ಆಮ್ ಆದ್ಮಿ ಪಕ್ಷ – ನೈಜ ಪ್ರಜಾಪ್ರಭುತ್ವ ವ್ಯವಸ್ಥೆಯ ನಿರ್ಮಾಣದ ದಿಕ್ಕಿನಲ್ಲಿ ದಿಟ್ಟ ಹೆಜ್ಜೆ

– ಆನಂದ ಪ್ರಸಾದ್

ಭಾರತದ ಪ್ರಧಾನ ಪರಂಪರಾಗತ ಪಕ್ಷಗಳು ನೈಜ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ದೂರ ಸರಿದು ಒಂದೋ ಬಂಡವಾಳಗಾರರ ಹಿಡಿತದಲ್ಲಿ ಕಾರ್ಯ ನಿರ್ವಹಿಸುತ್ತಿವೆ ಅಥವಾ ವಂಶಪಾರಂಪರ್ಯ ಹಿಡಿತದಿಂದಾಗಿ ಬಳಲುತ್ತಿವೆ. ನೈಜ ಪ್ರಜಾಪ್ರಭುತ್ವ ವ್ಯವಸ್ಥೆ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳೇ ರೂಪಿಸುವ ವ್ಯವಸ್ಥೆಯಾಗಿರಬೇಕು. ಆದರೆ ಇಂದಿನ ಭಾರತದ ಪ್ರಧಾನ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಇಂಥ ಆದರ್ಶದಿಂದ ದೂರ ಸರಿದು ಬಂಡವಾಳಗಾರರ ಕೈಗೊಂಬೆಗಳಂತೆ ಕಾರ್ಯ ನಿರ್ವಹಿಸುತ್ತಿವೆ ಹಾಗೂ ಅನೈತಿಕ ರಾಜಕೀಯದ ಪರಾಕಾಷ್ಠೆಯನ್ನು ತಲುಪಿವೆ. ಇಂಥ ದುರ್ಬರ ಸನ್ನಿವೇಶದಲ್ಲಿ ದೇಶಕ್ಕೆ ಪರ್ಯಾಯ ರಾಜಕೀಯವೊಂದರ ಅಗತ್ಯ ಎದ್ದು ಕಾಣುತ್ತಿದೆ. aap-donation-19022014ಆಮ್ ಆದ್ಮಿ ಪಕ್ಷವು ಈ ಕೊರತೆಯನ್ನು ತುಂಬಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ. ಜನರಿಂದಲೇ ಪಕ್ಷ ಕಟ್ಟಲು ಹಾಗೂ ಚುನಾವಣಾ ಪ್ರಚಾರ ನಡೆಸಲು ಆಮ್ ಆದ್ಮಿ ಪಕ್ಷವು ದೇಣಿಗೆ ಸ್ವೀಕರಿಸುವ ಮತ್ತು ಅದನ್ನು ಪಾರದರ್ಶಕವಾಗಿ ತನ್ನ ಪಕ್ಷದ ವೆಬ್ ಸೈಟಿನಲ್ಲಿ ಎಲ್ಲರ ಅವಗಾಹನೆಗೆ ತೆರೆದಿಡುವ ಮೂಲಕ ಉಳಿದೆಲ್ಲ ಪಕ್ಷಗಳಿಗಿಂತ ಹೆಚ್ಚು ನೈಜ ಪ್ರಜಾಪ್ರಭುತ್ವ ಆದರ್ಶವನ್ನು ತೋರಿಸಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ನೈಜ ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯಗಳನ್ನು, ಆದರ್ಶಗಳನ್ನು ಹಾಳುಗೆಡಹುವುದರಲ್ಲಿ ಅನೈತಿಕ ಮೂಲದಿಂದ ರಾಜಕೀಯ ಪಕ್ಷಗಳು ಪಡೆಯುವ ಕಪ್ಪು ಹಣ, ಬಂಡವಾಳಗಾರರು ಗುಪ್ತ ಶರತ್ತನ್ನು ವಿಧಿಸಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿ ಪಕ್ಷ ಅಧಿಕಾರಕ್ಕೆ ಬಂದ ನಂತರ ತಮಗೆ ಬೇಕಾದ ರಿಯಾಯತಿಗಳನ್ನು ನಿಯಮಬಾಹಿರವಾಗಿ ಹಾಗೂ ಸಂವಿಧಾನಬಾಹಿರವಾಗಿ ಸರ್ಕಾರದಿಂದ ಪಡೆಯುವುದು ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲವಾಗಲು ಒಂದು ಮುಖ್ಯ ಕಾರಣವಾಗಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರ ಹೋಗಿ ಮೋದಿ ನೇತೃತ್ವದ ಸಂಘ ಪರಿವಾರದ ಸರ್ಕಾರ ಬಂದರೂ ವ್ಯವಸ್ಥೆಯಲ್ಲಿ ಹೆಚ್ಚಿನ ಬದಲಾವಣೆ ಆಗಲಾರದು. ಮೋದಿಯು ಕಳೆದ ಎಂಟು ಹತ್ತು ತಿಂಗಳುಗಳಿಂದ ದೇಶಾದ್ಯಂತ ಅತ್ಯಂತ ವೈಭವೋಪೇತವಾದ ರ್ಯಾಲಿಗಳನ್ನು ನಡೆಸಲು ಹಣವನ್ನು ನೀರಿನಂತೆ ಚೆಲ್ಲುವುದನ್ನು ನೋಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನಷ್ಟು ದುರ್ಬಲವಾಗುವುದು ಖಚಿತ. ಗುರಿ ಮಾತ್ರವಲ್ಲ ಗುರಿಯೆಡೆಗೆ ಸಾಗುವ ದಾರಿಯೂ ಪರಿಶುದ್ಧವಾಗಿರಬೇಕು ಎಂದು ಮಹಾತ್ಮಾ ಗಾಂಧಿಯವರು ಹೇಳಿದ್ದಾರೆ. ಮೋದಿ ಹಾಗೂ ಸಂಘ ಪರಿವಾರದ ನಡೆ ನೋಡಿದರೆ ಗುರಿ ಮಾತ್ರ ಮುಖ್ಯ, ಗುರಿಯೆಡೆಗೆ ಸಾಗುವ ದಾರಿ ಅನೈತಿಕವಾದರೂ ಪರವಾಗಿಲ್ಲ ಎಂಬುದು ಎದ್ದು ಕಾಣುತ್ತದೆ. ನಿಜವಾಗಿ ಇವರಿಗೆ ಜನಸಾಮಾನ್ಯರ ಬಗ್ಗೆ ಕಾಳಜಿ ಇದ್ದರೆ ಈ ರೀತಿಯ ಅನೈತಿಕ ಮೂಲದಿಂದ ಹಣ ಪಡೆದು ಅದನ್ನು ನೀರಿನಂತೆ ರ್ಯಾಲಿಗಳಿಗೆ ಚೆಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕ ಮಾಡುತ್ತಿರಲಿಲ್ಲ. ಮೋದಿಯ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಬಂದರೆ ದೇಶವು ಸಾಮಾಜಿಕವಾಗಿ ಇನ್ನಷ್ಟು ಕರ್ಮಠವಾಗಿ ಬದಲಾಗಲಿದೆ. ಕಂದಾಚಾರ ಹಾಗೂ ಅರ್ಥಹೀನ ಸಂಪ್ರದಾಯಗಳಿಗೆ ಹಾಗೂ ಜ್ಯೋತಿಷ್ಯ, ವಾಸ್ತುವಿನಂಥ ಮೂಢನಂಬಿಕೆಗಳಿಗೆ ಹಾಗೂ ಪುರೋಹಿತಶಾಹಿ ಕರ್ಮಕಾಂಡಗಳಿಗೆ ಸರ್ಕಾರದ ಮಟ್ಟದಲ್ಲಿ ಹೆಚ್ಚಿನ ಉತ್ತೇಜನ ದೊರೆಯುವುದು ಖಚಿತ. ಹೆಸರಿಗೆ ಮೋದಿ ಪ್ರಧಾನಮಂತ್ರಿಯಾದರೂ ಸಂಘ ಪರಿವಾರ ಸೂಪರ್ ಪ್ರಧಾನಮಂತ್ರಿಯ ಪಾತ್ರವನ್ನು ನಿರ್ವಹಿಸಲಿದೆ. ಈಗ ದೇಶಾದ್ಯಂತ ನಡೆಯುತ್ತಿರುವ ಮೋದಿಯ ಅತ್ಯಂತ ದುಬಾರಿ ವೆಚ್ಚದ ಮಹಾರ್ಯಾಲಿಗಳಿಗೆ ಜನರನ್ನು ಕರೆತರುತ್ತಿರುವುದು ದೇಶಾದ್ಯಂತ ಇರುವ ಸಂಘ ಪರಿವಾರವೇ ಆಗಿದೆ. ಹೀಗಾಗಿ ಮೋದಿ ಪ್ರಧಾನಿಯಾದರೆ ಅದರಲ್ಲಿ ತನ್ನ ಪಾತ್ರವೇ ಹೆಚ್ಚು ಇದೆ ಎಂದು ಮೋದಿಯನ್ನು ಬದಿಗೆ ತಳ್ಳಿ ಸಂಘ ಪರಿವಾರ ದೇಶದ ಆಡಳಿತದಲ್ಲಿ ಮೂಗು ತೋರಿಸುವುದು ಹಾಗೂ ಆಜ್ಞೆಗಳನ್ನು ವಿಧಿಸುವುದು ಖಚಿತ. ಇದನ್ನು ಮೋದಿ ಪಾಲಿಸಲೇಬೇಕಾದೀತು ಏಕೆಂದರೆ ಮೋದಿಯನ್ನು ಪ್ರಧಾನ ಮಂತ್ರಿಯ ಸ್ಥಾನಕ್ಕೆ ತರುವಲ್ಲಿ ಸಂಘದ ಪಾತ್ರವೇ ಪ್ರಧಾನ. ಮೋದಿಯ ಮಹಾರ್ಯಾಲಿಗಳಿಗೆ ದೇಶಾದ್ಯಂತ ಜನಬೆಂಬಲ ಇದೆ ಎಂಬ ರೀತಿಯಲ್ಲಿ ಕಂಡುಬಂದರೂ ಇವುಗಳಿಗೆ ಬರುವವರು ಹೆಚ್ಚಾಗಿ ಸಂಘದ ಹಾಗೂ ಬಿಜೆಪಿ ಕಾರ್ಯಕರ್ತರೇ ಹೊರತು ಜನಸಾಮಾನ್ಯರಲ್ಲ. ಕೇವಲ ಬಿಜೆಪಿಯ ಕಾರ್ಯಕರ್ತರು ಹಾಗೂ ಸಂಘ ಪರಿವಾರದ ಕಾರ್ಯಕರ್ತರ ಮತಗಳಿಂದಲೇ ರ್ಯಾಲಿ ನಡೆದ ಜಾಗಗಳಲ್ಲಿ ಗೆಲ್ಲಲು ಸಾಧ್ಯವಿಲ್ಲ ಏಕೆಂದರೆ ರ್ಯಾಲಿಗಳಿಗೆ modi-bjp-rallyಮೂರ್ನಾಲ್ಕು ಲಕ್ಷ ಜನ ಸೇರಿದರೂ ಮತದಾರರ ಸಂಖ್ಯೆ ಅದಕ್ಕಿಂತಲೂ ಹತ್ತಿಪ್ಪತ್ತು ಪಟ್ಟು ಅಧಿಕ ಇರುತ್ತದೆ. ಹೀಗಾಗಿ ಮೋದಿ ರ್ಯಾಲಿ ನಡೆಸಿದ ಸ್ಥಳಗಳಲ್ಲಿ ಸಂಘ ಪರಿವಾರದ ಜನ ಭಾರೀ ಸಂಖ್ಯೆಯಲ್ಲಿ ಸೇರಿದರೂ ಅಲ್ಲೆಲ್ಲ ಬಿಜೆಪಿ ಗೆಲ್ಲುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮೋದಿಯನ್ನು ಅಧಿಕಾರಕ್ಕೆ ತರುವುದೆಂದರೆ ಗೋಡ್ಸೆ ಸಿದ್ಧಾಂತಗಳನ್ನು ಬೆಂಬಲಿಸುವವರನ್ನು ಅಧಿಕಾರಕ್ಕೆ ತಂದಂತೆ. ಮೋದಿಯ ಬೆಂಬಲಕ್ಕೆ ನಿಂತಿರುವವರು ಗೋಡ್ಸೆಯ ಹಿಂಸೆಯ, ಕರ್ಮಠ ಸಿದ್ಧಾಂತಗಳ ಸನಾತನವಾದಿಗಳು. ಇದಕ್ಕೆದುರಾಗಿ ದೇಶವ್ಯಾಪಿ ಗಾಂಧೀಜಿಯವರ ಸಹನೆ, ಸಹೋದರತ್ವ, ಸಹಬಾಳ್ವೆಯ ಸಿದ್ಧಾಂತವನ್ನು ಹೊಂದಿರುವ ಆಮ್ ಆದ್ಮಿ ಪಕ್ಷವನ್ನು ಬೆಳೆಸಬೇಕಾಗಿದೆ. ಮುಂದಿನ ಮಹಾಚುನಾವಣೆ ಗಾಂಧಿ ಸಿದ್ಧಾಂತ ವರ್ಸಸ್ ಗೋಡ್ಸೆ ಸಿದ್ಧಾಂತದ ನಡುವಿನ ಹೋರಾಟದ ರೂಪ ಪಡೆಯುವಂತೆ ಮಾಡಬೇಕಾಗಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಇನ್ನೊಂದು ಪ್ರಧಾನ ಅಂಶವೆಂದರೆ ಧರ್ಮದ ಹೆಸರಿನಲ್ಲಿ ನಡೆಸುವ ಕೋಮುವಾದ. ಕೆಲವು ಪಕ್ಷಗಳು ಅಲ್ಪಸಂಖ್ಯಾತರ ಕೋಮುವಾದಕ್ಕೆ ಉತ್ತೇಜನ ನೀಡಿದರೆ ಬಿಜೆಪಿ ಹಾಗೂ ಸಂಘ ಪರಿವಾರ ಬಹುಸಂಖ್ಯಾತರ ಕೋಮುವಾದಕ್ಕೆ ಮೊದಲಿನಿಂದಲೂ ಉತ್ತೇಜನ ನೀಡುತ್ತಲೇ ಬಂದಿವೆ. ಧರ್ಮದ ಹೆಸರಿನಲ್ಲಿ ಕುರುಡಾಗಿ ಮತ ಚಲಾಯಿಸುವುದರಿಂದ ಪ್ರಜೆಗಳ ಮೂಲಭೂತ ಸಮಸ್ಯೆಗಳು ಗೌಣವಾಗಿ ಕಲ್ಪಿತ ಭೀತಿಯೇ ಮೇಲುಗೈ ಪಡೆದು ಪಟ್ಟಭದ್ರ ಹಿತಾಸಕ್ತಿಗಳು ಸುಲಭವಾಗಿ ಅಧಿಕಾರಕ್ಕೆ ಬಂದು ತಮ್ಮ ಅಜೆಂಡಾವನ್ನು ಜಾರಿಗೆ ತರಲು ಸಲೀಸಾಗುತ್ತದೆ. ಇದು ಬಹುಸಂಖ್ಯಾತ ದಮನಿತ, ಹಿಂದುಳಿದ, ಶೋಷಿತ ವರ್ಗಕ್ಕೆ ತಿಳಿಯುವುದೇ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಅಂಶಗಳಲ್ಲಿ ಜಾತಿ ರಾಜಕೀಯದ ಪಾತ್ರವೂ ಬಹಳಷ್ಟಿದೆ. ಜಾತಿ ರಾಜಕೀಯವನ್ನು ಹುಟ್ಟು ಹಾಕಿದ್ದು ಕಾಂಗ್ರೆಸ್ ಪಕ್ಷವಾಗಿದೆ. ಜಾತಿ ನೋಡಿ ಅಭ್ಯರ್ಥಿಗಳನ್ನು ನಿಲ್ಲಿಸುವ ಇಂಥ ಹೀನ ಪರಂಪರೆಯಿಂದ ಜನರ ನಿಜವಾದ ಸಮಸ್ಯೆಗಳು ಮರೆಯಾಗಿ ಜಾತಿಯೇ ಪ್ರಧಾನವಾಗಿ ಗೆದ್ದವರೇ ಮತ್ತೆ ಮತ್ತೆ ಗೆಲ್ಲುವುದರಿಂದ ಪ್ರಜಾಪ್ರಭುತ್ವ ಎಂಬುದು ಅರ್ಥಹೀನವಾಗಿಬಿಡುತ್ತದೆ. anna-kejriwalಜಾತಿ ರಾಜಕೀಯದ ಜೊತೆ ಅಲ್ಪಸಂಖ್ಯಾತರ ಮತಬ್ಯಾಂಕ್ ಕಾಂಗ್ರೆಸ್ಸಿನ ಜೊತೆ ಇದ್ದುದರಿಂದ ಕಾಂಗ್ರೆಸ್ ಮೊದಮೊದಲು ನಿರಾಯಾಸವಾಗಿ ಗೆಲ್ಲುತ್ತಿತ್ತು. ಪ್ರಾದೇಶಿಕ ಪಕ್ಷಗಳು ಬಲಗೊಂಡ ನಂತರ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ಸಿನ ರಾಜಕೀಯ ಪಾಠವನ್ನು ಅವುಗಳು ಕಲಿತುಕೊಂಡು ಕಾಂಗ್ರೆಸ್ಸನ್ನು ಹಿಮ್ಮೆಟ್ಟಿಸಿದವು. ಪ್ರಾದೇಶಿಕ ಪಕ್ಷಗಳು ಬಂದರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಧನಾತ್ಮಕ ಬದಲಾವಣೆಗಳು ಬರಲಿಲ್ಲ. ವ್ಯವಸ್ಥೆಯಲ್ಲಿ ಇರುವ ಲೋಪಗಳನ್ನು ಸರಿಪಡಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವುದು ಯಾವುದೇ ರಾಜಕೀಯ ಪಕ್ಷಗಳಿಗೂ ಬೇಕಾಗಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಆಮ್ ಆದ್ಮಿ ಪಕ್ಷವು ತನ್ನ ಗುರಿಗಳಲ್ಲಿ ವ್ಯವಸ್ಥೆ ಬದಲಾವಣೆಯನ್ನು ಪ್ರಧಾನವಾಗಿ ಇರಿಸಿಕೊಂಡಿದೆ. ಇದರ ಅಂಗವಾಗಿ ಬಲಿಷ್ಠ ಲೋಕಪಾಲ್ ಮಸೂದೆ ತಂದು ಭ್ರಷ್ಟಾಚಾರವನ್ನು ನಿಯಂತ್ರಿಸಿದರೆ ದೇಶದಲ್ಲಿ ಬದಲಾವಣೆ ಬರಲಿದೆ. ಬೇಲಿಯೇ ಇಲ್ಲದಿದ್ದರೆ ಹೊಲಕ್ಕೆ ನುಗ್ಗಿ ಬೇಕಾದಷ್ಟು ಮೇಯಲು ದನಕರುಗಳಿಗೆ ಸುಲಭವಾಗುತ್ತದೆ. ಲೋಕಾಯುಕ್ತ ಎಂಬುದು ಒಂದು ಬೇಲಿಯಂತೆ ಕೆಲಸ ಮಾಡಲಿದೆ. ಬಲಿಷ್ಠ ಲೋಕಪಾಲ ವ್ಯವಸ್ಥೆ ಬಂದರೆ ಆ ಬೇಲಿಯನ್ನು ಹಾರಿ ಬಂದು ಸಿಕ್ಕಿಬೀಳದೆ ಮೇಯುವುದು ಸಾಧ್ಯವಾಗುವುದಿಲ್ಲ. ವ್ಯವಸ್ಥೆ ಬದಲಾವಣೆಯ ಅಂಗವಾಗಿ ಚುನಾವಣಾ ಸುಧಾರಣೆ ತರುವುದು, ಕೆಲಸ ಮಾಡದ ಬೇಜವಾಬ್ದಾರಿಯುತ ಜನಪ್ರತಿನಿಧಿಗಳನ್ನು ವಾಪಸ್ ಕರೆಸಿಕೊಳ್ಳುವುದು, ಕಣದಲ್ಲಿ ಯೋಗ್ಯ ಅಭ್ಯರ್ಥಿ ಇಲ್ಲದಿದ್ದರೆ ಚುನಾವಣೆಗಳಲ್ಲಿ ‘ಯಾರಿಗೂ ಇಲ್ಲ’ ಎಂಬ ಮತ ನೀಡುವ ಅವಕಾಶ ಹಾಗೂ ಈ ರೀತಿ ‘ಯಾರಿಗೂ ಇಲ್ಲ’ ಎಂಬ ಮತಗಳು ಒಂದು ಕ್ಷೇತ್ರದಲ್ಲಿ ಗೆದ್ದ ಅಭ್ಯರ್ಥಿಯು ಪಡೆದ ಮತಗಳಿಗಿಂತ ಹೆಚ್ಚಾಗಿದ್ದಲ್ಲಿ ಮರುಮತದಾನ ನಡೆಸುವ ಕುರಿತು ಹಾಗೂ ಮೊದಲು ನಿಂತ ಅಭ್ಯರ್ಥಿಗಳು ಮತ್ತೆ ಚುನಾವಣೆಗೆ ನಿಲ್ಲದಂತೆ ನಿರ್ಬಂಧ ಹೇರುವ ಕಾನೂನು ಸುಧಾರಣೆ ತರುವುದು, ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣೆ ತಂದು ಶೀಘ್ರ ನ್ಯಾಯ ದೊರಕುವ ವ್ಯವಸ್ಥೆಗೆ ಬೇಕಾದ ಕಾನೂನು ಬದಲಾವಣೆಗಳನ್ನು ತರುವುದು, ಜನತೆಯ ಅಪೇಕ್ಷೆಗೆ ಅನುಗುಣವಾಗಿ ಕಾಲಕಾಲಕ್ಕೆ ಕಾನೂನುಗಳಲ್ಲಿ ಸೂಕ್ತ ಬದಲಾವಣೆಗಳನ್ನು ತರುವುದು ಇವೇ ಮೊದಲಾದ ವ್ಯವಸ್ಥೆ ಬದಲಾವಣೆಗೆ ಬೇಕಾದ ಕ್ರಮಗಳನ್ನು ಕೈಗೊಳ್ಳುವ ಅಜೆಂಡಾವನ್ನು ಆಮ್ ಆದ್ಮಿ ಪಕ್ಷವು ಹೊಂದಿದೆ. ಹೀಗಾಗಿ ಇದು ಇಂದು ಭಾರತದಲ್ಲಿ ಇರುವ ಪಕ್ಷಗಳಲ್ಲಿಯೇ ಅತ್ಯಂತ ಹೆಚ್ಚು ಪ್ರಜಾಸತ್ತಾತ್ಮಕ ಹಾಗೂ ಉತ್ತಮ ಪಕ್ಷ ಎಂಬುದರಲ್ಲಿ ಸಂದೇಹವಿಲ್ಲ. ಆಮ್ ಆದ್ಮಿ ಪಕ್ಷವು ಚುನಾವಣೆಗಳಲ್ಲಿ ಬಲಿಷ್ಠ ಲೋಕಪಾಲ್ ಮಸೂದೆಯ ಜೊತೆ ಜೊತೆಗೆ ಮೇಲ್ಕಾಣಿಸಿದ ವ್ಯವಸ್ಥೆಯ ಬದಲಾವಣೆಯ ವಿಚಾರಗಳನ್ನು ಪ್ರಮುಖವಾಗಿ ಜನರ ಮುಂದೆ ಇಡಬೇಕಾಗಿದೆ. ಇದರಿಂದ ಪಕ್ಷವು ದೇಶಾದ್ಯಂತ ಬೆಳೆಯಲು ಅನುಕೂಲವಾಗಲಿದೆ.

ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಆಡಳಿತದಲ್ಲಿದ್ದಾಗ ಕೆಲವು ಸಣ್ಣ ತಪ್ಪುಗಳನ್ನು ಮಾಡಿದೆ. ಉದಾಹರಣೆಗೆ ಕಾನೂನು ಸಚಿವರಾಗಿದ್ದ ಸೋಮನಾಥ ಭಾರತಿ ನಡುರಾತ್ರಿ ಕಾನೂನು ಕೈಗೆ ತೆಗೆದುಕೊಂಡು ವಿದೇಶಿ ಮಹಿಳೆಯರ ಜೊತೆ ತನ್ನ ಬೆಂಬಲಿಗರೊಡಗೂಡಿ ಅನುಚಿತವಾಗಿ ನಡೆದುಕೊಂಡದ್ದು, ಮುಖ್ಯಮಂತ್ರಿಯಾಗಿ ಅರವಿಂದ ಕೇಜ್ರಿವಾಲ್ ದೆಹಲಿ ಪೊಲೀಸ್ ವ್ಯವಸ್ಥೆಯನ್ನು ದೆಹಲಿ ಸರ್ಕಾರದ ಅಧೀನಕ್ಕೆ ಕೊಡಬೇಕೆಂದು ತನ್ನ ಸಚಿವರೊಡಗೂಡಿ ನಿಷೇಧಾಜ್ಞೆ ಇರುವ ಜಾಗದಲ್ಲಿ ಧರಣಿ ನಡೆಸಿದ್ದು ಇವೆಲ್ಲ ಬಹಳ ದೊಡ್ಡ ತಪ್ಪುಗಳೇನೂ ಅಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ಸಿಗರು ರಾಜಕೀಯ ಲಾಭ ಪಡೆಯಲು ನಡೆಸಿದ ಕೋಮು ಗಲಭೆಗಳಂತೆ ಆಮ್ ಆದ್ಮಿ ಪಕ್ಷದವರು ನೂರಾರು ಜನರ ಪ್ರಾಣ ತೆಗೆಯುವ ಹಿಂಸಾಚಾರಗಳಿಗೆ ಕುಮ್ಮಕ್ಕು ಕೊಟ್ಟಿಲ್ಲ. ಆಮ್ ಆದ್ಮಿ ಪಕ್ಷದ ಅರಾಜಕತೆಯ ಬಗ್ಗೆ ಮಾಧ್ಯಮಗಳಲ್ಲಿ ದೊಡ್ಡದಾಗಿ ಬೊಬ್ಬೆ ಹಾಕುವವರು ಕಾಂಗ್ರೆಸ್ ಹಾಗೂ ಬಿಜೆಪಿಗಳು ರಾಜಕೀಯ ಕಾರಣಗಳಿಗಾಗಿ ನಡೆಸಿದ ಹಿಂಸಾಚಾರಗಳ ಬಗ್ಗೆ ಚಕಾರ ಎತ್ತುವುದಿಲ್ಲ. ಆಮ್ ಆದ್ಮಿ ಪಕ್ಷ ನಡೆಸಿದ ಧರಣಿಯಲ್ಲಿ ಯಾರ ಪ್ರಾಣ ಹೋಗದಿದ್ದರೂ ಆಕಾಶವೇ ತಲೆಯ ಮೇಲೆ ಕಳಚಿಬಿದ್ದಂತೆ ಅರಾಜಕತೆ ಅರಾಜಕತೆ ಎಂದು ಬೊಬ್ಬೆ ಹೊಡೆಯುವುದನ್ನು ನೋಡಿದರೆ ನಗಬೇಕೋ ಅಳಬೇಕೋ ಗೊತ್ತಾಗುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕಂತೂ ಮೊದಮೊದಲು 50-60ರ ದಶಕದಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ಸುಧಾರಣೆಗಳನ್ನು ತರಲು ಬೇಕಾದ ಮೂರನೇ ಎರಡು ಬಹುಮತ ಇತ್ತು. ಹೀಗಿದ್ದರೂ ಆ ಪಕ್ಷ ಸೂಕ್ತ ಕಾನೂನುಗಳನ್ನು ರೂಪಿಸುವ ಇಚ್ಛಾಶಕ್ತಿಯನ್ನು ತೋರಿಸಲಿಲ್ಲ. ಇದು ಕಾಂಗ್ರೆಸ್ ಪಕ್ಷದ ನಾಯಕತ್ವದ ದೂರದೃಷ್ಟಿಯ ಕೊರತೆ, ಒಳ್ಳೆಯತನದ ಕೊರತೆಯನ್ನು ತೋರಿಸುತ್ತದೆ. ಕಾಂಗ್ರೆಸ್ ಪಕ್ಷವು ನೆಹರೂ ಕುಟುಂಬದ ಒಡೆತನಕ್ಕೆ ಸಿಕ್ಕಿದ ನಂತರವಂತೂ ದೇಶದಲ್ಲಿ ಭ್ರಷ್ಟಾಚಾರ ಮೇರೆ ಮೀರಿದೆ. ಇಂದಿರಾ ಗಾಂಧಿಯವರು ಭ್ರಷ್ಟಾಚಾರ ಜಾಗತಿಕ ವಿದ್ಯಮಾನ ಎಂದು ಹೇಳಿ ಅದರ ಬಗ್ಗೆ ಹಗುರ ಭಾವನೆ ಹೊಂದಿದ್ದರು. ಇಂಥ ಹಗುರ ಭಾವನೆ ನಾಯಕರಾದವರಿಗೆ ಯೋಗ್ಯವಾದದ್ದಲ್ಲ. ಇಂದಿರಾ ಗಾಂಧಿಯ ನಂತರ ಬಂದ ರಾಜೀವ ಗಾಂಧಿಗೂ ಚಿಂತನೆಯ ಕೊರತೆ ಇತ್ತು. rahul_priyanka_soniaರಾಜೀವ ಗಾಂಧಿಯವರಿಗೂ ದೇಶದಲ್ಲಿ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಕಾನೂನು ರೂಪಿಸಲು ಮೂರನೇ ಎರಡು ಬಹುಮತ ಇತ್ತು ಆದರೂ ಅವರಲ್ಲಿ ದಿಟ್ಟ ನಾಯಕತ್ವ ಹಾಗೂ ಚಿಂತನೆಯ ಕೊರತೆಯಿಂದ ಅಂಥ ಅವಕಾಶವೊಂದು ವ್ಯರ್ಥವಾಯಿತು. ವರ ನಂತರ ಕಾಂಗ್ರೆಸ್ಸನ್ನು ಮುನ್ನಡೆಸಿದ ಸೋನಿಯಾ ಗಾಂಧಿಯವರಿಗೂ ದಿಟ್ಟ ರಾಜಕೀಯ ಚಿಂತನೆ ಇಲ್ಲ. ವಾಸ್ತವವಾಗಿ ನೆಹರೂ ವಂಶದ ಹೆಸರಿನಲ್ಲಿ ಭ್ರಷ್ಟರು ಕಾಂಗ್ರೆಸ್ಸನ್ನು ನಿಯಂತ್ರಿಸುತ್ತಿದ್ದಾರೆ. ಇದು ಇಂದು ಕಾಂಗ್ರೆಸ್ ನೇತೃತ್ವ ವಹಿಸಿಕೊಳ್ಳಲು ಸಿದ್ಧವಾಗಿರುವ ರಾಹುಲ್ ಗಾಂಧಿಗೂ ಅನ್ವಯಿಸುತ್ತದೆ. ಅಧಿಕಾರ ಹೋದರೆ ಹೋಗಲಿ, ಅಧಿಕಾರ ಮುಖ್ಯವಲ್ಲ, ವ್ಯವಸ್ಥೆಯಲ್ಲಿ ಧನಾತ್ಮಕ ಹಾಗೂ ಜನಪರ ಬದಲಾವಣೆ ತರುವುದು ಮುಖ್ಯ ಎಂಬ ದಿಟ್ಟ ಚಿಂತನೆ ರಾಹುಲ್ ಗಾಂಧಿಯಲ್ಲಿಯೂ ಇಲ್ಲ. ಹೀಗಾಗಿ ಭ್ರಷ್ಟಾಚಾರ ಹಾಗೂ ಭ್ರಷ್ಟಾಚಾರಿಗಳೊಂದಿಗೆ ಕಾಂಗ್ರೆಸ್ ಪದೇ ಪದೇ ರಾಜಿ ಮಾಡಿಕೊಳ್ಳುತ್ತಲೇ ಇಂದಿನ ಈ ದುರವಸ್ಥೆಯನ್ನು ತಲುಪಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ರಾಜೀವ ಗಾಂಧಿ, ಇಂದಿರಾ ಗಾಂಧಿ ಇವರಿಗೆ ಪಕ್ಷವನ್ನು ತಳಮಟ್ಟದಿಂದ ಹೊಸದಾಗಿ ಕಟ್ಟಿ ಬೆಳೆಸುವ ಅತ್ಯಂತ ಕಠಿಣ ಸವಾಲು ಇರಲೇ ಇಲ್ಲ. ಅನುವಂಶೀಯವಾಗಿ ರಾಜರು ಅದಾಗಲೇ ಇಡೀ ದೇಶದಲ್ಲಿ ಕಾರ್ಯಕರ್ತರ ಪಡೆಯನ್ನು ಹೊಂದಿರುವ ಪಕ್ಷದ ಚುಕ್ಕಾಣಿ ಹಿಡಿದರೂ ಭ್ರಷ್ಟಾಚಾರದ ವಿಷಯದಲ್ಲಿ ಇವರ್ಯಾರೂ ದಿಟ್ಟ ನಿಲುವು ತೆಗೆದುಕೊಳ್ಳಲಿಲ್ಲ. ಇವರಿಗೆ ಹೋಲಿಸಿದರೆ ಅರವಿಂದ ಕೇಜ್ರಿವಾಲ್ ದಿಟ್ಟ ಚಿಂತನೆ ಉಳ್ಳ, ದೃಢವಾದ ನಿಲುವು ಉಳ್ಳ ನಾಯಕ ಎನ್ನಲು ಅಡ್ಡಿ ಇಲ್ಲ. ಇವರು ಪಕ್ಷವನ್ನು ಸೊನ್ನೆಯಿಂದ ಆರಂಭಿಸಿ ಕಟ್ಟಿ ಅದನ್ನು ದೇಶವ್ಯಾಪಿ ಬೆಳೆಸುವ ಅತ್ಯಂತ ಕಠಿಣ ಸವಾಲು ಹೊಂದಿದ್ದಾರೆ. ಈಗಾಗಲೇ ಇರುವ ಎರಡು ಬಲಿಷ್ಠ ರಾಷ್ಟ್ರೀಯ ಪಕ್ಷಗಳು ಹಾಗೂ ಅಲ್ಲಲ್ಲಿ ಇರುವ ಪಾಳೇಗಾರಿಕೆಯ ಪ್ರತಿರೂಪದಂತಿರುವ ಪ್ರಾದೇಶಿಕ ಪಕ್ಷಗಳ ಜೊತೆ ಸೆಣಸಿ ಅವರು ಪಕ್ಷವನ್ನು ಬೆಳೆಸಬೇಕಾಗಿದೆ. ಅದೇ ರೀತಿ ಪಕ್ಷಕ್ಕೆ ಬರುತ್ತಿರುವ ಜನಸಾಮಾನ್ಯರ ದೇಣಿಗೆಯಲ್ಲಿಯೂ ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ದಿಢೀರ್ ಹೆಚ್ಚಳ ಕಂಡುಬಂದಿದೆ. ಪಕ್ಷಕ್ಕೆ ಬರುತ್ತಿದ್ದ ಜನತೆಯ ದೇಣಿಗೆಯಲ್ಲಿಯೂ ಸೋಮನಾಥ ಭಾರತಿ ಪ್ರಕರಣ ಹಾಗೂ ಕೇಜ್ರಿವಾಲ್ ಧರಣಿ ಪ್ರಕರಣದ ನಂತರ ತೀವ್ರ ಕುಸಿತ ಕಂಡುಬಂದಿತ್ತು.

ಆಮ್ ಆದ್ಮಿ ಪಕ್ಷವು ತನ್ನನ್ನು ತಾನು ತಪ್ಪು ಮಾಡದಂತೆ ರಕ್ಷಿಸಿಕೊಳ್ಳಲು ಗಟ್ಟಿಯಾದ ಆಂತರಿಕ ಲೋಕಪಾಲ್ ವ್ಯವಸ್ಥೆಯನ್ನು ಹೊಂದಬೇಕಾಗಿದೆ. ಈ ಕುರಿತು ಪಕ್ಷದಲ್ಲಿ ವ್ಯವಸ್ಥೆ ಇದ್ದರೂ ಇದು ಸೋಮನಾಥ ಭಾರತಿ ವಿಷಯದಲ್ಲಿ ನಿಷ್ಕ್ರಿಯವಾಗಿದ್ದಂತೆ ಕಂಡುಬರುತ್ತದೆ. ಪಕ್ಷಕ್ಕೆ ಸೇರಿರದ ಸಮಾಜ ಸುಧಾರಕರು, ಸಮಾಜ ಸೇವಕರು, ವಿಜ್ಞಾನಿಗಳ ವಲಯದ ಕನಿಷ್ಠ ಮೂರು ಮಂದಿ ಸಾಧಕರನ್ನು ಪಕ್ಷದ ಆಂತರಿಕ ಲೋಕಪಾಲ ವ್ಯವಸ್ಥೆಯೊಳಗೆ ಸೇರಿಸಿಕೊಳ್ಳುವುದು ಉತ್ತಮ. ಇವರು ಪಕ್ಷವು ತಪ್ಪು ಮಾಡದಂತೆ ಹದ್ದಿನ ಕಣ್ಣು ಇಟ್ಟು ಕಾಯುತ್ತಿರಬೇಕು ಮತ್ತು ಪಕ್ಷವು ತಪ್ಪು ಮಾಡಿದಾಗ ನಿರ್ದಾಕ್ಷಿಣ್ಯವಾಗಿ ಪಕ್ಷವನ್ನು ಎಚ್ಚರಿಸಬೇಕು. ಹೀಗೆ ಮಾಡಿದರೆ ಪಕ್ಷವು ತಪ್ಪು ಮಾಡುವುದನ್ನು ತಡೆಯಬಹುದು ಅಥವಾ ಕಡಿಮೆ ಮಾಡಬಹುದು. ಉದಾಹರಣೆಗೆ ಕರ್ನಾಟಕದ ಸಮಾಜ ಪರಿವರ್ತನ ಸಮುದಾಯದ hiremath-doreswamyಎಸ್. ಆರ್. ಹಿರೇಮಠರ ತರದ ನ್ಯಾಯಪರ ಹಾಗೂ ನಿಷ್ಪಕ್ಷಪಾತ ಜನರನ್ನು ಆಮ್ ಆದ್ಮಿ ಪಕ್ಷದ ಆಂತರಿಕ ಲೋಕಪಾಲ್ ವ್ಯವಸ್ಥೆ ಹೊಂದಬೇಕಾಗಿದೆ. ಇದರಿಂದ ಆಮ್ ಆದ್ಮಿ ಪಕ್ಷದ ವಿಶ್ವಾಸಾರ್ಹತೆ ಹೆಚ್ಚಬಹುದು. ಅಧಿಕಾರ ಎಂಬುದು ಮಾಯಾವಿ ಇದ್ದಂತೆ. ಇದರ ಸಂಪರ್ಕಕ್ಕೆ ಬಂದಂತೆ ಅಹಂಕಾರ, ದರ್ಪ, ಮಾತು ತಪ್ಪುವುದು, ಅಧಿಕಾರ ಉಳಿಸಿಕೊಳ್ಳುವ ಲಾಲಸೆ ಮೊದಲಾದ ಅವಗುಣಗಳು ಬೆಳೆಯಲಾರಂಭಿಸುತ್ತವೆ. ಇದನ್ನು ಮೀರಿ ನಿಲ್ಲಲು ಬಹಳ ದೃಢವಾದ ಮನೋಸ್ಥೈರ್ಯ ಬೇಕಾಗುತ್ತದೆ. ಹೀಗಾಗಿ ಆಮ್ ಆದ್ಮಿ ಪಕ್ಷ ಸಶಕ್ತ ಹಾಗೂ ದಿಟ್ಟ ನಿಲುವಿನ ಆಂತರಿಕ ಲೋಕಪಾಲ ವ್ಯವಸ್ಥೆಯನ್ನು ಬೇರೆ ಪಕ್ಷಗಳಿಗಿಂಥ ಭಿನ್ನ ಎಂಬುದನ್ನು ತೋರಿಸುವ ನಿಟ್ಟಿನಲ್ಲಿ ಹೊಂದುವುದು ಅತೀ ಅಗತ್ಯ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಸೂಕ್ತ ಬಹುಮತ ದೊರಕದ ಕಾರಣ ಅಧಿಕಾರ ವಹಿಸಿಕೊಳ್ಳುವ ಇಚ್ಛೆ ಹೊಂದಿರಲಿಲ್ಲ. ಕಾಂಗ್ರೆಸ್ ಪಕ್ಷ ಕೇಳದೆ ತಾನಾಗಿಯೇ ಬೆಂಬಲ ಕೊಡಲು ಮುಂದೆ ಬಂದು ಆಮ್ ಆದ್ಮಿ ಪಕ್ಷವನ್ನು ಇಕ್ಕಟ್ಟಿಗೆ ಸಿಕ್ಕಿಸಲು ಮುಂದಾದ ಕಾರಣ ಅದು ಅಧಿಕಾರ ವಹಿಸಿಕೊಳ್ಳಬೇಕಾಯಿತು. ಭ್ರಷ್ಟ ಕಾಂಗ್ರೆಸ್ಸಿನ ವಿರುದ್ಧ ಹೋರಾಡಿ ಅದರ ಬೆಂಬಲ ಪಡೆದು ಅಧಿಕಾರಕ್ಕೇರುವುದು ಆಮ್ ಆದ್ಮಿ ಪಕ್ಷಕ್ಕೆ ಮುಜುಗರದ ವಿಷಯವೇ ಆಗಿತ್ತು. ಕೊನೆಗೂ ಅದು ಲೋಕಪಾಲ್ ಮಸೂದೆಯ ನೆಪ ಹೇಳಿ ಕಾಂಗ್ರೆಸ್ ಬೆಂಬಲದ ಸರ್ಕಾರದಿಂದ ಹೊರಬಂದು ಸರಿಯಾದ ದಾರಿಯನ್ನೇ ಆಯ್ಕೆ ಮಾಡಿಕೊಂಡಿದೆ. ಭ್ರಷ್ಟ ಕಾಂಗ್ರೆಸ್ ಬೆಂಬಲದ ಸರ್ಕಾರ ನಡೆಸುತ್ತ ಲೋಕಸಭಾ ಚುನಾವಣೆಯಲ್ಲಿ ದೇಶವ್ಯಾಪಿ ಪಕ್ಷಕ್ಕೆ ಜನಬೆಂಬಲ ಗಳಿಸಿಕೊಳ್ಳುವುದು ಸಾಧ್ಯವಿರಲಿಲ್ಲ ಏಕೆಂದರೆ ಈಗ ದೇಶದಲ್ಲಿ ಭ್ರಷ್ಟ ಕಾಂಗ್ರೆಸ್ ವಿರುದ್ಧ ಬಹಳ ಬಲವಾದ ಕಾಂಗ್ರೆಸ್ ವಿರೋಧಿ ಅಲೆ ಇದೆ. ಇಂಥ ಸಂದರ್ಭದಲ್ಲಿ ಕಾಂಗ್ರೆಸ್ ಜೊತೆಗೂಡಿದ ಪಕ್ಷಗಳಿಗೂ ಇದರ ಬಿಸಿ ತಟ್ಟುವುದರಲ್ಲಿ ಸಂದೇಹವೇ ಇಲ್ಲ. ಇದನ್ನು ಸೂಕ್ಷ್ಮವಾಗಿ ಗ್ರಹಿಸಿದ ಕುಶಾಗ್ರಮತಿ ಕೇಜ್ರಿವಾಲ್ ಭ್ರಷ್ಟ ಕಾಂಗ್ರೆಸ್ ಬೆಂಬಲದ ಸರಕಾರದಿಂದ ಉಪಾಯವಾಗಿ ಲೋಕಪಾಲ್ ಮಸೂದೆ ಮಂಡನೆಯ ವಿಷಯ ಇಟ್ಟುಕೊಂಡು ಪಾರಾಗಿದ್ದಾರೆ. ಕಾಂಗ್ರೆಸ್ ಬೆಂಬಲ ಪಡೆದು ದೆಹಲಿಯಲ್ಲಿ ಸರ್ಕಾರ ರಚಿಸಿದ ನಂತರ ಸಾಕಷ್ಟು ಜನ ಆಮ್ ಆದ್ಮಿ ಪಕ್ಷದ ಬಗ್ಗೆ ಸಿಟ್ಟಾಗಿ ದೂರ ಹೋಗಿದ್ದರು. ಕಾಂಗ್ರೆಸ್ ಬೆಂಬಲದಿಂದ ಹೊರಬಂದು ಅಧಿಕಾರಕ್ಕೆ ಅಂಟಿಕೊಳ್ಳುವುದಿಲ್ಲ ಎಂದು ಕೇಜ್ರಿವಾಲ್ ಸಾಬೀತುಪಡಿಸಿದ ಕಾರಣ ಈ ರೀತಿ ಆಮ್ ಆದ್ಮಿ ಪಕ್ಷದಿಂದ ದೂರಾದವರು ಮತ್ತೆ ಪಕ್ಷದ ಕಡೆಗೆ ತಮ್ಮ ಬೆಂಬಲ ವ್ಯಕ್ತಪಡಿಸಲಾರಂಭಿಸಿದ್ದಾರೆ.

ಆಮ್ ಆದ್ಮಿ ಪಕ್ಷ ಲೋಕಸಭೆ ಚುನಾವಣೆಗಳಲ್ಲಿ ಎಷ್ಟು ಸ್ಥಾನ ಗೆಲ್ಲುತ್ತದೆ ಎಂಬುದು ಮುಖ್ಯವಲ್ಲ. ನೈತಿಕ ರಾಜಕೀಯದ ಹಾದಿಯ ಮೂಲಕ ಅದು ಎಷ್ಟೇ ಸ್ಥಾನಗಳನ್ನು ಗೆದ್ದರೂ ಅದು ವ್ಯವಸ್ಥೆಯ ಬದಲಾವಣೆಯ ಹಾದಿಯಲ್ಲಿ ಪ್ರಭಾವ ಬೀರುತ್ತದೆ. ದೇಶದಲ್ಲಿಯೇ ಅತ್ಯಂತ ಬಲಿಷ್ಠ ಹಾಗೂ ದೈತ್ಯ ಉದ್ಯಮಿ ಎನಿಸಿಕೊಂಡಿರುವ ಅಂಬಾನಿ ಮೇಲೆ ನೈಸರ್ಗಿಕ ಅನಿಲ ಬೆಲೆ ಹೆಚ್ಚಳದ ವಿಚಾರದಲ್ಲಿ ಹಾಗೂ ಒಪ್ಪಂದಗಳಿಗೆ ವಿರುದ್ಧವಾಗಿ ಉತ್ಪಾದನೆ ಕಡಿತಗೊಳಿಸಿ ಒತ್ತಡ ತಂತ್ರ ಅನುಸರಿಸಿದ್ದಕ್ಕಾಗಿ ಎಫ್ಐಆರ್ ಹಾಕುವ ಧೈರ್ಯ ತೋರಿಸುವ ಮೂಲಕ ಬಂಡವಾಳಶಾಹಿ-ರಾಜಕೀಯ ಪಕ್ಷಗಳ ನಡುವಿನ ಅನೈತಿಕ ಹೊಂದಾಣಿಕೆಯ ವಿರುದ್ಧ ಕೇಜ್ರಿವಾಲ್ ದಿಟ್ಟ ಕ್ರಮ ಕೈಗೊಂಡಿರುವುದು ದೇಶಕ್ಕೆ ಹೊಸ ಸಂದೇಶ ನೀಡಲಿದೆ. ಅನೈತಿಕ ಮಾರ್ಗಗಳ ಮೂಲಕ ಬಂಡವಾಳಶಾಹಿಗಳು ಆಡುವ ಆಟಗಳನ್ನು ತಾನು ತಡೆಯಬಲ್ಲೆ ಎಂಬ ದಿಟ್ಟ ಸಂದೇಶ ಇದರಿಂದ ಇಡೀ ದೇಶಕ್ಕೆ ಹೋಗಲಿದೆ. modi_ambani_tata_kamathಇಂಥ ಸಂದೇಶ ನೀಡುವವರು ದೇಶಕ್ಕೆ ಇಂದಿನ ಸಂದರ್ಭದಲ್ಲಿ ಅಗತ್ಯ ಇದೆ. ಇಂಥ ದಿಟ್ಟ ಸಂದೇಶ ನೀಡಿದ ರಾಜಕೀಯ ನಾಯಕರು ಸ್ವಾತಂತ್ರ್ಯಾನಂತರ ಇದುವರೆಗೆ ಯಾರೂ ಕಂಡುಬಂದಿರಲಿಲ್ಲ. ಭ್ರಷ್ಟಾಚಾರದ ಬಗ್ಗೆ ಬೊಬ್ಬಿರಿದು ಅಬ್ಬರಿಸುವ ಮೋದಿ ಕೂಡ ಇಂಥ ದಿಟ್ಟತನವನ್ನು ತೋರಿಲ್ಲ. ಹೀಗಾಗಿಯೇ ಕೇಜ್ರಿವಾಲ್ ಜನಸಾಮಾನ್ಯರಿಗೆ ಆಶಾಕಿರಣವಾಗಿ ಗೋಚರಿಸುತ್ತಾರೆ. ಇಂಥ ದಿಟ್ಟ ಕ್ರಮ ಕೈಗೊಳ್ಳುವ ಧೈರ್ಯ ನೀಡಿದ್ದು ಜನತೆಯ ನ್ಯಾಯಯುತ ದುಡಿಮೆಯ ದೇಣಿಗೆ ಪಡೆದು ಪಕ್ಷ ಕಟ್ಟುವ ನೈತಿಕ ನಿಲುವಿನಿಂದಲೇ ಹೊರತು ಬೇರಾವುದರಿಂದಲೂ ಅಲ್ಲ. ಬಂಡವಾಳಶಾಹಿಗಳ ಕಪ್ಪು ಹಾಗೂ ಅನೈತಿಕ ಹಣವನ್ನು ಪಡೆದು ಪಕ್ಷ ಕಟ್ಟುವ, ಚುನಾವಣೆ ಎದುರಿಸುವ ಯಾವ ರಾಜಕೀಯ ಪಕ್ಷಗಳೂ ಇಂಥ ಧೈರ್ಯ ತೋರಲು ಸಾಧ್ಯವಿಲ್ಲ. ಎಡ ಪಕ್ಷಗಳು ದೇಶದಲ್ಲಿ ಭ್ರಷ್ಟಾಚಾರಕ್ಕೆ ತೊಡಗದೆ ತಕ್ಕಮಟ್ಟಿಗೆ ನೈತಿಕತೆಯನ್ನು ಕಾಯ್ದುಕೊಂಡಿವೆ ಮತ್ತು ಅವುಗಳ ನಾಯಕರು ಸರಳ ಜೀವನವನ್ನು ಅಳವಡಿಸಿಕೊಂಡಿದ್ದಾರೆ. ಆದರೂ ಅವುಗಳನ್ನು ಜನ ಏಕೆ ಬೆಂಬಲಿಸುತ್ತಿಲ್ಲ ಎಂದರೆ ಅವುಗಳ ಅರ್ಥಿಕ ನೀತಿ ಅವುಗಳನ್ನು ಬೆಳೆಯದಂತೆ ತಡೆಯುತ್ತಿದೆ. ವಿಪರೀತ ಜನಸಂಖ್ಯೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಜನರ ಜೀವನ ಉತ್ತಮವಾಗಬೇಕಾದರೆ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಾಗಬೇಕು. ಎಡಪಕ್ಷಗಳ ಆರ್ಥಿಕ ನೀತಿ ಉದ್ಯೋಗಾವಕಾಶಗಳ ಹೆಚ್ಚಳಕ್ಕೆ ಪೂರಕವಾಗಿಲ್ಲ ಮತ್ತು ಉದ್ಯಮ, ವ್ಯಾಪಾರ ವಹಿವಾಟಿನ ಬೆಳವಣಿಗೆಗೆ ಪೂರಕವಾಗಿಲ್ಲ. ಎಡಪಕ್ಷಗಳು ಬಯಸುವ ಸಾಮಾಜಿಕ ಬದಲಾವಣೆಗೆ ನಮ್ಮ ದೇಶ ತಯಾರಾಗಿಲ್ಲ ಮಾತ್ರವಲ್ಲ ತಯಾರಾಗುವ ಲಕ್ಷಣಗಳೂ ಗೋಚರಿಸುತ್ತಿಲ್ಲ ಏಕೆಂದರೆ ಸಾಮಾಜಿಕ ಬದಲಾವಣೆ ಜರುಗಬೇಕಾದರೆ ಜನ ವೈಚಾರಿಕವಾಗಿ ಬೆಳೆಯಬೇಕು, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಸ್ವಾತಂತ್ರ್ಯ ದೊರೆತು 65 ವರ್ಷಗಳು ಕಳೆದರೂ ಜನರಲ್ಲಿ ವೈಚಾರಿಕತೆ ಬೆಳೆದಿಲ್ಲ. ಮೂಢನಂಬಿಕೆಗಳು ಹಾಗೂ ಪುರೋಹಿತಶಾಹಿ ಇಂದಿಗೂ ದೇಶವನ್ನು ಆಳುತ್ತಿವೆ. ಬಲವಾಗಿರುವ ಪುರೋಹಿತಶಾಹಿ ವ್ಯವಸ್ಥೆಯೇ ನಮ್ಮ ದೇಶಕ್ಕೆ ದೊಡ್ಡ ಶಾಪ. ಸ್ವಾಮಿ ವಿವೇಕಾನಂದರು ಪುರೋಹಿತಶಾಹಿ ವ್ಯವಸ್ಥೆಯ ಮೂಲೋತ್ಪಾಟನೆ ಮಾಡಬೇಕು ಎಂದು ಕರೆಕೊಟ್ಟಿದ್ದರೂ ನಮ್ಮ ದೇಶದಲ್ಲಿ ಇದನ್ನು ಪಾಲಿಸುವವರು ಈ ಕುರಿತು ಜನರನ್ನು ಎಚ್ಚರಿಸುವವರು ಇಲ್ಲ. ಹೀಗಾಗಿ ದೇಶದಲ್ಲಿ ಎಡಪಕ್ಷಗಳು ಬೆಳವಣಿಗೆ ಕಾಣುತ್ತಿಲ್ಲ. ಆಲಸ್ಯ, ಜವಾಬ್ದಾರಿಯ ಕೊರತೆ, ಭ್ರಷ್ಟ ವ್ಯವಸ್ಥೆಯಿಂದಾಗಿ ಸಾರ್ವಜನಿಕ ರಂಗದ ಉದ್ಯಮಗಳು ನಮ್ಮ ದೇಶದಲ್ಲಿ ಲಾಭಕರವಾಗಿ ನಡೆಯುತ್ತಿಲ್ಲ. ಹೀಗಾಗಿ ಎಡ ಪಕ್ಷಗಳು ಬಯಸುವ ಆರ್ಥಿಕ ನೀತಿಗಳು ಜನತೆಯನ್ನು ಆಕರ್ಷಿಸುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ಕೇಜ್ರಿವಾಲರು ಆರಿಸಿಕೊಂಡಿರುವ ಮಧ್ಯಮ ಮಾರ್ಗವೇ ಸೂಕ್ತವಾಗಿದೆ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟ ಪಕ್ಷವನ್ನು ದೇಶವ್ಯಾಪಿ ಬೆಳೆಸಲು ವೇದಿಕೆ ಒದಗಿಸುತ್ತದೆ ಏಕೆಂದರೆ ಭ್ರಷ್ಟಾಚಾರ ದೇಶವ್ಯಾಪಿ ದುಷ್ಪರಿಣಾಮ ಬೀರುತ್ತದೆ ಹಾಗೂ ಜನತೆಯ ಬವಣೆಗೆ ಕಾರಣವಾಗಿದೆ. ಹೀಗಾಗಿ ಇದರ ವಿರುದ್ಧ ದೇಶವ್ಯಾಪಿ ಜನರನ್ನು ಒಗ್ಗೂಡಿಸಬಹುದು. ಅಧಿಕಾರಕ್ಕಾಗಿ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳದೆ ದೃಢ ನಿಲುವನ್ನು ತಳೆಯುವುದರಿಂದ ಆಮ್ ಆದ್ಮಿ ಪಕ್ಷ ನಿಧಾನವಾಗಿ ಒಂದು ರಾಷ್ಟ್ರೀಯ ಪರ್ಯಾಯವಾಗಿ ಬೆಳೆಯಬಲ್ಲದು.

6 thoughts on “ಆಮ್ ಆದ್ಮಿ ಪಕ್ಷ – ನೈಜ ಪ್ರಜಾಪ್ರಭುತ್ವ ವ್ಯವಸ್ಥೆಯ ನಿರ್ಮಾಣದ ದಿಕ್ಕಿನಲ್ಲಿ ದಿಟ್ಟ ಹೆಜ್ಜೆ

  1. Srini

    I had donated 5000 Rs when movement started. Now I totally regret for whatever I have done after seeing what they are doing now. They are UNFIT rule…only fit to protest. My hard earned money gone for a toss 🙁

    Reply
  2. Ananda Prasad

    ಆಮ್ ಆದ್ಮಿ ಪಕ್ಷವು ಒಂದು ಪೂರ್ಣ ರಾಜ್ಯದಲ್ಲಿ (ದೆಹಲಿಯಂಥ ಅರೆ ಕೇಂದ್ರಾಡಳಿತ ರಾಜ್ಯದಲ್ಲಿ ಅಲ್ಲ) ಪೂರ್ಣ ಬಹುಮತ ಪಡೆದು ಒಂದು ಅವಧಿಗೆ ಆಡಳಿತ ನಡೆಸಿದ ನಂತರವಷ್ಟೇ ಅದು ಆಳಲು ಯೊಗ್ಯವೊ ಅಯೊಗ್ಯವೊ ಎಂದು ನಿರ್ಣಯಿಸಲು ಸಾಧ್ಯ. ದೆಹಲಿಯಂಥ ಸಮರ್ಪಕ ಅಧಿಕಾರ ಇಲ್ಲದ ರಾಜ್ಯದಲ್ಲಿ ಅದಕ್ಕೆ ಬಹುಮತ ನೀಡದೆ ಅದು ಆಳಲು ಯೋಗ್ಯವಲ್ಲ ಎಂದು ನಿರ್ಣಯಿಸುವುದು ಅವಸರದ ನಿರ್ಣಯವಾಗುತ್ತದೆ. ಸದ್ಯಕ್ಕೆ ಇರುವ ಪಕ್ಷಗಳಲ್ಲಿ ವ್ಯವಸ್ಥೆ ಬದಲಾವಣೆಯ ಗುರಿಗಳಿರುವ ಹಾಗೂ ಹೆಚ್ಚು ಪಾರದರ್ಶಕ ನೀತಿಗಳನ್ನು ಹೊಂದಿರುವ ಪಕ್ಷ ಇದುವೇ ಆಗಿದೆ.

    Reply
  3. Ananda Prasad

    ಗುಜರಾತಿನ ವಡೋದರಾದಲ್ಲಿ ಫೆಬ್ರವರಿ ೧೪ರಂದು ಹೊಸ ಸ್ಟೇಡಿಯಂ ಒಂದರ ಉದ್ಘಾಟನೆಯ ಸಂದರ್ಭ ನಡೆದ ಮೋದಿಯ ರ್ಯಾಲಿಯಲ್ಲಿ ಭಾಗವಹಿಸದ ಶಾಲೆಯೊಂದರ ಕೆಲವು ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ ಎಂಬ ವರದಿ ಇದೆ. ಈ ವಿಷಯದ ಕುರಿತು ಮಾಧ್ಯಮಗಳ ಜೊತೆ ಮಾತನಾಡದಂತೆಯೂ ವಿದ್ಯಾರ್ಥಿಗಳ ಪಾಲಕರಿಗೆ ಒತ್ತಡ ಹಾಕಲಾಗಿದೆಯಂತೆ. ರ್ಯಾಲಿ ನಡೆಯುವುದಕ್ಕೂ ಮೊದಲೇ ಶಾಲೆಯ ಆಡಳಿತದವರು ರ್ಯಾಲಿಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದು ಕಡ್ಡಾಯವೆಂದೂ, ಭಾಗವಹಿಸದ ವಿದ್ಯಾರ್ಥಿಗಳಿಗೆ ಮುಂದಿನ ಪರೀಕ್ಷೆಗಳಲ್ಲಿ ಸೂಕ್ತ ‘ಶಿಕ್ಷೆ’ ವಿಧಿಸಲಾಗುವುದೆಂದೂ ನೋಟಿಸ್ ಹೊರಡಿಸಿದ್ದರು ಎಂದು ವರದಿ ಹೇಳುತ್ತದೆ. ಈ ವಿಷಯ http://www.enewspaperofindia.com/ENIBureau/News/Students-suspended-for-not-attending-Modis-rally_news_4440.aspx ಇಲ್ಲಿ ವರದಿಯಾಗಿದೆ. ಮೋದಿಯ ಭಾರತ ಎತ್ತ ಸಾಗಬಹುದು ಎಂಬ ಒಂದು ಮುನ್ಸೂಚನೆಯನ್ನು ಇದು ಕೊಡುತ್ತದೆ.

    Reply
  4. kgbeuSrinivasamurthy

    ಆಮ್ ಆದ್ಮಿಯಲ್ಲಿರುವ ಬಿನಾಯಕ್ ಸೇನ್ ಯಾರು? ಅಂತವರು ಅಲ್ಲಿರುವುದರಿಂದ ಬಾರತಕ್ಕೆ ಏನು ಅನುಕೂಲ?

    Reply
    1. Ananda Prasad

      ಬಿನಾಯಕ್ ಸೇನ್ ಒಬ್ಬ ಮಕ್ಕಳ ತಜ್ಞ ವೈದ್ಯ, ಸಾರ್ವಜನಿಕ ಆರೋಗ್ಯದ ವಿಷಯದಲ್ಲಿ ತಜ್ಞ ಹಾಗೂ ಸಾಮಾಜಿಕ ಕಾರ್ಯಕರ್ತ ಮಾನವ ಹಕ್ಕುಗಳ ಕಾರ್ಯಕರ್ತ ಹಾಗೂ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷ. ಇವರು ಮಹಾತ್ಮಾ ಗಾಂಧಿ ಅಂತರರಾಷ್ಟ್ರೀಯ ಶಾಂತಿ ಪ್ರಶಸ್ತಿ ಹಾಗೂ ಹಲವು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಮಾಡಿದ ಕೆಲಸ, ಸಾಮಾಜಿಕ ಸೇವೆ, ಮಾನವ ಹಕ್ಕುಗಳ ವಿಷಯದ ಹೋರಾಟಗಳಿಗಾಗಿ ಪಡೆದಿದ್ದಾರೆ. ವೈದ್ಯ ಪದವಿ ಪಡೆದು ಹಣ ಮಾಡುವ ದಂಧೆಗೆ ಇಳಿಯದೆ ಆದಿವಾಸಿಗಳ ಆರೋಗ್ಯ ಸೇವೆಗಾಗಿ ತನ್ನ ಜ್ಞಾನವನ್ನು ಮುಡುಪಾಗಿಟ್ಟ ಶ್ರೇಷ್ಠ ವ್ಯಕ್ತಿ. ಇವರು ಆಮ್ ಆದ್ಮಿ ಪಕ್ಷದ ಯೋಜನೆಗಳ ನಿರೂಪಕರಲ್ಲಿ ಒಬ್ಬರು ಹಾಗೂ ಪೊಲೀಸ್ ಸುಧಾರಣೆಗಳ ಕುರಿತು ಪಕ್ಷದ ಯೋಜನೆಗಳ ಸಲಹೆಗಾರರು. ಇಂಥ ಶ್ರೇಷ್ಠ ವ್ಯಕ್ತಿಗಳ ಚಿಂತನೆ, ಜ್ಞಾನದ ಬಳಕೆಯಿಂದ ದೇಶಕ್ಕೆ ಬಹಳ ಉಪಯೋಗವಿದೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು, ಸಮರ್ಪಕವಾಗಿ ಕೆಲಸ ಮಾಡುವಂತೆ ಹೋರಾಟ ರೂಪಿಸಲು ಉಪಯೋಗ ಆದೀತು.

      Reply

Leave a Reply to Ananda Prasad Cancel reply

Your email address will not be published. Required fields are marked *