Daily Archives: February 11, 2014

ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನದೊಳಗೆ ವಿಷಯ ತುಂಬಿ

– ಬಿ.ಶ್ರೀಪಾದ ಭಟ್

* ಇಲ್ಲಿ ನಾಲಿಗೆಗಿಂತ ಮೊದಲು ಚೂರಿ ಮಾತನಾಡುತ್ತದೆ. – ಕೈಫಿ ಆಜ್ಮಿ

* Fascism is not defined by the number of its victims, but by the way it kills them. – ಜೀನ್ ಪಾಲ್ ಸಾರ್ತೆ

* ಉರಿಯುವ ಕಿಚ್ಚಿಗೆ ಮೈಯೆಲ್ಲಾ ಬಾಯಿ. – ಅಲ್ಲಮ

ಗುಪ್ತ ಸಾಕ್ಷಿ

ಪ್ರತಿ ಬಾರಿಯೂ ನಾನು ಅಯೋಧ್ಯೆ ಕುರಿತಾಗಿ ಓದಿದಾಗ ನನಗೆ 1992 ರ ಆ ಕರಾಳ ದಿನಗಳ ಅನುಭವ ನೆನಪಾಗುತ್ತದೆ. ದೆಹಲಿ ಘಟಕದ ಬಿಜೆಪಿ ಸದಸ್ಯರೊಬ್ಬರ ಶಿಫಾರಸು ಪತ್ರವನ್ನು ಕೈಯಲ್ಲಿ ಹಿಡಿದು ನಾನು ಅಯೋಧ್ಯೆಯಲ್ಲಿ ಜಮಾಯಿಸಿದ್ದ ಕರಸೇವಕರ ಗುಂಪಿನೊಳಗೆ ಸೇರಿಕೊಂಡಿದ್ದೆ. ಪ್ರಾರಂಭದ ದಿನಗಳಲ್ಲಿ ನಾನು ತೀವ್ರವಾದ ವಿಚಾರಣೆಗಳಿಗೆ ಒಳಗಾಬೇಕಾಯಿತು. ಅವರ ವಿಶ್ವಾಸ ಗಳಿಸಲು ಒಂದು ಬಾರಿ ನಾನು ಕಾಶ್ಮೀರಿ ಹಿಂದುವೆಂದೂ, ಕಾಶ್ಮೀರದ ಮಿಲಿಟರಿ ಮತ್ತು ಭಯೋತ್ಪಾದನೆಯಿಂದ ಆ ರಾಜ್ಯ ಬಿಟ್ಟು ಬರಬೇಕಾಯಿತೆಂದು ಕಲ್ಪಿತ ಸುಳ್ಳನ್ನು ಹೇಳಬೇಕಾಯಿತು. ಒಮ್ಮೆ ಅವರ ನಂಬಿಕೆಗೆ ಪಾತ್ರನಾಗಿ ಒಳ ಹೊಕ್ಕನಂತರ ರಾಜಕೀಯ ಕೂಗುಮಾರಿತನದ ಮುಖವಾಡವನ್ನು ಹೊದ್ದಂತಹ ಧಾರ್ಮಿಕ ಡ್ರಾಮಾವನ್ನೇ ಕಣ್ಣಾರೆ ಕಂಡೆ.

ವಿವಾದಾತ್ಮಕ ಸ್ಥಳದ ಬಳಿಯಿರುವ ಟೆಂಟ್‌ನಲ್ಲಿ ಕಷ್ಟಪಟ್ಟು ಜಾಗ ಗಿಟ್ಟಿಸಿದೆ. 6 ನೇ ಡಿಸೆಂಬರ್ 1992 ( ಬಾಬ್ರಿ ಮಸೀದಿಯ ಧ್ವಂಸದ ದಿನ) ಗಿಂತ ಕೆಲವು ದಿನಗಳ ಮೊದಲು ಒಂದು ಮುಂಜಾನೆ ನೂರಾರು ಕರಸೇವಕರು ಎರಡು ಗೋರಿಗಳ ಮುಂದೆ ಜಮಾಯಿಸಿದ್ದರು. ಕೂಡಲೆ ಆ ಕರಸೇವಕರು ಹಾರೆ, ಗುದ್ದಲಿಗಳಿಂದ, ದೊಡ್ಡ ಬಂಡೆಗಳಿಂದ ಆ ಎರಡೂ ಸ್ಮಾರಕಗಳ ಮೇಲೆ ದಾಳಿ ನಡೆಸತೊಡಗಿದರು. ನಾನೂ ಆ ಗುಂಪಿನೊಂದಿಗೆ ಸೇರಿಕೊಂಡೆ. ಕರಸೇವಕರು ಈ ಆಕ್ರಮಣವನ್ನು “ಛೋಟಾ ಕರಸೇವ” ಎಂದು ಕರೆಯುತ್ತಿದ್ದರು.

ಬಳಿಯಲ್ಲಿ ಮತ್ತೊಂದು ಗೋರಿಯನ್ನು ಗುರುತಿಸಿದ ಕರಸೇವಕರು ಅದನ್ನೂ ಧ್ವಂಸಗೊಳಿಸಿದರು. ನಂತರ ಈ ಮೂರೂ ಗೋರಿಗಳನ್ನು ನೆಲಸಮಗೊಳಿಸಿದ ಬಳಿಕ ವಿಧ್ವಂಸಕ ಕೃತ್ಯದ ಯಾವುದೇ ಕುರುಹುಗಳೂ ಕಾಣಿಸದಂತೆ ಅದನ್ನು ಸಮತಟ್ಟುಗೊಳಿಸಿದರು. ಕಟ್ಟಡದ ಅವಶೇಷಗಳನ್ನು ಪಕ್ಕದ ಹೊಂಡದಲ್ಲಿ ಬಿಸಾಡಿದರು. ಕೆಲವೇ ಗಂಟೆಗಳಲ್ಲಿ ಈ ಗೋರಿಗಳಿದ್ದ ಸ್ಥಳಗಳಲ್ಲಿ ಸಣ್ಣ ಅಂಗಡಿಗಳನ್ನು ನಿರ್ಮಿಸಿ ಟೀ ಮಾರಾಟ ಮಾಡಲಾರಂಬಿಸಿದರು. ಇದೆಲ್ಲಾ ಜರುಗಿದ್ದು ಮಾಜಿ ಬಿಜೆಪಿ ಶಾಸಕನ ಉಸ್ತುವಾರಿಯಲ್ಲಿ. ಕೆಲವು ಬಜರಂಗದಳದ ಕಾರ್ಯಕರ್ತರು ಅಲ್ಲಿ ದೇವಸ್ಥಾನವನ್ನು ನಿರ್ಮಿಸಬೇಕೆಂದು ಹಟ ಮಾಡತೊಡಗಿದರು. ಆದರೆ ಇತರೆ ಕರಸೇವಕರು ಈಗೇನಾದರೂ ಇಲ್ಲಿ ದೇವಸ್ಥಾನ ನಿರ್ಮಿಸಿದರೆ ಮತ್ತೊಂದು ದೊಡ್ಡ ವಿವಾದ ಉಂಟಾಗುತ್ತದೆ, ಇದರಿಂದ ನಮ್ಮ ಮೂಲಭೂತ ಹೋರಾಟವಾದ ರಾಮಮಂದಿರದ ನಿರ್ಮಾಣದ ಕನಸು ಭಗ್ನಗೊಳ್ಳುತ್ತದೆ ಎಂದು ಅವರನ್ನು ಸಮಾಧಾನಪಡಿಸುತ್ತಿದ್ದರು.

ಕಾನೂನು ಸುವ್ಯವಸ್ಥೆಗಾಗಿ ಅಲ್ಲಿ ನೇಮಿಸಿದ್ದ ಪ್ರಾಂತೀಯ ಸಶಸ್ತ್ರ ಪೋಲಿಸ್ ಪಡೆಯು ಸಂಘ ಪರಿವಾರದ ಕರಸೇವಕರೊಂದಿಗೆ ಅತ್ಯಂತ ಸೌಹಾರ್ದಯುತವಾಗಿ ವರ್ತಿಸುತ್ತಿದ್ದರು.ಈ ಸಶಸ್ತ್ರ ಪೋಲೀಸ್ ಪಡೆ ಮತ್ತು ಕರಸೇವಕರ ನಡುವಿನ ಸಂಬಂಧ ಎಷ್ಟು ಗೌರವಯುತವಾಗಿತ್ತೆಂದರೆ ಅದು ಬಿಜೆಪಿ ಮತ್ತು ಆರೆಸಸ್ ನಡುವಿನ ಸಂಬಂಧದಷ್ಟೇ ಗೌರವಯುತವಾಗಿತ್ತು.

ನಾನು ಮಲಿನಗೊಂಡ ಬಟ್ಟೆಯಲ್ಲಿ ಅಲ್ಲಿ ಠಳಾಯಿಸುತ್ತಾ ಪ್ರಾಂತೀಯ ಸಶಸ್ತ್ರ ಪೋಲಿಸ್ ಪಡೆಯ ಅನೇಕ ಯೋಧರೊಂದಿಗೆ ಮಾತುಕತೆ ನಡೆಸಿದೆ. ನನ್ನನ್ನು ಅತ್ಯಂತ ಮಾರ್ಯಾದೆಯಿಂದ ಮಾತನಾಡಿಸುತ್ತಿದ್ದರು. ವಿಶೇಷವಾಗಿ ಸತ್ಕರಿಸುತ್ತಿದ್ದರು. ಈ ಪ್ರಾಂತೀಯ ಸಶಸ್ತ್ರ ಪೋಲಿಸ್ ಪಡೆಯೊಂದಿಗೆ ಒಂದು ರಾತ್ರಿ ನಾನು ಮತ್ತು ಕೆಲ ಕರಸೇವಕರು ಹರಟೆ ಹೊಡೆಯುತ್ತಿದ್ದಾಗ ಒಬ್ಬ ಯೋಧನು ’ನಮ್ಮ ಬಗ್ಗೆ ಚಿಂತಿಸಬೇಡಿ. ನಾವು ನಿಮ್ಮ ಬೆಂಬಲಕ್ಕಿದ್ದೇವೆ’ ಎಂದು ಹೇಳಿದ. ’ಡಿಸೆಂಬರ್ 6 ರಂದು ನಿಮ್ಮನ್ನು ನಿರ್ಬಂದಿಸಲು ಆದೇಶ ಬಂದರೆ, ಒಂದು ವೇಳೆ ಪರಿಸ್ಥಿತಿ ಕೈಮೀರಿದರೆ ಗೋಲೀಬಾರ್ ನಡೆಸಲು ನಮಗೆ ಹುಕುಂ ಬಂದರೆ ನಾವು ಶಸ್ತ್ರಾಸ್ತ್ರ ಕೆಳಗಿಟ್ಟು ನಿಮ್ಮೊಂದಿಗೆ ಸೇರಿಕೊಳ್ಳುತ್ತೇವೆ’ ಎಂದು ಮತ್ತೊಬ್ಬ ದನಿಗೂಡಿಸಿದ. ಮೂರನೆಯ ಯೊಧ ’ಇಡೀ ಪ್ಯಾರಾಮಿಲಿಟರಿ ಪಡೆ ಶರಣಾಗುವಂತೆ ಒತ್ತಾಯ ಮಾಡುತ್ತೇವೆ’ ಎಂದು ಚಪ್ಪಾಳೆ ತಟ್ಟುತ್ತಾ ಹೇಳಿದ. ಅವರಲ್ಲೊಬ್ಬ ಪೋಲೀಸ ಕಾನಸ್ಟೇಬಲ್ ವಿವಾದಿತ ಕಟ್ಟಡದಿಂದ ಕೆಲವು ಇಟ್ಟಿಗೆಗಳನ್ನು ಕೀಳುವಾಗ ಸಿಕ್ಕಿಬಿದ್ದು ಕೂಡಲೇ ಸಸ್ಪೆಂಡ್ ಆಗಿದ್ದನೆಂಬ ವಿಷಯ ನಂತರ ಈ ಪ್ಯಾರಮಿಲಿಟರಿ ಪಡೆಯಿಂದ ನನಗೆ ಮಾಹಿತಿ ಬಂತು. ’ಅಷ್ಟರಲ್ಲಾಗಲೇ ಈ ಕಾನಸ್ಟೇಬಲ್ ಸುಮಾರು ಹನ್ನೆರಡು ಇಟ್ಟಿಗೆಗಳನ್ನು ಕಿತ್ತಿದ್ದ’ ಎಂದು ಮತ್ತೊಬ್ಬ ಕಾನಸ್ಟೇಬಲ್ ಹೇಳುತ್ತಿದ್ದ. ಕೆಲವು ಪೋಲಿಸರು ಈ ಸಿಆರ್‌ಪಿಎಫ್‌ನ ಕ್ರಮಗಳ ಕುರಿತಾಗಿ ತೀವ್ರ ಅಸಮಧಾನ ಹೊಂದಿದ್ದರು. ಏಕೆಂದರೆ ಕೆಲವು ದಿನಗಳ ಹಿಂದೆ ಅನಿರೀಕ್ಷಿತವಾಗಿ ಕಾನಸ್ಟೇಬಲ್ ಒಬ್ಬ ವಿವಾದಿತ ಕಟ್ಟಡದೊಳಗೆ ಪ್ರವೇಶಿಸಿಬಿಟ್ಟಿದ್ದ. ಇದನ್ನು ವಿರೋಧಿಸಿ ಸಿಆರ್‌ಪಿಎಫ್ ಪಡೆ ಆತನನ್ನು ಅಲ್ಲಿಂದ ಹೊರಗೆ ತಳ್ಳಿದರು ಎಂದು ಪೋಲೀಸ್ ಕಾನಸ್ಟೇಬಲ್ ಆಕ್ಷೇಪಿಸುತ್ತಿದ್ದ.

ಅನೇಕ ಕರಸೇವಕರು ತಮ್ಮೊಂದಿಗೆ ಶಸಾಸ್ತ್ರಗಳನ್ನು ಕೊಂಡೊಯ್ದಿದ್ದರು. ಒಬ್ಬ ಬಾಲಕ ನನಗೆ ಹರಿತವಾದ ಎರಡು babri_masjid_demolitionಅಲುಗಿನ ಚೂರಿಯೊಂದನ್ನು ತೋರಿಸಿ ಅದನ್ನು ಹೇಗೆ ಬಳಸಬೇಕೆಂದು ತಿಳಿಸಿಕೊಡುತ್ತಿದ್ದ. ಮತ್ತೊಬ್ಬ ಸಾಧು ’ನಾನು ಸಂಶಯಪೂರ್ವಕವಾಗಿ ಅಡ್ಡಾಡುತ್ತಿರುವವರ ಮೇಲೆ ಸದಾ ನಿಗಾ ಇಟ್ಟಿರುತ್ತೇನೆ’ ಎಂದು ಪಿಸುಗುಟ್ಟಿದ.’ನಾವು ಶಾನೆ – ಎ- ಅವಧ್’ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿರುವ ಪತ್ರಕರ್ತರ ಮೇಲೂ ನಿಗಾ ಇಟ್ಟಿದ್ದೇವೆ’ ಎಂದು ಹೇಳುತ್ತಿದ್ದ. ನನ್ನೊಂದಿಗೆ ಟೆಂಟಿನಲ್ಲಿ ವಾಸಿಸುತ್ತಿದ್ದ ಕರಸೇವಕ ಹೇಳುತ್ತಿದ್ದ, ’ಈ ಎಲ್ಲ ಯೋಜನೆಗಳನ್ನು ವ್ಯವಸ್ಥೆ ಮಾಡಿದ್ದು ಆರೆಸಸ್’. ಮುಂದುವರೆದು ’ನಾವು ರಣನೀತಿಯನ್ನು ರೂಪಿಸಿದ್ದೇವೆ. ಉತ್ತರ ಪ್ರದೇಶದ ಪೋಲೀಸರು ನಮ್ಮ ಬೆಂಬಲಕ್ಕಿದ್ದಾರೆ’ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಿದ್ದ. ನಂತರ ಆತ ನನ್ನನ್ನು ಭೋಜನಾಲಯಕ್ಕೆ ಕರೆದುಕೊಂಡು ಹೋದ.ಅಲ್ಲಿ ಊಟ ಬಡಿಸುತ್ತಿದ್ದ ವ್ಯಕ್ತಿ ಹೇಳುತ್ತಿದ್ದ’ ಸುಮಾರು 1,00,000 ಜನರು ಆಗಲೇ ವಿವಾದಿತ ಸ್ಥಳದ ಬಳಿ ಜಮಾಯಿಸಿದ್ದಾರೆ.’

ಭಾವಾವೇಶದ ಹೊರತಾಗಿಯೂ ಒಂದು ಶಿಸ್ತುಬದ್ಧ ಸಂಘಟನೆಯೊಂದು ಕ್ರಿಯಾಶೀಲವಾಗಿ ಇಡೀ ಘಟನಾವಳಿಗಳನ್ನು ಆಯೋಜಿಸಿದ್ದು ಅಲ್ಲಿ ಎದ್ದು ಕಾಣುತ್ತಿತ್ತು. ಪ್ರತಿಯೊಬ್ಬ ಕರಸೇವಕರ ಬೇಕುಬೇಡಗಳನ್ನು ವಿಚಾರಿಸಿಕೊಳ್ಳುತ್ತಿದ್ದರು. ಐಡೆಂಟಿಟಿ ಕಾರ್ಡ್ಸ, ಊಟದ ಕೂಪನ್‌ಗಳು, ಟೆಂಟ್‌ಗಳು ಇತ್ಯಾದಿಗಳನ್ನೆಲ್ಲ ಅತ್ಯಂತ ವ್ಯವಸ್ಥಿತವಾಗಿ ಯಾವುದೇ ಕೊರತೆ ಬಾರದಂತೆ ನೋಡಿಕೊಳ್ಳಲಾಗಿತ್ತು. ಇಡೀ ಸಂಘಟನೆಯ ಉದ್ದೇಶ ಕೇವಲ ಬೋರ್ಡಿಂಗ್ ಮತ್ತು ಲಾಡ್ಜಿಂಗ್‌ನ ವ್ಯವಸ್ಥೆ ಮಾಡುವುದು ಮಾತ್ರವಾಗಿರಲಿಲ್ಲ, ಜೊತೆಗೆ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಲು ಬೇಕಾದಂತಹ ಶಸಾಸ್ತ್ರಗಳನ್ನು ಸಹ ವ್ಯವಸ್ಥೆ ಮಾಡಿದ್ದರು. Everyone knew that D-Day was nearing.

– ಸಂಜಯ್ ಕಾವ್

[ಸ್ಟೇಟ್ಸ್‌ಮನ್ ಪತ್ರಿಕೆಯ ವರದಿಗಾರನಾಗಿ ವೇಷಮರೆಸಿಕೊಂಡು 1992 ರಲ್ಲಿ ಅಯೋಧ್ಯೆಗೆ ತೆರಳಿದ್ದ ಪತ್ರಕರ್ತ ’ಸಂಜಯ್ ಕಾವ್’ ಔಟ್‌ಲುಕ್ ಪತ್ರಿಕೆಯಲ್ಲಿ ಬರೆದ ಲೇಖನ]

ಮೊನ್ನೆ ದಿನಪತ್ರಿಕೆಗಳಲ್ಲಿ ವಿವಿಧ ಭಯೋತ್ಪಾದನೆ ದುಷ್ಕೃತ್ಯಗಳ ಆರೋಪದ ಮೇಲೆ ಬಂಧಿತನಾಗಿ ಜೈಲಿನಲ್ಲಿರುವ ಸ್ವಾಮಿ assemanandಅಸ್ಸೀಮಾನಂದ ಫೆಬ್ರವರಿ 2014 ರ ’ಕಾರವಾನ್’ ಪತ್ರಿಕೆಯ ಪತ್ರಕರ್ತೆಯೊಂದಿಗೆ ನಡೆದ ಸಂದರ್ಶನದಲ್ಲಿ “ಸಂಜೋತಾ ಎಕ್ಸ್‌ಪ್ರೆಸ್, ಮಾಲಗಾಂವ್ ದುರ್ಘಟನೆ, ಹೈದರಾಬಾದ್ ಮೆಕ್ಕಾ ಮಸೀದಿ”ಗಳ ಮೇಲೆ ನಡೆಸಿದ ಬಾಂಬ್ ದಾಳಿಯನ್ನು ಆಯೋಜಿಸಿದ್ದು ಆರೆಸಸ್” ಎಂದು ಹೇಳಿಕೆ ನೀಡಿದ್ದ. ಆ ಸಂದರ್ಶನದ ಪೂರ್ಣ ವರದಿ ಫೆಬ್ರವರಿ 2014 ಕಾರವಾನ್ ಪತ್ರಿಕೆಯಲ್ಲಿ ಲಭ್ಯವಿದೆ. ಅದರ ಸಂಪಾದಕರು ಸುಮಾರು ಎರಡು ವರ್ಷಗಳ ಅವಧಿಯಲ್ಲಿ ನಾಲ್ಕು ಬಾರಿ ಈ ಸಂದರ್ಶನವನ್ನು ನಡೆಸಲಾಯಿತೆಂದು ಹೇಳಿದ್ದಾರೆ.

ಕಳೆದ 87 ವರ್ಷಗಳಿಂದ ಕಾಲಕಾಲಕ್ಕೆ ಆರೆಸಸ್ ಸಂಘಟನೆ ಈ ರೀತಿಯ ದುಷ್ಕೃತ್ಯಗಳ, ಭಯೋತ್ಪಾದನೆಯ ಆರೋಪಕ್ಕೆ ತುತ್ತಾಗುತ್ತಲೇ ಇದೆ. ಮಹಾತ್ಮ ಗಾಂಧಿ ಹತ್ಯೆಯ ಆರೋಪದ ನಂತರ ಬಾಬರಿ ಮಸೀದಿ ಧ್ವಂಸವು ಆರೆಸಸ್ ಮೇಲಿರುವ ಅತ್ಯಂತ ಗಂಭೀರವಾದ ಆರೋಪವಾದರೆ ಮೆಕ್ಕಾ ಮಸೀದಿ, ಮಾಲೆಗಾವ್, ಸಂಜೋತಾ ಎಕ್ಸ್‌ಪ್ರೆಸ್‌ಗಳ ಮೇಲಿನ ಬಾಂಬ್ ದಾಳಿಗಳು ಕಳೆದ ಒಂಬತ್ತು ವರ್ಷಗಳಲ್ಲಿ ಆರೆಸಸ್ ಮೇಲೆ ಆರೋಪಿಸಲಾಗುತ್ತಿರುವ ಗಂಭೀರ ದುಷ್ಕೃತ್ಯಗಳು. ಇಷ್ಟಲ್ಲದೇ ನೂರಾರು ಕೋಮುಗಲಭೆಗಳು, ಮಹಿಳೆಯರ ಮೇಲಿನ ಹಲ್ಲೆಗಳನ್ನೂ ಆರೆಸಸ್ ಸಂಘಟನೆ ಮೇಲುಸ್ತುವಾರಿ ನಡೆಸಿ ವ್ಯವಸ್ಥಿತವಾಗಿ ಆಯೋಜಿಸಿತ್ತು ಎಂಬ ಗಂಭೀರವಾದ ಆರೋಪಗಳಿವೆ. ಮೂಲಭೂತವಾಗಿ ಫ್ಯಾಸಿಸ್ಟ್, ಮತೀಯವಾದಿ ಸಂಘಟನೆಯಾದ ಆರಸಸ್ ಈ ಗಂಭೀರ ಆರೋಪಗಳನ್ನು ಸಹಜವಾಗಿಯೇ ಅಲ್ಲಗೆಳೆಯುತ್ತಲೇ ಬಂದಿದೆ. ಎಂಬತ್ತರ ದಶಕದಿಂದ ಆಸ್ತಿತ್ವಕ್ಕೆ ಬಂದ ಬಿಜೆಪಿ ಪಕ್ಷವು ಇದು ಕಾಂಗ್ರೆಸ್‌ನ ಕೈವಾಡ ಎಂದು ರಾಜಕೀಯದ ಹೇಳಿಕೆಗಳನ್ನು ಕೊಡುವುದರ ಮೂಲಕ ತನ್ನ ಅಪ್ರಬುದ್ಧತೆಯನ್ನು ಪ್ರದರ್ಶಿಸುತ್ತಾ ನಗೆಪಾಟಲಿಗೀಡಾಗುತ್ತಿದೆ.

ಇಂಡಿಯಾದ ಅನೇಕ ಸೋಷಿಯಾಲಜಿಸ್ಟರು, ಮೇಧಾವಿ ಚಿಂತಕರು, ಸಂಶೋಧಕರು, ಇತಿಹಾಸಕಾರರುassemanand-terrorism ಈ ಫ್ಯಾಸಿಸ್ಟ್ ಆರೆಸಸ್ ಸಂಘಟನೆಯ ಮತೀಯವಾದಿ ಚಿಂತನೆಗಳನ್ನು ವ್ಯವಸ್ಥಿತವಾಗಿ, ಯೋಜನಬದ್ಧವಾಗಿ ನಡೆಸಿದ ಕೋಮುಗಲಭೆಗಳನ್ನು ಕುರಿತು ಮಾಹಿತಿಪೂರ್ಣ, ಅಥೆಂಟಿಕ್ ದಾಖಲೆಗಳನ್ನೊಳಗೊಂಡ ನೂರಾರು ಪುಸ್ತಕಗಳನ್ನು ಬರೆದಿದ್ದಾರೆ. ಪುರಾವೆ ಸಹಿತ ಈ ಆರೆಸಸ್‌ನ ಫ್ಯಾಸಿಸಂ ಅನ್ನು ವಿವರಿಸಿದ್ದಾರೆ.ಆದರೆ ಫ್ಯಾಸಿಸಂನ Fear psychosis ದೇಶಾದ್ಯಾಂತ ವ್ಯಾಪಿಸುತ್ತಿರುವ ವಿಷಮಯ ಕಾಲಘಟ್ಟವಿದು. ಫ್ಯಾಸಿಸಂ ಎಂದೂ ನೇರವಾಗಿ ಟಾಂ ಟಾಂ ಹೊಡೆದುಕೊಂಡು ಬಹಿರಂಗವಾಗಿ ನಮ್ಮ ಮೇಲೆ ಹೇರಲ್ಪಡುವುದಿಲ್ಲ. ಅದು ಅಮೂರ್ತವಾಗಿಯೇ ಕೆಲಸ ಮಾಡುತ್ತಿರುತ್ತದೆ. ನಮಗೆ ತಿಳಿದೋ, ಗೊತ್ತಿಲ್ಲದೆಯೋ ನಾವು ಅದರ ಬಲೆಯಲ್ಲಿ ಸಿಲುಕಿರುತ್ತೇವೆ. ಫ್ಯಾಸಿಸಂನ ಲಕ್ಷಣಗಳು ನೇರವಾಗಿ ದೈಹಿಕ ಹಲ್ಲೆ ಮಾಡುವುದಷ್ಟೇ ಅಲ್ಲ, ಮಾನಸಿಕವಾಗಿ ನಮ್ಮ ಮನದಲ್ಲಿ ಭಯದ ವಾತಾವರಣ ಸೃಷ್ಟಿಸುವುದು ಸಹ ಫ್ಯಾಸಿಸಂನ ಮೂಲಭೂತ ಗುಣಗಳು. ಹೀಗಾಗಿ ದೇಶಾದ್ಯಾಂತ ಒಂದು ಬಗೆಯ ನಿಗೂಢ ಮೌನ ಸೃಷ್ಟಿಯಾಗುತ್ತದೆ. ಇದು ಭಯದ ಮೌನ. ಇಡೀ ನಾಗರಿಕ ಸಮಾಜವೇ ತುಟಿ ಹೊಲೆದುಕೊಂಡುಬಿಡುತ್ತದೆ. ಜಾಣ ಕುರುಡು, ಜಾಣ ಕಿವುಡು ಪ್ರಜಾಪ್ರಭುತ್ವದ ಲಕ್ಷಣಗಳಾಗಿ ರೂಪಗೊಳ್ಳಲಾರಂಬಿಸುತ್ತವೆ. ಗುಜರಾತ್‌ನಲ್ಲಿ ಪ್ರಜ್ಞಾವಂತರು ಕಳೆದ ಹತ್ತು ವರ್ಷಗಳಿಂದ ತಮ್ಮ ಹೊಲೆದ ತುಟಿಯನ್ನು ಇನ್ನೂ ಬಿಚ್ಚಿಲ್ಲ. ಎರಡು ತಿಂಗಳ ಹಿಂದೆ ಗುಜರಾತ್‌ನ ಸಾಹೇಬ್ ಮತ್ತು ಆತನ ಬಲಗೈ ಬಂಟ ಅಮಿತ್ ಷಾ ವಿರುದ್ಧ ಮಹಿಳೆಯ ಚಲನವಲನಗಳ ಮೇಳೆ ಕಾನೂನು ಬಾಹಿರವಾಗಿ ಬೇಹುಗಾರಿಕೆ ನಡೆಸುತ್ತಿರುವ snoopgate ಹಗರಣ ವಿರುದ್ಧ ಗುರುತರವಾದ ಆರೋಪಗಳು ಮಾಧ್ಯಮಗಳಲ್ಲಿ ವಿಸ್ತೃತವಾಗಿ ವರದಿಯಾಯಿತು. ಅದಕ್ಕೆ ಪೂರಕವಾದ ಸಾಕ್ಷಾಧಾರಗಳನ್ನೂ ಒದಗಿಸಲಾಗಿತ್ತು. ಈ ಕುರಿತು ಕೇಂದ್ರದ ಗೃಹ ಖಾತೆ ಇಲಾಖೆ ನಿವೃತ್ತ ನಾಯಾಧೀಶರ ನೇತೃತ್ವದಲ್ಲಿ ತನಿಖಾ ಆಯೋಗವನ್ನು ರಚಿಸುವುದಾಗಿ ಘೋಷಿಸಿತು. ಇದಾಗಿ ಎರಡು ತಿಂಗಳು ಕಳೆದರೂ ಕನಿಷ್ಟ ಮೂವರು ನಿವೃತ್ತ ನ್ಯಾಯಾಧೀಶರು ಈ ತನಿಖಾ ಆಯೋಗದ ನೇತೃತ್ವ ವಹಿಸಲು ತಿರಸ್ಕರಿಸಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಇದು ಏನನ್ನು ಸೂಚಿಸುತ್ತದೆ? ಈಗ ಮೋದಿಯ ವಿರುದ್ಧದ ತನಿಖೆಯ ನೇತೃತ್ವ ವಹಿಸಿದರೆ ಮುಂದೆ ಇದೇ ಮೋದಿ ಅಧಿಕಾರಕ್ಕೆ ಬಂದ ನಂತರ ಈತ ತಮ್ಮ ವಿರುದ್ಧ ಪ್ರತೀಕಾರದ ಕ್ರಮ ಕೈಗೊಳ್ಳದೇ ಇರುವುದಿಲ್ಲ ಎನ್ನುವ ಭಯ ಇಲ್ಲಿ ಕೆಲಸ ಮಾಡುತ್ತಿದೆಯಲ್ಲವೇ? ಇದೇ ಫ್ಯಾಸಿಂನ ಮೂಲಭೂತ ಗುಣ. ಭಯದ ವಾತಾವರಣವನ್ನು ಸೃಷ್ಟಿಸುವುದು. ಏಕೆಂದರೆ ಮೋದಿ ಈ ಬಗೆಯ vendetta ರಾಜಕಾರಣಕ್ಕೆ, ಹಗೆತನದ ಗುಣಗಳಿಗೆ ಈಗಾಗಲೇ ಕುಖ್ಯಾತಿ ಪಡೆದಿದ್ದಾನೆ.

ಉದಾಹರಣೆಗೆ ಕೆಲವು ಪತ್ರಿಕಾ ವರದಿಗಳನ್ನು ಅವಲೋಕಿಸಿ:sanjeev-bhatt-gujarat
2003 ರಲ್ಲಿ ಮೋದಿ ಸರ್ಕಾರದಲ್ಲಿ ಗುಜರಾತ್‌ನ ಗೃಹ ಮಂತ್ರಿಯಾಗಿದ್ದ ಬಿಜೆಪಿ ಪಕ್ಷದ ಹರೇನ್ ಪಾಂಡ್ಯ ಅವರ ಹತ್ಯೆಯಾಯಿತು. ಗುಜರಾತ್ ಹತ್ಯಾಕಾಂಡದ ವಿಚಾರಣೆ ನಡೆಸುತ್ತಿರುವ ನ್ಯಾಯಾಂಗ ತಂಡದ ಮುಂದೆ ಲಿಖಿತ ಹೇಳಿಕೆ ನೀಡಿರುವ ವಿಠ್ಠಲ್ ಪಾಂಡ್ಯ “ಅವರ ಹತ್ಯೆ ರಾಜಕೀಯ ಪಿತೂರಿಯೆಂದು ಅವರು ನೇರವಾಗಿ ಆರೋಪಿಸಿದರು. ಇದರಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿಯ ಕೈವಾಡವಿದೆ. ತನ್ನ ಸ್ವಾರ್ಥ ರಾಜಕಾರಣಕ್ಕಾಗಿ ಮೋದಿ ಹರೇನ್ ಅವರ ಚಾರಿತ್ರ್ಯವಧೆ ಮಾಡುತ್ತಿದ್ದಾರೆ.” (ಟೈಮ್ಸ್ ಆಫ್ ಇಂಡಿಯಾ, 18 ಜುಲೈ, 2003)

ಹರೇನ್ ಪಾಂಡ್ಯ ಅವರ ಪತ್ನಿ ಜಾಗೃತಿ ಪಾಂಡ್ಯ ಅವರು ಜೈಲಿನಲ್ಲಿರುವ ಡಿಜಿ ವನಜಾರ ಅವರನ್ನು ತನ್ನ ಗಂಡನ ಹತ್ಯೆಯ ಕುರಿತಾಗಿ ಸತ್ಯವನ್ನು ನುಡಿಯಲು ಕೇಳಿಕೊಂಡಿದ್ದಾರೆ. ಹಿಂದೆ ಡಿಜಿ ವನಜಾರ ತನ್ನ ರಾಜಿನಾಮೆ ಪತ್ರದಲ್ಲಿ ನಕಲಿ ಎನ್‌ಕೌಂಟರ್‌ಗಳನ್ನು ಗುಜರಾತ್‌ನ ಮುಖ್ಯಮಂತ್ರಿ ನರೇಂದ್ರ ಮೋದಿಯ conscious policy ಆಧಾರದ ಮೇಲೆಯೇ ನಡೆಸಲಾಗಿತ್ತು ಎನ್ನುವ ಹೇಳಿಕೆಯ ಹಿನ್ನೆಲೆಯಲ್ಲಿ ಹರೇನ್ ಪಾಂಡ್ಯ ಅವರ ಪತ್ನಿ ಜಾಗೃತಿ ಪಾಂಡ್ಯ ಮೇಲಿನ ಕೋರಿಕೆಯನ್ನು ಸಲ್ಲಿಸಿದ್ದರು. ತನ್ನ ಪತಿಯ ಹತ್ಯೆಯ ಹಿಂದೆ ದೊಡ್ಡ ಪಿತೂರಿ ಇದೆ ಎಂದು ಅವರು ಆರೋಪಿಸಿದರು. – (ಟೈಮ್ಸ್ ಆಫ್ ಇಂಡಿಯಾ, 22 ಸೆಪ್ಟೆಂಬರ್, 2013)

ಇನ್ನು ಮೋದಿಯ ವಿರುದ್ಧ ಸಾಕ್ಷಿ ನುಡಿದಿದ್ದಕ್ಕಾಗಿ, ನಕಲಿ ಎನ್‌ಕೌಂಟರ್‌ಗಳ ತನಿಖೆಗಾಗಿ ಮುಂದಾದ ಪೋಲೀಸ್ ಅಧಿಕಾರಿಗಳಾದ ಸಂಜೀವ್ ಭಟ್, ರಾಹುಲ್ ಶರ್ಮ, ಕುಲದೀಪ್ ಶರ್ಮ, ಪ್ರದೀಪ ಶರ್ಮ ಇವರನ್ನೆಲ್ಲ ಸಸ್ಪೆಂಡ್ ಮಾಡಿ ಸುಳ್ಳು ಕೇಸುಗಳನ್ನು ಹೊರೆಸಿದ್ದಾರೆ ನರೇಂದ್ರ ಮೋದಿ.

ಸುಮಾರು ಹನ್ನೆರೆಡು ಐಪಿಎಸ್ ಕೇಡರ್ ಅಧಿಕಾರಿಗಳು ಕೇಂದ್ರಕ್ಕೆ ಡೆಪ್ಯುಟೇಶನ್ ಮೇಲೆ ಗುಜರಾತ್‌ನಿಂದ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಪೋಲೀಸ್ ಅಧಿಕಾರಿ ಒಬ್ಬರು “ಗುಜರಾತ್‌ನಲ್ಲಿ ಇಂದಿನ ಸಂದರ್ಭದಲ್ಲಿ ಪ್ರತಿಯೊಬ್ಬ ಅಧಿಕಾರಿಯೂ ಭಯದಿಂದ ಬದುಕುತ್ತಿದ್ದಾರೆ. ತಮ್ಮನ್ನೂ ಒಂದು ದಿನ ಸುಳ್ಳು ಕೇಸುಗಳಲ್ಲಿ ಸಿಗಿಸುವ ಆತಂಕವಿದೆ. ಅಲ್ಲಿನ ಪೋಲೀಸ್ ಅಧಿಕಾರಿಗಳು ನರೇಂದ್ರ ಮೋದಿಯೊಂದಿಗೆ ಹಗೆತನ ಕಟ್ಟಿಕೊಳ್ಳಲು ಇಷ್ಟಪಡುತ್ತಿಲ್ಲ ” ಎಂದು ಹೇಳಿದರು. (ಡೆಕ್ಕನ್ ಹೆರಾಲ್ಡ್, 8 ಫೆಬ್ರವರಿ. 2014)

ಮೇಲಿನ ವರದಿಗಳು ಕೆಲವು ಉದಾಹರಣೆಗಳು ಮಾತ್ರ. ಇಂತಹ ಉದಾಹರಣೆಗಳು ನೂರಾರಿವೆ.

ಆದರೆ ಇಂದು ಮಾಧ್ಯಮಗಳು ಪತ್ರಕರ್ತನಿಗೆ ಮತ್ತು ಪತ್ರಿಕೆಯ ಮಾಲೀಕನಿಗೆ ಇರುವಂತಹ ಕಾನೂನುಬದ್ಧ ಚೌಕಟ್ಟನ್ನು ಹರಿದು ಹಾಕಿ, ನೈತಿಕತೆಯ ಎಲ್ಲಾ ಗುಣಗಳನ್ನು ಗಾಳಿಗೆ ತೂರಿ ಸಂಪೂರ್ಣ ಪಕ್ಷಪಾತದಿಂದ, ಏಕಪಕ್ಷೀಯವಾಗಿ ಆರೆಸಸ್ ಬೆಂಬಲಿತ ನರೇಂದ್ರ ಮೋದಿಯ ಪರ agressive ಆಗಿ ಪ್ರಚಾರ ನಡೆಸುತ್ತಿವೆ. ಇದಕ್ಕೆ ಕಾರ್ಪೋರೇಟ್ ವಲಯ ತನು ಮನ ಧನದ ಮೂಲಕ ತನ್ನನ್ನು ಸಂಪೂರ್ಣವಾಗಿ ನಮೋಗೆ ಸಮರ್ಪಿಸಿಕೊಂಡಿದೆ. ಕಳೆದ ಕೆಲವು ತಿಂಗಳುಗಳಿಂದ ಪತ್ರಿಕೆಗಳಲ್ಲಿ ನರೇಂದ್ರ ಮೋದಿಯ ವಿರುದ್ಧ ಎಲ್ಲಾ ರಾಜಕೀಯ ವಿಶ್ಲೇಷಣೆಗಳು, ವಿಮರ್ಶೆಗಳು ಹೆಚ್ಚೂ ಕಡಿಮೆ ನಿಂತು ಹೋಗಿವೆ. ಯಾರೊಬ್ಬರೂ ಮೋದಿಯ ವಿರುದ್ಧ ಬರೆಯುತ್ತಿಲ್ಲ. ಮೋದಿಯ ವಿರುದ್ಧ ಬರೆದ ಅನೇಕ ಪತ್ರಕರ್ತರನ್ನು ಪತ್ರಿಕೆಯ ಮಾಲೀಕರು ತಮ್ಮ ಪತ್ರಿಕೆಯಿಂದಲೇ ಹೊರಗೆ ಕಳಿಸಿದ್ದಾರೆ. ಏಕೆಂದರೆ Fear psychosis. ಮೋದಿ ಅಧಿಕಾರಕ್ಕೆ ಬಂದರೆ ತಮ್ಮೆಲ್ಲರ ವಿರುದ್ಧ ನಡೆಸುವ ಹಗೆತನದ ಕಾರ್ಯಾಚರಣೆಗಳನ್ನು ನೆನೆದೇ ಇಂದು ಮೌನ ವಹಿಸುವುದೇ ಲೇಸು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.

ಇದಕ್ಕೆ ಕೆಲವು ಉದಾಹರಣೆಗಳು:
ಸನ್ ಟಿವಿಯಲ್ಲಿ ಕಳೆದ 17 ವರ್ಷಗಳಿಂದ ಜನಪ್ರಿಯ ಕಾರ್ಯಕ್ರಮ ’ವಿಭಾದ ಮೇಧೈ’ದ ಅಂಕರ್ ಆಗಿದ್ದ ತಿರು ವೀರಪಾಂಡ್ಯನ್ ಇಂದು ಕೆಲಸ ಕಳೆದುಕೊಂಡಿದ್ದಾನೆ. ಅತ ಮಾಡಿದ ತಪ್ಪೇನು ಗೊತ್ತೆ? ತನ್ನ ಕಾರ್ಯಕ್ರಮದ ಚರ್ಚೆಯ ಸಂದರ್ಭದಲ್ಲಿ ’ಜನರು ಯೋಚಿಸಿ ಮತದಾನ ಮಾಡಬೇಕು, ಮೋದಿ ಅಲೆ ಇದೆ ಎಂದು ಮಾತ್ರಕ್ಕೆ ಮೋದಿಗೆ ಮತ ಹಾಕಬಾರದು. ಇಂದು ಮೋದಿಯನ್ನು ಆರಿಸಿದರೆ ತಮ್ಮ ಈ ನಿರ್ಧಾರದೊಂದಿಗೆ ಮುಂದಿನ 15 ವರ್ಷಗಳ ಕಾಲ ಬದುಕಬೇಕಾಗುತ್ತದೆ’ ಎಂದು ಹೇಳಿದ್ದು.

ಸಿದ್ಧಾರ್ಥ ವರದರಾಜನ್ ಅವರನ್ನು ’ದ ಹಿಂದೂ’ ದಿನಪತ್ರಿಕೆಯಿಂದ ತೆಗೆದಿದ್ದಕ್ಕೆ ಅವರು ಕೊಟ್ಟ ಆಡಳಿತಾತ್ಮಕ ಕಾರಣ ಒಂದು ನೆಪವಷ್ಟೆ. ನಿಜವಾದ ಕಾರಣ ರಾಜಕೀಯ ವಿಶ್ಲೇಷಣೆಗಳಿಗೆ ದಿನಪತ್ರಿಕೆಯ ಮುಖಪುಟವನ್ನು ಮೀಸಲಿಡುವ ನಿರ್ಧಾರ ತೆಗೆದುಕೊಂಡಿದ್ದ ಆಗಿನ ಸಂಪಾದಕ ಸಿದ್ಧಾರ್ಥ ಈ ವಿಶ್ಲೇಷಣೆಯಲ್ಲಿ ಮೋದಿಯನ್ನು ಪ್ರಮುಖವಾಗಿ ಚರ್ಚಿಸಬಾರದೆಂಬ ಶರತ್ತನ್ನು ಒಪ್ಪಿರಲಿಲ್ಲ.

ಇಂದು ಹರತೋಷ್ ಸಿಂಗ್ ಬಾಲ್ ’ಓಪನ್’ ಇಂಗ್ಲೀಷ್ ವಾರಪತ್ರಿಕೆಯ ಮಾಜಿ ರಾಜಕೀಯ ಸಂಪಾದಕ. ಈತ ಮಾಜಿಯಾಗಿದ್ದಕ್ಕೆ ಕಾರಣ ತನ್ನ ಲೇಖನಗಳಲ್ಲಿ ಮೋದಿಯನ್ನು ಟೀಕಿಸಿದ್ದು. ಆದರೆ ಬಾಲ್ ಸಮಾನಂತರವಾಗಿ ರಾಹುಲ್ ಗಾಂಧಿಯನ್ನು ವಿಮರ್ಶಿಸಿದ್ದ. ಆದರೆ ಮಾಲೀಕರಿಗೆ ರಿಸ್ಕ್ ತೆಗೆದುಕೊಳ್ಳಲು ಇಷ್ಟವಿರಲಿಲ್ಲ.

ಮಖೇಶ್ ಅಂಬಾನಿ ಅದರ ಮಾಲೀಕತ್ವ ವಹಿಸಿಕೊಂಡ ನಂತರ ಇಂದು ನೆಟ್‌ವರ್ಕ 18 ಸಂಪೂರ್ಣ ಬಲಪಂಥೀಯ ಛಾನೆಲ್ ಆಗಿ ಮಾರ್ಪಟ್ಟಿದೆ. bhagvat-gadkari-modiಮೋದಿಯ ಕುರಿತಾಗಿ ಮೃದುವಾಗಿರಲು, ಗುಜರಾತ್‌ನ ಅಭಿವೃದ್ಧಿಯ ಕುರಿತಾಗಿ ಹೆಚ್ಚಿನ ಒತ್ತುಕೊಡಲು ಅದರ ಸಂಪಾದಕರಿಗೆ ಸೂಚಿಸಲಾಗಿದೆ. ಇದನ್ನು ಪ್ರತಿಭಟಿಸಿ ಸಂಪಾದಕ ಇಂದ್ರಜಿತ್ ಗುಪ್ತಾ ರಾಜೀನಾಮೆ ನೀಡಿ ಹೊರಬಂದರು. ಇದೇ ಗುಂಪಿನ ಇತರೇ ಪತ್ರಕರ್ತರ ಪ್ರತಿಭಟನೆಯನ್ನು ನಿಶ್ಯಬ್ಧಗೊಳಿಸಲಾಗಿದೆ

“ಮೋದಿ 2002 ರಲ್ಲಿ ಗುಜರಾತ್‌ಲ್ಲಿ ಜರುಗಿದ ಮುಸ್ಲಿಂರ ಹತ್ಯಾಕಾಂಡವನ್ನು ಒಂದು ತಮಾಷೆ ಪ್ರಸಂಗದಂತೆ ನೋಡಿದ” ಎನ್ನುವ ಸಾಲುಗಳನ್ನು ಲೇಖನವೊಂದರಲ್ಲಿ ಬರೆದದ್ದಕ್ಕಾಗಿ ಟ್ವೀಟರ್‌ನ ರಾಜಕೀಯ, ಸುದ್ದಿ ವಿಭಾಗದ ಮುಖ್ಯಸ್ಥ ರಾಹೀಲ್ ಖುರ್ಶಿದ್ ಅವರನ್ನು ಮನೆಗೆ ಕಳುಹಿಸಲಾಯಿತು. – ಔಟ್‌ಲುಕ್, 3 ಫೆಬ್ರವರಿ 2014

ಇನ್ನು ದೃಶ್ಯ ಮಾಧ್ಯಮಗಳ ಕುರಿತಾಗಿ ಹೇಳುವುದೇನಿಲ್ಲ. ಅಲ್ಲಿ ಮೋದಿಯನ್ನು ಹೊಗಳದೇ ಹೋದರೆ ಅಪರಾಧವಾಗುತ್ತದೆ. ದೃಶ್ಯ ಮಾಧ್ಯಮಗಳ ಮೋದಿಯ ಭಜನೆ ಮತ್ತು ಭಟ್ಟಂಗಿತನ ಪ್ರಜಾಪ್ರಭುತ್ವದ ದೊಡ್ಡ ಅಣುಕು ಮತ್ತು ಸೋಲು.

ಫ್ಯಾಸಿಸಂ ವರ್ತಿಸುವುದು ಹೀಗೆಯೇ. ಮೊದಲು ಅಲ್ಪಸಂಖ್ಯಾತರನ್ನು, ತಳಸಮುದಾಯಗಳನ್ನು ಅಪರಾಧಿಗಳು ಎಂದು ಪೂರ್ವಗ್ರಹಪೀಡಿತ ಕಪೋಲ ಕಲ್ಪಿತ ಕತೆಗಳನ್ನು ನಮ್ಮ ಮನಸ್ಸಿನಲ್ಲಿ ತುಂಬಲಾಗುತ್ತದೆ. ಒಂದು ವೇಳೆ ನಾವು ಒಪ್ಪಿಕೊಳ್ಳದಿದ್ದಲ್ಲಿ ಇದು ನಮೋ ತರಹದ ಸರ್ವಾಧಿಕಾರಿಗೆ ಗೊತ್ತಾದರೆ ಎನ್ನುವ Fear psychosis ಬಿತ್ತಲಾಗುತ್ತದೆ. ನೀವು ಸುರಕ್ಷಿತರಾಗಿ ಬದುಕಬೇಕೆಂದರೆ ಎನ್ನುವುದರ ಅರ್ಥ ಭಯದ ನೆರಳಲ್ಲಿ ಬದುಕಬೇಕೆಂಬುದಷ್ಟೇ. ಆಗ ದೇಶಾದ್ಯಾಂತ ನೂರಾರು ಅಮಿತ ಶಾಗಳು, ಬಾಬು ಬಜರಂಗಿಗಳು ಮೋದಿಯ ನೇತೃತ್ವದಲ್ಲಿ ನಿರಂತರವಾಗಿ ನಮ್ಮ ಮನಸ್ಸಿನ ಮೇಲೆ ನಡೆಸುವ ಫ್ಯಾಸಿಸಂನ ಈ ದಾಳಿ ಬಹುಸಂಖ್ಯಾತರ ಡಿಕ್ಟೇಟರ್ ಸಮಾಜವನ್ನು ನಿರ್ಮಿಸುತ್ತದೆ.ಇದು ರಕ್ತರಹಿತವಾಗಿಯೇ ಜರುಗಿಬಿಡುತ್ತದೆ.

ಮತ್ತು, Everyone fearing that D-Day is nearing.