Daily Archives: February 8, 2014

ವಾಣೀಜ್ಯೀಕೃತ ಮನರಂಜನೆ ಮತ್ತು ಅದರ ಸಾಮಾಜಿಕ ಪರಿಣಾಮ


– ಡಾ.ಎಸ್.ಬಿ. ಜೋಗುರ


 

ಎಲ್ಲ ರಾಷ್ಟ್ರಗಳಲ್ಲಿ ಎಲ್ಲ ಕಾಲಗಳಲ್ಲಿ ಸಾಮ್ರಾಜ್ಯಶಾಹಿ ಧೋರಣೆಯನ್ನು ಆಯಾ ಕಾಲಮಾನವೇ ಸಂಪೋಷಿಸಿಕೊಂಡು ಬಂದಿರುವುದಿದೆ. ಪ್ರತಿಯೊಬ್ಬ ಆಳರಸನೂ ಅದೇ ಬಗೆಯ ಪರಿಸರವನ್ನು ಬೇರೆ ಬೇರೆ ರೀತಿಯಿಂದ, ಮೂಲಗಳಿಂದ ಬಯಸುವದಿತ್ತು. ೧೮ ಮತ್ತು ೧೯ ನೇ ಶತಮಾನದ ಸಂದರ್ಭದಲ್ಲಿ ಬ್ರಿಟಿಷರು ತಮ್ಮ ಪ್ರಭುತ್ವದ ಸ್ಥಾಪನೆಯಲ್ಲಿ ಅನುಸರಿಸಿದ ಮಾರ್ಗ ಈಗ ಹಳತು. ಆ ದಿಸೆಯಲ್ಲಿ ಅವರು ಮೊದಲು ನೌಕಾದಳ, ನಂತರ ಭೂದಳ ಅವರೆಡರ ಬೆನ್ನಲ್ಲಿ ನೌಕರಶಾಹಿ ಪಡೆಯನ್ನು ಸಾಮ್ರಾಜ್ಯದ ಸ್ಥಾಪನೆಗಾಗಿ ಅಟ್ಟುವದಿತ್ತು. ಅವುಗಳ ನಂತರ ಅಂತಿಮವಾಗಿ ಅವರ ಶೈಕ್ಷಣಿಕ ಕ್ರಮವನ್ನು ಪರಿಚಯಿಸುವ ಮೂಲಕ ಜಂಡಾ ಊರುವದಿತ್ತು.  ಆದರೆ ಈಗ ಅಮೇರಿಕೆಯಂಥಾ ರಾಷ್ಟ್ರಗಳು ತುಸು ವಿಭಿನ್ನವಾದ ರೀತಿಯಲ್ಲಿ ಆ ಕೆಲಸವನ್ನು ಬಹುತೇಕರ ಗಮನಕ್ಕೆ ಬಾರದ ಹಾಗೆ ವಾಣೀಜ್ಯೀಕೃತ ದೂರದರ್ಶನದ ಕಾರ್ಯಕ್ರಮಗಳನ್ನೇ ಸಾಧನವನ್ನಾಗಿಟ್ಟುಕೊಂಡು ಅಂದು ಬ್ರಿಟಿಷರು ಮಾಡಿದ ಕೆಲಸವನ್ನು ಇಂದು ಅಮೇರಿಕೆ ವಿಭಿನ್ನ ನೆಲೆಯಲ್ಲಿ ಮಾಡುತ್ತಿದೆ. ವ್ಯತ್ಯಾಸ ಏನೆಂದರೆ ಅಂದು ಬ್ರಿಟಿಷರ ಸಾಮ್ರಾಜ್ಯಶಾಹಿ ನೀತಿ ಅದಕ್ಕೆ ಒಳಪಡುವ ಜನಸಮುದಾಯಗಳಲ್ಲಿ, ನೆಲೆಗಳಲ್ಲಿ ಒಂದು ಬಗೆಯ ಭಯ, ತಾತ್ಸಾರ ಮತ್ತು ಆಕ್ರೋಶಕ್ಕೆ ಕಾರಣವಾಗುತ್ತಿತ್ತು. ಆದರೆ ಈ ಅಮೇರಿಕೆ ತನ್ನ ವಾಣೀಜ್ಯೀಕೃತ ಮನರಂಜನೆಯ ಮೂಲಕ ಮಾಡುವ ಸಾಮ್ರಾಜ್ಯಶಾಹಿ ವಿಸ್ತರಣೆಯ ಧೋರಣೆಯಲ್ಲಿ ಯಾವುದೇ ಬಗೆಯ ಭಯ, ತಾತ್ಸಾರ, ಆಕ್ರಮಣವಿಲ್ಲ. ಇದೊಂಥರಾ ಸಾವಿನಲ್ಲೂ ಸುಖತೋರುವ ತಂತ್ರಗಾರಿಕೆ. ಇಲ್ಲಿ ಯುದ್ಧ ಮತ್ತು ಆಕ್ರಮಣಗಳು ಮಾಡಬಹುದಾದ ಅನುಹುತಗಳಿಗಿಂತಲೂ ಬಹುಪಾಲು ಆತಂಕಕಾರಿ ಪರಿಣಾಮಗಳನ್ನು ಅದು ಬೇರಿ ರೀತಿಯಲ್ಲಿ ಉಂಟು ಮಾಡಿದರೂ ಯುದ್ಧದ ಸಂದರ್ಭದ ತೀವ್ರತೆಯ ಕಾವು ಇಲ್ಲಿರುವುದಿಲ್ಲ. ತಣ್ಣಗೆ ಆವರಿಸುತ್ತಲೇ ಸಾಗುವ ಈ ಪರಿಕ್ರಮಣ ಅತ್ಯಂತ ಅಪಾಯಕಾರಿಯಾದುದು. ಯಾವುದೇ ಬಗೆಯ ಪ್ರತಿರೋಧಗಳಿಲ್ಲದೇ ಪ್ರಭುತ್ವವನ್ನು ಈ ಮುಖೇನ ಸ್ಥಾಪಿಸುವ ಹುನ್ನಾರ ಅಮೆರಿಕೆಯಂಥಾ ರಾಷ್ಟ್ರಗಳದ್ದು. tv-mediaಸೂರ್ಯ ಮುಳುಗದ ಸಾಮ್ರಾಜ್ಯಗಳನ್ನು ನಾವು ಉಲ್ಲೇಖಿಸುವುದಿದೆ. ದೂರದರ್ಶನದ ವಾಣಿಜ್ಯೀಕೃತ ಮನರಂಜನಾ  ಕಾರ್ಯಕ್ರಮಗಳಿಗೆ ಸಂಬಂಧಿಸಿಯೂ ಈ ಮಾತನ್ನು ವಿಸ್ತರಿಸಬಹುದಾಗಿದೆ. ರಷ್ಯಾದಂತಹ ರಾಷ್ಟ್ರಗಳಿಗೆ ಯುದ್ಧದ ತಾಂತ್ರಿಕ ಸಂಗತಿಗಳೇ ಇವತ್ತಿಗೂ ಸಾಮ್ರಾಜ್ಯದ ವಿಸ್ತರಣೆಗೆ ಮತ್ತು ಪ್ರಭುತ್ವದ ಅಧಿಪತ್ಯಕ್ಕೆ ಬಹುಮುಖ್ಯ ಕಾರಣ ಎನ್ನುವ ನಂಬುಗೆ ಬಲವಾಗಿದೆ. ಇನ್ನು ನಮ್ಮಂಥಾ ರಾಷ್ಟ್ರಗಳಂತೂ ಈ ವಾಣಿಜ್ಯೀಕೃತ ಮನರಂಜನೆಯ ಅಪಾಯವನ್ನು ಲೆಕ್ಕಿಸಲಿಕ್ಕೂ ಸಾಧ್ಯವಿಲ್ಲ. ಕೇವಲ ನಾವು ಮಾತ್ರವಲ, ತೃತೀಯ ಜಗತ್ತಿನ ಬಹುತೇಕ ರಾಷ್ಟ್ರಗಳು ಈ ದೂರದರ್ಶನದ ಮಸಾಲಾ ಕಾರ್ಯಕ್ರಮಗಳು ಭವಿಷ್ಯದಲ್ಲಿ ತಂದೊಡ್ದಬಹುದಾದ ಆತಂಕಗಳನ್ನು ಊಹಿಸಲಿಕ್ಕೂ ಸಾಧ್ಯವಿಲ್ಲ. ಅದೇನಿದ್ದರೂ ಆ ಬಗೆಯ ಬೀಜಗಳನ್ನು ಬಿತ್ತುವ ಯತ್ನದಲ್ಲಿರುವ ಅಮೇರಿಕೆಯಂಥಾ ರಾಷ್ಟ್ರಗಳಿಗೆ ಮಾತ್ರ ಆ ಗ್ರಹಿಕೆ ಸಾಧ್ಯ. ಯುರೋಪಿನ ಕೆಲವು ರಾಷ್ಟ್ರಗಳಿಗೆ ಅಮೇರಿಕೆ ಈ ದೂರದರ್ಶನದ ಕ್ಕಾರ್ಯಕ್ರಮಗಳನ್ನು ಸಾಧನವಾಗಿಟ್ಟುಕೊಂಡು ತನ್ನ ಸಾಮ್ರಾಜ್ಯಶಾಹಿ ಧೋರಣೆಯನ್ನು ವಿಸ್ತರಿಸುವತ್ತ ನಡೆಸುತ್ತಿರುವ ತಂತ್ರಗಾರಿಕೆಗಳು ತಿಳಿದಿವೆ. ಹಾಗೆಂದು ಅದನ್ನು ಪ್ರತಿಭಟಿಸುವಂತೆಯೂ ಇಲ್ಲ. ಯಾಕೆಂದರೆ ಜನರಿಗೆ ಮನರಂಜನೆ ಕೊಡುವ ನೆಪದಲ್ಲಿ ಈ ಬಗೆಯ ಷಡ್ಯಂತ್ರ ನಡೆಸಲಾಗುತ್ತಿದೆ.

ಅಮೆರಿಕೆಯಂಥಾ ರಾಷ್ಟ್ರಗಳು ದೂರದರ್ಶನದ ಮುಖಾಂತರ ಅವರ ಕಾರ್ಯಕ್ರಮಗಳನ್ನು ಮಾತ್ರ ರವಾನೆ ಮಾಡದೇ ಪರೋಕ್ಷವಾಗಿ ಆ ಕಾರ್ಯಕ್ರಮದ ಜೊತೆಯಲ್ಲಿ ಅವರ ಆಲೋಚನಾ ಕ್ರಮವನ್ನೂ ರವಾನೆ ಮಾಡುತ್ತವೆ. ಇದು ಬಹುತೇಕ ರಾಷ್ಟ್ರಗಳ ಜನಸಾಮಾನ್ಯನ ಗ್ರಹಿಕೆಗೆ ಸಿಗದ ವಿಷಯ. ವಿಶ್ವದ ಎಲ್ಲ ಭಾಗಗಳಲ್ಲೂ ಬಂಡವಾಳಶಾಹಿ ವ್ಯವಸ್ಥೆ ತೀವ್ರತರವಾದ ತಾಂತ್ರಿಕ ಪ್ರಗತಿಗೆ ಕಾರಣವಾಗಿರುವಂತೆ ಆಯಾ ರಾಷ್ಟ್ರಗ ಸಾಂಸ್ಕೃತಿಕ ಅಧ:ಪತನಕ್ಕೂ ಕಾರಣವಾಗಿರುವುದು ಹೌದು.

19 ನೇ ಶತಮಾನದ ಆರಂಭದಲ್ಲಿಯೇ ಅಮೇರಿಕೆಯಲ್ಲಿಯ ಸಾಂಸ್ಥಿಕ ಮೂಲಗಳನ್ನು ವಸ್ತುನಿಷ್ಟವಾಗಿ ಅಧ್ಯಯನ ಮಾಡಿದ ಅಲೆಕ್ಸಿ.ಡಿ. ಟಾಕೆವೆಲ್ಲಿ ಗುರುತಿಸಿದಂತೆ “ಅಮೇರಿಕನ್ನರು ತೀವ್ರವಾದ ಬದಲಾವಣೆಯ ನಡುವೆಯೂ ಹೊಂದಿಕೊಂಡು ಬದುಕುಳಿಯುತ್ತಾರೆ.” ಹೊಸ ಬಗೆಯ ತಂತ್ರಜ್ಞಾನವನ್ನು ಶೋಷಣೆ ಮಾಡಿ ಬೆಳೆಯುವ, ಬದುಕುವ ಗತ್ತುಗಾರಿಕೆಗಳೂ ಅಮೇರಿಕೆಯ ಬಂಡವಾಳಶಾಹಿಗಳಿಗೆ ಹೊಸದಂತೂ ಅಲ್ಲ. ಈ ಬಗೆಯ ತಾಂತ್ರಿಕ ಭರಾಟೆಯ ನಡುವೆಯ ಸಂಸ್ಕೃತಿ ಎನ್ನುವುದು ಬಿಕ್ಕಟ್ಟಿನಲ್ಲಿ ಬಸವಳಿಯಬೇಕಾಗುತ್ತದೆ. ಈಗ ಸದ್ಯ ಅಮೇರಿಕೆಯಲ್ಲಿ ಈ ಮಾತು ಸಾಬೀತಾಗುತ್ತಿದೆ. ಕೇವಲ ಅಮೇರಿಕೆ ಮಾತ್ರವಲ್ಲ, ವಿಶ್ವದ ಬಹುತೇಕ ರಾಷ್ಟ್ರಗಳು ತಾಂತ್ರಿಕತೆಯನ್ನೇ ಬದಲಾವಣೆ ಮತ್ತು ಪ್ರಗತಿ ಎಂದು ಹಾತೊರೆಯುವ ನಡುವೆ, ದಿವಾಳಿಯಾಗುತ್ತಿರುವ ಸಾಂಸ್ಕೃತಿಕ ಪರಿಸರದ ಪ್ರಜ್ಞೆಯೂ ಇಲ್ಲ. ಶ್ರೇಷ್ಟ ಸಮಾಜಶಾಸ್ತ್ರಜ್ಞ ಆಗ್ಬರ್ನ ಮತ್ತು ನಿಮಕಾಫ಼್ ಎನ್ನುವವರು ಈ ಬಗೆಯ ಸ್ಥಿತಿಯನ್ನು ಸಾಂಸ್ಕೃತಿಕ ಹಿಂಬೀಳುವಿಕೆ ಎಂದು ಕರೆದಿರುವುದಿದೆ. ವಸ್ತು ರೂಪದ ಭೌತ ಸಂಸ್ಕೃತಿ ತೀವ್ರವಾಗಿ ಬದಲಾವಣೆ ಹೊಂದುವ ಜೊತೆಗೆ ಮುಂದೆ ಸಾಗುವ ಗುಣವನ್ನು ಹೊಂದಿದೆ. ವಿಷಯರೂಪದ ಅಭೌತ ಸಂಸ್ಕೃತಿ ನಿಧಾನವಾಗಿ ಸಾಗುತ್ತದೆ. ಪರಿಣಾಮವಾಗಿ ಅಲ್ಲಿ ಭೌತ ಮತ್ತು ಅಭೌತ ಸಂಸ್ಕೃತಿಯ ನಡುವೆ ಒಂದು ಬಗೆಯ ಅಂತರ ನಿರ್ಮಾಣವಾಗುತ್ತದೆ. ಇದನ್ನೇ ಸಾಂಸ್ಕೃತಿಕ ಹಿಂಬೀಳುವಿಕೆ ಎಂದು ಕರೆಯಲಾಗುವುದು. tv-mediaಇಂದು ಈ ದೂರದರ್ಶನ ಬಿತ್ತರಿಸುವ ವಾಣೀಜ್ಯೀಕೃತ ಮನರಂಜನೆ ಇಡೀ ವಿಶ್ವದ ಬೇರೆ ಬೇರೆ ರಾಷ್ಟ್ರಗಳ ಅದರಲ್ಲೂ ಔದ್ಯೋಗಿಕರಣದ ಪ್ರಕ್ರಿಯೆಗೆ ಸಿಲುಕಿರುವ ರಾಷ್ಟ್ರಗಳ ಸಾಂಸ್ಕೃತಿಕ ಬೇರುಗಳನ್ನು ಸಡಿಲುಗೊಳಿಸುವಲ್ಲಿ ಭರಾಟೆಯಿಂದ ತೊಡಗಿಸಿಕೊಂಡಿದೆ. ಹಿಂದೆ ಕಾರ್ಲ್ ಮಾರ್ಕ್ಸ್ ಯುರೋಪನ್ನು ಉಲ್ಲೇಖಿಸಿ ಅದು ಭೂತವನ್ನು ಬೇಟೆಯಾಡುವ ನೆಲೆ ಎಂದು ಕರೆದಿದ್ದ.  ಸದ್ಯದ ಸಂದರ್ಭದಲ್ಲಿ ಆತ ಬದುಕಿದ್ದರೆ ಈ ವಾಣೀಜ್ಯೀಕೃತ ಮನರಂಜನೆಯನ್ನೇ ದೊಡ್ದ ಭೂತ ಎಂದು ಕರೆಯುತ್ತಿದ್ದನೇನೋ..? ಈ ಬಗೆಯ ವಾಣಿಜ್ಯೀಕೃತ ಮನರಂಜನೆಗಳು ಪಶ್ಚಿಮದ ನೆಲೆಗಳಲ್ಲಿಯ ಸಂಸ್ಕೃತಿಯನ್ನು ನಿಗಟಿ ಈಗ ಪೂರ್ವದಕಡೆಗೆ ತನ್ನ ನಾಲಿಗೆಯನ್ನು ಚಾಚುತ್ತಿರುವದಂತೂ ಹೌದು. ಅದರ ಕೆನ್ನಾಲಿಗೆಯ ವಿಸ್ತೃತ ರೂಪವನ್ನು ಬಹುತ್ವದ ಸಾಂಸ್ಕೃತಿಕ ಬಾಹುಳ್ಯವನ್ನು ಹೊಂದಿರುವ ಭಾರತದಂತಹ ನೆಲೆಗಳು ತುರ್ತಾಗಿ ಗುರುತಿಸಿ, ಎಚ್ಚರಗೊಳ್ಳಬೇಕಾಗಿದೆ.

ಒಂದೆಡೆ ಮನರಂಜನೆ ಕಾರ್ಯಕ್ರಮಗಳು, ಅವುಗಳ ನಡುವೆ ಪೈಪೋಟಿಗೆ ನಿಂತಂತೆ ಕಾರ್ಯಕ್ರಮದ ನಡುವೆ ದಿಢೀರನೇ ತೂರಿ ಬರುವ ಜಾಹಿರಾತುಗಳು ನಮ್ಮ ಸಾಂಸ್ಕೃತಿಕ ಪರಿಸರದ ಮೇಲೆ ನಿರಂತರವಾಗಿ ದೊಡ್ದದಾದ ಒಂದು ಗಧಾಪ್ರಹಾರವನ್ನೇ ಮಾಡುತ್ತಿವೆ. ಇನ್ನೂ ಉರುಭಂಗವಾಗಿಲ್ಲದಿರುವುದರಿಂದ ನಮಗೆ ಅದರ ನೋವುಗಳು ಬಾಧಿಸುತ್ತಿಲ್ಲ. ಈ ಜಾಹಿರಾತುಗಳ ಮೂಲಕ ಕೋಟ್ಯಾನುಗಟ್ಟಲೇ ವ್ಯವಹಾರ ಮಾಡುವ ಈ ವಾಣೀಜ್ಯೀಕೃತ ಚಾನೆಲ್ ಗಳು ವೀಕ್ಷಕರನ್ನು ಹಪಾಹಪಿ ಗ್ರಾಹಕರನ್ನಾಗಿ ಪರಿವರ್ತಿಸುತ್ತ ತಮ್ಮನ್ನು ತೊಡಗಿಸಿಕೊಂಡಿವೆ. ಡೆನ್ಮಾರ್ಕಲ್ಲಿ ಈ ಬಗೆಯ ವಾಣೀಜ್ಯೀಕೃತ ಮನರಂಜನೆಯನ್ನು ಸಾತತ್ಯವಾಗಿ ವಿರೋಧಿಸುತ್ತಾ ಬರುವ ಜೊತೆಗೆ ಜಾಹಿರಾತುಗಳನ್ನು ರಾಷ್ಟ್ರೀಯ ಚಾನೆಲ್ ಲ್ಲಿ ಮಾತ್ರ ಪ್ರಸಾರ ಮಾಡುವ ಹಾಗೆ ಒತ್ತಡ ತರಲಾಯಿತು. ಹಾಗೆಯೇ ಆಷ್ಟ್ರಿಯಾದಲ್ಲಿ ಔಷಧಿಯ ಬಗ್ಗೆ, ಬ್ಯಾಂಕುಗಳ ಬಗ್ಗೆ, ರಾಜಕೀಯದ ಬಗ್ಗೆ, ಧಾರ್ಮಿಕ ಸಂಘಟನೆಗಳ ಬಗ್ಗೆ ಯಾವುದೇ ರೀತಿಯ ಜಾಹೀರಾತುಗಳನ್ನು ನೀಡುವಂತಿಲ್ಲ ಎಂದು ನಿಷೇಧವನ್ನು ಹೇರಿರುವುದಿದೆ. ಅಮೇರಿಕೆಯಂಥಾ ರಾಷ್ಟ್ರಗಳು ಈ ರಾಷ್ಟ್ರಗಳಿಗೆ ನೀವು ಹೀಗೆ ಮಾಡುವದರಿಂದ ಅಪಾರ ಪ್ರಮಾಣದ ಆದಾಯವನ್ನು ಕಳೆದುಕೊಳ್ಳುತ್ತೀರಿ ಎಂದು ತನ್ನ ವಾಣಿಜ್ಯ ನೀತಿಯನ್ನು ಪ್ರತಿಪಾದಿಸಬಹುದೇನೋ..? ಇಂದು ಎಲ್ಲ ವಾಣೀಜ್ಯೀಕೃತ ಮನರಂಜನೆಯನ್ನು ನಿಯಂತ್ರಿಸುವವರು ಜಾಹಿರಾತುದಾರರು. ಅವರು ಮನರಂಜನೆಯನ್ನು ಒಂದು ಸಾಧನವನ್ನಾಗಿ ಮಾಡಿಕೊಂಡು ಅಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ನಡುವೆ ಬೇಕಾಬಿಟ್ಟಿಯಾಗಿ ನುಸುಳುವ, ತಮಗೆ ಬೇಕಾಗಿರುವ ಪ್ರಮಾಣದ ಗ್ರಾಹಕರನ್ನು ಕ್ಯಾಚ್ ಮಾಡಿಕೊಳ್ಳುವಲ್ಲಿ ಅವು ಯಶಸ್ವಿಯಾಗುತ್ತಿವೆ. ಮುಂದುವರೆದ ರಾಷ್ಟ್ರಗಳಲ್ಲಿಯ ವಾಣಿಜ್ಯೀಕೃತ ಮನರಂಜನೆ ಜನಪರ ಕಾರ್ಯಕ್ರಮಗಳಿಗಿಂತಲೂ ಜನಪ್ರಿಯ ಕಾರ್ಯಕ್ರಮಗಳ ಬಗ್ಗೆಯೇ ಹೆಚ್ಚಿನ ಆಸ್ಥೆಯನ್ನು ತೋರುತ್ತಿವೆ. ಇಂದು ಅಸ್ಥಿತ್ವದಲ್ಲಿರುವ ವಾಣಿಜ್ಯೀಕೃತ ಮನರಂಜನೆಯ ಚಾನೆಲ್ ಗಳು ಜನರ ಸಮಯವನ್ನು ಸ್ಪರ್ಧಾತ್ಮಕವಾಗಿ ಲೂಟಿ ಮಾಡುವತ್ತ ತೊಡಗಿಕೊಂಡಿವೆ. ನಾ ಮುಂದು ತಾ ಮುಂದು ಎಂದು ಗ್ರಾಹಕರನ್ನು ಗಾಳ ಹಾಕುವಲ್ಲಿ ಕಸರತ್ತು ಮಾಡುತ್ತಿವೆ. ಪರಿಣಾಮವಾಗಿ ಹೆಚ್ಚೆಚ್ಚು ಜನಪ್ರಿಯ ಕಾರ್ಯಕ್ರಮಗಳನ್ನೇ ಪ್ರಸಾರ ಮಾಡುವ ಭರಾಟೆಯ ನಡುವೆ ಅರ್ಥಪೂರ್ಣ ಮತ್ತು ಗಂಭೀರವಾದ ವಿಷಯಗಳನ್ನಾಧರಿಸಿದ ಕಾರ್ಯಕ್ರಮಗಳೇ ವಿರಳವಾಗುತ್ತವೆ. ಜೊತೆಗೆ ವೀಕ್ಷಕರ ಮನ:ಸ್ಥಿತಿಯ ಮೇಲೂ ಕಾರಣ -ಪರಿಣಾಮಗಳ ಸಂಬಂಧ ಸ್ಥಾಪನೆಯಾಗತೊಡಗುತ್ತದೆ. ಈ ಬಗೆಯ ವಾಣೀಕ್ಯೀಕೃತ ಮನರಂಜನೆಯನ್ನೇ ಮಾರುವ ಚಾನೆಲ್ ಗಳ ನಡುವೆ ಸರಕಾರದ ಅಡಿಯಲ್ಲಿ ನಡೆಯುವ ರಾಜ್ಯ ಮಟ್ಟದ ದೂರದರ್ಶನದ ಚಾನೆಲ್ ಗಳು ಕೂಡಾ ಇವರ ಜೊತೆಗೆ ಸ್ಪರ್ಧೆಗಿಳಿದು ಕ್ರಮೇಣವಾಗಿ ಅವೂ ಕೂಡಾ ಅದೇ ಮಾರ್ಗದಲ್ಲಿ ಸಾಗುವ ಸಾಧ್ಯತೆಗಳಿವೆ. ಸದ್ಯ ಬಿ.ಬಿ.ಸಿ. ಅದೇ ಬಗೆಯ ಸ್ಥಿತಿಯನ್ನು ಅನುಭವಿಸುತ್ತಿದೆ. ಹಾಗೆಯೇ ಕೆಲವೊಮ್ಮೆ ನಮ್ಮ ರಾಷ್ಟ್ರೀಯ ಚಾನೆಲ್ ಗಳು ಕೂಡಾ ಅನಿಸುವುದಿದೆ. ಜನ ಈ ಬಗೆಯ ವಾಣಿಜ್ಯೀಕೃತ ಮನರಂಜನೆಯನ್ನು ನೋಡಿ ನೋಡಿ ಅದಕ್ಕಿಂತಲೂ ತೀವ್ರತರವಾದ  ಪರಿಣಾಮವನ್ನು  ಉಂಟು ಮಾಡಬಹುದಾದ ಕಾರ್ಯಕ್ರಮಗಳನ್ನೇ ನಿರೀಕ್ಷಿಸುತ್ತಾರೆ. ಹಾಗಾಗಿಯೇ ಹಲ್ಲೆ, ಅತ್ಯಾಚಾರದ ಪ್ರಕರಣಗಳನ್ನು ಮತ್ತೆ ಮತ್ತೆ ವಾರಾನುಗಟ್ಟಲೆ ತೋರಿಸುವುದಿದೆ. ಅಂತಿಮವಾಗಿ ವೀಕ್ಷಕರ ನಿಜವಾದ ಅಭಿರುಚಿಯನ್ನು ಹಾಳುಗೆಡವಿ, ತಾನು ಬಡಿಸಿದ್ದನ್ನು ಉಣ್ನುವ ಸ್ಥಿತಿಗೆ ಅವರನ್ನು ನೂಕುವಲ್ಲಿ ಈ ವಾಣಿಜ್ಯೀಕೃತ ಮನರಂಜನೆಯ ಚಾನೆಲ್ ಗಳು ಯಶಸ್ವ್ವಿಯಾಗಿವೆ. ಇಲ್ಲಿಯ ಜಾಹೀರಾತುಗಳ ಹಾವಳಿಗೆ ತತ್ತರಿಸಿದ ಕೆಲವು ಪತ್ರಿಕೆಗಳು ಈ ಜನಪ್ರಿಯ ಮಾರ್ಗವನ್ನೇ ತಮ್ಮ ಪ್ರಸಾರ ಮತ್ತು ಜಾಹೀರಾತುಗಳ ಹೆಚ್ಚಳದಲ್ಲಿ ಅನುಸರಿಸುವುದು ಇನ್ನೊಂದು ವಿಷಾದದ ಸಂಗತಿ. ಅವು ಕೂಡಾ ಮಸಾಲಾ ಸುದ್ದಿ, ಚಿತ್ರಗಳ ಬೆನ್ನಿಗೆ ಬೀಳುವಂತಾಯಿತು. ಈ ವಾಣಿಜ್ಯೀಕೃತ ಮನರಂಜನೆಯ ಚಾನೆಲ್ ಗಳ ಎದುರಲ್ಲಿ ಕೂರುವವರಿಗೆ ಗಾಳ ಹಾಕಿ ಓದುವಂತೆ ಮಾಡುವದು ಸಾಮಾನ್ಯ ಕೆಲಸವಂತೂ ಅಲ್ಲ. ಹಾಗೆಯೇ ಸಾಹಿತ್ಯಕ ಕೃತಿಗಳನ್ನು, ಇತರೆ ಕೃತಿಗಳನ್ನು ಓದುವವರ ಪ್ರಮಾಣವೂ ಇಂದು ಕಡಿಮೆ. ಮಾರುಕಟ್ಟೆಗೆ ಬರುತ್ತಿರುವ ಗ್ರಂಥಗಳ ಪ್ರಮಾಣ ಕಡಿಮೆಯಿಲ್ಲ, ಈಗೀಗ ಕೆಲವು ಪ್ರಕಾಶಕರು ಈ ಕಾಲಮಾನದ ಅಗತ್ಯ ಎನ್ನುವಂತೆ ತಮ್ಮ ಪುಸ್ತಕಗಳಿಗೆ ಜಾಕೆಟ್. ಕೋಟು ತೊಡಿಸುವ ಪರಿಪಾಠವನ್ನು ಅನುಸರಿಸುತ್ತಿದ್ದಾರೆ. ಇದರಿಂದ ತೀರಾ ಅಪರೂಪದ ಸಮೂಹ ಎನ್ನುವಂತೆ ಉಳಿದಿರುವ ಓದುಗರ ಮೇಲೆ ಅದರ ದರದ ಹೊರೆ ಬೀಳುತ್ತದೆ. ಅಷ್ಟಕ್ಕೂ ಪುಸ್ತಕ ಜಾಕೇಟೇ ಅದರ ಮೌಲ್ಯ ಮತ್ತು ಪ್ರಮಾಣವಂತೂ ಅಲ್ಲ. ನಿರಕ್ಷರಿಗಳು ಬಿಡಿ, ಸಾಕ್ಷರರಲ್ಲೂ ಓದುಗರ ಪ್ರಮಾಣ ಕಡಿಮೆಯಾಗುತ್ತದೆ. ಬಹುತೇಕ ಸಮಯವನ್ನು ಈ ವಾಣಿಜ್ಯೀಕೃತ ಮನರಂಜನೆಗಳೇ ಲೂಟಿ ಮಾಡುತ್ತಿವೆ. ರಾಜಕೀಯ ಸುದ್ದಿಗಳಿಗೆ ಹೆಚ್ಚು ಅವಕಾಶ ಕೊಡದಂತೆ, ಅವರ ಜಾಹೀರಾತುಗಳನ್ನು ಒಟ್ಟಾರೆ ನಿಷೇಧಿಸುವಂಥ ಕ್ರಮದ ಅಗತ್ಯವಿದೆ. ಹೆಚ್ಚೆಚ್ಚು ಜಾಹೀರಾತು ನೀಡುವ ರಾಜಕೀಯ ಪಕ್ಷಗಳೇ ಗೆಲ್ಲುವ ಸ್ಥಿತಿಯನ್ನು ಈ ಬಗೆಯ ಚಾನೆಲ್ ಗಳು ನಿರ್ಮಾಣ ಮಾಡುವ ಸಾಧ್ಯತೆಯಿದೆ.

ತೀರಾ ಮುಂದುವರೆದ ರಾಷ್ಟ್ರ, ಅಲ್ಲಿ ಜನರಿಗೆ ಸಮಯವೇ ಸಿಗುವುದಿಲ್ಲ, ರಸ್ತೆಯ ಮೇಲೆ ಜನರೇ ಕಾಣಸಿಗುವುದಿಲ್ಲ ಎನ್ನುವ ಅಮೇರಿಕೆಯಂಥಾ ರಾಷ್ಟ್ರಗಳಲ್ಲಿಯೇ ಒಬ್ಬ ವೀಕ್ಷಕ ಸರಾಸರಿ ದಿನಕ್ಕೆ ಎಂಟು ಘಂಟೆಗಳ ಕಾಲ ಈ ಟಿ.ವಿ.ಮುಂದೆ ಕುಳಿತುಕೊಳ್ಳ್ಲುವುದರಿಂದ ಸಮಯವನ್ನು ಕಳೆಯುವುದಿದೆ. ನಮ್ಮಲ್ಲಿ ಆ ಪ್ರಮಾಣ ಇನ್ನೂ ಹೆಚ್ಚಾಗಿರಬಹುದು. ಕಾರ್ಯಕ್ರಮಕ್ಕೆ ಜನವೇ ಬರುವುದಿಲ್ಲ ಎನ್ನುವ ಮಾತು ಕೇವಲ ನಮ್ಮಲ್ಲಿ ಮಾತ್ರವಲ್ಲ, ಅಲ್ಲಿಯೂ ಇದೆ. ಬಹುತೇಕರು ಟಿ.ವಿ.ಮುಂದೆ ಕುಕ್ಕರು ಬಡಿಯುವದರಿಂದ ಪಾರ್ಕುಗಳು, ಸಂಗೀತ ಕಚೇರಿಗಳು, ಸಭೆ ಸಮಾರಂಭಗಳು, ರಸ್ತೆಗಳು ಬಿಕೋ ಅನ್ನುವುದು ಸಹಜ. ಮಕ್ಕಳ ಆಟಗಳ ಪರಂಪರೆಯನ್ನೇ ಈ ವಾಣಿಜ್ಯೀಕೃತ ಮನರಂಜನೆ ಮತ್ತು ವಿಡಿಯೋ ಗೇಮ್ ಕೊಂದು ಹಾಕಿವೆ. ಇಲ್ಲಿ ಮಕ್ಕಳು ಈ ಬಗೆಯ ಚಾನೆಲ್ ಗಳಿಗೆ ತೀರಾ ಪ್ರಮುಖವಾದ ಗ್ರಾಹಕರು ಮತ್ತು ವಾರಸುದಾರರು. ಸಾವಿರಾರು ಘಂಟೆಗಳನ್ನು ಅವರು ಟಿ.ವಿ.ಮುಂದೆ ಕಳೆಯುವದರಿಂದಾಗಿ ಅವರ ಬಾಲ್ಯಾವಸ್ಥೆಯನ್ನೇ ಅವರು ಮರೆತು ನೇರವಾಗಿ ಕೊಳ್ಳುಬಾಕ ಸಂಸ್ಕೃತಿಯ ಭಾಗವಾಗಿಬಿಡುತ್ತಾರೆ. ಈ ಬಗೆಯ ಭರಾಟೆ ಕುಟುಂಬ ಮತ್ತು ನೆರೆಹೊರೆಯಂಥಾ ಸಮೂಹ ಜೀವನವನ್ನು ಬಾಧಿಸಿಲ್ಲ ಎಂದು ಭಾವಿಸುವ ಅವಶ್ಯಕತೆಯಿಲ್ಲ. ಈ ವಾಣಿಜ್ಯೀಕೃತ ಮನರಂಜನೆಯ ಹಾವಳಿಗೆ ತುತ್ತಾದ ಅತ್ಯಂತ ಪ್ರಧಾನ ಸಾಮಾಜಿಕ ಸಮೂಹ ಕುಟುಂಬ. ಈ ಬಗೆಯ ಕಾರ್ಯಕ್ರಮಗಳಿಂದಾಗಿ ಅಲ್ಲಿ  ಸದಸ್ಯರ ನಡುವೆ ಮುಂಚೆ ಏರ್ಪಡುತ್ತಿದ್ದ ಸಾಮಾಜಿಕ ಅಂತರಕ್ರಿಯೆ ಈಗ ಸಾಧ್ಯವಾಗುತ್ತಿಲ್ಲ. ಪಾಲಕರ ಮತ್ತು ಮಕ್ಕಳ ನಡುವಿನ ಮಾತುಕತೆ ಕಡಿಮೆಯಾಗಿದೆ. ಇಬ್ಬರೂ ಕಾರ್ಯಕ್ರಮವನ್ನು ಹೆಚ್ಚೆಚ್ಚು ನೋಡುವಲ್ಲಿ ಬ್ಯುಸಿ. ಮನೆ ಎನ್ನುವುದು ಈಗ ಕೇವಲ ತಿಂದುಂಡು ಮಲಗುವ ಲಾಜಿಂಗ್ ಆಗಿ ಪರಿವರ್ತಿತವಾಗುತ್ತಿದೆ. ಫ಼ಾಸ್ಟ್ ಫ಼ುಡ್ ಸಂಸ್ಕೃತಿ ತೀವ್ರವಾಗಿ ಬೆಳೆಯುತ್ತಿರುವುದರಿಂದ ಆ ನಿಗದಿತ ಕಾರ್ಯಕ್ರಮದ ಅವಧಿಯೊಳಗಾಗಿ ಅಡುಗೆ ಮಾಡಿ ಮುಗಿಸುವ, ಇಲ್ಲವೇ ಹೊಟೆಲಿಂದ ತಂದು ತಿನ್ನುವ ಪರಿಪಾಠ ಆರಂಭವಾಗಿವೆ. ಗಂಡ-ಹೆಂಡತಿ ಮತ್ತು ಕುಟುಂಬದೊಳಗಿನ ಸಂಬಂಧಗಳನ್ನು ಅಲ್ಲಿ ಬರುವ ಯಾವುದೋ ಒಂದು ಸುದೀರ್ಘವಾದ ಧಾರವಾಹಿ ನಿರ್ಧರಿಸುತ್ತದೆ. ಈ ನಡುವೆ ಕುಟುಂಬದಲ್ಲಿರುವ ಹಿರಿಯರ ಗೋಳು ಇನ್ನೊಂದು ಬಗೆಯದು. ಹೆಚ್ಚು ಹೊತ್ತು ನಿವಾಂತವಾಗಿ ಮನರಂಜನೆಯನ್ನು ನೋಡಬೇಕೆನ್ನುವವರಿಗೆ ಈ ಹಿರಿಯರು ಹೊರೆಯಾಗತೊಡಗಿದ್ದಾರೆ. ಯುವಕರಂತೂ ಗ್ಲಾಮರಸ್ ಲೋಕವೇ ನಿಜ, ಮಿಕ್ಕ ಯಾವುದರಲ್ಲಿಯೂ ಮಜವಿಲ್ಲ ಎನ್ನುವಂತೆ ಬದುಕನ್ನು ರೂಪಿಸಿಕೊಳ್ಳುತ್ತಿದ್ದಾರೆ. ಸೀದಾ ಸಾದಾ ಓಡಿಸಬೇಕಾದ ಬೈಕನ್ನೇ ಅವರು ಹಾವಿನ ಹೊರಳಾಟವಾಗಿಸುತ್ತಾರೆ. ಅವರೂ ಕೂಡಾ ತಮ್ಮ ಎಲ್ಲ ಸಮಸ್ಯೆಗಳು ಈ ಚಾನೆಲ್ ಗಳಲ್ಲಿ ತೋರಿಸುವ ಜಾಹೀರಾತುಗಳಷ್ಟೇ ವೇಗವಾಗಿ ದಿಢೀರನೇ ಮಂಗಮಾಯವಾಗಬೇಕು ಎಂದು ಬಯಸುತ್ತಾರೆ. ನಿಜವಾದ ಬದುಕಿನ ಕಲ್ಪನೆಯೇ ಅವರಿಗೆ ಸಾಧ್ಯವಾಗಲು ಬಿಡುತ್ತಿಲ್ಲ.

ಸಾಯಂಕಾಲದ ಮನರಂಜನೆಯ ಸಮಯವನ್ನು ಈ ಬಗೆಯ ವಾಣೀಜ್ಯೀಕೃತ ಮನರಂಜನೆಗಳೇ ಗುತ್ತಿಗೆ ಹಿಡಿದು ಬಿಡುತ್ತವೆ. ಜೊತೆಗೆ ಜಾಹೀರಾತುಗಳ ಕಿರಕಿರಿ ಬೇರೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ  ಗುಣಮಟ್ಟದ ಸೇವೆ [Standards of Quality of Service (Duration of Advertisements in Television Channels) (Amendment) Regulations, 2013.]ಎನ್ನುವ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಈ ಕಾಯ್ದೆಯ ಪ್ರಕಾರ ಯಾವುದೇ ಒಂದು ದೂರದರ್ಶನದ ಕಾರ್ಯಕ್ರಮದ ನಡುವೆ ಅಂದರೆ ಒಂದು ಘಂಟೆಯ ಅವಧಿಯಲ್ಲಿ ಕೇವಲ 12 ನಿಮಿಷ ಮಾತ್ರ ಜಾಹೀರಾತುಗಳನ್ನು ಪ್ರಸರಣ ಮಾಡಬೇಕೆಂಬ ನಿಯಮವಿದೆ. ಅದರಲ್ಲೂ ಕಾರ್ಯಕ್ರಮದ ನಡುವೆ ಅವುಗಳನ್ನು ತೂರಬಾರದು. ವೀಕ್ಷಕರಿಗೆ ಗುಣಮಟ್ಟದ ಮನರಂಜನೆಯನ್ನು ನೀಡಬೇಕು ಎನ್ನುವ ಷರತ್ತೂ ಇದೆ. ಈ ಬಗೆಯ ಕಟ್ಟಳೆಗಳ ಬಗ್ಗೆ ವಾಣಿಜ್ಯೀಕೃತ ಮನರಂಜನೆಯ ಮಂದಿಗೆ ಸಮಾಧಾನವಾಗದೇ ಮತ್ತೆ ಖ್ಯಾತೆ ತೆಗೆದಿರುವುದಿದೆ. ಇಡೀ ಹೊತ್ತು ಹಣವನ್ನು ಕೊಳ್ಳೆ ಹೊಡೆಯಲು ಅವಕಾಶ ಕೊಡಬೇಕು ಎನ್ನುವಂತೆ ಅವರು ಬಯಸುವದಿದೆ. ಹೀಗೆ ಈ ವಾಣಿಜ್ಯೀಕೃತ ಮನರಂಜನೆ ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ಬಾಧಿಸುತ್ತಿರುವ ಈ ಶತಮಾನದ ಬಹುದೊಡ್ಡ ಶಾಪವಾಗಿ ಪರಿಣಮಿಸುತ್ತಿದೆ. ಆ ಬಗ್ಗೆ ಚರ್ಚೆ, ಚಿಂತನೆಗಳು ಕೂಡಾ ನಮ್ಮಲ್ಲಿ ನಿರೀಕ್ಷಿತ ಮಟ್ಟದಲ್ಲಿಲ್ಲ ಎನ್ನುವದು ತೀರಾ ವಿಪರ್ಯಾಸ ಮತ್ತು ವಿಷಾದನೀಯ.