Daily Archives: February 20, 2014

ಮುಸ್ಲಿಂ ಸಮುದಾಯದಲ್ಲಿರುವ ಕೆಲವು ಶೋಷಕ ಮನಸ್ಥಿತಿಗಳ ವಿರುದ್ಧ ಧನಿಯೆತ್ತಬೇಕಿದೆ

– ಇರ್ಷಾದ್

ವಾರದ ಹಿಂದೆ ಬೆಳ್ತಂಗಡಿ ತಾಲೂಕಿನ ಸೌಜನ್ಯ ನಗರಕ್ಕೆ ಸುದ್ದಿ ಮಾಡುವ ಉದ್ದೇಶದಿಂದ ಕೆಲ ಸಂಗಾತಿಗಳೊಂದಿಗೆ ಭೇಟಿ ಕೊಟ್ಟಿದ್ದೆ . ನಿವೇಶನ ರಹಿತ ಬಡವರು ಭಾರತೀಯ ಕಮ್ಯುನಿಷ್ಟ್ ಪಕ್ಷ ( ಮಾರ್ಕಿಸ್ಟ್ ) ನೇತೃತ್ವದಲ್ಲಿ ಸರ್ಕಾರಿ ಜಮೀನಿನಲ್ಲಿ ಜೋಪುಡಿಯನ್ನು ಕಟ್ಟಿಕೊಂಡು ಅಲ್ಲೇ ವಾಸ್ತವ್ಯ ಹೂಡಿ ಹೋರಾಟ ನಡೆಸುತ್ತಿದ್ದಾರೆ. ಹಾಗೆ ಸೌಜನ್ಯ ನಗರಕ್ಕೆ ಒಂದು ಸುತ್ತು ಹಾಕಿದಾಗ ನನ್ನ ಕಣ್ಣಿಗೆ ಇಬ್ಬರು ಮುಸ್ಲಿಂ ಮಹಿಳೆಯರು ತಮ್ಮ ಪುಟಾಣಿ ಮಕ್ಕಳ ಜೊತೆಯಲ್ಲಿ ಕಂಡರು. ನಿವೇಶನ ರಹಿತ ಸುಮಾರು 60 ಬಡವರು ಕಟ್ಟಿದ ಜೋಪಡಿಯ ಪೈಕಿ ಆ ಎರಡು ಜೋಪಡಿಗಳ ಸ್ಥಿತಿ ಶೋಚನೀಯವಾಗಿತ್ತು. ಉಡುವ ಸೀರೆಯೇ ಜೋಪಡಿಯ ಗೋಡೆಯಾಗಿತ್ತು. ಹಾಗೆ ಹತ್ತಿರ ಹೋಗಿ ಮಾತನಾಡಿಸಿದಾಗ ಆ ಮಹಿಳೆ ಭಾವುಕಳಾಗಿ ತನ್ನ ಕಥೆಯನ್ನು ಬಿಚ್ಚಿಡತೊಡಗಿದಳು. ಆಕೆಯ ಹೆಸರು ಜೊಹರಾ. ಕಡು ಬಡತನದಲ್ಲೇ ಹುಟ್ಟಿ ಬೆಳೆದವಳು. ವಯಸ್ಸಿಗೆ ಬಂದಾಗ ಸಹಜವಾಗಿ ಎಲ್ಲಾ ಹೆಣ್ಣು ಮಕ್ಕಳು Indian-Povertyಕಾಣುವ ಕನಸನ್ನು ಕಣ್ತುಂಬಾ ಕಂಡವಳು. ಬಡತನ, ವರದಕ್ಷಿಣೆಯ ಭೂತದ ನಡುವೆಯೂ ತಾನು ಕನಸಲ್ಲಿ ಕಂಡ ಇನಿಯನಿಗಾಗಿ ಕಾಯುತಿದ್ದ ಆಕೆಯನ್ನು ಅದಾಗಲೇ ಮದುವೆಯಾಗಿದ್ದ ಪುರುಷನೊಬ್ಬನ ಜೊತೆ ಮನೆ ಮಂದಿ ಮದುವೆಮಾಡಿಕೊಟ್ಟರು. ಜೊಹರಾಳನ್ನು ಮದುವೆಯಾದ ಆ ಪುಣ್ಯಾತ್ಮ ಆಕೆಗೆ ಎರಡು ಮಕ್ಕಳನ್ನು ಕರುಣಿಸಿ ಕಣ್ಮರೆಯಾದ. ಜೊಹರಾಳ ನೋವಿನ ಕಥೆಯನ್ನು ದೂರದಲ್ಲೇ ನಿಂತುಕೊಂಡು ಗಮನಿಸುತಿದ್ದ ಆಕೆಯ ಸಹೋದರಿ ನಸೀಮಾ ಬಾನು ಬಳಿ ಹೋಗಿ ಮಾತಿಗಿಳಿದಾಗ ಆಕೆಯದ್ದೂ ಇಂಥಹದ್ದೇ ಕಣ್ಣೀರ ಕಥೆ. ಅಕ್ಕನ ಪಾಡೇ ಆಕೆಯ ಜೀವನದಲ್ಲಿ ಕೂಡಾ. ಮದುವೆಯಾದ ಗಂಡ ನಸೀಮಾಳಿಗೂ ಎರಡು ಮಕ್ಕಳನ್ನು ಕರುಣಿಸಿ ಕಣ್ಮರೆಯಾಗಿದ್ದಾನೆ. ಇದೀಗ ಈ ಇಬ್ಬರೂ ಸಣ್ಣ ವಯಸ್ಸಿನ ಯುವತಿಯರು ಬಡತನದಲ್ಲೇ ಬದುಕುತ್ತಿದ್ದಾರೆ. ಗಂಡನಿಗಾಗಿ ಹುಡುಕಾಡಿ ಸುಸ್ತಾಗಿದ್ದಾರೆ. ಸಮಾಜಕ್ಕೆ ಅಂಜಿ ತಮ್ಮ ಆಸೆ ಆಕಾಂಕ್ಷೆಗಳನ್ನು ಒತ್ತಿಟ್ಟು ಪುಟ್ಟ ಮಕ್ಕಳ ಹೊಟ್ಟೆತುಂಬಿಸಲೂ ಕಷ್ಟಪಡುತಿದ್ದಾರೆ.

ಜೊಹರಾ ಹಾಗೂ ನಸೀಮಾ ಬಾನು ಕೇವಲ ಉದಾಹರಣೆಗಳಷ್ಟೇ. ಇಂಥಹಾ ನೂರಾರು ಮುಸ್ಲಿಂ ಹೆಣ್ಣುಮಕ್ಕಳ ಪರಿಸ್ಥಿತಿ ಇವರಿಗಿಂತ್ತ ಭಿನ್ನವೇನಿಲ್ಲಾ. ಇಸ್ಲಾಂ ಧರ್ಮ ಪುರುಷನಿಗೆ ನಾಲ್ಕು ಮದುವೆಯಾಗಲು ಅವಕಾಶ ನೀಡಿದೆ ಎಂಬ ಅವಕಾಶವನ್ನು ಅಸ್ತ್ರವಾಗಿಟ್ಟುಕೊಂಡು ಅನೇಕ ಹೆಣ್ಣುಬಾಕ ಪುರುಷರು ಬಡ ಮುಸ್ಲಿಂ ಹೆಣ್ಣುಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಹೋದಲ್ಲಿ ಬಂದಲ್ಲಿ ಬಡ ಹೆಣ್ಣುಮಕ್ಕಳನ್ನು ಮದುಯೆಯಾಗೋದು, ಮಕ್ಕಳನ್ನು ಕರುಣಿಸಿ ಕಣ್ಮರೆಯಾಗೋದು, ಕ್ಷುಲ್ಲಕ ಕಾರಣ ನೀಡಿ ತಲಾಕ್ ನೀಡುವುದು ಮಾಮೂಲಾಗಿದೆ. (ತಲಾಕ್ ನೀಡಲು ಕೆಲವೊಂದು ಕಠಿಣ ನಿಯಮಾವಳಿಗಳು ಇಸ್ಲಾಂ ಧರ್ಮದಲ್ಲಿದೆ ಆದರೆ ಅದರ ದುರುಪಯೋಗ ಹೆಚ್ಚಿನ ಸಂಧರ್ಭದಲ್ಲಿ ನಡೆಯುತ್ತಿದೆ.) ವರದಕ್ಷಿಣೆ, ಹುಟ್ಟು ಬಡತನ, ಮನೆಯಲ್ಲಿ ಐದಾರು ವಯಸ್ಸಿಗೆ ಬಂದ ಹೆಣ್ಣು ಮಕ್ಕಳು, ಒಟ್ನಲ್ಲಿ ಹೆಣ್ಣು ಮದುವೆಯಾದಲ್ಲಿ ಸಾಕು ಎಂದು ಮದುವೆ ಮಾಡಿಸಿ ಕೊಡುತ್ತಾರೆ ಪೋಷಕರು. inidan-muslim-womanಆತನ ಹಿನ್ನೆಲೆ ಹೆಣ್ಣಿನ ಪೋಷಕರಿಗೆ ಅಗತ್ಯವಿಲ್ಲ, ಆತ ಎಲ್ಲಿಂದ ಬಂದ, ಏನು ಉದ್ಯೋಗ, ಆತನ ಚಾರಿತ್ರ ಎಂಥಹದ್ದು ಇದ್ಯಾವುದು ಮುಖ್ಯವಲ್ಲ. ವಯಸ್ಸಿಗೆ ಬಂದ ಹೆಣ್ಣು ಮಗಳು ಗಂಡನ ಮನೆಗೆ ಸೇರುವುದು ಈ ಬಡ ಪೋಷಕರಿಗೆ ಮುಖ್ಯವಾಗಿದೆ. ಇಂಥಹಾ ಅಸಹಾಯಕತೆಯನ್ನೇ ಬಳಸಿಕೊಂಡು ಬಡ ಮುಗ್ದ ಹೆಣ್ಣುಮಕ್ಕಳನ್ನು ಮದುವೆಯಾಗಿ ಮಕ್ಕಳನ್ನು ಕರುಣಿಸಿ ಮಾಯವಾಗುವ ಪುರುಷರ ಸಂಖ್ಯೆ ಹೆಚ್ಚಾಗುತ್ತಿದೆ. ಮುಸ್ಲಿಂ ಸಮುದಾಯದ ಪ್ರಗತಿಪರ ಲೇಖಕರಾದ ಸಾರಾ ಅಬೂಬಕ್ಕರ್, ಕೆ.ಶರೀಫಾ ಬರೆದಂತಹಾ ಅನೇಕ ಪುಸ್ತಕಗಳಲ್ಲಿ, ಲೇಖನಗಳಲ್ಲಿ ತಲಾಕ್ ದುರ್ಬಳಕೆ ಹಾಗೂ ಬಹುಪತ್ನಿತ್ವದಿಂದಾಗಿ ಮುಸ್ಲಿಂ ಸಮುದಾಯದ ಬಡ ಮಹಿಳೆಯರು ಅನುಭವಿಸುತ್ತಿರುವ ನೋವಿನ ಕುರಿತಾಗಿ ಸಾಕಷ್ಟು ಬೆಳಕು ಚೆಲ್ಲಿದ್ದಾರೆ. ಇದೊಂದು ರೀತಿಯ ಶೋಷಣೆಯಾದರೆ ಇನ್ನೊಂದು ಶೋಷಣೆ ನೋಡಿ.

ಕೆಲ ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೊಡಿಪ್ಪಾಡಿ ಸರ್ಕಾರಿ ಶಾಲೆಯ ಮುಸ್ಲಿಂ ಹೆಣ್ಣು ಮಕ್ಕಳು ಸ್ಕೂಲ್ ಡೇ ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಫತ್ವಾ ಹೊರಡಿಸಲಾಗಿತ್ತು. ಕೊಡಿಪ್ಪಾಡಿ ಮದರಸಾವೊಂದರ ಧಾರ್ಮಿಕ ಶಿಕ್ಷಕ ಈ ಅಲಿಖಿತ ಫತ್ವಾ ಹೊರಡಿಸಿದ್ದರು. ಯಾಕಾಗಿ ಹೆಣ್ಣು ಮಕ್ಕಳು ಡಾನ್ಸ್ ಮಾಡಬಾರದು ಎಂದು ಕೇಳಿದಾಗ “ಹೆಣ್ಣು ಮಕ್ಕಳು ಗಂಡು ಮಕ್ಕಳನ್ನು ನೋಡುವುದು ಗಂಡು ಮಕ್ಕಳು ಹೆಣ್ಣು ಮಕ್ಕಳನ್ನು ನೋಡುವುದು ಹರಾಮ್. ಹೆಣ್ಣು 15 ತುಂಬಿದಾಗ ಆಕೆ ದೊಡ್ಡವಳಾಗುತ್ತಾಳೆ. ಆದ್ದರಿಂದ ನಾಟಕದಲ್ಲಿ ಭಾಗವಹಿಸುವುದು ಡಾನ್ಸ್ ಮಾಡುವುದು ಹರಾಮ್. ಜಿಲ್ಲಾದ್ಯಂತ ಸ್ಕೂಲ್ ಡೇ ಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಇದು ಹರಾಮ್. ನಮ್ಮ ಮದರಸಾದ ವಿದ್ಯಾರ್ಥಿಗಳನ್ನು ಸ್ಕೂಲ್ ಡೇ ಯಲ್ಲಿ ಡಾನ್ಸ್ ಮಾಡಬಾರದು ಎಂದು ಕಡ್ಡಾಯವಾಗಿ ಹೇಳಿದ್ದೇವೆ. ತಂದೆ ತಾಯಿಯಂದಿರು ಪ್ರೋತ್ಸಾಹ mosque-mangaloreಕೊಡಬಾರದು ಎಂದಿದ್ದೇವೆ. ಸಣ್ಣ ಮಕ್ಕಳೂ ಡಾನ್ಸ್ ಮಾಡಿದರೂ ದೊಡ್ಡ ಮಕ್ಕಳು ಡಾನ್ಸ್ ಮಾಡಿದ್ರೂ ಹರಾಮ್ ಹರಾಮೇ. ಸಣ್ಣದಲ್ಲೇ ಪ್ರೋತ್ಸಾಹ ಕೊಟ್ಟರೆ ಅವರು ದೊಡ್ಡರವಾದ ಮೇಲೂ ಅಂಥಹಾ ತಪ್ಪು ಮಾಡುತ್ತಾರೆ. ಇದು ಕಮಿಟಿಯ ತೀರ್ಮಾನ ಕೂಡಾ ಹೌದು” ಎಂದರು. ಇಷ್ಟೇ ಅಲ್ಲ, ಚೆಸ್ ಬಿಟ್ಟು ಇತರ ಆಟೋಟಗಳನ್ನು ಆಡುವುದು ನಿಷಿದ್ದ ಅಂದರು.

ಧಾರ್ಮಿಕ ಶಿಕ್ಷಕರ ಮಾತನ್ನು ಆಲಿಸಿದ ನಾವು ಶಾಲೆಗೆ ಹೋಗಿ 5 ನೇ ತರಗತಿಯ ಹೆಣ್ಣು ಮಗಳೊಬ್ಬಳಲ್ಲಿ ಮಾತನಾಡಿದಾಗ ಆಕೆಯ ಕಣ್ತಂಚಿನಲ್ಲಿ ಕಣ್ಣೀರಿತ್ತು. ಡಾನ್ಸ್ ಮಾಡಬೇಕು ಎಂದು ಆಸೆ ಇದ್ಯಾ ಪುಟ್ಟೀ ಅಂದಾಗ ’ಹೂಂ ಆಸೆ ಇದೆ ಆದ್ರೆ ಉಸ್ತಾದ್ (ಧಾರ್ಮಿಕ ಶಿಕ್ಷಕ) ಬೇಡ ಅಂದಿದ್ದಾರೆ. ಉಸ್ತಾದ್ ಮಾತು ಮೀರಬಾರದು ಎಂದು ಅಮ್ಮ ಅಪ್ಪ ಹೇಳಿದ್ದಾರೆ ಅದಕ್ಕಾಗಿ ಡಾನ್ಸ್ ಮಾಡಿಲ್ಲ’ ಎಂದು ಪುಟ್ಟ ಹೆಣ್ಣು ಮಗು ತಮ್ಮ ಮನದಾಸೆಯನ್ನು ವ್ಯಕ್ತಪಡಿಸಿತು. ಈ ಪುಟಾಣಿ ಹೆಣ್ಣು ಮಕ್ಕಳು ಶಾಲೆಯಲ್ಲಿ ಕಲಿಯುತ್ತಿರುವ ಇತರ ಧರ್ಮೀಯ ಹೆಣ್ಣುಮಕ್ಕಳಿಗಿಂತ ಯಾವುದರಲ್ಲೂ ಕಡಿಮೆಯೇನಿಲ್ಲ. ಪ್ರತಿಭಾವಂತೆಯರಾಗಿದ್ದ ಆ ಹೆಣ್ಣು ಮಕ್ಕಳು ಧಾರ್ಮಿಕ ಗುರುವಿನ ಅಂಧಾ ಫತ್ವಾದಿಂದಾಗಿ ತಮ್ಮಲ್ಲಿರುವ ಪ್ರತಿಭೆಯನ್ನು ಮರೆಮಾಚಿ ಪ್ರೇಕ್ಷಕರ ಜೊತೆ ಕುಳಿತು ಸಹಪಾಠಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಿ ಖುಷಿಪಟ್ಟರು.

ಈ ಎರಡೂ ಪ್ರಕರಣಗಳನ್ನು ನೋಡಿದಾಗ ಇಲ್ಲಿ ಶೋಷಿತಳು ಹೆಣ್ಣು. ಧರ್ಮದ ಕಟ್ಟುಪಾಡುಗಳಿಗೆ ಒಳಗಾಗುವವಳು ಹೆಣ್ಣು. ಗಂಡಿನ ಆಸೆಬರುಕುತನಕ್ಕೆ ಬಲಿಯಾಗುವವಳು ಹೆಣ್ಣು. ಪ್ರತಿಭೆ, ಆಸೆ, ಅಭಿಲಾಶೆಗಳನ್ನು ವ್ಯಕ್ತಪಡಿಸಲಾಗದೆ ಧರ್ಮವಿಧಿಸಿದೆ ಎನ್ನಲಾಗುತ್ತಿರುವ ನಿರ್ಬಂಧಗಳೊಳಗೆ ಆಕೆ ಬಂಧಿಯಾಗುತ್ತಿದ್ದಾಳೆ. ಇಸ್ಲಾಂ ಧರ್ಮ ಖಂಡಿತವಾಗಿಯೂ ಹೆಣ್ಣಿಗೆ ಇತರ ಧರ್ಮಗಳಿಗಿಂತ ಹೆಚ್ಚಾಗಿ ಸ್ವಾತಂತ್ರವನ್ನು ಕಲ್ಪಿಸಿದೆ. ಆದರೆ ಇದು ಆಚರಣೆಯಲಿಲ್ಲ. ಧರ್ಮದ ಕೆಲವೊಂದು ಅವಕಾಶಗಳನ್ನು ಒಳಸಿಕೊಂಡು ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳನ್ನು ಪುರುಷನ ಹದ್ದುಬಸ್ಥಿನಲ್ಲಿಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಪ್ರಪಂಚ ಬದಲಾಗುತ್ತಿದ್ದರೂ ಮುಸ್ಲಿಂ ಸಮುದಾಯದ ಕೆಲವರ ಮನಸ್ಥಿತಿ ಇನ್ನೂ ಬದಲಾಗಲಿಲ್ಲ. ಹೆಣ್ಣು ಇವರ ಪಾಲಿಗೆ ಮನೆಯಲ್ಲಿರಬೇಕಾದ ವಸ್ತು. ಆಕೆ ಜೋರಾಗಿ ನಗಬಾರದು, ಸುಗಂಧ ದೃವ್ಯಗಳನ್ನು ಹಚ್ಚಿಕೊಳ್ಳಬಾರದು, ಗಂಡನ ಮಾತನ್ನು ಮೀರಿ ನಡೆಯಬಾರದು. ಈ ಮನಸ್ಥಿತಿಯೇ ಮುಸ್ಲಿಂ ಸಮುದಾಯದಲ್ಲಿ ಗ್ರಾಮೀಣ ಭಾಗದ ಹೆಣ್ಣು ಮಕ್ಕಳನ್ನು ಇನ್ನೂ ಮನೆಯಿಂದ ಹೊರಗಡೆ ಕಾಣಿಸಿಕೊಳ್ಳದಂತೆ ಮಾಡಿದೆ. ಧರ್ಮ, ಸಂಸ್ಕೃತಿ ಆಚರಣೆ ಹೆಸರಲ್ಲಿ ಹೆಣ್ಣು ಮಕ್ಕಳ ಹಕ್ಕನ್ನು ಕಸಿದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? School_childrenದಕ್ಷಿಣ ಕನ್ನಡ ಹಾಗೂ ಕರಾವಳಿ ಭಾಗದ ಬಹುತೇಕ ವಿದ್ಯಾಸಂಸ್ಥೆಗಳಲ್ಲಿ ನಡೆಯುತ್ತಿರುವ ವಾರ್ಷಿಕೋತ್ಸವಗಳಲ್ಲಿ ಸಿನಿಮಾ ಹಾಡುಗಳಿಗೆ ನೃತ್ಯ ಮಾಡುವವರು ಮುಸ್ಲಿಂ ಸಮುದಾಯದ ಯುವಕರೇ ಹೆಚ್ಚು. ಇವರಿಗೆ ಅನ್ವಯವಾಗದ ಕಟ್ಟುಪಾಡುಗಳು ಹೆಣ್ಮಕ್ಕಳಿಗೆ ಮಾತ್ರ ಯಾಕೆ? ಪುಟಾಣಿ ಹೆಣ್ಣು ಮಕ್ಕಳ ನೃತ್ಯದಲ್ಲೂ ಅಶ್ಲೀಲತೆಯನ್ನು ಹುಡುಕುವುದು ಕ್ರೂರ ಮನಸ್ಥಿತಿ. ಅದೇ ರೀತಿ ಹಿಂದಿನ ಕಾಲದ ಪರಿಸ್ಥಿತಿಗೆ ಅನುಗುಣವಾಗಿ ಜಾರಿಗೆ ಬಂದ ಬಹುಪತ್ನಿತ್ವವನ್ನು ಅಸ್ತ್ರವನ್ನಾಗಿಟ್ಟುಕೊಂಡು ಬಡ ಕುಟುಂಬದ ಅಸಾಯಕತೆಯನ್ನು ಬಳಸಿ ಒಂದಿಷ್ಟು ಹೆಣ್ಣು ಮಕ್ಕಳನ್ನು ಮದುವೆಯಾಗಿ ಕ್ಷುಲ್ಲಕ ಕಾರಣಕ್ಕೆ ತಲಾಕ್ ನೀಡಿ ಅವರನ್ನು ಶೋಷಣೆ ಮಾಡುವುದು ಕೂಡಾ ಅಷ್ಟೇ ಕ್ರೂರತನ.

ಈ ಕುರಿತು ಮುಸ್ಲಿಂ ಸಮಾಜ ಹೋರಾಟ ನಡೆಸಬೇಕಾಗಿದೆ. ವಿಪರ್ಯಾಸವೆಂದರೆ ಮುಸ್ಲಿಂ ಸಮುದಾಯದಲ್ಲಿರುವ ಇಂಥಹಾ ಶೋಷಕ ಮನಸ್ಥಿತಿಗಳ ವಿರುದ್ಧ ಧ್ವನಿ ಎತ್ತುವ ಲೇಖಕಿ ಸಾರಾ ಅಬೂಬಕ್ಕರ್, ಕೆ. ಶೆರೀಫಾ, ಹೋರಾಟಗಾರರಾದ ಮುನೀರ್ ಕಾಟಿಪಳ್ಳ, ಜೊಹರಾ ನಿಸಾರ್ ಅಹಮ್ಮದ್, ಧರ್ಮ ವಿರೋಧಿಗಳಾಗಿ ಬಿಂಬಿತರಾಗುತ್ತಾರೆ. ಅವರ ವಿರುದ್ಧ ಪ್ರತಿಭಟನೆಗಳು ನಡೆಯುತ್ತವೆ. ಇದು ಸಲ್ಲ. ಬದಲಾಗಿ ಮುಸ್ಲಿಂ ಸಮುದಾಯದ ಸುಧಾರಣಾ ಸಂಘಟನೆಗಳು ಈ ಕುರಿತು ಚಿಂತಿಸಬೇಕಾಗಿದೆ. Sara-Abubakarಭಾರತದಲ್ಲಿ ಅಲ್ಪಸಂಖ್ಯಾತವಾಗಿರುವ ಮುಸ್ಲಿಂ ಸಮುದಾಯದ ಮೇಲೆ ಕೋಮುವಾದಿಗಳಿಂದ ನಿರಂತರ ದಬ್ಬಾಳಿಕೆ ನಡೆಯುತ್ತಿದೆ ನಿಜ. ಅದರ ವಿರುದ್ಧ ಧ್ವನಿ ಎತ್ತುವುದರ ಜೊತೆಗೆ ಸಮುದಾಯದಲ್ಲಿ ಕೆಲ ಧಾರ್ಮಿಕ ಮೂಲಭೂತವಾದಿ ಹಾಗೂ ಅಜ್ಞಾನಿ ಮನಸ್ಥಿತಿಗಳಿಂದ ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧವೂ ಮುಸ್ಲಿಂ ಸಮುದಾಯ ಜಾಗೃತಗೊಂಡು ಧ್ವನಿ ಎತ್ತಲೇಬೇಕಾಗ ಅವಶ್ಯಕತೆ ಇದೆ.