ಮುಸ್ಲಿಂ ಸಮುದಾಯದಲ್ಲಿರುವ ಕೆಲವು ಶೋಷಕ ಮನಸ್ಥಿತಿಗಳ ವಿರುದ್ಧ ಧನಿಯೆತ್ತಬೇಕಿದೆ

– ಇರ್ಷಾದ್

ವಾರದ ಹಿಂದೆ ಬೆಳ್ತಂಗಡಿ ತಾಲೂಕಿನ ಸೌಜನ್ಯ ನಗರಕ್ಕೆ ಸುದ್ದಿ ಮಾಡುವ ಉದ್ದೇಶದಿಂದ ಕೆಲ ಸಂಗಾತಿಗಳೊಂದಿಗೆ ಭೇಟಿ ಕೊಟ್ಟಿದ್ದೆ . ನಿವೇಶನ ರಹಿತ ಬಡವರು ಭಾರತೀಯ ಕಮ್ಯುನಿಷ್ಟ್ ಪಕ್ಷ ( ಮಾರ್ಕಿಸ್ಟ್ ) ನೇತೃತ್ವದಲ್ಲಿ ಸರ್ಕಾರಿ ಜಮೀನಿನಲ್ಲಿ ಜೋಪುಡಿಯನ್ನು ಕಟ್ಟಿಕೊಂಡು ಅಲ್ಲೇ ವಾಸ್ತವ್ಯ ಹೂಡಿ ಹೋರಾಟ ನಡೆಸುತ್ತಿದ್ದಾರೆ. ಹಾಗೆ ಸೌಜನ್ಯ ನಗರಕ್ಕೆ ಒಂದು ಸುತ್ತು ಹಾಕಿದಾಗ ನನ್ನ ಕಣ್ಣಿಗೆ ಇಬ್ಬರು ಮುಸ್ಲಿಂ ಮಹಿಳೆಯರು ತಮ್ಮ ಪುಟಾಣಿ ಮಕ್ಕಳ ಜೊತೆಯಲ್ಲಿ ಕಂಡರು. ನಿವೇಶನ ರಹಿತ ಸುಮಾರು 60 ಬಡವರು ಕಟ್ಟಿದ ಜೋಪಡಿಯ ಪೈಕಿ ಆ ಎರಡು ಜೋಪಡಿಗಳ ಸ್ಥಿತಿ ಶೋಚನೀಯವಾಗಿತ್ತು. ಉಡುವ ಸೀರೆಯೇ ಜೋಪಡಿಯ ಗೋಡೆಯಾಗಿತ್ತು. ಹಾಗೆ ಹತ್ತಿರ ಹೋಗಿ ಮಾತನಾಡಿಸಿದಾಗ ಆ ಮಹಿಳೆ ಭಾವುಕಳಾಗಿ ತನ್ನ ಕಥೆಯನ್ನು ಬಿಚ್ಚಿಡತೊಡಗಿದಳು. ಆಕೆಯ ಹೆಸರು ಜೊಹರಾ. ಕಡು ಬಡತನದಲ್ಲೇ ಹುಟ್ಟಿ ಬೆಳೆದವಳು. ವಯಸ್ಸಿಗೆ ಬಂದಾಗ ಸಹಜವಾಗಿ ಎಲ್ಲಾ ಹೆಣ್ಣು ಮಕ್ಕಳು Indian-Povertyಕಾಣುವ ಕನಸನ್ನು ಕಣ್ತುಂಬಾ ಕಂಡವಳು. ಬಡತನ, ವರದಕ್ಷಿಣೆಯ ಭೂತದ ನಡುವೆಯೂ ತಾನು ಕನಸಲ್ಲಿ ಕಂಡ ಇನಿಯನಿಗಾಗಿ ಕಾಯುತಿದ್ದ ಆಕೆಯನ್ನು ಅದಾಗಲೇ ಮದುವೆಯಾಗಿದ್ದ ಪುರುಷನೊಬ್ಬನ ಜೊತೆ ಮನೆ ಮಂದಿ ಮದುವೆಮಾಡಿಕೊಟ್ಟರು. ಜೊಹರಾಳನ್ನು ಮದುವೆಯಾದ ಆ ಪುಣ್ಯಾತ್ಮ ಆಕೆಗೆ ಎರಡು ಮಕ್ಕಳನ್ನು ಕರುಣಿಸಿ ಕಣ್ಮರೆಯಾದ. ಜೊಹರಾಳ ನೋವಿನ ಕಥೆಯನ್ನು ದೂರದಲ್ಲೇ ನಿಂತುಕೊಂಡು ಗಮನಿಸುತಿದ್ದ ಆಕೆಯ ಸಹೋದರಿ ನಸೀಮಾ ಬಾನು ಬಳಿ ಹೋಗಿ ಮಾತಿಗಿಳಿದಾಗ ಆಕೆಯದ್ದೂ ಇಂಥಹದ್ದೇ ಕಣ್ಣೀರ ಕಥೆ. ಅಕ್ಕನ ಪಾಡೇ ಆಕೆಯ ಜೀವನದಲ್ಲಿ ಕೂಡಾ. ಮದುವೆಯಾದ ಗಂಡ ನಸೀಮಾಳಿಗೂ ಎರಡು ಮಕ್ಕಳನ್ನು ಕರುಣಿಸಿ ಕಣ್ಮರೆಯಾಗಿದ್ದಾನೆ. ಇದೀಗ ಈ ಇಬ್ಬರೂ ಸಣ್ಣ ವಯಸ್ಸಿನ ಯುವತಿಯರು ಬಡತನದಲ್ಲೇ ಬದುಕುತ್ತಿದ್ದಾರೆ. ಗಂಡನಿಗಾಗಿ ಹುಡುಕಾಡಿ ಸುಸ್ತಾಗಿದ್ದಾರೆ. ಸಮಾಜಕ್ಕೆ ಅಂಜಿ ತಮ್ಮ ಆಸೆ ಆಕಾಂಕ್ಷೆಗಳನ್ನು ಒತ್ತಿಟ್ಟು ಪುಟ್ಟ ಮಕ್ಕಳ ಹೊಟ್ಟೆತುಂಬಿಸಲೂ ಕಷ್ಟಪಡುತಿದ್ದಾರೆ.

ಜೊಹರಾ ಹಾಗೂ ನಸೀಮಾ ಬಾನು ಕೇವಲ ಉದಾಹರಣೆಗಳಷ್ಟೇ. ಇಂಥಹಾ ನೂರಾರು ಮುಸ್ಲಿಂ ಹೆಣ್ಣುಮಕ್ಕಳ ಪರಿಸ್ಥಿತಿ ಇವರಿಗಿಂತ್ತ ಭಿನ್ನವೇನಿಲ್ಲಾ. ಇಸ್ಲಾಂ ಧರ್ಮ ಪುರುಷನಿಗೆ ನಾಲ್ಕು ಮದುವೆಯಾಗಲು ಅವಕಾಶ ನೀಡಿದೆ ಎಂಬ ಅವಕಾಶವನ್ನು ಅಸ್ತ್ರವಾಗಿಟ್ಟುಕೊಂಡು ಅನೇಕ ಹೆಣ್ಣುಬಾಕ ಪುರುಷರು ಬಡ ಮುಸ್ಲಿಂ ಹೆಣ್ಣುಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಹೋದಲ್ಲಿ ಬಂದಲ್ಲಿ ಬಡ ಹೆಣ್ಣುಮಕ್ಕಳನ್ನು ಮದುಯೆಯಾಗೋದು, ಮಕ್ಕಳನ್ನು ಕರುಣಿಸಿ ಕಣ್ಮರೆಯಾಗೋದು, ಕ್ಷುಲ್ಲಕ ಕಾರಣ ನೀಡಿ ತಲಾಕ್ ನೀಡುವುದು ಮಾಮೂಲಾಗಿದೆ. (ತಲಾಕ್ ನೀಡಲು ಕೆಲವೊಂದು ಕಠಿಣ ನಿಯಮಾವಳಿಗಳು ಇಸ್ಲಾಂ ಧರ್ಮದಲ್ಲಿದೆ ಆದರೆ ಅದರ ದುರುಪಯೋಗ ಹೆಚ್ಚಿನ ಸಂಧರ್ಭದಲ್ಲಿ ನಡೆಯುತ್ತಿದೆ.) ವರದಕ್ಷಿಣೆ, ಹುಟ್ಟು ಬಡತನ, ಮನೆಯಲ್ಲಿ ಐದಾರು ವಯಸ್ಸಿಗೆ ಬಂದ ಹೆಣ್ಣು ಮಕ್ಕಳು, ಒಟ್ನಲ್ಲಿ ಹೆಣ್ಣು ಮದುವೆಯಾದಲ್ಲಿ ಸಾಕು ಎಂದು ಮದುವೆ ಮಾಡಿಸಿ ಕೊಡುತ್ತಾರೆ ಪೋಷಕರು. inidan-muslim-womanಆತನ ಹಿನ್ನೆಲೆ ಹೆಣ್ಣಿನ ಪೋಷಕರಿಗೆ ಅಗತ್ಯವಿಲ್ಲ, ಆತ ಎಲ್ಲಿಂದ ಬಂದ, ಏನು ಉದ್ಯೋಗ, ಆತನ ಚಾರಿತ್ರ ಎಂಥಹದ್ದು ಇದ್ಯಾವುದು ಮುಖ್ಯವಲ್ಲ. ವಯಸ್ಸಿಗೆ ಬಂದ ಹೆಣ್ಣು ಮಗಳು ಗಂಡನ ಮನೆಗೆ ಸೇರುವುದು ಈ ಬಡ ಪೋಷಕರಿಗೆ ಮುಖ್ಯವಾಗಿದೆ. ಇಂಥಹಾ ಅಸಹಾಯಕತೆಯನ್ನೇ ಬಳಸಿಕೊಂಡು ಬಡ ಮುಗ್ದ ಹೆಣ್ಣುಮಕ್ಕಳನ್ನು ಮದುವೆಯಾಗಿ ಮಕ್ಕಳನ್ನು ಕರುಣಿಸಿ ಮಾಯವಾಗುವ ಪುರುಷರ ಸಂಖ್ಯೆ ಹೆಚ್ಚಾಗುತ್ತಿದೆ. ಮುಸ್ಲಿಂ ಸಮುದಾಯದ ಪ್ರಗತಿಪರ ಲೇಖಕರಾದ ಸಾರಾ ಅಬೂಬಕ್ಕರ್, ಕೆ.ಶರೀಫಾ ಬರೆದಂತಹಾ ಅನೇಕ ಪುಸ್ತಕಗಳಲ್ಲಿ, ಲೇಖನಗಳಲ್ಲಿ ತಲಾಕ್ ದುರ್ಬಳಕೆ ಹಾಗೂ ಬಹುಪತ್ನಿತ್ವದಿಂದಾಗಿ ಮುಸ್ಲಿಂ ಸಮುದಾಯದ ಬಡ ಮಹಿಳೆಯರು ಅನುಭವಿಸುತ್ತಿರುವ ನೋವಿನ ಕುರಿತಾಗಿ ಸಾಕಷ್ಟು ಬೆಳಕು ಚೆಲ್ಲಿದ್ದಾರೆ. ಇದೊಂದು ರೀತಿಯ ಶೋಷಣೆಯಾದರೆ ಇನ್ನೊಂದು ಶೋಷಣೆ ನೋಡಿ.

ಕೆಲ ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೊಡಿಪ್ಪಾಡಿ ಸರ್ಕಾರಿ ಶಾಲೆಯ ಮುಸ್ಲಿಂ ಹೆಣ್ಣು ಮಕ್ಕಳು ಸ್ಕೂಲ್ ಡೇ ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಫತ್ವಾ ಹೊರಡಿಸಲಾಗಿತ್ತು. ಕೊಡಿಪ್ಪಾಡಿ ಮದರಸಾವೊಂದರ ಧಾರ್ಮಿಕ ಶಿಕ್ಷಕ ಈ ಅಲಿಖಿತ ಫತ್ವಾ ಹೊರಡಿಸಿದ್ದರು. ಯಾಕಾಗಿ ಹೆಣ್ಣು ಮಕ್ಕಳು ಡಾನ್ಸ್ ಮಾಡಬಾರದು ಎಂದು ಕೇಳಿದಾಗ “ಹೆಣ್ಣು ಮಕ್ಕಳು ಗಂಡು ಮಕ್ಕಳನ್ನು ನೋಡುವುದು ಗಂಡು ಮಕ್ಕಳು ಹೆಣ್ಣು ಮಕ್ಕಳನ್ನು ನೋಡುವುದು ಹರಾಮ್. ಹೆಣ್ಣು 15 ತುಂಬಿದಾಗ ಆಕೆ ದೊಡ್ಡವಳಾಗುತ್ತಾಳೆ. ಆದ್ದರಿಂದ ನಾಟಕದಲ್ಲಿ ಭಾಗವಹಿಸುವುದು ಡಾನ್ಸ್ ಮಾಡುವುದು ಹರಾಮ್. ಜಿಲ್ಲಾದ್ಯಂತ ಸ್ಕೂಲ್ ಡೇ ಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಇದು ಹರಾಮ್. ನಮ್ಮ ಮದರಸಾದ ವಿದ್ಯಾರ್ಥಿಗಳನ್ನು ಸ್ಕೂಲ್ ಡೇ ಯಲ್ಲಿ ಡಾನ್ಸ್ ಮಾಡಬಾರದು ಎಂದು ಕಡ್ಡಾಯವಾಗಿ ಹೇಳಿದ್ದೇವೆ. ತಂದೆ ತಾಯಿಯಂದಿರು ಪ್ರೋತ್ಸಾಹ mosque-mangaloreಕೊಡಬಾರದು ಎಂದಿದ್ದೇವೆ. ಸಣ್ಣ ಮಕ್ಕಳೂ ಡಾನ್ಸ್ ಮಾಡಿದರೂ ದೊಡ್ಡ ಮಕ್ಕಳು ಡಾನ್ಸ್ ಮಾಡಿದ್ರೂ ಹರಾಮ್ ಹರಾಮೇ. ಸಣ್ಣದಲ್ಲೇ ಪ್ರೋತ್ಸಾಹ ಕೊಟ್ಟರೆ ಅವರು ದೊಡ್ಡರವಾದ ಮೇಲೂ ಅಂಥಹಾ ತಪ್ಪು ಮಾಡುತ್ತಾರೆ. ಇದು ಕಮಿಟಿಯ ತೀರ್ಮಾನ ಕೂಡಾ ಹೌದು” ಎಂದರು. ಇಷ್ಟೇ ಅಲ್ಲ, ಚೆಸ್ ಬಿಟ್ಟು ಇತರ ಆಟೋಟಗಳನ್ನು ಆಡುವುದು ನಿಷಿದ್ದ ಅಂದರು.

ಧಾರ್ಮಿಕ ಶಿಕ್ಷಕರ ಮಾತನ್ನು ಆಲಿಸಿದ ನಾವು ಶಾಲೆಗೆ ಹೋಗಿ 5 ನೇ ತರಗತಿಯ ಹೆಣ್ಣು ಮಗಳೊಬ್ಬಳಲ್ಲಿ ಮಾತನಾಡಿದಾಗ ಆಕೆಯ ಕಣ್ತಂಚಿನಲ್ಲಿ ಕಣ್ಣೀರಿತ್ತು. ಡಾನ್ಸ್ ಮಾಡಬೇಕು ಎಂದು ಆಸೆ ಇದ್ಯಾ ಪುಟ್ಟೀ ಅಂದಾಗ ’ಹೂಂ ಆಸೆ ಇದೆ ಆದ್ರೆ ಉಸ್ತಾದ್ (ಧಾರ್ಮಿಕ ಶಿಕ್ಷಕ) ಬೇಡ ಅಂದಿದ್ದಾರೆ. ಉಸ್ತಾದ್ ಮಾತು ಮೀರಬಾರದು ಎಂದು ಅಮ್ಮ ಅಪ್ಪ ಹೇಳಿದ್ದಾರೆ ಅದಕ್ಕಾಗಿ ಡಾನ್ಸ್ ಮಾಡಿಲ್ಲ’ ಎಂದು ಪುಟ್ಟ ಹೆಣ್ಣು ಮಗು ತಮ್ಮ ಮನದಾಸೆಯನ್ನು ವ್ಯಕ್ತಪಡಿಸಿತು. ಈ ಪುಟಾಣಿ ಹೆಣ್ಣು ಮಕ್ಕಳು ಶಾಲೆಯಲ್ಲಿ ಕಲಿಯುತ್ತಿರುವ ಇತರ ಧರ್ಮೀಯ ಹೆಣ್ಣುಮಕ್ಕಳಿಗಿಂತ ಯಾವುದರಲ್ಲೂ ಕಡಿಮೆಯೇನಿಲ್ಲ. ಪ್ರತಿಭಾವಂತೆಯರಾಗಿದ್ದ ಆ ಹೆಣ್ಣು ಮಕ್ಕಳು ಧಾರ್ಮಿಕ ಗುರುವಿನ ಅಂಧಾ ಫತ್ವಾದಿಂದಾಗಿ ತಮ್ಮಲ್ಲಿರುವ ಪ್ರತಿಭೆಯನ್ನು ಮರೆಮಾಚಿ ಪ್ರೇಕ್ಷಕರ ಜೊತೆ ಕುಳಿತು ಸಹಪಾಠಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಿ ಖುಷಿಪಟ್ಟರು.

ಈ ಎರಡೂ ಪ್ರಕರಣಗಳನ್ನು ನೋಡಿದಾಗ ಇಲ್ಲಿ ಶೋಷಿತಳು ಹೆಣ್ಣು. ಧರ್ಮದ ಕಟ್ಟುಪಾಡುಗಳಿಗೆ ಒಳಗಾಗುವವಳು ಹೆಣ್ಣು. ಗಂಡಿನ ಆಸೆಬರುಕುತನಕ್ಕೆ ಬಲಿಯಾಗುವವಳು ಹೆಣ್ಣು. ಪ್ರತಿಭೆ, ಆಸೆ, ಅಭಿಲಾಶೆಗಳನ್ನು ವ್ಯಕ್ತಪಡಿಸಲಾಗದೆ ಧರ್ಮವಿಧಿಸಿದೆ ಎನ್ನಲಾಗುತ್ತಿರುವ ನಿರ್ಬಂಧಗಳೊಳಗೆ ಆಕೆ ಬಂಧಿಯಾಗುತ್ತಿದ್ದಾಳೆ. ಇಸ್ಲಾಂ ಧರ್ಮ ಖಂಡಿತವಾಗಿಯೂ ಹೆಣ್ಣಿಗೆ ಇತರ ಧರ್ಮಗಳಿಗಿಂತ ಹೆಚ್ಚಾಗಿ ಸ್ವಾತಂತ್ರವನ್ನು ಕಲ್ಪಿಸಿದೆ. ಆದರೆ ಇದು ಆಚರಣೆಯಲಿಲ್ಲ. ಧರ್ಮದ ಕೆಲವೊಂದು ಅವಕಾಶಗಳನ್ನು ಒಳಸಿಕೊಂಡು ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳನ್ನು ಪುರುಷನ ಹದ್ದುಬಸ್ಥಿನಲ್ಲಿಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಪ್ರಪಂಚ ಬದಲಾಗುತ್ತಿದ್ದರೂ ಮುಸ್ಲಿಂ ಸಮುದಾಯದ ಕೆಲವರ ಮನಸ್ಥಿತಿ ಇನ್ನೂ ಬದಲಾಗಲಿಲ್ಲ. ಹೆಣ್ಣು ಇವರ ಪಾಲಿಗೆ ಮನೆಯಲ್ಲಿರಬೇಕಾದ ವಸ್ತು. ಆಕೆ ಜೋರಾಗಿ ನಗಬಾರದು, ಸುಗಂಧ ದೃವ್ಯಗಳನ್ನು ಹಚ್ಚಿಕೊಳ್ಳಬಾರದು, ಗಂಡನ ಮಾತನ್ನು ಮೀರಿ ನಡೆಯಬಾರದು. ಈ ಮನಸ್ಥಿತಿಯೇ ಮುಸ್ಲಿಂ ಸಮುದಾಯದಲ್ಲಿ ಗ್ರಾಮೀಣ ಭಾಗದ ಹೆಣ್ಣು ಮಕ್ಕಳನ್ನು ಇನ್ನೂ ಮನೆಯಿಂದ ಹೊರಗಡೆ ಕಾಣಿಸಿಕೊಳ್ಳದಂತೆ ಮಾಡಿದೆ. ಧರ್ಮ, ಸಂಸ್ಕೃತಿ ಆಚರಣೆ ಹೆಸರಲ್ಲಿ ಹೆಣ್ಣು ಮಕ್ಕಳ ಹಕ್ಕನ್ನು ಕಸಿದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? School_childrenದಕ್ಷಿಣ ಕನ್ನಡ ಹಾಗೂ ಕರಾವಳಿ ಭಾಗದ ಬಹುತೇಕ ವಿದ್ಯಾಸಂಸ್ಥೆಗಳಲ್ಲಿ ನಡೆಯುತ್ತಿರುವ ವಾರ್ಷಿಕೋತ್ಸವಗಳಲ್ಲಿ ಸಿನಿಮಾ ಹಾಡುಗಳಿಗೆ ನೃತ್ಯ ಮಾಡುವವರು ಮುಸ್ಲಿಂ ಸಮುದಾಯದ ಯುವಕರೇ ಹೆಚ್ಚು. ಇವರಿಗೆ ಅನ್ವಯವಾಗದ ಕಟ್ಟುಪಾಡುಗಳು ಹೆಣ್ಮಕ್ಕಳಿಗೆ ಮಾತ್ರ ಯಾಕೆ? ಪುಟಾಣಿ ಹೆಣ್ಣು ಮಕ್ಕಳ ನೃತ್ಯದಲ್ಲೂ ಅಶ್ಲೀಲತೆಯನ್ನು ಹುಡುಕುವುದು ಕ್ರೂರ ಮನಸ್ಥಿತಿ. ಅದೇ ರೀತಿ ಹಿಂದಿನ ಕಾಲದ ಪರಿಸ್ಥಿತಿಗೆ ಅನುಗುಣವಾಗಿ ಜಾರಿಗೆ ಬಂದ ಬಹುಪತ್ನಿತ್ವವನ್ನು ಅಸ್ತ್ರವನ್ನಾಗಿಟ್ಟುಕೊಂಡು ಬಡ ಕುಟುಂಬದ ಅಸಾಯಕತೆಯನ್ನು ಬಳಸಿ ಒಂದಿಷ್ಟು ಹೆಣ್ಣು ಮಕ್ಕಳನ್ನು ಮದುವೆಯಾಗಿ ಕ್ಷುಲ್ಲಕ ಕಾರಣಕ್ಕೆ ತಲಾಕ್ ನೀಡಿ ಅವರನ್ನು ಶೋಷಣೆ ಮಾಡುವುದು ಕೂಡಾ ಅಷ್ಟೇ ಕ್ರೂರತನ.

ಈ ಕುರಿತು ಮುಸ್ಲಿಂ ಸಮಾಜ ಹೋರಾಟ ನಡೆಸಬೇಕಾಗಿದೆ. ವಿಪರ್ಯಾಸವೆಂದರೆ ಮುಸ್ಲಿಂ ಸಮುದಾಯದಲ್ಲಿರುವ ಇಂಥಹಾ ಶೋಷಕ ಮನಸ್ಥಿತಿಗಳ ವಿರುದ್ಧ ಧ್ವನಿ ಎತ್ತುವ ಲೇಖಕಿ ಸಾರಾ ಅಬೂಬಕ್ಕರ್, ಕೆ. ಶೆರೀಫಾ, ಹೋರಾಟಗಾರರಾದ ಮುನೀರ್ ಕಾಟಿಪಳ್ಳ, ಜೊಹರಾ ನಿಸಾರ್ ಅಹಮ್ಮದ್, ಧರ್ಮ ವಿರೋಧಿಗಳಾಗಿ ಬಿಂಬಿತರಾಗುತ್ತಾರೆ. ಅವರ ವಿರುದ್ಧ ಪ್ರತಿಭಟನೆಗಳು ನಡೆಯುತ್ತವೆ. ಇದು ಸಲ್ಲ. ಬದಲಾಗಿ ಮುಸ್ಲಿಂ ಸಮುದಾಯದ ಸುಧಾರಣಾ ಸಂಘಟನೆಗಳು ಈ ಕುರಿತು ಚಿಂತಿಸಬೇಕಾಗಿದೆ. Sara-Abubakarಭಾರತದಲ್ಲಿ ಅಲ್ಪಸಂಖ್ಯಾತವಾಗಿರುವ ಮುಸ್ಲಿಂ ಸಮುದಾಯದ ಮೇಲೆ ಕೋಮುವಾದಿಗಳಿಂದ ನಿರಂತರ ದಬ್ಬಾಳಿಕೆ ನಡೆಯುತ್ತಿದೆ ನಿಜ. ಅದರ ವಿರುದ್ಧ ಧ್ವನಿ ಎತ್ತುವುದರ ಜೊತೆಗೆ ಸಮುದಾಯದಲ್ಲಿ ಕೆಲ ಧಾರ್ಮಿಕ ಮೂಲಭೂತವಾದಿ ಹಾಗೂ ಅಜ್ಞಾನಿ ಮನಸ್ಥಿತಿಗಳಿಂದ ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧವೂ ಮುಸ್ಲಿಂ ಸಮುದಾಯ ಜಾಗೃತಗೊಂಡು ಧ್ವನಿ ಎತ್ತಲೇಬೇಕಾಗ ಅವಶ್ಯಕತೆ ಇದೆ.

12 thoughts on “ಮುಸ್ಲಿಂ ಸಮುದಾಯದಲ್ಲಿರುವ ಕೆಲವು ಶೋಷಕ ಮನಸ್ಥಿತಿಗಳ ವಿರುದ್ಧ ಧನಿಯೆತ್ತಬೇಕಿದೆ

  1. Vivek Achar

    Such liberal voices within the Muslim community should raise and persons with such ethos should represent the face of the community. Hope these voices find space in the community. P.S: This problem is there in other religions too and we all need to fight against this malice.

    Reply
  2. KS Naveen

    ಶಿಕ್ಷಣವೊಂದೇ ದಾರಿ. ಕಡ್ಡಾಯ ಶಿಕ್ಷಣವನ್ನು (ಸಾಧ್ಯವಾದಲ್ಲಿ ಉಚಿತವಾಗಿ) ಕೊನೆಯ ವ್ಯಕ್ತಿಯವರೆಗೆ ನಾವು ಎಲ್ಲಿಯವರೆಗೆ ನೀಡಲಾಗುವುದಿಲ್ಲವೊ ಅಲ್ಲಿಯವರೆಗೂ ಇಂತಹುದು ನಡೆಯುತ್ತಲೇ ಇರುತ್ತವೆ.

    Reply
  3. Moulana Abdul Hafeez Al Qasmi

    ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?

    ಇಸ್ಲಾಮ್ ಎಂದಿಗೂ ಮಿತಿ ಮೇರೆಗಳಿಲ್ಲದೆ 4 ಮದುವೆಯಾಗಬಹುದು ಎಂಬಂತಹ ಆದೇಶ ನೀಡಿಲ್ಲ. ಯಾವನೋ ಒಬ್ಬ ಅಜ್ಞಾನಿ ಈ ಒಂದು ಆದೇಶವನ್ನು ದುರ್ಬಳಕೆ ಮಾಡಿಕೊಂಡ ಅಂದ ಮಾತ್ರಕ್ಕೆ ಬಹುಪತ್ನಿತ್ವ ನಿಷೇಧವಾಗಬೇಕು ಎಂದು ಇದರ ಅರ್ಥವಲ್ಲ. ಇದು ನಮ್ಮನ್ನು ಸ್ರಷ್ಟಿಸಿದಂತಹ ಅಲ್ಲಾಹನ ಆದೇಶವಾಗಿದೆ. ಇದನ್ನು ಧಿಕ್ಕರಿಸುವ ಹಕ್ಕು ಯಾರಿಗೂ ಸಲ್ಲುವುದಿಲ್ಲ.

    ಮದ್ರಸದಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣವನ್ನು ಭೋಧಿಸುವ ಅಧ್ಯಾಪಕರಿದ್ದಾರೆ. ಒಂದು ಚಿಕ್ಕ ಸಂಬಳದೊಂದಿಗೆ ತನ್ನ ಪರಿವಾರವನ್ನು ಸಾಕಿ ಸಲಹಿ ನಮ್ಮ ಮಕ್ಕಳಿಗೆ ಧಾರ್ಮಿಕ ವಿಧ್ಯಾಭ್ಯಾಸವನ್ನು ನೀಡುತ್ತಿದ್ದಾರೆ. ವಿಧ್ಯಾಭ್ಯಾಸದೊಂದಿಗೆ ನೈತಿಕ ಶಿಕ್ಷಣವನ್ನೂ ಭೋಧಿಸುತ್ತಾರೆ. ಮೊಳಕೆಯಲ್ಲೇ ಮಕ್ಕಳನ್ನು ತರಬೇತುಗೊಳಿಸಿದರೆ ಜೀವನ ಪರ್ಯಂತ ಅದು ಅವರ ಮನಸ್ಸಿನಲ್ಲಿ ಅಚ್ಚುಕಟ್ಟಾಗಿರುತ್ತದೆ. ಆದರೆ ಕೆಲವು ಸ್ಛೇಚ್ಛಾಚಾರಿಗಳಿಗೆ ಅದು ಕೆಟ್ಟದು ಎಂದು ಕಂಡು ಬರಲೂಬಹುದು. ಇದಕ್ಕೆ ಅವರು ಬೇರೆ ಅರ್ಥಗಳನ್ನು ಕಲ್ಪಸಲೂಬಹುದು. ಅದು ಅವರಿಗೆ ಬಿಟ್ಟ ವಿಚಾರ. ಆದರೆ ಇದನ್ನೇ ನೆಪವಾಗಿಸಿಕೊಂಡು ಅಧ್ಯಾಪಕರನ್ನು ದೋಷಿಯನ್ನಾಗಿಸುವುದು ಯಾವ ಪುರುಷಾರ್ಥ?

    ಇಂದು ಸಮುದಾಯದಲ್ಲಿ ಅದೆಷ್ಟೋ ಸಮಸ್ಯೆಗಳನನ್ನು ತಾವು ಕಂಡಿಲ್ಲವೇ? ತಂದೆ, ತಾಯಿ ತನ್ನ ಬೆಳೆದ ಮಕ್ಕಳ ದುರ್ವರ್ತನೆಗೆ ಸೋತು ಹೋಗಿ ಅತ್ತ ಬುದ್ದಿವಾದ ಹೇಳಲಿಕ್ಕೂ ಆಗದೆ ಇತ್ತ ನೋಡಿ ಸಹಿಸಲಿಕ್ಕೂ ಆಗದೆ ಒಳಗೊಳಗೇ ನೋವನ್ನು ಅನುಭವಿಸುವವರಿದ್ದಾರೆ. ಹೀಗಿರುವಾಗ ತುಂಡುಡುಗೆಗಳನ್ನು ತೊಡಿಸಿ ಈಗಲೇ ಮಕ್ಕಳನ್ನು ವೇದಿಕೆಗೆ ಕರೆದು ಡ್ಯಾನ್ಸ್ ಮಾಡಲಿಕ್ಕೆ ಹೇಳಿದರೆ ಭವಿಷ್ಯದಲ್ಲಿ ಏನಾಗಬಹುದು ಎಂದು ತಾವೇ ಊಹಿಸಿ ನೋಡಿ.
    ಇಸ್ಲಾಂ ಧರ್ಮ ನಾಲ್ಕು ಹೆಣ್ಮಕ್ಕಳಿಗೆ ಮದುವೆಯಾಗುವ ಅವಕಾಶ ಕೊಟ್ಟಿದೆ. ಇದನ್ನೇ ಅಸ್ತ್ರವಾಗಿಟ್ಟುಕೊಂಡು ಕೆಲವೊಂದು ಹೆಣ್ಣುಬಾಕ ಪುರುಷರು ಹೆಣ್ಣು ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದಿದ್ದೀರಿ,
    ಇಸ್ಲಾಂ ಧರ್ಮದ ಬಗ್ಗೆ ಜ್ಞಾನ ಇದ್ದವನು ಅದನ್ನು ಅನಸರಿಸುವವನು ಇಂಥಹ ಹೀನ ಕೃತ್ಯಗಳನ್ನು ಎಂದಿಗೂ ಮಾಡಲಿಕ್ಕೆ ಸಾಧ್ಯವಿಲ್ಲ. ಇಂತಹ ಅವ್ಯವಸ್ಥೆಗಳ ಸುಧಾರಣೆಗಾಗಿ ತಾವೂ ಪ್ರಯತ್ನಿಸಿ ನಾವೂ ಕೈ ಜೋಡಿಸುತ್ತೇವೆ. ಆದರೆ ಇದನ್ನು ನೆಪವಾಗಿಸಿ ಧರ್ಮವನ್ನು ದೂಷಿಸುವುದು ಸರಿ ಅಲ್ಲ. ಇದನ್ನು ನೋಡುವಾಗ ತಮ್ಮ ಮೊನಚಾದ ಬರಹಗಳ ಮೂಲಕ ಪರೋಕ್ಷವಾಗಿ ಧರ್ಮನಿಂದನೆಯ ಕಾರ್ಯ ಮಾಡುತ್ತಿದ್ದೀರೋ ಎಂದು ಭಾಸವಾಗುತ್ತಿದೆ.
    ಒಂದು ಮಗುವನ್ನು, ಮಾನವನಾಗಿ ಹುಟ್ಟಿದ ಮೇಲೆ ಮಾನವತೆಯನ್ನು ಯಾವ ರೀತಿ ತೋರ್ಪಡಿಸಬೇಕು, ಇದರಿಂದ ಸಮಾಜದ ಮೇಲೆ ಆಗುವ ಪರಿಣಾಮಗಳು ಏನು? ಎಂದು ಭೋಧಿಸುವವರನ್ನು ತಾವು ಒಂದು ರೀತಿಯಲ್ಲಿ ದಮನ ಮಾಡುವಂತಹ ಕಾರ್ಯಗಳನ್ನು ಮಾಡಲು ಪ್ರಯತ್ನಿಸುತ್ತಿದ್ದೀರಿ. ಇದಕ್ಕೆ ಮೂಲಭೂತವಾದ ಎಂಬಂತಹ ಮನ ನೋಯಿಸುವಂತಹ ಶಬ್ದವನ್ನು ಪ್ರಯೋಗಿಸಿದ್ದೀರಿ. ಇಂತಹ ಬರಹಗಳ ಮೂಲಕ ತಾವು ಒಂದು ಸಮಾಜವನ್ನು ಜಾಗ್ರತಗೊಳಿಸಲು ಪ್ರಯತ್ನಿಸುವುದು ವಿಪರ್ಯಾಸವೇ ಸರಿ.

    Reply
  4. Anonymous

    ondu putta magu tundudugeyalli kandre adralli ashlilavenu? Dance madidre a maguvalli kano ashleelavenu. Papa adakkoo kanasugalillave.

    Reply
  5. Girish

    ಲೇಖನ ಯಾವೊಂದು ಸಮುದಾಯದ ಪರವಾಗಿಯೂ ಇಲ್ಲ, ವಿರುದ್ಧವಾಗಿಯೂ ಇಲ್ಲ. ಇರುವ ಸಣ್ಣ ಪುಟ್ಟ ಸಮಸ್ಯೆಗಳನ್ನು ಸರಳ ಶಬ್ಧಗಳಲ್ಲಿ ವಿವರಿಸಿದ್ದಾರೆ. ಇಲ್ಲಿ ನಾವು ಗಮನಿಸಬೇಕಾದ ಒಂದು ಅಂಶವೆಂದರೆ ಧಾರ್ಮಿಕತೆಯ ಕಟ್ಟುನಿಟ್ಟಿನ ಹೆಸರಿನಿಂದ ಶಿಸ್ತುಕ್ರಮಗಳಿಗೆ ಒಳಗಾಗುವವರಲ್ಲಿ ಹೆಚ್ಚಿನವರು ಬಡವರು, ಧ್ವನಿಯೆತ್ತುವಷ್ಟು ತಾಕತ್ತಿಲ್ಲದವರು. ಇದು ಎಲ್ಲಾ ಮತ, ಧರ್ಮಗಳಿಗೂ ಅನ್ವಯಿಸುವ ಮಾತು. ಬಹುತೇಕ ಅನುಕೂಲಸ್ಥರು ಏನೆಲ್ಲಾ ಮಾಡುತ್ತಾರೆ, ಹೇಗೆಲ್ಲಾ ಅನುಭವಿಸುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ಅಪ್ರಿಯ ಸತ್ಯ. ಇಂತಹವರ ವ್ಯವಹಾರಗಳಲ್ಲಿ ಧಾರ್ಮಿಕ ಕಟ್ಟುಪಾಡುಗಳು ಅಷ್ಟಾಗಿ ಅಡ್ಡಿ ಬರುವುದಿಲ್ಲ. ಇದು ಎಲ್ಲರಿಗೂ ಅನ್ವಯವಾಗುವ ಮಾತಲ್ಲವಾದರೂ ಎಲ್ಲಾ ಮತ, ಧರ್ಮಗಳಲ್ಲಿ ಇಂತಹವರು ಇದ್ದೇ ಇರುವುದು ಎಲ್ಲರಿಗೂ ತಿಳಿದ ವಿಚಾರ.

    ಗಿರಿ, ಬಜಪೆ

    Reply
  6. Ananda Prasad

    ಇಸ್ಲಾಂ ಧರ್ಮದವರು ವೈಚಾರಿಕತೆ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವಲ್ಲಿ ಬಹಳ ಹಿಂದುಳಿದಿದ್ದಾರೆ. ಬರಿಯ ಧಾರ್ಮಿಕ ಶಿಕ್ಷಣ ಮಾತ್ರ ಸಿಗುತ್ತಿರುವ ಕಾರಣ ಇಸ್ಲಾಂ ಧರ್ಮದವರು ವೈಚಾರಿಕವಾಗಿ ಬೆಳವಣಿಗೆ ಹೊಂದುತ್ತಿಲ್ಲ. ಇದುವೇ ಮುಸ್ಲಿಮರು ವಿಶಾಲ ಮನೋಭಾವದಿಂದ ಯೋಚಿಸದೆ ಇರಲು ಕಾರಣವಾಗಿದೆ. ಮುಸ್ಲಿಮರು ಸುಧಾರಣೆಗೆ ತೆರೆದುಕೊಳ್ಳಬೇಕು. ಮುಸ್ಲಿಂ ಪುರುಷರಿಗೆ ನಾಲ್ಕು ಮದುವೆಯಾಗಲು ಅವಕಾಶ ಕೊಟ್ಟಿರುವ ಧರ್ಮ ಅದೇ ರೀತಿ ಮುಸ್ಲಿಂ ಮಹಿಳೆಯರಿಗೆ ನಾಲ್ಕು ಮದುವೆಯಾಗಲು ಅವಕಾಶ ಕೊಟ್ಟಿಲ್ಲ. ಹಾಗಾಗಿ ಇದು ಒಳ್ಳೆಯ ಧೋರಣೆ ಅಲ್ಲ. ಇಂದಿನ ದಿನದ ವೈಚಾರಿಕತೆಗೆ ಹೊಂದಿಕೊಂಡು ಮುಸ್ಲಿಂ ಪುರುಷರಿಗೆ ನಾಲ್ಕು ಮದುವೆಯಾಗಲು ಇರುವ ಅವಕಾಶವನ್ನು ಧಾರ್ಮಿಕ ನಾಯಕರು ರದ್ದು ಪಡಿಸುವುದು ಅಗತ್ಯ. ಅದೇ ರೀತಿ ದೇಶದ ಜನಸಂಖ್ಯೆಯ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಎಲ್ಲ ಮುಸ್ಲಿಮರೂ ಜನಸಂಖ್ಯೆಯ ನಿಯಂತ್ರಣಕ್ಕೆ ಮುಂದಾಗುವುದು ದೇಶದ ಹಿತದೃಷ್ಟಿಯಿಂದ ಅಗತ್ಯ. ಸಾವಿರಾರು ವರ್ಷಗಳ ಹಿಂದೆ ಮಾಡಿದ ಧಾರ್ಮಿಕ ನಿಯಮಗಳು ಇಂದಿಗೂ ಅನ್ವಯ ಆಗಬೇಕೆಂದು ರಚ್ಚೆ ಹಿಡಿಯುವುದು ಸೂಕ್ತವಲ್ಲ.

    Reply
    1. avani

      ಆನಂದ ಅವರೆ ನಿಮ್ಮ ಕಮೆಂಟ್ ನೋಡಿದರೆ ನೀವು ಯಾವುದೋ ಆರ್ ಎಸ್ ಎಸ್ ಗರಡಿಯಿಂದ ಬಂದಿದೆ ಎನಿಸುತ್ತದೆ. ಅಥವ ಬಜರಂಗಿ ಇರಬೇಕು ಇಲ್ಲವೆ ಮೋದಿ ಪಾಳಯದಿಂದ ಬಂದಿರಬ್ೇಕು. ಸರಿ ತಾನೆ?? ಹಾ ಹಾ ಹಾ.

      Reply
  7. bhatmahesht

    ಗಂಡಸರು ಮಾತ್ರ ನಾಲ್ಕು ಮದುವೆಯಾಗಬಹುದು ಎಂಬುದು ನಮ್ಮನ್ನು ಸೃಷ್ಟಿಸಿದ ಅಲ್ಲಾಹ್ ನ ಆದೇಶವಾಗಿದೆ. ಅದನ್ನು ಧಿಕ್ಕರಿಸುವ ಹಕ್ಕು ಯಾರಿಗೂ ಸಲ್ಲುವದಿಲ್ಲ. ಅಲ್ಲಾಹ್ ಬಂದು ಹೇಳಿಕೊಟ್ಟ ಜಗತ್ತಿನ ಅತ್ಯಂತ ಪರ್ಫೆಕ್ಟ್ ಜೀವನ ವಿಧಾನದಲ್ಲಿ ಒಂದು ಭಾಗ ಅದು.

    Reply
  8. nisar bangalore

    ಪ್ರತಿಯೊಂದು ಧರ್ಮದ ಮೂಲಭೂತವಾದವು ಮಹಿಳೆಯನ್ನು ಎಷ್ಟು ಶೋಷಣೆಗೆ ಒಳಪಡಿಸಲು ಸಾಧ್ಯವೋ ಅಷ್ಟು ಪ್ರಯತ್ನವನ್ನು ಪಟ್ಟಿವೆ. ಅದರಲ್ಲಿ ಇಸ್ಲಾಂ ಧರ್ಮವೇನೂ ಹೊರತಲ್ಲ. ಮೌಲಾನಾ ಅಬ್ದುಲ್ ಹಫೀಸ್ ಕಾಸಿಮಿಯವರು ಅವರು ಲೇಖನದಲ್ಲಿ ಲೇಖಕರು ಉಲ್ಲೇಖಿಸಿದಂತಹಾ ಬಹುಪತ್ನಿತ್ವದಿಂದಾಗುತ್ತಿರುವ ಸಮಸ್ಯೆಯ ಕುರಿತಾಗಿ ಪ್ರತಿಕ್ರಿಯೆ ಚರ್ಚಾಸ್ಪದ. ಪ್ರವಾದಿ ಮುಹಮ್ಮದ್ ಹಾಗೂ ಆನಂತರರ ಕೆಲವು ಕಾಲಗಟ್ಟಗಳ ಕಾಲ ನಡೆಯುತ್ತಿದ್ದ ಯುದ್ಧಗಳು ಅಂತರ್ ಕಲಹಗಳು ( ಅಂಥಹಾ ಸಂಧರ್ಭದಲ್ಲಿ ಯುದ್ಧವೇ ಪುರುಷಾರ್ಥದ ಸಂಕೇತವೂ ಆಗಿತ್ತು) ನಡೆಯುತ್ತಿದ್ದ ಸಂಧರ್ಭದಲ್ಲಿ ಸಾಕಷ್ಟು ಪುರುಷರು ಪ್ರಾಣ ಕಳೆದುಕೊಳ್ಳುತ್ತಿದ್ದರು. ಸಹಜವಾಗಿ ಪುರುಷರ ಸಂಖ್ಯೆ ಕೂಡಾ ವಿರಳವಾಗತೊಡಗಿತ್ತು. ಮೃತ ಪುರುಷನ ವಿಧವೆ ತಾನು ಸಾಯುವ ವರೆಗೆ ವಿಧವೆಯಾಗಿಯೇ ಇರಬಾರದು ಎಂಬ ನಿಟ್ಟಿನಲ್ಲಿ ಬಹುಪತ್ನಿತ್ವ ಜಾರಿಗೆ ಬಂದಿರಬಹುದು. ಆದರೆ ಅಂದಿನ ಕಾಲಕ್ಕೂ ಇಂದಿನ ಕಾಲಕ್ಕೂ ಸಾಕಷ್ಟು ವೆತ್ಯಾಸವಿದೆ. ( ಅಂದು ಯುದ್ಧದಲ್ಲಿ ಕುದುರೆ ಬಳಸುತ್ತಿದ್ದರು ಕತ್ತಿ ಬಳಸುತ್ತಿದ್ದರು ಇಂದು ಅತ್ಯಾಧುನಿಕ ಮಿಷಿನ್ ಗನ್ ಕಾಲ ) ಅಂದಿನ ವಿದ್ಯಮಾನಕ್ಕೆ ಅನುಗುಣವಾಗಿ ಜಾರಿಗೆ ಬಂದ ಕೆಲವೊಂದು ನಿಯಮಗಳು ಆಚಾರ ವಿಚಾರಗಳನ್ನು ಇಂದಿಗೂ ಅನ್ವಯಿಸಿ ಅದಕ್ಕೆ ಸಮಜಾಯಿಸಿಕೊಟ್ಟು , ಕೆಲವೊಂದು ಅಂಕಿ ಅಂಶಗಳನ್ನೂ ನೀಡಿ ಅದುವೇ ಸರಿಯಾದ ಹಾದಿ ಎಂದು ವಾದ ಮಾಡುವುದು ಮೂರ್ಖತನದ ಪರಮಾವಧಿ. ಧರ್ಮ ನೀಡಿದ ಅವಕಾಶವನ್ನು ಬಳಸಿಕೊಂಡು ಮುಸ್ಲಿಂ ಸಮಾಜದಲ್ಲಿ ಮನಸೋ ಇಚ್ಚೆ ಮದುವೆಯಾಗಿ ಕೈಕೊಟ್ಟು ಹೋಗುತ್ತಿರುವವರ ಸಂಖ್ಯೆ ತಮಗೂ ಚೆನ್ನಾಗಿ ಗೊತ್ತಿರಬಹುದು. ಇನ್ನು ಖಾಸಿಮಿಯವರು ಮಕ್ಕಳಿಗೆ ನೈತಿಕ ಶಿಕ್ಷಣ ಭೋಧಿಸುವ ಹಕ್ಕು ಅಧ್ಯಾಪಕರಿಗಿದೆ ಎಂದಿದ್ದಾರೆ. ಅದು ಖಂಡಿತಾ ಒಪ್ಪತಕ್ಕಂತಹಾ ಮಾತು. ಆದರೆ ಅದರ ಜೊತೆ ಜೊತೆಗೆ ನೈತಿಕತೆಯ ಹೆಸರಲ್ಲಿ ಮಕ್ಕಳ ಹಕ್ಕನ್ನು ಕಸಿದುಕೊಳ್ಳುವುದು ಅಪರಾದ, ಇದರ ಜೊತೆಗೆ ಮುಸ್ಲಿಂ ಸಮಾಜದ ಕೆಲವೊಂದು ಭವನೆಗಳನ್ನು ಲೇಖಕರು ಬರೆದಿದ್ದಕ್ಕಾಗಿ ಅದು ಧರ್ಮ ವಿರೋಧಿ ಬರಹ ಎಂದು ಅರ್ಥೈಸಿಕೊಳ್ಳುವುದು ತಪ್ಪು. ಹೆಣ್ಣಿಗೆ ಇಸ್ಲಾಂ ಧರ್ಮ ಸಂಪೂರ್ಣ ಸ್ವಾತಂತ್ರ ಕೊಟ್ಟಿದೆ ಎಂದು ಲೇಖಕರಾದ ಇರ್ಷಾದ್ ಅವರೂ ಬರೆದಿದ್ದಾರೆ ಆದರೆ ನಾನು ಕೆಲವು ತಿಂಗಳ ಹಿಂದೆ ಓದಿದ ಶಾಂತಿ ಪ್ರಕಾಶನದ ಪುಸ್ತಕವೊಂದರಲ್ಲಿ ಹೀಗೆ ಬರೆದಿತ್ತು. ಇಸ್ಲಾಂ ರಾಷ್ಟ್ರ ರಕ್ಷಣೆ ಹಾಗೂ ಸಮಾಜದ ರಕ್ಷಣೆಯ ಹೊಣೆಯನ್ನು ಮೂಲತಃ ಪುರುಷನ ಮೇಲೆ ಹಾಕಿದೆ. ಸ್ತ್ರೀಯ ಚಟುವಟಿಕೆಯ ದಿಕ್ಕನ್ನು ಮನೆಯ ಕಡೆ ತಿರುಗಿಸಿದೆ. ಪೇಟೆಯ ವ್ಯಾಪಾರಿ , ಕಛೇರಿಯ ಗುಮಾಸ್ತೆ, ನ್ಯಾಯಾಲಯದ ನ್ಯಾಯಾಧೀಶೆ , ಮತ್ತು ಸೈನ್ಯದ ಸಿಪಾಯಿಯಾಗುವುದು ಆಕೆಯ ನೈಜ್ಯ ಸ್ಥಾನಮಾನ ಅಲ್ಲ . ಬದಲಾಗಿ ಆಕೆಯ ನೈಜ್ಯ ಕಾರ್ಯ ಕ್ಷೇತ್ರವು ಮನೆಯಾಗಿದೆ. ( ಪೇಜ್ 49)
    ಒಮ್ಮೆ ಹ. ಅಬ್ದುಲ್ಲಾ ಬಿನ್ ಮಸ್ ಊದ್ ಹೇಳಿದರು ಕೃತಕ ಕೂದಲು ಧರಿಸುವ, ಮೈ ಕೆತ್ತಿಸುವ , ಹಲ್ಲುಗಳನ್ನು ಸವೆಸಿ ಅವುಗಳನ್ನು ಚೆಂದಮಾಡುವ ಸ್ರೀಯರ ಮೇಲೆ ಅಲ್ಲಾಹನ ಶಾಪವಿದೆ.
    ಇಸ್ಲಾಂಮಿನಲ್ಲಿ ಸ್ತ್ರೀ-ಪರುಷರು ಸಮ್ಮಿಶ್ರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಾಗಲಿ , ಶಿಕ್ಷಣಕ್ಕಾಗಲಿ, ಅವಕಾಶವಿಲ್ಲ. ಓರ್ವ ಮಹಿಳೆ ಪರ ಪುರುಷನ ಜೊತೆ ಸೈನಿಕ ತರಬೇತಿಯಲ್ಲಾಗಲಿ, ಅಟೋಟಗಳಲ್ಲಾಗಲಿ ಭಾಗವಹಿಸುವಂತ್ತಿಲ್ಲ. ಪೇಟೆಯಿಂದ ಪಾರ್ಲಿಮೆಂಟ್ ತನಕ ಎಲ್ಲಿಯೂ ಅವರು ಪರಸ್ಪರ ಬೆರೆಯುವುದು ಇಸ್ಲಾಮಿ ಶಿಕ್ಷಣಕ್ಕೆ ವಿರುದ್ಧ.
    ನಿಮ್ಮ ಸ್ತ್ರೀಯರಿಂದ ಆಜ್ನೆ ಉಲ್ಲಂಘನೆಯ ಅಶಂಕೆ ನಿಮಗಿದ್ದರೆ ಅವರಿಗೆ ನೀವು ಉಪದೇಶ ನೀಡಿರಿ.ಮಲಗುವಲ್ಲಿಂದ ದೂರವಿರಿ ಮತ್ತು ಅವರಿಗೆ ಹೊಡೆಯಿರಿ. ಅನಂತರ ಅವರು ವಿಧೇಯಕರಾಗಿ ನಡೆದರೆ ಅವರ ಮೇಲೆ ಕೈಯೆತ್ತಲು ಬೇಕು ಬೇಕೆಂದೆ ನೆಪ ಹುಡುಕಬೇಡಿ. ( ಇದು ಮಹಿಳಾ ದೌರ್ಜನ್ಯ ಕಾನೂನು ಅಡಿಯಲ್ಲಿ ಬರುವುದಿಲ್ಲವೇ) ಇವೆಲ್ಲವನ್ನು ನೋಡಿದ್ರೆ ಲೇಕಕರು ಯಾವ ಅರ್ಥದಲ್ಲಿ ಇಸ್ಲಾಂ ಧರ್ಮದಲ್ಲಿ ಮಹಿಳೆಯರಿಗೆ ಸ್ವಾತಂತ್ರವಿದೆ ಎಂದು ಹೇಳಿದ್ದಾರೋ ಗೊತ್ತಾಗುತ್ತಿಲ್ಲ.

    Reply
    1. avani

      ನಿಸಾರ್ ಅವರೆ ನಿಮ್ಮ ತಲೆ ಗಟ್ಟಿಯಾಗಿದೆ ತಾನೆ? ಯಾಕೆಂದರೆ ನೀವು ಫೆಬ್ರುವರಿ 25 ರಂದು ಬರೆದ ಲೇಖನವನ್ನು ನಾನು ಇಂದು ಅಂದರೆ ಮೇ 7 ರಂದು ಓದುತ್ತಿರುವೆ. ನಿಮಗೇನೂ ಆಗಿಲ್ಲದಿದ್ದರೆ ಅಷ್ಟೇ ಸಾಕು. [[ನಿಮ್ಮ ಸ್ತ್ರೀಯರಿಂದ ಆಜ್ನೆ ಉಲ್ಲಂಘನೆಯ ಅಶಂಕೆ ನಿಮಗಿದ್ದರೆ ಅವರಿಗೆ ನೀವು ಉಪದೇಶ ನೀಡಿರಿ.ಮಲಗುವಲ್ಲಿಂದ ದೂರವಿರಿ ಮತ್ತು ಅವರಿಗೆ ಹೊಡೆಯಿರಿ. ಅನಂತರ ಅವರು ವಿಧೇಯಕರಾಗಿ ನಡೆದರೆ ಅವರ ಮೇಲೆ ಕೈಯೆತ್ತಲು ಬೇಕು ಬೇಕೆಂದೆ ನೆಪ ಹುಡುಕಬೇಡಿ. ( ಇದು ಮಹಿಳಾ ದೌರ್ಜನ್ಯ ಕಾನೂನು ಅಡಿಯಲ್ಲಿ ಬರುವುದಿಲ್ಲವೇ) ಇವೆಲ್ಲವನ್ನು ನೋಡಿದ್ರೆ ಲೇಕಕರು ಯಾವ ಅರ್ಥದಲ್ಲಿ ಇಸ್ಲಾಂ ಧರ್ಮದಲ್ಲಿ ಮಹಿಳೆಯರಿಗೆ ಸ್ವಾತಂತ್ರವಿದೆ ಎಂದು ಹೇಳಿದ್ದಾರೋ ಗೊತ್ತಾಗುತ್ತಿಲ್ಲ.]] ಹೀಗೆಲ್ಲ ಬರೆದಿದ್ದೀರಲ್ಲ? ತಲೆ ಗಟ್ಟಿ ಇದೆ ಅಂತ ಬಂಡೆಗೆ ಹೊಡೆದುಕೊಳ್ಳುವಂತಿದೆ ನಿಮ್ಮ ಕಮೆಂಟು ಅಥವಾ ನಿಸ್ಸಾರ್ ಹೆಸರಿನಲ್ಲಿ ಬರೆದಿರುವ ನೀವು ಮತ್ತು ಇರ್ಷಾದ್ ಆರ್ ಎಸ್ ಎಸ್ ಗರಡಿಯವರಿರಬೆಕು. ಅಥವಾ ಮೋದಿ ಪಾಳಯದವರಿರಬೇಕು. ಹೆಸರು ಬದಲಾಯಿಸಿಕೊಂಡಿದ್ದೀರಿ. ಇರಲಿ ನಿಮ್ಮ ಮತ್ತು ಇರ್ಷಾದ್ ಅವರ ಧೈರ್ಯಕ್ಕೆ ಕೋಟಿ ಸಲಾಂ ಮತ್ತು ಅಲ್ಲಾ ನಿಮಗೆ ನೂರು ವರ್ಷ ಆಯುಸ್ಸು ನೀಡಲಿ.

      Reply
  9. Ananda Prasad

    ಮುಸ್ಲಿಂ ಮಹಿಳೆಗೆ ಸ್ವಾತಂತ್ರ್ಯ ಇದೆ ಎಂದು ನನಗೆ ಅನಿಸುತ್ತಿಲ್ಲ. ಮುಸ್ಲಿಂ ಮಹಿಳೆಯರನ್ನು ಬುರ್ಖಾ ಎಂಬ ಪರದೆಯಲ್ಲಿ ಬಂಧಿಸುವುದು ಯಾವ ರೀತಿಯ ಸ್ವಾತಂತ್ರ್ಯ ಎಂದು ಕೇಳಬೇಕಾಗಿದೆ. ಸೆಕೆ ಇರುವ ದೇಶಗಳಲ್ಲಿ ಬುರ್ಖಾ ಹಾಕಿಕೊಳ್ಳುವುದು ಮತ್ತಷ್ಟು ಹಿಂಸೆಯೇ ಸರಿ. ಇದು ಸೆಕೆಯನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ. ಮುಸ್ಲಿಂ ಮಹಿಳೆಯರು ಮಾತ್ರ ಬುರ್ಖಾ ಹಾಕಿಕೊಳ್ಳಬೇಕು ಎಂಬುದು ಕೂಡ ತಾರತಮ್ಯವಲ್ಲವೇ? ಮುಸ್ಲಿಂ ಪುರುಷರಿಗೆ ಕೂಡ ಬುರ್ಖಾ ಹಾಕಿಕೊಳ್ಳಬೇಕೆಂದು ಯಾಕೆ ಧರ್ಮ ವಿಧಿಸುವುದಿಲ್ಲ? ಮುಸ್ಲಿಂ ಮಹಿಳೆಯರನ್ನು ಪರಪುರುಷರು ನೋಡಬಾರದು ಎಂದಾದರೆ ಮುಸ್ಲಿಂ ಪುರುಷರನ್ನು ಬೇರೆ ಮಹಿಳೆಯರು ನೋಡಬಹುದೇ? ಮುಸ್ಲಿಂ ಪುರುಷರನ್ನು ಬೇರೆ ಮಹಿಳೆಯರು ನೋಡದಂತೆ ಅವರಿಗೆ ಕೂಡ ಬುರ್ಖಾ ವಿಧಿಸುವುದು ನ್ಯಾಯೋಚಿತ. ಸೆಕೆ ಇರುವ ಪ್ರದೇಶಗಳಲ್ಲಿ ಉಡುಪಿನ ಮೇಲೆ ಮತ್ತೊಂದು ಪರದೆಯನ್ನು ಹಾಕಿಕೊಳ್ಳುವ ಶಿಕ್ಷೆಯನ್ನು ಮುಸ್ಲಿಂ ಪುರುಷರಿಗೂ ವಿಧಿಸಿದರೆ ಇದರ ಪರಿಣಾಮ ಅವರಿಗೆ ಅರಿವಾದೀತು.

    Reply

Leave a Reply to Anonymous Cancel reply

Your email address will not be published. Required fields are marked *