ಭಗ್ನ ಪ್ರೇಮ, ವಿಘ್ನ ಮನಸು ಮತ್ತು ಆಸಿಡ್ ದಾಳಿ


– ಡಾ.ಎಸ್.ಬಿ. ಜೋಗುರ


 

ಎಲ್ಲ ಬಗೆಯ ಮನುಷ್ಯ ಸಂಬಂಧಗಳನ್ನು ವ್ಯಾಪಾರೀ ಸೂತ್ರಕ್ಕೊಳಪಡಿಸಿ ಹೋಲ್‌ಸೇಲ್ ಅಂದ್ರೆ ಹೋಲ್‌ಸೇಲ್, ಕಿರುಕುಳ ಅಂದ್ರೆ ಕಿರುಕುಳ. ಒಂದು ’ಕಮಾಡಿಟಿ’ ಯಂತೆ ಪರಿಗಣಿ ವ್ಯವಹರಿಸುವವರ ನಡುವೆ ಪ್ರೀತಿ-ಪ್ರೇಮದ ಮಾತುಗಳು ಕೇವಲ ಸಿನೇಮಾಗಳಲ್ಲಿ ಅದೇ ತಾನೇ ನಟ-ನಟಿಯ ನಡುವೆ ಪಲ್ಲವಿಸುತ್ತಿರುವ ಹೌಸ್‌ಫ಼ುಲ್ಲಾದ ಭಾವುಕತೆಯ ಸಂಭಾಷಣೆಯಷ್ಟೇ ಯತಾರ್ಥವಾಗಿರುತ್ತದೆ. ಬದುಕಿನ ಯಾವ ಬವಣೆಗಳ ಉಸಾಬರಿಯಿರದ ನಾಯಕನಟನೊಬ್ಬ ತನ್ನ ನಾಯಕಿಯ ಎದುರು ಕುಳಿತು ತೀರಾ ದೈನೇಸಿಯಾಗಿ, ಆಕೆಯ ಎರಡೂ ಕೈಗಳನ್ನು ತನ್ನ ಮುಷ್ಟಿಯಲ್ಲಿಡಿದು, ನಾನು ನಿನ್ನನ್ನು ತುಂಬಾ ತುಂಬಾ ನನ್ನ ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತೇನೆ ಎಂದು ಆರಾಧನೆಯ ಭಾವದೊಂದಿಗೆ ನುಡಿಯುವದನ್ನು ಕೇಳಿ, ಹಾಗೆಂದೂ ಅಂಗಾಲಾಚಿರದ ಪ್ರೇಮಿಗಳು ಮನದಲ್ಲಿಯೇ love-proposalಆ ಸಿನೇಮಾದ ಸನ್ನಿವೇಶವನ್ನು ನೋಡಿ ಪುಳಕಿತರಾಗುತ್ತಾರೆ. ಇದು ನಿಜವಾದ ಪ್ರೀತಿಯೇ ಅಲ್ಲ. ಯಾಕೆಂದರೆ ತನ್ನತನವನ್ನು ಕಳೆದುಕೊಂಡು, ತನ್ನ ಪ್ರೀತಿ ಪಾತ್ರರಾದವರಿಂದ ಹೀಗೆ ನನ್ನನ್ನು ಪ್ರೀತಿಸು ಎಂದು ಅಂಗಾಲಾಚಿ ಕೇಳುವ ಕ್ರಮದಲ್ಲಿಯೇ ಆತನ ವ್ಯಕ್ತಿತ್ವವೂ ಮಸುಕು ಮಸುಕಾಗಿರುತ್ತದೆ. ಈ ಬಗೆಯ ಅತಿಯಾದ ಭಾವುಕತೆಯಲ್ಲಿ ಬದುಕುವವರು ಕೇವಲ ಭೂತ ಮತ್ತು ಭವಿಷ್ಯದಲ್ಲಿ ಮಾತ್ರ ಇನ್ನೂ ಹೆಚ್ಚೆಂದರೆ ಹಗಲುಗನಸಿನಲ್ಲಿ ಮಾತ್ರ ಪ್ರೀತಿಸಿ ಬದುಕಬಲ್ಲರೇ ಹೊರತು ವರ್ತಮಾನದಲ್ಲಿ ಸಾಧ್ಯವಿಲ್ಲ. ಕನಸು ಕಾಣುವುದು, ಪೊರೆಯುವುದರ ನಡುವೆ ವಾಸ್ತವವನ್ನೇ ಇವರು ಮರೆಯುವ ಮೂಲಕ ತಮ್ಮ ವ್ಯಕ್ತಿತ್ವದ ವಿಕಸನಕ್ಕೆ ತಾವೇ ಖುದ್ದಾಗಿ ತೊಡಕಾಗುತ್ತಾರೆ.

ಪ್ರೀತಿ ಎನ್ನುವುದು ಏನೋ ಒಂದನ್ನು ಕೊಡುವುದು, ಪಡೆಯುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಅದರಲ್ಲೂ ಕಾಣಿಕೆಗಳ ವರ್ಗಾವಣೆಯೇ ಪ್ರೀತಿ ಎನ್ನುವುದಾದರೆ ಮೇಲೆ ಹೇಳಿದ ವ್ಯಾಪಾರೀ ಸೂತ್ರದ ಪ್ರವೇಶವಾಗಿ ಅದು ತೀರಾ ಬಾಲಿಶವಾಗುತ್ತದೆ. ಕೊಡುವುದು ತೆಗೆದುಕೊಳ್ಳುವ ಮೂಲಕವೇ ಅದು ನಿರ್ಣಾಯಕ ಘಟ್ಟ ತಲುಪುತ್ತದೆ ಎನ್ನುವುದಾದರೆ ಅದು ಜಾಗತೀಕರಣದ ಸಂದರ್ಭದಲ್ಲಿ ಮುಕ್ತ ಮಾರುಕಟ್ಟೆಯ ಒಂದು ಸರಕೇ ಹೌದು. ಪ್ರೀತಿಯಲ್ಲಿ ಪ್ರೀತಿಪಾತ್ರರ ಗಮನಹರಿಸುವಿಕೆ ಅತಿ ಮುಖ್ಯವಾಗಬೇಕು. ಈ ಗಮನಹರಿಸುವಿಕೆಯ ಜೊತೆ ಜೊತೆಗೆ ಪರಸ್ಪರನ್ನು ಗೌರವಿಸುವ ಗುಣವೂ ಮಾನ್ಯವಾಗಬೇಕು. ಈ ಗೌರವಿಸುವಿಕೆ ಎನ್ನುವುದು ಕೇವಲ ಹೊರನೋಟದ ಭೌತಿಕ ಪ್ರಭಾವಳಿಯನ್ನು ಒಳಗೊಂಡಿರದೇ ಒಳನೋಟಗಳನ್ನೂ ಗಾಢವಾಗಿ ತಟ್ಟಬಹುದಾದ ರೀತಿಯಲ್ಲಿರಬೇಕು. ಈ ಪ್ರೀತಿ ಎನ್ನುವುದು ಪರಕಾಯವನ್ನು ಕುತೂಹಲದಿಂದ ಪ್ರವೇಶಿಸುವದರಲ್ಲೇ ಹೆಚ್ಚು ಅರ್ಥ ಪಡೆಯುತ್ತದೆ. ಈ ಪರಸ್ಪರ ಅರಿಯುವ ಕ್ರಿಯೆಯಲ್ಲಿ ಮೈಗೆ ಮೈ ಅಂಟುವುದು ಮುಖ್ಯವಾಗದೇ ಪರಸ್ಪರ ಚೈತನ್ಯದ ಸಹವಾಸವೂ ಮುಖ್ಯವಾಗಬೇಕು. ಎರಿಕ್ ಫ಼್ರಾಮ್ ಹೇಳುವ ಹಾಗೆ ’ವ್ಯಕ್ತಿಯೊಬ್ಬನ ಪ್ರೀತಿ ಸೃಜನಶೀಲವಾಗಿದ್ದರೆ ಆತ ತನ್ನನ್ನು ಪ್ರೀತಿಸಬಲ್ಲ. ಇತರರನ್ನು ಮಾತ್ರ ಪ್ರೀತಿಸಬಲ್ಲೆನೆನ್ನುವವನಾದರೆ ಆತನಿಗೆ ಪ್ರೀತಿಸಲು ಸಾಧ್ಯವಿಲ್ಲ.’ ನಾವೆಲ್ಲಾ ಸಾಮಾನ್ಯವಾಗಿ ಇಂದು ಬಹುತೇಕರು ಇಡೀ ವಿಶ್ವ ನಮ್ಮ ದಾಹವನ್ನು ತಣಿಸುವ ಒಂದು ಬಹುದೊಡ್ಡ ಭೋಗದ ವಸ್ತು ಎಂದು ಭಾವಿಸಿರುವುದರಿಂದಲೇ ನಾವು ಪ್ರೀತಿ ಪ್ರೇಮದ ಹೆಸರಲ್ಲಿ ಒಂದು ಬಗೆಯ ಹಕ್ಕೊತ್ತಾಯ ಮಾಡತೊಡಗುತ್ತೇವೆ. ಆಕೆ ಅವನ ಪ್ರೀತಿಯನ್ನು ನಿರಾಕರಿಸಿದರೆ ಅವನು ತನ್ನ ವ್ಯಕ್ತಿತ್ವದ ದೋಷಗಳನ್ನು ಪರಾಮರ್ಶಿಸುವ ಬದಲಾಗಿ, ಅವಳ ಮೇಲೇಯೇ ಒತ್ತಡ ಹೇರುವ ರೀತಿ ಅತ್ಯಂತ ವಿಘಟಿತ ವ್ಯಕ್ತಿತ್ವದ ಪರಿಣಾಮ. ಅವಳು ನನಗೆ ಬೇಕೇ ಬೇಕು ಎನ್ನುವ ಚಂಡಿತನ, ಭಂಡತನಗಳ ನಡುವೆ ತಾನು ಪ್ರೀತಿಸಿದ ಹುಡುಗಿಯನ್ನೇ ವಿರೂಪಗೊಳಿಸುವ ಮನ:ಸ್ಥಿತಿಯೇ ಅತ್ಯಂತ ಅಪ್ರಬುದ್ಧವಾದುದು. ಗ್ರಾಹಕನಾದವನು ವಸ್ತು ಒಂದರ ಮೇಲೆ ಹಕ್ಕು ಚಲಾಯಿಸುವಷ್ಟೇ ಕೆಲವೊಮ್ಮೆ ಅದಕ್ಕಿಂತಲೂ ಅಗ್ಗವಾಗಿ ಈ ಹೊತ್ತಿನ ಪ್ರೇಮಿ ಅನಿಸಿಕೊಳ್ಳುವವನು ನಡೆದುಕೊಳ್ಳುವುದಿದೆ. ಯಾಕೆಂದರೆ ಯಾವುದೋ ಒಂದು ವಸ್ತು ನಮಗೆ ಸಿಗದಿದ್ದಾಗ ಕೇವಲ ಆ ಗಳಿಗೆಯಲ್ಲಿ ಮಾತ್ರ ನಮಗೆ ನಿರಾಶೆ ಆಗಬಹುದು ಆದರೆ ಆ ವಸ್ತುವನ್ನು ವಿರೂಪಗೊಳಿಸುವಷ್ಟು ಕುತ್ಸಿತ ಬುದ್ದಿ ಮಾತ್ರ ಇರಲಾರದು. ಆದರೆ ಹಂಡಬಂಡ ಎಳಕು ಪ್ರೀತಿ-ಪ್ರೇಮದ ವಿಷಯದಲ್ಲಿ ಹಾಗಲ್ಲ. asian-age-for-acid-burn-victims-loveಇಷ್ಟಾನಿಷ್ಟಗಳನ್ನು ಮೀರಿಯೂ ಆಕೆಯನ್ನು ಪಡದೇ ತೀರಬೇಕು ಎನ್ನುವ ಹಠದ ನಡುವೆ ಆಕೆಯನ್ನು ವಿಕಾರಗೊಳಿಸುವವರೆಗೂ ಅವನು ಮುಂದುವರೆಯುತ್ತಾನೆ. ಆಕೆಯ ಮುಖಕ್ಕೆ ಆಸಿಡ್ ಎರಚಿದ ಮೇಲೆಯೂ ಈತ ಆಕೆಯ ಪ್ರೇಮಿ ಎಂದು ಹೇಳಿಕೊಳ್ಳುವಲ್ಲಿಯೇ ಒಂದು ವಿಕೃತವಾದ ಅಸಹ್ಯವಾದ ಮಳ್ಳತನವಿದೆ. ಇಂಥಾ ಮಳ್ಳರ ಕೈಗೆ ಎಲ್ಲೆಂದರಲ್ಲಿ ಆಸಿಡ್ ಸಿಗಬಾರದು ಎನ್ನುವ ಕಾರಣದಿಂದಲೇ ಸರಕಾರ ಅದನ್ನು ಮಾರುವವರ ಮೇಲೆ ಅನೇಕ ಬಗೆಯ ನಿರ್ಬಂಧಗಳನ್ನು ಅದನ್ನು ಮಾರುವಾಗ ಅನುಸರಿಸಲು ಹೇಳಿರುವದಿದೆ. ಆದಾಗ್ಯೂ ಮುಖಕ್ಕೆ ಆಸಿಡ್ ಎರಚಿದ ಪ್ರಕರಣಗಳು ನಿರಂತರವಾಗಿ ಬಯಲಾಗುತ್ತಲೇ ಇವೆ.

ಒಂದೆರಡು ರೋಮ್ಯಾಂಟಿಕ್ ಮೆಸೇಜ್‌ಗಳು ರವಾನೆಯಾಗಿದ್ದೇ ತಡ ಪ್ರೀತಿ ಪ್ರೇಮದ ದೊಡ್ಡ ರಗಳೆಯೇ ಆರಂಭವಾಗುವ ಈ ದಿನಮಾನಗಳಲ್ಲಿ ನಂತರದ ಪರಿಣಾಮದ ಪರಿವಿಲ್ಲದೇ ದುಡುಕುವ ಹುಡುಗಾಟದ ಹುಡುಗ-ಹುಡುಗಿಯರು ಏನೇನೋ ಅನಾಹುತಗಳನ್ನು ಅನುಭವಿಸುವದಿದೆ. ಬರೀ ಮೋಹವನ್ನೇ ಪ್ರೀತಿಯೆಂದು ಪರಿಭಾವಿಸುವ ಹುಚ್ಚ ಖೋಡಿ ಮನಸಿನ ಬೆನ್ನಿಗೆ ಬಿದ್ದವರು ಮಾಡಬಾರದ್ದನ್ನೆಲ್ಲಾ ಮಾಡಿ ತಮ್ಮ ಬದುಕನ್ನೇ ನರಕವಾಗಿಸಿಕೊಳ್ಳುತ್ತಾರೆ. ಎರಿಕ್ ಫ಼್ರಾಮ್ ಎನ್ನುವ ಸಮಾಜಶಾಸ್ತ್ರ ಹೇಳುವ ಹಾಗೆ ನಿಜವಾದ ಪ್ರೀತಿಯಲ್ಲಿ ಕೊಡುವ ಗುಣವಿದೆಯೇ ಹೊರತು ಕಸಿಯುವ, ಕಿತ್ತುಕೊಳ್ಳುವ, ವಿರೂಪಗೊಳಿಸುವ ಭಂಜನೆಯ ಗುಣವಿಲ್ಲ. ಪೊಸ್ಸೆಸ್ಸಿವ್ ಗುಣ ಒಂದು ಹಂತದವರೆಗೆ ಓ.ಕೆ. ಏನೇ ಆಗಲಿ ಅವಳು ನನಗೆ ಬೇಕೇ ಬೇಕು ಎನ್ನುವ ಹಠ ಪ್ರಯೋಗದ ನಡುವೆ ಅವಳು ಒಂದೊಮ್ಮೆ ಆ ಒನ್ ವೇ ಪ್ರೀತಿಯನ್ನು ನಿರಾಕರಿಸಿದ್ದೇಯಾದರೆ ಈತ ಇದ್ದಕ್ಕಿದ್ದಂತೆ ಸೈತಾನನಾಗಿ ಆಕೆಯ ಸುಂದರ ಮುಖಕ್ಕೆ ಆಸಿಡ್ ಎರಚುವ, ಕತ್ತು ಕೊಯ್ಯುವ ಇಲ್ಲವೇ ಹಲ್ಲೆ ಮಾಡುವ ಹುಂಬತನಕ್ಕಿಳಿಯುತ್ತಾನೆ. ಇಂಥಾ ತಿಕ್ಕಲು ಮನ:ಸ್ಥಿತಿಯನ್ನೇ ಸಿನೇಮಾ ಮಾಡಿ ದುಡ್ದು ಮಾಡಿಕೊಂಡವರಿಗೂ ನಮ್ಮಲ್ಲಿ ಕೊರತೆಯಿಲ್ಲ. ತಿಕ್ಕಲು ಪ್ರೇಮಿಗಳ ಅತಿಯಾದ ಪೊಸೆಸ್ಸಿವ್ ಗುಣದಿಂದಾಗಿ ಅನೇಕ ಯುವತಿಯರು ವಿಕಾರವಾಗಿದ್ದಾರೆ. ಅಂಥಾ ಕೆಲವು ಘಟನೆಗಳಲ್ಲಿ ಎಪ್ರಿಲ್ 20, 1999 ರಂದು ಹಸೀನಾ, ಫ಼ೆಬ್ರುವರಿ 2001 ರಲ್ಲಿ ನೂರಜಹಾನ್ , ಅಗಸ್ಟ್ 12, 2002 ರಂದು ಶೃತಿ ಸತ್ಯನಾರಾಯಣ, ಜೂನ 24, 2007 ಸರೋಜಿನಿ ಕಲಭಾಗ, ಅಗಸ್ಟ 8, 2007 ಹಿನಾ ಫ಼ಾತಿಮಾ, ಅಕ್ಟೋಬರ್ 21, 2008 ಕಾರ್ತಿಕಾ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈಗ ಆ ಪಟ್ಟಿಗೆ ಈಚೆಗಷ್ಟೇ ಧಾಳಿಗೊಳಗಾದ ಶಿಕ್ಷಕಿ ಕವಿತಾ ಕೂಡಾ ಸೇರ್ಪಡೆಯಾಗುತ್ತಾಳೆ. ದಾವಣಗೇರಿ ಜಿಲ್ಲೆಯ ಕೊಕ್ಕನೂರು ಗ್ರಾಮದಲ್ಲಿ ಶಿಕ್ಷಕಿ ಶಾಲೆ ಮುಗಿಸಿಕೊಂಡು ಮನೆಗೆ ಬರುವಾಗ ಈ ಕುಕೃತ್ಯ ನಡೆದಿದೆ. ಮದುವೆ ಆಗಲು ಆಕೆ ನಿರಾಕರಿಸಿರುವುದೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ. ಇನ್ನು ಈ ಕೃತ್ಯ ಎಸಗಿದ್ದು ಯಾರೋ ಅಪರಿಚಿತನಲ್ಲ, ಶಿಕ್ಷಕಿಯ ಅಣ್ಣನ ಗೆಳೆಯ. ಹೀಗಿದೆ ನೋಡಿ ಆಧುನಿಕ ಗೆಳೆತನ ! ಪ್ರೀತಿಯಾಗಲೀ, ಸ್ನೇಹವಾಗಲೀ ಹೀಗೆ ಹಿಂಸೆಯನ್ನು, ಸೇಡನ್ನು ಪುರಸ್ಕರಿಸುವದಿಲ್ಲ ಎನ್ನುವುದು ತಿಳಿದಿರಬೇಕು.

ಈಚೆಗೆ ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾನಿಲಯದಲ್ಲಿ ಆಕಾಶ ಎನ್ನುವ ಹುಡುಗ ರೋಷನಿ ಗುಪ್ತಾ ಎನ್ನುವ ಹುಡುಗಿಯನ್ನು ಕೊಡಲಿಯಿಂದ murder-stabbingjpgಹಲ್ಲೆ ಮಾಡಿ ಡೆತ್ ನೋಟ್ ಬರೆದಿಟ್ಟು ತಾನೂ ಕೂಡಾ ಕತ್ತು ಕತ್ತರಿಸಿಕೊಂಡಿದ್ದು ತಮಗೆಲ್ಲಾ ನೆನಪಿರಬಹುದು. ರೋಷನಿಯ ತಲೆಬುರುಡೆಗೆ ತೀವ್ರ ಪೆಟ್ಟು ಬಿದ್ದು ಈಗ ಆಕೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಕೊಡಲಿಯ ಪೆಟ್ಟು ಕೊಟ್ಟಾತ ಅದಾಗಲೇ ಈ ಲೋಕವನ್ನು ತ್ಯಜಿಸಿದ್ದಾನೆ. ಬಿಹಾರದ ಗಯಾ ಮೂಲದ ಆಕಾಶ ಒಬ್ಬ ಬಡ ರೈತನ ಮಗ. ಓದಲೆಂದು ದೆಹಲಿಗೆ ಬಂದವನು ಮಾಡಿರುವ ಕಿಸಾಮತಿ ಇದು. ಆತ ಬರೆದಿರುವ ಡೆತ್ ನೋಟಿನಲ್ಲಿ ’ನನ್ನನ್ನು ಕ್ಷಮಿಸಿ ಪ್ರತಿ ಬಾರಿಯೂ ಹುಡುಗರದೇ ತಪ್ಪಿರುವದಿಲ್ಲ.. ನಾನು ಎಂಥವನು ಎನ್ನುವದನ್ನು ನನ್ನ ಗೆಳೆಯರಿಂದ ಕೇಳಿ ತಿಳಿಯಿರಿ.’ ಹೀಗೆ ಇನ್ನೂ ಅನೇಕ ವಿಷಯಗಳನ್ನು ನಾಲ್ಕು ಪುಟದ ಪತ್ರದಲ್ಲಿ ಬರೆದಿದ್ದ ಆಕಾಶ, ಆತನ ಸ್ನೇಹಿತರು ಹೇಳುವಂತೆ ಅಂತರ್ಮುಖಿಯಾಗಿದ್ದು, ಕಡಿಮೆ ಮಾತನಾಡುತ್ತಿದ್ದ. ತನ್ನದೇ ಸಹಪಾಠಿಯನ್ನು ಹೀಗೆ ಭೀಕರವಾಗಿ ಕೊಡಲಿಯಿಂದ ಹಲ್ಲೆ ಮಾಡಿ ತಾನೂ ಸಾವೀಗೀಡಾಗಿದ್ದು ಸರಿಯಾದ ನಿಲುವಂತೂ ಅಲ್ಲ. ಕೇವಲ ಇದು ಮಾತ್ರವಲ್ಲ ಇಂಥಾ ಘಟನೆಗಳು ಬೇಕಾದಷ್ಟು ನಡೆಯುತ್ತವೆ.. ವರದಿಯಾಗುತ್ತವೆ.

ಮೇ ತಿಂಗಳಲ್ಲಿ ಮುಂಬೈನ ಬಾಂದ್ರಾದಲ್ಲಿ ಒಬ್ಬ ಯುವಕ 23 ವರ್ಷ ವಯಸ್ಸಿನ ಯುವತಿಯ ಮುಖಕ್ಕೆ ಎಸಿಡ್ ಎರಚಿ ಪರಾರಿಯಾದ. ಆ ಹುಡುಗಿ ಇನ್ನೂ ಚೇತರಿಸಿಕೊಳ್ಳುತ್ತಿದ್ದಾಳೆ ಅವಳ ಮೊಬೈಲನ್ನು ಪೋಲಿಸರು ಪರಿಶೀಲಿಸಿದಾಗ ಅದರಲ್ಲಿ ಸುಮಾರು 250 ರಷ್ಟು ರೋಮ್ಯಾಂಟಿಕ್ ಆದ ಸಂದೇಶಗಳಿದ್ದವು. ಆ ಸಂದೇಶಗಳು ದೆಹಲಿಯ ಅನಾಮಿಕನೊಬ್ಬನಿಂದ ಬಂದಿರುವದಿತ್ತು. ಅದೇ ತಿಂಗಳು ಚೆನ್ನೈನ ಎಮ್.ಜಿ.ಆರ್ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಜಾರ್ಖಂಡ್ ಮತ್ತು ಬಿಹಾರದ ಇಬ್ಬರು ವಿದ್ಯಾರ್ಥಿಗಳು ಪ್ರೀತಿ-ಪ್ರೇಮದ ವಿಷಯವಾಗಿ ಜಗಳಾಡಿ ಒಬ್ಬಾತ ಪಿಸ್ತೂಲಿನಿಂದ ಇನ್ನೊಬ್ಬನ ತಲೆಗೆ ಜೋರಾಗಿ ಹೊಡೆದಿದ್ದ. ಹೊಡೆದವನು ತಾನು ಪ್ರೀತಿಸುತ್ತಿರುವ ಹುಡುಗಿಯೊಂದಿಗೆ ಮಾತನಾಡಬೇಡ ಎನ್ನುವದು ಕಡಕ್ ವಾರ್ನಿಂಗ್ ಆಗಿತ್ತು. ವಿಚಿತ್ರವೆಂದರೆ ಆ ಹುಡುಗಿ ಮತ್ತು ಈ ಇಬ್ಬರು ಯುವಕರು ಒಂದೇ ತರಗತಿಯಲ್ಲಿ ಓದುವವರು. ಕಳೆದ ಎಪ್ರಿಲ್‌ನಲ್ಲಿ ಮುಂಬೈನ ಠಾಣಾದಲ್ಲಿ ಒಂದು ಘಟನೆ ನಡೆದಿತ್ತು. 19 ವರ್ಷದ ಓರ್ವ ಯುವತಿಯನ್ನು 22 ವರ್ಷದ ಒಬ್ಬ ಯುವಕ ಪ್ರೀತಿಸುತ್ತಿದ್ದ. ಅದು ಬಹುತೇಕವಾಗಿ ಒನ್ ವೇ ಲವ್ ಆಗಿತ್ತು. ಆ ಹುಡುಗಿ ಅವನನ್ನು ಮದುವೆಯಾಗಲು ಇಷ್ಟವಿಲ್ಲ ಎಂದದ್ದೇ ಆತ ನೇರವಾಗಿ ಅವರ ಮನೆಗೆ ತೆರಳಿ ಕಲಹಕ್ಕಿಳಿದು ಆ ಹುಡುಗಿಯ ಕತ್ತಲ್ಲಿ ಚಾಕು ಹಾಕಿ ಬಿಟ್ಟ ಹಾಗೆಯೇ ತಾನೂ ಕತ್ತನ್ನು ಸೀಳಿಕೊಂಡ. ಸುದೈವಕ್ಕೆ ಇಬ್ಬರೂ ಬದುಕಿ ಉಳಿದರು. ಇಂಥಾ ಅದೆಷ್ಟೋ ಘಟನೆಗಳು ಪ್ರೇಮ ವೈಫ಼ಲ್ಯ ಇಲ್ಲವೇ ನಿರಾಕರಣೆಯ ಹೆಸರಲ್ಲಿ ನಡೆಯುತ್ತವೆ. ಅದರಲ್ಲೂ ಈಗೀಗ ಮೊಬೈಲ್ ಮೂಲಕ ಪ್ರೇಮ ಪ್ರಕರಣಗಳು ಆರಂಭವಾಗುತ್ತಿವೆ. ಪ್ರಬುದ್ಧತೆ ಮತ್ತು ಪರಸ್ಪರರನ್ನು ಅರಿಯಲಿಕ್ಕೆ ಅಲ್ಲಿ ಅವಕಾಶವೇ ಇಲ್ಲದಂತಾಗಿದೆ. ಹುಡುಗಾಟವೇ ಪ್ರೇಮವಾಗಿ ಅನಾಹುತಗಳು ಘಟಿಸುತ್ತವೆ. ನಿರಂತರವಾಗಿ ರೋಮ್ಯಾಂಟಿಕ್ ಮೆಸೇಜ್‌ಗಳನ್ನು ರವಾನಿಸುವದೇ ಪ್ರೀತಿಯ ಪರಿಪಾಠವಾಗಿದೆ. ಪ್ರೇಮ ತರಾತುರಿಯಲ್ಲಿ ಕುದುರುವ ವ್ಯವಹಾರವಲ್ಲ. ಹಾಗೆಯೇ ಮೋಹ ಸೆಳೆತಗಳನ್ನೇ ಹಂಬಲಿಸಿ ಪ್ರೀತಿಸುವದು ಸರಿಯೂ ಅಲ್ಲ. ಪ್ರೀತಿಯನ್ನು ಒಂದು ಮೌಲ್ಯ ಎಂದು ಪರಿಗಣಿಸುವ ಮನೋಭಾವ ಬೆಳೆಯಬೇಕು.. ಆ ದಿಶೆಯಲ್ಲಿ ನಮ್ಮ ಯುವಕರಿಗೆ ಸುತ್ತಲ್ಲಿನ ಪರಿಸರ ಮಾರ್ಗದರ್ಶನ ನೀಡಬೇಕು. love-companionshipಕತ್ತು ಕತ್ತರಿಸಿಕೊಳ್ಳುವ ಇಲ್ಲವೇ ಕೊಯ್ಯುವ, ವಿಷ ಸೇವಿಸುವ ಇಲ್ಲವೇ ಎಸಿಡ್ ಎರಚುವ ಕ್ರಿಯೆಗಳಿಗಿಂತಲೂ ಈ ಪ್ರೀತಿ ಅಗಾಧವಾದುದು. ನಿಜವಾದ ಪ್ರಾಮಾಣಿಕ ಪ್ರೀತಿ ಪರಸ್ಪರರ ಖುಷಿ.. ಮತ್ತು ಏಳ್ಗೆಯನ್ನು ಬಯಸುತ್ತದೆಯೇ ಹೊರತು ಪರಸ್ಪರರ ದುರಂತ ಕತೆಗಳನ್ನಲ್ಲ.

ಕೊನೆಯದಾಗಿ ಎರಿಕ್ ಫ಼್ರಾಮ್ ಹೇಳುವ ಮಾತು ಇಲ್ಲಿ ಮುಖ್ಯ ’ಇಬ್ಬರು ವ್ಯಕ್ತಿಗಳು ತಮ್ಮ ಅಸ್ಥಿತ್ವದ ಕೇಂದ್ರಗಳಿಂದ ಪರಸ್ಪರ ವಿಚಾರ, ಸಂವಹನ ನಡೆಸಿದಾಗ ಮಾತ್ರ ಪ್ರೀತಿ ಸಾಧ್ಯ ಹೀಗಾಗಲು ಮನುಷ್ಯ ತನ್ನೆಲ್ಲಾ ಸಮಗ್ರತೆಯನ್ನು ಈ ಕೇಂದ್ರದಿಂದಲೇ ಅನುಭವಿಸಬೇಕು ಪ್ರೀತಿಯೆನ್ನುವುದು ಒಂದು ತಂಗುದಾಣವಲ್ಲ, ಚಲನಶೀಲತೆ. ನಿಜವಾದ ಪ್ರೀತಿಯಲ್ಲಿ ಅವರ ಸಂಬಂಧದ ಆಳ, ಶಕ್ತಿ ಮತ್ತು ಜೀವಂತಿಕೆಯೇ ಅಡಕವಾಗಿರುತ್ತದೆ.’ ಇವೆಲ್ಲವೂ ಪ್ರಬುದ್ಧ ಮನಸ್ಸಿನ ಪಠ್ಯಕ್ರಮವೇ ಹೊರತು ಎಳಸು ಮನಸುಗಳಿಗಲ್ಲ.

Leave a Reply

Your email address will not be published. Required fields are marked *