ ವಾಸನೆಯ ಮುಂದೆ ದೇಶದ ಮಾನ ಸಮ್ಮಾನಗಳಂತೂ ಏನೂ ಅಲ್ಲ. ’ಅತಿಥಿ ದೇವೋಭವ’ ಎಂಬ ವಿಷಯದಲ್ಲಿ ಬೇರೆ ರಾಷ್ಟ್ರಗಳಿಗೆ ಗುರುವಿನ ಸ್ಥಾನದಲ್ಲಿರುವ ನಮ್ಮ ದೇಶ ಈಗೀಗ ಕೆಲವೇ ಕೆಲವು ಕಿರಾತಕರಿಂದ ವಿಶ್ವವ್ಯಾಪಕವಾಗಿ ಅಪಮಾನವನ್ನು ಮೂದಲಿಕೆಯ ಮಾತುಗಳನ್ನು ಅನುಭವಿಸಬೇಕಾಗಿ ಬರುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ. ದೇಶದ ರಾಜಧಾನಿ ಅತ್ಯಾಚಾರಗಳಿಂದಲೇ ಮತ್ತೆ ಮತ್ತೆ ಸುದ್ದಿಯಾಗುತ್ತಿರುವದು ಇನ್ನೊಂದು ದೊಡ್ದ ವಿಪರ್ಯಾಸ. ಈಚೆಗೆ 51 ವರ್ಷ national-post-danish-gang-rape-delhiವಯಸ್ಸಿನ ಡೆನ್ಮಾರ್ಕ್ ಮೂಲದ ಮಹಿಳೆಯೋರ್ವಳ ಮೇಲೆ 8 ಜನ ರಕ್ಕಸರ ಹಾಗೆ ಎರಗಿ ಅವಳ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವುದು ಮಾತ್ರವಲ್ಲದೇ ಆಕೆಯ ಬಳಿಯಿದ್ದ ಹಣವನ್ನೆಲ್ಲ ಕಿತ್ತುಕೊಂಡು ಅವಳ ಮೊಬೈಲ್, ವಾಚ್ ಕೂಡಾ ಅಪಹರಿಸಿದ್ದಾರೆ. ಸುಮಾರು ಐದು ಘಂಟೆಗಳ ಕಾಲ ಈ ವಿಕೃತರು ಅವಳ ಮೇಲೆ ಅತ್ಯಾಚಾರ ಎಸಗಿರುವದಿದೆ. ಆ ಮಹಿಳೆ ತಾನು ಉಳಿದುಕೊಂಡ ಹೊಟೆಲ್ ಸ್ವಾಗತಕಾರನ ಬಳಿ ರಿಕ್ಷಾಗೆ ದುಡ್ದು ಬೇಡುವಂಥಾ ದೈನೇಸಿ ಸ್ಥಿತಿಯನ್ನು ನಿರ್ಮಿಸಿದ ಈ ದುರುಳರಿಗೆ ತಮ್ಮ ದೇಶದ ಘನತೆ ಗೌರವದ ಬಗ್ಗೆ ಕಿಂಚಿತ್ತೂ ಗಮನವಿಲ್ಲದಿರುವದು ಇನ್ನೊಂದು ವಿಷಾದದ ಸಂಗತಿ. ಆಕೆಯ ಕುತ್ತಿಗೆಯ ಮೇಲೆ ಚಾಕು ಇಟ್ಟು ಅತ್ಯಾಚಾರ ಎಸಗಿರುವ ಈ ಎಂಟು ಜನರು ಕೂಡಾ ನಮ್ಮ ದೇಶವನ್ನು ಪ್ರತಿನಿಧಿಸುವಂತಾದದ್ದು ದೊಡ್ಡ ದುರಂತ.

ಇನ್ನೊಂದು ಘಟನೆ ಚೆನೈನ ರೈಲು ಒಂದರಲ್ಲಿ ಬಿಹಾರ ಮೂಲದ ಕಿರಾತಕ 22 ವರ್ಷದ ಚಂದನ ಕುಮಾರ ಎನ್ನುವಾತ 18 ವರ್ಷದ ಜರ್ಮನ್ ಯುವತಿಯ ಮೆಲೆ ಅತ್ಯಾಚಾರ ಎಸಗಿದ ಸುದ್ದಿಯೊಂದು ಜನೆವರಿ 13 ನೇ ತಾರೀಕಿನಂದು ಬಯಲಾಗಿದೆ. ಈ ಎರಡೂ ಘಟನೆಗಳು ನಮ್ಮ ದೇಶದ ಪ್ರವಾಸದ್ಯೋಮ ಇಲಾಖೆಗೆ ದೊಡ್ದ ಪೆಟ್ಟನ್ನು ಹಾಕುವದಂತೂ ನಿಜ. ಈಗಾಗಲೇ ನಮ್ಮ ದೇಶಕ್ಕೆ ಹೊರಗಿನಿಂದ ಬರುವವರ ಪ್ರಮಾಣದಲ್ಲಿ ಸುಮಾರು 25 ಪ್ರತಿಶತದಷ್ಟು ಇಳಿಮುಖತೆಯಾಗಿದೆ. ಮಹಿಳೆಯರ ವಿಷಯದಲ್ಲಂತೂ ಆ ಪ್ರಮಾಣ 35 ಪ್ರತಿಶತದಷ್ಟು ಕಡಿಮೆಯಾಗಿದೆ. ಹೀಗೆ ಪ್ರವಾಸ ಮಾಡುವ ಮಹಿಳೆಯರನ್ನು ಹರಿದು ಮುಕ್ಕಲು ಕಾದು ಕುಳಿತಂತಿರುವ ಈ ದುರುಳರಿಂದಾಗಿ ಇಲ್ಲಿಗೆ ಪ್ರವಾಸ ಮಾಡಲು ಬಯಸುವವರ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.

ಭಾರತದಂತಹ ಸಾಂಸ್ಕೃತಿಕ ಶ್ರೀಮಂತಿಕೆಯುಳ್ಳ ನೆಲದಲ್ಲಿ ಪ್ರವಾಸೋದ್ಯಮ ಒಂದು ಅತಿ ಮುಖ್ಯವಾದ ರಾಷ್ಟ್ರೀಯ ಆದಾಯವಾಗಬೇಕು. ವಿದೇಶಗಳಿಂದ ಬರುವವರೇ ಆ ದಿಶೆಯಲ್ಲಿ ಅತಿ ಮುಖ್ಯವಾದ ಆದಾಯ. ಹೀಗೆ ಮತ್ತೆ ಮತ್ತೆ ಇಂಥಾ ಕಹಿ ಘಟನೆಗಳು ಜರುಗಿದರೆ ಅದು ಇಡೀ ವಿಶ್ವದಲ್ಲಿ ಈ ದೇಶದಲ್ಲಿಯ ಪ್ರವಾಸದ ಬಗೆಗಿನ ಅಸುರಕ್ಷಿತತೆಯನ್ನು ಡಂಗುರು ಸಾರಿದಂತಾಗುತ್ತದೆ. ಅವರು ವಿದೇಶಿಯರಿರಲಿ ಇಲ್ಲವೇ ಇದೇ ದೇಶದವರಿರಲಿ ಈ ಬಗೆಯ ಕುಕೃತ್ಯಗಳನ್ನು ಎಸಗುವುದು ಸುತಾರಾಂ ಸರಿಯಲ್ಲ. ಹೀಗೆ ವಿದೇಶಿ ಪ್ರವಾಸಿಗರ ಮೆಲೆ ಲೈಂಗಿಕ ದೌರ್ಜನ್ಯ ಜರುಗಿರುವುದು ಇದೇ ಮೊದಲಂತೂ ಅಲ್ಲ. ಮಾರ್ಚ್ 2006 ರ ಸಂದರ್ಭದಲ್ಲಿ ಬಿಟಿ ಮೊಹಂತಿ ಎಂಬಾತ ಜರ್ಮನ್ ಮೂಲದ ಓರ್ವ ಯುವತಿಯನ್ನು ರಾಜಸ್ಥಾನದಲ್ಲಿ ಅತ್ಯಾಚಾರಗೈದಿದ್ದ. ಮಾರ್ಚ 2013 ರಲ್ಲಿ ಮಧ್ಯಪ್ರದೇಶದಲ್ಲಿ ಸ್ವಿಜ್ಜರಲ್ಯಾಂಡ್ ಮೂಲದ 39 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಜೂನ್ 2013 ರಲ್ಲಿ ಹಿಮಾಚಲ ಪ್ರದೇಶದಲ್ಲಿ ಅಮೇರಿಕೆಯ ಓರ್ವ ಪ್ರವಾಸಿಯನ್ನು cnn-danish-woman-gangrapeಗ್ಯಾಂಗ್‌ರೇಪ್ ಮಾಡಲಾಗಿತ್ತು. 2010 ರಲಿ ಇಬ್ಬರು ಡಚ್ ಮಹಿಳೆಯರನ್ನು, 2011 ರಲ್ಲಿ ಆಸ್ಟ್ರೇಲಿಯನ್ ಮಹಿಳೆಯನ್ನು, 2012 ರಂದು ಓರ್ವ ಡಚ್ ಮಹಿಳೆಯನ್ನು, ಜೂನ್ 2013 ರಲ್ಲಿ ಉಗಾಂಡಾದ ಓರ್ವ ಯುವತಿಯನ್ನು ಅತ್ಯಾಚಾರ ಮಾಡಲಾದ ಬಗ್ಗೆ ವರದಿಯಾಗಿದೆ. [ಹಿಂದುಸ್ಥಾನ ಟೈಮ್ಸ್], ಹಾಗೆಯೇ ಅಗಷ್ಟ 2013 ರಲ್ಲಿ ಜರ್ಮನ್ ಮೂಲದ ಓರ್ವ ಯುವತಿಯನ್ನು ಅತ್ಯಚಾರ ಎಸಗಿರುವದಿದೆ. ಹೀಗೆ ಸರಣಿಯ ರೂಪದಲ್ಲಿ ಜರುಗಿದ ಈ ಅತ್ಯಾಚಾರಕ್ಕೆ ಭಾರತೀಯರಾದ ನಾವೆಲ್ಲರೂ ತಲೆತಗ್ಗಿಸಬೇಕಿದೆ.

ಅದಾಗಲೇ ಜನಾಂಗೀಯ ಬೇಧಗಳ ಹಿನ್ನೆಲೆಯಲ್ಲಿ ಅಲ್ಲಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆಗಳು ನಡದೇ ಇವೆ. ಅಂತಹದರಲ್ಲಿ ಹೀಗೆ ಭಾರತ ಒಂದು ರೇಪಿಸ್ಟಗಳ ನೆಲೆ ಎನ್ನುವ ಹಣೆಪಟ್ಟಿ ಅಂಟಿಕೊಳ್ಳುವ ಮೊದಲೇ ಜಾಗೃತರಾಗಬೇಕಿದೆ. ಅದರಲ್ಲೂ ವಿಶೇಷವಾಗಿ ಈ ವಿದೇಶಿ ಪ್ರವಾಸಿಗರಿಗೆ ಸಂರಕ್ಷಣೆಯನ್ನು ಒದಗಿಸುವಲ್ಲಿ ಭಾರತದ ಪ್ರವಾಸೋದ್ಯಮ ಇಲಾಖೆ ತೀವ್ರವಾದ ಕ್ರಮಗಳನ್ನು ಕೈಗೊಳ್ಳಬೇಕು. ಅತ್ಯಂತ ಪ್ರಮುಖ ಪ್ರವಾಸಿ ತಾಣಗಳನ್ನು ಹೊಂದಿರುವ ಈ ದೇಶಕ್ಕೆ ಭವಿಷ್ಯದಲ್ಲಿ ಯಾವ ಪ್ರವಾಸಿಗರೂ ಬರಲಿಕ್ಕಿಲ್ಲ. ಹಾಗೆಯೇ ವಿದೇಶಿ ಪ್ರವಾಸಿಗರು ಇಲ್ಲಿಗೆ ಬಂದಾಗ ಅವರೊಂದಿಗೆ ಅತ್ಯಂತ ಉಚಿತವಾಗಿ ನಡೆದುಕೊಳ್ಳುವ ಅವಶ್ಯಕತೆ ಇದೆ. ಅವರನ್ನು ಸುಲಿಗೆ ಮಾಡುವ, ಮೋಸ ಮಾಡುವ, ಚುಡಾಯಿಸುವಂಥಾ ಕ್ರಿಯೆಗಳಲ್ಲಿ ತೊಡಗುವುದು ಕೂಡಾ ನಮ್ಮ ದೇಶದ ಜನರ ಬಗ್ಗೆ ಪೂರ್ವಾಗ್ರಹಗಳು ಸೃಷ್ಟಿಯಾಗಲು ಕಾರಣವಾಗುತ್ತದೆ. ಅದಕ್ಕೆ ಅವಕಾಶ ಮಾಡಿಕೊಡಬಾರದು. ಇನ್ನು ಈ ಬಗೆಯ ಅತ್ಯಾಚಾರ ಮತ್ತು ಮೋಸದ ಪ್ರಕರಣಗಳಲ್ಲಿ ಹೆಚ್ಚೆಚ್ಚು ಯುವಕರೇ ತೊಡಗಿಕೊಂಡಿರುವದನ್ನು ಗಮನಿಸಿದರೆ ಭವಿಷ್ಯದ ಭಾರತದ ಬಗ್ಗೆ ಯಾರಿಗಾದರೂ ಹೆದರಿಕೆಯಾಗುತ್ತಿದೆ. ತಪ್ಪು ಸಾಮಾಜೀಕರಣದ ಪರಿಣಾಮವೇ ಇದಕ್ಕೆ ಮುಖ್ಯ ಕಾರಣ. ಈ ದಿಶೆಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಗಂಭೀರವಾಗಿ ಯೋಚಿಸಬೇಕಿದೆ.