Daily Archives: February 17, 2014

ಮೋದಿ ಹಾಗೂ ಕೇಜ್ರಿವಾಲ್ : ಕೆಲವು ವಿಚಾರಗಳು

– ತೇಜ ಸಚಿನ್ ಪೂಜಾರಿ

ಮಹಾಚುನಾವಣೆ ಸಮೀಪಿಸುತ್ತಿರುವಂತೆಯೇ ಭಾರತದ ರಾಜಕೀಯ ನಕ್ಷೆಯಲ್ಲಿ ಹೊಸ ತಲ್ಲಣಗಳು ಸೃಷ್ಠಿಯಾಗುತ್ತಿವೆ. ಸಾಲು ಸಾಲು ಭೃಷ್ಠಾಚಾರ ಪ್ರಕರಣಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಕ್ಷದ ಜನಪ್ರಿಯತೆ ದಿನೇ ದಿನೇ ಪಾತಾಳಕ್ಕಿಳಿಯುತ್ತಿದ್ದರೆ ಬಿಜೆಪಿ ಮೋದಿ ಮಾಯೆಯಿಂದ ಹೊಸ ಕಸುವು ಪಡೆದುಕೊಳ್ಳುತ್ತಿದೆ. ಇವೆರಡರ ನಡುವಣದ ಚುನಾವಣಾ ಸ್ಪರ್ಧೆ ತೀವ್ರತೆಯನ್ನು ಪಡೆಯುತ್ತಿರುವ ಬಿರುಸಿನ ಸಂಧರ್ಭದಲ್ಲೇ ಆಮ್ ಆದ್ಮಿ ಪಕ್ಷದ ಉದಯವಾಗಿದೆ. kejriwal-modiಆಪ್ ದೆಹಲಿಯಲ್ಲಿ ಪಡೆದ ಅನೀರಿಕ್ಷಿತ ಜಯ, ತದನಂತರದಲ್ಲಿ ಅದರ ಚಟುವಟಿಕೆಗಳ ಸ್ವರೂಪ ಮತ್ತು ಭಾರತದ ರಾಜಕೀಯ ಪಡಸಾಲೆಯಲ್ಲಿ ಅದು ಪಡೆದುಕೊಳ್ಳುತ್ತಿರುವ ಬೆಂಬಲ ಸಹಜವಾಗಿಯೇ ಕುತೂಹಲವನ್ನು ಸೃಷ್ಠಿಸಿದೆ.

ಮೋದಿ ಹಾಗೂ ಕೇಜ್ರಿವಾಲ್ ಸದ್ಯದ ಅಷ್ಟೂ ರಾಜಕೀಯ ಚರ್ಚೆಗಳ ಪ್ರಧಾನ ಆಕರ್ಷಣೆಯಾಗಿದ್ದಾರೆ. ಕಾಂಗ್ರೆಸ್ ಆಡಳಿತೆಯ ಚಾರಿತ್ರಿಕ ವೈಫಲ್ಯ ಇವರೀರ್ವರ ಉತ್ಥಾನಕ್ಕೆ ಭರ್ಜರಿ ವೇದಿಕೆ ಒದಗಿಸಿದೆ. ಇವರಿಬ್ಬರ ಏಳಿಗೆಯ ಕುರಿತಂತೆ ಹಲವು ಸಾಮಾನ್ಯೀಕೃತ ವಿಶ್ಲೇಷಣೆಗಳು ರಾಜಕೀಯ ಜಿಜ್ಞಾಸೆಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಕೋಮುವಾದ ಹಾಗೂ ಭ್ರಷ್ಟಾಚಾರ ಕ್ರಮವಾಗಿ ಮೋದಿ ಮತ್ತು ಕೇಜ್ರಿವಾಲ್ ಅವರ ಬಗೆಗಿನ ಚರ್ಚೆಯ ಬಹು ಜನಪ್ರಿಯ ನೆಲೆಗಳಾಗಿವೆ. ಆದರೆ ಇವರಿಬ್ಬರು ಪ್ರತಿನಿಧಿಸುವ ವಿದ್ಯಮಾನಗಳ ಹುಟ್ಟು ಮತ್ತು ಯಶಸ್ವಿ ಮುನ್ನಡೆಯ ಪ್ರಕ್ರಿಯೆಯನ್ನು ಸ್ಥೂಲವಾದ ಚೌಕಟ್ಟಿನಲ್ಲಿ ವಿಶ್ಲೇಷಿಸುವುದು ಅಗತ್ಯವಾಗಿದೆ.

***

ವರ್ತಮಾನದ ಭಾರತ ಕಳೆದೆರಡು ದಶಕಗಳ ಪೂರ್ವದ ದೇಶಕ್ಕಿಂತ ಬಹಳ ಭಿನ್ನವಾಗಿದೆ. ಆ ಬದಲಾವಣೆಯ ಹಿಂದಿರುವಂತದ್ದು ತೊಂಭತ್ತರ ದಶಕದ ಆರ್ಥಿಕ ಸುಧಾರಣೆಗಳು. ಅವು ಸ್ವತಂತ್ರ ಭಾರತದ ಆರ್ಥಿಕ ಪರಂಪರೆಯಲ್ಲಿ ಹೊಸ ರಹದಾರಿಯನ್ನು ಸೃಷ್ಟಿಸಿದ್ದು ನಮಗೆಲ್ಲಾ ತಿಳಿದಿದೆ. ಆರ್ಥಿಕ ಸುಧಾರಣೆಗಳ ಮೂರ್ತರೂಪದ ಫಲಶ್ರುತಿಗಳು ಕಳೆದ ದಶಕದಿಂದೀಚೆಗೆ ಭಾರತದ ಆರ್ಥಿಕ ನಡಾವಳಿಯಲ್ಲಿ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಿವೆ. ಒಟ್ಟು ದೇಶಿಯ ಉತ್ಪನ್ನದ ವೃದ್ಧಿ ದರದಲ್ಲಿ ಹೆಚ್ಚಳ, ಕಾರ್ಪೋರೇಟ್ ವಲಯದ ಸಂವರ್ಧನೆ, ಹಿನ್ನೆಲೆಗೆ ಸರಿಯುತ್ತಿರುವ ಕೃಷಿ ವಲಯ, ಸೇವಾ ಕ್ಷೇತ್ರದ ಅಭೂತಪೂರ್ವ ಮುನ್ನಡೆ, ವಿಸ್ತಾರ ಪಡೆದುಕೊಳ್ಳುತ್ತಿರುವ ನಗರೀಕರಣ, ಉದ್ಯೋಗ ಸೃಷ್ಟಿಯಲ್ಲಿ ವೃದ್ಧಿ ಹಾಗೂ ವೈವಿಧ್ಯತೆ ಇವೇ ಮೊದಲಾದ ಬೆಳವಣಿಗೆಗಳು ದೇಶದಲ್ಲಿ ಹೊಸದಾದ ಆರ್ಥಿಕ ಸಂರಚನೆ ಬಲಗೊಳ್ಳುತ್ತಿರುವುದನ್ನು ಸೂಚಿಸುತ್ತಿವೆ.

ಆರ್ಥಿಕ ಸುಧಾರಣೆಗಳು ಮತ್ತು ಅದರ ಪರಿಣಾಮಗಳು ಹಲವು ನೆಲೆಗಳಲ್ಲಿ ಭಾರತದ ಜನಜೀವನವನ್ನು ಪ್ರಭಾವಿಸುತ್ತಿವೆ. ಅರ್ಥಿಕ ತಜ್ಞರು ಸ್ವಾತಂತ್ರ್ಯೋತ್ತರ ಭಾರತದ ಆರ್ಥಿಕತೆಯ ಸ್ವರೂಪವನ್ನು ವಿಶ್ಲೇಷಿಸಲು ಆನೆಯ ರೂಪಕ ಬಳಸುತ್ತಿದ್ದರು. ಆನೆ ಗಾತ್ರದಲ್ಲಷ್ಟೇ ಬೃಹತ್ತಾದ ಆದರೆ ನಿಧಾನಗತಿಯಲ್ಲಿ ಚಲಿಸುವ ಮತ್ತು ವೈಬ್ರೆಂಟ್ ಅಲ್ಲದ ಅರ್ಥವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ. ಆದರೆ ಇಪ್ಪತ್ತೊಂದನೆಯ ಶತಮಾನದ ಮೊದಲ ದಶಕದ ಅಂತ್ಯದ ವೇಳೆಗೆ ಭಾರತದ ಆರ್ಥಿಕ ಸಂರಚನೆಯನ್ನು ಕುರಿತಾದ ಸಾಹಿತ್ಯದಲ್ಲಿ ಆನೆಯ ರೂಪಕದ ಸ್ಥಾನದಲ್ಲಿ ವ್ಯಾಘ್ರ ಪ್ರತಿಷ್ಠಾಪನೆಯಾಗಿದೆ. ಹುಲಿ ನಾಗಾಲೋಟದ ವೇಗವನ್ನಷ್ಟೇ ಪ್ರತಿನಿಧಿಸುವುದಲ್ಲದೆ ಆನೆಯ ಸಸ್ಯಹಾರತ್ವಕ್ಕೆ ಪ್ರತಿಯಾಗಿ ಎದುರಾಳಿಯನ್ನು ಮಣಿಸಿ ತನ್ನ ತಾನು ಸ್ಥಾಪಿಸಿಕೊಳ್ಳುವ ಕಿಲ್ಲರ್ ಇನ್‌ಸ್ಟಿಂಕ್ಟ್ ಅನ್ನೂ ಸಂಕೇತಿಸುತ್ತದೆ. ಹೀಗೆ ಆದಾಯದಲ್ಲಿ ಹೆಚ್ಚಳ ಅಥವಾ india-middle-classಆಯ್ಕೆಗಳಲ್ಲಿ ವೈವಿಧ್ಯತೆ ಮೊದಲಾದ ಭೌತಿಕ ಬದಲಾವಣೆಗಳು ಮಾತ್ರವಲ್ಲದೇ ವ್ಯಕ್ತಿ ಹಾಗೂ ಸಮಾಜದ ಮನೋಧರ್ಮದಲ್ಲೂ ಹಲವು ಚಲನಶೀಲ ಅಂಶಗಳು ಕಾಣಿಸಿಕೊಳ್ಳುತಿವೆ. ಒಂದೆಡೆ ಅಷ್ಟೂ ಬೆಳವಣಿಗೆಗಳು ವ್ಯಕ್ತಿಯನ್ನು ಬಲಪಡಿಸಿವೆ. ಸಹಜವಾಗಿಯೇ ವ್ಯಕ್ತಿಯ ಅಸ್ತಿತ್ವದ ನಿರ್ಧಾರಕ ಅಂಶಗಳಾದ ಆತನ ಅವಶ್ಯಕತೆ, ನಿರೀಕ್ಷೆ ಮತ್ತು ಬೇಡಿಕೆಗಳಲ್ಲಿ ಸ್ಥಿತ್ಯಂತರ ಸ್ವರೂಪಿ ಬದಲಾವಣೆಗಳು ಕಂಡುಬರುತ್ತಿವೆ. ಜೊತೆಗೆ ಆತನನ್ನು ಸಾಮಾಜಿಕವಾಗಿ ಕ್ರಿಯಾಶೀಲವಾಗಿಸುವ ಸಂವಹನದ ಮಾಧ್ಯಮಗಳು ಕೂಡಾ ಕ್ರಾಂತಿಕಾರಿ ನೆಲೆಯಲ್ಲಿ ಸುಧಾರಣೆ ಕಂಡಿವೆ. ಇವಿಷ್ಟೂ ಸಂಗತಿಗಳು ವ್ಯವಸ್ಥೆಯ ಜೊತೆಗೆ ವ್ಯಕ್ತಿಯ ಅನುಸಂಧಾನದ ಸ್ವರೂಪವನ್ನು ನಿರ್ಧರಿಸುವ ಮಹತ್ವದ ಅಂಶಗಳು ಎಂಬ ವಿಚಾರ ಇಲ್ಲಿ ಉಲ್ಲೇಖನೀಯ. ಹೀಗೆ ಆರ್ಥಿಕ ಸುಧಾರಣೆಗಳ ಫಲವಾಗಿ ವ್ಯಕ್ತಿಯ ಅಸ್ತಿತ್ವ ಹಾಗೂ ಬೌದ್ಧಿಕತೆಯಲ್ಲಿ ಅಭೂತಪೂರ್ವ ಪಲ್ಲಟಗಳು ದಾಖಲಾಗಿವೆ. ಆದರೆ ವ್ಯವಸ್ಥೆ ಮಾತ್ರವೇ ಅದರ ಜೊತೆಗೆ ವ್ಯವಹರಿಸುವ ವ್ಯಕ್ತಿಯ ಚಲನೆಗೆ ಪೂರಕವಾಗಿ ಬದಲಾಗದೆ ಇನ್ನೂ ಅದೇ ಸಂಪ್ರದಾಯಿಕ ಸ್ವರೂಪದಲ್ಲೇ ಉಳಿದುಕೊಂಡಿದೆ. ಇದು ಒಂದೆಡೆ ವಿಶ್ವಾಸಾರ್ಹತೆಯ ಕೊರತೆ ಇನ್ನೊಂದೆಡೆ ಹಿತಾಸಕ್ತಿಗಳ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ.

ಸಮಾಜದಲ್ಲಿ ಸ್ಥಿತ್ಯಂತರಕ್ಕೆ ಕಾರಣವಾಗುವ ಆರ್ಥಿಕ ಸಂಬಂಧಗಳೂ ಕೂಡಾ ಸುಧಾರಣೋತ್ತರ ಯುಗದಲ್ಲಿ ಮಾರ್ಪಾಡಿಗೆ ಒಳಗಾಗಿವೆ. ಸಾಂಪ್ರದಾಯಿಕ ಬಂಡವಾಳವಾದದ ಚೌಕಟ್ಟಿನಲ್ಲೇ ಆದರೆ ಫ್ಯಾಕ್ಟರಿ ಸಿಸ್ಟಂಗಿಂತ ಭಿನ್ನ ನೆಲೆಯ ಸೇವಾ ಶರ್ತಗಳು ಹಾಗೂ ಪರಿಸ್ಥಿತಿಗಳುಳ್ಳ, ಒತ್ತಡ ಸೃಷ್ಟಿಗೆ ಅವಕಾಶವೇ ಇಲ್ಲದಂತಹ ಮತ್ತು ಅನಿವಾರ್ಯವೂ ಅಲ್ಲವೆಂಬಂತೆ ಮೇಲುನೋಟಕ್ಕೆ ಅನ್ನಿಸುವ ಆರ್ಥಿಕ ಸಂಬಂಧಗಳು ಸ್ಟ್ಯಾಟೆಸ್ಕೋ ಸ್ವರೂಪಿ ವಾತಾವರಣದ ನಿರ್ಮಾಣಕ್ಕೆ ಕಾರಣವಾಗಿದೆ. ಉದ್ಯೋಗದ ಶರ್ತಗಳು ಹಾಗೂ ಸೌಲಭ್ಯಗಳಿಗೆ ಸಂಬಂಧಿಸಿದ ಚರ್ಚೆಗಳನ್ನು ಕಾರ್ಪೋರೇಷನ್ ನೇರವಾಗಿ ಉದ್ಯೋಗಿಯ ಜತೆಗೇ ನಡೆಸುವುದರಿಂದ ಯೂನಿಯನ್‌ಗಳಂತಹ ಸಾಮೂಹಿಕ ಚಟುವಟಿಗಳಿಗೆ ಅವಕಾಶಗಳು ಕೂಡಾ ಅಲ್ಲಿ ಇರುವುದಿಲ್ಲ. ಹೀಗಾಗಿ ಅಂತಹ ಒಂದು ಸಂಚಿತ ಎನರ್ಜಿ ರಾಜಕಾರಣ ವ್ಯವಸ್ಥೆಯ ಕಡೆಗೆ ನಿರ್ದೇಶಿತವಾಗಿದೆ.

ಆರ್ಥಿಕ ಸುಧಾರಣೆಗಳು ಕಾರಣಿಸಿದ ಅಷ್ಟೂ ಬದಲಾವಣೆಗಳು ಬಹುಮಟ್ಟಿಗೆ ನಗರಗಳಿಗಷ್ಟೆ ಸೀಮಿವಾಗಿದೆ. ಆದ್ದರಿಂದಲೇ ಮೋದಿ ಆಥವಾ ಕೇಜ್ರಿವಾಲ್ ಪ್ರತಿನಿಧಿಸುವ ವಿದ್ಯಮಾನಗಳು ಬಹುತೇಕ ನಗರಗಳಿಗೆ ಸೀಮಿತವಾಗಿವೆ. ಹೀಗಾಗಿ ವಿವಿಧ ನೆಲೆಯ ಹಲವು ಸುಧಾರಣೆಗಳಿಗೆ ಒತ್ತಾಯಿಸುತ್ತಿರುವ ಕೇಜ್ರಿವಾಲ್ ಅವರಲ್ಲಿ ಕೂಡಾ ಜಾತಿಪದ್ಧತಿಯಂತಹ ಸಾಮಾಜಿಕ ವಾಸ್ತವಗಳು ಮತ್ತು ಗ್ರಾಮೀಣ ಭಾರತದ ಇತರೆ ಸಮಸ್ಯೆಗಳ ಕುರಿತಂತೆ ಯಾವುದೇ ಪ್ರಗತಿಪರ ನಿಲುವುಗಳು ಕಾಣಿಸುವುದಿಲ್ಲ.

ಆರ್ಥಿಕ ಸುಧಾರಣೆಗಳು ಮಧ್ಯಮ ವರ್ಗದ ಸ್ವರೂಪದಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಗಿವೆ. ಅವು ಮಧ್ಯಮ ವರ್ಗದ ಗಾತ್ರವನ್ನು ಬಹುವಾಗಿ ವಿಸ್ತರಿಸಿದ್ದು ಮಾತ್ರವಲ್ಲದೆ ಅದಕ್ಕೆ ಹೊಸ ಕಸುವನ್ನೂ ನೀಡಿದೆ. ಸಾಕ್ಷರತೆ ಹಾಗೂ ತಕ್ಕ ಮಟ್ಟಿನ ಆರ್ಥಿಕ ದೃಢತೆ ಇವೆರಡನ್ನೂ ಸಾಧಿಸಿರುವ ಮಧ್ಯಮ ವರ್ಗ middleclass-indiaತನ್ನ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ರಾಜಕೀಯವಾಗಿ ಕ್ರಿಯಾಶೀಲವಾಗುವ ಪ್ರಯತ್ನಗಳನ್ನು ನಡೆಸುತ್ತಲೇ ಇದೆ. ಸಾಂಪ್ರದಾಯಿಕ ರಾಜಕೀಯ ವ್ಯವಸ್ಥೆಯ ಜೊತೆ ಮುಖಾಮುಖಿಯಾಗುತ್ತಾ ಅಲ್ಲಿಯ ಉತ್ತರದಾಯಿತ್ವದ ಕೊರತೆ, ವಿಳಂಬ ಧೋರಣೆ ಹಾಗೂ ಅದಕ್ಷತೆಯ ಪ್ರವೃತ್ತಿಗಳು ತನ್ನ ನಿರೀಕ್ಷೆಗಳ ಸಾಧನೆಗೆ ಅಡ್ಡಿಯಾಗುತ್ತಿವೆ ಎಂದು ಮನಗಾಣುತ್ತಿದೆ. ಅದು ವ್ಯವಸ್ಥೆಯ ಲೋಪದೋಷಗಳು ಮಾತ್ರವಲ್ಲದೆ ಸಾಂಪ್ರದಾಯಿಕ ಸ್ವರೂಪದ ಸರಕಾರಿ ಕಾರ್‍ಯತಂತ್ರಗಳು ಮತ್ತು ನೀತಿ ರೂಪಣಾ ವ್ಯವಸ್ಥೆಗಳನ್ನು ಕೂಡಾ ಸಂಶಯದಿಂದಲೇ ನೋಡುತ್ತಿದೆ. ಪಾರ್ಲಿಮೆಂಟ್ ಮೊದಲಾದ ಶಾಸನೆ ಸಭೆಗಳ ನಿಂದನೆ ಅಥವಾ ಬಡವರಿಗೆ ಮೂಲಭೂತ ಅವಶ್ಯಕತೆಗಳನ್ನು ಒದಗಿಸುವ ಸರಕಾರದ ಕಾರ್‍ಯಕ್ರಮಗಳಿಗೆ ಒದಗಿ ಬರುತ್ತಿರುವ ಟೀಕೆಗಳು ಇಂತಹದ್ದೇ ಪೃವೃತ್ತಿಗಳನ್ನು ಸಂಕೇತಿಸುತ್ತಿವೆ. ಹೀಗಾಗಿಯೇ ಮಧ್ಯಮ ಮರ್ಗ ತನ್ನ ತೆರಿಗೆಯ ಹಣ ಒಂದೋ ಭ್ರಷ್ಟ ವ್ಯವಸ್ಥೆಯ ಬಕಾಸುರ ಹಸಿವಿಗೆ ಇಲ್ಲವೆ ಅನ್ನ ವಿದ್ಯುತ್ ಮೊದಲಾದ ಆರ್ಥಿಕಾಂಶಗಳನ್ನೇ ಉಚಿತವಾಗಿ ನೀಡುವ ಪ್ರಭುತ್ವದ ಅನಾಹುತಕಾರಿ ಔದಾರ್ಯದಲ್ಲಿ ಪೋಲಾಗುತ್ತಿದೆ ಎಂದು ತಿಳಿಯುತ್ತಿದೆ. ಪ್ರಸ್ತುತ ಆಡಳಿತಾತ್ಮಕ ವ್ಯವಸ್ಥೆಯ ಅಸಂವೇದನಾಶಿಲತೆ ಮಧ್ಯಮ ವರ್ಗದ ಅಸಹನೆಯನ್ನು ಇನ್ನಷ್ಟು ಹೆಚ್ಚಿಸಿದೆ. ಅದು ವ್ಯವಸ್ಥೆಯ ನಡೆಗಳನ್ನು ಅನುಮಾನಿಸುತ್ತಲೇ ತುರ್ತು ಸುಧಾರಣೆಗಳಿಗೆ ನಿರಂತರ ಬೇಡಿಕೆಗಳನ್ನು ಸಲ್ಲಿಸುತ್ತಿದೆ. ಹೀಗಾಗಿ ಬದಲಾವಣೆಯೆಡೆಗೆ ಚಡಪಡಿಕೆ ಮತ್ತು ಅತಿಯಾದ ವಿಚಕ್ಷಣೆಯ ಗುಣಗಳು ಅದರ ದೈನಿಕ ನಡವಳಿಕೆಯಲ್ಲಿ ನುಸುಳಿಕೊಂಡಿವೆ. ಸಹಜವಾಗಿಯೇ ಅಂತಹದ್ದೇ ಗುಣಾಂಶಗಳ ಮೂರ್ತರೂಪ, ವಿಜಿಲೆನ್ಸಿಯನ್ನೇ ಗೀಳಿನಂತೆ ಅನುಸರಿಸುವ ಕೊಂಚ ಅಶಾಂತ ಅನ್ನಿಸುವಂತಹ ವ್ಯಕ್ತಿತ್ವವುಳ್ಳ ಹಠವಾದಿ ಕೇಜ್ರಿವಾಲ್ ಅದಕ್ಕೆ ಬಹಳ ಆಪ್ತವಾಗಿ ಗೋಚರಿಸುತ್ತಿದ್ದಾರೆ. ತನ್ನದೇ ಪಾತ್ರದ ಪರಕಾಯ ಪ್ರವೇಶ ಮಾಡಿರುವಂತೆ ಕೇಜ್ರಿವಾಲ್ ಮಧ್ಯಮ ವರ್ಗಕ್ಕೆ ಕಾಣಿಸಿಕೊಳ್ಳುತ್ತಿದ್ದಾರೆ.

ಆದರೆ ತನ್ನ ಅಸ್ತಿತ್ವ ಹಾಗೂ ಸಮೃಧ್ದಿ ಇವೆರಡೂ ಇದೇ ವ್ಯವಸ್ಥೆಯ ಕೊಡುಗೆಗಳಾದ್ದರಿಂದ ಅದನ್ನು ಮುರಿದು ಹೊಸದನ್ನು ಕಟ್ಟುವ ಉಮೇದು ಮಧ್ಯಮ ವರ್ಗದಲ್ಲಿ ಇಲ್ಲ. ಹೀಗಾಗಿ ಇರುವ ವ್ಯವಸ್ಥಯಲ್ಲೆ ಕಾಸ್ಮೆಟಿಕ್ ಅನ್ನಿಸುವಂತಹ ಬದಲಾವಣೆಗಳನ್ನು ತಂದು ಅದನ್ನು ತನ್ನ ಅನುಕೂಲತೆಗೆ ತಕ್ಕಂತೆ ಪುನರ್ ರೂಪಿಸುವ ನೆಲೆಗಳನ್ನು ಮಧ್ಯಮ ವರ್ಗ ಹುಡುಕುತ್ತಿದೆ. ಆದರೆ ವ್ಯಕ್ತಿ ಮತ್ತು ವ್ಯವಸ್ಥೆಯ ನಡುವೆ ಸ್ಪಷ್ಟವಾದ ಪ್ರತ್ಯೇಕಿಸುವ ಗೆರೆಗಳನ್ನು ಅದು ಹಾಕಿರುವುದರಿಂದ ಕೇವಲ ವ್ಯವಸ್ಥೆಯಲ್ಲಷ್ಟೇ ಲೋಪಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿಯೇ ಅತ್ಯಾಚಾರ ಅಥವಾ ಭ್ರಷ್ಟಾಚಾರದಂತಹ ಸಂಕೀರ್ಣ ಸಮಸ್ಯೆಗಳಿಗೆ ಕೂಡಾ 800px-India-Against-Corruption-logo_svgಮರಣದಂಡನೆ ಅಥವಾ ಜನಲೋಕಪಾಲವೇ ಮೊದಲಾದ ಕ್ವಿಕ್ ಫಿಕ್ಸ್ ಅನ್ನಿಸುವಂತಹ ವ್ಯವಸ್ಥಾತ್ಮಕ ಮಾರ್ಪಾಡುಗಳಿಗೆ ಒತ್ತಡ ಸೃಷ್ಟಿಯಾಗುತ್ತಿದೆ. ಭ್ರಷ್ಟಾಚಾರ ಇಲ್ಲವೇ ಅತ್ಯಚಾರದಂತಹ ಪಿಡುಗುಗಳ ಹಿನ್ನೆಲೆಯಲ್ಲಿರುವಂತದ್ದು ವ್ಯಕ್ತಿಯ ನ್ಯಾಯಯುತವಲ್ಲದ ನಡವಳಿಕೆಗಳು ಎಂಬ ಸತ್ಯ ಮರೆಯಾಗುತ್ತಿದೆ. ಸಿಸ್ಟಮಿಕ್ ಸ್ವರೂಪದ ಬದಲಾವಣೆಗಳ ತಲಾಶೆಯಲ್ಲಿರುವಾಗಲೇ ಅದಕ್ಕೆ ಸುಧಾರಣೋತ್ತರ ಕಾಲಘಟ್ಟದಲ್ಲಿ ಚಾಲ್ತಿಗೆ ಬಂದಿರುವ ಕಾರ್ಪೋರೇಟ್ ಶೈಲಿಯ ನಿರ್ವಹಣೆ ಅಪ್ಯಾಯಮಾನವಾಗಿ ಕಾಣುತ್ತಿದೆ. ಅಲ್ಲಿರುವ ಯಾಂತ್ರಿಕ ಅನ್ನಿಸುವಂತಹ ದಕ್ಷತೆ, ವೇಗ, ಅಚ್ಚುಕಟ್ಟು ಹಾಗೂ ಉತ್ತರದಾಯಿತ್ವ ಗುಣಗಳು ಮಧ್ಯಮ ವರ್ಗವನ್ನು ಆಕರ್ಷಿಸುತ್ತಿವೆ. ಸರಕಾರಿ ವ್ಯವಸ್ಥೆಯ ಸಂರಚನೆಯಲ್ಲೂ ಕಾರ್ಪೋರೇಟ್ ಮಾದರಿಯ ಅಳವಡಿಕೆ ತತ್‌ಕ್ಷಣದ ಜರೂರತ್ತು ಎಂದು ಅದು ಭಾವಿಸಿದೆ. ಇಂತಹ ಸನ್ನಿವೇಶದಲ್ಲೇ ಅದಕ್ಕೆ ಓರ್ವ ಪರಿಪಕ್ವ ಸಿಇಓ ರೂಪದಲ್ಲಿ ಮೋದಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ಧಾರ ಹಾಗೂ ಪ್ರಕ್ರಿಯೆಗಳ ವಿಳಂಬ ಹಾಗೂ ಅದಕ್ಷತೆಗೆ ಕಾರಣ ಎಂಬಂತೆ ಬಿಂಬಿಸಲಾಗುತ್ತಿರುವ ಶಾಸನಸಭೆಗಳು, ಮಂತ್ರಿಮಂಡಲ, ಸಮಿತಿಗಳು ಅಥವಾ ಆಯೋಗಗಳು ಪ್ರತಿನಿಧಿಸುವ ಚರ್ಚೆ ಹಾಗೂ ಸಂವಾದಗಳು – ಇವ್ಯಾವುವೂ ಮೋದಿ ಮಾದರಿಯಲ್ಲಿ ಕಾಣಿಸಿಕೊಳ್ಳದೆ ಕೇವಲ ಏಕವ್ಯಕ್ತಿ ಪ್ರದರ್ಶನವಷ್ಟೇ ನಡೆಯುತ್ತಿರುವುದರಿಂದ ಮತ್ತು ಕಾರ್ಯದಕ್ಷತೆಯ ನೆಲೆಯಲ್ಲಿ ತಕ್ಕಮಟ್ಟಿಗೆ ಯಶಸ್ವಿಯೂ ಆಗಿರುವುದರಿಂದ ಬ್ರ್ಯಾಂಡ್ ಮೋದಿ ಇನ್ನಷ್ಟು ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. “ಕಾರ್ಪೋರೇಷನ್‌ಗಳು ಟೊಟಾಲಿಟೇರಿಯನ್ (ಸರ್ವಾಧಿಕಾರಿ) ವ್ಯವಸ್ಥೆ ಇದ್ದ ಹಾಗೆ. ಅಲ್ಲಿರುವಂತೆ ವ್ಯವಸ್ಥೆಯ ಮೇಲ್ತುದಿಯಲ್ಲಿ ಸ್ಥಾಪಿತರಾಗಿರುವ ನಿರ್ದೇಶಕ ಮಂಡಳಿ ಆದೇಶಗಳನ್ನು ನೀಡುತ್ತದೆ. ಪ್ರತಿಯೊಬ್ಬರೂ ಅದನ್ನು ಶಿರಸಾ ಪಾಲಿಸುತ್ತಾರೆ.” ಎಂಬ ನೋಮ್ ಚಾಮ್ಸ್‌ಕಿಯವರ ಮಾತುಗಳು ಇಲ್ಲಿ ಉಲ್ಲೇಖನೀಯ.

ಮಧ್ಯಮ ವರ್ಗದ ಕ್ರೀಯಾಶೀಲತೆಗೆ ನೆಲೆ ವೇದಿಕೆ ಒದಗಿಸಿರುವಂತದ್ದು ಸಾಮಾಜಿಕ ಮಾಧ್ಯಮಗಳು. modi-kejriwalಮೋದಿ ಹಾಗೂ ಕೇಜ್ರಿವಾಲ್ ಇಬ್ಬರೂ ಸೋಶಿಯಲ್ ಮೀಡಿಯಾದ ಸೃಷ್ಟಿ. ಟ್ವಿಟ್ಟರ್, ಫೇಸ್‌ಬುಕ್ ಮೊದಲಾದ ಜಾಲತಾಣಗಳನ್ನು ಬುದ್ಧಿವಂತಿಕೆಯಿಂದ ಪ್ರಪಗಾಂಡ ಸ್ವರೂಪದಲ್ಲಿ ಬಳಸಿ ಮೋದಿ ತನ್ನ ಅಹಂಗೆ ಒಂದು ಜನಪ್ರಿಯ ನೆಲೆಯನ್ನು ದಕ್ಕಿಸಿಕೊಂಡಿದ್ದಾರೆ. ಅಲ್ಲದೆ ಮತಗಳಿಕೆ ಅಥವಾ ಜನಪ್ರಿಯತೆಯ ನೆಲೆಯನ್ನು ದೊಡ್ಡ ಮಟ್ಟದಲ್ಲಿ ಲಿಮಿಟ್ ಮಾಡಬಲ್ಲ ತನ್ನ ಕೋಮುವಾದಿ ಪ್ರಭಾವಳಿಯನ್ನು ಮರೆಮಾಚಿ ಸ್ವೀಕರಣೆಯ ನೆಲೆಯನ್ನು ಇನ್ನಷ್ಟು ವಿಸ್ತರಿಸಬಲ್ಲ ಅಭಿವೃದ್ಧಿಯ ಪೋಷಾಕನ್ನು ಉಡುವ ಪ್ರಯತ್ನದಲ್ಲಿ ಮೋದಿಗೆ ಸಾಥ್ ನೀಡಿದ್ದು ಇದೇ ಸೋಶಿಯಲ್ ಮೀಡಿಯಾ. ಕೇಜ್ರಿವಾಲ್ ಭ್ರಷ್ಟಾಚಾರದಂತಹ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಆಫ್‌ಲೈನ್ ಜಗತ್ತಿನಲ್ಲಿ ಜನರನ್ನು ಒಟ್ಟುಗೂಡಿಸುವ ತಂತ್ರವಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡಿದ್ದು ನಮಗೆಲ್ಲಾ ತಿಳಿದಿದೆ. ಇವತ್ತು ಜಾಗತಿಕ ವಿದ್ಯಮಾನವೆಂಬಂತೆ ಬಿಂಬಿತವಾಗಿರುವ ಟ್ವಿಟ್ಟರ್ ಕ್ರಾಂತಿ ಮತ್ತು ಅದು ಸಾಧಿಸಿದ ಫ್ಲಾಶ್ ಮಾಬ್ ತರಹದ ಜನಾಂದೋಲನ- ಇವೆರಡರ ಆರಂಭಿಕ ಮಾದರಿಗಳು ಭಾರತದಲ್ಲಿ ಕಾಣಿಸಿಕೊಂಡದ್ದು ಕೇಜ್ರಿವಾಲ್ ಸಂಘಟಿಸಿದ್ದ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ. ಮಾತ್ರವಲ್ಲದೆ ಇನಸ್ಟಂಟ್ ಅನ್ನಿಸುವಂತಹ ಜನಮತಗಣನೆಗೂ ಕೇಜ್ರಿವಾಲ್ ಸಾಮಾಜಿಕ ಮಾಧ್ಯಮಗಳನ್ನೇ ಅವಲಂಬಿಸಿದ್ದಾರೆ. ಹೀಗೆ ಮೋದಿ ಹಾಗೂ ಕೇಜ್ರಿವಾಲ್ ಅವರುಗಳ ಯಶಸ್ಸಿನಲ್ಲಿ ಸೋಶಿಯಲ್ ಮೀಡಿಯಾದ ಪಾಲು ದೊಡ್ಡದಿದೆ. ಆನ್‌ಲೈನ್ ಜಗತ್ತಿನಲ್ಲಿ ಮಧ್ಯಮ ವರ್ಗದ ವ್ಯಾಪಕ ಉಪಸ್ಥಿತಿ ಇವರಿಬ್ಬರ ಆಟ ಮೇಲಾಟಗಳಿಗೆ ಭರ್ಜರಿ ವೇದಿಕೆಯನ್ನು ಒದಗಿಸಿದೆ.

***

ಸ್ವಾತಂತ್ರ್ಯ ಹೋರಾಟದಲ್ಲಿ ಹಠಾತ್ ಎಂಬಂತೆ ಗೋಚರಿಸುವ ಮಹಾತ್ಮ ಗಾಂಧೀಜಿಯ ಏಳಿಗೆಯನ್ನು ವಿಶ್ಲೇಷಿಸುತ್ತಾ ಇತಿಹಾಸಕಾರ ಸುಮಿತ್ ಸರ್ಕಾರ್ ರೂಮರ್‍ಸ್‌ಗಳ ಪಾತ್ರವನ್ನು ವಿಶೇಷವಾಗಿ ಗುರುತಿಸುತ್ತಾರೆ. ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರ ವಿರುದ್ಧದ ತಾರತಮ್ಯಗಳನ್ನು ಪ್ರತಿಭಟಿಸಿ ಗಾಂಧಿ ಸಂಘಟಿಸಿದ್ದ ಹೋರಾಟಗಳು ಭಾರತದಲ್ಲೂ ಪ್ರಚಾರ ಪಡೆದಿದ್ದವು. ಬಹುಮಟ್ಟಿಗೆ ಅಸಾಕ್ಷರ ಸಮಾಜವಾಗಿದ್ದ ಇಲ್ಲಿ ಅದು ಹಲವೆಡೆ ರೂಮರ್‍ಸ್‌ಗಳ ಸ್ವರೂಪವನ್ನು ಪಡೆಯಲಾರಂಬಿಸಿತ್ತು. 200px-MKGandhi[1]ಜೊತೆಗೆ ಭಾರತಕ್ಕೆ ವಾಪಾಸು ಬಂದ ಆರಂಭಿಕ ವರ್ಷಗಳಲ್ಲಿ ಅವರು ಮುನ್ನಡೆಸಿದ್ದ ಸ್ಥಳೀಯ ಮಟ್ಟದ ಜನಾಂದೋಲನಗಳ ಮಾಹಿತಿಗಳು ಕೂಡಾ ಶ್ರೀಸಾಮಾನ್ಯರ ನಡುವೆ ಹರಿದಾಡುತಿದ್ದವು. ಹೀಗಾಗಿ ಮೊದಲೇ ಬ್ರಿಟಿಷ್ ಅಧಿಕಾರಿಗಳು, ಮಧ್ಯವರ್ತಿಗಳು ಹಾಗೂ ಜಮಿನ್ಧಾರಿ ವರ್ಗಗಳ ದೌರ್ಜನ್ಯದಿಂದ ನಲುಗಿದ್ದ ದುರ್ಬಲ ಜನಸಂಖ್ಯೆಗೆ ಗಾಂಧೀಜಿ ಅವತಾರ ಪುರುಷರಂತೆ ಕಾಣಿಸಿಕೊಳ್ಳುತ್ತಾರೆ. ಗಾಂಧಿ ಕೈಯಲ್ಲಿ ಮಂತ್ರದಂಡವನ್ನು ಕಾಣುತ್ತಾರೆ. ವೈಸರಾಯ್ ರೀಡಿಂಗ್ ಇಂಗ್ಲೆಂಡ್‌ನಲ್ಲಿದ್ದ ರಾಜ್ಯಾಂಗ ಕಾರ್‍ಯದರ್ಶಿಗೆ ಬರೆದ ಪತ್ರದಲ್ಲಿ ರೈತರು ಗಾಂಧೀಜಿ ತಮ್ಮನ್ನು ಜಮೀನ್ಧಾರರ ದೌರ್ಜನ್ಯದಿಂದ ಪಾರು ಮಾಡುತ್ತಾರೆ; ಕೃಷಿ ಕಾರ್ಮಿಕರು ಗಾಂಧಿ ತಮಗೆ ಹಿಡುವಳಿಗಳನ್ನು ದೊರಕಿಸಿಕೊಡುತ್ತಾರೆ ಎಂಬಂತೆ ನಂಬತೊಡಗಿದ್ದ ವಿಚಾರಗಳನ್ನು ಪ್ರಸ್ತಾಪಿಸುತ್ತಾರೆ.

ಇಂತಹ ರೂಮರ್‍ಸ್‌ಗಳು ಆರಂಭಿಕ ಹಂತದಲ್ಲಿ ನಾಯಕತ್ವದ ಯಶಸ್ಸಿಗೆ ಅನಿವಾರ್ಯವಾದ ಸ್ವೀಕರಣೆಯ ನೆಲೆಯನ್ನು ದಯಪಾಲಿಸುತ್ತವೆ. ಮೋದಿ ಮತ್ತು ಅವರ ತಂಡ ವ್ಯವಸ್ಥಿತವಾಗಿ ನಡೆಸುವ ಪ್ರಚಾರ, ಪ್ರಸರಿಸುತ್ತಿರುವ ಗಾಳಿಸುದ್ದಿಗಳು ಅಥವಾ ಅವರನ್ನು ಅಸಾಮಾನ್ಯವೆಂಬಂತೆ ಬಿಂಬಿಸುವ ಪ್ರಯತ್ನಗಳು ಇಲ್ಲಿ ಉಲ್ಲೇಖನೀಯ. ರೂಮರ್‍ಸ್‌ಗಳಿಗೆ ಒಂದು ಸಾಂಸ್ಥಿಕ ರೂಪ ನೀಡಿ ಅದನ್ನು ಚುನಾವಣಾ ತಂತ್ರವಾಗಿ ಬಳಸುವ ಪ್ರಯತ್ನಗಳನ್ನು ನಾವಿಂದು ಕಾಣುತ್ತಿದ್ದೇವೆ. ಸಾಮಾಜಿಕ ಮಾಧ್ಯಮಗಳ ಪ್ರಸರಣ ರೂಮರ್‍ಸ್‌ಗಳಿಗೆ ವೈರಲ್ ಸ್ವರೂಪ ನೀಡಿದೆ. ಹೋಲಿಕೆಯಲ್ಲಿ ಬಹು ಮಟ್ಟಿಗೆ ದಕ್ಷಿಣ ಭಾರತದ ರಾಜ್ಯಗಳಿಗೆ ಸಮಾನವಾದ ಆರ್ಥಿಕ ನೆಲೆಗಟ್ಟನ್ನು ಹೊಂದಿರುವ ಗುಜರಾತ್ ರಾಜ್ಯದ ಕುರಿತಂತೆ ಆನ್‌ಲೈನ್ ಮಾಧ್ಯಮಗಳಲ್ಲಿ ತೇಲಿ ಬಿಡಲಾಗುತ್ತಿರುವ ಗಾಳಿಸುದ್ದಿಗಳು ದೊಡ್ಡ ಪ್ರಮಾಣದಲ್ಲಿ ಶೋತೃಗಳನ್ನು ಪಡೆಯುತ್ತಿವೆ. ಮೋದಿಯ ಕುರಿತಾದ ಅಷ್ಟೂ ರೂಮರ್‍ಸ್‌ಗಳು ಮತದಾರ ಬಯಸುವ ವ್ಯಕ್ತಿತ್ವವನ್ನು ಅವರಿಗೆ ಕಟ್ಟಿಕೊಡುವ ನೆಲೆಯಲ್ಲಿಯೇ ಸೃಷ್ಟಿಯಾಗಿವೆ . “ಸಂಕಷ್ಟದಲ್ಲಿರುವ ಸಹಸ್ರ ಸಹಸ್ರ ಜನರನ್ನು ರಕ್ಷಿಸುವ ಅಪತ್ಬಾಂಧವ, ಭ್ರಷ್ಟ ರಾಜಕಾರಣಿಗಳ ಸದೆಬಡಿಯಲು ಸಿದ್ದನಾಗಿರುವ ದುಷ್ಟ ಭಕ್ಷಕ, ಕೊಚ್ಚೆಯಾಗಿದ್ದ ಸಬರಮತಿಯನ್ನು ಸುರಗಂಗೆಯಾಗಿಸಿದ ಭಗೀರಥ. ವಿಶ್ವದ ದೊಡ್ಡಣ್ಣ ಆಮೇರಿಕಾದ ಅಧ್ಯಕ್ಷರ ಗಮವನ್ನೇ ಸೆಳೆಯಬಲ್ಲ ಸರ್ವಾದರಣೀಯ ವ್ಯಕ್ತಿತ್ವ”. ಹೀಗೆ ರೂಮರ್‍ಸ್‌ಗಳು ಮೋದಿಯ ಸುತ್ತ ಅಸಾಮಾನ್ಯ ವೀರತ್ವದ ಪ್ರಭಾವಳಿಯನ್ನು ಕಟ್ಟಿವೆ.

ಇಂತಹ ರೂಮರ್‍ಸ್‌ಗಳ ಯಶಸ್ವಿ ಪ್ರಸರಣಕ್ಕೆ ಪೂರಕವಾದ ಸನ್ನಿವೇಶಗಳು ವರ್ತಮಾನದಲ್ಲಿ ಸೃಷ್ಠಿಯಾಗಿವೆ. ಒಂದೆಡೆ ಪ್ರಸ್ತುತ ರಾಜಕೀಯ ವ್ಯವಸ್ಥೆಯ ದಯನೀಯ ವೈಫಲ್ಯ. ಇನ್ನೊಂದೆಡೆ ಜಾಗತಿಕ ಆರ್ಥಿಕ ಬಿಕ್ಕಟ್ಟು ಕಾರಣಿಸಿರುವ ಆತಂಕ. ಹೀಗೆ ದುರಾಡಳಿತ, ಭ್ರಷ್ಟಾಚಾರ, ಹಣದುಬ್ಬರ ಹಾಗೂ ಉದ್ಯೋಗ ಕಡಿತದ ಕಾಕ್‌ಟೈಲ್ ವ್ಯವಸ್ಥೆಯಲ್ಲಿ ಇನ್ನಷ್ಟು ಅಸ್ಥಿರತೆಗೆ ಕಾರಣವಾಗಿವೆ. ಆಸುರಕ್ಷಿತ ಭಾವನೆಗಳನ್ನು ಉದ್ದೀಪನಗೊಳಿಸುವ ಇಂತಹ ಸನ್ನಿವೇಶಗಳು ಸಹಜವಾಗಿಯೇ ರೂಮರ್‍ಸ್‌ಗಳಿಗೆ ಅಗತ್ಯ ಆಡಿಯನ್ಸ್ ಅನ್ನು ಒದಗಿಸುತ್ತವೆ.

ಹಾಗೆಯೇ ಭಾರತೀಯ ಸಾಂಸ್ಕೃತಿಕ ಮನೋಭೂಮಿಕೆಯೂ ಕೂಡಾ ಮೋದಿ ಕುರಿತಾದ ಗಾಳಿಸುದ್ದಿಗಳ ವ್ಯಾಪಕ ಸ್ವೀಕರಣೆಗೆ ಅವಕಾಶ ಮಾಡಿಕೊಟ್ಟಿದೆ. ವ್ಯಕ್ತಿತ್ವ ನಿರ್ಮಾಣ ಇಲ್ಲಿಯ ಪರಂಪರೆಯ ಮಹತ್ವದ ಗುಣ. ನಮ್ಮ ಸಮಾಜ ಹಾಗೂ ಮನೋಧರ್ಮ ಬಹುಮಟ್ಟಿಗೆ ನಾಯಕ ಕೇಂದ್ರಿತ. ಇಲ್ಲಿ ದುಷ್ಟ ದಮನ ಹಾಗೂ ಶಿಷ್ಟ ರಕ್ಷಣೆಗೆ ಒಬ್ಬ ಸಾಂಸ್ಕೃತಿಕ ನಾಯಕನಿರುತ್ತಾನೆ. ಧರ್ಮ ಸಂಸ್ಥಾಪನೆಗೆ ಆತನೇ ಮತ್ತೆ ಮತ್ತೆ ಅವತಾರವೆತ್ತಿ ಬರುತ್ತಾನೆ. ಇವತ್ತೂ ಕೂಡಾ ಸರ್ವ ಸಂಕಷ್ಟಗಳಿಂದ ನಮ್ಮನ್ನು ಪಾರುಮಾಡಬಲ್ಲ ಕಲ್ಕಿ ಅಥವಾ ಮೈತ್ರೇಯನ ಬರುವಿಕೆಗಾಗಿ ಕಾಯುತ್ತಿರು ಆಸ್ತಿಕ ಮನಸ್ಸುಗಳಿವೆ. ಹಾಗೆಯೇ ಕಲ್ಪನೆಯ ಇನ್ನೊಂದು ಸ್ವರೂಪವನ್ನು ಪ್ರತಿನಿಧಿಸುವ ಸೆಲ್ಯುಲಾಯ್ಡ್ ಜಗದ ನಾಯಕ್, ಅನ್ನಿಯನ್ ಅಥವಾ ಸೂಪರ್ ಮೊದಲಾದವುಗಳು ಕೇವಲ ಮಧ್ಯಮ ವರ್ಗದ ಫ್ಯಾಂಟಸಿಯಷ್ಟೇ ಅಲ್ಲ ಮುಗ್ಧ ನಿರೀಕ್ಷೆಯೂ ಆಗಿರುತ್ತದೆ. ಇಂತಹ ಸಾಂಸ್ಕೃತಿಕ ಸಂರಚನೆಯಲ್ಲಿ ಅಧಃಪತನದ ಸೂಚನೆಗಳು ಸಹಜವಾಗಿಯೇ ಸರ್ವರನ್ನೂ ಸಂಕಷ್ಟದಿಂದ ಪಾರುಮಾಡಬಲ್ಲ ವ್ಯಕ್ತಿತ್ವವೊಂದರ ತಲಾಶೆಯಲ್ಲಿ ತೊಡಗುವಂತೆ ಜನರನ್ನು ಪ್ರೇರೇಪಿಸುತ್ತದೆ. ಇಲ್ಲಿ ರೂಮರ್‍ಸ್‌ಗಳು ಕಟ್ಟಿಕೊಟ್ಟಂತಹ ಪ್ರಭಾವಳಿಯ ನೆರವಿನಿಂದ ಮೋದಿ ಸಾಂಸ್ಕೃತಿಕ ಅವಶ್ಯಕತೆಯಂತೆ ಕಾಣಿಸಿಕೊಳ್ಳುತ್ತಾರೆ. ಗಾಳಿಸುದ್ದಿಗಳು ಮತ್ತದೇ ನಾಮಸ್ಮರಣೆಯ ಸ್ವರೂಪವನ್ನು ಪಡೆದುಕೊಳ್ಳುತ್ತವೆ.

***

ಹೋರಾಟ ಮಾನವ ನಾಗರೀಕತೆಗೆ ಮೂಲಭೂತವಾದ ಅಂಶವಾಗಿದೆ. ಚಳುವಳಿಗಳು ಹೋರಾಟದ ಸಾಮೂಹಿಕ ಆಯಾಮವನ್ನು ಪ್ರತಿನಿಧಿಸುತ್ತವೆ. ರಾಜ್ಯಶಾಸ್ತ್ರೀಯ ನೆಲೆಯಲ್ಲಿ ವಿಶ್ಲೇಷಿಸಿದಾಗ ಚಳುವಳಿಗಳು ಒಂದೋ ನಾಯಕ ಕೇಂದ್ರಿತವಾಗಿರುತ್ತದೆ ಇಲ್ಲವೇ ಪರಿಪೂರ್ಣ ನೆಲೆಯಲ್ಲಿ ಜನಾಂದೋಲನವಾಗಿರುತ್ತದೆ. ಅರಬ್ ಜಗತ್ತಿನಲ್ಲಿ ಇಂದು ನಡೆಯುತ್ತಿರುವ ಅಷ್ಟೂ ಹೋರಾಟಗಳು ಜನಾನುರಾಗಿಯಾಗಿರುವಂತದ್ದು. ಬೆನ್ ಆಲಿ, ಹೋಸ್ನಿ ಮುಬಾರಕ್, ಗದ್ದಾಫಿ ಮೊದಲಾದ ಸರ್ವಾಧಿಕಾರಿಗಳನ್ನು ಪದಚ್ಯುತಗೊಳಿಸಿದ ಕ್ರಾಂತಿಗಳಲ್ಲಿ ಯಾವುದೇ ಸಾರ್ವತ್ರಿಕ ಸ್ವರೂಪದ ನಾಯಕತ್ವವನ್ನು ಗುರುತಿಸುವುದು ಅಸಾಧ್ಯ. ಒಂದು ಸಮಾನ ಉದ್ಧೇಶದ ಸಾಧನೆಗೆ ಬದ್ಧರಾಗಿ ಸ್ವಯಂ ಪ್ರೇರಿತರಾಗಿ ಜನರು ತಮ್ಮನ್ನು ತಾವೇ ಚಳುವಳಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಅಂತಹ ಚಳುವಳಿಗಳಲ್ಲಿ ಮುನ್ನಡೆಸಲ್ಪಡುವ ಆಂದೋಲನಗಳಲ್ಲಿ ಕಾಣುವಂತಹ ನಿರ್ದೇಶನದ ಅಂಶಗಳು ಪ್ರಭಾವಿಯಾಗಿ ಇರುವುದಿಲ್ಲ. ಜನ ಕ್ರಾಂತಿಗಳಲ್ಲಿ ಅದರ ಸ್ಥಾನವನ್ನು ಸಂವಹನವು ಪಡೆದಿರುತ್ತದೆ. ಪರಿಪೂರ್ಣ ಸ್ವರೂಪದ ಜನಾಂದೋಲನಗಳಲ್ಲಿ ಅತಿರೇಕದ ನಡವಳಿಕೆಗಳು ಸಹಜವಾಗಿರುತ್ತದೆ.

ಜನಾಂದೋಲನಗಳಿಗೆ ಹೋಲಿಸಿದಲ್ಲಿ ನಾಯಕ ಕೇಂದ್ರಿತ ಚಳುವಳಿಗಳು ಸಮಾಜದ ಸ್ಥಾಪಿತ ಹಿತಾಸಕ್ತಿಗಳಿಗೆ ಹೆಚ್ಚು ಸಹನೀಯವಾಗಿರುತ್ತದೆ. ಯಾಕೆಂದರೆ ನಾಯಕತ್ವ ಆಧಾರಿತ ಹೋರಾಟ ಬಹುಮಟ್ಟಿಗೆ ನಿಯಂತ್ರಿತ ಸ್ವರೂಪದ ಪ್ರತಿರೋಧವನ್ನು ಪ್ರತಿನಿಧಿಸುತ್ತದೆ. ಅಲ್ಲಿ ಜನರ ಆಕ್ರೋಶ ಕಟ್ಟೆಯೊಡೆದು ಜನಕ್ರಾಂತಿಗೆ (Mass Action) ಕಾರಣವಾಗುವುದಿಲ್ಲ. ನಾಯಕ ಚಳುವಳಿಯ ಪ್ರತಿ ಹೆಜ್ಜೆ ಹಾಗೂ ಎಲ್ಲೆಯನ್ನು ನಿರ್ಧರಿಸುತ್ತಾನೆ. ಜೊತೆಗೆ ಅಲ್ಲಿ ಸಂವಾದ ಅಥವಾ ಹೊಂದಾಣಿಕೆಯ ಕ್ರಿಯೆಗಳಿಗೆ ನಾಯಕನ ರೂಪದಲ್ಲಿ ಒಂದು ವಿಂಡೋ ಇರುತ್ತದೆ. ಇಂತಹ ಚಳುವಳಿಗಳನ್ನು ಬಂಡವಾಳಶಾಹಿ ವ್ಯವಸ್ಥೆ ಸಹಿಸುತ್ತದೆ. ಗಾಂಧಿ ಮುನ್ನಡೆಸಿದ ಸ್ವಾತಂತ್ರ್ಯ ಹೋರಾಟ ಪರಿಪೂರ್ಣ ನೆಲೆಯಲ್ಲಿ ಒಂದು ನಿಯಂತ್ರಿತ ಆಂದೋಲನ. ವಸಾಹತುಶಾಹಿ ವಿರುಧ್ಧದ ಜನತೆಯ ರೋಷ ರ್‍ಯಾಡಿಕಲ್ ಸ್ವರೂಪವನ್ನು ಪಡೆದು ಆ ಕೃತ್ರಿಮ ವ್ಯವಸ್ಥೆಯ ಜೊತೆ ಕೈಜೋಡಿಸಿದ್ದ ಬಂಡವಾಳಶಾಹಿ ಹಾಗೂ ಜಮೀನ್ದಾರಿ ವರ್ಗಗಳ ಮೂಲೋತ್ಪಾಟನೆಗೆ ಕಾರಣವಾಗಬಹದಾದಂತಹ ಅತಿರೇಕದ ಸನ್ನಿವೇಶಗಳು ಗಾಂಧಿಯ ಉಪಸ್ಥಿತಿಯಲ್ಲಿ ಸಾಧ್ಯವಿರಲಿಲ್ಲ. ಹೀಗಾಗಿಯೆ ದೊಡ್ಡ ಸಂಖ್ಯೆಯಲ್ಲಿ ಬಂಡವಾಳಶಾಹಿಗಳು ಗಾಂಧಿ ನೇತೃತ್ವದ ಸ್ವಾತಂತ್ರ್ಯ ಹೋರಾಟವನ್ನು ಬೆಂಬಲಿಸಿದ್ದರು. ಕೇಜ್ರಿವಾಲ್ ನೇತೃತ್ವದ ಆಪ್ ಆಂದೋಲನ ಕೂಡಾ ಅಂತಹದ್ದೇ ಪೃವೃತ್ತಿಗಳನ್ನು ಪ್ರತಿನಿಧಿಸುತ್ತದೆ. ಇಲ್ಲಿ ಒಬ್ಬ ನಾಯಕನನ್ನು ಸಂಭಾಳಿಸಿದಲ್ಲಿ ಇಡೀ ಚಳುವಳಿಯನ್ನೇ ನಿಯಂತ್ರಿಸಿದಂತೆ. ಅವನ ದೌರ್ಬಲ್ಯಗಳೇ ಇಡೀ ಚಳುವಳಿಯ ದೌರ್ಬಲ್ಯಗಳೂ ಆಗಿರುತ್ತವೆ. ಹೀಗಾಗಿ ಬಲಿಷ್ಠ ವ್ಯವಸ್ಥೆಗೆ ಅದನ್ನು ನಿರ್ವಹಿಸುವ ಸಾಕಷ್ಟು ಅವಕಾಶಗಳು ಸಿಗುತ್ತವೆ.

ಆಪ್ ಚಳುವಳಿ ಅದಾನಿ ಅಂಬಾನಿಯರನ್ನು ಪ್ರಶ್ನಿಸುತ್ತಿದೆಯಾದರೂ ಪರೋಕ್ಷವಾಗಿ ಅದು ಭ್ರಷ್ಟಾಚಾರದ ವಿರುದ್ಧ ಜನತೆಯ ರೋಷದ ಅಭಿವ್ಯಕ್ತಿಗೆ ಸುರಕ್ಷಿತ ಅನ್ನಬಹುದಾದ ಔಟ್‌ಲೆಟ್ ಒಂದನ್ನು ಒದಗಿಸಿ ಅದೇ ಅದಾನಿ ಅಂಬಾನಿಯರನ್ನು ಉಳಿಸುತ್ತಿದೆ. ಇತ್ತೀಚೆಗೆ ನಾವು ಕಾಣುತ್ತಿರುವ ಅಷ್ಟೂ ಭ್ರಷ್ಟಾಚಾರ ಪ್ರಕರಣಗಳಲ್ಲಿ modi_ambani_tata_kamathಫಲಾನುಭವಿಯ ಸ್ಥಾನದಲ್ಲಿ ನಿಂತಿರುವಂತದ್ದು ಬಂಡವಾಳಶಾಹಿ ಕಾರ್ಪೋರೇಟ್ ವ್ಯವಸ್ಥೆ. ಆದರೆ ಎಲ್ಲೂ ಕೂಡಾ ದೈತ್ಯ ಕಾರ್ಪೋರೇಟ್ ಸಂಸ್ಥಾನಗಳ ವಿರುದ್ದ ಪ್ರತಿಭಟನೆಗಳು ಚಳುವಳಿ ಸ್ವರೂಪದಲ್ಲಿ ನಡೆಯುತ್ತಿಲ್ಲ. ಯಾಕೆಂದರೆ ಕೇಜ್ರಿವಾಲ್ ಹಾಗೂ ಅಣ್ಣಾ ಹಜಾರೆ ನೇತೃತ್ವದ ಆಂದೋಲನಗಳು ಭ್ರಷ್ಟಾಚಾರದ ಅಷ್ಟೂ ಹೊಣೆಗಾರಿಕೆಯನ್ನು ವ್ಯವಸ್ಥೆಯ ಕಡೆಗೆ ತಿರುಗಿಸಿವೆ. ಹೀಗಾಗಿ ರಾಡಿಯ ಟೇಪುಗಳಂತಹ ಪ್ರಕರಣಗಳು ರಾಜಕೀಯ ವ್ಯವಸ್ಥೆ ಹಾಗೂ ಕಾರ್ಪೋರೇಟ್ ಜಗತ್ತಿನ ನಡುವಣದ ಅನೈತಿಕ ಕೂಡಾಟದ ಮಾಹಿತಿಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರೂ ಕೂಡಾ ರಾಜಕಾರಣವಷ್ಟೇ ಜನತೆಯ ಆಕ್ರೋಶದ ಅಭಿವ್ಯಕಿಗೆ ಮತೆ ಮತ್ತೆ ಗುರಿಯಾಗುತ್ತಿದೆ.

***

ಆರಂಭದಲ್ಲೇ ತಿಳಿಸಿದಂತೆ ಮೋದಿ ಹಾಗೂ ಕೇಜ್ರಿವಾಲ್ ದೊಡ್ಡ ಮಟ್ಟದಲ್ಲಿ ದೇಶದ ಗಮನ ಸೆಳೆಯುತ್ತಿದ್ದಾರೆ. ಇಬ್ಬರ ಏಳಿಗೆಯ ಹಿಂದೆ ಕಾಣುವಂತದ್ದು ಬಹುತೇಕ ಒಂದೇ ಅನ್ನಿಸುವಂತಹ ಸನ್ನಿವೇಶಗಳು. ಕೇಜ್ರಿವಾಲ್ ಮಧ್ಯಮವರ್ಗದ ಪ್ರತಿನಿಧಿಯಂತೆ ಕಂಡರೆ ಮೋದಿ ಅದರ ನಿರೀಕ್ಷೆಯಂತೆ ಕಾಣುತ್ತಿದ್ದಾರೆ. ಆದರೆ ಇವರೀರ್ವರ ವೈಶಿಷ್ಟ್ಯ ಇರುವಂತದ್ದು ಪರಸ್ಪರ ವೈರುಧ್ಯಗಳಲ್ಲಿ. ಮೋದಿಯ ಸರ್ವಾಧಿಕಾರತ್ವ ಮತ್ತು ದ್ವೇಷದ ಚರ್ಯೆಗಳು ಕೇಜ್ರಿವಾಲ್ ಅವರಲ್ಲಿ ಕಂಡುಬರುವುದಿಲ್ಲ್ಲ. ಅಲ್ಲದೆ ಓರ್ವ ಡೆಮಾಕ್ರಟ್ ಆಗಿಯೂ ಕೇಜ್ರಿವಾಲ್ ಕಾಣಿಸಿಕೊಳ್ಳುತ್ತಿದ್ದಾರೆ. ಕಾರ್ಪೋರೇಟ್ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುತ್ತಿರುವ ಅಂಕೆ ಮೀರಿದ ಭೂಸ್ವಾಧೀನ ಅಥವಾ ಔದ್ಯಮಿಕ ನೆಲೆಯಲ್ಲಿ ನಡೆಯುವ ಪ್ರಾಕೃತಿಕ ಸಂಪನ್ಮೂಲಗಳ ಹಂಚಿಕೆ ಮೊದಲಾದ ಸಂಕೀರ್ಣ ವಿಚಾರಗಳ ಕುರಿತಂತೆ ಸ್ಪಷ್ಟವಾದ ಯಾವುದೇ ಸೈದ್ಧಾಂತಿಕ ನೆಲೆಗಳನ್ನು ಹೊಂದಿಲ್ಲವಾದರೂ ಬಂಡವಾಳಶಾಹಿಗಳ ಅಕ್ರಮಗಳ ವಿರುದ್ಧ ದನಿಯೆತ್ತುವ ಧೈರ್ಯವನ್ನು ತೋರುತಿದ್ದಾರೆ. ಕಾಂಗ್ರೆಸ್ ಹಾಗೂ ಮೋದಿಯ aravind-kejriwalಬಿಜೆಪಿ ಇವೆರಡೂ ಪಕ್ಷಗಳೂ ಕೃತ್ರಿಮ ಬಂಡವಾಳವಾದದ ಪ್ರತ್ಯಕ್ಷ ಪೋಷಕರ ಸ್ಥಾನದಲ್ಲಿ ನಿಂತಿರುವುದು ಇಲ್ಲಿ ಉಲ್ಲೇಖನೀಯ. ಹೀಗಾಗಿ ಅತ್ತ ಕಾಂಗ್ರೆಸ್ ಭ್ರಷ್ಟಾಚಾರವನ್ನು ಒಪ್ಪಲಾಗದ ಇತ್ತ ಮೋದಿಯ ಸಂಕುಚಿತ ರಾಜಕಾರಣವನ್ನು ರಿಜೆಕ್ಟ್ ಮಾಡುವ ಹಾಗೂ ತೃತೀಯ ರಂಗದ ಬಗ್ಗೆ ವಿಶ್ವಾಸವಿಲ್ಲದ ದೊಡ್ಡ ಯುವ ಸಮೂಹ ಕೇಜ್ರಿವಾಲ್ ಅವರನ್ನು ಬೆಂಬಲಿಸುತ್ತಿದೆ. ಸಹಜವಾಗಿಯೇ ಕಾಂಗ್ರೆಸ್ ಪ್ರತಿನಿಧಿಸುವ ಏನ್ಷಿಯನ್ ಅನ್ನಿಸುವ ವಂಶಪಾರಂಪರ್ಯ ರಾಜಕಾರಣ ಮತ್ತು ಮೋದಿಯ ಅಥೋರಿಟೇರಿಯನ್ ಆಡಳಿತ- ಇವುಗಳು ಕಾರಣಿಸಿರುವ ಉಸಿರುಗಟ್ಟಿಸುವ ವಾತಾವರಣದಲ್ಲಿ ಅನಿವಾರ್ಯವಾಗಿದ್ದ ಒಂದು ಸ್ಪೇಸ್ ಅನ್ನು ಕೇಜ್ರಿವಾಲ್ ಅವರ ಅರಾಜಕತೆ ಒದಗಿಸಿದೆ.