ಅಸಹಾಯಕರಿಗೆ ನ್ಯಾಯ ಎಲ್ಲಿದೆ?


– ರೂಪ ಹಾಸನ


 

ಮರೆಯಬೇಕೆಂದರೂ ಆ ಚಿತ್ರವನ್ನು ಮರೆಯಲಾಗುತ್ತಿಲ್ಲ. ತುಂಬಿದ ಬಸಿರಿನ ಪುಟ್ಟ ಹುಡುಗಿ…… ಆಕಾಶದತ್ತ ದೃಷ್ಟಿ ನೆಟ್ಟು ತನ್ನನ್ನೇ ಮರೆತು ವಶೀಕರಣಗೊಂಡವಳಂತೆ ಕುಳಿತಿದ್ದ ಆ ಗೊಂಬೆಯಂತಾ ಹುಡುಗಿಯ ನೆನಪು ಮತ್ತೆ ಮತ್ತೆ ಕಾಡುತ್ತಲೇ ಇರುತ್ತದೆ. ನಾನು, ನನ್ನ ಗೆಳತಿ ಯಾವುದೋ ಕೆಲಸಕ್ಕೆಂದು ಹೋದವರು, ಅದನ್ನು ಮುಗಿಸಿ ಬರುವಾಗ ಈ ಪುಟ್ಟ ಪುಟ್ಟ ಗುಡಿಸಿಲಿನಾಕಾರದ ಚಿಂದಿ ಬಟ್ಟೆಯ ಗುಡಾರಗಳು ಕಾಣಿಸಿದ್ದವು. ಕುತೂಹಲದಿಂದ ಅದನ್ನು ನೋಡುತ್ತಾ ಬರುತ್ತಿರುವ ನಮಗೆ, ಅವಳು ಕಂಡಿದ್ದಳು!

ಇನ್ನೂ 12-13 ವಯಸ್ಸಿನ ಎಳೆಯ ಬಾಲೆ. ಆ ಗುಡಾರಗಳ ಮುಂದಿನ ಮರದ ನೆರಳಲ್ಲಿ ತನಗೂ ಈ ಲೋಕಕ್ಕೂ ಸಂಬಂಧವೇ ಇಲ್ಲವೆಂಬಂತೆ, ಅಕ್ಷರಶಃ ಕಲ್ಲಿನಂತೆ ಕುಳಿತಿದ್ದಳು. ಬಡಕಲು ದೇಹದಲ್ಲಿ, ಅವಳ ವಯಸ್ಸಿಗೆ ಮೀರಿ ಬೆಳೆದು ನಿಂತ ಅವಳ ಬಸಿರು ನಮ್ಮ ಕುತೂಹಲ ಕೆರಳಿಸಿತ್ತು. ಇಷ್ಟು ಚಿಕ್ಕ ಹುಡುಗಿಗೆ ಮದುವೆ… ಮಕ್ಕಳ…. ಜಂಜಾಟವೇ ಎಂದು ನೊಂದುಕೊಳ್ಳುತ್ತಿರುವಾಗಲೇ ಸ್ವಲ್ಪ ದೂರದಲ್ಲಿ ಮುದುಕನೊಬ್ಬ ಬೀಡಿ ಸೇದುತ್ತಾ ಕುಳಿತಿರುವುದು ಕಾಣಿಸಿತ್ತು.

ಮೆಲ್ಲಗೆ ಆ ಮುದುಕನ ಬಳಿ ಹೋಗಿ ನಿಂತಾಗ ಅವನು ಬೆಚ್ಚಿ ಬಿದ್ದಿದ್ದ. ಮೋಟು ಬೀಡಿಯನ್ನು ಆಚೆಗೆಸೆದು ‘ಏನ್ ಬೇಕ್ ತಾಯಿ?’ ಎಂದು ತೊದಲುತ್ತಾ ನುಡಿದಿದ್ದ. ‘ಇಷ್ಟು ಚಿಕ್ಕ ಹುಡುಗಿಗೆ ಮದ್ವೆ ಮಾಡಿದ್ದೀರಲ್ಲ? ಬಸುರಿ ಬೇರೆ?’ ಎಂದು ಪ್ರಶ್ನಿಸಿದ್ದೆವು. ಅದಕ್ಕೆ ಆ ಮುದುಕ ಹೇಳಿದ ಕಥೆ ನಮ್ಮನ್ನು ಬೆಚ್ಚಿಬೀಳಿಸಿತ್ತು.

ಬಳ್ಳಾರಿ ಜಿಲ್ಲೆಯ ಪುಟ್ಟ ಹಳ್ಳಿಯೊಂದರಿಂದ ಗುಳೆ ಬಂದ ಹದಿನೈದು ಜನರ ಕುಟುಂಬ ಅದಾಗಿತ್ತು. ಬದುಕಿನ ದಾರಿ ಹುಡುಕುತ್ತಾ ಅವರು ಊರೂರು ಅಲೆಯುತ್ತಿದ್ದರು. ಹೀಗೇ ಒಂದೂರಿನ ಬಸ್ ನಿಲ್ದಾಣದಲ್ಲಿ ಮಲಗಿ, ರಾತ್ರಿ ಎಲ್ಲರೂ ಗಾಢ ನಿದ್ದೆಯಲ್ಲಿದ್ದ ಹೊತ್ತಿನಲ್ಲಿ ಈ ಹುಡುಗಿಯನ್ನು ಯಾರೋ ಪೋಕರಿಗಳು ಸದ್ದಿಲ್ಲದೇ ಹೊತ್ತೊಯ್ದು, child-rapeಭೀಕರವಾಗಿ ಅತ್ಯಾಚಾರ ನಡೆಸಿ ಪರಾರಿಯಾಗಿದ್ದರು. ಅಂದಿನಿಂದ ಇವಳು ಸಂವೇದನೆಗಳೇ ಸತ್ತು ಹೋದ ಜೀವಚ್ಛವವಾಗಿದ್ದಳು. ಇದರೊಂದಿಗೆ ಆ ಹುಡುಗಿಯ ಬಸಿರು, ಕುಟುಂಬಕ್ಕೆ ಮತ್ತೊಂದು ಆತಂಕ ಸೃಷ್ಟಿಸಿತ್ತು.

‘ಅತ್ಯಾಚಾರ ಆಗಿದೆ ಅಂತಾ ಗೊತ್ತಾದ ತಕ್ಷಣ ಪೊಲೀಸ್ನೊರಿಗೆ ಕಂಪ್ಲೆಂಟ್ ಕೊಡ್ಬಾರ್‍ದಿತ್ತಾ ಅಜ್ಜಾ’ ಎಂದು ಪ್ರಶ್ನಿಸಿದ್ದಕ್ಕೆ ‘ಏನಂತಾ ಕೊಡನವ್ವ? ಅವರು ನೀವ್ಯಾರು? ಎಲ್ಲಿಂದ ಬಂದಿದ್ದೀರಾ? ಯಾತಕ್ಕೆ ಬಂದಿದ್ದೀರ? ಅಲ್ಯಾಕೆ ಮಲಗಿದ್ರಿ? ಅತ್ಯಾಚಾರ ಆಗಿದ್ದಕ್ಕೆ ಸಾಕ್ಷಿ ಏನು? ಅಂತೆಲ್ಲ ಕೇಳ್ತಾರೆ. ಏನ್ ಹೇಳಿದ್ರು ನಮ್ಮದೇ ತಪ್ಪು ಅಂತ ಸಾಧಿಸಿ ನಮ್ಮಂತ ಬಡವರ ಹತ್ರನೇ ದುಡ್ಡು ಕಿತ್ತತ್ತಾರೆ. ನಮಗೆ ಏನೂ ಅರ್ಥ ಆಗದೂ ಇಲ್ಲ. ಕಾನೂನೆಲ್ಲ ನಮ್ಮಂತವರಿಗಲ್ಲ ಬುಡಿ. ಉಳ್ಳವರಿಗೆ, ನಗರದವರಿಗೆ, ನಿಮ್ಮಂತ ವಿದ್ಯಾವಂತರಿಗೆ. ನಮಗೆ ಇವತ್ತೊಂದ್ ಊರು ನಾಳೆ ಒಂದ್ ಊರು. ಕೋರ್ಟು, ಕೇಸು ಅಂತ ಎಲ್ಲಿ ಅಲೆಯದು? ಅದಕ್ಕೆಲ್ಲ ದುಡ್ಡೆಲ್ಲಿಂದ ತರದು? ಇಂತವೆಲ್ಲ ನಮಗೆ ಮಾಮೂಲು. ದೇವರಿಟ್ಟಹಂಗ್ ಬದುಕು…..’ ಅಂತ ನಿಟ್ಟುಸಿರಿಟ್ಟ. ಆ ಹುಡುಗಿಯ ಸ್ಥಿತಿ ನೋಡಿ ನಮ್ಮ ಕಣ್ಣು ಮಂಜಾಗಿತ್ತು.

ಇವರ ಕಥೆಯನ್ನು ಕೇಳಿದ ನಮಗೆ ಖಂಡಿತ ಇವರು, ಈ ಹುಡುಗಿಗೆ ಹುಟ್ಟುವ ಮಗುವನ್ನು ನೋಡಿಕೊಳ್ಳಲಾರರು ಎಂದೆನಿಸಿತ್ತು. ಹೀಗೆಂದೇ ‘ಅಜ್ಜಾ ಈ ಹುಡುಗಿಗೆ ಹುಟ್ಟೋ ಮಗು ಏನ್ಮಾಡ್ತಿರಾ?’ ಎಂದು ಕೇಳಿದ್ದೆವು. ಅಜ್ಜಾ ನಿರ್ಭಾವುಕನಾಗಿ ‘ಎಲ್ಲಾದ್ರೂ ಬಿಸಾಕ್ತಿವಿ. ಇದೇ ಒಂದು ಹೊರೆ. ಇದನ್ನೇ ಸಾಕಕ್ಕಾಗ್ತಾ ಇಲ್ಲ. ಇನ್ನು ಆ ಮಗುನ ಏನು ಮಾಡೋದು?’ ಎಂದಿದ್ದ.

ತಕ್ಷಣ ನಾವು ‘ಅಯ್ಯೋ ಹಾಗ್ಮಾಡಬೇಡಿ ಅಜ್ಜಾ. ಆ ಹುಡುಗಿನ ಅವಳ ಹೆರಿಗೆ ಆಗುವವರೆಗೂ ಚೆನ್ನಾಗಿ ನೋಡಿಕೊಂಡು ಹುಟ್ಟುವ ಮಗುವಿಗೆ, ಹಾಗೂ child-rape-indiaಇವಳಿಗೆ ಒಂದು ನೆಲೆ ಮಾಡಬಹುದು. ನಾಳೆ ಎಲ್ಲಾ ವ್ಯವಸ್ಥೆ ಮಾಡಿಕೊಂಡು ಬರ್‍ತಿವಿ. ಇಲ್ಲೇ ಇರ್‍ತೀರ ಅಲ್ವಾ?’ ಎಂದು ಎಲ್ಲವನ್ನೂ ವಿವರವಾಗಿ ಹೇಳಿ ಅಜ್ಜನ ಮನವೊಲಿಸಿದ್ದೆವು.

‘ಇರ್‍ತಿವಿ. ಎಲ್ಲಾ ಏನೇನೋ ಕೆಲಸಕ್ಕೆ ಹೋಗವರೆ. ಬಂದ್ ಮೇಲೆ ಅವರಿಗೆಲ್ಲ ಹೇಳ್ತಿನಿ’ ಎಂದ ತಾತ. ನಾವು ಆ ಹುಡುಗಿಯನ್ನಿಡುವ ವ್ಯವಸ್ಥೆಗಾಗಿ ಆ ದಿನವೆಲ್ಲಾ ಸಿದ್ಧತೆ ನಡೆಸಿ, ಮಾರನೆ ದಿನ ಆ ಗುಡಾರಗಳಿದ್ದ ಜಾಗಕ್ಕೆ ಹೋದರೆ…… ಅಲ್ಲಿ ಯಾರೂ ಇರಲಿಲ್ಲ! ಅವರಿಗೆ ಬಹುಶಃ ಮತ್ತೆ ಮತ್ತೆ ಮೋಸ, ನೋವು, ಅವಮಾನ, ಹಿಂಸೆಯನ್ನು ಅನುಭವಿಸಿ ಈ ನಾಗರಿಕ ಪ್ರಪಂಚದ ಮೇಲೆಯೇ ಅಪನಂಬಿಕೆ ಮೂಡಿರಬೇಕು.

ಇದು ಒಂದು ಘಟನೆಯಷ್ಟೇ. ಎಲ್ಲಿಯೂ ಸುದ್ದಿಯಾಗದ, ಕಾನೂನು ವ್ಯವಸ್ಥೆಯ ಅಡಿಯಲ್ಲಿಯೂ ದಾಖಲಾಗದ ಹಲವಾರು ಅಪರಾಧಗಳು ನಮ್ಮ ಸುತ್ತ ನಡೆಯುತ್ತಲೇ ಇರುತ್ತವೆ. ಪೊಲೀಸ್, ಕೇಸು, ಕಾನೂನು ಎಲ್ಲದರಿಂದ ಹೊರತಾಗಿ ಮೋಸಕ್ಕೆ, ಅತ್ಯಾಚಾರಕ್ಕೆ, ದುರಾಚಾರಕ್ಕೆ ಒಳಗಾಗಿಯೂ ಎಲ್ಲಿಯೂ ದಾಖಲಾಗದಂತಹ ಇಂತಹ ಪ್ರಕರಣಗಳು ಸದ್ದಿಲ್ಲದೇ ಸುದ್ದಿಯಾಗದೇ ಸತ್ತು ಹೋಗುತ್ತವೆ. ಮೋಸ ಹೋದ ಮುಗ್ಧ ಜೀವಗಳು ಒಳಗೇ ಕುದಿಯುತ್ತಲೇ ಬದುಕು ಸವೆಸುತ್ತವೆ.

ಅಜ್ಜ ಹೇಳಿದಂತೆ ಸಂವಿಧಾನಬದ್ಧ ಹಕ್ಕು, ಕಾನೂನು, ಪೊಲೀಸ್ ವ್ಯವಸ್ಥೆ, ಎಲ್ಲವೂ ಉಳ್ಳವರಿಗೆ, ನಗರದವರಿಗೆ, ವಿದ್ಯಾವಂತರಿಗೆ ಮಾತ್ರ ಸೀಮಿತವಾಗಿಬಿಟ್ಟಿದೆಯೇ? ನಮ್ಮ ಸಮಾನತೆ, ಸ್ವಾತಂತ್ರ್ಯದ ಹಕ್ಕಿನ ಪ್ರತಿಪಾದನೆ, ಅದಕ್ಕಾಗಿ ನಡೆವ ಪ್ರತಿಭಟನೆ, ಹೋರಾಟಗಳೆಲ್ಲವೂ ಬಹುಸಂಖ್ಯಾತ ಬಡವರನ್ನು, ಶೋಷಿತರನ್ನು ಇನ್ನೂ ತಲುಪಲು ಸಾಧ್ಯವೇ ಆಗಿಲ್ಲವೇ? ಅಪರಾಧಿಗಳು ರಾಜಾರೋಷವಾಗಿ ಬೀದಿಯಲ್ಲಿ ತಿರುಗುತ್ತಿದ್ದಾರೆ. ದಮನಿತರು ಬಾಯಿಬಿಡಲಾಗದೇ ನಿತ್ಯ ಒಳಗೇ ಸಾಯುತ್ತಿದ್ದಾರೆ. ಸತ್ಯವೂ ಸದ್ದಿಲ್ಲದೇ ಸತ್ತುಹೋಗಿದೆ! ಬಡವರಿಗೆ ನ್ಯಾಯ ನೀಡುವವರು ಎಲ್ಲಿದ್ದಾರೆ? ಅಪರಾಧಿಗಳನ್ನು ಶಿಕ್ಷಿಸಲು ಪರ್ಯಾಯ ಮಾರ್ಗಗಳೇ ಇಲ್ಲವೇ? ಇವು ನಮ್ಮ ಒಳಗನ್ನು ಅಲುಗಾಡಿಸಿ ಕಾಡುತ್ತಿರುವ ಪ್ರಶ್ನೆಗಳು.

2 thoughts on “ಅಸಹಾಯಕರಿಗೆ ನ್ಯಾಯ ಎಲ್ಲಿದೆ?

  1. Ananda Prasad

    ನಮ್ಮ ಘನ ಭಾರತ ದೇಶದಲ್ಲಿ ಉಳ್ಳವರಿಗೆ, ಶ್ರೀಮಂತರಿಗೆ, ಅಧಿಕಾರಸ್ಥರಿಗೆ, ಧಾರ್ಮಿಕ ಮುಖಂಡರಿಗೆ, ಧರ್ಮಾಧಿಕಾರಿ ಗಳಿಗೆ ಸಂವಿಧಾನ ಹಾಗೂ ಕಾನೂನುಗಳು ಅನ್ವಯ ಆಗುವುದಿಲ್ಲ. ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆಯ ಸಿಬಿಐ ತನಿಖೆ ಆಗಬೇಕೆಂದು ಎಷ್ಟು ಹೋರಾಟ ಮಾಡಿದರೂ ಸಿಬಿಐ ತನಿಖೆ ಆರಂಭವಾದ ಯಾವುದೇ ಸುಳಿವು ಕೂಡ ಇಲ್ಲ. ರಾಜಕೀಯ ಕಾರಣಗಳಿಗಾಗಿ ಬಾಬ್ರಿ ಮಸೀದಿ ಧ್ವಂಸ ಮಾಡಿ ಸಾವಿರಾರು ಜನರ ರಕ್ತ ಹರಿಯಲು ಕಾರಣವಾದವರಿಗೆ ನಮ್ಮ ಸಂವಿಧಾನ ಹಾಗೂ ನ್ಯಾಯಾಂಗ ಯಾವ ಶಿಕ್ಷೆ ನೀಡಲೂ ಸಾಧ್ಯವಾಗಲಿಲ್ಲ. ನಮ್ಮ ದೇಶ ನಾಗರಿಕ ದೇಶವಾಗಲು ಇನ್ನೂ ಎಷ್ಟು ಶತಮಾನಗಳು ಬೇಕೋ ಗೊತ್ತಾಗುವುದಿಲ್ಲ.

    Reply
  2. sharmishtha

    bus nalli hoguvaga, darili yaradru ondu chikka hudugi jothe mathadtha idru anumanada drustiyinda avrannu nodtha irthene. avara kaigalanne gamanista irthene. story similar to this telecasted in crime file disturbed me a lot. aache aakege appa ammana aasareyu illa eeche baduku illa.

    Reply

Leave a Reply

Your email address will not be published. Required fields are marked *