Daily Archives: February 28, 2014

ಶಾಂತಿ ಪ್ರಕಾಶನದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ದಿನೇಶ್ ಅಮೀನ್ ಮಟ್ಟುರವರಿಗೊಂದು ಪತ್ರ…

[ದಿನೇಶ್ ಅಮಿನ್ ಮಟ್ಟುರವರು ಮಂಗಳೂರಿನಲ್ಲಿ ಜಮಾತೆ ಇಸ್ಲಾಮಿ ಹಿಂದ್ ಪ್ರಾಯೋಜಿತ ಮುಸ್ಲಿಂ ಲೇಖಕರ ಸಂಘದ ಸಾಹಿತ್ಯ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕೆ ಹೋಗುವ ಒಂದು ದಿನ ಮೊದಲು ನವೀನ್ ಸೂರಿಂಜೆಯವರು ಬರೆದಿದ್ದ ಪತ್ರ.]

ಪ್ರೀತಿಯ ಗುರುಗಳಾದ ದಿನೇಶ್ ಅಮೀನ್ ಮಟ್ಟುರವರಿಗೆ,

ಮಹಿಳಾ ದಿನಾಚರಣೆಯ ಕ್ರಾಂತಿಕಾರಿ ಶುಭಾಶಯಗಳೊಂದಿಗೆ…..

ನೀವು ನಾಳೆ ಮಂಗಳೂರಿನಲ್ಲಿ ನಡೆಯುತ್ತಿರುವ ಮುಸ್ಲಿಂ ಲೇಖಕರ ಸಂಘದ ”ಮುಸ್ಲಿಂ ಸಾಹಿತ್ಯ ಪ್ರಶಸ್ತಿ ಪ್ರಧಾನ” dinesh-amin-mattu-2ಸಮಾರಂಭ ಮತ್ತು ಹಿರಿಯ ಮುಸ್ಲಿಂ ಸಾಹಿತಿಗೆ ಸನ್ಮಾನ ಸಮಾರಂಭದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವಿರೆಂದು ತಿಳಿಯಿತು.

ಈ ಹಿನ್ನೆಲೆಯಲ್ಲಿ ಮುಸ್ಲಿಂ ಲೇಖಕರ ಸಂಘ ಮತ್ತು ಅದರ ಸ್ಥಾಪಕ ಸಂಘಟನೆ ಮತ್ತು ಅದರ ಉದ್ದೇಶಗಳ ಬಗ್ಗೆ ತಮ್ಮಲ್ಲಿ ಚರ್ಚೆ ಮಾಡಬೇಕು ಎಂದುಕೊಂಡು ಈ ಪತ್ರ. ನನಗೆ ಗೊತ್ತಿರುವ ಪ್ರಕಾರ ಮುಸ್ಲಿಂ ಲೇಖಕರ ಸಂಘವು ”ಹಿದಾಯತ್ ಸೆಂಟರ್, ಬೀಬಿ ಅಲಬಿ ರೋಡ್, ಮಂಗಳೂರು 575001” ಎಂಬ ವಿಳಾಸದಿಂದ ಕಾರ್ಯಾಚರಿಸುತ್ತಿದೆ. ಈ ಸಂಘವು ಜಮಾತೆ ಇಸ್ಲಾಮೀ ಹಿಂದ್ ಎಂಬ ಮುಸ್ಲಿಂ ಸಂಘಟನೆಯು ಸ್ಥಾಪನೆ ಮಾಡಿರುವುದಾಗಿದೆ. ಲೇಖಕರ ಸಂಘ ಮತ್ತು ಜಮಾತೆ ಇಸ್ಲಾಮೀ ಹಿಂದ್ ಒಂದೇ ವಿಳಾಸದಿಂದ ಕಾರ್ಯನಿರ್ವಹಿಸುತ್ತಿದೆ.

ಜಮಾತೆ ಇಸ್ಲಾಮೀ ಹಿಂದ್ ಎಂಬುದು ಒಂದು ಇಸ್ಲಾಮಿಕ್ ಮೂಲಭೂತವಾದಿ ಧಾರ್ಮಿಕ ಸಂಘಟನೆ. ಸ್ವಾತಂತ್ರ್ಯ ಪೂರ್ವದಲ್ಲಿ ಕಟ್ಟರ್ ಇಸ್ಲಾಂ ವಾದಿ ಅಬುಲ್ ಅಲ ಮೌದೂದಿಯಿಂದ ಸ್ಥಾಪನೆಗೊಂಡ ಆಂದೋಲನ. shantiprakashanaಇಸ್ಲಾಂ ಧರ್ಮದ ಆಡಳಿತವನ್ನು ಸ್ಥಾಪಿಸುವುದು ತಮ್ಮ ಧಾರ್ಮಿಕ ಕರ್ತವ್ಯ ಎಂದು ತಿಳಿದು ರಾಜಕೀಯ ಚಳುವಳಿ ನಡೆಸುತ್ತಾ ಬಂದಿದೆ. ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಸಾಹಿತ್ಯ ಹೀಗೆ ವಿವಿಧ ರಂಗಗಳಲ್ಲಿ ತಮ್ಮ ಪ್ರಭಾವವನ್ನು ವಿಸ್ತರಿಸುವ ನಿಟ್ಟಿನಲ್ಲಿ ವಿವಿದ ಹೆಸರಿನ ಸಾಮೂಹಿಕ ಸಂಘಟನೆಗಳನ್ನು ಜಮಾತೆ ಇಸ್ಲಾಮಿ ಹುಟ್ಟು ಹಾಕಿದೆ.

ಇಸ್ಲಾಂ ಮೂಲಭೂವಾದಿ ಸಾಹಿತ್ಯವನ್ನು ಜನರ ಮಧ್ಯೆ ವ್ಯಾಪಕವಾಗಿ ಕೊಂಡು ಹೋಗಲು ಜಮಾತೆಯ ಕರ್ನಾಟಕ ಶಾಖೆಯು “ಶಾಂತಿ ಪ್ರಕಾಶನ” ಎಂಬ ಪ್ರಕಾಶನ ಸಂಸ್ಥೆಯನ್ನು ನಡೆಸುತ್ತಿದೆ. ಹಾಗೆಯೇ ಮುಸ್ಲಿಂ ಬರಹಗಾರರ ಮಧ್ಯೆ ತನ್ನ ಪ್ರಭಾವವನ್ನು ಹರಡಲು ಮತ್ತು ಧಾರ್ಮಿಕ ಮೂಲಭೂತವಾದಿ ಸಾಹಿತ್ಯ ಮತ್ತು ಸಾಹಿತಿಗಳನ್ನು ಸೃಷ್ಟಿಸುವ ಉದ್ದೇಶದಿಂದ ಮುಸ್ಲಿಂ ಲೇಖಕರ ಸಂಘವನ್ನು ಕರ್ನಾಟಕದಲ್ಲಿ ಸ್ಥಾಪಿಸಿದೆ.

ಉದಾಹರಣೆಗಳನ್ನು ನಾನು ಈ ರೀತಿ ಕೊಡಬಲ್ಲೆ….

“ನಿಮ್ಮ ಸ್ತ್ರಿಯರಿಂದ ಆಜ್ಞೆ ಉಲ್ಲಂಘನೆಯ ಶಂಕೆ ನಿಮಗಿದ್ದರೆ ನೀವು ಅವರಿಗೆ ನೀವು ಉಪದೇಶ ನೀಡಿರಿ. ಮಲಗುವಲ್ಲಿಂದ ದೂರ ಇರಿ ಮತ್ತು ಅವರಿಗೆ ಹೊಡೆಯಿರಿ. ಆನಂತರ ಅವರು ನಿಮಗೆ ವಿಧೇಯರಾಗಿ ನಡೆದರೆ ಅವರ ಮೇಲೆ ಕೈ ಎತ್ತಲು ಬೇಕು ಬೇಕೆಂದೇ ನೆಪ ಹುಡುಕಬೇಡಿ.” (ಪವಿತ್ರ ಕುರಾನ್ 4:34)

ಎಂದು ಕುರಾನ್ ಉಲ್ಲೇಖಿಸಿದ ಪ್ರೊ ಮಹಮ್ಮದ್ ಕುತುಬ್ ಎಂಬವರು ಬರೆದ ಪುಸ್ತಕ ”ಮಹಿಳೆ ಇಸ್ಲಾಮಿನಲ್ಲಿ” ಎಂಬ ಪುಸ್ತಕವನ್ನು ಜಮಾತೆ ಇಸ್ಲಾಮಿಯ ಶಾಂತಿ ಪ್ರಕಾಶನ ಪ್ರಕಟಿಸಿದೆ. ಈ ಸಣ್ಣ ಹೇಳಿಕೆಗೆ ಜಮಾತೆ ಮಾದರಿಯಲ್ಲಿ ವಿವರಣೆ ನೀಡಲಾಗಿದೆ. ಪುಸ್ತಕದ ಪುಟ ಸಂಖ್ಯೆ 27 ರಲ್ಲಿ ವಿವರಣೆ ನೀಡಿರುವ ಪ್ರೋ ಮಹಮ್ಮದ್ ಕುತುಬ್ ”ಶಿಸ್ತು ಕ್ರಮವನ್ನು ಸ್ಪಷ್ಟಗೊಳಿಸುವ ಪ್ರಸ್ತುತ ವಾಕ್ಯವು ಅಂತಿಮವಾಗಿ ಗಾಯವಾಗದ ದಂಡನೆಯನ್ನು ಆದೇಶಿಸಿದೆ. ಕುರಾನ್ ನೀಡಿರುವ ಈ ಹಕ್ಕುಗಳನ್ನು ದುರುಪಯೋಗಗೊಳಿಸುವ ಸಂಧರ್ಭಗಳ ಕುರಿತು ನಾವಿಲ್ಲಿ ಚರ್ಚಿಸುತ್ತಿಲ್ಲ. ಯಾಕೆಂದರೆ ಲೋಕದ ಎಲ್ಲಾ ಹಕ್ಕುಗಳನ್ನೂ ದುರುಪಯೋಗ ಮಾಡಲಾಗುತ್ತಿದೆ. ಮಹಿಳೆಯರ ಚಾರಿತ್ರ್ಯ ಸಂಸ್ಕರಣೆ ಮತ್ತು ನೈತಿಕ ಉನ್ನತಿ ಮಾತ್ರ ಅದಕ್ಕಿರುವ ಪರಿಹಾರ” ಎಂದು ಲೇಖಕರು ಬರೆಯುತ್ತಾರೆ. ಶಾಂತಿ ಪ್ರಕಾಶನ ಅದನ್ನು ಪ್ರಕಟಿಸುತ್ತದೆ.

ಇಂತಹ ನೂರಾರು ಉದಾಹರಣೆಗಳನ್ನು ನೀಡಬಹುದು. ಶಾಂತಿ ಪ್ರಕಾಶನ ಪ್ರಕಟಿತ ಇಬ್ರಾಹಿಂ ಸ ಈದ್ ರ ”ಮಹಿಳೆ ಮತ್ತು ಸಮಾಜ” ಎಂಬ ಪುಸ್ತಕದಲ್ಲೂ ಕೂಡಾ ಇಂತಹುದೇ ಮಹಿಳಾ ವಿರೋಧಿ ನಿಲುವುಗಳನ್ನು ಹೇಳಲಾಗಿದೆ.

“ಮಹಿಳೆಯರು ನಿಮ್ಮ ನಿಮ್ಮ ಮನೆಗಳಲ್ಲಿ ಇದ್ದುಕೊಳ್ಳಿರಿ, ಗತ ಕಾಲದಂತಹ ಸೌಂದರ್ಯ ಪ್ರದರ್ಶನ ಮಾಡುತ್ತಾ ತಿರುಗಬೇಡಿರಿ.” (ಪ್ರವಾದಿ ಪತ್ನಿಯರನ್ನುದ್ದೇಶಿಸಿ ಹೇಳಲಾದ ಸೂಕ್ತ) (ಪವಿತ್ರ ಕುರಾನ್ 33;33)

ಈ ಚಿಕ್ಕ ಸೂಕ್ತವನ್ನು ಲೇಖಕ ತನ್ನದೇ ದಾಟಿಯಲ್ಲಿ ಈಗಿನ ಕಾಲಕ್ಕೆ ಬೇಕಾದ ಹಾಗೆ ತಿರುಚಿ ವಿವರಣೆ ನೀಡುತ್ತಾರೆ. ಅದು ಹೀಗಿದೆ… (ಮಹಿಳೆ ಮತ್ತು ಸಮಾಜದ ಪುಟ ಸಂಖ್ಯೆ 47 ಮತ್ತು 48 )… “ಈ ಮೇಲಿನ ಸೂಕ್ತದಂತೆ ಇಸ್ಲಾಂ ಧರ್ಮವು ರಾಷ್ಟ್ರ ಮತ್ತು ಸಮಾಜದ ಹೊಣೆಯನ್ನು ಪುರುಷರ ಮೇಲೆ ಹಾಕಿದೆ. ಸ್ತ್ರಿಯ ಚಟುವಟಿಕೆಯನ್ನು ಕೇವಲ ಮನೆಗೆ ಸೀಮಿತಗೊಳಿಸಿದೆ. ಪೇಟೆಯ ವ್ಯಾಪಾರಿ, ಕಚೇರಿಯ ಗುಮಾಸ್ತ, ನ್ಯಾಯಾಲಯದ ನ್ಯಾಯಾಧೀಶ, ಸೈನ್ಯದ ಸಿಪಾಯಿಯಾಗುವುದು ಆಕೆಯ ಕಾರ್ಯಕ್ಷೇತ್ರವಲ್ಲ. ಮನೆ ಮಾತ್ರ ಆಕೆಯ ಕಾರ್ಯಕ್ಷೇತ್ರ.”

ಇದೇ ಪುಸ್ತಕದ 89 ನೇ ಪುಟದಲ್ಲಿ “ಸ್ತ್ರಿ ಮತ್ತು ಪುರುಷರು ಒಟ್ಟಿಗೆ ಸೇರಬಾರದು. ಓರ್ವ ಮುಸ್ಲಿಂ ಮಹಿಳೆ ಸೈನಿಕ ತರಬೇತಿಯಲ್ಲಾಗಲೀ, ಆಟೋಟದಲ್ಲಾಗಲೀ ಭಾಗವಹಿಸುವಂತಿಲ್ಲ. ಪೇಟೆಯಿಂದ ಪಾರ್ಲಿಮೆಂಟ್ ತನಕ ಮಹಿಳೆಯು ಪುರುಷನೊಂದಿಗೆ ಬೆರೆಯುವುದು ಬೆರೆಯುವುದು ಇಸ್ಲಾಂ ವಿರುದ್ದವಾಗಿದೆ” ಎಂದು ಬರೆಯುತ್ತಾರೆ. ಇವ್ಯಾವ ವಾಕ್ಯಗಳೂ ಕುರಾನ್ ಹೇಳಿದ್ದಲ್ಲ. ಕುರಾನ್ ಹೇಳಿದ ಒಂದು ವಾಕ್ಯವನ್ನು ತನ್ನ ಮೂಲಭೂತವಾದಿ ಚಿಂತನೆಯಲ್ಲಿ ಈಗಿನ ಮಹಿಳೆಯರ ಮೇಲೆ ಹೇರಲಾಗುತ್ತಿರುವಂತದ್ದು. ಇಂಹತ ಪುಸ್ತಕಗಳನ್ನು ಮಾತ್ರ ಶಾಂತಿ ಪ್ರಕಾಶನ ಪ್ರಕಟಿಸುತ್ತದೆ. Sara-Abubakarಸಾರಾ ಅಬೂಬಕ್ಕರ್, ಕೆ ಷರೀಫಾರಂತಹ ಮುಸ್ಲಿಂ ಸಂವೇದನಾಶೀಲ ಪ್ರಗತಿಪರರು ಬರೆದ ಯಾವುದೇ ಪುಸ್ತಕವನ್ನು ಶಾಂತಿ ಪ್ರಕಾಶನ ಪ್ರಕಟ ಮಾಡುವುದಿಲ್ಲ. ಧಾರ್ಮಿಕ ಮೂಲಭೂತವಾದ ಸಾರುವ ಪುಸ್ತಕಗಳ ಪ್ರಕಟಣೆಗಾಗಿಯೇ ಸಾಹಿತಿಗಳನ್ನು ಸಿದ್ದಗೊಳಿಸುವ ಕಾರ್ಖಾನೆಯೇ ”ಮುಸ್ಲಿಂ ಲೇಖಕರ ಸಂಘ”.

ಈ ರೀತಿ ಮೂಲಭೂತವಾದಿ ಸಾಹಿತ್ಯವನ್ನು ಬೆಳೆಸಲು ಜಮಾತೆ ಇಸ್ಲಾಮೀ ಹಿಂದ್ ಇನ್ನಿಲ್ಲದ ಶ್ರಮ ಪಡುತ್ತಿದೆ. ಮುಸ್ಲಿಂ ಲೇಖಕರ ಸಂಘ ನೇರವಾಗಿ ಜಮಾತೆ ಇಸ್ಲಾಮೀ ಹಿಂದ್ ಅಧೀನದಲ್ಲಿ ಇದ್ದರೂ ಕೂಡಾ ತನ್ನ ವಿಚಾರಧಾರೆಯಿಂದ ಹೊರಗಿರುವ ಮುಸ್ಲಿಂ ಸಾಹಿತ್ಯ ಲೋಕವನ್ನು ತಲುಪಲು ಮತ್ತು ಪ್ರಗತಿಶೀಲ ಮುಸ್ಲಿಂ ಸಾಹಿತಿಗಳ ಪ್ರಭಾವಕ್ಕೆ ಯುವ ಮುಸ್ಲಿಂ ಬರಹಗಾರರು ಒಳಗಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಒಂದು ವಿಶಾಲವಾದ ವೇದಿಕೆಯನ್ನು ನಿರ್ಮಿಸಲು ಜಮಾತೆ ಪ್ರಯತ್ನಿಸುತ್ತಿದೆ. ಆ ಹಿನ್ನೆಲೆಯಲ್ಲಿ ಜಮಾತೆ ಇಸ್ಲಾಮೀ ಹಿಂದ್ ಸದಸ್ಯರಲ್ಲದ ಒಂದಿಷ್ಟು ಪ್ರಗತಿಪರರಂತೆ ಕಾಣುವ ಮುಸ್ಲಿಂ ಬರಹಗಾರರನ್ನು ಮುಸ್ಲಿಂ ಲೇಖಕರ ಸಂಘಕ್ಕೆ ಪದಾಧಿಕಾರಿಗಳನ್ನು ನೇಮಿಸುತ್ತದೆ. ತನ್ನ ಕಾರ್ಯಕ್ರಮಗಳಲ್ಲಿ ಮತ್ತು ಸಮಿತಿಯ ಚಟುವಟಿಕೆಗಳಲ್ಲಿ ವಿಶಾಲ ಮನೋಭಾವ ಹೊಂದಿರುವಂತೆ ತೋರ್ಪಡಿಸಿಕೊಂಡರೂ ಅಂತಿಮವಾಗಿ ಎಲ್ಲರನ್ನೂ ಸೇರಿಸಿ ತನ್ನ ಹಿಡನ್ ಅಜೆಂಡಾವನ್ನು ಸೇರಲು ಯತ್ನಿಸುತ್ತದೆ.

ಮುಸ್ಲಿಂ ಲೇಖಕರ ಸಂಘವು ಜಮಾತೆ ಇಸ್ಲಾಮೀ ಹಿಂದ್ ಮಾರ್ಗದರ್ಶನದಲ್ಲಿ ಸಾಹಿತಿಗಳಿಗೆ ಪ್ರಶಸ್ತಿ ವಿತರಣೆ, ಸನ್ಮಾನ, ಸಾಹಿತ್ಯ ಸಮಾವೇಶದಂತಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ. ಕನ್ನಡದ ಹೆಸರಾಂತ ಪ್ರಗತಿಪರ ಸಾಹಿತಿ, ಬರಹಗಾರರು, ಚಿಂತಕರನ್ನು ಅತಿಥಿಗಳಾಗಿ, ಉದ್ಘಾಟಕರಾಗಿ ಆಹ್ವಾನಿಸುತ್ತದೆ. ಹೀಗೆ ಪ್ರಗತಿಪರ ಸೋಗಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಒಟ್ಟು ಕಾರ್ಯಕ್ರಮದಲ್ಲಿ ಇಸ್ಲಾಂ ಮೂಲಭೂತವಾದಿ ಚೌಕಟ್ಟಿನೊಳಗಿರುವ ಸಾಹಿತ್ಯಗಳಿಗೆ ಪ್ರಶಸ್ತಿ ನೀಡುವುದು ಮತ್ತು ತನ್ನ ಶಾಂತಿ ಪ್ರಕಾಶನದ ಮೂಲಭೂತವಾದಿ ಬರಹಗಾರರಿಗೆ ಸನ್ಮಾನ ಮಾಡಿಸುವುದು ಮತ್ತು ಶಾಂತಿ ಪ್ರಕಾಶನದ ತನ್ನ ಇಸ್ಲಾಂ ಮೂಲಭೂತವಾದಿ ಸಾಹಿತ್ಯವನ್ನು ಸಮಾಜಕ್ಕೆ ಪರಿಚಯಿಸುವ ಕೆಲಸವನ್ನು ಬಹಳ ಶಿಸ್ತು ಬದ್ಧವಾಗಿ ಮಾಡುತ್ತಿದೆ. ಹೀಗೆ ಬಹಳ ಯೋಜನಾ ಬದ್ಧವಾಗಿ ಕೆಲಸ ಮಾಡುವ ಮೂಲಕ ಸೂಫಿ ಸಾಹಿತ್ಯ ಪರಂಪರೆ ಮತ್ತು ಇತ್ತಿಚ್ಚಿನ ದಶಕಗಳಲ್ಲಿ ಎದ್ದು ಬಂದಿರುವ ಪ್ರಗತಿಪರ ಬಂಡಾಯ ಮುಸ್ಲಿಂ ಮಹಿಳಾ ಮತ್ತು ಪುರುಷ ಸಾಹಿತಿಗಳ ಸಾಹಿತ್ಯವನ್ನು ಮುಸ್ಲಿಂ ಸಮುದಾಯದ ಒಳಗಡೆ ನಗಣ್ಯ ಗೊಳಿಸಲು ಮತ್ತು ಅವರನ್ನು ಮುಸ್ಲಿಂ ಸಮುದಾಯದ ಸಾಹಿತ್ಯ ವಲಯದಿಂದ ಪ್ರತ್ಯೇಕಿಸುವಲ್ಲಿ ಯಶಸ್ವಿ ಹೆಜ್ಜೆಗಳನ್ನು ಇಡುತ್ತಿದೆ.

ಮಾರ್ಚ್ ತಿಂಗಳಲ್ಲಿ ಮಹಿಳಾ ದಿನಾಚರಣೆಯನ್ನು ನಾವು ಬಹಳ ಖುಷಿ ಮತ್ತು ಆತ್ಮಾವಲೋಕನದ ಹಿನ್ನೆಲೆಯಲ್ಲಿ ಆಚರಿಸುವುದರಿಂದ ಮತ್ತು ತಾವು ಜಮಾತೆ ಇಸ್ಲಾಮೀ ಹಿಂದ್ ಪ್ರಾಯೋಜಿತ ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸುವೆರೆಂದು ತಿಳಿದು ಬಂದಿದ್ದರಿಂದ ತಮ್ಮ ಜೊತೆ ಇವೆಲ್ಲವನ್ನೂ ಹಂಚಿಕೊಂಡಿದ್ದೇವೆ.

ತಮ್ಮ ವಿಶ್ವಾಸಿ,
ನವೀನ್ ಸೂರಿಂಜೆ