ಕ್ಯಾಮರಾ ಕಣ್ಣಲ್ಲಿ ರಾಜ್ ಮತ್ತು ಜಯ : ಎರಡು ನಿರೂಪಣೆಗಳು

– ಸಂಕಲ್ಪ

ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಕನ್ನಡ ಸಿನಿಮಾಗಳ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಹೀಗೆ ಮಾತನಾಡಿದ್ದ ನೆನಪು. “ಚಿತ್ರರಂಗ ಲಕ್ಷಾಂತರ ಜನರಿಗೆ ಅನ್ನ, ಆಶ್ರಯ ನೀಡಿದೆ. ಇಂತಹದೊಂದು ಕ್ಷೇತ್ರ ಇಲ್ಲದೆ ಹೋಗಿದ್ದರೆ ನಿರುದ್ಯೋಗ ಸಮಸ್ಯೆ ಇನ್ನೂ ತೀವ್ರವಾಗಿರುತ್ತಿತ್ತು”. ಹೀಗೆ ಲಕ್ಷಾಂತರ ಕೈಗಳಿಗೆ ಕೆಲಸ ಕೊಟ್ಟ ಉದ್ಯಮ ಪರಿಶ್ರಮದ ಹಾಗೂ ಸೃಜನಶೀಲತೆಯನ್ನು ಬೇಡುತ್ತದೆ. ಸಾವಿರಾರು ನಟ, ನಟಿಯರು, ತಂತ್ರಜ್ಞರು, shashidhar-lakshminarayanಕಲಾವಿದರು ಕನ್ನಡ ಚಿತ್ರರಂಗದಲ್ಲಿ ದುಡಿದು ಹೋಗಿದ್ದಾರೆ. ಆದರೆ ಕೆಲವರ ಸಾಧನೆ, ಕೊಡುಗೆಗಳು ಮಾತ್ರ ದಾಖಲಾಗುತ್ತವೆ. ಉಳಿದವರು ತೆರೆಮರೆಯಲ್ಲಿಯೇ ಉಳಿದು ಬಿಡುತ್ತಾರೆ.

ತಮ್ಮ ಕೊಡುಗೆಗಳ ಮೂಲಕ ಮರೆಯಲ್ಲಿಯೇ ಉಳಿದಿದ್ದ ಎರಡು ವ್ಯಕ್ತಿತ್ವಗಳನ್ನು ಪರಿಚಯಿಸುವ ಪುಸ್ತಕಗಳನ್ನು ಪತ್ರಕರ್ತ ಶಶಿಧರ ಚಿತ್ರದುರ್ಗ ಹೊರತಂದಿದ್ದಾರೆ. ಒಬ್ಬರು ಛಾಯಾಗ್ರಾಹಕ ಲಕ್ಷ್ಮೀನಾರಾಯಣ, ಮತ್ತೊಬ್ಬರು ಲಂಗಮ್ಮ ಎಂದೇ ಇತ್ತೀಚೆಗೆ ಪ್ರಸಿದ್ಧರಾಗಿರುವ ಹಿರಿಯ ಕಲಾವಿದೆ ಜಯಾ. ಎರಡು ಪುಸ್ತಕಗಳು ಇತ್ತೀಚೆಗಷ್ಟೆ ಬೆಂಗಳೂರಿನಲ್ಲಿ ಬಿಡುಗಡೆಯಾದವು.

ಕ್ಯಾಮರಾ ಕಣ್ಣಲ್ಲಿ ರಾಜ್: ಇದು ಒದುವ ಕಂ ನೋಡುವ ಪುಸ್ತಕ. ಅಪರೂಪದ ಫೋಟೋಗಳು ಈ ಪುಸ್ತಕದ ವಿಶೇಷ ಆಕರ್ಷಣೆ. ರಾಜಕುಮಾರ್ ಅವರ ವಿವಿಧ ಭಂಗಿಗಳು ಇಲ್ಲಿವೆ. ಫೋಟೋಗಳ ಜೊತೆ ಜೊತೆಗೆ ರಾಜ್ ಅವರ ವ್ಯಕ್ತಿತ್ವ ಹಾಗೂ ಅವರ ಸಿನಿಮಾ ಕೆರಿಯರ್ ಪರಿಚಯವಾಗುತ್ತದೆ. ಅಪರೂಪದ ಫೋಟೋಗಳನ್ನ ಕ್ಲಿಕ್ಕಿಸಿದ ಸಂದರ್ಭಗಳನ್ನು ಲಕ್ಷ್ಮೀನಾರಾಯಣ್ ಹಂಚಿಕೊಂಡಿದ್ದಾರೆ. ಶಶಿ ನಿರೂಪಿಸಿದ್ದಾರೆ. ರಾಜ್ ಅಭಿಮಾನಿಗಳಿಗೆ, ಕನ್ನಡ ಚಿತ್ರರಂಗದ ಪ್ರೇಕ್ಷಕ ಸಮುದಾಯಕ್ಕೆ ಈ ಫೋಟೋ-ಕೃತಿ ಇಷ್ಟವಾಗುತ್ತದೆ.

ಜಯ: ಇದು ನಟಿ ಬಿ.ಜಯ ಅವರ ಬದುಕು-ಅಭಿನಯ ವೃತ್ತಿ ಕುರಿತ ಪುಸ್ತಕ. ಜಯಾ ತಮ್ಮ ವೃತ್ತಿ ಜೀವನದ ಅಮೂಲ್ಯ actress-jayaಕ್ಷಣಗಳನ್ನು ಇಲ್ಲಿ ಹೇಳಿಕೊಂಡಿದ್ದಾರೆ. ಓದುಗರನ್ನು ಒಂದು ಕಾಲು ಶತಮಾನದಷ್ಟು ಹಿಂದಕ್ಕೆ ಕೊಂಡೊಯ್ದು ಅಂದಿನ ಚಿತ್ರರಂಗವನ್ನು ಈ ಪುಸ್ತಕ ನಿರೂಪಿಸುತ್ತದೆ. ಮುಖ್ಯವಾಗಿ ಜಯರಂತಹ ಅಪರೂಪದ ಕಲಾವಿದರ ಪರಿಚಯವಾಗುತ್ತದೆ. ಈ ಪುಸ್ತಕದ ವಿಶೇಷ ಆಕರ್ಷಣೆ ಮತ್ತೊಬ್ಬ ಹಿರಿಯ ನಟಿ ಲೀಲಾವತಿಯವರು ಬರೆದಿರುವ ಬೆನ್ನುಡಿ.

ಇನ್ನು ಶಶಿಯ ಬಗ್ಗೆ ನಾಕು ಮಾತು:
ಅವರ ಹೆಸರೇ ಹೇಳುವಂತೆ ಶಶಿ, ಚಿತ್ರದುರ್ಗದ ಹುಡುಗ. ಸಿನಿಮಾ ಬಗ್ಗೆ ಆಸಕ್ತಿ. ಅದರಲ್ಲೂ ಕನ್ನಡ ಸಿನಿಮಾ ಬಗ್ಗೆ ವಿಶೇಷ ಪ್ರೀತಿ. ಚಿಕ್ಕಂದಿನಿಂದಲೂ ಬಹಳ ಸಿನಿಮಾ ನೋಡುತ್ತಿದ್ದರು. ತಾನು ನೋಡಿ ಬಂದ ಮೇಲೆ, ಇತರರಿಗೂ ತೋರಿಸುವ ಅಭ್ಯಾಸ. ತೀರಾ ಸಾಮಾನ್ಯವಾಗಿರುವ ಚಿತ್ರವನ್ನು ಅತ್ಯದ್ಭುತ ಎಂದು ಸ್ನೇಹಿತರಿಗೆ ಬಣ್ಣಿಸಿ, ಅವರನ್ನು ಸಿನಿಮಾಕ್ಕೆ ಕರೆದುಕೊಂಡು ಹೋಗಿ ಟೀಕೆಗಳನ್ನು ಎದುರಿಸಿದ ಎಷ್ಟೋ ಉದಾಹರಣೆಗಳಿವೆ.

ಅಷ್ಟೇ ಅಲ್ಲ… ಪೂರ್ಣಚಂದ್ರ ತೇಜಸ್ವಿಯವರು ಮೂಡಿಗೆರೆಯಲ್ಲಿ ಕುಳಿತು ಫೋಟೋಗ್ರಫಿಯಲ್ಲಿ ನಾನಾ ಸಾಹಸ ಮಾಡುತ್ತಿದ್ದಾಗ, shashidhar-kamal-hassanಅವರಿಗೊಂದು ಪತ್ರ ಬರೆದು ಉತ್ತರ ಪಡೆದಿದ್ದ. ತೇಜಸ್ವಿಯವರು ಫೋಟೋಗ್ರಫಿ ಕಲಿಯೋಕೆ ಬೇಕಾದರೆ ಮೂಡಿಗೆರೆಗೆ ಬಾ ಎಂದು ಕರೆದಿದ್ದರು. ತೇಜಸ್ವಿಯವರಿಂದ ಅಂತಹದೊಂದು ಆಹ್ವಾನ ಪಡೆದ ಈ ರಾಜ್ಯದ ಕೆಲವೇ ಕೆಲವರಲ್ಲಿ ಶಶಿ ಕೂಡ ಒಬ್ಬ. ಇಂತಹ ವಿಶಿಷ್ಟ ಆಸಕ್ತಿಗಳು ಇರುವ ಕಾರಣ ಭವಾನಿ ಲಕ್ಷ್ಮೀನಾರಾಯಣರಂತಹ, ಜಯಾ ಅಂತಹವರ ಬದುಕು-ಕಲೆಯನ್ನು ಅಕ್ಷರಗಳಲ್ಲಿ ದಾಖಲಿಸಲು ಸಾಧ್ಯವಾಯಿತು.


ಕ್ಯಾಮರಾ ಕಣ್ಣಲ್ಲಿ ರಾಜ್
– ಭವಾನಿ ಲಕ್ಷ್ಮೀನಾರಾಯಣ
– ನಿರೂಪಣೆ: ಶಶಿಧರ ಚಿತ್ರದುರ್ಗ.
ಪ್ರಕಾಶಕರು: ಪಲ್ಲವ ಪ್ರಕಾಶನ
ಪುಟಗಳು: 128, ಬೆಲೆ: ರೂ. 160
ಪ್ರತಿಗಳಿಗಾಗಿ ಸಂಪರ್ಕಿಸಿ: 94803-53507

ಜಯ
ಕಲಾವಿದೆ ಬಿ.ಜಯ ಅವರ ರಂಗಭೂಮಿ, ಸಿನಿಮಾ, ಕಿರುತೆರೆ, ಸಾಧನೆ
ಲೇಖಕ:ಶಶಿಧರ ಚಿತ್ರದುರ್ಗ
ಪ್ರಕಾಶನ: ಅವಿರತ ಪ್ರಕಾಶನ
ಪುಟಗಳು 92; ಬೆಲೆ: ರೂ.100
ಪ್ರತಿಗಳಿಗಾಗಿ: 94499-35103

Leave a Reply

Your email address will not be published. Required fields are marked *