ಸುಮಕೆ ಸೌರಭ ಬಂದ ಗಳಿಗೆ ಯಾವುದು ಹೇಳು?

– ಬಿ. ಶ್ರೀಪಾದ ಭಟ್

ನಮ್ಮ ಡಾ.ರಾಜ್ ತೀರಿಕೊಂಡಾಗ ನಡೆದ ಸಂತಾಪ ಸೂಚಕ ಸಭೆಯಲ್ಲಿ ಭಾಗವಹಿಸಿ ’ಎನ್‌ಟಿಆರ್, ಎಂಜಿಆರ್, ಎಎನ್‌ಆರ್, ಶಿವಾಜಿ ಗಣೇಶನ್ ಅವರನ್ನು ಪ್ರಸ್ತಾಪಿಸದೆ ಡಾ.ರಾಜ್ ಕುರಿತು ಮಾತನಾಡಲು ಸಾಧ್ಯವಿಲ್ಲ’ ಎಂದು ನಾನು ಹೇಳಿದ್ದು ಮತ್ತೆ ನೆನಪಾಗಿದ್ದು ಮೊನ್ನೆ ಬಾಲು ಮಹೇಂದ್ರ ತೀರಿಕೊಂಡ ಸುದ್ದಿ ಬಂದಾಗ. balumahendraಹೌದು ಕೆ.ಬಾಲಚಂದರ್, ಭಾರತೀರಾಜ, ಭಾಗ್ಯರಾಜ ಇವರನ್ನು ಪ್ರಸ್ತಾಪಿಸದೆ ಬಾಲು ಮಹೇಂದ್ರ ಅವರನ್ನು ಕುರಿತು ಮಾತನಾಡಲು ಸಾಧ್ಯವಿಲ್ಲ. ಈ ನಾಲ್ಕೂ ’ಭಾ’ ಗಳು ಎಪ್ಪತ್ತು, ಎಂಬತ್ತರ ದಶಕಗಳಲ್ಲಿ ಇಡೀ ತಮಿಳು ಚಿತ್ರರಂಗವನ್ನು ತಮ್ಮ ಹೆಗಲ ಮೇಲೆ ಹೊತ್ತು ನಡೆದಿದ್ದರು. ಕೇವಲ ಸಿನಿಮಾ ನಿರ್ದೇಶನವಷ್ಟೇ ಅಲ್ಲ ಜೊತೆಜೊತೆಗೆ ಸೃಜನಶೀಲತೆಯನ್ನು, ಹೊಸ ದಾರಿಗಳನ್ನು, ನಿರಂತರ ಪ್ರಯೋಗಗಳನ್ನು ಕಟ್ಟಿದರು. ಆ ದಶಕಗಳ, ಈ ನಾಲ್ಕು ’ಭಾ’ಗಳ Legacy ಯನ್ನು ಇಪ್ಪತ್ತೊಂದನೆಯ ಶತಮಾನದಲ್ಲಿ ಇಂದು ತಮ್ಮ ಹೆಗಲ ಮೇಲೆ ಹೊತ್ತು ನಡೆಯುತ್ತಿರುವುವವರು ಸಸಿಕುಮಾರ್, ಪಾಂಡಿರಾಜ್, ಬಾಲಾಜಿ ಸಕ್ತಿವೇಲು, ಬಾಲಾ, ಛೇರನ್, ವೆಟ್ರಿಮಾರನ್, ಮಿಷ್ಕಿನ್, ಸಮುದ್ರಖಣಿ, ಪ್ರಭು ಸಾಲೋಮನ್, ಸರ್ಕುನಮ್, ಸುಸೀನ್‌ತಿರನ್, ವಸಂತಬಾಲನ್ ರಂತಹ ಹೊಸ ತಲೆಮಾರಿನ ನಿರ್ದೇಶಕರು ಮತ್ತು ನಟರು. ಈ ಮಟ್ಟದ ಹೊಸ ಆಯಾಮಗಳನ್ನು, ನಿರಂತರವಾದ ಸೃಜನಶೀಲತೆಯ ಫಸಲನ್ನು, ಅಗಣಿತ ಸಾಧ್ಯತೆಗಳನ್ನು, ಎಂದಿಗೂ ಬತ್ತದ ಸಿಹಿನೀರಿನ ಬುಗ್ಗೆಗಳನ್ನು ಕಟ್ಟಲು ಸಾಧ್ಯವಾಗಿದ್ದು ತಮಿಳು ಚಿತ್ರರಂಗಕ್ಕೆ ಮಾತ್ರವೇ ಹೊರತು ಭಾರತೀಯ ಚಿತ್ರರಂಗದಲ್ಲಿ ಬೇರೆ ಯಾವ ಭಾಷೆಯ ಚಿತ್ರರಂಗಕ್ಕೂ ಇದು ಸಾಧ್ಯವಾಗಿಲ್ಲ ಎಂದು ನಾನು ಅತ್ಮವಿಶ್ವಾಸದಿಂದ ಹೇಳುತ್ತೇನೆ. ನೆನಪಿರಲಿ ಮೇಲ್ಕಾಣಸಿದ ಹೊಸ ತಲೆಮಾರಿನ ನಿರ್ದೇಶಕ, ನಟರಾರೂ ಮೇಲ್ಜಾತಿಗೆ ಸೇರಿದವರಲ್ಲ. ಹಿಂದುಳಿದ, ತಳಸಮುದಾಯಗಳಿಂದ ಬಂದವರು.

ಜನಪ್ರಿಯ ಕವಿತೆ ’ಏಳು ಸುತ್ತಿನ ಕೋಟೆ’ಯಲ್ಲಿ ಇದ್ದಕಿದ್ದ ಹಾಗೆ ಕವಿ ’ಸುಮಕೆ ಸೌರಭ ಬಂದ ಗಳಿಗೆ ಯಾವುದು ಹೇಳು’ ಎಂದು ಪ್ರಶ್ನಿಸಿ ಓದುಗನನ್ನು ಚಕಿತಗೊಳಿಸುತ್ತಾನೆ. ಹಾಗೆಯೇ ಈ ಸೃಜನಶೀಲತೆ, ಸಮಸ್ಯೆಯ ಆಳವನ್ನು ತಲಪುವ ಸೂಕ್ಷ್ಮತೆ ಮತ್ತು ಕುಶಲತೆ, ವ್ಯಕ್ತಿಗತ ನೆಲೆಯಲ್ಲಿನ ಮನುಷ್ಯನ ಸಣ್ಣತನದ ನಡುವಳಿಕೆಗಳಿಂದ ಶುರುವಾಗಿ ಸಾಮಾಜಿಕ ನ್ಯಾಯದ ಪರಿಕಲ್ಪನೆವರೆಗೆ, ಮದ್ರಾಸ್, ಮಧುರೈ, ಕೊಯಮತ್ತೂರಿನಿಂದ ತಮಿಳು ನಾಡಿನ ಸಣ್ಣ, ಸಣ್ಣ ಹಳ್ಳಿಗಳವರೆಗೆ ಸಮೂಹ ಪ್ರಜ್ಞೆಯ ಈ ನಿರಂತರ ಪ್ರಯಾಣ ಇದೆಲ್ಲಾ ತಮಿಳು ಚಿತ್ರರಂಗಕ್ಕೆ ದಕ್ಕಿದ ಗಳಿಗೆ ಯಾವಾಗ?

ಎಪ್ತತ್ತರ ದಶಕ ಆರಂಭವಾಗುವಷ್ಟರಲ್ಲಿ ಶಿವಾಜಿ ಗಣೇಶನ್‌ರವರ ಹೊಕ್ಕಳಿನಿಂದ ಧ್ವನಿಯನ್ನು ತೆಗೆದು ಇಡೀ ಪರದೆಯ ಮೇಲೆ ಆಕ್ರಮಿಸುವಂತಹ ನಟನೆಯ ಶೈಲಿ ಕ್ರಮೇಣ ಮೂಲೆ ಗುಂಪಾಗತೊಡಗಿತು. ಕಾದಲ್ ಮನ್ನನ್ ಜೆಮಿನಿ ಗಣೇಶನ್‌ಗೆ ಏರುತ್ತಿದ್ದ ವಯಸ್ಸು ಪ್ರೇಮಿಯಾಗಲು ನಿರಾಕರಿಸುತ್ತಿತ್ತು. ಇನ್ನು ಎಂಜಿಆರ್‌ಗೆ ಸ್ವತಃ ಸಿನಿಮಾರಂಗದಲ್ಲಿ ಆಸಕ್ತಿ ಕಡಿಮೆಯಾಗತೊಡಗಿ ರಾಜಕೀಯದ ಕಡೆಗೆ ಮುಖ ಮಾಡಿದ್ದರು. ಒಟ್ಟಾರೆ ಇಡೀ ತಮಿಳು ಚಿತ್ರರಂಗ ಆಯಾಸದಿಂದ ಬಸವಳಿದಿತ್ತು. ಹೊಸ ಘಮಲಿಗೆ, ಹೊಸದಾದ ಅಭಿವ್ಯಕ್ತಿಯ ಶೈಲಿಗೆ, ತಂಗಾಳಿಯಂತಹ ದೃಶ್ಯಕಾವ್ಯಕ್ಕೆ, ಸಂಪೂರ್ಣ ಹೊಸ ಚಿಗುರಿಗೆ, ಸಾಧ್ಯವಾದರೆ ಸೈರಿಸಿಕೊಳ್ಳಬಲ್ಲ ತಿಕ್ಕಲುತನಕ್ಕೆ ತಮಿಳು ಪ್ರೇಕ್ಷಕರು ಕಾಯುತ್ತಿದ್ದರು. ಅಂತಹದೇ ಒಂದು ದಿನ ಎಪ್ಪತ್ತರ ದಶಕದ ಆರಂಭದಲ್ಲಿ ಕೆ.ಬಾಲಚಂದರ್ ಅವರು ಕತೆ, ಚಿತ್ರಕತೆ ಬರೆದು ನಿರ್ದೇಶಿಸಿದ ’ ಅರಂಗೇಟ್ರಂ’ ಸಿನಿಮಾ ಬಿಡುಗಡೆಯಾಯಿತು. arangetramಎಂಟು ಜನ ಅಣ್ಣ, ತಂಗಿಯರ ಕರ್ಮಠ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ನಾಯಕಿ ಇಡೀ ಸಂಸಾರದ ಜವಬ್ದಾರಿಯನ್ನು ಹೊತ್ತುಕೊಂಡು ಕಡೆಗೆ ವೇಶ್ಯಾವೃತ್ತಿಗೆ ಸೇರಿಕೊಳ್ಳುತ್ತಾಳೆ. ತನ್ನ ವೇಶ್ಯಾವೃತ್ತಿಯಿಂದ ಗಳಿಸಿದ ಹಣದಿಂದ ಅಣ್ಣ, ತಂಗಿಯರ ಮದುವೆ ಮಾಡುತ್ತಾಳೆ. ಹೀಗೆ ಸಂಪೂರ್ಣ ಹೊಸಬರನ್ನು ಹಾಕಿಕೊಂಡು ಮಾಡಿದ ’ಅರಂಗೇಟ್ರಂ’ ಸಿನಿಮಾ ಆ ಕಾಲದಲ್ಲಿ ಈ ವಿವಾದಾತ್ಮಕ ಕಥಾವಸ್ತುವಿನಿಂದಾಗಿ, ಕೆಲವು ಬೋಲ್ಡ್ ದೃಶ್ಯಗಳಿಂದಾಗಿ, ಹರಿತ ಸಂಭಾಷಣೆಗಳಿಂದಾಗಿ ತಮಿಳುನಾಡಿನಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿತು. ಆದರೆ ಬಾಕ್ಸ್ ಆಫೀಸಿನಲ್ಲಿ ದುಡ್ಡನ್ನೂ ಮಾಡಿತು. ಪ್ರಶಸ್ತಿಯನ್ನೂ ಗಳಿಸಿತು. ಎಲ್ಲಕ್ಕಿಂತಲೂ ಮಿಗಿಲಾಗಿ ನಾಯಕಿ ಪ್ರಧಾನ ಸಿನಿಮಾದ ಹೊಸ ಅಲೆಯನ್ನೇ ಮರುಸೃಷ್ಟಿಸಿತ್ತು. ’ಅರಂಗೇಟ್ರಂ’ನ ನಾಯಕಿ ಪ್ರೇಮಲೀಲ ಎಲ್ಲಿಯೂ ’ಶರಪಂಜರ’ದ ಕಲ್ಪನಾಳಂತೆ ನಾನು ಕಳಕೊಂಡೆ, ನಾನು ಕಳಕೊಂಡೆ ಎಂದು ಹಿಸ್ಟಾರಿಕ್ ಆಗಿ ಚೀರಾಡುವುದಿಲ್ಲ, ಬದಲಾಗಿ ಘನತೆಯಿಂದ ಸಮಾಜವನ್ನು ಎದುರಿಸುತ್ತಾಳೆ. (ಬಾಲಚಂದರ್ ಏತಕ್ಕೆ ಪುಟ್ಟಣ್ಣ ಕಣಗಾಲರಿಗಿಂತ ವೈಚಾರಿವಾಗಿ, ಸಾಮಾಜಿಕವಾಗಿ ನೂರಾರು ಮೈಲಿ ಮುಂದಿದ್ದರು ಎನ್ನುವುದಕ್ಕೆ ಇದು ಒಂದು ಸಣ್ಣ ಉದಾಹರಣೆ. ಇಂತಹ ನೂರಾರು ಉದಾಹರಣೆಗಳಿವೆ.)

1974 ರಲ್ಲಿ ಕೆ.ಬಾಲಚಂದರ್ ಮತ್ತೆ ಕತೆ ಬರೆದು “ಅವಳ್ ಒರು ತೊಡರ್ ಕಥೈ” ಎನ್ನುವ ಮತ್ತೊಂದು ನಾಯಕಿ ಪ್ರಧಾನ ಸಿನಿಮಾ ನಿರ್ದೇಶಿಸಿದರು. ಇದು ಆ ಕಾಲಕ್ಕೆ ಸೂಪರ್ ಹಿಟ್ ಸಿನಿಮಾ. ನಟಿ ಸುಜಾತಗೆ ಹೊಸ ಇಮೇಜನ್ನು, ಜನಪ್ರಿಯತೆಯನ್ನು ತಂದುಕೊಟ್ಟ, ಕಮಲ್‌ಹಾಸನ್ ಮತ್ತು Avaloruthodarರಜನೀಕಾಂತ್‌ಗೆ ನಟನೆಯ ಆಭಿವ್ಯಕ್ತಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟ ಈ ಸಿನಿಮಾದಲ್ಲಿ ಮತ್ತೊಮ್ಮೆ ನಾಯಕಿ ತನ್ನ ಕುಟುಂಬಕ್ಕಾಗಿ ತನ್ನ ವಯುಕ್ತಿಕ ಜೀವನವನ್ನೇ ಮೀಸಲಿಡುತ್ತಾಳೆ. ಅಲ್ಲದೆ Middle class working women ನ ದೈನಂದಿನ ಬದುಕನ್ನು ವಿಭಿನ್ನ ಕೋನಗಳಿಂದ, ಹೊಸ ನಿರೂಪಣೆಯ ಮೂಲಕ ಮೊಟ್ಟ ಮೊದಲ ಬಾರಿಗೆ ಪ್ರೇಕ್ಷಕ ನೋಡುತ್ತಾನೆ. (ಅರವತ್ತರ ದಶಕದಲ್ಲಿ ಮೇಘಾ ಡಾಕೆ ಡಾಗೆ ಸಿನಿಮಾದ ಮೂಲಕ ರುತ್ವಿಕ್ ಘಟಕ್ ಹೊಸ ಮೈಲಿಗಲ್ಲನ್ನೇ ಸೃಷ್ಟಿಸಿದ್ದರು, ಹಿಂದಿಯಲ್ಲಿ ಅದೇ ವೇಳೆ ಬಸು ಚಟರ್ಜಿ, ಗುಲ್ಜಾರ್, ಹೃಶಿಕೇಶ್ ಮುಖರ್ಜಿ, ಇದೇ ಮಾದರಿಯಲ್ಲಿ ಬ್ರಿಜ್ ಸಿನಿಮಾಗಳ ನಿರ್ದೇಶಕರಾಗಿ ಖ್ಯಾತಿ ಗಳಿಸಿದ್ದರು.) ಹಲವಾರು ಪ್ರಶಸ್ತಿಗಳನ್ನು ಗಳಿಸಿದ ಈ ಸಿನಿಮಾ ನಂತರ ತೆಲುಗು, ಕನ್ನಡ (ಬೆಂಕಿಯಲ್ಲಿ ಅರಳಿದ ಹೂ), ಹಿಂದಿಗೂ ಸಹ ರೀಮೇಕ್ ಆಯಿತು.

ನಂತರ ಕೆ.ಬಾಲಚಂದರ್ ಬರೆದು ನಿರ್ದೇಶಿಸಿದ “ಅಪೂರ್ವ ರಾಗಂಗಳ್” ಸಿನಿಮಾ ತಮಿಳು ಸಿನಿಮಾದಲ್ಲಿ ಹೊಸ ಮೆಲೋಡಿಯನ್ನೇ ಬರೆಯಿತು. ಕಿರಿಯ ವಯಸ್ಸಿನ ಕಮಲ್ ಹಾಸನ್ ತನಗಿಂತ ಹಿರಿಯಳಾದ ಶ್ರೀವಿದ್ಯಾಳನ್ನು ಪ್ರೇಮಿಸಿದರೆ, ಹಿರಿಯ ವಯಸ್ಸಿನ, ಕಮಲ್‌ನ ತಂದೆ (ಹೆಸರು ಮರೆತು ಹೋಗಿದೆ) ಕಿರಿಯ ವಯಸ್ಸಿನ ಶ್ರೀವಿದ್ಯಾಳ ಮಗಳು ಜಯಸುಧಾಳಲ್ಲಿ ಪ್ರೀತಿ ಹುಡುಕುತ್ತಾನೆ. ಇಲ್ಲಿ ಶ್ರೀವಿದ್ಯಾ ವಿವಾಹಕ್ಕಿಂತಲೂ ಮೊದಲು ಜಯಸುಧಾಳಿಗೆ ಜನ್ಮ ನೀಡಿರುತ್ತಾಳೆ. ಈ ಎಲ್ಲಾ ಸಂಕೀರ್ಣ ಸಂಬಂಧಗಳು ಒಂದು ತಾರ್ಕಿಕ ಅಂತ್ಯಕ್ಕೆ ಮುಟ್ಟುತ್ತದೆ ಎನ್ನುವಷ್ಟರಲ್ಲಿ ಶ್ರೀವಿದ್ಯಾಳ ಹಳೆಯ ಪ್ರೇಮಿ ರಜನೀಕಾಂತ್ ರಂಗ ಪ್ರವೇಶ ಮಾಡುತ್ತಾನೆ. ಆ ಕಾಲಕ್ಕೆ ಇದು ಎಷ್ಟೊಂದು ವಿಲಕ್ಷಣ ಕತೆಯೆಂದರೆ ಎಲ್ಲರೂ ನಿರ್ದೇಶಕನ ವಿಭಿನ್ನ ನಿರೂಪಣೆಗೆ ಮಾರು ಹೋಗುತ್ತಾರೆ. ಕೇವಲ ಕ್ಯಾಮಾರಾದಿಂದ ಮಾತ್ರ ಸಿನಿಮಾ ಸಾಧ್ಯವಿಲ್ಲ, ಬಿಗಿಯಾದ ಕತೆ, ಚಿತ್ರಕತೆ ಒಂದು ಯಶಸ್ವೀ ಸಿನಿಮಾಕ್ಕೆ ಬೆನ್ನೆಲೆಬಾಗಿರುತ್ತವೆ ಎಂದು ಬಾಲಚಂದರ್ ’ಅಪೂರ್ವ ರಾಗಂಗಳ್’ ಮೂಲಕ ತೋರಿಸಿಕೊಟ್ಟರು. ಇದೂ ಸಹ ರಾಷ್ಟ್ರ ಪ್ರಶಸ್ತಿಗಳನ್ನು ಗಳಿಸಿತು.

ಇದೇ ವೇಳೆ ಮೂವತ್ತರ ಹರೆಯದ, ಕಡು ಕಪ್ಪು ಬಣ್ಣದ ಯುವ ನಿರ್ದೇಶಕ ಭಾರತೀ ರಾಜ “16 ವಯದಿನಿಲೆ” ಸಿನಿಮಾದ ಮೂಲಕ ತಮಿಳು ಚಿತ್ರರಂಗದಲ್ಲಿ ಗ್ರಾಮೀಣ ಹಿನ್ನೆಲೆಯ ಸಿನಿಮಾಗಳಿಗೆ ಅದುವರೆಗೆ ಇದ್ದಂತಹ ಸಾಂಪ್ರದಾಯಿಕ ಚೌಕಟ್ಟನ್ನೇ 16-vayathinelaeಮುರಿದು ಹಾಕಿ ಮತ್ತೊಂದು ಮಗ್ಗುಲನ್ನೇ ತೆರೆದಿಟ್ಟರು. ಆಧುನಿಕ ತಮಿಳು ಚಿತ್ರರಂಗದ ಗತಿಯನ್ನೇ ಬದಲಿಸಿದ ಸಿನಿಮಾವೆಂದೇ “16 ವಯದಿನಿಲೆ” ಚಿತ್ರವನ್ನು ನೆನೆಸಿಕೊಳ್ಳುತ್ತಾರೆ. ಇದು ಶ್ರೀದೇವಿಗೆ ನಾಯಕಿಯ ಪಾತ್ರದ ಮೂಲಕ ಜನಪ್ರಿಯತೆಯನ್ನು ತಂದು ಕೊಟ್ಟರೆ ಕಮಲ್ ಮತ್ತು ರಜನಿಯ ಪ್ರತಿಭೆಯನ್ನು ಮತ್ತೊಮ್ಮೆ ಸಾಣೆ ಹಿಡಿದ್ದದ್ದು ಭಾರತೀರಾಜ.

ಇದೇ ಸಂದರ್ಭದಲ್ಲಿ ಪುಣೆ ಫಿಲ್ಮ್ ಇನ್ಸಿಟ್ಯೂಟ್‌ನಲ್ಲಿ ಸಿನಿಮಾಟಾಗ್ರಫಿಯಲ್ಲಿ ಶಿಕ್ಷಣ ಪಡೆದು ಹಲವಾರು ಮಲಯಾಳಿ ಸಿನಿಮಾಗಳಲ್ಲಿ ಛಾಯಾಗ್ರಹಣ ಮಾಡಿ ಪ್ರಶಸ್ತಿಯನ್ನು ಗಳಿಸಿದ ಬಾಲು ಮಹೇಂದ್ರ ಕನ್ನಡದಲ್ಲಿ ತಮ್ಮ ಮೊಟ್ಟಮೊದಲ ಸಿನಿಮಾ ’ಕೋಕಿಲಾ’ ನಿರ್ದೇಶಿಸುವುದರ ಮೂಲಕ, ನಂತರ ತಮಿಳು ಸಿನೆಮಾ ’ಮೂನ್ರು ಮಲರಂ’ದ ಛಾಯಾಗ್ರಹಣದ ಮೂಲಕ ಗಮನ ಸೆಳೆಯುತ್ತಾರೆ. ನಂತರ ಶೋಭಾ ಅಭಿನಯದ ’ಅದಿಯಾದ ಕೋಲೈಂಗಳ್’ ನಿರ್ದೇಶನದ ಮೂಲಕ ತಮಿಳು ಚಿತ್ರರಂಗದ ನಿರ್ದೇಶಕರಾಗುವ ಬಾಲು ಮಹೇಂದ್ರ ನಂತರ ನಿರ್ದೇಶಿಸಿದ ” ಮೂನ್ರಾಂ ಪಿರ್ರೈ” ಚಿತ್ರ ಸೂಪರ್ ಹಿಟ್ ಆಗುತ್ತದೆ.

ನಂತರ ಎಂಬತ್ತರ ದಶಕದ ಆರಂಭದಲ್ಲಿ ಕೆ.ಬಾಲಚಂದರ್ ನಿರ್ದೇಶನದಲ್ಲಿ ತೆರೆಕಂಡ “ವರುಮೈ ನೇರಂ ಸಿಗಪ್ಪು” ಸಿನಿಮಾ ವಿದ್ಯಾವಂತ, ನಿರುದ್ಯೋಗ ಯುವಕರ ಕತೆಯನ್ನು ಪರಿಣಾಮಕಾರಿಯಾಗಿ, ಬಿಗಿಯಾದ ಚಿತ್ರಕತೆಯಿಂದ ನಿರೂಪಿಸುತ್ತದೆ.

ಇದೇ ವೇಳೆ ಬಿಡುಗಡೆಗೊಂಡ ಕೆ.ಬಾಲಚಂದರ್ ನಿರ್ದೇಶನದ ” ತಣ್ಣೀರ್ ತಣ್ಣೀರ್” ಸಿನಿಮಾ ಮತ್ತೊಂದು Path breaking ಚಿತ್ರ. ಬರ, ನೀರಿನ ಅಭಾವ, ರಾಜಕೀಯ ಭ್ರಷ್ಟತೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸುವ ಈ ಸಿನಿಮಾದ ಮೂಲಕ ಬಾಲಚಂದರ್ ತಮ್ಮ ದಾರಿಯನ್ನೇ ಬದಲಿಸಿ ಸಾಮಾಜಿಕ, Thanneer-Thanneer-Sarithaರಾಜಕೀಯ ಶೋಷಣೆಯ ಕತೆಗೆ ಹೊರಳಿಕೊಂಡರು. ಭ್ರಮಾತ್ಮಕ ಮನೋರಂಜನೆಯ ಜನಪ್ರಿಯ ರಂಗವನ್ನು ಕೈಬಿಟ್ಟು ಪ್ರಯೋಗಾತ್ಮಕ ಸಾಮಾಜಿಕ ನೆಲೆಗೆ ದಾಪುಗಾಲಿನ ಈ ನಡಿಗೆ ಕೆ.ಬಾಲಚಂದರ್‌ನಂತಹ ಕ್ರಿಯಾಶೀಲ ನಿರ್ದೇಶಕನಿಗೆ ಮಾತ್ರ ಸಾಧ್ಯವೇನೋ. ಸಿನಿಮಾವೆಂದರೆ ಕೇವಲ ತಂತ್ರಜ್ಞಾನದ ಹೆಗ್ಗಳಿಕೆಯಲ್ಲ, ಅದು ಮನುಕುಲದ ಪ್ರಾಮಾಣಿಕ ಇತಿಹಾಸವೂ ಹೌದು ಎಂದು ಈ ಸಿನಿಮಾದ ಮೂಲಕ ನಮಗೆ ನೆನಪಿಸಿಕೊಟ್ಟವರು ಬಾಲಚಂದರ್. ಇನ್ನು ಈ “ತಣ್ಣೀರ್ ತಣ್ಣೀರ್” ಸಿನಿಮಾದ ನಾಯಕಿ ಸರಿತ, Marvelous. ಕಪ್ಪು ಬಣ್ಣದ ಸರಿತಾಳ ಮನೋಜ್ಞ ಅಭಿನಯ ಮರೆಯಲು ಸಾಧ್ಯವೇ ಇಲ್ಲ. ಜೀವಮಾನದ ಶ್ರೇಷ್ಠ ಅಭಿನಯ ಕೊಟ್ಟ ಸರಿತಾಳಿಗೆ ಸ್ವಲ್ಪದರಲ್ಲಿಯೇ ರಾಷ್ಟ್ರಪ್ರಶಸ್ತಿ ತಪ್ಪಿತು. ಆದರೆ ಸರಿತ ಸಿನಿಮಾ ರಸಿಕರ ಮನಗೆದ್ದಿದ್ದಕ್ಕೆ ಪುರಾವೆ ಈ “ತಣ್ಣೀರ್ ತಣ್ಣೀರ್”ಚಿತ್ರದಲ್ಲಿನ ಅಭಿನಯ.

ನಂತರ ಕೆ.ಬಾಲಚಂದರ್ ನಿರ್ದೇಶನದ “ಅಚ್ಚಮಿಲ್ಲೈ ಅಚ್ಚಮಿಲ್ಲೈ” ಸಿನಿಮಾ ಕೂಡ ರಾಜಕೀಯ ಹಿನ್ನೆಲೆಯಲ್ಲಿ ವಯುಕ್ತಿಕ ಬದುಕಿನ ಪಲ್ಲಟಗಳನ್ನು ಪರಿಣಾಮಕಾರಿಯಾಗಿ ನಿರೂಪಿಸುತ್ತದೆ. ಮತ್ತೊಮ್ಮೆ ಸರಿತ ಅತ್ಯುತ್ತಮವಾಗಿ ಅಭಿನಯಿಸಿದ್ದಳು.

ಎಂಬತ್ತರ ದಶಕದ ಮಧ್ಯಭಾಗದಲ್ಲಿ ತೆರೆಕಂಡ ಭಾರತೀರಾಜ ನಿರ್ದೇಶನದ “ಅಲೈಗಳ್ ಓವದಿಲ್ಲೈ”, “ಮಣ್ ವಾಸನೈ” ಸಿನಿಮಾಗಳು ಗಟ್ಟಿಯಾದ ಕತೆ, ಚಿತ್ರಕತೆ ಮತ್ತು ಹೊಸ ಬಗೆಯ ನಿರೂಪಣೆಯ ಮೂಲಕ ಯಶಸ್ಸನ್ನು ಸಾಧಿಸಿದರೆ, ಭಾರತೀರಾಜ ನಿರ್ದೇಶನದ “ವೇದಂ ಪುದಿದು” ಸಿನಿಮಾ ಜಾತೀಯ ಸಮಾಜವನ್ನು ನೇರವಾಗಿ, ನಿರ್ಭಿಡೆಯಿಂದ ಟೀಕಿಸುತ್ತದೆ. ಈ ಸಿನಿಮಾದಲ್ಲಿ ಬ್ರಾಹ್ಮಣರ ಕರ್ಮಠತನವನ್ನು, ಜಾತಿವಾದವನ್ನು ಟೀಕಿಸುವ ಕಣ್ಣನ್‌ರವರ ಸಂಭಾಷಣೆ ದೊಡ್ಡ ಹೈಲೈಟ್.

ಇದೇ ಸಂದರ್ಭದಲ್ಲಿ ತಮಿಳು ಚಿತ್ರರಂಗ ಮತ್ತೊಮ್ಮೆ ತನ್ನ ಹಳೆಯ ಕಮರ್ಶಿಯಲ್ ಜಾಳು ಜಾಳು ಹಾದಿಗೆ ಜಾರುತ್ತಿದೆ ಎನ್ನುವಾಗ, Mudhal-Mariyadhaiಭಾರತೀರಾಜ ನಿರ್ದೇಶನದ “ಮೊದಲ್ ಮರ್ಯಾದೈ” ಸಿನಿಮಾ ಮತ್ತೊಮ್ಮೆ ಗ್ರಾಮೀಣ ಸಮಾಜವನ್ನು ಲವಲವಿಕೆಯಿಂದ, ಚೇತೋಹಾರಿಯಾಗಿ ನಮ್ಮನ್ನು ಖುಷಿಗೊಳಿಸುತ್ತದೆ. “ಮೊದಲ್ ಮರ್ಯಾದೈ” ಚಿತ್ರದ ಮೂಲಕ ರಾಧ ಮತ್ತು ಶಿವಾಜಿ ಗಣೇಶನ್ ಅವರು ತಮಗೆ ಅನೀರೀಕ್ಷಿತವಾಗಿ ದೊರೆತ ವಿಭಿನ್ನವಾದ, ಸತ್ವಶಾಲಿಯಾದ ಹೊಸ ಇಮೇಜ್‌ನಲ್ಲಿ ಅತ್ಯಂತ ಸರಳವಾಗಿ, ಸಂಯಮವಾಗಿ ಮತ್ತು ಪರಿಣಾಮಾಕಾರಿಯಾಗಿ ನಟಿಸಿರುವುದು ಮರೆಯಲಿಕ್ಕೆ ಸಾಧ್ಯವೇ ಇಲ್ಲ. ಇಂದಿಗೂ ಇವರಿಬ್ಬರ ಜೋಡಿ ಮನಸ್ಸಿಗೆ ಅಹ್ಲಾದವನ್ನುಂಟು ಮಾಡುವುದಂತೂ ನಿಜ.

ಇದಿಷ್ಟೂ ಕೆಲವು ಉದಾಹರಣೆಗಳು ಮಾತ್ರ. ಇನ್ನೂ ಹೆಸರಿಸಬೇಕಾದ ಹಲವಾರು ಸಿನಿಮಾಗಳಿವೆ.

ಈ “ಭಾ” ಗಳ ಉತ್ತರಾಧಿಕಾರಿಗಳಾಗಿ ತಮಿಳು ಸಿನಿಮಾದ ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಮುಂದುವರೆಸುತ್ತಿರುವವರು ಸಸಿಕುಮಾರ್ (ಸುಬ್ರಮಣ್ಯಪುರಂ), ಪಾಂಡಿರಾಜ್ (ವಂಶಮ್, ಮರಿನಾ), ಬಾಲಾಜಿ ಸಕ್ತಿವೇಲು (ಕಾದಲ್), ಬಾಲಾ (ಸೇತು, ನಾನ್ ಕಡವಳ್, ಪಿತಾಮಗನ್), ಛೇರನ್ (ಆಟೋಗ್ರಾಫ್, ಭಾರತಿ ಕಣ್ಣಮ್ಮ, ಪೋರ್ಕಾಲಂ, ಪಾಂಡವರ್ ಭೂಮಿ), ವೆಟ್ರಿಮಾರನ್ (ಆಡುಕುಳ್ಂ), ಮಿಷ್ಕಿನ್ (ಯುದ್ಧ್ಂ ಸೆಯ್ಯಿ, ಅಂಜಾತೆ), ಸಮುದ್ರಖಣಿ (ನಾಡೋಡಿಗಳ್, ಪೋರಾಲಿ), ಪ್ರಭು ಸಾಲೋಮನ್ (ಮೈನಾ), ಸರ್ಕುನಮ್ (ವಾಗೈ ಸುಡವ), ಸುಸೀನ್‌ತಿರನ್ (ಅಜಗಿರಿಸ್ವಾಮಿಯಿನ್ ಕುದರೈ), ವಸಂತಬಾಲನ್ (ಅಂಗಡಿ ತೆರು).

ಕ್ಯಾಮರಾವೇ ಸಿನಿಮಾ ಮಾಡುವಂತಿದ್ದರೆ ಈ ಕಾಲಘಟ್ಟದ ಅನೇಕ ಸಿನಿಮಾ ನಿರ್ದೇಶಕರು ಜಾಬ್‌ಲೆಸ್ ಆಗುತ್ತಿದ್ದರು ಎಂದು ಗೆಳೆಯ ಶಾಂತರಾಜು ಹೇಳುತ್ತಿದ್ದ. ಇದು ನಿಜ. ಕೇವಲ ತಂತ್ರಜ್ಞಾನ, ದೃಶ್ಯ ವೈಭವದ ಸುವರ್ಣ ಚೌಕಟ್ಟು ಕಡೆಗೆ ಪ್ರೇಕ್ಷಕನಿಗೆ ಕೊಡುವುದು ಕೇವಲ ಭ್ರಮಾತ್ಮಕ ಮನೋರಂಜನೆ. ಇಲ್ಲಿ ಉಳ್ಳವರು ಮಾತ್ರ ಶಿವಾಲಯ ಮಾಡುತ್ತಾರೆ. ದುಡ್ಡಿದ್ದವನೇ ದೊಡ್ಡಪ್ಪ. ಇದು ಸೃಷ್ಟಿಸುವುದು ವಿಕೃತವಾದ ಸಮೂಹಸನ್ನಿಯನ್ನು ಮಾತ್ರ. ಇಲ್ಲಿ ರಿಯಲ್ ಎಸ್ಟೇಟ್‌ನ ಕಬಂಧಬಾಹುವಿಗೆ ಸಿಕ್ಕಿಕೊಳ್ಳುವುದು ತೀರಾ ಸಹಜ.

ಆದರೆ ಕ್ರಿಯಾಶೀಲತೆ, ವೈಚಾರಿಕತೆ, ಹೊಸ ಚಿಂತನೆಗಳನ್ನು ನಮ್ಮಲ್ಲಿ ಮೈಗೂಡಿಸಿಕೊಂಡಿದ್ದರೆ ನಾವೂ ಸಹ ಜಗತ್ತೇ ಬೆರಗಾಗುವಂತೆ, ಮನಸ್ಸನ್ನು ಮುದಗೊಳಿಸುವ,ಈ ನೆಲದ ಸತ್ವವನ್ನು ಹೀರಿಕೊಂಡು ಬದುಕುವ ಅಪಾರ ಸಾಧ್ಯತೆಗಳನ್ನು ಪ್ರೇಕ್ಷಕನಿಗೆ ಕಟ್ಟಿಕೊಡಲು ಸಾಧ್ಯವೆಂದು ಈ ’ಭಾ’ಗಳು ಮತ್ತು ಮೇಲಿನ ಹೊಸ ತಲೆಮಾರಿನ ನಿರ್ದೇಶಕರು ನಮಗೆ ತೋರಿಸಿಕೊಟ್ಟಿದ್ದಾರೆ.

ನೆನಪಿರಲಿ ಇವರಾರೂ ಕಲಾತ್ಮಕ ಚಿತ್ರಗಳನ್ನು ಮಾಡಿದವರಲ್ಲ. ಇವರು ಮಾಡಿದ್ದೆಲ್ಲ ಕಮರ್ಶಿಯಲ್ ಚಿತ್ರಗಳು. ಬೌದ್ಧಿಕ ಅಹಂಕಾರದಿಂದ ನೂರಾರು ಮೈಲಿ ದೂರವಿರುವ ಈ ಎಲ್ಲಾ ಚಿತ್ರಗಳು ತುಂಬಾ ಸರಳ ಸಿನಿಮಾಗಳು. ಇವುಗಳ ಶಕ್ತಿ ಏನೆಂದರೆ ಇವ ನಮ್ಮವ, ಇವ ನಮ್ಮವ ಎನ್ನುವ ಆತ್ಮೀಯತೆ.

ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಲ್ಪಟ್ಟ ಈ ಎಲ್ಲಾ ಸಿನಿಮಾಗಳು ಹಣ ಮಾಡಿವೆ. ಅವಾರ್ಡ್ ಗಳಿಸಿವೆ.

2 thoughts on “ಸುಮಕೆ ಸೌರಭ ಬಂದ ಗಳಿಗೆ ಯಾವುದು ಹೇಳು?

  1. Anonymous

    ತಮಿಳಿನಲ್ಲದಾ ಬದಲಾವಣೆ ಯನ್ನು ನಮ್ಮವರೂ ಮಾಡಿದ್ದಾರೆ .ಅದರ ಕೆಲವು ಉದಾಹರನೆಗಳ್ನು ನೀಡಬೇಕಿತ್ತು.ರಾಜ್ ಪ್ರಸ್ತಾಪ ಮಾಡಿ ಅವರ ಸಿನಿಮಾದ ಬಗ್ಗೆ ಏನೂ ಬರೆದೇ ಇಲ್ಲ್ಫ್ …

    Reply
  2. vasanthn

    Kannada film industry is not open as Tamil. Cheran is there for Mysskin, Bala would produce some good movies and help emerging directors to make movies they like to make. But in Kannada such trend is not there . Actors, directors and producers are not keen to support good film makers in Kannada.

    Reply

Leave a Reply

Your email address will not be published. Required fields are marked *